Tag: tender

  • ಜಾಬ್‍ಕೋಡ್ ನೀಡಿದ್ದ ಬಿಬಿಎಂಪಿಗೆ ಸಿಎಂ ಕುಮಾರಸ್ವಾಮಿ ಶಾಕ್!

    ಜಾಬ್‍ಕೋಡ್ ನೀಡಿದ್ದ ಬಿಬಿಎಂಪಿಗೆ ಸಿಎಂ ಕುಮಾರಸ್ವಾಮಿ ಶಾಕ್!

    ಬೆಂಗಳೂರು: ಜಾಬ್‍ಕೋಡ್ ಅವ್ಯವಹಾರದ ಹಿನ್ನೆಲೆಯಲ್ಲಿ 115 ಕೋಟಿ ರೂ ವೆಚ್ಚದಲ್ಲಿ ಬಿಬಿಎಂಪಿಯ ನೂತನ ಕಾಮಗಾರಿ ಯೋಜನೆಯನ್ನು ಸಿಎಂ ಕುಮಾರಸ್ವಾಮಿ ರದ್ದುಗೊಳಿಸಿದ್ದಾರೆ.

    ಬಿಬಿಎಂಪಿಯಲ್ಲಿ ನಡೆಯುತ್ತಿರುವ ಜಾಬ್‍ಕೋಡ್ ಅವ್ಯವಹಾರಗಳ ಕುರಿತು ಜೆಡಿಎಸ್ ನವರು ಸಿಎಂ ಕುಮಾರಸ್ವಾಮಿಯವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಕಸ ನಿರ್ವಹಣೆಗೆ ಮೀಸಲಿಟ್ಟಿದ್ದ 115 ಕೋಟಿ ರೂಪಾಯಿಯನ್ನು ಬೇರೆ ಕಾಮಗಾರಿಗಳಿಗೆ ಬಳಸಲು ಜಾಬ್‍ಕೋಡ್ ನೀಡಿದ್ದ ಬಿಬಿಎಂಪಿಗೆ ಸಿಎಂ ಕುಮಾರಸ್ವಾಮಿ ಶಾಕ್ ನೀಡಿದ್ದಾರೆ. ಅಲ್ಲದೇ ಘನತ್ಯಾಜ್ಯ ನಿರ್ವಹಣೆಯ ಹಣವನ್ನು ಬೇರೆ ಕಾಮಗಾರಿಗಳಿಗೆ ಬಳಸುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ.

    ಈಗಾಗಲೇ 115 ಕೋಟಿ ಕಾಮಗಾರಿಗೆ ಮೇಯರ್ ಸಂಪತ್ ರಾಜ್ ಕಮಿಷನ್ ಪಡೆದಿರುವ ಬಗ್ಗೆ ಸಿಎಂಗೆ ಮಾಹಿತಿ ತಿಳಿದ ಬೆನ್ನಲ್ಲೇ ಈ ಕ್ರಮಕೈಗೊಂಡು, ಜಾಬ್‍ಕೋಡ್ ನೀಡಿದ್ದ ಬಿಬಿಎಂಪಿಗೆ ಚಾಟಿ ಬೀಸಿದ್ದಾರೆ.

    ಕಸ ನಿರ್ವಹಣೆಗೆ ಮೀಸಲಿಟ್ಟಿದ್ದ 115 ಕೋಟಿ ರೂಪಾಯಿಯನ್ನು ಬಿಬಿಎಂಪಿ ಬೇರೆ ಕಾಮಗಾರಿಗಳಿಗೆ ಬಳಸಲು ಮುಂದಾಗಿತ್ತು. ಅಲ್ಲದೆ ಪಾರ್ಕ್, ಮುಖ್ಯರಸ್ತೆಗಳ ನಿರ್ವಹಣೆಗೆ ಜಾಬ್ ಕೋಡ್ ಸಹ ನೀಡಿತ್ತು. ಈ ಸಂಬಂಧ ಮೇಯರ್ ಹಾಗೂ ಕಮಿಷನರ್ ಒಪ್ಪಿಗೆ ಪಡೆದಿದ್ದ ಕಾಮಗಾರಿಗಳನ್ನು ನಗರಾಭಿವೃದ್ಧಿ ಇಲಾಖೆಯ ಒಪ್ಪಿಗೆಗೆ ಕಳುಹಿಸಲಾಗಿತ್ತು.

    ಆದರೆ ಬಿಬಿಎಂಪಿ ನೀಡಿದ್ದ 115 ಕೋಟಿ ಕಾರ್ಯಾದೇಶವನ್ನು ಸಿಎಂ ರದ್ದುಗೊಳಿಸಿದ್ದರ ಪರಿಣಾಮ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ನೂತನ ಕಾಮಗಾರಿ ಯೋಜನೆಗಳ ಜಾಬ್‍ಕೋಡ್ ರದ್ದುಗೊಳಿಸಿರುವುದಾಗಿ ಆದೇಶ ನೀಡಿದೆ. ಇದರಿಂದಾಗಿ ಸಿಎಂ ಕುಮಾರಸ್ವಾಮಿಯವರು ಬಿಬಿಎಂಪಿ ಅನುದಾನದ ಮೇಲೂ ಕಣ್ಣಿಟ್ಟಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ.

    https://www.youtube.com/watch?v=DEDVgEp1jlw

  • ಮಹಾರಾಷ್ಟ್ರದಲ್ಲಿ ಸದ್ದು ಮಾಡುತ್ತಿದೆ ಇಲಿ ಹಗರಣ-7 ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಇಲಿಗಳ ಕೊಲೆ

    ಮಹಾರಾಷ್ಟ್ರದಲ್ಲಿ ಸದ್ದು ಮಾಡುತ್ತಿದೆ ಇಲಿ ಹಗರಣ-7 ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಇಲಿಗಳ ಕೊಲೆ

    ಮುಂಬೈ: ಮಹಾರಾಷ್ಟ್ರ ಮಂತ್ರಾಲಯದಲ್ಲಿ ಇಲಿಗಳನ್ನು ಕೊಲ್ಲಲು ಅಲ್ಲಿನ ಆಡಳಿತ ಕಂಪೆನಿಯೊಂದಕ್ಕೆ ಟೆಂಡರ್ ನೀಡಿರುವ ಅಂಶ ವಿಧಾನಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ವಿಧಾನಸಭೆಯಲ್ಲಿ ಶುಕ್ರವಾರ ವಿರೋಧ ಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ್ದು. ಇದರಲ್ಲಿ ಪ್ರಮುಖವಾಗಿ ಧಾರ್ಮಿಕ ಕ್ಷೇತ್ರ ಮಂತ್ರಾಲಯದಲ್ಲಿ ಇಲಿ ಸಾಯಿಸಲು ನೀಡಿದ್ದ ವರದಿ ಚರ್ಚೆಗೆ ಕಾರಣವಾಯಿತು.

    ಬಿಜೆಪಿ ಹಿರಿಯ ನಾಯಕ ಏಕನಾಥ್ ಪ್ರಕರಣದ ಕುರಿತು ತನಿಖೆ ನಡೆಸಲು ಆಗ್ರಹಿಸಿದರು. ವರದಿಯೊಂದರ ಪ್ರಕಾರ ಮಂತ್ರಾಲಯದಲ್ಲಿ 3,19,400 ಇಲಿಗಳನ್ನು ಪತ್ತೆ ಹಚ್ಚಲಾಗಿದೆ. ಮಂತ್ರಾಲಯದ ಸಾಮಾನ್ಯದ ಆಡಳಿತ ಮಂಡಳಿ ಈ ವರದಿಯನ್ನು ಆಧಾರಿಸಿ ಸಂಸ್ಥೆಯೊಂದಕ್ಕೆ ಇಲಿ ಸಾಯಿಸಲು ಟೆಂಡರ್ ನೀಡಲಾಗಿತ್ತು. ಆದರೆ ಸಂಸ್ಥೆ ಟೆಂಡರ್ ಪಡೆದ 7 ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಇಲಿಗಳನ್ನು ಸಾಯಿಸಿರುವುದಾಗಿ ವರದಿ ನೀಡಿತ್ತು. ಈ ಹಿಂದೆ ಮಂತ್ರಾಯಲಯದಲ್ಲೇ 6 ಲಕ್ಷ ಇಲಿಗಳನ್ನ ಸಾಯಿಸಲು ಆರು ತಿಂಗಳು ತೆಗೆದುಕೊಳ್ಳಲಾಗಿತ್ತು. ಆದರೆ ಈ ಸಂಸ್ಥೆ ಕೇವಲ 7 ದಿನಗಳಲ್ಲಿ ಹೇಗೆ 3 ಲಕ್ಷ ಇಲಿಗಳನ್ನು ಸಾಯಿಸಿದೆ ಎಂದು ಏಕನಾಥ್ ಪ್ರಶ್ನಿಸಿದರು.

    ವರದಿ ಮಾಹಿತಿ ಪ್ರಕಾರ, 2016 ಮೇ 03 ರಿಂದ 09 ಅವಧಿಯಲ್ಲಿ ಮಂತ್ರಾಲಯದ ಕಟ್ಟದ ನೆಲ ಮಹಡಿಯಲ್ಲಿ 24 ಸಾವಿರ ಇಲಿಗಳನ್ನು ಸಾಯಿಸಲಾಗಿದೆ ಎಂದು ದಾಖಲೆಗಳನ್ನು ಸಲ್ಲಿಸಲಾಗಿದೆ. ಇನ್ನೂಳಿದಂತೆ ದಕ್ಷಿಣ, ಉತ್ತರ ಹಾಗೂ ಪಶ್ಚಿಮ ಭಾಗಗಲ್ಲಿ ಕ್ರಮವಾಗಿ 5, 6, 7 ಸಾವಿರ ಇಲಿಗಳನ್ನು ಸಾಯಿಸಲಾಗಿದೆ. ಈ ವರದಿ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದರು.

    ವರದಿಯಲ್ಲಿ ಇರುವ ಮಾಹಿತಿಯಂತೆ ಪ್ರತಿ ದಿನ 45 ಸಾವಿರಕ್ಕೂ ಅಧಿಕ ಇಲಿಗಳ ಸಂಹಾರ ಮಾಡಲಾಗಿದೆ. ಅಂದರೆ 0.57 ಸೆಕೆಂಡ್ ಗೆ ಒಂದು. ನಿಮಿಷಕ್ಕೆ 31.68 ಇಲಿಗಳು ಸಾಯಿಸಲಾಗಿದೆ. ಪ್ರತಿ ದಿನ ಸಾಯಿಸಲಾಗಿರುವ ಇಲಿಗಳ ತೂಕ 9 ಟನ್ ಗಿಂತಲೂ ಅಧಿಕವಾಗಿದೆ. ಆದರೆ ಇವುಗಳನ್ನು ಎಲ್ಲಿ ದಹನ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿಲ್ಲ ಎಂದು ಪ್ರಶ್ನಿಸಿದರು.

    ಈ ಕುರಿತು ಸ್ಪಷ್ಟನೆ ನೀಡಿರುವ ಬಿಜೆಪಿ ಸಚಿವ ರಾಮ್ ಕದಮ್, ಘಟನೆಯಲ್ಲಿ 3 ಲಕ್ಷಕ್ಕೂ ಅಧಿಕ ಇಲಿ ಸಾಯಿಸುವ ಮಾತ್ರೆಗಳನ್ನು ಬಳಸಿಕೊಳ್ಳಲಾಗಿದೆ. ಇದು ಸತ್ತಿರುವ ಇಲಿಗಳ ಸಂಖ್ಯೆ ಅಲ್ಲ. ಎಷ್ಟು ಇಲಿಗಳು ಸಾವನ್ನಪ್ಪಿವೇ ಎಂಬುದನ್ನು ಲೆಕ್ಕ ಹಾಕಲು ಯಾವುದೇ ಯಂತ್ರವನ್ನು ಬಳಕೆ ಮಾಡಿಲ್ಲ. ಪ್ರತಿ ದಿನ 45 ಸಾವಿರ ಇಲಿ ಸಾಯಿಸಲಾಗಿದೆ ಎಂಬ ವರದಿ ಸುಳ್ಳು ಎಂದು ಹೇಳಿದ್ದಾರೆ.

  • ಸ್ಟೀಲ್ ಬ್ರಿಡ್ಜ್ ಬದಲು ಕೆಂಪೇಗೌಡ ಪ್ರಾಜೆಕ್ಟ್ – ಎಲ್&ಟಿ ಕಂಪನಿಗೆ ಜಾರ್ಜ್ ಋಣಸಂದಾಯ

    ಸ್ಟೀಲ್ ಬ್ರಿಡ್ಜ್ ಬದಲು ಕೆಂಪೇಗೌಡ ಪ್ರಾಜೆಕ್ಟ್ – ಎಲ್&ಟಿ ಕಂಪನಿಗೆ ಜಾರ್ಜ್ ಋಣಸಂದಾಯ

    ಬೆಂಗಳೂರು: ಕೊನೆಗೂ ಸಚಿವ ಕೆ.ಜೆ.ಜಾರ್ಜ್ ಒತ್ತಡಕ್ಕೆ ಮಣಿದು ಬಿಡಿಎ ಕೆಂಪೇಗೌಡ ಲೇಔಟ್‍ನ ಸಮಗ್ರ ಅಭಿವೃದ್ದಿಯ ಪ್ರಾಜೆಕ್ಟ್ ಟೆಂಡರನ್ನು ಎಲ್ ಅಂಡ್ ಟಿ ಕಂಪನಿಗೆ ನೀಡಿದೆ.

    ಈ ಹಿಂದೆ 2 ಸಾವಿರ ಕೋಟಿ ರೂ. ಮೊತ್ತದ ಸ್ಟೀಲ್ ಬ್ರಿಡ್ಜ್ ಟೆಂಟರ್ನ್ ಎಲ್&ಟಿ ಕಂಪನಿ ಪಡೆದಿತ್ತು. ಅದಕ್ಕಾಗಿ 65 ಕೋಟಿ ರೂಪಾಯಿ ಕಪ್ಪವನ್ನೂ ನೀಡಿದ್ದ ಬಗ್ಗೆ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಉಲ್ಲೇಖವಾಗಿತ್ತು. ನಂತರ ತೀವ್ರ ವಿರೋಧದ ಕಾರಣ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿತ್ತು.

    ಸ್ಟೀಲ್ ಬ್ರಿಡ್ಜ್ ಬದಲಾಗಿ ಕೆಂಪೇಗೌಡ ಲೇಔಟ್‍ನ ಸಮಗ್ರ ಅಭಿವೃದ್ದಿಗೆ 1 ಸಾವಿರದ 255 ಕೋಟಿಯ ಟೆಂಡರ್ ಎಲ್&ಟಿ ಕಂಪನಿಗೆ ನೀಡುತ್ತೆ ಅನ್ನೋ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದೀಗ ಆ ವರದಿಯಂತೆಯೇ ಎಲ್&ಟಿ ಕಂಪನಿಗೆ 1 ಸಾವಿರದ 255 ಕೋಟಿ ರೂಪಾಯಿ ಮೊತ್ತದ ಯೋಜನೆ ಟೆಂಡರ್ ನೀಡಲಾಗಿದೆ.

    400 ಕೋಟಿಗೂ ಅಧಿಕ ಸಾಲಕ್ಕೆ ಬಡ್ಡಿ ಕಟ್ಟುತ್ತಿರೋ ಬಿಡಿಎ ಇಷ್ಟೊಂದು ಬೃಹತ್ ಯೋಜನೆಗೆ ಎಲ್ಲಿಂದ ಹಣ ತರುತ್ತೋ ಅನ್ನೋದು ಜನರ ಪ್ರಶ್ನೆ.

  • ಬೆಂಗಳೂರಿನಲ್ಲಿ ಓಡಲಿದೆ ಸಚಿವ ಜಾರ್ಜ್ ಅಂಡ್ ಕಂಪೆನಿಯ ಪಾಡ್ ಟ್ಯಾಕ್ಸಿ!

    ಬೆಂಗಳೂರಿನಲ್ಲಿ ಓಡಲಿದೆ ಸಚಿವ ಜಾರ್ಜ್ ಅಂಡ್ ಕಂಪೆನಿಯ ಪಾಡ್ ಟ್ಯಾಕ್ಸಿ!

    ಬೆಂಗಳೂರು: ಬಿಬಿಎಂಪಿಯು ಪಾಡ್ ಟ್ಯಾಕ್ಸಿ (ಪರ್ಸನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್-ಪಿಆರ್‍ಟಿಎಸ್) ಯೋಜನೆಯ ಟೆಂಡರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ಎಂಬೆಸಿ ಗ್ರೂಪ್ ಜೊತೆ ಸಹಭಾಗಿತ್ವ ಹೊಂದಿರುವ ಸ್ಮಾರ್ಟ್ ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಪ್ರೈವೇಟ್ (ಎಸ್‍ಪಿಆರ್ ಟಿಎಸ್) ಲಿಮಿಟೆಡ್ ಕಂಪೆನಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

    ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಟ್ರಿನಿಟಿ ಸರ್ಕಲ್‍ನಿಂದ ವೈಟ್‍ಫೀಲ್ಡ್ ಹಾಗೂ ಮಾನ್ಯತಾ ಟೆಕ್ ಪಾರ್ಕ್ ನಿಂದ ಕೆ.ಆರ್ ಪುರದವರೆಗೆ ಪಾಡ್ ಟ್ಯಾಕ್ಸಿ ಸೇವೆ ನೀಡುವ ಕುರಿತು ಯೋಜನೆ ಸಿದ್ಧಪಡಿಸಿ ಟೆಂಡರ್ ಕರೆದಿತ್ತು. ಆದರೆ ಈ ಟೆಂಡರ್‍ಗೆ ಎಸ್‍ಪಿಆರ್ ಟಿಎಸ್ ಕಂಪನಿ ಮಾತ್ರ ಅರ್ಜಿ ಸಲ್ಲಿಸಿದ ಕಾರಣ ಈ ಪಾಡ್ ಟ್ಯಾಕ್ಸಿಯ ನಿರ್ಮಾಣ ಯೋಜನೆಯ ಗುತ್ತಿಗೆ ಸಿಕ್ಕಿದೆ.

    ಜಾರ್ಜ್ ಸಹಭಾಗಿತ್ವದ ಎಂಬಸ್ಸಿ ಗ್ರೂಪ್ ಜೊತೆ ಸಹಭಾಗಿತ್ವ ಹೊಂದಿರುವ ಎಸ್‍ಪಿಆರ್ ಟಿಎಸ್ 7.5 ಕೋಟಿ ಭದ್ರತಾ ಠೇವಣಿಯನ್ನು ಜನವರಿ 10 ರಂದು ಇಟ್ಟಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ 5 ಕೋಟಿ ರೂ.ಗಳನ್ನು ಠೇವಣಿ ಇಡಲು ಬಿಬಿಎಂಪಿ ಬಿಡ್ಡಿಂಗ್ ಕಂಪನಿಗಳಿಗೆ ಷರತ್ತು ವಿಧಿಸಿತ್ತು. ಟೆಂಡರ್ ಪಡೆಯಲು ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವವಾಗಿತ್ತು.

    ಟೆಂಡರ್ ಪಡೆದಿರುವ ದೆಹಲಿ ಮೂಲದ ಎಸ್‍ಪಿಆರ್ ಟಿಎಸ್ ಕಂಪೆನಿ ಲಂಡನ್ ಹೀಥ್ರೂ ನಗರದಲ್ಲಿ ಪಾಡ್ ಟ್ಯಾಕ್ಸಿ ಸೇವೆ ನೀಡುತ್ತಿದೆ. ಈ ಕಂಪನಿಯ ನಿರ್ದೇಶಕರಾದ ಧ್ರುವ್ ಮನೋಜ್ ಪಟೇಲ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಜನವರಿ 10 ರಂದು ನಾವು ಟೆಂಡರ್‍ಗೆ ಅರ್ಜಿ ಸಲ್ಲಿಸಿದ್ದೇವೆ. ಬಿಬಿಎಂಪಿ ರೂಪಿಸಿರುವ ನಿಯಮಗಳ ಪ್ರಕಾರ ಸಮಗ್ರ ಯೋಜನಾ ವರದಿಯನ್ನು ಸಲ್ಲಿಸಿದ್ದು, ಕ್ಯಾಬಿನೆಟ್ ಚರ್ಚೆಯಾಗಿ ಅನುಮತಿ ನೀಡಿದ 6 ತಿಂಗಳ ಒಳಗಡೆ ಕೆಲಸ ಪ್ರಾರಂಭಿಸುತ್ತೆವೆ. ಅಲ್ಲದೇ ಯೋಜನೆ ಆರಂಭವಾದ 30 ತಿಂಗಳುಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುತ್ತೆವೆ ಎಂದು ತಿಳಿಸಿದರು.

    ಯೋಜನೆ ಜಾರಿ ಸಂಬಂಧ ಹೆಚ್ಚಿನ ಆಸಕ್ತಿ ತೋರಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರಿಗೆ ಧೃವ ಮನೋಜ್ ಪಟೇಲ್ ಧನ್ಯವಾದಗಳನ್ನು ಹೇಳಿದರು.

    ಪ್ರತಿ ಕಿಲೋಮೀಟರ್‍ಗೆ 50 ಕೋಟಿ ವೆಚ್ಚವಾಗುವ ಈ ಯೋಜನೆಯನ್ನು ಕಂಪನಿ ತನ್ನ ಟೆಕ್‍ಪಾರ್ಕ್‍ಗೆ ಅನುಕೂಲ ಆಗುವ ರೀತಿಯಲ್ಲಿ ಪಾಡ್ ಟ್ಯಾಕ್ಸಿಯ ಮಾರ್ಗ ಬದಲಾವಣೆ ಮಾಡಿದೆ ಎನ್ನುವ ಆರೋಪ ಈಗ ಕೇಳಿ ಬಂದಿದೆ. ಅಲ್ಲದೇ ಇತ್ತೀಚೆಗೆ ಸಚಿವ ಜಾರ್ಜ್ ಅವರ ಮಗನ ಕಂಪನಿಗೆ ತೊಂದರೆ ಆಗುತ್ತೆ ಎಂದು ಬಿಬಿಎಂಪಿ ಸ್ಕೈವಾಕ್ ನಿರ್ಮಾಣವನ್ನೇ ಬೇರೆಡೆ ಸ್ಥಳಾಂತರ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಈಗ ಸಚಿವ ಜಾರ್ಜ್‍ಗಾಗಿ ಸಹಭಾಗಿತ್ವದ ಕಂಪನಿಗೆ ಪಾಡ್ ಟ್ಯಾಕ್ಸಿ ಗುತ್ತಿಗೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.  ಇದನ್ನೂ ಓದಿ: ಜಾರ್ಜ್ ಮಗನ ಮೇಲೆ ಸಿಎಂಗೆ ಫುಲ್ ಲವ್ – ಕಾಡಲ್ಲಿ ಸ್ವಂತ ವಾಹನದಲ್ಲಿ ಸವಾರಿಗೆ ಪರ್ಮಿಷನ್

    ಟೆಂಡರ್ ಸಲ್ಲಿಕೆಗೆ ಬಿಬಿಎಂಪಿ ಆರಂಭದಲ್ಲಿ ಡಿಸೆಂಬರ್ 30 ಕೊನೆಯ ದಿನ ಎಂದು ಪ್ರಕಟಿಸಿತ್ತು. ಆದರೆ, ಕ್ರಿಸ್‍ಮಸ್ ರಜೆ ಇರುವುದರಿಂದ ಹಾಗೂ ಕೆಲ ಕಾರಣಗಳಿಂದ ಟೆಂಡರ್ ಅವಧಿಯನ್ನು ವಿಸ್ತರಿಸುವಂತೆ ಕಂಪೆನಿಗಳು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಜನವರಿ 10ಕ್ಕೆ ವಿಸ್ತರಣೆಯಾಗಿತ್ತು.

    ಸಿಂಗಪುರದ ಆಲ್ಟ್ರಾ ಫೈರ್‍ವುಡ್ ಗ್ರೀನ್ ಟ್ರಾನ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್, ಅಮೆರಿಕದ ಸ್ಕೈ ಟ್ರ್ಯಾನ್ ಏಷಿಯಾ, ಜೆಪಾಡ್ಸ್ ಇಂಕ್ ಕಂಪೆನಿಗಳು ಆಸಕ್ತಿ ತೋರಿದ್ದು, ವಿಸ್ತೃತ ಯೋಜನಾ ವರದಿಗಳನ್ನೂ ಸಲ್ಲಿಸಿವೆ. ಇತ್ತೀಚೆಗೆ ತಾಂತ್ರಿಕ ಬಿಡ್ ನಡೆಯಿತು. ಪಾಡ್ ಟ್ಯಾಕ್ಸಿ ಯೋಜನೆ ಅನುಷ್ಠಾನದಲ್ಲಿ ಕನಿಷ್ಠ 2 ವರ್ಷ ಅನುಭವ ಹೊಂದಿರಬೇಕು ತಾಂತ್ರಿಕವಾಗಿ ಅರ್ಹತೆ ಹೊಂದಿರುವ ಕಂಪೆನಿಗೆ ಟೆಂಡರ್ ನೀಡಲಾಗುತ್ತದೆ ಎಂದು ಈ ಹಿಂದೆ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದರು. ಇದನ್ನೂ ಓದಿ: ಡಿಕೆ ರವಿ, ಗಣಪತಿ ಕೇಸನ್ನು ಪರಿಗಣಿಸಿದ್ದು ಯಾಕೆ: ಪಬ್ಲಿಕ್ ಟಿವಿ ಸಮೀಕ್ಷೆಗೆ ಜಾರ್ಜ್ ಪ್ರಶ್ನೆ

    ಏನಿದು ಪಾಡ್ ಟ್ಯಾಕ್ಸಿ?
    ಪಾಡ್ ಟ್ಯಾಕ್ಸಿ ಸೇವೆ ಗಂಟೆಗೆ ಸರಾಸರಿ 100 ಕಿ.ಮೀ. ವೇಗದಲ್ಲಿ ಸಂಚರಿಸುವ ಮೂಲಕ ಮೆಟ್ರೊ ರೈಲು ನಿಲ್ದಾಣಗಳಿಗೆ ಪೂರಕ ಸೇವೆ ಒದಗಿಸಲಿದೆ. ಪ್ರತಿ ಪಾಡ್ ಟ್ಯಾಕ್ಸಿ 3 ಮೀಟರ್ ಉದ್ದ, 2.2 ಮೀಟರ್ ಅಗಲವಿದ್ದು, ಕನಿಷ್ಠ 6 ಮಂದಿ ಪ್ರಯಾಣಿಸಬಹುದು. ಪ್ರತಿ ಕಿ.ಮೀ. ಮಾರ್ಗ ನಿರ್ಮಾಣಕ್ಕೆ ಅಂದಾಜು 50 ಕೋಟಿ ರೂ. ವೆಚ್ಚವಾಗಲಿದೆ. ಖಾಸಗಿ ಕಂಪೆನಿಗಳೇ ಸಂಪೂರ್ಣ ಬಂಡವಾಳ ಹೂಡಲಿದ್ದು, ಯೋಜನೆಯ ಆರಂಭವಾದ ನಂತರ 30 ವರ್ಷ ನಿರ್ವಹಣೆ ಮಾಡಲಿವೆ. ಯೋಜನೆ ಅನುಷ್ಠಾನಕ್ಕೆ ಬೇಕಾದ ರಸ್ತೆ ವಿಭಜಕಗಳ ನಡುವೆ ಜಾಗವನ್ನು ಬಿಬಿಎಂಪಿ ನೀಡಲಿದೆ.

    ನಗರದಲ್ಲಿ ಮೊದಲ ಹಂತದಲ್ಲಿ ಟ್ರಿನಿಟಿ ಮೆಟ್ರೊ ನಿಲ್ದಾಣದಿಂದ ವೈಟ್‍ಫೀಲ್ಡ್‍ವರೆಗೆ 30 ಕಿ.ಮೀ. ಉದ್ದದ ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ಅಗರ, ದೊಮ್ಮಲೂರು, ಲೀಲಾ ಪ್ಯಾಲೇಸ್ ಹೋಟೆಲ್, ಬಿಇಎಂಎಲ್, ಎಚ್‍ಎಎಲ್ ವಿಮಾನ ನಿಲ್ದಾಣ, ಮಾರತ್ತಹಳ್ಳಿ, ಗಾಂಧಿ ನಗರ, ಬ್ರೋಕ್‍ಫೀಲ್ಡ್, ಪರಿಮಳ ಸನ್‍ರಿಡ್ಜ್, ನಲ್ಲೂರಹಳ್ಳಿ, ವರ್ಜೀನಿಯಾ ಮಾಲ್, ವೈಟ್‍ಫೀಲ್ಡ್ ನಿಲ್ದಾಣಗಳು ಬರಲಿವೆ. ಅಲ್ಲದೇ 2,000ಕ್ಕೂ ಅಧಿಕ ಪಾಡ್ ಟ್ಯಾಕ್ಸಿಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಪ್ರತಿ ಗಂಟೆಗೆ 15 ರಿಂದ 20 ಸಾವಿರ ಜನರು ಪಾಡ್ ಟ್ಯಾಕ್ಸಿ ಸೇವೆಯಲ್ಲಿ ಪ್ರಯಾಣಿಸಬಹುದಾಗಿದೆ.  ಇದನ್ನೂ ಓದಿ: ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!

  • ಪರಮೇಶ್ವರ್ ನಾಯ್ಕ್ ದರ್ಬಾರ್: ಪ್ರಕಟಣೆಯಾದ ದಿನವೇ ಟೆಂಡರ್ ಮುಕ್ತಾಯ- ಗೋಲ್ಮಾಲ್ ಬಯಲಾದ್ಮೇಲೆ ದಾಖಲೆಗಳೇ ಮಾಯ

    ಪರಮೇಶ್ವರ್ ನಾಯ್ಕ್ ದರ್ಬಾರ್: ಪ್ರಕಟಣೆಯಾದ ದಿನವೇ ಟೆಂಡರ್ ಮುಕ್ತಾಯ- ಗೋಲ್ಮಾಲ್ ಬಯಲಾದ್ಮೇಲೆ ದಾಖಲೆಗಳೇ ಮಾಯ

    ಬಳ್ಳಾರಿ: ಮಾಜಿ ಸಚಿವ, ಹಾಲಿ ಶಾಸಕ ಪರಮೇಶ್ವರ್ ನಾಯ್ಕ್ ಆಡಿದ್ದೇ ಆಟ ಮಾಡಿದ್ದೇ ಕಾನೂನು ಎಂಬಂತಾಗಿದೆ. ಸಾಮಾನ್ಯವಾಗಿ ಟೆಂಡರ್ ಕರೆಯೋಕೆ ಅದರದ್ದೇ ಆದ ರೂಲ್ಸ್ ಗಳಿವೆ. ಆದ್ರೆ ಬಳ್ಳಾರಿಯಲ್ಲಿ ಮಾತ್ರ ಈ ರೂಲ್ಸ್ ಯಾವ ಲೆಕ್ಕಕ್ಕೂ ಇಲ್ಲ.

    ಹೂವಿನಹಡಗಲಿಯ ಮಾನ್ಯರ ಮಸಲವಾಡ, ಕೊಯಿಲಾರಗಟ್ಟಿ ಗ್ರಾಮಗಳ ಕೆರೆ ಹೂಳೆತ್ತುವ ಕಾಮಗಾರಿಗೆ ಅಧಿಕಾರಿಗಳು, ಹಾಲಿ ಶಾಸಕ ಪರಮೇಶ್ವರ್ ನಾಯ್ಕ್ ಟೆಂಡರ್ ಕರೆದು ಅದ್ರ ಜಾಹೀರಾತನ್ನ ಈ ಸಂಜೆ ಪತ್ರಿಕೆಯಲ್ಲಿ ಪ್ರಕಟಿಸಿದ್ರು. ವಿಚಿತ್ರ ಅಂದ್ರೆ ಅದೇ ಸಂಜೆ ಟೆಂಡರ್ ಸಹ ಮುಗಿದುಹೋಗಿದೆ. ಈ ಬಗ್ಗೆ ಸೋಗಿ ಜಿಲ್ಲಾ ಪಂಚಾಯತ್ ಸದಸ್ಯ ವಿಶ್ವನಾಥ ದಾಖಲೆ ಸಮೇತ ಜಿಲ್ಲಾ ಪಂಚಾಯತ ಸಿಇಓಗೆ ದೂರು ಸಲ್ಲಿಸಿದ್ದಾರೆ.

    ಇನ್ನೊಂದು ವಿಚಿತ್ರ ಅಂದ್ರೆ ಅಕ್ರಮ ಬಯಲಾಗ್ತಿದ್ದಂತೆ ದಾಖಲೆಗಳು ಸಹ ನಾಪತ್ತೆಯಾಗಿದೆ. ಕಳ್ಳತನವಾಗಿರುವ ಟೆಂಡರ್ ಪ್ರಕಟಣೆಯ ದಾಖಲೆಗಳನ್ನು ಜಿಲ್ಲಾ ಪಂಚಾಯತ್ ಮುಂದೆ ಹಾಜರುಪಡಿಸುವಂತೆ ಸಿಇಓ ಆದೇಶ ನೀಡಿದ್ದಾರೆ. ಇನ್ನು ಈ ಬಗ್ಗೆ ಸೂಕ್ತ ತನಿಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.