ಬೆಂಗಳೂರು: ಮಹಿಳಾ ಆಯೋಗ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ವಿಚಾಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಮಹಿಳಾ ಆಯೋಗ ಬುಧವಾರ ಖುದ್ದು ಹಾಜರಾಗುವಂತೆ ತೇಜಸ್ವಿ ಸೂರ್ಯಗೆ ನೋಟಿಸ್ ಜಾರಿಮಾಡಿದ್ದು, ಬೆಳಗ್ಗೆ 12 ಗಂಟೆಗೆ ಹಾಜರಾಗುವಂತೆ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ನೋಟಿಸ್ ಜಾರಿ ಮಾಡಿದ್ದಾರೆ. ಕೆಪಿಸಿಸಿ ಮಹಿಳಾ ಘಟಕದಿಂದ ದೂರು ನೀಡಿದ್ದ ಹಿನ್ನೆಲೆಯಲ್ಲಿ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಟ್ವಿಟ್ಟರ್ ನಲ್ಲಿ ಮಹಿಳೆಯೊಬ್ಬರು ತೇಜಸ್ವಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಆಧಾರದಲ್ಲಿ ಕಾಂಗ್ರೆಸ್ ಮಹಿಳಾ ಘಟಕ ತೇಜಸ್ವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿತ್ತು. ಈ ದೂರಿನನ್ವಯ ನೋಟಿಸ್ ಜಾರಿ ಮಾಡಲಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ದೂರು ಬಂದಿದೆ. ಕೆಪಿಸಿಸಿ ಮಹಿಳಾ ಘಟಕದ ದೂರನ್ನು ಸ್ವೀಕರಿಸಿದ್ದು, ನೊಂದ ಮಹಿಳೆಯನ್ನು ಕರೆದು ಮಾತನಾಡಿಸುತ್ತೇನೆ. ತೇಜಸ್ವಿ ಸೂರ್ಯ ಅವರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ನಾಗಲಕ್ಷ್ಮಿ ಬಾಯಿ ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ತಮ್ಮ ಪ್ರಚಾರದ ವೇಳೆ ಹೇಳಿರುವ ಮಾತುಗಳಿಂದ ಯಾರ ಬೆಂಬಲ ಇಲ್ಲದಿದ್ದರೂ ಬೆಂಗಳೂರು ದಕ್ಷಿಣದಲ್ಲಿ ಗೆಲ್ಲುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಪ್ರಚಾರದ ವೇಳೆ ಮಾತನಾಡಿದ ತೇಜಸ್ವಿ, ಬರುವಂತಹ ದಿನದಲ್ಲಿ ಯಾರು? ಎಲ್ಲಿಂದ ಬೆಂಬಲ ಕೊಡುತ್ತಾರೆ? ಕೊಡಲ್ಲ? ಇದೆಲ್ಲವನ್ನು ಹಿಮ್ಮೆಟ್ಟಿ ಪ್ರಧಾನಿ ಮೋದಿಯವರಿಗೆ ಈ ಬಾರಿ ವೋಟ್ ಹಾಕಬೇಕು ಎಂದು ಜನರು ನಿಶ್ಚಯ ಮಾಡಿದ್ದಾರೆ. ಈ ಬಾರಿಯೂ ಮೋದಿಯನ್ನು ಗೆಲ್ಲಿಸಬೇಕು ಎಂದು ಚುನಾವಣೆ ಈಗಾಗಲೇ ನಿರ್ಧಾರ ಮಾಡಿದೆ. ಆದ್ದರಿಂದ ನಾವು ಈಗ ಜನರಿಗೆ ವೋಟ್ ಹಾಕಲು ಸಹಾಯ ಮಾಡುವುದಷ್ಟೆ ನಮ್ಮ ಕೆಲಸವಾಗಿದೆ. ಈ ಬಾರಿ ನಡೆಯುತ್ತಿರುವ ಚುನಾವಣೆ ಪಾರ್ಟಿಯನ್ನು ಮೀರಿ ದೇಶದ ಚುನಾವಣೆ ಆಗಿದೆ ಎಂದು ಹೇಳಿದ್ದಾರೆ.
ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಕೊಟ್ಟ ನಂತರ ಈಗಾಗಲೇ ಸಾಕಷ್ಟು ಅಪಸ್ವರ ಕೇಳಿಬಂದಿದ್ದು, ಇದುವರೆಗೂ ಪ್ರಚಾರಕ್ಕೂ ದೊಡ್ಡ ದೊಡ್ಡ ನಾಯಕರು ಹೋಗಿರಲಿಲ್ಲ. ಹೀಗಾಗಿ ಇವರೊಬ್ಬರೇ ಎಲ್ಲ ಕಡೆ ಪ್ರಚಾರ ಮಾಡುತ್ತಿದ್ದಾರೆ. ಮೊನ್ನೆ ಕಾರ್ಯಕರ್ತರ ಜೊತೆ ಅತೀ ವಿಶ್ವಾಸದಿಂದ ಜನರು ನಮಗೆ ವೋಟ್ ಹಾಕಬೇಕು ಎಂದು ನಿರ್ಧಾರ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ತೇಜಸ್ವಿ ಹೇಳಿಕೆಯಿಂದ ಮಾಜಿ ಡಿಸಿಎಂ ಆರ್ ಅಶೋಕ್, ಸೋಮಣ್ಣ ಬೆಂಬಲ ಬೇಡವಾ. ತೇಜಸ್ವಿನಿ ಅನಂತಕುಮಾರ್ ಕ್ಯಾಂಪೇನ್‍ಗೆ ಬರದಿದ್ದರೂ ಗೆದ್ದು ಬಿಡ್ತಾರಾ ಎಂಬ ಪ್ರಶ್ನೆಗಳನ್ನು ಬೆಂಗಳೂರು ದಕ್ಷಿಣ ವಲಯದಲ್ಲಿ ಹುಟ್ಟುಕೊಂಡಿದೆ.
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧದ ಮೀಟೂ ಆರೋಪದ ಹಿಂದೆ ಕಾಂಗ್ರೆಸ್-ಜೆಡಿಎಸ್‍ನವರ ಕೈವಾಡವಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾಟಕ ಮಾಡಿ ಮೀಟೂ ಕೇಸ್‍ಗಳನ್ನು ಹಾಕಿಸುವುದು ಕಾಂಗ್ರೆಸ್ ಹಾಗೂ ಜೆಡಿಎಸ್‍ನವರಿಗೆ ಅಭ್ಯಾಸವಾಗಿದೆ. ಮೀಟೂ ವಿಷಯವನ್ನು ರಾಜಕೀಯವಾಗಿ ದುರುಯೋಗ ಪಡಿಸಿಕೊಳ್ಳಲಾಗುತ್ತಿದೆ. ಆದರೆ ಈ ಪ್ರಯತ್ನದಲ್ಲಿ ಅವರು ಸಂಪೂರ್ಣ ವಿಫಲರಾಗುತ್ತಾರೆ. ತೇಜಸ್ವಿ ಸೂರ್ಯ ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಆತ ಅಂಥ ಹುಡುಗನಲ್ಲ ಎಂದು ಹೇಳಿದರು.
ಅಧಿಕಾರಿಗಳ ವರ್ಗಾವಣೆ ಬಗ್ಗೆ ಸಿಎಂ ಕುಮಾರಸ್ವಾಮಿ ಅಸಮಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ ಅವರು, ತಮಗೆ ಬೇಕಾದವರನ್ನು ಸರಿಯಾದ ಜಾಗಗಳಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಭ್ಯಾಸ ಕುಮಾರಸ್ವಾಮಿ ಅವರಿಗೆ ಇದೆ. ಚುನಾವಣೆ ಆಯೋಗ ಜಾರಿ ಮಾಡಿದ ಅಧಿಕಾರಿಗಳ ವರ್ಗಾವಣೆಯನ್ನು ಸಿಎಂ ಸ್ವಾಗತಿಸಬೇಕಿತ್ತು. ಆದರೆ ಹಾಗೇ ಮಾಡಲಿಲ್ಲ. ಅವರಿಗೆ ಬೇಕಾದ ಅಧಿಕಾರಿಗಳೇ ಇರಬೇಕು ಅಂದ್ರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಐಟಿ ಅಧಿಕಾರಿಗಳ ಕೆಲಸವನ್ನು ಸಿಎಂ ಕುಮಾರಸ್ವಾಮಿ ಹೊಗಳಬೇಕಿತ್ತು. ಆದರೆ ಅವರೇ ನಾಳೆ ಐಟಿ ದಾಳಿ ಆಗುತ್ತದೆ ಎಂದು ಸುದ್ದಿಗೋಷ್ಠಿ ಮೂಲಕ ಹೇಳಿದರು. ಈ ಮೂಲಕ ಹಣ, ದಾಖಲೆಗಳನ್ನು ಮುಚ್ಚಿಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದರು. ಕೇಂದ್ರ ಸಂಸ್ಥೆಗಳ ಕಾರ್ಯದ ಬಗ್ಗೆ ಗೌಪ್ಯತೆ ಕಾಪಾಡುವಲ್ಲಿ ಕುಮಾರಸ್ವಾಮಿ ವಿಫಲರಾಗಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಯಲು ಯೋಗ್ಯತೆಯಿಲ್ಲ ಎಂದರು.
ತೇಜಸ್ವಿ ಮೇಲಿರುವ ಆರೋಪವೇನು?:
ಉದ್ಯಮಿ ಡಾ.ಸೋಮ್ ದತ್ತಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತೇಜಸ್ವಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ತೇಜಸ್ವಿ ಸೂರ್ಯ ಕೈಯಲ್ಲಿ ನಾನು 5 ವರ್ಷಗಳ ಕಾಲ ನಲುಗಿದ್ದೇನೆ. ನನ್ನ ಪ್ರೀತಿ ಕುರುಡಾಗಿತ್ತು. ತೇಜಸ್ವಿ ಅವರನ್ನು ನಂಬಿ ಬಲಿಪಶು ಆದವರಲ್ಲಿ ನಾನು ಮೊದಲೇನಲ್ಲ, ಕೊನೆಯವಳೂ ಅಲ್ಲ. ಪ್ರತಿಯೊಬ್ಬ ಹಿಂದೂವು ನಿಜವಾದ ಅರ್ಥದಲ್ಲಿ ಧಾರ್ಮಿಕನಾಗಿರಲ್ಲ. ದೊಡ್ಡದಾಗಿ ಭಾಷಣ ಮಾಡೋರೆಲ್ಲ ದೊಡ್ಡ ವ್ಯಕ್ತಿ ಆಗಿರಲಿಲ್ಲ ಎಂದು ಹೇಳಿದ್ದರು.
ಸತ್ಯ ಗೊತ್ತಿಲ್ಲದೆ ತೇಜಸ್ವಿ ಸೂರ್ಯಗೆ ಪುಕ್ಕಟೆ ಪ್ರಚಾರ ಕೊಡಬೇಡಿ. ಇಂಥ ವ್ಯಕ್ತಿಗೆ ಟಿಕೆಟ್ ಕೊಡುವ ಮೊದಲು ಬಿಜೆಪಿ ಹಿನ್ನೆಲೆಯನ್ನ ಪರಿಶೀಲಿಸಬೇಕಿತ್ತು. ತೇಜಸ್ವಿ ಸೂರ್ಯ ಜೊತೆಗಿನ ನಂಟಿದ್ದ ನನ್ನ ತಂದೆ-ತಾಯಿ ಕೂಡ ನೋವು ಅನುಭವಿಸಿದ್ದಾರೆ. ನನ್ನ ತಂದೆ-ತಾಯಿ ಮತ್ತಷ್ಟು ಕೊರಗುವುದು ನನಗೆ ಇಷ್ಟವಿಲ್ಲ ಎಂದು ಆರೋಪಿಸಿದ್ದರು.
ಬೆಂಗಳೂರು: ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ನಿರ್ದೇಶಕಿ ಕವಿತಾ ಲಂಕೇಶ್ ಟ್ವಿಟ್ಟರ್ ನಲ್ಲಿ ಗುಡುಗಿದ್ದಾರೆ.
ತನ್ನ ಸಹೋದರಿ ಗೌರಿ ಲಂಕೇಶ್ ಹತ್ಯೆಯನ್ನು ಸಮರ್ಥಿಸಿದ್ದ ವ್ಯಕ್ತಿ ಹಾಗೂ ಪಕ್ಷ ನಿಮ್ಮ ಕುಟುಂಬದ ಬಳಿ ಬರುತ್ತಿದೆ. ಚುನಾವಣೆಯಲ್ಲಿ ಮತ ಹಾಕುವ ಮುನ್ನ ಒಮ್ಮೆ ಯೋಚಿಸಿ ಎಂದು ಬರೆದುಕೊಂಡಿದ್ದು, ತೇಜಸ್ವಿ ಸೂರ್ಯ ಅವರ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಗೌರಿ ಹತ್ಯೆ ಸಂದರ್ಭದಲ್ಲಿ ಬಿಜೆಪಿ ಕೆಲ ಕಾರ್ಯಕರ್ತರು ಹಾಗು ನಾಯಕರು ಹತ್ಯೆ ಬಗ್ಗೆ ವಿವಾದತ್ಮಾಕ ಹೇಳಿಕೆ ನೀಡಿದ್ದರು. ಅಲ್ಲದೇ ಮೋದಿ ಅವರ ಬೆಂಬಲಿಗರು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಗೌರಿ ಹತ್ಯೆಯನ್ನು ಸಮರ್ಥಿಸಿದ್ದರು. ಈ ಬಗ್ಗೆ ರಾಜ್ಯದಲ್ಲೆಡೆಗೆ ಟೀಕೆ ಕೇಳಿ ಬಂದಿತ್ತು.
This is the man who defends murderers of my dear sister Gauri Lankesh. He and his party will come to your family too soon. Think before you vote. pic.twitter.com/M6ryVNP2nu
ಇತ್ತ ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಅಂತಿಮವಾಗುತ್ತಿದಂತೆ ರಾಜ್ಯ ಬಿಜೆಪಿಯಲ್ಲಿ ನಾಯಕರಲ್ಲಿ ಅಸಮಾಧಾನ ಮೂಡಿದೆ. ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ನಿರಾಕರಿಸಿದಕ್ಕೆ ಕಾರಣವೇನು ಎಂದು ತಿಳಿದು ಬಂದಿಲ್ಲ ಎಂದು ರಾಜ್ಯ ನಾಯಕರು ಸ್ಪಷ್ಟನೆ ನೀಡಿದ್ದರು. ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ್ ರಾವ್ ಕೂಡ ತೇಜಸ್ವಿನಿ ಅನಂತ್‍ಕುಮಾರ್ ಅವರನ್ನು ಭೇಟಿ ಮಾಡಿ ಚುನಾವಣಾ ಪ್ರಚಾರಕ್ಕೆ ಆಗಮನಿಸುವಂತೆ ಮನವಿ ಮಾಡಿದ್ದರು.
ತೇಜಸ್ವಿನಿ ಅನಂತ್‍ಕುಮಾರ್ ಅವರು ಕೂಡ ತಮಗೆ ಬೆಂಗಳೂರು ದಕ್ಷಿಣ ಲೋಕಸಭಾ ಟಿಕೆಟ್ ತಪ್ಪಿದ್ಯಾಕೆ..? ಅಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮೊದಲು ಸ್ಪಷ್ಟಪಡಿಸಬೇಕು. ಅವರ ಉತ್ತರ ಒಪ್ಪಿಗೆಯಾದರೆ ಮಾತ್ರ ನಾವು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇವೆ ಎಂದು ಮುರಳಿಧರ್ ಅವರ ಬಳಿ ಅಸಮಾಧಾನ ಹೊರಹಾಕಿದ್ದರು ಎಂಬ ಮಾಹಿತಿ ಲಭಿಸಿತ್ತು. ಇದರ ನಡುವೆಯೇ ಸ್ಪಷ್ಟನೆ ನೀಡಿದ್ದ ಬಿಎಸ್ ಯಡಿಯೂರಪ್ಪ ಅವರು, ನಮ್ಮಲ್ಲಿ ಬಿಜೆಪಿ, ಆರ್ ಎಸ್‍ಎಸ್ ಎಂಬ ಬೇದ ಇಲ್ಲ. ತೇಜಸ್ವಿನಿ ಅನಂತ್‍ಕುಮಾರ್ ಹಾಗೂ ಉಮೇಶ್ ಕತ್ತಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ತಿಳಿಸಿದ್ದರು.
ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನೀವು ನಿಂತರೆ ಭಾರತೀಯರು. ಒಂದು ವೇಳೆ ಮೋದಿ ಅವರ ವಿರುದ್ಧ ನಿಂತರೆ ನೀವು ದೇಶ ವಿರೋಧಿಗಳು ಎಂದು ತೇಜಸ್ವಿ ಸೂರ್ಯ ಭಾಷಣ ಮಾಡಿದ್ದರು. ಕಾಂಗ್ರೆಸ್ ಈ ಹೇಳಿಕೆಯ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಭಾಷಣದಲ್ಲಿ ಏನಿದೆ?
ಕಳೆದ 60 ವರ್ಷಗಳಿಂದ ಪ್ರಜೆಗಳಲ್ಲಿರುವ ದೇಶಪ್ರೇಮವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಅವರು ದೇಶಪ್ರೇಮಿಗಳಾಗಿದ್ದರೆ ಭಾರತವನ್ನು ಬಡರಾಷ್ಟ್ರವನ್ನಾಗಿ ಇರಲು ಬಿಡುತ್ತಿರಲಿಲ್ಲ. ಆದರೆ ಈಗ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲರೂ ಒಂದಾಗಿ ನಿಂತಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ನಿಲ್ಲುವವರು ಯಾರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಆಡಳಿತಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರ ಮತ್ತೆ ಆಡಳಿತಕ್ಕೆ ಬರುವುದಿಲ್ಲ. ಮೋದಿ ಪರ ನೀವು ನಿಂತರೆ ಭಾರತೀಯರು. ಒಂದು ವೇಳೆ ಮೋದಿ ಅವರ ವಿರುದ್ಧ ನಿಂತರೆ ನೀವು ದೇಶ ವಿರೋಧಿಗಳು ಎಂದು ತೇಜಸ್ವಿ ಸೂರ್ಯ ಭಾಷಣ ಮಾಡಿದ್ದರು. ತಮ್ಮ ಭಾಷಣದಲ್ಲಿ ಕುಟುಂಬ ರಾಜಕಾರಣದ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಅವರ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಆ ಮಹಿಳೆಯ ಆರೋಪವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಶ್ನೆ ಮಾಡುತ್ತಿದೆ.
ಹೌದು. ಡಾ. ಸೋಮ್ ದತ್ತಾ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ತೇಜಸ್ವಿ ಸೂರ್ಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಆರೋಪವೇನು?:
5 ವರ್ಷ ನಾನು ತೇಜಸ್ವಿ ಸೂರ್ಯ ಕೈಯಲ್ಲಿ ನಲುಗಿದ್ದೇನೆ. ನನ್ನ ಪ್ರೀತಿ ಕುರುಡಾಗಿತ್ತು. ನನ್ನನ್ನು ನಂಬಿ ನಾನು ಮೊದಲನೇಯ ಬಲಿಪಶು ಅಲ್ಲ, ಕೊನೆಯವಳೂ ಅಲ್ಲ. ಪ್ರತಿಯೊಬ್ಬ ಹಿಂದೂವು ನಿಜವಾದ ಅರ್ಥದಲ್ಲಿ ಧಾರ್ಮಿಕನಾಗಿರಲ್ಲ. ದೊಡ್ಡದಾಗಿ ಭಾಷಣ ಮಾಡೋರೆಲ್ಲ ದೊಡ್ಡ ವ್ಯಕ್ತಿ ಆಗಿರಲಿಲ್ಲ ಎಂದಿದ್ದಾರೆ.
ಸತ್ಯ ಗೊತ್ತಿಲ್ಲದೆ ತೇಜಸ್ವಿ ಸೂರ್ಯಗೆ ಪುಕ್ಕಟೆ ಪ್ರಚಾರ ಕೊಡಬೇಡಿ. ಇಂಥ ವ್ಯಕ್ತಿಗೆ ಟಿಕೆಟ್ ಕೊಡುವ ಮೊದಲು ಬಿಜೆಪಿ ಹಿನ್ನೆಲೆಯನ್ನ ಪರಿಶೀಲಿಸಬೇಕಿತ್ತಲ್ಲ. ತೇಜಸ್ವಿ ಸೂರ್ಯ ಜೊತೆಗಿನ ನಂಟಿದ್ದ ನನ್ನ ತಂದೆ-ತಾಯಿ ಕೂಡ ನೋವು ಅನುಭವಿಸಿದ್ದಾರೆ. ನನ್ನ ತಂದೆ-ತಾಯಿ ಮತ್ತಷ್ಟು ಕೊರಗುವುದು ನನಗೆ ಇಷ್ಟವಿಲ್ಲ ಎಂದು ಮಹಿಳೆ ತೇಜಸ್ವಿ ಸೂರ್ಯ ವಿರುದ್ಧ ಆರೋಪಿಸಿದ್ದಾರೆ.
ಮಹಿಳೆ ಆರೋಪ ಮಾಡುತ್ತಿದ್ದಂತೆಯೇ ಎಚ್ಚೆತ್ತ ಕಾಂಗ್ರೆಸ್ ಈ ಟ್ವೀಟನ್ನೇ ಉಲ್ಲೇಖಿಸಿ, ತೇಜಸ್ವಿ ಸೂರ್ಯ ವಿರುದ್ಧ `ತೇಜಸ್ವಿ ಸೂರ್ಯ ಮತ್ತೊಬ್ಬ ಮೀಟೂ ಎಂಜೆ ಅಕ್ಬರ್..’ ಎಂದು ಪ್ರಶ್ನಿಸಿದೆ.
ದತ್ತಾ ಮನವಿ:
ದತ್ತಾ ಟ್ವೀಟ್ ಗಳು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನನ್ನ ಹಾಗೂ ತೇಜಸ್ವಿ ವಿಚಾರವನ್ನು ಇಲ್ಲಿಗೆ ನಿಲ್ಲಿಸಿ. ಇದು ನನ್ನ ವಿನಮ್ರ ಮನವಿಯಾಗಿದೆ. ನಾವಿಬ್ಬರೂ ಒಳ್ಳೆಯ ಮನೆತನ ಇರುವ ಕುಟುಂಬದಿಂದ ಬಂದಿದ್ದೇವೆ. ಹೀಗಾಗಿ ಈ ವಿಚಾರವನ್ನು ಎಳೆದುಕೊಂಡು ಹೋದರೆ ಇಬ್ಬರ ಕುಟುಂಬಕ್ಕೂ ತೊಂದರೆಯಾಗುತ್ತದೆ. ಸದ್ಯ ನನ್ನ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದೇನೆ. ದಯವಿಟ್ಟು ಈ ವಿಚಾರವನ್ನು ಇಲ್ಲೇ ಬಿಟ್ಟುಬಿಡಿ. ನಾವಿಬ್ಬರೂ ನಮ್ಮದೇ ದಾರಿಯಲ್ಲೇ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.
ತೇಜಸ್ವಿ ಅಭಿಮಾನಿಗಳು ಗರಂ:
ಇದೂವರೆಗೆ ಪ್ರಶ್ನೆ ಮಾಡದ ಈಕೆ ತೇಜಸ್ವಿ ಅವರಿಗೆ ಟಿಕೆಟ್ ಸಿಕ್ಕಿದ ಕೂಡಲೇ ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಿದ್ದಾರೆ. ತೊಂದರೆ ಆಗಿದ್ದರೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬಹುದಿತ್ತು. ದೂರು ನೀಡದೇ ಈಗ ತೇಜೋವಧೆ ಮಾಡಲು ಈ ಮಹಿಳೆ ಮುಂದಾಗಿದ್ದಾರೆ ಎಂದು ತೇಜಸ್ವಿ ಅಭಿಮಾನಿಗಳು ಹಾಗೂ ಬಿಜೆಪಿಗರು ಕಿಡಿಕಾರಿದ್ದಾರೆ.
ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಅತಿ ಕಿರಿಯ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ 28 ವರ್ಷದ ತೇಜಸ್ವಿ ಸೂರ್ಯ 2014ರ ಒಂದು ಟ್ವೀಟ್ ಡಿಲೀಟ್ ಮಾಡಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿರುವ ತೇಜಸ್ವಿ ಅವರು 2014ರ ಜೂನ್ 10 ರಂದು, “ಮಹಿಳಾ ಮೀಸಲಾತಿ ಮಸೂದೆ ಹೊರತು ಪಡಿಸಿ ಮೋದಿ ಸರ್ಕಾರದ ಕಾರ್ಯಗಳು ಸ್ಫೂರ್ತಿದಾಯಕ. ಮಹಿಳಾ ಮೀಸಲಾತಿ ವಾಸ್ತವವಾಗಿ ಜಾರಿಗೆ ಬಂದರೆ ಭಯ ಉಂಟಾಗುತ್ತದೆ” ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಅವರು ಈಗ ಡಿಲೀಟ್ ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಘೋಷಣೆಯಾದ ಬಳಿಕ ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿದೆ.
ಕಾನೂನು ಪದವಿ ಓದಿರುವ ತೇಜಸ್ವಿ ಸೂರ್ಯ, ಪ್ರಸ್ತುತ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಾಮಾಜಿಕ ಜಾಲತಾಣದ ಸದಸ್ಯರಾಗಿರುವ ಇವರು ಶಾಸಕ ರವಿ ಸುಬ್ರಮಣ್ಯ ಅವರ ಅಣ್ಣನ ಮಗ. ಎಬಿವಿಪಿ, ಆರ್ ಎಸ್ಎಸ್ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾಧ್ಯಮಗಳಲ್ಲಿ ಪಕ್ಷದ ಪರವಾಗಿ ಭಾಗವಹಿಸುತ್ತಿರುವ ಇವರು ಉತ್ತಮ ಭಾಷಣಕಾರರಾಗಿದ್ದಾರೆ.
ಬೆಂಗಳೂರು: ತೇಜಸ್ವಿನಿಯಂತಹ ಸುಸಂಸ್ಕೃತರಿಗೆ ಟಿಕೆಟ್ ಕೊಡದೇ ಸಮಾಜದಲ್ಲಿ ವಿಷ ಬೀಜ ಬಿತ್ತುವ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ದುರಂತ ಎಂದು ಬೆಂಗಳೂರು ಉತ್ತರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ ಹೇಳಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಅಭ್ಯರ್ಥಿ ಆಗುತ್ತಾರೆ ಎಂದು ನಾವು ಅಂದುಕೊಂಡಿದ್ದೇವು. ಏಕೆಂದರೆ ಈ ರಾಜ್ಯದಲ್ಲಿ ಅನಂತಕುಮಾರ್ ಅವರ ಕೊಡುಗೆ ಇದೆ. ಅನಂತಕುಮಾರ್ ಹಿರಿಯ ನಾಯಕರು. ಅವರು ಸದಾಕಾಲ ದೆಹಲಿಯಲ್ಲಿ ಕನ್ನಡದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ತೇಜಸ್ವಿನಿ ಅವರು ಕೂಡ ಸಾರ್ವಜನಿಕ ಜೀವನದಲ್ಲಿ ಸಂಘ – ಸಂಸ್ಥೆ ಮುಖಾಂತರ, ಕಾಲೇಜಿನ ಮುಖಾಂತರ ಬಹಳ ಆಳವಾಗಿ ತೊಡಗಿಸಿಕೊಂಡವರು. ಅವರಿಗೆ ಟಿಕೆಟ್ ಸಿಗುತ್ತೆ ಎಂದು ಭರವಸೆ ಇಟ್ಟುಕೊಂಡಿದ್ದೇವೆ ಎಂದರು.
ಈಗ ಅವರಂತಹ ಒಳ್ಳೆಯ ಹಿನ್ನೆಲೆ ಇರುವವರನ್ನು ಬಿಟ್ಟು ಎಲ್ಲೋ ಒಂದು ಕಡೆ ಸಮಾಜದಲ್ಲಿ ದ್ವೇಷದ ಬೀಜವನ್ನು ಬಿತ್ತನೆ ಮಾಡುವಂತ ಅಭ್ಯರ್ಥಿಗೆ ಸುಸಂಸಂಸ್ಕೃವಾದ ಬೆಂಗಳೂರು ದಕ್ಷಿಣವನ್ನು ನೀಡಲಾಗಿದೆ. ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣದಲ್ಲಿ ಕೊಟ್ಟಿರುವುದು ಆ ಭಾಗದ ಜನತೆಗೆ ಇಷ್ಟವಾಗುವುದಿಲ್ಲ ಎಂಬುದು ನನ್ನ ಅನಿಸಿಕೆ. ಬೆಂಗಳೂರಲ್ಲಿ 4 ಕ್ಷೇತ್ರ ಇದೆ. ಕೇಂದ್ರ, ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಈ 4 ಕ್ಷೇತ್ರದಲ್ಲಿ ಜೆಡಿಎಸ್ – ಕಾಂಗ್ರೆಸ್ ಗೆಲ್ಲುವ ವಾತಾವಾರಣ ಕಂಡು ಬರುತ್ತಿದೆ ಎಂದರು.
ಕಠಿಣವಾಗಿರುವ ಬೆಂಗಳೂರು ದಕ್ಷಿಣದಲ್ಲೂ ಸಹ ಕಾಂಗ್ರೆಸ್ ಗೆಲ್ಲಬಹುದು ಎಂಬ ಬದಲಾವಣೆ ಸಹ ಸೋಮವಾರದಿಂದ ಕಾಣಿಸುತ್ತಿದೆ. ಬೆಂಗಳೂರು ದಕ್ಷಿಣದಲ್ಲಿ ಬೆಜೆಪಿ ಆಯ್ಕೆ ಮಾಡಿದ ಅಭ್ಯರ್ಥಿ ಹಿನ್ನೆಲೆಯಲ್ಲಿ ನಾವು ನಾಲ್ಕು ಸ್ಥಾನ ಗೆಲ್ಲುವ ಅವಕಾಶ ಹೊಂದಿದ್ದೇವೆ. ನಮ್ಮ ಪಕ್ಷದ ವರಿಷ್ಠರು, ಜೆಡಿಎಸ್ ಪಕ್ಷದ ವರಿಷ್ಠರು, ನಮ್ಮ ಕ್ಷೇತ್ರದ ಶಾಸಕರು ನೀವೇ ಅಭ್ಯರ್ಥಿ ಆಗಬೇಕೆಂದು ಹೇಳಿದ್ದರು. ಅವರ ಭಾವನೆಗೆ ಬೆಲೆ ಕೊಟ್ಟು ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.
ನಾನು ಈ ಬಾರಿ ಸಚಿವನಾಗಬೇಕು ಎಂದು ಬಯಸಿರಲಿಲ್ಲ. ಆದರೂ ಪಕ್ಷ ನನ್ನನ್ನು ಸಚಿವರಾಗಿ ಆಯ್ಕೆ ಮಾಡಿತ್ತು. ಭಾರತದ ಸಂಸತ್‍ನಲ್ಲಿ ಒಬ್ಬ ಸದಸ್ಯನಾಗಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕರೆ ನನ್ನ ಪಾಲಿಗೆ ದೊಡ್ಡ ಗೌರವ. ಜನರು ಆಶಿರ್ವಾದ ಮಾಡಿದರೆ ನಾನು ಅದನ್ನು ಸ್ವೀಕರಿಸುತ್ತೇನೆ. ಅದನ್ನು ಬಿಟ್ಟು ಮಂತ್ರಿ ಸ್ಥಾನ ಬಿಟ್ಟು ಹೋಗಬೇಕೆಂಬ ಅನಿವಾರ್ಯ ಆ ಆಲೋಚನೆ ನನಗಿಲ್ಲ. ಭಾರತದ ಸಂಸತ್ ನಮ್ಮ ದೇಶದ ಧ್ವನಿ ಅದು. ಅಂತಹದರಲ್ಲಿ ನಾನು ಒಬ್ಬ ಸದಸ್ಯನಾಗುವ ಅವಕಾಶ ಸಿಕ್ಕರೆ ನನ್ನ ಜೀವನದಲ್ಲಿ ಒಂದು ದೊಡ್ಡ ಹೆಜ್ಜೆ. ಇದರಿಂದ ನನ್ನ ಜೀವನ ಸಾರ್ಥಕ ಆಗುತ್ತದೆ ಎಂದರು.
ರಾಷ್ಟ್ರಮಟ್ಟದಲ್ಲಿ ಯಾರೇ ಬೆಳೆಯುತ್ತಿರುವ ಒಬ್ಬ ಸಾರ್ವಜನಿಕ ಜೀವನದ ಪ್ರತಿನಿಧಿಗೆ ರಾಷ್ಟ್ರಮಟ್ಟದ ಅನುಭವ ಸಿಕ್ಕರೆ ನಾವು ಇನ್ನು ಒಳ್ಳೆಯ ನಾಯಕರಾಗಿ ಬೆಳೆಯವ ಅನುಕೂಲ ಆಗಲಿದೆ. ನಾಳೆ ನಾವು ರಾಜ್ಯ ರಾಜಕಾರಣ ಮಾಡಬಹುದು. ಆದರೆ ನಾವು ದೆಹಲಿಯಲ್ಲಿ ಆ ಅನುಭವ ಪಡೆದರೆ ಇಡೀ ದೇಶದ ಸಮಗ್ರ ದೃಷ್ಟಿ ಭಾರತ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತದೆ. ಒಂದೊಂದು ರಾಜ್ಯ, ಒಂದೊಂದು ಸಂಸ್ಕೃತಿ, ಒಂದೊಂದು ಭಾಷೆ, ಅವರ ವಿಚಾರ ಭಾವವನ್ನು ಅರ್ಥ ಮಾಡಿಕೊಂಡಿದರೆ, ನಮ್ಮ ವ್ಯಕ್ತಿತ್ವ ಸುಧಾರಣೆ ಆಗುತ್ತದೆ ಎಂದು ತಿಳಿಸಿದರು.
ಬೆಂಗಳೂರು: ಸಿಲಿಕಾನ್ ಸಿಟಿಯ ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದ ತೇಜಸ್ವಿ ಸೂರ್ಯ ಅವರನ್ನು ಪ್ರಧಾನಿ ಮೋದಿ ಅವರೇ ಆಯ್ಕೆ ಮಾಡಿದ್ದಾರಾ ಹೀಗೊಂದು ಚರ್ಚೆ ಈಗ ಬಿಜೆಪಿ ವಲಯದಲ್ಲಿ ಆರಂಭವಾಗಿದೆ.
ಈ ಹಿಂದೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಬಿಜೆಪಿ ಯುವಾ ಮೋರ್ಚಾದ ಜತೆ ಮಾತನಾಡುತ್ತಿದ್ದರು. ಈ ವೇಳೆ ತೇಜಸ್ವಿಸೂರ್ಯ ಅವರ ಹೆಸರನ್ನು ಹೇಳಿ, “ನೀನು ಸೂರ್ಯ, ನಿನ್ನಲ್ಲಿ ತೇಜಸ್ಸು ಇದೆ” ಎಂದು ಮೋದಿ ಹೊಗಳಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿದೆ.
ಸಂವಾದದ ಆರಂಭದಲ್ಲಿ “ಮೋದಿಜೀ ನಮಸ್ತೇ” ಎಂದು ತೇಜಸ್ವಿ ಸೂರ್ಯ ಹೇಳಿ ಮಾತನ್ನು ಆಡಲು ಆರಂಭಿಸುತ್ತಾರೆ. ಈ ವೇಳೆ ಮೋದಿ, “ಅಪ್ ತೋ ಸ್ವಯಂ ಸೂರ್ಯ ಹೇ ಔರ್ ತೇಜಸ್ವಿ ಬಿ ಹೇ” ಎಂದು ಹೇಳಿ ಹೊಗಳಿದ್ದರು. ಇದನ್ನೂ ಓದಿ: ಮೂರು ದಿನದ ಹಿಂದೆ ತೇಜಸ್ವಿ ಸೂರ್ಯಗೆ ಮನವಿ ಮಾಡಿದ್ದ ತೇಜಸ್ವಿನಿ!
ಕರ್ನಾಟಕದ ಪೈಕಿ ಬೆಂಗಳೂರು ದಕ್ಷಿಣ ಕೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. 1977ಕ್ಕೆ ಲೋಕಸಭಾ ಕ್ಷೇತ್ರವಾಗಿ ರಚನೆಯಾಗಿದ್ದು ಆರಂಭದ ಮೂರು ಚುನಾವಣೆಯಲ್ಲಿ ಜನತಾ ಪಕ್ಷ ಇಲ್ಲಿ ಗೆಲುವನ್ನು ಕಂಡಿತ್ತು. 1989 ರಲ್ಲಿ ಒಂದು ಬಾರಿ ಕಾಂಗ್ರೆಸ್ ಗೆಲುವು ಕಂಡಿದ್ದು, ನಂತರ ನಡೆದ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. 1996ರಿಂದ 2014ರ ವರೆಗೆ ನಡೆದ ಎಲ್ಲ ಚುನಾವಣೆಯಲ್ಲಿ ಕಳೆದ ವರ್ಷ ನಿಧನರಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಜಯಗಳಿಸುತ್ತಾ ಬಂದಿದ್ದರು. ಇದನ್ನೂ ಓದಿ: ‘ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಪಕ್ಷ ಸಂಘಟನೆ ಮಾಡೋದು ಹೇಗೆ?’
ಅನಂತ್ ಕುಮಾರ್ ಅವರನ್ನು ಸೋಲಿಸಲೇಬೇಕೆಂದು ಕಾಂಗ್ರೆಸ್ ಕಳೆದ ಬಾರಿ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರನ್ನು ಕಣಕ್ಕೆ ಇಳಿಸಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರ ನಗರದಲ್ಲೇ ಇರುವುದರ ಜೊತೆಗೆ ಸಾಕ್ಷರತಾ ಮತದಾರರ ಸಂಖ್ಯೆಯೂ ಹೆಚ್ಚು ಇರುವ ಕಾರಣದಿಂದಲೂ ಈ ಕ್ಷೇತ್ರದಲ್ಲಿ ಭಾರೀ ಸ್ಪರ್ಧೆ ನಡೆಯಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಅಂತಿಮವಾಗಿ ಅನಂತ್ ಕುಮಾರ್ 2.28 ಲಕ್ಷ ಮತಗಳ ಅಂತರದಿಂದ ವಿಜಯಿಯಾದರು. ಅನಂತ್ ಕುಮಾರ್ 6,33,816 ಮತಗಳನ್ನು ಪಡೆದಿದ್ದರೆ, ನಿಲೇಕಣಿ 4,05,241 ಮತಗಳನ್ನು ಪಡೆದಿದ್ದರು.
– ತೇಜಸ್ವಿ ಸೂರ್ಯ ಪರ ಬಿಎಲ್ ಸಂತೋಷ್ ಬ್ಯಾಟಿಂಗ್ – ಸಂತೋಷ್ ಮಾತಿಗೆ ಹೈಕಮಾಂಡ್ ಮಣೆ
ಬೆಂಗಳೂರು: ಯುವ ನಾಯಕ ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ನೀಡುವ ಕಾರ್ಯದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಯಶಸ್ವಿಯಾಗಿದ್ದಾರೆ.
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾದ ಬಳಿಕ ಈ ಕ್ಷೇತ್ರಕ್ಕೆ ಅಭ್ಯರ್ಥಿ ಯಾರಾಗಬೇಕು ಎನ್ನುವ ವಿಚಾರದ ಬಗ್ಗೆ ರಾಜ್ಯ ನಾಯಕರು ಸಭೆ ನಡೆಸಿ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಬಹುದು ಎನ್ನುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು.
ದೆಹಲಿಯಲ್ಲಿರುವ ಚುನಾವಣಾ ಸಮಿತಿ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಬಿಎಲ್ ಸಂತೋಷ್ ಅವರು ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಮುಂದಿನ ಕಥೆಯೇನು? ಇನ್ನು ಹಲವು ವರ್ಷ ಪಕ್ಷ ಕಟ್ಟಿ, ಬೆಳೆಸುವವರು ಯಾರು ಎಂದು ಹೇಳಿ ತೇಜಸ್ವಿ ಸೂರ್ಯ ಹೆಸರನ್ನೂ ಪರಿಗಣಿಸಬಹುದು ಎಂದು ನಾಯಕರಿಗೆ ಮನವರಿಕೆ ಮಾಡಿದ್ದಾರೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿಯೂ ಹರಿದಾಡತೊಡಗಿ ಈ ಕ್ಷೇತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಯಿತು. ಅಂತಿಮವಾಗಿ ಹೈಕಮಾಂಡ್ ಸಂತೋಷ್ ಹೇಳಿದಂತೆ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಒಂದು ಕಾಲದಲ್ಲಿ ಅನಂತ್ ಕುಮಾರ್ ಟಿಕೆಟ್ ಘೋಷಣೆ ಮಾಡುತ್ತಿದ್ದರು. ಆದರೆ ಇಂದು ಒಂದು ಟಿಕೆಟ್‍ಗಾಗಿ ಕಡೆ ದಿನದವರೆಗೂ ತೇಜಸ್ವಿನಿ ಅನಂತಕುಮಾರ್ ಕಾದಿದ್ದರು. ಅಂದು ಅನಂತಕುಮಾರ್ ಜತೆ ಸಂತೋಷ್ ಚುನಾವಣಾ ತಂತ್ರಗಾರಿಕೆ ಮಾಡುತ್ತಿದ್ದರು. ಆದರೆ ಇಂದು ಬಿ.ಎಲ್.ಸಂತೋಷ್ ಚದುರಾಂಗದಾಟದಲ್ಲಿ ಎಲ್ಲವೂ ಉಲ್ಟಾವಾಗಿದೆ ಎನ್ನುವ ವಿಚಾರ ಈಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಇದರ ಜೊತೆಯಲ್ಲಿ ಮಂಡ್ಯದಲ್ಲಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡುತ್ತದೆ. ಆದರೆ ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್ ನಿಧನರಾದರೂ ಪತ್ನಿಗೆ ಟಿಕೆಟ್ ನೀಡದೇ ಇರುವುದು ಎಷ್ಟು ಸರಿ ಎನ್ನುವ ಮಾತು ಕೇಳಿ ಬಂದಿದೆ.
ನನಗೆ ನಂಬಲು ಸಾಧ್ಯವಾಗುತ್ತಿಲ್ಲ. 28 ವರ್ಷದ ಯುವಕನ ಮೇಲೆ ನಂಬಿಕೆ ಇಟ್ಟು ಬೆಂಗಳೂರಿನ ದಕ್ಷಿಣ ಕ್ಷೇತ್ರದ ಟಿಕೆಟ್ ನೀಡಿದ ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಧನ್ಯವಾದಗಳು. ಈ ರೀತಿ ಟಿಕೆಟ್ ಬಿಜೆಪಿ ಪಕ್ಷದಲ್ಲಿ ಮಾತ್ರ ಸಿಗುತ್ತದೆ. ನನ್ನನ್ನು ಬೆಂಬಲಿಸಿದ ನಾಯಕರಾದ ಮುಕುಂದ ಮತ್ತು ಬಿಎಲ್ ಸಂತೋಷ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದಾರೆ.
I am humbled. Grateful. Overwhelmed. I thank PM @narendramodi for giving me this opportunity. I can't thank you enough, Modi Ji. I promise you that I shall work ceaselessly for our motherland till my last breath. That is the only way I can repay this debt of gratitude. THANK YOU!
I can't thank enough RSS and its selfless leaders for showering their choicest blessings on me. You have excused my mistakes, tolerated my mischief, supported me in every possible way. I can't believe that men like @MUKUNDAckpura & @blsanthosh exist in real. I want to be like you