Tag: terror camps

  • ಏರ್ ಸ್ಟ್ರೈಕ್‍ನಿಂದಾಗಿ ಪಾಕ್ ಬೆಳಗ್ಗೆ 5 ಗಂಟೆಗೆ ಅಳಲು ಆರಂಭಿಸಿತ್ತು: ಪ್ರಧಾನಿ ಮೋದಿ

    ಏರ್ ಸ್ಟ್ರೈಕ್‍ನಿಂದಾಗಿ ಪಾಕ್ ಬೆಳಗ್ಗೆ 5 ಗಂಟೆಗೆ ಅಳಲು ಆರಂಭಿಸಿತ್ತು: ಪ್ರಧಾನಿ ಮೋದಿ

    ಲಕ್ನೋ: ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮೂರು ನೆಲೆಗಳ ಮೇಲೆ ಭಾರತೀಯ ವಾಯು ಪಡೆ ಏರ್ ಸ್ಟ್ರೈಕ್ ನಡೆಸಿದ್ದಕ್ಕೆ ಪಾಕಿಸ್ತಾನ ಅಳಲು ಆರಂಭಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

    ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನವು ಭಾರತದಿಂದ ಉರಿ ಮಾದರಿಯ ಶಸ್ತ್ರಪಡೆಯ ದಾಳಿ ನಿರೀಕ್ಷೆ ಮಾಡಿತ್ತು. ಆದರೆ ನಾವು ವಾಯು ಪಡೆಯ ಮೂಲಕ ಪ್ರತ್ಯುತ್ತರ ನೀಡಿದ್ದೇವೆ ಎಂದರು.

    ಪುಲ್ವಾಮಾ ದಾಳಿಯ ಪ್ರತಿಕಾರವನ್ನು ತೀರಿಸಿಕೊಳ್ಳುವುದಾಗಿ ಭರವಸೆ ನೀಡಿ, ಕಾರ್ಯದಲ್ಲಿ ಮಗ್ನರಾಗಿದ್ದೇವು. ಏರ್ ಸ್ಟ್ರೈಕ್ ದಾಳಿಯ ಬಗ್ಗೆ ನಾವು ಹೇಳಿಕೊಳ್ಳುವುದಕ್ಕೂ ಮುನ್ನವೇ ಪಾಕಿಸ್ತಾನ 5 ಗಂಟೆಗೆ ಕಣ್ಣೀರು ಹಾಕಲು ಆರಂಭಿಸಿತ್ತು. ಮೋದಿ ನೆ ಮಾರಾ, ಮೋದಿ ನೆ ಮಾರಾ (ಮೋದಿ ನಮ್ಮನ್ನ ಹೊಡೆದರು, ಮೋದಿ ನಮ್ಮನ್ನ ಹೊಡೆದರು) ಎಂದು ಟ್ವೀಟ್ ಮೂಲಕ ಪಾಕಿಸ್ತಾನಿಯರು ಅಳಲು ತೋಡಿಕೊಂಡಿದ್ದರು ಎಂದು ವ್ಯಂಗ್ಯವಾಡಿದರು.

    ನಮ್ಮ ವೀರ ಯೋಧರಿಗೆ ದಶಕಗಳಿಂದ ಏನು ಮಾಡಲು ಸಾಧ್ಯವಾಗಿರಿಲ್ಲವೋ ಅದನ್ನು ಪುಲ್ವಾಮಾ ದಾಳಿಯ ಬಳಿಕ ಮಾಡಿ ತೋರಿಸಿದರು. ನಮ್ಮ ಯೋಧರು ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ, ಅನೇಕ ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

    ಬಾಲಕೋಟ್ ಉಗ್ರರ ನೆಲೆಯ ಮೇಲೆ ದಾಳಿ ಮಾಡಿ 300ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿದ್ದಕ್ಕೆ ಸಾಕ್ಷಿ ಕೇಳಿದ ವಿಪಕ್ಷ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದರು. ಭಾರತೀಯ ವಾಯುಪಡೆ ಏರ್ ಸ್ಟ್ರೈಕ್ ನಡೆಸಿದ್ದಾಗಿ ಹಾಗೂ ಬಾಲಕೋಟ್ ಉಗ್ರರ ಕ್ಯಾಂಪ್ ಮೇಲೆ ದಾಳಿಯಾಗಿದ್ದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಆದರೆ ಕೆಲವರಿಗೆ ಏರ್ ಸ್ಟ್ರೈಕ್ ಬಗ್ಗೆ ಅನುಮಾನವಿದೆ. ಈ ಮೂಲಕ ಅವರು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಸರ್ಜಿಕಲ್ ಸ್ಟ್ರೈಕ್ ಹಾಗೂ ಏರ್ ಸ್ಟ್ರೈಕ್ ನಂತರ ಭಾರತವು ಹಳೆಯ ಮಾದರಿ ಅನುಸರಿಸುತ್ತಿಲ್ಲ ಎನ್ನುವುದು ಉಗ್ರರಿಗೆ ತಿಳಿದಿದೆ. ಭಾರತದಲ್ಲಿ ಸಂಭವಿಸುತ್ತಿದ್ದ ಸ್ಫೋಟಕಗಳು ಹಾಗೂ ಉಗ್ರರ ದಾಳಿಗಳು ಪಾಕಿಸ್ತಾನದ ಜೊತೆಗೆ ಸಂಬಂಧ ಹೊಂದಿರುತ್ತಿದ್ದವು. ಬಿಜೆಪಿ ನೇತೃತ್ವ ಸರ್ಕಾರದ ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರು ಸೇನೆಯಲ್ಲಿ ಅನೇಕ ಬದಲಾವಣೆ ತಂದಿದ್ದಾರೆ. ಹೀಗಾಗಿ ಉಗ್ರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv