Tag: Tejasvi Surya

  • ಕೊರೊನಾ ನಿಯಮ ಉಲ್ಲಂಘಿಸಿ ತೇಜಸ್ವಿ ಸೂರ್ಯ ರ‍್ಯಾಲಿ

    ಕೊರೊನಾ ನಿಯಮ ಉಲ್ಲಂಘಿಸಿ ತೇಜಸ್ವಿ ಸೂರ್ಯ ರ‍್ಯಾಲಿ

    ಬೆಂಗಳೂರು: ಕೊರೊನಾ ನಿಯಮ ಉಲ್ಲಂಘಿಸಿ ಯಾವುದೇ ರಾಜಕೀಯ ರ‍್ಯಾಲಿ ಮಾಡಕೂಡದು ಎಂದು ಕೇಂದ್ರ ಸರ್ಕಾರ ಒತ್ತಿ ಹೇಳುತ್ತದೆ. ಆದರೆ ಅವರದ್ದೇ ಸರ್ಕಾರದ ಸಂಸದ ಇದೀಗ ಕೊರೊನಾ ನಿಯಮ ಉಲ್ಲಂಘಿಸಿ ಅದ್ಧೂರಿ ರ‍್ಯಾಲಿ ಮಾಡಿದ್ದಾರೆ. ಇದರಿಂದಾಗಿ ಸಾಮಾನ್ಯರಿಗೊಂದು, ಸಂಸದರಿಗೊಂದು ನಿಯಮವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ಆಯ್ಕೆಯಾದ ಬಳಿಕ ದೆಹಲಿಯಿಂದ ವಾಪಸ್ಸಾಗಿದ್ದಾರೆ. ಈ ವೇಳೆ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಅಲ್ಲದೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೇಜಸ್ವಿ ಸೂರ್ಯ ಅವರ ಮೆರವಣಿಗೆ ಮಾಡಿದ್ದಾರೆ. ನೂರಾರು ಜನ ಸೇರಿ ಮೆರವಣಿಗೆ ಮಾಡುವ ಮೂಲಕ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ.

    ಕೊರೊನಾ ಹಿನ್ನೆಲೆ ರಾಜಕೀಯ ರ‍್ಯಾಲಿಗಳನ್ನು ನಡೆಸಬಾರದು ಎಂದು ಕೇಂದ್ರ ಸರ್ಕಾರ ಒತ್ತಿ ಹೇಳಿದೆ. ಅಲ್ಲದೆ 100 ಕ್ಕಿಂತ ಹೆಚ್ಚು ಜನ ಗುಂಪು ಸೇರಬಾರದು ಎಂಬ ನಿಯಮ ಸಹ ಇದೆ. ಆದರೆ ಅವರದ್ದೇ ಸರ್ಕಾರದ ಸಂಸದ ರ‍್ಯಾಲಿಯಲ್ಲಿ ಭಾಗವಹಿಸುವ ಮೂಲಕ ಬೆಂಗಳೂರಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ತೇಜಸ್ವಿ ಸೂರ್ಯ ಬೆಂಗಳೂರಿಗೆ ಬಂದಿದ್ದು, ಅವರ ಸ್ವಾಗತಕ್ಕೆ ನೂರಾರು ಕಾರ್ಯಕರ್ತರಿಂದ ಬೈಕ್ ರ‍್ಯಾಲಿ ಮಾಡಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲ್ಲೇಶ್ವರದ ಬಿಜೆಪಿ ಕಚೇರಿ ವರೆಗೆ ಬೈಕ್ ರ‍್ಯಾಲಿ ಮಾಡಲಾಗಿದೆ.

    ಮೆರವಣಿಗೆ, ಬೈಕ್ ರ‍್ಯಾಲಿ ಮೂಲಕ ತೇಜಸ್ವಿ ಸೂರ್ಯ ಬಿಜೆಪಿ ಕಚೇರಿಗೆ ಆಗಮಿಸಿದ್ದು, ರ‍್ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಈ ಮೂಲಕ ಕೊರೊನಾ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಮಲ್ಲೇಶ್ವರದ ಬಿಜೆಪಿ ಕಚೇರಿ ವರೆಗೆ ರ‍್ಯಾಲಿ ನಡೆಸಿದ್ದು, ಸಾಮಾಜಿಕ ಅಂತರ, ಹಲವರಿಗೆ ಮಾಸ್ಕ್ ಇಲ್ಲದೆ ಬೈಕ್ ರ‍್ಯಾಲಿ ನಡೆಸಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ರ‍್ಯಾಲಿ ಬಳಿಕ ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ತೇಜಸ್ವಿ ಸೂರ್ಯ ಮಾತನಾಡಿದ್ದು, ಈ ವೇಳೆ ಸಹ ನೂರಾರು ಕಾರ್ಯಕರ್ತರು ಜಮಾವಣೆಯಾಗಿದ್ದರು. ಈ ವೇಳೆ ಸಹ ಸಾಮಾಜಿಕ ಅಂತರ ಇಲ್ಲದೆ ಕಾರ್ಯಕರ್ತರು ಒತ್ತೊತ್ತಾಗಿ ನಿಂತಿದ್ದರು. ಪೊಲೀಸರು ಸಹ ಏನೂ ಮಾತನಾಡದೆ ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ಇದೇ ವೇಳೆ ಕಾರ್ಯಕರ್ತರು ತೇಜಸ್ವಿ ಸೂರ್ಯರನ್ನು ಹೆಗಲ ಮೇಲೆ ಹೊತ್ತು ಬಿಜೆಪಿ ಕಚೇರಿ ಒಳಗೆ ಕರೆತಂದರು.

    ಇದರಿಂದಾಗಿ ಬಿಜೆಪಿ ಕಚೇರಿಯಲ್ಲಿ ಗದ್ದಲದ ವಾತಾವರಣ ಉಂಟಾಗಿತ್ತು. ಕಾರ್ಯಕರ್ತರ ನಡುವೆ ಜಿದ್ದಾಜಿದ್ದಿ ಉಂಟಾಗಿ ತೇಜಸ್ವಿ ಸೂರ್ಯ ಜೊತೆ ಕಚೇರಿ ಪ್ರವೇಶಿಸಲು ಪೈಪೋಟಿ ನಡೆದಿತ್ತು. ನಂತರ ತೇಜಸ್ವಿ ಸೂರ್ಯ ಬಿಜೆಪಿ ಕಚೇರಿಯೊಳಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿದರು.

  • ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಆಯ್ಕೆ

    ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಆಯ್ಕೆ

    – ಪ್ರಧಾನ ಕಾರ್ಯದರ್ಶಿಯಾಗಿ ಸಿ.ಟಿ.ರವಿ ನೇಮಕ
    – ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದ ಜೆಪಿ ನಡ್ಡಾ

    ನವದೆಹಲಿ: ಬಿಜೆಪಿ ಹೈ ಕಮಾಂಡ್‍ನಿಂದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಚಿವ ಸಿ.ಟಿ.ರವಿ ಅವರನ್ನು ನೇಮಿಸಲಾಗಿದೆ.

    ಜೆ.ಪಿ.ನಡ್ಡಾ ಅವರು ತಂಡದಲ್ಲಿ ರಾಜ್ಯದ ನಾಲ್ವರು ಬಿಜೆಪಿ ನಾಯಕರಿಗೆ ಸ್ಥಾನ ಲಭಿಸಿದ್ದು, ತೇಜಸ್ವಿ ಸೂರ್ಯ ಹಾಗೂ ಸಿ.ಟಿ.ರವಿ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಸ್ಥಾನಮಾನ ನೀಡಿದ್ದಾರೆ. ಈ ಮೊದಲೇ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿ.ಎಲ್.ಸಂತೋಷ್ ಅವರನ್ನು ಸಹ ಅದೇ ಸ್ಥಾನದಲ್ಲಿ ಮುಂದುವರಿಸಿದ್ದಾರೆ. ಸಚಿವ ಸಿ.ಟಿ.ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಾಗಿದ್ದರೆ, ಯುವ ಮೊರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ನೇಮಕವಾಗಿದ್ದಾರೆ.

    ರಾಷ್ಟ್ರೀಯ ಮಟ್ಟದಲ್ಲಿ ಪದಾಧಿಕಾರಿಗಳನ್ನು ಬದಲಾಯಿಸುವ ಮೂಲಕ ಪಕ್ಷದ ಸಂಘಟನೆಗೆ ಬಲ ನೀಡಿದ್ದಾರೆ. ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ,ನಡ್ಡಾ ಅವರಿಂದ ಘೋಷಣೆ ಹೊರ ಬಿದ್ದಿದೆ. ಈ ಮೂಲಕ ರಾಜ್ಯದ ಯುವ ನಾಯಕರು ಹೈಕಮಾಂಡ್ ಮಟ್ಟದಲ್ಲಿ ಪ್ರಮುಖ ಸ್ಥಾನ ಪಡೆದಂತಾಗಿದೆ. ಹೈ ಕಮಾಂಡ್ ಹೆಸರು ಘೋಷಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಸಂತಸ ಮನೆ ಮಾಡಿದೆ. ಹಲವು ನಾಯಕರು ಶುಭ ಕೋರುತ್ತಿದ್ದಾರೆ.

  • ಸಂಸದ ತೇಜಸ್ವಿ ಸೂರ್ಯಗೆ ಪೊಲೀಸರ ವಿಶೇಷ ಭದ್ರತೆ

    ಸಂಸದ ತೇಜಸ್ವಿ ಸೂರ್ಯಗೆ ಪೊಲೀಸರ ವಿಶೇಷ ಭದ್ರತೆ

    ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸ್ಕೆಚ್ ಹಾಕಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಸಂಸದ ತೇಜಸ್ವಿ ಸೂರ್ಯ ಮನೆಗೆ ವಿಶೇಷ ಪೊಲೀಸ್ ಭದ್ರತೆ ನೀಡಲಾಗಿದೆ.

    ಮೇಲಾಧಿಕಾರಿಗಳ ಸೂಚನೆ ಮೇರೆಗೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತೇಜಸ್ವಿ ಮನೆಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಹೊಯ್ಸಳ ಪೊಲೀಸರು, ಸ್ಥಳೀಯ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿದ್ದು, ಇನ್ನೂ ಕೆಲ ಪೊಲೀಸರು ಮಫ್ತಿಯಲ್ಲಿ ಕಾರ್ಯನಿರ್ವಹಣೆ ಮಾಡ್ತಿದ್ದಾರೆ. ಇದನ್ನೂ ಓದಿ:  ಸಂಘಟನೆಗೂ ಕೊಲೆ ಸ್ಕೆಚ್ ಆರೋಪಿಗಳಿಗೂ ಸಂಬಂಧವಿಲ್ಲ- ಕಮಿಷನರ್ ವಿರುದ್ಧ ಕಾನೂನು ಹೋರಾಟ: ಎಸ್‍ಡಿಪಿಐ ಅಧ್ಯಕ್ಷ

    ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ಅನುಮಾನಾಸ್ಪದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆಯಲಿದ್ದು, ತೇಜಸ್ವಿ ಮನೆ ಅವರ ಓಡಾಟದ ಬಗ್ಗೆ ಮಾಹಿತಿ ಪಡೆದು ಭದ್ರತೆಗೆ ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದಾರೆ.  ಇದನ್ನೂ ಓದಿ: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ

    ಸಿಎಎ, ಎನ್‍ಆರ್ ಸಿ ಪರ ನಗರದ ಟೌನ್ ಹಾಲ್ ಬಳಿ ಸಂಸದ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ವಿವಿಧ ಮುಖಂಡರು ಘೋಷಣೆ ಕೂಗಿದ್ದರು. ಈ ವೇಳೆ ಆರು ಜನ ದುಷ್ಕರ್ಮಿಗಳ ತಂಡ ಕಲ್ಲು ಎಸೆದು ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದರು ಎನ್ನುವುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಈಗಾಗಲೇ ಸೂಲಿಬೆಲೆ ಮನೆಗೆ ವಿಶೇಷ ಪೊಲೀಸ್ ಭದ್ರತೆ ನೀಡಲಾಗಿದೆ. ಇನ್ನೂ ನಗರದ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

  • ಹಿಂದೂ ಮುಖಂಡರ ಹತ್ಯೆಗೆ ಯತ್ನ ಕೇಸ್: ಹಂತಕರಿಗಿತ್ತು ಪ್ರತಿ ತಿಂಗಳು 10 ಸಾವಿರ ವೇತನ

    ಹಿಂದೂ ಮುಖಂಡರ ಹತ್ಯೆಗೆ ಯತ್ನ ಕೇಸ್: ಹಂತಕರಿಗಿತ್ತು ಪ್ರತಿ ತಿಂಗಳು 10 ಸಾವಿರ ವೇತನ

    ಬೆಂಗಳೂರು: ಹಿಂದೂ ಮುಖಂಡರ ಹತ್ಯೆ ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಹಂತಕರು ದಿನಕ್ಕೊಂದು ಸ್ಫೋಟಕ ಮಾಹಿತಿಯನ್ನು ಹೊರಹಾಕುತ್ತಿದ್ದಾರೆ. ಮುಸ್ಲಿಂ ವಿರೋಧಿ ಕೆಲಸ ಮಾಡುವವರ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ತರಬೇತಿ ಕೊಡಲಾಗುತ್ತಿತ್ತು. ಅಷ್ಟೇ ಅಲ್ಲದೇ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 10 ಸಾವಿರ  ವೇತನ ಕೊಡುತ್ತಿದ್ದರಂತೆ.

    ಕಳೆದ ಒಂದೆರಡು ತಿಂಗಳಿಂದ ಈ ಹಣ ಸಂದಾಯ ಆಗುತ್ತಿರಲಿಲ್ಲವಂತೆ. ಬರೋಬ್ಬರಿ ಕಳೆದ ಒಂದೂವರೆ ವರ್ಷದಿಂದ ಹಣ ಸಂದಾಯ ಆಗುತ್ತಿತ್ತು ಎನ್ನುವ ಮಾಹಿತಿಯನ್ನು ಆರೋಪಿಗಳು ಹೊರಹಾಕಿದ್ದಾರೆ. ಆದರೆ ಯಾರು, ಯಾವಾಗ ಎಲ್ಲಿ ಹಣ ಕೊಡುತ್ತಿದ್ದರು ಎನ್ನುವುದು ಮಾತ್ರ ಸ್ಪಷ್ಟವಾಗಿ ಹೇಳಿಲ್ಲ. ಬಂಧಿತರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನೂ ಓದಿ: ಸಿಎಎ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಟಾರ್ಗೆಟ್ – ಸೂಲಿಬೆಲೆ, ತೇಜಸ್ವಿ ಕೊಲೆಗೆ ಸ್ಕೆಚ್

    ಈ ಹಂತಕರ ಉದ್ದೇಶ ಕೇವಲ ಸಿಎಎ ಪರ ಜನಜಾಗೃತಿ ಮಾಡಿದವರ ಹತ್ಯೆ ಮಾಡುವುದು ಅಷ್ಟೇ ಆಗಿರಲಿಲ್ಲ. ಮುಸ್ಲಿಂ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಹತ್ಯೆ ಮಾಡುವುದು ಉದ್ದೇಶವನ್ನು ಹೊಂದಿದ್ದರು. ಅದು ಕೂಡ ಇವರ ಮೇಲಿದ್ದ ಮಾಸ್ಟರ್ ಮೈಂಡ್ ಯಾವ ಟಾರ್ಗೆಟ್ ನೀಡುತ್ತಾನೋ ಅದನ್ನು ಮಾಡಿ ಮುಗಿಸುವುದಷ್ಟೇ ಇವರ ಕೆಲಸ ಆಗಿತ್ತು ಎಂಬ ಮೂಲಗಳಿಂದ ಮಾಹಿತಿ ಲಭಿಸಿದೆ.

  • ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ದೇಶಭಕ್ತ, ಯುಗಪುರುಷರಲ್ಲ- ಹೆಚ್‍ಡಿಕೆ

    ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ದೇಶಭಕ್ತ, ಯುಗಪುರುಷರಲ್ಲ- ಹೆಚ್‍ಡಿಕೆ

    ಬೆಂಗಳೂರು: ಹಿಂದೂ ನಾಯಕರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಹಿಂದೂ ನಾಯಕರ ಕೊಲೆಗೆ ಸಂಚು ರೂಪಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಿಡಿಗೇಡಿಗಳ ಕೃತ್ಯಕ್ಕೆ ಧರ್ಮದ ಲೇಪನ ಬೇಡ. ಉದ್ದೇಶ ಪೂರ್ವಕವಾಗಿ ಒಂದು ಧರ್ಮವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಅಂತ ಹೇಳಿದ್ದಾರೆ.

    ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಮಹಾನ್ ದೇಶಭಕ್ತರೇನೂ ಅಲ್ಲ. ಯುಗಪುರುಷರು ಕೂಡ ಅಲ್ಲ. ಹೀಗಿದ್ದರೂ ಅವರನ್ನು ಹುತಾತ್ಮ ಮಾಡಲು ಹೋರಟಿದ್ದೀರಾ ಅಂತ ಪ್ರಶ್ನೆ ಮಾಡಿದರು. ಸಂಸದ ತೇಜಸ್ವಿ ಸೂರ್ಯ ಬಗ್ಗೆ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ತೇಜಸ್ವಿ ಸೂರ್ಯ ಕೊಡುಗೆ ಬೆಂಗಳೂರಿಗೆ ಏನು?, ಏನ್ ಸಾಧನೆ ಮಾಡಿದ್ದಾರೆ ಅಂತ ಇವರನ್ನು ಕೊಲ್ಲೋಕೆ ಹೋಗುತ್ತಾರೆ ಎಂದು ಉಡಾಫೆಯಾಗಿ ಮಾತನಾಡಿದರು.

    ಯಾರೋ ತಪ್ಪು ಮಾಡಿದ್ರು ಅಂತ ಒಂದು ಸಮುದಾಯದ ಮೇಲೆ ತಪ್ಪು ಹೊರಿಸಬೇಡಿ. ಉದ್ದೇಶಪೂರ್ವಕವಾಗಿ ಒಂದು ಸಮುದಾಯ ಟಾರ್ಗೆಟ್ ಮಾಡಬೇಡಿ. ತನಿಖೆ ಮಾಡಿ ಸತ್ಯ ಇದ್ದರೆ ಯಾವುದೇ ಸಂಘಟನೆ ಕ್ರಮ ತೆಗೆದುಕೊಳ್ಳಿ ಎಂದು ಇದೇ ವೇಳೆ ಕುಮಾರಸ್ವಾಮಿ ಒತ್ತಾಯಿಸಿದರು. ಇದನ್ನೂ ಓದಿ: ಸಮಾಜದ್ರೋಹಿ ಶಕ್ತಿಗಳನ್ನು ಯಾರೂ ಬೆಂಬಲಿಸಲ್ಲ: ಯು.ಟಿ.ಖಾದರ್

    ಏನಿದು ಪ್ರಕರಣ?:
    ದೇಶಾದ್ಯಂತ ಪೌರತ್ವ ಕಾಯ್ದೆ ಜಾರಿ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಡಿಸೆಂಬರ್ 22ರಂದು ನಗರದ ಟೌನ್ ಹಾಲ್ ನಲ್ಲಿ ಸಿಎಎ ಪರ ಜನಜಾಗೃತಿ ಹೊರಟಿದ್ದ ವರುಣ್ ಮೇಲೆ ಎಸ್‍ಡಿಪಿಐ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಿಂಬದಿಯಿಂದ ಎರಡು ಬೈಕ್ ನಲ್ಲಿ ಬಂದಿದ್ದ ಆರೋಪಿಗಳು ರಾಡ್ ಹಾಗೂ ಲಾಂಗ್ ಗಳಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಆರು ಜನ ಆರೋಪಿಗಳನ್ನ ಬಂಧಿಸಿದ್ದರು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಸ್ಫೋಟಕ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ:  ಸಂಘಟನೆಗೂ ಕೊಲೆ ಸ್ಕೆಚ್ ಆರೋಪಿಗಳಿಗೂ ಸಂಬಂಧವಿಲ್ಲ- ಕಮಿಷನರ್ ವಿರುದ್ಧ ಕಾನೂನು ಹೋರಾಟ: ಎಸ್‍ಡಿಪಿಐ ಅಧ್ಯಕ್ಷ

    ಬಂಧಿತ ಎಸ್‍ಡಿ ಪಿಐ ಕಾರ್ಯಕರ್ತರಾದ ಇರ್ಫಾನ್, ಸೈಯದ್ ಅಕ್ಬರ್, ಸೈಯದ್ ಸಿದ್ಧಿಕ್, ಅಕ್ಬರ್ ಪಾಷಾ, ಸನಾ ಹಾಗೂ ಸಾಧಿಕ್ ಉಲ್ ಅಮೀನ್ ವಿಚಾರಣೆ ನಡೆಸಿದಾಗ, ವರುಣ್ ಮೇಲೆ ಹಲ್ಲೆಗೆ ವೈಯಕ್ತಿಕ ಕಾರಣವೇ ಇಲ್ಲ. ಆರೋಪಿಗಳಿಗೂ ವರುಣ್ ಗೂ ಸಂಬಂಧವೇ ಇಲ್ಲ. ಸಿಎಎ ಪರವಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಆತನ ಹತ್ಯೆಗೆ ಮುಂದಾಗಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಅಲ್ಲದೆ ಜನಜಾಗೃತಿ ರ್ಯಾಲಿ ವೇಳೆ ಕಲ್ಲು ಕೂಡ ತೂರಲಾಗಿತ್ತು. ಕಲ್ಲುಗಳನ್ನು ತೂರಿ ಗುಂಪು ಚದುರಿಸುವ ಪ್ಲಾನ್ ಮಾಡಲಾಗಿತ್ತು. ಜನ ಚದುರುತ್ತಿದ್ದಂತೆ ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆಗೆ ಆಲೋಚಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಇದನ್ನೂ ಓದಿ: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ

  • ಸಿಎಎ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಟಾರ್ಗೆಟ್ – ಸೂಲಿಬೆಲೆ, ತೇಜಸ್ವಿ ಕೊಲೆಗೆ ಸ್ಕೆಚ್

    ಸಿಎಎ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಟಾರ್ಗೆಟ್ – ಸೂಲಿಬೆಲೆ, ತೇಜಸ್ವಿ ಕೊಲೆಗೆ ಸ್ಕೆಚ್

    – ಸಿಸಿಬಿಯಿಂದ ಆರು ಮಂದಿ ಅರೆಸ್ಟ್

    ಬೆಂಗಳೂರು: ಮಂಗಳೂರು ಮಾದರಿಯಲ್ಲೇ ಬೆಂಗಳೂರಲ್ಲೂ ಪೌರತ್ವ ಕಾಯ್ದೆ ಜನಜಾಗೃತಿ ವೇಳೆ ಹಿಂದೂ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಸಂಸದ ತೇಜಸ್ವಿ ಸೂರ್ಯ, ಸೂಲಿಬೆಲೆ ಮುಗಿಸಲು ಡಿ. 22ರಂದು ಟೌನ್‍ಹಾಲ್ ಬಳಿ ಪ್ಲಾನ್ ನಡೆದಿತ್ತು. ಈ ಮೂಲಕ ಎಸ್‍ಡಿಪಿಐ ಜನಸಂದಣಿ ಮಧ್ಯೆಯೇ ರಕ್ತಪಾತಕ್ಕೆ ಮುಹೂರ್ತ ಫಿಕ್ಸ್ ಮಾಡಿತ್ತು ಎಂಬ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.

    ಬಹಿರಂಗವಾಗಿದ್ದು ಹೇಗೆ?
    ದೇಶಾದ್ಯಂತ ಪೌರತ್ವ ಕಾಯ್ದೆ ಜಾರಿ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಸಿಎಎ ಪರ ಜನಜಾಗೃತಿ ಹೊರಟಿದ್ದ ವರುಣ್ ಮೇಲೆ ಎಸ್‍ಡಿಪಿಐ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಿಂಬದಿಯಿಂದ ಎರಡು ಬೈಕ್ ನಲ್ಲಿ ಬಂದಿದ್ದ ಆರೋಪಿಗಳು ರಾಡ್ ಹಾಗೂ ಲಾಂಗ್ ಗಳಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಆರು ಜನ ಆರೋಪಿಗಳನ್ನ ಬಂಧಿಸಿದ್ದರು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಸ್ಫೋಟಕ ಸತ್ಯ ಬೆಳಕಿಗೆ ಬಂದಿದೆ.

    ಇರ್ಫಾನ್, ಸೈಯದ್ ಅಕ್ಬರ್, ಸೈಯದ್ ಸಿದ್ಧಿಕ್, ಅಕ್ಬರ್ ಪಾಷಾ, ಸನಾ ಹಾಗೂ ಸಾಧಿಕ್ ಉಲ್ ಅಮೀನ್ ಬಂಧಿತ ಎಸ್‍ಡಿ ಪಿಐ ಕಾರ್ಯಕರ್ತರು. ಆರೋಪಿಗಳ ವಿಚಾರಣೆಯ ವೇಳೆ ವರುಣ್ ಮೇಲೆ ಹಲ್ಲೆಗೆ ವೈಯಕ್ತಿಕ ಕಾರಣವೇ ಇಲ್ಲ. ಆರೋಪಿಗಳಿಗೂ ವರುಣ್ ಗೂ ಸಂಬಂಧವೇ ಇಲ್ಲ. ಸಿಎಎ ಪರವಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಆತನ ಹತ್ಯೆಗೆ ಮುಂದಾಗಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.

    ಜನಜಾಗೃತಿ ರ‍್ಯಾಲಿ ವೇಳೆ ಕಲ್ಲು ಕೂಡ ತೂರಲಾಗಿತ್ತು. ಕಲ್ಲುಗಳನ್ನು ತೂರಿ ಗುಂಪು ಚದುರಿಸುವ ಪ್ಲಾನ್ ಮಾಡಲಾಗಿತ್ತು. ಜನ ಚದುರುತ್ತಿದ್ದಂತೆ ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆಗೆ ಆಲೋಚಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

    ಸಿಎಎ ಪರ ಸಭೆ ನಡೆದ ಸ್ಥಳದಲ್ಲಿ ಆರೋಪಿಗಳು ಏಳೆಂಟು ಕಲ್ಲುಗಳನ್ನು ಎಸೆದಿದ್ದರು. ಕಲ್ಲು ಬಿದ್ದಾಗ ಜನ ಚದುರುತ್ತಾರೆ ಆಗ ಒಬ್ಬಂಟಿಯಾಗುವ ಮುಖಂಡನನ್ನ ಕೊಲೆ ಮಾಡುವ ಪ್ಲಾನ್ ಮಾಡಿದ್ದರು. ಆರೋಪಿಗಳು ಎಸೆದ ಕಲ್ಲು ಬೇರೆ ಬೇರೆ ಕಡೆ ಬಿದ್ದಿದ್ದವು. ನಂತರ ಕೇಸರಿ ಬಟ್ಟೆ ಧರಿಸಿದ್ದ ಆರೋಪಿಗಳು ವರುಣ್ ನನ್ನು ಹಿಂಬಾಲಿಸಿದ್ದರು. ತಮ್ಮ ಇರುವಿಕೆ ಮರೆಮಾಚಲು ಮೊಬೈಲ್ ಆನ್ ಮಾಡಿ ಆರೋಪಿಗಳು ಮನೆಯಲ್ಲಿಯೇ ಬಿಟ್ಟು ಬಂದಿದ್ದರು. ಮುಖ ಚಹರೆ ಮರೆ ಮಾಚಲು ಹೆಲ್ಮೆಟ್ ಧರಿಸಿದ್ದರು. ಕೃತ್ಯಕ್ಕೆ ಬಳಸಿದ್ದ ವಾಹನಗಳ ನಂಬರ್ ಗಳನ್ನ ಕಪ್ಪು ಮಸಿ ಹಚ್ಚಿದ್ದರು. ಕೃತ್ಯದ ಸಮಯದಲ್ಲಿ ಎರಡರಿಂದ ಮೂರು ಟಿ ಶರ್ಟ್ ಧರಿಸಿದ್ದರು. ಕೃತ್ಯದ ನಂತರ ಎರಡು ಟಿ ಶರ್ಟ್ ಬಿಚ್ಚಿಹಾಕಿ ರಸ್ತೆ ಮಧ್ಯೆ ಪೆಟ್ರೋಲ್ ಹಾಕಿ ಸುಟ್ಟಿದ್ದರು. ಮಚ್ಚುಗಳನ್ನ ನೈಸ್ ರಸ್ತೆಯ ಅಂಚೆಪಾಳ್ಯ ಕೆರೆಗೆ ಬಿಸಾಕಿದ್ದರು. ಹೆಲ್ಮೆಟ್ ಗಳನ್ನ ರಾಮಮೂರ್ತಿನಗರದ ಹೊಂಡಕ್ಕೆ ಬಿಸಾಕಿದ್ದರು.

    ಆರೋಪಿಗಳು ಎಸ್‍ಡಿಪಿಐ ನಿಂದ ತಿಂಗಳಿಗೆ ಹತ್ತು ಸಾವಿರ ಹಣ ಪಡೆಯುತ್ತಿದ್ದರು. ಅಲ್ಲದೆ ಸಮಾಜದಲ್ಲಿ ಸ್ವಾಸ್ಥ್ಯ ಹಾಳುಮಾಡುವಂತೆ ಸೂಚನೆ ಪಡೆದಿದ್ದರು ಎನ್ನುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

  • ಸಂಸದ ತೇಜಸ್ವಿ ಸೂರ್ಯ ಮಸ್ತ್ ಡಾನ್ಸ್!

    ಸಂಸದ ತೇಜಸ್ವಿ ಸೂರ್ಯ ಮಸ್ತ್ ಡಾನ್ಸ್!

    ಬೆಂಗಳೂರು: ಜನವರಿ 12 ಇಂದು ರಾಷ್ಟ್ರೀಯ ಯುವ ದಿನ. ಈ ದಿನದ ಅಂಗವಾಗಿ ಜಯನಗರದ ನಾಲ್ಕನೇ ಬಡಾವಣೆಯ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಆರ್ಯ ವೈಶ್ಯ ಸಮುದಾಯದವರು ಆಯೋಜಿಸಿದ್ದ ವಾಕಥಾನ್‍ನಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು.

    ಈ ವೇಳೆ ಸಂಸದ ತೇಜಸ್ವಿ ಸೂರ್ಯ ಡ್ಯಾನ್ಸ್ ಮಾಡಿದ್ದಾರೆ. ಬಿ ಶಿಪ್‍ನ ಮೂರನೇ ವರ್ಷದ ವಾಕಥಾನ್ ಸಾವಿರಾರು ಮಂದಿ ಪಾಲ್ಗೊಂಡಿದ್ದರು. 2018ರಲ್ಲಿ ಮೊದಲ ಬಾರಿಗೆ ಆರಂಭಿಸಿದ ಈ ವಾಕಥಾನ್‍ನಲ್ಲಿ 1500 ಮಂದಿ ಹೆಸರು ನೋಂದಾಯಿಸಿಕೊಂಡು ಭಾಗವಹಿಸಿದ್ದರು. ಅಂತೆಯೇ 2019ರಲ್ಲೂ 3000 ಮಂದಿ ಭಾಗವಹಿಸಿದ್ದರು.

    ಈ ಬಾರಿ 4,000 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ ವಾಕಥಾನ್ ಆಯೋಜನೆ ಮಾಡಿ ಒಂದೊಳ್ಳೆ ಕೆಲಸ ಮಾಡಿದ್ದಾರೆ. ಎಲ್ಲರಿಗೂ ನನ್ನ ಪ್ರೋತ್ಸಾಹ ಇರುತ್ತೆ ಎಂದಿದ್ದಾರೆ.

  • ದೇಶ ದಿವಾಳಿಯಾಗಲು ಮೋದಿ ಕಾರಣ – ಉಗ್ರಪ್ಪ

    ದೇಶ ದಿವಾಳಿಯಾಗಲು ಮೋದಿ ಕಾರಣ – ಉಗ್ರಪ್ಪ

    – ಬಡವರು ಬದುಕಲು ಆಗುತ್ತಿಲ್ಲ
    – ಅಗತ್ಯ ವಸ್ತುಗಳ ಬೆಲೆ ಏರಿಕೆ

    ಬಳ್ಳಾರಿ: ದೇಶದ ಆರ್ಥಿಕ ಪರಿಸ್ಥಿತಿ ಡೋಲಾಯಮಾನದಲ್ಲಿದೆ, ಅಂತರಾಷ್ಟ್ರೀಯ ಮಟ್ಟದ ರೂಪಾಯಿ ಮೌಲ್ಯ ಕುಸಿಯುತ್ತಿದ್ದು ದೇಶ ದಿವಾಳಿಯಾಗಲು ಬಿಜೆಪಿ ಕಾರಣ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಡವರು ಬದಕಲು ಆಗುತ್ತಿಲ್ಲ. ತೈಲ ಬೆಲೆ ಗಗನಕ್ಕೇರುತ್ತಿದೆ. ಪೆಟ್ರೋಲ್ ಬೆಲೆ 100 ರೂ. ಗಡಿದಾಟುವ ಪರಿಸ್ಥಿತಿ ಬಂದಿದ್ದು, ಜನಸಾಮಾನ್ಯರು 10 ಗ್ರಾಂ ಚಿನ್ನ ಕೊಳ್ಳಲು ಕಷ್ಟವಾಗಿದೆ. ಜನ ಸಾಮಾನ್ಯರ ಬದುಕಿಗೆ ಅಗತ್ಯವಿರುವ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ, ಕೇಂದ್ರ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ರಾಜ್ಯದಲ್ಲಿ ಉಂಟಾದ ಪ್ರವಾಹದ ಹಾನಿ ತುಂಬಲು ಕೇಂದ್ರ ಸರ್ಕಾರ ಅಗತ್ಯ ಹಣ ನೀಡುತ್ತಿಲ್ಲ. ಅನುದಾನ ನೀಡುವಂತೆ ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಕಾಲು ಬೀಳುವುದು ಬಾಕಿ ಉಳಿದಿದೆ ಎಂದು ವ್ಯಂಗ್ಯವಾಡಿದರು.

    ಶಾಸಕ ಸೋಮಶೇಖರ್ ರೆಡ್ಡಿ ವಿವಾದಾತ್ಮಕ ಹೇಳಿಕೆ ಕುರಿತು ಮಾತನಾಡಿದ ಅವರು, ಅಲ್ಪನಿಗೆ ಅಧಿಕಾರ ಸಿಕ್ಕರೆ ಏನಾಗುತ್ತದೆ ಎನ್ನುವುದಕ್ಕೆ ಸೋಮಶೇಖರ್ ರೆಡ್ಡಿ ಮತ್ತು ಸಂಸದ ತೇಜಸ್ವಿ ಸೂರ್ಯ ಉತ್ತಮ ಉದಾಹರಣೆ. ಸೋಮಶೇಖರ್ ರೆಡ್ಡಿ ಅಲ್ಪಸಂಖ್ಯಾತರ ಬಗ್ಗೆ ಹೇಳಿದ್ದು ಅವರ ಮಾತಲ್ಲ, ಬಿಜೆಪಿಯ ಮಾತು. ಬಿಜೆಪಿಯವರ ಉದ್ದೇಶ ಸೋಮಶೇಖರ್ ರೆಡ್ಡಿ ಅವರ ಮಾತಿನಲ್ಲಿ ಎದ್ದು ಕಾಣುತ್ತದೆ ಎಂದು ಆರೋಪಿಸಿದರು.

  • ಸಂಸದ ತೇಜಸ್ವಿ ಎದೆ ಬಗೆದರೆ ಏನೂ ಇಲ್ಲ – ಕವಿತಾ ರೆಡ್ಡಿ

    ಸಂಸದ ತೇಜಸ್ವಿ ಎದೆ ಬಗೆದರೆ ಏನೂ ಇಲ್ಲ – ಕವಿತಾ ರೆಡ್ಡಿ

    ಬೆಂಗಳೂರು: ತೇಜಸ್ವಿ ಸೂರ್ಯ ಎದೆ ಬಗೆದರೆ ಏನೂ ಸಿಗಲ್ಲ, ಆದರೆ ಸಿಎಎ ವಿರೋಧಿಸಿ ಪ್ರತಿಭಟನೆ ಮಾಡುವ ನಮ್ಮ ಎದೆ ಬಗೆದರೆ ತ್ರಿವರ್ಣ ಧ್ವಜ ಕಾಣಿಸುತ್ತೆ. ಹೀಗಂತ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಹೋರಾಟದ ನೇತೃತ್ವ ವಹಿಸಿದ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ವಾಗ್ದಾಳಿ ನಡೆಸಿದರು.

    ಎದೆ ಬಗೆದರೆ ನಾಲ್ಕಕ್ಷರ ಇಲ್ಲದ, ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡೋರು ಸಿಎಎ ವಿರೋಧಿಸಿ ಪ್ರತಿಭಟನೆ ಮಾಡುತ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಕೊಟ್ಟಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇಂದು ಬೆಂಗಳೂರಿನಲ್ಲಿ ಸಿಎಎ ವಿರೋಧಿಸಿ ನಾವು ಭಾರತೀಯರು ಸಂಘಟನೆ ನಡೆಸಿದ ಪ್ರತಿಭಟನೆಯಲ್ಲಿ ಕೂಡ ತೇಜಸ್ವಿ ಸೂರ್ಯ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ತೇಜಸ್ವಿ ಸಣ್ಣ ವಯಸ್ಸಿಗೆ ಸಂಸದರಾದವರು. ಅವರ ಮಾತಿನ ಮೇಲೆ ನಾಲಗೆಯ ಮೇಲೆ ನಿಗಾ ಇಟ್ಟು ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿಎಎ, ಎನ್.ಪಿ.ಆರ್, ಎನ್.ಆರ್.ಸಿ ವಿರೋಧಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹವನ್ನು ನಡೆಸಿ ಪೋಸ್ಟ್ ಕಾರ್ಡ್ ಚಳವಳಿಯನ್ನು ಶುರುಮಾಡಿದರು. ಸುಪ್ರೀಂ ಕೊರ್ಟ್‍ಗೆ ಸಿಎಎ ವಿರೋಧಿಸಿ, ಪೋಸ್ಟ್ ಕಾರ್ಡ್ ನಲ್ಲಿ ಪತ್ರ ಬರೆದು ಕಳಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ, ಬಿಜೆಪಿ ಸರ್ಕಾರ ಇದನ್ನು ಹಿಂಪಡೆಯಬೇಕು, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಬುದ್ದಿ ಹೇಳಲಿ ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.

  • ಪೇಜಾವರಶ್ರೀ ಮಲಗಿರೋದನ್ನು ಕಂಡು ಮರುಕವಾಯ್ತು: ತೇಜಸ್ವಿ ಸೂರ್ಯ

    ಪೇಜಾವರಶ್ರೀ ಮಲಗಿರೋದನ್ನು ಕಂಡು ಮರುಕವಾಯ್ತು: ತೇಜಸ್ವಿ ಸೂರ್ಯ

    ಉಡುಪಿ: ಪೇಜಾವರಶ್ರೀ ಮಲಗಿರುವುದನ್ನು ಕಂಡು ಮರುಕವಾಯ್ತು ಎಂದು ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಕ್ರಿಯಿಸಿದ್ದಾರೆ.

    ಪೇಜಾವರಶ್ರೀಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಪೇಜಾವರ ಶ್ರೀಗಳು ಮಗುವಿನಂತೆ ಓಡಾಡುವುದನ್ನು ಕಂಡ ನನಗೆ ಈಗ ಮಲಗಿದ್ದನ್ನು ಕಂಡು ಬೇಸರವಾಗಿದೆ. ಶ್ರೀಗಳು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಾಮೀಜಿ ಮಲಗಿರೋದನ್ನು ನಾವು ಯಾವತ್ತೂ ನೋಡಿಲ್ಲ. ವಿಶ್ವೇಶತೀರ್ಥರು ಮಗುವಿನಂತೆ ಓಡಾಡುವ ಸ್ವಾಮೀಜಿ. ಮಗುವಿನಂತಹ ಮುಗ್ಧತೆ, ಅದಮ್ಯ ಚೈತನ್ಯದವರು. ಸ್ವಾಮೀಜಿ ಮತ್ತಷ್ಟು ಧರ್ಮದ ಕೆಲಸ ಮಾಡುವಂತಾಗಲಿ. ವೈದ್ಯರ ಜೊತೆ ಮಾತನಾಡಿದ್ದೇನೆ. ಗುಣಮುಖರಾಗುವ ನಂಬಿಕೆಯಿದೆ ಎಂದರು.

    ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಅವರು ಯಾವತ್ತೂ ಹಾಸಿಗೆ ಹಿಡಿದವರಲ್ಲ. ಸ್ವಾಮೀಜಿ ಆದಷ್ಟು ಬೇಗ ಚೇತರಿಸುವಂತಾಗಲಿ. ಶ್ರೀಗಳು ಎಲ್ಲಾ ಧರ್ಮ, ಜಾತಿಗೆ ಬೇಕಾದವರು. ಅವರು ತುಳಿತಕ್ಕೆ ಒಳಗಾದವರ ಪರ ಇರುವ ಸ್ವಾಮೀಜಿ. ಆದಷ್ಟು ಬೇಗ ಮೊದಲಿನಂತೆ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿ. ರಾಮಮಂದಿರ ನಿರ್ಮಾಣ ಕಾಲದಲ್ಲಿ ಅವರು ಇರಬೇಕು. ಪೇಜಾವರಶ್ರೀ ರಾಮಮಂದಿರ ನೋಡುವಂತಾಗಲಿ ಎಂದರು.

    ಕೆಎಂಸಿ ಆಸ್ಪತ್ರೆಗೆ ಉಡುಪಿಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಭೇಟಿ ಮಾಡಿದರು. ಪೇಜಾವರಶ್ರೀಗಳ ಆರೋಗ್ಯ ಯಥಾಸ್ಥಿತಿ ಇದೆ. ಉಸಿರಾಟ ನಡೆಯುತ್ತಿರುವುದನ್ನು ನಾನು ನೋಡಿದೆ. ಎಂಆರ್‍ಐ ರಿಪೋರ್ಟ್ ಗೆ ಎಲ್ಲರೂ ಕಾಯುತ್ತಿದ್ದಾರೆ. ಶ್ರೀಗಳ ಪ್ರಜ್ಞಾವಸ್ಥೆಯಲ್ಲಿ ಚೇತರಿಕೆ ಕಾಣಬೇಕಿದೆ. ಭಗವಂತನ ಅನುಗ್ರಹದಲ್ಲಿ ಚೇತರಿಕೆಯಾಗುವ ನಿರೀಕ್ಷೆಯಿದೆ. ದೇಶಾದ್ಯಂತ ಪೇಜಾವರಶ್ರೀ ಆರೋಗ್ಯ ವೃದ್ಧಿಗೆ ಪೂಜೆಗಳಾಗುತ್ತಿದೆ. ನಮ್ಮ ಮಠದಲ್ಲಿ ಕೂಡಾ ಪೂಜೆ ಪುನಸ್ಕಾರ ನಡೆಯುತ್ತಿದೆ ಎಂದರು.