Tag: test

  • ಇಂಗ್ಲೆಂಡ್ ಟೆಸ್ಟ್: ಫೈನಲ್ ಟೆಸ್ಟ್ ಪಂದ್ಯಗಳಿಗೆ ಪೃಥ್ವಿ ಶಾ, ವಿಹಾರಿಗೆ ಅವಕಾಶ

    ಇಂಗ್ಲೆಂಡ್ ಟೆಸ್ಟ್: ಫೈನಲ್ ಟೆಸ್ಟ್ ಪಂದ್ಯಗಳಿಗೆ ಪೃಥ್ವಿ ಶಾ, ವಿಹಾರಿಗೆ ಅವಕಾಶ

    – ಆರಂಭಿಕ ಮುರಳಿ ವಿಜಯ್, ಕುಲ್‍ದೀಪ್‍ಗೆ ಕೊಕ್

    ಮುಂಬೈ: ಇಂಗ್ಲೆಂಡ್ ವಿರುದ್ಧದ ಅಂತಿಮ 2 ಟೆಸ್ಟ್ ಪಂದ್ಯಗಳಿಗೆ ಆರಂಭಿಕ ಆಟಗಾರ ಮುರಳಿ ವಿಜಯ್ ಹಾಗೂ ಕುಲ್ ದೀಪ್ ಯಾದವ್ ಅವರಿಗೆ ಕೊಕ್ ನೀಡಲಾಗಿದೆ.

    ಬಿಸಿಸಿಐ ಈ ಕುರಿತು ತನ್ನ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, 18 ವರ್ಷದ ಪೃಥ್ವಿ ಶಾ ಹಾಗೂ 24 ವರ್ಷದ ಹನುಮ ವಿಹಾರಿ ಆಯ್ಕೆ ಖಚಿತ ಪಡಿಸಿದೆ. ಇಂಗ್ಲೆಂಡ್ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಪೃಥ್ವಿ ಶಾ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಅಲ್ಲದೇ ದೇಶಕ್ಕೆ ವಿಶ್ವಕಪ್ ಗೆದ್ದು ತಂದು ಗೌರವ ಹೆಚ್ಚಿಸಿದ್ದರು.

    ಪೃಥ್ವಿ ಶಾ ಟೀಂ ಇಂಡಿಯಾ ಅಂಡರ್ 19 ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ ಆಟಗಾರರಾಗಿದ್ದು, ಹಲವು ಸ್ಟಾರ್ ಆಟಗಾರರ ಮನ ಗೆದ್ದಿದ್ದರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪೃಥ್ವಿ ಶಾ 56.72 ಸರಾಸರಿಯಲ್ಲಿ ರನ್ ಗಳಿಸಿದ್ದು, 7 ಶತಕ, 5 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೇ ಭಾರತ ಎ ತಂಡದ ಆರಂಭಿಕನಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ದುಲೀಪ್ ಟ್ರೋಫಿ ಟೂರ್ನಿಯ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ್ದ ಶಾ, ಟೂರ್ನಿಯಲ್ಲಿ ಶತಕ ಸಿಡಿಸಿದ ಕಿರಿಯ ವಯಸ್ಸಿನ ಆಟಗಾರ ಎಂಬ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದರು.

    ವಿಹಾರಿ ಟೀಂ ಇಂಡಿಯಾ ಎ ತಂಡದಲ್ಲಿ ನಂ.3 ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದು, ಸೌತ್ ಅಫ್ರಿಕಾ ತಂಡದ ವಿರುದ್ಧ ಇದೇ ತಿಂಗಳಲ್ಲಿ ನಡೆದ ಪಂದ್ಯದಲ್ಲಿ 148 ರನ್ ಸಿಡಿಸಿ ಭರ್ಜರಿ ಪ್ರದರ್ಶನ ನೀಡಿದ್ದರು. ಸದ್ಯ ಆಂಧ್ರಪ್ರದೇಶ ರಣಜಿ ತಂಡದ ನಾಯಕರಾಗಿರುವ ವಿಹಾರಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ತಂಡಕ್ಕೆ ಆಯ್ಕೆ ಆಗಿದ್ದಾರೆ.

    ತಂಡ ತಂದಿದೆ:
    ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್. ಇಶಾಂತ್ ಶರ್ಮಾ, ಶಮಿ, ಜಸ್‍ಪ್ರೀತ್ ಬುಮ್ರಾ, ಪೃಥ್ವಿ ಶಾ, ಜಡೇಜಾ, ರವೀಂದ್ರ ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಕರುಣ್ ನಾಯರ್, ದಿನೇಶ್ ಕಾರ್ತಿಕ್, ಹನುಮ ವಿಹಾರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 203 ರನ್‍ಗಳಿಂದ ಗೆದ್ದು ಸೋಲಿಗೆ ಸೇಡು ತೀರಿಸಿಕೊಂಡ ಕೊಹ್ಲಿ ಬಳಗ

    203 ರನ್‍ಗಳಿಂದ ಗೆದ್ದು ಸೋಲಿಗೆ ಸೇಡು ತೀರಿಸಿಕೊಂಡ ಕೊಹ್ಲಿ ಬಳಗ

    ಲಂಡನ್: ನಾಟಿಂಗ್‍ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 203 ರನ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋಲುಂಡು ಭಾರೀ ಟೀಕೆಗೆ ಗುರಿಯಾಗಿದ್ದ ತಂಡ ಸೇಡು ತೀರಿಸಿಕೊಂಡಿದೆ.

    521 ರನ್‍ಗಳ ಬೃಹತ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ನಾಲ್ಕನೇ ದಿನದಾಂತ್ಯಕ್ಕೆ 102 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತ್ತು. ಇಂದು ಆಟ ಮುಂದುವರಿಸಿದ ಇಂಗ್ಲೆಂಡ್ 16 ರನ್ ಸೇರಿಸುವಷ್ಟರಲ್ಲಿ ಅಶ್ವಿನ್, ಆ್ಯಂಡರ್ ಸನ್ ವಿಕಟ್ ಪಡೆದು ತಂಡಕ್ಕೆ ಗೆಲುವಿನ ಸಿಹಿ ನೀಡಿದರು. 2ನೇ ಇನ್ನಿಂಗ್ಸ್ ನಲ್ಲಿ ಅಶ್ವಿನ್ 1 ವಿಕೆಟ್ ಪಡೆದರು. ಜಸ್ ಪ್ರೀತ್ ಬುಮ್ರಾ 29 ಒವರ್ ಗಳಲ್ಲಿ 85 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಇಶಾಂತ್ ಶರ್ಮಾ 2, ಮಹಮ್ಮದ್ ಶಮಿ ಹಾಗೂ ಪಾಂಡ್ಯ ತಲಾ 1 ವಿಕೆಟ್ ಪಡೆದರು.

    ಟೀಂ ಇಂಡಿಯಾ ಬೌಲಿಂಗ್ ದಾಳಿಯನ್ನು ಎದುರಿಸಲು ಭಾರೀ ಹೋರಾಟ ನಡೆಸಿದ ಇಂಗ್ಲೆಂಡ್ ಸ್ಟೋಕ್ಸ್ ಹಾಗೂ ಬಟ್ಲರ್ ಹೋರಾಟ ವ್ಯರ್ಥವಾಯಿತು. ಈ ಜೋಡಿ 2ನೇ ಇನ್ನಿಂಗ್ಸ್ 5ನೇ ವಿಕೆಟ್ ಗೆ 169 ರನ್ ಜೊತೆಯಾಟವಾಡಿದ್ದರು. ಬಳಿಕ ಬಂದ ಬೋರ್ಡ್ ಮತ್ತು ರಷಿದ್ ಜೋಡಿ 8ನೇ ವಿಕೆಟ್ ಗೆ 50 ರನ್ ಜೊತೆಯಾಟ ನೀಡಿತ್ತು. ಆದರೆ ಟೀಂ ಇಂಡಿಯಾ ಪರ ಮಾರಕ ದಾಳಿ ನಡೆಸಿದ ಬುಮ್ರಾ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3ನೇ ಪಂದ್ಯವನ್ನು ಗೆಲುವು ಪಡೆಯುವ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿಸಿದೆ. ಸದ್ಯ ಟೀಂ ಇಂಡಿಯಾ ಟೂರ್ನಿಯ ಇನ್ನುಳಿದ 2 ಪಂದ್ಯಗಳಲ್ಲಿ ಗೆಲುವು ಪಡೆಯುವ ಅನಿವಾರ್ಯತೆಯನ್ನು ಎದುರಿಸುತ್ತಿದೆ.

    ಪಂದ್ಯದ ಬಳಿಕ ಮಾತನಾಡಿದ ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಗೆಲುವನ್ನು ಕೇರಳ ಪ್ರವಾಹ ಪೀಡಿದ ಸಂತ್ರಸ್ತರಿಗೆ ಅರ್ಪಿಸುವುದಾಗಿ ತಿಳಿಸಿದರು.

    ಸಂಕ್ಷೀಪ್ತ ಸ್ಕೋರ್
    ಭಾರತ ಮೊದಲ ಇನ್ನಿಂಗ್ಸ್ 329/10 – 94.5 ಓವರ್
    ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 161/10 – 38.2 ಓವರ್
    ಭಾರತ ಎರಡನೇ ಇನ್ನಿಂಗ್ಸ್ 352/7 ಡಿಕ್ಲೇರ್ – 110 ಓವರ್
    ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 327/10 – 104.5 ಓವರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಟಿಂಗ್ ಹ್ಯಾಮ್ ವಿಜಯ ಘೋಷಕ್ಕೆ ಇನ್ನೊಂದೇ ವಿಕೆಟ್ ಬಾಕಿ

    ನಾಟಿಂಗ್ ಹ್ಯಾಮ್ ವಿಜಯ ಘೋಷಕ್ಕೆ ಇನ್ನೊಂದೇ ವಿಕೆಟ್ ಬಾಕಿ

    – ಒಂದೇ ಪಂದ್ಯದಲ್ಲಿ ರಿಷಭ್, ರಾಹುಲ್ ದಾಖಲೆ

    ಲಂಡನ್: ನಾಟಿಂಗ್ ಹ್ಯಾಮ್‍ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಮೇಲೆ ಭಾರತ ಸಂಪೂರ್ಣ ಹಿಡಿತ ಸಾಧಿಸಿದ್ದು, ಗೆಲುವಿಗೆ ಒಂದು ವಿಕೆಟ್ ಅಷ್ಟೇ ಬಾಕಿ ಇದೆ.

    ಅಂತಿಮ ಇನ್ನಿಂಗ್ಸ್ ನಲ್ಲಿ 521 ರನ್‍ಗಳ ಬೃಹತ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ನಾಲ್ಕನೇ ದಿನದಾಂತ್ಯಕ್ಕೆ 102 ಓವರ್‍ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದೆ. ಅಲ್ಲದೆ ಇನ್ನು ಒಂದು ವಿಕೆಟ್ ಮಾತ್ರ ಬಾಕಿ ಉಳಿದಿರುವಂತೆಯೇ 210 ರನ್ ಗಳಿಸಬೇಕಿದೆ.

    ಪಂದ್ಯದಲ್ಲಿ ಟೀಂ ಇಂಡಿಯಾ ಪರ ರಿಷಬ್, ಕೆಎಲ್ ರಾಹುಲ್ ಹೊಸದೊಂದು ದಾಖಲೆ ಬರೆದಿದ್ದಾರೆ. ಕೆಎಲ್ ರಾಹುಲ್ ಹಾಗೂ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ರಿಷಭ್ ಪಂತ್ ಎರಡೂ ಇನ್ನಿಂಗ್ಸ್ ನಲ್ಲಿ ಕ್ರಮವಾಗಿ 7,6 ಕ್ಯಾಚ್ ಹಿಡಿಯುವ ಮೂಲಕ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. ಇಬ್ಬರ ದಾಖಲೆಯೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಹೊರತಾಗಿ ನಿರ್ಮಾಣವಾಗಿರುವುದು ವಿಶೇಷವಾಗಿದೆ.

    ರಾಹುಲ್ ಮೊದಲ ಇನ್ನಿಂಗ್ಸ್ ನಲ್ಲಿ 3 ಕ್ಯಾಚ್ ಹಾಗೂ 2ನೇ ಇನ್ನಿಂಗ್ಸ್ 4 ಕ್ಯಾಚ್ ಪಡೆದಿದ್ದಾರೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿದ ಆಟಗಾರರಿಗೆ ರಾಹುಲ್ ಸಾಥ್ ನೀಡಿದರು. ಇಂಗ್ಲೆಂಡ್ ವಿರುದ್ಧ ಪಂದ್ಯವೊಂದರಲ್ಲಿ ಟೀಂ ಇಂಡಿಯಾ ಆಟಗಾರರ ಪಡೆದಿರುವ ಅಧಿಕ ಕ್ಯಾಚ್ ಎಂಬ ಹೆಗ್ಗಳಿಕೆಯನ್ನು ರಾಹುಲ್ ಪಡೆದಿದ್ದಾರೆ. ಇದಕ್ಕೂ ಮೊದಲು ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದ ರಿಷಭ್ ಪಂತ್ ಮೊದಲ ಇನ್ನಿಂಗ್ಸ್ ನಲ್ಲಿ 5 ಕ್ಯಾಚ್ ಪಡೆದು ದಾಖಲೆ ನಿರ್ಮಿಸಿದ್ದರು. ಈ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ 29 ಒವರ್ ಗಳಲ್ಲಿ 85 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಇಶಾಂತ್ ಶರ್ಮಾ 2, ಮಹಮ್ಮದ್ ಶಮಿ ಹಾಗೂ ಪಾಂಡ್ಯ ತಲಾ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾದಾರ್ಪಣೆ ಪಂದ್ಯದಲ್ಲೇ ಮತ್ತೊಂದು ಸಾಧನೆ ಮಾಡಿದ ರಿಷಭ್ ಪಂತ್

    ಪಾದಾರ್ಪಣೆ ಪಂದ್ಯದಲ್ಲೇ ಮತ್ತೊಂದು ಸಾಧನೆ ಮಾಡಿದ ರಿಷಭ್ ಪಂತ್

    ಲಂಡನ್: ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ್ದ ರಿಷಭ್ ಪಂತ್ ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ 5 ಕ್ಯಾಚ್ ಪಡೆದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ರಿಷಭ್ ಪಂತ್ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಕುಕ್, ಕೀಟನ್ ಜೆನ್ನಿಂಗ್ಸ್, ಒಲೀ ಪೋಪ್, ಕ್ರಿಸ್ ವೋಕ್ಸ್ ಮತ್ತು ಅದಿಲ್ ರಶೀದ್ ಕ್ಯಾಚ್ ಪಡೆದು ಮಿಂಚಿದರು. ಈ ಹಿಂದೆ ಟೀಂ ಇಂಡಿಯಾದ ನರೇನ್ ತಮ್ಹಾನೆ (1955), ಕಿರಣ್ ಮೋರೆ (1986), ನಮನ್ ಓಜಾ (2015) ತಂಡದ ಪರ ಈ ಸಾಧನೆ ಮಾಡಿದ್ದರು. ಉಳಿದಂತೆ ನಾನಾ ಜೋಶಿ (1951), ಚಂದ್ರಕಾಂತ್ ಪಟಾನ್ಕರ್ (1955) ಪಾದಾರ್ಪಣೆ ಪಂದ್ಯದಲ್ಲಿ 4 ಕ್ಯಾಚ್ ಪಡೆದಿದ್ದರು.

    ವಿಶೇಷವೆಂದರೆ ಪಾದಾರ್ಪಣೆ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ 5 ಕ್ಯಾಚ್ ಪಡೆದ ಮೊದಲ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಯನ್ನು ರಿಷಭ್ ಪಂತ್ ಪಡೆದಿದ್ದಾರೆ. ಇದಕ್ಕೂ ಮುನ್ನ ಪಂದ್ಯದಲ್ಲಿ ರಿಷಭ್ ಎದುರಿಸಿದ 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ರನ್ ಖಾತೆ ತೆರೆದಿದ್ದರು. ಅಲ್ಲದೇ ಸಿಕ್ಸರ್ ಮೂಲಕ ರನ್ ಖಾತೆ ತೆರೆದ ಟೀಂ ಇಂಡಿಯಾ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 51 ಎಸೆತ ಎದುರಿಸಿದ ರಿಷಭ್ ಪಂತ್ 24 ರನ್ ಗಳಿಸಿ ಔಟಾಗಿದ್ದರು.

    ಪಾಂಡ್ಯ 5 ವಿಕೆಟ್: ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಮೊದಲ ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕೇವಲ 29 ಎಸೆತಗಳನ್ನು ಎಸೆದು 5 ವಿಕೆಟ್ ಪಡೆದ ಹಾರ್ದಿಕ್, ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಟೀಂ ಇಂಡಿಯಾ 2ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. 2006 ಹಭರ್ಜನ್ ಸಿಂಗ್ ಸಿಂಗ್ ಕೇವಲ 27 ಎಸೆತಗಳನ್ನು ಹಾಕಿ 5 ವಿಕೆಟ್ ಪಡೆದಿದ್ದರು.

    ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ ಪಾಂಡ್ಯ ಹಲವು ವಿಮರ್ಶೆಗಳನ್ನು ಎದುರಿಸಿದ್ದರು. ಸದ್ಯ ಪಾಂಡ್ಯ ತಮ್ಮ ಬೌಲಿಂಗ್ ಮೂಲಕ ವಿಮರ್ಶಕರಿಗೆ ತಿರುಗೇಟು ನೀಡಿದ್ದಾರೆ. ಪಾಂಡ್ಯ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 161 ರನ್ ಗಳಿಗೆ ಅಲೌಟ್ ಆಯಿತು. ಉಳಿದಂತೆ ಟೀಂ ಇಂಡಿಯಾ ಪರ ಜಸ್‍ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ತಲಾ 2 ವಿಕೆಟ್ ಪಡೆದರು. 2ನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದ್ದು, 292 ರನ್ ಮುನ್ನಡೆ ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಪರ ರಿಷಭ್ ಪಂತ್ ದಾಖಲೆ – ವೀಡಿಯೋ ನೋಡಿ

    ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಪರ ರಿಷಭ್ ಪಂತ್ ದಾಖಲೆ – ವೀಡಿಯೋ ನೋಡಿ

    ಲಂಡನ್: ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿರುವ ರಿಷಭ್ ಪಂತ್, ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಸಿಕ್ಸರ್ ಸಿಡಿಸಿ ರನ್ ಖಾತೆ ತೆರೆದ ಮೊದಲ ಭಾರತದ ಬ್ಯಾಟ್ಸ್ ಮನ್ ಎಂಬ ದಾಖಲೆ ಬರೆದಿದ್ದಾರೆ.

    ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲಿ ಎದುರಿಸಿದ 2ನೇ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ರಿಷಭ್ ಪಂತ್ ಪಡೆದರು. ವಿಶ್ವ ಕ್ರಿಕೆಟ್ ಆಟಗಾರರ ಈ ಪಟ್ಟಿಯಲ್ಲಿ ರಿಷಭ್ 12ನೇ ಆಟಗಾರ ಎನಿಸಿಕೊಂಡಿದ್ದಾರೆ.

    https://twitter.com/1stAxiom/status/1030874179191623680

    ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ನಲ್ಲಿ ದಿನೇಶ್ ಕಾರ್ತಿಕ್ ನೀರಸ ಪ್ರದರ್ಶನ ನೀಡಿದ ಕಾರಣದಿಂದ 20 ವರ್ಷದ ರಿಷಭ್ ಪಂತ್ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ಭಾರತದ 291ನೇ ಟೆಸ್ಟ್ ಆಟಗಾರ ಎನಿಸಿಕೊಂಡರು.

    ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಗೆ 18 ಆಟಗಾರರ ಬೃಹತ್ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ರಿಷಭ್ ಪಂತ್ ಹಾಗೂ ಶಾರ್ದೂಲ್ ಠಾಕೂರ್ ಸ್ಥಾನ ಪಡೆದಿದ್ದರು. ಧೋನಿ ಬಳಿಕ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ನಲ್ಲಿ ಸಮರ್ಥ ಕೀಪರ್ ಹಾಗೂ ಬ್ಯಾಟ್ಸ್ ಮನ್ ಕೊರತೆಯನ್ನು ಎದುರಿಸುತ್ತಿದೆ. ಸದ್ಯ ರಿಷಭ್ ಪಂತ್ ವಿಕೆಟ್ ಕೀಪರ್ ಸ್ಥಾನ ಪಡೆದಿದ್ದು ಉತ್ತಮ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿದ್ದರಾ ಎಂಬುವುದನ್ನು ಕಾದು ನೋಡಬೇಕಿದೆ. ಸದ್ಯ 3ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯದ ವೇಳೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 307 ರನ್ ಗಳಿಸಿದೆ. ರಿಷಭ್ ಪಂತ್ 22 ರನ್ (4 ಬೌಂಡರಿ, 1 ಸಿಕ್ಸರ್) ಸಿಡಿಸಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದಾರೆ.

  • ಟೀಂ ಇಂಡಿಯಾದಲ್ಲಿ ಯಾರ ಸ್ಥಾನವೂ ಖಾಯಂ ಅಲ್ಲ: ಕೊಹ್ಲಿ

    ಟೀಂ ಇಂಡಿಯಾದಲ್ಲಿ ಯಾರ ಸ್ಥಾನವೂ ಖಾಯಂ ಅಲ್ಲ: ಕೊಹ್ಲಿ

    ಲಂಡನ್: ಪಂದ್ಯದಲ್ಲಿ ಜಯಗಳಿಸುವುದು ನಮ್ಮ ಗುರಿ. ಅದ್ದರಿಂದ ಇಲ್ಲಿ ಯಾವುದೇ ಆಟಗಾರರ ವೃತ್ತಿ ಜೀವನ ಮುಖ್ಯವಾಗುವುದಿಲ್ಲ ಎಂದು ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ಕೊಹ್ಲಿ, ತಂಡದ ಆಟಗಾರರ ಸ್ಥಾನದ ಬದಲಾವಣೆ ಕುರಿತು ಕೇಳಿ ಬರುತ್ತಿರುವ ಟೀಕೆಗಳಿಗೆ ಖಡಕ್ ಮಾತಿನ ಮೂಲಕ ಉತ್ತರ ನೀಡಿದ್ದಾರೆ.

    ತಂಡದಲ್ಲಿ ಯಾರು ಶಾಶ್ವತವಾಗಿ ಆಡಲು ಸಾಧ್ಯವಿಲ್ಲ. ಈ ಕುರಿತು ನಾನು ತಂಡದ ಯಾವುದೇ ಆಟಗಾರನ ಭವಿಷ್ಯ ಅಥವಾ ಫಾರ್ಮ್ ಕುರಿತು ಯೋಚನೆ ಮಾಡುತ್ತಿಲ್ಲ. ಆಟಗಾರರ ಸಮಯ ಬಂದಾಗ ಉತ್ತಮ ಪ್ರದರ್ಶನ ನೀಡಬೇಕು. ಅದ್ದರಿಂದ ಇಂತಹ ಆರೋಪಗಳನ್ನು ತಂಡದಿಂದ ಹೊರಗುಳಿದಿರುವವರು ಹೇಳುತ್ತಾರೆ ಎಂದು ತಿಳಿಸಿದರು.

    ಈಗಾಗಲೇ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-2 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದು, ಇಂದು ನಾಟಿಂಗ್ ಹ್ಯಾಮ್ ನಲ್ಲಿ ನಡೆಯುವ 3ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಒತ್ತಡವನ್ನು ಎದುರಿಸುತ್ತಿದೆ. ನಾಟಿಂಗ್ ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಗೆ ತಂಡದಿಂದ ಕೊಕ್ ನೀಡಲಾಗಿದ್ದು, ರಿಷಭ್ ಪಂತ್ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬೌಲಿಂಗ್ ನಲ್ಲಿ ಕುಲ್‍ದೀಪ್ ಯಾದವ್ ಸ್ಥಾನದಲ್ಲಿ ವೇಗಿ ಜಸ್‍ಪ್ರೀತ್ ಬುಮ್ರಾ ಕಮ್ ಬ್ಯಾಕ್ ಮಾಡಿದ್ದಾರೆ.

    ಇದುವರೆಗೂ ಕೊಹ್ಲಿ ನಾಯಕತ್ವದಲ್ಲಿ 37 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಯಾವುದೇ ಟೆಸ್ಟ್ ಪಂದ್ಯದ ಬಳಿಕ ಮತ್ತೊಂದು ಪಂದ್ಯಕ್ಕೆ ತಂಡವನ್ನು ಮುಂದುವರಿಸಿಲ್ಲ. ಅದ್ದರಿಂದ ತಂಡದಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂಬ ಟೀಕೆಗಳು ವಿಶ್ಲೇಷಕರಿಂದ ಕೇಳಿ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಇಂಗ್ಲೆಂಡ್ ಟೆಸ್ಟ್: ಬುಮ್ರಾ ಬಳಿಕ ಮತ್ತೊಬ್ಬ ವೇಗಿ ಫಿಟ್

    ಇಂಗ್ಲೆಂಡ್ ಟೆಸ್ಟ್: ಬುಮ್ರಾ ಬಳಿಕ ಮತ್ತೊಬ್ಬ ವೇಗಿ ಫಿಟ್

    ಲಂಡನ್: ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆರಂಭದ 2 ಪಂದ್ಯಗಳಲ್ಲಿ ಸೋಲುಂಡು ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ಟೀಂ ಇಂಡಿಯಾಗೆ ಪ್ರಮುಖ ಇಬ್ಬರು ವೇಗದ ಬೌಲರ್ ಗಳು ಕಮ್ ಬ್ಯಾಕ್ ಮಾಡುವ ನಿರೀಕ್ಷೆ ಇದೆ.

    ಗಾಯದ ಸಮಸ್ಯೆಯಿಂದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಜಸ್‍ಪ್ರೀತ್ ಬುಮ್ರಾ ಈಗಾಗಲೇ ಸಂಪೂರ್ಣ ಚೇತರಿಸಿಕೊಂಡಿದ್ದು, ಮತ್ತೊಬ್ಬ ಬೌಲರ್ ಭುವನೇಶ್ವರ್ ಕುಮಾರ್ ಸಹ ಲಭ್ಯರಾಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಟೀಂ ಇಂಡಿಯಾ ಆಟಗಾರರು ಇಂದು 3ನೇ ಟೆಸ್ಟ್ ಪಂದ್ಯಕ್ಕೆ ಮತ್ತಷ್ಟು ಫಿಟ್ ಆಗಲು ಜೀಮ್ ಸೆಶನ್ ಏರ್ಪಡಿಸಲಾಗಿದೆ. ಇನ್ನು 2ನೇ ಟೆಸ್ಟ್ ವೇಳೆ ಗಾಯಗೊಂಡಿದ್ದ ಸ್ಪಿನ್ನರ್ ಅಶ್ವಿನ್ ಹಾಗೂ ಹಾರ್ದಿಕ್ ಪಾಂಡ್ಯ ಸಹ 3ನೇ ಟೆಸ್ಟ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

    ಕಳೆದ ಜೂನ್ ನಲ್ಲಿ ನಡೆದ ಐರ್ಲೆಂಡ್ ವಿರುದ್ಧ ಟೂರ್ನಿಯ ವೇಳೆ ಬುಮ್ರಾ ಗಾಯಗೊಂಡಿದ್ದರು. ಬಳಿಕ ಬುಮ್ರಾ ಬಿಸಿಸಿಐ ನ ಎನ್‍ಸಿಎ ತಜ್ಞ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಬುಮ್ರಾ ಟೆಸ್ಟ್ ಪಂದ್ಯದ ಅಭ್ಯಾಸ ವೇಳೆ ಬೆರಳಿಗೆ ಪ್ಲಾಸ್ಟರ್ ಧರಿಸದೆ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಈ ಹಿಂದೆ ಬಿಸಿಸಿಐ ಕೂಡ ತಂಡದ ಆಟಗಾರರು ಜೀಮ್ ನಲ್ಲಿ ಬೆವರಿಳಿಸುತ್ತಿರುವ ಫೋಟೋ ಟ್ವೀಟ್ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಇಂಗ್ಲೆಂಡ್ ವೇಗಕ್ಕೆ ಭಾರತ ಪ್ಯಾಕಪ್ – ಮೊದಲ ಇನ್ನಿಂಗ್ಸ್ ನಲ್ಲಿ 107ಕ್ಕೆ ಆಲೌಟ್

    ಇಂಗ್ಲೆಂಡ್ ವೇಗಕ್ಕೆ ಭಾರತ ಪ್ಯಾಕಪ್ – ಮೊದಲ ಇನ್ನಿಂಗ್ಸ್ ನಲ್ಲಿ 107ಕ್ಕೆ ಆಲೌಟ್

    ಲಂಡನ್: ಲಾರ್ಡ್ಸ್‌‌ ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ಭಾರತ 107 ರನ್‍ಗಳಿಗೆ ಆಲೌಟ್ ಆಗುವ ಮೂಲಕ ಎರಡನೇ ದಿನದಾಟ ಕೊನೆಗೊಂಡಿದೆ.

    ಮಳೆಯಿಂದಾಗಿ ಗುರುವಾರ ಮೊದಲ ದಿನದ ಆಟ ರದ್ದಾಗಿತ್ತು. ಎರಡನೇ ದಿನ ಟಾಸ್ ಗೆದ್ದ ಆಂಗ್ಲ ನಾಯಕ ಜೋ ರೂಟ್, ಭಾರತ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಆದರೆ ಆರಂಭದಲ್ಲೇ ವೇಗಿ ಆ್ಯಂಡರ್ಸನ್ ದಾಳಿಗೆ ಭಾರತ ತತ್ತರಿಸಿತ್ತು. 35.2 ಓವರ್ ಆಡಿದ ಟೀಂ ಇಂಡಿಯಾ 107 ರನ್‍ಗಳ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಯಿತು.

    ಆರಂಭಿಕರಾಗಿ ಕಣಕ್ಕೆ ಇಳಿದ ಮುರಳಿ ವಿಜಯ್ ಶೂನ್ಯಕ್ಕೆ ಔಟಾಗಿ ಮೊದಲ ಆಘಾತ ಎದುರಿಸಿದರೆ, ಈ ಪಂದ್ಯದಲ್ಲಿ ಬ್ಯಾಟಿಂಗ್ ಮುಂಬಡ್ತಿ ಪಡೆದು ಕಣಕ್ಕೆ ಇಳಿದ ಕೆಎಲ್ ರಾಹುಲ್ 8 ರನ್ ಗಳಿಸಿ ನಿರ್ಗಮಿಸಿ ನಿರಾಸೆ ಮೂಡಿಸಿದರು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಊಟದ ವಿರಾಮದ ಬಳಿಕ ಆರಂಭವಾಯಿತು. ಬಳಿಕ ಚೇತೇಶ್ವರ ಪೂಜಾರ ಬಹುಬೇಗ ವಿಕೆಟ್ ಒಪ್ಪಿದರು. ಈ ವೇಳೆ ಭಾರತ 15 ರನ್ ಗೆ 3 ವಿಕೆಟ್ ಕಳೆದು ಕೊಂಡು ಸಂಕಷ್ಟ ಎದುರಿಸಿತ್ತು. ಮಳೆಯ ಕಣ್ಣಾಮುಚ್ಚಲೆಯೊಂದಿಗೆ ಮತ್ತೆ ಸ್ಥಗಿತಗೊಂಡು ಆರಂಭವಾದ ಪಂದ್ಯದಲ್ಲಿ ಕೊಹ್ಲಿ (23), ಹಾರ್ದಿಕ್ ಪಾಂಡ್ಯ (11), ದಿನೇಶ್ ಕಾರ್ತಿಕ್ (1), ರಹಾನೆ, ಕುಲ್ ದೀಪ್ ಯಾದವ್ ಸೇರಿದಂತೆ ಆಟಗಾರರು ಬಂದ ವೇಗದಲ್ಲೇ ಹಿಂದಿರುಗಿದರು.

    ಈ ವೇಳೆ ತಂಡಕ್ಕೆ ಆಸರೆಯಾದ ರವಿಚಂದ್ರನ್ ಅಶ್ವಿನ್ ಉಪಯುಕ್ತ 29 ರನ್ ಕಾಣಿಕೆ ನೀಡಿದರು. ಬಳಿಕ ಬಂದ ಮಹಮ್ಮದ್ ಶಮಿ 10 ರನ್ ಗಳಿಸಿ ಅಜೇಯರಾಗಿ ಉಳಿದರೆ ಇಶಾಂತ್ ಶರ್ಮಾ ಶೂನ್ಯಕ್ಕೆ ಔಟಾಗುವುದರೊಂದಿಗೆ ಟೀಂ ಇಂಡಿಯಾ 107 ರನ್ ಗೆ ಸರ್ವಪತನ ಕಂಡಿತು.

    ಆ್ಯಂಡರ್ ಸನ್ ದಾಖಲೆ:
    ಇಂಗ್ಲೆಂಡ್ ಪರ ಮಾರಕ ದಾಳಿ ನಡೆಸಿದ ಆ್ಯಂಡರ್ ಸನ್ 20 ರನ್ ನೀಡಿ 5 ವಿಕೆಟ್ ಪಡೆದರು. ಈ ಮೂಲಕ ಭಾರತದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡರು. ಈ ಪಂದ್ಯದಲ್ಲಿ ವೋಕ್ಸ್ 2, ಕುರ್ರಾನ್ ಹಾಗೂ ಬೋರ್ಡ್ ತಲಾ 1 ವಿಕೆಟ್ ಪಡೆದು ಮಿಂಚಿದರು. ಭಾರತದ ಪರ ಈ ಹಿಂದೆ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನದ ಇಮ್ರಾನ್ ಖಾನ್ (95) ಪಾತ್ರರಾಗಿದ್ದರು. ನಂತರದ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ನ ಮಾರ್ಷಲ್ 76 ವಿಕೆಟ್ ಗಳಿಸಿ ಸ್ಥಾನ ಪಡೆದಿದ್ದರು.

  • ಟೀಂ ಇಂಡಿಯಾಗೆ ಮಾರಕವಾಗಿದ್ದ ಬೆನ್ ಸ್ಟೋಕ್ಸ್ 2ನೇ ಟೆಸ್ಟ್‌ಗೆ ಅಲಭ್ಯ

    ಟೀಂ ಇಂಡಿಯಾಗೆ ಮಾರಕವಾಗಿದ್ದ ಬೆನ್ ಸ್ಟೋಕ್ಸ್ 2ನೇ ಟೆಸ್ಟ್‌ಗೆ ಅಲಭ್ಯ

    ಲಂಡನ್: ಬರ್ಮಿಂಗ್‍ಹ್ಯಾಮ್ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಇಂಗ್ಲೆಂಡ್ ಗೆಲುವಿಗೆ ಕಾರಣರಾಗಿದ್ದ ಬೆನ್ ಸ್ಟೋಕ್ಸ್ 2ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

    ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮದ್ಯ ಸೇವಿಸಿ ಬೀದಿ ಜಗಳದಲ್ಲಿ ಭಾಗಿಯಾಗಿದ್ದ ಆರೋಪ ಪ್ರಕರಣದಲ್ಲಿ ಸ್ಟೋಕ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಹೀಗಾಗಿ ಸ್ಟೋಕ್ಸ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವುದು ಅನಿವಾರ್ಯವಾಗಿದ್ದು 2ನೇ ಟೆಸ್ಟ್ ಪಂದ್ಯಕ್ಕೆ ಅಭ್ಯರಾಗಲಿದ್ದಾರೆ.

    ಒಂದೊಮ್ಮೆ ನ್ಯಾಯಾಲಯ ಪ್ರಕರಣದ ವಿಚಾರಣೆ ಮುಂದೂಡಿದರೆ ಸ್ಟೋಕ್ಸ್ ಪಂದ್ಯದಲ್ಲಿ ಭಾಗವಹಿಸಬಹುದಾಗಿದೆ. ಅಂದಹಾಗೇ ಸ್ಟೋಕ್ಸ್ ಬ್ರಿಸ್ಟಾಲ್ ಕ್ರೌನ್ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಬೆನ್ ಸ್ಟೋಕ್ಸ್ ಮೊದಲ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಹಾಗೂ 2ನೇ ಇನ್ನಿಂಗ್ಸ್ ನಲ್ಲಿ ಕೊಹ್ಲಿ ವಿಕೆಟ್ ಸೇರಿದಂತೆ 4 ವಿಕೆಟ್ ಪಡೆದು ಮಿಂಚಿದ್ದರು. ಸ್ಟೋಕ್ಸ್ ಅಲಭ್ಯರಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಿಸ್ ವೋಕ್ಸ್ ಇಂಗ್ಲೆಂಡ್ ಪರ ಆಡಲಿದ್ದಾರೆ.

    ಇಂಗ್ಲೆಂಡ್ ತಂಡದಲ್ಲಿ 2 ಟೆಸ್ಟ್ ಪಂದ್ಯಕ್ಕೆ ಮತ್ತೊಂದು ಬದಲಾವಣೆ ಮಾಡಲಾಗಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಮಲಾನ್ ಸ್ಥಾನದಲ್ಲಿ ಆಲಿ ಪೋಪ್ ಆಯ್ಕೆ ಮಾಡಲಾಗಿದೆ. ಕೌಂಟಿ ಕ್ರಿಕೆಟ್ ನಲ್ಲಿ ಸರ್ರೆ ತಂಡದ ಪರ 20 ವರ್ಷದ ಆಲಿ ಪೋಪ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 15 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಆಲಿ ಪೋಪ್ 1,012 ರನ್ ಗಳಿಸಿದ್ದಾರೆ. ಅಲ್ಲದೇ ಪಂದ್ಯವೊಂದರಲ್ಲಿ ಅಜೇಯ 158 ರನ್ ಗಳಿಸಿದ ಹೆಗ್ಗಳಿಕೆಯನ್ನ ಪಡೆದಿದ್ದಾರೆ.

    ಕ್ರಿಕೆಟ್ ಕಾಶಿ ಲಾಡ್ರ್ಸ್ ಮೈದಾನದಲ್ಲಿ ಆಗಸ್ಟ್ 9 ರಿಂದ ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ನಡುವಿನ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಚಿನ್ ಬಳಿಕ ಐಸಿಸಿ ನಂ.1 ಟೆಸ್ಟ್ ಬ್ಯಾಟ್ಸ್ ಮನ್ ಪಟ್ಟಕ್ಕೇರಿದ ವಿರಾಟ್ ಕೊಹ್ಲಿ

    ಸಚಿನ್ ಬಳಿಕ ಐಸಿಸಿ ನಂ.1 ಟೆಸ್ಟ್ ಬ್ಯಾಟ್ಸ್ ಮನ್ ಪಟ್ಟಕ್ಕೇರಿದ ವಿರಾಟ್ ಕೊಹ್ಲಿ

    ದುಬೈ: ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‍ನಲ್ಲೂ ಆಸೀಸ್ ಆಟಗಾರ ಸ್ಟೀವ್ ಸ್ಮಿತ್‍ರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟು 200 ರನ್ ಸಿಡಿಸಿದ ಕೊಹ್ಲಿ ಈ ಸಾಧನೆಯ ಜೊತೆ ಮತ್ತೊಂದು ಸಾಧನೆಯನ್ನು ನಿರ್ಮಿಸಿದ್ದಾರೆ. ಟೀಂ ಇಂಡಿಯಾ ಪರವಾಗಿ ಸಚಿನ್ ಬಳಿಕ ನಂ.1 ಪಟ್ಟಕ್ಕೆ ಏರಿದ ಬ್ಯಾಟ್ಸ್ ಮನ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಅಂದಹಾಗೇ 2011 ರಲ್ಲಿ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‍ನಲ್ಲಿ ನಂ.1 ಸ್ಥಾನ ಪಡೆದಿದ್ದರು.

    ಬರ್ಮಿಗ್‍ಹ್ಯಾಮ್ ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 149 ರನ್ ಸಿಡಿಸಿದ್ದ ಕೊಹ್ಲಿ, 2ನೇ ಇನ್ನಿಂಗ್ಸ್ ನಲ್ಲಿ 51 ರನ್ ಗಳಿಸಿ ಮಿಂಚಿದ್ದರು. ಈ ಮೂಲಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಜೀವನ ಶ್ರೇಷ್ಠ 934 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ 1 ವರ್ಷ ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್ 929 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಹಿಂಬಡ್ತಿ ಹೊಂದಿದ್ದಾರೆ. 3ನೇ ಸ್ಥಾನವನ್ನು 865 ಅಂಕಗಳೊಂದಿಗೆ ಇಂಗ್ಲೆಂಡ್ ತಂಡದ ಜೋ ರೂಟ್ ಪಡೆದಿದ್ದಾರೆ.

    ಗವಾಸ್ಕರ್ ದಾಖಲೆ ಉಡಿಸ್: ಟೆಸ್ಟ್ ನಂ. ಬ್ಯಾಟ್ಸ್ ಮನ್ ಆಗಿ 934 ಅಂಕಗಳನ್ನು ಪಡೆದಿರುವ ಕೊಹ್ಲಿ ಟೀಂ ಇಂಡಿಯಾ ಪರ ವೈಯಕ್ತಿಕವಾಗಿ ಅತೀ ಹೆಚ್ಚು ಅಂಕ ಪಡೆದ ಆಟಗಾರರಾಗಿದ್ದು, ಈ ಹಿಂದೆ ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ 916 ಅಂಕ ಪಡೆದಿದ್ದರು. ಉಳಿದಂತೆ ವಿಶ್ವ ಕ್ರಿಕೆಟ್ ನಲ್ಲಿ ಡೊನಾಲ್ಡ್ ಬ್ರಾಡ್ಮನ್ (961), ಸ್ಟೀವ್ ಸ್ಮಿತ್ (947) ನಂತರದ ಸ್ಥಾನದಲ್ಲಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಪರ ಈ ಹಿಂದೆ ಸಚಿನ್ ತೆಂಡೂಲ್ಕರ್, ದಿಲೀಪ್ ವೆಂಗ್‍ಸರ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಈ ಸಾಧನೆ ಮಾಡಿದ್ದರು.

    ಪ್ರಸ್ತುತ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿ ನಂಬರ್ ಒನ್ ಸ್ಥಾನದಲ್ಲಿದ್ದರೆ, ಟಿ 20 ಯಲ್ಲಿ 12ನೇ ಸ್ಥಾನದಲ್ಲಿದ್ದಾರೆ.

    ಸದ್ಯ ಐಸಿಸಿ ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿ ಟೀಂ ಇಂಡಿಯಾದ ಚೇತೇಶ್ವರ ಪೂಜಾರಾ 791 ಅಂಕಗಳೊಂದಿಗೆ 6, ಕೆಎಲ್ ರಾಹುಲ್ 1 ಸ್ಥಾನ ಕುಸಿತಗೊಂಡು 19 ಹಾಗೂ ರಹಾನೆ 3 ಸ್ಥಾನ ಕಳೆದುಕೊಂಡು 22ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಶಿಖರ್ ಧವನ್ ಹಾಗೂ ಮುರಳಿ ವಿಜಯ್ 25 ಸ್ಥಾನ ಪಡೆದಿದ್ದಾರೆ.

    ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜಾ 3 ಹಾಗೂ ಆರ್ ಆಶ್ವಿನ್ 5 ಸ್ಥಾನ ಪಡೆದು ಟಾಪ್ ಬೌಲರ್ ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಉಳಿದಂತೆ ಮಹಮ್ಮದ್ ಶಮಿ 19 ಹಾಗೂ ಇಶಾಂತ್ ಶರ್ಮಾ 25ನೇ ಸ್ಥಾನ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews