Tag: tender

  • ಇಂದಿರಾ ಟೆಂಡರ್​ಗೆ ‘ಅದಮ್ಯ’ ಆಸಕ್ತಿ

    ಇಂದಿರಾ ಟೆಂಡರ್​ಗೆ ‘ಅದಮ್ಯ’ ಆಸಕ್ತಿ

    ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂದಿರಾ ಕ್ಯಾಂಟೀನ್ ಭವಿಷ್ಯವೇನು ಎನ್ನುವ ಅನುಮಾನ ಕಾಡುತ್ತಿದೆ. ಈಗ ಇಂದಿರಾ ಕ್ಯಾಂಟೀನ್ ಹಾಲಿ ಗುತ್ತಿಗೆದಾರರ ಅವಧಿ ಮುಗಿದಿದ್ದು, ಬಿಬಿಎಂಪಿ ಇಂದಿರಾ ಕ್ಯಾಂಟೀನ್ ಆಹಾರ ವಿತರಣೇ ಸಂಬಂಧ ಟೆಂಡರ್ ಕರೆದಿದೆ.

    ಹಾಲಿ ಶೆಫ್ ಟಾಕ್, ರಿಚರ್ಡ್ಸ್ ಸಂಸ್ಥೆಗಳು ಟೆಂಡರ್ ನಲ್ಲಿ ಭಾಗವಹಿಸಿದೆ. ವಿಶೇಷವೆಂದರೆ ಈ ಟೆಂಡರ್ ಗೆ ಅದಮ್ಯ ಚೇತನ ವತಿಯಿಂದಲೂ ಅರ್ಜಿ ಹಾಕಲಾಗಿದೆ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಂಸ್ಥೆ ಟೆಂಡರ್ ನಲ್ಲಿ ಭಾಗವಹಿಸಿದ್ದು, ನಿಯಮ ಉಲ್ಲಂಘಿಸಿ ಗುತ್ತಿಗೆ ನೀಡುತ್ತಾರಾ ಎಂಬ ಅನುಮಾನ ಈಗ ಕಾಂಗ್ರೆಸ್ ವಲಯವನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ತಪ್ಪದೇ ಟೆಂಡರ್ ವೇಳೆ ಪಾರದರ್ಶಕ ನಿಯಮ ಪಾಲಿಸಬೇಕು ಎಂದು ವಿರೋಧ ಪಕ್ಷ ನಾಯಕ ಅಬ್ದುಲ್ ವಾಜೀದ್ ಆಗ್ರಹಿಸಿದ್ದಾರೆ.

    ಮುಂದಿನ 15 ದಿನಗಳಲ್ಲಿ ಟೆಂಡರ್ ಪತ್ರಗಳ ಪರಿಶೀಲನೆ ಮುಗಿಸಿ, ಯಾರಿಗೆ ಗುತ್ತಿಗೆ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಲಿದೆ. ಈ ಮಧ್ಯೆ ಮಾನವ ಸಂಪನ್ಮೂಲ ಎಂಬ ಸಂಸ್ಥೆಯೂ ಗುತ್ತಿಗೆಯಲ್ಲಿ ಭಾಗವಹಿಸಿದೆ. ಇಡೀ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆಗೆ ಆಸಕ್ತಿ ತೋರಿ 8 ಮಂದಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ ಎಂದು ಬಿಬಿಎಂಪಿ ಮೇಯರ್ ಗೌತಮ್‍ಕುಮಾರ್ ಹೇಳಿದ್ದಾರೆ.

  • 170 ಕೋಟಿಗೆ ಕರುನಾಡಿನ ಲಿಂಕ್ – ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಲಿದ್ಯಾ ‘ಮೇಘಾ’ ಸ್ಕ್ಯಾಮ್?

    170 ಕೋಟಿಗೆ ಕರುನಾಡಿನ ಲಿಂಕ್ – ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಲಿದ್ಯಾ ‘ಮೇಘಾ’ ಸ್ಕ್ಯಾಮ್?

    – ಹೈದ್ರಾಬಾದ್‍ನಲ್ಲಿ ಐಟಿ ದಾಳಿ, ಕರ್ನಾಟಕದಲ್ಲಿ ನಡುಕ
    – ಸಿದ್ದರಾಮಯ್ಯಗೆ ಐಟಿ ನೋಟಿಸ್ ಸಾಧ್ಯತೆ
    – ಪಬ್ಲಿಕ್ ಟಿವಿಯಲ್ಲಿ ‘ಮೇಘಾ’ ಇನ್‍ವೆಸ್ಟಿಗೇಷನ್ ಸ್ಟೋರಿ

    ಬೆಂಗಳೂರು: ಹೈದರಾಬಾದಿನಲ್ಲಿ ಆದಾಯ ತೆರಿಗೆ ಇಲಾಖೆಯ ದಾಳಿ ನಡೆದಿದ್ದು ಈಗ ಈ ‘ಮೇಘಾ’ ಟೆಂಡರ್ ಪ್ರಕರಣ ಕರ್ನಾಟಕದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ.

    ಹೌದು, ಆಂಧ್ರ ಮೂಲದ ಮೇಘಾ ಕಂಪನಿಯಿಂದ ಹವಾಲಾ ಹಣ ಸ್ವೀಕಾರ ಸಂಬಂಧ ಎಐಸಿಸಿಗೆ ಐಟಿ ಇಲಾಖೆ ನೋಟಿಸ್ ಕೊಟ್ಟಿದ್ದು ತನಿಖೆ ತೀವ್ರಗೊಂಡಿದೆ. ಆಂಧ್ರದ ಗುತ್ತಿಗೆದಾರ ಕೃಷ್ಣಾರೆಡ್ಡಿ ಮನೆ ಮೇಲೆ ದಾಳಿ ವೇಳೆ ಪತ್ತೆಯಾದ ಡೈರಿಯ ಪ್ರಕಾರ ಎಐಸಿಸಿಗೆ 170 ಕೋಟಿ ನೀಡಲಾಗಿದೆ. ಈ ಡೈರಿ ಆಧರಿಸಿ ಎಐಸಿಸಿಗೆ ಐಟಿ ನೋಟಿಸ್ ನೀಡಿದೆ.

    ಐಟಿ ನೋಟಿಸ್ ಕೊಡುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್ ನಾಯಕರಿಗೂ ನಡುಕ ಶುರುವಾಗಿದೆ. ಯಾಕೆಂದರೆ ಗುತ್ತಿಗೆದಾರ ಕೃಷ್ಣಾರೆಡ್ಡಿಗೆ ಅತಿ ಹೆಚ್ಚು ಟೆಂಡರ್ ನೀಡಿದ್ದೇ ಕರ್ನಾಟಕ. ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅತಿ ಹೆಚ್ಚು ಟೆಂಡರ್ ನೀಡಲಾಗಿತ್ತು. ಸರಿಸುಮಾರು 8 ಸಾವಿರ ಕೋಟಿಯ ಬೃಹತ್ ಟೆಂಡರ್ ನೀಡಲಾಗಿತ್ತು.

    ಈ ಟೆಂಡರ್ ಗಾಗಿಯೇ ಎಐಸಿಸಿಗೆ ಕಿಕ್‍ಬ್ಯಾಕ್ ನೀಡಲಾಗಿತ್ತಾ? ಎಐಸಿಸಿಗೆ ರವಾನೆಯಾದ 170 ಕೋಟಿಗೆ ಕರ್ನಾಟಕದ ನಂಟಿತ್ತಾ ಎಂಬ ಪ್ರಶ್ನೆಗಳ ಆಧಾರದ ಮೇಲೆ ಕರ್ನಾಟಕ ನಂಟಿನ ಬಗ್ಗೆ ಐಟಿಯಿಂದ ತೀವ್ರಗೊಂಡಿದೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯಗೆ ಯಾವುದೇ ಕ್ಷಣದಲ್ಲೂ ಐಟಿ ನೋಟಿಸ್ ನೀಡುವ ಸಂಭವ ಇದೆ. ಟೆಂಡರ್ ನೀಡಿದ ಸಿದ್ದರಾಮಯ್ಯಗೂ ಐಟಿ ಸಂಕಷ್ಟ ಎದುರಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಯಾವೆಲ್ಲ ಟೆಂಡರ್ ನೀಡಲಾಗಿದೆ?
    ಸಿದ್ದರಾಮಯ್ಯ ಅವಧಿಯಲ್ಲಿ 2000 ಕೋಟಿ ರೂಪಾಯಿಯ ಎತ್ತಿನ ಹೊಳೆ ಯೋಜನೆ, 1300 ಕೋಟಿ ರೂಪಾಯಿಯ ಕೆ ಸಿ ವ್ಯಾಲಿ ಪೈಪ್‍ಲೈನ್ ಯೋಜನೆ, 900 ಕೋಟಿ ರೂಪಾಯಿಯ ಹುನಗುಂದದ ಏತ ನೀರಾವರಿ ಯೋಜನೆ, 600 ಕೋಟಿ ರೂ. ಕೊಪ್ಪಳ ರಾಯಚೂರು ನೀರಾವರಿ ಯೋಜನೆ, 600 ಕೋಟಿ ರೂಪಾಯಿಯ ಕೃಷ್ಣ ಜಲಭಾಗ್ಯ ನಿಗಮದ ಯೋಜನೆ, ಪಾವಗಡದ ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣದ ಟೆಂಡರ್ ನೀಡಲಾಗಿದೆ.

  • ಹಳೆ ಕಲ್ಲು ಹೊಸ ಬಿಲ್ಲು – ಬಿಬಿಎಂಪಿ ಹಗರಣ ಬಯಲು

    ಹಳೆ ಕಲ್ಲು ಹೊಸ ಬಿಲ್ಲು – ಬಿಬಿಎಂಪಿ ಹಗರಣ ಬಯಲು

    ಬೆಂಗಳೂರು: ಹಳೆ ಕಲ್ಲು ಹೊಸ ಬಿಲ್ಲು ಬಿಬಿಎಂಪಿಗೆ ಹೊಸದೇನಲ್ಲ. ಇದೀಗ ಬಿಬಿಎಂಪಿ ಹಗರಣ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅದು ಮಾಜಿ ಉಪಮೇಯರ್ ವಾರ್ಡ್ ಸಂಬಂಧಿತವಾಗಿದ್ದು ಅನ್ನೋದು ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

    ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ನಾಗಪುರ ವಾರ್ಡ್ ನಲ್ಲಿ ಇರುವ ಉಷಾ ಪಾರ್ಕ್ ನಲ್ಲಿ ಜಿಮ್ ಉಪಕರಣಗಳ ಬದಲಾವಣೆಗೆ ಈಗ ಟೆಂಡರ್ ಕರೆಯಲಾಗಿದೆ. ವರ್ಷದ ಹಿಂದೆ ಹಾಕಿದ್ದ ಜಿಮ್ ಉಪಕರಣಗಳ ಬದಲಾವಣೆಗೆ ಟೆಂಡರ್ ಕರೆಯಲಾಗಿದೆ. ಆದರೆ ವರ್ಷದ ಹಿಂದೆ ಹಾಕಿರೋ ಉಪಕರಣಕ್ಕೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‍ಐಡಿಎಲ್) ದಿಂದ ಹಣ ಬಿಡುಗಡೆಯಾಗಿದೆ.

    ಪಾರ್ಕ್ ನಲ್ಲಿ ಜಿಮ್ ಉಪಕರಣ ಹಾಕಲು ಸ್ಥಳಾವಕಾಶವಿಲ್ಲ. ಈಗಾಗಲೇ ಹತ್ತಕ್ಕೂ ಹೆಚ್ಚು ಜಿಮ್ ಉಪಕರಣಗಳು ಉತ್ತಮ ಸ್ಥಿತಿಯಲ್ಲಿದೆ. ಹೀಗಿರುವಾಗ ಜಿಮ್ ಸಲಕರಣೆ ಬದಲಾವಣೆಗೆ 25 ಲಕ್ಷ ಟೆಂಡರ್ ಕರೆಯಲಾಗಿದ್ದು, ಜೊತೆಗೆ ಉಷಾ ಪಾರ್ಕ್ ಇತರ ಅಭಿವೃದ್ಧಿಗಾಗಿ 20 ಲಕ್ಷ ಟೆಂಡರ್ ಮೊತ್ತ ಸಹ ಸೇರ್ಪಡೆ ಮಾಡಲಾಗಿದೆ. ಈ ಉಷಾ ಪಾರ್ಕ್ ಗಾಗಿ 45 ಲಕ್ಷ ಸುರಿಯಲು ಸಿದ್ಧವಾಗಿದೆ ಎನ್ನಲಾಗಿದೆ.

    ಹೊಸ ಟೆಂಡರ್ ಅಗತ್ಯ ಈ ಪಾರ್ಕ್ ನಲ್ಲಿ ಕಾಣಿಸುತ್ತಿದೆಯಾ ಎಂದು ಈ ಹಗರಣ ಸಂಬಂಧ ದೂರು ನೀಡಲು ಮತ್ತೊಬ್ಬ ಮಾಜಿ ಉಪಮೇಯರ್ ಸಿದ್ಧವಾಗಿದ್ದಾರೆ. ಜೊತೆಗೆ 1 ಸಾವಿರ ಕೋಟಿ ಮಹಾಲಕ್ಷ್ಮೀ ಲೇಔಟ್ ಗೆ ಅನುದಾನ ಬಂದಿದೆ. ಈ ಎಲ್ಲ ಅನುದಾನದ ಬಗ್ಗೆ ತನಿಖೆಗೆ ಆಗ್ರಹಿಸಲು ಮಾಜಿ ಉಪಮೇಯರ್ ಹರೀಶ್ ಸಜ್ಜಾಗಿದ್ದಾರೆ.

  • ಟೆಂಡರ್ ಕರೆಯೋ ಮುನ್ನವೇ ಕಾಮಗಾರಿ ಪೂರ್ಣ – ತರಾತುರಿ ಚಾಲನೆಗೆ ನೂರೆಂಟು ಸಂಶಯ

    ಟೆಂಡರ್ ಕರೆಯೋ ಮುನ್ನವೇ ಕಾಮಗಾರಿ ಪೂರ್ಣ – ತರಾತುರಿ ಚಾಲನೆಗೆ ನೂರೆಂಟು ಸಂಶಯ

    ವಿಜಯಪುರ: ಯಾವುದೇ ಸರ್ಕಾರಿ ಕಾಮಗಾರಿ ಇರಲಿ ಸಾಮಾನ್ಯವಾಗಿ ಟೆಂಡರ್ ಪ್ರಕ್ರಿಯೆ ಸಂಪೂರ್ಣ ಮುಗಿದ ಮೇಲೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಆದರೆ ವಿಜಯಪುರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯುವ ಮುನ್ನವೇ ಕಾಮಗಾರಿ ಪ್ರಾರಂಭಿಸಿ ಕಾಮಗಾರಿ ಸಂಪೂರ್ಣ ಮಾಡಲಾಗಿದೆ.

    ಮಹಾನಗರ ಪಾಲಿಕೆ ಇ-ಪ್ರೊಕ್ಯೂರ್ಮೆಂಟ್ ಮುಖಾಂತರ ಆನ್‍ಲೈನ್ ನಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿಗಳ ಆರು ಕಾಮಗಾರಿಗಳಿಗೆ ಟೆಂಡರ್ ಕರೆದಿದೆ. ಇವೆಲ್ಲವೂ ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆಗಳಾಗಿವೆ. ಈ ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ ಜೂನ್ 25 ಇದ್ದು, ಟೆಂಡರ್ ಓಪನ್ ಮಾಡುವ ದಿನಾಂಕವೇ ಜೂನ್ 27 ಎಂದು ಟೆಂಡರ್ ನಲ್ಲಿ ತಿಳಿಸಲಾಗಿದೆ. ಆದರೆ ವಿಚಿತ್ರ ಎಂದರೆ ಟೆಂಡರ್ ಓಪನ್ ಮಾಡುವುದಕ್ಕೂ ಮೊದಲೇ ಇಲ್ಲಿ ಕಾಮಗಾರಿ ನಡೆದಿದೆ.

    ಅಷ್ಟೇ ಅಲ್ಲದೆ ಟೆಂಡರ್ ಓಪನ್ ಆಗಿ ಗುತ್ತಿಗೆದಾರನ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಳೆದ ಜೂನ್ 12 ರಂದು ಶಂಕು ಸ್ಥಾಪನೆ ಮಾಡಿ ಮುಗಿಸಿದ್ದಾರೆ. ಹೀಗಾಗಿ ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ಸೇರಿ ಇಲ್ಲಿ ಗೋಲ್ ಮಾಲ್ ನಡೆಸುತ್ತಿದ್ದಾರೆ. ಇದೇ ಗುತ್ತಿಗೆದಾರನಿಗೆ ಟೆಂಡರ್ ಪಾಸ್ ಆಗುತ್ತೆ ಎಂದು ಮುಂಚೇನೆ ಹೇಗೆ ಗೊತ್ತಾಯ್ತು ಅನ್ನೋದು ಸಾರ್ವಜನಿಕರ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

    ಕೋಟ್ಯಂತರ ರೂಪಾಯಿ ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆಗೂ ಮುನ್ನವೇ ಅಷ್ಟೊಂದು ತರಾತುರಿಯಲ್ಲಿ ನಗರ ಶಾಸಕರು ಯಾಕೆ ಶಂಕುಸ್ಥಾಪನೆ ನೆರವೇರಿಸಿದರು ಎಂಬ ಸಂಶಯ ಒಂದು ಕಡೆಯಾದ್ರೆ, ಮಹಾನಗರ ಪಾಲಿಕೆ ಆಯುಕ್ತರು ಇಷ್ಟೆಲ್ಲ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇದರಲ್ಲಿ ಜನಪ್ರತಿನಿಧಿಗಳ ಹಾಗೂ ಗುತ್ತಿಗೆದಾರರ ಹೊಂದಾಣಿಕೆಯ ರಹಸ್ಯ ಅಡಗಿದೆಯೇ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    ಇದರ ಬಗ್ಗೆ ಪಾಲಿಕೆ ಆಯುಕ್ತ ಔದ್ರಾಂ ಅವರನ್ನು ಕೇಳಿದಾಗ, ಅದು ನಮ್ಮ ಕಾಮಗಾರಿ ಅಲ್ಲ. ಬೇರೆ ಇಲಾಖೆಯ ಕಾಮಗಾರಿ ನಡೆದಿರಬಹುದು ಎಂದು ಹೇಳಿದ್ದಾರೆ.

    ಪಾಲಿಕೆ ಟೆಂಡರ್ ನಲ್ಲಿ ನಮೂದಿಸಿದ ಮಾರ್ಗಗಳಲ್ಲೇ ರಸ್ತೆ ನಡೆದಿದ್ದು, ಆಯುಕ್ತರ ಹೇಳಿಕೆ ಅನುಮಾನಕ್ಕೆ ಕಾರಣವಾಗಿದೆ. ಕಾನೂನನ್ನು ಗಾಳಿಗೆ ತೂರಿ ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಜಿಲ್ಲೆಯವರೇ ಆದ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರು ಸಹ ಯಾಕೆ ಮೌನವಹಿಸಿದ್ದಾರೆ ಎಂಬ ಪ್ರಶ್ನೆಯೂ ಮೂಡಿದೆ.

  • ಕಪ್ಪುಪಟ್ಟಿಯಲ್ಲಿದ್ದ ಗುತ್ತಿಗೆದಾರರಿಗೆ ದೋಸ್ತಿ ಸರ್ಕಾರದಿಂದ ರತ್ನಗಂಬಳಿ!

    ಕಪ್ಪುಪಟ್ಟಿಯಲ್ಲಿದ್ದ ಗುತ್ತಿಗೆದಾರರಿಗೆ ದೋಸ್ತಿ ಸರ್ಕಾರದಿಂದ ರತ್ನಗಂಬಳಿ!

    ಬೆಂಗಳೂರು: ಕಪ್ಪುಪಟ್ಟಿಯಲ್ಲಿದ್ದ ಗುತ್ತಿಗೆದಾರರಿಗೆ ದೋಸ್ತಿ ಸರ್ಕಾರವು ರತ್ನಗಂಬಳಿ ಹಾಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

    ಕಳಪೆ ಕಾಮಗಾರಿ ಮೂಲಕ ಸರ್ಕಾರದ ಹಣವನ್ನು ಲೂಟಿ ಹೊಡೆಯುತ್ತಿದ್ದ ಗುತ್ತಿಗೆದಾರರಿಗೆ ಅಜೀವ ನಿಷೇಧ ಹೇರಲಾಗಿತ್ತು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಡಳಿತದ ಅವಧಿಯಲ್ಲಿ ಇದನ್ನು ತೆರವುಗೊಳಿಸಿ, 3 ವರ್ಷಕ್ಕೆ ಇಳಿಸುವ ಕಾನೂನು ತರಲು ಮುಂದಾಗಿದ್ದರು. ಇದಕ್ಕೆ ಈಗ ಸಿಎಂ ಕುಮಾರಸ್ವಾಮಿ ಅವರು ಒಪ್ಪಿಗೆ ಸೂಚಿಸಿದ್ದಾರೆ.

    ಅಜೀವ ನಿಷೇಧ ತೆರವುಗೊಳಿಸಿದ್ದರ ಹಿಂದಿನ ಉದ್ದೇಶವೇನು? ಇದು ಮೈತ್ರಿ ಸರ್ಕಾರದ ನಿರ್ಧಾರವಲ್ಲ. ಆದರೂ ವಿರೋಧ ಮಾಡಲಿಲ್ಲ ಯಾಕೆ? ರಾಜ್ಯ ಲೂಟಿ ಮಾಡಿದವರಿಗೆ ರತ್ನಗಂಬಳಿ ಹಾಸಿದ್ದು ಸರಿಯೇ? ಸರ್ಕಾರದ ಹಣವನ್ನು ಲೂಟಿ ಹೊಡೆದವರಿಗೆ ಮತ್ತೆ, ಮತ್ತೆ ಗುತ್ತಿಗೆ ನೀಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರಿಗೆ ಬಿಸಿ ಮುಟ್ಟಿಸುವುದಕ್ಕಾಗಿ ಅಜೀವ ನಿಷೇಧ ಕಾನೂನು ಜಾರಿಗೆ ತರಲಾಗಿತ್ತು. ಇದರಿಂದಾಗಿ ಅನೇಕ ಗುತ್ತಿಗೆದಾರರು ಬೇಜವಾಬ್ದಾರಿ ತೋರದೆ ಕೆಲಸ ಮಾಡುತ್ತಿದ್ದರು. ಆದರೆ ಈಗ ಮೂರು ವರ್ಷ ಮಾತ್ರ ನಿಷೇಧ ಮಾಡಿದ್ದು ಎಷ್ಟು ಸರಿ? ಕಾನೂನು ಸಡಿಲಗೊಂಡಿದ್ದರಿಂದ ಗುತ್ತಿಗೆದರರಿಗೆ ಭಯ ಕಡಿಮೆ ಆಗಲಿದೆ. ಕೇವಲ ಮೂರು ವರ್ಷ ಅಷ್ಟೇ ಅಲ್ಲವೇ ಎಂಬ ಭಾವನೆಯಿಂದ ಸರ್ಕಾರಿ ಕಾಮಗಾರಿಯಲ್ಲಿ ಹಣ ಲೂಟಿ ಮಾಡುತ್ತಾರೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

    https://www.youtube.com/watch?v=-lilJp5Vy2s

  • ಬ್ಲಾಕ್‌ಲಿಸ್ಟ್‌ನಲ್ಲಿದ್ರೂ ಅದೇ ಕಂಪನಿಗೆ ಟೆಂಡರ್ ಕೊಡುವಂತೆ ಶಾಸಕ ಒತ್ತಾಯ

    ಬ್ಲಾಕ್‌ಲಿಸ್ಟ್‌ನಲ್ಲಿದ್ರೂ ಅದೇ ಕಂಪನಿಗೆ ಟೆಂಡರ್ ಕೊಡುವಂತೆ ಶಾಸಕ ಒತ್ತಾಯ

    -ಇದು 600 ಕೋಟಿ ರಿಲೀಸ್ ರಹಸ್ಯ!

    ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಂಪನಿ ಬ್ಲಾಕ್‍ಲಿಸ್ಟ್ ನಲ್ಲಿ ಇದ್ದರೂ ಅದೇ ಕಂಪನಿಗೆ ಟೆಂಡರ್ ಕೊಡುವಂತೆ ಶಾಸಕರೊಬ್ಬರು ಬಿಡಿಎ ಕಮಿಷನರ್ ಮೇಲೆ ಒತ್ತಡದ ಮೇಲೆ ಒತ್ತಡ ಹೇರುತ್ತಿರುವ ಘಟನೆ ಬೆಳಕಿಗೆ ಬಂದಿದೆ.

    ಭಾರೀ ಮೊತ್ತದ ಕೋನದಾಸಪುರದ ಉದ್ದೇಶಿತ ವಸತಿ ಸಮುಚ್ಚಯದ ಟೆಂಡರ್ ಗಾಗಿ ಬಿಡಿಎ ಕಮಿಷನರ್ ಮೇಲೆ ಒತ್ತಡ ಹೇರುತ್ತಿದ್ದು, ಶಾಸಕ ಸೋಮಶೇಖರ್ ರಾಮಲಿಂಗಂ ಕನ್ಸ್‌ಸ್ಟ್ರಕ್ಷನ್‌ ಕಂಪನಿಗೆ ನೀಡುವಂತೆ ವಕಾಲತ್ತು ವಹಿಸುತ್ತಿದ್ದಾರೆ. ಚಂದ್ರಕಾಂತ್ ರಾಮಲಿಂಗಂ ಕನ್ಸ್‌ಸ್ಟ್ರಕ್ಷನ್‌ ಕಂಪನಿಯ ಮಾಲೀಕನಾಗಿದ್ದು, ಇವರ ಕಂಪನಿಗೆ ಯಾವುದೇ ಟೆಂಡರ್ ಕೊಡಬಾರದು ಎಂದು ಕಂಪನಿಯನ್ನು ಬ್ಲಾಕ್‍ಲಿಸ್ಟ್ ಗೆ ಸೇರಿಸಲಾಗಿದೆ. ಆದರೂ ಅವರಿಗಾಗಿ ಶಾಸಕ ಸೋಮಶೇಖರ್ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಚಂದ್ರಕಾಂತ್

    ಶಾಸಕ ಸೋಮಶೇಖರ್ ಮತ್ತು ಚಂದ್ರಕಾಂತ್ ಆಪ್ತರಾಗಿದ್ದಾರೆ. ಹೀಗಾಗಿ ರಾಮಲಿಂಗಂಗೆ ಕಾಮಗಾರಿ ಕೈಗೆತ್ತಿಕೊಳ್ಳಲು ವರ್ಕ್ ಆರ್ಡರ್ ನೀಡುವಂತೆ ಬಿಡಿಎ ಕಮಿಷನರ್ ರಾಕೇಶ್ ಸಿಂಗ್‍ಗೆ ಒತ್ತಡ ಹಾಕುತ್ತಿದ್ದರು. ಸರಿ ಸುಮಾರು 600 ಕೋಟಿ ಮೊತ್ತದ ಪ್ರಾಜೆಕ್ಟ್ ಇದಾಗಿದೆ. ಇತ್ತ ಬಿಡಿಎ ಅಧ್ಯಕ್ಷ ಸೋಮಶೇಖರ್ ಒತ್ತಡಕ್ಕೆ ರಾಕೇಶ್‍ಸಿಂಗ್ ಮಣಿಯಲಿಲ್ಲ. ಕೊನೆಗೆ ಗುತ್ತಿಗೆ ನೀಡದೆ ಇದ್ದುದಕ್ಕೆ ರಾಕೇಶ್ ಸಿಂಗ್ ಮೇಲೆ ಆರೋಪಗಳನ್ನು ಮಾಡಿ ವರ್ಗಾವಣೆ ಮಾಡುವಂತೆ ಸಿಎಂ ಕುಮಾರಸ್ವಾಮಿಗೆ ಸೋಮಶೇಖರ್ ದೂರು ಸಲ್ಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ರಾಕೇಶ್ ಸಿಂಗ್ ವರ್ಗಾವಣೆ ಮಾಡದೇ ಹೋದರೆ ಬೆಂಗಳೂರು ಉತ್ತರ ಗೆಲ್ಲೋದು ಕಷ್ಟವಾಗುತ್ತದೆ. ಎಲೆಕ್ಷನ್ ಫಂಡ್ ಬೇಕು ಅಂದರೆ ನಾನು ಹೇಳುವ ಗುತ್ತಿಗೆದಾರನಿಗೆ ಗುತ್ತಿಗೆ ಕೊಡಬೇಕು. ಒಂದು ವೇಳೆ ರಾಕೇಶ್ ಸಿಂಗ್ ಅವರನ್ನು ವರ್ಗಾವಣೆ ಮಾಡದೇ ಹೋದರೆ ನಾವ್ಯಾರು ಜೆಡಿಎಸ್‍ಗೆ ಸಪೋರ್ಟ್ ಮಾಡುವುದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ರಾಕೇಶ್ ಸಿಂಗ್‍

    ಈಗಾಗಲೇ ಕೆಂಪೇಗೌಡ ಲೇಔಟ್‍ನಲ್ಲಿ ಕಾಮಗಾರಿಯನ್ನು ಸೋಮಶೇಖರ್ ಬೆಂಬಲಿಗರು ಸ್ಥಗಿತಗೊಳಿಸಿದ್ದಾರೆ. ಬೇಕಾದವರಿಗೆ ಗುತ್ತಿಗೆ ನೀಡಿಲ್ಲವೆಂದು ಕಾಮಗಾರಿ ಸ್ಥಗಿತಗೊಳಿಸಿದ್ದು, ಇಬ್ಬರ ಜಗಳದಿಂದ ಸೈಟ್ ಮಾಲೀಕರಿಗೆ ಸಮಸ್ಯೆ ಎದುರಾಗಿದೆ. ಇತ್ತ ಮನೆ ಕಟ್ಟುವುದಕ್ಕೂ ಆಗದೆ, ಅತ್ತ ಸೈಟ್ ಹತ್ತಿರ ಹೋಗುವುದಕ್ಕೂ ಆಗದೆ ಮಾಲೀಕರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.

  • ಸ್ಮಾರ್ಟ್ ಸಿಟಿ ಯೋಜನೆ ಟೆಂಡರ್ ಕೊಡಿಸುವುದಾಗಿ ವಂಚಿಸುತ್ತಿದ್ದ ಒಂದೇ ಕುಟುಂಬದ ಮೂವರು ಅರೆಸ್ಟ್

    ಸ್ಮಾರ್ಟ್ ಸಿಟಿ ಯೋಜನೆ ಟೆಂಡರ್ ಕೊಡಿಸುವುದಾಗಿ ವಂಚಿಸುತ್ತಿದ್ದ ಒಂದೇ ಕುಟುಂಬದ ಮೂವರು ಅರೆಸ್ಟ್

    ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯ ಟೆಂಡರ್ ಕೊಡಿಸುವುದಾಗಿ ವಂಚಿಸುತ್ತಿದ್ದ ಒಂದೇ ಕುಟುಂಬ ಮೂವರ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ನಗರದ ಬನಶಂಕರಿ ನಿವಾಸಿಗಳಾದ ರಾಜೇಶ್(56), ಪತ್ನಿ ಸತ್ಯಭಾಮ (46) ಹಾಗೂ ಮಗ ಅನುರಾಗ್ (27) ಬಂಧಿತ ಆರೋಪಿಗಳು. ಭಾಸ್ಕರ್ ನಾಯಕ್ ಎಂಬವರಿಗೆ ಟೆಂಡರ್ ಕೊಡಿಸುವುದಾಗಿ ವಂಚಿಸಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ

    ಆರೋಪಿ ರಾಜೇಶ್ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಮುಖ್ಯ ಇಂಜಿನಿಯರ್ ಎಂದು ಹೇಳಿಕೊಂಡಿದ್ದ. ಇದನ್ನು ನಂಬಿದ್ದ ಭಾಸ್ಕರ್ ನಾಯಕ್, ಸ್ಮಾರ್ಟ್ ಸಿಟಿ ಯೋಜನೆಯ ಟೆಂಡರ್ ಪಡೆಯಲು 8.12 ಲಕ್ಷ ರೂ. ನೀಡಿದ್ದರು. ಅಷ್ಟೇ ಅಲ್ಲದೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹಾಗೂ ವಿಧಾನಸೌಧದಲ್ಲಿ ಫೋಟೋ ಮತ್ತು ವೀಡಿಯೊ ತೆಗೆಯಲು ಟೆಂಡರ್ ಕೊಡಿಸುವುದಾಗಿ ಹೇಳಿ ಹಲವರಿಗೆ ವಂಚನೆ ಮಾಡಿದ್ದರು. ಆರೋಪಿ ಅನುರಾಗ್ ನಟಿಸುತ್ತಿದ್ದ 6 ದಿಕೂಟ ಸಿನಿಮಾಗೆ ಇತ್ತೀಚೆಗೆ ಮುಹೂರ್ತ ನೆರವೇರಿಸಲಾಗಿತ್ತು.

    ಈ ಸಂಬಂಧ 12ಕ್ಕೂ ಹೆಚ್ಚು ಜನರು ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರ ಆರೋಪಿಗಳನ್ನು ಬಂಧಿಸಿ, ವಿಚಾರಣೆ ಆರಂಭಿಸಿದ್ದಾರೆ.

  • ತಮ್ಮನ ಕ್ಷೇತ್ರದಲ್ಲಿ ಅಣ್ಣನ ದರ್ಬಾರ್- 1.90 ಕೋಟಿಯ ಕಾಮಗಾರಿಗೆ ಸೀಕ್ರೆಟ್ ಟೆಂಡರ್..!

    ತಮ್ಮನ ಕ್ಷೇತ್ರದಲ್ಲಿ ಅಣ್ಣನ ದರ್ಬಾರ್- 1.90 ಕೋಟಿಯ ಕಾಮಗಾರಿಗೆ ಸೀಕ್ರೆಟ್ ಟೆಂಡರ್..!

    ರಾಮನಗರ: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸ್ವಕ್ಷೇತ್ರ ಚನ್ನಪಟ್ಟಣ. ಸಿಎಂ ಸ್ವಕ್ಷೇತ್ರದಲ್ಲೇ ಅವರ ಸಹೋದರ ಎಚ್.ಡಿ ರೇವಣ್ಣರ ಲೋಕೋಪಯೋಗಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ. ಸರ್ಕಾರಿ ನೀತಿ ನಿಯಮಗಳನ್ನೇ ಗಾಳಿಗೆ ತೂರಿ ಮೂರೇ ದಿನಗಳಲ್ಲಿ ಸೀಕ್ರೆಟ್ ಟೆಂಡರ್ ನಡೆಸಲಾಗಿದೆ. ಇತ್ತ ಅನಿತಾ ಮೇಡಂ ಕ್ಷೇತ್ರದಲ್ಲೂ ಸೀಕ್ರೆಟ್ ಟೆಂಡರ್ ನಡೀತಿದೆ.

    ಹೌದು. ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಸಿಎಂ ಸೋದರ ಎಚ್.ಡಿ ರೇವಣ್ಣನವರ ಲೋಕೋಪಯೋಗಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್‍ಮಾಲ್ ನಡೆದಿದೆ. ಅದು ಕೂಡ ತಮ್ಮನ ಕ್ಷೇತ್ರದಲ್ಲಿ ಅಣ್ಣನ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿಎಂ ಅನುಯಾಯಿಗಳಿಗೆ ಸೀಕ್ರೆಟ್ ಟೆಂಡರ್ ಮೂಲಕ ಕಾಮಗಾರಿ ನೀಡಿರುವುದು ಉಳಿದ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿದೆ.

    ಸಿಎಂಜಿಆರ್ ವೈ ಯೋಜನೆಯಡಿಯಲ್ಲಿ ಚನ್ನಪಟ್ಟಣ ತಾಲೂಕಿನ ರಸ್ತೆಗಳ ಅಭಿವೃದ್ಧಿಗಾಗಿ 1.90 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಸೀಕ್ರೆಟ್ ಟೆಂಡರ್ ಖಂಡಿಸಿ ರಾಮನಗರದ ಲೋಕೋಪಯೋಗಿ ಇಲಾಖೆ ಮುಂದೆ ಗುತ್ತಿಗೆದಾರರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.

    ಯಾವುದೇ ಕಾಮಗಾರಿಗಳು ನಡೆಯಬೇಕಿದ್ರೂ ಇಲಾಖೆಗೆ ಅನುದಾನ ಬಂದ ತಕ್ಷಣ ಜಿಲ್ಲಾಧಿಕಾರಿಗಳಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಆನಂತರ ನೋಟಿಫಿಕೇಷನ್ ಹೊರಡಿಸಬೇಕು. ಅಲ್ಲದೆ ನಾಮಫಲಕದಲ್ಲಿ ನೋಟಿಸ್ ಹಾಗೂ ಪತ್ರಿಕಾ ಜಾಹಿರಾತುಗಳನ್ನು ನೀಡಬೇಕು. ಆದ್ರೆ ಸರ್ಕಾರದ ಪಾರದರ್ಶಕ ನಿಯಮಗಳನ್ನು ಗಾಳಿಗೆ ತೂರಿ ಸಿಎಂ ಕುಮಾರಸ್ವಾಮಿಯವರ ಅನುಯಾಯಿಗಳಿಗೆ ಮಾತ್ರ ಟೆಂಡರ್ ನೀಡಲಾಗಿದೆ ಎಂದು ಗುತ್ತಿಗೆದಾರ ಪ್ರೇಮ್ ಕುಮಾರ್ ಗರಂ ಆಗಿದ್ದಾರೆ.

    ಅನಿತಾ ಕುಮಾರಸ್ವಾಮಿ ಕ್ಷೇತ್ರದಲ್ಲೂ ಟೆಂಡರ್ ಗೋಲ್‍ಮಾಲ್:
    ಕೇವಲ ಚನ್ನಪಟ್ಟಣ ಮಾತ್ರವಲ್ಲದೆ ರಾಮನಗರ ಕ್ಷೇತ್ರದಲ್ಲೂ ಕೂಡ ಇದೇ ಪರಿಸ್ಥಿತಿಯಿದ್ದು ಸುಮಾರು 1 ಕೋಟಿಯಷ್ಟು ಕಾಮಗಾರಿ ಶಾಸಕಿ ಅನಿತಾ ಕುಮಾರಸ್ವಾಮಿ ಬೆಂಬಲಿಗರ ಪಾಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಒಟ್ಟಾರೆ ಸಿಎಂ ಕ್ಷೇತ್ರದಲ್ಲೇ ಅವರ ಸೋದರ ಎಚ್.ಡಿ ರೇವಣ್ಣನವರ ಲೋಕೋಪಯೋಗಿ ಇಲಾಖೆಯಲ್ಲಿ ಅಭಿವೃದ್ಧಿ ಕಾಮಗಾರಿಯ ಟೆಂಡರ್‍ನಲ್ಲಿ ಅಧಿಕಾರಿಗಳು ಅವ್ಯವಹಾರ ನಡೆಸುತ್ತಿದ್ದು ಗುತ್ತಿಗೆದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಿಡಬ್ಲ್ಯೂಡಿಯಲ್ಲಿ ಭಾರೀ ಗೋಲ್‍ಮಾಲ್ – ಕದ್ದು ಮುಚ್ಚಿ 1.90 ಕೋಟಿ ವೆಚ್ಚದ ಕಾಮಗಾರಿಗಳ ಟೆಂಡರ್ ವಿತರಣೆ

    ಪಿಡಬ್ಲ್ಯೂಡಿಯಲ್ಲಿ ಭಾರೀ ಗೋಲ್‍ಮಾಲ್ – ಕದ್ದು ಮುಚ್ಚಿ 1.90 ಕೋಟಿ ವೆಚ್ಚದ ಕಾಮಗಾರಿಗಳ ಟೆಂಡರ್ ವಿತರಣೆ

    ರಾಮನಗರ: ಪಿಡಬ್ಲ್ಯೂಡಿ ಇಲಾಖೆಯಲ್ಲಿ ಭಾರೀ ಗೋಲ್‍ಮಾಲ್ ನಡೆದಿದ್ದು, ಕದ್ದು ಮುಚ್ಚಿ 1.90 ಕೋಟಿ ರೂ. ವೆಚ್ಚದ ಕಾಮಗಾರಿಗಳ ಟೆಂಡರ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

    ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ ಯೋಜನೆಯ ಕಾಮಗಾರಿ ವಿಚಾರವಾಗಿ ಆಡಳಿತತ್ಮಾಕ ಅನುಮೋದನೆ ಪಡೆಯದೇ ಮೂರೇ ದಿನದಲ್ಲಿ ಟೆಂಡರ್ ನೀಡಲಾಗಿದೆ. ಸಿಎಂ ಕುಮಾರಸ್ವಾಮಿ ಅನುಯಾಯಿಗಳಿಗೆ ಮಾತ್ರ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಿ ಚನ್ನಪಟ್ಟಣದ ಗುತ್ತಿಗೆದಾರರು ರಾಮನಗರದ ಲೋಕೋಪಯೋಗಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

    ಪ್ರತಿಭಟನೆ ವೇಳೆ ಲೋಕೋಪಯೋಗಿ ಅಧಿಕಾರಿಗಳ ಜೊತೆ ಗುತ್ತಿಗೆದಾರರು ಮಾತಿನ ಚಕಮಕಿ ಕೂಡ ನಡೆಸಿದ್ದಾರೆ. ತಾಂತ್ರಿಕ ಸಹಾಯಕ ಎಸ್ ಪಿ ಮಹೇಶ್ ಜೊತೆ ಗುತ್ತಿಗೆದಾರರು ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ ಸಿಎಂ ಕುಮಾರಸ್ವಾಮಿ ವಿರುದ್ಧ ಕೂಡ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೆಂಡರ್ ಕರೆಯದೇ, ಜಾಹಿರಾತು ನೀಡದೇ, ನಾಮಫಲಕವನ್ನೂ ಹಾಕದೇ ಹಾಗೂ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯದೇ ಆಕ್ರಮವಾಗಿ ಟೆಂಡರ್ ನೀಡಲಾಗಿದೆ. ಜೆಡಿಎಸ್ ಗುತ್ತಿಗೆದಾರರಿಗೆ ಮಾತ್ರ ಟೆಂಡರ್ ನೀಡಲಾಗಿದೆ. ಕೇವಲ ಚನ್ನಪಟ್ಟಣ ಮಾತ್ರವಲ್ಲದೇ ರಾಮನಗರದಲ್ಲೂ ಒಂದು ಕೋಟಿ ಟೆಂಡರ್ ಅವ್ಯವಹಾರ ಮಾಡಲಾಗಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರಿ ದುಡ್ಡಲ್ಲಿ ಜಿ.ಪಂ ಅಧ್ಯಕ್ಷರ ದರ್ಬಾರ್- ಕಾರಿಗೆ ಇರಲೇಬೇಕಂತೆ ಸೌಂಡ್ ಸಿಸ್ಟಮ್!

    ಸರ್ಕಾರಿ ದುಡ್ಡಲ್ಲಿ ಜಿ.ಪಂ ಅಧ್ಯಕ್ಷರ ದರ್ಬಾರ್- ಕಾರಿಗೆ ಇರಲೇಬೇಕಂತೆ ಸೌಂಡ್ ಸಿಸ್ಟಮ್!

    ಬೆಳಗಾವಿ: ರಸ್ತೆ ಕಾಮಗಾರಿಗೆ, ನೀರಿನ ವ್ಯವಸ್ಥೆ, ಚರಂಡಿ, ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಸರ್ಕಾರಿ ಕಾಮಗಾರಿಗಳಿಗೆ ಟೆಂಡರ್ ಕರೆಯೋದನ್ನ ಕೇಳಿದ್ದೀವಿ. ಆದರೆ ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಕಾರಿಗೆ ಸೌಂಡ್ ಸಿಸ್ಟಮ್ ಕೊಡಿಸುವ ಸಲುವಾಗಿ ಟೆಂಡರ್ ಕರೆದಿದ್ದಾರೆ.

    ಬೆಳಗಾವಿಯಲ್ಲಿ ಆಶಾ ಐಹೊಳೆ ಅಂಧದರ್ಬಾರ್ ನಡೆಸುತ್ತಿದ್ದಾರೆ. ಇವರು ಕಾರಿನಲ್ಲಿ ಕುಳಿತರೆ ಸಾಕು ಸೌಂಡ್ ಸಿಸ್ಟಮ್ ಆನ್ ಆಗ್ಲೇಬೇಕಂತೆ. ಒಂದು ವರ್ಷದ ಹಿಂದೆ ಹೊಸ ಕಾರನ್ನು ಸರ್ಕಾರ ಇವರಿಗೆ ನೀಡಿದೆ. ಅದರಲ್ಲಿ ಸೌಂಡ್ ಸಿಸ್ಟಮ್ ಇಲ್ಲದ್ದಕ್ಕೆ ಮೇಡಂ ಅವರು ಆರು ತಿಂಗಳ ಬಳಿಕ ಸುಮಾರು 60 ಸಾವಿರ ರೂ. ಸ್ವಂತ ಹಣ ಖರ್ಚು ಮಾಡಿ ಕಾರಿಗೆ ಸೌಂಡ್ ಸಿಸ್ಟಮ್ ಅಳವಡಿಸಿದ್ದಾರೆ. ಆದ್ರೆ ಇದೀಗ ಆ ಹಣವನ್ನ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕೇಳುತ್ತಿದ್ದಾರೆ.

    ಅಧ್ಯಕ್ಷರು ಸಿಇಒ ಬಳಿ ಬಿಲ್ ಪಾಸ್ ಮಾಡಿಸುವಂತೆ ಕೇಳಿದಾಗ ಬಿಲ್ ಪಾಸ್ ಮಾಡುವ ಬದಲು ಸಿಇಒ ಟೆಂಡರ್ ಕರೆದಿದ್ದಾರೆ. ಅದು ಕೇವಲ 60 ಸಾವಿರ ರೂಪಾಯಿಗೆ ಟೆಂಡರ್ ಕರೆದಿದ್ದಾರೆ. ಸರ್ಕಾರಿ ನಿಯಮಗಳನುಸಾರ ಯಾವುದೇ ಕಾಮಗಾರಿ ಟೆಂಡರ್ ಕರೆಯಬೇಕೆಂದರೆ ಅದು ಒಂದು ಲಕ್ಷ ರೂಪಾಯಿ ದಾಟಿರಬೇಕು. ಆದರೆ ಅಧ್ಯಕ್ಷರ ಕಾರ್ ಮ್ಯೂಸಿಕ್ ಸಿಸ್ಟಮ್ ಸಲುವಾಗಿಯೇ ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಟೆಂಡರ್ ಕರೆದಿದ್ದಾರೆ. ಈ ಟೆಂಡರ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ನಾನು ಕಾರಿಗೆ ಸೌಂಡ್ ಸಿಸ್ಟಮ್ ಮೂರು ತಿಂಗಳ ಹಿಂದೆಯೇ ಹಾಕಿಸಿದ್ದು, ಅದರ ಹಣ ನೀಡಿ ಎಂದು ಕೇಳಿದ್ದೇನೆ ಎಂದು ಜಿ.ಪಂ ಅಧ್ಯಕ್ಷರು ಹೇಳುತ್ತಿದ್ದಾರೆ.

    10 ರಿಂದ 20 ಸಾವಿರ ರೂ.ಗೆ ಬರುವ ಮ್ಯೂಸಿಕ್ ಸಿಸ್ಟಮ್ ಗೆ 60 ಸಾವಿರ ಗಟ್ಟಲೆ ಖರ್ಚು ಮಾಡುವ ಅವಶ್ಯಕತೆ ಏನಿತ್ತು ಅಂತಾ ಕೇಳಿದ್ರೆ, ಚೀನಾ ಮಾಡಲ್ ಗಳಿಗೆ ಬಿಲ್ ಕೊಡುವುದಿಲ್ಲ. ಅವು ಗ್ಯಾರಂಟಿ ಕೂಡ ಇರುವುದಿಲ್ಲ. ಹೀಗಾಗಿ ಒಳ್ಳೆಯ ಕ್ವಾಲಿಟಿ ಸಿಸ್ಟಮ್ ಅಳವಡಿಸಿದ್ದೇನೆ. ಆದರೆ ಪೂರ್ತಿ ಹಣವನ್ನ ಒಂದೇ ಬಾರಿ ಕೊಡಿ ಅಂತಾನು ನಾನು ಹೇಳಿಲ್ಲ ಹಂತ ಹಂತವಾಗಿ ಕೊಟ್ಟರೆ ಸಾಕು ಎಂಬುದು ಅಧ್ಯಕ್ಷರ ಮಾತಾಗಿದೆ.

    ಅಧ್ಯಕ್ಷರ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ನಡೆಗೆ ಸದ್ಯ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಆಕ್ರೋಶ ಕೇಳಿಬರುತ್ತಿದೆ. ನಿಯಮಗಳನ್ನ ಗಾಳಿಗೆ ತೂರಿದ ಅಧಿಕಾರಿಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಜೊತೆಗೆ ಅಧ್ಯಕ್ಷರು ತಮಗೆ ಹೊಂದಿಕೆಯಾಗಿಲ್ಲವೆಂದಲ್ಲಿ ತಮ್ಮ ಸ್ವಂತ ವಾಹನದಲ್ಲಿ ಓಡಾಡಲಿ. ಈ ರೀತಿಯಾಗಿ ಸರ್ಕಾರಿ ಹಣವನ್ನ ಬೇಕಾಬಿಟ್ಟಿ ಖರ್ಚು ಮಾಡುವುದನ್ನ ಬಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

    ಅಧ್ಯಕ್ಷರಿಗೆ ಕಂಪರ್ಟ್ ಆಗಿಲ್ಲ ಅನ್ನುವ ಕಾರಣಕ್ಕೆ ಮ್ಯೂಸಿಕ್ ಸಿಸ್ಟಮ್ ಅಳವಡಿಸಿದ್ದು ಒಂದು ಕಡೆಯಾದರೆ, ಸರ್ಕಾರಿ ಕಾರುಗಳಲ್ಲಿ ದುಬಾರಿ ಸಿಸ್ಟಮ್ ಕೂಡಿಸುವ ಅವಶ್ಯಕತೆ ಏನಿತ್ತು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಪ್ರಕರಣದ ಕುರಿತು ಅಧಿಕಾರಿಗಳನ್ನ ಸಂಪರ್ಕಿಸಿದರೆ ಇದಕ್ಕೂ ನಮಗೂ ಎನೂ ಸಂಬಂಧ ಇಲ್ಲ ಎನ್ನುವ ನಿಟ್ಟಿನಲ್ಲಿ ವರ್ತಿಸುತ್ತಿದ್ದಾರೆ ಅಂತ ಜನಸಾಮಾನ್ಯರು ದೂರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv