Tag: test

  • ಪರ್ತ್ ಟೆಸ್ಟ್: ಆಸೀಸ್ 326ಕ್ಕೆ ಆಲೌಟ್ – ಟೀಂ ಇಂಡಿಯಾಗೆ ಆರಂಭಿಕ ಆಘಾತ

    ಪರ್ತ್ ಟೆಸ್ಟ್: ಆಸೀಸ್ 326ಕ್ಕೆ ಆಲೌಟ್ – ಟೀಂ ಇಂಡಿಯಾಗೆ ಆರಂಭಿಕ ಆಘಾತ

    ಪರ್ತ್: ಆಸೀಸ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 108.3 ಓವರ್ ಗಳಲ್ಲಿ 326 ರನ್‍ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿದೆ.

    2ನೇ ದಿನದಾಟವನ್ನು 6 ವಿಕೆಟ್ ಗೆ 277 ರನ್‍ ಗಳಿಂದ ಆರಂಭಿಸಿದ ಆಸೀಸ್‍ಗೆ ನಾಯಕ ಪೈನ್ ಹಾಗೂ ಪ್ಯಾಟ್ ಕಮ್ಮಿನ್ಸ್ ಉತ್ತರ ಆರಂಭ ನೀಡಿ 7ನೇ ವಿಕೆಟ್ ಗೆ 59 ರನ್‍ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ದಾಳಿಗಿಳಿದ ಉಮೇಶ್ ಯಾದವ್ 19 ರನ್ ಗಳಿಸಿದ್ದ ಕಮ್ಮಿನ್ಸ್ ವಿಕೆಟ್ ಪಡೆದರು. ಇದರ ಬೆನಲ್ಲೇ ಬುಮ್ರಾ 38 ಗಳಿಸಿದ್ದ ಪೈನ್ ವಿಕೆಟ್ ಪಡೆದು ಆಸೀಸ್ ತಂಡಕ್ಕೆ ಆಘಾತ ನೀಡಿದರು. ಬಳಿಕ ಬಂದ ಮಿಚೆಲ್ ಸ್ಟಾರ್ಕ್ 6 ರನ್ ಹಾಗೂ ಜೋಶ್ ಹೇಜಲ್‍ವುಡ್ ಶೂನ್ಯ ರನ್ ಗಳಿಸಿ ಬಂದಷ್ಟೇ ವೇಗದಲ್ಲಿ ಹಿಂದಿರುಗಿದರು. ಇದರೊಂದಿಗೆ ಆಸೀಸ್ 326 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

    ಭಾರತದ ಪರ ಇಶಾಂತ್ ಶರ್ಮಾ 4 ವಿಕೆಟ್ ಪಡೆದು ಮಿಂಚಿದರೆ ಬುಮ್ರಾ, ಉಮೇಶ್ ಯಾದವ್ ಹಾಗೂ ಹನುಮ ವಿಹಾರಿ ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ ಹ್ಯಾರಿಸ್ 70 ರನ್, ಆ್ಯರೋನ್ ಫಿಂಚ್ 50 ಹಾಗೂ ಟ್ರಾವಿಸ್ ಹೆಡ್‍ರ ಅರ್ಧ ಶತಕದ ನೆರವಿನಿಂದ ಮೊದಲ ದಿನದಾಂತ್ಯಕ್ಕೆ 90 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತ್ತು.

    ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಸ್ಟಾರ್ಕ್ ಆರಂಭಿಕ ಆಘಾತ ನೀಡಿದ್ದು, ಮುರಳಿ ವಿಜಯ್ ಖಾತೆ ತೆರೆಯುವ ಮುನ್ನವೇ ಔಟಾದರು. ಇದರ ಬೆನ್ನಲ್ಲೇ ಮತ್ತೊಬ್ಬ ಆರಂಭಿಕ ಕೆಎಲ್ ರಾಹುಲ್ 2 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಕೇವಲ 8 ರನ್ ಗಳಿಗೆ ತಂಡದ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿದರು. ಇದರೊಂದಿಗೆ ಭಾರತ ಉತ್ತಮ ಆರಂಭ ಪಡೆಯಲು ವಿಫಲವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಆಸೀಸ್ ವಿರುದ್ಧದ 2ನೇ ಟೆಸ್ಟ್ ನಿಂದ ಅಶ್ವಿನ್, ರೋಹಿತ್ ಔಟ್

    ಆಸೀಸ್ ವಿರುದ್ಧದ 2ನೇ ಟೆಸ್ಟ್ ನಿಂದ ಅಶ್ವಿನ್, ರೋಹಿತ್ ಔಟ್

    ಪರ್ತ್: ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾದ ಆಟಗಾರ ರೋಹಿತ್ ಶರ್ಮಾ ಹಾಗೂ ಆರ್ ಅಶ್ವಿನ್‍ರನ್ನು ಹೊರಗಿಡಲಾಗಿದ್ದು, ಹನುಮ ವಿಹಾರಿ, ರವೀಂದ್ರ ಜಡೇಜಾ ಸೇರಿದಂತೆ 13 ಸದಸ್ಯ ಆಟಗಾರರ ಪಟ್ಟಿಯನ್ನು ಬಿಸಿಸಿ ಪ್ರಕಟಿಸಿದೆ.

    ಪರ್ತ್ ಕ್ರೀಡಾಂಗಣದಲ್ಲಿ ಡಿ. 14 ರಿಂದ 2ನೇ ಟೆಸ್ಟ್ ಆರಂಭವಾಗಲಿದ್ದು, ಮೊದಲ ಟೆಸ್ಟ್‍ಗೆ ಕಮ್ ಬ್ಯಾಕ್ ಮಾಡಿದ್ದ ರೋಹಿತ್ ಶರ್ಮಾ ಹಾಗೂ ಅನುಭವಿ ಸಿನ್ನರ್ ಆರ್ ಅಶ್ವಿನ್ ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದಾರೆ. ರೋಹಿತ್ ಸ್ಥಾನದಲ್ಲಿ ಯುವ ಆಟಗಾರ ಹನುಮ ವಿಹಾರಿ ಹಾಗೂ ಅಶ್ವಿನ್ ಸ್ಥಾನದಲ್ಲಿ ಜಡೇಜಾ ಆಯ್ಕೆ ಆಗಿದ್ದಾರೆ. ಇನ್ನು ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿದ್ದ ಪೃಥ್ವಿ ಶಾಗೆ ವಿಶ್ರಾಂತಿ ನೀಡಲಾಗಿದೆ.

    ಉಳಿದಂತೆ ತಂಡದಲ್ಲಿ ಮುರಳಿ ವಿಜಯ್, ಕೆಎಲ್ ರಾಹುಲ್, ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಬ್ ಪಂತ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದು, ವೇಗಿಗಳಾಗಿ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‍ಪ್ರೀತ್ ಬುಮ್ರಾ ರೊಂದಿಗೆ ಭುವನೇಶ್ವರ್ ಕುಮಾರ್ ಹಾಗೂ ಉಮೇಶ್ ಯಾದವ್ ಕೂಡ ಪಟ್ಟಿಯಲ್ಲಿದೆ.

    ಮೊದಲ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಆತ್ಮ ವಿಶ್ವಾಸದಲ್ಲಿರುವ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ತಲೆನೋವಾಗಿದ್ದು, ಬಿಸಿಸಿಐ ಆಡಳಿತ ಮಂಡಳಿ ನಿಗಾವಹಿಸಿದೆ. ಅಲ್ಲದೇ ಮೂರನೇ ಟೆಸ್ಟ್ ಪಂದ್ಯದ ವೇಳೆ ಆಟಗಾರರನ್ನು ಮತ್ತೆ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ನಿರೀಕ್ಷೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಧೋನಿ ದೇಶದ ಹೀರೋ, ನನ್ನ ಸಾಧನೆ ಅವರಿಗೆ ಅರ್ಪಣೆ: ರಿಷಬ್ ಪಂತ್

    ಧೋನಿ ದೇಶದ ಹೀರೋ, ನನ್ನ ಸಾಧನೆ ಅವರಿಗೆ ಅರ್ಪಣೆ: ರಿಷಬ್ ಪಂತ್

    ಸಿಡ್ನಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ದೇಶದ ಹೀರೋ. ನನ್ನ ಸಾಧನೆಯ ಹಿಂದೆ ಅವರ ಸಲಹೆಗಳು ಪ್ರಮುಖ ಪಾತ್ರವಹಿಸಿದೆ. ಅವರಿಂದಲೇ ನಾನು ಹೆಚ್ಚು ಸ್ಫೂರ್ತಿ ಪಡೆದಿದ್ದೇನೆ ಎಂದು ಯುವ ಆಟಗಾರ, ಕೀಪರ್ ರಿಷಬ್ ಪಂತ್ ಹೇಳಿದ್ದಾರೆ.

    ಆಸೀಸ್ ವಿರುದ್ಧ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ 11 ಕ್ಯಾಚ್ ಪಡೆದು ಭಾರತದ ಪರ ದಾಖಲೆ ಬರೆದ ರಿಷಬ್ ಪಂತ್, ಧೋನಿ ಅವರ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಧೋನಿ ನನಗೆ ಹಲವು ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ್ದರು. ಅವರು ನನ್ನ ಬಳಿ ಇದ್ದರೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಳವಾಗುತ್ತದೆ. ಒಬ್ಬ ವಿಕೆಟ್ ಕೀಪರ್ ಆಗಿ ಮಾತ್ರವಲ್ಲದೇ ವ್ಯಕ್ತಿಗತವಾಗಿಯೂ ಧೋನಿ ಅವರಿಂದ ನಾನು ಹೆಚ್ಚು ಕಲಿತಿದ್ದೇನೆ. ನನ್ನ ಸಮಸ್ಯೆಗಳ ಬಗ್ಗೆಯೂ ಧೋನಿ ಅವರೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

    ಕ್ರೀಡಾಂಗಣದಲ್ಲಿ ಒತ್ತಡದ ಸನ್ನಿವೇಶಗಳನ್ನು ಎದುರಿಸುವುದು ಹೇಗೆ ಎನ್ನುವುದರ ಬಗ್ಗೆಯೂ ಸಲಹೆ ನೀಡಿದ್ದಾರೆ. ಶೇ.100 ಆಟದ ಮೇಲೆ ಗಮನ ನೀಡಿದರೆ ಒತ್ತಡವನ್ನು ಸುಲಭವಾಗಿ ನಿಭಾಯಿಸಬಹುದು ಎಂದು ಧೋನಿ ಸಲಹೆ ನೀಡಿದ್ದಾಗಿ ರಿಷಬ್ ಪಂತ್ ಹೇಳಿದ್ದಾರೆ. ಅಡಿಲೇಡ್ ಪಂದ್ಯದಲ್ಲಿ 11 ಕ್ಯಾಚ್ ಪಡೆದ ಪಂತ್ ಜಾಕ್ ರುಸೆಲ್, ಎಬಿ ಡಿ ವಿಲಿಯರ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದು, ಭಾರತದ ಪರ ವೃದ್ಧಿಮಾನ್ ಸಹಾ (10 ಕ್ಯಾಚ್) ದಾಖಲೆಯನ್ನು ಮುರಿದಿದ್ದರು.

    ರಿಷಬ್ ಸ್ಲೆಡ್ಜಿಂಗ್: ಆಸೀಸ್ ಆಟಗಾರರು ತಮ್ಮ ಮೇಲೆ ಪ್ರಯೋಗ ಮಾಡಿದ್ದ ಸ್ಲೆಡ್ಜಿಂಗ್ ಅಸ್ತ್ರವನ್ನೇ ಮರು ಪ್ರಯೋಗ ಮಾಡಿದ ರಿಷಬ್ ಪಂತ್ ಆಸೀಸ್ ಆಟಗಾರ ಪ್ಯಾಟ್ ಕಮ್ಮಿನ್ಸ್ ಬ್ಯಾಟಿಂಗ್ ಮಾಡುವ ಮೂಲಕ ವೇಳೆ ಪ್ಯಾಟ್ ಕಳೆದರು. ಪಂತ್ ಮಾತನಾಡಿರುವ ಸಂರ್ಪೂಣ ಸಂಭಾಷಣೆ ಸ್ಟಂಪ್ ಮೈಕಿನಲ್ಲಿ ದಾಖಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ರೀ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಡಿಲೇಡ್ ಪಂದ್ಯದಲ್ಲಿ ಮತ್ತೊಮ್ಮೆ ದ್ರಾವಿಡ್ ನೆನಪಿಸಿದ ಚೇತೇಶ್ವರ ಪೂಜಾರ

    ಅಡಿಲೇಡ್ ಪಂದ್ಯದಲ್ಲಿ ಮತ್ತೊಮ್ಮೆ ದ್ರಾವಿಡ್ ನೆನಪಿಸಿದ ಚೇತೇಶ್ವರ ಪೂಜಾರ

    ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದ್ದು, ಪಂದ್ಯ ಗೆಲ್ಲಲು ಪ್ರಮುಖ ಕಾರಣರಾಗಿದ್ದ ಅನುಭವಿ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೇ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲೂ ಅರ್ಧ ಶತಕ ಸಿಡಿಸುವ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾ ಮಾಜಿ ಆಟಗಾರ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ನೆನಪಿಸಿದ್ದಾರೆ.

    ಅಡಿಲೇಡ್ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಹಾಗು ರಾಹುಲ್ ದ್ರಾವಿಡ್ ಅವರ ಈ ಹಿಂದಿನ ಬ್ಯಾಟಿಂಗ್ ದಾಖಲೆಗಳಲ್ಲಿ ಹಲವು ಸಾಮ್ಯತೆಗಳು ಕಾಣಿಸಿದೆ. 2003 ರಲ್ಲಿ ಆಸೀಸ್ ಪ್ರವಾಸ ಕೈಗೊಂಡಿದ್ದ ರಾಹುಲ್ ದ್ರಾವಿಡ್ ಅಡಿಲೇಡ್ ಕ್ರೀಡಾಂಗಣದಲ್ಲಿ ಮೊದಲ ಶತಕ ಸಿಡಿಸಿದ್ದರು. ಚೇತೇಶ್ವರ ಪೂಜಾರ ಕೂಡ ಅಡಿಲೇಡ್ ಕ್ರೀಡಾಂಗಣದಲ್ಲಿ ತಮ್ಮ ಶತಕ ಪೂರೈಸಿದ್ದಾರೆ. ವಿಶೇಷವೆಂದರೆ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಬ್ಬರು ಶತಕ ಸಿಡಿಸಿದ್ದರು. ಅಲ್ಲದೇ 2ನೇ ಇನ್ನಿಂಗ್ಸ್ ನಲ್ಲಿ ಅರ್ಧ ಶತಕ ಸಿಡಿದ್ದರು.

    2003ರ ಟೆಸ್ಟ್ ಸರಣಿಯ ಬ್ರಿಸ್ಬೇನ್ ನಲ್ಲಿ ನಡೆ ಮೊದಲ ಪಂದ್ಯ ಡ್ರಾ ಆಗಿದ್ದರೆ, ಅಡಿಲೇಡ್ ನಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 4 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದ ರಾಹುಲ್ ದ್ರಾವಿಡ್ ಮೊದಲ ಇನ್ನಿಂಗ್ಸ್ ನಲ್ಲಿ 233 ರನ್(446 ಎಸೆತ, 23 ಬೌಂಡರಿ, 1 ಸಿಕ್ಸರ್) ಹೊಡೆದಿದ್ದರೆ ಎರಡನೇ ಇನ್ನಿಂಗ್ಸ್ ನಲ್ಲಿ ಔಟಾಗದೇ 72 ರನ್(170 ಎಸೆತ, 7 ಬೌಂಡರಿ) ಹೊಡೆದಿದ್ದರು. ಪೂಜರಾ ಮೊದಲ ಇನ್ನಿಂಗ್ಸ್ ನಲ್ಲಿ 123 ರನ್(546 ಎಸೆತ, 7 ಬೌಂಡರಿ, 2 ಸಿಕ್ಸರ್) ಬಾರಿಸಿದ್ದರೆ ಎರಡನೇ ಇನ್ನಿಂಗ್ಸ್ ನಲ್ಲಿ 71 ರನ್(204 ಎಸೆತ, 9 ಬೌಂಡರಿ) ಹೊಡೆದಿದ್ದರು. ಅಷ್ಟೇ ಅಲ್ಲದೇ ದ್ರಾವಿಡ್ ಮತ್ತು ಪೂಜಾರ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ.

    ಪಂದ್ಯದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಟೆಸ್ಟ್ ಕ್ರಿಕೆಟ್‍ನಲ್ಲಿ 5 ಸಾವಿರ ರನ್ ಪೂರೈಸಿದ ಹೆಗ್ಗಳಿಕೆಯನ್ನ ಪೂಜಾರ ಪಡೆದರು. ಕಾಕತಾಳೀಯ ಎಂಬಂತೆ ರಾಹುಲ್ ಹಾಗೂ ಪೂಜಾರ ತಮ್ಮ ವೃತ್ತಿ ಜೀವನದಲ್ಲಿ 3 ಸಾವಿರ (67 ಇನ್ನಿಂಗ್ಸ್), 4 ಸಾವಿರ (84 ಇನ್ನಿಂಗ್ಸ್), 5 ಸಾವಿರ (108 ಇನ್ನಿಂಗ್ಸ್) ರನ್ ಗಳನ್ನು ಪೂರೈಸಿದ್ದರು.

    ಉಳಿದಂತೆ ಆಸೀಸ್ ಟೂರ್ನಿಯ ಮೊದಲ ಟೆಸ್ಟ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಪೂಜಾರ ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ಈ ಗೌರವಕ್ಕೆ ಪಾತ್ರರಾದರು. ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಪೂಜಾರ ಮೊದಲ ಇನ್ನಿಂಗ್ಸ್ ನಲ್ಲಿ 123 ರನ್, 2ನೇ ಇನ್ನಿಂಗ್ಸ್ ನಲ್ಲಿ ಮಹತ್ವದ 71 ರನ್ ಗಳಿಸಿದ್ದರು. ಇದರೊಂದಿಗೆ ಒಂದೇ ಪಂದ್ಯದಲ್ಲಿ ಶತಕ, ಅರ್ಧ ಶತಕ ಎರಡನ್ನು ಮೊದಲ ಬಾರಿಗೆ ಪೂರೈಸಿದರು. ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೊಹ್ಲಿ ಪೂಜಾರ ಬ್ಯಾಟಿಂಗನ್ನು ಬೆಲೆ ಕಟ್ಟಲಾಗದ್ದು ಎಂದು ಕೊಂಡಾಡಿದ್ದಾರೆ. ಅಲ್ಲದೇ ರಹಾನೆ, ಪೂಜಾರ ನಡುವಿನ 2ನೇ ಇನ್ನಿಂಗ್ಸ್ ಜೊತೆಯಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ಸರಿಗಟ್ಟಿದ ರಿಷಬ್ ಪಂತ್

    ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ಸರಿಗಟ್ಟಿದ ರಿಷಬ್ ಪಂತ್

    ಅಡಿಲೇಡ್: ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆಯುವ ಮೂಲಕ ವಿಶ್ವದಾಖಲೆ ಸರಿಗಟ್ಟಿದ್ದಾರೆ.

    21 ವರ್ಷದ ರಿಷಬ್ ಪಂತ್ ಅಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 11 ಕ್ಯಾಚ್ ಪಡೆದಿದ್ದಾರೆ. ಈ ಮೂಲಕ 2013 ರಲ್ಲಿ ದಕ್ಷಿಣ ಆಫ್ರಿಕಾ ಕೀಪರ್ ಎಬಿ ಡಿ ವಿಲಿಯರ್ಸ್ ಪಾಕಿಸ್ತಾನದ ವಿರುದ್ಧ ಹಾಗೂ 2013ರಲ್ಲಿ ಇಂಗ್ಲೆಂಡ್ ಆಟಗಾರ ಜಾಕ್ ರಸೆಲ್ ಆಫ್ರಿಕಾ ವಿರುದ್ಧ 11 ಕ್ಯಾಚ್ ಪಡೆದ ವಿಶ್ವದಾಖಲೆಯನ್ನು ಪಂತ್ ಸರಿಗಟ್ಟಿದ್ದಾರೆ.

    ಭಾರತದ ಪರ ಪಂದ್ಯವೊಂದರಲ್ಲಿ ವೃದ್ಧಿಮಾನ್ ಸಹಾ 10 ಕ್ಯಾಚ್ ಪಡೆದಿದ್ದರೆ, ಧೋನಿ 9 ಕ್ಯಾಚ್ ಪಡೆದಿದ್ದಾರೆ. ವೃದ್ಧಿಮಾನ್ ಸಹಾ 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ, ಧೋನಿ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್ ಟೆಸ್ಟ್ ನಲ್ಲಿ 9 ಕ್ಯಾಚ್ ಪಡೆದಿದ್ದರು.

    ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನಲ್ಲಿ 6 ಕ್ಯಾಚ್ ಪಡೆಯುವ ಮೂಲಕ ರಿಷಬ್ ಪಂತ್ ಭಾರತದ ಪರ ಧೋನಿ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದರು. ಈ ಹಿಂದೆ 2009 ರಲ್ಲಿ ಧೋನಿ ಇನ್ನಿಂಗ್ಸ್ ಒಂದರಲ್ಲಿ 6 ಕ್ಯಾಚ್ ಪಡೆದಿದ್ದರು. ಪಂತ್ ವೃತ್ತಿ ಜೀವನದ 6ನೇ ಟೆಸ್ಟ್ ಪಂದ್ಯವನ್ನ ಆಡುತ್ತಿದ್ದು, ಇದುವರೆಗೂ 43.25 ಸರಾಸರಿಯಲ್ಲಿ 346 ರನ್ ಸಿಡಿಸಿದ್ದಾರೆ.

    ಕ್ಯಾಚ್ ಮೂಲಕ 35 ವಿಕೆಟ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿಶೇಷ ದಾಖಲೆ ನಿರ್ಮಾಣವಾಗಿದ್ದು, ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಪಂದ್ಯವೊಂದರಲ್ಲಿ 35 ಆಟಗಾರರು ಕ್ಯಾಚ್ ಮೂಲಕವೇ ಔಟ್ ಆಗಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ನಲ್ಲಿ ಎಲ್ಲ 10 ಆಟಗಾರರು ಕ್ಯಾಚ್ ಮೂಲಕವೇ ಔಟ್ ಆಗಿದ್ದಾರೆ. ಇದನ್ನು ಓದಿ : ಆಸ್ಟ್ರೇಲಿಯಾ ನೆಲದಲ್ಲಿ ವಿಶಿಷ್ಟ ಸಾಧನೆ ನಿರ್ಮಿಸಿದ ವಿರಾಟ್ ಕೊಹ್ಲಿ! 

    ಈ ಹಿಂದೆ 2018ರ ಕೇಪ್ ಟೌನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ 34 ವಿಕೆಟ್ ಕ್ಯಾಚ್ ಮೂಲಕ ಪಡೆಯಲಾಗಿತ್ತು. 1992ರ ಪಾರ್ಥ್ ನಲ್ಲಿ ನಡೆದ ಆಸ್ಟ್ರೇಲಿಯಾ, ಟೀಂ ಇಂಡಿಯಾ ವಿರುದ್ಧ ಪಂದ್ಯದಲ್ಲಿ 33 ಮಂದಿ ಕ್ಯಾಚ್ ನೀಡಿ ಔಟಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೋಚಕ ಹಂತದಲ್ಲಿ ಪ್ರಥಮ ಟೆಸ್ಟ್ – ಟೀಂ ಇಂಡಿಯಾ ಗೆಲುವಿಗೆ 6 ವಿಕೆಟ್ ಮಾತ್ರ ಬಾಕಿ

    ರೋಚಕ ಹಂತದಲ್ಲಿ ಪ್ರಥಮ ಟೆಸ್ಟ್ – ಟೀಂ ಇಂಡಿಯಾ ಗೆಲುವಿಗೆ 6 ವಿಕೆಟ್ ಮಾತ್ರ ಬಾಕಿ

    ಅಡಿಲೇಡ್: ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೇಲೆ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದ್ದು, ಗೆಲುವಿಗೆ ಕೇವಲ 6 ವಿಕೆಟ್ ಮಾತ್ರ ಬಾಕಿ ಇದೆ.

    4ನೇ ದಿನದಾಟದ ವೇಳೆ ಗೆಲ್ಲಲು 323 ಗೆಲುವಿನ ಗುರಿ ಪಡೆದ ಆಸ್ಟ್ರೇಲಿಯಾ 4ನೇ ದಿನದಾಟದ ಅಂತ್ಯಕ್ಕೆ 49 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದೆ. ಆಸೀಸ್ ತಂಡಕ್ಕೆ ಗೆಲ್ಲಲು 219 ರನ್ ಗಳ ಅವಶ್ಯಕತೆ ಇದ್ದು, ಟೀಂ ಇಂಡಿಯಾ ಸರಣಿಯಲ್ಲಿ ಮೊದಲ ಗೆಲುವಿನ ವಿಶ್ವಾಸದಲ್ಲಿದೆ.

    ಟೀಂ ಇಂಡಿಯಾ ನೀಡಿದ ಸವಾಲಿನ ಮೊತ್ತ ಬೆನ್ನಟ್ಟಿದ ಆಸೀಸ್‍ಗೆ ಉತ್ತಮ ಆರಂಭ ಪಡೆಯಲಿಲ್ಲ. ಆಸೀಸ್ ಆರಂಭಿಕ ಆಟಗಾರ ಫಿಂಚ್ 11 ರನ್ ಗಳಿಸಿದ್ದ ವೇಳೆ ಟೀಂ ಇಂಡಿಯಾ ಸ್ಪಿನ್ನರ್ ಅಶ್ವಿನ್‍ಗೆ ಬಲಿ ಪಡೆದರು. ಇತ್ತ ಮಾರ್ಕಸ್ ಹ್ಯಾರಿಸ್ ಕೂಡ 26 ರನ್ ಗಳಿಸಿ ಶಮಿಗೆ ವಿಕೆಟ್ ಒಪ್ಪಸಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಆಸೀಸ್ 44 ರನ್ ಗಳಿಗೆ ಆರಂಭಿಕ 2 ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ಉಸ್ಮಾನ್ ಖವಾಜಾ ಆರ್ ಅಶ್ವಿನ್ ಬೌಲಿಂಗ್ ದಾಳಿಯಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾಗಿ 8 ರನ್ ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಆಸೀಸ್ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದ ಪೀಟರ್ ಹ್ಯಾಂಡ್ಸ್ ಕಾಂಬ್ (14 ರನ್) ವಿಕೆಟ್ ಪಡೆಯಲು ಶಮಿ ಯಶಸ್ವಿಯಾದರು.

    ತಂಡದ ಪ್ರಮುಖ 4 ವಿಕೆಟ್ ಉರುಳುತ್ತಿದಂತೆ ರಕ್ಷಣಾತ್ಮಕ ಆಟಕ್ಕೆ ಮುಂದಾದ ಮಾರ್ಷ್ 92 ಎಸೆಗಳಲ್ಲಿ 31 ರನ್ ಹಾಗೂ ಹೆಡ್ 37 ಎಸೆತಗಳಲ್ಲಿ 11 ರನ್ ಗಳಿಸಿ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 4ನೇ ದಿನದಾಟದ ಅಂತ್ಯಕ್ಕೆ ಆಸೀಸ್ 49 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತು. ಇನ್ನು ಒಂದು ದಿನದ ಆಟ ಮಾತ್ರ ಬಾಕಿ ಇದ್ದು, ಆಸೀಸ್ ಗೆಲುವಿಗೆ 219 ರನ್, ಟೀಂ ಇಂಡಿಯಾ ಗೆಲುವಿಗೆ 6 ವಿಕೆಟ್ ಬಾಕಿ ಇದೆ. ಉಳಿದಂತೆ ಟೀಂ ಇಂಡಿಯಾ ಪರ ಶಮಿ, ಆರ್ ಅಶ್ವಿನ್ ತಲಾ ಎರಡು ಪಡೆದು ಮಿಂಚಿದರು.

    ಇದಕ್ಕೂ ಮುನ್ನ 4ನೇ ದಿನದಾಟ ಆರಭಿಸಿದ ಟೀಂ ಇಂಡಿಯಾಗೆ ಪೂಜಾರ 71 ರನ್, ರಹಾನೆ 70 ರನ್ ಸಿಡಿಸಿ ಔಟಾದರು. ಜೋಡಿ 4ನೇ ವಿಕೆಟ್‍ಗೆ ಮಹತ್ವದ 87 ರನ್ ಕಾಣಿಕೆ ನೀಡಿತು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿ ಮಿಂಚಿದ್ದ ಪೂಜಾರ ಅರ್ಧ ಶತಕ ಸಿಡಿಸಿದರೆ, ಇತ್ತ ಟೀಂ ಇಂಡಿಯಾ ಉಪನಾಯಕ ರಹಾನೆ ಕೂಡ ಅರ್ಧಶತಕ ಗಳಿಸಿದರು. ಈ ಹಂತದಲ್ಲಿ ಕೊಹ್ಲಿ, ಪೂಜಾರ ಜೋಡಿಯನ್ನು ಬೇರ್ಪಡಿಸಿದ್ದ ಆಸೀಸ್‍ಗೆ ಬಿಗ್ ರಿಲೀಫ್ ನೀಡಿದರು.

    ರೋಹಿತ್ ವಿಫಲ: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕಮ್ ಬ್ಯಾಕ್ ಮಾಡಿ ಮೊದಲ ಇನ್ನಿಂಗ್ಸ್ ನಲ್ಲಿ 37 ರನ್ ಸಿಡಿಸಿದ್ದ ರೋಹಿತ್ ಶರ್ಮಾ 2ನೇ ಇನ್ನಿಂಗ್ಸ್ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಬಂದ ರಿಷಬ್ ಪಂತ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿ ಕೇವಲ 16 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 28 ರನ್ ಗಳಿಸಿ ನಿರ್ಗಮಿಸಿದರು.

    ಈ ನಡುವೆ ಉತ್ತಮವಾಗಿ ಆಡುತ್ತಿದ್ದ ರಹಾನೆ ರಿವರ್ಸ್ ಸ್ವಿಪ್ ಮಾಡಲು ಯತ್ನಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಟೀಂ ಇಂಡಿಯಾ ಬಾಲಂಗೊಚಿಗಳಾದ ಆರ್ ಅಶ್ವಿನ್ 5 ರನ್, ಇಶಾಂತ್ ಶರ್ಮಾ ಮತ್ತು ಶಮಿ ಬಂದಷ್ಟೇ ವೇಗದಲ್ಲಿ ನಿರ್ಗಮಿಸಿದರು. ಅಂತಿಮವಾಗಿ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ನಲ್ಲಿ 106.5 ಓವರ್ ಗಳಲ್ಲಿ 307 ರನ್ ಗಳಿಗೆ ಅಲೌಟ್ ಆಯ್ತು. ಆಸೀಸ್ ಪರ ಲಯನ್ ಮಿಂಚಿನ ಬೌಲಿಂಗ್ ದಾಳಿ ನಡೆಸಿ 6 ವಿಕೆಟ್ ಪಡೆದರೆ, ಸ್ಟಾರ್ಕ್ 3 ಹಾಗೂ ಹೆಜಲ್‍ವುಡ್ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಲೆಡ್ಜಿಂಗ್ ಮಾಡಿದ ಆಸೀಸ್ ಆಟಗಾರನಿಗೆ ಕಿಚಾಯಿಸಿ ತಿರುಗೇಟು ಕೊಟ್ಟ ರಿಷಬ್ ಪಂತ್ – ವೈರಲ್ ವಿಡಿಯೋ

    ಸ್ಲೆಡ್ಜಿಂಗ್ ಮಾಡಿದ ಆಸೀಸ್ ಆಟಗಾರನಿಗೆ ಕಿಚಾಯಿಸಿ ತಿರುಗೇಟು ಕೊಟ್ಟ ರಿಷಬ್ ಪಂತ್ – ವೈರಲ್ ವಿಡಿಯೋ

    ಅಡಿಲೇಡ್: ಇಲ್ಲಿನ ಒವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರನಿಂದ ಸ್ಲೆಡ್ಜಿಂಗ್ ಒಳಗಾಗಿದ್ದ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ತಿರುಗೇಟು ನೀಡಿದ್ದು, ಎಲ್ಲರೂ ಪೂಜಾರ ಆಗಲು ಸಾಧ್ಯವಿಲ್ಲ ಎಂದು ಹೇಳಿ ಆಸೀಸ್ ಆಟಗಾರರನ್ನು ಕಿಚಾಯಿಸಿದ್ದಾರೆ.

    ಆಸೀಸ್ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಘಟನೆ ನಡೆದಿದ್ದು, ಆಸೀಸ್ ಬ್ಯಾಟ್ಸ್ ಮನ್ ಉಸ್ಮಾನ್ ಖವಾಜ ಕ್ರಿಸ್‍ನಲ್ಲಿದ್ದ ವೇಳೆ ರಿಷಬ್ ಕಿಚಾಯಿಸಿದ್ದಾರೆ. ಆಸೀಸ್ 59 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿದ್ದ ವೇಳೆ ಉಸ್ಮಾನ್ ತಂಡಕ್ಕೆ ಚೇತರಿಕೆ ನೀಡಲು ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರು. ಆದರೆ ಈ ವೇಳೆ ಎಲ್ಲರೂ ಪೂಜಾರ ಅಲ್ಲ, ಬ್ರೋ ಎಂದು ಹೇಳಿದ್ದು, ಈ ಮಾತುಗಳು ಸ್ಟಂಪ್ ಮೈಕಿನಲ್ಲಿ ದಾಖಲಾಗಿದೆ.

    ಟೀಂ ಇಂಡಿಯಾ ಸಂಕಷ್ಟದಲ್ಲಿದ್ದ ವೇಳೆ ಚೇತೇಶ್ವರ ಪೂಜಾರ ಶತಕ ಸಿಡಿಸಿ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ ಉತ್ತಮ ಮೊತ್ತ ಗಳಿಸಲು ಪ್ರಮುಖ ಕಾರಣರಾಗಿದ್ದರು. ಈ ಹಿನ್ನೆಲೆಯಲ್ಲಿ ಪಂತ್ ಈ ಮಾತು ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಸದ್ಯ ರಿಷಬ್ ಆಸೀಸ್ ಆಟಗಾರನ್ನು ಕಿಚಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ : ರಿಷಬ್ ಪಂತ್ ವಿರುದ್ಧ ಸ್ಲೆಡ್ಜಿಂಗ್ ಅಸ್ತ್ರ ಪ್ರಯೋಗಿಸಿದ ಆಸೀಸ್ ಆಟಗಾರ! ವಿಡಿಯೋ

    ಅಂದಹಾಗೇ ಪಂತ್ ತಮ್ಮ ಮಾತಿನಲ್ಲೂ ಜಾಣತನ ತೋರಿಸಿದ್ದು, ಆಸೀಸ್ ಆಟಗಾರರಂತೆ ಎದುರಾಳಿ ಆಟಗಾರರನ್ನು ಕೆಟ್ಟದಾಗಿ ಮಾತನಾಡಿ ಟಾರ್ಗೆಟ್ ಮಾಡದೆ ಆ ಸಂದರ್ಭದಲ್ಲಿ ಬೌಲಿಂಗ್ ಮಾಡುತ್ತಿದ್ದ ಆರ್ ಅಶ್ವಿನ್ ಅವರಿಗೆ ಈ ಮಾತು ಹೇಳಿದ್ದಾರೆ. ಈ ಮೂಲಕ ಬೌಲರ್ ಗೆ ಸ್ಫೂರ್ತಿ ತುಂಬಿದ್ದಾರೆ. ಸ್ಲೆಡ್ಜಿಂಗ್ ಎಂಬ ಅಸ್ತ್ರ ಬಳಸಿ ಎದುರಾಳಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆಸೀಸ್‍ಗೆ ಪಂತ್ ತಮ್ಮದೇ ದಾಟಿಯಲ್ಲಿ ತಿರುಗೇಟು ನೀಡಿರುವುದು ಹಲವರ ಮೆಚ್ಚುಗೆಗೆ ಕಾರಣವಾಗಿದೆ.

    https://www.youtube.com/watch?v=QVPu2LBX64w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೀಂ ಇಂಡಿಯಾಗೆ ಆಸರೆಯಾದ ಪೂಜಾರ, ಕೊಹ್ಲಿ ಜೋಡಿ – ಸವಾಲಿನ ಮೊತ್ತದತ್ತ ತಂಡ

    ಟೀಂ ಇಂಡಿಯಾಗೆ ಆಸರೆಯಾದ ಪೂಜಾರ, ಕೊಹ್ಲಿ ಜೋಡಿ – ಸವಾಲಿನ ಮೊತ್ತದತ್ತ ತಂಡ

    ಅಡಿಲೆಡ್: ಒವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಸಮಯೋಚಿತ ಆಟ ಪ್ರದರ್ಶಿಸಿದ್ದು, ಪರಿಣಾಮವಾಗಿ ತಂಡ 2ನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ 166 ರನ್ ಮುನ್ನಡೆಯೊಂದಿಗೆ 3ನೇ ದಿನದಾಟವನ್ನು ಅಂತ್ಯಗೊಳಿಸಿದೆ.

    ಮಳೆಯಿಂದ ತಡವಾಗಿ ಆರಂಭವಾದ 3ನೇ ದಿನದಾಟದಲ್ಲಿ ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್ ನಲ್ಲಿ 235 ರನ್ ಗಳಿಗೆ ಕಟ್ಟಿಹಾಕಲು ಟೀಂ ಇಂಡಿಯಾ ಯಶಸ್ವಿಯಾಯಿತು. ಇದರೊಂದಿಗೆ ಭಾರತ 15 ರನ್‍ಗಳ ಅಲ್ಪ ಮುನ್ನಡೆಯಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿತು. ತಂಡದ ಪರ ಆರಂಭಿಕ ಮುರಳಿ ವಿಜಯ್ ಹಾಗೂ ಕೆಎಲ್ ರಾಹುಲ್ ಜೋಡಿ ಮೊದಲ ವಿಕೆಟ್‍ಗೆ 63 ರನ್ ಗಳ ಅರ್ಧಶತಕದ ಜೊತೆಯಾಟ ನೀಡಿ ಉತ್ತಮ ಆರಂಭ ನೀಡಿತು. ಆದರೆ ಈ ವೇಳೆ 18 ರನ್ ಗಳಿಸಿದ್ದ ಮುರಳಿ ವಿಜಯ್, ಸ್ಟಾರ್ಕ್‌ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ 44 ರನ್ (1 ಸಿಕ್ಸರ್, 3 ಬೌಂಡರಿ) ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಾಹುಲ್ ವಿಕೆಟ್ ಪಡೆದ ಜೋಶ್ ಹ್ಯಾಜಲ್‍ವುಡ್ ತಂಡಕ್ಕೆ ಆಘಾತ ನೀಡಿದರು.

    ಈ ಹಂತದಲ್ಲಿ ಒಂದಾದ ವಿರಾಟ್ ಕೊಹ್ಲಿ, ಮೊದಲ ಇನ್ನಿಂಗ್ಸ್ ಶತಕ ವೀರ ಚೇತೇಶ್ವರ ಪೂಜಾರ ಜೋಡಿ ಆಸೀಸ್ ಬೌಲರ್ ಗಳನ್ನು ನಿಧಾನವಾಗಿ ದಂಡಿಸಲು ಆರಂಭಿಸಿದರು. ಈ ಮಧ್ಯೆ ಪೂಜಾರರನ್ನ ಅಂಪೈರ್ 2 ಬಾರಿ ಔಟ್ ಎಂದು ತೀರ್ಪು ನೀಡಿದರು. ಆದರೆ ಡಿಆರ್ ಎಸ್ ಮನವಿಯ ನೆರವಿನಿಂದ ಪೂಜಾರ ಔಟಾಗದೆ ಉಳಿದರು. 3ನೇ ವಿಕೆಟ್‍ಗೆ 71 ರನ್ ಗಳ ಮಹತ್ವದ ಜೊತೆಯಾಟ ನೀಡಿ ಆಸೀಸ್ ಮುಳುವಾಗುವ ಸೂಚನೆ ನೀಡಿದ ಈ ಜೋಡಿಯನ್ನು ಲಯನ್ ಬೇರ್ಪಡಿಸಲು ಯಶಸ್ವಿಯಾದರು. 2ನೇ ಇನ್ನಿಂಗ್ಸ್ ನಲ್ಲಿ 104 ಎಸೆತಗಳನ್ನು ಎದರುಸಿದ ನಾಯಕ ವಿರಾಟ್ ಕೊಹ್ಲಿ 3 ಬೌಂಡರಿ ಸಿಡಿಸಿ 34 ರನ್ ಗಳಿಸಿ ಔಟಾದರು. ಇತ್ತ 127 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 40 ರನ್ ಸಿಡಿಸಿರುವ ಪೂಜಾರ ಹಾಗೂ 1 ರನ್ ಗಳಿಸಿರುವ ರಹಾನೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: ಆಸೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ

    ಇದಕ್ಕೂ ಮುನ್ನ 3ನೇ ದಿನದಾಟದಲ್ಲಿ ಎರಡೆರಡು ಬಾರಿ ಮಳೆ ಕಾಟ ನೀಡಿತು. ಆದ್ರು ಟೀಂ ಇಂಡಿಯಾ ಬೌಲರ್ ಉತ್ತಮ ಬೌಲಿಂಗ್ ದಾಳಿ ನಡೆಸಿದರು. 2ನೇ ದಿನದಾಟದಲ್ಲಿ ತಂಡಕ್ಕೆ ತಲೆ ನೋವಾಗಿದ್ದ ಟ್ರಾವಿಸ್ ಹೆಡ್ (71 ರನ್) ವಿಕೆಟ್ ಪಡೆಯಲು ಶಮಿ ಯಶಸ್ವಿಯಾದರು. ಮಿಚೆಲ್ ಸ್ಟಾರ್ಕ್ (15), ಜೋಶ್ ಹ್ಯಾಜಲ್‍ವುಡ್ (0) ಬಂದಷ್ಟೇ ವೇಗದಲ್ಲಿ ಪೆವಿಲಿಯನ್‍ಗೆ ಸೇರಿದರು. 24 ರನ್ ಗಳಿಸಿದ ನಥನ್ ಲಯನ್ ಅಜೇಯರಾಗಿ ಉಳಿಸಿದರು. ಟೀಂ ಇಂಡಿಯಾ ಪರ ಶಮಿ, ಇಶಾಂತ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಬುಮ್ರಾ ಹಾಗೂ ಅಶ್ವಿನ್ ತಲಾ 3 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ

    ಆಸೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ

    ಅಡಿಲೇಡ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 1 ಸಾವಿರ ರನ್ ಪೂರೈಸಿದ ಟೀಂ ಇಂಡಿಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    30 ವರ್ಷದ ಕೊಹ್ಲಿ ಅಡಿಲೇಡ್‍ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದು, ಪಂದ್ಯದಲ್ಲಿ 5 ರನ್ ಗಳಿಸಿದ್ದ ವೇಳೆ 1 ಸಾವಿರ ರನ್ ಪೂರ್ಣಗೊಳಿಸಿದರು. ಇದರೊಂದಿಗೆ ಆಸ್ಟ್ರೇಲಿಯಾದಲ್ಲಿ 1 ಸಾವಿರ ರನ್ ಪೂರೈಸಿದ ಭಾರತ 4ನೇ ಹಾಗೂ ಒಟ್ಟಾರೆಯಾಗಿ 28ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಕೊಹ್ಲಿ ಕೇವಲ 18 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದು, ಈ ಹಿಂದೆ ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ 1,809 ರನ್, ವಿವಿಎಸ್ ಲಕ್ಷ್ಮಣ್ 1,236 ರನ್, ರಾಹುಲ್ ದ್ರಾವಿಡ್ 1,143 ರನ್ ಸಿಡಿಸಿದ್ದರು. ಕೊಹ್ಲಿ 59.05 ಸರಾಸರಿಯಲ್ಲಿ 1 ಸಾವಿರ ರನ್ ಪೂರೈಸಿದ್ದು, ಟೆಸ್ಟ್ ತಂಡದ ನಾಯಕರಾಗಿ 2 ಸಾವಿರ ರನ್ ಕೂಡ ಪೂರ್ಣಗೊಳಿಸಿದ್ದಾರೆ. ಉಳಿದಂತೆ ಅಲನ್ ಬಾರ್ಡರ್, ರಿಕಿ ಪಾಟಿಂಗ್, ಗ್ರೇಮ್ ಸ್ಮಿತ್ ಹಾಗೂ ಕುಕ್ ನಾಯಕರಾಗಿ 2 ಸಾವಿರ ರನ್ ಪೂರೈಸಿದ್ದಾರೆ.

    ಅಂದಹಾಗೇ ಕ್ಯಾಲೆಂಡರ್ ವರ್ಷವೊಂದರಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಎರಡು ಮಾದರಿಗಳಲ್ಲಿ 1 ಸಾವಿರ ರನ್ ಸಿಡಿಸಿ ವಿಶ್ವದ ಟಾಪ್ ಶ್ರೇಯಾಂಕ ಪಡೆದಿರುವ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನ ಕೊಹ್ಲಿ ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 130 ವರ್ಷಗಳ ಬಳಿಕ ಕೆಟ್ಟ ದಾಖಲೆ ಬರೆದ ಶಾನ್ ಮಾರ್ಷ್

    130 ವರ್ಷಗಳ ಬಳಿಕ ಕೆಟ್ಟ ದಾಖಲೆ ಬರೆದ ಶಾನ್ ಮಾರ್ಷ್

    ಅಡಿಲೇಡ್: ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ 3 ವಿಕೆಟ್ ಪಡೆಯುವ ಮೂಲಕ ತಾವು ಟೆಸ್ಟ್ ತಂಡದ ನಂ.1 ಸ್ಪಿನ್ನರ್ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ತಂಡದ ಶಾನ್ ಮಾರ್ಷ್ 130 ವರ್ಷಗಳ ಬಳಿಕ ಕೆಟ್ಟ ದಾಖಲೆ ಬರೆಯಲು ಕಾರಣರಾಗಿದ್ದಾರೆ.

    ಅಶ್ವಿನ್ ಪಂದ್ಯದಲ್ಲಿ ಆಸೀಸ್ ತಂಡದ ಪ್ರಮುಖ ಮೂವರು ಬ್ಯಾಟ್ಸ್‍ಮನ್‍ಗಳನ್ನು ಬಲಿ ಪಡೆದಿದ್ದು, ಇದರಲ್ಲಿ ಶಾನ್ ಮಾರ್ಷ್ ರನ್ನು ಕೇವಲ 2 ರನ್ ಗಳಿಗೆ ಪೆವಿಲಿಯನ್‍ಗೆ ಅಟ್ಟಿದ್ದರು. ಈ ಮೂಲಕ ಆಸೀಸ್ ಕ್ರಿಕೆಟ್ ಇತಿಹಾಸದಲ್ಲಿ ಮಾರ್ಷ್ ಕೆಟ್ಟ ದಾಖಲೆ ಬರೆಯಲು ಅಶ್ವಿನ್ ಕಾರಣರಾದರು.

    ಶಾನ್ ಮಾರ್ಷ್ ಸತತವಾಗಿ 6 ಬಾರಿ ಎರಡಂಕಿ ಮೊತ್ತ ಗಳಿಸದೇ ಔಟಾಗಿದ್ದಾರೆ. 1888ರ ಬಳಿಕ ಆಸೀಸ್‍ನ ಟಾಪ್ ಐವರು ಬ್ಯಾಟ್ಸ್‍ಮನ್‍ಗಳಲ್ಲಿ ಯಾರು ಇಷ್ಟು ಬಾರಿ ಒಂದಂಕಿಗೆ ಔಟಾಗಿರಲಿಲ್ಲ. ಸತತವಾಗಿ ಬ್ಯಾಟಿಂಗ್ ನಲ್ಲಿ ಫೇಲ್ ಆಗುತ್ತಿರುವ ಮಾರ್ಷ್ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಮಾರ್ಷ್ ಆಡಿರುವ ಇತ್ತೀಚಿನ 13 ಟೆಸ್ಟ್ ಪಂದ್ಯಗಳಲ್ಲಿ 40 ರನ್ ಗಳಿಗಿಂತ ಹೆಚ್ಚು ಮೊತ್ತವನ್ನು ಗಳಿಸಿಲ್ಲ.

    ಉಳಿದಂತೆ ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದ ಆಟದ ವೇಳೆ ಟೀಂ ಇಂಡಿಯಾದ ಇಶಾಂತ್ ಶರ್ಮಾ, ಬುಮ್ರಾ, ಅಶ್ವಿನ್ ತಮ್ಮ ಮಿಂಚಿನ ಬೌಲಿಂಗ್ ನಡೆಸಿದ್ದಾರೆ. ಪಂದ್ಯದಲ್ಲಿ 50 ರನ್ ನೀಡಿ ಅಶ್ವಿನ್ 3 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ, ಬುಮ್ರಾ ತಲಾ 2 ವಿಕೆಟ್ ಪಡೆದರು. 2ನೇ ದಿನದಾಟದ ಅಂತ್ಯಕ್ಕೆ ಆಸೀಸ್ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.

    https://twitter.com/ChFaisalGondal3/status/1070876937600548864

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv