Tag: Telugu

  • ತನ್ನ ಮೊದಲ 100 ಕೋಟಿಯನ್ನ ಲವ್ಲಿ ಪಾಟ್ನರ್ ಗೆ ಅರ್ಪಿಸಿದ್ರು ವಿಜಯ್

    ತನ್ನ ಮೊದಲ 100 ಕೋಟಿಯನ್ನ ಲವ್ಲಿ ಪಾಟ್ನರ್ ಗೆ ಅರ್ಪಿಸಿದ್ರು ವಿಜಯ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿ ವಿಜಯ್ ದೇವರಕೊಂಡ ಅಭಿನಯದ `ಗೀತಾ ಗೋವಿಂದ’ ಸಿನಿಮಾ ಬಿಡುಗಡೆಗೊಂಡಿದ್ದು, ಕರ್ನಾಟಕ ಸೇರಿದಂತೆ ಎಲ್ಲ ಕಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

    ಈ ಸಿನಿಮಾ ಬಿಡುಗಡೆಯಾಗುವ ಮೊದಲೆ ಟ್ರೇಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡಿತ್ತು. ಅಷ್ಟೆ ಅಲ್ಲದೇ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ನಡುವಿನ ಕೆಮಿಷ್ಟ್ರಿಯ ಬಗ್ಗೆ ಭಾರೀ ಚರ್ಚೆಯಾಗಿತ್ತು. ಸದ್ಯಕ್ಕೆ ಈ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸುಮಾರು 12 ದಿನಗಳಲ್ಲಿ 100 ಕೋಟಿ ಗಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಯಶಸ್ಸಿನ ಖುಷಿಯಲ್ಲಿರುವ ಅಜಯ್ ದೇವರಕೊಂಡ ಅವರು ತಮ್ಮ ಈ ಸಂತಸದ ಸುದ್ದಿಯನ್ನ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಈ ಯಶಸ್ಸನ್ನ ಸಿನಿಮಾದಲ್ಲಿ ತಮಗೆ ಸಾಥ್ ನೀಡಿದ್ದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅರ್ಪಿಸಿದ್ದಾರೆ.

    “ನನ್ನ ಮೊದಲ 100 ಕೋಟಿಯನ್ನ ನನ್ನ ಕೋಚಿಂಗ್ ಸಿಬ್ಬಂದಿ, ಗೀತಾ ಆರ್ಟ್ಸ್, ನನ್ನ ಕ್ಯಾಪ್ಟನ್ ಬುಜ್ಜಿ, ನನ್ನ ಲವ್ಲಿ ಪಾಟ್ನರ್ ರಶ್ಮಿಕಾ ಮಂದಣ್ಣ ಅವರಿಗೆ ಅರ್ಪಿಸಲು ಇಷ್ಟಪಡುತ್ತೇನೆ. ಜೊತೆಗೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಕನ್ನಡ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ವಿಜಯ್ ದೇವರಕೊಂಡ ಅವರು ಟ್ವೀಟ್ ಮಾಡಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ್ದು, ಇದು ಅವರ ಎರಡನೇ ಸಿನಿಮಾವಾಗಿದೆ. ಈ ಹಿಂದೆ `ಚಲೋ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗ ಮತ್ತೊಂದು ತೆಲುಗು ಸಿನಿಮಾ ಮಾಡುತ್ತಿದ್ದು, ಈ ಸಿನಿಮಾದಲ್ಲೂ ಕೂಡ ವಿಜಯ ದೇವರಕೊಂಡ ನಾಯಯಕರಾಗಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ನಟ ದರ್ಶನ್ ಅಭಿನಯದ `ಯಜಮಾನ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೇ ನೋ ಡ್ರಗ್ಸ್ ಅಂದ್ರು ರಶ್ಮಿಕಾ ಮಂದಣ್ಣ!

    ಸೇ ನೋ ಡ್ರಗ್ಸ್ ಅಂದ್ರು ರಶ್ಮಿಕಾ ಮಂದಣ್ಣ!

    ಕನ್ನಡ ಮತ್ತು ತೆಲುಗಿನಲ್ಲಿ ಎಂಥವರೂ ಅಚ್ಚರಿ ಪಡುವಂತೆ ಬ್ಯುಸಿಯಾಗಿರುವವರು ರಶ್ಮಿಕಾ ಮಂದಣ್ಣ. ಅತ್ತ ತೆಲುಗಿನಲ್ಲಿ ನಟಿಸಿರೋ ಗೀತಗೋವಿಂದಂ ಚಿತ್ರ ಸೂಪರ್ ಹಿಟ್ಟಾಗಿದೆ. ಇತ್ತ ಯಜಮಾನ ಚಿತ್ರ ರಿಲೀಸಾಗೋ ಹಂತದಲ್ಲಿದೆ. ಇದರ ಜೊತೆಗೆ ಮತ್ತಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಸಾಮಾಜಿಕ ಕಳಕಳಿಯ ಕೆಲಸ ಕಾರ್ಯಗಳಿಂದಲೂ ಗಮನ ಸೆಳೆದಿದ್ದಾರೆ.

    ಇತ್ತೀಚೆಗಷ್ಟೇ ಪ್ರಾಕೃತಿಕ ವಿಕೋಪದಿಂದ ತಲ್ಲಣಿಸಿದ್ದ ಕೊಡಗಿನ ಜನತೆಗೆ ಸಹಾಯಹಸ್ತ ಚಾಚುವ ಮೂಲಕ ರಶ್ಮಿಕಾ ಗಮನ ಸೆಳೆದಿದ್ದರು. ಇದೀಗ ರಶ್ಮಿಕಾ ಡ್ರಗ್ಸ್ ತೆಕ್ಕೆಯಿಂದ ಯುವ ಸಮೂಹವನ್ನು ಪಾರು ಮಾಡುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾರ್ಯ ಕ್ರಮವೊಂದರಲ್ಲಿ ಸೇ ನೋ ಡ್ರಗ್ಸ್ ಎಂಬ ಅಭಿಯಾನದಲ್ಲಿ ಮಾತನಾಡಿರುವ ರಶ್ಮಿಕಾ ಡ್ರಗ್ಸ್ ನಂಥಾ ಮಾಯೆಯಿಂದ ಯುವ ಸಮೂಹವನ್ನು ದೂರವಿರುವಂತೆ ಮಾಡುವ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ರಶ್ಮಿಕಾ ತಮ್ಮ ಕಾಲೇಜು ದಿನಗಳ ಘಟನಾವಳಿಗಳ ಮೂಲಕವೇ ಯುವ ಸಮುದಾಯದೊಂದಿಗೆ ಸಂವಹನ ನಡೆಸಿದ್ದಾರೆ. ರಶ್ಮಿಕಾ ಕೊಡಗಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಓದಲು ಬಂದಾಗಲೇ ಡ್ರಗ್ಸ್ ಮಾಯೆಯ ಪರಿಚಯವಾಗಲಾರಂಭಿಸಿತ್ತಂತೆ. ಅದರ ಜೊತೆಗಾರರೇ ಡ್ರಗ್ಸ್ ಬಗ್ಗೆ ಅತೀವ ಕುತೂಹಲ ಹೊಂದಿದ್ದರಂತೆ. ಕೆಲ ಮಂದಿ ಅದನ್ನು ಬಳಸಿ ಆ ಬಗೆಗಿನ ಸಾಹಸಗಾಥೆಗಳನ್ನೂ ಹೇಳುತ್ತಿದ್ದರಂತೆ. ಆದರೆ ಹಾಗೊಂದು ಕ್ಯೂರಿಯಾಸಿಟಿಯೊಂದಿಗೆ ಡ್ರಗ್ಸ್ ತೆಕ್ಕೆಗೆ ಬಿದ್ದವರ ಬದುಕಿನಲ್ಲಿ ಎಂಥೆಥಾದ್ದೋ ದುರಂತಗಳು ನಡೆದಿದ್ದವಂತೆ.

    ಯಾವುದೋ ಸಂಕಟ, ಒತ್ತಡಗಳಿಂದ ಪಾರಾಗಲು ಡ್ರಗ್ಸ್ ಮೊರೆ ಹೋದರೆ ಯಾವತ್ತೂ ಅದರಿಂದ ಪಾರಾಗಲು ಸಾಧ್ಯವಿಲ್ಲ. ಆದ್ದರಿಂದ ಯುವ ಸಮುದಾಯ ಓದು ಗುರಿಯತ್ತ ದೃಷ್ಟಿ ನೆಟ್ಟು, ಏನೇ ಬಂದರೂ ಪಾಸಿಟಿವ್ ಆಗಿ ತೆಗೆದುಕೊಂಡು ಭವಿಷ್ಯವನ್ನು ಬೆಳಗಿಸಿಕೊಳ್ಳುವಂತೆ ರಶ್ಮಿಕಾ ಕರೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡ್ರೈವರಿಂದ ಸ್ಟಾರ್ ವರೆಗೂ ಎಲ್ಲರನ್ನೂ ಒಂದೇ ರೀತಿಯಾಗಿ ನೋಡ್ತಿದ್ರು: ಹರಿಕೃಷ್ಣ ಬಗ್ಗೆ ರವಿಶಂಕರ್ ಮಾತು

    ಡ್ರೈವರಿಂದ ಸ್ಟಾರ್ ವರೆಗೂ ಎಲ್ಲರನ್ನೂ ಒಂದೇ ರೀತಿಯಾಗಿ ನೋಡ್ತಿದ್ರು: ಹರಿಕೃಷ್ಣ ಬಗ್ಗೆ ರವಿಶಂಕರ್ ಮಾತು

    ಬೆಂಗಳೂರು: ಇಂದು ಕಾರು ಅಪಘಾತದಲ್ಲಿ ಮೃತಪಟ್ಟ ತೆಲುಗಿನ ಖ್ಯಾತ ನಟ ನಂದಮೂರಿ ಹರಿಕೃಷ್ಣ ಅವರ ಕುಟುಂಬವೇ ನನಗೆ ಪರಿಚಯವಿದೆ. ಹರಿಕೃಷ್ಣ ಅವರು ಮಿ. ಪರ್ಫೆಕ್ಟ್ ಅಂತಾನೇ ಹೇಳಬಹುದು. ಯಾಕಂದ್ರೆ ಅಂತ ಒಂದು ವ್ಯಕ್ತಿತ್ವ ಅವರದ್ದಾಗಿದ್ದು, ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುತ್ತಿದ್ದರು ಅಂತ ನಟ ರವಿಶಂಕರ್ ಹೇಳಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸುಮಾರು 30-25 ವರ್ಷಗಳಿಂದ ಅವರು ಗೊತ್ತು. ಅವರ ಮಗ ಎನ್ ಟಿಆರ್ ಜೊತೆನೂ ಕೆಲಸ ಮಾಡಿದ್ದೀನಿ. ಕಲ್ಯಾಣ್ ರಾಮ್ ಜೊತೆಯೂ ಕೆಲಸ ಮಾಡಿದ್ದೀನಿ. ಆದ್ರೆ ಇದೀಗ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ ಅನ್ನೋ ವಿಷಯ ಕೇಳಿ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಅಲ್ಲದೇ ಇಂದು ನಾನು ಬೆಳಗ್ಗೆ ಎದ್ದ ತಕ್ಷಣವೇ ಸುದ್ದಿ ಕೇಳಿ ನಿಜಕ್ಕೂ ಶಾಕ್ ಆಯಿತು ಅಂದ್ರು.

    ದೊಡ್ಡ ಫ್ಯಾಮಿಲಿ:
    ರಾಮರಾವ್ ಅಂದ್ರೆ ಅವರದ್ದು ದೊಡ್ಡ ಕುಟುಂಬ. ಹರಿಕೃಷ್ಣ ಆಗಿರಲಿ ಅಥವಾ ಬಾಲಕೃಷ್ಣ ಆಗಿರಲಿ. ಅವರ ಜೊತೆ ಕೆಲಸ ಮಾಡಿದ್ದೀನಿ. ಹರಿಕೃಷ್ಣ ತುಂಬಾ ಒಳ್ಳೆಯ ಮನುಷ್ಯ. ಒಬ್ಬರನ್ನು ಹೆಸರು ಹಿಡಿದು ಕರೆದವರಲ್ಲ. ಎಲ್ಲರನ್ನೂ ಬ್ರದರ್ ಅಂತ ಕರೆದು ಅವರ ತಂದೆಯ ರೀತಿಯಲ್ಲೇ ಮಾತನಾಡಿಸುತ್ತಿದ್ದರು. ಆತ ಡ್ರೈವರೇ ಆಗಿರಲಿ ಅಥವಾ ದೊಡ್ಡ ಸ್ಟಾರೇ ಆಗಿರಲಿ. ಹರಿಕೃಷ್ಣ ಅವರಿಗೆ ಎಲ್ಲರೂ ಒಂದೇ. ಎಲ್ಲರ ಜೊತೆನೂ ಒಂದೇ ರೀತಿಯಲ್ಲಿ ವರ್ತಿಸುತ್ತಿದ್ದರು ಅಂತ ತಿಳಿಸಿದ್ರು.

    ಒಳ್ಳೆಯ ವ್ಯಕ್ತಿತ್ವ ಹಾಗೂ ಶಿಸ್ತಿನ ಮನುಷ್ಯ. ಮೂಲತಃ ಅವರು ಒಬ್ಬ ಬೆಸ್ಟ್ ಕಾರ್ ಡ್ರೈವರ್ ಕೂಡ. ಈಗಲ್ಲ ಅವರ ತಂದೆ ಮೊದಲು ತೆಲುಗು ದೇಶಂ ಪಾರ್ಟಿ ಸ್ಥಾಪನೆ ಮಾಡುವಾಗ ಚೈತನ್ಯರಾಧಾ ಎಂಬ ಗಾಡಿಗೆ ಡ್ರೈವರ್ ಯಾರೂ ಇರಲಿಲ್ಲ. ಆವಾಗ ಆ ಗಾಡಿಯನ್ನು ಆಂಧ್ರಪ್ರದೇಶದಲ್ಲಿ ಓಡಿಸಿದ್ದು ಹರಿಕೃಷ್ಣ ಅವರೇ. ಹೀಗೆ ಕಾರು ಚಾಲನೆಯಲ್ಲೂ ನಿಪುಣನಾಗಿದ್ದ ಹರಿಕೃಷ್ಣ ಅವರಿಗೆ ಇಂದು ಈ ದುರಂತ ಸಂಭವಿಸಿರುವುದು ವಿಷಾದನೀಯ ಸಂಗತಿಯಾಗಿದೆ ಅಂತ ಹೇಳಿದ್ರು.

    ಡ್ರೈವರ್ ಕಾರ್ ಓಡಿಸ್ತೀನಿ ಅಂದಾಗ ಬೇಡ ಅಂತ ಹೇಳಿ ಹರಿಕೃಷ್ಣ ಅವರೇ ಓಡಿಸಿದ್ದಾರಂತೆ. ಹೀಗಾಗಿ ಈ ರೀತಿ ಆಗಿದೆ. ಇಷ್ಟು ಮಾತ್ರವಲ್ಲದೇ ಸೀಟ್ ಬೆಲ್ಟ್ ಹಾಕಿಲ್ಲ. ಹಾಗೂ ಅತಿಯಾದ ವೇಗದ ಚಾಲನೆಯಿಂದ ಈ ಘಟನೆ ನಡೆದಿದೆ ಅಂತ ಕೇಳ್ಪಟ್ಟೆ. ಆದ್ರೆ ಇಂದು ಬೆಳಗ್ಗೆ ಈ ಸುದ್ದಿ ಬರುತ್ತೆ ಅಂತ ಅಂದುಕೊಂಡಿರಲಿಲ್ಲ. ಇಂತಹ ಒಂದು ಸಮಯದಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮಕ್ಕಳು ಕಲ್ಯಾಣ್, ಎನ್‍ಟಿಆರ್ ಹಾಗೆಯೇ ಅವರ ಕುಟುಂಬಸ್ಥರಿಗೆ ದುಃಖಭರಿಸುವ ಶಕ್ತಿ ನೀಡಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ ಅಂದ್ರು.

    2009ರಲ್ಲಿ ಜ್ಯೂನಿಯರ್ ಎನ್ ಟಿಆರ್ ಅವರು ಪ್ರಚಾರಕ್ಕೆ ಹೋಗುವಾಗ ನಲ್ಗೊಂಡದ ಅದೇ ಜಾಗದಲ್ಲಿ ಅಪಘಾತವಾಗಿತ್ತು. 4 ವರ್ಷದ ಹಿಂದೆ ಹರಿಕೃಷ್ಣ ಅವರ ದೊಡ್ಡ ಮಗ ಜಾನಕೀರಾಮ್ ಅವರು ಅದೇ ಪ್ರದೇಶಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ರು. ಇಂದು ಹರಿಕೃಷ್ಣ ಅವರ ಕಾರ್ ಅಪಘಾತವೂ ಕೂಡ ಅದೇ ಜಾಗದಲ್ಲಾಗಿರುವುದು ವಿಚಿತ್ರ. ಹೀಗಾಗಿ ಏನೂ ಅರ್ಥವಾಗುತ್ತಿಲ್ಲ ಅಂತ ಅವರು ಬೇಸರ ವ್ಯಕ್ತಪಡಿಸಿದ್ರು.

    ಕಾರ್ ಅಪಘಾತ:
    ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ನಟ ದಿವಂಗತ ನಂದಮೂರಿ ತಾರಕ ರಾಮಾರಾವ್ ಹಿರಿಯ ಪುತ್ರ ನಟ ನಂದಮೂರಿ ಹರಿಕೃಷ್ಣ ಅವರು ಚಲಿಸುತ್ತಿದ್ದ ಕಾರು ಇಂದು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೇಪರ್ತಿ ಬಳಿ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಹರಿಕೃಷ್ಣ ಅವರಿಗೆ ಗಂಬೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಕಾಮಿನೇನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಹರಿಕೃಷ್ಣ ಅವರು ಅಭಿಮಾನಿಯ ಪುತ್ರನ ಮದುವೆಗೆ ತೆರಳುತ್ತಿದ್ದರು. ಬೆಳಗ್ಗೆ 4.30ರ ಸುಮಾರಿನಲ್ಲಿ ಹೈದರಾಬಾದ್ ನಿಂದ ಆಂಧ್ರಪ್ರದೇಶದ ನಲ್ಲೂರಿಗೆ ತಾವೇ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಹರಿಕೃಷ್ಣ ಅವರು ಬಾಲನಟನಾಗಿ ಹಾಗೂ ನಟನಾಗಿ 13 ಚಿತ್ರಗಳಲ್ಲಿ ನಟಿಸಿದ್ದು, ಶ್ರಾವಣಮಾಸಂ ಅವರ ಕೊನೆಯ ಚಿತ್ರವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುವರ್ಣ ಸುಂದರಿಯಾಗಿ ಬಂದರು ಜಯಪ್ರದಾ!

    ಸುವರ್ಣ ಸುಂದರಿಯಾಗಿ ಬಂದರು ಜಯಪ್ರದಾ!

    ಬಾಹುಬಲಿ ಚಿತ್ರದ ನಂತರ ಅದರಂಥಾದ್ದೇ ಗ್ರಾಫಿಕ್ಸ್ ಅದ್ಧೂರಿತನದೊಂದಿಗೆ ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರ `ಸುವರ್ಣ ಸುಂದರಿ’. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿರೋ ಈ ಭರ್ಜರಿ ಬಜೆಟ್ಟಿನ ಚಿತ್ರದ ಮೂಲಕ ಬಹುಭಾಷಾ ತಾರೆ ಜಯಪ್ರದಾ ಕನ್ನಡಕ್ಕೆ ಮತ್ತೆ ಮರಳಿದ್ದಾರೆ!

    ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸುತ್ತಾಡಿ ಇಂದಿನ ಕಾಲಮಾನದವರೆಗೆ ಪ್ರಯಾಣ ಬೆಳೆಸೋ ಕಥೆ ಹೊಂದಿರುವ ಈ ಚಿತ್ರ ಸೂಕ್ಷ್ಮವಾಗಿ ಪುನರ್ಜನ್ಮದ ಕಥನವನ್ನೂ ಹೊಂದಿದೆ. ಎಸ್ ಟೀಮ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಬಗೆಗೀಗ ತೆಲುಗು ಮತ್ತು ಕನ್ನಡದಲ್ಲಿ ಬಾಹುಬಲಿಯಂಥಾದ್ದೇ ಭಾರೀ ನಿರೀಕ್ಷೆ ಮೂಡಿಕೊಳ್ಳಲು ಸಾಕಷ್ಟು ಕಾರಣಗಳಿವೆ!

    ಬಾಹುಬಲಿ ಚಿತ್ರ ಜನಮನ ಸೂರೆಗೊಂಡಿದ್ದಕ್ಕೆ ಅದರಲ್ಲಿನ ಗ್ರಾಫಿಕ್ಸ್ ಕೈಚಳಕವೂ ಮೂಲ ಕಾರಣ. ಆದರೆ ಕನ್ನಡದಂಥಾ ಸೀಮಿತ ಮಾರುಕಟ್ಟೆಯಿರೋ ಚಿತ್ರರಂಗದಲ್ಲಿ ಅಂಥಾ ಅದ್ಧೂರಿ ಚಿತ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬಂಥಾ ವಾತಾವರಣವಿತ್ತು. ಆದರೆ ಸುವರ್ಣ ಸುಂದರಿ ಚಿತ್ರ ಅದನ್ನು ಸುಳ್ಳು ಮಾಡಿದೆ ಎಂಬುದು ಚಿತ್ರತಂಡದ ಖಚಿತ ಅಭಿಪ್ರಾಯ. ಯಾಕೆಂದರೆ ಈ ಚಿತ್ರದಲ್ಲಿಯೂ ಶೇಕಡಾ ನಲವತ್ತರಷ್ಟು ಭಾಗ ಅದ್ಭುತವಾದ ಗ್ರಾಫಿಕ್ಸ್ ನಿಂದ ತುಂಬಿದೆ. ಎಲ್ಲಿಯೂ ಅಸಹಜ ಅನ್ನಿಸದಂತೆ ಇದನ್ನು ಕ್ರಿಯೇಟ್ ಮಾಡಲು ಕೋಟಿ ಕೋಟಿ ಖರ್ಚು ಮಾಡಲಾಗಿದೆ.

    ಈಗಾಗಲೇ ಈ ಚಿತ್ರದ ಮೋಷನ್ ಪೋಸ್ಟರನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. ಶಿವಣ್ಣ ಬಿಡುಗಡೆ ಮಾಡಿರುವ ಮೋಷನ್ ಪೋಸ್ಟರ್ ಸುವರ್ಣ ಸುಂದರಿಯ ಅಸಲೀ ಅದ್ಧೂರಿತನವನ್ನು ಧ್ವನಿಸುವಂತಿದೆ. ಟೀಸರ್ ಮತ್ತು ಟ್ರೈಲರ್ ಗಳನ್ನು ಸಿದ್ಧಪಡಿಸುವ ಕೆಲಸ ಭರದಿಂದ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಅದೂ ಕೂಡಾ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕವೇ ತುಂಬಾ ವರ್ಷಗಳ ನಂತರ ಜಯಪ್ರದಾ ಅವರು ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಡಾ.ರಾಜ್‍ಕುಮಾರ್ ಅವರಿಗೆ ಜೋಡಿಯಾಗಿ ನಟಿಸುತ್ತಲೇ ಕನ್ನಡದ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದವರು ಜಯಪ್ರದಾ. ಕವಿರತ್ನ ಕಾಳಿದಾಸ ಚಿತ್ರದಲ್ಲಿನ ಅವರ ಮೋಹಕ ಅಭಿನಯವನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ.

    ಹಾಗೆ ಕನ್ನಡದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಜಯಪ್ರದಾ ಭಿನ್ನವಾದ ಮುಖ್ಯ ಪಾತ್ರದಲ್ಲಿ ಸುವರ್ಣ ಸುಂದರಿ ಸಿನಿಮಾದ ಮೂಲಕ ಮತ್ತೆ ಬಂದಿದ್ದಾರೆ. ರಿಯಲ್ ಆಗಿಯೂ ಎವರ್ ಗ್ರೀನ್ ಸುಂದರಿಯಾಗಿರುವ ಜಯಪ್ರದಾ ಈ ಚಿತ್ರದ ಮುಖ್ಯ ಆಕರ್ಷಣೆ. ಈ ಚಿತ್ರಕ್ಕೆ ತೆಲುಗು ಸಿನಿಮಾಗಳಿಗೆ ಕಥೆಯ ರಚನೆಯಲ್ಲಿ ಅನುಭವ ಪಡೆದಿರುವ ಎಂ ಎಸ್ ಎನ್ ಸೂರ್ಯ ಕಥೆ ಬರೆದು ನಿರ್ದೇಶಿಸಿದ್ದಾರೆ. ಸರಿಸುಮಾರು ನಲವತ್ತು ಭಾಗದಷ್ಟು ಅದ್ಧೂರಿ ಫ್ಲಾಷ್ ಬ್ಯಾಕ್‍ನೊಂದಿಗೆ ಅದ್ಭುತ ಗ್ರಾಫಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಚಿತ್ರದಲ್ಲಿ ರಾಮ್, ಸಾಕ್ಷಿ, ಪೂರ್ಣ, ಡಾ ಜಯಪ್ರದಾ, ಮಹಮ್ಮದ್ ಖಾನ್, ಸಾಯಿಕುಮಾರ್, ಅವಿನಾಶ್ ಮತ್ತಿತರರು ನಟಿಸಿದ್ದಾರೆ. ಸಾಯಿ ಕಾರ್ತಿಕ್ ಅವರ ಸಂಗೀತ, ಯಲ್ಲುಮಹಂತಿ ಈಶ್ವರ್ ಅವರ ಛಾಯಾಗ್ರಹಣ, ಎಸ್ ಟೀಮ್ ನಿರ್ಮಾಣ, ಪ್ರವೀಣ್ ಪುಡಿ ಸಂಕಲನ ಈ ಚಿತ್ರಕ್ಕಿದೆ. ಎಂ.ಎಲ್ ಲಕ್ಷ್ಮಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಟ ಚಿರಂಜೀವಿ ಅಭಿಮಾನಿಗಳಿಗೆ ಕಿಚ್ಚನಿಂದ ಗುಡ್ ನ್ಯೂಸ್

    ನಟ ಚಿರಂಜೀವಿ ಅಭಿಮಾನಿಗಳಿಗೆ ಕಿಚ್ಚನಿಂದ ಗುಡ್ ನ್ಯೂಸ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರು ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಮತ್ತು ತಮ್ಮ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ.

    ಸುದೀಪ್ ಅವರಿಗೆ ಸ್ಯಾಂಡಲ್‍ವುಡ್ ಮಾತ್ರವಲ್ಲದೆ ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿಯೂ ಡಿಮ್ಯಾಂಡ್ ಇದ್ದು, ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಈಗ ಚಿರಂಜೀವಿ ಜೊತೆಗೆ ಸಿನಿಮಾ ಮಾಡುವುದಾಗಿ ಸುದೀಪ್ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಇಬ್ಬರು ಮೆಗಾಸ್ಟಾರ್‍ಗಳ ಜೊತೆ ನಟಿಸಲಿದ್ದಾರೆ ಕಿಚ್ಚ ಸುದೀಪ್

    ಸುದೀಪ್ ಈ ಹಿಂದೆ ತೆಲುಗಿನಲ್ಲಿ `ಈಗ’ ಮತ್ತು `ಬಾಹುಬಲಿ’ ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದಾರೆ. ಈಗ ಮೆಗಾ ಸ್ಟಾರ್ ಚಿರಂಜೀವಿ ಅವರ 151ನೇ ಚಿತ್ರ `ಸೈರಾ ನರಸಿಂಹ ರೆಡ್ಡಿ’ ಯಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕಿಚ್ಚ ಸುದೀಪ್ ಈ ಸಿನಿಮಾದಲ್ಲಿ ಬೇಕೇ ಬೇಕು ಎಂದು ಹಠ ಹಿಡಿದಿದ್ದಾರೆ ನಿರ್ದೇಶಕ!

    ಈ ಸಿನಿಮಾಗೆ ಸುದೀಪ್ ಚಿರಂಜೀವಿ ಜೊತೆ ಅಭಿನಯಿಸುತ್ತಾರೆ ಎಂದು ಸುದ್ದಿ ಕಳೆದ ವರ್ಷದಿಂದ ಗಾಂಧಿನಗರದಲ್ಲಿ ಹರಿದಾಡುತಿತ್ತು. ಆದರೆ ಈ ಸಿನಿಮಾಗೆ ತುಂಬಾ ದಿನ ಕಾಲ್ ಶೀಟ್ ಕೊಡಬೇಕು ಎಂಬ ಕಾರಣದಿಂದ ಈ ಸಿನಿಮಾ ಮಾಡಲು ಸುದೀಪ್ ನಿರಾಕರಿಸಿದ್ದರು ಎಂದು ವರದಿಯಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳಿಗೆ ನಿರಾಸೆ ಆಗಿತ್ತು. ಆದರೆ ಈಗ ಸುದೀಪ್ ಚಿರಂಜೀವಿ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದರಿಂದ ಅಭಿಮಾಗಳಿಗೆ ಖುಷಿಯಾಗಿದೆ.

    `ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ಬರುವ ಒಂದು ಪ್ರಮುಖ ಪಾತ್ರಕ್ಕೆ ಸುದೀಪ್ ಅವರೇ ಸೂಕ್ತ ಎಂದು ನಿರ್ದೇಶಕ ಸುರೇಂದರ್ ರೆಡ್ಡಿ ನಿರ್ಧರಿಸಿದ್ದರು. ಆದ್ದರಿಂದ ನಿರ್ದೇಶಕರ ಒತ್ತಾಯದ ಮೇರೆಗೆ ಸುದೀಪ್ ಚಿರಂಜೀವಿ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಸುದೀಪ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಸುದೀಪ್ `ಪೈಲ್ವಾನ್’ ಹಾಗೂ `ಕೋಟಿಗೊಬ್ಬ-3′ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  • ಸೀಜರ್ ಸಿನೆಮಾದ ತಂತ್ರಜ್ಞರು ಹೇಳೋದೇನು ಗೊತ್ತಾ..?

    ಸೀಜರ್ ಸಿನೆಮಾದ ತಂತ್ರಜ್ಞರು ಹೇಳೋದೇನು ಗೊತ್ತಾ..?

    ಬೆಂಗಳೂರು: ಚಿತ್ರದ ಪತ್ರಿಕಾಗೋಷ್ಠಿ ಎಂದರೆ ನಾಯಕ, ನಾಯಕಿ, ಸಹಕಲಾವಿದರು, ತಂತ್ರಜ್ಞರು ಇರುವುದು ವಾಡಿಕೆಯಾಗಿದೆ. ಇದೇ ಮೊದಲ ಬಾರಿ ಎನ್ನುವಂತೆ ತೆರೆ ಹಿಂದೆ ಕೆಲಸ ಮಾಡಿದವರನ್ನು ಪರಿಚಯಿಸುವ ಸಲುವಾಗಿ ‘ಸೀಜರ್’ ಸಿನಿಮಾ ತಂಡವು ಮಾಧ್ಯಮದ ಮುಂದೆ ಹಾಜರಾಗಿತ್ತು. ಮಾರ್ಚ್ 29ರಂದು ಸೀಜರ್ ತೆರೆಗೆ ಬರಲಿದೆ.

    ಮೊದಲ ಸರದಿಯಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ಬಿಗ್ ಬಾಸ್ ನಂತರ ತಮ್ಮನ್ನು ಭೇಟಿ ಮಾಡುತ್ತಿರುವುದು ಖುಷಿ ತಂದಿದೆ. ನಾಲ್ಕು ವರ್ಷದ ಹಿಂದೆ ಏನೂ ಇಲ್ಲದ ಸಂದರ್ಭದಲ್ಲಿ ಸಂಗೀತ ಒದಗಿಸಲು ನಿರ್ದೇಶಕರು ಅವಕಾಶ ಮಾಡಿಕೊಟ್ಟರು. ಮೂರು ಹಾಡುಗಳಿಗೆ ಸಾಹಿತ್ಯ ಬರೆಯಲಾಗಿದೆ. ಒಂದನ್ನು ಚೇತನ್ ಕುಮಾರ್ ಬರೆದಿದ್ದಾರೆ. ಎಲ್ಲಾ ಗೀತೆಗಳಿಗೆ ಧ್ವನಿಯಾಗಿದ್ದೇನೆ. ಅಂದು ಟ್ಯೂನ್ ಮಾಡಿದ್ದರೂ ಇಂದಿನ ಟ್ರೆಂಡ್ ಗೆ ಸೂಟ್ ಆಗುವ ಹಾಗೆ ಸಂಯೋಜನೆ ಮಾಡಲಾಗಿದೆ. ರ‍್ಯಾಪ್ ಗೆ ಸೀಮಿತವಾಗಿದ್ದ ನಾನು ಮೆಲೋಡಿ ಹಾಡು ನೀಡಬಲ್ಲೆ ಎಂಬುದನ್ನು ಇದರಲ್ಲಿ ಸಾಬೀತುಪಡಿಸಿದ್ದೇನೆ. ಮಾಸ್ ಸಿನಿಮಾ, ರವಿಚಂದ್ರನ್, ಚಿರಂಜೀವಿ ಸರ್ಜಾ ಇರುವುದರಿಂದ ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಸ್ಕೋಪ್ ನೀಡಲಾಗಿದೆ ಎಂದರು.

    ಚಿತ್ರಕ್ಕೆ ಪ್ರಾರಂಭದಲ್ಲಿ ಚಂದನ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಧೈರ್ಯ ಮಾಡಿ ಅವರಿಂದಲೇ ಕೆಲಸ ಮಾಡಿದ್ದಕ್ಕೆ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಚಿತ್ರ ಹಣಕಾಸು ವ್ಯವಹಾರ, ಕಾರು ಕುರಿತ ಕತೆಯಾಗಿದೆ. ನಿರ್ಮಾಪಕರುಗಳಿಗೆ ಚಿತ್ರ ತೋರಿಸಿದಾಗ ಕತೆಯು ಎಲ್ಲಾ ಭಾಗಕ್ಕೂ ಅನ್ವಯವಾಗುವುದರಿಂದ ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲು ಸಲಹೆ ನೀಡಿದ್ದಾರೆ. ಅದರಂತೆ ಕನ್ನಡದಲ್ಲಿ ಬಿಡುಗಡೆಯಾದ ನಂತರದ ದಿನಗಳಲ್ಲಿ ಅಲ್ಲಿನ ಜನರಿಗೆ ತೋರಿಸುವ ಬಗ್ಗೆ ಯೋಜನೆ ಹಾಕಿಕೊಂಡಿದ್ದೇವೆ ಎಂದು ನಿರ್ದೇಶಕ ವಿನಯ್‍ಕೃಷ್ಣ ಹೇಳಿದರು.

    ಕೈಗಾರಿಕೋದ್ಯಮಿಯಾದ ನನಗೆ ಸಿನಿಮಾ ಮಾಡುವ ಬಯಕೆ ಇತ್ತು. ಒಳ್ಳೆ ಚಿತ್ರ ಕೊಡಬೇಕೆನ್ನುವ ಧ್ಯೇಯದಿಂದ, ಕಾರು ಕತೆ ಚೆನ್ನಾಗಿರುವ ಕಾರಣ ಇದಕ್ಕೆ ಹಣ ಹೂಡಿದ್ದೇನೆ ಎನ್ನುತ್ತಾರೆ ನಿರ್ಮಾಪಕ ತ್ರಿವಿಕ್ರಂ ಸಾಪಲ್ಯ. ಪ್ರಾರಂಭದಲ್ಲಿ ಚಿಕ್ಕ ಚಿತ್ರವೆಂದು ಕೊಂಡಿದ್ದ ನಮಗೆ ಕಾಲ ಕಳೆದಂತೆ ಎಲ್ಲವು ದೊಡ್ಡದಾಗುತ್ತಾ ಹೋಗಿದೆ. ಇದರಲ್ಲಿ ನನ್ನದು ಅಳಿಲು ಸೇವೆ ಅಂತ ಬಣ್ಣಿಸಿಕೊಂಡರು ಸಂಭಾಷಣೆಗಾರ ಶ್ರೀಕಾಂತ್. ಸಂಕಲನಕಾರ ಶ್ರೀಕಾಂತ್, ಛಾಯಗ್ರಾಹಕ ರಾಜೇಶ್‍ಕಟ್ಟ ಉಪಸ್ಥಿತರಿದ್ದು ತಮ್ಮ ಅನುಭವ ಹಂಚಿಕೊಂಡರು.

  • ಬಂಗಾರಪೇಟೆಯಲ್ಲಿ ವರ್ಷ ಪೂರ್ತಿ ಕನ್ನಡ ಹಬ್ಬ ಆಚರಿಸ್ತಾರೆ ಕೋಲಾರದ ಸುಬ್ರಮಣಿ

    ಬಂಗಾರಪೇಟೆಯಲ್ಲಿ ವರ್ಷ ಪೂರ್ತಿ ಕನ್ನಡ ಹಬ್ಬ ಆಚರಿಸ್ತಾರೆ ಕೋಲಾರದ ಸುಬ್ರಮಣಿ

    ಕೋಲಾರ: ತೆಲುಗು-ತಮಿಳು ಪ್ರಭಾವ ಹೆಚ್ಚಾಗಿರೋ ಕೋಲಾರದ ಬಂಗಾರಪೇಟೆಯಲ್ಲಿ ಬರೀ ನವೆಂಬರ್ ಅಲ್ಲ, ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ನಡೆಯುತ್ತೆ. ಇದಕ್ಕೆ ಕಾರಣ ಇಂದಿನ ನಮ್ಮ ಪಬ್ಲಿಕ್ ಹೀರೋ ಸುಬ್ರಮಣಿ.

    ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ನಿವಾಸಿಯಾಗಿರೋ ಡಾ.ಎಂ. ಸುಬ್ರಮಣಿ ಕನ್ನಡಾಭಿಮಾನಿ. ಇವರು ತೆಲುಗು, ತಮಿಳು ಭಾಷೆಯ ಪ್ರಭಾವಕ್ಕೊಳಗಾದ ಪಟ್ಟಣದಲ್ಲಿ ವರ್ಷಪೂರ್ತಿ ಕನ್ನಡ ಹಬ್ಬ ಆಚರಿಸುತ್ತಾರೆ.

    ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷರಾದ ಡಾ.ಎಂ.ಸುಬ್ರಮಣಿ ಅವರು 2009ರಿಂದ ನಿರಂತವಾಗಿ ಕನ್ನಡ ಸೇವೆ ಮಾಡಿಕೊಂಡು ಬಂದಿದ್ದಾರೆ. ಪ್ರತಿ ತಿಂಗಳು ರಾಜ್ಯೋತ್ಸವ ಮಾಡುವ ಇವರು ರಾಜ್ಯದ ಸಾಹಿತಿಗಳು, ಚಿಂತಕರು, ಹ್ಯಾಸ ಕಲಾವಿದರು ಹಾಗೂ ಅನೇಕ ಗಾಯಕರನ್ನು ಕರೆಸಿ ಕನ್ನಡ ಕಾರ್ಯಕ್ರಮ ಮಾಡುತ್ತಾರೆ.

    1968 ರಲ್ಲಿ ಈ ಕನ್ನಡ ಸಂಘ ಸ್ಥಾಪನೆಯಾಗಿದ್ರೂ, 2009ರಿಂದ ಪ್ರತಿ ತಿಂಗಳು ಕನ್ನಡಹಬ್ಬ ನಡೀತಿದೆ. ಕನ್ನಡದ ವೈಭವ ಹೆಚ್ಚಿಸಲು ಇಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲದೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಐಎಎಸ್ ಹಾಗೂ ಕೆಎಎಸ್‍ನಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿದೆ.

    ಯಾರಿಂದಲೂ ಆರ್ಥಿಕ ಸಹಾಯದ ನಿರೀಕ್ಷೆಗಳನ್ನಿಟ್ಟುಕೊಳ್ಳದೆ ಕನ್ನಡ ಸಂಘದ ಅಧ್ಯಕ್ಷ ಸುಬ್ರಮಣಿ ಅವರು ಕನ್ನಡ ಸೇವೆ ಮಾಡಿಕೊಂಡು ಬರುತ್ತಿದ್ದಾರೆ.

  • ವಿಡಿಯೋ: ಶೂಟಿಂಗ್ ವೇಳೆ ಬಂಡೆಕಲ್ಲಿನ ಮೇಲೆ ಕಾಲುಜಾರಿ ಬಿದ್ದು ನಟಿಗೆ ಗಾಯ

    ವಿಡಿಯೋ: ಶೂಟಿಂಗ್ ವೇಳೆ ಬಂಡೆಕಲ್ಲಿನ ಮೇಲೆ ಕಾಲುಜಾರಿ ಬಿದ್ದು ನಟಿಗೆ ಗಾಯ

    ತಿರುವನಂತಪುರ: ಇಲ್ಲಿನ ಕೊಝಿಕೋಡ್ ನಲ್ಲಿ ಚಿತ್ರವೊಂದರ ಶೂಟಿಂಗ್ ವೇಳೆ ಬಂಡೆ ಕಲ್ಲಿನ ಮೇಲೆ ಬಿದ್ದು ನಟಿಯೊಬ್ಬರು ಗಾಯಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಿದ್ದಿಕ್ ಚೆಂಡಮಂಗಲ್ಲೂರ್ ಎಂಬವರ ನಿರ್ದೇಶನದ ಕುಂಜೀರಾಮಂತ ಕುಪ್ಪಯಂ ಚಿತ್ರದ ಡ್ಯಾನ್ಸ್ ವೇಳೆ ಈ ಅವಘಡ ಸಂಭವಿಸಿದೆ. ನಟಿ ಲಿಂಡಾ ಕುಮಾರ್ ಬಂಡೆ ಕಲ್ಲಿನ ಮೇಲೆ ಬಿದ್ದು ಕೈ ಹಾಗೂ ಕಾಲುಗಳಿಗೆ ಗಾಯಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಡ್ಯಾನ್ಸ್ ಮಾಡುತ್ತಿದ್ದಂತೆಯೇ ನಟಿ ಏಕಾಏಕಿ ಬಂಡೆಕ್ಲಲಿನ ಮೇಲೆ ಬಿದ್ದಿದ್ದು, ಕೂಡಲೇ ಚಿತ್ರತಂಡ ಆಕೆಯನ್ನು ರಕ್ಷಿಸಿದ್ದಾರೆ. ಘಟನೆಯಿಂದ ನಟಿ ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿವೆ. ಹೀಗಾಗಿ 10 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ನಟಿಗೆ ವೈದ್ಯರು ಸೂಚಿಸಿರುವುದಾಗಿ ವರದಿಯಾಗಿದೆ.

    ಮೊದಲು ತೆಲುಗು ನಟಿ ಕೀರ್ತಿ ಸುರೇಶ್ `ಸಾವಿತ್ರಿ’ ಚಿತ್ರದ ಶೂಟಿಂಗ್ ವೇಳೆ ಬಿದ್ದಿರುವುದಾಗಿ ಹೇಳಿ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ನಟಿ ಕೀರ್ತಿ ಸುರೇಶ್, ತನಗೇನೂ ಆಗಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ಈ ವಿಡಿಯೋ ಹಾಗೂ ನನಗೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ಈ ವಿಡಿಯೋದಲ್ಲಿರುವುದು ಕೀರ್ತಿ ಅಲ್ಲ. ಅವರು ತೆಲುಗು ಚಿತ್ರವೊಂದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

  • 3ನೇ ತರಗತಿ ಬಾಲಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ!

    3ನೇ ತರಗತಿ ಬಾಲಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ!

    ಹೈದರಾಬಾದ್: ತೆಲುಗು ಪದ್ಯ ಕಲಿತುಕೊಂಡು ಬಂದಿಲ್ಲವೆಂದು ಶಾಲೆಯಲ್ಲಿ ಟೀಚರ್ ಹೊಡೆದಿದ್ದರಿಂದ ಮನನೊಂದ 9 ವರ್ಷದ ವಿದ್ಯಾರ್ಥಿಯೊಬ್ಬ ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

    ಈ ಘಟನೆ ವನಾಪರ್ತಿ ಜಿಲ್ಲೆಯಲ್ಲಿ ನಡೆದಿದೆ. ಆನಂದ್ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಯಾಗಿದ್ದು, ಈತ ಸ್ಥಳೀಯ ಸರಕಾರಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದನು.

    ಏನಿದು ಘಟನೆ?: ಮೂರು ದಿನದ ಹಿಂದೆ ಟೀಚರ್ ವಿದ್ಯಾರ್ಥಿ ಆನಂದ್ ಬಳಿ ತೆಲುಗು ಪದ್ಯ ಕಲಿತುಕೊಂಡು ಬರುವಂತೆ ಸೂಚಿಸಿದ್ದರು. ಅಂತೆಯೇ ಗುರುವಾರ ಪದ್ಯ ಕಲಿತುಕೊಂಡು ಬಂದಿಯಾ ಅಂತ ಟೀಚರ್ ಕೇಳಿದಾಗ ಆನಂದ್ ಇಲ್ಲ ಎಂದು ಉತ್ತರಿಸಿದ್ದಾನೆ. ಮೂರು ದಿನ ಸಮಯ ಕೊಟ್ಟು ಬಳಿಕವೂ ಕಲಿತುಕೊಂಡು ಬಾರದ ಆನಂದ್ ಮೇಲೆ ಸಿಟ್ಟುಗೊಂಡ ಟೀಚರ್ ಚೆನ್ನಾಗಿ ಹೊಡೆದಿದ್ದಾರೆ. ಇದರಿಂದ ಮನನೊಂದು ಆನಂದ್, ಮನೆಗೆ ಬಂದು ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.

    ಕೂಡಲೇ ಇದನ್ನು ಗಮನಿಸಿದ ಪೋಷಕರು ಆತನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗನಿಗೆ ಶಾಲೆಯಲ್ಲಿ ಉಳಿದ ವಿದ್ಯಾರ್ಥಿಗಳ ಎದುರು ಟೀಚರ್ ಅವಮಾನ ಮಾಡಿದ್ದಾರೆ. ಹೀಗಾಗಿ ಆತ ಮನೆಗೆ ಬಂದು ಈ ಕೃತ್ಯ ಎಸಗಿದ್ದಾನೆ. ಘಟನೆಯಿಂದ ಆನಂದ್ ದೇಹ ಶೇ.80 ರಷ್ಟು ಸುಟ್ಟು ಹೋಗಿದ್ದರಿಂದ ಜಿಲ್ಲೆಯ ಮೆಹಬುಬ್ ನಗರ್ ಆಸ್ಪತ್ರೆಯಿಂದ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಆನಂದ್ ತಂದೆ ನಾಗಣ್ಣ ತಿಳಿಸಿದ್ದಾರೆ.

    ಘಟನೆಯ ಬಳಿಕ ಟೀಚರ್ ತಲೆಮರೆಸಿಕೊಂಡಿದ್ದು, ತಮ್ಮ ಮೊಬೈಲನ್ನು ಸ್ವಿಚ್ಚ್ ಆಫ್ ಮಾಡಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಅಂತ ಪೊಲೀಸ್ ಇನ್ಸ್ ಪೆಕ್ಟರ್ ಬಿ. ಸೋಮ್ನಾರಾಯಣ್ ಸಿಂಗ್ ತಿಳಿಸಿದ್ದಾರೆ.

  • ಬೇಲೂರು ದೇವಸ್ಥಾನದೊಳಗೆ ತೆಲುಗು ದರ್ಬಾರ್- ವಾರದಿಂದ ನಡೀತಿದೆ ಅಲ್ಲು ಅರ್ಜುನ್ ಶೂಟಿಂಗ್

    ಬೇಲೂರು ದೇವಸ್ಥಾನದೊಳಗೆ ತೆಲುಗು ದರ್ಬಾರ್- ವಾರದಿಂದ ನಡೀತಿದೆ ಅಲ್ಲು ಅರ್ಜುನ್ ಶೂಟಿಂಗ್

    ಹಾಸನ: ಬೇಲೂರು ಅಂದ್ರೆ ಥಟ್ಟನೇ ನೆನಪಿಗೆ ಬರೋದು ಶಿಲ್ಪಕಲೆಯೊಂದಿಗೆ ವೈಭವಯುತವಾದ ಚನ್ನಕೇಶವನ ಪ್ರತಿರೂಪ. ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಈ ದೇವಾಲಯ ವಿಶ್ವಪ್ರಸಿದ್ಧ. ಹಲವು ವಿಶೇಷತೆಗಳನ್ನು ಹೊಂದಿರುವ ಈ ದೇವಾಲಯದಲ್ಲಿ ಸಾಮಾನ್ಯರಿಗೆ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಚಿತ್ರೀಕರಣ ನಿಷೇಧವಿದೆ. ಚಿತ್ರೀಕರಣಕ್ಕೆ ಅವಕಾಶವಿದ್ದರೂ ಸಹ ಹಲವು ಮಿತಿಗಳಿವೆ. ಆದ್ರೆ ತೆಲುಗು ಚಿತ್ರ ತಂಡವೊಂದಕ್ಕೆ ಚಿತ್ರೀಕರಣಕ್ಕೆ ಅನುವು ಮಾಡಿಕೊಡಲಾಗಿದ್ದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಜಿಲ್ಲೆಯ ಬೇಲೂರು ಹಳೇಬೀಡು ವಿಶ್ವವಿಖ್ಯಾತ ದೇವಾಲಯಗಳು. ಹೋಯ್ಸಳರ ದೊರೆ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣವಾಗಿರುವ ಬೇಲೂರಿನ ಚೆನ್ನಕೇಶವ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಇವರಲ್ಲಿ ಸಾಕಷ್ಟು ಮಂದಿ ವಿದೇಶಿಯರೂ ಸೇರಿರುತ್ತಾರೆ. ಸಾಮಾನ್ಯ ಜನರಿಗೆ ಈ ದೇವಾಲಯದಲ್ಲಿ ವೀಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಕೇಂದ್ರ ಸರ್ಕಾರ ಅಧೀನದ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿ ಇದಕ್ಕಿದೆ. ಇಲ್ಲಿ ಯಾವುದೇ ಚಿತ್ರೀಕರಣ ಮಾಡುವುದಾದರೆ ಪ್ರಾಚ್ಯ ವಸ್ತು ಇಲಾಖೆಯಿಂದ ಅನುಮತಿ ಪಡೆಯಬೇಕು. ಜೊತೆಗೆ ಕೆಲವು ನಿಬಂಧನೆಗೆ ಒಳಪಟ್ಟ ಅನುಮತಿ ಮಾತ್ರ ನೀಡಬೇಕು. ಹೀಗಿದ್ದಾಗ ಇಲ್ಲಿ ಕಳೆದ ಮೂರು ದಿನಗಳಿಂದ ತೆಲುಗು ಚಲನಚಿತ್ರವೊಂದರ ಶೂಟಿಂಗ್‍ಗೆ ಅನುಮತಿ ನೀಡಲಾಗಿದೆ. ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ನಾಯಕತ್ವದ ಈ ಚಿತ್ರದ ಚಿತ್ರೀಕರಣ ಇಲ್ಲಿ ನಡೆಯುತ್ತಿದೆ. ಒಟ್ಟು 7 ದಿನಗಳ ಚಿತ್ರೀಕರಣದಲ್ಲಿ ಈಗಾಗಲೇ ಮೂರು ದಿನಗಳ ಚಿತ್ರೀಕರಣ ಮುಗಿದಿದೆ.

    ಕೇವಲ ಚಿತ್ರೀಕರಣಕ್ಕೆ ಅನುಮತಿ ಪಡೆದಿರುವ ಚಿತ್ರತಂಡ, ದೇವಸ್ಥಾನದ ಒಳ ಆವರಣದಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿಲ್ಲದಿದ್ದರೂ ಸಹ ಹಲವು ಬದಲಾವಣೆಗಳನ್ನು ಮಾಡಿದೆ. ವಿಷ್ಣುವನ್ನ ಆರಾಧಿಸಲ್ಪಡುವ ದೇವಾಲಯದಲ್ಲಿ ಶಿವಲಿಂಗ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದಾರೆ. ಇದರಿಂದಾಗಿ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ.

    ದೇವಸ್ಥಾನಕ್ಕೆ ಉಗ್ರರ ಉಪಟಳವೂ ಇದ್ದು ಭದ್ರತೆಯೂ ಸಾಕಷ್ಟಿದೆ. ಜೊತೆಗೆ ಈ ದೇವಸ್ಥಾನ ವಿಶ್ವ ಪ್ರಸಿದ್ದವಾಗಿದ್ದು ಪ್ರತಿದಿನ ವಿದೇಶಿ ಪ್ರವಾಸಿಗರೂ ಸಹ ಇಲ್ಲಿಗೆ ಬರುತ್ತಾರೆ. ಆವರಣದಲ್ಲಿ ಚಿತ್ರೀಕರಣ ನಡೆಯೋದ್ರಿಂದ ಸಂಪೂರ್ಣ ದೇವಾಲಯವನ್ನು ಸುತ್ತು ಹಾಕುವುದು ಸಾಧ್ಯವಿಲ್ಲ. ಇದ್ರಿಂದಾಗಿ ವಿದೇಶಿಯರಿಗೂ ಸಹ ಇಲ್ಲಿ ಕೊಂಚ ನಿರಾಸೆಯಾಗಿದೆ.

    ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಇವರಿಗೆ ಅನುಮತಿ ನೀಡಿದ್ದರೂ ಸಹ ಯಾವುದೇ ನಿಬಂಧನೆಗಳನ್ನು ತಿಳಿಸಲಿಲ್ಲವೆ? ಅಥವಾ ಯಾರ ಪ್ರಭಾವ ಇಲ್ಲಿ ಕೆಲಸ ಮಾಡಿದೆ ಎನ್ನುವ ಪ್ರಶ್ನೆ ಈಗ ಎದ್ದಿದೆ. ಸಾಮಾನ್ಯ ಜನರಿಗೆ ಒಂದು ಕಾನೂನು, ಉಳಿದವರಿಗೆ ಒಂದು ಕಾನೂನು ಆದ್ರೆ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.