Tag: Tejasvi Surya

  • ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಗೆಲುವು: ತೇಜಸ್ವಿನಿ ಅನಂತ್‍ಕುಮಾರ್

    ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಗೆಲುವು: ತೇಜಸ್ವಿನಿ ಅನಂತ್‍ಕುಮಾರ್

    ಬೆಂಗಳೂರು: ಈ ಬಾರಿಯೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ ಎಂದು ದಿ.ಅನಂತ್‍ಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    1991ರಲ್ಲಿ ಅನಂತ್‍ಕುಮಾರ್ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟವನ್ನು ಹಾರಿಸಿದ್ದರು. 1996ರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ್‍ಕುಮಾರ್ ತಮ್ಮ ಪರಿಶ್ರಮ ಮತ್ತು ಸ್ವಚ್ಛ ಆಡಳಿತದಿಂದಾಗಿ 6 ಬಾರಿ ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು. ಸದ್ಯ ಸ್ಪರ್ಧೆ ಮಾಡಿರುವ ತೇಜಸ್ವಿ ಸೂರ್ಯ ಅವರಿಗೆ ಒಳ್ಳೆಯದಾಗಲಿ ಎಂದು ಶುಭಕೋರಿ ತೇಜಸ್ವಿನಿ ಅನಂತ್ ಕುಮಾರ್ ಟ್ವೀಟ್ ಮಾಡಿದ್ದಾರೆ.

    ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಅನಂತ್ ಕುಮಾರ್ ಜೀ ಮತ್ತು ನೀವು ನನ್ನ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವ್ಯಕ್ತಿಗಳು. ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕೆ ನಾನು ಆಭಾರಿಯಾಗಿದ್ದೇನೆ. ಅನಂತ್ ಕುಮಾರ್ ಕಾರ್ಯಶೈಲಿಯಿಂದ ಪ್ರೇರಿತಗೊಂಡ ವ್ಯಕ್ತಿ ನಾನಾಗಿದ್ದು, ಒಳ್ಳೆಯ ಕೆಲಸ ಮಾಡುವ ಶಕ್ತಿಯನ್ನು ದೇವರು ನನಗೆ ಕರುಣಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಚುನಾವಣೆ ಘೋಷಣೆಯಾದಾಗ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ್‍ಕುಮಾರ್ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು. ಆದ್ರೆ ಕೊನೆ ಕ್ಷಣದಲ್ಲಿ ಬಿಜೆಪಿ ಯುವ ನಾಯಕನಾಗಿರುವ ತೇಜಸ್ವಿ ಸೂರ್ಯರಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಕಾಂಗ್ರೆಸ್‍ನಿಂದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಕಣದಲ್ಲಿದ್ದಾರೆ.

  • ಇವಿಎಂ ವಿಶ್ವಾಸಾರ್ಹತೆ ಪ್ರಶ್ನಿಸುವವರಿಗೆ ತೇಜಸ್ವಿ ಸೂರ್ಯ ಬಹಿರಂಗ ಸವಾಲು!

    ಇವಿಎಂ ವಿಶ್ವಾಸಾರ್ಹತೆ ಪ್ರಶ್ನಿಸುವವರಿಗೆ ತೇಜಸ್ವಿ ಸೂರ್ಯ ಬಹಿರಂಗ ಸವಾಲು!

    ಬೆಂಗಳೂರು: ಚುನಾವಣೋತ್ತರ ಸಮೀಕ್ಷಾ ಫಲಿತಾಂಶದ ಕುರಿತು ಇವಿಎಂಗಳ ವಿಶ್ವಾಸಾರ್ಹತೆ ಪ್ರಶ್ನಿಸುವ ಜನ ಪ್ರತಿನಿಧಿಗಳಿಗೆ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬಹಿರಂಗ ಸವಾಲೆಸೆದಿದ್ದಾರೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಜನಪ್ರತಿನಿಧಿಗಳು ಅದೇ ಇವಿಎಂಗಳ ಮೂಲಕವೇ ಗೆದ್ದು ಬಂದವರಿದ್ದಾರೆ. ಹೀಗಾಗಿ ಅವರು ಇವಿಎಂ ಸರಿಯಿಲ್ಲ ಎಂದು ಹೇಳಿ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಪ್ರಶ್ನಿಸುವ ಮೂಲಕ ಚಾಲೆಂಜ್ ಮಾಡಿದ್ದಾರೆ.

    ಸಿಎಂ ಹೇಳಿದ್ದೇನು?
    ಎಕ್ಸಿಟ್ ಪೋಲ್ ದೇಶದಲ್ಲಿ ಮೋದಿ ಅಲೆ ಇದೆ ಎಂದು ತೋರಿಸಲು ಅಷ್ಟೆ. ತಾತ್ಕಾಲಿಕ, ಕಾಲ್ಪನಿಕ ಮೋದಿ ಅಲೆ ಹೆಚ್ಚು ದಿನ ಇರಲ್ಲ. ಬಹುಮತದ ಕೊರತೆಯಾದರೆ ಪ್ರಾದೇಶಿಕ ಪಕ್ಷ ಸೆಳೆಯಲು ಯತ್ನ ಮಾಡಲಾಗುತ್ತದೆ. ಎಕ್ಸಿಟ್ ಪೋಲ್ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಸೆಳೆಯುವ ಯತ್ನ ಮಾಡಲಾಗುತ್ತಿದೆ. ಬಿಜೆಪಿ ಎಕ್ಸಿಟ್ ಪೋಲ್ ಮೂಲಕ ವೇದಿಕೆ ಸಿದ್ಧಪಡಿಸುತ್ತಿದೆ. ಇದು ಎಕ್ಸಿಟ್ ಪೋಲ್ ಅಷ್ಟೇ. ಎಕ್ಸಾಟ್ ಪೋಲ್ ಅಲ್ಲ ಎಂದು ಬರೆದು ಎಚ್.ಡಿ ದೇವೇಗೌಡ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ರಾಹುಲ್ ಗಾಂಧಿ, ಬಿಎಸ್‍ಪಿ ಹಾಗೂ ಎಕ್ಸಿಟ್ ಪೋಲ್ 2019 ಹ್ಯಾಷ್‍ಟ್ಯಾಗ್ ಹಾಕಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದರು.

    ಪರಮೇಶ್ವರ್ ಹೇಳಿದ್ದೇನು?
    ಚುನಾವಣೋತ್ತರ ಸಮೀಕ್ಷೆ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ ಹಾಗೆ ಇದೆ. ವಾಸ್ತವ ಸ್ಥಿತಿ ದೇಶದಲ್ಲಿ ಬೇರೆ ರೀತಿಯಲ್ಲಿ ಇದೆ. ಇಂತಹ ಸಂದರ್ಭದಲ್ಲಿ 300 ಸ್ಥಾನಗಳು ಬರುತ್ತದೆ ಎಂದು ಹೇಳಿಸಿಕೊಂಡು ಬಿಜೆಪಿ ಸಮಾಧಾನ ಪಟ್ಟುಕೊಳ್ಳುತ್ತಿದೆ. ಫಲಿತಾಂಶ ಬಂದ ಬಳಿಕ ಸ್ಪಷ್ಟವಾದ ಚಿತ್ರಣ ಗೊತ್ತಾಗುತ್ತದೆ. ಎಲ್ಲಾ ವಿರೋಧ ಪಕ್ಷಗಳು ಕೂಡ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇವಿಎಂ ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿರೋಧ ಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳೇ ಬ್ಯಾಲೆಟ್ ಪೇಪರ್‍ಗಳನ್ನು ಆಯ್ಕೆ ಮಾಡುತ್ತಿದ್ದಾರೆ. 2019 ಎಕ್ಸಿಟ್ ಪೋಲ್ ಸಂಪೂರ್ಣವಾಗಿ ಆಡಳಿತ ಪಕ್ಷದ ಪರವಾಗಿ ಇದೆ. ಇವಿಎಂಗಳನ್ನು ಇಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಆರೋಪಿಸಿದ್ದರು.

    ಮಮತಾ ಬ್ಯಾನರ್ಜಿ:
    ಚುನಾವಣೋತ್ತರ ಸಮೀಕ್ಷೆ ಬಗ್ಗೆ ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿರುವ ಮಮತಾ ಬ್ಯಾನರ್ಜಿ, ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲಾರೆ. ಸಾವಿರಾರು ಇವಿಎಂಗಳು ಬದಲಾವಣೆ ಮಾಡಿರುವ ಸಾಧ್ಯತೆಗಳಿವೆ. ಎಲ್ಲ ವಿರೋಧ ಪಕ್ಷಗಳು ಒಂದಾಗಿ ಈ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಭಾಗಿಯಾಗಲು ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದರು.

    ರಾಹುಲ್ ಗಾಂಧಿ:
    ಚುನಾವಣೆ ಸಂದರ್ಭದಲ್ಲಿ ಎಲೆಕ್ಟೋಲ್ ಬಾಂಡ್ ಮತ್ತು ಇವಿಎಂಗಳನ್ನು ಬದಲಾವಣೆ ಮಾಡಲಾಗಿದೆ. ಚುನಾವಣಾ ಆಯೋಗ ನಮೋ ಟಿವಿ, ಮೋದಿ ಸೇನೆ ಮತ್ತು ಕೇದಾರನಾಥದಲ್ಲಿಯ ಡ್ರಾಮಾ, ಮೋದಿ ಹಾಗು ಗ್ಯಾಂಗ್ ಮುಂದೆ ಶರಣಾಗಿರೋದನ್ನು ಎಲ್ಲ ಭಾರತೀಯರು ನೋಡಿದ್ದಾರೆ. ಚುನಾವಣಾ ಆಯೋಗ ಮೋದಿ ಗ್ಯಾಂಗ್ ಮುಂದೆ ಗೌರವಾನ್ವಿತವಾಗಿ ಭಯಗೊಂಡಿದೆ ಎಂದು ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದರು.

    ಭಾನುವಾರ ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿತ್ತು. 10ರಲ್ಲಿ 9 ಸಮೀಕ್ಷೆಗಳು ಕೇಂದ್ರದಲ್ಲಿ ಮತ್ತೊಮ್ಮೆ ಎನ್‍ಡಿಎ ಸರ್ಕಾರ ರಚನೆ ಮಾಡಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದವು. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದವು.

  • ರೋಡ್ ಶೋ ವೇಳೆ ಉಲ್ಲಂಘನೆ – ತೇಜಸ್ವಿ ಸೂರ್ಯ ವಿರುದ್ಧ ದೂರು

    ರೋಡ್ ಶೋ ವೇಳೆ ಉಲ್ಲಂಘನೆ – ತೇಜಸ್ವಿ ಸೂರ್ಯ ವಿರುದ್ಧ ದೂರು

    ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿದೆ.

    ಸಾಮಾಜಿಕ ಕಾರ್ಯಕರ್ತ ಯೋಗಾನಂದ್ ಅವರು ತೇಜಸ್ವಿ ಸೂರ್ಯ ವಿರುದ್ಧ ಬೆಂಗಳೂರು ದಕ್ಷಿಣ ಚುನಾವಣಾ ಅಧಿಕಾರಿಗೆ ದೂರು ದಾಖಲಿಸಿದ್ದಾರೆ. ತೇಜಸ್ವಿ ಸೂರ್ಯ ಪ್ರಚಾರ ವಾಹನದಲ್ಲಿ ಎಲ್‍ಇಡಿ ಲೈಟ್ ಬಳಕೆ ಆಗಿದೆ. ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪ ಮಾಡಿ ದೂರು ದಾಖಲಿಸಿದ್ದಾರೆ.

    ಚುನಾವಣಾ ನೀತಿ ಸಂಹಿತೆ ಅನ್ವಯ ಪ್ರಚಾರ ವಾಹನಕ್ಕೆ ಎಲ್‍ಇಡಿ ಲೈಟ್ ಅಳವಡಿಕೆ ಮಾಡುವಂತಿಲ್ಲ. ಆದರೆ ಬಿ.ಎಸ್ ಯಡಿಯೂರಪ್ಪ, ಅಮಿತ್ ಶಾ ಭಾಗವಹಿಸಿದ್ದ ರೋಡ್ ಶೋ ವೇಳೆ ಎಲ್‍ಇಡಿ ದೀಪ ಬಳಕೆ ಆಗಿತ್ತು. ಹಾಗಾಗಿ ಯೋಗಾನಂದ್ ಅವರು ತೇಜಸ್ವಿ ವಿರುದ್ಧ ದೂರು ನೀಡಿದ್ದಾರೆ.

  • ನಾಚಿಕೆ ಆಗ್ಬೇಕು, ನಿಮ್ಮ ವಿರುದ್ಧ ಕಾನೂನು ಸಮರ: ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತಾ ಗುಡುಗು

    ನಾಚಿಕೆ ಆಗ್ಬೇಕು, ನಿಮ್ಮ ವಿರುದ್ಧ ಕಾನೂನು ಸಮರ: ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತಾ ಗುಡುಗು

    ಬೆಂಗಳೂರು: ನಿಮಗೆ ನಾಚಿಕೆ ಆಗಬೇಕು. ನಿಮ್ಮ ವಿರುದ್ಧ ನಾನು ಕಾನೂನು ಸಮರ ಆರಂಭಿಸುತ್ತೇನೆ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತಾ ಗುಡುಗಿದ್ದಾರೆ.

    ಇಂದು ಬೆಳಗ್ಗೆ ಬ್ರಿಜೇಶ್ ಕಾಳಪ್ಪ ಸುದ್ದಿಗೋಷ್ಠಿಯಲ್ಲಿ ಸೋಮ್ ದತ್ತಾ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಬಿಡುಗಡೆ ಮಾಡಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕಿಡಿ ಕಾರಿದ್ದರು. ಈ ಸಂಬಂಧ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಸೋಮ್ ದತ್ತಾ, ಮಹಿಳೆಗೆ ಗೌರವ ನೀಡದ ಬ್ರಿಜೇಶ್ ಕಾಳಪ್ಪರಿಗೆ ನಾಚಿಕೆ ಆಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ನಿಮ್ಮ ರಾಜಕೀಯ ಆಟದಲ್ಲಿ ನನ್ನ ಬಳಸಿಕೊಳ್ಳುವುದನ್ನು ನಿಲ್ಲಿಸಿ. ಈಗಾಗಲೇ ಮಹಿಳಾ ಆಯೋಗಕ್ಕೆ ಪತ್ರ ಬರೆದ ಈ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ನನ್ನ ಇಚ್ಛೆಗೆ ವಿರುದ್ಧವಾಗಿ ಕೇಸ್ ದಾಖಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಆಡಿಯೋ ಕ್ಲಿಪ್ ನಲ್ಲಿ ಹೆಚ್ಚಿನ ಮಾಹಿತಿಗಳು ನನ್ನ ಖಾಸಗಿತನಕ್ಕೆ ಧಕ್ಕೆಯುಂಟು ಮಾಡಿವೆ. ನನ್ನ ಹೇಳಿಕೆಗಳನ್ನು ರಾಜಕೀಯಗೊಳಿಸಿ ತಿರುಚಲಾಗಿದೆ. ಈ ಹಿನ್ನೆಲೆಯಲ್ಲಿ ನಾನು ಸ್ಪಷ್ಟನೆ ನೀಡುತ್ತಿದ್ದು, ಯಾವುದೇ ರಾಜಕೀಯ ಪಕ್ಷಗಳು ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ಮಾಧ್ಯಮಗಳು ಬಿತ್ತರಿಸದಂತೆ ಮನವಿ ಮಾಡಿಕೊಳ್ಳುತ್ತೇನೆ.

    ನನ್ನ ಖಾಸಗಿ ಸಂಭಾಷಣೆಯನ್ನು ನನ್ನ ಅನುಮತಿ ಪಡೆಯದೇ ಪ್ರಕಟಿಸಲಾಗಿದೆ. ಇದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು, ಇದನ್ನು ನಾನು ಖಂಡಿಸುತ್ತೇನೆ. ನನ್ನ ಖಾಸಗೀತನಕ್ಕೆ ಧಕ್ಕೆ ತಂದವರು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ. ರಾಜಕೀಯಕ್ಕಾಗಿ ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುವ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಅವರಿಗೆ ನಾಚಿಕೆಯಾಗಬೇಕು. ನನ್ನ ಘನತೆಗೆ ಕುಂದು ತಂದಿದ್ದಕ್ಕೆ ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಮೊರೆ ಹೋಗುತ್ತೇನೆ. ಇದನ್ನು ಓದಿ: ತೇಜಸ್ವಿ ಸೂರ್ಯ ವಿರುದ್ಧ ಎಫ್‍ಐಆರ್ ದಾಖಲಾಗಿಲ್ಲ: ಡಿಸಿಪಿ ಇಶಾ ಪಂತ್

    ಬ್ರಿಜೇಶ್ ಕಾಳಪ್ಪ ಹೇಳಿದ್ದೇನು?
    ಇಂದು ಸುದ್ದಿಗೋಷ್ಠಿ ನಡೆಸಿ ಸೋಮ್ ದತ್ತಾ ಅವರ ಆಡಿಯೋ ಕ್ಲಿಪ್ ಅನ್ನು ಬ್ರಿಜೇಶ್ ಕಾಳಪ್ಪ ಬಿಡುಗಡೆ ಮಾಡಿದ್ದರು. ಈ ವೇಳೆ ಮಾತನಾಡಿದ ಅವರು, ತೇಜಸ್ವಿ ಸೂರ್ಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತೇಜಸ್ವಿ ಸೂರ್ಯ ತಮ್ಮ ಅಫಿಡವಿಟ್ ನಲ್ಲಿ ಪ್ರಕರಣ ಬಗ್ಗೆ ಹೇಳಿಕೊಂಡಿಲ್ಲ. ಈ ಎಲ್ಲ ವಿಚಾರಗಳು ಸಂಸದ ಪ್ರತಾಪ್ ಸಿಂಹ, ಬಿಜೆಪಿ ಮತ್ತು ಆರ್‍ಎಸ್‍ಎಸ್ ನಾಯಕರಿಗೆ ಗೊತ್ತಿದ್ರೂ ಸುಮ್ಮನಿದ್ದಾರೆ. ತೇಜಸ್ವಿ ಸೂರ್ಯ ಮೂರು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂಬುವುದು ಆಡಿಯೋ ಕ್ಲಿಪ್ ಹೇಳುತ್ತದೆ. ಸೋಮ್ ದತ್ತಾಗೆ ಬಿಜೆಪಿ ನಾಯಕರು ಕರೆ ಮಾಡಿ ಧಮ್ಕಿ ಹಾಕಿದ್ದು, ಹೀಗಾಗಿ ಮಾಧ್ಯಮಗಳ ಮುಂದೆ ಬರಲು ಸಾಧ್ಯ ಆಗುತ್ತಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದರು.

    ನನ್ನ ರೀತಿಯಲ್ಲಿಯೇ ಇನ್ನಿಬ್ಬರು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಸೋಮ್ ದತ್ತಾ ತಮ್ಮ ಸಂಭಾಷಣೆಯಲ್ಲಿ ತಿಳಿಸಿದ್ದಾರೆ. ತೇಜಸ್ವಿ ಸೂರ್ಯ ಉಮೇದುವಾರಿಕೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ಉಲ್ಲೇಖಿಸಿಲ್ಲ. ಡಾ. ಸೋಮ್ ದತ್ತಾ ದಾಖಲಿಸಿರುವ ದೂರಿನ ಬಗ್ಗೆ ತೇಜಸ್ವಿ ಸೂರ್ಯ ಎಲ್ಲಿಯೂ ಹೇಳಿಲ್ಲ. ತೇಜಸ್ವಿ ಸೂರ್ಯ ಮೂರು ಆರೋಪಗಳಿದ್ದು, ಬಿಜೆಪಿ ಸ್ಪಷ್ಟನೆ ನೀಡಬೇಕೆಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದರು.

  • ‘ಕನ್ನಡದಲ್ಲಿ ಮತ ಕೇಳಿ’- ನಿರ್ಮಲಾ ಸೀತಾರಾಮನ್‍ಗೆ ಮತದಾರರ ಬೇಡಿಕೆ

    ‘ಕನ್ನಡದಲ್ಲಿ ಮತ ಕೇಳಿ’- ನಿರ್ಮಲಾ ಸೀತಾರಾಮನ್‍ಗೆ ಮತದಾರರ ಬೇಡಿಕೆ

    ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಕನ್ನಡದಲ್ಲಿ ಮತಯಾಚನೆ ಮಾಡುವಂತೆ ಮತದಾರರು ಬೇಡಿಕೆ ಇಟ್ಟಿದ್ದಾರೆ.

    ನಿರ್ಮಲಾ ಸೀತಾರಾಮನ್ ಅವರು ಇಂಗ್ಲೀಷ್ ಭಾಷೆಯಲ್ಲಿ ಮತ ಕೇಳುತ್ತಿದ್ದರು. ಈ ವೇಳೆ ಕೆಲ ಮಹಿಳೆಯರು ಕನ್ನಡದಲ್ಲಿ ಮತಯಾಚನೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ರಕ್ಷಣಾ ಸಚಿವೆ ನನಗೆ ಕನ್ನಡ ಬರಲ್ಲ, ತೇಜಸ್ವಿ ಸೂರ್ಯಗೆ ಪ್ಲೀಸ್ ಸಪೋರ್ಟ್ ಎಂದು ಹೇಳುತ್ತಾ ಇಂಗ್ಲೀಷ್‍ನಲ್ಲೇ ಮತಯಾಚನೆ ಮಾಡಿದರು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನೀವು ಕನ್ನಡ ಕಲಿಯಬೇಕೆಂದು ಮಹಿಳೆಯರು ಬೇಡಿಕೆ ಇಟ್ಟರು.

    ಇದೇ ವೇಳೆ ನಿರ್ಮಲಾ ಸೀತಾರಾಮನ್ ಅವರು ನನ್ನ ಜೊತೆ ಫೋಟೋ ತೆಗೆದುಕೊಳ್ಳಿ ಐದು ವೋಟ್ ಹಾಕಿ ಎಂದು ಕೇಳಿಕೊಂಡರು. ಫೋಟೋ ಕೇಳಿದವರಿಗೆಲ್ಲ ವೋಟ್ ಮಾಡಿದರೆ ಮಾತ್ರ ಫೋಟೋ ಕೊಡ್ತೀನಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಮನೆ ಮನೆ ಪ್ರಚಾರದ ವೇಳೆ ಸೆಲ್ಫಿ ಕೇಳಿದವರಿಗೆ ನಿರ್ಮಾಲಾ ಸೀತಾರಾಮನ್ ವೋಟ್ ಮಾಡಿ ಎಂದು ಹೇಳಿ ಸಾರ್ವಜನಿಕರ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.

    ನಿರ್ಮಲಾ ಸೀತಾರಾಮನ್ ಜೆಪಿ ನಗರದ ಮಾರೇನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದು, ಇವರಿಗೆ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ್ತು ಸ್ಥಳೀಯ ಕಾರ್ಪೋರೇಟರ್ ಸಾಥ್ ನೀಡಿದ್ದಾರೆ.

  • ತೇಜಸ್ವಿಗೆ ಹಿನ್ನಡೆ – ಸುದ್ದಿ ಪ್ರಕಟಿಸುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟ ವಿಚಾರ

    ತೇಜಸ್ವಿಗೆ ಹಿನ್ನಡೆ – ಸುದ್ದಿ ಪ್ರಕಟಿಸುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟ ವಿಚಾರ

    ಬೆಂಗಳೂರು: ಬಿಜೆಪಿಯ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡದಂತೆ ಕೆಳ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಇಂದು ತೆರವುಗೊಳಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದೆ.

    ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ತೇಜಸ್ವಿ ಸೂರ್ಯ ಅವರಿಗೆ ಹಿನ್ನಡೆಯಾಗಿದ್ದು, ಸುದ್ದಿ ಪ್ರಕಟ ಮಾಡುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

    ತೇಜಸ್ವಿ ಅವರ ಬಗ್ಗೆ ಸರಿ ಎನಿಸಿದ ಸುದ್ದಿಯನ್ನ ಪ್ರಸಾರ ಮಾಡಲು ಮಾಧ್ಯಮಗಳ ವಿವೇಚನೆಗೆ ಬಿಡಲಾಗಿದೆ. ಆದರೆ ಮಾಧ್ಯಮಗಳ ವರದಿಗಳು ಅವರಿಗೆ ಅವಹೇಳನಕಾರಿ ಎಂದು ಅನಿಸಿದರೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸೂಚಿಸಿದೆ.

    ನಮ್ಮ ಸಂವಿಧಾನದಲ್ಲಿ 19 (1)ಎ ವಿಧಿಯ ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಲಾಗಿದೆ. ಪ್ರತಿಯೊಬ್ಬ ಮತದಾರನಿಗೂ ತನ್ನ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವವರ ಬಗ್ಗೆ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಮಾನಹಾನಿ ಹೇಳಿಕೆ ಅಥವಾ ದೃಶ್ಯ ಬಿತ್ತರಗೊಳ್ಳುತ್ತದೆ ಅಂಶವನ್ನು ಪ್ರಕ್ರಿಯೆ ನಡೆದ ಮೇಲೆ ನಿರ್ಧರಿಸಲು ಸಾಧ್ಯ. ಹೀಗಾಗಿ ಯಾವುದೇ ವ್ಯಕ್ತಿ ತನಗೆ ಮಾನಹಾನಿ ಆಗಿದ್ದರೆ ಸೂಕ್ತ ವೇದಿಕೆಗಳಲ್ಲಿ ಪ್ರಶ್ನೆ ಮಾಡಬಹುದು. ಈ ಕಾರಣಗಳಿಂದ ಪತ್ರಿಕೆ, ಟಿವಿ, ಫೇಸ್‍ಬುಕ್, ಯೂಟ್ಯೂಬ್ ನಂತಹ ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿ ಸೂರ್ಯ ಅವರ ವಿರುದ್ಧ ಸುದ್ದಿ ಪ್ರಕಟಿಸುವುದಕ್ಕೆ ನಗರದ ಸಿವಿಲ್ ನ್ಯಾಯಾಲಯ ನಿರ್ಬಂಧ ವಿಧಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

    ಏನಿದು ಪ್ರಕರಣ: ಲೋಕಸಭಾ ಸ್ಪರ್ಧಿ ಆಗಿರುವ ತೇಜಸ್ವಿ ಸೂರ್ಯ ಅವರ ಬಗ್ಗೆ ಮಹಿಳೆಯೊಬ್ಬರು ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತಂತೆ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿ, ಅವಹೇಳನಕಾರಿ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಬೇಕು ಎಂದು ತೇಜಸ್ವಿಯವರು ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸ್ವೀಕರಿಸಿದ ನಗರದ ಸಿವಿಲ್ ನ್ಯಾಯಾಲಯ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಿತ್ತು.

  • ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

    ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

    ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ.

    ಬಾಲಕೋಟ್ ವೈಮಾನಿಕ ದಾಳಿಯನ್ನು ಬಿಜೆಪಿಯ ಸಾಧನೆ ಎನ್ನುವ ರೀತಿಯಲ್ಲಿ ಬಿಂಬಿಸಿ ಮತ ಯಾಚನೆ ಆರೋಪದ ಅಡಿ ದೂರು ದಾಖಲಾಗಿದೆ. ವಕೀಲರಾದ ಬಿ.ಸಂಜಯ್ ಯಾದವ್ ಹಾಗೂ ಮಹಮ್ಮದ್ ಅಯೂಬ್ ಅಲಿ ಅವರು ಸರ್ಜಿಕಲ್ ಸ್ಟ್ರೈಕ್ ಪ್ರಸ್ತಾಪಿಸಿ ಚುನಾವಣಾ ನೀತಿ ಸಂಹಿತಿಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

    ಭಾರತೀಯ ಸೇನೆಯು ಪುಲ್ವಾಮಾದಲ್ಲಿ ನಡೆದ ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನದ ನೆಲದಲ್ಲಿ ನಡೆಸಿದ್ದ ವಾಯು ದಾಳಿಯನ್ನು ಉಲ್ಲೇಖಿಸಿ ಕರಪತ್ರ ಮುದ್ರಿಸಿ, ಹಂಚಿಕೆ ಮಾಡುವ ಮೂಲಕ ಮತಯಾಚಿಸಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ಬೆಂಗ್ಳೂರು ದಕ್ಷಿಣ: ವಿ.ಸೋಮಣ್ಣ ಆಪ್ತ ಕಾಂಗ್ರೆಸ್‍ ಸೇರ್ಪಡೆ

    ಬೆಂಗ್ಳೂರು ದಕ್ಷಿಣ: ವಿ.ಸೋಮಣ್ಣ ಆಪ್ತ ಕಾಂಗ್ರೆಸ್‍ ಸೇರ್ಪಡೆ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅಚ್ಚರಿಯಾಗಿ ಟಿಕೆಟ್ ಪಡೆದ ತೇಜಸ್ವಿ ಸೂರ್ಯ ಅವರ ಆಯ್ಕೆ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಎದ್ದ ಬೆನ್ನಲ್ಲೇ ಬಿಜೆಪಿ ನಾಯಕ ವಿ ಸೋಮಣ್ಣ ಅವರ ಆಪ್ತ ಲಕ್ಷ್ಮೀನಾರಾಯಣ್ ಪಕ್ಷ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ.

    ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಲಕ್ಷ್ಮೀ ನಾರಾಯಣ ಅವರಿಗೆ ಕಾಂಗ್ರೆಸ್ ಶಾಲು ಹಾಕಿ ಸ್ವಾಗತ ಕೋರಿದರು. ವಿ ಸೋಮಣ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮೀ ನಾರಾಯಣ ಅವರು ಬಿಬಿಎಂಪಿ ಉಪಮಹಾಪೌರರು ಆಗಿದ್ದರು. ಅವರೊಂದಿಗೆ 100 ಕ್ಕೂ ಹೆಚ್ಚು ಸ್ಥಳೀಯ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು.

    ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಲಕ್ಷ್ಮೀ ನಾರಾಯಣ ಅವರು ವಿಜಯನಗರ, ಚಿಕ್ಕಪೇಟೆಯಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದು, ಈ ಬಾರಿ ಅವರ ನಾಯಕತ್ವವು ನಮ್ಮ ಅಭ್ಯರ್ಥಿ ಬಿಕೆ ಹರಿಪ್ರಸಾದ್ ಅವರಿಗೆ ಹೆಚ್ಚಿನ ಬಲ ತುಂಬಲಿದೆ ಎಂದು ತಿಳಿಸಿದರು.

  • ಸೂಲಿಬೆಲೆ ಕಾರ್ಯಕ್ರಮದಲ್ಲಿ ರಾಹುಲ್ ಘೋಷಣೆ

    ಸೂಲಿಬೆಲೆ ಕಾರ್ಯಕ್ರಮದಲ್ಲಿ ರಾಹುಲ್ ಘೋಷಣೆ

    ಬೆಂಗಳೂರು: ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಪರ ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.

    ವಿದ್ಯಾಪೀಠ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಸೂಲೆಬೆಲೆ ಆಗಮಿಸಿದ್ದರು. ಈ ವೇಳೆ ಅವರು ವಿದ್ಯಾಪೀಠದಲ್ಲಿ ಮತಯಾಚನೆ ಮಾಡಲು ಬಂದಿದ್ದು, ಈ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿದರು.

    ಈ ವೇಳೆ ಸ್ಥಳಕ್ಕೆ ಆಗಮಿಸಿದ ಚುನಾವಣಾ ವೀಕ್ಷಕರು ದೇವಸ್ಥಾನದ ಪ್ರಾಂಗಣದಲ್ಲಿ ಮತಯಾಚನೆ ಮಾಡಲು ಅವಕಾಶವಿಲ್ಲ. ಕೇವಲ ಕೈ ಮುಗಿದು ನಡೆಯಬಹುದು ಎಂದು ಆಯೋಜಕರಿಗೆ ವಿವರಿಸಿದರು. ಚುನಾವಣಾ ವೀಕ್ಷಕರು ಬಂದ ಬಳಿಕ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟುಕುಗೊಳಿಸಿದರು. ಇದನ್ನೂ ಓದಿ: ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಕೇಳಲಾಗದೇ ಭಾಷಣಕ್ಕೆ ಅಡ್ಡಿ: ಚಕ್ರವರ್ತಿ ಸೂಲಿಬೆಲೆ

    ಇದಕ್ಕೂ ಮುನ್ನ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಪರ ಘೋಷಣೆಗಳನ್ನು ಕೂಗುವ ಮೂಲಕ ಸೂಲಿಬೆಲೆಯ ಭಾಷಣಕ್ಕೆ ಅಡ್ಡಿಪಡಿಸಿದರು. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

  • ಗೆದ್ದು ಬಾ ಮಗನೇ – ತೇಜಸ್ವಿಗೆ ಅಮಿತ್ ಶಾ ಆಶೀರ್ವಾದ

    ಗೆದ್ದು ಬಾ ಮಗನೇ – ತೇಜಸ್ವಿಗೆ ಅಮಿತ್ ಶಾ ಆಶೀರ್ವಾದ

    ಬೆಂಗಳೂರು: ಜೀತ್ ಕರ್ ಆವೊ, ಬೇಟಾ(ಗೆದ್ದು ಬಾ ಮಗನೇ) ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಆಶೀರ್ವಾದ ಮಾಡಿದ್ದಾರೆ.

    ಮಂಗಳವಾರ ರಾತ್ರಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬರುವ ಬನಶಂಕರಿಯಿಂದ ಜೆಪಿ ನಗರದವರೆಗೆ ಅಮಿತ್ ಶಾ, ತೇಜಸ್ವಿ ಸೂರ್ಯ ಅವರ ಪರವಾಗಿ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದರು. ರೋಡ್ ಶೋದ ವಾಹನದಿಂದ ಇಳಿಯುವ ಸಂದರ್ಭದಲ್ಲಿ ಅಮಿತ್ ಶಾ ಜೊತೆ ತೇಜಸ್ವಿ ಸೂರ್ಯ ಸೆಲ್ಫಿ ಕ್ಲಿಕ್ಕಿಸಿ ಆಶೀರ್ವಾದ ಪಡೆದರು.

    ರೋಡ್ ಶೋದ ಬಗ್ಗೆ ಫೇಸ್‍ಬುಕ್ ನಲ್ಲಿ ಪೋಸ್ಟ್ ಹಾಕಿದ ತೇಜಸ್ವಿ ಸೂರ್ಯ, ಜೀತ್ ಕರ್ ಆವೊ, ಬೇಟಾ ಎಂದು ಅಮಿತ್ ಶಾ ನನ್ನಲ್ಲಿ ಹೇಳಿದ್ದಾರೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾ ಅವರು ಆಡಿದ ಮಾತು ನನ್ನ ಮನದಲ್ಲಿ ಪ್ರತಿಧ್ವನಿಸುತ್ತಿದೆ. ನಿಮ್ಮನ್ನು ಸಂಸತ್ತಿನಲ್ಲಿ ನೋಡುತ್ತೇನೆ ಹಾಗೂ ಯುವಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಅವರಿಗೆ ಮಾತು ಕೊಟ್ಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ರಾತ್ರಿ 9 ಗಂಟೆಗೆ ಬನಶಂಕರಿಗೆ ಅಮಿತ್ ಶಾ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಮೊಬೈಲ್ ಲೈಟ್ ಆನ್ ಮಾಡಿ ಅವರನ್ನು ಸ್ವಾಗತಿಸಿದರು. ಅಮಿತ್ ಶಾ ಮತಯಾಚನೆಯ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ, ಆರ್ ಅಶೋಕ್, ವಿ ಸೋಮಣ್ಣ, ಅಭ್ಯರ್ಥಿಗಳಾದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಅಶ್ವಥ್‍ನಾರಾಯಣ ವಾಹನದ ವೇದಿಕೆ ಮೇಲೆ ನಿಂತಿದ್ದರು.

    ತೇಜಸ್ವಿನಿ ಅನಂತ್‍ಕುಮಾರ್ ವಾಹನ ಏರಿದ ಕೂಡಲೇ ಸೋಮಣ್ಣ ಅವರನ್ನು ಹಿಂದಕ್ಕೆ ಕಳುಹಿಸಿ ಯಡಿಯೂರಪ್ಪ ಪಕ್ಕದಲ್ಲೇ ತೇಜಸ್ವಿನಿ ಅನಂತ್‍ಕುಮಾರ್ ಅವರನ್ನು ಅಮಿತ್ ಶಾ ನಿಲ್ಲಿಸಿ ಮತ ಯಾಚನೆ ಮಾಡಿದರು. ತೆರೆದ ವಾಹನದಲ್ಲಿ ಸಂಚರಿಸುತ್ತಿದ್ದಾಗ ಕಾರ್ಯಕರ್ತರು “ಮೋದಿ ಮೋದಿ” ಘೋಷಣೆ ಕೂಗಿ ಬೆಂಬಲಿಸುತ್ತಿದ್ದರು.

    ರೋಡ್ ಶೋ ಹಿನ್ನೆಲೆಯಲ್ಲಿ ಬನಶಂಕರಿ ಬಸ್ ನಿಲ್ದಾಣದಿಂದ ಜೆಪಿ ನಗರ ಸಿಗ್ನಲ್ ವರೆಗಿನ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು.