Tag: telecom companies

  • ಟೆಲಿಕಾಂ ಕಂಪನಿಗಳು ಈಸ್ಟ್ ಇಂಡಿಯಾ ಕಂಪನಿ ರೀತಿ ವರ್ತಿಸುತ್ತಿವೆ- ಕಾಂಗ್ರೆಸ್

    ಟೆಲಿಕಾಂ ಕಂಪನಿಗಳು ಈಸ್ಟ್ ಇಂಡಿಯಾ ಕಂಪನಿ ರೀತಿ ವರ್ತಿಸುತ್ತಿವೆ- ಕಾಂಗ್ರೆಸ್

    – ದರ ಏರಿಕೆಯ ಮೂಲಕ ದರೋಡೆಗೆ ನಿಂತಿವೆ
    – ಮೊದಲು ಡೇಟಾ ದರ ಕಡಿಮೆ ಮಾಡಿದ್ಯಾಕೆ?

    ನವದೆಹಲಿ: ಟೆಲಿಕಾಂ ಕಂಪನಿಗಳ ದರ ಏರಿಕೆ ಸಮರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದೆ.

    ಈ ಕುರಿತು ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಜ್ವಾ ಪ್ರತಿಕ್ರಿಯಿಸಿದ್ದು, ಟೆಲಿಕಾಂ ಕಂಪನಿಗಳು ಟಾರಿಫ್ ಪ್ಲಾನ್‍ಗಳ ದರವನ್ನು ಹೆಚ್ಚಿಸುವ ಮೂಲಕ ಗ್ರಾಹಕರನ್ನು ಸುಲಿಗೆ ಮಾಡುತ್ತಿವೆ. ಈ ಮೂಲಕ ಈಸ್ಟ್ ಇಂಡಿಯಾ ಕಂಪನಿ ರೀತಿ ವರ್ತಿಸುತ್ತಿವೆ. ಇದನ್ನು ಕೇಂದ್ರ ಸರ್ಕಾರ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

    ವೋಡಾಫೋನ್-ಐಡಿಯಾ, ಭಾರ್ತಿ ಏರ್‍ಟೆಲ್ ಡಿಸೆಂಬರ್ 3 ರಿಂದ ಹಾಗೂ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಡಿಸೆಂಬರ್ 6ರಿಂದ ಕರೆ ಹಾಗೂ ಡೇಟಾ ದರವನ್ನು ಶೇ.15ರಿಂದ 47 ರಷ್ಟು ಹೆಚ್ಚಳ ಮಾಡುವ ಕುರಿತು ತಿಳಿಸಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

    ಇದ್ದಕ್ಕಿದ್ದಂತೆ ಟಾರಿಫ್ ದರ ಹೆಚ್ಚಿಸುವುದು ಸುಲಿಗೆಗಿಂತ ಕಡಿಮೆಯೇನಲ್ಲ. ಮೊದಲು ಕರೆ ಹಾಗೂ ಡೇಟಾ ದರವನ್ನು ಕಡಿಮೆ ಮಾಡಿದ್ದರು. ಇದೀಗ ಅವರ ಜೇಬಿಗೆ ಹಣ ಬರುತ್ತಿದ್ದಂತೆ ದರ ಹೆಚ್ಚಿಸುವ ಮೂಲಕ ಸುಲಿಗೆ ಮಾಡಲು ಮುಂದಾಗಿದ್ದಾರೆ ಎಂದು ಬಿಜ್ವಾ ಆರೋಪಿಸಿದ್ದಾರೆ.

    ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಸಹ ಆಕ್ರೋಶ ವ್ಯಕ್ತಪಡಿಸಿದ್ದು, ಟೆಲಿಕಾಂ ವಲಯ ಏಕೆ 8 ಲಕ್ಷ ಕೋಟಿ ರೂ. ಸಾಲ ಹೊಂದಿದೆ. ಟೆಲಿಕಾಂ ಕಂಪನಿಗಳ ಈ ನಿರ್ಧಾರಕ್ಕೆ ಸರ್ಕಾರವೇ ಕಾರಣ. ರಿಲಾಯನ್ಸ್‍ನ ಜಿಯೋ ಕಾಲಿಟ್ಟ ನಂತರ ಈ ಬೆಲೆ ವಾರ್ ಶುರುವಾಗಿದೆ ಎಂದರು.

    ಐಡಿಯಾ ವೊಡಾಫೋನ್ ಮತ್ತು ಏರ್‍ಟೆಲ್ ಕಂಪನಿಗಳು ಡಿ.3 ರಿಂದ ಹಾಗೂ ರಿಲಾಯನ್ಸ್ ಜಿಯೋ ಡಿಸೆಂಬರ್ 6ರಿಂದ ಮೊಬೈಲ್ ಕರೆ ಮತ್ತು ಡೇಟಾ ದರಗಳನ್ನು ಹೆಚ್ಚಿಸುವುದಾಗಿ ತಿಳಿಸಿವೆ. ಈ ಹಿಂದಿನ ದರಗಳಿಗೆ ಹೋಲಿಸಿದರೆ ಶೇ.42 ರಷ್ಟು ದರ ಹೆಚ್ಚಳವಾಗಲಿದೆ.

    ಮಾರುಕಟ್ಟೆಯಲ್ಲಿ ಜಿಯೋಗೆ ಸ್ಪರ್ಧೆ ನೀಡಲು ಮೂರು ವರ್ಷಗಳಿಂದ ದರವನ್ನು ಇಳಿಸಿದ್ದ ಟೆಲಿಕಾಂ ಕಂಪನಿಗಳು ಈಗ ದರ ಏರಿಸುತ್ತಿವೆ. ವೊಡಾಫೋನ್ ಐಡಿಯಾ, ಏರ್‍ಟೆಲ್ ಕಳೆದ ವಾರ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿ ಕಂಪನಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬೆಲೆ ಏರಿಕೆ ಮಾಡಲಾಗುವುದು ಎಂದು ಹೇಳಿಕೊಂಡಿತ್ತು.

    ಟೆಲಿಕಾಂ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸತನಕ್ಕೆ ತೆರೆಯಬೇಕಾದರೆ ಕೋಟ್ಯಂತರ ರೂ. ಹಣ ಹೂಡಬೇಕಾಗುತ್ತದೆ. ನಷ್ಟದಲ್ಲಿದ್ದುಕೊಂಡು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಕಂಪನಿಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದವು.

  • ಯಾವುದೇ ದಿನದಲ್ಲಿ ಭಾರತವನ್ನು ತೊರೆಯಬಹುದು ವೊಡಾಫೋನ್

    ಯಾವುದೇ ದಿನದಲ್ಲಿ ಭಾರತವನ್ನು ತೊರೆಯಬಹುದು ವೊಡಾಫೋನ್

    ನವದೆಹಲಿ: ವಿದೇಶಿ ಟೆಲಿಕಾಂ ಸಂಸ್ಥೆ ವೊಡಾಫೋನ್ ಭಾರತದಲ್ಲಿ ತನ್ನ ಉದ್ಯಮವನ್ನು ತೊರೆಯಲು ಮುಂದಾಗಿದೆ ಎಂದು ವರದಿಯಾಗಿದೆ.

    ಭಾರೀ ನಷ್ಟದಲ್ಲಿರುವ ಕಾರಣ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಭಾರತವನ್ನು ತೊರೆಯಲು ಸಿದ್ಧತೆ ನಡೆಸಿದೆ ಎಂದು ಐಎಎನ್‍ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

    ವೊಡಾಫೋನ್ ಪ್ರತಿ ತಿಂಗಳು ತನ್ನ ಲಕ್ಷಾಂತರ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಮಾರುಕಟ್ಟೆಯಲ್ಲಿಯೂ ಬೇಡಿಕೆ ಇಳಿಮುಖವಾಗುತ್ತಿದೆ. ಈ ಎಲ್ಲದರ ಪರಿಣಾಮ ವೊಡಾಫೋನ್ ಆರ್ಥಿಕ ಸ್ಥಿತಿ ಮೇಲೆ ಭಾರೀ ಹೊಡೆತ ಬಿದ್ದಿದೆ. ಇದರಿಂದಾಗಿ ಯಾವುದೇ ದಿನದಲ್ಲಾದರೂ ಭಾರತದಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಈ ವರ್ಷದ ವೊಡಾಫೋನ್ ತ್ರೈಮಾಸಿಕ ವರದಿಯ ಪ್ರಕಾರ ಭಾರೀ ನಷ್ಟವನ್ನು ಅನುಭವಿಸಿದೆ. ವೊಡಾಫೋನ್ ಮತ್ತು ಐಡಿಯಾ ಸೆಲ್ಯೂಲರ್ ಜೊತೆಗೆ ವಿಲೀನವಾದ ಬಳಿಕ ಕಂಪನಿಯ ಶೇರುಗಳ ಬೆಲೆ ಕೂಡ ತೀವ್ರ ಇಳಿಮುಖ ಕಂಡಿದೆ. 2018ರ ಜೂನ್ ತಿಂಗಳಿಗೆ ಅಂತ್ಯಗೊಂಡ ಮೊದಲ ತ್ರೈಮಾಸಿಕಲ್ಲಿ ವೊಡಾಫೋನ್ 2,757.60 ಕೋಟಿ ರೂ. ನಷ್ಟ ಅನುಭವಿಸಿದ್ದರೆ 2019ರಲ್ಲಿ ಅಂತ್ಯಗೊಂಡ ಜೂನ್ ತ್ರೈಮಾಸಿಕದಲ್ಲಿ 4,067.01 ಕೋಟಿ ರೂ. ನಷ್ಟ ಅನುಭವಿಸಿತ್ತು. ಒಂದೇ ವರ್ಷದಲ್ಲಿ ನಷ್ಟದ ಪ್ರಮಾಣವು ದ್ವಿಗುಣಗೊಂಡ ಹಿನ್ನೆಲೆಯಲ್ಲಿ ವೊಡಾಫೋನ್ ಕಂಪನಿ ಭಾರತ ತೊರೆಯಲು ಮುಂದಾಗುತ್ತಿದೆ ಎನ್ನಲಾಗುತ್ತಿದೆ.

    ಈ ಸುದ್ದಿಗೆ ಸಂಬಂಧಿಸಿದಂತೆ ಸುದ್ದಿಸಂಸ್ಥೆ ವೊಡಾಫೋನ್ ಕಂಪನಿಯನ್ನು ಸಂಪರ್ಕಿಸಿದೆ. ಆದರೆ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೊಡಾಫೋನ್ ಪ್ರತಿಕ್ರಿಯೆ ನೀಡಿದ ಬಳಿಕ ಸುದ್ದಿ ಪ್ರಕಟಿಸಲಾಗುವುದು ಎಂದು ಸುದ್ದಿಸಂಸ್ಥೆ ಹೇಳಿದೆ.

    ವೊಡಾಫೋನ್-ಐಡಿಯಾ ಸಂಸ್ಥೆ ತನಗೆ ಸಾಲ ನೀಡಿರುವ ಸಂಸ್ಥೆಗೆ ಸಾಲದ ಬಾಧ್ಯತೆಗಳನ್ನು ಮರುಹಂಚಿಕೆ ಮಾಡಬೇಕೆಂದು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ವೊಡಾಫೋನ್ ಭಾರತ ತೊರೆಯಲು ಮುಂದಾಗಿದೆ ಎಂಬ ವದಂತಿ ಹಬ್ಬಿತ್ತು. ಈ ಮಾಹಿತಿಯನ್ನು ತಳ್ಳಿಹಾಕಿರುವ ಸಂಸ್ಥೆ, ನಾವು ಯಾವುದೇ ಮನವಿಯನ್ನೂ ಯಾರಿಗೂ ಮಾಡಿಲ್ಲ. ಎಲ್ಲಾ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಲಿದ್ದೇವೆ ಎಂದು ಸ್ಪಷ್ಟನೆ ನೀಡಿತ್ತು.

    ಹೊಂದಾಯಿಸಲಾದ ನಿವ್ವಳ ಆದಾಯ’ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿದೆ. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಲಾಗಿದೆ.

    ಭಾರತಿ ಏರ್‍ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯುನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2537 ಕೋಟಿ ರೂ. ಪಾವತಿಸಬೇಕಾಗಿದೆ. ನಷ್ಟದಲ್ಲಿರುವ ವೊಡಾಫೋನ್ ಕಂಪನಿಗೆ ಸುಪ್ರೀಂ ತೀರ್ಪು ಭಾರೀ ಹೊಡೆತ ನೀಡಿದೆ.

    ಏನಿದು ಎಜಿಆರ್?:
    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

    ದೇಶದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಮ್ ಸಂಸ್ಥೆ ವೊಡಾಫೋನ್ ನ ಭಾರತದ ಘಟಕ 2017ರ ಮಾರ್ಚ್ 20 ರಂದು ವಿಲೀನಗೊಳ್ಳುತ್ತಿರುವುದಾಗಿ ಘೋಷಿಸಿಕೊಂಡಿತ್ತು.

    ಐಡಿಯಾ ಹಾಗೂ ವೊಡಾಫೋನ್ ಇಂಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ಹೊರಹೊಮ್ಮಿತ್ತು. ಡೀಲ್ ಪ್ರಕಾರ ಹೊಸ ಕಂಪೆನಿಯಲ್ಲಿ ವೊಡಾಫೋನ್ ಶೇ.45 ರಷ್ಟು ಪಾಲು ಹೊಂದಿದ್ದು, ಶೇ.26 ರಷ್ಟು ಪಾಲುದಾರಿಕೆ ಮೇಲೆ ಐಡಿಯಾ ಕಂಪೆನಿ ತನ್ನ ಹಕ್ಕನ್ನು ಹೊಂದಿದೆ.

    ಈ ವಿಲೀನದೊಂದಿಗೆ ಆದಿತ್ಯಾ ಬಿರ್ಲಾ ಗ್ರೂಪ್ ದೇಶದಲ್ಲಿ ಉತ್ತಮ ಗುಣಮಟ್ಟದ ಡಿಜಿಟಲ್ ಸೇವೆಯನ್ನ ಒದಗಿಸಲಿದೆ. ಇದು ಭಾರತೀಯರನ್ನ ಡಿಜಿಟಲ್ ಜೀವನಶೈಲಿಯತ್ತ ಕೊಂಡಯ್ಯಲಿದ್ದು, ಸರ್ಕಾರದ ಡಿಜಿಟಲ್ ಇಂಡಿಯಾ ಉದ್ದೇಶ ಸಾಕಾರವಾಗಲಿದೆ ಎಂದು ಆದಿತ್ಯ ಬಿರ್ಲಾ ಗ್ರೂಪ್‍ನ ಅಧ್ಯಕ್ಷರಾದ ಮಂಗಳಂ ಬಿರ್ಲಾ ಹೇಳಿಕೆ ನೀಡಿದ್ದರು.