Tag: Tejaswini Ananthakumar

  • ಅನಂತ ಪ್ರೇರಣಾ ಕೇಂದ್ರ ನಾಳೆ ಲೋಕಾರ್ಪಣೆ

    ಅನಂತ ಪ್ರೇರಣಾ ಕೇಂದ್ರ ನಾಳೆ ಲೋಕಾರ್ಪಣೆ

    – ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಆದರ್ಶಗಳನ್ನು ಯುವಪೀಳಿಗೆಗೆ ಪರಿಚಯಿಸುವ ಉದ್ದೇಶ
    – ಸೌತ್ ಎಂಡ್ ವೃತ್ತದಲ್ಲಿದ್ದ ಅನಂತಕುಮಾರ್ ಕಚೇರಿಯನ್ನು ‘ಅನಂತ ಪ್ರೇರಣಾ ಕೇಂದ್ರ’ ವನ್ನಾಗಿ ಪರಿವರ್ತನೆ
    – ಮೇ6 ರಂದು ಬೆಳಿಗ್ಗೆ 10.30 ಕ್ಕೆ ಉದ್ಘಾಟನೆ – ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಭಾಗಿ

    ಬೆಂಗಳೂರು: ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ ಆದರ್ಶಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ರಚಿಸಲಾಗಿರುವ ಅನಂತ ಪ್ರೇರಣಾ ಹೆಸರಿನ ಮಾಹಿತಿ ಕೇಂದ್ರ ಮೇ 6, 2022 ರಂದು ಬೆಳಿಗ್ಗೆ 10.30 ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು, ನಾಡಸೇವೆಯಲ್ಲಿ ತೊಡಗಿಕೊಳ್ಳಬಯಸುವ ಯುವ ಶಕ್ತಿಗಳಿಗೆ ದಾರಿದೀಪವಾಗಲೆಂಬ ಸದುದ್ದೇಶದಿಂದ ಸೌತ್ ಎಂಡ್ ವೃತ್ತದಲ್ಲಿ ಈ ಹಿಂದೆ ಇದ್ದ ಅನಂತಕುಮಾರ್ ಅವರ ಕಚೇರಿಯನ್ನು ‘ಅನಂತ ಪ್ರೇರಣಾ ಕೇಂದ್ರ’ ವನ್ನಾಗಿಸಲಾಗಿದೆ. ಅನಂತಕುಮಾರರ ಬದುಕಿನ ಸಾರ್ಥಕತೆಯನ್ನು ಅರಿತವರಿಗೂ, ನಾಯಕತ್ವದ ಬೆಳವಣಿಗೆಯ ರೂಪರೇಷೆಯನ್ನು ಗುರುತಿಸಲೆಳಸುವವರಿಗೂ, ನಾಡ ಸೇವೆಯಲ್ಲಿ ತೊಡಗಿಕೊಳ್ಳಬಯಸುವ ಯುವಶಕ್ತಿಗಳಿಗೂ ದಾರಿದೀಪವಾಗಲೆಂಬ ಮಹದುದ್ದೇಶದಿಂದ ಅನಂತಕುಮಾರರ ಜೀವನ, ವ್ಯಕ್ತಿತ್ವ, ಸಾಧನೆಗಳನ್ನು ಪರಿಚಯಿಸುವ ಮಾಹಿತಿ ಕೇಂದ್ರವೊಂದನ್ನು ತೆರೆಯಲಾಗಿದೆ. ಅನಂತಕುಮಾರರ ಆಶೋತ್ತರಗಳನ್ನು ಮುಂದುವರಿಸಿ ನಿರ್ವಹಿಸುವ ಹೊಣೆ ಹೊತ್ತ ಅದಮ್ಯ ಚೇತನ ಸಂಸ್ಥೆಯ ಸಹಯೋಗದಲ್ಲಿ ಈ ಕೇಂದ್ರವು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಕಲಿ ಅಧಿಕಾರಿಗಳಿಂದ ಹಣ ವಸೂಲಿ – ಕರೆ ಬಂದರೆ ದೂರು ದಾಖಲಿಸುವಂತೆ ಎಸಿಬಿ ಪ್ರಕಟಣ

    ಅನಂತ ಪ್ರೇರಣಾ ಕೇಂದ್ರದ ಅಂಶಗಳು:
    ಛಾಯಾಚಿತ್ರ ಪ್ರದರ್ಶಿನಿ:
    ಈ ಪ್ರೇರಣಾ ಕೇಂದ್ರದಲ್ಲಿ ಅನಂತಕುಮಾರ್ ಅವರ ಬಾಲ್ಯದಿಂದ ಮೊದಲುಗೊಂಡು ಎಬಿವಿಪಿ ಕಾರ್ಯಕರ್ತರಾಗಿ ಅವರು ಗಳಿಸಿಕೊಂಡ ಅನುಭವ. ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಬೆಳೆಯಲು ಅವರು ದುಡಿದ ಪರಿ, ಆರು ಬಾರಿ ಸಂಸದರಾಗಿ, ಕೇಂದ್ರದಲ್ಲಿ ವಿವಿಧ ಖಾತೆಗಳ ಸಚಿವರಾಗಿ ಅನಂತಕುಮಾರ್ ಸಾಧಿಸಿದ ಕಾರ್ಯಗಳು, ಅಚ್ಚರಿ ಮೂಡಿಸುವಂತೆ ಅವರು ನಾಯಕತ್ವದ ಸೋಪಾನಗಳನ್ನು ಏರಿ ನಿಂತ ರೀತಿ ಎಲ್ಲವನ್ನೂ ಛಾಯಾಚಿತ್ರಗಳ ಮೂಲಕ ಪ್ರದರ್ಶನದ ಮೂಲಕ ಪರಿಚಯಿಸಲಾಗುತ್ತಿದೆ. ಈ ಚಿತ್ರಗಳನ್ನು ಸವಿವರ ಅರ್ಥಮಾಡಿಕೊಳ್ಳಲು ಧ್ವನಿರೂಪದ ವ್ಯಾಖ್ಯಾನವುಳ್ಳ ಮೊಬೈಲ್ ಆಪ್ ಸೌಕರ್ಯವನ್ನೂ ವ್ಯವಸ್ಥೆಮಾಡಲಾಗುತ್ತಿದೆ.

    ಗ್ರಂಥಭಂಡಾರ ಮತ್ತು ವಾಚನಾಲಯ:
    ಅನಂತಪ್ರೇರಣಾ ಕೇಂದ್ರದ ಒಂದು ಭಾಗದಲ್ಲಿ ಸುಸಜ್ಜಿತ ಗ್ರಂಥಭಂಡಾರ ಮತ್ತು ಉಚಿತ ವಾಚನಾಲಯವನ್ನು ವ್ಯವಸ್ಥೆಮಾಡಲಾಗಿದೆ. ಸಾರ್ವಜನಿಕರೂ ವಿದ್ಯಾರ್ಥಿಗಳೂ ಇವುಗಳ ಪ್ರಯೋಜನ ಪಡೆದುಕೊಳ್ಳಬಹುದು. ಇಲ್ಲಿ ಅನಂತಕುಮಾರರ ಸ್ವಂತ ಸಂಗ್ರಹದಿಂದಲೂ ಇತರ ಮೂಲಗಳಿಂದಲೂ ಸಂಗ್ರಹಿಸಿದ ಉಪಯುಕ್ತ ಪುಸ್ತಕಗಳನ್ನು ಇಲ್ಲಿಯೇ ಉಚಿತವಾಗಿ ಅಧ್ಯಯನ ಮಾಡಲು ಅವಕಾಶವಿದೆ. ಮುಂದೆ, ಉದ್ಯೋಗಾಪೇಕ್ಷಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳ ಪ್ರತ್ಯೇಕ ವಿಭಾಗವನ್ನು ತೆರೆಯುವ ಉದ್ದೇಶವೂ ಇದೆ. ಇದನ್ನೂ ಓದಿ: ವಿದ್ಯುತ್ ಸಮಸ್ಯೆ – 1,100 ರೈಲುಗಳು ರದ್ದು

    ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ:
    ಸೌತ್ ಎಂಡ್ ವೃತ್ತದ ಪರಿಸರದಲ್ಲಿ ಅನೇಕ ಶಿಕ್ಷಣಸಂಸ್ಥೆಗಳಿದ್ದು ದೂರದೂರದಿಂದ ಇಲ್ಲಿಗೆ ಪ್ರತಿನಿತ್ಯ ಅನೇಕ ವಿದ್ಯಾರ್ಥಿಗಳು ಬರುತ್ತಾರೆ. ಇವರಲ್ಲಿ ಅನೇಕರಿಗೆ ಮಧ್ಯಾಹ್ನದ ಊಟಕ್ಕೆ ಬೇಕಾದ ಅನುಕೂಲವಿರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಅದಮ್ಯ ಚೇತನದ ಸಹಯೋಗದೊಡನೆ ಪ್ರತಿನಿತ್ಯ ಮಧ್ಯಾಹ್ನದ ಭೋಜನವನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರೇರಣಾ ಕೇಂದ್ರದ ಮೇಲುಮಹಡಿಯ ಆವರಣದಲ್ಲಿ ಊಟದ ವಿತರಣೆಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

    ಗಿಡ ವಿತರಣೆ:
    ಸಸ್ಯಾಗ್ರಹ ಎಂಬ ಪರಿಕಲ್ಪನೆಯನ್ನು ಮುಂದಿಟ್ಟು ಅನಂತಕುಮಾರ್ ಬೆಂಗಳೂರು ಹಸಿರು ಪರಿಸರದ ಸ್ವಚ್ಛ ನಗರವಾಗಬೇಕೆಂಬ ಕನಸು ಕಂಡಿದ್ದವರು. ಅವರು ಪ್ರಾರಂಭಿಸಿದ ಹಸಿರು ಭಾನುವಾರ ಎಂಬ ಗಿಡ ನೆಡುವ ಕಾರ್ಯಕ್ರಮ 350 ಕ್ಕೂ ಹೆಚ್ಚು ವಾರಗಳಿಂದ ನಿರಂತರವಾಗಿ ನಡೆದುಬರುತ್ತಿದೆ. ತಮ್ಮ ಆವರಣದಲ್ಲಿ ಗಿಡ ನೆಟ್ಟು ಬೆಳೆಸಲು ಆಸಕ್ತಿಯುಳ್ಳ ಸಾರ್ವಜನಿಕರಿಗೆ ಗಿಡಗಳನ್ನು ಉಚಿತವಾಗಿ ವಿತರಿಸಲು ಪ್ರೇರಣಾ ಕೇಂದ್ರದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

    ಪ್ಲೇಟ್ ಬ್ಯಾಂಕ್:
    ಹಸಿರು ಜೀವನ ಶೈಲಿಯ ಪ್ರತಿಪಾದಕರಾದ ಅನಂತಕುಮಾರ್ ಸಭೆ ಸಮಾರಂಭಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಖರೀದಿಯನ್ನು ವಿರೋಧಿಸಿ, ಮರುಬಳಸಬಹುದಾದ ಸ್ಟೀಲ್ ಲೋಟ ತಟ್ಟೆ ಚಮಚಗಳ ಬಳಕೆಗೆ ಪ್ರೇರಣೆ ನೀಡಿದ ಫಲವಾಗಿ ಅದಮ್ಯ ಚೇತನದಲ್ಲಿ ಪ್ಲೇಟ್ ಬ್ಯಾಂಕ್ ಯೋಜನೆ ಪ್ರಾರಂಭವಾಗಿದೆ. ಸಾರ್ವಜನಿಕರು ತಾವು ಏರ್ಪಡಿಸುವ ಸಮಾರಂಭಗಳಲ್ಲಿ ಬಳಕೆಗೆ ಇಲ್ಲಿಂದ ಲೋಟ ತಟ್ಟೆಗಳನ್ನು ಉಚಿತವಾಗಿ ಒಯ್ದು ಉಪಯೋಗಿಸಿ ಹಿಂತಿರುಗಿಸಬಹುದಾದ ಷರತ್ತು ಬದ್ಧ ಯೋಜನೆ ಇದಾಗಿದೆ. ಪ್ಲೇಟ್ ಬ್ಯಾಂಕಿನ ಒಂದು ಶಾಖೆಯನ್ನು ಪ್ರೇರಣಾ ಕೇಂದ್ರದ ಆವರಣದಲ್ಲಿ ತೆರೆಯಲಾಗಿದೆ. ಇದನ್ನೂ ಓದಿ: ಹಾಸನದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕಂದಾಯ ಇಲಾಖೆ ಅಸ್ತು

    ಸಂಸ್ಕೃತಿ-ಪರಂಪರೆ ಪ್ರಸಾರ:
    ಭಾರತೀಯ ಪರಂಪರೆ, ಸಂಸ್ಕೃತಿ, ಕಲೆ ಮೊದಲಾದವುಗಳ ಬಗ್ಗೆ ಅಪಾರ ಆಸಕ್ತಿಯುಳ್ಳವರಾಗಿದ್ದ ಅನಂತಕುಮಾರರ ಆಶಯಕ್ಕನುಗುಣವಾಗಿ ಈ ಪ್ರೇರಣಾ ಕೇಂದ್ರದಲ್ಲಿ ಮುಂಬರುವ ದಿನಗಳಲ್ಲಿ ಸಂಸ್ಕೃತಿ ಘಟಕವೊಂದನ್ನು ಪ್ರಾರಂಭಿಸಲು ಯೋಚಿಸಲಾಗುತ್ತಿದೆ. ಈ ಘಟಕವು ಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು.

    ದೇಶೀಯ ಪರಿಸರಸ್ನೇಹಿ ವಸ್ತುಬಳಕೆಗೆ ಪ್ರೋತ್ಸಾಹ:
    ದೇಶೀಯವೂ ಪರಿಸರಕ್ಕೆ ಪೂರಕವೂ ಮರುಬಳಕೆಗೆ ಅವಕಾಶವೂ ಇರುವಂತಹ ಕಚ್ಚಾವಸ್ತುಗಳಿಂದ ತಯಾರಾದ ಬಟ್ಟೆ ಚೀಲಗಳು ಮತ್ತಿತರ ದಿನನಿತ್ಯದ ಬಳಕೆಯ ಸಾಮಗ್ರಿಗಳ ತಯಾರಿಕೆ ಮತ್ತು ಖರೀದಿಯನ್ನು ಪ್ರೋತ್ಸಾಹಿಸಲು ಅನಂತಪ್ರೇರಣಾಕೇಂದ್ರದ ಆವರಣದಲ್ಲಿ ವಾರಕ್ಕೊಮ್ಮೆ ಅಂತಹ ವಸ್ತುಗಳ ಮಾರಾಟಕೇಂದ್ರವನ್ನು ತೆರೆಯಲು ನಿರ್ಧರಿಸಲಾಗಿದೆ.

    ಈ ಪ್ರೇರಣಾ ಕೇಂದ್ರದ ಉದ್ಘಾಟನೆಯು ಶುಕ್ರವಾರ(ಮೇ 6, 2022 ರಂದು) ಬೆಳಿಗ್ಗೆ 10.30 ಕ್ಕೆ ನಡೆಯಲಿದ್ದು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

  • ನಿರಂತರ ಯೋಗಾಭ್ಯಾಸದಿಂದ ಆರೋಗ್ಯವಂತ ಜೀವನ – ತೇಜಸ್ವಿನಿ ಅನಂತಕುಮಾರ್

    ನಿರಂತರ ಯೋಗಾಭ್ಯಾಸದಿಂದ ಆರೋಗ್ಯವಂತ ಜೀವನ – ತೇಜಸ್ವಿನಿ ಅನಂತಕುಮಾರ್

    ಬೆಂಗಳೂರು: ನಿರಂತರ ಯೋಗಾಭ್ಯಾಸದಿಂದ ಆರೋಗ್ಯವಂತ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಅಭಿಪ್ರಾಯಪಟ್ಟರು.

    ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸೋಮವಾರ ಬೆಳಿಗ್ಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕೋವಿಡ್‍ನಂತಹ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ನಾವು ಇದ್ದು ಯೋಗಾಭ್ಯಾಸ, ಪ್ರಾಣಾಯಾಮ, ವ್ಯಾಯಾಮದಂತಹ ಆರೋಗ್ಯಕ್ಕೆ ಪೂರಕ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಇವುಗಳು ಆರೋಗ್ಯವಂತ ಬದುಕಿಗೆ ನೆರವಾಗಬಲ್ಲದು ಎಂದು ಅವರು ನುಡಿದರು. ಇದನ್ನೂ ಓದಿ: ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ: ಡಿಸಿಎಂ

    ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಚಲನಚಿತ್ರ ನಟಿ ಶ್ರೀಮತಿ ಅನುಪ್ರಭಾಕರ್ ಮಾತನಾಡಿ, ಚಿಕ್ಕವಯಸ್ಸಿನಿಂದಲೇ ತಾನು ಯೋಗವನ್ನು ಅಳವಡಿಸಿಕೊಂಡಿರುವುದರಿಂದಾಗಿ ತನಗೆ ಕೊರೋನಾ ಪಾಸಿಟಿವ್ ಬಂದಾಗ ಅದನ್ನು ಹೇಗೆ ಪರಿಣಾಮಕಾರಿಯಾಗಿ ಗುಣಮುಖರಾಗಲು ಮತ್ತು ಮಾನಸಿಕವಾಗಿ ಎದುರಿಸಲು ಸಾಧ್ಯವಾಯಿತು ಎಂಬುದನ್ನು ತಿಳಿಸಿದರು.

    ಅತಿಥಿಗಳಾದ ಹಿರಿಯ ಪ್ರಾಧ್ಯಾಪಕರು ಮತ್ತು ಶಸ್ತ್ರಚಿಕಿತ್ಸಕರಾದ ಡಾ. ಆಂಜನಪ್ಪ ಅವರು ಕೋವಿಡ್ ಸಂದರ್ಭದಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನ ಶೈಲಿಯ ಕುರಿತು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರೂ ಆದ ಎನ್ ರವಿಕುಮಾರ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗಳಾದ ಲೋಕೇಶ್ ಅಂಬೆಕಲ್ಲು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

  • ಅದಮ್ಯ ಚೇತನದ ಅಡುಗೆ ಮನೆಗೆ ಉಪರಾಷ್ಟ್ರಪತಿಗಳ ಭೇಟಿ

    ಅದಮ್ಯ ಚೇತನದ ಅಡುಗೆ ಮನೆಗೆ ಉಪರಾಷ್ಟ್ರಪತಿಗಳ ಭೇಟಿ

    ಬೆಂಗಳೂರು: ಅದಮ್ಯ ಚೇತನ ಸಂಸ್ಥೆಯ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಸನ್ಮಾನ್ಯ ಉಪ ರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಮಂಗಳವಾರ ಭೇಟಿ ನೀಡಲಿದ್ದಾರೆ. ಗವಿಪುರಂ ಬಳಿ ಇರೋ ಗುಟ್ಟಹಳ್ಳಿಯಲ್ಲಿರುವ ಅದಮ್ಯ ಚೇತನದ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಭೇಟಿ ನೀಡಲಿದ್ದು, ಹೇಗೆ ತ್ಯಾಜ್ಯದ ನಿರ್ವಹಣೆ ಮಾಡುತ್ತಿದ್ದಾರೆ ಅನ್ನೋದನ್ನ ಉಪರಾಷ್ಟ್ರಪತಿಗಳು ವೀಕ್ಷಣೆ ಮಾಡಲಿದ್ದಾರೆ.

    ಪ್ರತಿನಿತ್ಯ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ರಾಜಸ್ತಾನದ ಜೋಧಪುರ್ ಅಡುಗೆ ಕೇಂದ್ರಗಳಿಂದ 1.50 ಲಕ್ಷ ಮಕ್ಕಳಿಗೆ ರುಚಿ, ಶುಚಿ, ಸ್ವಾದಿಷ್ಟಯುಕ್ತ ಮಧ್ಯಾಹ್ನದ ಬಿಸಿಯೂಟ ಸರಬರಾಜು ಕೆಲಸವನ್ನು ಅದಮ್ಯ ಚೇತನ ಸಂಸ್ಥೆ ಮಾಡುತ್ತಿದೆ. ಅದಮ್ಯ ಚೇತನ ಸಂಸ್ತೆಯನ್ನ ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ತಮ್ಮ ತಾಯಿ ಗಿರಿಜಾ ಶಾಸ್ತ್ರಿ ಸ್ಮರಣಾರ್ಥ 1997ರಲ್ಲಿ ಸ್ಥಾಪಿಸಿದರು. ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ವೀಕ್ಷಣೆಗೆ ಉಪರಾಷ್ಟ್ರಪತಿಗಳು ಆಗಮಿಸಲಿದ್ದಾರೆ.

    ಅದಮ್ಯ ಚೇತನ ಸಮರ್ಥವಾಗಿ ಜೈವಿಕ ತ್ಯಾಜ್ಯವನ್ನು ಇಂಧನವನ್ನಾಗಿ ಬಳಸಿಕೊಂಡು ಫಾಸಿಲ್ ಇಂಧನವನ್ನು ಉಳಿತಾಯ ಮಾಡುತ್ತಿದೆ. ಪ್ರತಿದಿನವೂ 75 ಎಲ್‍ಪಿಜಿ ಸಿಲಿಂಡರ್ಗಳಷ್ಟು ಮತ್ತು 750 ಲೀಟರ್ ಡೀಸೆಲ್‍ನಷ್ಟು ಉಳಿತಾಯವಾಗುತ್ತಿದೆ. ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಶೂನ್ಯ ತ್ಯಾಜ್ಯ ಅಡುಗೆ ಮನೆಯ ಮಾಹಿತಿಯನ್ನು ಉಪರಾಷ್ಟ್ರಪತಿಗಳಿಗೆ ನೀಡಲಿದ್ದಾರೆ.

  • ಒಳಜಗಳ ಬಿಟ್ಟು ಭಾರತವನ್ನು ವಿಶ್ವಗುರುವಾಗಿಸಲು ಪ್ರತಿಜ್ಞೆ ಮಾಡೋಣ: ತೇಜಸ್ವಿನಿ ಅನಂತಕುಮಾರ್

    ಒಳಜಗಳ ಬಿಟ್ಟು ಭಾರತವನ್ನು ವಿಶ್ವಗುರುವಾಗಿಸಲು ಪ್ರತಿಜ್ಞೆ ಮಾಡೋಣ: ತೇಜಸ್ವಿನಿ ಅನಂತಕುಮಾರ್

    ಬೆಂಗಳೂರು: ಖಾತೆ ಹಂಚಿಕೆಯ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಸಚಿವರು ಸೇರಿದಂತೆ ಕಾರ್ಯಕರ್ತರು ಪರೋಕ್ಷವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಎಲ್ಲ ಬೆಳವಣಿಗೆಗಳನ್ನು ಗಮನಿಸಿರುವ ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷೆ, ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಟ್ವೀಟ್ ಮೂಲಕ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    370 ಮತ್ತು 35ಎ ತೆಗೆದುಹಾಕಿ ಅಖಂಡ ಭಾರತದ ಕನಸನ್ನು ನನಸು ಮಾಡುತ್ತಿರುವ ಮೋದಿ ನಾಯಕತ್ವವನ್ನು ಗಟ್ಟಿಗೊಳಿಸಲು ಕರ್ನಾಟಕ ಭಾಜಪದ ಎಲ್ಲಾ ಕಾರ್ಯಕರ್ತರು ನಿಸ್ವಾರ್ಥವಾಗಿ ಕೆಲಸ ಮಾಡೋಣ ಒಳಜಗಳ ಬದಿಗಿಟ್ಟು ಭಾರತವನ್ನು ವಿಶ್ವಗುರು ವಾಗಿಸಲು ಪ್ರತಿಜ್ಞೆ ಮಾಡೋಣ. ಇದನ್ನೂ ಓದಿ: ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿ ಧಗಧಗ – ಬಯಸಿದ ಖಾತೆ ಸಿಗದಿದ್ದಕ್ಕೆ ಭುಗಿಲೆದ್ದ ಭಿನ್ನಮತ

    ಖಾತೆ ಹಂಚಿಕೆ: ಸೋಮವಾರ ಖಾತೆ ಹಂಚಿಕೆಯಾಗಿದ್ದು, ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ ಮತ್ತು ಲಕ್ಷ್ಮಣ ಸವದಿ ಅವರಿಗೆ ಉಪ ಮುಖ್ಯಮಂತ್ರಿ ಪಟ್ಟ ಒಲಿದಿದೆ. ಕೆಲವರು ಸಚಿವರು ಬಯಸಿದ ಖಾತೆ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದು, ಪರೋಕ್ಷವಾಗಿ ತಮ್ಮ ಬೇಸರವನ್ನು ಹೊರ ಹಾಕುತ್ತಿದ್ದಾರೆ. ಇತ್ತ ಸಚಿವ ಶ್ರೀರಾಮುಲು ಅವರಿಗೆ ಡಿಸಿಎಂ ಪಟ್ಟ ಸಿಗದ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಚಿವ ಸ್ಥಾನ ವಂಚಿತ ಶಾಸಕರು ಸಹ ಅಸಮಾಧಾನಗೊಂಡಿದ್ದಾರೆ. ದಸಾರಾ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಶಾಸಕ ಎಸ್‍ಎ ರಾಮದಾಸ್ ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ: ಮೂವರು ಡಿಸಿಎಂ, ಬೊಮ್ಮಾಯಿಗೆ ಗೃಹ, ಸವದಿಗೆ ಸಾರಿಗೆ – ಯಾರಿಗೆ ಯಾವ ಖಾತೆ?

  • ಅನಂತಕುಮಾರ್ ಅಕ್ಕರೆಯ ಅಕ್ಕ ಇನ್ನಿಲ್ಲ: ತೇಜಸ್ವಿನಿ

    ಅನಂತಕುಮಾರ್ ಅಕ್ಕರೆಯ ಅಕ್ಕ ಇನ್ನಿಲ್ಲ: ತೇಜಸ್ವಿನಿ

    ಬೆಂಗಳೂರು: ಅನಂತಕುಮಾರ್ ಅಕ್ಕರೆಯ ಅಕ್ಕ ಇನ್ನಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

    ತೇಜಸ್ವಿನಿ ತಮ್ಮ ಟ್ವಿಟ್ಟರಿನಲ್ಲಿ ಅನಂತಕುಮಾರ್ ಅವರು ಸುಷ್ಮಾ ಅವರ ಕಾಲಿಗೆ ಬೀಳುವ ಫೋಟೋ ಹಾಕಿ ಅದಕ್ಕೆ, “ಭಾರತದ ಅತ್ಯಂತ ಪ್ರೀತಿಯ ಹಾಗೂ ಎತ್ತರದ ನಾಯಕರಲ್ಲಿ ಒಬ್ಬರಾದ ಸುಷ್ಮಾ ಸ್ವರಾಜ್ ಅವರ ಆಕಾಲಿಕ ನಿಧನಕ್ಕೆ ತೀವ್ರ ದುಃಖವನ್ನುಂಟು ಮಾಡಿದೆ. ನಾನು ಅವರಿಗೆ ಸಂತಾಪವನ್ನು ಸೂಚಿಸುತ್ತೇನೆ. ಅವರ ದೊಡ್ಡ ಪರಂಪರೆ ನಮಗೆ ಸ್ಫೂರ್ತಿ ನೀಡುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

    ಅಲ್ಲದೆ ಮತ್ತೊಂದು ಟ್ವೀಟ್‍ನಲ್ಲಿ, “ಅನಂತಕುಮಾರ್ ಅವರಿಗೂ ಹಾಗೂ ಸುಷ್ಮಾ ಸ್ವರಾಜ್ ಅವರಿಗೂ ಅಭಾವಿಪ(ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್) ದ ದಿನದಿಂದಲೇ ಪರಿಚಯ. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುವಂತೆ ಮನವಿ ಮಾಡಿದ್ದರಲ್ಲಿ ಅನಂತಕುಮಾರ್ ಅವರದು ಬಹು ದೊಡ್ಡ ಪಾತ್ರ. ಅವರಿಗೆ ಕನ್ನಡದಲ್ಲಿ ಭಾಷಣ ಬರೆದು ಕೊಡುತ್ತಿದ್ದರು. ಪ್ರತಿ ವರಮಹಾಲಕ್ಷ್ಮಿಗೆ ನಮ್ಮ ಮನೆಗೆ ಬಂದು ನಂತರ ಬಳ್ಳಾರಿಗೆ ಹೋಗುತ್ತಿದ್ದರು” ಎಂದು ಟ್ವೀಟ್ ಮಾಡುವ ಮೂಲಕ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

    ಸುಷ್ಮಾ ಸ್ವರಾಜ್ ಅವರ ಆರೋಗ್ಯದಲ್ಲಿ ಮಂಗಳವಾರ ರಾತ್ರಿ ಏರುಪೇರು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣವೇ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.