Tag: Telugu

  • ಗಡಿದಾಟಿದ ಡಿಟೆಕ್ಟಿವ್ ದಿವಾಕರ

    ಗಡಿದಾಟಿದ ಡಿಟೆಕ್ಟಿವ್ ದಿವಾಕರ

    ಬೆಂಗಳೂರು: ಕಿರಿಕ್ ಪಾರ್ಟಿ ಡೈರೆಕ್ಟರ್ ರಿಷಬ್ ಶೆಟ್ಟಿ ಅಭಿನಯದ ಚೊಚ್ಚಲ ಚಿತ್ರ ಡಿಟೆಕ್ಟಿವ್ ದಿವಾಕರ, ಕನ್ನಡಿಗರ ಮನೆ ಮನ ಗೆದ್ದು, ಈಗಾಗಲೇ 50 ದಿನದತ್ತ ಮುನ್ನುಗ್ಗುತ್ತಿದೆ. ಈ ಸಿನಿಮಾವನ್ನು ಒಲವೇ ಮಂದಾರ ಖ್ಯಾತಿಯ ಜಯತೀರ್ಥ ನಿರ್ದೇಶನ ಮಾಡಿದ್ದಾರೆ. ಸದ್ಯ ಬೆಲ್ ಬಾಟಂ ಸಿನಿಮಾ ತಮಿಳು, ತೆಲುಗು, ಹಿಂದಿ ಭಾಷೆಗಳಿಗೆ ರಿಮೇಕ್ ಆಗುತ್ತಿದ್ದು, ಆಯಾ ಭಾಷೆಗಳಲ್ಲಿ ಬೆಲ್ ಬಾಟಂನ್ನು ಯಾರು ಧರಿಸುತ್ತಾರೋ ಅನ್ನೋ ಕುತೂಹಲ ಎಲ್ಲರಲ್ಲಿದೆ.

    ಕನ್ನಡದಲ್ಲಿ ರಿಷಬ್ ಶೆಟ್ಟಿ ಮಾಡಿದ್ದ ಡಿಟೆಕ್ಟಿವ್ ಪಾತ್ರವನ್ನು ಹಿಂದಿಯಲ್ಲಿ ಆಯುಷ್ಮಾನ್ ಖುರಾನ ಅಭಿನಯಿಸುವ ಸಾಧ್ಯತೆ ಇದೆಯಂತೆ. ಹಿಂದಿ ರಿಮೇಕ್ ಹಕ್ಕನ್ನು ಖರೀದಿಸಿರುವ ಸಾಹಸ ನಿರ್ದೇಶಕ ರವಿ ವರ್ಮ ಆಯುಷ್ಮಾನ್ ಖುರಾನ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರಂತೆ. ಇನ್ನು ಆಯುಷ್ಮಾನ್ ನಿರ್ಧಾರವನ್ನಷ್ಟೇ ಹೇಳಬೇಕಿದೆ. ತೆಲುಗಿನಲ್ಲಿ ನಾನಿ ಈ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕಾಲಿವುಡ್ ನಲ್ಲಿ ನಟ ಆರ್ಯ ಪತ್ತೇದಾರಿ ದಿವಾಕರನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿಯಷ್ಟೇ ಹೊರ ಬೀಳಬೇಕಿದೆ.

    ಈಗಾಗಲೇ ಮೂರು ಭಾಷೆಗಳಲ್ಲಿ ರಿಮೇಕ್ ಹಕ್ಕು ಸೋಲ್ಡ್ ಔಟ್ ಆಗಿದೆ. ಎಪ್ಪತ್ತು ಎಂಬತ್ತರ ದಶಕದ ಕಾಲಘಟ್ಟದಲ್ಲಿ ನಡೆಯುವ ಚಿತ್ರದ ಪತ್ತೇದಾರಿ ಕಥೆ ಈಗ ಕರ್ನಾಟಕದಿಂದ ಗಡಿದಾಟಲು ರೆಡಿಯಾಗಿದೆ. ಕನ್ನಡದಲ್ಲಿ ಅಬ್ಬರಿಸಿದ ದಿವಾಕರ ಮಿಕ್ಕ ಭಾಷೆಗಳಲ್ಲಿ ಹೇಗೆಲ್ಲಾ ಕಮಾಲು ಮಾಡಬಹುದೆಂಬುದನ್ನು ಕಾದುನೋಡಬೇಕಿದೆ.

  • ರಾಜ್ಯದಲ್ಲಿ ಜೋರಾದ ಗೌಡ್ತಿ ಗುದ್ದಾಟ- ಆದಿಚುಂಚನಗಿರಿ ಮಠಕ್ಕಿಂದು ಸುಮಲತಾ ಭೇಟಿ

    ರಾಜ್ಯದಲ್ಲಿ ಜೋರಾದ ಗೌಡ್ತಿ ಗುದ್ದಾಟ- ಆದಿಚುಂಚನಗಿರಿ ಮಠಕ್ಕಿಂದು ಸುಮಲತಾ ಭೇಟಿ

    ಮಂಡ್ಯ/ಬೆಂಗಳೂರು: ಒಂದೆಡೆ ಆಪರೇಷನ್ ಕಮಲ ಜೋರಾಗಿದ್ರೆ, ಮತ್ತೊಂದೆಡೆ ಗೌಡ್ತಿಯರ ಗದ್ದಲ ಜೋರಾಗಿದೆ. ಜೆಡಿಎಸ್ ಟೀಕೆಯ ನಡುವೆಯೇ ಇಂದು ಆದಿಚುಂಚನಗಿರಿ ಮಠಕ್ಕೆ ಸುಮಲತಾ ಅಂಬರೀಶ್ ಭೇಟಿ ಕೊಡುತ್ತಿದ್ದಾರೆ. ಇತ್ತ ಅನಿತಾ ಕುಮಾರಸ್ವಾಮಿ ಕೂಡಾ ನಾನು ತೆಲುಗಿನವಳು ಅಲ್ಲ ಅಂತಿದ್ದಾರೆ.

    ಸುಮಲತಾ ಆಂಧ್ರದ ಗೌಡ್ತಿ ಅಂತಾ ಜೆಡಿಎಸ್ ಎಂಎಲ್‍ಸಿ ಶ್ರೀಕಂಠೇಗೌಡ ಟೀಕೆ ಮಾಡಿದ್ರೆ ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ಜೆಡಿಎಸ್ ನಾಯಕರ ಟೀಕೆಗೆ ಕ್ಯಾರೇ ಎನ್ನದ ಸುಮಲತಾ ಅಂಬರೀಶ್ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಕಾಲಭೈರವೇಶ್ವರನ ಸನ್ನಿಧಾನದಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಪೂಜೆ ಸಲ್ಲಿಸಲಿದ್ದಾರೆ. ನಂತರ ರಾಜಕೀಯ ಪ್ರವೇಶದ ಬಗ್ಗೆ ನಿರ್ಮಲಾನಂದ ಸ್ವಾಮೀಜಿ ಜೊತೆ ಚರ್ಚಿಸಲಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

    ಮಂಡ್ಯ ಫೀಲ್ಡ್‍ನಲ್ಲಿ ರಾಜಕೀಯದ ರಣರಂಗಕ್ಕೆ ಸುಮಲತಾ ವೇದಿಕೆ ಗಟ್ಟಿಮಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ ಶಾಸಕಿ, ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಸಣ್ಣದಾಗಿ ಕನಲಿ ಹೋಗಿದ್ದಾರೆ. ಜಾಗ್ವಾರ್ ಚಿತ್ರದ ಸಂದರ್ಶದಲ್ಲಿ ಸಿಎಂ “ನನ್ನ ಪತ್ನಿಯೂ ತೆಲುಗು ಮೂಲದವಳು” ಎಂದಿರುವ ಹಳೆಯ ವಿಡಿಯೋ ಈಗ ವೈರಲ್ ಆಗಿದೆ. ಇದರಿಂದ ಜೆಡಿಎಸ್ ಬುಡಕ್ಕೆ ಬಂದಿರುವ ತಪ್ಪನ್ನು ಅನಿತಾ ಸರಿಮಾಡಲು ನಿಂತಿದ್ದಾರೆ. ಅಲ್ಲದೆ ಮಾಧ್ಯಮದವರ ಬಳಿ ಬಂದು, ನೀವೆಲ್ಲ ಸುದ್ದಿ ಮಾಡ್ತಿರುವಂತೆ ನಾನು ತೆಲುಗಿನವಳಲ್ಲ, ಕನ್ನಡತಿ. ಕೋಲಾರ ಜಿಲ್ಲೆ ನನ್ನ ಮೂಲ. ನನಗೆ ತೆಲುಗು ಒಂದಕ್ಷರನೂ ಬರಲ್ಲ ಅಂದಿದ್ದಾರೆ.

    ಒಟ್ಟಿನಲ್ಲಿ ಜೆಡಿಎಸ್ ಕಟು ಟೀಕೆಯಿಂದ ಸುಮಲತಾ ಕೊಂಚ ಸ್ಟ್ರಾಂಗ್ ಆಗಿಯೇ ಜೆಡಿಎಸ್‍ಗೆ ಏಟು ಕೊಡುವ ಸಾಧ್ಯತೆ ಇದೆ. ಜೆಡಿಎಸ್ ಮಾಡಿರುವ ತೆಲುಗು, ಗೌಡ್ತಿ ಡ್ಯಾಮೇಜನ್ನು ಸರಿಪಡಿಸಲು ಅನಿತಾನೂ ರೆಡಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ತೆಲುಗಿನವಳಲ್ಲ, ಕನ್ನಡದವಳು: ಅನಿತಾ ಕುಮಾರಸ್ವಾಮಿ

    ನಾನು ತೆಲುಗಿನವಳಲ್ಲ, ಕನ್ನಡದವಳು: ಅನಿತಾ ಕುಮಾರಸ್ವಾಮಿ

    ಬೆಂಗಳೂರು: ನಾನು ತೆಲುಗಿನವಳಲ್ಲ, ಕನ್ನಡದವಳು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕೆಲವು ಮಾಧ್ಯಮಗಳಲ್ಲಿ ನಾನು ತೆಲುಗಿನವಳು ಎಂದು ತೋರಿಸುತ್ತಿದ್ದಾರೆ. ಅದು ಸಿನಿಮಾ ವಿಚಾರದಲ್ಲಿ ಮಾತಾನಾಡಿರುವುದು. ನಾನು ಕನ್ನಡದವಳು. ನನಗೆ ತೆಲುಗು ಒಂದು ವರ್ಡ್ ಬರಲ್ಲ. ನಾನು ಮೂಲತಃ ಕೋಲಾರ, ಚಿಕ್ಕಬಳ್ಳಾಪುರದವಳು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಇರುವುದರ ಕಾರಣ ಅಲ್ಲಿ ತೆಲುಗಿನವರು ಇದ್ದಾರೆ. ಹಾಗಂತ ನಾನು ತೆಲುಗಿನವಳಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

    ಶ್ರೀಕಂಠೇಗೌಡ ಸುಮಲತಾ ಬಗ್ಗೆ ಹೇಳಿಕೆ ಕೊಟ್ಟ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ನಾನು ಮಾತ್ರ ಕನ್ನಡದವಳು. ನನಗೂ ತೆಲುಗಿಗೂ ಸಂಬಂಧ ಇಲ್ಲ. ಅಲ್ಲಿ ಭಾಷೆ ಮಾತಾನಾಡಬಹುದು. ಕುಮಾರಸ್ವಾಮಿ ಸಿನಿಮಾ ವಿಚಾರದ ಬಗ್ಗೆ ಮಾತಾನಾಡುವಾಗ ಹೇಳಿರಬಹುದು. ಇದಕ್ಕೆ ರಾಜಕೀಯ ಬೆರೆಸಬೇಡಿ ಎಂದು ಅನಿತಾ ಕುಮಾರಸ್ವಾಮಿ ಅವರು ಹೇಳಿದ್ದಾರೆ.

    ಯಡಿಯೂರಪ್ಪ ಅವರು ಮೂರು ನಾಲ್ಕು ದಿನ ಸಿಎಂ ಆಗಿ ಕುರ್ಚಿ ಕೈತಪ್ಪಿ ಹೋಗಿದ್ದರಿಂದ ತಬ್ಬಿಬ್ಬು ಆಗಿದ್ದಾರೆ. ಅದಕ್ಕೆ ಕೊನೆ ಕ್ಷಣದ ಯತ್ನ ಮಾಡುತ್ತಿದ್ದಾರೆ. ಇದೇ ವೇಳೆ ಬಜೆಟ್ ಬಗ್ಗೆ ಮಾತನಾಡಿದ ಅವರು ಬಜೆಟ್ ಚೆನ್ನಾಗಿ ಇರುತ್ತೆ. ಮಹಿಳೆ, ಯುವಕರ, ಬಡವರ ಪರ ಬಜೆಟ್ ಇರಲಿ ಎಂದು ಸಿಎಂಗೆ ಸಲಹೆ ಕೊಟ್ಟಿದ್ದೇನೆ ಎಂದು ನಗುತ್ತಾ ಅನಿತಾ ಅವರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೆರೆ ಕಾಣುವ ಮೊದಲೇ ಹೆಚ್ಚಿದ ಬೇಡಿಕೆ, ಮಲಯಾಳಂಗೆ ಡಬ್ ಆಯ್ತು ‘ಉದ್ಘರ್ಷ’

    ತೆರೆ ಕಾಣುವ ಮೊದಲೇ ಹೆಚ್ಚಿದ ಬೇಡಿಕೆ, ಮಲಯಾಳಂಗೆ ಡಬ್ ಆಯ್ತು ‘ಉದ್ಘರ್ಷ’

    ಥ್ರಿಲ್ಲರ್ ಸಿನಿಮಾಗಳ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ದಶಕಗಳ ನಂತರ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡ್ತಾರೆ ಅಂದಾಗಲೇ ಅವರ ಅಭಿಮಾನಿಗಳಲ್ಲಿ ಪುಳಕವುಂಟಾಗಿತ್ತು. ಇನ್ನು ದೇಸಾಯಿ ಉದ್ಘರ್ಷ ಚಿತ್ರದ ಫಸ್ಟ್‌ಲುಕ್, ಫಸ್ಟ್‌ಲುಕ್ ಟೀಸರ್, ಪೋಸ್ಟರ್ಸ್ ಒಂದಕ್ಕೊಂದು ವಿಭಿನ್ನವಾಗಿದ್ದು ಚಿತ್ರ ರಸಿಕರ ನಿರೀಕ್ಷೆಯನ್ನು ಹೆಚ್ಚಿಸಿದೆ.


    ಈ ನಡುವೆ ಇದೇ ಮೊದಲ ಬಾರಿಗೆ ಸುನೀಲ್ ಕುಮಾರ್ ದೇಸಾಯಿ ಬಹು ಭಾಷಾ ಚಿತ್ರ ಮಾಡಿದ್ದು ಉದ್ಘರ್ಷ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಲದೇ, ತಮಿಳಿಗೆ ಉಚ್ಚಕಟ್ಟಂ ಅನ್ನೋ ಹೆಸರಿನಲ್ಲಿ ಡಬ್ ಕೂಡ ಮಾಡಿದ್ದಾರೆ. ಆದ್ರೆ, ಈಗ ಲೇಟೆಸ್ಟ್ ವಿಷಯವೆಂದರೆ, ದೇಸಾಯಿ ಚಿತ್ರಕ್ಕೆ ಮಲಯಾಳಂನಲ್ಲೂ ಬೇಡಿಕೆ ಬಂದಿದ್ದು, ಆ ಭಾಷೆಗೂ ಚಿತ್ರವನ್ನು ದೇಸಾಯಿ ಡಬ್ ಮಾಡಿದ್ದಾರೆ. ದೇಸಾಯಿ ಚಿತ್ರಗಳು ಈ ಹಿಂದೆಯೂ ಮಲಯಾಳಂಗೆ ಡಬ್ ಆಗಿದ್ದವು.

    ಈ ಬಗ್ಗೆ ವಿವರಣೆ ನೀಡಿರೋ ದೇಸಾಯಿ, ನನ್ನ ತರ್ಕ, ನಿಷ್ಕರ್ಷ, ಮರ್ಮ ಚಿತ್ರ ಈಗಾಗಲೇ ಮಲಯಾಳಂ ಭಾಷೆಗೆ ಡಬ್ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಇದೇ ಹಿನ್ನೆಲೆಯಲ್ಲಿ ಮಲಯಾಳಂ ಇಂಡಸ್ಟ್ರೀಯಿಂದ ಉದ್ಘರ್ಷಕ್ಕೂ ಬೇಡಿಕೆ ಬಂದ ಹಿನ್ನೆಲೆ, ನಾವೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ. ಈ ಗಾಗಲೇ ಕನ್ನಡ, ತೆಲುಗು, ತಮಿಳು ಡಬ್ಬಿಂಗ್ ಮುಗಿದಿದ್ದು ಮಲಯಾಳಂ ಭಾಷೆಯ ಡಬ್ಬಿಂಗ್ ಕಾರ್ಯವೂ ಭರದಿಂದ ಸಾಗಿದೆ ಅಂತಾ ಹೇಳಿದ್ದಾರೆ. ಅಲ್ಲದೇ, ಅವರೇ ಹೇಳುವಂತೆ ಶೀಘ್ರದಲ್ಲಿಯೇ ನಾಲ್ಕೂ ಭಾಷೆಗಳಲ್ಲಿ ಶೀಘ್ರದಲ್ಲಿಯೇ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡಲಾಗುತ್ತಿದೆಯಂತೆ.


    ಯಾರೆಲ್ಲ ನಟಿಸಿದ್ದಾರೆ ಗೊತ್ತಾ..?!
    ಇನ್ನು, ಚಿತ್ರದಲ್ಲಿ ಸಿಂಗಂ 3 ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ನಾಯಕ ನಟರಾಗಿ ನಟಿಸಿದ್ದರೆ, ತಮಿಳಿನ ಕಬಾಲಿ ಖ್ಯಾತಿಯ ಧನ್ಸಿಕಾ ಹಾಗೂ ನವ ನಟಿ ತಾನ್ಯಾ ಹೋಪ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅಲ್ಲದೇ ಬಾಲಿವುಡ್ ವಿಲನ್ ಕಬೀರ್ ಸಿಂಗ್ ದುಹಾನ್, ತೆಲುಗಿನ ಬಾಹುಬಲಿ ಖ್ಯಾತಿಯ ಪ್ರಭಾಕರ್, ಶ್ರವಣ್ ರಾಘವೇಂದ್ರ, ವಂಶಿ ಕೃಷ್ಣ, ಶ್ರದ್ಧಾ ದಾಸ್ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುಭಾಷಾ ತಾರೆ, ಕನ್ನಡಿಗ ಕಿಶೋರ್ ಮತ್ತೊಂದು ಪ್ರಮುಖ ಹಾಗೂ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದರೆ, ಹರ್ಷಿಕಾ ಪೂಣಚ್ಚ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪಿ. ರಾಜನ್ ಹಾಗೂ ದಿವಂಗತ ವಿಷ್ಣುವರ್ಧನ್ ಅವರು ಕ್ಯಾಮರಾ ವರ್ಕ್ ಮಾಡಿದ್ದರೆ, ಹಿಂದಿಯ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಸಂಜೋಯ್ ಚೌಧುರಿ ಸಂಗೀತ ನೀಡಿದ್ದಾರೆ. ಇನ್ನು ಚಿತ್ರಕ್ಕೆ ನಿರ್ದೇಶಕ ದೇಸಾಯಿ ಅವರ ಸ್ನೇಹಿತ ಆರ್. ದೇವರಾಜ್ ಹಣ ಹೂಡಿದ್ದು, ರಾಜೇಂದ್ರ ಹಾಗೂ ಡಿ. ಮಂಜುನಾಥ್ ಸಹ ನಿರ್ಮಾಪಕರಾಗಿದ್ದಾರೆ. ಡಿ ಕ್ರಿಯೇಶನ್ಸ್ ಬ್ಯಾನರ್ ಅಡಿ ಚಿತ್ರ ಮೂಡಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುತ್ತಿನ ನಗರಿಯಲ್ಲಿ ಯಶ್ ತೆಲುಗು ಚಮಕ್!

    ಮುತ್ತಿನ ನಗರಿಯಲ್ಲಿ ಯಶ್ ತೆಲುಗು ಚಮಕ್!

    -ತೆಲುಗಿನಲ್ಲಿ ಮಾತಾಡಿದ್ದು ಯಾಕೆ? ವೇದಿಕೆಯಲ್ಲೇ ರಾಕಿ ಸ್ಪಷ್ಟನೆ

    ಹೈದರಾಬಾದ್: ಭಾನುವಾರ ಸಂಜೆ ಹೈದರಾಬಾದ್ ನಲ್ಲಿ ನಡೆದ ಕೆಜಿಎಫ್ ಚಿತ್ರದ ಕಾರ್ಯಕ್ರಮದಲ್ಲಿ ನಟ ಯಶ್ ಅಲ್ಲಿಯ ಅಭಿಮಾನಿಗಳಿಗಾಗಿ ತೆಲುಗು ಭಾಷೆಯಲ್ಲಿ ಮಾತನಾಡುವ ಮೂಲಕ ಖುಷಿ ನೀಡಿದರು. ಎಲ್ಲರಿಗೂ ನಮಸ್ಕಾರ ಎಂದು ಮಾತು ಆರಂಭಿಸಿದ ಯಶ್, ನನಗೆ ಅಷ್ಟಾಗಿ ತೆಲುಗು ಭಾಷೆಯ ಮೇಲೆ ಹಿಡಿತವಿಲ್ಲ. ಆದ್ರೂ ನಿಮಗೆಲ್ಲರಿಗಾಗಿ ನಿಧಾನವಾದ್ರೂ ನಿಮ್ಮ ಮಾತೃ ಭಾಷೆಯಲ್ಲಿ ಮಾತನಾಡುತ್ತೇನೆ. ಪದಗಳ ಬಳಕೆಯಲ್ಲಿ ಮಿಸ್ಟೇಕ್ ಆದ್ರೆ ಕ್ಷಮಿಸಿ ಅಂತಾ ಹೇಳಿದ್ರು.

    ನೀನು ಎಲ್ಲಿ ಹೋಗ್ತಿಯಾ? ಅಲ್ಲಿಯ ಭಾಷೆಗೆ, ಸಂಸ್ಕೃತಿಗೆ ಗೌರವ ನೀಡಬೇಕು. ಯಾಕೆಂದರೆ ಅಲ್ಲಿಯ ಜನರು ನಮ್ಮಲ್ಲಿ ತಮ್ಮತನವನ್ನು ನೋಡುತ್ತಾರೆ. ಕರ್ನಾಟಕದಲ್ಲಿಯೂ ನಮ್ಮ ಕಲಾವಿದರು ಕನ್ನಡ ಮಾತನಾಡಲಿ ಎಂದು ಕರುನಾಡ ಜನರು ಆಸೆ ಪಡುತ್ತಾರೆ. ಹಾಗೆಯೇ ನಿಮಗೂ ಹೊಸ ನಟ ನಮ್ಮ ಮಾತೃ ಭಾಷೆ ಬಳಸಲಿ ಎಂಬ ಭಾವನೆ ಇರುತ್ತೆ. ಹಾಗಾಗಿ ನಾನಿಂದು ನಿಮಗಾಗಿ ನಿಮ್ಮ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ ಅಂತಾ ಯಶ್ ತಿಳಿಸಿದರು.

    ಕೆಜಿಎಫ್ ಚಿತ್ರ ನನ್ನಿಂದ ಮಾತ್ರ ಆಗಲ್ಲ. ತೆರೆಯ ಹಿಂದೆ ಹಲವರು ಕೆಲಸ ಮಾಡಿದ್ದು, ಇಡೀ ತಂತ್ರಜ್ಞರ ಶ್ರಮ ಕೆಜಿಎಫ್ ಚಿತ್ರದಲ್ಲಿದೆ. 12 ವರ್ಷಗಳ ಹಿಂದೆ ಶೋಭು ಸರ್ ಧಾರಾವಾಹಿಯಲ್ಲಿ ನಟಿಸಿದ್ದೇನೆ. ನಮ್ಮ ಚಿತ್ರದ ಬಿಡುಗಡೆಗೆ ಶೋಭು ಸರ್, ಸಾಯಿ ಸರ್ ಮತ್ತು ರಾಜಮೌಳಿ ಸರ್ ತುಂಬಾನೇ ಸಹಾಯ ಮಾಡಿದ್ದಾರೆ. ತೆಲುಗು, ತಮಿಳು, ಮಲೆಯಾಳ, ಕನ್ನಡ, ಹಿಂದಿ ಇಂಡಸ್ಟ್ರಿ ಅಂತಾ ಯಾವುದು ಬೇರೆ ಅಲ್ಲ. ಎಲ್ಲವೂ ಭಾರತದ ಸಿನಿಮಾಗಳು. ನಮ್ಮಲ್ಲಿ ಅವರ ಚಿತ್ರಗಳಿಗೆ ನಾವು ಸಹಾಯ ಮಾಡೋದು, ನಮ್ಮ ಸಿನಿಮಾಗಳಿಗೆ ನಾವು ಸಹಾಯ ಮಾಡುತ್ತೇವೆ. ಹೀಗೆ ಎಲ್ಲರಲ್ಲಿ ಹೊಂದಾಣಿಕೆ ಬಂದಾಗ ಎಲ್ಲ ಸಿನಿಮಾಗಳಿಗೆ ಮಾರುಕಟ್ಟೆ ಲಭ್ಯವಾಗುತ್ತದೆ ಎಂದು ಯಶ್ ಆಶಯ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪವನ್ ಕಲ್ಯಾಣ್ ಬಣ್ಣದ ಲೋಕಕ್ಕೆ ವಿದಾಯ

    ಪವನ್ ಕಲ್ಯಾಣ್ ಬಣ್ಣದ ಲೋಕಕ್ಕೆ ವಿದಾಯ

    ಹೈದರಾಬಾದ್: ತೆಲುಗಿನ ಪ್ರಖ್ಯಾತ ನಟ ಪವನ್ ಕಲ್ಯಾಣ್ ಅವರು ತಮ್ಮ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದಾರೆ.

    ಪವನ್ ಕಲ್ಯಾಣ್ ಅವರು ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಿದಾಡಿದ್ದು, ಇದೀಗ ಮುಂದಿನ ಚಿತ್ರಕ್ಕೆ ಸಹಿ ಮಾಡಿಲ್ಲ ಅಂತ ಹೇಳುವ ಮೂಲಕ ಊಹಾಪೋಹಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.

    ಈ ಬಗ್ಗೆ ಟ್ವಿಟ್ಟರ್ ನಲ್ಲಿ ಒಂದು ಪತ್ರವನ್ನು ಪೋಸ್ಟ್ ಮಾಡಿರುವ ನಟ, ನಾನು ಒಂದು ಚಿತ್ರಕ್ಕೆ ಸಹಿ ಮಾಡಿರುವುದಾಗಿ ಸುದ್ದಿ ಹರಿದಾಡುತ್ತಿದೆ. ಆದ್ರೆ ಇದು ಶುದ್ಧ ಸುಳ್ಳಾಗಿದೆ. ನನಗೆ ಸಿನಿಮಾದಲ್ಲಿ ನಟಿಸಲು ಸಮಯವಿಲ್ಲ. ಹೀಗಾಗಿ ನಾನು ಯಾವುದೇ ಚಿತ್ರದಲ್ಲಿ ನಟನೆ ಮಾಡುವುದಿಲ್ಲ. ಬದಲಾಗಿ ನನ್ನನ್ನು ನಾನು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ನನ್ನ ಉಳಿದ ಜೀವನ ಜನರ ಸೇವೆಗೆ ಮುಡಿಪು ಎಂದು ಗಬ್ಬರ್ ಸಿಂಗ್ ಪವನ್ ಕಲ್ಯಾಣ್ ಹೇಳಿದ್ದಾರೆ.

    ಖುಷಿ, ಅತ್ತಾರಿಂಟಿಕಿ ದಾರೇದಿ, ಗಬ್ಬರ್ ಸಿಂಗ್ ಸಿನಿಮಾಗಳ ಮೂಲಕ ಮನೆ ಮಾತಾಗಿದ್ದ ನಟ, 2014ರಿಂದ ಜನಸೇನಾ ಪಕ್ಷದ ಮೂಲಕ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿಜಯ ದೇವರಕೊಂಡ ಟ್ಯಾಕ್ಸಿವಾಲ ಹಿಂದಿಕ್ಕಿದ ಕೆಜಿಎಫ್

    ವಿಜಯ ದೇವರಕೊಂಡ ಟ್ಯಾಕ್ಸಿವಾಲ ಹಿಂದಿಕ್ಕಿದ ಕೆಜಿಎಫ್

    – ದೇಶದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯ ಐದನೇ ಸ್ಥಾನದಲ್ಲಿ ಕೆಜಿಎಫ್

    ಬೆಂಗಳೂರು: ಈ ವರ್ಷದ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ, ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ ಐದನೇ ಸ್ಥಾನದಲ್ಲಿದೆ. ಖ್ಯಾತ ಸಿನಿಮಾ ಡೇಟಾಬೇಸ್ ವೆಬ್‍ಸೈಟ್ ಇಂಟರ್ ನೆಟ್ ಮೂವಿ ಡೇಟಾ ಬೇಸ್(ಐಎಂಡಿಬಿ) ಪಟ್ಟಿಯಲ್ಲಿ ತೆಲುಗಿನ ವಿಜಯ ದೇವರಕೊಂಡ ಅಭಿನಯದ ‘ಟ್ಯಾಕ್ಸಿವಾಲಾ’ ಆರನೇ ಸ್ಥಾನದಲ್ಲಿದೆ. ಈ ಪಟ್ಟಿಯ ಮೂಲಕ ಕನ್ನಡ ಸಿನಿಮಾಗಳಿಗೆ ದೇಶದಾದ್ಯಂತ ಮಾರುಕಟ್ಟೆ ಲಭ್ಯವಾಗಿತ್ತಿರೋದು ಖುಷಿಯ ವಿಚಾರವಾಗಿದೆ.

    ಐಎಂಡಿಬಿ ಪಟ್ಟಿಯ ಮೊದಲ ಸ್ಥಾನದಲ್ಲಿ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ‘2.0’ ಮೊದಲ ಸ್ಥಾನದಲ್ಲಿದೆ. ನಂತರ ತಮಿಳಿನ ಸರ್ಕಾರ್, ಹಿಂದಿಯ ಜೀರೋ, ಥಗ್ಸ್ ಆಫ್ ಹಿಂದೋಸ್ತಾನ್ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿವೆ. 5ನೇ ಸ್ಥಾನದಲ್ಲಿ ಕೆಜಿಎಫ್ ಇದೆ. ಉಳಿದಂತೆ ತೆಲುಗಿನ ಟ್ಯಾಕ್ಸಿವಾಲಾ, ಹಿಂದಿಯ ಮಿರ್ಜಾಪುರ, ಮೊಹಲ್ಲಾ ಐಸಿ, ಕೇದರನಾಥ್ ಮತ್ತು ಮೈರ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.

    ದೇಶಾದ್ಯಂತ ಸುದ್ದಿ ಮಾಡಿದ ಬೇರೆ ಭಾಷೆಗಳ ಚಿತ್ರಗಳ ಕಾರ್ಯಕ್ರಮಗಳಿಗೆ ಕನ್ನಡದ ಮಾಧ್ಯಮಕ್ಕೆ ಆಗಾಗ ಕರೆ ಬರೋದಿದೆ. ಆದರೆ ಬೇರೆ ಭಾಷೆಗಳ ಮಾಧ್ಯಮ ಮಂದಿಯೇ ಕನ್ನಡ ಚಿತ್ರದ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿಳಿದ್ದಿಲ್ಲ. ಆದರೀಗ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ತೆಲುಗು ಮತ್ತು ತಮಿಳು ಮಾಧ್ಯಮದವರೇ ಬೆಂಗಳೂರಿಗೆ ಬರುವಂತೆ ಮಾಡಿದೆ.

    ಇದೇ ತಿಂಗಳ 9ರಂದು ಅದ್ಧೂರಿ ಸಮಾರಂಭವೊಂದರ ಮೂಲಕ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ಅದಕ್ಕೆ ತೆಲುಗು ಮತ್ತು ತಮಿಳು ಮಾಧ್ಯಮಗಳಿಗೂ ಆಹ್ವಾನ ಹೋಗಿದೆ. ಅವರೂ ಕೂಡಾ ಬರಲು ಉತ್ಸುಕರಾಗಿದ್ದಾರೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ಘನತೆಯನ್ನು ದಕ್ಷಿಣ ಭಾರತೀಯ ಚಿತ್ರ ರಂಗಕ್ಕೆ ಪರಿಚಯಿಸುವಂಥಾ ವಿದ್ಯಮಾನ. ಸಿನಿಮಾ ಡಿಸೆಂಬರ್ 21ರಂದು ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಜಿಎಫ್ ಪ್ರಭೆಯಲ್ಲಿ ಹೊಂಬಾಳೆ ದಾಖಲೆ!

    ಕೆಜಿಎಫ್ ಪ್ರಭೆಯಲ್ಲಿ ಹೊಂಬಾಳೆ ದಾಖಲೆ!

    ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ ಚಿತ್ರವೀಗ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಅಬ್ಬರದ ಅಲೆ ಶುರುವಿಟ್ಟಿದೆ. ಕನ್ನಡ ಚಿತ್ರವೊಂದು ಬಾಲಿವುಡ್ ಚಿತ್ರಗಳನ್ನೇ ಮೀರಿಸಿ ಟಾಕ್ ಕ್ರಿಯೇಟ್ ಮಾಡೋದೇನೂ ಕಡಿಮೆ ವಿಚಾರವಲ್ಲ. ಅದರ ರೂವಾರಿಯಾಗಿರೋ ಕೆಜಿಎಫ್ ಚಿತ್ರದ ಹಿಂದೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಕನಸಿದೆ. ಈ ಸಂಸ್ಥೆಯೀಗ ಕನ್ನಡ ಚಿತ್ರರಂಗಕ್ಕೇ ಕಿರೀಟದಂಥಾದ್ದೊಂದು ಕೆಲಸ ಮಾಡಲೂ ಮುಂದಾಗಿದೆ.

    ದೇಶಾದ್ಯಂತ ಸುದ್ದಿ ಮಾಡಿದ ಬೇರೆ ಭಾಷೆಗಳ ಚಿತ್ರಗಳ ಕಾರ್ಯಕ್ರಮಗಳಿಗೆ ಕನ್ನಡದ ಮಾಧ್ಯಮಕ್ಕೆ ಆಗಾಗ ಕರೆ ಬರೋದಿದೆ. ಆದರೆ ಬೇರೆ ಭಾಷೆಗಳ ಮಾಧ್ಯಮ ಮಂದಿಯೇ ಕನ್ನಡ ಚಿತ್ರದ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿಳಿದದ್ದಿಲ್ಲ. ಆದರೀಗ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ತೆಲುಗು ಮತ್ತು ತಮಿಳು ಮಾಧ್ಯಮದವರೇ ಬೆಂಗಳೂರಿಗೆ ಬರುವಂತೆ ಮಾಡಿದೆ!

    ಇದೇ ತಿಂಗಳ 9ರಂದು ಅದ್ಧೂರಿ ಸಮಾರಂಭವೊಂದರ ಮೂಲಕ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ಅದಕ್ಕೆ ತೆಲುಗು ಮತ್ತು ತಮಿಳು ಮಾಧ್ಯಮಗಳಿಗೂ ಆಹ್ವಾನ ಹೋಗಿದೆ. ಅವರೂ ಕೂಡಾ ಬರಲು ಉತ್ಸುಕರಾಗಿದ್ದಾರೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ಘನತೆಯನ್ನು ದಕ್ಷಿಣ ಭಾರತೀಯ ಚಿತ್ರ ರಂಗಕ್ಕೆ ಪರಿಚಯಿಸುವಂಥಾ ವಿದ್ಯಮಾನ.

    ಇದುವರೆಗೂ ಸಾಲು ಸಾಲಾಗಿ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ, ಒಳ್ಳೆಯ ಚಿತ್ರಗಳನ್ನು ವಿತರಣೆ ಮಾಡೋ ಮೂಲಕ ಚಿತ್ರರಂಗದ ಭಾಗವಾಗಿರುವ ಸಂಸ್ಥೆ ಹೊಂಬಾಳೆ. ಈಗ ಬೃಹದಾಕಾರವಾಗಿ ಬೆಳೆದು ನಿಂತಿರೋ ಈ ಸಂಸ್ಥೆ ಕೆಜಿಎಫ್ ಚಿತ್ರವನ್ನು ಬಹು ಕೋಟಿ ವ್ಯಯಿಸಿ ರೂಪಿಸಿದೆ. ಜೊತೆಗೆ ಇಂಥಾದ್ದೊಂದು ದಾಖಲೆಗೂ ರೂವಾರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಾಸಿಪ್ ಗಳಿಗೆ ರಶ್ಮಿಕಾ ಮಂದಣ್ಣ ಸ್ಪಷ್ಟನೆ

    ಗಾಸಿಪ್ ಗಳಿಗೆ ರಶ್ಮಿಕಾ ಮಂದಣ್ಣ ಸ್ಪಷ್ಟನೆ

    ಬೆಂಗಳೂರು: ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಕನ್ನಡ ‘ವೃತ್ರ’ ಸಿನಿಮಾದಿಂದ ಹೊರ ಬಂದಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು. ಈಗ ಈ ಗಾಸಿಪ್ ಗಳಿಗೆ ಸ್ವತಃ ರಶ್ಮಿಕಾ ಮಂದಣ್ಣ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

    ‘ವೃತ್ರ’ ಸಿನಿಮಾವನ್ನು ಗೌತಮ್ ಅಯ್ಯರ್ ನಿರ್ದೇಶನ ಮಾಡುತ್ತಿದ್ದರು. ಆದರೆ ರಶ್ಮಿಕಾ ಈ ಸಿನಿಮಾದಿಂದ ಹೊರ ಬಂದಿದ್ದರ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ”ನಾನು ‘ವೃತ್ರ’ ಸಿನಿಮಾದಲ್ಲಿ ಇರುವುದಿಲ್ಲ. ನನ್ನ ವೃತ್ತಿ ಜೀವನದ ಆರಂಭದಲ್ಲಿಯೇ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಉತ್ತಮವಲ್ಲ ಎಂದು ನಾನು ಭಾವಿಸಿದ್ದೇನೆ. ಆದ್ದರಿಂದ ಈ ಬಗ್ಗೆ ನಾನು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ಬಳಿ ಚರ್ಚೆ ಮಾಡಿದ್ದೇನೆ. ಅವರು ನನ್ನ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡಿದ್ದಾರೆ. ಗೌತಮ್ ಹಾಗೂ ಚಿತ್ರ ತಂಡಕ್ಕೆ ನನ್ನ ಶುಭಾಶಯಗಳು ಮತ್ತು ಧನ್ಯವಾದಗಳು ” ಎಂದು ರಶ್ಮಿಕಾ ಮಂದಣ್ಣ ಬರೆದು ಟ್ವೀಟ್ ಮಾಡಿದ್ದಾರೆ.

    ಈಗಾಗಲೇ ‘ವೃತ್ರ’ ಸಿನಿಮಾಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಫೋಟೋ ಶೂಟ್ ಕೂಡ ಮಾಡಿಸಿದ್ದು, ರಶ್ಮಿಕಾ ಅವರ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ರಶ್ಮಿಕಾಗೆ ತನಿಖಾ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಬೇಕಿತ್ತು. ಆದರೆ ಈಗ ಅನಿವಾರ್ಯ ಕಾರಣಗಳಿಂದ ಕನ್ನಡ ಸಿನಿಮಾದಿಂದ ರಶ್ಮಿಕಾ ಹೊರ ಬಂದಿದ್ದಾರೆ.

    ಸದ್ಯಕ್ಕೆ ರಶ್ಮಿಕಾ ಟಾಲಿವುಡ್ ನಲ್ಲಿ ಬಹು ಬೇಡಿಕೆ ನಟಿಯಾಗಿದ್ದು, ಈಗಾಗಲೇ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ. ಈಗ ನಟ ನಾಗರ್ಜುನ್ ಮತ್ತು ನಾನಿ ಅಭಿನಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲದೇ ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ಮಾಡಿದ್ದ ನಟ ವಿಜಯ್ ದೇವರಕೊಂಡ ಜೊತೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

    ಮುಂದಿನ ವರ್ಷದ ಆರಂಭದವರೆಗೂ ರಶ್ಮಿಕಾ ಮಂದಣ್ಣ ಅವರ ಡೇಟ್ಸ್ ಬುಕ್ ಆಗಿದೆ. ಆದ್ದರಿಂದ ‘ವೃತ್ರ’ ಸಿನಿಮಾ ಮಾಡಲು ಸಮಯದ ಅಭಾವದಿಂದ ಈ ಸಿನಿಮಾದಿಂದ ಹೊರ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತೆಲುಗು ಕಾರ್ಯಕ್ರಮದಲ್ಲಿ ತನ್ನ ತವರೂರಿನ ಬಗ್ಗೆ ಮಾತನಾಡಿದ್ರು ರಶ್ಮಿಕಾ ಮಂದಣ್ಣ

    ತೆಲುಗು ಕಾರ್ಯಕ್ರಮದಲ್ಲಿ ತನ್ನ ತವರೂರಿನ ಬಗ್ಗೆ ಮಾತನಾಡಿದ್ರು ರಶ್ಮಿಕಾ ಮಂದಣ್ಣ

    ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗಿನ ರಿಯಾಲಿಟಿ ಶೋನಲ್ಲಿ ತನ್ನ ತವರೂರಿನ ಬಗ್ಗೆ ಮಾತನಾಡಿ “ನಾನು ಕೊಡಗಿನವಳು” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿದ ‘ಗೀತಾ ಗೋವಿಂದಂ’ ಚಿತ್ರ ಬ್ಲಾಕ್‍ಬಸ್ಟರ್ ಹಿಟ್ ಆಗಿದೆ. ಹಾಗಾಗಿ ರಶ್ಮಿಕಾ ಅವರನ್ನು ತೆಲುಗಿನ ಡ್ಯಾನ್ಸ್ ರಿಯಾಲಿಟಿ ಶೋ ‘ಆಟ ಜ್ಯೂನಿಯರ್ಸ್’ನಲ್ಲಿ ಸೆಲೆಬ್ರಿಟಿ ಜಡ್ಜ್ ಯಾಗಿ ಆಹ್ವಾನಿಸಿದ್ದರು.

    ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಹಾಲಕ್ಷ್ಮಿ ಎಂಬ ಹುಡುಗಿ ಭಾಗವಹಿಸುತ್ತಿದ್ದಾಳೆ. ಮಹಾಲಕ್ಷ್ಮಿ ನಾನು ಕರ್ನಾಟಕದವಳು ಎಂದು ಹೇಳಿದಾಗ ರಶ್ಮಿಕಾ ಹೆಮ್ಮೆಯಿಂದ ನಾನು ಕೊಡಗಿನವಳು ಎಂದು ಹೇಳಿದ್ದಾರೆ.

    ಮಹಾಲಕ್ಷ್ಮಿ ಪರ್ಫಮೆನ್ಸ್ ಮುಗಿಸಿದ ಬಳಿಕ ಆ ಕಾರ್ಯಕ್ರಮದ ನಿರೂಪಕ ರಶ್ಮಿಕಾ ಅವರಿಗೆ ಈ ಹುಡುಗಿಯ ಊರು ಯಾವುದು ಎಂದು ಕೇಳಿ ಎಂದು ಹೇಳಿದ್ದಾರೆ. ಬಳಿಕ ರಶ್ಮಿಕಾ ನಿನ್ನ ಊರು ಯಾವುದು ಎಂದು ಕೇಳಿದ್ದಾಗ ಮಹಾಲಕ್ಷ್ಮೀ ಕರ್ನಾಟಕ ಎಂದು ಉತ್ತರಿಸಿದ್ದಾಳೆ.

    ಮಹಾಲಕ್ಷ್ಮಿ ತನ್ನ ಊರು ಕರ್ನಾಟಕ ಎಂದು ಹೇಳಿದ ತಕ್ಷಣ ರಶ್ಮಿಕಾ “ಹೌದಾ.. ಸೂಪರ್, ಐ ಲವ್ ಯು ಎಂದು ಹೇಳಿದ್ದಾರೆ. ಅಲ್ಲದೇ ಸೆಲೆಬ್ರಿಟಿ ಜಡ್ಜ್ ಸೀಟಿನಲ್ಲೇ ಕುಳಿತು ಮಹಾಲಕ್ಷ್ಮಿಗೆ ಅಪ್ಪುಗೆ ಕೂಡ ನೀಡಿದ್ದಾರೆ.

    ಈ ವೇಳೆ ರಶ್ಮಿಕಾ ನಾನು ಕೊಡಗು ಅಂದು ಹೇಳಿದ್ದಾರೆ. ಆಗ ಕಾರ್ಯಕ್ರಮದ ನಿರೂಪಕ ಕೊಡಕ ಎಂದರೆ ಮಗ ಎಂದು ತಮಾಷೆ ಮಾಡಿದ್ದರು. ಆಗ ರಶ್ಮಿಕಾ ಕೊಡಗು ಅದು ಒಂದು ಜಿಲ್ಲೆ ಎಂದು ಹೇಳಿದ್ದರು. ಈ ವೇಳೆ ಮಹಾಲಕ್ಷ್ಮಿ ನಾನು ಶಿವಮೊಗ್ಗದ ಸೊರಬ ತಾಲೂಕಿನವಳು ಎಂದು ಹೇಳಿದ್ದಳು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv