Tag: test

  • ಶತಕ ಸಿಡಿಸಿ ವಿಶೇಷ ಸಾಧನೆಗೈದ ರೋಹಿತ್ ಶರ್ಮಾ

    ಶತಕ ಸಿಡಿಸಿ ವಿಶೇಷ ಸಾಧನೆಗೈದ ರೋಹಿತ್ ಶರ್ಮಾ

    ವಿಶಾಖಪಟ್ಟಣಂ: ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ರೋಹಿತ್ ಶರ್ಮಾ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ್ದಾರೆ.

    ಏಕದಿನದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿರುವ ರೋಹಿತ್ ಶರ್ಮಾ 27 ಟೆಸ್ಟ್ ಆಡಿದ್ದು ಯಾವುದೇ ಪಂದ್ಯದಲ್ಲಿ ಓಪನರ್ ಆಗಿ ಇಳಿದಿರಲಿಲ್ಲ. ಆದರೆ ಇಂದು ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು 154 ಎಸೆತಗಳಲ್ಲಿ 100 ರನ್ ಹೊಡೆಯುವ ಮೂಲಕ 4ನೇ ಶತಕ ಹೊಡೆದರು.

    ವಿಶೇಷ ಏನೆಂದರೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಕ್ಯಾಪ್ ಧರಿಸಿದ್ದು 2013ರ ನವೆಂಬರ್ ತಿಂಗಳಿನಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ. ಮೊದಲ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಆಡಿ ಮೊದಲ ಇನ್ನಿಂಗ್ಸ್ ನಲ್ಲಿ 177 ರನ್(301 ಎಸೆತ, 23 ಬೌಂಡರಿ, 1 ಸಿಕ್ಸ್) ಹೊಡೆದಿದ್ದರು. ಈ ಮೂಲಕ ಮೊದಲ ಪಂದ್ಯದಲ್ಲಿ ಶತಕದ ಜೊತೆ ಈಗ ಆರಂಭಿಕರಾಗಿ ಕಣಕ್ಕೆ ಇಳಿದ ಮೊದಲ ಪಂದ್ಯದಲ್ಲಿ 100 ರನ್ ಸಿಡಿಸುವ ಮೂಲಕ ತಮ್ಮ ವೈಯಕ್ತಿಕ ಕ್ರಿಕೆಟ್ ಬದುಕಿನಲ್ಲಿ ವಿಶೇಷ ಸಾಧನೆ ಮಾಡಿದರು.

    84 ಎಸೆತಗಳಲ್ಲಿ 50 ರನ್ ಪೂರ್ಣಗೊಳಿಸಿದ ರೋಹಿತ್ 154 ಎಸೆತಗಳಲ್ಲಿ ಶತಕ ಹೊಡೆದರು. ಸದ್ಯ ಈಗ ಮಂದ ಬೆಳಕಿನ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಿದ್ದು ಭಾರತ 59.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 202 ರನ್ ಹೊಡೆದಿದೆ.

    ರೋಹಿತ್ ಶರ್ಮಾ ಔಟಾಗದೇ 115 ರನ್(174 ಎಸೆತ, 12 ಬೌಂಡರಿ, 5 ಸಿಕ್ಸರ್) ಹೊಡೆದಿದ್ದರೆ ಕೆಎಲ್ ರಾಹುಲ್ ಬದಲು ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಮಯಾಂಕ್ ಅಗರ್‍ವಾಲ್ ಔಟಾಗದೇ 84 ರನ್(183 ಎಸೆತ, 11 ಬೌಂಡರಿ, 2ಸಿಕ್ಸರ್) ಹೊಡೆದಿದ್ದಾರೆ.  ಈ ಹಿಂದೆ ಆರಂಭಿಕರಾಗಿ ಕಣಕ್ಕೆ ಇಳಿದ ಮೊದಲ ಪಂದ್ಯದಲ್ಲಿ ಶಿಖರ್ ಧವನ್, ಕೆಎಲ್ ರಾಹುಲ್, ಪೃಥ್ವಿ ಶಾ ಶತಕದ ಸಾಧನೆ ಮಾಡಿದ್ದರು.

  • ಟೆಸ್ಟ್ ಆರಂಭಿಕನಾಗಿ ರೋಹಿತ್ ಶರ್ಮಾ ಕಣಕ್ಕೆ?

    ಟೆಸ್ಟ್ ಆರಂಭಿಕನಾಗಿ ರೋಹಿತ್ ಶರ್ಮಾ ಕಣಕ್ಕೆ?

    ನವದೆಹಲಿ: ಮುಂಬರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆಯ ಕುರಿತು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಮಾತನಾಡಿದ್ದಾರೆ.

    ಸದ್ಯ ತಂಡದ ಆರಂಭಿಕನಾಗಿ ಕಣಕ್ಕೆ ಇಳಿಯುತ್ತಿರುವ ಕೆಎಲ್ ರಾಹುಲ್ ಫಾರ್ಮ್ ಸಮಸ್ಯೆ ಆಯ್ಕೆ ಸಮಿತಿಯ ಈ ಚಿಂತನೆಗೆ ಕಾರಣವಾಗಿದೆ. ಉತ್ತಮ ಬ್ಯಾಟಿಂಗ್ ಫಾರ್ಮ್ ಹೊಂದಿದ್ದರೂ ರೋಹಿತ್ ಶರ್ಮಾ ಅವರಿಗೆ ವೆಸ್ಟ್ ಇಂಡೀಸ್ ಟೂರ್ನಿಯಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

    ಈ ಕುರಿತು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಎಂಎಸ್‍ಕೆ ಪ್ರಸಾದ್, ವಿಂಡೀಸ್ ಸರಣಿಯ ಬಳಿಕ ಆಯ್ಕೆ ಸಮಿತಿ ಸಭೆ ನಡೆದಿಲ್ಲ. ಮುಂದಿನ ಸಭೆಯಲ್ಲಿ ರೋಹಿತ್ ಅವರನ್ನು ಆರಂಭಿಕರಾಗಿ ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

    ರಾಹುಲ್ ಪ್ರತಿಭಾನ್ವಿತ ಆಟಗಾರರಾಗಿದ್ದು, ಟೆಸ್ಟ್ ಪಂದ್ಯಗಳಲ್ಲಿ ಅವರು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಎಂಎಸ್‍ಕೆ ಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ. ಅಂದಹಾಗೇ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಕ್ರಮವಾಗಿ 13, 6, 44, 38 ರನ್ ಗಳಿಸಿದ್ದರು. ಇತ್ತ ವಿಂಡೀಸ್ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಲು ಅವಕಾಶ ಪಡೆದ ರಹಾನೆ, ವಿಹಾರಿ ಉತ್ತಮ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರು. ಪರಿಣಾಮ ಇದುವರೆಗೂ ಟೆಸ್ಟ್ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ರೋಹಿತ್ ಆರಂಭಿಕರಾಗಿ ಅವಕಾಶ ಪಡೆಯುವ ಸಾಧ್ಯತೆ ಇದೆ.

  • ಕೊಹ್ಲಿ 3 ಮಾದರಿ ಕ್ರಿಕೆಟ್‍ನಲ್ಲೂ ಅತ್ಯುತ್ತಮ ಆಟಗಾರ: ಶೇನ್ ವಾರ್ನ್

    ಕೊಹ್ಲಿ 3 ಮಾದರಿ ಕ್ರಿಕೆಟ್‍ನಲ್ಲೂ ಅತ್ಯುತ್ತಮ ಆಟಗಾರ: ಶೇನ್ ವಾರ್ನ್

    ಮ್ಯಾಂಚೆಸ್ಟರ್: ವಿಶ್ವ ಕ್ರಿಕೆಟಿನ ಎಲ್ಲಾ ಮಾದರಿಗಳಲ್ಲಿಯೂ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಅವರಿಗಿಂತ ಉತ್ತಮ ಆಟಗಾರ ಎಂದು ಆಸೀಸ್ ಮಾಜಿ ದಿಗ್ಗಜ ಆಟಗಾರ ಶೇನ್ ವಾರ್ನ್ ಅಭಿಪ್ರಾಯ ಪಟ್ಟಿದ್ದಾರೆ.

    ಇತ್ತೀಚೆಗೆ ದ್ವಿಶತಕ ಸಿಡಿಸುವ ಮೂಲಕ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದ ಸ್ಮಿತ್ ಕುರಿತು ವಾರ್ನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಟೀವ್ ಸ್ಮಿತ್ ಕೇವಲ ಟೆಸ್ಟ್ ಕ್ರಿಕೆಟಿನಲ್ಲಿ ಮಾತ್ರ ಉತ್ತಮ ಬ್ಯಾಟ್ಸ್ ಮನ್ ಅಷ್ಟೇ. ಆದರೆ ಕೊಹ್ಲಿ, ಏಕದಿನ, ಟಿ20 ಹಾಗೂ ಟೆಸ್ಟ್ ಮೂರು ಮಾದರಿಗಳಲ್ಲಿ ಉತ್ತಮ ರನ್ ಗಳಿಸಿದ್ದಾರೆ ಎಂದು ವಾರ್ನ್ ಹೇಳಿದ್ದಾರೆ. ಇದನ್ನು ಓದಿ: ರೂಮಿನ ಕಿಟಕಿ ತೆರೆದು ಸೆಕ್ಸ್ ಪಾರ್ಟಿ – ಪ್ರೇಯಸಿ, ವೇಶ್ಯೆಯರ ಜೊತೆ ವಾರ್ನ್ ಸಲ್ಲಾಪ

    ವಿಶ್ವ ಕ್ರಿಕೆಟಿನಲ್ಲಿ ಕೊಹ್ಲಿ ಅತ್ಯುತ್ತಮ ಆಟಗಾರ. ಕ್ರಿಕೆಟಿನ ಮೂರು ಮಾದರಿಗಳಲ್ಲಿ ಈಗಾಗಲೇ ಕೊಹ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಆದರೆ ಸ್ಮಿತ್ ಟೆಸ್ಟ್ ಕ್ರಿಕೆಟಿನಲ್ಲಿ ಮಾತ್ರ ಉತ್ತಮ ಬ್ಯಾಟ್ಸ್ ಮನ್. ಕೊಹ್ಲಿರನ್ನು ಲೆಜೆಂಡ್ ಕ್ರಿಕೆಟ್ ಎಂದು ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

    ಇದೇ ವೇಳೆ ಸಚಿನ್ ಅವರ 100 ಶತಕಗಳ ದಾಖಲೆಯನ್ನು ಕೊಹ್ಲಿ ಮುರಿಯುತ್ತಾರೆ ಎಂಬ ವಿಶ್ವಾಸ ಇದೆ. ಸಿಮೀತ ಓವರ್ ಗಳ ಕ್ರಿಕೆಟ್‍ನಲ್ಲಿ ಕೊಹ್ಲಿಗಿಂತ ಉತ್ತಮ ಆಟಗಾರರನ್ನು ನೋಡಿಲ್ಲ. ನನಗೆ ವಿವಿ ರಿಚರ್ಡ್ ಸನ್ ಅತ್ಯುತ್ತಮ ಆಟಗಾರರಾಗಿದ್ದು, ಆ ಬಳಿಕ ತಾವು ಕಂಡ ಅತ್ಯುತ್ತಮ ಆಟಗಾರ ಕೊಹ್ಲಿ. ಕ್ರಿಕೆಟ್ ವೃತ್ತಿ ಜೀವನಕ್ಕೆ ಕೊಹ್ಲಿ ನಿವೃತ್ತಿ ಹೇಳುವ ವೇಳೆಗೆ ವಿಶ್ವದಲ್ಲಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಪಡೆದಿರುತ್ತಾರೆ ಎಂದು ವಾರ್ನ್ ಭವಿಷ್ಯ ನೀಡಿದಿದ್ದಾರೆ. ಇದನ್ನು ಓದಿ: ಎರಡೇ ವರ್ಷದಲ್ಲಿ 50+ ಟೆಸ್ಟ್ ವಿಕೆಟ್ ಪಡೆದು ಮಿಂಚಿದ ಭಾರತದ ವೇಗಿಗಳು

    ಸದ್ಯ ನಡೆಯುತ್ತಿರುವ ಆ್ಯಶಸ್ ಕ್ರಿಕೆಟ್ ಸರಣಿಯಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನ ಆಡಿರುವ ಸ್ಮಿತ್, 147.25ರ ಸರಾಸರಿಯಲ್ಲಿ 589 ರನ್ ಸಿಡಿಸಿದ್ದಾರೆ. ಗುರುವಾರವಷ್ಟೇ ದ್ವಿಶತಕ ಕೂಡ ಸಿಡಿಸಿದ್ದರು. ಆ ಮೂಲಕ ಟೆಸ್ಟ್ ಕ್ರಿಕೆಟ್ ಶ್ರೇಯಾಂಕಪಟ್ಟಿಯಲ್ಲಿ ನಂ.1 ಸ್ಥಾನ ಪಡೆದರು. ಇದುವರೆಗೂ 79 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 135 ಇನ್ನಿಂಗ್ಸ್ ಗಳಿಂದ 53.14 ಸರಾಸರಿಯಲ್ಲಿ 25 ಶತಕ, 22 ಅರ್ಧ ಶತಕಗಳೊಂದಿಗೆ 6,749 ರನ್ ಗಳಿಸಿದ್ದಾರೆ. 67 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಮಿತ್ 121 ಇನ್ನಿಂಗ್ಸ್ ಗಳಿಂದ 64.64ರ ಸರಾಸರಿಯಲ್ಲಿ 26 ಶತಕ, 25 ಅರ್ಧ ಶತಕಗಳೊಂದಿಗೆ 6,788 ರನ್ ಗಳಿಸಿದ್ದಾರೆ.

  • ಭಾರತಕ್ಕೆ 60 ಅಂಕ, ಇಂಗ್ಲೆಂಡಿಗೆ 24 ಅಂಕ – ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಲೆಕ್ಕಾಚಾರ ಹೇಗೆ?

    ಭಾರತಕ್ಕೆ 60 ಅಂಕ, ಇಂಗ್ಲೆಂಡಿಗೆ 24 ಅಂಕ – ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಲೆಕ್ಕಾಚಾರ ಹೇಗೆ?

    ಬೆಂಗಳೂರು: ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್  ಆರಂಭಗೊಂಡಿದ್ದು, ಈ ಟೂರ್ನಿಯಲ್ಲಿ ಒಂದು ಪಂದ್ಯ ಗೆದ್ದಿರುವ ಭಾರತಕ್ಕೆ 60 ಅಂಕ ಆಸ್ಟ್ರೇಲಿಯಾವನ್ನು ಸೋಲಿಸಿದ ಇಂಗ್ಲೆಂಡಿಗೆ 24 ಅಂಕ ನೀಡಿದ್ದು ಸರಿಯೇ? ಇಂಗ್ಲೆಂಡಿಗೆ ಯಾಕೆ 60 ಅಂಕ ನೀಡಿಲ್ಲ ಎಂದು ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡಿದೆ. ಆದರೆ ಈ ಅಂಕದಲ್ಲಿ ಯಾವುದೇ ಮೋಸ ನಡೆದಿಲ್ಲ. ಐಸಿಸಿ ನಿಯಮದ ಪ್ರಕಾರವೇ ಎಲ್ಲ ತಂಡಗಳಿಗೆ ಅಂಕವನ್ನು ಹಂಚಿಕೆ ಮಾಡಲಾಗುತ್ತಿದೆ.

    ಅಂಕ ಹೇಗೆ ಹಂಚಲಾಗುತ್ತದೆ?
    ಒಂದು ಟೆಸ್ಟ್ ಸರಣಿಗೆ 120 ಅಂಕಗಳನ್ನು ಐಸಿಸಿ ಈಗಾಗಲೇ ನಿಗದಿ ಮಾಡಿದೆ. ಸರಣಿಯಲ್ಲಿ ತಂಡಗಳು ಎಷ್ಟು ಪಂದ್ಯಗಳನ್ನು ಆಡಲಿದೆಯೋ ಆ ಪಂದ್ಯಗಳಿಗೆ ಅನುಗುಣವಾಗಿ ಅಂಕಗಳನ್ನು ವಿಭಾಗಿಸಲಾಗುತ್ತದೆ. ಉದಾಹರಣೆಗೆ ವಿಂಡೀಸ್ ಸರಣಿಯಲ್ಲಿ 2 ಪಂದ್ಯಗಳು ನಡೆಯಲಿದ್ದು ಪಂದ್ಯ ಗೆದ್ದರೆ ಗೆದ್ದ ತಂಡಕ್ಕೆ 60 ಅಂಕಗಳನ್ನು ನೀಡಲಾಗುತ್ತದೆ. ಅದೇ 5 ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೆ ಗೆದ್ದ ತಂಡಕ್ಕೆ 24 ಅಂಕಗಳನ್ನು ನೀಡಲಾಗುತ್ತದೆ. ಈ ಕಾರಣಕ್ಕಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಒಂದೊಂದು ಪಂದ್ಯ ಗೆದ್ದ ಹಿನ್ನೆಲೆಯಲ್ಲಿ 24 ಅಂಕಗಳನ್ನು ನೀಡಲಾಗಿದೆ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಎರಡು ತಂಡಗಳಿಗೆ 8 ಅಂಕಗಳನ್ನು ನೀಡಲಾಗಿದೆ.

    2 ಪಂದ್ಯಗಳ ಸರಣಿಯಲ್ಲಿ ಪಂದ್ಯ ಗೆದ್ದರೆ 60 ಅಂಕ, ಟೈ ಆದರೆ 30 ಅಂಕ, ಡ್ರಾನಲ್ಲಿ ಅಂತ್ಯಗೊಂಡರೆ 20 ಅಂಕಗಳನ್ನು ನೀಡಲಾಗುತ್ತದೆ. 3 ಪಂದ್ಯಗಳ ಸರಣಿಯಲ್ಲಿ ಜಯ ಗಳಿಸಿದ ತಂಡಕ್ಕೆ 40 ಅಂಕ, ಟೈ ಆದರೆ 20, ಯಾವುದೇ ಫಲಿತಾಂಶ ಕಾಣದೇ ಡ್ರಾ ಆದರೆ 13 ಅಂಕಗಳನ್ನು ನೀಡಲಾಗುತ್ತದೆ. 5 ಪಂದ್ಯಗಳ ಸರಣಿಯಲ್ಲಿ ಜಯಗಳಿಸಿದರೆ 24 ಅಂಕ, ಟೈ ಆದರೆ 12, ಡ್ರಾ ಆದಲ್ಲಿ 8 ಅಂಕ ನೀಡಲಾಗುತ್ತದೆ.

    ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಲಿವೆ. ಒಂದು ಸರಣಿಯಲ್ಲಿ ಗರಿಷ್ಠ 5, ಕನಿಷ್ಠ 2 ಪಂದ್ಯ ಗಳನ್ನು ಆಡಬೇಕು. ಪ್ರತಿಯೊಂದು ತಂಡ ತವರಿನಲ್ಲಿ 3, ವಿದೇಶಗಳಲ್ಲಿ 3 ಸರಣಿಯನ್ನು ಆಡಬೇಕೆಂಬ ನಿಯಮ ಹೇರಲಾಗಿದೆ. ಅತ್ಯಧಿಕ ಅಂಕ ಸಂಪಾದಿಸಿದ ಅಗ್ರ 2 ತಂಡಗಳ ನಡುವಿನ ಫೈನಲ್ ಪಂದ್ಯ 2021ರ ಜೂನ್‍ನಲ್ಲಿ ನಡೆಯಲಿದೆ. ಭಾರತ ತನ್ನ ಅಭಿಯಾನವನ್ನು ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಆರಂಭಿಸಿದೆ.

    ಭಾರತಕ್ಕೆ ಮೊದಲ ಸ್ಥಾನ:
    ಟೆಸ್ಟ್ ಚಾಂಪಿಯನ್‍ಶಿಪ್ ಅಂಕ ಪಟ್ಟಿಯಲ್ಲಿ ಭಾರತ ಈಗ 60 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಏರಿದೆ. ನ್ಯೂಜಿಲೆಂಡ್, ಶ್ರೀಲಂಕಾ ತಂಡಗಳು 60 ಅಂಕಗಳು ಗಳಿಸಿದರೂ ಅನುಕ್ರಮವಾಗಿ ಎರಡು, ಮೂರನೇ ಸ್ಥಾನ ಪಡೆದಿದೆ. ಭಾರತ 318 ರನ್‍ಗಳ ಭಾರೀ ಅಂತರದಿಂದ ಗೆದ್ದ ಹಿನ್ನೆಲೆಯಲ್ಲಿ 2.338 ರನ್ಸ್ ಪರ್ ವಿಕೆಟ್ ಅನುಪಾತ ಇರುವ ಕಾರಣ ಮೊದಲ ಸ್ಥಾನವನ್ನು ಪಡೆದಿದೆ.

    ರನ್ಸ್ ಪರ್ ವಿಕೆಟ್ ಅನುಪಾತ ಲೆಕ್ಕಾಚಾರ ಹೇಗೆ?
    ತಂಡಗಳು ಸಮಾನ ಅಂಕ ಪಡೆದರೆ ಸ್ಥಾನ ಹಂಚಿಕೆ ಮಾಡುವುದು ಕಷ್ಟವಾಗುತ್ತದೆ. ಈ ಕಾರಣಕ್ಕೆ ಎರಡು ಇನ್ನಿಂಗ್ಸ್ ಗಳಲ್ಲಿ ಕಳೆದುಕೊಂಡ ವಿಕೆಟ್ ಮತ್ತು ಒಟ್ಟು ರನ್ ಗಳ ಲೆಕ್ಕಾಚಾರ ಹಾಕಿ ಅಂಕ ನೀಡಲಾಗುತ್ತದೆ. ಭಾರತ ಮತ್ತು ವೆಸ್ಟ್ ಇಂಡೀಸ್ ಉದಾಹರಣೆಗೆ ತೆಗೆದುಕೊಂಡರೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 297 ರನ್‍ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ  7 ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ವಿಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ  222 ರನ್ ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ  100 ರನ್ ಗಳಿಗೆ ಆಲೌಟ್ ಆಗಿತ್ತು.

    ((297+343)/17)÷(222+100)/20)
    =(640/17)÷ (322/20)
    =37.647 ÷ 16.1
    =2.338

  • ವಿಂಡೀಸ್ ಮೊದ್ಲ ಟೆಸ್ಟ್‌ನಲ್ಲಿ ನಿರ್ಮಾಣವಾದ ದಾಖಲೆಗಳಿವು

    ವಿಂಡೀಸ್ ಮೊದ್ಲ ಟೆಸ್ಟ್‌ನಲ್ಲಿ ನಿರ್ಮಾಣವಾದ ದಾಖಲೆಗಳಿವು

    ಆ್ಯಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 318 ರನ್‍ಗಳ ಅಂತರದ ಗೆಲುವು ಪಡೆದಿದ್ದು, ಪಂದ್ಯದಲ್ಲಿ ಕೆಲ ಪ್ರಮುಖ ದಾಖಲೆಗಳು ನಿರ್ಮಾಣವಾಗಿದೆ.

    ವಿದೇಶಿ ನೆಲದಲ್ಲಿ ಟೀಂ ಇಂಡಿಯಾ ಪಡೆದ ಅತಿ ಹೆಚ್ಚು ರನ್ ಅಂತರದ ಗೆಲುವು ಇದಾಗಿದೆ. ಅಲ್ಲದೇ 2 ಟೆಸ್ಟ್ ಪಂದ್ಯಗಳ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲುವು ಪಡೆದ ನಾಯಕ ವಿರಾಟ್ ಕೊಹ್ಲಿ, ವಿದೇಶಿ ನೆಲದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ತಂಡದ ಪರ ಅತಿ ಹೆಚ್ಚು ಗೆಲುವು ಪಡೆದ ನಾಯಕ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಈ ಹಿಂದೆ ಸೌರವ್ ಗಂಗೂಲಿ ನಾಯಕತ್ವದ ಟೀಂ ಇಂಡಿಯಾ ವಿದೇಶಿ ನೆಲದಲ್ಲಿ 11 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಪಡೆದಿತ್ತು.

    ಟೀಂ ಇಂಡಿಯಾ ಪರ ಒಟ್ಟಾರೆಯಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ನಾಯಕ ಪಟ್ಟಿಯಲ್ಲಿ ಕೊಹ್ಲಿ, ಮಾಜಿ ನಾಯಕ ಧೋನಿರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದು, ಇವರ ನಾಯಕತ್ವದಲ್ಲಿ ಇದುವರೆಗೂ ಟೀಂ ಇಂಡಿಯಾ ತಲಾ 27 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಪಡೆದಿದೆ.

    ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪಂದ್ಯದಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದರು. ಆ ಮೂಲಕ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನೆಲದಲ್ಲಿ 5 ವಿಕೆಟ್ ಗೊಂಚಲು ಸಾಧನೆ ಮಾಡಿದ ಏಷ್ಯಾದ ಮೊದಲ ಆಟಗಾರರಾಗಿದ್ದಾರೆ. ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ರಹಾನೆ ಬರೋಬ್ಬರಿ 2 ವರ್ಷ (17 ಪಂದ್ಯ)ಗಳ ಬಳಿಕ ಶತಕ ಸಿಡಿಸಿದ ಸಾಧನೆ ಮಾಡಿದರು.

    ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ20, ಏಕದಿನ ಕ್ರಿಕೆಟ್ ಟೂರ್ನಿಗಳಲ್ಲಿ ಗೆಲುವು ಪಡೆದಿರುವ ಟೀಂ ಇಂಡಿಯಾ, ಐಸಿಸಿ ಟೆಸ್ಟ್ ಚಾಂಪಿಯನ್ಸ್ ಶಿಪನ್ನು ಗೆಲುವಿನೊಂದಿಗೆ ಆರಂಭಿಸಿದೆ. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ತಂಡ ಪಂದ್ಯದಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ನಾನು ಯಾವುದೇ ನಿರ್ಧಾರ ಕೈಗೊಂಡರು ಆಟಗಾರರು ಅದನ್ನು ಪಾಲಿಸುತ್ತಾರೆ. ಇದುವೆ ತಂಡದ ಉತ್ತಮ ಪ್ರದರ್ಶನಕ್ಕೆ ಕಾರಣ ಎಂದಿದ್ದಾರೆ.

  • 95 ನಿಮಿಷ, 45 ಎಸೆತ ಎದುರಿಸಿದ್ರು ಡಕೌಟ್ – ಕಳಪೆ ದಾಖಲೆ ಬರೆದ ವಿಂಡೀಸ್ ಆಟಗಾರ

    95 ನಿಮಿಷ, 45 ಎಸೆತ ಎದುರಿಸಿದ್ರು ಡಕೌಟ್ – ಕಳಪೆ ದಾಖಲೆ ಬರೆದ ವಿಂಡೀಸ್ ಆಟಗಾರ

    ಆಂಟಿಗುವಾ: ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಆಟಗಾರ ಮಿಗುಯೆಲ್ ಕಮ್ಮಿನ್ಸ್ ಕಳಪೆ ದಾಖಲೆಗೆ ಕಾರಣರಾಗಿದ್ದು, ತಂಡದ ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

    ಪಂದ್ಯದಲ್ಲಿ ಬರೋಬ್ಬರಿ 95 ನಿಮಿಷ ಕ್ರಿಸ್‍ನಲ್ಲಿದ್ದ ಕಮ್ಮಿನ್ಸ್ 45 ಎಸೆತಗಳನ್ನು ಎದುರಿಸಿದ್ದರು. ಆದರೆ ರನ್ ಖಾತೆ ತೆರೆಯುವಲ್ಲಿ ಮಾತ್ರ ವಿಫಲರಾಗಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸಮಯ ಕ್ರಿಸ್‍ನಲ್ಲಿದ್ದು ರನ್ ಗಳಿಸದೆ ಔಟಾದ 2ನೇ ಆಟಗಾರ ಎಂಬ ಕಳಪೆ ಸಾಧನೆಯನ್ನು ಮಾಡಿದರು. ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ಜಾಫ್ ಅಲೋಟ್ ಮೊದಲ ಸ್ಥಾನ ಪಡೆದಿದ್ದು, 1999 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 101 ನಿಮಿಷ ಬ್ಯಾಟಿಂಗ್ ನಡೆಸಿ ಡಕೌಟ್ ಆಗಿದ್ದರು. 2000ರ ಬಳಿಕ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಜೇಮ್ಸ್ ಆಂಡರ್ಸನ್ ಶ್ರೀಲಂಕಾ ವಿರುದ್ಧ 2014 ರಲ್ಲಿ ನಡೆದ ಪಂದ್ಯಲ್ಲಿ 55 ಎಸೆತ ಎದುರಿಸಿ ರನ್ ಗಳಿಸದೆ ಔಟಾಗಿದ್ದರು.

    260 ರನ್ ಮುನ್ನಡೆ: ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 260 ರನ್ ಮುನ್ನಡೆಯನ್ನು ಪಡೆದಿದ್ದು, 2ನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 185 ಗಳಿಸಿದೆ.

    ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ 297 ರನ್ ಗಳಿಗೆ ಉತ್ತರವಾಗಿ ವೆಸ್ಟ್ ಇಂಡೀಸ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 222 ರನ್ ಗಳಿಗೆ ಅಲೌಟಯ್ತು. 189 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು 3 ದಿನದಾಟ ಆರಂಭಿಸಿದ ವಿಂಡೀಸ್ 33 ರನ್ ಪೇರಿಸಿ ಅಲೌಟ್ ಆಯ್ತು. ಟೀಂ ಇಂಡಿಯಾ ಪರ ಇಶಾಂತ್ 5 ವಿಕೆಟ್, ಶಮಿ ಹಾಗೂ ಜಡೇಜಾ ತಲಾ 2, ಬುಮ್ರಾ 1 ವಿಕೆಟ್ ಪಡೆದರು. 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಪರ ಕ್ರಮವಾಗಿ 51, 53 ರನ್ ಗಳಿಸಿರುವ ಕೊಹ್ಲಿ ಹಾಗೂ ರಹಾನೆ 4ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

  • ಬ್ಯಾಟಿಂಗ್ ವೇಳೆ ಟ್ರೆಂಟ್ ಬೌಲ್ಟ್ ಹೆಲ್ಮೆಟ್‍ನಲ್ಲಿ ಸಿಕ್ಕಿಬಿದ್ದ ಬಾಲ್ – ವಿಡಿಯೋ ವೈರಲ್

    ಬ್ಯಾಟಿಂಗ್ ವೇಳೆ ಟ್ರೆಂಟ್ ಬೌಲ್ಟ್ ಹೆಲ್ಮೆಟ್‍ನಲ್ಲಿ ಸಿಕ್ಕಿಬಿದ್ದ ಬಾಲ್ – ವಿಡಿಯೋ ವೈರಲ್

    ಕೊಲಂಬೋ: ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಮೊದಲನೇ ಟೆಸ್ಟ್ ಪಂದ್ಯದ 2ನೇ ದಿನ ಹಾಸ್ಯಾಸ್ಪದ ಪ್ರಸಂಗವೊಂದು ನಡೆದಿದೆ.

    ಗಾಲೆಯಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಶ್ರೀಲಂಕಾ ಸ್ಪಿನ್ನರ್ ಲಸಿತ್ ಎಂಬುಲ್ಡೆನಿಯಾ ಎಸೆದ ಚೆಂಡು ಬ್ಯಾಟಿಂಗ್ ಮಾಡುತ್ತಿದ್ದ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅವರ ಹೆಲ್ಮೆಟ್‍ಗೆ ಸಿಕ್ಕಿ ಹಾಕಿಕೊಂಡಿತ್ತು.

    https://twitter.com/ooccricket/status/1161998041714438144

    ಇನ್ನಿಂಗ್ಸ್ ನ 82 ಓವರ್ ನ ಮೊದಲ ಎಸೆತದಲ್ಲಿ ನಡೆದಿದ್ದು, ಎಂಬುಲ್ಡೆನಿಯಾ ಎಸೆದ ಚೆಂಡನ್ನು ಹಿಂದಕ್ಕೆ ಹೊಡೆಯಲು ಟ್ರೆಂಡ್ ಬೌಲ್ಟ್ ಯತ್ನಿಸಿದಾಗ ಅವರ ಬ್ಯಾಟ್ ತುದಿಗೆ ತಗಲಿದ ಚೆಂಡು ಬೌಲ್ಟ್ ಅವರ ಹೆಲ್ಮೆಟ್‍ನ ಮುಂದಿನ ಭಾಗದಲ್ಲಿ ಹೋಗಿ ಸಿಕ್ಕಿ ಹಾಕಿಕೊಳ್ಳುತ್ತದೆ.

    ಬ್ಯಾಟ್‍ಗೆ ತಗಲಿ ನೇರವಾಗಿ ಮುಖದ ಕಡೆ ಬಂದ ಚೆಂಡನ್ನು ಕಂಡು ಸ್ವಲ್ಪ ಮಟ್ಟಿಗೆ ಗಾಬರಿಯ ಬೌಲ್ಟ್, ತನ್ನ ಸುತ್ತ ಸುತ್ತಿಗೊಂಡಿರುವ ಶ್ರೀಲಂಕಾ ಆಟಗಾರರನ್ನು ನೋಡಿ ನಗುತ್ತಾರೆ. ಈ ವಿಚಿತ್ರ ದೃಶ್ಯವನ್ನು ಕಂಡು ಕಾಮೆಂಟ್ರಿ ಹೇಳುವವರು ಕೂಡ ನಗುತ್ತಾರೆ.

    ಈ ಪಂದ್ಯದಲ್ಲಿ ಬೌಲ್ಟ್ ಅವರು 18 ರನ್ ಹೊಡೆದು ಸುರಂಗ ಲಕ್ಮಲ್ ಅವರಿಗೆ ಔಟ್ ಆಗುತ್ತಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‍ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ 267 ರನ್ ಹೊಡೆದು ಆಲೌಟ್ ಆಗಿದೆ.

    ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದೆ. ಇನ್ನೂ 2 ದಿನದ ಆಟ ಬಾಕಿಯಿದೆ.

  • ಇಂಡಿಯಾ ವರ್ಸಸ್ ವೆಸ್ಟ್ ಇಂಡೀಸ್ – ವೇಳಾ ಪಟ್ಟಿ ಬಿಡುಗಡೆ

    ಇಂಡಿಯಾ ವರ್ಸಸ್ ವೆಸ್ಟ್ ಇಂಡೀಸ್ – ವೇಳಾ ಪಟ್ಟಿ ಬಿಡುಗಡೆ

    ನವದೆಹಲಿ: ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಆಗಸ್ಟ್ 3 ರಿಂದ ಮೂರು ಮಾದರಿಯ ಪಂದ್ಯಗಳನ್ನು ಆಡಲು ವೆಸ್ಟ್ ಇಂಡೀಸ್‍ಗೆ ಟೀಂ ಇಂಡಿಯಾ ತೆರೆಳಲಿದೆ. ಈ ಹಿನ್ನೆಲೆಯಲ್ಲಿ ಎಂಎಸ್‍ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಆಟಗಾರರನ್ನು ಆಯ್ಕೆ ಮಾಡಿದೆ.

    ಆಗಸ್ಟ್ 3 ರಿಂದ ಮೂರು ಪಂದ್ಯಗಳ ಟಿ-20 ಸರಣಿಯೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸವು ಪ್ರಾರಂಭವಾಗುತ್ತದೆ. ನಂತರ ವಿರಾಟ್ ಕೊಹ್ಲಿ ನೇತೃತ್ವದ ತಂಡವು ಆಗಸ್ಟ್ 8 ರಿಂದ ಸೆಪ್ಟಂಬರ್ 3ರ ತನಕ 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇಲ್ಲಿ ನಡೆಯುವ ಎರಡು ಟೆಸ್ಟ್ ಪಂದ್ಯಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಉದ್ಘಾಟನಾ ಆವೃತ್ತಿಯ ಭಾಗವಾಗಲಿವೆ.

    ಇಂಡಿಯಾ ಟೂರ್ ವೆಸ್ಟ್ ಇಂಡೀಸ್‍ನ ಸಂಪೂರ್ಣ ವೇಳಾ ಪಟ್ಟಿ

    1. ಟಿ-20 ಸರಣಿ
    * ಆಗಸ್ಟ್ 3 (ಶನಿವಾರ) ಮೊದಲ ಟಿ-20 ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ ಮೈದಾನ- ಸಮಯ-ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 4 (ಭಾನುವಾರ) ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ ಮೈದಾನ- ಸಮಯ, ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 6 (ಮಂಗಳವಾರ) ಗಯಾನಾದ ಪ್ರಾವಿಡೆನ್ಸ್ ಮೈದಾನ- ಸಮಯ-ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)

    ಟಿ-20 ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹರ್ ಹಾಗೂ ನವದೀಪ್ ಸೈನಿ.

    2. ಏಕದಿನ ಸರಣಿ
    * ಆಗಸ್ಟ್ 8 (ಗುರುವಾರ) ಮೊದಲನೇ ಏಕದಿನ- ಗಯಾನಾದ ಪ್ರಾವಿಡೆನ್ಸ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 11 (ಭಾನುವಾರ) ಎರಡನೇ ಏಕದಿನ- ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 14 (ಬುಧವಾರ) ಮೂರನೇ ಏಕದಿನ- ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)

    ಏಕದಿನ ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ನವದೀಪ್ ಸೈನಿ.

    3. ಟೆಸ್ಟ್ ಸರಣಿ
    * ಆಗಸ್ಟ್ 22 ಗುರುವಾರ ದಿಂದ ಆಗಸ್ಟ್ 26 ಸೋಮವಾರದ ವರಗೆ 1 ನೇ ಟೆಸ್ಟ್ ಆಂಟಿಗುವಾದ ಸರ್ ವಿವಿಯನ್ ರಿಚಡ್ರ್ಸ್ ಮೈದಾನದಲ್ಲಿ
    * ಆಗಸ್ಟ್ 30 ಶುಕ್ರವಾರದಿಂದ ಸೆಪ್ಟೆಂಬರ್ 03 ಮಂಗಳವಾರದ ವರೆಗೆ 2 ನೇ ಟೆಸ್ಟ್ ಜಮೈಕಾದ ಸಬಿನಾ ಪಾರ್ಕ್ ಮೈದಾನದಲ್ಲಿ

    ಟೆಸ್ಟ್ ತಂಡ:
    ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್, ಕೆ. ಎಲ್.ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಉಮೇಶ್ ಯಾದವ್.

  • ಟೆಸ್ಟ್ ಕ್ರಿಕೆಟ್: 38 ರನ್ನಿಗೆ ಆಲೌಟ್ – ಐರ್ಲೆಂಡ್ ಕನಸು ಭಗ್ನ

    ಟೆಸ್ಟ್ ಕ್ರಿಕೆಟ್: 38 ರನ್ನಿಗೆ ಆಲೌಟ್ – ಐರ್ಲೆಂಡ್ ಕನಸು ಭಗ್ನ

    ಲಾರ್ಡ್ಸ್: ಇಂಗ್ಲೆಂಡ್ ತಂಡವನ್ನು ಸೋಲಿಸಿ ಇತಿಹಾಸ ರಚಿಸುವ ಮಹದಾಸೆಯಲ್ಲಿದ್ದ ಐರ್ಲೆಂಡ್ ತಂಡದ ಕನಸು ನುಚ್ಚುನೂರಾಗಿದೆ. ಲಾರ್ಡ್ಸ್ ನಲ್ಲಿ ನಡೆದ ಏಕೈಕ ಟೆಸ್ಟ್ ನ ಮೂರನೇ ದಿನವಾದ ಶುಕ್ರವಾರ ನೆರೆಯ ರಾಷ್ಟ್ರವನ್ನು ಕೇವಲ 38 ರನ್ನಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ಪಂದ್ಯವನ್ನು 143 ರನ್‍ಗಳ ಆಂತರದಿಂದ ಸುಲಭವಾಗಿ ಗೆದ್ದುಕೊಂಡಿದೆ.

    ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ ಕೇವಲ 85 ರನ್‍ಗೆ ಆಲೌಟ್ ಆಗಿದ್ದ ಐರ್ಲೆಂಡ್ 2ನೇ ಇನ್ನಿಂಗ್ಸ್ ನಲ್ಲಿ ನಿರಾಸೆ ಅನುಭವಿಸಿತ್ತು. ಇತ್ತ 2ನೇ ಇನ್ನಿಂಗ್ಸ್ ನಲ್ಲಿ ಕಮ್ ಬ್ಯಾಕ್ ಮಾಡಿದ ಇಂಗ್ಲೆಂಡ್ ತಂಡ ಜ್ಯಾಕ್ ಲೀಚ್ 92 ರನ್, ಜೇಸನ್ ರಾಯ್ 72 ರನ್ ಗಳ ನೆರವಿನಿಂದ 303 ರನ್ ಗಳಿಸಿತು. ಎರಡನೇ ದಿನದ ಕೊನೆಗೆ 9 ವಿಕೆಟ್‍ಗೆ 303 ರನ್ ಗಳಿಸಿದ್ದ ಇಂಗ್ಲೆಂಡ್ ಶುಕ್ರವಾರ ಮೊದಲ ಎಸೆತದಲ್ಲೇ ಆಲೌಟ್ ಆಯಿತು.

    ಪರಿಣಾಮ ಗೆಲ್ಲಲು 182 ರನ್‍ಗಳ ಗುರಿಹೊಂದಿದ್ದ ಐರ್ಲೆಂಡ್ ತಂಡ ವೋಕ್ಸ್ 6 ವಿಕೆಟ್ ಮತ್ತು ಬ್ರಾಡ್ 4 ವಿಕೆಟ್ ದಾಳಿಗೆ ಸಿಲುಕಿ 15.4 ಓವರ್ ಗಳಲ್ಲೇ 38 ರನ್‍ಗೆ ಪತನಗೊಂಡಿತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ 5ನೇ ಅತಿ ಕನಿಷ್ಠ ಮೊತ್ತವಾಗಿದ್ದು, 1955 ರಲ್ಲಿ ಇಂಗ್ಲೆಂಡ್ ವಿರುದ್ಧ ಕಿವೀಸ್ ತಂಡ 26 ರನ್ನಿಗೆ ಆಲೌಟ್ ಆಗಿತ್ತು.

  • ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ ಪಾಕ್ ವೇಗಿ ಮೊಹಮ್ಮದ್ ಅಮೀರ್

    ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ ಪಾಕ್ ವೇಗಿ ಮೊಹಮ್ಮದ್ ಅಮೀರ್

    ಇಸ್ಲಮಾಬಾದ್: ಟೆಸ್ಟ್ ಮಾದರಿಯ ಕ್ರಿಕೆಟ್‍ಗೆ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಅವರು ನಿವೃತ್ತಿ ಘೋಷಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್‍ನಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.

    ಪಾಕಿಸ್ತಾನದ ಪರ 36 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಮೀರ್ 30.47 ಸರಾಸರಿಯಲ್ಲಿ 119 ವಿಕೆಟ್ ಪಡೆದಿದ್ದಾರೆ. 2017ರ ಏಪ್ರಿಲ್‍ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 44 ರನ್ ಕೊಟ್ಟು 6 ವಿಕೆಟ್ ಕಬಳಿಸಿದ್ದು ಇವರ ಅತ್ಯುತ್ತಮ ಬೌಲಿಂಗ್ ಪ್ರದರ್ಶವಾಗಿದೆ.

    ನಿವೃತ್ತಿ ಕುರಿತು ಮಾತನಾಡಿರುವ ಮೊಹಮ್ಮದ್ ಅಮೀರ್ “ಕ್ರಿಕೆಟ್‍ನ ಸಂಪ್ರದಾಯಿಕ ಸ್ವರೂಪವಾದ ಟೆಸ್ಟ್ ಕ್ರಿಕೆಟ್‍ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದಕ್ಕೆ ಗೌರವವಿದೆ. ನಾನು ಟೆಸ್ಟ್ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಲು ನಿರ್ಧಾರ ಮಾಡಿದ್ದೇನೆ. ಈ ಮೂಲಕ ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚಿನ ಗಮನಹರಿಸಲು ತೀರ್ಮಾನ ಮಾಡಿದ್ದೇನೆ” ಎಂದು ಹೇಳಿದ್ದಾರೆ.

    ಪಾಕಿಸ್ತಾನಕ್ಕಾಗಿ ಆಡುವುದು ನನ್ನ ಅಂತಿಮ ಆಸೆ ಮತ್ತು ಉದ್ದೇಶವಾಗಿ ಉಳಿದಿದೆ ಮತ್ತು ಮುಂದಿನ ವರ್ಷದ ಐಸಿಸಿ ಟಿ 20 ವಿಶ್ವಕಪ್ ಸೇರಿದಂತೆ ತಂಡದ ಮುಂಬರುವ ಸವಾಲುಗಳಲ್ಲಿ ಉತ್ತಮ ಕೊಡುಗೆ ನೀಡಲು ನಾನು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. ಎಡಗೈ ವೇಗಿಯಾದ ಮೊಹಮ್ಮದ್ ಅಮೀರ್ 2009ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು.

    ಇಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮೀರ್ “ನಾನು ಇಂದು ತೆಗೆದುಕೊಂಡಿರುವುದು ಸುಲಭದ ನಿರ್ಧಾರವಲ್ಲ. ಈ ವಿಚಾರದ ಬಗ್ಗೆ ನಾನು ತುಂಬಾ ಸಮಯದಿಂದ ಯೋಚನೆ ಮಾಡಿದ್ದೆ. ಇನ್ನೂ ಕೆಲವೇ ದಿನಗಳಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಬರುತ್ತಿದೆ. ಆಗಲೇ ಪಾಕಿಸ್ತಾನದಲ್ಲಿ ಉತ್ತಮ ಯುವ ವೇಗಿಗಳು ಇದ್ದಾರೆ. ಅದ್ದರಿಂದ ನಾನು ಈ ಸಮಯದಲ್ಲಿ ನಿವೃತ್ತಿ ಘೋಷಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.

    ಈ ವೇಳೆ ಮಾತನಾಡಿದ ಪಿಸಿಬಿ ವ್ಯವಸ್ಥಾಪಕ ನಿರ್ದೇಶಕ ವಾಸಿಮ್ ಖಾನ್, ಅಮೀರ್ ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಅತ್ಯಂತ ರೋಮಾಂಚಕಾರಿ ಮತ್ತು ಪ್ರತಿಭಾವಂತ ಎಡಗೈ ವೇಗದ ಬೌಲರ್‍ ಗಳಲ್ಲಿ ಒಬ್ಬರಾಗಿದ್ದಾರೆ. ನಿವೃತ್ತಿ ಮೂಲಕ ಯುವ ಆಟಗಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರು ಕ್ರಿಕೆಟರ್ ಹೊರತಾಗಿಯೂ ಒಬ್ಬ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ.