Tag: test

  • ಟೆಸ್ಟ್ ಕ್ರಿಕೆಟ್‍ನಲ್ಲಿ ಹೊಸ ಮೈಲುಗಲ್ಲು ಬರೆಯಲು ಸಜ್ಜಾದ ಮೊಹಮ್ಮದ್ ಶಮಿ

    ಟೆಸ್ಟ್ ಕ್ರಿಕೆಟ್‍ನಲ್ಲಿ ಹೊಸ ಮೈಲುಗಲ್ಲು ಬರೆಯಲು ಸಜ್ಜಾದ ಮೊಹಮ್ಮದ್ ಶಮಿ

    ಮುಂಬೈ: ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಇಂಗ್ಲೆಂಡ್‍ನಲ್ಲಿ ನಡೆಯುವ ಟೆಸ್ಟ್ ವಿಶ್ವಚಾಂಪಿಯನ್‍ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಆಡಲು ಸಜ್ಜಾಗಿದ್ದು, ಈ ಮೂಲಕ ಶಮ್ಮಿ ಟೆಸ್ಟ್ ಕ್ರಿಕೆಟ್‍ನಲ್ಲಿ ನೂತನ ಮೈಲಿಗಲ್ಲೊಂದನ್ನು ಬರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ಶಮಿ ಈಗಾಗಲೇ ಭಾರತದ ಪರ 50 ಟೆಸ್ಟ್ ಪಂದ್ಯಗಳನ್ನು ಆಡಿ 180 ವಿಕೆಟ್ ಕಬಳಿಸಿದ್ದಾರೆ. ಇನ್ನು ಕೇವಲ 20 ವಿಕೆಟ್ ಪಡೆದರೆ 200 ವಿಕೆಟ್ ಪಡೆದ ಭಾರತದ ಐದನೇ ವೇಗದ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಈ ಸಾಧನೆಗಾಗಿ ಶಮಿಗೆ ಸಂಪೂರ್ಣ ಅವಕಾಶಗಳಿದ್ದು ಭಾರತ ಮೊದಲು ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಚಾಂಪಿಯನ್ ಶಿಪ್ ಟೆಸ್ಟ್ ಪಂದ್ಯ ನಡೆಯಲಿದೆ ಆ ಬಳಿಕ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಹಾಗಾಗಿ ಶಮಿಗೆ 200 ವಿಕೆಟ್ ಪಡೆಯುವ ಸಂಪೂರ್ಣ ಅವಕಾಶ ಬಂದೊದಗಿದೆ.

    ಈಗಾಗಲೇ ಈ ಎರಡು ಸರಣಿಗಾಗಿ 20 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು ಈ ತಂಡದಲ್ಲಿ 6ಜನ ವೇಗದ ಬೌಲರ್‍ ಗಳನ್ನು ಆಯ್ಕೆ ಮಾಡಲಾಗಿದೆ ಇದರಲ್ಲಿ ಶಮಿ ಕೂಡ ಒಬ್ಬರಾಗಿದ್ದಾರೆ. ಶಮಿ ಇನ್ನು ಕೇವಲ 20 ವಿಕೆಟ್ ಪಡೆದರೆ ಟೆಸ್ಟ್ ನಲ್ಲಿ 200 ವಿಕೆಟ್ ಪಡೆಯುವ ಅವಕಾಶ ಪಡೆಯಲಿದ್ದಾರೆ.

    ಈ ಮೊದಲು ಭಾರತ ತಂಡದ ಪರ ಕಪೀಲ್ ದೇವ್, ಜಹೀರ್ ಖಾನ್, ಇಶಾಂತ್ ಶರ್ಮಾ ಮತ್ತು ಜಾವಗಲ್ ಶ್ರೀನಾಥ್ 200ಕ್ಕೂ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್‍ ಗಳಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಶಮಿ ಕೂಡ ಈ ಪಟ್ಟಿ ಸೇರುವ ತವಕದಲ್ಲಿದ್ದಾರೆ.

  • ಯಾವತ್ತು ಬಿಟ್ಟುಕೊಡಬೇಡಿ ಎಂದು ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಪಂತ್

    ಯಾವತ್ತು ಬಿಟ್ಟುಕೊಡಬೇಡಿ ಎಂದು ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಪಂತ್

    ಮುಂಬೈ: ಭಾರತ ತಂಡದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ರಿಷಬ್ ಪಂತ್ ದೇಶದ ಜನ ಈಗಾಗಲೇ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ನಾವು ಯಾವತ್ತು ಬಿಟ್ಟುಕೊಡುವುದುಬೇಡ ಎನ್ನುವ ಮೂಲಕ ಸೋಂಕಿತರಿಗೆ ಮತ್ತು ಸೋಂಕಿನ ವಿರುದ್ಧ ಹೋರಾಡುತ್ತಿರುವವರಿಗೆ ಇನ್ನಷ್ಟು ಧೈರ್ಯ ತುಂಬಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪಂತ್, ದೇಶದ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಕೊರೊನಾ ಸೋಂಕಿನ ವಿರುದ್ಧ ಜನ ಹೋರಾಡುತ್ತಿದ್ದಾರೆ. ಎಲ್ಲರೂ ಒಂದಾಗಿ ಹೋರಾಡೋಣ ಯಾವತ್ತು ಬಿಟ್ಟುಕೊಡುವುದು ಬೇಡ. ಎಲ್ಲರೂ ಒಂದಾಗೋಣ ಈ ಕಷ್ಟದ ಸಮಯವನ್ನು ಕಳೆಯೋಣ. ಜಾಗರೂಕತೆಯಿಂದ ಇರೋಣ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

     

    View this post on Instagram

     

    A post shared by Rishabh Pant (@rishabpant)

    ಪಂತ್ ಈಗಾಗಲೇ ಕೊರೊನಾ ಲಸಿಕೆಯನ್ನು ಕೂಡ ಪಡೆದುಕೊಂಡಿದ್ದು, ಲಸಿಕೆ ಪಡೆದುಕೊಂಡ ವೇಳೆ ಎಲ್ಲರೂ ಆದಷ್ಟೂ ಬೇಗ ಲಸಿಕೆ ಪಡೆದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು.

    ಪಂತ್ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗಾಗಿ ಆಯ್ಕೆಯಾಗಿರುವ 20 ಜನರ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಈಗಾಗಲೇ ತಯಾರಿಯನ್ನು ಆರಂಭಿಸಿದ್ದಾರೆ. ಟೆಸ್ಟ್ ಚಾಂಪಿಯನ್‍ಶಿಪ್ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಇಂಗ್ಲೆಂಡ್‍ನಲ್ಲಿ ಜೂನ್ 18ರಿಂದ ಆರಂಭಗೊಳ್ಳಲಿದೆ.

  • ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ – ಹಾಡಿ ಹೊಗಳಿದ ಟಿಮ್ ಪೈನೆ

    ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ – ಹಾಡಿ ಹೊಗಳಿದ ಟಿಮ್ ಪೈನೆ

    ಸಿಡ್ನಿ: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೈನೆ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ ಎನ್ನುವ ಮೂಲಕ ಹಾಡಿ ಹೊಗಳಿದ್ದಾರೆ.

    ಈ ಕುರಿತು ಸ್ಥಳೀಯ ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ಮಾತನಾಡಿದ ಟಿಮ್ ಪೈನೆ, ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ ಆಗಿದ್ದಾರೆ. ನಾನು ಯಾವತ್ತು ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಒಬ್ಬ ಚಾಂಪಿಯನ್ ಆಟಗಾರ ತಂಡಕ್ಕಾಗಿ ಕಡೆಯವರೆಗೆ ಹೋರಾಡುವ ಮೂಲಕ ಎದುರಾಳಿ ತಂಡಕ್ಕೆ ಉತ್ತಮ ಸ್ಪರ್ಧೆಯನ್ನು ನೀಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

    ನಾನು ಕೊಹ್ಲಿಯವರನ್ನು ಮತ್ತು ಅವರ ಆಟವನ್ನು ತುಂಬಾ ಇಷ್ಟಪಡುತ್ತೇನೆ. ಅವರು ತಂಡಕ್ಕಾಗಿ ಆಡುತ್ತಾರೆ. ಅವರ ಚಾಲೆಂಜಿಂಗ್ ಬ್ಯಾಟಿಂಗ್‍ನ್ನು ನೋಡುವುದೇ ಖುಷಿ. ಹಾಗಾಗಿ ಕೊಹ್ಲಿ ಭಾರತ ತಂಡದಲ್ಲಿದ್ದರೂ ಕೂಡ ನನ್ನ ಸಹೋದರನಂತೆ ಇದ್ದಾರೆ ಎಂದು ತಿಳಿಸಿದರು.

    ಈ ವರ್ಷದ ಆರಂಭದಲ್ಲಿ ಭಾರತ, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಐತಿಹಾಸಿಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಭಾರತ ತಂಡ 2-1 ಅಂತರದಲ್ಲಿ ಗೆದ್ದುಕೊಂಡಿತ್ತು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡವನ್ನು ಟಿಮ್ ಪೈನೆ ಅವರು ನಾಯಕನಾಗಿ ಮುಂದುವರಿಸುತ್ತಿದ್ದರು.

  • ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡ ಪ್ರಕಟ -ಮೂವರು ಕನ್ನಡಿಗರಿಗೆ ಸ್ಥಾನ

    ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡ ಪ್ರಕಟ -ಮೂವರು ಕನ್ನಡಿಗರಿಗೆ ಸ್ಥಾನ

    ಮುಂಬೈ: ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತ ತಂಡವನ್ನು ಆಯ್ಕೆ ಮಾಡಿದೆ. ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ.

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ (ಡಬ್ಲ್ಯುಟಿಸಿ) ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಬಿಸಿಸಿಐ 20 ಸದಸ್ಯರ ತಂಡವನ್ನು ಪ್ರಕಟಿಸಿದೆ. ಜೂನ್ 18 ರಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಡಬ್ಲ್ಯುಟಿಸಿ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಭಾರತ ಟೆಸ್ಟ್ ತಂಡದಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್, ಮಯಾಂಕ್ ಅಗರ್‍ವಾಲ್ ಮತ್ತು ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದುಕೊಂಡಿದ್ದಾರೆ.

    ಇಂಗ್ಲೆಂಡ್‍ನ ಸೌತಾಂಪ್ಟನ್‍ನಲ್ಲಿ ನಡೆಯಲಿರುವ ಪಂದ್ಯಾಟಕ್ಕಾಗಿ ಬಿಸಿಸಿಐ ಒಟ್ಟು 20 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. 4 ಆಟಗಾರರನ್ನು ಮೀಸಲು ಆಟಗಾರರನ್ನಾಗಿ ಇರಿಸಲಾಗಿದೆ. ಯಾವುದೇ ಹೊಸ ಮುಖಗಳು ತಂಡದಲ್ಲಿ ಕಾಣಿಸಿಕೊಂಡಿಲ್ಲ. ಹಿರಿಯ ಅಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ತಂಡದಿಂದ ಕೊಕ್ ನೀಡಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ 5ಪಂದ್ಯಗಳ ಟೆಸ್ಟ್ ಸರಣಿಗೆ ಇದೇ ತಂಡವನ್ನು ಅಂತಿಮಗೊಳಿಸಲಾಗಿದ್ದು, ಜೂನ್ 18 ರಿಂದ 22 ರವರೆಗೆ ನಡೆಯಲಿರುವ ಟೆಸ್ಟ್ ಚಾಂಪಿಯನ್‍ಶಿಪ್ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಳಿದೆ.

    ಭಾರತ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರಿತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮಹಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್.ರಾಹುಲ್ (ಫಿಟ್‍ನೆಸ್ ಕ್ಲಿಯರೆನ್ಸ್ ಬಳಿಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್- ಫಿಟ್‍ನೆಸ್ ಕ್ಲಿಯರೆನ್ಸ್ ಬಳಿಕ).

    ಮೀಸಲು ಆಟಗಾರರು: ಅಭಿಮಾನ್ಯ ಈಶ್ವರನ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಅರ್‍ಝನ್ ನಾಗಸ್‍ವಾಲ

  • ಬೆಡ್ ಸಿಗದೆ ಆಸ್ಪತ್ರೆಗಳ ಮುಂದೆ ಅಂಬುಲೆನ್ಸ್ ಕ್ಯೂ..!

    ಬೆಡ್ ಸಿಗದೆ ಆಸ್ಪತ್ರೆಗಳ ಮುಂದೆ ಅಂಬುಲೆನ್ಸ್ ಕ್ಯೂ..!

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದೆ. ಎಲ್ಲಿ ನೋಡಿದರು ಕೂಡ ಕೊರೊನಾ ರೋಗಿಗಳ ನರಳಾಟ ಕಂಡುಬರುತ್ತಿದೆ. ಈ ನಡುವೆ ಜನ ಆಸ್ಪತ್ರೆ, ಚಿತಾಗಾರ, ಪಿಎಚ್‍ಸಿ ಸೆಂಟರ್‍ ಗಳಲ್ಲಿ ಕ್ಯೂ ನಿಂತು ಪರದಾಡುವಂತ ಪರಿಸ್ಥಿತಿ ಬಂದಿದೆ.

    ಕೊರೊನಾ ಸೋಂಕಿತರನ್ನು ಹೊತ್ತು ತರುವ ಅಂಬುಲೆನ್ಸ್ ಬೆಡ್ ಸಿಗದೆ ಆಸ್ಪತ್ರೆಗಳ ಮುಂದೆ ಕ್ಯೂ ನಿಂತರೆ, ಅಂತ್ಯಕ್ರಿಯೆಗಾಗಿ ಮೃತದೇಹಗಳನ್ನ ಹೊತ್ತು ಚಿತಾಗಾರಗಳ ಬಳಿ ಅಂಬುಲೆನ್ಸ್ ಸರದಿಯಲ್ಲಿ ನಿಲ್ಲುವಂತಹ ಪರಿಸ್ಥಿತಿ ಬಂದೊದಗಿದೆ.

    ಅಂಬುಲೆನ್ಸ್ ಕಥೆ ಈ ರೀತಿಯಾದರೆ ಜನ ಕೊರೊನಾದಿಂದಾಗಿ ಹಲವು ಬಗೆಯ ಕಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಕೊರೊನಾದಿಂದ ಭಯಪಟ್ಟುಕೊಂಡಿರುವ ಜನ ಕೋವಿಡ್-19 ಟೆಸ್ಟ್ ಮಾಡಿಸುವುದಕ್ಕೆ ಅಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಆದರೆ ಅಲ್ಲಿ ಕೂಡ ಕ್ಯೂ ನಿಲ್ಲುವಂತಹ ಪರಿಸ್ಥಿತಿ ಬಂದಿದೆ. ಬಿಟಿಎಂ ಲೇಔಟ್‍ನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಕೊರೊನಾ ಟೆಸ್ಟ್ ಗಾಗಿ ಸರದಿಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ.

    ಕೊರೊನಾ ಎರಡನೇ ಅಲೆ ಯುವಜನರಲ್ಲಿ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ವಿವಿಧ ಕಡೆಗಳಲ್ಲಿ ಕೊರೊನಾ ರೋಗ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಟೆಸ್ಟ್ ಮಾಡಿಸಲು ಯುವಕ-ಯುವತಿಯರು ಸಾಲಾಗಿ ಟೆಸ್ಟ್ ಸೆಂಟರ್ ಕಡೆ ಮುಖಮಾಡಿದ್ದಾರೆ. ನಗರದ ಬಹುತೇಕ ಪಿಎಚ್‍ಸಿ ಸೆಂಟರ್ ಗಳ ಮುಂದೆ ಟೆಸ್ಟ್ ಗಾಗಿ ಕಾದು ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.

  • ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದ ಪಂತ್, ಸುಂದರ್ – ಭಾರತಕ್ಕೆ ಅಲ್ಪ ಮುನ್ನಡೆ

    ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದ ಪಂತ್, ಸುಂದರ್ – ಭಾರತಕ್ಕೆ ಅಲ್ಪ ಮುನ್ನಡೆ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ 2ನೇ ದಿನ ಭಾರತ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಆಕರ್ಷಕ ಶತಕ ಸಿಡಿಸುವ ಮೂಲಕ ಮಿಂಚಿದ್ದಾರೆ. ಇದರೊಂದಿಗೆ ಭಾರತ ತಂಡ ಇಂಗ್ಲೆಂಡ್ ವಿರುದ್ಧ 89 ರನ್ ಗಳ ಮುನ್ನಡೆ ಪಡೆದುಕೊಂಡಿದೆ.

    ಮೊದಲ ದಿನದಾಟದ ಅಂತ್ಯಕ್ಕೆ 24 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿದ್ದ ಭಾರತ ಎರಡನೇ ದಿನ ರೋಹಿತ್ ಶರ್ಮಾ 49 ರನ್(144 ಎಸೆತ, 7 ಬೌಂಡರಿ), ವಾಷಿಂಗ್ಟನ್  ಸುಂದರ್ 60 ರನ್ ( 117 ಎಸೆತ 8ಬೌಂಡರಿ) ಮತ್ತು ರಿಷಬ್ ಪಂತ್ 101 ರನ್( 118 ಎಸೆತ, 13 ಬೌಂಡರಿ, 2 ಸಿಕ್ಸರ್ ) ಸಿಡಿಸುವ ಭಾರತಕ್ಕೆ ಚೇತರಿಕೆ ನೀಡಿದರು.

    ಒಂದು ಹಂತದಲ್ಲಿ 146 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ರಿಷಬ್ ಪಂತ್ ಮತ್ತು ಸುಂದರ್ 7ನೇ ವಿಕೆಟ್ 113 ರನ್ ಒಟ್ಟುಗೂಡಿಸಿ ಭಾರತದ ಬ್ಯಾಟಿಂಗ್ ಸರದಿಗೆ ಶಕ್ತಿ ತುಂಬಿದರು. ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ಕಳೆದುಕೊಂಡು 294 ಗಳಿಸಿದೆ. ಭಾರತ ಪರ ವಾಷಿಂಗ್ಟನ್ ಸುಂದರ್ 60 (117 ಎಸೆತ, 8 ಬೌಂಡರಿ) ಮತ್ತು ಅಕ್ಷರ್ ಪಟೇಲ್ 11 ರನ್ (34 ಎಸೆತ, 2 ಬೌಂಡರಿ) ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಕೊಂಡಿದ್ದಾರೆ.

    ಇಂಗ್ಲೆಂಡ್ ಪರ ವೇಗಿ ಜೇಮ್ಸ್ ಆ್ಯಂಡರ್ಸನ್ 3 ವಿಕೆಟ್ ಪಡೆದರೆ, ಬೆನ್ ಸ್ಟೋಕ್ ಮತ್ತು ಜ್ಯಾಕ್ ಲೀಚ್ ತಲಾ 2 ವಿಕೆಟ್ ಕಿತ್ತರು.

  • ಒಂದೇ ದಿನ 11 ವಿಕೆಟ್ ಪತನ – ಮತ್ತೆ ಸಿನ್ನರ್‌ಗಳ ಅಬ್ಬರ

    ಒಂದೇ ದಿನ 11 ವಿಕೆಟ್ ಪತನ – ಮತ್ತೆ ಸಿನ್ನರ್‌ಗಳ ಅಬ್ಬರ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದ ಮೊದಲ ದಿನವೇ 11 ವಿಕೆಟ್ ಪತನಗೊಂಡಿದೆ. ಭಾರತದ ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ದಾಳಿಗೆ ಕುಸಿದ ಇಂಗ್ಲೆಂಡ್ 205 ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಮೊದಲ ದಿನದ ಗೌರವನ್ನು ಭಾರತ ಪಡೆದುಕೊಂಡಿದೆ.

    ಭಾರತ ಇಂಗ್ಲೆಂಡ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಆದರೆ ಭಾರತ ತಂಡದ ಯುವ ಸ್ಪಿನ್ನರ್ ಅಕ್ಷರ್ ಪಟೇಲ್ 4 ವಿಕೆಟ್ (26 ಓವರ್, 7 ಮೇಡನ್) ಪಡೆದು ಇಂಗ್ಲೆಂಡ್ ತಂಡ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣರಾದರು.

    ಅಕ್ಷರ್‍ ಗೆ ಉತ್ತಮ ಸಾತ್ ನೀಡಿದ ಅಶ್ವಿನ್ 3 ವಿಕೆಟ್ ಕಿತ್ತರೆ, ಸಿರಾಜ್ 2 ವಿಕೆಟ್ ಕಬಳಿಸಿ ಮಿಂಚಿದರು, ಇನ್ನೊಂದು ವಿಕೆಟ್ ಸುಂದರ್ ಪಾಲಾಯಿತು. ಇಂಗ್ಲೆಂಡ್ ಬ್ಯಾಟಿಂಗ್ ಸರದಿಯಲ್ಲಿ ಬೆನ್‍ಸ್ಟ್ರೋಕ್ 55 ರನ್ (121 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ಡೆನ್ ಲಾರೇನ್ಸ್ 46 ರನ್ (74 ಎಸೆತ, 8 ಬೌಂಡರಿ) ಸಿಡಿಸಿ ಭಾರತದ ಬೌಲರ್ ಗಳಿಗೆ ಕೊಂಚ ಪ್ರತಿರೋಧ ಒಡ್ಡಿದರು ಅಂತಿಮವಾಗಿ ಇಂಗ್ಲೆಂಡ್ 205 ರನ್ ಗಳಿಗೆ ಸರ್ವಪತನ ಕಂಡಿತು.

    ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಇಳಿದ ಭಾರತ ದಿನದಾಟದ ಅಂತ್ಯಕ್ಕೆ ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡು 24 ರನ್ ಗಳಿಸಿದೆ. ರೋಹಿತ್ ಶರ್ಮಾ 8(34 ಎಸೆತ, 1 ಬೌಂಡರಿ,) ಮತ್ತು ಚೇತೇಶ್ವರ ಪೂಜಾರ 15 (36 ಎಸೆತ, 1 ಬೌಂಡರಿ) ಸಿಡಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

  • ಪಿಂಕ್ ಬಾಲ್ ಟೆಸ್ಟ್​ಗೆ ಸಿದ್ಧವಾದ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ

    ಪಿಂಕ್ ಬಾಲ್ ಟೆಸ್ಟ್​ಗೆ ಸಿದ್ಧವಾದ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ

    ಗಾಂಧಿನಗರ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಮೊಟೆರಾ ಭರ್ಜರಿಯಾಗಿ ಸಿದ್ಧಗೊಂಡಿದೆ.

    ಗುಜರಾತ್‍ನ ಮೊಟೆರಾದಲ್ಲಿರುವ ಸರ್ದಾರ್ ಪಟೇಲ್ ಕ್ರೀಡಾಂಗಣ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿದ್ದು, ಈ ಕ್ರೀಡಾಂಗಣದಲ್ಲಿ ನಡೆಯುವ ಡೇ-ನೈಟ್ ಟೆಸ್ಟ್ ಪಂದ್ಯಾಟಕ್ಕಾಗಿ ಇದೀಗ ಆಟಗಾರರು ಕೂಡ ಬಾರಿ ಉತ್ಸಾಹದಲ್ಲಿದ್ದಾರೆ.

    ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಪಂದ್ಯ ಫೆಬ್ರವರಿ 24 ರಿಂದ 28 ವರೆಗೆ ನಡೆಯಲಿದ್ದು, ಈಗಾಗಲೇ ಭಾರತೀಯ ಆಟಗಾರರೂ ಮೊಟೆರಾ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

    ಮೂರನೇ ಟೆಸ್ಟ್ ಪಂದ್ಯ ಹಲವು ವಿಶೇಷಗಳಿಂದ ಕೂಡಿದ್ದು, ಈಗಾಗಲೇ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯುವ ಟೆಸ್ಟ್ ಪಂದ್ಯದ ಶೇ.50 ರಷ್ಟು ಟೆಕೆಟ್ ಕೂಡ ಸೇಲ್ ಆಗಿದೆ. ಒಟ್ಟು 1.10 ಲಕ್ಷ ಪ್ರೇಕ್ಷಕ ಗ್ಯಾಲರಿ ಸಾಮಥ್ರ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಕೊರೊನಾ ಕಾರಣದಿಂದಾಗಿ ಶೇ.50 ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.

    ಒಟ್ಟು 63 ಎಕರೆ ಜಾಗದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಕ್ರೀಡಾಂಗಣದ ಒಳಭಾಗದಲ್ಲಿ 76 ಕಾರ್ಪೊರೇಟ್ ಬಾಕ್ಸ್ ಗಳು, ಮೂರು ಅಭ್ಯಾಸ ಮೈದಾನಗಳು ಮತ್ತು ಸುಸಜ್ಜಿತಾ ನಾಲ್ಕು ಡ್ರೆಸ್ಸಿಂಗ್ ರೂಂ ಇದೆ. ಇನ್ನೂ ಹೊನಲು ಬೆಳಕಿನಲ್ಲಿ ಪಂದ್ಯ ನಡೆಯುವ ಕಾರಣ ನೆರಳಿನ ಬಿಂಬಗಳನ್ನು ಮರೆಮಾಚಲು ಎಲ್‍ಇಡಿ ಬಲ್ಬ್ ಗಳನ್ನು ಹಾಕಲಾಗಿದೆ.

    ಮಳೆ ಬಂದರೆ ಪರಿಹಾರವಾಗಿ ಮೈದಾನವನ್ನು ಒಣಗಿಸಲು ಸಬ್ ಏರ್ ಸಿಸ್ಟಂ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಮಳೆ ನಿಂತು ಅರ್ಧ ಗಂಟೆಗೆ ಮೈದಾನ ಒಣಗುತ್ತದೆ. ಈ ಎಲ್ಲ ಸೌಲಭ್ಯಗಳೊಂದಿಗೆ, ವಿಶ್ವದ ಎರಡನೇ ಅತೀ ದೊಡ್ಡ ಮೈದಾನ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಮೊಟೆರಾ ಇದೀಗ ಭಾರತ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಕಾತರದಿಂದ ಕಾಯುತ್ತಿದೆ ಇದೀಗ ಎಲ್ಲರ ಚಿತ್ತ ಮೊಟೆರಾ ಕ್ರೀಡಾಂಗಣದತ್ತ ನೆಟ್ಟಿದೆ.

  • ಧೋನಿ ದಾಖಲೆ ಸರಿಗಟ್ಟಿದ ಕಿಂಗ್ ಕೊಹ್ಲಿ

    ಧೋನಿ ದಾಖಲೆ ಸರಿಗಟ್ಟಿದ ಕಿಂಗ್ ಕೊಹ್ಲಿ

    ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಗೆಲ್ಲುವುದರ ಮೂಲಕ ನಾಯಕನಾಗಿ ವಿರಾಟ್ ಕೊಹ್ಲಿ ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಸೋತ ಭಾರತ ಎರಡನೇ ಟಸ್ಟ್ ಪಂದ್ಯದಲ್ಲಿ ಅದೇ ಅಂಗಳದಲ್ಲಿ ಇಂಗ್ಲೆಂಡ್‍ಗೆ ತಿರುಗೇಟು ನೀಡಿ ಭರ್ಜರಿಯಾಗಿ 317 ರನ್‍ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ನಾಯಕನಾಗಿ ತವರಿನಲ್ಲಿ 28 ಟೆಸ್ಟ್ ಪಂದ್ಯಾಟವನ್ನು ಮುನ್ನಡೆಸಿ 21 ಗೆಲುವಿನೊಂದಿಗೆ ಭಾರತ ತಂಡದ ಮಾಜಿ ನಾಯಕ ಧೋನಿ ಅವರ 30 ಟೆಸ್ಟ್ ಪಂದ್ಯದಲ್ಲಿ 21 ಗೆಲುವಿನ ದಾಖಲೆಯನ್ನು ಸರಿಗಟ್ಟಿದ್ದಾರೆ.

    ತವರಿನಲ್ಲಿ ವಿರಾಟ್ ಕೊಹ್ಲಿ ಒಟ್ಟು 28 ಪಂದ್ಯದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ 21 ಜಯ, 2 ಸೋಲು, 5 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಧೋನಿ ತವರಿನಲ್ಲಿ 30 ಪಂದ್ಯದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ 21 ಜಯ, 3 ಸೋಲು, 6 ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ಈ ಮೂಲಕ ಕೊಹ್ಲಿಗೆ ಧೋನಿ ದಾಖಲೆಯನ್ನು ಮುರಿಯಲು ಒಂದು ಹೆಚ್ಚೆ ಮಾತ್ರ ಬಾಕಿ ಇದೆ.

    ನಾಯಕನಾಗಿ ವಿರಾಟ್ ಕೊಹ್ಲಿ ಒಟ್ಟು 58 ಟೆಸ್ಟ್ ಪಂದ್ಯಾಟಗಳನ್ನು ಮುನ್ನಡೆದ್ದು 34 ಜಯ, 14 ಸೋಲು ಮತ್ತು 10 ಪಂದ್ಯವನ್ನು ಡ್ರಾ ಮಾಡಿಕೊಂಡರೆ ಧೋನಿ 60 ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿ 27 ಜಯ, 18 ಸೋಲು ಮತ್ತು 15 ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ.

    ಧೋನಿ ದಾಖಲೆಯನ್ನು ಸರಿಗಟ್ಟಿರುವ ಕೊಹ್ಲಿಗೆ ಇನ್ನು ಒಂದು ಗೆಲುವು ದೊರೆತರೆ ನಾಯಕನಾಗಿ ತವರಿನಲ್ಲಿ ಅತೀ ಹೆಚ್ಚು ಗೆಲುವು ಕಂಡ ಕ್ಯಾಪ್ಟನ್ ಆಗಿ ಕಿಂಗ್ ಕೊಹ್ಲಿ ಹೊರಹೊಮ್ಮಲಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಾಟವು ಫೆಬ್ರವರಿ 24 ರಿಂದ ಅಹಮಾದಾಬಾದ್‍ನ ಮೊಟೆರಾ ಕ್ರೀಡಾಂಗಣ ನಡೆಯಲಿದೆ.

  • ವಿಸಿಲ್ ಪೋಡು ಎಂದು ಚೆನ್ನೈ ಅಭಿಮಾನಿಗಳನ್ನು ಹುರಿದುಂಬಿಸಿದ ವಿರಾಟ್ ಕೊಹ್ಲಿ

    ವಿಸಿಲ್ ಪೋಡು ಎಂದು ಚೆನ್ನೈ ಅಭಿಮಾನಿಗಳನ್ನು ಹುರಿದುಂಬಿಸಿದ ವಿರಾಟ್ ಕೊಹ್ಲಿ

    ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಾಟದ ಎರಡನೇ ದಿನ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಸಿಲ್ ಹೊಡೆಯಿರಿ ಎಂದು ಸನ್ನೆ ಮಾಡುವ ಮೂಲಕ ಅಭಿಮಾನಿಗಳನ್ನು ಹುರಿದುಂಬಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

    ಪ್ರವಾಸಿ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಚಿಪಾಕ್‍ನ ಎಂ ಚಿದಂಬರಂ ಸೇಡಿಯಂನಲ್ಲಿ ನಡೆಯುತ್ತಿದ್ದು, ಎರಡನೇ ದಿನದ ಪಂದ್ಯಾಟದಲ್ಲಿ ಭಾರತದ ಬೌಲರ್ ಗಳು ವಿಕೆಟ್ ಪಡೆಯುತ್ತಿದ್ದರೆ ಇದ್ದ ಕೊಹ್ಲಿ ಪ್ರೇಕ್ಷಕರಲ್ಲಿ ವಿಸಿಲ್ ಹಾಕುವಂತೆ ಕೈ ಸನ್ನೆ ಮಾಡಿದ್ದಾರೆ. ಪ್ರೇಕ್ಷಕರು ಕೊಹ್ಲಿ ಕೈ ಸನ್ನೆ ಮಾಡುತ್ತಿದ್ದಂತೆ ವಿಸಿಲ್ ಹೊಡೆಯಲು ಪ್ರಾರಂಭಿಸಿದ್ದಾರೆ. ವಿರಾಟ್ ಇನ್ನು ಜೋರಾಗಿ ವಿಸಿಲ್ ಹೋಡಿಯಿರಿ ಎಂದಿದ್ದಾರೆ.

    ಕೊಹ್ಲಿ ಪ್ರೇಕ್ಷಕರಲ್ಲಿ ವಿಸಿಲ್ ಹಾಕುವಂತೆ ಕೈ ಸನ್ನೆ ಮಾಡುವ ವಿಡಿಯೋವನ್ನು ಬಿಸಿಸಿಐ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದೆ. ಇದನ್ನು ಗಮನಿಸಿರುವ ಅಭಿಮಾನಿಗಳು ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ.

    ಕಳೆದ ಒಂದು ವರ್ಷಗಳಿಂದ ಕೊರೊನಾದಿಂದಾಗಿ ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಎರಡನೇ ಟೆಸ್ಟ್ ವೇಳೆ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಅಭಿಮಾನಿಗಳು ಮತ್ತೆ ಕ್ರೀಡಾಂಗಣಕ್ಕೆ ಬಂದು ಕ್ರಿಕೆಟ್ ವೀಕ್ಷಣೆಯಲ್ಲಿ ತೊಡಗಿದ್ದಾರೆ.