Tag: television

  • ನೇಣು ಬಿಗಿದುಕೊಂಡು ನಟಿ ಆತ್ಮಹತ್ಯೆ

    ನೇಣು ಬಿಗಿದುಕೊಂಡು ನಟಿ ಆತ್ಮಹತ್ಯೆ

    ಮುಂಬೈ: ಬಾಲಿವುಡ್ ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.

    ನಟಿ ಸೆಜಲ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆಜಲ್ ಶರ್ಮಾ ‘ದಿಲ್ ತೋ ಹ್ಯಾಪಿ ಹೈ ಜಿ’ ಧಾರಾವಾಹಿಯಲ್ಲಿ ಸಿಮ್ಮಿ ಖೋಸ್ಲಾ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದರು. ಆದರೆ ಶುಕ್ರವಾರ ತಮ್ಮ ಮೀರಾ ರಸ್ತೆ ರೆಸಿಡೆನ್ಸಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶುಕ್ರವಾರ ಮುಂಜಾನೆ ನಟಿ ಶರ್ಮಾಗೆ ತನ್ನ ರೂಮ್ ಮೇಟ್ ಫೋನ್ ಮಾಡಿದ್ದಾರೆ. ಆದರೆ ಫೋನ್ ರಿಸೀವ್ ಮಾಡಿರಲಿಲ್ಲ. ಹೀಗಾಗಿ ಆಕೆಯ ರೂಮ್‍ಮೆಟ್ ಬಾಗಿಲನ್ನು ತೆರೆದು ನೋಡಿದಾಗ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿಯೇ ಶರ್ಮಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ರೂಮಿನಲ್ಲಿ ಡೆತ್‍ನೋಟ್ ಪತ್ತೆಯಾಗಿದ್ದು, ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದಾರೆ. ಸದ್ಯಕ್ಕೆ ಮೀರಾ ರಸ್ತೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ನಟಿ ಸೆಜಲ್ ಶರ್ಮಾ ಉದಯಪುರ ಮೂಲದವರಾಗಿದ್ದು, 2017 ರಲ್ಲಿ ಮುಂಬೈಗೆ ಬಂದು ನಟನಾ ವೃತ್ತಿಯನ್ನು ಮುಂದುವರಿಸಿದ್ದರು. ‘ ದಿಲ್ ತೋಹ್ ಹ್ಯಾಪಿ ಹೈ ಜಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದರು. ಶರ್ಮಾ ಅವರು ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ವೆಬ್ ಸರಣಿಯಲ್ಲೂ ಅಭಿನಯಿಸಿದ್ದಾರೆ.

    ನಿಜಕ್ಕೂ ಈ ಸುದ್ದಿ ಕೇಳಿ ನನಗೆ ಅಚ್ಚರಿಯಾಯಿತು. ನಾನು ಅವರನ್ನು 10 ದಿನಗಳ ಹಿಂದೆ ಭೇಟಿಯಾಗಿದ್ದೆ. ಅಲ್ಲದೇ ಭಾನುವಾರ ವಾಟ್ಸಪ್‍ನಲ್ಲಿ ಚಾಟ್ ಕೂಡ ಮಾಡಿದ್ದೆವು. ನಾನು 10 ದಿನಗಳ ಹಿಂದೆ ಅವರನ್ನು ಭೇಟಿಯಾದಾಗ ಶರ್ಮಾ ಚೆನ್ನಾಗಿದ್ದರು. ಆದರೆ ಇದ್ದಕ್ಕಿದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಶರ್ಮಾರ ಸಹನಟ ದುಃಖದಿಂದ ಹೇಳಿದ್ದಾರೆ.

  • ಕೊನೆಗೂ ಮುಕ್ತಾಯವಾಗಲಿದೆ ‘ಅಗ್ನಿಸಾಕ್ಷಿ’

    ಕೊನೆಗೂ ಮುಕ್ತಾಯವಾಗಲಿದೆ ‘ಅಗ್ನಿಸಾಕ್ಷಿ’

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.

    2013ರಿಂದ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿ ಮುಕ್ತಾಯವಾಗಲಿದೆ. ಅಗ್ನಿಸಾಕ್ಷಿ ಇಲ್ಲಿಯವರೆಗೂ 1500ಕ್ಕೂ ಹೆಚ್ಚು ಸಂಚಿಕೆ ಪ್ರಸಾರವಾಗಿದ್ದು, ಶೀಘ್ರದಲ್ಲೇ ಧಾರಾವಾಹಿ ಕೊನೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

    ಡಿಸೆಂಬರ್ 30ರಿಂದ ಜನವರಿ 4ರವರೆಗೂ ಅಗ್ನಿಸಾಕ್ಷಿ ಧಾರಾವಾಹಿಯ ಅಂತಿಮ ಸಂಚಿಕೆ ಪ್ರಸಾರವಾಗಲಿದೆ. ಆದರೆ ಸೀರಿಯಲ್ ಕೊನೆ ಆಗುತ್ತಿದೆ ಎಂಬುದರ ಬಗ್ಗೆ ಖಾಸಗಿ ವಾಹಿನಿ ಆಗಲಿ, ಧಾರಾವಾಹಿ ತಂಡ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    ಈ ಮೊದಲು ಅಗ್ನಿಸಾಕ್ಷಿಯಲ್ಲಿ ಸಿದ್ಧಾರ್ಥ್ ಪಾತ್ರದಲ್ಲಿ ನಟಿಸುತ್ತಿದ್ದ ವಿಜಯ್ ಸೂರ್ಯ ಧಾರಾವಾಹಿಯಿಂದ ಹೊರ ನಡೆದಿದ್ದರು. ವಿಜಯ್ ಧಾರಾವಾಹಿಗಾಗಿ 5 ವರ್ಷ ಒಪ್ಪಂದ ಮಾಡಿಕೊಂಡಿದ್ದರು. ಆ ಅಗ್ರಿಮೆಂಟ್ ಅವಧಿ ಮುಗಿದಿರುವ ಕಾರಣ ವಿಜಯ್ ಧಾರಾವಾಹಿಯಿಂದ ಹೊರ ನಡೆದಿದ್ದರು.

    ಇನ್ನೂ ಖಳನಟಿ ಚಂದ್ರಿಕಾ ಪಾತ್ರದಲ್ಲಿ ನಟಿಸಿದ ಪ್ರಿಯಾಂಕಾ ಕೂಡ ಆ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಪ್ರಿಯಾಂಕಾ ಬಿಗ್ ಬಾಸ್‍ಗೆ ಎಂಟ್ರಿ ಕೊಟ್ಟ ಕಾರಣ ಅವರು ಕೂಡ ಆ ಸೀರಿಯಲ್‍ನಿಂದ ಹೊರ ಬಂದಿದ್ದರು.

  • 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‍ವುಡ್ ಕಲಾವಿದರು

    2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‍ವುಡ್ ಕಲಾವಿದರು

    ಸ್ಯಾಂಡಲ್‍ವುಡ್ ಬೆಳ್ಳಿತೆರೆ ಹಾಗೂ ಕಿರುತೆರೆಯ ಹಲವು ಕಲಾವಿದರು 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಬೆಳ್ಳಿತೆರೆ ಕಲಾವಿದರಿಗಿಂತ ಕಿರುತೆರೆಯ ಕಲಾವಿದರೇ ಹೆಚ್ಚಾಗಿ ಮದುವೆಯಾಗಿದ್ದಾರೆ. ಕೆಲವು ಕಲಾವಿದರು ಬಹುವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳಯ, ಗೆಳತಿಯರನ್ನೇ ಮದುವೆಯಾದರೆ, ಮತ್ತೆ ಕೆಲವು ಕಲಾವಿದರು ಆರೆಂಜ್ಡ್ ಮ್ಯಾರೇಜ್ ಆಗಿದ್ದಾರೆ. 2019ರಲ್ಲಿ ಯಾವೆಲ್ಲಾ ಕಲಾವಿದರು ಮದುವೆಯಾಗಿದ್ದಾರೆ ಎಂಬುದುನ್ನು ಒಮ್ಮೆ ನೋಡಿ

    ವಿಜಯ್ ಸೂರ್ಯ: ಗುಳಿಕೆನ್ನೆಯ ಚೆಲುವ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಅವರ ಜೊತೆ ಪ್ರೇಮಿಗಳ ದಿನದಂದೇ ವಿವಾಹವಾಗಿದ್ದರು. ಮನೆಯವರೆಲ್ಲ ಮೆಚ್ಚಿದ ಚೈತ್ರಾ ಅವರ ಜೊತೆ ವಿಜಯ್ ಸಪ್ತಪದಿ ತುಳಿದಿದ್ದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕವೇ ನಟ ವಿಜಯ್ ಸೂರ್ಯ ಜನಪ್ರಿಯತೆ ಪಡೆದವರು. ಚೈತ್ರಾ ಸಾಫ್ಟ್‍ವೇರ್ ಉದ್ಯೋಗಿಯಾಗಿದ್ದಾರೆ.

    ನೇಹಾ ಪಾಟೀಲ್: ಹುಬ್ಬಳ್ಳಿ ಮೂಲದ ನಟಿ ನೇಹಾ ಪಾಟೀಲ್ ಅವರು ಸಿನಿಮಾ ಬಗ್ಗೆ ಆಸಕ್ತಿ ಇರುವ ಬೆಂಗಳೂರಿನ ಎಂಜಿನಿಯರಿಂಗ್ ಹುಡುಗ ಪ್ರಣವ್ ಅವರ ಜೊತೆ ಮದುವೆಯಾಗಿದ್ದರು. ಫೆಬ್ರವರಿ 22ರಂದು ವಿಜಯನಗರದ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಯಜ್ಞಾ ಶೆಟ್ಟಿ: ಬಹುಭಾಷಾ ನಟಿ ಯಜ್ಞಶೆಟ್ಟಿ ಅವರು ಅಕ್ಟೋಬರ್ 10ರಂದು ತುಳು ಸಿನಿರಂಗದ ನಾಯಕ ನಟ ಸಂದೀಪ್ ಶೆಟ್ಟಿ ಅವರೊಂದಿಗೆ ಮಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕುಟುಂಬ ಸದಸ್ಯರು ಸೇರಿದಂತೆ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮಂಗಳೂರಿನಲ್ಲಿ ಮದುವೆ ನಡೆದಿತ್ತು. ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವದಂಪತಿಗೆ ಶುಭಕೋರಿದ್ದರು.

    ಗುರು ರಾಜ್ ಕುಮಾರ್: ರಾಜ್ ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಎರಡನೇ ಪುತ್ರ ಯುವರಾಜ್ ಕುಮಾರ್ ಅವರು ಮೈಸೂರಿನ ಶ್ರೀದೇವಿಯನ್ನು ಮೇ 26ರಂದು ಮದುವೆಯಾಗಿದ್ದರು. ಇವರಿಬ್ಬರ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿತ್ತು. ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಇಬ್ಬರು ಸ್ನೇಹಿತರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಎರಡು ಕುಟುಂಬದವರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು.

    ಇಶಿತಾ ವರ್ಷ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿ ಇಶಿತಾವರ್ಷ ನವೆಂಬರ್ 10ರಂದು ತಮ್ಮ ಬಹುಕಾಲದ ಗೆಳೆಯ ಮುರುಗಾನಂದ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಾಯಾ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವ ಜೋಡಿಗೆ ಶುಭಾಶಯವನ್ನು ತಿಳಿಸಿದ್ದರು.

    ರಿಷಿ: `ಅಪರೇಷನ್ ಅಲಮೇಲಮ್ಮ’ ಮತ್ತು `ಕವಲುದಾರಿ’ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವ ನಟ ರಿಷಿ ಅವರು ಕೂಡ ನವೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಿಷಿ ಅವರು ಬರಹಗಾರ್ತಿ ಸ್ವಾತಿ ಅವರೊಂದಿಗೆ ಚೆನ್ನೈನಲ್ಲಿ ಮದುವೆಯಾಗಿದ್ದರು. ವಿವಾಹವಾದ ನಂತರ ನವೆಂವರ್ 20ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.

    ಹಿತಾ ಚಂದ್ರಶೇಖರ್: ಡಿಸೆಂಬರ್ 1ರಂದು ಹಿತಾ ಚಂದ್ರಶೇಖರ್ ತಮ್ಮ ಗೆಳೆಯ ಕಿರಣ್ ಶ್ರೀನಿವಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಿರಣ್ ಶ್ರೀನಿವಾಸ್ ಗುರು-ಹಿರಿಯರು ನಿಶ್ಚಯ ಮಾಡಿದ್ದ ಶುಭ ಮುಹೂರ್ತದಲ್ಲಿ ಹಿತಾ ಚಂದ್ರಶೇಖರ್‍ಗೆ ಮಾಂಗಲ್ಯಧಾರಣೆ ಮಾಡಿದ್ದರು. ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ನಡೆದಿತ್ತು. ಕಿರಣ್ ಮತ್ತು ಹಿತಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಮೇ ತಿಂಗಳಲ್ಲಿ ಕಿರಣ್ ಹಾಗೂ ಹಿತಾ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಚಂದನ್ ಶೆಟ್ಟಿ- ನಿವೇದಿತಾ ಗೌಡ: ಅಕ್ಟೋಬರ್ 21ರಂದು ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು.

    ಅರ್ಚನಾ: ಸ್ಯಾಂಡಲ್‍ವುಡ್‍ನ `ಆ ದಿನಗಳು’ ಸಿನಿಮಾ ಖ್ಯಾತಿಯ ಅರ್ಚನಾ ವೇದಾ ತಮ್ಮ ಪ್ರಿಯಕರನೊಂದಿಗೆ ನವೆಂಬರ್ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅರ್ಚನಾ ವೇದಾ ತಮ್ಮ ಗೆಳೆಯ ಜಗದೀಶ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹೈದರಾಬಾದಿನಲ್ಲಿ ಗುರು-ಹಿರಿಯರ ನಿಶ್ಚಯಿಸಿದ್ದ ಮೂಹೂರ್ತದಲ್ಲಿ ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ನಡೆದಿತ್ತು.

    ಧ್ರುವ ಸರ್ಜಾ: ನವೆಂಬರ್ 24ರಂದು ಧ್ರುವ ಶುಭ ಮುಹೂರ್ತದಲ್ಲಿ ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಅವರನ್ನು ವರಿಸಿದ್ದರು. ಜೆ.ಪಿ.ನಗರದ ಸಂಸ್ಕೃತ ಬೃಂದಾವನ ಕನ್ವೆನ್ಷನ್ ಹಾಲ್‍ನಲ್ಲಿ ಇವರ ವಿವಾಹ ಮಹೋತ್ಸವ ನಡೆದಿದ್ದು, ಅಂದು ಸಂಜೆಯೇ ಸಿನಿಮಾ ಕಲಾವಿದರಿಗಾಗಿ ಅದ್ಧೂರಿಯಾಗಿ ರಿಸೆಪ್ಶನ್ ಏರ್ಪಡಿಸಲಾಗಿತ್ತು. ಮರುದಿನ ಎಂದರೆ 25 ರಂದು ಅಭಿಮಾನಿಗಳಿಗಾಗಿ ವಿಶೇಷ ಆರತಕ್ಷತೆಯನ್ನು ಆಯೋಜೆ ಮಾಡಲಾಗಿತ್ತು.

    ಮನೀಶ್ ಪಾಂಡೆ- ಆಶ್ರಿತಾ ಶೆಟ್ಟಿ: ಭಾರತದ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಡಿಸೆಂಬರ್ 2ರಂದು ತುಳು ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮನೀಶ್ ಪಾಂಡೆ ಅವರು ತುಳು ಹಾಗೂ ದಕ್ಷಿಣ ಭಾರತದ ನಟಿಯಾಗಿರುವ ಆಶ್ರಿತಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದರು. ಇವರ ಮದುವೆಯಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದರು.

    ನಿತ್ಯಾ ರಾಮ್: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಿತ್ಯ ರಾಮ್ ಅವರು ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಅವರ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದರು. ಮದುವೆಗೆ ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವಜೋಡಿಗೆ ಶುಭಾಶಯ ತಿಳಿಸಿದ್ದರು.

    ದೀಪಿಕಾ (ಧನ್ಯಾ): ದೀಪಿಕಾ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅಕ್ಕು ಆಕರ್ಶ್ ಜೊತೆ ನವೆಂಬರ್ 15ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದೀಪಿಕಾ ಮತ್ತು ಆಕರ್ಶ್ ವಿವಾಹ ಸಾಂಪ್ರದಾಯಿಕವಾಗಿ ನಡೆದಿತ್ತು. ಇವರಿಬ್ಬರು ಪರಸ್ಪರ ಬಹು ದಿನಗಳಿಂದ ಪ್ರೀತಿಸುತ್ತಿದ್ದರು. ನಂತರ ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದಾರೆ. ಎರಡು ಕುಟುಂಬದವರು ಇವರ ಪ್ರೀತಿಯನ್ನು ಖುಷಿಯಿಂದ ಒಪ್ಪಿಕೊಂಡು ಕೆಲ ತಿಂಗಳ ಹಿಂದೆ ಇಬ್ಬರ ನಿಶ್ಚಿತಾರ್ಥ ಮಾಡಿದ್ದರು.

    ಭವಾನಿ ಸಿಂಗ್: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಯಲ್ಲಿ ಈ ಹಿಂದೆ ನಟಿಸುತ್ತಿದ್ದ ನಟ ಭವಾನಿ ಸಿಂಗ್ ತಮ್ಮ ಬಹುದಿನದ ಗೆಳತಿ ಪಂಕಜಾ ಶಿವಣ್ಣ ಅವರ ಜೊತೆ ನವೆಂಬರ್ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಭವಾನಿ ಹಾಗೂ ಪಂಕಜಾ ಎರಡು ವರ್ಷದಿಂದ ಸ್ನೇಹಿತರಾಗಿದ್ದರು. ಬಳಿಕ ಭವಾನಿ ಅವರು ಪಂಕಜಾ ಅವರನ್ನು ಪ್ರಪೋಸ್ ಮಾಡಿದ್ದು, ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಈಗ ಮದುವೆಯಾಗಿದ್ದರು.

  • ಎಲ್ಲವನ್ನು ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ: ದರ್ಶನ್

    ಎಲ್ಲವನ್ನು ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ: ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲವನ್ನು ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ ಎಂದು ಹೇಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಡುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ದರ್ಶನ್ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾನು ಕಿರುತೆರೆಗೆ ಬರಬಾರದು ಎಂಬ ಯಾವುದೇ ಕಾರಣ ಇಲ್ಲ. ಜೀವನ ನಡೆಸಲು ನನಗೆ ಏನೂ ಬೇಕು ಅದನ್ನು ಭಗವಂತ ಹಾಗೂ ಅಭಿಮಾನಿಗಳು ನೀಡಿದ್ದಾರೆ. ನನಗೆ ಅಷ್ಟೇ ಸಾಕು. ಎಲ್ಲ ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ. ನಾನು ಎಷ್ಟು ಪ್ರೀತಿಯಿಂದ ಸಿನಿಮಾ ಮಾಡುತ್ತೇನೋ, ಹಾಗೆಯೇ ನನಗೆ ಬೇರೆ ಕೆಲಸವಿದೆ. ಅದನ್ನು ಕೂಡ ಅಷ್ಟೇ ಪ್ರೀತಿಯಿಂದ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ದರ್ಶನ್ ಕಿರುತೆರೆಗೆ ನಿರೂಪಕರಾಗಿ ಎಂಟ್ರಿ ಕೊಡುತ್ತಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿತ್ತು. ಖಾಸಗಿ ವಾಹಿನಿಯಲ್ಲಿ ಹೊಸದಾಗಿ ಶೋವೊಂದು ಶುರುವಾಗುತ್ತಿದ್ದು, ಈ ಕಾರ್ಯಕ್ರಮದ ನಿರೂಪಣೆಯನ್ನು ನಟ ದರ್ಶನ್ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿಲ್ಲ ಎಂದು ದರ್ಶನ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

  • ಕಿರುತೆರೆಗೆ ಎಂಟ್ರಿ –  ಶೋ ನಿರೂಪಕರಾಗಿ ದಚ್ಚು

    ಕಿರುತೆರೆಗೆ ಎಂಟ್ರಿ – ಶೋ ನಿರೂಪಕರಾಗಿ ದಚ್ಚು

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಅನೇಕ ಸ್ಟಾರ್ ನಟರು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಶೋಗಳಲ್ಲಿ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ನಟ ದರ್ಶನ್ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದು, ಖಾಸಗಿ ವಾಹಿನಿಯಲ್ಲಿ ಹೊಸದಾಗಿ ಶೋವೊಂದು ಶುರುವಾಗುತ್ತಿದೆ. ಈ ಕಾರ್ಯಕ್ರಮದ ನಿರೂಪಣೆಯನ್ನು ನಟ ದರ್ಶನ್ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಯಾವ ವಾಹಿನಿ? ಯಾವ ಶೋ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ.

    ಈ ಹಿಂದೆ ದರ್ಶನ್ ಕಿರುತೆರೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ‘ವೀಕೆಂಡ್ ವಿತ್ ರಮೇಶ್’, ‘ಮಜಾ ಟಾಕೀಸ್’ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ಶೋವೊಂದರ ನಿರೂಪಣೆಯನ್ನು ಮಾಡಲಿದ್ದಾರೆ.

    ನಟ ದರ್ಶನ್‍ಗೆ ಕಿರುತೆರೆ ಏನು ಹೊಸದಲ್ಲ. ಯಾಕೆಂದರೆ ಎಸ್.ನಾರಾಯಣ್ ನಿರ್ದೇಶನದ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಹೀಗಾಗಿ ದರ್ಶನ್ ಕಿರುತೆರೆಯಿಂದಲೇ ಬೆಳ್ಳಿತೆರೆಗೆ ಬಂದು ಇಂದು ಡಿ-ಬಾಸ್ ಆಗಿ ಮಿಂಚುತ್ತಿದ್ದಾರೆ. ಸದ್ಯಕ್ಕೆ ದರ್ಶನ್, ಒಡೆಯ, ರಾಬರ್ಟ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.

    ಈಗಾಗಲೇ ವೀಕೆಂಡ್ ವಿತ್ ರಮೇಶ್ ಮೂಲಕ ರಮೇಶ್ ಅರವಿಂದ್, ಬಿಗ್‍ಬಾಸ್ ಮೂಲಕ ಸುದೀಪ್, ಕನ್ನಡದ ಕೋಟ್ಯಧಿಪತಿಯಲ್ಲಿ ಪುನೀತ್, ಸೂಪರ್ ಮಿನಿಟ್‍ನಲ್ಲಿ ಗಣೇಶ್ ಸೇರಿದಂತೆ ಶಿವಣ್ಣ, ರವಿಚಂದ್ರನ್, ಜಗ್ಗೇಶ್, ರಚಿತಾ ರಾಮ್, ರಕ್ಷಿತಾ ಪ್ರೇಮ್, ವಿಜಯ್ ರಾಘವೇಂದ್ರ ಹೀಗೆ ಅನೇಕರು ಕಿರುತೆರೆ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

  • ವಿವಾಹದ ನಂತರವೂ ಐದಾರು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದೆ – ಅಬ್ದುಲ್ ರಜಾಕ್

    ವಿವಾಹದ ನಂತರವೂ ಐದಾರು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದೆ – ಅಬ್ದುಲ್ ರಜಾಕ್

    ನವದೆಹಲಿ: ನಾನು ವಿವಾಹದ ನಂತರವೂ ಐದಾರು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದೆ ಎಂದು ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಅಬ್ದುಲ್ ರಜಾಕ್ ಹೇಳಿದ್ದಾರೆ.

    ಪಾಕ್‍ನ ಸ್ಥಳೀಯ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಬ್ದುಲ್ ರಜಾಕ್ ತನಗೆ ಐದರಿಂದ ಆರು ವಿವಾಹೇತರ ಸಂಬಂಧಗಳು ಇದ್ದವು ಎಂದು ಹೇಳಿಕೊಂಡಿದ್ದಾರೆ ಮತ್ತು ಅವುಗಳಲ್ಲಿ ಒಂದು ಒಂದೂವರೆ ವರ್ಷಗಳ ಕಾಲ ಇತ್ತು ಎಂದು ಹೇಳಿದ್ದಾರೆ.

    ಈ ಸಮಯದಲ್ಲಿ ಈ ಕಾರ್ಯಕ್ರಮದ ನಿರೂಪಕಿ ಈ ಎಲ್ಲಾ ಸಂಬಂಧಗಳು ವಿವಾಹದ ಮುಂಚೆ ಇದ್ದವೋ ಇಲ್ಲ ವಿವಾಹದ ನಂತರ ಇತ್ತೆ ಎಂದು ಕೇಳಿದ್ದಕ್ಕೆ, ವಿವಾಹದ ನಂತರವೂ ನಾನು ಸಂಬಂಧವನ್ನು ಹೊಂದಿದ್ದೆ ಎಂದು ಉತ್ತರಿಸಿದ್ದಾರೆ.

    ವಿಶ್ವಕಪ್ ವೇಳೆ ಭಾರತದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಟ್ವೀಟ್ ಮಾಡಿದ್ದ ರಜಾಕ್ ಅವರು, ನಾನು ಹಾರ್ದಿಕ್ ಪಾಂಡ್ಯ ಅವರನ್ನು ವಿಶ್ವದ ಉತ್ತಮ ಆಲ್‍ರೌಂಡರ್ ಆಗಿ ಮಾಡುತ್ತೇನೆ ಎಂದು ಹೇಳಿದ್ದರು.

    ವಿಶ್ವಕಪ್‍ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯದ ನಂತರ ಟ್ವೀಟ್ ಮಾಡಿದ್ದ ರಜಾಕ್ “ನಾನು ಇಂದು ಹಾರ್ದಿಕ್ ಪಾಂಡ್ಯ ಅವರ ಆಟವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರು ದೊಡ್ಡ ಹೊಡೆತಗಳನ್ನು ಬಾರಿಸುವಾಗ ಅವರ ಬಾಡಿ ಬ್ಯಾಲೆನ್ಸ್ ಆಗುತ್ತಿಲ್ಲ. ನಾನು ಅವರು ಆಡುವಾಗ ಅವರ ಫೂಟ್ ವರ್ಕ್ ಕೂಡ ಗಮನಿಸಿದ್ದೇನೆ. ಅದರಲ್ಲಿ ದೋಷ ಇದೆ ಅದು ಅವರನ್ನು ನಿರಾಸೆಗೊಳಿಸಿದೆ” ಎಂದು ಹೇಳಿದ್ದರು.

    ನಾನು ಹಾರ್ದಿಕ್ ಪಾಂಡ್ಯಗೆ ಕೋಚಿಂಗ್ ನೀಡಲು ಸಾಧ್ಯವಾದರೆ, ನಾನು ಅವರನ್ನು ವಿಶ್ವದಲ್ಲಿ ಅತ್ಯುತ್ತಮ ಆಲ್‍ರೌಂಡರ್ ಗಳಲ್ಲಿ ಒಬ್ಬನನ್ನಾಗಿ ಮಾಡುತ್ತೇನೆ. ಬಿಸಿಸಿಐ ಅವರನ್ನು ಉತ್ತಮ ಆಲ್‍ರೌಂಡರ್ ಮಾಡಲು ಬಯಸಿದರೆ ನಾನು ಕೋಚ್ ನೀಡಲು ಯಾವಾಗಲೂ ಲಭ್ಯವಿರುತ್ತೇನೆ ಎಂದು ತಿಳಿಸಿದ್ದರು.

    ಪಾಕಿಸ್ತಾನ ಪರ 265 ಏಕದಿನ ಪಂದ್ಯಗಳನ್ನು ಆಡಿರುವ ರಜಾಕ್, ಮೂರು ಶತಕ ಮತ್ತು 23 ಅರ್ಧಶತಕಗಳೊಂದಿಗೆ 5,080 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ 269 ವಿಕೆಟ್‍ಗಳನ್ನು ಕಿತ್ತಿರುವ ಅವರು ಒಂದು ಪಂದ್ಯದಲ್ಲಿ 35 ರನ್ ನೀಡಿ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಆಗಿದೆ.

    ಅಬ್ದುಲ್ ರಜಾಕ್ ಅವರು ಪಾಕಿಸ್ತಾನ ಆಯಿಷಾರನ್ನು ಮದುವೆಯಾಗಿದ್ದು ದಂಪತಿಗೆ ಓರ್ವ ಪುತ್ರ, ಪುತ್ರಿ ಇದ್ದಾಳೆ.

  • ಅಪಘಾತದಲ್ಲಿ ‘ಮಗಳು ಜಾನಕಿ’ ಧಾರಾವಾಹಿ ನಟಿ ದುರ್ಮರಣ

    ಅಪಘಾತದಲ್ಲಿ ‘ಮಗಳು ಜಾನಕಿ’ ಧಾರಾವಾಹಿ ನಟಿ ದುರ್ಮರಣ

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಶೋಭಾ ಎಮ್.ವಿ ಅವರು ಬುಧವಾರ ಮೃತಪಟ್ಟಿದ್ದಾರೆ.

    ಚಿತ್ರದುರ್ಗದ ಹೊರವಲಯ ರಾಷ್ಟ್ರೀಯ ಹೆದ್ದಾರಿ-4ರ ಕುಂಚಿಗನಾಳು ಗ್ರಾಮದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಶೋಭಾ ಅವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ನಟಿ ಶೋಭಾ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಕಿರುತೆರೆಯ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಮೃತ ಶೋಭಾ ಅವರು ಮಂಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು.

    ಮೃತ ಶೋಭಾ ಅವರು ನೈಜ ಅಭಿನಯದ ಮೂಲಕವೇ ಪ್ರೇಕ್ಷಕರ ಮನಗೆದ್ದಿದ್ದರು. ನಿಜ ಜೀವನದಲ್ಲೂ ಅತ್ಯಂತ ಸೌಮ್ಯ ಸ್ವಭಾವದವರಾಗಿದ್ದು, ಮಗಳು ಜಾನಕಿ ಧಾರಾವಾಹಿ ಸೇರಿದಂತೆ ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಶೋಭಾ ಅವರ ನಿಧನಕ್ಕೆ ‘ಮಗಳು ಜಾನಕಿ’ ಧಾರಾವಾಹಿ ತಂಡ ಮತ್ತು ಅಭಿಮಾನಿ ಬಳಗ ಸಂತಾಪ ಸೂಚಿಸಿದೆ.

     

    ಮಗಳು ಜಾನಕಿ ಧಾರಾವಾಹಿ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು ಶೋಭಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಮಗಳು ಜಾನಕಿಯಲ್ಲಿ ಮಂಗಳಕ್ಕನ ಪಾತ್ರ ಮಾಡುತ್ತಿದ್ದ ಶೋಭಾ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಸದಾ ನಗುಮುಖದ, ಅಪಾರ ಪ್ರತಿಭೆಯ, ಸೌಜನ್ಯ ತುಂಬಿದ ಮಂಗಳಕ್ಕನ ಅನಿರೀಕ್ಷಿತ ಸಾವು ನನ್ನನ್ನು ದಿಗ್ಭ್ರಮೆಗೊಳಿಸಿದೆ” ಎಂದು ದುಃಖದಿಂದ ಸಂತಾಪ ಸೂಚಿಸಿದ್ದಾರೆ.

    ಅಪಘಾತ ಹೇಗಾಯ್ತು?
    ಒಟ್ಟು 6 ಜನರು ಇನ್ನೋವಾ ಕಾರಿನಲ್ಲಿ ಬೆಂಗಳೂರಿನಿಂದ ಬದಾಮಿಯ ಬನಶಂಕರಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಚಿತ್ರದುರ್ಗ ನಗರದ ಹೊರವಲಯದಲ್ಲಿ ಕಾರಿನ ಮುಂದಿನ ಗಾಲಿ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಕಾರು ಡಿವೈಡರ್ ಹಾರಿ ಎದುರಿನ ರಸ್ತೆಗೆ ಬಿದ್ದಿದೆ. ಇದೇ ವೇಳೆ ಚಿತ್ರದುರ್ಗದಿಂದ ಹಿರೀಯೂರು ಕಡೆಗೆ ಹೋಗುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

  • ಮತ್ತೆ ಧಾರಾವಾಹಿಗೆ ಮರಳಿದ ವಿಜಯ್ ಸೂರ್ಯ

    ಮತ್ತೆ ಧಾರಾವಾಹಿಗೆ ಮರಳಿದ ವಿಜಯ್ ಸೂರ್ಯ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿಯಿಂದ ಹೊರಬಂದಿರುವ ವಿಜಯ್ ಸೂರ್ಯ ಈಗ ಮತ್ತೊಂದು ಸಿರಿಯಲ್ ಮೂಲಕ ಕಿರುತೆರೆಗೆ ಮರಳಿದ್ದಾರೆ.

    ಇತ್ತೀಚೆಗಷ್ಟೆ ವಿಜಯ್ ಸೂರ್ಯ ಅವರು ಜನಪ್ರಿಯ ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರಬಂದಿದ್ದರು. ಆ ಧಾರಾವಾಯಿಯಿಂದ ಹೊರಬಂದ ಬೆನ್ನಲ್ಲೇ ವಿಜಯ್ ಮತ್ತೊಂದು ಸಿರಿಯಲ್ ನಲ್ಲಿ ಅಭಿನಯಿಸಲು ಸಹಿ ಹಾಕಿದ್ದಾರೆ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ‘ಕಸೌತಿ ಜಿಂದಗಿ ಕೀ’ ಧಾರಾವಾಹಿಯ ರಿಮೇಕ್‍ನಲ್ಲಿ ವಿಜಯ್ ನಟಿಸುತ್ತಿದ್ದಾರೆ. ಈ ಧಾರಾವಾಹಿ ಬೇರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ‘ಪ್ರೇಮಾಲೋಕ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಬಗ್ಗೆ ನಟ ವಿಜಯ್ ಸೂರ್ಯ ಕೂಡ ಅಧಿಕೃತ ಮಾಹಿತಿ ನೀಡಿದ್ದಾರೆ.

    ನಾನು ಮುಂದಿನ ಧಾರಾವಾಹಿಯನ್ನು ಸೈನ್ ಮಾಡಿದ್ದೇನೆ. ನನಗೆ ಮೂರು ವಾಹಿನಿಯಿಂದ ಅವಕಾಶ ಬಂದಿತ್ತು. ಅದರಲ್ಲಿ ನಾನು ಒಂದನ್ನು ಆಯ್ಕೆ ಮಾಡಿಕೊಂಡೆ. ನನಗೆ ಈ ಧಾರಾವಾಹಿಯ ಕಾನ್ಸೆಪ್ಟ್ ಇಷ್ಟವಾಯಿತು. ಅಲ್ಲದೆ ಈ ಧಾರಾವಾಹಿ ಹಿಂದಿ ಹೆಚ್ಚು ಜನಪ್ರಿಯವಾಗಿದೆ. ನಾನು ಸೈನ್ ಮಾಡಿದ ನಂತರ ಕಸೌತಿ ಜಿಂದಗಿ ಕೀ ಧಾರಾವಾಹಿಯ 70 ಸಂಚಿಕೆಗಳನ್ನು ವೀಕ್ಷಿಸಿದ್ದೇನೆ. ಸದ್ಯ ಈ ಧಾರಾವಾಹಿಯಲ್ಲಿ ನನಗೆ ವಿಜಯ್ ಅಥವಾ ಸೂರ್ಯ ಹೆಸರಿಡಲು ಯೋಚಿಸುತ್ತಿದ್ದಾರೆ ಎಂದು ವಿಜಯ್ ಸೂರ್ಯ ತಿಳಿಸಿದ್ದಾರೆ.

    ವಿಜಯ್ ಈಗಾಗಲೇ ನಟಿಸಿದ್ದ ಅಗ್ನಿಸಾಕ್ಷಿ ಧಾರಾವಾಹಿ ಶುರುವಾಗಿ ಐದು ವರ್ಷ ಆಗಿದ್ದು, ವಿಜಯ್ ಸೂರ್ಯ ನಟಿಸಿದ ಸಿದ್ಧಾರ್ಥ್ ಪಾತ್ರ ಕೂಡ ಕೊನೆಯಾಗುತ್ತಿದೆ. ಧಾರಾವಾಹಿಯಲ್ಲಿ ಈಗಾಗಲೇ ಸಿದ್ಧಾರ್ಥ್ ಆಸ್ಟ್ರೇಲಿಯಾಗೆ ಹೊರಡಲು ಸಿದ್ಧರಾಗಿದ್ದು, ಅವರು ಅಲ್ಲಿಗೆ ಹೊರಟ ನಂತರ ಅವರ ಪಾತ್ರ ಕೊನೆಯಾಗಲಿದೆ. ಈ ಧಾರಾವಾಹಿಗಾಗಿ ವಿಜಯ್ ಸೂರ್ಯ 5 ವರ್ಷ ಒಪ್ಪಂದ ಕೂಡ ಮಾಡಿಕೊಂಡಿದ್ದರು. ಈಗ ಅಗ್ರಿಮೆಂಟ್ ಅವಧಿ ಮುಗಿದಿರುವ ಕಾರಣ ವಿಜಯ್ ಧಾರಾವಾಹಿಯಿಂದ ಹೊರಬಂದಿದ್ದಾರೆ.

  • ದೂರದರ್ಶನದಲ್ಲೂ ಪ್ರಸಾರ ಆಗುತ್ತಾ ವಿದೇಶಿ ಕ್ರಿಕೆಟ್ ಟೂರ್ನಿ?

    ದೂರದರ್ಶನದಲ್ಲೂ ಪ್ರಸಾರ ಆಗುತ್ತಾ ವಿದೇಶಿ ಕ್ರಿಕೆಟ್ ಟೂರ್ನಿ?

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್, ಫಿಫಾ ವಿಶ್ವಕಪ್ ಹಾಗೂ ಒಲಿಂಪಿಕ್ ಕ್ರೀಡೆಗಳ ಲೈವ್ ಪ್ರಸಾರ ಮಾಡಿದ್ದ ದೂರದರ್ಶನ ಸದ್ಯ ವಿದೇಶಿ ನೆಲದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ಕೂಡ ಪ್ರಸಾರ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

    ಹೌದು. ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಟೂರ್ನಿಗಳ ಪ್ರಸಾರದ ಹಕ್ಕು ಪಡೆಯುವ ಕುರಿತು ದೂರದರ್ಶನ ಚಿಂತನೆ ನಡೆಸಿದೆ. ಇದರಂತೆ ಭಾರತ ಸರ್ಕಾರದ ತನ್ನ ಪ್ರಸಾರ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

    ಐಪಿಎಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳ ನೇರ ಪ್ರಸಾರಕ್ಕೆ ಅವಕಾಶ ಪಡೆದಿದ್ದ ಡಿಡಿ ಸದ್ಯ ನಡೆಯುತ್ತಿರುವ ಆಸೀಸ್ ವಿರುದ್ಧದ ಟೂರ್ನಿಯನ್ನು ಏಕೆ ಪ್ರಸಾರ ಮಾಡುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ. ಈ ಸಂಬಂಧ ಡಿಡಿ ಕ್ರೀಡಾ ಪ್ರಸಾರ ಸಿಗ್ನಲ್ ಕಾಯ್ದೆಯ ಅನ್ವಯ ಜಾಹೀರಾತು ರಹಿತ ಲೈವ್ ಪ್ರಸಾರ ಮಾಡುವ ಕುರಿತಂತೆ ಪ್ರಸಾರ ಭಾರತಿಯೊಂದಿಗೆ ಚರ್ಚೆ ನಡೆಸಿದೆ.

    ಆಸೀಸ್ ಟೂರ್ನಿಯ ಟೆಸ್ಟ್ ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 5 ಗಂಟೆಗೆ ಆರಂಭವಾಗುತ್ತದೆ. ಈಗಲೂ ಭಾರತದ ಗ್ರಾಮೀಣ ವಲಯ ಹಾಗೂ ಹಲವು ಪಟ್ಟಣಗಳಲ್ಲಿ ಡಿಡಿ ವಾಹಿನಿಯನ್ನೇ ಜನರು ನೆಚ್ಚಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಕ್ರಿಕೆಟ್ ಟೂರ್ನಿಯ ಪ್ರಸಾರದ ಕುರಿತು ಡಿಡಿ ಚಿಂತನೆ ನಡೆಸಿದೆ.

    ಈ ವರ್ಷ ನಡೆದ 11ನೇ ಆವೃತ್ತಿಯ ಐಪಿಎಲ್ ಟಿ20 ಟೂರ್ನಿ ಡಿಡಿಯಲ್ಲಿ ಪ್ರಸಾರ ಆಗಿತ್ತು. ನಂತರ ನಡೆದ ಇಂಗ್ಲೆಂಡ್ ನಲ್ಲಿ ನಡೆದ ಟೂರ್ನಿಯನ್ನು ಪ್ರಸಾರ ಮಾಡಿರಲಿಲ್ಲ. ಈಗ ಐಪಿಎಲ್ ಟೂರ್ನಿ ಹತ್ತಿರವಾಗುತ್ತಿರುವುದರಿಂದ ಆಸೀಸ್ ಸರಣಿಯ ಹಕ್ಕುಗಳನ್ನು ಹೊಂದಿರುವ ಸೋನಿ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಆದರೆ ಈ ಕುರಿತು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ಮತ್ತು ಡಿಡಿ ನಡುವೆ ಭಿನ್ನಭಿಪ್ರಾಯ ಮೂಡಿತ್ತು. ಆದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶದ ಮಾಡಿದ ಕಾರಣ ಖಾಸಗಿ ವಾಹಿನಿ ಒಪ್ಪಂದದ ಮೇರೆಗೆ ಪ್ರಸಾರ ದೃಶ್ಯಗಳನ್ನು ಹಂಚಿಕೆ ಮಾಡಲು ಸಮ್ಮತಿ ಸೂಚಿಸಿತ್ತು. ಸದ್ಯ ಇಂತಹ ಗೊಂದಲಗಳಿಗೆ ತೆರೆ ಎಳೆಯಲು ಕೇಂದ್ರ ಸರ್ಕಾರ ಈಗ ಕ್ರೀಡಾ ಪ್ರಸಾರ ಸಿಗ್ನಲ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

    ವಿಶೇಷವೆಂದರೆ ಡಿಡಿ ವಾಹಿನಿ ಪ್ರೋ ಕಬಡ್ಡಿ ಕ್ರೀಡಾಕೂಟದ ಪ್ರಸಾರ ಹಕ್ಕುಗಳನ್ನ ಪಡೆಯಲು ಇದುವರೆಗೂ ಸ್ಟಾರ್ ವಾಹಿನಿಯನ್ನು ಸಂಪರ್ಕ ಮಾಡಿರಲಿಲ್ಲ. ಕಬಡ್ಡಿಗೆ ಭಾರತದ ಗ್ರಾಮೀಣ ಭಾಗದಲ್ಲೇ ಹೆಚ್ಚು ಜನ ಪ್ರೇಕ್ಷಕರು ಹೊಂದಿದ್ದರೂ ಈ ಕುರಿತು ಚಿಂತನೆ ನಡೆಸದಿರುವುದು ಅಚ್ಚರಿ ಮೂಡಿಸಿದೆ. ಫುಟ್ಬಾಲ್ ಲೀಗ್ ಪ್ರಸಾರದಲ್ಲೂ ಡಿಡಿ ಇದೇ ನಡೆಯನ್ನು ತೋರಿದೆ.

    ತಡವಾಗಿ ಐಪಿಎಲ್ ಪ್ರಸಾರ:
    ಭಾರತದಲ್ಲಿ ನಡೆಯುವ ಪಂದ್ಯಗಳನ್ನು ಜನರ ಅನುಕೂಲಕ್ಕಾಗಿ ಐಪಿಎಲ್ ಪ್ರಸಾರ ಮಾಡಲು ಅವಕಾಶ ಮಾಡಿಕೊಡಬೇಕೆಂಬ ದೂರದರ್ಶನದ ಮನವಿ ಮಾಡಿತ್ತು. ಡಿಡಿ ವಾಹಿನಿಗೆ ಆದಾಯ ಸೃಷ್ಟಿ ಮಾಡುವ ಉದ್ದೇಶದಿಂದ ವಾರ್ತಾ ಸಚಿವಾಲಯದ ಅಭಿಪ್ರಾಯದ ಮೇರೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಈ ಮನವಿಯನ್ನು ಸ್ಟಾರ್ ಸಂಸ್ಥೆಯ ಮುಂದೆ ಪ್ರಸ್ತುತ ಪಡಿಸಿತ್ತು.

    ಈ ಮನವಿಗೆ ಸ್ಪಂದಿಸಿದ ಸ್ಟಾರ್ ನೆಟ್‍ವರ್ಕ್ ಐಪಿಎಲ್ ನ ಭಾನುವಾರ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಪ್ರಸಾರ ಮಾಡಲು ಅನುಮತಿ ನೀಡಿದೆ. ಅಲ್ಲದೇ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾದ ಬಳಿಕ ಒಂದು ಗಂಟೆ ತಡವಾಗಿ ದೂರದರ್ಶನ ಚಾನೆಲ್ ನಲ್ಲಿ ಐಪಿಎಲ್ ಪಂದ್ಯಗಳು ಪ್ರಸಾರವಾಗಲಿದೆ. ದೂರದರ್ಶನದಲ್ಲಿ ಪ್ರಸಾರವಾಗುವ ಪಂದ್ಯಗಳಿಂದ ಗಳಿಸುವ ಆದಾಯದಲ್ಲಿ ಶೇ.50 ಆಧಾರ ಮೇಲೆ ಹಂಚಿಕೆ ಮಾಡಲಾಗಿದೆ.

    2017ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಐಪಿಎಲ್ ನೇರ ಪ್ರಸಾರದ ಮಾರಾಟ ಹಕ್ಕುಗಳನ್ನು ಸ್ಟಾರ್ ವಾಹಿನಿ ಪಡೆದುಕೊಂಡಿತ್ತು. ಸದ್ಯ ಇದರ ಜೊತೆಗೆ ಭಾರತದಲ್ಲಿ ನಡೆಯುವ ಎಲ್ಲಾ ದ್ವಿಪಕ್ಷೀಯ ಸರಣಿಯ ನೇರ ಪ್ರಸಾರದ ಹಕ್ಕನ್ನು ಸ್ಟಾರ್ ಸಂಸ್ಥೆ 6,138 ಕೋಟಿ ರೂ. ಗೆ ಪಡೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 157ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಹಾಸ್ಯ ನಟ ವಠಾರ ಮಲ್ಲೇಶ್ ಇನ್ನಿಲ್ಲ

    157ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಹಾಸ್ಯ ನಟ ವಠಾರ ಮಲ್ಲೇಶ್ ಇನ್ನಿಲ್ಲ

    ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಚಲನಚಿತ್ರ ಹಾಸ್ಯ ನಟ ವಠಾರ ಮಲ್ಲೇಶ್(42) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

    ಎರಡು ಕಿಡ್ನಿ ಹಾಗು ಬ್ರೇನ್ ಸ್ಟ್ರೋಕ್ ನಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

    ಮಲ್ಲೇಶ್ ಬನ್ನೇರುಘಟ್ಟದ ಜಂಗಲಪಾಳ್ಯದಲ್ಲಿ ವಾಸವಾಗಿದ್ದರು. ಮಲ್ಲೇಶ್ ಮೂಲತಃ ಕೃಷಿಕ ಕುಟುಂಬದವರಾಗಿದ್ದು, ಟೆಲಿಫೋನ್ ಬೂತ್ ಕೆಲಸ ಮಾಡುತ್ತಿದ್ದರು. ಇವರಿಗೆ ನಾಟಕ ಮತ್ತು ಸಿನಿಮಾಗಳಲ್ಲಿ ಅಭಿನಯಿಸಲು ಇಷ್ಟ ಪಟ್ಟಿದ್ದರು. ಅದೇ ರೀತಿ ನಾಟಕ ಮತ್ತು ಸಿನಿಮಾಗಳನ್ನು ನೋಡಿ ಸಂಭಾಷಣೆಗಳನ್ನು ಅನುಕರಿಸಿ ಹೇಳುವ ಹವ್ಯಾಸವನ್ನು ರೂಢಿಸಿಕೊಂಡಿದ್ದರು.

    ಒಂದು ದಿನ `ವಠಾರ’ ಧಾರಾವಾಹಿ ಮ್ಯಾನೇಜರ್ ಮಂಜುನಾಥ್ ಇವರ ಟೆಲಿಫೋನ್ ಬೂತ್‍ಗೆ ಬಂದಿದ್ದರು. ಅಲ್ಲಿ ಮಲ್ಲೇಶ್ ಅವರನ್ನು ನೋಡಿ ಧಾರಾವಾಹಿಯಲ್ಲಿ ನಟಿಸುವಂತೆ ಅವಕಾಶ ನೀಡಿದ್ದರು. ಆ ಮೂಲಕ ಕಿರುತೆಗೆ ಕಾಲಿಟ್ಟಿದ್ದರು. ಬಳಿಕ ಕಿರುತೆರೆಯಿಂದ ಬೆಳ್ಳಿತೆರೆ ಪಾದಾರ್ಪಣೆ ಮಾಡಿದ್ದರು. ಮಲ್ಲೇಶ್ ಅವರು ಸುಮಾರು 250ಕ್ಕೂ ಹೆಚ್ಚು ನಾಟಕದಲ್ಲಿ ಅಭಿನಯಿಸಿದ್ದಾರೆ. ಇನ್ನು ಕಿರುತೆರೆಯಲ್ಲಿ ಸುಮಾರು 60ಕ್ಕೂ ಅಧಿಕ ಧಾರಾವಾಹಿಯಲ್ಲಿ ನಟಿಸಿದ್ದಾರೆ.

    ನಾಟಕ ಮತ್ತು ಕಿರುತೆರೆಯಲ್ಲಿ ಸಾಗುತ್ತಿದ್ದ ಅವರು ಮೋಹನ್ ಜುನೇಜಾ ಅವರ ಮೂಲಕ ಬೆಳ್ಳಿತೆರೆ ಕಾಲಿಟ್ಟಿದ್ದರು. ಬಳಿಕ ದರ್ಶನ್ ಅಭಿನಯದ `ಸುಂಟರಗಾಳಿ’, `ದತ್ತ’ ಮತ್ತು `ಅಭಯ್’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. `ಅಜಯ್’, `ಚಾರ್‍ಮಿನಾರ್’, `ಚಡ್ಡಿದೋಸ್ತ್’ ಸೇರಿದಂತೆ 157ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ಕಲಾವಿದರಾಗಿ ಅಭಿನಯಿಸಿದ್ದಾರೆ.

    ಸದ್ಯಕ್ಕೆ ಬನ್ನೇರುಘಟ್ಟದ ಜಂಗಲ್ ಪಾಳ್ಯದಲ್ಲಿ ಮಲ್ಲೇಶ್ ಅವರ ಅಂತಿಮ ವಿಧಿ ವಿಧಾನದ ಕಾರ್ಯಗಳಿಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.