Tag: Test Rules

  • ಟೆಸ್ಟ್‌ ಚಾಂಪಿಯನ್‌ ಶಿಪ್‌ – ಐಸಿಸಿ ನಿಯಮದ ವಿರುದ್ಧ ಕೊಹ್ಲಿ ಕಿಡಿ ಕಾರಿದ್ದು ಯಾಕೆ?

    ಟೆಸ್ಟ್‌ ಚಾಂಪಿಯನ್‌ ಶಿಪ್‌ – ಐಸಿಸಿ ನಿಯಮದ ವಿರುದ್ಧ ಕೊಹ್ಲಿ ಕಿಡಿ ಕಾರಿದ್ದು ಯಾಕೆ?

    ಚೆನ್ನೈ: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ ನಿಯಮದ ವಿರುದ್ಧ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ ಟೆಸ್ಟ್‌ ಸರಣಿಗಳು ನಡೆಯದ ಕಾರಣ ಅನಿಲ್‌ ಕುಂಬ್ಳೆ ನೇತೃತ್ವದ ಸಮಿತಿ ಪರ್ಸಂಟೇಜ್ ಆಫ್‌ ಪಾಯಿಂಟ್ಸ್‌ ಆಧಾರದ ಮೇಲೆ ಶ್ರೇಯಾಂಕ ನೀಡುವ ತೀರ್ಮಾನವನ್ನು ತೆಗೆದುಕೊಂಡಿತ್ತು. ಈ ನಿಯಮದ ವಿರುದ್ಧ ಕೊಹ್ಲಿ ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಲಾಕ್‌ಡೌನ್‌ ಸಮಯದಲ್ಲಿ ದಿಢೀರ್‌ ನಿಯಮಗಳು ಬದಲಾಗಿದೆ. ಯಾವುದು ನಿಮ್ಮ ಕೈಯಲ್ಲಿ ಇರುವುದಿಲ್ಲ. ಅಂಗಳದಲ್ಲಿ ಏನು ಮಾಡಬಲ್ಲಿರೋ ಅದು ಮಾತ್ರ ನಿಯಂತ್ರಣದಲ್ಲಿ ಇರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ – ಫೈನಲ್‌ಗೆ ಏರಬೇಕಾದರೆ ಭಾರತ ಏನು ಮಾಡಬೇಕು?

    ಇಂಗ್ಲೆಂಡ್‌ ಮೊದಲ ಸ್ಥಾನಕ್ಕೆ ಬರುತ್ತದೆ ಎಂದು ಯಾರೂ ಆಲೋಚನೆ ಮಾಡಿರಲಿಲ್ಲ. ಕೆಲವೊಂದು ವಿಚಾರಗಳಿಗೆ ತರ್ಕವೇ ಇರುವುದಿಲ್ಲ. ನಾವು ಪಾಯಿಂಟ್ಸ್‌ ನೋಡಿಕೊಂಡು ಆಟವಾಡುವುದಿಲ್ಲ ಎಂದು ಖರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಸ್ತುತ 442 ಅಂಕ ಪಡೆದಿರುವ ಇಂಗ್ಲೆಂಡ್‌ ಮೊದಲ ಸ್ಥಾನದಲ್ಲಿದ್ದರೆ 430 ಅಂಕ ಪಡೆದಿರುವ ಭಾರತ 4ನೇ ಸ್ಥಾನದಲ್ಲಿದೆ. ಆದರೆ 420 ಅಂಕ ಪಡೆದಿರುವ ನ್ಯೂಜಿಲೆಂಡ್‌ ಎರಡನೇ ಸ್ಥಾನದಲ್ಲಿದ್ದರೆ 332 ಅಂಕ ಪಡೆದಿರುವ ಆಸ್ಟ್ರೇಲಿಯಾ 3ನೇ ಸ್ಥಾನ ಪಡೆದಿದೆ.

    ಈ ಸ್ಥಾನ ಪಡೆಯಲು ಕಾರಣವಾಗಿದ್ದು ಪರ್ಸಂಟೇಜ್‌ ಆಫ್‌ ಪಾಯಿಂಟ್‌. ಸದ್ಯ ಇಂಗ್ಲೆಂಡ್‌ 70.2 ಪಿಸಿಟಿ ಹೊಂದುವ ಮೂಲಕ ಮೊದಲ ಸ್ಥಾನ ಪಡೆದಿದ್ದರೆ ನ್ಯೂಜಿಲೆಂಡ್‌ 70.0 ಪಿಸಿಟಿಯೊಂದಿಗೆ ಎರಡನೇ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ 69.2, ಭಾರತ 68.3 ಪಿಸಿಟಿಯೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನವನ್ನು ಪಡೆದಿದೆ.

    ಈ ಹಿಂದೆ 2016-17ರಲ್ಲಿ ಅನಿಲ್‌ ಕುಂಬ್ಳೆ ಟೀಂ ಇಂಡಿಯಾದ ಕೋಚ್‌ ಆಗಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಮತ್ತು ಕುಂಬ್ಳೆ ನಡುವಿನ ಭಿನ್ನಾಭಿಪ್ರಾಯ ಸ್ಫೋಟಗೊಂಡಿತ್ತು. ಕುಂಬ್ಳೆಯ ಕೋಚಿಂಗ್‌ ಶೈಲಿ ಕೊಹ್ಲಿಗೆ ಇಷ್ಟವಾಗಿರಲಿಲ್ಲ ಎಂದು ವರದಿಯಾಗಿತ್ತು. 2017ರ ಚಾಂಪಿಯನ್‌ ಟ್ರೋಫಿ ಬಳಿಕ ಕುಂಬ್ಳೆ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.