Tag: test

  • ಓವೆಲ್ ಕ್ರೀಡಾಂಗಣದ ಮೇಲಿನಿಂದ ಟೀಂ ಇಂಡಿಯಾಗೆ ಚಿಯರ್ ಮಾಡಿದ ಭಾರತ್ ಆರ್ಮಿ

    ಓವೆಲ್ ಕ್ರೀಡಾಂಗಣದ ಮೇಲಿನಿಂದ ಟೀಂ ಇಂಡಿಯಾಗೆ ಚಿಯರ್ ಮಾಡಿದ ಭಾರತ್ ಆರ್ಮಿ

    ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಒವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಚಿಯರ್ ಮಾಡಿದ್ದು, ಕ್ರೀಡಾಂಗಣ ಟಾಪ್ ರೂಫ್ ಮೇಲೆ ನಿಂತು ಹಾಡು ಹಾಡುವ ಮೂಲಕ ಬೆಂಬಲ ನೀಡಿದ್ದಾರೆ.

    ಓವೆಲ್ ಕ್ರೀಡಾಂಗಣದಲ್ಲಿ ವಿಶೇಷ ಸೌಲಭ್ಯವಿದ್ದು, ಕ್ರೀಡಾಂಗಣದ ಮೇಲೆರಿ ಸುತ್ತಲಿನ ಸೌಂದರ್ಯವನ್ನು ಸವಿಯುವ ಅವಕಾಶವಿದೆ. ಇದರಂತೆ ಭಾರತ್ ಆರ್ಮಿ ಹೆಸರಿನ ಯುವಕರ ಗುಂಪು ಟೀಂ ಇಂಡಿಯಾ ಆಟಗಾರರಿಗೆ ಬೆಂಬಲ ನೀಡಿ ಸಂಭ್ರಮಿಸಿದೆ.

    ಯುವಕರ ಗುಂಪು ಟೀಂ ಇಂಡಿಯಾ ವಿದೇಶದಲ್ಲಿ ಯವುದೇ ಪ್ರವಾಸ ಕೈಗೊಂಡರೂ ಅಲ್ಲಿಗೆ ತೆರಳಿ ಟೀಂ ಇಂಡಿಯಾ ಬೆಂಬಲ ನೀಡುತ್ತದೆ. ಈ ಕುರಿತು ವಿಡಿಯೋವನ್ನು ಬಿಸಿಸಿಐ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ಅಲ್ಲದೇ ಭಾರತ್ ಆರ್ಮಿ ಅಡಿಲೇಡ್ ಒವೆಲ್ ಕ್ರೀಡಾಂಗಣದ ಮೇಲಿನಿಂದ ಚಿಯರ್ ಮಾಡಿದೆ ಎಂದು ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ಭಾರತ ಆರ್ಮಿ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರಿಗೆ ಹಾಡೊಂದನ್ನು ಹಾಡಿ ಸಮರ್ಪಿಸಿತ್ತು. ಆ ವಿಡಿಯೋವನ್ನು ಕೂಡ ಬಿಸಿಸಿಐ ಟ್ವೀಟ್ ಮಾಡಿತ್ತು.

    ಉಳಿದಂತೆ ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದ ಆಟದ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ ಬೌಲರ್ ಆರ್ ಅಶ್ವಿನ್ ರ ಬೌಲಿಂಗ್ ದಾಳಿಯಿಂದ ಆಸೀಸ್‍ಗೆ ತಿರುಗೇಟು ನೀಡಿದ್ದು, ಪಂದ್ಯದಲ್ಲಿ 50 ರನ್ ನೀಡಿರುವ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದ್ದಾರೆ. ಇತ್ತ ಹಿನ್ನಡೆಯಲ್ಲಿದ್ದ ತಂಡಕ್ಕೆ ಹೆಡ್ ಅರ್ಧ ಶತಕ ಸಿಡಿಸಿ ಆಸರೆಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್‍ಗೆ ಟೀಂ ಇಂಡಿಯಾ ಬೌಲರ್‌ಗಳ ತಿರುಗೇಟು – ತಲೆನೋವಾದ `ಹೆಡ್’

    ಆಸೀಸ್‍ಗೆ ಟೀಂ ಇಂಡಿಯಾ ಬೌಲರ್‌ಗಳ ತಿರುಗೇಟು – ತಲೆನೋವಾದ `ಹೆಡ್’

    ಅಡಿಲೇಡ್: ಆಸೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತೀಯ ಬೌಲರ್ ಗಳು ಮೇಲುಗೈ ಸಾಧಿಸಿದ ಹೊರತಾಗಿಯೂ ಆಸ್ಟ್ರೇಲಿಯಾ ತಂಡದ ಪರ ಟ್ರಾವಿಸ್ ಹೆಡ್ ಅರ್ಧ ಶತಕ ಸಿಡಿಸಿ ಆಸರೆಯಾಗಿದ್ದಾರೆ.

    ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್‍ನ 250 ರನ್ ಗಳಿಗೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಆಸೀಸ್ 2ನೇ ದಿನದಾಟದ ಅಂತ್ಯಕ್ಕೆ 88 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು.

    ಇದಕ್ಕೂ ಮುನ್ನ 9 ವಿಕೆಟ್ ಕಳೆದುಕೊಂಡು 250 ರನ್ ಗಳಿಗೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಅಷ್ಟೇ ಮೊತ್ತಕ್ಕೆ ಅಲೌಟ್ ಆಯ್ತು. ಭಾರತ 250 ರನ್ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಸೀಸ್ ತಂಡಕ್ಕೆ ವೇಗಿ ಇಶಾಂತ್ ಶರ್ಮಾ ಮೊದಲ ಓವರಿನಲ್ಲಿಯೇ ಫಿಂಚ್ (0 ರನ್) ವಿಕೆಟ್ ಪಡೆದು ಅಘಾತ ನೀಡಿದರು. ಬಳಿಕ ಬಂದ ಹ್ಯಾರಿಸ್ ಭಾರತಕ್ಕೆ ಮುಳುವಾಗುವ ಸೂಚನೆ ನೀಡಿದರು. ಆದರೆ ಆರ್ ಅಶ್ವಿನ್ ಹ್ಯಾರಿಸ್ ವಿಕೆಟ್ ಪಡೆದರು. ಈ ವೇಳೆ ಆಸೀಸ್ 45 ರನ್ ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡಿತ್ತು. ಮತ್ತೊಂದು ಬದಿಯಲ್ಲಿ 25 ರನ್ ಗಳಿಸಿದ್ದ ಉಸ್ಮಾನ್ ಖವಾಜಾ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಮತ್ತೆ ಮಿಂಚಿದರು.

    ಟೀ ವಿರಾಮದ ವೇಳೆಗೆ ಆಸೀಸ್ 117 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ವಿರಾಮ ಬಳಿಕ ಬೌಲಿಂಗ್ ದಾಳಿ ನಡೆಸಿದ ಬುಮ್ರಾ 34 ರನ್ ಗಳಿಸಿದ್ದ ಹ್ಯಾಂಡ್ಸ್ ಕಾಂಬ್ ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಇಶಾಂತ್ ಶರ್ಮಾ 5 ರನ್ ಗಳಿಸಿದ್ದ ಪೆನ್‍ಗೆ ಪೆವಿಲಿಯನ್ ಹಾದಿ ತೋರಿದರು. ಆದರೆ ಒಂದು ಬದಿಯಲ್ಲಿ ವಿಕೆಟ್ ಉರುಳುತ್ತಿದ್ದರು ತಾಳ್ಮೆಯಿಂದ ಭಾರತ ಬೌಲರ್ ಗಳನ್ನು ಎದುರಿಸಿದ ಹೆಡ್ ಅರ್ಧ ಶತಕ ಪೂರೈಸಿ ತಂಡಕ್ಕೆ ನೆರವಾದರು. ಅಲ್ಲದೇ ಕಮಿನ್ಸ್ ರೊಂದಿಗೆ 7 ವಿಕೆಟ್‍ಗೆ 50 ರನ್ ಜೊತೆಯಾಟ ನೀಡಿದರು. ದಿನದಾಟದ ಅಂತ್ಯದ ವೇಳೆ ಮತ್ತೆ ಮಿಂಚಿನ ದಾಳಿ ನಡೆಸಿದ ಬುಮ್ರಾ ಇಬ್ಬರ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. ಇದರೊಂದಿಗೆ ಆಸ್ಟ್ರೇಲಿಯಾ ಇನ್ನಿಂಗ್ಸ್ ಮುನ್ನಡೆಗಾಗಿ ಇನ್ನು 59 ರನ್ ಗಳಿಸಬೇಕಿದೆ.

    ಟೀಂ ಇಂಡಿಯಾ ಪರ ಸ್ಪಿನ್ನರ್ ಆರ್ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರೆ, ವೇಗಿಗಳಾದ ಇಶಾಂತ್ ಶರ್ಮಾ, ಬುಮ್ರಾ ತಲಾ ವಿಕೆಟ್ ಪಡೆದರು. ಪಂದ್ಯದಲ್ಲಿ 16 ಓವರ್ ಬೌಲ್ ಮಾಡಿದ ಮೊಹಮ್ಮದ್ ಶಮಿ ವಿಕೆಟ್ ಪಡೆಯಲು ವಿಫಲವಾದರು.

    ಕೊಹ್ಲಿ ಸಂಭ್ರಮ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸೀಸ್ ಟೂರ್ನಿಯಲ್ಲಿ ತಮ್ಮ ಆಕ್ರಮಣಕಾರಿ ಪ್ರವೃತ್ತಿಯನ್ನ ಮುಂದುವರಿಸಿದ್ದು, ಇಶಾಂತ್ ಶರ್ಮಾ ಆಸೀಸ್ ಮೊದಲ ವಿಕೆಟ್ ಪಡೆದ ವೇಳೆ ಕೊಹ್ಲಿ ನಡೆಸಿದ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://twitter.com/__chirag_/status/1070836805040250886?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶತಕ ಸಿಡಿಸಿ `ದಿ ವಾಲ್’ ಸ್ಥಾನವನ್ನು ತುಂಬಿದ ಪೂಜಾರ

    ಶತಕ ಸಿಡಿಸಿ `ದಿ ವಾಲ್’ ಸ್ಥಾನವನ್ನು ತುಂಬಿದ ಪೂಜಾರ

    ಅಡಿಲೇಡ್: ಟೀಂ ಇಂಡಿಯಾದ ಬಹು ನಿರೀಕ್ಷಿತ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟದಲ್ಲಿ ಚೇತೇಶ್ವರ ಪೂಜಾರ ಶತಕ ಸಿಡಿಸಿ ತಂಡದ ಮಾನವನ್ನು ಕಾಪಾಡಿದ್ದಾರೆ.

    ಪಂದ್ಯದಲ್ಲಿ ಆಕರ್ಷಕ 123 ರನ್ (246 ಎಸೆತ, 7 ಬೌಂಡರಿ, 2 ಸಿಕ್ಸರ್) ಸಿಡಿಸಿದ ಪೂಜಾರಾ ಟೆಸ್ಟ್ ಕ್ರಿಕೆಟ್‍ನಲ್ಲಿ 16ನೇ ಶತಕ ಪೂರೈಸಿದರು. ಪೂಜಾರ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 87.5 ಓವರ್ ಗಳಲ್ಲಿ 9 ವಿಕೆಟ್ ನಕಷ್ಟಕ್ಕೆ 250 ರನ್ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಲೆಕ್ಕಾಚಾರಗಳನ್ನು ಆಸೀಸ್ ಬೌಲರ್ ಗಳು ತಲೆ ಕೆಳಗಾಗಿ ಮಾಡಿದರು. ನಾಥನ್ ಲಯನ್ ಭಾರತಕ್ಕೆ ಮೊದಲ ಆಘಾತ ನೀಡಿದರು. ಸತತವಾಗಿ ಕಳಪೆ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ಕೆಎಲ್ ರಾಹುಲ್ ಕೇವಲ 2 ರನ್ ಗಳಿಸಿ ಔಟಾಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದ್ರು.

    ಇತ್ತ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದ ಮುರಳಿ ವಿಜಯ್ ಕೂಡ 11 ರನ್ ಗಳಿಸಿ ನಿರ್ಗಮಿಸಿದರು. ಇದರೊಂದಿಗೆ ಕೇವಲ 15 ರನ್ ಗಳಿಗೆ ಟೀಂ ಇಂಡಿಯಾ ತನ್ನ ಆರಂಭಿಕ ಆಟಗಾರರನ್ನು ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕೆ ಇಳಿದ ನಾಯಕ ವಿರಾಟ್ ಕೊಹ್ಲಿ ಕೂಡ ವೈಫಲ್ಯ ಅನುಭವಿಸಿ 3 ರನ್ ಗಳಿಗೆ ಪ್ಯಾಟ್ ಕಮ್ಮಿನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಅಜಿಂಕ್ಯಾ ರಹಾನೆ 13 ರನ್ ಗಳಿಸಿ ಔಟಾಗುವ ಮೂಲಕ ತಂಡವನ್ನು ಸಂಕಷ್ಟಕ್ಕೆ ದುಡಿದರು. ಈ ಹಂತದಲ್ಲಿ ಟೀಂ ಇಂಡಿಯಾ 27 ಓವರ್ ಗಳಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಕೇವಲ 42 ರನ್ ಮಾತ್ರ ಗಳಿಸಿತ್ತು.

    ಪೂಜಾರ ಆಸರೆ: ಆರಂಭಿಕ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಒನ್‍ಡೌನ್ ಆಟಗಾರನಾಗಿ ಬಂದ ಪೂಜಾರ ತಾಳ್ಮೆ ಆಟ ಚೇತರಿಕೆ ನೀಡಿತು. ರೋಹಿತ್ ಶರ್ಮಾ ಮತ್ತು ಪೂಜಾರ ಜೋಡಿ 5 ವಿಕೆಟ್‍ಗೆ 45 ರನ್ ಜೊತೆಯಾಟವಾಡಿದರು. ಈ ಹಂತದಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ರೋಹಿತ್ 2 ಬೌಂಡರಿ, 3 ಸಿಕ್ಸರ್ ಗಳಿಂದ 37 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಯುವ ಆಟಗಾರ ರಿಷಭ್ ಪಂತ್ ಪೂಜಾರಗೆ ಸಾಥ್ ನೀಡಿದರು. ಈ ಜೋಡಿ 6ನೇ ವಿಕೆಟ್‍ಗೆ 41 ರನ್ ಕಾಣಿಕೆ ನೀಡಿತು. ಆದರೆ 25 ರನ್ ಗಳಿಸಿದ್ದ ರಿಷಭ್ ಪಂತ್ ಭಾರೀ ಹೊಡೆತಕ್ಕೆ ಯತ್ನಿಸಿ ಔಟಾದರು. ಇದರೊಂದಿಗೆ ಟೀಂ ಇಂಡಿಯಾ ಪ್ರಮುಖ 6 ಬ್ಯಾಟ್ಸ್ ಮನ್‍ಗಳು 127 ರನ್‍ಗಳಿಗೆ ಪೆವಿಲಿಯನ್ ಸೇರಿದ್ದರು. ಇದನ್ನು ಓದಿ : ಗಲ್ಲಿಯಲ್ಲಿ ಉಸ್ಮಾನ್ ಖವಾಜ ಅತ್ಯುತ್ತಮ ಕ್ಯಾಚ್ – ಕೊಹ್ಲಿ ಔಟಾಗುತ್ತಿರೋ ವಿಡಿಯೋ ನೋಡಿ

    ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಮತ್ತೊಂದು ಬದಿಯಲ್ಲಿದ್ದ ಪೂಜಾರ ನಿಧಾನವಾಗಿ ತಂಡದ ಮೊತ್ತ ಹೆಚ್ಚಿಸುತ್ತಾ ಸಾಗಿದರು. ಆಸೀಸ್ ತಂಡದ ಎಲ್ಲಾ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸಿದ ಪೂಜಾರ ಮತ್ತೊಮ್ಮೆ ತಾವು ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಎಂದು ಸಾಬೀತು ಪಡಿಸಿದರು. ಅಲ್ಲದೇ ಟೆಸ್ಟ್ ಕ್ರಿಕೆಟ್‍ನಲ್ಲಿ 5 ಸಾವಿರ ರನ್ ಪೂರೈಸಿದರು. ಈ ಮೂಲಕ ದ್ರಾವಿಡ್ ಬಳಿಕ ತಂಡದಲ್ಲಿ ಆ ಸ್ಥಾನವನ್ನು ತುಂಬಿದ ಆಟಗಾರ ಎನಿಸಿಕೊಂಡು. ಇದಕ್ಕೆ ಪ್ರಮುಖ ಕಾರಣವು ಇದ್ದು, ರಾಹುಲ್ ಹಾಗೂ ಪೂಜಾರ ತಮ್ಮ ವೃತ್ತಿ ಜೀವನದಲ್ಲಿ 3 ಸಾವಿರ (67 ಇನ್ನಿಂಗ್ಸ್), 4 ಸಾವಿರ (84 ಇನ್ನಿಂಗ್ಸ್), 5 ಸಾವಿರ (108 ಇನ್ನಿಂಗ್ಸ್) ರನ್ ಗಳನ್ನು ಪೂರೈಸಿದ್ದಾರೆ.

    ಉಳಿದಂತೆ ಟೀಂ ಇಂಡಿಯಾದ ಕೆಳ ಕ್ರಮಾಂಕದಲ್ಲಿ ಅಶ್ವಿನ್ 25 ರನ್ ಗಳಿಸಿ ಔಟಾದರೆ, ಇಶಾಂತ್ ಶರ್ಮಾ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮೊಹಮ್ಮದ್ ಶಮಿ 6 ರನ್ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇತ್ತ ಬಿಗು ಬೌಲಿಂಗ್ ದಾಳಿ ನಡೆಸಿ ಆಸೀಸ್ ಬೌಲರ್ ಗಳಾದ ಸ್ಟಾರ್ಕ್, ಹೇಜಲ್ ವುಡ್, ಕಮ್ಮಿನ್ಸ್, ಲಯನ್ ತಲಾ 2 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೇಲ್ ಪ್ರಕರಣದ ಬಳಿಕವೂ ಬುದ್ಧಿ ಬಂದಿಲ್ಲ- ಆಸೀಸ್ ಮಾಧ್ಯಮಗಳಿಂದ ಟೀಂ ಇಂಡಿಯಾ ಟ್ರೋಲ್!

    ಗೇಲ್ ಪ್ರಕರಣದ ಬಳಿಕವೂ ಬುದ್ಧಿ ಬಂದಿಲ್ಲ- ಆಸೀಸ್ ಮಾಧ್ಯಮಗಳಿಂದ ಟೀಂ ಇಂಡಿಯಾ ಟ್ರೋಲ್!

    ಸಿಡ್ನಿ: ವೆಸ್ಟ್ ಇಂಡೀಸ್ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ವಿರುದ್ಧ ಸುಳ್ಳು ವರದಿ ಮಾಡಿ ಭಾರೀ ಪ್ರಮಾಣದ ದಂಡ ತೆತ್ತ ಆಸೀಸ್ ಮಾಧ್ಯಮಗಳು ಟೀ ಇಂಡಿಯಾ ಆಟಗಾರರನ್ನು `ಬೆದರಿದ ಬಾವಲಿಗಳು’ ಎಂದು ಕರೆಯುವ ಮೂಲಕ ಟ್ರೋಲ್ ಮಾಡಿದೆ. ಈ ಟ್ರೋಲ್ ಗೆ ಸಿಟ್ಟಿಗೆದ್ದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಸೀಸ್ ಮಾಧ್ಯಮಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.

    ಆಡಿಲೇಡ್‍ನಲ್ಲಿ ಆರಂಭವಾಗಲಿರುವ ಸರಣಿಯ ಮೊದಲ ಪಂದ್ಯಕ್ಕಾಗಿ ಟೀಂ ಇಂಡಿಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಈ ಫೋಟೋವನ್ನು ಬಳಸಿಕೊಂಡು ವರದಿ ಮಾಡಿದ್ದ ಆಸೀಸ್ ಮಾಧ್ಯಮವೊಂದು `ಬೆದರಿದ ಬಾವಲಿಗಳು’ ಎಂದು ತಲೆಬರಹ ನೀಡಿ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ವರದಿಯಲ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರರು ಆಸೀಸ್ ಬೌಲಿಂಗ್ ಬೌನ್ಸರ್ ಗಳಿಗೆ ಬೆದರಿದ್ದಾರೆ. ಅಲ್ಲದೇ ಹಗಲು ಮತ್ತು ರಾತ್ರಿ ಟೆಸ್ಟ್ ಬಗ್ಗೆ ಬಿಸಿಸಿಐ ನಿರಾಕರಿಸಿದ ವಿಚಾರವನ್ನು ಉಲ್ಲೇಖಿಸಿ ಟ್ರೋಲ್ ಮಾಡಿದೆ.

    https://twitter.com/rdhinds/status/1069348197615624192?

    ಸದ್ಯ ಆಸೀಸ್ ಮಾಧ್ಯಮಗಳ ವರದಿಗೆ ಟೀಂ ಇಂಡಿಯಾ ಅಭಿಮಾನಿಗಳು ಮಾತ್ರವಲ್ಲದೇ ಸ್ವತಃ ಆಸ್ಟ್ರೇಲಿಯಾಯನ್ನರೇ ಟೀಕೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಾಧ್ಯಮಗಳ ಈ ವರ್ತನೆ ದೇಶದ ಮೇಲೂ ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೆಲ ಅಭಿಮಾನಿಗಳು ಕಳೆದ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮಾಡಿದ ಸಾಧನೆ ಹಾಗೂ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಆಸೀಸ್, ಟೀ ಇಂಡಿಯಾಗಿಂತ ಕೆಳಹಂತದಲ್ಲಿದೆ ಎಂದು ತಿಳಿಸಿ ತಿರುಗೇಟು ನೀಡಿದ್ದಾರೆ.

    ಇತ್ತ 1947 ರಲ್ಲಿ ಮೊದಲ ಬಾರಿಗೆ ಆಸೀಸ್ ಟೂರ್ನಿ ಕೈಗೊಂಡಿದ್ದ ಟೀಂ ಇಂಡಿಯಾ ಇದೂವರೆಗೂ 12 ಟೂರ್ನಿಗಳಲ್ಲಿ ಭಾಗವಹಿಸಿದ್ದು, ಆದರೆ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. 12 ಟೂರ್ನಿಗಳಲ್ಲಿ ಆಸೀಸ್ 9 ಬಾರಿ ಜಯಗಳಿಸಿದ್ದು, 3 ಬಾರಿ ಸರಣಿ ಡ್ರಾ ಆಗಿದೆ. ಆದರೆ ಈ ಬಾರಿ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸರಣಿ ಜಯಿಸುವ ವಿಶ್ವಾಸವನ್ನು ಮೂಡಿಸಿದೆ. ವೆಸ್ಟ್ ಇಂಡೀಸ್ ಸರಣಿ ಜಯದ ಆತ್ಮವಿಶ್ವಾಸದಲ್ಲಿ ಟೀಂ ಇಂಡಿಯಾ ಆಸೀಸ್ ಪ್ರವಾಸ ಕೈಗೊಂಡಿದ್ದು ಟೆಸ್ಟ್ ಸರಣಿಗೂ ಮುನ್ನ ನಡೆದ ಸಿಮೀತ ಓವರ್ ಗಳ ಟಿ20 ಸರಣಿಯಯಲ್ಲಿ ಎರಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದುಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್ ಮೊದಲ ಟೆಸ್ಟ್ ಮುನ್ನವೇ ಟೀಂ ಇಂಡಿಯಾಗೆ ಆಘಾತ

    ಆಸೀಸ್ ಮೊದಲ ಟೆಸ್ಟ್ ಮುನ್ನವೇ ಟೀಂ ಇಂಡಿಯಾಗೆ ಆಘಾತ

    ಸಿಡ್ನಿ: ಆಸ್ಟೇಲಿಯಾ ವಿರುದ್ಧದ ಮೊದಲ ಟೆಸ್ಟ್ ಆರಂಭಕ್ಕೆ 6 ದಿನಗಳು ಬಾಕಿ ಇರುವ ಸಮಯದಲ್ಲೇ ಟೀಂ ಇಂಡಿಯಾಗೆ ಮೊದಲ ಅಘಾತ ಎದುರಾಗಿದ್ದು, ತಂಡ ಯುವ ಬ್ಯಾಟ್ಸ್‍ಮನ್ ಪೃಥ್ವಿ ಶಾ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

    ಟೀಂ ಇಂಡಿಯಾ ಆಸೀಸ್ ವಿರುದ್ಧ ಅಭ್ಯಾಸ ಪಂದ್ಯ ಆಡುತ್ತಿದ್ದು, ಈ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಪೃಥ್ವಿ ಶಾ ಕ್ಯಾಚ್ ಪಡೆಯುವ ಸಂರ್ಭದಲ್ಲಿ ಗಾಯಗೊಂಡಿದ್ದು, ಅಭ್ಯಾಸ ಪಂದ್ಯದ ಮೂರನೇ ದಿನದಾಟದ ವೇಳೆ ಆಸೀಸ್ ಆರಂಭಿಕ ಬ್ಯಾಟ್ಸ್‍ಮನ್ ಮ್ಯಾಕ್ಸ್ ಬ್ರಯಾಂಟ್ ಸಿಡಿಸಿದ ಚೆಂಡನ್ನು ಕ್ಯಾಚ್ ಪಡೆಯಲು ಪೃಥ್ವಿ ಶಾ ಪ್ರಯತ್ನಿಸಿದರು. ಆದರೆ ಈ ವೇಳೆ ಪೃಥ್ವಿ ಅವರ ಬಲಗಾಲಿನ ಪಾದ 90 ಡಿಗ್ರಿ ಸ್ಥಿತಿಯಲ್ಲಿ ತಿರುಗಿ ನೆಲಕ್ಕೆ ಬಿದ್ದಿದ್ದಾರೆ. ಇದರಿಂದ ಹೆಚ್ಚು ನೋವು ಅನುಭವಿಸಿದ ಪೃಥ್ವಿ ಶಾ ರನ್ನು ಟೀಂ ಇಂಡಿಯಾ ವೈದ್ಯಕೀಯ ಸಿಬ್ಬಂದಿ ಹೊತ್ತು ಮೈದಾನದಿಂದ ಹೊತ್ತು ಸಾಗಿಸಿದರು.

    ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, ಆಡಿಲೇಡ್‍ನಲ್ಲಿ ಡಿಸೆಂಬರ್ 6 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ಅಲಭ್ಯರಾಗಿದ್ದಾರೆ ಎಂದು ಬರೆದುಕೊಂಡಿದೆ. ಅಲ್ಲದೇ ಪೃಥ್ವಿ ಶಾ ಅವರ ಕಾಲಿಗೆ ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅವರಿಗೆ ಚಿಕಿತ್ಸೆ ಹಾಗೂ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಪೃಥ್ವಿ ಶಾ, ಆಸೀಸ್ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದ ಇನ್ನಿಂಗ್ಸ್‍ನಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಸದ್ಯ ಪೃಥ್ವಿ ಶಾರ ಗೈರು ಹಾಜರಿಯಿಂದ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ತಲೆನೋವು ಉಂಟಾಗಿದ್ದು, ಮೊದಲ ಟೆಸ್ಟ್ ಆರಂಭಿಕ ಜೋಡಿಯಾಗಿ ಮುರಳಿ ವಿಜಯ್ ಅಥವಾ ಕೆಎಲ್ ರಾಹುಲ್ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

    2 ಟೆಸ್ಟ್ ಪಂದ್ಯದ ಮೂರು ಇನ್ನಿಂಗ್ಸ್ ಆಡಿ 237 ರನ್ ಹೊಡೆದಿದರುವ ಪೃಥ್ವಿ ಶಾ ಒಂದು ಶತಕ, ಒಂದು ಅರ್ಧಶತಕ ಹೊಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅತಿ ಆತ್ಮವಿಶ್ವಾಸದಿಂದ ಎಡವಟ್ಟು ಮಾಡಿಕೊಂಡ ಪಾಕ್ ಬ್ಯಾಟ್ಸ್‌ಮನ್ – ವಿಡಿಯೋ ನೋಡಿ

    ಅತಿ ಆತ್ಮವಿಶ್ವಾಸದಿಂದ ಎಡವಟ್ಟು ಮಾಡಿಕೊಂಡ ಪಾಕ್ ಬ್ಯಾಟ್ಸ್‌ಮನ್ – ವಿಡಿಯೋ ನೋಡಿ

    ದುಬೈ: ಇಲ್ಲಿನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕ್ ಹಾಗೂ ಆಸೀಸ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ಬ್ಯಾಟ್ಸ್‌ಮನ್ ಅಝರ್ ಅಲಿ ಹಾಸ್ಯಾಸ್ಪದ ರೀತಿಯಲ್ಲಿ ಔಟಾಗುವ ಮೂಲಕ ಸುದ್ದಿಯಾಗಿದ್ದಾರೆ.

    ಟೆಸ್ಟ್ 3ನೇ ದಿನದಾಟದ 53ನೇ ಓವರ್ ಬೌಲ್ ಮಾಡುತ್ತಿದ್ದ ಪೀಟರ್ ಸಿಡ್ಲ್ ಎಸೆತವನ್ನ ಅಲಿ ಬೌಂಡರಿಯತ್ತ ಬಾರಿಸಿದ್ದರು. ವೇಗವಾಗಿ ಸಾಗುತ್ತಿದ್ದ ಚೆಂಡನ್ನು ಕಂಡ ಅಲಿ ಬೌಂಡರಿ ತಲುಪುತ್ತದೆ ಎಂಬ ಅತಿ ಆತ್ಮವಿಶ್ವಾದಿಂದ ರನ್ ಗಳಿಸದೇ ಮತ್ತೊಂದು ತುದಿಯಲ್ಲಿದ್ದ ಬ್ಯಾಟ್ಸ್‌ಮನ್ ಅಸಾದ್ ಶಫಿಕ್ ರೊಂದಿಗೆ ಮಾತುಕತೆಗಿಳಿದಿದ್ದರು.

    https://twitter.com/floz_11/status/1052815846907596801

    ಈ ವೇಳೆ ಬೌಂಡರಿಯಲ್ಲಿದ್ದ ಮಿಚಲ್ ಸ್ಟರ್ಕ್ ಬಾಲ್ ಪಡೆದು ಕೀಪರ್ ನತ್ತ ಎಸೆದರು. ಬಾಲ್ ಪಡೆದ ಕೀಪರ್ ಟಿಮ್ ಪೈನೆ ರನೌಟ್ ಮಾಡಿ ಸಂಭ್ರಮಿಸಲು ಆರಂಭಿಸಿದರು. ಯಾವುದರ ಅರಿವು ಇಲ್ಲದ 64 ರನ್ ಗಳಿಸಿದ್ದ ಅಲಿ ಅಂಪೈರ್ ಔಟ್ ನೀಡುತ್ತಿದಂತೆ ಪೆವಿಲಿಯನ್ ಕಡೆ ಮುಖ ಮಾಡಿದರು. ಇದರೊಂದಿಗೆ ಪಾಕ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ 4ನೇ ವಿಕೆಟ್ ಕಳೆದುಕೊಂಡಿತ್ತು.

    ಪಂದ್ಯದ ಮೇಲೆ ಎರಡು ತಂಡಗಳು ಬಿಗಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದು, ಪಾಕ್ 538 ರನ್ ಮುನ್ನಡೆ ಪಡೆದು 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇತ್ತ ಮೊದಲ ಇನ್ನಿಂಗ್ಸ್ ನಲ್ಲಿ 145 ರನ್ ಗಳಿಗೆ ಅಲೌಟ್ ಆಗಿದ್ದ ಆಸೀಸ್ 2ನೇ ಇನ್ನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ತಿರುಗೇಟು ನೀಡುವ ವಿಶ್ವಾಸದಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/floz_11/status/1052812986325204992

  • ವಿಂಡೀಸ್ ಟೆಸ್ಟ್ ಸರಣಿ ಗೆಲುವಿನೊಂದಿಗೆ ನಿರ್ಮಾಣವಾಯ್ತು ಹಲವು ದಾಖಲೆ!

    ವಿಂಡೀಸ್ ಟೆಸ್ಟ್ ಸರಣಿ ಗೆಲುವಿನೊಂದಿಗೆ ನಿರ್ಮಾಣವಾಯ್ತು ಹಲವು ದಾಖಲೆ!

    ಹೈದರಾಬಾದ್: ಅಂತಿಮ ಟೆಸ್ಟ್ ಪಂದ್ಯವನ್ನು 10 ವಿಕೆಟ್ ಅಂತರದಿಂದ ಗೆಲ್ಲುವ ಮೂಲಕ ಸತತ 7ನೇ ಬಾರಿ ವಿಂಡೀಸ್ ವಿರುದ್ಧ ಭಾರತ ಸರಣಿ ಗೆಲುವು ಪಡೆದಿದೆ.

    ಟೀಂ ಇಂಡಿಯಾ ವಿಂಡೀಸ್ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವಿಪ್ ಮಾಡುವ ಮೂಲಕ ತವರು ನೆಲದಲ್ಲಿ ಸತತ 10ನೇ ಸರಣಿಗಳಲ್ಲಿ ಗೆಲುವು ಪಡೆದಿದೆ. ವಿಶ್ವ ಕ್ರಿಕೆಟ್ ನಲ್ಲಿ ಆಸೀಸ್ ತಂಡ ಈ ಸಾಧನೆಯನ್ನು ಮಾಡಿದ್ದು, 1994 ರಿಂದ 2001ರವರೆಗೆ ಹಾಗೂ 2004 ರಿಂದ 2008ರ ಅವಧಿಯಲ್ಲಿ ಸತತ 10 ಸರಣಿಗಳಲ್ಲಿ ಗೆಲುವು ಪಡೆದಿತ್ತು.

    ಟೀಂ ಇಂಡಿಯಾ ಪಂದ್ಯವನ್ನು 10 ವಿಕೆಟ್ ಗಳಿಂದ ಗೆಲುವು ಪಡೆದಿದ್ದು, 2010ರ ಬಳಿಕ 8 ನೇ ಬಾರಿ ಈ ಸಾಧನೆ ಮಾಡಿದೆ. ವಿಶೇಷವೆಂದರೆ 16ನೇ ಬಾರಿ ವೆಸ್ಟ್ ಇಂಡೀಸ್ 10 ವಿಕೆಟ್ ಗಳ ಅಂತರದಲ್ಲಿ ಸೋತಿದೆ.

    ಸ್ಟಾರ್ ಆಟಗಾರನಾಗಿ ಹೊರ ಹೊಮ್ಮಿದ ಪೃಥ್ವಿ ಶಾ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯುವ ಮೂಲಕ ಪಾದಾರ್ಪಣೆ ಸರಣಿಯಲ್ಲೇ ಈ ಸಾಧನೆ ಮಾಡಿದ 10ನೇ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೇ ಭಾರತ ಪರ ಸೌರವ್ ಗಂಗೂಲಿ, ಆರ್ ಅಶ್ವಿನ್, ರೋಹಿತ್ ಶರ್ಮಾ ಬಳಿಕ ಈ ಸಾಧನೆ ಮಾಡಿದ್ದಾರೆ.

    ಇದರೊಂದಿಗೆ ಪೃಥ್ವಿ ಶಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವದ 2ನೇ ಕಿರಿಯ, ಭಾರತದ ಮೊದಲ(18 ವರ್ಷ, 339 ದಿನ) ಆಟಗಾರರಾಗಿದ್ದಾರೆ. ಈ ಹಿಂದೆ ಆಸೀಸ್ ಆಟಗಾರ ಪ್ಯಾಟ್ ಕಮ್ಮಿನ್ಸ್ 18 ವರ್ಷ, 198 ದಿನಗಳಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 2018ರ ಶ್ರೀಲಂಕಾ ವಿರುದ್ಧದ ನಿದಾಸ್ ಏಕದಿನ ಸರಣಿಯಲ್ಲಿ ಭಾರತದ ವಾಷಿಂಗ್ಟನ್ ಸುಂದರ್ 18 ವರ್ಷ, 164 ದಿನಗಳ ವಯಸ್ಸಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

    ಪಂದ್ಯದಲ್ಲಿ 133 ರನ್ ನೀಡಿ 10 ವಿಕೆಟ್ ಪಡೆದ ಉಮೇಶ್ ಯಾದವ್ ಭಾರತ ಪರ ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದ 8ನೇ ಆಟಗಾರರಾಗಿದ್ದಾರೆ. ಇದುವರೆಗೂ ಕಪಿಲ್ ದೇವ್ 2 ಬಾರಿ, ಜಾವಗಲ್ ಶ್ರೀನಾಥ್ ಈ ಸಾಧನೆ ಮಾಡಿದ ಪ್ರಮುಖ ಆಟಗಾರರಾಗಿದ್ದಾರೆ. ವಿಶೇಷವಾಗಿ ಉಮೇಶ್ ಯಾದವ್ ಪಂದ್ಯದ ಮೊದಲ ಇನ್ನಿಂಗ್ ನಲ್ಲಿ 4 ಎಸೆತಗಳ ಅಂತರದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೃಥ್ವಿ ಶಾ ಆಟಕ್ಕೆ ಆಕರ್ಷಿತನಾಗಿದ್ದೇನೆ : ಕನ್ನಡಿಗ ಗುಂಡಪ್ಪ ವಿಶ್ವನಾಥ್

    ಪೃಥ್ವಿ ಶಾ ಆಟಕ್ಕೆ ಆಕರ್ಷಿತನಾಗಿದ್ದೇನೆ : ಕನ್ನಡಿಗ ಗುಂಡಪ್ಪ ವಿಶ್ವನಾಥ್

    ಚೆನ್ನೈ: ಟೀಂ ಇಂಡಿಯಾ ಯುವ ಆಟಗಾರರ ಪೃಥ್ವಿ ಶಾ ಅವರ ಆಟದ ಶೈಲಿಗೆ ನಾನು ಬಹಳ ಆಕರ್ಷಿತನಾಗಿದ್ದು, ಇದು ಶಾ ವೃತ್ತಿಜೀವನದ ಆರಂಭ ದಿನಗಳಾದರೂ ಅವರ ಆಟವನ್ನು ನೋಡಲು ಇಷ್ಟವಾಗುತ್ತದೆ ಎಂದು ಮಾಜಿ ಕ್ರಿಕೆಟ್ ಆಟಗಾರ ಜಿಆರ್ ವಿಶ್ವನಾಥ್ ಹೇಳಿದ್ದಾರೆ.

    ಚೆನ್ನೈನಲ್ಲಿ ಈ ಕುರಿತು ಮಾತನಾಡಿದ ವಿಶ್ವನಾಥ್ ಅವರು, ಶಾ ಆಟವನ್ನು ನಾನು ಕಳೆದ ಕೆಲ ಸಮಯದಿಂದ ನೋಡುತ್ತಿದ್ದೇನೆ. ರಣಜಿ ಇನ್ನಿಂಗ್ಸ್‍ನಲ್ಲೂ ಶಾ ಬ್ಯಾಟಿಂಗ್ ಶೈಲಿಯನ್ನು ಗಮನಿಸಿದ್ದೇನೆ. ಟೆಸ್ಟ್ ಕ್ರಿಕೆಟ್‍ನಲ್ಲೂ ಅವರು ಶೈಲಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದು ಅವರಲ್ಲಿನ ಸಾಮಥ್ರ್ಯವನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ವಿದೇಶಿ ನೆಲದಲ್ಲಿ ಶಾ ಯಶಸ್ವಿ ಆಗುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಒಬ್ಬ ಆಟಗಾರ ಪ್ರದರ್ಶನವನ್ನು ನೋಡಿ ಅವರ ಈ ಕುರಿತು ನಿರ್ಧರಿಸಬೇಕಾಗುತ್ತದೆ. ಯಾರೂ ಪ್ರದರ್ಶನಕ್ಕೆ ಮುನ್ನವೇ ತಿಳಿಯಲು ಸಾಧ್ಯವಿಲ್ಲ. ಆದರೆ ಶಾ ರಣಜಿ, ದುಲೀಪ್ ಟ್ರೋಫಿಯಲ್ಲಿ ಉತ್ತಮ ರನ್ ಗಳಿಸಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲೂ ರನ್ ಗಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

    ಈಗಾಗಲೇ ಶಾ ತಾವು ಉತ್ತಮ ಆರಂಭಿಕ ಆಟಗಾರ ಎಂದು ಸಾಬೀತು ಪಡಿಸಿದ್ದಾರೆ. ಒಬ್ಬ ಆರಂಭಿಕನಾಗಿ ಅವರ ಬ್ಯಾಟಿಂಗ್ ಶೈಲಿ ಅತ್ಯುತ್ತಮವಾಗಿದೆ. ಅದ್ದರಿಂದ ಅವರು ಹೆಚ್ಚಿನ ಅವಕಾಶಗಳನ್ನು ಪಡೆಯುವ ಆರ್ಹತೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಶಾ 2ನೇ ಟೆಸ್ಟ್ ನಲ್ಲೂ ಬಿರುಸಿನ ಆಟವಾಡಿದ್ದು, ಕೇವಲ 39 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿ ಮಿಂಚಿದ್ದರು. 70 ಎಸೆತಗಳಲ್ಲಿ 11 ಅಕರ್ಷಕ ಬೌಂಡರಿ, 1 ಸಿಕ್ಸರ್ ನೆರವಿನಿಂದ 70 ರನ್ ಸಿಡಿಸಿ ಜಾರ್ನೆಲ್ ವಾರಿಕಾನ್ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಸ್‍ಜಿ ಚೆಂಡಿನ ವಿರುದ್ಧ ಅಶ್ವಿನ್ ಅಸಮಾಧಾನ – 1 ಎಸ್‍ಜಿ ಚೆಂಡಿಗೆ ಎಷ್ಟು ರೂ.? ಯಾವ ದೇಶದಲ್ಲಿ ಯಾವ ಬಾಲ್ ಬಳಕೆಯಿದೆ?

    ಎಸ್‍ಜಿ ಚೆಂಡಿನ ವಿರುದ್ಧ ಅಶ್ವಿನ್ ಅಸಮಾಧಾನ – 1 ಎಸ್‍ಜಿ ಚೆಂಡಿಗೆ ಎಷ್ಟು ರೂ.? ಯಾವ ದೇಶದಲ್ಲಿ ಯಾವ ಬಾಲ್ ಬಳಕೆಯಿದೆ?

    ರಾಜ್‍ಕೋಟ್: ವಿಂಡೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಬಳಕೆ ಮಾಡಿರುವ ಎಸ್‍ಜಿ ಚೆಂಡಿನ ವಿರುದ್ಧ ಟೀಂ ಇಂಡಿಯಾ ಅನುಭವಿ ಆಟಗಾರ ಆರ್ ಅಶ್ವಿನ್ ಅಸಮಾಧಾನ ಹೊರಹಾಕಿದ್ದು, ಎಸ್‍ಜಿ ಚೆಂಡು ಈ ಹಿಂದೆ ನಾವು ಬಳಕೆ ಮಾಡಿದ ಗುಣಮಟ್ಟದಲ್ಲಿ ಇಲ್ಲ ಎಂದು ನೇರವಾಗಿಯೇ ಆರೋಪಿಸಿದ್ದಾರೆ.

    ಜಯಗಳಿಸಿದ ಬಳಿಕ ಮಾತನಾಡಿದ ಅಶ್ವಿನ್, ಪಂದ್ಯಕ್ಕೆ ಬಳಕೆ ಮಾಡಿದ ಎಸ್‍ಜಿ ಚೆಂಡು ಗುಣಮಟ್ಟ ನಿರಾಸೆ ಮೂಡಿಸಿದ್ದು, ಈ ಹಿಂದೆ ಬಳಕೆ ಮಾಡುತ್ತಿದ್ದ ಚೆಂಡು 70-80 ಓವರ್ ಗಳ ಬಳಿಕವೂ ಉತ್ತಮವಾಗಿರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಕುಕಾಬುರಾ ಹಾಗೂ ಡ್ಯೂಕ್ಸ್ ಚೆಂಡಿನ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಅಶ್ವಿನ್, ಕುಕಾಬುರಾ ಬಿಳಿ ಬಣ್ಣದ ಚೆಂಡು ಹೆಚ್ಚು ಸ್ವಿಂಗ್ ಆಗುವುದಿಲ್ಲ. ಆದರೆ ಕೆಂಪು ಬಣ್ಣದ ಚೆಂಡು ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

    ಈ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ ಗಳಿಂದ 6 ವಿಕೆಟ್ ಪಡೆದ ಅಶ್ವಿನ್ ದಕ್ಷಿಣ ಆಫ್ರಿಕಾ ವೇಗಿ ಅಲನ್ ಡೊನಾಲ್ಡ್ (330 ವಿಕೆಟ್) ಅವರನ್ನು ಹಿಂದಿಕ್ಕಿದ್ದಾರೆ. ಅಶ್ವಿನ್ ಮೊದಲ ಇನ್ನಿಂಗ್ಸ್ ನಲ್ಲಿ 37 ರನ್ ನೀಡಿ 4 ವಿಕೆಟ್, 2ನೇ ಇನ್ನಿಂಗ್ಸ್ ನಲ್ಲಿ 71 ರನ್ ನೀಡಿ 2 ಪಡೆಯುವ ಮೂಲಕ ಒಟ್ಟಾರೆ ಟೆಸ್ಟ್ ಪಂದ್ಯಗಳಲ್ಲಿ 333 ವಿಕೆಟ್ ಪಡೆದ ಸಾಧನೆ ಮಾಡಿದರು. ಇದರೊಂದಿಗೆ ವಿಶ್ವ ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಅಶ್ವಿನ್ 24ನೇ ಸ್ಥಾನ ಪಡೆದಿದ್ದಾರೆ.

    ಅಂದಹಾಗೇ ವಿಶ್ವ ಕ್ರಿಕೆಟ್‍ನಲ್ಲಿ ನಡೆಯುವ ಪಂದ್ಯದಲ್ಲಿ ವಿವಿಧ ದೇಶಗಳಲ್ಲಿ ಆಯಾ ಕಂಪೆನಿಗಳು ತಯಾರಿಸಿದ ಚೆಂಡು ಬಳಕೆ ಮಾಡುತ್ತಾರೆ. ಪ್ರಮುಖವಾಗಿ ಕುಕಾಬುರಾ ಚೆಂಡನ್ನು ಆಸ್ಟ್ರೇಲಿಯಾದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಈ ಚೆಂಡನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ಮತ್ತು ಜಿಂಬಾಂಬ್ವೆ ದೇಶಗಳಲ್ಲಿ ನಡೆಯುವ ಪಂದ್ಯದ ವೇಳೆ ಬಳಕೆ ಮಾಡಲಾಗುತ್ತದೆ.

    ಡ್ಯೂಕ್ಸ್ ಚೆಂಡನ್ನು ಇಂಗ್ಲೆಂಡ್‍ನಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಇದನ್ನು ಇಂಗ್ಲೆಂಡ್, ಯುಕೆ ಮತ್ತ ವೆಸ್ಟ್ ಇಂಡೀಸ್ ದೇಶಗಳಲ್ಲಿ ಬಳಕೆ ಮಾಡಲಾಗುತ್ತದೆ. ಉಳಿದಂತೆ ಎಸ್‍ಜಿ ಚೆಂಡನ್ನು ಭಾರತದಲ್ಲಿ ಉತ್ಪಾದನೆ ಮಾಡಿ ಇಲ್ಲಿನ ಪಂದ್ಯಗಳಲ್ಲಿ ಮಾತ್ರ ಬಳಕೆ ಮಾಡುತ್ತಾರೆ.

    ಈ ಮೂರು ಕಂಪೆನಿಗಳು ಉತ್ಪಾದನೆ ಮಾಡುವ ಚೆಂಡುಗಳಲ್ಲಿ ಪ್ರಮುಖವಾಗಿ ಚೆಂಡಿನ ಹೊಲಿಗೆ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಆಯಾ ದೇಶಗಳ ವಾತಾವರಣಕ್ಕೆ ಅನುಗುಣವಾಗಿ ಚೆಂಡನ್ನು ತಯಾರು ಮಾಡಲಾಗುತ್ತದೆ. ಎಸ್‍ಜಿ ಬಾಲಿನ ಸಮಸ್ಯೆ ಏನೆಂದರೆ ಅದಷ್ಟು ಬೇಗ ಬಾಲ್ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಕುಕಾಬುರಾ ಚೆಂಡು 20 ಓವರ್, ಡ್ಯೂಕ್ಸ್ ಚೆಂಡು 50-55, ಎಸ್‍ಜಿ 10 ಓವರ್ ಗಳ ವರೆಗೂ ಸ್ವಿಂಗ್ ಆಗುವ ಸಾಮಥ್ರ್ಯ ಹೊಂದಿದೆ.

    ಸ್ಯಾನ್ಸ್ಪೆರೆಲ್ಸ್ ಗ್ರೀನ್ಸ್ ಲ್ಯಾಂಡ್ ಬಾಲ್ ಗಳನ್ನು ಸಂಕ್ಷಿಪ್ತವಾಗಿ ಎಸ್‍ಜಿ ಬಾಲ್ ಎಂದೇ ಕರೆಯಲಾಗುತ್ತದೆ. ಉತ್ತರ ಪ್ರದೇಶ ಮೀರತ್ ನಲ್ಲಿರುವ ಕಂಪೆನಿ ಈ ಬಾಲ್ ಗಳನ್ನು ತಯಾರಿಸುತ್ತದೆ. ಕುಕಾಬುರಾ ಬಾಲಿಗೆ ಹೋಲಿಸಿದರೆ ಭಾರತದಲ್ಲಿ ಒಂದು ಎಸ್‍ಜಿ ಬಾಲ್ ಬೆಲೆ ಕಡಿಮೆಯಿದೆ. ಒಂದು ಕುಕಾಬುರಾ ಚೆಂಡಿನ ಬೆಲೆ 2,299 ರೂ. ಇದ್ದರೆ ಎಸ್‍ಜಿ ಬಾಲಿನ ಬೆಲೆ 1,464 ರೂ. ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐತಿಹಾಸಿಕ ಗೆಲುವಿನ ಬಳಿಕ ಐಸಿಸಿ ನಿಯಮದ ವಿರುದ್ಧ ಕೊಹ್ಲಿ ಅಸಮಾಧಾನ!

    ಐತಿಹಾಸಿಕ ಗೆಲುವಿನ ಬಳಿಕ ಐಸಿಸಿ ನಿಯಮದ ವಿರುದ್ಧ ಕೊಹ್ಲಿ ಅಸಮಾಧಾನ!

    ರಾಜ್‍ಕೋಟ್: ಇಲ್ಲಿನ ಸೌರಾಷ್ಟ್ರ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಪಡೆಯುವ ಮೂಲಕ ತವರಿನಲ್ಲಿ ಆಡಿದ ಟೆಸ್ಟ್ ನಲ್ಲಿ 100ನೇ ಗೆಲುವು ತನ್ನದಾಗಿಸಿಕೊಂಡಿದೆ. ಇದರ ನಡುವೆ ನಾಯಕ ವಿರಾಟ್ ಕೊಹ್ಲಿ ಐಸಿಸಿ ನಿಯಮದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೊಹ್ಲಿ, ಪಂದ್ಯದ ವೇಳೆ ಆಟಗಾರರಿಗೆ ವಾಟರ್ ಬ್ರೇಕ್ ಅವಕಾಶವನ್ನು ವಿಕೆಟ್ ಉರುಳಿದ ವೇಳೆ ಹಾಗೂ ನಿಗದಿತ ಓವರ್ ಗಳ ಮುಕ್ತಾಯದ ವೇಳೆ ಅಂಪೈರ್ ನೀಡುವ ಸೂಚನೆ ಮೇರೆಗೆ ಮಾತ್ರ ಪಡೆಯಲು ಐಸಿಸಿ ಅವಕಾಶ ಕಲ್ಪಿಸಿದೆ. ಆದರೆ ಕೆಲ ಪಂದ್ಯಗಳ ವೇಳೆ ಅಧಿಕ ತಾಪಮಾನವಿದ್ದರೂ ಬ್ಯಾಟ್ಸ್ ಮನ್‍ಗಳಿಗೆ ಹೆಚ್ಚಿನ ಬ್ರೇಕ್ ಪಡೆಯಲು ಅವಕಾಶವಿಲ್ಲ. ಅದ್ದರಿಂದ ಈ ನಿಯಮವನ್ನು ಬದಲಿಸಬೇಕು ಎಂದು ಕೊಹ್ಲಿ ತಿಳಿಸಿದ್ದಾರೆ.

    ಬ್ಯಾಟ್ಸ್ ಮನ್ 40 ರಿಂದ 45 ನಿಮಿಷಗಳ ಅಂತರದಲ್ಲಿ ಅಂಪೈರ್ ಗಳ ಅನುಮತಿ ಮೇರೆಗೆ ಮಾತ್ರ ವಾಟರ್ ಬ್ರೇಕ್ ಪಡೆಯಲು ಅವಕಾಶವಿದೆ. ಇದರಿಂದ ಈ ಪಂದ್ಯದ ವೇಳೆಯೂ ಎರಡು ತಂಡದ ಆಟಗಾರರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಈ ಕುರಿತು ಐಸಿಸಿ ಗಮನಹರಿಸಿ ಕ್ರಮಕೈಗೊಳ್ಳುವ ನಿರೀಕ್ಷೆ ಇದೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು.

    ವಿಂಡೀಸ್ ವಿರುದ್ಧದ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ತಮ್ಮ ಪಾಕೆಟ್‍ನಲ್ಲಿ ವಾಟರ್ ಬಾಟಲ್ ತೆಗೆದುಕೊಂಡು ಬಂದ ಘಟನೆಯನ್ನು ಇಲ್ಲಿ ನೆನಪು ಮಾಡಬಹುದಾಗಿದೆ. ಪಂದ್ಯದ ನಡುವೆ ವಿರಾಮ ಇಲ್ಲದಿದ್ದರೂ ನೀರಿನ ಬಾಟಲಿ ತಂದು ನೀರು ಕುಡಿದ ಚೇತೇಶ್ವರ ಪೂಜಾರ ಅವರನ್ನು ನೋಡಿ ಪ್ರೇಕ್ಷಕರು ಕ್ಷಣ ಕಾಲ ಅಚ್ಚರಿಗೊಂಡಿದ್ದರು. ಈ ವಿಡಿಯೋವನ್ನು ಬಿಸಿಸಿಐ ಕೂಡ ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/KabaliOf/status/1047725468076531712