Tag: Test matches

  • ಇನ್ಮುಂದೆ ನಿಮ್ಮ ಅದ್ಭುತ ಪ್ರತಿಭೆ ಪ್ರದರ್ಶಿಸಬಹುದು – ಬಾಬರ್‌ ಆಜಂ ಹೊಗಳಿದ ಬೆಂಗ್ಳೂರು ಮೂಲದ ರಚಿನ್‌

    ಇನ್ಮುಂದೆ ನಿಮ್ಮ ಅದ್ಭುತ ಪ್ರತಿಭೆ ಪ್ರದರ್ಶಿಸಬಹುದು – ಬಾಬರ್‌ ಆಜಂ ಹೊಗಳಿದ ಬೆಂಗ್ಳೂರು ಮೂಲದ ರಚಿನ್‌

    ಮುಂಬೈ: 2023ರ ವಿಶ್ವಕಪ್ (2023 World Cup) ಟೂರ್ನಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ತೋರಿದ್ದು, ಲೀಗ್ ಸುತ್ತಿನಲ್ಲೇ ಹೊರಬಿದ್ದಿತು. ಇನ್ನೂ ಸೋಲಿನ ಹೊಣೆಹೊತ್ತು ಬಾಬರ್‌ ಆಜಂ (Babar Azam) ಪಾಕ್‌ ತಂಡದ ಎಲ್ಲಾ ಸ್ವರೂಪದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಬೆಂಗಳೂರು ಮೂಲದ ಹಾಗೂ ಕಿವೀಸ್‌ ಸ್ಟಾರ್‌ ಪ್ಲೇಯರ್‌ ರಚಿನ್‌ ರವೀಂದ್ರ (Rachin Ravindr) ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಸೋಶಿಯಲ್‌ ಮೀಡಿಯಾ X ಖಾತೆಯಲ್ಲಿ ಬರೆದುಕೊಂಡಿರುವ ರಚಿನ್‌ ರವೀಂದ್ರ, ನೀವು ಅತ್ಯುತ್ತಮ ಬ್ಯಾಟ್ಸ್‌ಮ್ಯಾನ್‌ ನಾಯಕತ್ವದಿಂದ ಕೆಳಗಿಳಿಯುವುದು ಬುದ್ಧಿವಂತಿಕೆಯ ಲಕ್ಷಣ. ಈಗ ನಿಮಗೆ ಹೆಚ್ಚಿನ ಒತ್ತಡವಿಲ್ಲ. ನಿಮ್ಮ ಅದ್ಭುತ ಪ್ರತಿಭೆಯನ್ನ ಪ್ರದರ್ಶಿಸಲು ಮತ್ತು ಆಟಗಾರನಾಗಿ ಸಾಧನೆಗಳನ್ನು ಮಾಡಲು ಗಮನಹರಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: World Cup Semifinal: 48 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ಮೈಲುಗಲ್ಲು‌ ಸ್ಥಾಪಿಸಿದ ಶಮಿ.!

    ಬಾಬರ್‌ ಆಜಂ ನವೆಂಬರ್‌ 15 ರಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಎಲ್ಲಾ ಸ್ವರೂಪದ (ಟೆಸ್ಟ್, ಏಕದಿನ, ಟಿ20) ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದರು. ಈ ಮಾಹಿತಿಯನ್ನು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯನ್ನೂ ಹಂಚಿಕೊಂಡಿದ್ದರು.

    ಅಫ್ರಿದಿಗೆ ಟಿ20 ನಾಯಕನ ಪಟ್ಟ: ಬಾಬರ್‌ ಆಜಂ ಮೂರು ಸ್ವರೂಪದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ವೇಗಿ ಶಾಹೀನ್‌ ಶಾ ಅಫ್ರಿದಿ (Shaheen Shah Afridi) ಅವರಿಗೆ ಟಿ20 ತಂಡದ ನಾಯಕತ್ವದ ಹೊಣೆ ನೀಡಿದೆ. ಶಾನ್‌ ಮಸೂದ್‌ (Shan Masood) ಟೆಸ್ಟ್‌ ತಂಡವನ್ನು ಮುನ್ನಡೆಸಲಿದ್ದಾರೆ. ಏಕದಿನ ಕ್ರಿಕೆಟ್‌ ತಂಡಕ್ಕೆ ಶೀಘ್ರದಲ್ಲೇ ನಾಯಕನನ್ನ ನೇಮಿಸುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 34 ವರ್ಷದ ಶಾನ್‌ ಮಸೂದ್‌ ಪಾಕಿಸ್ತಾನ ತಂಡದ ಪರ 30 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. 28.52 ಸರಾಸರಿಯಲ್ಲಿ 1,597 ರನ್‌ ಗಳಿಸಿದ್ದಾರೆ. 156 ರನ್‌ ಶಾನ್‌ ಮಸೂದ್‌ ಅವರ ಗರಿಷ್ಠ ಸ್ಕೋರ್‌ ಆಗಿದ್ದಾರೆ. ಇನ್ನೂ ಶಾಹೀನ್‌ ಶಾ ಅಫ್ರಿದಿ ಅವರು 53 ಏಕದಿನ ಪಂದ್ಯ ಮತ್ತು 52 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 104 ರನ್‌ ಗಳಿಸಿ 64 ವಿಕೆಟ್‌ಗಳನ್ನು ಪಡೆದಿದ್ದಾರೆ.

    ಬಾಬರ್‌ ಹೇಳಿಕೆಯಲ್ಲಿ ಏನಿತ್ತು?
    2019ರಲ್ಲಿ ಪಾಕಿಸ್ತಾನ ತಂಡವನ್ನು (Pakistan Cricket Team) ಮುನ್ನಡೆಸಲು ನಾನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನಿಂದ ಕರೆ ಸ್ವೀಕರಿಸಿದ ಕ್ಷಣವನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಕಳೆದ 4 ವರ್ಷಗಳಲ್ಲಿ ನಾನು ಮೈದಾನದಲ್ಲಿ ಮತ್ತು ಮೈದಾನದ ಹೊರೆಗೆ ಅನೇಕ ಏಳು-ಬೀಳುಗಳನ್ನು ಅನುಭವಿಸಿದ್ದೇನೆ. ಆದಾಗ್ಯೂ ಕ್ರಿಕೆಟ್ ಜಗತ್ತಿನಲ್ಲಿ ತುಂಬು ಹೃದಯದಿಂದ ಅದೇ ಉತ್ಸಾಹ ಮತ್ತು ಪಾಕಿಸ್ತಾನದ ಘನತೆ ಉಳಿಸಿಕೊಳ್ಳುವ ಸದುದ್ದೇಶ ಹೊಂದಿದ್ದೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಾತ್ರಿ ನಾನು ಭಾರತ – ನ್ಯೂಜಿಲೆಂಡ್‌ ಸೆಮಿಫೈನಲ್‌ ವೀಕ್ಷಿಸಿದ್ದೆ: ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ

    ಸಹ ಆಟಗಾರರು, ಕೋಚ್‌ಗಳು ಮತ್ತು ನಿರ್ವಹಣಾ ಮಂಡಳಿಯ ಸಾಮೂಹಿಕ ಪ್ರಯತ್ನದ ಫಲವಾಗಿ ವೈಟ್‌ಬಾಲ್ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಸ್ಥಾನವನ್ನೂ ತಲುಪಿದ್ದೆ. ಈ ಜರ್ನಿ ಸಮಯದಲ್ಲಿ ನನಗೆ ಬೆಂಬಲ ನೀಡಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ನನ್ನ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು ಭಾವುಕವಾಗಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ನಾನಿಂದು ಪಾಕಿಸ್ತಾನ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ಕಠಿಣ ನಿರ್ಧಾರ ಆದರೆ ಈ ಕರೆಗೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಮೂರು ಮಾದರಿಗಳಲ್ಲಿ ಆಟಗಾರನಾಗಿ ಪಾಕಿಸ್ತಾನ ತಂಡ ಪ್ರತಿನಿಧಿಸುವುದನ್ನು ಮುಂದುವರಿಸುತ್ತೇನೆ. ನನ್ನ ಅನುಭವ ಮತ್ತು ಸಮರ್ಪಣೆಯೊಂದಿಗೆ ಹೊಸ ನಾಯಕ ಮತ್ತು ತಂಡವನ್ನು ಬೆಂಬಲಿಸುತ್ತೇನೆ. ಇಷ್ಟು ದಿನ ಈ ಮಹತ್ವದ ಜವಾಬ್ದಾರಿ ನನಗೆ ವಹಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನನ್ನ ಪ್ರಾಮಾಣಿಕ ಧನ್ಯವಾದ ತಿಳಿಸುತ್ತೇನೆ ಎಂಬುದಾಗಿ ತಮ್ಮ ಹೇಳಿಕೆಯಲ್ಲಿ ತಿಳಿದ್ದಾರೆ. ಇದನ್ನೂ ಓದಿ: ತುಮಕೂರಿನಲ್ಲೊಂದು ಕ್ರಿಕೆಟ್ ಪ್ರೇಮಿಗಳ ಮದುವೆ – ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ

    2023ರ ವಿಶ್ವಕಪ್ ಟೂರ್ನಿಯಲ್ಲಿ 9ರ ಪೈಕಿ ಕೇವಲ 4 ಲೀಗ್ ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತು. ಇದರಿಂದ ಲೀಗ್ ಸುತ್ತಿನಲ್ಲೇ ಹೊರಬಿದ್ದಿತು. ಬಾಬರ್ ಆಜಂ 9 ಪಂದ್ಯಗಳಲ್ಲಿ 40 ಸರಾಸರಿಯೊಂದಿಗೆ 82.90 ಸ್ಟ್ರೈಕ್‌ರೇಟ್‌ನಲ್ಲಿ 320 ರನ್ ಗಳಿಸಿದ್ದರು.

  • ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಐತಿಹಾಸಿಕ ದಾಖಲೆ- ಧೋನಿಯನ್ನ ಹಿಂದಿಕ್ಕಿದ ವಿರಾಟ್

    ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಐತಿಹಾಸಿಕ ದಾಖಲೆ- ಧೋನಿಯನ್ನ ಹಿಂದಿಕ್ಕಿದ ವಿರಾಟ್

    ಕೋಲ್ಕತ್ತಾ: ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಸತತ ಏಳು ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಜೊತೆಗೆ ಭಾರತ ತಂಡವು ಕೊಹ್ಲಿ ನೇತೃತ್ವದಲ್ಲಿ ಐತಿಹಾಸಿಕ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

    ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಭಾನುವಾರ ಕೋಲ್ಕತ್ತಾದಲ್ಲಿ ಆಡಿದ ಹಗಲು ರಾತ್ರಿ ಟೆಸ್ಟ್‌ನಲ್ಲಿ ಬಾಂಗ್ಲಾದೇಶವನ್ನು ಇನ್ನಿಂಗ್ಸ್ ಮತ್ತು 46 ರನ್‍ಗಳಿಂದ ಸೋಲಿಸಿತು. ಈ ಮೂಲಕ ವಿರಾಟ್ ನೇತೃತ್ವದಲ್ಲಿ ಭಾರತ ಸತತ ಏಳು ಟೆಸ್ಟ್ ಪಂದ್ಯಗಳನ್ನು ಗೆದ್ದುಗೊಂಡಿತು. ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತ 2013ರಲ್ಲಿ ಸತತ 6 ಟೆಸ್ಟ್ ಪಂದ್ಯಗಳನ್ನು ಗೆದ್ದಿತ್ತು. ಹಗಲು-ರಾತ್ರಿ ಟೆಸ್ಟ್‌ನಲ್ಲಿ ಕೊಹ್ಲಿ ತಮ್ಮ ಮೊದಲ ಶತಕವನ್ನು ಗಳಿಸಿದರು. ಈ ಪಂದ್ಯದಲ್ಲಿ ಅವರು 136 ರನ್ ಗಳಿಸಿದರು.

    ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಮೂರು ಸ್ವರೂಪಗಳಲ್ಲಿ (ಟೆಸ್ಟ್, ಏಕದಿನ ಮತ್ತು ಟಿ 20) ನಾಯಕನಾಗಿ ಶತಕ ಗಳಿಸಿದ ಸಾಧನೆಯಲ್ಲಿ ಕೊಹ್ಲಿ ಸಮನಾದರು. ಎಲ್ಲಾ ಮೂರು ಸ್ವರೂಪಗಳ 160 ಪಂದ್ಯಗಳಲ್ಲಿ ಕೊಹ್ಲಿ 41 ಶತಕಗಳನ್ನು ಸಿಡಿಸಿದ್ದಾರೆ. ರಿಕಿ ಪಾಂಟಿಂಗ್ 324 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಕೊಹ್ಲಿ ನಂತರ ಸೌರವ್ ಗಂಗೂಲಿ 16 ರನ್ ಮತ್ತು ಸಚಿನ್ ತೆಂಡೂಲ್ಕರ್ 13 ಶತಕಗಳನ್ನು ಬಾರಿಸಿದ್ದಾರೆ.

    ಕೊಹ್ಲಿ ಪಡೆ ವೆಸ್ಟ್ ಇಂಡೀಸ್ ವಿರುದ್ಧ ಆಂಟಿಗಾದಲ್ಲಿ ಟೆಸ್ಟ್ ಪಂದ್ಯದಲ್ಲಿ 318 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ ಗೆಲುವಿನ ಖಾತೆ ತೆರೆದ ಟೀಂ ಇಂಡಿಯಾ ನಂತರ ಕಿಂಗ್‌ಸ್ಟನ್ ನಲ್ಲಿ ನಡೆದ ಪಂದ್ಯದಲ್ಲಿ 257 ರನ್‍ಗಳಿಂದ ಜಯಗಳಿಸಿತ್ತು. ಭಾರತ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧವೂ ಕೊಹ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿತ್ತು. ಈ ವೇಳೆ ವಿಶಾಖಪಟ್ಟಣಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ 203 ರನ್‍ಗಳಿಂದ ಗೆದ್ದಿತ್ತು. ಪುಣೆಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 137 ರನ್ ಹಾಗೂ ರಾಚಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 202 ರನ್‍ಗಳಿಂದ ಭಾರತ ತಂಡವು ಗೆದ್ದಿತ್ತು.

    ಬಾಂಗ್ಲಾದೇಶದ ವಿರುದ್ಧ ಇಂದೋರ್ ಹಾಗೂ ಕೋಲ್ಕತ್ತಾದಲ್ಲಿ ನಡೆದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ನಿಂದ ಗೆದ್ದು ಕೊಂಡಿದೆ. ಮೊದಲ ಪಂದ್ಯದಲ್ಲಿ 130 ರನ್ ಹಾಗೂ ಎರಡನೇ ಪಂದ್ಯದಲ್ಲಿ 46 ರನ್‍ಗಳಿಂದ ಭಾರತ ಗೆಲವು ಸಾಧಿಸಿತು. ಈ ಮೂಲಕ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಏಳು ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಜೊತೆಗೆ ನಾಲ್ಕು ಪಂದ್ಯಗಳನ್ನು ಇನ್ನಿಂಗ್ಸ್ ನಿಂದ ಜಯಗಳಿಸಿ ಐತಿಹಾಸಿಕ ದಾಖಲೆ ಬರೆದಿದೆ.

    ವಿರಾಟ್ ಹೆಚ್ಚು ಟೆಸ್ಟ್ ಗೆದ್ದ ಐದನೇ ನಾಯಕ:
    ಆಸ್ಟ್ರೇಲಿಯಾದ ಎಲ್ಲೆನ್ ಬಾರ್ಡರ್ ಅವರನ್ನು ಹಿಂದಿಕ್ಕಿ ಕೊಹ್ಲಿ ವಿಶ್ವದ ಐದನೇ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತವು 53 ಟೆಸ್ಟ್ ಪಂದ್ಯಗಳಲ್ಲಿ 33 ಪಂದ್ಯಗಳನ್ನು ಗೆದ್ದಿದೆ. ಬಾರ್ಡರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ 93 ಟೆಸ್ಟ್ ಪಂದ್ಯಗಳಲ್ಲಿ 32 ಗೆದ್ದಿತ್ತು. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 53 ಟೆಸ್ಟ್ ಗೆದ್ದು, ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 48 ಪಂದ್ಯ ಜಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಸ್ಟೀವ್ ವಾ ಇದ್ದಾರೆ. ಅವರ ನಾಯಕತ್ವದಲ್ಲಿ 41 ಪಂದ್ಯಗಳನ್ನು ಗೆದ್ದಿದ್ದಾರೆ. ವೆಸ್ಟ್ ಇಂಡೀಸ್‍ನ ಕ್ಲೈವ್ ಲಾಯ್ಡ್ ನಾಯಕನಾಗಿ 36 ಪಂದ್ಯಗಳನ್ನು ಗೆದ್ದಿದ್ದಾರೆ.

    ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಈವರೆಗಿನ ಎಲ್ಲಾ 7 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ 360 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ 116 ಅಂಕಗಳೊಂದಿಗೆ, ನ್ಯೂಜಿಲೆಂಡ್ 60 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.