ನವದೆಹಲಿ: ಸಿಬಿಎಸ್‍ಇ ಮತ್ತು ಯುಜಿಸಿ ನಡೆಸುತ್ತಿರುವ ಎಲ್ಲ ಪರೀಕ್ಷೆಗಳನ್ನು ಮುಂದೂಡವಂತೆ ಆಗ್ರಹಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ ಪೋಖ್ರಿಯಾಲ್ ನಿವಾಸದೆದರು ಎನ್‍ಎಸ್‍ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎನ್‍ಎಸ್‍ಯುಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ ಕರಿಯಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಲಾಯಿತು.
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಸಿಬಿಎಸ್‍ಇ ಬೋರ್ಡ್ 12ನೇ ತರಗತಿ ಪರೀಕ್ಷೆಗಳನ್ನು ನಡೆಸಲು ತಯಾರಿ ಮಾಡಿಕೊಳ್ಳುತ್ತಿದೆ ಜೊತೆಗೆ ಜೆಇಇ ಮುಖ್ಯ ಪರೀಕ್ಷೆ, ನೀಟ್, ಸಿಎಸ್, ಡಿಬಿಟಿ-ನೆಟ್ ಮತ್ತು ಇತರ ಪರೀಕ್ಷೆಗಳ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚಿಂತನೆ ನಡೆದಿದ್ದು, ಇದು ಉತ್ತಮ ಬೆಳವಣಿಗೆಯಲ್ಲ ಎಂದು ಆರೋಪಿಸಿದರು.
ಕೊರೊನಾ ವೇಗವಾಗಿ ಹರಡುವ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ ಮಕ್ಕಳಲ್ಲಿ ಸೋಂಕು ಹರಡುವ ಪ್ರಮಾಣ ಹೆಚ್ಚಾಗಲಿದೆ. ಪರೀಕ್ಷೆಗಳಿಗಾಗಿ ಮಕ್ಕಳು ಕಂಟೈನ್ಮೆಂಟ್ ಝೋನ್‍ಗೆ ಬರಬೇಕಾಗಬಹುದು ಅಲ್ಲದೆ ಪ್ರಯಾಣ ಮಾಡುವ ಸಾಧ್ಯತೆಗಳಿದ್ದು, ಇದರಿಂದ ಸೋಂಕು ಹರಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ತಾತ್ಕಾಲಿಕವಾಗಿ ಪರೀಕ್ಷೆಗಳನ್ನು ಮುಂದೂಡಬೇಕು, ಪದವಿ ವಿದ್ಯಾರ್ಥಿಗಳನ್ನು ಹಿಂದಿನ ಫಲಿತಾಂಶ ಮತ್ತು ಆತಂರಿಕ ಮೌಲ್ಯಮಾಪನ ಆಧಾರದಡಿ ಉತ್ತೀರ್ಣಗೊಳಿಸುವಂತೆ ಮನವಿ ಮಾಡಿದರು.
ದಾವಣಗೆರೆ: ಆರೆಂಜ್ ಝೋನ್‍ನಲ್ಲಿದ್ದ ದಾವಣಗೆರೆಯಲ್ಲಿ ಒಮ್ಮಿಂದೊಮ್ಮಲೆ ಕೊರಾನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜಿಲ್ಲೆಯ ಜನರನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಇಂದು ಒಂದೇ ದಿನ 21 ಪ್ರಕರಣಗಳು ಹೆಚ್ಚಾಗುವ ಮೂಲಕ ರೆಡ್ ಝೋನ್‍ಗೆ ತಿರುಗುವ ಸಾಧ್ಯತೆ ಹೆಚ್ಚಾಗಿದೆ.
ಒಟ್ಟು 330 ಸ್ಯಾಂಪಲ್ ಗಳ ಪೈಕಿ 37ರ ವರದಿ ಬಂದಿದ್ದು, ಇದರಲ್ಲಿ ಬರೋಬ್ಬರಿ 21 ಮಂದಿಗೆ ಕೊರೊನಾ ತಗುಲಿರೋದು ದೃಢಪಟ್ಟಿದೆ. ಇನ್ನೂ 293 ಜನರ ವರದಿ ಬರುವುದು ಬಾಕಿ ಇದೆ. ಇವರ ವರದಿ ಏನಾಗುತ್ತದೋ ಎಂದು ಜಿಲ್ಲೆಯ ಜನ ಭಯಭೀತರಾಗಿದ್ದಾರೆ.
ರೋಗಿ ನಂಬರ್ 556 ಮತ್ತು 533 ಸಂಪರ್ಕದಿಂದ ಈ ಪ್ರಕರಣಗಳು ಬಂದಿವೆ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕದಿಂದ ಇಷ್ಟು ಜನರಿಗೆ ಸೋಂಕು ಹಬ್ಬಿದೆ. ಶನಿವಾರ ದಾವಣಗೆರೆಯಲ್ಲಿ 10 ಪ್ರಕರಣಗಳಿದ್ದವು. ಇಂದು 21 ಪ್ರಕರಣಗಳು ಪತ್ತೆಯಾಗಿದ್ದು, ದಾವಣಗೆರೆಯಲ್ಲಿ ಇದೀಗ ಒಟ್ಟು 31 ಸಕ್ರಿಯ ಪ್ರಕರಣಗಳಿವೆ. ಇದು ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನರಿಗೆ ಆಘಾತವನ್ನುಂಟು ಮಾಡಿದೆ.
ಎರಡು ದಿನಗಳ ಹಿಂದೆ 94, ನಿನ್ನೆ 72, ಇಂದು 164 ಸ್ಯಾಂಪಲ್ ಕಳುಹಿಸಲಾಗಿತ್ತು. 21 ಪಾಸಿಟಿವ್ ಪ್ರಕರಣ ಬಂದ ಹಿನ್ನೆಲೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್, ಡಿಸಿ ಮಹಾಂತೇಶ್ ಆರ್. ಬೀಳಗಿ, ಎಸ್ಪಿ ಹನುಮಂತರಾಯ ಸೇರಿದಂತೆ ವಿವಿಧ ಅಧಿಕಾರಿಗಳು ತುರ್ತು ಸಭೆ ನಡೆಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ದಾವಣಗೆರೆ ಸಂಪೂರ್ಣ ಲಾಕ್‍ಡೌನ್ ಆಗಲಿದ್ದು, ಯಾವುದೇ ಅಂಗಡಿ ತೆರೆಯುವಂತಿಲ್ಲ. ದಾವಣಗೆರೆ ರೆಡ್ ಝೋನ್‍ಗೆ ಬರಲಿದೆ. 21 ಪಾಸಿಟಿವ್ ಬಂದಿರುವುದರಿಂದ ಕಂಟೈನ್‍ಮೆಂಟ್ ಝೋನ್ ಆಗಲಿದೆ. ಕಂಟೈನ್‍ಮೆಂಟ್ ಝೋನ್ ನಲ್ಲಿ ದವಸ, ಧಾನ್ಯ ಸಿಗುವುದಿಲ್ಲ, ಆನ್ ಲೈನ್ ವ್ಯವಸ್ಥೆ ಮಾಡಿಕೊಳ್ಳಬಹದಾಗಿದೆ. ಬಾರ್ ಗಳನ್ನು ಕೂಡ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಲೆಲ್ಲಿ ಎಷ್ಟು, ಯಾರ್ಯಾರಿಗೆ ಸೋಂಕು?
ಜಾಲಿನಗರ 12, ಇಮಾಮ್ ನಗರ 6, ಕೆಟಿಜೆ ನಗರ 1, ಬೇತೂರು ರಸ್ತೆ 1, ಯಲ್ಲಮ್ಮನ ದೇವಸ್ಥಾನದ ಬಳಿ 1 ಪ್ರಕರಣ ಪತ್ತೆಯಾಗಿದ್ದು, 9 ಜನ ಪುರುಷರು, ಮೂವರು ಬಾಲಕರು, ಒಬ್ಬ ಬಾಲಕಿ, 8 ಮಹಿಳೆಯರಿಗೆ ಸೋಂಕು ತಗುಲಿದೆ.
ಸೋಂಕಿತರ ವಿವರ
1. 30 ವರ್ಷದ, ಪುರುಷ, ಜಾಲಿನಗರ
2. 52 ವರ್ಷದ ಮಹಿಳೆ, ಇಮಾಮ್ ನಗರ
3. 38 ವರ್ಷದ ಪುರುಷ, ಜಾಲಿನಗರ
4. 32 ವರ್ಷದ ಮಹಿಳೆ ಇಮಾಮ್ ನಗರ
5. 35 ವರ್ಷದ ಪುರುಷ, ಇಮಾಮ್ ನಗರ
6. 32 ವರ್ಷದ ಮಹಿಳೆ, ಇಮಾಮ್ ನಗರ
7. 12 ವರ್ಷದ ಬಾಲಕಿ, ಇಮಾಮ್ ನಗರ
8. 7 ವರ್ಷದ ಬಾಲಕ, ಇಮಾಮ್ ನಗರ
9. 38 ವರ್ಷದ ಪುರುಷ, ಬೇತೂರು ರಸ್ತೆ
10. 49 ವರ್ಷದ ಮಹಿಳೆ, ಕೆಟಿಜೆ ನಗರ
11. 27 ವರ್ಷದ ಪುರುಷ, ಮೂರನೇ ತಿರುವು, ಜಾಲಿನಗರ
12. 25 ಪುರುಷ, ಜಾಲಿನಗರ
13. 33 ವರ್ಷ ಪುರುಷ, ಯಲ್ಲಮ್ಮನ ಟೆಂಪಲ್, ಮೂರನೇ ತಿರುವು
14. 62 ವರ್ಷದ ಮಹಿಳೆ, ಜಾಲಿನಗರ
15. 34 ವರ್ಷದ ಮಹಿಳೆ, ಜಾಲಿನಗರ
16. 20 ವರ್ಷದ ಮಹಿಳೆ, ಜಾಲಿನಗರ
17. 22 ವರ್ಷದ ಮಹಿಳೆ, ಜಾಲಿನಗರ
18. 6 ವರ್ಷದ ಬಾಲಕ, ಜಾಲಿನಗರ
19. 70 ವರ್ಷದ ಪುರುಷ, ಜಾಲಿನಗರ
20. 42 ವರ್ಷದ ಪುರುಷ, ಜಾಲಿನಗರ
21. 11 ವರ್ಷದ ಬಾಲಕ, ಜಾಲಿನಗರ
ಕೋಲಾರ: ದೇಶದಲ್ಲೇ ಮೊದಲ ಬಾರಿಗೆ ದಕ್ಷಿಣ ಕೊರಿಯಾ ರ‍್ಯಾಪಿಡ್ ಟೆಸ್ಟಿಂಗ್ ಕಿಟ್‍ಗಳ ಪ್ರಾಯೋಗಿಕ ಪರೀಕ್ಷೆಗೆ ಕೋಲಾರ ಜಿಲ್ಲೆ ಮುಂದಾಗಿದೆ.
ಸುಮಾರು 6 ಸಾವಿರ ಮಂದಿಗೆ ರ‍್ಯಾಪಿಡ್ ಟೆಸ್ಟ್ ಮಾಡುವುದಕ್ಕೆ ಕೋಲಾರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಜ್ಜಾಗಿದೆ. ಎಲ್ಲೆಡೆ ಸಂಚಲನ ಮೂಡಿಸಿರುವ ಹಾಗೂ ಸಾಕಷ್ಟು ಸಮಯ ವ್ಯರ್ಥ ಮಾಡುತ್ತಿರುವ ರಕ್ತ ಮಾದರಿ ಹಾಗೂ ಗಂಟಲು ದ್ರವ ಸಂಗ್ರಹಿಸಿ ಎರಡು ದಿನಗಳ ಕಾಲ ವರದಿಗಾಗಿ ಕಾಯುವ ಬದಲಿಗೆ ಪ್ರಾಥಮಿಕ ಹಂತದಲ್ಲೆ ಪರೀಕ್ಷೆಗೆ ಒಳಪಡಿಸುವ ರ‍್ಯಾಪಿಡ್ ಟೆಸ್ಟ್ ಇದಾಗಿದೆ.
ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿರುವ ಟಾಟಾ ನರ್ವ್ ಸೆಂಟರ್ ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಟಾಟಾ ಸಂಸ್ಥೆ ದೇಶದಲ್ಲೇ ಮೊದಲ ಬಾರಿಗೆ ಸಿಎಸ್‍ಆರ್ ಅನುದಾನದಡಿಯಲ್ಲಿ ಕಿಟ್‍ಗಳನ್ನು ನೀಡಿದೆ. ದಕ್ಷಿಣ ಕೊರಿಯಾ ಕಿಟ್ ಮೂಲಕ ಕೋಲಾರದಲ್ಲಿ ರ‍್ಯಾಪಿಡ್ ಟೆಸ್ಟಿಂಗ್‍ಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುತ್ತಿದೆ.
ಕೊರಿಯಾದಿಂದ ಬಂದಿರುವ ಕಿಟ್‍ಗಳಿಂದ ಪರೀಕ್ಷೆ ನಡೆಸಿದ ಕೇವಲ 20 ನಿಮಿಷದಲ್ಲಿ ಫಲಿತಾಂಶ ಸಿಗಲಿದೆ. ಇನ್ನು ರ‍್ಯಾಪಿಡ್ ಟೆಸ್ಟ್ ಮಾಡುವುದರ ಸಲುವಾಗಿ ದಕ್ಷಿಣ ಕೊರಿಯಾದಿಂದ ಸುಮಾರು 1,500 ಕಿಟ್‍ಗಳನ್ನು ಕೋಲಾರಕ್ಕೆ ತರಿಸಲಾಗಿದ್ದು, ಪ್ರತಿನಿತ್ಯ ಸುಮಾರು 200 ಮಂದಿಗೆ ಕರೊನಾ ಪರೀಕ್ಷೆ ನಡೆಯಲಿದೆ. ಈ ಹಿಂದೆ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆ ನಡೆಸಿ, ಬೆಂಗಳೂರಿಗೆ ಕಳುಹಿಸಬೇಕಾಗಿತ್ತು. ಜೊತೆಗೆ ಕೊರೊನಾ ಸೋಂಕು ವರದಿಗಾಗಿ 24 ಗಂಟೆ ಕಾಯುವ ಪರಿಸ್ಥತಿ ಇತ್ತು. ಆದರೆ ಇದೀಗ 20 ನಿಮಿಷಗಳಲ್ಲಿ ಕೋಲಾರದಲ್ಲಿಯೇ ಕೊರೊನಾ ಸೋಂಕು ಪತ್ತೆ ಹಚ್ಚಲಾಗುತ್ತದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ವಿಜಯ್ ಕುಮಾರ್ ತಿಳಿಸಿದ್ದಾರೆ.
ಯಾದಗಿರಿ: ಸದ್ಯ ಗ್ರೀನ್ ಝೋನ್ ನಲ್ಲಿರುವ ಯಾದಗಿರಿ ಸೇಫ್ ಆಗಿದೆ. ರೋಗಿ ನಂ.413 ಜೊತೆ ಪ್ರಥಮ ಸಂಪರ್ಕದಲ್ಲಿದ್ದ ವ್ಯಕ್ತಿಯ ವರದಿ ಕೊರೊನಾ ನೆಗೆಟಿವ್ ಬಂದಿದ್ದು, ಇದರಿಂದ ಯಾದಗಿರಿ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ರೋಗಿ ನಂ.413 ಕನ್ನಡಕದ ಅಂಗಡಿ ಹೊಂದಿದ್ದು, ಯಾದಗಿರಿಯೊಂದಿಗೆ ನಿಕಟ ವ್ಯವಹಾರ ಸಂಪರ್ಕ ಹೊಂದಿದ್ದ. ವ್ಯಾಪಾರಕ್ಕಾಗಿ ಕಲಬುರಗಿಯಿಂದ ಯಾದಗಿರಿಗೆ ಸಂಚಾರ ಮಾಡಿದ್ದ. ಈ ವೇಳೆ ಕೊರೊನಾ ಸೋಂಕು ತಗುಲಿದ್ದ ರೋಗಿ ನಂ.413 ಜೊತೆ ಯಾದಗಿರಿ ವ್ಯಕ್ತಿ ಹತ್ತಿರದ ಒಡನಾಟ ಹೊಂದಿದ್ದ. ಇದು ಯಾದಗಿರಿ ಜನರ ಮತ್ತು ಜಿಲ್ಲಾಡಳಿತದ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಈ ವ್ಯಕ್ತಿಯ ವರದಿ ಲಭ್ಯವಾಗಿದ್ದು, ನೆಗೆಟಿವ್ ಬಂದಿದೆ. ಹೀಗಾಗಿ ಜನರ ಆತಂಕ ತಗ್ಗಿದೆ. ಈ ಬಗ್ಗೆ ಜಿಲ್ಲಾಡಳಿತ ಅಧಿಕೃತ ಘೋಷಣೆ ಮಾಡಿದೆ.
ಏಪ್ರಿಲ್ 21 ರಂದು ಕಲಬುರಗಿ ರೋಗಿ ನಂ.413 ಗೆ ಕೊರಾನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇತನ ಟ್ರಾವೆಲ್ ಹಿಸ್ಟರಿ ನೋಡಿದಾಗ ಯಾದಗಿರಿ ಜೊತೆ ನಂಟು ಹೊಂದಿರುವುದು ಬೆಳಕಿಗೆ ಬಂದಿತ್ತು. ರೋಗಿ ನಂ.413 ಏಪ್ರಿಲ್ 15 ರಿಂದ 22ವರೆಗೆ ಅಂಗಡಿ ತೆರೆದಿದ್ದ. ಕೊರೊನಾ ಸೋಂಕಿರುವುದು ಗೊತ್ತಾಗಿದ್ದರೂ ಕಲಬುರಗಿಯಿಂದ ಯಾದಗಿರಿಗೆ ಪ್ರತಿ ದಿನ ಸಂಚಾರ ಮಾಡಿದ್ದ.
ಈತನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿತ್ತು. ನಂತರ ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಲಭ್ಯವಾಗಿದ್ದು, ನೆಗೆಟಿವ್ ಬಂದಿದೆ.
ಚಿಕ್ಕಬಳ್ಳಾಪುರ: ನಗರದಲ್ಲಿ ಕೊರೊನಾಗೆ ಬಲಿಯಾದ ವೃದ್ಧನಿಗೆ ಕ್ಷೌರ ಮಾಡಿದ್ದ ಕ್ಷೌರಿಕನನ್ನೂ ಇದೀಗ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಇದರ ಜೊತೆಗೆ ಈ ಕ್ಷೌರಿಕನ ಬಳಿ ಕ್ಷೌರ ಮಾಡಿಸಿಕೊಂಡವರಿಗೆ ಈಗ ಕೊರೊನಾ ಆತಂಕ ಶುರುವಾಗಿದೆ.
ಕಳೆದ 4 ದಿನಗಳ ಹಿಂದೆ ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದರು. ಈಗಾಗಲೇ ವೃದ್ಧನ ಮಗ ಹಾಗೂ ಮನೆಯ ಎದುರಗಡೆಯ ಇಬ್ಬರು ಯುವಕರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಹೀಗಾಗಿ ಇವರ ಬಳಿ ಕ್ಷೌರ ಮಾಡಿಸಿಕೊಂಡವರಿಗೂ ಕೊರೊನಾ ಭೀತಿ ಎದುರಾಗಿದೆ.
ಲಾಕ್‍ಡೌನ್ ಹಿನ್ನೆಲೆ ಮಾರ್ಚ್ ತಿಂಗಳ ಅಂತ್ಯದಲ್ಲಿ ವೃದ್ಧನ ಮನೆಗೆ ಹೋಗಿ ಕ್ಷೌರ ಮಾಡಿದ್ದರು. ಇದಾದ ಬಳಿಕ ವೃದ್ಧ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಕ್ಷೌರಿಕನಿಗೆ ಕೊರೊನಾ ಭೀತಿ ಶುರುವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮೃತ ಸೊಂಕಿತನ ಏರಿಯಾದಲ್ಲೇ ಕ್ಷೌರಿಕ ಅಂಗಡಿ ಇಟ್ಟುಕೊಂಡಿರುವ 65 ವರ್ಷದ ವ್ಯಕ್ತಿಯನ್ನು ಇನ್ಸ್ಟಿಟಿಟ್ಯೂಟ್ ಕ್ವಾರಂಟೈನ್ ಮಾಡಲಾಗಿದೆ. ಈತನ ಪತ್ನಿ ಹಾಗೂ ಮಗನನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಈ ಕ್ಷೌರಿಕ ಸಾವನ್ನಪ್ಪಿದ ವೃದ್ಧನಿಗೆ ಕ್ಷೌರ ಮಾಡಿ ಬಂದ ನಂತರ ಸುಮಾರು 50ಕ್ಕೂ ಹೆಚ್ಚು ಮಂದಿಗೆ ಕ್ಷೌರ ಮಾಡಿದ್ದಾರೆ ಎನ್ನಲಾಗಿದ್ದು, ಈಗ ಅವರಿಗೂ ಕೊರೊನಾ ಆತಂಕ ಶುರುವಾಗಿದೆ.
ಕ್ಷೌರಿಕನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಜಿಲ್ಲಾಡಳಿತ ವರದಿಯ ನಿರೀಕ್ಷೆಯಲ್ಲಿದೆ. ಈ ವೃದ್ಧನ ಬಳಿ ಯಾರಾದರೂ ಕ್ಷೌರ ಮಾಡಿಸಿಕೊಂಡಿದ್ದಲ್ಲಿ ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಒಳಪಡುವಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಅನ್ನು ಸಂಚಾರಿ ಫೀವರ್ ಕ್ಲಿನಿಕ್ ಆಗಿ ಮಾರ್ಪಡಿಸಲಾಗಿದೆ. ಕೊರೊನಾ ಸೋಂಕು ಕಂಡುಬಂದ ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಸಂಚರಿಸಿ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡವರನ್ನು ಪರೀಕ್ಷಿಸಲಾಗುವುದು ಎಂದು ಜಿಲ್ಲಾ ಉಸ್ತವಾರಿ ಸಚಿವರೂ ಆಗಿರುವ ಬೃಹತ್ ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು.
ನಗರದ ಬಿಆರ್ ಟಿಎಸ್ ಪ್ರಾದೇಶಿಕ ಬಸ್ ನಿಲ್ದಾಣದಲ್ಲಿನ ಕಂಟ್ರೋಲ್ ರೂಂ ಹಾಗೂ ಸಂಚಾರಿ ಫೀವರ್ ಕ್ಲಿನಿಕ್ ಪರಿಶೀಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಜಿಲ್ಲಾಡಳಿತ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿನೂತನ ಪ್ರಯತ್ನ ಮಾಡಲಾಗಿದೆ. ಬಸ್‍ನ್ನು ಸಂಚಾರಿ ಫೀವರ್ ಕ್ಲಿನಿಕ್ ಆಗಿ ಮಾರ್ಪಡಿಸಲಾಗಿದೆ. ಇದು ರಾಜ್ಯದ ಮೊದಲ ಸಂಚಾರಿ ಫೀವರ್ ಕ್ಲಿನಿಕ್ ಆಗಿದೆ. ಕೊರೊನಾ ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ಅವರನ್ನು ಅಂಬುಲೆನ್ಸ್ ಮೂಲಕ ಕಿಮ್ಸ್ ಕೊವೀಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು. ಒರ್ವ ಡಾಕ್ಟರ್, ನರ್ಸ್, ಗ್ರೂಪ್ ಡಿ ನೌಕರರು ಸಂಚಾರಿ ಫೀವರ್ ಅಲ್ಲಿ ಕೆಲಸ ನಿರ್ವಹಿಸುತ್ತಾರೆ. ಥರ್ಮಲ್ ಸ್ಕ್ಯಾನರ್, ರಕ್ತ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ ಮಾಡುವ ಯಂತ್ರ ಈ ಬಸ್ಸಿನಲ್ಲಿದೆ ಎಂದು ಮಾಹಿತಿ ನೀಡಿದರು.
ಅಗತ್ಯ ವಸ್ತುಗಳ ಮಾರಾಟಗಾರರು ಹಾಗೂ ತುರ್ತು ಸಂದರ್ಭಗಳ ಪಾಸು ವಿತರಿಸಲು ಆನ್ ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. www.supportdharwad.in ಮೂಲಕ ವ್ಯಾಪಾರಿಗಳು ಮತ್ತು ವಿವಿಧ ತುರ್ತು ಉದ್ದೇಶಗಳಿಗೆ ಸಾರ್ವಜನಿಕರು ಇ-ಪಾಸ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪರಿಶೀಲಿಸಿ ಕ್ಯೂ.ಆರ್.ಕೋಡ್ ಇರುವ ಪಾಸುಗಳನ್ನು ವಿತರಿಸಲಾಗುವುದು. ಇದರಿಂದ ಪಾಸುಗಳ ದುರುಪಯೋಗವಾಗುವುದು ತಪ್ಪುತ್ತದೆ ಎಂದರು.
ಬಿಆರ್ ಟಿಎಸ್, ಪಾಲಿಕೆ ಹಾಗೂ ಪೊಲೀಸ್ ಕಮಿಷನರೇಟ್ ಕಡೆಯಿಂದ ಅವಳಿ ನಗರದ ವಿವಿಧೆಡೆ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮೆರಾಗಳನ್ನು ಮಾನಿಟರ್ ಮಾಡಲು ಹೊಸೂರಿನ ಬಿಆರ್ ಟಿಆಸ್ ಕಚೇರಿಯಲ್ಲಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ. ಈ ಮೂಲಕ ಲಾಕ್‍ಡೌನ್ ಪ್ರದೇಶಗಳಲ್ಲಿ ಜನರು ಅನಗತ್ಯವಾಗಿ ಸಂಚರಿಸುವುದು ಹಾಗೂ ಗುಂಪು ಸೇರಿವುದನ್ನು ತಡೆಗಟ್ಟಲಾಗುತ್ತದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಹಾಗೂ ದೇಶಪಾಂಡೆ ಫೌಂಡೇಶನ್ ವತಿಯಿಂದ ಕೊರೊನಾ ಸೋಂಕಿತರ ಸಂಪರ್ಕ ಸಂಗ್ರಹ, ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗಳ ನಿಗಾವಹಿಸುವಿಕೆಯ ಕೇಂದ್ರೀಕೃತ ಕಾರ್ಯವನ್ನು ಸಹ ನಿರ್ವಹಿಸಲಾಗುತ್ತಿದೆ ಎಂದರು.
ವಿಜಯಪುರ: ಜಿಲ್ಲೆಯಲ್ಲಿ ಇಲ್ಲಿಯವರೆಗೆ 686 ಜನರ ಮೇಲೆ ನಿಗಾ ವಹಿಸಲಾಗಿದ್ದು, 335ಕ್ಕೂ ಹೆಚ್ಚು ಜನರನ್ನು ಐಸೋಲೇಷನ್ ನಲ್ಲಿ ಇಡಲಾಗಿದೆ. ಒಟ್ಟು 362 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 256 ಸ್ಯಾಂಪಲ್ ನೆಗೆಟಿವ್ ಬಂದಿವೆ, 10 ಪಾಸಿಟಿವ್ ಬಂದಿವೆ. ಅಲ್ಲದೆ ಇನ್ನೂ 96 ಪ್ರಕರಣಗಳ ಕುರಿತು ಫಲಿತಾಂಶ ಬರಬೇಕಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.
ಇಂದು ಮತ್ತೆ 60 ಸ್ಯಾಂಪಲ್ ಕಲೆಕ್ಟ್ ಮಾಡಿ ಪರೀಕ್ಷೆಗೆ ಕಳುಹಿಸಲಾಗುವದು. ಇಂದಿನ ಮೂರು ಪಾಸಿಟಿವ್ ವರದಿಗಳ ಪ್ರಕಾರ ಮೊದಲಿನ ಎರಡು ಪ್ರಕರಣಗಳು ರೋಗಿ ನಂ.221 ಗೆ ಸಂಬಂಧಿಸಿದ್ದು. ಸಂಜೆ ಬಂದ 228 ಜನರ ವರದಿಗೆ ಸಂಬಂಧಿಸಿದಂತೆ ಒಂದು ಪಾಜಿಟಿವ್ ಬಂದಿದೆ ಎಂದರು.
ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಂಪರ್ಕದಿಂದಾಗಿ 228ನೇ ರೋಗಿಗೆ ಸೋಂಕು ತಗುಲಿದೆ. ಇವರ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇಲ್ಲಿಯ ವರೆಗೆ ಈ ಎರಡು ಕುಟುಂಬಗಳಲ್ಲಿ ಮಾತ್ರ ಪಾಸಿಟಿವ್ ಬರುತ್ತಿದೆ. ಅವರೊಂದಿಗಿದ್ದವರಿಗೆ ಬಂದಿಲ್ಲ ಎಂಬುದು ಸಂತೋಷದ ವಿಚಾರ ಎಂದರು.
ನವದೆಹಲಿ: ಕೊರೊನಾ ಟೆಸ್ಟಿಂಗ್ ಕಿಟ್‍ಗಳನ್ನು ಖರೀದಿಸುವಲ್ಲಿ ಕೇಂದ್ರ ಸರ್ಕಾರ ತಡ ಮಾಡಿದೆ, ಹೀಗಾಗಿ ಟೆಸ್ಟಿಂಗ್ ಕಿಟ್‍ಗಳ ಕೊರತೆ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರತಿ ಮಿಲಿಯನ್ ಭಾರತೀಯರಿಗೆ ಕೇವಲ 149 ಜನರನ್ನು ಟೆಸ್ಟ್ ಮಾಡುತ್ತಿದ್ದೇವೆ. ಲಾವೋಸ್ (157), ನೈಜರ್(182) ಹಾಗೂ ಹೊಂಡುರಾನ್(162)ಗಳಂತಹ ಸಣ್ಣ ದೇಶಗಳ ರೀತಿ ಭಾರತದಲ್ಲಿ ಟೆಸ್ಟಿಂಗ್ ಆಗುತ್ತಿದೆ. ಸಾಮೂಹಿಕ ಪರೀಕ್ಷೆ ಕೊರೊನಾ ವಿರುದ್ಧ ಹೋರಾಟದ ಕೀಲಿ ಕೈ ಆಗಿದೆ. ಪ್ರಸ್ತುತ ಆಟದಲ್ಲಿ ನಾವು ಎಲ್ಲಿಯೂ ಇಲ್ಲ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಈ ಮೂಲಕ ಟೆಸ್ಟಿಂಗ್ ಕಿಟ್‍ಗಳ ಕೊರತೆ ಇದೆ ಎಂದು ತಿಳಿಸಿದ್ದಾರೆ.
India delayed the purchase of testing kits & is now critically short of them.
With just 149 tests per million Indians, we are now in the company of Laos (157), Niger (182) & Honduras (162).
Mass testing is the key to fighting the virus. At present we are nowhere in the game.
ಭಾರತದಲ್ಲಿ ಪ್ರಸ್ತುತ 10,363 ಪ್ರಕರಣಗಳು ಪತ್ತೆಯಾಗಿದ್ದು, 339 ಜನ ಸಾವನ್ನಪ್ಪಿದ್ದಾರೆ. ಇತರ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಸಂಖ್ಯೆಗಳು ತುಂಬಾ ಕಡಿಮೆ. ಭಾರತ ಹೆಚ್ಚು ಪರೀಕ್ಷೆ ನಡೆಸದ ಕಾರಣ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚು ಪರೀಕ್ಷೆ ನಡೆಸಿದರೆ ನೈಜ ಪ್ರಮಾಣ ತಿಳಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಟಲಿ ಪ್ರತಿ ಮಿಲಿಯನ್ ಜನರ ಪೈಕಿ 15,935 ಜನರನ್ನು ಪರೀಕ್ಷೆಗೆ ಒಳಪಡಿಸಿದೆ. ಅದೇ ರೀತಿ ಅಮೆರಿಕಾ 8,138 ಜನರನ್ನು ಪರೀಕ್ಷೆಗೆ ಒಳಪಡಿಸಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಆಹಾರ, ಔಷಧಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿದ್ದು, ಯಾರು ಹೆದರುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರ ವರೆಗೆ ದೇಶಾದ್ಯಂತ ಲಾಕ್‍ಡೌನ್ ವಿಸ್ತರಣೆ ಮಾಡಿದ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿ ಜನ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
सभी प्रदेश सरकारें जिस प्रकार केंद्र सरकार के साथ मिलकर कार्य कर रहीं हैं वह सचमुच प्रशंसनीय है। अब हमें इस समन्वय को और अधिक प्रगाढ़ करना है जिससे सभी नागरिक लॉकडाउन का अच्छे से पालन करें और किसी भी नागरिक को जरुरत की चीज़ों की समस्या भी ना हो।
ಗೃಹ ಸಚಿವನಾಗಿ ಔಷಧಿ, ಆಹಾರ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳು ದೇಶದಲ್ಲಿ ಬೇಕಾದಷ್ಟಿದೆ ಎಂದು ದೇಶದ ಪ್ರಜೆಗಳಿಗೆ ಭರವಸೆ ನೀಡುತ್ತಿದ್ದೇನೆ. ಯಾರೂ ಈ ಬಗ್ಗೆ ಚಿಂತಿಸಬೇಕಿಲ್ಲ. ಶ್ರೀಮಂತರು ಬಡವರಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತೇನೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರದ ಜೊತೆ ರಾಜ್ಯಗಳು ಕೈ ಜೋಡಿಸಿದ್ದು, ಸಹಕಾರ ನೀಡುತ್ತಿವೆ. ಘೋಷಣೆಯಾಗಿರುವ ಲಾಕ್‍ಡೌನ್ ಪಾಲಿಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ.
आज प्रधानमंत्री @narendramodi जी द्वारा COVID-19 को फैलने से रोकने व इसको समाप्त करने के लिए देशभर में किये गए लॉकडाउन को 03 मई तक बढाने का निर्णय भारत और भारतवासियों के जीवन और उनकी रक्षा के लिए लिया गया निर्णय है। इसके लिए मैं प्रधानमंत्री जी का हृदय से आभार व्यक्त करता हूँ।
ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸ್ಯಾನಿಟೈಸೇಷನ್ ಸಿಬ್ಬಂದಿ, ಪೊಲೀಸರು ಹಾಗೂ ಎಲ್ಲ ಭದ್ರತಾ ಸಿಬ್ಬಂದಿ ಕೊಡುಗೆ ಮಹತ್ತರವಾದದ್ದು. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಅವರ ಕೆಲಸ ನಮಗೆಲ್ಲ ಪ್ರೇರಣೆಯಾಗಬೇಕು. ಎಲ್ಲರೂ ನಿಯಮವನ್ನು ಪಾಲಿಸಿ ಇವರ ಕೆಲಸಕ್ಕೆ ಸಹಕರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಇಂದು ಹತ್ತು ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇಂದಿಗೆ ಒಟ್ಟು ಕೊರೊನಾ ಪಾಸಿಟಿವ್ ಸಂಖ್ಯೆ 51 ಏರಿಕೆಯಾಗಿದೆ. ಮಂಗಳವಾರ 41 ಇತ್ತು, ರಾತ್ರಿ ಒಳಗೆ ಎಷ್ಟಾಗತ್ತೊ ಗೊತ್ತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕಾಗಿ ಚಿಕಿತ್ಸೆ ಮತ್ತು ಪರೀಕ್ಷೆಗೆ ಎಲ್ಲಿ ವ್ಯವಸ್ಥೆ ಮಾಡಬೇಕು. ವೈದ್ಯಕೀಯ ಸಿಬ್ಬಂದಿ ಹೇಗೆ ಕೆಲಸ ಮಾಡಬೇಕು? ಅವರಿಗೆ ವಿಶ್ರಾಂತಿ ಕೊಡೋದು ಹೇಗೆ? ರಾಜ್ಯವ್ಯಾಪಿ ಹೇಗೆ ಮುಂಜಾಗ್ರತೆ ಕೈಗೊಳ್ಳಬೇಕು? ಹೊಸ ಹೊಸ ಕಟ್ಟಡ ಹಾಗೂ ಯಾವ ಯಾವ ಹೋಟೆಲ್‍ಗಳನ್ನು ಚಿಕಿತ್ಸೆಗಾಗಿ ಪಡೆಯಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಸಾವಾಗಿರುವ ಮಹಿಳೆ ರಿಸಲ್ಟ್ ಬರಬೇಕಿದೆ. ಮೊದಲ ವರದಿಯಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಎರಡನೇ ವರದಿ ಇನ್ನೂ ಬರಬೇಕಿದೆ. ಒಂದು ವೇಳೆ ಕೊರೊನಾದಿಂದ ಸಾವನ್ನಪ್ಪಿದ್ದರೆ ಅಗತ್ಯ ಕ್ರಮವಹಿಸಿ ಅಂತ್ಯಸಂಸ್ಕಾರ ಮಾಡುತ್ತೇವೆ. ಅವರನ್ನು ಸುಟ್ಟು ಹಾಕಿದರೆ ಉತ್ತಮ, ಆದರೆ ಕೆಲವು ಸಮುದಾಯದಲ್ಲಿ ಸಂಪ್ರದಾಯ ಇರುತ್ತವೆ. ಹೀಗಾಗಿ ಎಂಟು ಅಡಿ ಆಳದಲ್ಲಿ ಹೂಳಬೇಕು ಎಂದು ಮಾಹಿತಿ ನೀಡಿದರು.
21 ದಿನಗಳು ಅನೇಕರಿಗೆ ತೊಂದರೆಯಾಗುತ್ತೆ. ಈ ತೊಂದರೆಯನ್ನು ನಾವು ನಮ್ಮ ರಕ್ಷಣೆಗೋಸ್ಕರ ತಡೆದುಕೊಳ್ಳಬೇಕು. ಕೆಲವರು ಬೇರೆ ದೇಶದಿಂದ ವೈರಸ್ ತೆಗೆದುಕೊಂಡ ನಮ್ಮಲ್ಲಿಗೆ ಬಂದಿದ್ದಾರೆ. ಇದರಿಂದ ನಮ್ಮ ಜನರನ್ನು ರಕ್ಷಣೆ ಮಾಡಲು ಈ ಬಂದ್ ಅನಿವಾರ್ಯವಾಗಿದೆ. ಆದ್ದರಿಂದ ಜನರು ಇದಕ್ಕೆ ಸಹಕಾರ ಕೊಡಬೇಕು. ಜನರಿಗೆ ಅಗತ್ಯ ದಿನಸಿ ಖರೀದಿಗೆ ಸಮಯ ನಿಗದಿ ಬಗ್ಗೆ ಸಿಎಸ್ ಹಾಗೂ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಸುಧಾಕರ್ ಹೇಳಿದ್ದಾರೆ.
ಕ್ವಾರಂಟೈನ್‍ಗೆ ಹಾಗೂ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಸಿದ್ಧತೆ ಮಾಡಬೇಕಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ. ಪಾಸಿಟಿವ್ ಪ್ರಕರಣಗಳು ಬಂದರೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಹೋಟೆಲ್ ಹಾಗೂ ಹೊಸ ಕಟ್ಟಡಗಳನ್ನು ತೆಗೆದುಕೊಂಡು ಚಿಕಿತ್ಸೆಗೆ ಸಿದ್ಧತೆಗೊಳಿಸಬೇಕಾಗಿದೆ. ಚಿಕಿತ್ಸೆ ಅಥವಾ ಪರೀಕ್ಷೆಗೆ ಬಂದವರನ್ನು ವಿಕ್ಟೋರಿಯಾದಲ್ಲಿ ಇಡುಬೇಕಾ? ಎಲ್ಲಿ ಇಡೋದು ಎಂದು ಸಭೆ ಮಾಡಿದ್ದೇವೆ. ನಾವು ಸಿಬ್ಬಂದಿಯ ಬಗ್ಗೆಯೂ ಕೇರ್ ಮಾಡಬೇಕಿದೆ ಎಂದರು.
ಕೊರೊನಾ ವಿಚಾರವಾಗಿ ಮನೆಯಲ್ಲೇ ಇರಿ ಎಂದು ಹೇಳಿದ್ದರಿಂದ ಎಲ್ಲರಿಗೂ ತೊಂದರೆಯಾಗಿದೆ. ಆದರೆ ಆ ತೊಂದರೆ ನಮ್ಮ ಒಳ್ಳೆಯದಕ್ಕೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನೆಮಗೆಲ್ಲರಿಗೂ ತೊಂದರೆ ಆಗದ ರೀತಿಯಲ್ಲಿ ನಾವು ಮುಂದೆ ಕೆಲಸ ಮಾಡಬೇಕಿದೆ. ನಿಮಗೆಲ್ಲರಿಗೂ ಬೇಕಾದ ಸಮಯದಲ್ಲಿ ಊಟ, ಔಷಧಿ ಸಿಗುವಂತ ರೀತಿಯಲ್ಲಿ ನಾವು ಕ್ರಮಕೈಗೊಳ್ಳಬೇಕು. ನಮ್ಮಿಂದ ಮತ್ತು ಸರ್ಕಾರದಿಂದ ತೊಂದರೆಯಾಗಿದ್ದರೆ ನಾನು ಕ್ಷೆಮೆ ಕೇಳುತ್ತೇನೆ ಎಂದು ಸುಧಾಕರ್ ತಿಳಿಸಿದ್ದಾರೆ.
ನಾನು ಇಲ್ಲಿ ಮಂತ್ರಿ ಅಥವಾ ಶಾಸಕ ಎಂದು ಕೆಲಸ ಮಾಡುತ್ತಿಲ್ಲ. ನಾನೊಬ್ಬ ವೈದ್ಯನಾಗಿ ಈ ರಾಜ್ಯದ ಪೌರನಾಗಿ ಕೆಲಸ ಮಾಡುತ್ತಿದ್ದೇನೆ. ಆದ್ದರಿಂದ ನಾನು ಕೊರೊನಾ ವೈರಸ್ ಅನ್ನು ತಡೆಗಟ್ಟಲು ನನ್ನ ಕೈಮೀರಿ ಕೆಲಸ ಮಾಡುತ್ತೇನೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಒಬ್ಬರಿಗೆ ವಹಿಸಬೇಕು ಎಂದು ನಾನು ಸಿಎಂ ಯಡಿಯೂರಪ್ಪ ಅವರಿಗೇ ಹೇಳಿದ್ದೇನೆ. ಇದರ ಜವಾಬ್ದಾರಿ ಯಾರೇ ತೆಗೆದುಕೊಂಡರು ನಾನು ಕೆಲಸ ಮಾಡುತ್ತೇನೆ ಎಂದು ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವಿಕೆ ಹೆಚ್ಚಳ ಆಗುತ್ತಾನೆ ಇದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೂಡ ಅನೇಕ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಈಗಾಗಲೇ 1-6 ನೇ ತರಗತಿಗೆ ಪರೀಕ್ಷೆ ರದ್ದು ಮಾಡಿದೆ. ಮಾರ್ಚ್ 31ವರೆಗೆ 7-9 ನೇ ತರಗತಿವರೆಗಿನ ಪರೀಕ್ಷೆ ಮುಂದೂಡಿದೆ. ಈಗಾಗಲೇ ದ್ವೀತಿಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಕೊರೊನಾ ಸೊಂಕು ತಡೆಗೆ ಹೊಸದಾಗಿ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪಿಯುಸಿ ಬೋರ್ಡ್ ಹೊಸದಾಗಿ ಸುತ್ತೋಲೆ ಹೊರಡಿಸಿದೆ.
ರಾಜ್ಯದಲ್ಲಿ 1016 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಎಲ್ಲಾ ಕೇಂದ್ರಗಳಲ್ಲಿ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಪಿಯುಸಿ ಬೋರ್ಡ್ ಸುತ್ತೋಲೆ ಹೊರಡಿಸಿದೆ. 9 ಅಂಶಗಳ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ಹೊರಡಿಸಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳು ಕಡ್ಡಾಯವಾಗಿ ಪಾಲನೆ ಮಾಡಲು ಪಿಯುಸಿ ಬೋರ್ಡ್ ಸೂಚನೆ ನೀಡಿದೆ.
ಮುನ್ನೆಚ್ಚರಿಕೆ ಕ್ರಮಗಳು
1. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ವಿವಿಧ ತಂಡಗಳಲ್ಲಿ ಚದುರಿದ ರೀತಿಯಲ್ಲಿ ಪ್ರವೇಶಿಸುವಂತೆ ಕ್ರಮವಹಿಸುವುದು.
2. ವಿವಿಧ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಸಮಯ ನಿಗದಿ ಮಾಡುವುದು.
3. ವಿದ್ಯಾರ್ಥಿಗಳು ಕೊಠಡಿ ಪ್ರವೇಶಿಸುವ ಮುನ್ನ ಕೈಗಳನ್ನು ಸ್ವಚ್ಛಗೊಳಿಸಲು ಸೂಚಿಸುವುದು.
4. ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್, ಸಾಬೂನು, ನೀರಿನ ವ್ಯವಸ್ಥೆ ಹೆಚ್ಚು ಪ್ರಮಾಣದಲ್ಲಿ ಒದಗಿಸುವುದು.
5. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಬಳಿ ಗುಂಪು ಸೇರಿದಂತೆ ನೋಡಿಕೊಳ್ಳುವದು.
6. ಜ್ವರ, ಕೆಮ್ಮು, ನೆಗಡಿ ಇರೋ ವಿದ್ಯಾರ್ಥಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸುವುದು.
7. ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡುವುದು.
8. ಅಗತ್ಯ ಸಂದರ್ಭದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸಲಹೆ ಪಡೆಯುವುದು.