Tag: Tejaswini AnanthKumar

  • ಅನಂತ್​ಕುಮಾರ್​ ಗೆ ಅನ್ಯಾಯ – ಟಿಕೆಟ್ ಸಿಗದ್ದಕ್ಕೆ ತೇಜಸ್ವಿನಿ ಅಭಿಮಾನಿಗಳು ಆಕ್ರೋಶ

    ಅನಂತ್​ಕುಮಾರ್​ ಗೆ ಅನ್ಯಾಯ – ಟಿಕೆಟ್ ಸಿಗದ್ದಕ್ಕೆ ತೇಜಸ್ವಿನಿ ಅಭಿಮಾನಿಗಳು ಆಕ್ರೋಶ

    ಬೆಂಗಳೂರು: ಲೋಕಸಭೆ ಚುನಾವಣೆಗೆ ಬೆಂಗಳೂರು ದಕ್ಷಿಣದಿಂದ ದಿವಂಗತ ಅನಂತ್​ಕುಮಾರ್ ಅವರ ಪತ್ನಿ ತೇಜಸ್ವಿನಿಗೆ ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಹೇಳಿ, ಕೊನೆಗೆ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿರುವುದಕ್ಕೆ, ತೇಜಸ್ವಿನಿ ಅವರ ಅಭಿಮಾನಿಗಳು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತೇಜಸ್ವಿನಿ ಅವರ ನಿವಾಸ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಅಭಿಮಾನಿಗಳು, ಅನಂತ್​ಕುಮಾರ್ ಅವರು ಕೇಂದ್ರದಲ್ಲಿ ಉತ್ತಮ ಆಡಳಿತ ಮಾಡಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಹೆಸರನ್ನು ತಂದುಕೊಟ್ಟಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಲೋಕಸಭೆ ಚುನಾವಣೆಗೆ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡುವುದಾಗಿ ತಿಳಿಸಿ, ಕೊನೆ ಕ್ಷಣದಲ್ಲಿ ಮತ್ತೊಬ್ಬರನ್ನು ಅಭ್ಯರ್ಥಿಯಾಗಿ ಮಾಡಿರುವುದು ತಪ್ಪು. ಇದು ಅನ್ಯಾಯ. ಪಕ್ಷಕ್ಕೊಸ್ಕರ ದುಡಿದ ಪ್ರಭಾವಿ ನಾಯಕನ ಪತ್ನಿಗೆ ಟಿಕೆಟ್ ನೀಡದಿರುವುದು ಮೋಸ ಎಂದು ಕಿಡಿಕಾರಿದರು. ಇದನ್ನು ಓದಿ:ಮೂರು ದಿನದ ಹಿಂದೆ ತೇಜಸ್ವಿ ಸೂರ್ಯಗೆ ಮನವಿ ಮಾಡಿದ್ದ ತೇಜಸ್ವಿನಿ!

    ರಾಜ್ಯಕ್ಕೆ ಒಳ್ಳೆದನ್ನ ಮಾಡಿದ್ದು ನೀವೊಬ್ಬರೆ ಎಂದು ಅನಂತ್​ಕುಮಾರ್ ಅವರಿಗೆ ಹಾಡಿ ಹೊಗಳಿ ಈಗ ಅವರ ಮನೆಯವರಿಗೆ ಮೋಸ ಮಾಡುತ್ತಿರುವುದು ಕಾಣದ ಕೈಗಳ ಕೈವಾಡ. ತೇಜಸ್ವಿನಿ ಅವರು ಯಾವಾಗಲು ದೇಶ ಮೊದಲು, ಪಕ್ಷ ಹಾಗೂ ವ್ಯಕ್ತಿ ಅದರನಂತರ ಎಂದು ಹೇಳುತ್ತಾರೆ. ಅದಮ್ಯ ಚೇತನ ಎಂಬ ಸಾಮಾಜಿಕ ಸಂಸ್ಥೆ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದರೆ ಯಾವತ್ತು ಅವರು ಇದನ್ನೆಲ್ಲ ತೋರಿಸಿಕೊಂಡಿಲ್ಲ. ಅದಮ್ಯ ಚೇತನ ಸಂಸ್ಥೆ ಜೊತೆ ಹೊರಗೆಲ್ಲೂ ಕಾಣಿಸಿಕೊಂಡಿಲ್ಲ. ಇನ್ನು ಮುಂದಾದರು ಅವರು ನಮ್ಮೊಂದಿಗೆ ಕಾಣಿಸಿಕೊಳ್ಳಬೇಕು. ಆಗ ಅವರ ಕೆಲಸಗಳು ಜನರಿಗೆ ತಿಳಿಯುತ್ತದೆ ಎಂದು ಮನವಿ ಮಾಡಿದರು. ಇದನ್ನು ಓದಿ:ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯಗೆ ಬಿಜೆಪಿ ಟಿಕೆಟ್

    ಬಳಿಕ ಕಳೆದ 30 ವರ್ಷಗಳಿಂದ ತೇಜಸ್ವಿನಿ ಅವರು ಅನಂತ್​ಕುಮಾರ್ ಅವರ ಜೊತೆಗೂಡಿ ಜನಪರ ಕೆಲಸ ಮಾಡಿದ್ದಾರೆ. ಆದರೆ ಅದ್ಯಾವುದು ಬೆಳಕಿಗೆ ಬಂದಿಲ್ಲ. ತೆರೆಮರೆಯಲ್ಲಿದ್ದುಕೊಂಡೆ ತೇಜಸ್ವಿನಿ ಅವರು ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಅದ್ಯಾವುದಕ್ಕೂ ಇಗ ಬೆಲೆ ಇಲ್ಲದಂತಾಗಿದೆ. ಬಿಜೆಪಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಿ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

  • ಬೆಂಗಳೂರು ದಕ್ಷಿಣದ ಟಿಕೆಟ್ ಯಾರಿಗೆ – ತೇಜಸ್ವಿನಿಗೋ, ತೇಜಸ್ವಿ ಸೂರ್ಯಗೋ?

    ಬೆಂಗಳೂರು ದಕ್ಷಿಣದ ಟಿಕೆಟ್ ಯಾರಿಗೆ – ತೇಜಸ್ವಿನಿಗೋ, ತೇಜಸ್ವಿ ಸೂರ್ಯಗೋ?

    ಬೆಂಗಳೂರು: ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್  ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕಾರಣ ಎನ್ನುವ ಮಾತು ಬಿಜೆಪಿ ವಲಯದಿಂದ ಈಗ ಕೇಳಿ ಬಂದಿದೆ.

    ಹೌದು. ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಬಳಿಕ ಈ ಕ್ಷೇತ್ರವನ್ನು ಅವರ ಪತ್ನಿ ತೇಜಸ್ವಿನಿ ಅವರಿಗೆ ನೀಡಲು ಪಕ್ಷದ ಮುಖಂಡರು ಮುಂದಾಗಿದ್ದರು. ಈ ಸಂಬಂಧ ದಕ್ಷಿಣ ಭಾಗದ ಬಿಜೆಪಿ ಶಾಸಕರು, ಮುಖಂಡರ ಸಭೆ ನಡೆಸಿದ ಬಳಿಕ ರಾಜ್ಯ ನಾಯಕರು ಹೈಕಮಾಂಡಿಗೆ ತೇಜಸ್ವಿನಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು.

    ಅನಂತ್ ಕುಮಾರ್ ಅವರ ಸತತ ಜಯದಿಂದ ಬಿಜೆಪಿಯ ಭದ್ರಕೋಟೆ ಆಗಿರುವ ಈ ಕ್ಷೇತ್ರದಲ್ಲಿ ಸುಲಭವಾಗಿಯೇ ಅಭ್ಯರ್ಥಿ ಆಯ್ಕೆಯನ್ನು ಬಿಜೆಪಿ ಮಾಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಬಿಜೆಪಿ ತನ್ನ ಐದು ಪಟ್ಟಿಯನ್ನು ಬಿಡುಗಡೆ ಮಾಡಿದರೂ ಬೆಂಗಳೂರು ದಕ್ಷಿಣದ ಅಭ್ಯರ್ಥಿಯನ್ನು ಘೋಷಿಸದೇ ಕುತೂಹಲ ಮೂಡಿಸಲು ಕಾರಣ ಬಿಎಲ್ ಸಂತೋಷ್ ಕಾರಣ ಎನ್ನುವ ಮಾತು ಪಕ್ಷದ ಮೂಲದಿಂದ ತಿಳಿದು ಬಂದಿದೆ.

    ತೇಜಸ್ವಿನಿ ಅವರಿಗೆ ಟಿಕೆಟ್ ನೀಡಲು ಆರ್‍ಎಸ್‍ಎಸ್ ಆಕ್ಷೇಪ ವ್ಯಕ್ತಪಡಿಸುತ್ತದೆ. ಹೀಗಾಗಿ ಪಕ್ಷದ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿಸೂರ್ಯ ಅವರನ್ನು ಕಣಕ್ಕೆ ಇಳಿಸಬಹುದು ಎಂದು ಹೈಕಮಾಂಡ್ ಮಟ್ಟದವರಿಗೆ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಪರಿಗಣಿಸಿದ ಹೈಕಮಾಂಡ್ ಈಗ ತೇಜಸ್ವಿನಿ ಅವರನ್ನು ಇಳಿಸಬೇಕೋ ಅಥವಾ ತೇಜಸ್ವಿ ಸೂರ್ಯ ಅವರನ್ನು ಇಳಿಸಬೇಕೋ ಎನ್ನುವ ಗೊಂದಲದಲ್ಲಿದೆ.

    ತೇಜಸ್ವಿನಿ ಹೆಸರನ್ನು ಶಿಫರಾಸು ಮಾಡಿದ ಬಳಿಕ ಸಂತೋಷ್ ಅವರು ಮತ್ತೊಂದು ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ರಾಜ್ಯ ನಾಯಕರು ಸಂತೋಷ್ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಸಂತೋಷ್ ಅವರ ಪ್ರಸ್ತಾಪಕ್ಕೆ ಕೆಲ ಬಿಜೆಪಿ ನಾಯಕರು ಸಹಮತವನ್ನೂ ಸೂಚಿಸಿದ್ದಾರೆ ಎನ್ನಲಾಗಿದೆ. ಜಯನಗರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಾಲಿ ಶಾಸಕರಾಗಿದ್ದ ವಿಜಯ್ ಕುಮಾರ್ ಅವರು ಮೃತಪಟ್ಟಿದ್ದರು. ಹೀಗಾಗಿ ನಂತರ ನಡೆದ ಚುನಾವಣೆಯಲ್ಲಿ ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಅನುಕಂಪದ ಅಲೆಯಲ್ಲಿ ಪ್ರಹ್ಲಾದ್ ಬಾಬು ಅವರಿಗೆ ಜಯ ಸಿಗಬಹುದು ಎಂದು ಎಣಿಸಿ ಟಿಕೆಟ್ ನೀಡಿದ್ದರೂ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸೌಮ್ಯಾ ರೆಡ್ಡಿ ಜಯಗಳಿಸಿದ್ದರು. ಹೀಗಾಗಿ ಯಾವಾಗಲೂ ಅನುಕಂಪ ಕೆಲಸ ಮಾಡುವುದಿಲ್ಲ. ಪಕ್ಷ ಸಂಘಟನೆಯ ದೃಷ್ಟಿಯಿಂದಾಗಿ ಕ್ಷೇತ್ರದಲ್ಲಿ ಗಟ್ಟಿ ಅಭ್ಯರ್ಥಿಯನ್ನು ಹಾಕಬೇಕು ಎನ್ನುವ ವಿಚಾರದ ಬಗ್ಗೆ ಬಿಜೆಪಿ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ಸಂಜೆ ಇತ್ಯರ್ಥ: ಸೋಮವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವುದು ಇಂದು ಸಂಜೆ ಇತ್ಯರ್ಥವಾಗಲಿದೆ ಎಂದು ತಿಳಿಸಿದ್ದಾರೆ.

  • `ನೀವು ಬಂದ್ರೆ 28ಕ್ಕೆ 28′ ಕ್ಯಾಂಪೇನ್ ಬಲು ಜೋರು – ಬೆಂಗ್ಳೂರಿಗೆ ಮೋದಿ!

    `ನೀವು ಬಂದ್ರೆ 28ಕ್ಕೆ 28′ ಕ್ಯಾಂಪೇನ್ ಬಲು ಜೋರು – ಬೆಂಗ್ಳೂರಿಗೆ ಮೋದಿ!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ಸ್ಪರ್ಧೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭ ಮಾಡಲಾಗಿದ್ದು, ‘ನೀವು ಬಂದ್ರೆ 28ಕ್ಕೆ 28’ ಎಂಬ ಹ್ಯಾಶ್ ಟ್ಯಾಗ್ ಬಳಸಿ ರಾಷ್ಟ್ರಮಟ್ಟದಲ್ಲಿ ಅಭಿಯಾನ ಆರಂಭಿಸಲಾಗಿದೆ.

    ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಈ ಅಭಿಯಾನ ಆರಂಭ ಮಾಡಲಾಗಿದೆ. ಆದರೆ ಬಿಜೆಪಿ ರಾಜ್ಯ ನಾಯಕರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತ್‍ಕುಮಾರ್ ಅವರ ಹೆಸರು ಅಂತಿಮಗೊಳಿಸಿ ಕಳುಹಿಸಿದ್ದಾರೆ. ಹೈಕಮಾಂಡ್ ಹಂತದಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಘೋಷಣೆ ಆಗಬೇಕಿದೆ.

    ಪ್ರಮುಖವಾಗಿ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಅಭಿಯಾನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಇಂತಹ ಅಭಿಯಾನ ಏಕೆ ಎಂಬ ಅನುಮಾನ ಮೂಡಲು ಕಾರಣವಾಗಿದೆ. ಅನಗತ್ಯವಾಗಿ ಕ್ಷೇತ್ರದಲ್ಲಿ ಗೊಂದಲ ಮೂಡಿಸಲು ಇಂತಹ ಅಭಿಯಾನ ಆರಂಭ ಮಾಡಲಾಗಿದೆಯೇ ಅಥವಾ ಹೈಕಮಾಂಡ್ ಚುನಾವಣೆಗೆ ಹೊಸ ನಾಯಕರ ಹೆಸರು ಚಾಲ್ತಿ ಇದೆಯಾ ಎಂಬ ಚರ್ಚೆಗಳು ಕೇಳಿ ಬಂದಿದೆ.

    ಇತ್ತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ತೇಜಸ್ವಿನಿ ಅನಂತ್‍ಕುಮಾರ್ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದು, ಇಂದು ಹೈಕಮಾಂಡ್ ಅಧಿಕೃತ ಘೋಷಣೆ ಮಾಡಲಾಗುತ್ತದೆ. ಯಾವುದೇ ರೀತಿಯ ಗೊಂದಲಗಳು ಪಕ್ಷದಲ್ಲಿ ಇಲ್ಲ ಎಂದಿದ್ದಾರೆ. ಅಲ್ಲದೇ ಕೋರ್ ಕಮಿಟಿ ಸಭೆ ಕೂಡ ತೇಜಸ್ವಿನಿ ಅನಂತ್‍ಕುಮಾರ್ ಅವರನ್ನೇ ಶಿಫಾರಸ್ಸು ಮಾಡಿರುವುದಿರಿಂದ ಹೈಕಮಾಂಡ್ ನಿರ್ಧಾರ ಮೇಲೆ ಹೆಚ್ಚಿನ ಕುತೂಹಲ ಮೂಡಿದೆ.

  • ಬೆಂಗ್ಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್ ಬಹುತೇಕ ಫಿಕ್ಸ್

    ಬೆಂಗ್ಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್ ಬಹುತೇಕ ಫಿಕ್ಸ್

    ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವ, ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರನ್ನು ಕಣಕ್ಕೆ ಇಳಿಸಲು ರಾಜ್ಯ ಬಿಜೆಪಿ ನಾಯಕರು ಒಪ್ಪಿಗೆ ನೀಡಿದ್ದಾರೆ.

    ಇಂದು ಮಾಜಿ ಡಿಸಿಎಂ ಆರ್ ಅಶೋಕ್ ನಿವಾಸದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಶಾಸಕರಾದ ವಿ.ಸೋಮಣ್ಣ, ಉದಯ್ ಗರುಡಾಚಾರ್, ರವಿಸುಬ್ರಮಣ್ಯ, ಸತೀಶ್ ರೆಡ್ಡಿ ಸೇರಿದಂತೆ ಪಕ್ಷದ ಮುಖಂಡರು ಭಾಗಿಯಾಗಿದ್ದರು. ಈ ಸಭೆಯಲ್ಲಿ ತೇಜಸ್ವಿನಿ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಯಿತು.

    ಸಭೆಯ ಬಳಿಕ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಅವರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಈ ಬಾರಿ ತೇಜಸ್ವಿನಿ ಅವರು ಬಿಜೆಪಿ ಅಭ್ಯರ್ಥಿಯಾಗಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಹಾಗಾಗಿ ಅವರನ್ನೇ ಪಕ್ಷದ ಅಭ್ಯರ್ಥಿ ಆಗಬೇಕು ಎಂಬ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಹೈಕಮಾಂಡ್ ಅವರಿಗೆ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಅಭ್ಯರ್ಥಿ ಆಯ್ಕೆಯನ್ನು ತೀರ್ಮಾನ ಮಾಡುತ್ತದೆ. ಅನಂತಕುಮಾರ್ ಅವರು 6 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ ಗೆಲುವು ಪಡೆದಿದ್ದರು. ಆದ್ದರಿಂದ ಈ ಬಾರಿ ತೇಜಸ್ವಿನಿ ಅವರನ್ನು ಗೆಲ್ಲಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

    ಸಭೆ ಬಳಿಕ ಮಾತನಾಡಿದ ತೇಜಸ್ವಿನಿ ಅವರು, ನಾನು ಅನಂತಕುಮಾರ್ ಅವರನ್ನು ಮದುವೆಯಾಗಿ ಬಂದಾಗಿನಿಂದ ಬಿಜೆಪಿ ಪರಿವಾರದ ಭಾಗವೇ ಆಗಿದ್ದೇವೆ. ನಮ್ಮೆಲ್ಲ ಅಣ್ಣಂದಿರು ಒಮ್ಮತದಿಂದ ನನ್ನ ಹೆಸರನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಿದ್ದಾರೆ. ಹೈಕಮಾಂಡ್ ಯಾವ ತೀರ್ಮಾನ ಕೈಗೊಂಡರೂ ನಾನು ಅದಕ್ಕೆ ಬದ್ಧವಾಗಿರುತ್ತೇನೆ. ಪಕ್ಷದ ಹಿರಿಯರ ನಿರೀಕ್ಷೆಗಳನ್ನು ಹುಸಿಗೊಳಿಸದೇ ಕೆಲಸ ಮಾಡುತ್ತೇನೆ. ಸ್ಪರ್ಧೆ ಬಗ್ಗೆ ಶೀಘ್ರವೇ ಗೊತ್ತಾಗಲಿದೆ. ಎಲ್ಲವೂ ಸೌಹಾರ್ದಯುತವಾಗಿ ಬಗೆಹರಿದಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv