Tag: test

  • ಇಂಗ್ಲೆಂಡ್ ವಿರುದ್ಧದ ಮೊದಲ 3 ಟೆಸ್ಟ್ ಪಂದ್ಯಗಳಿಗೆ ಭುವನೇಶ್ವರ್ ಅಲಭ್ಯ

    ಇಂಗ್ಲೆಂಡ್ ವಿರುದ್ಧದ ಮೊದಲ 3 ಟೆಸ್ಟ್ ಪಂದ್ಯಗಳಿಗೆ ಭುವನೇಶ್ವರ್ ಅಲಭ್ಯ

    ಮುಂಬೈ: ಇಂಗ್ಲೆಂಡ್ ವಿರುದ್ಧ ಏಕದಿನ ಟೂರ್ನಿ ಸೋಲಿನ ಬಳಿಕ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಮೊದಲ 3 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

    ಆಗಸ್ಟ್ 1 ರಿಂದ ಆರಂಭವಾಗುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಸಮಿತಿ 18 ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು, ಇದರಲ್ಲಿ ಭುವನೇಶ್ವರ್ ಸಹ ಸ್ಥಾನ ಪಡೆದಿದ್ದರು. ಆದರೆ ಸದ್ಯ ಭುವನೇಶ್ವರ್ ಬೆನ್ನು ನೋವಿನ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಕೊಳ್ಳದ ಕಾರಣ ಆರಂಭದ 3 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧ ನಡೆದ 3ನೇ ಏಕದಿನ ಪಂದ್ಯದ ವೇಳೆ ಭುವಿ ಬೆನ್ನು ನೋವು ಸಮಸ್ಯೆ ಒಳಗಾಗಿದ್ದರು. ಸದ್ಯ ಭುವಿ ಅವರ ಆರೋಗ್ಯ ಕುರಿತು ಬಿಸಿಸಿಐ ವೈದ್ಯರ ತಂಡ ನಿರ್ಣಯಕೈಗೊಳ್ಳಲಿದೆ. ಇನ್ನು ಪ್ರಾರಂಭದ ಪಂದ್ಯಗಳಿಗೆ ಭುವಿ ಅಲಭ್ಯರಾಗುವ ಕಾರಣ ಭಾರತಕ್ಕೆ ವಾಪಸಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕ ಅಂತಿಮ 2 ಪಂದ್ಯಗಳಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ.

    ಭುವನೇಶ್ವರ್ ಅವರ ಸ್ಥಾನದಲ್ಲಿ ರಿಷಭ್ ಪಂತ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಬುಮ್ರಾ ಸಹ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದು, ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಸದ್ಯ ಕುಲ್‍ದೀಪ್ ನಾಯರ್, ಕರುಣ್ ನಾಯರ್, ದಿನೇಶ್ ಕಾರ್ತಿಕರ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    ಬಹು ನಿರೀಕ್ಷಿತ ಇಂಗ್ಲೆಂಡ್ ವಿರುದ್ಧ ಮೂರು ಮಾದರಿಯ ಸರಣಿಗೆ ಆರಂಭದಿಂದಲೂ ಟೀಂ ಇಂಡಿಯಾ ಆಟಗಾರ ಗಾಯದ ಸಮಸ್ಯೆ ಎದುರಿಸುತ್ತಿದೆ.

  • ಬೆಂಗಳೂರು ಟೆಸ್ಟ್ ವೇಳೆ ದ್ರಾವಿಡ್ ನೆನಪು ಮಾಡ್ಕೊಂಡ ಸೆಹ್ವಾಗ್

    ಬೆಂಗಳೂರು ಟೆಸ್ಟ್ ವೇಳೆ ದ್ರಾವಿಡ್ ನೆನಪು ಮಾಡ್ಕೊಂಡ ಸೆಹ್ವಾಗ್

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕನ್ನಡಿಗ ಕೆಎಲ್ ರಾಹುಲ್ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿಯುತ್ತಿದಂತೆ ಸೆಹ್ವಾಗ್ ತಮ್ಮ ಆತ್ಮೀಯ ಗೆಳೆಯ ದ್ರಾವಿಡ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

    ದ್ರಾವಿಡ್ ನಿವೃತ್ತಿಯ ಬಳಿಕ ಮೊದಲ ಬಾರಿಗೆ ಟೆಸ್ಟ್ ಪಂದ್ಯದ ನಂ.3 ರ ಬ್ಯಾಟಿಂಗ್ ಕ್ರಮದಲ್ಲಿ ರಾಹುಲ್ ಹೆಸರನ್ನು ಕಾಣುತ್ತಿರುವುದಾಗಿ ಹೇಳಿದ್ದಾರೆ. ಅಫ್ಘಾನ್ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲಿ ಧವನ್ ಸ್ಫೋಟಕ ಶತಕ ಸಿಡಿಸಿ ಔಟಾಗುತ್ತಿದಂತೆ ರಾಹುಲ್ ಬ್ಯಾಟಿಂಗ್ ನಡೆಸಿ ಅರ್ಧಶತಕ (54) ಪೂರೈಸಿದರು.

    ಪಂದ್ಯದಲ್ಲಿ ಸೆಹ್ವಾಗ್ ದಾಖಲೆ ಮುರಿದ ಧವನ್ ಮೊದಲ ದಿನ ಭೋಜನ ವಿರಾಮಕ್ಕೂ ಮುನ್ನ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಸೆಹ್ವಾಗ್ 2006 ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧ 99 ರನ್, 1967 ರಲ್ಲಿ ಫಾರುಖ್ ಎಂಜಿನಿಯರ್ 94 ರನ್ ಗಳಿಸಿದ್ದರು. ಅಲ್ಲದೇ ಪಂದ್ಯದ ವಿರಾಮದ ವೇಳೆ ಶತಕ ಸಿಡಿಸಿದ 6ನೇ ಆಟಗಾರ ಎಂಬ ವಿಶೇಷ ಸಾಧನೆ ಮಾಡಿದರು. ಈ ಹಿಂದೆ ಆಸೀಸ್ ನ ವಿಕ್ಟರ್ ಟ್ರಂಪರ್, ಚಾರ್ಲ್ಸ್ ಮ್ಯಾಕಾರ್ಟ್‍ನಿ, ಡಾನ್ ಬ್ರಾಡ್ ಮನ್, ಡೇವಿಡ್ ವಾರ್ನರ್ ಹಾಗೂ ಪಾಕಿಸ್ತಾನದ ಮಾಜಿ ನಾಯಕ ಮಜೀದ್ ಖಾನ್ ಈ ಸಾಧನೆ ಮಾಡಿದ್ದರು.

  • ಅಫ್ಘಾನ್ ಪ್ರಧಾನಿ ಬಳಿಕ ಹೆಚ್ಚು ಪ್ರಸಿದ್ಧಿ ಪಡೆದಿದ್ದೇನೆ – ರಶೀದ್ ಖಾನ್

    ಅಫ್ಘಾನ್ ಪ್ರಧಾನಿ ಬಳಿಕ ಹೆಚ್ಚು ಪ್ರಸಿದ್ಧಿ ಪಡೆದಿದ್ದೇನೆ – ರಶೀದ್ ಖಾನ್

    ಮುಂಬೈ: 2018 ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿರುವ ರಶೀದ್ ಖಾನ್, ತನ್ನ ದೇಶದ ಪ್ರಧಾನಿಯ ಬಳಿಕ ತಾನು ಹೆಚ್ಚು ಪ್ರಸಿದ್ಧಿ ಪಡೆದಿರುವುದಾಗಿ ಹೇಳಿದ್ದಾರೆ.

    ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಅತ್ಯುತ್ತಮ ಆಲೌಂಡರ್ ಪ್ರದರ್ಶನ ನೀಡಿದ ರಶೀದ್ ತಂಡ ಫೈನಲ್ ತಲುಪಲು ಕಾರಣರಾಗಿದ್ದರು. ಈ ವೇಳೆ ಸಚಿನ್ ತೆಂಡೂಲ್ಕರ್ ಸಹ ವಿಶ್ವದ ಉತ್ತಮ ಟಿ20 ಬೌಲರ್ ಎಂದು ಹೊಗಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಖಾನ್ ಮೊದಲು ಸಚಿನ್ ರ ಹೊಗಳಿಕೆ ಟ್ವೀಟ್ ನೋಡಿದ ವೇಳೆ ನಂಬಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

    ಸಚಿನ್ ವಿಶ್ವದಲ್ಲೇ ಹೆಚ್ಚು ಅಭಿಮಾನಿಗಳನ್ನು ಪಡೆದ ಆಟಗಾರರು. ಅವರ ಟ್ವೀಟನ್ನು ಅಫ್ಘಾನ್ ನ ಎಲ್ಲರೂ ನೋಡಿರುತ್ತಾರೆ. ಸಚಿನ್ ರ ಹೊಗಳಿಕೆ ತನ್ನಂತಹ ಹಲವು ಯುವ ಆಟಗಾರರಿಗೆ ಹೆಚ್ಚು ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ.

    ಈ ಬಾರಿಯ ಐಪಿಎಲ್ ನಲ್ಲಿ 21 ವಿಕೆಟ್ ಪಡೆದಿರುವ ಖಾನ್ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆ ಪಡೆದರು. ವಿಶೇಷವಾಗಿ ಟೂರ್ನಿಯಲ್ಲಿ ಧೋನಿ, ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ವಿಕೆಟ್ ಪಡೆದಿರುವುದು ಹೆಚ್ಚು ಹೆಮ್ಮೆ ಎನಿಸುತ್ತದೆ. ಈ ಮೂರು ವಿಕೆಟ್ ಗಳು ತನ್ನ ವೃತ್ತಿ ಜೀವನದ ಪ್ರಮುಖ ಸಾಧನೆ ಎಂದು ತಿಳಿಯುತ್ತೇನೆ ಎಂದು ಹೇಳಿದ್ದಾರೆ.

    ಮುಂದಿನ ಜೂನ್ ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಟೆಸ್ಟ್ ಪಂದ್ಯದ ಮೂಲಕ ಅಫ್ಘಾನ್ ತಂಡ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡಲಿದೆ. ಈ ಪಂದ್ಯ ಅತ್ಯಂತ ಮಹತ್ವದಾಗಿದ್ದು, ಇಡೀ ದೇಶವೇ ಎದುರು ನೋಡುತ್ತಿದೆ. ಈ ಪಂದ್ಯಕ್ಕೆ ಆಯ್ಕೆ ಆಗಿರುವ ಎಲ್ಲರು ಲಕ್ಕಿ ಆಟಗಾರರಾಗಿದ್ದು, ಈ ಮೂಲಕ ಇತಿಹಾಸ ಬರೆಯಲಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ಟೀಂ ಇಂಡಿಯಾ ವಿರುದ್ಧ ಆಡುತ್ತಿದ್ದೇವೆ ಎಂಬುವುದೆ ಹೆಮ್ಮೆ ಸಂಗತಿ ಎಂದು ತಿಳಿಸಿದ್ದಾರೆ.

    ಈ ವೇಳೆ ಭಾರತ ಸ್ಟಾರ್ ಆಟಗಾರರು ಪಡೆಯುವ ಸೌಲಭ್ಯಗಳನ್ನು ಪಡೆದಿರುವ ಕುರಿತ ಪ್ರಶ್ನೆಗೆ ಉತ್ತರಿಸಿ ತಾನು ಅಫ್ಘಾನ್ ದೇಶದ ಪ್ರಧಾನಿ ಬಳಿಕ ಹೆಚ್ಚು ಪ್ರಸಿದ್ಧಿ ಪಡೆದಿದ್ದೇನೆ ಎಂದು ಉತ್ತರಿಸಿದ್ದಾರೆ. ಸದ್ಯ ಅಫ್ಘಾನ್ ನಂತಹ ದೇಶದ ಯುವ ಜನತೆಗೆ ರಶೀದ್ ಖಾನ್ ಈಗ ಸ್ಫೂರ್ತಿಯಾಗಿದ್ದಾರೆ.

  • ಕೊಹ್ಲಿ ಸ್ಥಾನದಲ್ಲಿ ಆಡಲಿದ್ದಾರೆ ಶ್ರೇಯಸ್ ಅಯ್ಯರ್!

    ಕೊಹ್ಲಿ ಸ್ಥಾನದಲ್ಲಿ ಆಡಲಿದ್ದಾರೆ ಶ್ರೇಯಸ್ ಅಯ್ಯರ್!

    ಮುಂಬೈ: ಅಫ್ಘಾನಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಆಯ್ಕೆ ಆಗುವ ಸಾಧ್ಯತೆ ಇದೆ.

    ಕೊಹ್ಲಿ ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್ ಗೆ ತೆರಳಲಿರುವ ಕಾರಣ ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ಎದುರಿನ ಟಿ20 ಸರಣಿಗಳಿಗೆ ಬೇರೆ ಆಟಗಾರರನ್ನು ಆಯ್ಕೆ ಮಾಡಬೇಕಿದೆ. ಅಲ್ಲದೇ ಟೆಸ್ಟ್ ತಂಡದ ನಾಯಕನಿಗಾಗಿ ಬದಲಿ ಆಟಗಾರನನ್ನು ಆರಿಸಬೇಕಿದೆ.

    ಎಂಎಸ್‍ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ತಂಡವನ್ನು ಆಯ್ಕೆ ಮಾಡಲಿದ್ದು, ಸದ್ಯ ಈ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಆಯ್ಕೆ ಆಗುವ ಸಾಧ್ಯತೆ ಇದೆ. 2017 ರಲ್ಲಿ ನಡೆದ ಆಸೀಸ್ ಎದುರಿನ ಟೆಸ್ಟ್ ಪಂದ್ಯಕ್ಕೆ ಗಾಯದ ಸಮಸ್ಯೆಯಿಂದ ಕೊಹ್ಲಿ ಅಲಭ್ಯರಾದ ವೇಳೆ ಶ್ರೇಯಸ್ ರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈ ಪಂದ್ಯದಲ್ಲಿ ಶ್ರೇಯಸ್ ಗೆ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ.

    ಈ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಶ್ರೇಯಸ್ ಉತ್ತಮ ಫಾರ್ಮ್‍ನಲ್ಲಿದ್ದು, ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗೂ ಮೊದಲ ದರ್ಜೆ ಕ್ರಿಕೆಟ್ ನಲ್ಲಿ 46 ಪಂದ್ಯ ಆಡಿರುವ ಅಯ್ಯರ್ 53.90 ಸರಾಸರಿ ಹೊಂದಿದ್ದು, 3989 ರನ್ ಗಳಿಸಿದ್ದಾರೆ. ಟೆಸ್ಟ್ ತಂಡಕ್ಕೆ ಚೇತೇಶ್ವರ ಪೂಜಾರ ಹಾಗೂ ಇಶಾಂತ್ ಶರ್ಮಾ ಆಯ್ಕೆ ಆಗುವ ಸಾಧ್ಯತೆಗಳಿದೆ. ಸದ್ಯ ಇಬ್ಬರು ಆಟಗಾರರು ಕೌಟಿ ಕ್ರಿಕೆಟ್ ನಲ್ಲಿ ಆಡುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಯ್ಕೆ ಸಮಿತಿ ಸದಸ್ಯರೊಬ್ಬರು, ಕೊಹ್ಲಿ ಸ್ಥಾನದಲ್ಲಿ ಅಯ್ಯರ್, ಜಡೇಜಾ ಸ್ಥಾನದಲ್ಲಿ ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ವಿಜಯ್ ಶಂಕರ್ ಆಯ್ಕೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಇಂಗೆಂಡ್ ಟೆಸ್ಟ್ ಹಾಗೂ ಏಕದಿನ ಸರಣಿಗೆ ಭಾರತ ಎ ತಂಡ ಆಯ್ಕೆ ಮಾಡುವ ಸಾಧ್ಯತೆ ಇದ್ದು, ಅಂಡರ್ 19 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಪೃಥ್ವಿ ಶಾ, ಶುಭಮನ್ ಗಿಲ್ ಮತ್ತು ಶಿವಂ ಮಾವಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

  • ಭಾರತವನ್ನು ಪ್ರತಿನಿಧಿಸುವ ಮೊದಲೇ ಪಾಕ್ ಪರ ಆಡಿದ್ದ ಸಚಿನ್!

    ಭಾರತವನ್ನು ಪ್ರತಿನಿಧಿಸುವ ಮೊದಲೇ ಪಾಕ್ ಪರ ಆಡಿದ್ದ ಸಚಿನ್!

    ಮುಂಬೈ: ನಿನ್ನೆಯಷ್ಟೇ 45ನೇ ವಸಂತಕ್ಕೆ ಕಾಲಿಟ್ಟ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ವಿಶ್ವಾದ್ಯಂತ ಹಲವು ಅಭಿಮಾನಿಗಳು ಶುಭಕೋರಿದ್ದರು. ಇದೇ ವೇಳೆ ತಮ್ಮ ಕ್ರಿಕೆಟ್ ಜೀವನದ ಕುರಿತು ಸಚಿನ್ ಆಸಕ್ತಿದಾಯಕ ಅಂಶವೊಂದನ್ನು ತಿಳಿಸಿದ್ದಾರೆ.

    ಅಂದಹಾಗೇ 1989 ರಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸಚಿನ್ ಆಡಿದ್ದರು. ಆದರೆ ಈ ಪಂದ್ಯಕ್ಕೂ ಮೊದಲೇ ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ತಂಡದ ಪರವಾಗಿ ಆಡಿದ್ದರು. ಸಚಿನ್ ತಮ್ಮ ಆತ್ಮಕಥೆ `ಪ್ಲೇಯಿಂಗ್ ವಿಥ್ ಮೈ ವೇ’ ಪುಸ್ತಕದಲ್ಲಿ ಪಾಕ್ ಪರ ಆಡಿದ ಪಂದ್ಯವನ್ನು ಮೆಲುಕು ಹಾಕಿದ್ದಾರೆ.

    ಯಾವ ಪಂದ್ಯ?
    1987 ಜನವರಿ 20 ರಂದು ಪಾಕಿಸ್ತಾನ ಹಾಗೂ ಭಾರತ ನಡುವೆ ನಡೆದ ಪ್ರದರ್ಶನ ಪಂದ್ಯವೊಂದರಲ್ಲಿ ಪಾಕ್ ಆಟಗಾರ ಇಮ್ರಾನ್ ಖಾನ್ ಅವರ ಬದಲಿ ಫೀಲ್ಡರ್ ಆಗಿ ಸಚಿನ್ ರನ್ನು ಪಾಕ್ ಪರ ಮೈದಾನಕ್ಕೆ ಕಳುಹಿಸಿಕೊಡಲಾಗಿತ್ತು. ಈ ಪಂದ್ಯದಲ್ಲಿ ಅವರು ಲಾಂಗ್ ಆನ್ ನಲ್ಲಿ 25 ನಿಮಿಷಕ್ಕೂ ಹೆಚ್ಚು ಸಮಯ ಫೀಲ್ಡಿಂಗ್ ನಡೆಸಿ ಕ್ಯಾಚ್ ಸಹ ಪಡೆದಿದ್ದರು. ಈ ವೇಳೆಗೆ 16 ವರ್ಷದ ಸಚಿನ್ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರಲಿಲ್ಲ.

    ಈ ಘಟನೆಗಳನ್ನು ತಮ್ಮ ಪುಸ್ತಕದಲ್ಲಿ ಮೆಲುಕು ಹಾಕಿರುವ ಸಚಿನ್ ಇಮ್ರಾನ್ ಖಾನ್ ಅವರಿಗೆ ಈ ಆಟದ ವಿಚಾರ ನೆನಪನ್ನು ಹೊಂದಿದ್ದಾರೆಯೇ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ 1996 ರ ಆಕ್ಟೋಬರ್ 4 ರಂದು ಪಾಕ್ ಆಟಗಾರ ಶಹೀದ್ ಆಫ್ರಿದಿ ಸಚಿನ್ ಬ್ಯಾಟ್ ಪಡೆದು ಕೇವಲ 37 ಎಸೆಗಳಲ್ಲಿ ಶತಕ ಸಿಡಿಸಿದ್ದರು. ಇದನ್ನೂ ಓದಿ: ಹುಟ್ಟುಹಬ್ಬದ ದಿನದಂದೇ ಆಸ್ಟ್ರೇಲಿಯಾ ಕ್ರಿಕೆಟ್‍ನಿಂದ ಸಚಿನ್‍ಗೆ ಅವಮಾನ!

  • 6 ಪದಗಳಿಂದಾಗಿ ಬಚಾವ್ ಆದ್ರು ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್!

    6 ಪದಗಳಿಂದಾಗಿ ಬಚಾವ್ ಆದ್ರು ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್!

    ಸಿಡ್ನಿ: ಆಸೀಸ್ ಆಟಗಾರರು ಚೆಂಡು ವಿರೂಪಗೊಳಿಸಿ ಸಿಕ್ಕಿ ಬಿದ್ದ ಸಮಯದಲ್ಲಿ ಕೋಚ್ ಡ್ಯಾರೆನ್ ಲೆಹ್ಮನ್ ಆಡಿದ ಆರು ಪದಗಳು ಅವರನ್ನು ಈಗ ಉಳಿಸಿದೆ.

    ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಆಸೀಸ್ ಆರಂಭಿಕ ಆಟಗಾರ ಬ್ಯಾನ್ ಕ್ರಾಫ್ಟ್ ಚೆಂಡು ವಿರೂಪಗೊಳಿಸುತ್ತಿರುವ ವೇಳೆ ಕ್ಯಾಮೆರಾದ ಕಣ್ಣಿಗೆ ಸಿಕ್ಕಿ ಬಿದ್ದಿದ್ದರು. ಇದನ್ನು ನೋಡಿದ ಡ್ಯಾರೆನ್ ಲೆಹ್ಮನ್ ವಾಕಿಟಾಕಿಯಲ್ಲಿ ‘What the f*** is going on?’ ಎಂದು ಮೈದಾನದಲ್ಲಿದ್ದ 12ನೇ ಆಟಗಾರರನ್ನು ಪ್ರಶ್ನಿಸಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಜೇಮ್ಸ್ ಸುಂದರ್ಲ್ಯಾಂಡ್  ಪ್ರಕರಣದಲ್ಲಿ ಕೋಚ್ ಲೆಹ್ಮನ್ ಅವರ ಪಾತ್ರದ ಕುರಿತು ಘಟನೆ ವೇಳೆ ಅವರು ವಾಕಿಟಾಕಿ ನಡೆಸಿದ್ದ ಸಂಭಾಷಣೆ ಪ್ರಮುಖ ಸಾಕ್ಷಿಯಾಗಿದೆ. ಇದು ಅವರನ್ನು ಪ್ರಕರಣದ ಶಿಕ್ಷೆಯಿಂದ ಕಾಪಾಡಿದೆ ಎಂದು ತಿಳಿಸಿದ್ದಾರೆ.

    ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಬುಧವಾರ ನಾಯಕ ಸ್ಮಿತ್, ಉಪನಾಯಕ ವಾರ್ನರ್ ಗೆ ಒಂದು ವರ್ಷ ಹಾಗೂ ಆರಂಭಿಕ ಆಟಗಾರ ಬ್ಯಾನ್ ಕ್ರಾಫ್ಟ್ ಗೆ 9 ತಿಂಗಳು ಶಿಕ್ಷೆ ವಿಧಿಸಿತ್ತು. ಆದರೆ ಕೋಚ್ ಲೆಹ್ಮನ್ ಗೆ ತಮ್ಮ ಸ್ಥಾನದಲ್ಲಿ ಮುಂದುವರೆಲು ಸೂಚಿಸಿದೆ.

    ಪ್ರಕರಣದ ತನಿಖೆ ನಡೆಸಿದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನೇಮಿಸಿದ್ದ ಸಮಿತಿಯ ಮುಖ್ಯಸ್ಥ ಇಯಾನ್ ರಾಯ್ ಸತ್ಯಾಂಶವನ್ನು ಹೊರ ತಂದಿದ್ದಾರೆ. ಪ್ರಕರಣದಲ್ಲಿ ಕೋಚ್ ಲೆಹ್ಮನ್ ಪಾತ್ರವಹಿಸಿಲ್ಲ ಹಾಗೂ ಈ ಕುರಿತು ತಿಳಿದಿಲ್ಲ ಎಂಬುದು ತಮಗೆ ತೃಪ್ತಿ ತಂದಿದೆ ಎಂದು ಸುಂದರ್ಲ್ಯಾಂಡ್ ಹೇಳಿದ್ದಾರೆ.

    ಇದೇ ವೇಳೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆಟಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದಾಗಿ ತಿಳಿಸಿದ ಅವರು, ತಮ್ಮ ಕೃತ್ಯದ ಕುರಿತು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಚೆಂಡು ವಿರೂಪಗೊಳಿಸಿದ ಆಸೀಸ್ ಕಳ್ಳಾಟ ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ!

    ಬಿಸಿಸಿಐ ಸ್ಮಿತ್ ಹಾಗೂ ವಾರ್ನರ್ ಐಪಿಎಲ್ ನಲ್ಲಿ ಭಾಗವಹಿಸಿದಂತೆ ಒಂದು ವರ್ಷ ನಿಷೇಧ ವಿಧಿಸಿದೆ. ಇದರೊಂದಿಗೆ ಕಳ್ಳಾಟದ ನಡೆಸಿದ ಪರಿಣಾಮವಾಗಿ ಇಬ್ಬರು ಆಟಗಾರರು ಸುಮಾರು 13 ಕೋಟಿ ರೂ. ಮೊತ್ತದ ಒಪ್ಪಂದಗಳನ್ನು ಕಳೆದು ಕೊಂಡಿದ್ದಾರೆ. ಇದನ್ನೂ ಓದಿ: ಆಟಗಾರರ ಕಳ್ಳಾಟಕ್ಕೆ ಭಾರೀ ಮೊತ್ತದ ಪ್ರಾಯೋಜಕತ್ವವನ್ನು ಕಳೆದುಕೊಂಡಿತು ಆಸ್ಟ್ರೇಲಿಯಾ!

  • ಕೊಹ್ಲಿ ಅಬ್ಬರಕ್ಕೆ ಆಫ್ರಿಕಾ ಬೌಲರ್ ಗಳು ಸುಸ್ತು- ಡರ್ಬನ್ ನಲ್ಲಿ ಗೆಲುವಿನ ಖಾತೆ ತೆರೆದ ಬ್ಲೂಬಾಯ್ಸ್

    ಕೊಹ್ಲಿ ಅಬ್ಬರಕ್ಕೆ ಆಫ್ರಿಕಾ ಬೌಲರ್ ಗಳು ಸುಸ್ತು- ಡರ್ಬನ್ ನಲ್ಲಿ ಗೆಲುವಿನ ಖಾತೆ ತೆರೆದ ಬ್ಲೂಬಾಯ್ಸ್

    ಡರ್ಬನ್: ಟೆಸ್ಟ್ ಸರಣಿ ಸೋಲಿನ ನಿರಾಸೆಯಿಂದ ಹೊರಬಂದು ಕೆಚ್ಚೆದೆಯ ಆಟವಾಡಿದ ಪ್ರವಾಸಿ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್‍ಗಳಿಂದ ಗೆದ್ದು ಬೀಗಿದೆ.

    ಡರ್ಬನ್‍ನ ಕಿಂಗ್ಸ್ ಮೇಡ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ನೀಡಿದ್ದ 270 ರನ್‍ಗಳ ಸವಾಲಿನ ಗುರಿಯನ್ನು 45.3 ಓವರ್‍ಗಳಲ್ಲಿ 4ವಿಕೆಟ್ ನಷ್ಟದಲ್ಲಿ ಚೇಸ್ ಮಾಡಿದ ಭಾರತ ಸರಣಿಯಲ್ಲಿ ಶುಭಾರಂಭ ಮಾಡಿದೆ. ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ – ಧವನ್ ಜೋಡಿ 33 ರನ್ ಗಳಿಸುವಷ್ಟರಲ್ಲಿಯೇ ಬೇರ್ಪಟ್ಟಿತ್ತು. ಶರ್ಮಾ 20 ರನ್‍ಗಳಿಸಿ ಔಟಾದರೆ 35 ರನ್‍ಗಳಿಸಿ ಆಡುತ್ತಿದ್ದ ಧವನ್ ರನೌಟ್‍ಗೆ ಬಲಿಯಾದರು. ಬಳಿಕ ಜೊತೆಯಾದ ನಾಯಕ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಮೂರನೇ ವಿಕೆಟ್‍ಗೆ 189ರನ್‍ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.

    105 ಎಸೆತಗಳಲ್ಲಿ 9 ಬೌಂಡರಿಗಳಿಂದ ವೃತ್ತಿ ಜೀವನದ 33ನೇ ಶತಕ ದಾಖಲಿಸಿದ ಕೊಹ್ಲಿ, ಆಫ್ರಿಕಾ ಬೌಲರ್‍ಗಳ ಬೆವರಿಳಿಸಿದರು. ಚೇಸಿಂಗ್ ವೇಳೆ 20ನೇ ಶತಕ ಸಿಡಿಸಿz ಕೊಹ್ಲಿ ಬ್ಯಾಟಿಂಗ್‍ನಲ್ಲಿ ಮತ್ತೊಮ್ಮೆ ಕಮಾಲ್ ಮಾಡಿದರು. ವಿದೇಶಗಳಲ್ಲಿ ಕೊಹ್ಲಿ ಗಳಿಸಿದ 19ನೇ ಶತಕ ಇದಾಗಿದ್ದು, ಆಫ್ರಿಕಾದಲ್ಲಿ ಇದೇ ಮೊದಲ ಬಾರಿ ಶತಕದ ಸಂಭ್ರಮವನ್ನಾಚರಿಸಿದರು. 119 ಎಸೆತಗಳಿಂದ 112 ರನ್‍ಗಳಿಸಿ ಗೆಲುವಿನ ಸನಿಹದಲ್ಲಿ ರಬಾಡಾಗೆ ಕ್ಯಾಚಿತ್ತು ನಿರ್ಗಮಿಸಿದರು. ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಅಜಿಂಕ್ಯಾ ರಹಾನೆ 86 ಎಸೆತಗಳಿಂದ 5 ಬೌಂಡರಿ ಹಾಗೂ 2 ಸಿಕ್ಸರ್‍ಗಳ ನೆರವಿನಿಂದ ಆಕರ್ಷಕ 79 ರನ್‍ಗಳಿಸಿ ಫೆಲುಕ್ವಾಯೊಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಮಹೇಂದ್ರ ಸಿಂಗ್ ಧೋನಿ 4 ಹಾಗೂ ಪಾಂಡ್ಯಾ 3 ರನ್‍ಗಳಿಸಿ ಗೆಲುವಿನ ಸಂಭ್ರವನ್ನಾಚರಿಸಿದರು.

    ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಹರಿಣಗಳು ನಾಯಕ ಡುಪ್ಲೆಸ್ಸಿಸ್ ಶತಕದ ನೆರವಿನಿಂದ 8 ವಿಕೆಟ್ ನಷ್ಟದಲ್ಲಿ 269ರನ್‍ಗಳಿಸಿತ್ತು. 34 ರನ್ ಗಳಿಸಿದ್ದ ಡಿ ಕಾಕ್‍ರನ್ನು ಎಲ್‍ಬಿಡಬ್ಲ್ಯೂ ಬಲೆಯಲ್ಲಿ ಕೆಡವಿದ ಸ್ಪಿನ್ನರ್ ಚಾಹಲ್ ಆಫ್ರಿಕಾಗೆ ಶಾಕ್ ನೀಡಿದ್ದರು. ಮಾರ್ಕ್ ರಮ್ (9), ಜೆಪಿ ಡ್ಯುಮಿನಿ (12), ಡೇವಿಡ್ ಮಿಲ್ಲರ್ (7) ರನ್‍ಗಳಿಸುವಷ್ಟರಲ್ಲೇ ಪೆವಿಲಿಯನ್ ಸೇರಿದ್ದರು. ಆದರೆ ಇನ್ನೊಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ನಾಯಕ ಡು ಪ್ಲೆಸಿಸ್ ಮಾತ್ರ ಏಕಾಂಗಿಯಾಗಿ ಹೋರಾಟ ಚಾಲ್ತಿಯಲ್ಲಿರಿಸಿದ್ದರು.

    ವೃತ್ತಿ ಜೀವನದ 117ನೇ ಏಕದಿನ ಪಂದ್ಯದಲ್ಲಿ 9ನೇ ಶತಕ ಬಾರಿಸಿದ ಡು ಪ್ಲೆಸಿಸ್ ತವರಿನ ಅಭಿಮಾನಿಗಳನ್ನು ರಂಜಿಸಿದರು. ಅಂತಿಮ ಓವರ್ ವರೆಗೂ ಕ್ರೀಸ್ ಆಕ್ರಮಿಸಿಕೊಂಡಿದ್ದ ಹರಿಣಗಳ ನಾಯಕ, 112 ಎಸೆತಗಳೆದುರು 11 ಬೌಂಡರಿ ಹಾಗೂ 2 ಸಿಕ್ಸರ್‍ಗಳನ್ನು ಒಳಗೊಂಡ 120 ರನ್‍ಗಳಿಸಿ ಆಫ್ರಿಕಾದ ಮಾನ ಕಾಪಾಡಿದರು. ಶತಕ ಪೂರ್ತಿಗೊಳಿಸಲು ಡು ಪ್ಲೆಸಿಸ್ ಎದುರಿಸಿದ್ದು 101 ಎಸೆತ. ಕೊನೆಯಲ್ಲಿ ಅಬ್ಬರಿಸಿದ ಆಲ್‍ರೌಡರ್ ಕ್ರಿಸ್ ಮಾರಿಸ್ 37 ಹಾಗೂ ಬೌಲರ್ ಫೆಲುಕ್ವಾಯೊ 27 ರನ್‍ಗಳಿಸಿದರು. 6ನೇ ವಿಕೆಟ್ ಜತೆಯಾಟದಲ್ಲಿ 74 ರನ್ ಗಳಿಸಿದ್ದರಿಂದ ಆಫ್ರಿಕಾದ ಮೊತ್ತ 250 ದಾಟಿತು. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಡರ್ಬನ್‍ನಲ್ಲಿ ಸೋಲಿನ ಸರಪಳಿ ಕಳಚಿತು. ಈ ಹಿಂದೆ ಇದೇ ಮೈದಾನದಲ್ಲಿ ಆಡಿದ್ದ 7 ಪಂದ್ಯಗಳಲ್ಲಿ 6 ರಲ್ಲೂ ಭಾರತ ಸೋಲನುಭವಿಸಿತ್ತು.

    ಉಳಿದ ಒಂದು ಪಂದ್ಯ ಫಲಿತಾಂಶ ಕಾಣದೆ ರದ್ದಾಗಿತ್ತು. ಮತ್ತೊಂದೆಡೆ ತನ್ನ ನೆಲದಲ್ಲಿ ಸೋಲರಿಯದ ಸರದಾರನಂತೆ ಮೆರೆಯುತ್ತಿದ್ದ ಆಫ್ರಿಕದ ಗೆಲುವಿನ ಯಾತ್ರೆಗೂ ಕೊಹ್ಲಿ ಬಾಯ್ಸ್ ಬ್ರೇಕ್ ಹಾಕಿದೆ. ಸತತ 17 ಏಕದಿನ ಪಂದ್ಯಗಳಲ್ಲಿ ಗೆದ್ದು ಬೀಗುತ್ತಿದ್ದ ಹರಿಣಗಳಿಗೆ ಈಗ ಸೋಲಿನ ರುಚಿ ತೋರಿಸಿರುವ ಟೀಮ್ ಇಂಡಿಯಾ ಟೆಸ್ಟ್ ಸರಣಿಯ ಸೋಲಿಗೆ ಮೊದಲನೇ ಏಕದಿನ ಪಂದ್ಯದಲ್ಲೇ ಸೇಡು ತೀರಿಸಿಕೊಂಡಿದೆ.

    6 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯ ಸೆಂಚೂರಿಯನ್‍ನ ಸೂಪರ್ ಸ್ಪೋರ್ಟ್ಸ್  ಪಾರ್ಕ್‍ನಲ್ಲಿ ಭಾನುವಾರ ನಡೆಯಲಿದೆ.

  • ಧೋನಿಯನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದ ಕೊಹ್ಲಿ

    ಧೋನಿಯನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದ ಕೊಹ್ಲಿ

    ನವದೆಹಲಿ: ಟೆಸ್ಟ್ ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ನಾಯಕನಾಗಿ ಅತೀ ಹೆಚ್ಚು ರನ್ ಗಳಿಸಿದ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಅಂತಿಮ ಹಾಗೂ ಮೂರನೇ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ವೇಳೆ 41 ಗಳಿಸಿದ ಕೊಹ್ಲಿ ನಾಯಕರಾಗಿ 3456 ರನ್ ಪೂರ್ಣಗೊಳಿಸಿ ಧೋನಿ ದಾಖಲೆಯನ್ನು ಮುರಿದರು.

    ಧೋನಿ ತಂಡದ ನಾಯಕರಾಗಿ 60 ಪಂದ್ಯಗಳಲ್ಲಿ 3454 ರನ್ ಗಳಿಸಿದ್ದರೆ ಕೊಹ್ಲಿ ಕೇವಲ 35 ಪಂದ್ಯಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಈ ಹಿಂದೆ ಸುನೀಲ್ ಗವಾಸ್ಕರ್ 47 ಟೆಸ್ಟ್ ಪಂದ್ಯಗಳಿಂದ 3449 ರನ್ ಗಳಿಸಿದ್ದರು.

    ಭಾರತದ ಪರ ನಂತರದ ಸ್ಥಾನದಲ್ಲಿ ಮಾಜಿ ನಾಯಕರಾದ ಅಜರುದ್ದೀನ್ ಮತ್ತು ಸೌರವ್ ಗಂಗೂಲಿ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನವನ್ನು ಪಡೆದಿದ್ದಾರೆ. ಅಜರುದ್ದೀನ್ 47 ಟೆಸ್ಟ್ ಗಳಿಂದ 2856 ರನ್ ಮತ್ತು ಗಂಗೂಲಿ 49 ಪಂದ್ಯಗಳಲ್ಲಿ 2561 ರನ್ ಗಳಿಸಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಆಗಿದ್ದ ವೃದ್ಧಿಮಾನ್ ಸಹಾ ಟೆಸ್ಟ್ ಪಂದ್ಯವೊಂದರಲ್ಲಿ 10 ಕ್ಯಾಚ್ ಪಡೆಯುವ ಮೂಲಕ ಅತೀ ಹೆಚ್ಚು ಆಟಗಾರರು ಔಟ್ ಮಾಡಿದ ದಾಖಲೆಯನ್ನು ನಿರ್ಮಿಸಿದ್ದರು. ಈ ಹಿಂದೆ 2014 ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ 09 ಆಟಗಾರರನ್ನು ಔಟ್ ಮಾಡುವ ಮೂಲಕ ದಾಖಲೆ ಬರೆದಿದ್ದರು.

    ಕೊಹ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ ಬಳಿಕ ಅಡಿದ 34 ಪಂದ್ಯಗಳಿಂದ 20 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಈ ಪಂದ್ಯದಲ್ಲಿ ಕೊಹ್ಲಿ 41 ರನ್(79 ಎಸೆತ, 6 ಬೌಂಡರಿ) ಹೊಡೆದು ಔಟಾದರು.

    ಗೆಲುವಿಗೆ 241 ರನ್ ಗುರಿ:
    ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 247 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾ ಗೆಲುವಿಗೆ 241 ರನ್ ಗಳ ಗುರಿಯನ್ನು ನೀಡಿದೆ. ಅಜಿಂಕ್ಯಾ ರಹಾನೆ 48 ರನ್, ಭುವನೇಶ್ವರ್ ಕುಮಾರ್ 33, ಮೊಹಮ್ಮದ್ ಶಮಿ 27 ರನ್ ಗಳಿಸಿ ಔಟಾದರು. ಅಂತಿಮವಾಗಿ ಭಾರತ 80.1 ಓವರ್ ಗಳಲ್ಲಿ ಆಲೌಟ್ ಆಯ್ತು.


     

  • ಹಾರ್ದಿಕ್ ಪಾಂಡ್ಯರನ್ನು ನನಗೆ ಹೋಲಿಕೆ ಮಾಡಬೇಡಿ: ಕಪಿಲ್ ದೇವ್

    ಹಾರ್ದಿಕ್ ಪಾಂಡ್ಯರನ್ನು ನನಗೆ ಹೋಲಿಕೆ ಮಾಡಬೇಡಿ: ಕಪಿಲ್ ದೇವ್

    ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನೀರಸ ಪ್ರದರ್ಶನ ತೋರಿದ ನಂತರ ಹಲವು ಹಿರಿಯ ಆಟಗಾರರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಯುವ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯರನ್ನು ನನಗೆ ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ.

    ಈ ಕುರಿತು ಖಾಸಗಿ ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯೆ ನೀಡಿದ ಅವರು, ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಪಾಂಡ್ಯ ಸಿಲ್ಲಿ ತಪ್ಪುಗಳನ್ನು ಎಸಗುತ್ತಿದ್ದಾರೆ. ಹೀಗಾಗಿ ನನ್ನ ಜೊತೆ ಹೋಲಿಕೆ ಮಾಡಲು ಪಾಂಡ್ಯ ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದು ತಿಳಿಸಿದರು.

    ಯುವ ಆಟಗಾರ ಪಾಂಡ್ಯ ಉತ್ತಮ ಪ್ರತಿಭೆಯನ್ನು ಹೊಂದಿದ್ದಾರೆ. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದ್ದಾರೆ. ಆದರೆ ಅವರು ಮೈದಾನದಲ್ಲಿ ಮಾನಸಿಕವಾಗಿ ಸದೃಢಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

    ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಯಕ ಕೊಹ್ಲಿ ಅವರಿಗೆ ಉತ್ತಮವಾಗಿ ಸಾಥ್ ನೀಡುತ್ತಿದ್ದ ಪಾಂಡ್ಯ ಅತಿಯಾದ ಆತ್ಮವಿಶ್ವಾಸದಿಂದ ರನೌಟ್ ಆದರು. ನಂತರ ಇದೇ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲೂ ಅನಾವಶ್ಯಕ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದ್ದರು.

    ಗೆಲ್ಲಲು 287 ರನ್ ಗುರಿ ಪಡೆದ ಭಾರತ ಲುಂಗಿ ಎನ್‍ಗಿಡಿ ಬೌಲಿಂಗ್ ತತ್ತರಿಸಿ ಕೇವಲ 151 ರನ್ ಗಳಿಗೆ ಆಲೌಟ್ ಆಯ್ತು. ಎರಡನೆ ಪಂದ್ಯವನ್ನು 135 ರನ್ ಗಳಿಂದ ಆಫ್ರಿಕಾ ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿತು.

    ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಪಾಂಡ್ಯ ಬ್ಯಾಟಿಂಗ್ ಮಾಡಲು ಬಂದಾಗ ಟೀಂ ಇಂಡಿಯಾ ಐದು ವಿಕೆಟ್ ಕಳೆದು ಕೊಂಡು 65 ರನ್ ಗಳಿಸಿತ್ತು. ಈ ವೇಳೆ ಲುಂಗಿ ಎನ್‍ಗಿಡಿ ಅವರ ಬೌಲಿಂಗ್ ನಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿ ಔಟ್ ಆದರು.

    ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದ ನಂತರ ಉತ್ತಮ ಪ್ರದರ್ಶನ ನೀಡಿದ್ದ ಪಾಂಡ್ಯರನ್ನು, ಭಾರತದ ತಂಡದ ಮಾಜಿ ಅಲ್‍ರೌಂಡರ್ ಕಪಿಲ್ ದೇವ್ ಅವರಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಕುರಿತು ಸಂದೀಪ್ ಪಾಟೇಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ನಾನು ಕಪಿಲ್ ಅವರ ಜೊತೆ ಹಲವು ಪಂದ್ಯಗಳನ್ನು ಆಡಿದ್ದೇನೆ. ಕಪಿಲ್ ಟೀಂ ಇಂಡಿಯಾ ಪರ 15 ವರ್ಷಗಳ ಕಾಲ ಆಡಿದ್ದಾರೆ. ಪಾಂಡ್ಯ ಅವರ ವೃತ್ತಿ ಜೀವನದ ಆರಂಭದಲ್ಲಿದ್ದಾರೆ. ಅವರು ಇನ್ನು ಬಹಳ ದಿನಗಳ ಕಾಲ ಕ್ರಿಕೆಟ್ ಆಡಬೇಕಿದೆ. ಹೀಗಾಗಿ ಅವರನ್ನು ಕಪಿಲ್ ದೇವ್ ಆವರಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

  • ಲಂಕಾ ಆಟಗಾರರ ಹೈಡ್ರಾಮಾಗೆ ಕೊಹ್ಲಿ ಟಾಂಗ್ ಕೊಟ್ಟ ವಿಡಿಯೋ ವೈರಲ್

    ಲಂಕಾ ಆಟಗಾರರ ಹೈಡ್ರಾಮಾಗೆ ಕೊಹ್ಲಿ ಟಾಂಗ್ ಕೊಟ್ಟ ವಿಡಿಯೋ ವೈರಲ್

    ನವದೆಹಲಿ: ಭಾರತ-ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಶ್ರೀಲಂಕಾ ಆಟಗಾರರು ಮಾಲಿನ್ಯ ಕಾರಣ ನೀಡಿ ಆಟಕ್ಕೆ ತಡೆ ಮಾಡಿರುವುದು ಅಂತರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪಂದ್ಯದ ವೇಳೆ ಲಂಕಾ ಆಟಗಾರರು ತೋರಿದ ವರ್ತನೆಗೆ ಟೀಂ ಇಂಡಿಯಾ ನಾಯಕ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿರುವ ವಿಡಿಯೋ ವೈರಲ್ ಆಗಿದೆ.

    ಪಂದ್ಯದ ಎರಡನೇ ದಿನವಾದ ಭಾನುವಾರ ಮಧ್ಯಾಹ್ನದ ವಿರಾಮದ ವೇಳೆ ಮಾಸ್ಕ್ ಧರಿಸಿ ಮೈದಾನಕ್ಕೆ ಬಂದ ಲಂಕಾ ಆಟಗಾರರು ವಾತಾವರಣದಲ್ಲಿ ಹೆಚ್ಚಿನ ವಾಯಮಾಲಿನ್ಯ ಇದ್ದು, ಪಂದ್ಯವನ್ನು ಸ್ಥಗಿತಗೊಳಿಸಲು ಅಂಪೈರ್ ಗೆ ಮನವಿ ಮಾಡಿದ್ದರು. ಈ ವೇಳೆ ದ್ವಿಶತಕ ಸಿಡಿಸಿ ದಾಖಲೆ ಸೃಷ್ಟಿಸಿದ್ದ ಕೊಹ್ಲಿ ಲಂಕಾ ಆಟಗಾರರ ವರ್ತನೆ ಬೇಸರಗೊಂಡರು.

    ಅಂಪೈರ್ ಗಳ ನಿರ್ಧಾರದಂತೆ ಪಂದ್ಯ ಮುಂದುವರಿಸಿದರೂ ಪಂದ್ಯದ 123ನೇ ಹಾಗೂ 127ನೇ ಓವರ್‍ನಲ್ಲಿ ಬೌಲಿಂಗ್ ಮಾಡುತ್ತಿದ್ದ ಲಂಕಾ ವೇಗಿಗಳಾದ ಲಹಿರು ಗಮನೆ ಹಾಗೂ ಲಕ್ಮಲ್ ಮೈದಾನದಿಂದ ಹೊರ ನಡೆದರು. ಇದರಿಂದಾಗಿ ಲಂಕಾ ತಂಡದಲ್ಲಿ ಓರ್ವ ಆಟಗಾರನ ಕೊರತೆ ಎದುರಾಯಿತು. ಈ ವೇಳೆ ಪದೇ ಪದೇ ಅಂಪೈರ್ ಬಳಿ ತೆರಳಿದ ಲಂಕಾ ನಾಯಕ ದಿನೇಶ್ ಚಂಡಿಮಾಲ್ ಪಂದ್ಯಕ್ಕೆ ಅಡ್ಡಿ ಪಡಿಸಿ ಚರ್ಚೆ ನಡೆಸಿದರು. ಅಲ್ಲದೇ ಎರಡು ತಂಡದ ಕೋಚ್ ಗಳು ಆನ್ ಫೀಲ್ಡ್‍ನಲ್ಲಿದ್ದ ಆಂಪೈರ್ ಗಳಾದ ನಿಗೆಲ್ ಲಾಂಗ್ ಮತ್ತು ಜೋಯಲ್ ವಿಲ್ಸನ್ಸ್ ಅವರ ಬಳಿ ಬಂದು ಸಮಾಲೋಚನೆ ನಡೆಸಿದರು. ನಂತರ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಮೈದಾನದಿಂದ ಹೋರ ನಡೆಯುತ್ತಿದಂತೆ ನಾಯಕ ವಿರಾಟ್ ಕೊಹ್ಲಿ 7 ವಿಕೆಟ್ ನಷ್ಟಕ್ಕೆ 536 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ನಿರ್ಧಾರ ಪ್ರಕಟಿಸಿದರು. ಇದನ್ನೂ ಓದಿ:  ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ!

    ಟೀಂ ಇಂಡಿಯಾ ಇನ್ನಿಂಗ್ಸ್ ಡಿಕ್ಲೇರ್ ನಿರ್ಧಾರ ಪ್ರಕಟಿಸಿದ ನಂತರ ಮೈದಾನಕ್ಕೆ ಇಳಿದ ಕೊಹ್ಲಿ ಬಾಯ್ಸ್ ಮಾಸ್ಕ್ ಧರಿಸದೇ ಬೌಲಿಂಗ್ ಮಾಡಿ ಆಟ ಮುಂದುವರೆಸಿದರು. 140 ವರ್ಷಗಳ ಕ್ರೀಡಾ ಇತಿಹಾಸದಲ್ಲಿ ಇಂತಹ ಘಟನೆ ಇದೇ ಮೊದಲ ಬಾರಿ ನಡೆದಿದ್ದು, ಲಂಕಾ ಆಟಗಾರರ ವರ್ತನೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಹಿನ್ನೆಲೆಯಲ್ಲಿ ಲಂಕಾ ಆಟಗಾರರು ಪೆವಿಲಿಯನ್ ಹೋಗುತ್ತಿದ್ದಾಗ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು “ಲೂಸರ್ಸ್, ಲೂಸರ್ಸ್” ಎಂದು ಕರೆದು ಚೇಡಿಸುತ್ತಿದ್ದರು.

    ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ರೋಚಕ ಡ್ರಾ ಗೊಂಡರೆ, ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ದಾಖಲೆಯ ಜಯ ಗಳಿಸುವ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೇ ಸಾಧಿಸಿದ್ದು, ಮೂರನೇ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಸರಣಿ ಜಯಿಸುವ ಗುರಿ ಹೊಂದಿದೆ.

    https://twitter.com/Im_Virat_Kohli/status/937233820205461504