ಬೆಂಗಳೂರು: ಬೆಂಗಳೂರಿಗೆ ಉಪನಗರ ರೈಲು ಯೋಜನೆಗೆ ಕೇಂದ್ರ ನೀತಿ ಆಯೋಗ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಮೂಲಕ ದೀಪಾವಳಿ ಬಳಿಕ ಬೆಂಗಳೂರಿಗರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಸಬ್ ಅರ್ಬನ್ ರೈಲಿಗೆ ಇದ್ದ ತೊಡಕುಗಳು ನಿವಾರಣೆಯಾಗಿವೆ. ಬೆಂಗಳೂರಿಗೆ ಸಬ್ ಅರ್ಬನ್ ರೈಲು ಎರಡು ದಶಕಗಳ ಬೇಡಿಕೆಯಾಗಿತ್ತು. ಸೋಮವಾರ ರೈಲ್ವೇ ಚೇರ್ ಮೆನ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಆರ್ಥಿಕ ಇಲಾಖೆ ಮುಖ್ಯಸ್ಥರು ಹಾಗೂ ನೀತಿ ಆಯೋಗದ ಮುಖ್ಯಸ್ಥರ ಜೊತೆ ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲಿಗೆ ಅನುಮತಿ ಸಿಕ್ಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ವಿಳಂಬ – ಡಿವಿಎಸ್ ಆರೋಪ
ಈ ಹಿಂದೆ ಇದ್ದ ಕಾನೂನು ತೊಡಕುಗಳು ನಿವಾರಣೆಯಾಗಿವೆ. ಆದಷ್ಟು ಬೇಗ ಕೇಂದ್ರ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಸಿಗಬೇಕಿದೆ. ನಮ್ಮ ರಾಜ್ಯದ ಎಲ್ಲಾ ಸಚಿವರು, ಶಾಸಕರು, ಸಂಸದರು ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ. ದಿವಂಗತ, ಮಾಜಿ ಸಚಿವ ಅನಂತ್‌ಕುಮಾರ್ ಸೇರಿದಂತೆ ಸಾಕಷ್ಟು ನಾಯಕರು ಸಬ್ ಅರ್ಬನ್ ರೈಲಿಗಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.
ಸಿಲಿಕಾನ್ ಸಿಟಿಗೆ ಸಬ್ ಅರ್ಬನ್ ರೈಲು ಸೇವೆ ಒದಗಿಸಲು ಕೇಂದ್ರ ಸರ್ಕಾರ 2018ರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಸಬ್ ಅರ್ಬನ್ ರೈಲು ಯೋಜನೆಗೆ ಒಟ್ಟು 40 ಸಾವಿರ ಕೋಟಿ ರೂ. ಮೀಸಲಿಡಲಾಗಿದ್ದು, ಅದರಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ರೂ. ನೀಡಲಾಗುತ್ತಿದೆ ಎಂದು ಪ್ರಕಟಿಸಿದ್ದರು.
ಸಬ್ ಅರ್ಬನ್ ರೈಲಿನಿಂದ ನಗರ ಮತ್ತು ಸುತ್ತಮುತ್ತಲಿನ ಉಪನಗರಗಳಿಗೆ ರೈಲು ಸಂಪರ್ಕ ಏರ್ಪಡಲಿದೆ. ರಾಮನಗರ-ಬೆಂಗಳೂರು, ಬೆಂಗಳೂರು-ಮಂಡ್ಯ, ಕೇಂದ್ರ ರೈಲ್ವೇ ನಿಲ್ದಾಣ-ಯಶವಂತಪುರ, ಯಶವಂತಪುರ- ತುಮಕೂರು, ಯಲಹಂಕ-ಬೈಯಪ್ಪನಹಳ್ಳಿ, ಯಲಹಂಕ-ದೊಡ್ಡಬಳ್ಳಾಪುರ, ಯಲಹಂಕ-ಚಿಕ್ಕಬಳ್ಳಾಪುರ ನಡುವೆ ಬೆಂಗಳೂರು ಸಬ್ ಅರ್ಬನ್ ರೈಲು ಸೇವೆ ಆರಂಭವಾಗಲಿದೆ.
ನಗರದ ಜನದಟ್ಟಣೆ ಕಡಿಮೆ ಮಾಡಲು ಮತ್ತು ವಿಮಾನ ನಿಲ್ದಾಣಕ್ಕೆ ನೇರಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿಗೆ ಸಬ್ ಅರ್ಬನ್ ರೈಲು ಬರಬೇಕು ಎಂಬ ಪ್ರಸ್ತಾಪವನ್ನು 1996ರಿಂದಲೇ ಅನಂತ್ ಕುಮಾರ್ ಅವರು ಸರ್ಕಾರಗಳನ್ನು ಒತ್ತಾಯಿದ್ದರು. ಇದೀಗ ಅವರ ಸಿಲಿಕಾನ್ ಸಿಟಿಯ ಕನಸು ಈಡೇರಿದೆ. ಒಟ್ಟಿನಲ್ಲಿ ಲಕ್ಷಾಂತರ ಜನರಿಗೆ ಅನುಕೂಲವಾಗುವ ಈ ಯೋಜನೆಯಿಂದ ಟ್ರಾಫಿಕ್ ಜಾಮ್ ತಪ್ಪಲಿದೆ.