Tag: telecom company

  • ಚೀನೀ ಟೆಲಿಕಾಂ ಕಂಪನಿ ಹುವಾವೇ ಮೇಲೆ ಐಟಿ ರೇಡ್

    ಚೀನೀ ಟೆಲಿಕಾಂ ಕಂಪನಿ ಹುವಾವೇ ಮೇಲೆ ಐಟಿ ರೇಡ್

    ನವದೆಹಲಿ: ಆದಾಯ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆ ತನಿಖೆಯ ಭಾಗವಾಗಿ ಮಂಗಳವಾರ ದೇಶದ ಹಲವೆಡೆ ಚೀನಾದ ಹುವಾವೇ ಕಂಪನಿಯ ಬ್ರ್ಯಾಚ್‌ಗಳ ಮೇಲೆ ದಾಳಿ ನಡೆಸಿವೆ.

    ಚೀನಾದ ಟೆಲಿಕಾಂ ಕಂಪನಿ ಹುವಾವೇಯ ಭಾರತೀಯ ಶಾಖೆಗಳಲ್ಲಿ ಐಟಿ ದಾಳಿ ನಡೆದಿವೆ. ದೆಹಲಿ, ಗುರುಗ್ರಾಮ(ಹರ್ಯಾಣ) ಹಾಗೂ ಬೆಂಗಳೂರಿನ ಹುವಾವೇ ಕಂಪನಿ ಆವರಣಗಳಲ್ಲಿ ದಾಳಿ ನಡೆದಿದೆ ಎಂದು ಬುಧವಾರ ವರದಿಗಳು ತಿಳಿಸಿವೆ.

    ನಮ್ಮ ಕಚೇರಿಗೆ ಆದಾಯ ತೆರಿಗೆ ತಂಡ ಭೇಟಿ ನೀಡಿರುವುದಾಗಿ ಮಾಹಿತಿ ದೊರಕಿದೆ. ಭಾರತದಲ್ಲಿ ನಮ್ಮ ಕಾರ್ಯಾಚರಣೆಗಳು ಎಲ್ಲಾ ಕಾನೂನು ಹಾಗೂ ನಿಬಂಧನೆಗಳನ್ನು ಅನುಸರಿಸುತ್ತಿವೆ ಎಂಬ ವಿಶ್ವಾಸವಿದೆ. ಹೆಚ್ಚಿನ ಮಾಹಿತಿಗಾಗಿ ನಾವು ಸರ್ಕಾರಿ ಇಲಾಖೆಗಳನ್ನು ಸಂಪರ್ಕಿಸುತ್ತೇವೆ. ನಿಯಮ ನಿಬಂಧನೆಗಳಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಫೇಸ್‌ಬುಕ್ ಉದ್ಯೋಗಿಗಳು ಇನ್ನು ಮುಂದೆ ಮೆಟಾಮೇಟ್ಸ್: ಜುಕರ್‌ಬರ್ಗ್

    ಕಳೆದ ವರ್ಷ ಚೀನಾದ ಮೊಬೈಲ್ ಸಂವಹನ ಹಾಗೂ ಹ್ಯಾಂಡ್‌ಸೆಟ್ ತಯಾರಿಕಾ ಕಂಪನಿಗಳಾದ ಕ್ಸಿಯೋಮಿ, ಓಪ್ಪೋ ಹಾಗೂ ಆ ಕಂಪನಿಗೆ ಸಂಬಂಧ ಪಟ್ಟವರ ವ್ಯಕ್ತಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. ದಾಳಿಯಲ್ಲಿ 6,500 ಕೋಟಿ ರೂ. ಮೌಲ್ಯದ ದಾಖಲೆಗಳಿಲ್ಲದ ಆದಾಯವನ್ನು ಪತ್ತೆ ಹಚ್ಚಿತ್ತು. ಇದನ್ನೂ ಓದಿ: ವಾಟ್ಸಪ್‌ಗೂ ಬರಲಿದೆ ಫೇಸ್‌ಬುಕ್‌ನಂತಹ ಕವರ್ ಫೋಟೋ ಫೀಚರ್

    ಈ ವಾರದ ಆರಂಭದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ಚೀನಾ ಮೂಲದ 54 ಆಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ.

  • ಸರ್ಕಾರ ಸಹಾಯ ಮಾಡದಿದ್ದರೆ ವೊಡಾಫೋನ್, ಐಡಿಯಾ ಮುಚ್ಚುತ್ತೇವೆ- ಬಿರ್ಲಾ

    ಸರ್ಕಾರ ಸಹಾಯ ಮಾಡದಿದ್ದರೆ ವೊಡಾಫೋನ್, ಐಡಿಯಾ ಮುಚ್ಚುತ್ತೇವೆ- ಬಿರ್ಲಾ

    ನವದೆಹಲಿ: ಕೇಂದ್ರ ಸರ್ಕಾರ ನಮಗೆ ಪರಿಹಾರೋಪಾಯಗಳನ್ನು ಕಲ್ಪಿಸದಿದ್ದಲ್ಲಿ ವೊಡಾಫೋನ್ ಹಾಗೂ ಐಡಿಯಾ ಕಂಪನಿಗಳನ್ನು ಮುಚ್ಚುತ್ತೇವೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಹೇಳಿದ್ದಾರೆ.

    ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನವರಿ ಅಂತ್ಯದ ವೇಳೆಗೆ ಕಂಪನಿಯು ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಹಣವನ್ನು ಪಾವತಿಸಬೇಕಿದ್ದು, ಈ ಕುರಿತು ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದಾರೆ.

    ಮುಖೇಶ್ ಅಂಬಾನಿಯವರ ರಿಲಾಯನ್ಸ್ ಜಿಯೋ ಕಡಿಮೆ ಬೆಲೆಯ ಡೇಟಾ ಹಾಗೂ ಕರೆಯ ಸೌಲಭ್ಯ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಹೀಗಾಗಿ ಜಿಯೋಗೆ ಸ್ಪರ್ಧೆಯೊಡ್ಡಲು ಇತರೆ ಕಂಪನಿಗಳು ಸಹ ದರ ಕಡಿಮೆ ಮಾಡಬೇಕಾಯಿತು. ಇದರ ಭಾಗವಾಗಿ ಬಿರ್ಲಾ ಅವರ ಐಡಿಯಾ ಹಾಗೂ ಬ್ರಿಟಿಷ್ ಮೂಲದ ಟೆಲಿಕಾಂ ಕಂಪನಿ ವೊಡಾಫೋನ್ ಕಳೆದ ವರ್ಷ ವಿಲೀನಗೊಂಡಿತ್ತು. ನಂತರ ಕರೆ ಹಾಗೂ ಡೇಟಾ ದರಗಳನ್ನು ಕಡಿಮೆ ಮಾಡಿದ್ದವು. ಇದನ್ನೂ ಓದಿ: ಯಾವುದೇ ದಿನದಲ್ಲಿ ಭಾರತವನ್ನು ತೊರೆಯಬಹುದು ವೊಡಾಫೋನ್

    ಈ ವೇಳೆ ಕಂಪನಿಗೆ 1.17 ಲಕ್ಷ ರೂ. ನಷ್ಟ ಉಂಟಾಗಿತ್ತು. ಈ ಮಧ್ಯೆ 14 ವರ್ಷಗಳಿಂದ ತೆರಿಗೆ ಹಾಗೂ ಸ್ಪೆಕ್ಟ್ರಂ ಶುಲ್ಕವನ್ನು ಬಾಕಿ ಉಳಿಸಿಕೊಂಡಿರುವುದನ್ನು ಕಂಪನಿಗಳು ಪಾವತಿಸಬೇಕೆಂಬ ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ನಂತರ ಸರ್ಕಾರಕ್ಕೆ ಹಣ ಪಾವತಿಸುವಂತೆ ಸುಪ್ರೀಂ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಕೆಲವು ವಾರಗಳ ಹಿಂದೆ ಟೆಲಿಕಾಂ ವಲಯ ಅತಿ ಹೆಚ್ಚು ನಷ್ಟವನ್ನು ದಾಖಲಿಸಿದೆ. ಹೀಗಾಗಿ ಇಷ್ಟು ಪ್ರಮಾಣದ ಮೊತ್ತವನ್ನು ಗಡುವಿನೊಳಗೆ ಸರ್ಕಾರಕ್ಕೆ ಹೇಗೆ ಪಾವತಿಸುವುದು ಎಂಬುದು ಕಂಪನಿಗಳ ಮುಖ್ಯಸ್ಥರನ್ನು ಚಿಂತೆಗೀಡು ಮಾಡಿದೆ.

    ಭಾರೀ ನಷ್ಟದ ನಡುವೆಯೂ ಇಷ್ಟೊಂದು ಮೊತ್ತದ ಹಣವನ್ನು ನಮ್ಮಿಂದ ಪಾವತಿಸಲು ಸಾಧ್ಯವಿಲ್ಲ. ಹೀಗಾಗಿ ದಂಡ ಹಾಗೂ ಬಡ್ಡಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕೆಂದು ಟೆಲಿಕಾಂ ಸಂಸ್ಥೆಗಳಾದ ಏರ್‍ಟೆಲ್ ಹಾಗೂ ವೊಡಾಫೊನ್ ಕೋರ್ಟ್ ಮೊರೆ ಹೋಗಿವೆ. ಅಲ್ಲದೆ ಸುಪ್ರೀಂ ಕೋರ್ಟ್‍ನಲ್ಲಿ ಮರು ಪರಿಶೀಲನಾ ಅರ್ಜಿಯನ್ನು ಸಹ ಸಲ್ಲಿಸಿವೆ. ಇದನ್ನೂ ಓದಿ: ಕೇಂದ್ರದಿಂದ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್

    ಎಜಿಆರ್ ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಿತ್ತು.

    ಏನಿದು ಎಜಿಆರ್?:
    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

    ಭಾರತಿ ಏರ್ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯೂನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2,098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2,537 ಕೋಟಿ ರೂ. ಪಾವತಿಸಬೇಕಾಗಿದೆ.

  • ಆಧಾರ್‌ಗೆ ಒತ್ತಾಯಿಸಿದ್ರೆ ಬೀಳುತ್ತೆ, 1 ಕೋಟಿ ರೂ. ದಂಡ, 10 ವರ್ಷ ಜೈಲು!

    ಆಧಾರ್‌ಗೆ ಒತ್ತಾಯಿಸಿದ್ರೆ ಬೀಳುತ್ತೆ, 1 ಕೋಟಿ ರೂ. ದಂಡ, 10 ವರ್ಷ ಜೈಲು!

    ನವದೆಹಲಿ: ಗ್ರಾಹಕರಿಂದ ಒತ್ತಾಯ ಪೂರ್ವಕವಾಗಿ ಆಧಾರ್ ಕಾರ್ಡ್ ಸಲ್ಲಿಸುವಂತೆ ಒತ್ತಡ ಹೇರುವ ಸಂಸ್ಥೆಗಳಿಗೆ ಬರೋಬ್ಬರಿ 1 ಕೋಟಿ ರೂಪಾಯಿ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಲು ಮುಂದಾಗಿದೆ.

    ಬ್ಯಾಂಕ್ ಖಾತೆ ತೆರೆಯಲು ಮತ್ತು ಸಿಮ್ ಕಾರ್ಡ್ ಸಂಪರ್ಕ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲವೆಂಬ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ, ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಮತ್ತು ಇಂಡಿಯನ್ ಟೆಲಿಗ್ರಾಮ್ ಕಾಯ್ದೆ ತಿದ್ದುಪಡಿಗಾಗಿ ಸಿದ್ಧಗೊಂಡಿರುವ ಪ್ರಸ್ತಾವಿತ ಮಸೂದೆಗೆ ಸೋಮವಾರ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ.

    ಇನ್ನು ಮುಂದೆ ಯಾವುದೇ ಬ್ಯಾಂಕ್ ಹಾಗೂ ಟೆಲಿಕಾಂ ಕಂಪನಿಗಳು ಬಲವಂತವಾಗಿ ಗ್ರಾಹಕರಿಂದ ಆಧಾರ್ ಮಾಹಿತಿಯನ್ನು ಪಡೆಯುವಂತಿಲ್ಲ. ಒಂದು ವೇಳೆ ಆಧಾರ್ ಕಾರ್ಡ್ ಬೇಕೇ ಬೇಕೆಂದು ಗ್ರಾಹಕರ ಮೇಲೆ ಒತ್ತಡ ಹೇರಲು ಮುಂದಾದರೆ ಅಂತವರ ವಿರುದ್ಧ ಭಾರೀ ದಂಡವನ್ನೇ ವಸೂಲಿ ಮಾಡುವ ಅಂಶಗಳು ಈ ಮಸೂದೆಯಲ್ಲಿದೆ.

    ಯಾವುದೇ ಬ್ಯಾಂಕಿನ ಖಾತೆ ತೆರೆಯಲು ಅಥವಾ ಹೊಸ ಸಿಮ್ ಕಾರ್ಡ್ ಕನೆಕ್ಷನ್ ಪಡೆಯಲು ಗ್ರಾಹಕರು ಆಧಾರ್ ಕಾರ್ಡ್ ನೀಡಲೇಬೇಕಿಲ್ಲ. ಒಂದು ವೇಳೆ ಬ್ಯಾಂಕ್ ಹಾಗೂ ಟೆಲಿಕಾಂ ಸಂಸ್ಥೆಗಳು ಆಧಾರ್ ಕಾರ್ಡ್ ನೀಡುವಂತೆ ಒತ್ತಾಯಿಸಿದರೆ ಅವರಿಗೆ 1 ಕೋಟಿ ರೂಪಾಯಿ ದಂಡ ಹಾಗೂ ಸಿಬ್ಬಂದಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲು ಕೇಂದ್ರ ನಿರ್ಧರಿಸಿದೆ. ಇದಲ್ಲದೇ ಆಧಾರ್ ಮಾಹಿತಿಯನ್ನು ಸೋರಿಕೆ ಮಾಡಲು ಯತ್ನಿಸುವವರ ವಿರುದ್ಧ ಇದುವರೆಗೂ ಇದ್ದ 3 ವರ್ಷಗಳ ಜೈಲು ಶಿಕ್ಷೆಯ ಬದಲಾಗಿ, 10 ವರ್ಷಗಳ ಕಾಲ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಆಧಾರ್ ಕಾರ್ಡ್ ಬಗ್ಗೆ ಸುಪ್ರೀಂ ಹೇಳಿದ್ದೇನು?
    ಸರ್ಕಾರಿ ಸೌಲಭ್ಯಗಳ ಪಡೆಯಲು `ಆಧಾರ್’ ಬೇಕೋ ಅಥವಾ ಬೇಡವೋ ಎಂಬ ಗೊಂದಲಗಳಿಗೆ ಸೆಪ್ಟೆಂಬರ್ 26ರಂದು ಸುಪ್ರೀಂಕೋರ್ಟ್ ತೆರೆದಿತ್ತು. ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಎ.ಎಂ.ಖಾನ್ವಿಲ್ಕರ್, ಅಶೋಕ್‍ಭೂಷಣ್ ಅವರನ್ನು ಒಳಗೊಂಡಿದ್ದ ಪೀಠ ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಎತ್ತಿ ಹಿಡಿದಿತ್ತು.

    ಆಧಾರ್ ಮೇಲಿನ ದಾಳಿ ಸಂವಿಧಾನದ ಮೇಲೆ ದಾಳಿ ನಡೆಸಿದಂತೆ ಆಗುತ್ತದೆ. ಆಧಾರ್ ವಿಶಿಷ್ಟವಾಗಿರುವುದೇ ಉತ್ತಮವಾಗಿದ್ದು, ಈಗಾಗಲೇ ಆಧಾರ್ ಜನ ಸಾಮನ್ಯ ಬಳಿ ತಲುಪಿದ್ದು, ಅದು ದೇಶದ ಗುರುತಿನ ಪತ್ರವಾಗಿದೆ. ಈಗ ಆಧಾರ್ ವಿರೋಧಿಸಿದರೆ ಕೈಯಲ್ಲಿರುವ ಮಗುವನ್ನ ಎಸೆದಂತೆ. ಆಧಾರ್ ವಿರೋಧಿಸಿದರೆ, ಸಂವಿಧಾನವನ್ನೇ ವಿರೋಧಿಸಿದಂತೆ ಎಂದು ಪೀಠ ತಿಳಿಸಿತ್ತು.

    ಯಾವುದಕ್ಕೆ ಆಧಾರ್ ಬೇಕು..?
    1. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯ.
    2. ಪ್ಯಾನ್, ಆದಾಯ ತೆರಿಗೆ (ಐಟಿ ರಿಟರ್ನ್ಸ್), ಆಸ್ತಿ ಖರೀದಿಗೆ ಆಧಾರ್ ಕಡ್ಡಾಯ.
    3. ಪ್ಯಾನ್ ನಂಬರ್ ಗೆ ಅಧಾರ್ ಕಡ್ಡಾಯವಾಗಿ ಲಿಂಕ್ ಮಾಡಲೇಬೇಕು.
    4. ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳಿಗೆ ಆಧಾರ್ ಕಡ್ಡಾಯ ಸಲ್ಲಿಸುವುದು.

    ಯಾವುದಕ್ಕೆ ಬೇಡ..?
    1. ಖಾಸಗಿ ಸಂಸ್ಥೆಗಳು ಆಧಾರ್ ಕೇಳುವಂತಿಲ್ಲ
    2. ಆಧಾರ್ ಮಾಹಿತಿ ಅಥವಾ ದತ್ತಾಂಶವನ್ನು 6 ತಿಂಗಳಕ್ಕೂ ಹೆಚ್ಚಿನ ಕಾಲ ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ.
    3. ಎಲ್ಲ ಬ್ಯಾಂಕ್‍ಗಳಿಗೆ ಆಧಾರ್ ಮಾಹಿತಿ ಕೊಡುವಂತಿಲ್ಲ.
    4. ಸೆಕ್ಷನ್ 7ರ ಪ್ರಕಾರ ಶಾಲೆಗಳ ಪ್ರವೇಶಾತಿ ವೇಳೆ ಆಧಾರ್ ಕೊಡುವ ಅಗತ್ಯವಿಲ್ಲ.
    5. ಸಿಬಿಎಸ್‍ಸಿ, ಯುಜಿಸಿ, ನೀಟ್ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ.
    6. ಸಿಮ್ ಖರೀದಿ, ಪೇಟಿಎಂ, ಫೋನ್ ಪೇ ಸೇರಿದಂತೆ ಡಿಜಿಟಲ್ ಪೇಮೆಂಟ್ ಆ್ಯಪ್ ಗಳಿಗೆ ಕಡ್ಡಾಯವಲ್ಲ.
    7. ಸೆಕ್ಷನ್ 2(ಬಿ) ಅಕ್ರಮ ವಲಸಿಗರಿಗೆ ಆಧಾರ್ ಕೊಡುವಂತಿಲ್ಲ.
    8. ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವ ಅವಶ್ಯಕತೆಯಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ನವದೆಹಲಿ: ದೇಶದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಮ್ ಸಂಸ್ಥೆ ವೊಡಾಫೋನ್‍ನ ಭಾರತದ ಘಟಕ ವಿಲೀನಗೊಳ್ಳುತ್ತಿರುವ ಬಗ್ಗೆ ಇಂದು ಘೋಷಿಸಿವೆ.

    ಐಡಿಯಾ ಹಾಗೂ ವೊಡಾಫೋನ್ ಇಂಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ನಿರ್ಮಾಣವಾಗಲಿದೆ. ಟೆಲಿಕಾಮ್ ಮಾರುಕಟ್ಟೆಗೆ ಜಿಯೋ ಎಂಟ್ರಿಯಾದ ನಂತರ ಸ್ಪರ್ಧೆ ಹೆಚ್ಚಾಗಿದ್ದು, ಸಂಸ್ಥೆಗಳ ವಿಲೀನಕ್ಕೆ ಉತ್ತೇಜಿಸಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

    ಡೀಲ್ ಪ್ರಕಾರ ಹೊಸ ಕಂಪೆನಿಯಲ್ಲಿ ವೋಡಫೋನ್ ಶೇ.45 ರಷ್ಟು ಪಾಲು ಹೊಂದಲಿದ್ದು, ಶೇ. 26 ರಷ್ಟು ಪಾಲುದಾರಿಕೆ ಮೇಲೆ ಐಡಿಯಾ ಕಂಪೆನಿಗೆ ಹಕ್ಕು ಇರಲಿದೆ.

    ಮಾರ್ಚ್ 16ರಂದು ವೊಡಾಫೋನ್ ನ ಅಧಿಕಾರಿಗಳು ಸಭೆ ನಡೆಸಿ ನಿಯಮಗಳನ್ನು ಪರಿಶೀಲಿಸಿ ಕಂಪೆನಿಗಳ ವಿಲೀನಕ್ಕೆ ಸಮ್ಮತಿ ಸೂಚಿಸಿದ್ದರು. ತಜ್ಞರ ಪ್ರಕಾರ ಐಡಿಯಾ ಮತ್ತು ವೊಡಾಫೋನ್ ಇಂಡಿಯಾದ ವಿಲೀನದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ರಿಲಯನ್ಸ್ ಜಿಯೋ ಹಾಗೂ ಭಾರತಿ ಏರ್‍ಟೆಲ್ ಜೊತೆಗೆ ಸ್ಪರ್ಧಿಸಲು ಐಡಿಯಾ ಹಾಗೂ ವೊಡಾಫೋನ್ ಇಂಡಿಯಾ ಕಂಪೆನಿಗಳು ವಿಲೀನವಾಗುತ್ತಿರುವುದು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಈ ವಿಲೀನದೊಂದಿಗೆ ಆದಿತ್ಯಾ ಬಿರ್ಲಾ ಗ್ರೂಪ್ ದೇಶದಲ್ಲಿ ಉತ್ತಮ ಗುಣಮಟ್ಟದ ಡಿಜಿಟಲ್ ಸೇವೆಯನ್ನ ಒದಗಿಸಲಿದೆ. ಇದು ಭಾರತೀಯರನ್ನ ಡಿಜಿಟಲ್ ಜೀವನಶೈಲಿಯತ್ತ ಕೊಂಡಯ್ಯಲಿದ್ದು, ಸರ್ಕಾರದ ಡಿಜಿಟಲ್ ಇಂಡಿಯಾ ಉದ್ದೇಶ ಸಾಕಾರವಾಗಲಿದೆ ಎಂದು ಆದಿತ್ಯ ಬಿರ್ಲಾ ಗ್ರೂಪ್‍ನ ಅಧ್ಯಕ್ಷರಾದ ಮಂಗಳಂ ಬಿರ್ಲಾ ಹೇಳಿದ್ದಾರೆ. ಮುಂದಿನ ವರ್ಷದ ವೇಳೆಗೆ ವೊಡಾಫೋನ್ ಇಂಡಿಯಾ ಹಾಗೂ ಐಡಿಯಾ ವಿಲೀನ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ಇದೇ ತಿಂಗಳ ಆರಂಭದಲ್ಲಿ ದೇಶದ 6 ರಾಜ್ಯಗಳಲ್ಲಿ ಭಾರತಿ ಏರ್‍ಟೆಲ್ ಸಂಸ್ಥೆ ನಾರ್ವೇ ಯ ಟೆಲಿನಾರ್ ಸಂಸ್ಥೆಯನ್ನ ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿತ್ತು.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ