Tag: test

  • ಪರಮಾಣು ಪರೀಕ್ಷೆ ಆತಂಕದ ನಡುವೆಯೇ ಇನ್ನೊಂದು ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ

    ಪರಮಾಣು ಪರೀಕ್ಷೆ ಆತಂಕದ ನಡುವೆಯೇ ಇನ್ನೊಂದು ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ

    ಸಿಯೋಲ್: ಉತ್ತರ ಕೊರಿಯಾ ಪರಮಾಣು ಪರೀಕ್ಷೆ ನಡೆಸಲು ಯೋಜಿಸುತ್ತಿದೆ ಎಂಬ ಆತಂಕಕಾರಿ ಸಂಗತಿಯ ನಡುವೆಯೇ ಭಾನುವಾರ ಮತ್ತೊಂದು ಅಪರಿಚಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ.

    ಜಪಾನ್ ಮಾಹಿತಿ ಉಲ್ಲೇಖಿಸಿ, ದಕ್ಷಿಣ ಕೊರಿಯಾ ಅಧಿಕಾರಿಗಳು ಉತ್ತರ ಕೊರಿಯಾ ಅಪರಿಚಿತ ಕ್ಷಿಪಣಿಯನ್ನು ತನ್ನ ಪೂರ್ವ ಸಮುದ್ರದ ಕಡೆ ಹಾರಿಸಿದೆ ಎಂದು ತಿಳಿಸಿದ್ದಾರೆ. ಆದರೆ ಕ್ಷಿಪಣಿಯನ್ನು ಎಲ್ಲಿಂದ ಹಾರಿಸಲಾಯಿತು ಹಾಗೂ ಯಾವ ಗುರಿಗೆ ಹಾರಿಸಲಾಯಿತು ಎಂಬ ಬಗ್ಗೆ ತಿಳಿಸಿಲ್ಲ. ಇದನ್ನೂ ಓದಿ: ಕಂಟೈನರ್ ಡಿಪೋದಲ್ಲಿ ಬೆಂಕಿ: 16 ಸಾವು, 450ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ಉತ್ತರ ಕೊರಿಯಾ ಆರ್ಥಿಕ ನಿರ್ಬಂಧಗಳನ್ನು ಎಸುರಿಸುತ್ತಿದ್ದರೂ ಈ ವರ್ಷ ತನ್ನ ಶಸ್ತ್ರಾಸ್ತ್ರ ನವೀಕರಣ ಯೋಜನೆಗಳನ್ನು ದ್ವಿಗುಣಗೊಳಿಸಿದೆ. ತನ್ನ 7ನೇ ಪರಮಾಣು ಕ್ಷಿಪಣಿ ಪರೀಕ್ಷೆಯನ್ನು ಶೀಘ್ರವೇ ನಡೆಸಲಿದೆ ಎಂದು ಅಮೆರಿಕ ಹಾಗೂ ದಕ್ಷಿಣ ಕೊರಿಯ ಅಧಿಕಾರಿಗಳು ಕಳೆದ 1 ವಾರದಿಂದ ಹೇಳುತ್ತಲೇ ಇದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಹತ್ಯೆಗೆ ಸಂಚು- ಬಿಗಿ ಭದ್ರತೆ

    ಕಳೆದ ತಿಂಗಳು 3 ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪರೀಕ್ಷಿಸಿದ್ದು, ಅವುಗಳಲ್ಲಿ ಅತಿದೊಡ್ಡ ಖಂಡಾಂತರ ಕ್ಷಿಪಣಿ ಹ್ವಾಸಾಂಗ್-17 ಕೂಡಾ ಇತ್ತು ಎಂದು ತಿಳಿದುಬಂದಿದೆ.

  • ಭೂಮಿಯ ಯಾವುದೇ ಭಾಗ ತಲುಪಬಲ್ಲ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷಿಸಿದ ರಷ್ಯಾ

    ಮಾಸ್ಕೋ: ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿ ತಿಂಗಳಾಗುತ್ತಿದೆ. ಈ ನಡುವೆಯೇ ರಷ್ಯಾ ಹೊಸ ಪರಮಾಣು ಸಾಮರ್ಥ್ಯದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ. ಇದು ಭೂಮಿಯ ಯಾವುದೇ ಭಾಗವನ್ನೂ ತಲುಪುವ ಸಾಮರ್ಥ್ಯ ಹೊಂದಿದೆ.

    ವರ್ಷಗಳಿಂದ ಅಭಿವೃದ್ಧಿ ಪಡಿಸಲಾಗಿರುವ ಸರ್ಮ್ಯಾಟ್ ಕ್ಷಿಪಣಿಯನ್ನು ರಷ್ಯಾದ ಪ್ಲೆಸೆಟ್ಸ್ಕ್ ನಿಂದ ಇದೇ ಮೊದಲ ಬಾರಿಗೆ ಪರೀಕ್ಷಾರ್ಥವಾಗಿ ಉಡಾವಣೆ ಮಾಡಲಾಗಿದೆ. ಇದು ಸುಮಾರು 6,000 ಕಿ.ಮೀ ದೂರದ ಕಮ್ಚಾಟ್ಕಾ ದ್ವೀಪದಲ್ಲಿನ ಗುರಿಯನ್ನು ಹೊಡೆದಿದೆ ಎಂದು ರಷ್ಯಾ ಬುಧವಾರ ತಿಳಿಸಿದೆ.

    200 ಟನ್ ತೂಗುವ ಸರ್ಮ್ಯಾಟ್ ಕ್ಷಿಪಣಿ ಅಸಂಖ್ಯಾತ ಸಿಡಿತಲೆಗಳನ್ನು ಹೊತ್ತೊಯ್ಯುವ ಹಾಗೂ ಭೂಮಿಯ ಮೇಲಿನ ಯಾವುದೇ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ಅಸ್ಸಾಂ ಪೊಲೀಸರಿಂದ ಗುಜರಾತ್ MLA ಜಿಗ್ನೇಶ್ ಮೇವಾನಿ ಬಂಧನ

    ಈ ಹೊಸ ಕ್ಷಿಪಣಿ ಅತ್ಯುನ್ನತ ಯುದ್ಧತಂತ್ರ ಹಾಗೂ ತಾಂತ್ರಿಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಕ್ಷಿಪಣಿ-ವಿರೋಧಿ ರಕ್ಷಣೆಯ ಎಲ್ಲಾ ಆಧುನಿಕ ವಿಧಾನಗಳನ್ನು ಜಯಿಸಲು ಸಮರ್ಥವಾಗಿದೆ. ಜಗತ್ತಿನಲ್ಲಿ ಇಂತಹ ಸಾಮರ್ಥ್ಯದ ಕ್ಷಿಪಣಿಯನ್ನು ಎಲ್ಲಿಯೂ ಮಾಡಲಾಗಿಲ್ಲ, ಮಾಡಿದರೂ ದೀರ್ಘ ಸಮಯದ ವರೆಗೆ ಯಾರಿಂದಲೂ ತಯಾರಿಸಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

    ಇದು ನಿಜವಾಗಿಯೂ ಅಪರೂಪದ ಆಯುಧವಾಗಿದ್ದು, ನಮ್ಮ ಶಸ್ತ್ರಾಸ್ತ್ರ ಪಡೆಯನ್ನು ಬಲಿಷ್ಟವಾಗಿಸಲು ಸಹಕಾರಿಯಾಗಿದೆ. ಬಾಹ್ಯ ಬೆದರಿಕೆಗೆ ಇದೊಂದು ತಕ್ಕ ಉತ್ತರವಾಗಿದೆ ಎಂದು ಪುಟಿನ್ ಹೇಳಿದರು.

    ಪರಮಾಣು ಸಾಮರ್ಥ್ಯದ ಕ್ಷಿಪಣಿಯನ್ನು ಪರೀಕ್ಷಿಸಿರುವ ರಷ್ಯಾ ಇತರ ದೇಶಗಳನ್ನು ಆಶ್ಚರ್ಯಗೊಳಿಸಲು ಸಾಧ್ಯವೇ ಇಲ್ಲ. ರಷ್ಯಾ ಏನು ಬೇಕಾದರೂ ಮಾಡಬಹುದು ಎಂಬುದು ಉಕ್ರೇನ್ ಮೇಲೆ ದಾಳಿ ನಡೆಸಿದಾಗಿನಿಂದ ಇತರ ದೇಶಗಳಿಗೆ ಖಾತ್ರಿಯಾಗಿದೆ. ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿತ್ತು. ಸಾವಿರಾರು ಸೈನಿಕರು, ಜನರು ಯುದ್ಧದಲ್ಲಿ ಜೀವತೆತ್ತಿದ್ದರೂ ರಷ್ಯಾ ಇಲ್ಲಿ ವರೆಗೆ ಉಕ್ರೇನ್‌ನ ಯಾವುದೇ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಸಂಪ್ರದಾಯಕ್ಕೆ ಬ್ರೇಕ್‌ – ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಭಾಷಣ

    ಏನಿದು ಬ್ಯಾಲಿಸ್ಟಿಕ್ ಕ್ಷಿಪಣಿ?
    ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ಮತ್ತೆ ಭೂಮಿಯನ್ನು ಪ್ರವೇಶಿಸಿ ಭೂಮಿಗೆ ಅಪ್ಪಳಿಸುವ ಕ್ಷಿಪಣಿಗಳಮನ್ನು ಬ್ಯಾಲಿಸ್ಟಿಕ್ ಕ್ಷಿಪಣಿ ಎಂದು ಕರೆಯಲಾಗುತ್ತಿದೆ. ಈ ಕ್ಷಿಪಣಿಗಳು ವೇಗವಾಗಿ ಭೂಮಿಯ ವಾತಾವರಣ ಮರು ಪ್ರವೇಶಿಸುವಾಗ ವಾತಾವರಣದೊಂದಿಗೆ ಘರ್ಷಣೆಯುಂಟಾಗಿ ಹೆಚ್ಚಿನ ತಾಪಮಾನದಿಂದಾಗಿ ಶತ್ರುಗಳ ಕ್ಷಿಪಣಿಗಳನ್ನು ನಾಶಮಾಡಲು ಸಾಧ್ಯವಾಗುತ್ತದೆ.

    ಕ್ಷಿಪಣಿಗಳು ಭೂಮಿ ಪ್ರವೇಶಿಸುವಾಗ ಭೂ ಗುರುತ್ವಾಕರ್ಷಣೆಗೆ ಒಳಗಾಗುತ್ತದೆ. ಹೀಗಾಗಿ ನಿರ್ಧಿಷ್ಟ ಗುರಿಯನ್ನು ತಲುಪುವಂತಾಗಲು ಗ್ಲೋಬಲ್ ಪೊಸಿಷನ್ ಸಿಸ್ಟಮ್(ಜಿಪಿಎಸ್) ಅಳವಡಿಸಲಾಗಿರುತ್ತದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭೂಮಿಯಿಂದ, ಆಕಾಶದಿಂದ, ಸಮುದ್ರದಿಂದ, ಜಲಾಂತಗಾರ್ಮಿಯಿಂದ ಹಾಗೂ ಚಲಿಸುವ ವಾಹನಗಳ ಮೂಲಕವೂ ಉಡಾಯಿಸಬಹುದಾಗಿದೆ. ಶಬ್ದದ ವೇಗಕ್ಕಿಂತಲೂ 5 ಪಟ್ಟು ವೇಗವನ್ನು ಹೊಂದಿರುವ ಕಾರಣ ಇವುಗಳಿಗೆ ಹೈಪರ್ ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿ ಎಂದು ಕರೆಯಲಾಗುತ್ತದೆ.

  • ರಾವಲ್ಪಿಂಡಿ ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿದ ಡೇವಿಡ್ ವಾರ್ನರ್

    ರಾವಲ್ಪಿಂಡಿ ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿದ ಡೇವಿಡ್ ವಾರ್ನರ್

    ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ರಾವಲ್ಪಿಂಡಿ ಮೈದಾನದಲ್ಲಿ ನಡೆಯುತ್ತಿದೆ. ಐದನೇ ದಿನವಾದ ಇಂದು ಆಸ್ಟ್ರೇಲಿಯಾ ತಂಡದ ಆಟಗಾರ ಡೇವಿಡ್ ವಾರ್ನರ್ ಭಾಂಗ್ರಾ ನೃತ್ಯ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.

    ಮೊದಲ ಟೆಸ್ಟ್‌ನ ಕೊನೆಯ ದಿನವಾದ ಇಂದು ವಾರ್ನರ್ ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿರುವ ವೀಡಿಯೋವನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಸೂರತ್‍ನಲ್ಲಿ ಅಭ್ಯಾಸ ಆರಂಭಿಸಿದ ಧೋನಿ – ಮುಗಿಬಿದ್ದ ಅಭಿಮಾನಿಗಳು

    ಈ ವೀಡಿಯೋದಲ್ಲಿ ವಾರ್ನರ್ ಮೈದಾನದಲ್ಲಿ ಮ್ಯೂಸಿಕ್ ಬರುತ್ತಿದ್ದಂತೆ ನೃತ್ಯ ಮಾಡಲು ಆರಂಭಿಸಿದ್ದಾರೆ. ಹಾಡಿಗೆ ತಕ್ಕಂತೆ ಪಾಕಿಸ್ತಾನ ಮತ್ತು ಭಾರತದ ಪಂಜಾಬ್‍ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಭಾಂಗ್ರಾ ನೃತ್ಯ ಮಾಡುವ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ. ಇದನ್ನೂ ಓದಿ: ಒಟ್ಟು 65 ದಿನ ಐಪಿಎಲ್ ಕಲರವ – ಆರ್​ಸಿಬಿಗೆ ಪಂಜಾಬ್ ಮೊದಲ ಎದುರಾಳಿ

    ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಬ್ಯಾಟ್ಸ್‌ಮ್ಯಾನ್‌ಗಳ ಮೇಲಾಟಕ್ಕೆ ಸಾಕ್ಷಿಯಾಯಿತು. ಎರಡು ತಂಡಗಳು ಕೂಡ ದೊಡ್ಡ ಮೊತ್ತ ಕಲೆಹಾಕಿ ಮಿಂಚಿದವು. ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ 476 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡರೆ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 459 ರನ್‍ಗೆ ಆಲೌಟ್ ಆಗಿ 16 ರನ್‍ಗಳ ಹಿನ್ನಡೆ ಅನುಭವಿಸಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡ ಬೃಹತ್ ಮೊತ್ತದತ್ತ ಮುನ್ನುಗ್ಗಿದೆ. ಆದರೂ ಇಂದು ಕೊನೆಯ ದಿನವಾಗಿರುವುದರಿಂದಾಗಿ ಡ್ರಾ ಆಗುವ ಸಾಧ್ಯತೆ ಹೆಚ್ಚಿದೆ.

  • ರವೀಂದ್ರ ಜಡೇಜಾ ಅದ್ವಿತೀಯ ಸಾಧನೆ

    ರವೀಂದ್ರ ಜಡೇಜಾ ಅದ್ವಿತೀಯ ಸಾಧನೆ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್‍ರೌಂಡರ್ ರವೀಂದ್ರ ಜಡೇಜಾ ಭಾನುವಾರ ಒಂದೇ ಟೆಸ್ಟ್‌ನಲ್ಲಿ 150ಕ್ಕೂ ಅಧಿಕ ರನ್ ಸಿಡಿಸಿದ ಮತ್ತು ಐದು ವಿಕೆಟ್‍ಗಳನ್ನು ಪಡೆದ ವಿಶ್ವದ ಆರನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

    ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ 3ನೇ ದಿನದಾಟದಲ್ಲಿ ಜಡೇಜಾ ಐದು ವಿಕೆಟ್‍ಗಳನ್ನು ಕಬಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಜಡೇಜಾ ಮೊದಲ ಇನಿಂಗ್ಸ್‌ನಲ್ಲಿ ಅಜೇಯ 175 ರನ್ ಸಿಡಿಸುವ ಮೂಲಕ ಭಾರತವನ್ನು 450 ರನ್‍ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಈ ಮೊದಲು ವಿನೂ ಮಂಕಡ್, ಡೆನಿಸ್ ಅಟ್ಕಿನ್ಸನ್, ಪೊಲ್ಲಿ ಉಮ್ರಿಗರ್, ಗ್ಯಾರಿ ಸೋಬರ್ಸ್ ಮತ್ತು ಮುಷ್ತಾಕ್ ಮೊಹಮ್ಮದ್ ಈ ಸಾಧನೆ ಮಾಡಿದ ಇತರ ಐದು ಆಟಗಾರರಾಗಿದ್ದರು.

    ಶ್ರೀ ಲಂಕಾ ತಂಡವು ಮೊದಲ ಇನ್ನಿಂಗ್ಸ್‍ನಲ್ಲಿ 138/4ಕ್ಕೆ ತಮ್ಮ 3ನೇ ದಿನದ ಆಟವಾವನ್ನು ಪ್ರಾರಂಭಿಸಿತ್ತು. ಲಂಕಾದ ಬ್ಯಾಟರ್‌ಗಳಾದ ಪಾತುಮ್ ನಿಸ್ಸಾಂಕ್ ಮತ್ತು ಚರಿತ್ ಅಸಲಂಕಾ ಜೋಡಿಯು ಒಟ್ಟು 53 ರನ್‍ಗಳನ್ನು ತಂಡಕ್ಕೆ ಸೇರಿಸಿದ್ದರು. ನಂತರದಲ್ಲಿ ಅಂತಿಮವಾಗಿ 58ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅಸಲಂಕಾ (29) ಅವರ ವಿಕೆಟ್ ತೆಗೆಯುವ ಮೂಲಕ ಈ ಜೋಡಿ ಆಟಕ್ಕೆ ಬ್ರೇಕ್ ಹಾಕಿದರು.

    ನಂತರದಲ್ಲಿ ಬ್ಯಾಟಿಂಗ್‍ಗೆ ಇಳಿದ ನಿರೋಶನ್ ಡಿಕ್ವೆಲ್ಲಾ ಕೇವಲ (2) ರನ್ ಗಳಿಸುವಷ್ಟರಲ್ಲಿ ಜಡೇಜಾ ಅವರಿಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್‌ನಲ್ಲಿ ಜಡೇಜಾ ಸುರಂಗಾ ಲಕ್ಮಲ್ (0) ವಿಕೆಟ್‍ನ್ನು ಪಡೆಯುವಲ್ಲಿ ಯಶಸ್ವಿಯಾದರೂ.

    ಕೊನೆಯಲ್ಲಿ ಶ್ರೀಲಂಕಾ ತಂಡವು 174 ರನ್‍ಗಳಿಗೆ ಆಲೌಟ್ ಆಗಿದೆ. ಈ ವೇಳೆ ಭಾರತವು 400 ರನ್‍ಗಳ ಮುನ್ನಡೆ ಸಾಧಿಸಿದ್ದು, ಅತಿಥೇಯರ ಮೇಲೆ ಫಾಲೋ-ಆನ್ ಹೆರಿದ್ದಾರೆ.

  • ರಾಜೀನಾಮೆ ಕೊಹ್ಲಿ ವೈಯಕ್ತಿಕ ವಿಚಾರ: ಸೌರವ್ ಗಂಗೂಲಿ

    ರಾಜೀನಾಮೆ ಕೊಹ್ಲಿ ವೈಯಕ್ತಿಕ ವಿಚಾರ: ಸೌರವ್ ಗಂಗೂಲಿ

    ಮುಂಬೈ: ಟೆಸ್ಟ್ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ವಿರಾಟ್ ಕೊಹ್ಲಿ ಅವರ ವೈಯಕ್ತಿಕ ವಿಚಾರ. ಕೊಹ್ಲಿ ಅವರ ಈ ನಿರ್ಧಾರವನ್ನು ಬಿಸಿಸಿಐ ಗೌರವಿಸುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

    ನಿನ್ನೆ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಕ್ರಿಕೆಟ್‍ನ ಎಲ್ಲಾ ಮಾದರಿಯ ಕ್ಯಾಪ್ಟನ್‍ಶಿಪ್‍ನಿಂದಲೂ ದೂರ ಉಳಿದಿರುವ ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಗಂಗೂಲಿ ಶ್ಲಾಘಿಸಿದ್ದಾರೆ. ತಂಡವನ್ನು ಮುನ್ನಡೆಸುವಲ್ಲಿ ಸ್ಟಾರ್ ಬ್ಯಾಟ್ಸ್‍ಮನ್‍ಗಳ ಪಾತ್ರ ಬಹುಮುಖ್ಯ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ವಿರಾಟ್ ನಾಯಕತ್ವದಲ್ಲಿ ಭಾರತದ ಕ್ರಿಕೆಟ್ ತಂಡ ಎಲ್ಲಾ ಮಾದರಿಯ ಪಂದ್ಯದಲ್ಲೂ ಉನ್ನತ ಮಟ್ಟಕ್ಕೆ ಏರಿದೆ. ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ನಿರ್ಧಾರವು ಅವರ ವೈಯಕ್ತಿಕ ವಿಷಯವಾಗಿದೆ. ಬಿಸಿಸಿಐ ಈ ನಿರ್ಧಾರವನ್ನು ಗೌರವಿಸುತ್ತದೆ. ಭವಿಷ್ಯದಲ್ಲಿ ಟೀಂ ಇಂಡಿಯಾವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಕರಿಸಿದವರಲ್ಲಿ ಇವರು ಪ್ರಮುಖರೆನಿಸಿದ್ದಾರೆ. ಕೊಹ್ಲಿಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

    ಈ ಹಿಂದೆ ಟೀಂ ಇಂಡಿಯಾದ ಟಿ20 ಮತ್ತು ಏಕದಿನ ತಂಡದ ನಾಯಕತ್ವವನ್ನು ತೊರೆದಿದ್ದ ಕೊಹ್ಲಿ ಇದೀಗ ದಕ್ಷಿಣ ಆಫ್ರಿಕಾ ಸರಣಿ ಸೋಲಿನ ಬಳಿಕ ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಎಲ್ಲಾ ಮಾದರಿಯ ತಂಡದ ನಾಯಕತ್ವದಿಂದ ಕಿಂಗ್ ಕೊಹ್ಲಿ ಕೆಳಗಿಳಿದು ಆಟಗಾರನಾಗಿ ಮಾತ್ರ ತಂಡದೊಂದಿಗಿರಲು ಬಯಸಿದ್ದಾರೆ. ಇದನ್ನೂ ಓದಿ:  ನಾಯಕತ್ವ ತ್ಯಜಿಸಿ ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಕೊಹ್ಲಿ!

    ಟೀಂ ಇಂಡಿಯಾವನ್ನು ಟೆಸ್ಟ್ ರ್ಯಾಂಕಿಂಗ್‍ನಲ್ಲಿ ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿದ್ದ ಕೊಹ್ಲಿ, ಐಸಿಸಿ ಟ್ರೋಫಿ ಜಯಿಸಲು ಮಾತ್ರ ವಿಫಲವಾಗಿದ್ದರು. ಇದನ್ನು ಹೊರತುಪಡಿಸಿ ಕೊಹ್ಲಿ ಉತ್ತಮವಾಗಿ ನಾಯಕತ್ವವನ್ನು ನಿರ್ವಹಿಸಿ ಇದೀಗ ಮೂರು ಮಾದರಿಯ ನಾಯಕತ್ವವನ್ನು ತ್ಯಜಿಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಟ್ಟು 68 ಟೆಸ್ಟ್ ಪಂದ್ಯಗಳನ್ನಾಡಿದ್ದು, 40 ಟೆಸ್ಟ್ ಪಂದ್ಯಗಳಲ್ಲಿ ಗೆಲುವು, 17 ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡಿದ್ದು, 11 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಇದನ್ನೂ ಓದಿ:  ಟೀಂ ಇಂಡಿಯಾದ ಟೆಸ್ಟ್ ನಾಯಕತ್ವ ತೊರೆದ ವಿರಾಟ್ ಕೊಹ್ಲಿ

  • ರಾಹುಲ್ ಶತಕದಾಟ – ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಭವ

    ರಾಹುಲ್ ಶತಕದಾಟ – ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಭವ

    ಸೆಂಚುರಿಯನ್‌: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನ ಕನ್ನಡಿಗ ಕೆ.ಎಲ್ ರಾಹುಲ್ ಸಿಡಿಸಿದ ಅಜೇಯ ಶತಕದ ನೆರವಿನಿಂದ ಟೀಂ ಇಂಡಿಯಾ 273 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ದೊಡ್ಡ ಮೊತ್ತ ಪೇರಿಸುವ ಮುನ್ಸೂಚನೆ ನೀಡಿದೆ.

    ಟಾಸ್ ಗೆದ್ದ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕ ಜೋಡಿ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅರ್ಗವಾಲ್ ಮೊದಲ ವಿಕೆಟ್‍ಗೆ 117 ರನ್ (244 ಎಸೆತ) ಸಿಡಿಸಿ ಮಿಂಚಿದರು. ಉತ್ತಮವಾಗಿ ಆಡುತ್ತಿದ್ದ ಅರ್ಗವಾಲ್ 60 ರನ್ (123 ಎಸೆತ, 9 ಬೌಂಡರಿ) ಸಿಡಿಸಿ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದರು. ಆ ಬಳಿಕ ಬಂದ ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಚೇತೇಶ್ವರ ಪೂಜಾರ ಕಳಪೆ ಪ್ರದರ್ಶನವನ್ನು ಆಫ್ರಿಕಾ ನೆಲದಲ್ಲೂ ಮುಂದುವರಿಸಿ ಶೂನ್ಯ ಸುತ್ತಿದರು. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜು – ಡಿ.26ಕ್ಕೆ ಆರಂಭವಾಗುವುದರ ಮಹತ್ವವೇನು?

    ನಂತರ ಬಂದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ರಾಹುಲ್ ಜೊತೆ ಇನ್ನಿಂಗ್ಸ್ ಕಟ್ಟಲು ತೊಡಗಿದರು. ಈ ಜೋಡಿ 3 ನೇ ವಿಕೆಟ್‍ಗೆ 82 ರನ್ (171 ಎಸೆತ) ಜೊತೆಯಾಟವಾಡಿತು. ದೊಡ್ಡ ಮೊತ್ತ ಕಲೆಹಾಕುವ ಹುಮ್ಮಸ್ಸಿನಲ್ಲಿದ್ದ ಕೊಹ್ಲಿ 35 ರನ್ (94 ಎಸೆತ, 4 ಬೌಂಡರಿ) ಸಿಡಿಸಿ ಔಟ್ ಆದರು. ಬಳಿಕ ಬಂದ ಅಜಿಂಕ್ಯಾ ರಹಾನೆ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಒಂದು ಕಡೆ ಬೌಂಡರಿ, ಸಿಕ್ಸ್ ಮೂಲಕ ಆಫ್ರಿಕಾ ಬೌಲರ್‌ಗಳನ್ನು ಕಾಡಿದ ರಾಹುಲ್ ಭರ್ಜರಿ ಶತಕ ಸಿಡಿಸಿ ಅಜೇಯ 122 ರನ್ (248 ಎಸೆತ, 17 ಬೌಂಡರಿ, 1 ಸಿಕ್ಸ್) ಮತ್ತು ರಹಾನೆ 40 ರನ್ (81 ಎಸೆತ, 8 ಬೌಂಡರಿ) ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಹರ್ಭಜನ್ ಸಿಂಗ್

    ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ ಟೀಂ ಇಂಡಿಯಾ 273 ರನ್‌ ಗಳಿಸಿದೆ. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‍ಗಿಡಿ 3 ವಿಕೆಟ್ ಕಿತ್ತು ಮಿಂಚಿದರು.

  • ಕನ್ನಡಿಗ ಮಯಾಂಕ್ ಶತಕ – ಸುಸ್ಥಿತಿಯಲ್ಲಿ ಟೀಂ ಇಂಡಿಯಾ

    ಕನ್ನಡಿಗ ಮಯಾಂಕ್ ಶತಕ – ಸುಸ್ಥಿತಿಯಲ್ಲಿ ಟೀಂ ಇಂಡಿಯಾ

    ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ಅಜೇಯ ಶತಕದ ನೆರವಿನಿಂದ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಿ ಸುಸ್ಥಿತಿಯಲ್ಲಿದೆ.

    ಟೀಂ ಇಂಡಿಯಾ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಮಯಾಂಕ್ ಅಗರ್ವಾಲ್ ನ್ಯೂಜಿಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್ ಆ ಬಳಿಕ ವೇಗ ಪಡೆದುಕೊಂಡು ಅಜೇಯ ಶತಕ 120 ರನ್ (246 ಎಸೆತ, 14 ಬೌಂಡರಿ, 4 ಸಿಕ್ಸ್) ಸಿಡಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಂತ್ಯಕ್ಕೆ ಭಾರತ ತಂಡ 70 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 221 ರನ್‌ ಗಳಿಸಿದೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸ ರದ್ದಾಗುವ ಸಾಧ್ಯತೆ?

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೊಹ್ಲಿ ನಿರ್ಧಾರವನ್ನು ಆರಂಭಿಕ ಆಟಗಾರರಾದ ಮಯಾಂಕ್ ಅಗರ್ವಾಲ್ ಮತ್ತು ಶುಭಮನ್ ಗಿಲ್ ಸಮರ್ಥಿಸಿಕೊಂಡರು. ಈ ಜೋಡಿ ಮೊದಲ ವಿಕೆಟ್‍ಗೆ 80 ರನ್ (165 ಎಸೆತ)ಗಳ ಜೊತೆಯಾಟವಾಡಿತು. ಶುಭಮನ್ ಗಿಲ್ 44 ರನ್ (71 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಬಂದ ಚೇತೇಶ್ವರ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇದನ್ನೂ ಓದಿ: ಒಂದೇ ವರ್ಷದಲ್ಲಿ 4000% ಸಂಬಳ ಹೈಕ್ – ಇದು ಅಯ್ಯರ್ ಸಾಧನೆ

    ನಂತರ ಒಂದಾದ ಶ್ರೇಯಸ್ ಅಯ್ಯರ್ ಮತ್ತು ಮಯಾಂಕ್ ಮತ್ತೆ ಭಾರತಕ್ಕೆ ಚೇತರಿಕೆ ನೀಡಿದರು. 4ನೇ ವಿಕೆಟ್‍ಗೆ ಈ ಜೋಡಿ 80 ರನ್ (106 ಎಸೆತ) ಜೊತೆಯಾಟವಾಡಿ ತಂಡಕ್ಕೆ ಶಕ್ತಿ ತುಂಬಿತು. ಅಯ್ಯರ್ 18 ರನ್ (41 ಎಸೆತ, 3 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವೃದ್ಧಿಮಾನ್ ಸಹಾ, ಮಯಾಂಕ್ ಜೊತೆ ಸೇರಿ ಇನ್ನಿಂಗ್ಸ್ ಕಟ್ಟಲಾರಂಭಿಸಿದರು. ಈ ಜೋಡಿ 5ನೇ ವಿಕೆಟ್‍ಗೆ ಮುರಿಯದ 61 ರನ್ (134 ಎಸೆತ) ಜೊತೆಯಾಟವಾಡಿದೆ. ಸಹಾ ಅಜೇಯ 25 ರನ್ (53 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಮಯಾಂಕ್ ಜೊತೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ನ್ಯೂಜಿಲೆಂಡ್ ಪರ ಏಜಾಜ್ ಪಟೇಲ್ 4 ವಿಕೆಟ್ ಕಿತ್ತು ಮಿಂಚಿದ್ದಾರೆ.

  • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಕನ್ನಡಿಗ ಕೆ.ಎಲ್ ರಾಹುಲ್ ಹೊರಕ್ಕೆ

    ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಕನ್ನಡಿಗ ಕೆ.ಎಲ್ ರಾಹುಲ್ ಹೊರಕ್ಕೆ

    ಲಕ್ನೋ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾದ ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಹೊರ ಬಿದ್ದಿದ್ದಾರೆ.

    ರಾಹುಲ್ ಟೀಂ ಇಂಡಿಯಾದ ಆರಂಭಿಕ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಜೊತೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿತ್ತು. ಆದರೆ ಅಭ್ಯಾಸದ ವೇಳೆ ಎಡ ತೊಡೆಯ ಸ್ನಾಯು ಸೆಳೆತದಿಂದಾಗಿ ರಾಹುಲ್ ಅಭ್ಯಾಸದಿಂದ ಹೊರಗುಳಿದಿದ್ದು, ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯಿಂದ ರಾಹುಲ್ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕಪ್ ಗೆಲ್ಲಲು ಲಕ್ಕಿ ಕಲರ್ ಆದ ಹಳದಿ ಜೆರ್ಸಿ

    ರಾಹುಲ್ ಟೆಸ್ಟ್ ಸರಣಿಯಿಂದ ಹೊರಗುಳಿದಿರುವುದರಿಂದ ಅವರ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ವಿಶ್ರಾಂತಿ ಪಡೆದರೆ, ವಿರಾಟ್ ಕೊಹ್ಲಿ ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ. ಎರಡನೇ ಪಂದ್ಯಕ್ಕೆ ಲಭ್ಯರಿದ್ದಾರೆ. ಇವರಿಬ್ಬರ ಅಲಭ್ಯತೆಯಲ್ಲಿ ಅಜಿಂಕ್ಯಾ ರಹಾನೆ ಮೊದಲನೇ ಟೆಸ್ಟ್ ನಲ್ಲಿ ನಾಯಕತ್ವ ನಿರ್ವಹಿಸಲಿದ್ದಾರೆ. ಇದನ್ನೂ ಓದಿ: 20 ಕೋಟಿಗೆ ರಾಹುಲ್‌ ಹರಾಜು: ಆಕಾಶ್‌ ಚೋಪ್ರಾ ಭವಿಷ್ಯ

    ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ನವೆಂಬರ್ 25ಕ್ಕೆ ಆರಂಭಗೊಂಡು ಡಿಸೆಂಬರ್ 7ಕ್ಕೆ ಕೊನೆಗೊಳ್ಳಲಿದೆ. ನವೆಂಬರ್ 25 ರಿಂದ 29ರ ವರೆಗೆ ಕಾನ್ಪುರದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದರೆ, ಮುಂಬೈನಲ್ಲಿ 2ನೇ ಟೆಸ್ಟ್ ಪಂದ್ಯಾಟ ಡಿಸೆಂಬರ್ 3 ರಿಂದ 7ರ ವರೆಗೆ ನಡೆಯಲಿದೆ. ಇದನ್ನೂ ಓದಿ: ಚಹರ್ ಸಿಕ್ಸ್‌ಗೆ ಸೆಲ್ಯೂಟ್ ಹೊಡೆದ ರೋಹಿತ್

  • ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯರು

    ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯರು

    ಸಿಡ್ನಿ: ಪುರುಷರ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್‍ನಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಮೊದಲ ಭಾರತೀಯ ಬ್ಯಾಟ್ಸ್‌ಮ್ಯಾನ್‌ ಆದರೆ, ಇದೀಗ ಮಹಿಳಾ ಕ್ರಿಕೆಟ್‍ನಲ್ಲಿ ಸ್ಮೃತಿ ಮಂಧಾನ ಪಿಂಕ್‍ಬಾಲ್ ಟೆಸ್ಟ್‌ನಲ್ಲಿ ಮೊದಲ ಶತಕ ಸಿಡಿಸಿದ ಭಾರತದ ಮಹಿಳಾ ಬ್ಯಾಟರ್ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

    ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ತನ್ನ ಮೊದಲ ಪಿಂಕ್‍ಬಾಲ್ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ತನ್ನ ಮೊದಲ ಟೆಸ್ಟ್ ಶತಕ 127ರನ್(216 ಎಸೆತ, 22 ಬೌಂಡರಿ, 1 ಸಿಕ್ಸ್) ಬಾರಿಸಿ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ್ತಿಯಾಗಿ ಮಿಂಚಿದ್ದಾರೆ. ಈ ಮೂಲಕ ಮಂಧಾನ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ ಭಾರತದ ಎರಡನೇ ಮಹಿಳಾ ಅಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೊದಲು 1984ರಲ್ಲಿ ಸಂಧ್ಯಾ ಅಗರ್ವಾಲ್ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ್ದರು, ಬಳಿಕ ಇದೀಗ ಮಂಧಾನ ಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    ಪುರಷರ ವಿಭಾಗದ ಕ್ರಿಕೆಟ್‍ನಲ್ಲಿ 18 ನಂಬರ್ ಜೆರ್ಸಿಧಾರಿ ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮೊದಲ ಶತಕ ಸಿಡಿಸಿದ್ದರೆ, ಕಾಕತಾಳಿಯವೆಂಬಂತೆ ಮಹಿಳಾ ಕ್ರಿಕೆಟ್‍ನಲ್ಲಿ 18 ನಂಬರ್ ಜೆರ್ಸಿ ತೊಡುವ ಸ್ಮೃತಿ ಮಂಧಾನ ಆಸ್ಟ್ರೇಲಿಯಾ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಮೊದಲ ಶತಕ ಸಿಡಿಸಿ ಮೆರೆದಿದ್ದಾರೆ. ಇದನ್ನೂ ಓದಿ: ಆರ್​ಸಿಬಿಗೆ ಹರ್ಷ ತಂದ ಅನ್​ಕ್ಯಾಪ್ಡ್​ ಪ್ಲೇಯರ್

    ಭಾರತದ ಪುರುಷರ ತಂಡದಲ್ಲಿ ವಿರಾಟ್ ಕೊಹ್ಲಿ ರನ್ ಮೆಷಿನ್ ಆಗಿ ಗುರುತಿಸಿಕೊಂಡರೆ, ಮಹಿಳಾ ಕ್ರಿಕೆಟ್‍ನಲ್ಲಿ ಸ್ಮೃತಿ ಮಂಧಾನ ರನ್ ಮೆಷಿನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರೂ ಕೂಡ ಸ್ಟೈಲಿಷ್ಟ್ ಬ್ಯಾಟರ್‍ ಗಳಾಗಿದ್ದು, ಭಾರತಕ್ಕಾಗಿ ಇನ್ನಷ್ಟು ರನ್ ಸಿಡಿಸಿ ದಾಖಲೆಗಳ ಒಡೆಯರಾಗಲಿ ಎಂಬುದು ಅಭಿಮಾನಿಗಳ ಆಶಯ.

  • ವಿರಾಟ್ ಕೊಹ್ಲಿ ನೂತನ ದಾಖಲೆ, ಠಾಕೂರ್ ಅರ್ಧಶತಕ- ಭಾರತ 191 ರನ್‍ಗೆ ಆಲೌಟ್

    ವಿರಾಟ್ ಕೊಹ್ಲಿ ನೂತನ ದಾಖಲೆ, ಠಾಕೂರ್ ಅರ್ಧಶತಕ- ಭಾರತ 191 ರನ್‍ಗೆ ಆಲೌಟ್

    ಓವೆಲ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ 191 ರನ್‍ಗಳ ಸಾಧಾರಣ ಮೊತ್ತಕ್ಕೆ ಆಲ್‍ಔಟ್ ಆಗಿದೆ.

    ಟಾಸ್ ಗೆದ್ದ ಇಂಗ್ಲೆಂಡ್ ಭಾರತವನ್ನು ಬ್ಯಾಟಿಂಗ್ ಆಹ್ವಾನಿಸಿತು. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 11 ರನ್(27 ಎಸೆತ, 1 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿದರು. ಇವರ ಹಿಂದೆಯೇ ಜೊತೆಗಾರ ಕೆಎಲ್. ರಾಹುಲ್ 17 ರನ್(44 ಎಸೆತ, 3 ಬೌಂಡರಿ) ಬಾರಿಸಿ ಔಟ್ ಆದರು. ಬಳಿಕ ಬಂದ ಚೇತೇಶ್ವರ ಪೂಜಾರ 4 ರನ್(31 ಎಸೆತ, 1 ಬೌಂಡರಿ) ಮಾಡಿ ನಿರಾಸೆ ಮೂಡಿಸಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ತಾಳ್ಮೆಯುತ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 50 ರನ್ (96 ಎಸೆತ, 8 ಬೌಂಡರಿ) ಅರ್ಧಶತಕ ಸಿಡಿಸಿ ರಾಬಿನ್ಸನ್‍ಗೆ ವಿಕೆಟ್ ಒಪ್ಪಿಸಿದರು. ಈ ಮೊದಲು ಕೊಹ್ಲಿ 1 ರನ್ ಸಿಡಿಸುತ್ತಿದ್ದಂತೆ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 23 ಸಾವಿರ ರನ್ ಸಿಡಿಸಿದ ನೂತನ ದಾಖಲೆ ನಿರ್ಮಿಸಿದರು. ಇದನ್ನೂ ಓದಿ: ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಾರ್ಟ್ ಬಾಲ್

    ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಗಳಾದ ರವೀಂದ್ರ ಜಡೇಜಾ 10 ರನ್(34 ಎಸೆತ, 2 ಬೌಂಡರಿ), ಅಜಿಂಕ್ಯಾ ರಹಾನೆ 14 ರನ್ (47 ಎಸೆತ, 1 ಬೌಂಡರಿ) ರಿಷಬ್ ಪಂತ್ 9 ರನ್(33 ಎಸೆತ, 1 ಬೌಂಡರಿ)ಗಳಿಗೆ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಶಾರ್ದೂಲ್ ಠಾಕೂರ್ ಭಾರತಕ್ಕೆ ಆಸರೆಯಾದರು. ಉತ್ತಮವಾಗಿ ಬ್ಯಾಟ್ ಬೀಸಿದ ಠಾಕೂರ್ 57ರನ್(36 ಎಸೆತ, 7 ಬೌಂಡರಿ, 3 ಸಿಕ್ಸ್) ವೇಗವಾಗಿ ರನ್ ಗಳಿಸಿ ಅರ್ಧಶತಕ ಹೊಡೆದು ಮಿಂಚಿದರು. ಅಂತಿಮವಾಗಿ ಭಾರತ ತಂಡ 61.3 ಓವರ್‍ ಗಳಲ್ಲಿ 191 ರನ್‍ಗೆ ಸರ್ವಪತನ ಕಂಡಿತು. ಇದನ್ನೂ ಓದಿ: ವಿಶೇಷ ಅತಿಥಿಯನ್ನು ಹಿಡಿದುಕೊಂಡು ಪೃಥ್ವಿ ಶಾ ಪ್ರಯಾಣ

    ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 4 ವಿಕೆಟ್ ಮತ್ತು ಒಲಿ ರಾಬಿನ್ಸನ್ 3 ವಿಕೆಟ್ ಕಿತ್ತು ಮಿಂಚಿದರು. ಜೇಮ್ಸ್ ಆಂಡರ್ಸನ್ ಮತ್ತು ಕ್ರೇಗ್ ಓವರ್ಟನ್ ತಲಾ 1 ವಿಕೆಟ್ ಪಡೆದರು.