Tag: tempo

  • ಸಮುದ್ರಕ್ಕೆ ಬಿದ್ದ ಟೆಂಪೋ – ಮೇಲಕ್ಕೆತ್ತಲು ಕ್ರೇನ್ ಬಳಕೆ

    ಸಮುದ್ರಕ್ಕೆ ಬಿದ್ದ ಟೆಂಪೋ – ಮೇಲಕ್ಕೆತ್ತಲು ಕ್ರೇನ್ ಬಳಕೆ

    ಉಡುಪಿ: ಮೀನು ಲೋಡ್ ಮಾಡಲು ಬಂದರಿಗೆ ಬಂದ ಗೂಡ್ಸ್ ಟೆಂಪೋ ನೀರಿನೊಳಗೆ ಬಿದ್ದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

    ಅರಬ್ಬಿ ಸಮುದ್ರದಲ್ಲಿ ಹಿಡಿದ ಮೀನನ್ನು ಮಲ್ಪೆ ಬಂದರಿನಲ್ಲಿ ಖಾಲಿ ಮಾಡಲಾಗುತ್ತದೆ. ಬೋಟ್‍ಗಳು ಲಂಗರು ಹಾಕುವ ಪಕ್ಕದಲ್ಲೇ ಗೂಡ್ಸ್ ಟೆಂಪೋ ತಂದು ನಿಲ್ಲಿಸಿ ಮೀನು ಖಾಲಿ ಮಾಡಲಾಗುತ್ತದೆ. ಎಂದಿನಂತೆ ಈ ಪ್ರಕ್ರಿಯೆ ನಡೆಯುತ್ತಿದ್ದಾಗ ನೀರಿನಲ್ಲಿ ಇದ್ದ ಬೋಟು ನಿಧಾನಕ್ಕೆ ಹಿಂದಕ್ಕೆ ಬಂದಿದೆ.

    ಮೀನು ಖಾಲಿ ಮಾಡುವ ಸಂದರ್ಭ ಗೂಡ್ಸ್ ಟೆಂಪೋವನ್ನು ಬೋಟಿಗೆ ಸಿಕ್ಕಿಸಲಾಗಿತ್ತು. ಟೆಂಪೋ ಹಿಂದಕ್ಕೆ ಹೋಗಿ, ನೀರಿಗೆ ಬಿದ್ದಿದೆ. ಅಲ್ಲದೇ ಟೆಂಪೋ ಸಂಪೂರ್ಣವಾಗಿ ಮುಳುಗಿದೆ. ಮುಳುಗಿದ್ದ ಟೆಂಪೋವನ್ನು ಕ್ರೇನ್‌ಗೆ ಸರಪಳಿಯಲ್ಲಿ ಕಟ್ಟಿ ಮೇಲಕ್ಕೆತ್ತಲಾಗಿದೆ.

    ವಿಠ್ಠಲ ಪೂಜಾರಿ ಎಂಬವರಿಗೆ ಸೇರಿದ ಟೆಂಪೋ ಇದಾಗಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೆಂಪೋದ ಎಂಜಿನ್ ಒಳಗೆ ನೀರು ಹೋಗಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದೆ.

  • ಜಾಸ್ತಿ ಜನ ಸಂಚಾರ: ಬೆಂಗ್ಳೂರಿನಿಂದ ಕಾರ್ಮಿಕರನ್ನ ಕರೆ ತಂದ ಟೆಂಪೋ ಕಾಲುವೆಗೆ ಪಲ್ಟಿ

    ಜಾಸ್ತಿ ಜನ ಸಂಚಾರ: ಬೆಂಗ್ಳೂರಿನಿಂದ ಕಾರ್ಮಿಕರನ್ನ ಕರೆ ತಂದ ಟೆಂಪೋ ಕಾಲುವೆಗೆ ಪಲ್ಟಿ

    – ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರ ಓಡಾಟಕ್ಕೆ ಬೀಳುತ್ತಿಲ್ಲ ಕಡಿವಾಣ

    ರಾಯಚೂರು: ಬೆಂಗಳೂರಿನಲ್ಲಿ ಕಟ್ಟಡ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಜಿಲ್ಲೆಯ ಮಸ್ಕಿ ತಾಲೂಕಿಗೆ ಬಿಟ್ಟು ವಾಪಸ್ ಹೋಗುತ್ತಿದ್ದ ಟೆಂಪೋ ಪಲ್ಟಿಯಾಗಿ ತುಂಗಭದ್ರಾ ಉಪ ಕಾಲುವೆಗೆ ಬಿದ್ದಿದೆ.

    ಮಸ್ಕಿ ತಾಲೂಕಿನ ರಂಗಾಪುರ ಬಳಿ ಘಟನೆ ನಡೆದಿದೆ.ಬೆಂಗಳೂರಿಗೆ ಗುಳೆ ಹೋಗಿದ್ದ ಕಾರ್ಮಿಕರನ್ನು ಬಿಟ್ಟು ಹೋಗಲು ಬಂದಿದ್ದ ವಾಹನ, ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೊರೊನಾ ಭೀತಿ ಹಾಗೂ ಲಾಕ್‍ಡೌನ್ ಹಿನ್ನಲೆ ಬೆಂಗಳೂರಿನಿಂದ ಗ್ರಾಮಗಳಿಗೆ ಕೂಲಿ ಕಾರ್ಮಿಕರು ಟೆಂಪೋ ಮಾಡಿಕೊಂಡು ಮರಳಿದ್ದಾರೆ. ಆದರೆ ವಾಪಸ್ ಹೋಗಬೇಕಿದ್ದ ಟೆಂಪೋ ಕಾಲುವೆಗೆ ಬಿದ್ದಿದೆ.

    ಕೂಲಿ ಕಾರ್ಮಿಕರು ವಾಪಸ್ ಬರುವ ಭರಾಟೆಯಲ್ಲಿ ವಾಹನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಮಕ್ಕಳನ್ನು ಕುರಿಗಳ ಹಾಗೆ ತುಂಬಿಕೊಂಡು ಬರಲಾಗುತ್ತಿದೆ. ಅಲ್ಲದೆ ಗಾಡಿಗಳಿಗೆ ನೇತಾಡಿಕೊಂಡು ಜನ ಬರುತ್ತಿದ್ದಾರೆ. ಪೊಲೀಸರು ಎಷ್ಟೇ ವಾಹನಗಳನ್ನು ತಡೆದರೂ ಜನರ ಹಾಗೂ ಕೂಲಿ ಕಾರ್ಮಿಕರ ಓಡಾಟ ಇನ್ನೂ ನಿಂತಿಲ್ಲ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಪತಿಯೊಂದಿಗೆ ಜಗಳ ಮಾಡ್ಕೊಂಡು ದೇವಾಲಯಕ್ಕೆ ಹೋದ್ಳು – ಟೆಂಪೋದಲ್ಲಿ ಗ್ಯಾಂಗ್‍ರೇಪ್

    ಪತಿಯೊಂದಿಗೆ ಜಗಳ ಮಾಡ್ಕೊಂಡು ದೇವಾಲಯಕ್ಕೆ ಹೋದ್ಳು – ಟೆಂಪೋದಲ್ಲಿ ಗ್ಯಾಂಗ್‍ರೇಪ್

    – ಮನೆಗೆ ವಾಪಸ್ ಬರೋ ನಿರ್ಧಾರ ಮಾಡಿದ್ದೇ ತಪ್ಪಾಯ್ತು

    ಮುಂಬೈ: ಡ್ರಾಪ್ ಕೊಡುವ ನೆಪದಲ್ಲಿ ಚಲಿಸುತ್ತಿದ್ದ ಟೆಂಪೋದಲ್ಲಿ ವಿವಾಹಿತ ಮಹಿಳೆಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಮಂಗಳವಾರ ಈ ಘಟನೆ ನಡೆದಿದೆ. 29 ವರ್ಷದ ಸಂತ್ರಸ್ತೆ ತನ್ನ ಪತಿಯೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಗಡೆ ಬಂದಿದ್ದಳು. ನಂತರ ಮನೆಯ ಹತ್ತಿರದ ದೇವಸ್ಥಾನವೊಂದಕ್ಕೆ ಹೋಗಿದ್ದಳು. ಅಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡು ಸುಮಾರು ರಾತ್ರಿ 10ಗಂಟೆಗೆ ಮನೆಗೆ ವಾಪಸ್ ಹೋಗಲು ನಿರ್ಧಾರ ಮಾಡಿದ್ದಾಳೆ.

    ಕೊನೆಗೆ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳ ಬಳಿ ಲಿಫ್ಟ್ ಕೇಳಿದ್ದಾಳೆ. ಆದರೆ ಯಾವ ವಾಹನವೂ ಡ್ರಾಪ್ ಕೊಡಲಿಲ್ಲ. ನಂತರ ಸಂತ್ರಸ್ತೆ ಹತ್ತಿರದಲ್ಲಿದ್ದ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗಿ ಬಸ್‍ಗಾಗಿ ಕಾಯುತ್ತಿದ್ದಳು. ಮಧ್ಯರಾತ್ರಿ ವೇಳೆ ಬಸ್ ನಿಲ್ದಾಣದ ಬಳಿ ಒಂದು ಟೆಂಪೋ ಬಂದಿದ್ದು, ಅದರಲ್ಲಿದ್ದ ಚಾಲಕ ಮತ್ತು ಕ್ಲೀನರ್ ಸಂತ್ರಸ್ತೆಯನ್ನು ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿದ್ದಾರೆ.

    ನಾವು ಅದೇ ಮಾರ್ಗವಾಗಿ ಹೋಗುತ್ತಿದ್ದೇವೆ ಎಂದು ಸಂತ್ರಸ್ತೆಯನ್ನು ವಾಹನದಲ್ಲಿ ಕೂರಿಸಿಕೊಂಡಿದ್ದಾರೆ. ಸಂತ್ರಸ್ತೆ ಮಹಿಳೆ ವಾಹನದಲ್ಲಿ ಕುಳಿತ ನಂತರ ಆರೋಪಿಗಳು ಬೇರೆ ಮಾರ್ಗದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಚಾಲಕ ಮತ್ತು ಕ್ಲೀನರ್ ನಿಂದ ಸಂತ್ರಸ್ತೆ ಹೇಗೋ ತಪ್ಪಿಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆಗೆ ಆರೋಪಿಗಳು ಕರೆದುಕೊಂಡು ಹೋಗಿದ್ದ ಸ್ಥಳ ನಿಖರವಾಗಿ ತಿಳಿದಿಲ್ಲ. ಆದರೆ ಅವರಿಂದ ತಪ್ಪಿಸಿಕೊಂಡು ಬಂದ ಸಂತ್ರಸ್ತೆ ಪಿಂಪ್ರಿ-ಚಿಂಚ್‍ವಾಡ್ ಪ್ರದೇಶಕ್ಕೆ ತಲುಪಿದ್ದಳು. ಅಲ್ಲಿ ಕಟ್ಟಡವೊಂದರ ಭದ್ರತಾ ಸಿಬ್ಬಂದಿಯ ಸಹಾಯ ಕೇಳಿದ್ದಾಳೆ. ಆಗ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾನೆ. ಸದ್ಯಕ್ಕೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಸನ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳಿಗೂ ಶೋಧ ಕಾರ್ಯಾ ನಡೆಯುತ್ತಿದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

  • ಮಣಿಕಂಠನ ದರ್ಶನಕ್ಕೆ ಹೋಗ್ತಿದ್ದ ಟೆಂಪೋ ಪಲ್ಟಿ

    ಮಣಿಕಂಠನ ದರ್ಶನಕ್ಕೆ ಹೋಗ್ತಿದ್ದ ಟೆಂಪೋ ಪಲ್ಟಿ

    – ಅಪಶಕುನವೆಂದು ಯಾತ್ರೆ ಸ್ಥಗಿತಗೊಳಿಸಿ ವಾಪಸ್

    ಚಾಮರಾಜನಗರ: ಶಬರಿಮಲೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಟೆಂಪೋ ಟ್ರಾವೆಲರ್ ವೊಂದು ಪಲ್ಟಿಯಾಗಿದೆ. ಅಪಘಾತ ಗುಂಡ್ಲುಪೇಟೆ ತಾಲೂಕಿನ ರಾಘವಪುರದ ಬಳಿ ನಡೆದಿದ್ದು, ತಮ್ಮ ಯಾತ್ರೆಯನ್ನು ಸ್ಥಗಿತಗೊಳಿಸಿದ್ದಾರೆ.

    ಮುಂದೆ ತೆರಳುತ್ತಿದ್ದ ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಮುಂದಾದಾಗ ಟೆಂಪೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಬೆಂಗಳೂರಿನ ಮಾಗಡಿಯಿಂದ ಶಬರಿಮಲೆಗೆ 11 ಮಂದಿ ಮಾಲಾಧಾರಿಗಳು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

    ಅದೃಷ್ಟವಶಾತ್ ಎಲ್ಲಾ ಯಾತ್ರಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ವಾಹನ ಪಲ್ಟಿಯಾಗಿದ್ದರಿಂದ ಅಪಶಕುನವೆಂದು ಭಾವಿಸಿ ಶಬರಿಮಲೆ ಯಾತ್ರೆ ಮೊಟಕುಗೊಳಿಸಿ ನಂಜನಗೂಡಿನ ಅಯ್ಯಪ್ಪಸ್ವಾಮಿ ದೇಗುಲಕ್ಕೆ ತೆರಳಿದ್ದಾರೆ. ಸದ್ಯ ಈ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟೆಂಪೋ ಡಿಕ್ಕಿಯ ರಭಸಕ್ಕೆ ಟಾಟಾ ಸುಮೋ ಅರ್ಧ ಭಾಗ ಛಿದ್ರ- 6 ಮಂದಿ ಸಾವು

    ಟೆಂಪೋ ಡಿಕ್ಕಿಯ ರಭಸಕ್ಕೆ ಟಾಟಾ ಸುಮೋ ಅರ್ಧ ಭಾಗ ಛಿದ್ರ- 6 ಮಂದಿ ಸಾವು

    – ಹತ್ತು ಮಂದಿಗೆ ಗಂಭೀರ ಗಾಯ

    ಮಂಡ್ಯ: ಟೆಂಪೋ ಹಾಗೂ ಟಾಟಾ ಸುಮೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 6 ಜನರು ಮೃತಪಟ್ಟ ಘಟನೆ ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಮೃತಪಟ್ಟಿರುವ ಆರು ಮಂದಿಯಲ್ಲಿ ಐವರನ್ನು ಬಾಕರ್ ಶರೀಫ್ (50), ಮೆಹಬೂಬ್ ಖಾನ್ (47), ನವ್ ಸಾದ್ (45), ಮಕ್ಸೂದ್ (35), ಪಾಯಿರ್ ಪಾಷಾ ಎಂದು ಗುರುತಿಸಲಾಗಿದೆ. ಈ ಪೈಕಿ ಓರ್ವ ಮೃತರ ಗುರುತು ಪತ್ತೆಯಾಗಿಲ್ಲ. ಆದರೆ ಮೃತರು ನಾಗಮಂಗಲ ತಾಲೂಕಿನವರು ಎಂದು ಮಾಹಿತಿ ಲಭ್ಯವಾಗಿದೆ.

    ಟೆಂಪೋ ನಾಗಮಂಗಲದ ಸ್ಟಾರ್ ಗ್ರೂಪ್ ಕಂಪನಿಗೆ ಸೇರಿದ್ದು, ಚಾಲಕ ವೇಗವಾಗಿ ನಾಗಮಂಗಲದ ಕಡೆಗೆ ಹೋಗುತ್ತಿದ್ದ. ಇದೇ ವೇಳೆ ಆಲ್ಫನೊ ಎಂಬ ಹಣಕಾಸು ಸಂಸ್ಥೆಯ ಸದಸ್ಯರು ಸಂಸ್ಥೆಗೆ ಸೇರಿದ್ದ ಟಾಟಾ ಸುಮೋದಲ್ಲಿ ನಾಗಮಂಗಲ ಕಡೆಯಿಂದ ಬೆಳ್ಳೂರು ಕ್ರಾಸ್ ಕಡೆಗೆ ಪ್ರಯಾಣಿಸುತ್ತಿದ್ದರು. ಆದರೆ ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದ ಬಳಿ ಚಾಲಕರ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಟಾಟಾ ಸುಮೋ ಅರ್ಧ ಭಾಗ ಛಿದ್ರ ಛಿದ್ರವಾಗಿದೆ.

    ಟಾಟಾ ಸುಮೋದ ಮುಂಭಾಗದಲ್ಲಿ ಕುಳಿತಿದ್ದವರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಟ್ಟು 10 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ 9 ಜನರ ಸ್ಥಿತಿ ಚಿಂತಾಜನಕವಾಗಿದೆ.

    ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮೃತ ಹಾಗೂ ಗಂಭೀರವಾಗಿ ಗಾಯಗೊಂಡವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಹುಲಿವೇಷಧಾರಿಗಳ ಟೆಂಪೋ ಪಲ್ಟಿ – ಓರ್ವ ಸಾವು, ಮೂವರಿಗೆ ಗಾಯ

    ಹುಲಿವೇಷಧಾರಿಗಳ ಟೆಂಪೋ ಪಲ್ಟಿ – ಓರ್ವ ಸಾವು, ಮೂವರಿಗೆ ಗಾಯ

    ಉಡುಪಿ: ಹುಲಿವೇಷಧಾರಿಗಳ ಟೆಂಪೋ ಪಲ್ಟಿಯಾಗಿ ಓರ್ವ ವೇಷಧಾರಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಉಡುಪಿ ಸಂತೆಕಟ್ಟೆ ಸಮೀಪದ ನೇಜಾರಿನಲ್ಲಿ ನಡೆದಿದೆ.

    ಘಟನೆಯಲ್ಲಿ ಸಾವನ್ನಪ್ಪಿದ ಹುಲಿವೇಷಧಾರಿಯನ್ನು 22 ವರ್ಷದ ಸುಮಂತ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಮೂವರು ವೇಷಧಾರಿಗಳನ್ನು ಹತ್ತಿರದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಗಣೇಶ ಚತುರ್ಥಿ ಪ್ರಯುಕ್ತ ಹುಲಿವೇಷ ಹಾಕಿದ್ದ ತಂಡದಲ್ಲಿ ಸ್ಥಳೀಯ ಯುವಕರು ಮತ್ತು ಮಕ್ಕಳು ಕೂಡ ತಂಡದಲ್ಲಿದ್ದರು. ಈ ವೇಳೆ ನೇಜಾರು ಮಾರ್ಗದಲ್ಲಿ ಹೋಗುವಾಗ ಟೆಂಪೋ ಆಯತಪ್ಪಿ ಪಲ್ಟಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ. ಈ ಸಂಬಂಧ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  • ಕಾರ್, ಟೆಂಪೋ ಡಿಕ್ಕಿ- ದಂಪತಿ ಸಾವು

    ಕಾರ್, ಟೆಂಪೋ ಡಿಕ್ಕಿ- ದಂಪತಿ ಸಾವು

    ತುಮಕೂರು: ಕಾರು ಮತ್ತು ಟೆಂಪೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಬಾಣವಾರ ಗೇಟ್ ಬಳಿ ನಡೆದಿದೆ.

    ದಂಪತಿ ಸಿಎಸ್ ಪುರದಿಂದ ತುಮಕೂರಿನತ್ತ ಬರುವಾಗ ತಡರಾತ್ರಿ ಈ ಘಟನೆ ನಡೆದಿದ್ದು, ಮೃತಪಟ್ಟ ದಂಪತಿಯನ್ನು ಗುಬ್ಬಿ ತಾಲೂಕಿನ ಸಿಎಸ್ ಪುರ ಗ್ರಾಮದವರಾದ 55 ವರ್ಷದ ರಾಮೇಗೌಡ ಮತ್ತು 50 ವರ್ಷದ ಹೇಮಾ ಎಂದು ಗುರುತಿಸಲಾಗಿದೆ.

    ಘಟನೆಯಲ್ಲಿ ಟೆಂಪೋ ಕಾರಿಗೆ ಗುದ್ದಿ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಟೆಂಪೋ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಬಸ್ ಆಯ್ತು, ಈಗ ಟೆಂಪೋ ಅಡ್ಡ ಹಾಕಿದ ಗಜರಾಜ – ವಿಡಿಯೋ ನೋಡಿ

    ಬಸ್ ಆಯ್ತು, ಈಗ ಟೆಂಪೋ ಅಡ್ಡ ಹಾಕಿದ ಗಜರಾಜ – ವಿಡಿಯೋ ನೋಡಿ

    ಚಿಕ್ಕಮಗಳೂರು: ವಾರದ ಹಿಂದೆ ರಸ್ತೆ ಮಧ್ಯೆ ಒಂಟಿ ಸಲಗವನ್ನ ಕಂಡ ಚಾಲಕ ಕೆಎಸ್‌ಆರ್‌ಟಿಸಿ ಬಸ್ಸನ್ನು ಒಂದು ಕಿ.ಮೀ. ಹಿಮ್ಮುಖವಾಗಿ ಓಡಿಸಿ ಪ್ರಯಾಣಿಕರ ಆತಂಕವನ್ನ ದೂರ ಮಾಡಿದ್ದರು. ಇದೀಗ ಮತ್ತದೇ ಸಂತವೇರಿ ಘಾಟ್‍ನಲ್ಲಿ ಹಣ್ಣಿನ ಟೆಂಪೋವನ್ನು ಕಾಡಾನೆ ಅಡ್ಡ ಹಾಕಿದ್ದ ಘಟನೆ ಬೆಳಕಿಗೆ ಬಂದಿದೆ.

    ಕಳೆದ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ. ಸಂತವೇರಿ ಘಾಟ್‍ನಲ್ಲಿ ಸಾಗುತ್ತಿದ್ದ ಹಣ್ಣಿನ ಟೆಂಪೋವೊಂದನ್ನ ಅಡ್ಡಗಟ್ಟಿದ ಕಾಡಾನೆ ವಾಹನದಲ್ಲಿದ್ದ ಹಣ್ಣನ್ನ ತಿಂದಿದೆ. ಬಳಿಕ ಟೆಂಪೋವನ್ನ ರಸ್ತೆ ಬದಿಗೆ ನೂಕಿದೆ.

    ರಸ್ತೆ ಮಧ್ಯೆ ಒಂಟಿ ಸಲಗವನ್ನು ಕಂಡ ಚಾಲಕ ಹಾಗೂ ಕ್ಲೀನರ್ ಟೆಂಪೋವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಹದಿನೈದು ದಿನದ ಹಿಂದೆಯೂ ಇದೇ ಮಾರ್ಗದಲ್ಲಿ ರಸ್ತೆ ಮಧ್ಯೆ ನಿಂತಿದ್ದ ಒಂಟಿ ಸಲಗವನ್ನ ಕಂಡು ಪ್ರವಾಸಿಗರು ಆತಂಕಗೊಂಡು 40 ಕಿ.ಮೀ. ವಾಪಸ್ ಬಂದು, ಚಿಕ್ಕಮಗಳೂರು ಮೂಲಕ ಶಿವಮೊಗ್ಗ ತಲುಪಿ ತಮ್ಮ ಪ್ರಯಾಣ ಮುಂದುವರಿಸಿದ್ದರು.

    ಮಲ್ಲೇನಹಳ್ಳಿ ಸುತ್ತಮುತ್ತ ಕಾಡಾನೆ ದಾಳಿಗೆ ಕಳೆದ ಮೂರು ತಿಂಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆನೆಗಳ ಹಾವಳಿಗೆ ಬೇಸತ್ತಿರುವ ಸ್ಥಳೀಯರು ಆನೆಗಳನ್ನು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಅಲ್ಲದೆ ಬಿದಿರು ತಿನ್ನುವ ಆಸೆಗೆ ಕಾಡಂಚಿನ ರಸ್ತೆಯಲ್ಲಿ ಠಿಕಾಣಿ ಹೂಡಿರೋ ಕಾಡಾಣೆಯಿಂದ ಜನಸಾಮಾನ್ಯರು ಹೈರಾಣಾಗಿದ್ದು, ಸಂತವೇರಿ ಘಾಟ್ ಮಾರ್ಗದಲ್ಲಿ ಜನರು ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ.

    https://www.youtube.com/watch?v=afOhLRWdGW0

  • ಕೆಟ್ಟು ನಿಂತ ಟೆಂಪೋವನ್ನು 7 ಕಿ.ಮೀ ಎಳೆದ ಬೈಕ್! – ವಿಡಿಯೋ ನೋಡಿ

    ಕೆಟ್ಟು ನಿಂತ ಟೆಂಪೋವನ್ನು 7 ಕಿ.ಮೀ ಎಳೆದ ಬೈಕ್! – ವಿಡಿಯೋ ನೋಡಿ

    ಉಡುಪಿ: ಟೂ ವ್ಹೀಲರ್ ಕೈಕೊಟ್ಟಾಗ ಗೆಳೆಯನ ಬೈಕಿನಲ್ಲಿ ಬಂದು ಕೆಟ್ಟ ಬೈಕಿಗೆ ಹಿಂಬದಿಯಿಂದ ಕಾಲಿಟ್ಟು ತಳ್ಳುತ್ತಾ ಗ್ಯಾರೇಜ್ ತನಕ ಡ್ರಾಪ್ ಮಾಡೋದನ್ನು ನೋಡಿದ್ದೇವೆ. ಅದೇ ರೀತಿ ದೊಡ್ಡ ಗಾಡಿ ಕೆಟ್ಟು ನಿಂತಾಗ ಟೋಯಿಂಗ್ ವಾಹನ ಎಳೆದುಕೊಂಡು ಹೋಗುತ್ತದೆ. ಇಷ್ಟೆಲ್ಲದರ ನಡುವೆ ಉಡುಪಿಯಲ್ಲಿ ಬೈಕ್ ಕೆಟ್ಟ ನಿಂತ ಟೆಂಪೋವನ್ನು ಎಳೆದುಕೊಂಡು ಹೋಗಿದೆ.

    ಮಣಿಪಾಲದಲ್ಲಿ ಟೆಂಪೋವೊಂದು ಕೆಟ್ಟು ನಿಂತಿದೆ. ವಾಹನ ತಂದು ಟೋಯಿಂಗ್ ಮಾಡಿಕೊಂಡು ಹೋಗಬೇಕಾದರೆ ಸಾವಿರಾರು ರೂಪಾಯಿ ಕೇಳಿದ್ದಾರೆ. ಆದರೆ ಇವತ್ತಿನ ಬಾಡಿಗೆ ಇನ್ನೂ ಶುರುವಾಗಿಲ್ಲ. ಜೇಬಲ್ಲಿ ಕಾಸಿಲ್ಲದ ಟೆಂಪೋ ಡ್ರೈವರ್ ಒಂದು ಐಡಿಯಾ ಮಾಡಿದ್ದಾನೆ.

    ತನ್ನ ಬೈಕ್ ಇರುವ ಗೆಳೆಯನಿಗೆ ಫೋನ್ ಮಾಡಿ ಈ ರೀತಿ ಆಗಿದೆ ಎಂದು ತಾನಿದ್ದ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಹಗ್ಗವನ್ನು ಟೆಂಪೋಗೆ ಕಟ್ಟಿ ತುದಿಯನ್ನು ಬೈಕಿಗೆ ಕಟ್ಟಿದ್ದಾನೆ. ಸುಮಾರು 7 ಕಿಲೋಮೀಟರ್ ದೂರವನ್ನು ಈ ಐಡಿಯಾದಲ್ಲಿ ಕ್ರಮಿಸಿ ಕರಾವಳಿ ಬೈಪಾಸಿನ ಗ್ಯಾರೇಜ್ ರೀಚ್ ಆಗಿದ್ದಾರೆ. ಪಬ್ಲಿಕ್ ಟಿವಿಗೆ ಈ ವಿಡಿಯೋ ಲಭ್ಯವಾಗಿದೆ.

    ಬೈಕಿನಲ್ಲಿ ಇಬ್ಬರು ಸವಾರರು ಕುಳಿತುಕೊಂಡಿದ್ದು, ನಿಧಾನವಾಗಿ ಗಾಡಿಯನ್ನು ಓಡಿಸಿಕೊಂಡು ಹೋಗುತ್ತಿದ್ದಾರೆ. ಅವರ ಹಿಂದೆ ಹಗ್ಗದಿಂದ ಕಟ್ಟಿದ್ದ ಬಿಳಿ ಬಣ್ಣದ ಟೆಂಪೋವನ್ನು ಎಳದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬುಲೆನ್ಸ್ ಇಲ್ಲದೆ ಕುರಿ ಸಾಗಾಟದ ಟೆಂಪೋದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದ್ರು!

    ಅಂಬುಲೆನ್ಸ್ ಇಲ್ಲದೆ ಕುರಿ ಸಾಗಾಟದ ಟೆಂಪೋದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದ್ರು!

    ಚಿತ್ರದುರ್ಗ: ಅಂಬುಲೆನ್ಸ್ ಇಲ್ಲದೆ ಪರದಾಡಿ ಕೊನೆಗೆ ಗರ್ಭಿಣಿಯನ್ನು ಕುಟುಂಬಸ್ಥರು ಕುರಿ ಸಾಗಿಸೋ ಟೆಂಪೋದಲ್ಲಿ 40 ಕಿ.ಮೀ ಕ್ರಮಿಸಿ ಆಸ್ಪತ್ರೆಗೆ ಕರೆತಂದ ಅಮಾನವೀಯ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿಪುರ ಗ್ರಾಮದಲ್ಲಿ ನಡೆದಿದೆ.

    ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಾರದ ಕಾರಣಕ್ಕೆ ಕುರಿ ಸಾಗಿಸುವ ಟೆಂಪೋದಲ್ಲಿ ಗರ್ಭಿಣಿ ಲಕ್ಷ್ಮಕ್ಕ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಪತ್ನಿಯನ್ನು ನೋಡಿ ಪತಿ ಮಹಾಲಿಂಗಪ್ಪ ಅಂಬುಲೆನ್ಸ್‍ಗೆ ಕರೆ ಮಾಡಿದ್ದಾರೆ.

    ಕರೆ ಮಾಡಿ ಮೂರು ಘಂಟೆಯಾದರೂ ಅಂಬುಲೆನ್ಸ್ ಬರಲೇ ಇಲ್ಲ. ಕೊನೆಗೆ ದಿಕ್ಕು ತೋಚದೆ ಲಕ್ಷ್ಮಕ್ಕನನ್ನು ವಿವಿಪುರ ಗ್ರಾಮದಿಂದ ಚಿತ್ರದುರ್ಗಕ್ಕೆ ಟೆಂಪೋದಲ್ಲಿ 40 ಕಿ.ಮೀ ಕ್ರಮಿಸಿ ಜಿಲ್ಲಾಸ್ಪತ್ರೆಗೆ ಪತಿ ಹಾಗೂ ಸಂಬಂಧಿಕರು ಕರೆತಂದಿದ್ದಾರೆ.

    ಸರಿಯಾದ ಸಮಯಕ್ಕೆ ಟೆಂಪೋ ಸಿಕ್ಕಿದೆ. ಸಿಗದೇ ಇದ್ದಿದ್ದರೆ ಪತ್ನಿಯ ಸ್ಥಿತಿ ಏನಾಗುತ್ತಿತ್ತೋ ಎಂದು ಪತಿ ಅಳಲನ್ನು ತೋಡಿಕೊಂಡಿದ್ದಾರೆ. ಹಾಗೆಯೇ ಸಮಯ ಪ್ರಜ್ಞೆ ಇಲ್ಲದ, ಕರೆ ಮಾಡಿದರೂ ಬಾರದ ಅಂಬುಲೆನ್ಸ್ ಸಿಬ್ಬಂದಿ ವಿರುದ್ಧ ಮಹಾಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv