Tag: Tejasvi Surya

  • ಸಚಿವರು, ಶಾಸಕರು, ಸಂಸದರೆಲ್ಲರೂ ಯಾವ ಧರ್ಮದವರು? – ತೇಜಸ್ವಿ ಸೂರ್ಯ ವಿರುದ್ಧ ಸಿದ್ದರಾಮಯ್ಯ ಕಿಡಿ

    ಸಚಿವರು, ಶಾಸಕರು, ಸಂಸದರೆಲ್ಲರೂ ಯಾವ ಧರ್ಮದವರು? – ತೇಜಸ್ವಿ ಸೂರ್ಯ ವಿರುದ್ಧ ಸಿದ್ದರಾಮಯ್ಯ ಕಿಡಿ

    – ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‍ಗೆ ಚಿಕಿತ್ಸೆ ಪಡ್ಕೊಳ್ಳಿ
    – ಪಿಎಂ ಕೇರ್ಸ್ ನಿಧಿಗೆ ರಾಜ್ಯದಿಂದ ಎಷ್ಟು ಹಣ ಸಂದಾಯವಾಗಿದೆ?

    ಬೆಂಗಳೂರು: ತಿನ್ನುವ ಅನ್ನದಿಂದ ಹಿಡಿದು ಮನುಷ್ಯನ ಪ್ರಾಣದ ವರೆಗೆ ಎಲ್ಲದರಲ್ಲಿಯೂ ಜಾತಿ-ಧರ್ಮವನ್ನು ಎಳೆದು ತರುವ ನಿಮ್ಮ ಕೊಳಕು ಬುದ್ದಿಯನ್ನು ಕೊರೊನಾ ರೋಗಕ್ಕೂ ಯಾಕೆ ಎಳೆದುತರ್ತೀರಿ ತೇಜಸ್ವಿ ಸೂರ್ಯ? ಕೊರೊನಾ ವೈರಸ್ ಗಿಂತಲೂ ಅಪಾಯಕಾರಿ ನಿಮ್ಮ ಮೆದುಳಲ್ಲಿರುವ ಕೋಮು ವೈರಸ್, ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತೇಜಸ್ವಿ ಸೂರ್ಯ ವಿರುದ್ಧ ಕಿಡಿ ಕಾರಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿಸೂರ್ಯ, ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಅವರನ್ನು ಉದ್ದೇಶಿಸಿ ಪೋಸ್ಟ್ ಮಾಡಿ ಹಲವು ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಪ್ರಶ್ನೆ ಕೇಳಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ತೇಜಸ್ವಿಸೂರ್ಯ, ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಅವರೇ,
    ಕೋವಿಡ್ ನಿರ್ವಹಣೆಯ ಗುಪ್ತ ಕಾರ್ಯಾಚರಣೆ ನಡೆಸಬೇಕಾಗಿರುವುದು ಬಿಬಿಎಂಪಿಯಲ್ಲಿರುವ ಅಧಿಕಾರಿಗಳ ವಿರುದ್ಧ ಅಲ್ಲ, ವಿಧಾನಸೌಧದಲ್ಲಿ ಕೂತಿರುವ ಮುಖ್ಯಮಂತ್ರಿಗಳು, ಸಚಿವರು ಮತ್ತು ಬಿಜೆಪಿ ಶಾಸಕರು ಮತ್ತು ಸಂಸದರ ವಿರುದ್ಧ. ಸಣ್ಣಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಲಗಳ ರಕ್ಷಣೆಗಾ?

    ಕೋವಿಡ್ ಪ್ರಾರಂಭದ ದಿನಗಳಲ್ಲಿಯೇ ನಾನು ಪತ್ರಿಕಾಗೋಷ್ಠಿ ನಡೆಸಿ ಕೋವಿಡ್ ನಿರ್ವಹಣೆಯಲ್ಲಿನ ಭ್ರಷ್ಟಾಚಾರವನ್ನು ದಾಖಲೆಸಹಿತ ಬಹಿರಂಗಗೊಳಿಸಿದ್ದೆ. ಅದರ ಜೊತೆ ಈಗ ನೀವು ಹೇಳುತ್ತಿರುವುದನ್ನೂ ಸೇರಿಸಿ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ.

    ಬೆಡ್ ಬ್ಲಾಕಿಂಗ್ ನಿಮ್ಮ ಗಮನಕ್ಕೆ ಬಂದು ಹತ್ತು ದಿನ ಆಯ್ತು ಅಂತೀರಿ. ಇಷ್ಟು ದಿನ ಅಧಿಕಾರಿಗಳ ಮನವೊಲಿಸುತ್ತಿದ್ದೀರಾ? ಬೇರೇನಾದರೂ ವ್ಯವಹಾರದ ಮಾತುಕತೆ ನಡೆದಿತ್ತಾ? ನಿಮ್ಮ ನಿಗೂಢ ಮೌನವನ್ನು ಹೇಗೆ ಅರ್ಥೈಸುವುದು?ತಿನ್ನುವ ಅನ್ನದಿಂದ ಹಿಡಿದು ಮನುಷ್ಯನ ಪ್ರಾಣದ ವರೆಗೆ ಎಲ್ಲದರಲ್ಲಿಯೂ ಜಾತಿ-ಧರ್ಮವನ್ನು ಎಳೆದು ತರುವ ನಿಮ್ಮ ಕೊಳಕು ಬುದ್ದಿಯನ್ನು ಕೊರೊನಾ ರೋಗಕ್ಕೂ ಯಾಕೆ ಎಳೆದುತರ್ತೀರಿ ತೇಜಸ್ವಿ ಸೂರ್ಯ? ಕೊರೊನಾ ವೈರಸ್ ಗಿಂತಲೂ ಅಪಾಯಕಾರಿ ನಿಮ್ಮ ಮೆದುಳಲ್ಲಿರುವ ಕೋಮು ವೈರಸ್, ಅದಕ್ಕೆ ಚಿಕಿತ್ಸೆ ಪಡ್ಕೊಳ್ಳಿ.

    ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಷಾಮೀಲಾಗಿರುವವರು ಒಂದೇ ಕೋಮಿನವರು ಎನ್ನುವ ರೀತಿಯಲ್ಲಿ ಆರೋಪಿಗಳ ಪಟ್ಟಿ ಓದಿದ ತೇಜಸ್ವಿ ಸೂರ್ಯ ಅವರೇ, ಮುಖ್ಯ ಆರೋಪಿಗಳಾದ ಮುಖ್ಯಮಂತ್ರಿಗಳಿಂದ ಹಿಡಿದು ಸಚಿವರು, ಶಾಸಕರು, ಸಂಸದರೆಲ್ಲರೂ ಯಾವ ಧರ್ಮದವರು? ಅದನ್ನೂ ಓದಿ ಹೇಳಿಬಿಡಿ. ‘ಯಥಾ ರಾಜಾ ತಥಾ ಮಂತ್ರಿ’. ‘ಮೈ ಬೀ ಕಾವೂಂಗಾ, ತುಮ್ ಬಿ ಕಾವೋ’ ಎನ್ನುವುದೇ ನಿಮ್ಮ ನರೇಂದ್ರ ಮೋದಿಯವರ ನಿಜವಾದ ಘೋಷಣೆ. ಅದನ್ನೇ ನೀವೆಲ್ಲ ಮಾಡ್ತಿದ್ದೀರಿ. ಪಾಲು ಹಂಚಿಕೆಯಲ್ಲಿ ಜಗಳವಾದಾಗ ಇಂತಹ ಕಿಡಿಗಳು ಸಿಡಿಯುತ್ತವೆ ಅಷ್ಟೇ.

    ಮುಖ್ಯಮಂತ್ರಿಗಳಿಂದ ಕರ್ತವ್ಯಲೋಪ-ಭ್ರಷ್ಟತೆ ನಡೆದಿದ್ದರೆ ಅವರ ವಿರುದ್ಧ ನೇರ ಆರೋಪಪಟ್ಟಿ ಸಲ್ಲಿಸಿ ಅವರನ್ನು ಕಿತ್ತು ಹಾಕಿ. ಇದಕ್ಕಾಗಿ ಸರ್ಕಾರಿ ಅಧಿಕಾರಿ-ಸಿಬ್ಬಂದಿಗಳನ್ನು ಯಾಕೆ ಬಳಸಿಕೊಳ್ತೀರಿ? ನಿಮ್ಮ ಆಂತರಿಕ ಕಿತ್ತಾಟಕ್ಕೆ ಕೊರೊನಾವನ್ನು ಯಾಕೆ ಬಳಸಿಕೊಳ್ತೀರಿ? ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನುವುದು ಜಗಜ್ಜಾಹೀರಾಗಿದೆ. ನಿಮ್ಮ ಕೇಂದ್ರ ಸರ್ಕಾರ ಏನು ಕಡಿದುಕಟ್ಟೆ ಹಾಕಿದೆ ಅದನ್ನೂ ರಾಜ್ಯದ ಜನತೆಗೆ ತಿಳಿಸಿ.

    ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಯ ಭಾಗ್ಯದ ಬಾಗಿಲು ತೆರೆಯುತ್ತೆ ಎಂದು ಮತದಾರರ ದಿಕ್ಕುತಪ್ಪಿಸಿ ಅಧಿಕಾರಕ್ಕೆ ಬಂದಿದ್ದೀರಿ, ಈಗ ರಾಜ್ಯದಲ್ಲಿ ದೌರ್ಭಾಗ್ಯದ ಬಾಗಿಲು ತೆರೆದಿದೆ, ಸ್ಮಶಾನದಲ್ಲಿ ಹೆಣಗಳ ಸಾಲು ಬೆಳೆಯುತ್ತಿದೆ. ಇದೇನಾ ನರೇಂದ್ರ ಮೋದಿಯವರ ಅಚ್ಚೇ ದಿನ್?

    ಪಿಎಂ ಕೇರ್ಸ್ ನಿಧಿಗೆ ರಾಜ್ಯದಿಂದ ಎಷ್ಟು ಹಣ ಸಂದಾಯವಾಗಿದೆ? ಅದರಿಂದ ರಾಜ್ಯಕ್ಕೆ ಎಷ್ಟು ನೆರವು ಹರಿದು ಬಂದಿದೆ? ವೆಂಟಿಲೇಟರ್, ಐಸಿಯು, ಆಕ್ಸಿಜನ್ ರಾಜ್ಯಕ್ಕೆ ಎಷ್ಟು ಸಿಕ್ಕಿದೆ? ಮಾಹಿತಿ ಹಕ್ಕಿಗೆ ನಿಷೇಧ ಹೇರಿ ಮೋದಿ ರಕ್ಷಿಸುತ್ತಿರುವುದು ಯಾರನ್ನು? ತಮ್ಮನ್ನೋ? ಅಧಿಕಾರಿಗಳನ್ನೋ?

    ರಾಜ್ಯದ ಕೊರೊನಾ ರೋಗಿಗಳಿಗೆ ಬೆಡ್ ಕೊಡಿ, ವೆಂಟಿಲೇಟರ್ ಕೊಡಿ, ಆಕ್ಸಿಜನ್ ಕೊಡಿ ಎಂದು ಮುಖ್ಯಮಂತ್ರಿಗಳು ಭಿಕ್ಷುಕರ ರೀತಿ ಪ್ರಧಾನಿಯನ್ನು ಬೇಡುತ್ತಿದ್ದಾರೆ. ರಾಜ್ಯದ 25 ಬಿಜೆಪಿ ಸಂಸದರು ಯಾವ ಬಿಲ ಸೇರಿದ್ದಾರೆ? ಇಲ್ಲಿ ಹುಲಿಯಂತೆ ಕಿರುಚಾಡುವ ಸಂಸದರು ಪ್ರಧಾನಿ ಎದುರು ಇಲಿಗಳಾಗಿ ಬಿಲ ಸೇರುವುದು ಯಾಕೆ?

  • ಕೇಂದ್ರದ ಜೊತೆ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ – ಅಶೋಕ್

    ಕೇಂದ್ರದ ಜೊತೆ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ – ಅಶೋಕ್

    ಬೆಂಗಳೂರು: ಆಕ್ಸಿಜನ್ ಸಮಸ್ಯೆ ಸಂಬಂಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸಚಿವರ ಜೊತೆ ಮಾತನಾಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲೆಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ದಾಸ್ತಾನಿಗೆ ಅವಕಾಶ ಇದೆ ಅದನ್ನು ಕೊಡಿಸಲಾಗುವುದು. ಸಿಲಿಂಡರ್ ಮೂಲಕವೇ ಆಗಬೇಕಾದ ಕಡೆಗೆ ಖಾಲಿ ಸಿಲಿಂಡರ್ ವಿತರಿಸಿ ಆ ಮೂಲಕವೂ ದಾಸ್ತಾನಿಗೆ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲಾಗುವುದು. ಕೇಂದ್ರ ಸರ್ಕಾರ ಇದಕ್ಕೆ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.

    ಆಕ್ಸಿಜನ್ ಸಮಸ್ಯೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಕೇಂದ್ರದ ಜೊತೆ ನಿನ್ನೆ ಮಾತಾಡಿದ್ದಾರೆ. ಎಲ್ಲೆಲ್ಲಿ ಸ್ಟೋರೆಜ್ ಕೆಪ್ಯಾಸಿಟಿ ಇದೆ ಅಲ್ಲಿಗೆ ಸ್ಟೋರ್ ಮಾಡಲು ಹೇಳಿದ್ದೇವೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿ ಆಗಲಿದೆ ಎಂದು ಹೇಳಿದರು.

    ಎಲ್ಲಾ ರಾಜ್ಯದ ರಾಜ್ಯಪಾಲರಿಗೆ ಕೊರೊನಾ ಸಂಬಂಧ ಸಭೆ ಮಾಡಿ ಸರ್ಕಾರಕ್ಕೆ ಸಲಹೆ ನೀಡುವಂತೆ ಹೇಳಿದೆ. ಇದಕ್ಕೆ ಬೇರೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಕಾಂಗ್ರೆಸ್ ಟೀಕೆಗೆ ಅಶೋಕ್ ಉತ್ತರ ನೀಡಿದರು.

    ಕಾಂಗ್ರೆಸ್ ಯಾವಾಗಲೂ ಗೊಂದಲ ಮೂಡಿಸುತ್ತದೆ. ಅವರ ಪಕ್ಷ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಏನ್ ಮಾಡಿದ್ದಾರಂತ ಸಲಹೆ ನೀಡಲಿ. ನಾವು ಅದನ್ನು ಅಳವಡಿಸಿಕೊಳ್ಳುತ್ತೇವೆ. ಇದು ರಾಜಕೀಯ ಮಾಡುವ ವಿಚಾರ ಅಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಕೊರೊನಾ ಇದೆ ಎಂದು ಕಾಂಗ್ರೆಸ್ ಭಾವಿಸಿದೆ. ಕೊರೊನಾ ನಮ್ಮ ರಾಜ್ಯಕ್ಕೆ ಮಾತ್ರ ಬಂದಿರುವುದಲ್ಲ ಎಂದು ತಿರುಗೇಟು ನೀಡಿದರು.

     

  • ಒಂದು ಕ್ರಿಯೆಯಿಂದ ಮೂರು ಸಂದೇಶ – ವಿರೋಧಿಗಳಿಗೆ ತೇಜಸ್ವಿ ಸೂರ್ಯ ತಿರುಗೇಟು

    ಒಂದು ಕ್ರಿಯೆಯಿಂದ ಮೂರು ಸಂದೇಶ – ವಿರೋಧಿಗಳಿಗೆ ತೇಜಸ್ವಿ ಸೂರ್ಯ ತಿರುಗೇಟು

    ನವದೆಹಲಿ: ದೇಶಾದ್ಯಂತ ಇಂದಿನಿಂದ ಜನ ಸಾಮಾನ್ಯರಿಕೆ ಲಸಿಕೆ ಪ್ರಯೋಗ ಪ್ರಾರಂಭವಾಗುತ್ತಿದ್ದಂತೆ ದೇಶದ ಪ್ರಧಾನಿ ನರೇಂದ್ರ ಮೋದಿ ಲಸಿಕೆ ಪಡೆದುಕೊಂಡಿದ್ದಾರೆ. ಇದೀಗ ಲಸಿಕೆ ಪಡೆದುಕೊಂಡಿರುವ ಮೋದಿ ಕುರಿತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮೂರು ವಿಷಯಗಳನ್ನು ಹಂಚಿ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

    ಪ್ರಧಾನಿಯಾಗಿರುವ ಮೋದಿ ಲಸಿಕೆಗಾಗಿ ಮೊದಲ ಸರದಿಯಲ್ಲಿ ನಿಲ್ಲಲಿಲ್ಲ ಎಲ್ಲರಂತೆ ಹಿರಿಯ ನಾಗರಿಕರ ಸರದಿ ಬಂದಾಗ ಹೋಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರೊಂದಿಕೆ ಲಸಿಕೆ ಹಾಕಿಸಿಕೊಳ್ಳುವಂತೆ ಹಾಗೂ ಲಸಿಕೆಯ ಕುರಿತು ಎಲ್ಲರಿಗೂ ಮನವರಿಕೆ ಮಾಡಿಸಿದ್ದಾರೆ. ಹಾಗೆ ಮೋದಿಯವರು ಲಸಿಕೆಯನ್ನು ತಮ್ಮ ನಿವಾಸಕ್ಕೆ ತರಿಸದೇ ಎಲ್ಲಾ ನಾಗರಿಕರಂತೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದು ದೇಶದ ನಾಯಕನಿಗಿರುವ ಉತ್ತಮವಾದ ಗುಣ ಎಂದು ಪ್ರಶಂಸಿದ್ದಾರೆ.

    ಮೋದಿಯವರು ಹೈದರಾಬಾದ್ ನ ಭಾರತ್ ಬಯೋಟೆಕ್ ಕಂಪನಿ ಕೊವಾಕ್ಸಿನ್ ಲಸಿಕೆಯನ್ನು ಪಡೆದ ಬಳಿಕ ಟ್ವೀಟ್ ಮಾಡಿ ನಾನು ಏಮ್ಸ್ ನಲ್ಲಿ ಮೊದಲ ಡೋಸ್ ಕೋವಿಡ್-19 ಲಸಿಕೆ ತೆಗೆದುಕೊಂಡಿದ್ದೇನೆ. ಕೋವಿಡ್-19 ವಿರುದ್ಧ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ಹೆಚ್ಚಿನ ಶ್ರಮ ವಹಿಸಿರುವುದು ಗಮನಾರ್ಹವಾಗಿದೆ. ಲಸಿಕೆ ಪಡೆದುಕೊಳ್ಳುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಟ್ಟಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

  • ತೇಜಸ್ ಏರಿ ಬಾನಂಗಳದಲ್ಲಿ ಹಾರಾಟ ನಡೆಸಿದ ತೇಜಸ್ವಿ ಸೂರ್ಯ

    ತೇಜಸ್ ಏರಿ ಬಾನಂಗಳದಲ್ಲಿ ಹಾರಾಟ ನಡೆಸಿದ ತೇಜಸ್ವಿ ಸೂರ್ಯ

    ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಎರಡನೇ ದಿನದ ಏರೋ ಇಂಡಿಯಾ ಶೋದಲ್ಲಿ ತೇಜಸ್ ಯುದ್ಧ ವಿಮಾನ ಏರಿ ಸಂಸದ ತೇಜಸ್ವಿ ಸೂರ್ಯ ಬಾನಂಗಳದಲ್ಲಿ ಹಾರಾಟ ನಡೆಸಿದ್ದಾರೆ.

    ಬುಧವಾರ ಯಲಹಂಕ ವಾಯುನೆಲೆಯಲ್ಲಿ ಆರಂಭಗೊಂಡ ಏರೋ ಇಂಡಿಯಾ ಶೋ ಇಂದು ಎರಡನೇ ದಿನವಾಗಿದೆ. ಇಂದು ಏರೋ ಇಂಡಿಯಾ ಶೋದಲ್ಲಿ ಭಾಗಿಯಾದ ತೇಜಸ್ವಿ ಸೂರ್ಯ, ತೇಜಸ್ ಯುದ್ಧ ವಿಮಾನದಲ್ಲಿ ಕೂತು 20 ನಿಮಿಷಗಳ ಕಾಲ ಬಾನಂಗಳದಲ್ಲಿ ಹಾರಾಟ ನಡೆಸಿದ್ದಾರೆ.

    ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರೋ ಶೋ ಇದಾಗಿದ್ದು, ಈ ಪ್ರದರ್ಶನದಲ್ಲಿ 540 ಸ್ವದೇಶಿ ಪ್ರದರ್ಶಕರು ಮತ್ತು 77 ವಿದೇಶಿ ಪ್ರದರ್ಶಕರು ಭಾಗಿಯಾಗುವ ನಿರೀಕ್ಷೆ ಇದೆ. ಪ್ರತಿ ದಿನ ಭಾರತ, ವಿದೇಶಗಳ ಒಟ್ಟು 63 ವಿಮಾನಗಳ ಪ್ರದರ್ಶನ ನಡೆಯಲಿದೆ.

  • ಯಾರನ್ನೂ ವಿರೋಧ ಮಾಡಿ ಕನ್ನಡ ಬೆಳೆಸೋ ಅವಶ್ಯಕತೆ ಇಲ್ಲ: ತೇಜಸ್ವಿ ಸೂರ್ಯ

    ಯಾರನ್ನೂ ವಿರೋಧ ಮಾಡಿ ಕನ್ನಡ ಬೆಳೆಸೋ ಅವಶ್ಯಕತೆ ಇಲ್ಲ: ತೇಜಸ್ವಿ ಸೂರ್ಯ

    – ಬೆಳಗಾವಿಯಲ್ಲಿ ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು

    ಬೆಳಗಾವಿ: ಯಾರನ್ನು ಕೂಡ ವಿರೋಧ ಮಾಡಿ ಕನ್ನಡ ಬೆಳೆಸುವ ಅವಶ್ಯಕತೆ ಇಲ್ಲ ಎಂದು ಕನ್ನಡಪರ ಹೋರಾಟಗಾರರಿಗೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

    ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ ತೇಜಸ್ವಿ ಸೂರ್ಯ ಬಂದ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕ ಬಂದ್ ಗೆ ಕರೆ ನೀಡಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಮರಾಠಿಗರಿದ್ದಾರೆ ಅಂತ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆರು ಕೋಟಿ ಕನ್ನಡಿಗರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಜವಾಬ್ದಾರಿ. ಎಲ್ಲ ಜಾತಿ, ಎಲ್ಲ ಸಮುದಾಯದ ಏಳಿಗೆ ಸರ್ಕಾರದ ಕರ್ತವ್ಯ. ಆ ದೃಷ್ಟಿಯಿಂದ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

    ಬಂದ್ ಕರೆಯುವಂತಹದ್ದು ಸರಿಯಲ್ಲ, ಬಂದ್ ಕಲ್ಚರ್ ಬಂದ್ ಆಗಬೇಕು. ಬಂದ್ ಮಾಡುವುದನ್ನ ಈಗಾಗಲೇ ನಿಲ್ಲಿಸಿದ್ದಾರೆ. ಇಂದಿನ ಬಂದ್ ಯಾವುದೇ ಫಲ ಆಗುವುದಿಲ್ಲ. ಬಂದ್ ಕಲ್ಚರ್ ಈಗಾಗಲೇ ನಿಂತುಹೋಗಿದೆ. ಸರ್ಕಾರದ ಜೊತೆಗೆ ಕುಳಿತು ಚರ್ಚೆ ಮಾಡುವಂತೆ ಕನ್ನಡ ಸಂಘಟನೆ ಮುಖಂಡರಿಗೆ ಮನವಿ ಮಾಡಿಕೊಂಡ ಸೂರ್ಯ, ಸರ್ಕಾರ ಮತ್ತು ಯಡಿಯೂರಪ್ಪ ನಿಮ್ಮ ಮಾತುಗಳನ್ನ ಕೇಳಲು ತಯಾರಿದೆ. ಕನ್ನಡದ ಕೆಲಸವನ್ನ ಎಲ್ಲರೂ ಸೇರಿ ಮಾಡೋಣ ಎಂದು ತಿಳಿಸಿದರು.

    ಬೆಳಗಾವಿಯ ರೇಲ್ವೆ ನಿಲ್ದಾಣದಲ್ಲಿ ಬಂದಿಳಿದ ತೇಜಸ್ವಿ ಸೂರ್ಯ ಅವರನ್ನು ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು. ಬೆಳಗಾವಿ ಜಿಲ್ಲಾ ಬಿಜೆಪಿ ಯುವ ಘಟಕ ಹೂಗೂಚ್ಛ ನೀಡಿ ಸ್ವಾಗತಿಸಿತ್ತು. ಇದೇ ವೇಳೆ ತೇಜಸ್ವಿ ಸೂರ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾರ್ಯಕರ್ತರು ಮುಗಿಬಿದ್ದ ಪ್ರಸಂಗವೂ ನಡೆಯಿತು.

  • ಹಿಂದೂ ವಿರೋಧಿ ರಾಜನೀತಿ ವಿರುದ್ಧ ಜನ ವೋಟ್ ಹಾಕುತ್ತಿದ್ದಾರೆ: ತೇಜಸ್ವಿ ಸೂರ್ಯ

    ಹಿಂದೂ ವಿರೋಧಿ ರಾಜನೀತಿ ವಿರುದ್ಧ ಜನ ವೋಟ್ ಹಾಕುತ್ತಿದ್ದಾರೆ: ತೇಜಸ್ವಿ ಸೂರ್ಯ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನ ಹಿಂದೂ ವಿರೋಧಿ ರಾಜನೀತಿ ವಿರುದ್ಧ ವೋಟ್ ಹಾಕುತ್ತಿದ್ದಾರೆ ಎಂದು ಸಂಸದ ಮತ್ತು ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

    ಹೈದರಾಬಾದ್ ಮಹಾನಗರ ಪಾಲಿಕೆ ಫಲಿತಾಂಶದಲ್ಲಿ ಬಿಜೆಪಿ ಸಾಧನೆಯ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ಜನರ ಇತ್ತೀಚಿನ ದಿನಗಳಲ್ಲಿ ಮೂರು ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವೋಟ್ ಮಾಡುತ್ತಿದ್ದಾರೆ. ಜನರು ಕುಟುಂಬ ಆಧಾರಿತ ರಾಜಕಾರಣ, ಭ್ರಷ್ಟ ಆಡಳಿತ ಮತ್ತು ಹಿಂದೂ ವಿರೋಧಿ ರಾಜನೀತಿ ವಿರುದ್ಧ ವೋಟ್ ಮಾಡುತ್ತಾರೆ ಎಂದು ಹೇಳಿದ್ದಾರೆ.

    ಈ ಚುನಾವಣೆಯ ಫಲಿತಾಂಶ ನನಗೆ ಸಂತೋಷ ನೀಡಿದೆ. 4 ಸ್ಥಾನದಿಂದ 40 ಸ್ಥಾನ ದಾಟಿದ್ದೇವೆ. ಹತ್ತು ಪಟ್ಟು ಫಲಿತಾಂಶ ಹೆಚ್ಚಾಗಿದೆ. ಈ ಸಾಧನೆ ಬಿಜೆಪಿ ಮೇಲೆ, ಮೋದಿಯವರ ಅಭಿವೃದ್ಧಿ ಕಾರ್ಯಗಳ ಮೇಲೆ ಜನ ನಂಬಿಕೆ ಇಟ್ಕೊಂಡಿರೋದನ್ನು ತೋರಿಸುತ್ತೆ. ಈ ಹೈದರಾಬಾದ್ ಮಹಾನಗರ ಪಾಲಿಕೆಯ ಫಲಿತಾಂಶ ಮುಂಬರುವ ದಿನಗಳಲ್ಲಿ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಎಂಬ ಸುಳಿವು ಕೊಟ್ಟಿದೆ ಎಂದು ತಿಳಿಸಿದರು.

    ಇದು ಪಕ್ಷದ ಕಾರ್ಯಕರ್ತರ ಜಯ. ಕೆಸಿಆರ್ ಸಾಕಷ್ಟು ಕೇಸ್‍ಗಳನ್ನು ಹಾಕಿದರೂ ನಮ್ಮ ಕಾರ್ಯಕರ್ತರು ಶ್ರಮ ಹಾಕಿ ಕೆಲಸ ಮಾಡಿದ್ದಾರೆ. ಪ್ರತೀ ಚುನಾವಣೆಯಲ್ಲೂ ನಮ್ಮ ಪರ ಜನಬೆಂಬಲ ಹೆಚ್ಚಾಗುತ್ತಿದೆ. ಹೈದರಾಬಾದ್‍ಗೆ ಭಾಗ್ಯನಗರ ಎಂದು ಹೆಸರಿಡುವ ಮತ್ತು ನಿಜಾಮ ಸಂಸ್ಕೃತಿ ಅಂತ್ಯ ಮಾಡುವ ನಮ್ಮ ಭರವಸೆಗಳನ್ನು ಅಲ್ಲಿನ ಜನ ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ನಮಗೆ ಸಹಾಯಕವಾಗಲಿದೆ ಎಂದು ಸೂರ್ಯ ಭವಿಷ್ಯ ನುಡಿದಿದ್ದಾರೆ.

    ಇದೇ ವೇಳೆ ಬಿಬಿಎಂಪಿ ಚುನಾವಣೆಗೆ ವೇಳಾಪಟ್ಟಿ ಹೊರಡಿಸಲು ಹೈಕೋರ್ಟ್ ನಿರ್ದೇಶನ ವಿಚಾರವಾಗಿ ಮಾತನಾಡಿ, ಬೆಂಗಳೂರಿಗೆ ವಿಶೇಷ ಕಾನೂನು ಬೇಕು. ಎಲ್ಲ ಸಮಸ್ಯೆಗಳಿಗೂ ವಿಶೇಷ ಕಾನೂನಿನಿಂದ ಪರಿಹಾರ ಸಿಗಬೇಕು. ಬಿಬಿಎಂಪಿಗೆ ಚುನಾವಣೆ ಯಾವಾಗ ಬಂದರೂ ಸರ್ಕಾರ ಸಿದ್ಧವಿದೆ. ಚುನಾವಣೆಯಲ್ಲಿ ಗೆಲ್ಲೋದು ಬಿಜೆಪಿಯೇ. ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡುವ ಬಗ್ಗೆ ಸಿಎಂ ಮತ್ತು ಸಚಿವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಚುನಾವಣೆ ಯಾವಾಗ ಬಂದರೂ ನಾವು ಸಿದ್ಧ ಎಂದರು.

    ಹೈದರಾಬಾದಿಗೆ ತೆರಳಿ ಪ್ರಚಾರ ನಡೆಸಿದ್ದ ತೇಜಸ್ವಿ ಸೂರ್ಯ, ಅಸಾದುದ್ದಿನ್ ಓವೈಸಿ ಮೊಹಮ್ಮದ್ ಅಲಿ ಜಿನ್ನಾನ ಅವತಾರವಾಗಿದ್ದು, ಅವರ ಪಕ್ಷಕ್ಕೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧವಾಗಿದೆ ಎಂದು ಗುಡುಗಿದ್ದರು.

  • ಓವೈಸಿಗೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧ – ಹೈದರಾಬಾದ್‍ನಲ್ಲಿ ತೇಜಸ್ವಿ ಘರ್ಜನೆ

    ಓವೈಸಿಗೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧ – ಹೈದರಾಬಾದ್‍ನಲ್ಲಿ ತೇಜಸ್ವಿ ಘರ್ಜನೆ

    ಹೈದರಾಬಾದ್: ಅಸಾದುದ್ದಿನ್ ಓವೈಸಿ ಮೊಹಮ್ಮದ್ ಅಲಿ ಜಿನ್ನಾನ ಅವತಾರವಾಗಿದ್ದು, ಅವರ ಪಕ್ಷಕ್ಕೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧವಾಗಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಗುಡುಗಿದ್ದಾರೆ.

    ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ್ದ ತೇಜಸ್ವಿ ಸೂರ್ಯ, ಇದೀಗ ಹೈದಾರಾಬಾದ್‍ನಲ್ಲಿ ಅಸಾದುದ್ದಿನ್ ಓವೈಸಿ ವಿರುದ್ಧ ಹರಿಹಾಯ್ದಿದ್ದಾರೆ. ಮುಂದಿನ ತಿಂಗಳು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಇರುವ ಹಿನ್ನೆಲೆ ಬಿಜೆಪಿ ಪರ ತೇಜಸ್ವಿ ಸೂರ್ಯ ಪ್ರಚಾರ ನಡೆಸುತ್ತಿದ್ದಾರೆ.

    ಸದಾ ವಿಭಜನೆಯ ಹಾಗೂ ವಿವಾದಾತ್ಮಕ ಹೇಳಿಕೆ ನೀಡುವ ಅಸಾದುದ್ದಿನ್ ಓವೈಸಿ ವಿರುದ್ಧ ಗುಡುಗಿರುವ ತೇಜಸ್ವಿ ಸೂರ್ಯ, ಅವರಿಗೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧವಾಗಿದೆ ಎಂದಿದ್ದಾರೆ. ಅಸಾದುದ್ದಿನ್ ಓವೈಸಿ ಹಾಗೂ ಸಹೋದರ ಅಕ್ಬರುದ್ದಿನ್ ಓವೈಸಿ ವಿಭಜನೆ ಹಾಗೂ ಕೋಮುವಾದಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಬದಲಿಗೆ ರೊಹಿಂಗ್ಯಾ ಮುಸ್ಲಿಮರಿಗೆ ಮಾತ್ರ ಆಶ್ರಯ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

    ನೀವು ಇಲ್ಲಿ ಓವೈಸಿಗೆ ಮತ ಹಾಕಿದರೆ ಮುಂದೆ ಅವರು ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮುಸ್ಲಿಂ ಪ್ರದೇಶಗಳಲ್ಲಿ ಬಲಶಾಲಿಯಾಗುತ್ತಾರೆ. ಓವೈಸಿ ಜಿನ್ನಾನ ಹೊಸ ಅವತಾರ. ಹೀಗಾಗಿ ಅವರನ್ನು ಸೋಲಿಸಲೇಬೇಕು. ನೀವು ಬಿಜೆಪಿಗೆ ಹಾಕುವ ಪ್ರತಿ ಮತ ಭಾರತ, ಹಿಂದುತ್ವಕ್ಕೆ, ಇದರಿಂದ ದೇಶ ಬಲಗೊಳ್ಳಲಿದೆ ಎಂದು ಕರೆ ನೀಡಿದರು.

    ಇದು ನಿಜಾಮರ ಕಾಲಾವಧಿಯಲ್ಲ ಎಂಬುದನ್ನು ನಾನು ಅಸಾದುದ್ದಿನ್ ಹಾಗೂ ಅಕ್ಬರುದ್ದಿನ್ ಅವರಿಗೆ ತಿಳಿಸಲು ಬಯಸುತ್ತೇನೆ. ಇದು ಹಿಂದೂ ಹೃದಯ ಸಾಮ್ರಾಟರಾದ ಪ್ರಧಾನಿ ನರೇಂದ್ರ ಮೋದಿಯವರ ಕಾಲಾವಧಿ. ನೀವಿಲ್ಲಿ ಏನೂ ಅಲ್ಲ ಎಂದು ಕಿಡಿಕಾರಿದರು.

    ಪ್ರಚಾರದುದ್ದಕ್ಕೂ ಹೈದರಾಬಾದ್‍ಗೆ ಭಾಗ್ಯ ನಗರವೆಂದೇ ಸಂಬೋಧಿಸಿದ ತೇಜಸ್ವಿ, ಹೈದರಾಬಾದ್‍ನ್ನು ಭಾಗ್ಯಾನಗರವಾಗಿ ಬದಲಿಸಬೇಕಿದೆ ಎಂದರು. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾಪೋರೇಷನ್ ಚುನಾವಣೆ ಡಿಸೆಂಬರ್ 1ರಂದು ನಡೆಯುತ್ತಿದ್ದು, ಇದು ದಕ್ಷಿಣ ಭಾರತದ ಗೇಟ್‍ವೇಯಾಗಿದೆ. ಹೀಗಾಗಿ ಇಂದು ಹೈದರಾಬಾದನ್ನು ಬದಲಿಸೋಣ, ನಾಳೆ ತೆಲಂಗಾಣ, ನಾಡಿದ್ದು ದಕ್ಷಿಣ ಭಾರತವನ್ನು ಬದಲಿಸೋಣ. ಹೈದರಾಬಾದ್ ಚುನಾವಣೆಯನ್ನು ಇಡೀ ದೇಶವೇ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದರು.

  • ಬೆಂಗಳೂರಿನಲ್ಲಿ ವಿಶಿಷ್ಟ ರೀತಿಯ ಮುಳುಬಾಗಿಲು ದೋಸಾ ಕಾರ್ನರ್ ಓಪನ್

    ಬೆಂಗಳೂರಿನಲ್ಲಿ ವಿಶಿಷ್ಟ ರೀತಿಯ ಮುಳುಬಾಗಿಲು ದೋಸಾ ಕಾರ್ನರ್ ಓಪನ್

    ಬೆಂಗಳೂರು: ವಿಭಿನ್ನ ರುಚಿಯ ದೋಸೆಗಳನ್ನು ಸವಿಯೋದು ಅಂದರೆ ಆಹಾರ ಪ್ರಿಯರಿಗೆ ಎಲ್ಲಿಲ್ಲದ್ದ ಪ್ರೀತಿ. ಆದರೆ ಮುಳುಬಾಗಿಲು ದೋಸೆ ಅಂದರೆ ಬಾಯಲ್ಲಿ ನೀರು ಬರುವುದು ಪಕ್ಕಾ. ಈ ಕಾರಣಕ್ಕೆ ನರಗದಲ್ಲಿನ ಪೈ ವೈಸ್ ರಾಯ್‍ನಲ್ಲಿ ಇನ್ನು ಮುಂದೆ ರುಚಿಯಾದ ಮತ್ತು ಶುಚಿಯಾದ ಮುಳುಬಾಗಿಲು ದೋಸೆಯನ್ನು ಸವಿಯಬಹುದು.

    ಜಯನಗರದ ಪೈ ವೈಸ್ ರಾಯ್‍ನಲ್ಲಿ ನೂತನವಾಗಿ ಮುಳುಬಾಗಿಲು ದೋಸಾ ಕಾರ್ನರ್ ನ್ನು ಆರಂಭ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಚಿಕ್ಕ ಪೇಟೆ ವಿಧಾನಸಭಾ ಕ್ಷೇತ್ರದ ಉದಯ್ ಗರುಡಾಚಾರ್ ಉದ್ಘಾಟಿಸಿದರು.

    ಸಂಸದ ತೇಜಸ್ವಿ ಸೂರ್ಯ ಮಾತನಾಡಿ ಮುಳಬಾಗಿಲು ದೋಸೆ ತಿನ್ನಬೇಕು ಅಂದರೆ ಮುಳಬಾಗಿಲಿಗೆ ಹೋಗಬೇಕಾಗಿತ್ತು. ಆದರೆ ಈಗ ಪೈ ವೈಸ್ ರಾಯ್ ಹೋಟೆಲ್‍ನವರು ಬೆಂಗಳೂರು ಜನರಿಗೆ ಮುಳುಬಾಗಿಲು ದೋಸೆ ರುಚಿ ತೋರಿಸುತ್ತಿದ್ದಾರೆ. ಎಲ್ಲರೂ ಬನ್ನಿ ಸೇವನೆ ಮಾಡಿ ಎಂದು ಹೇಳಿದರು.

    ಪೈ ವೈಸ್ ರಾಯ್ ಹೋಟೆಲ್ ಸುಜಾಯ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಮುಳಬಾಗಿಲು ದೋಸೆ ಕಾರ್ನರ್ ಮಾಡುತ್ತಿದ್ದೇವೆ. ದೋಸೆ ಜೊತೆಗೆ ವಿವಿಧ ರೀತಿಯ ಆಹಾರಗಳು ಕೂಡ ಲಭ್ಯವಿದೆ. ಬೆಂಗಳೂರಿನ ಜನರಿಗೆ ವಿಶಿಷ್ಟ ಖಾದ್ಯ ಆಹಾರಗಳನ್ನು ಪರಿಚಯಿಸುತ್ತೇವೆ ಬಂದು ಅದನ್ನು ಸವಿಯಬಹುದು. ಜಯನಗರದ ಮೂರನೇ ಹಂತದಲ್ಲಿ ಇದನ್ನು ಆರಂಭ ಮಾಡಿದ್ದೇವೆ. ಪ್ರತಿಯೊಬ್ಬರು ಭೇಟಿ ಕೊಟ್ಟು ವಿಶಿಷ್ಟ ಖಾದ್ಯ ಆಹಾರಗಳನ್ನು ಸವಿಯಿರಿ ಎಂದು ಮನವಿ ಮಾಡಿದರು.

  • ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಪದಗ್ರಹಣ

    ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಪದಗ್ರಹಣ

    ನವದೆಹಲಿ: ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಇಂದು ಪದಗ್ರಹಣ ಮಾಡಿದರು.

    ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಿರ್ಗಮಿತ ಅಧ್ಯಕ್ಷೆ ಪೂನಂ ಮಹಾಜನ್ ಅವರಿಂದ ಅಧಿಕಾರ ಸ್ವೀಕರಿಸಿದರು. ಪ್ರದಗ್ರಹಣಕ್ಕೂ ಮುನ್ನ ರಾಷ್ಟ್ರೀಯ ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿದ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಅಲ್ಲಿಂದ ಬಿಜೆಪಿ ಪ್ರಧಾನ ಕಚೇರಿಗೂ ರೋಡ್ ಶೋ ಮಾಡಿದರು.

    ಪದಗ್ರಹಣದ ಬಳಿಕ ಮಾತನಾಡಿದ ಅವರು, ಹಿರಿಯರ ಆರ್ಶಿವಾದದಿಂದ ಅಧ್ಯಕ್ಷನಾಗಿ ನೇಮಕವಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಘಟನೆಯನ್ನು ಬಲಪಡಿಸಲಿದ್ದೇವೆ ವಿಶ್ವದ ದೊಡ್ಡ ಶಕ್ತಿ ಮಾಡಲು ಪ್ರಯತ್ನ ಮಾಡಿತ್ತೇವೆ. ಡಾ.ಬಿಆರ್ ಅಂಬೇಡ್ಕರ್ ಆರ್ಶಿವಾದ ಪಡೆದಿದ್ದೇನೆ ಸಮಾಜದ ಕಟ್ಟ ಕಡೆಯ ವರ್ಗವನ್ನು ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತೇವೆ. ದೇಶದ ಯುವ ನಾಯಕರನ್ನಾಗಿ ರೂಪಿಸುತ್ತೇವೆ ಎಂದರು. ಇದೇ ವೇಳೆ ಬೆಂಗಳೂರು ದಕ್ಷಿಣದ ಜನರಿಗೆ, ಕರ್ನಾಟಕದ ಜನರಿಗೆ ಧನ್ಯವಾದ ಸಲ್ಲಿಸಿದರು.

    ಈ ವೇಳೆ ಮಾತನಾಡಿದ ನಿರ್ಗಮಿತ ಅಧ್ಯಕ್ಷೆ ಪೂನಂ ಮಹಾಜನ್, ಯುವಮೋರ್ಚಾಗೆ ಕನ್ನಡಿಗರು ಅಧ್ಯಕ್ಷರಾಗುತ್ತಿರುವುದು ಇದೇ ಮೊದಲು. ನನ್ನ ತಮ್ಮನಂತಿರುವ ತೇಜಸ್ವಿಗೆ ಅಧಿಕಾರ ಹಸ್ತಾಂತರಿಸುವುದು ಖುಷಿ ಇದೆ. ಭವಿಷ್ಯದ ರಾಜಕಾರಣಕ್ಕೆ ಒಳಿತಾಗಲಿ ಎಂದು ಅಧಿಕಾರ ಹಸ್ತಾಂತರದ ಬಳಿಕ ಹೇಳಿದರು.

  • ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಠಾಣೆಗಳು ಟಿಎಂಸಿ ಕಚೇರಿಗಳಾಗಿವೆ: ತೇಜಸ್ವಿ ಗುಡುಗು

    ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಠಾಣೆಗಳು ಟಿಎಂಸಿ ಕಚೇರಿಗಳಾಗಿವೆ: ತೇಜಸ್ವಿ ಗುಡುಗು

    – ಬ್ರೀಚ್ ಆಫ್ ಪ್ರಿವಿಲೇಜ್ ಎಚ್ಚರಿಕೆ ನೀಡಿದ ಸೂರ್ಯ
    – ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲವೆಂಬ ಆರೋಪ

    ನವದೆಹಲಿ: ಸಂಸತ್‍ನಲ್ಲಿ ಬ್ರೀಚ್ ಆಫ್ ಪ್ರಿವಿಲೇಜ್ ಫೈಲ್ ಮಾಡುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪೊಲೀಸರಿಗೆ ಸಂವಿಧಾನದ ಬಗ್ಗೆ ಪಾಠ ಕಲಿಸುತ್ತೇವೆ ಎಂದು ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಗುಡುಗಿದ್ದಾರೆ.

    ಈ ಕುರಿತು ಟ್ವೀಟ್ ಮಾಡುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗುಡುಗಿರುವ ಅವರು, ಜರಸಂಕೊ ಠಾಣೆಯ ಮಮತಾ ಪೊಲೀಸರು ಮೂವರು ಸಂಸದರು ನೀಡಿರುವ ದೂರನ್ನು ಕಡೆಗಣಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಕಂಟ್ರಿ ಬಾಂಬ್ ಎಸೆದಿರುವ ಕುರಿತು ಸಂಸದರು ನೀಡಿದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಿಲ್ಲ. ಈ ಮೂಲಕ ಮೂವರು ಸಂಸದರನ್ನು ಅವಮಾನಿಸಿದ್ದಾರೆ, ದೂರು ನೀಡಿದ್ದಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ನಾನು ಹಾಗೂ ಸಂಸದರಾದ ನಿಸಿತ್ ಪ್ರಮಣಿಕ್, ಜ್ಯೋತಿರ್ಮಯ ಸಿಂಗ್ ಮಹತೋ ಅವರು ದೂರು ನೀಡಿದಕ್ಕೆ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಇಂತಹ ತಪ್ಪು ಮಾಡಿದ ಹಾಗೂ ಸೊಕ್ಕಿನ ಪೊಲೀಸ್ ಅಧಿಕಾರಿಗಳ ವಿರುದ್ಧ ಸಂಸತ್‍ನಲ್ಲಿ ಬ್ರೀಚ್ ಆಫ್ ಪ್ರಿವಿಲೇಜ್ ಮೋಶನ್ ಮೂವ್ ಮಾಡುತ್ತೇವೆ ಎಂದು ಗುಡುಗಿದ್ದಾರೆ.

    ಪೊಲೀಸ್ ಠಾಣೆಗಳು ಟಿಎಂಸಿ ಕಚೇರಿಗಳಾಗಿವೆ:
    ನಾವು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸುತ್ತಾರೆ ಎಂದು ಮಧ್ಯರಾತ್ರಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಾದಿದ್ದೇವೆ. ಆದರೆ ಎಫ್‍ಐಆರ್ ದಾಖಲಿಸಿದೆ 3 ಸಂಸತ್ ಸದಸ್ಯರಿಗೆ ಅವಮಾನಿಸಿದ್ದಾರೆ. ಹೀಗಾಗಿ ನಾವು ಮೋಶನ್ ಫಾರ್ ಬ್ರೀಚ್ ಆಫ್ ಪ್ರಿವಿಲೇಜ್ ಫೈಲ್ ಮಾಡುತ್ತೇವೆ. ಈ ಮೂಲಕ ಮಮತಾ ಪೊಲೀಸರುಗೆ ಸಂವಿಧಾನದ ಬಗ್ಗೆ ಪಾಠ ಕಲಿಸುತ್ತೇವೆ ಎಂದು ತೇಜಸ್ವಿ ಸೂರ್ಯ ಗುಡುಗಿದ್ದಾರೆ.

    ಪೊಲೀಸ್ ಠಾಣೆ ಬಳಿಯ ವಿಡಿಯೋವನ್ನು ಸಹ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು, ಮಮತಾ ಬ್ಯಾನರ್ಜಿಯವರ ಬಂಗಾಳದಲ್ಲಿ ಪೊಲೀಸ್ ಠಾಣೆಗಳು ಟಿಎಂಸಿ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿವೆ. ಅಪರಾಧ ನಡೆದಿರುವುದನ್ನು ಕಂಡರೂ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಇದರಿಂದಾಗಿ ಕಾನೂನು ಸಂಪೂರ್ಣವಾಗಿ ಕುಸಿದಿರುವುದು ತಿಳಿಯುತ್ತದೆ ಎಂದು ಆರೋಪಿಸಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ ಪೊಲೀಸರ ವಿರುದ್ಧ ಕಿಡಿಕಾರಿರುವ ಅವರು, ಬಂಗಾಳದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜರಸಂಕೊ ಪೊಲೀಸ್ ಠಾಣೆ ಮುಂದೆ ಜಮಾವಣೆಯಾಗಿದ್ದಾರೆ. ಪೊಲೀಸರ ಮುಂದೆ ಎರಡು ಆಯ್ಕೆಗಳಿವೆ ಕಾನೂನು ರೀತಿ ಎಫ್‍ಐಆರ್ ದಾಖಲಿಸಿ ಇಲ್ಲವೇ ಪೊಲೀಸ್ ಸಮವಸ್ತ್ರ ತೆಗೆದು ಟಿಎಂಸಿ ಪಕ್ಷದ ಬಾವುಟಗಳನ್ನು ಹಿಡಿಯಿರಿ ಎಂದು ಗುಡುಗಿದ್ದಾರೆ.

    ನಬಣ್ಣ ಬಳಿ ಉದ್ವಿಗ್ನ ಪರಿಸ್ಥಿತಿ
    ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗುರುವಾರ ಬಿಜೆಪಿ ಯುವ ಮೋರ್ಚಾದಿಂದ ಜಾಥಾ ನಡೆಸಲಾಗಿತ್ತು. ಈ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಬಿಜೆಪಿ ಕಾರ್ಯಕರ್ತರು ಹಾಗೂ ಪಶ್ಚಿಮ ಬಂಗಾಳ ಪೊಲೀಸರ ಮಧ್ಯೆ ಭಾರೀ ಪ್ರಮಾಣದ ಸಂಘರ್ಷ ನಡೆದಿತ್ತು. ಅಶ್ರುವಾಯು, ಜಲ ಫಿರಂಗಿ ಹಾಗೂ ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿತ್ತು. ಅಲ್ಲದೆ ಜಾಥಾ ವೇಳೆ ತೃಣಮೂಲ ಕಾಂಗ್ರೆಸ್‍ನವರು ಕಂಟ್ರಿ ಬಾಂಬ್ ಎಸೆದಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು.

    ಪಶ್ಚಿಮ ಬಂಗಾಳದ ಹೌರಾದ ಸಚಿವಾಲಯ ಕಚೇರಿ `ನಬಣ್ಣ’ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪಶ್ಚಿಮ ಬಂಗಾಳದ ಸಚಿವಾಲಯ `ನಬಣ್ಣ’ ಕಡೆಗೆ ಬಿಜೆಪಿ ಯುವ ಮೋರ್ಚಾದ ಮೆರವಣಿಗೆ ತೆರಳುತ್ತಿದ್ದಂತೆ ಪೊಲೀಸರು ಸಾವಿರಾರು ಕಾರ್ಯಕರ್ತರ ಕಡೆಗೆ ಅಶ್ರುವಾಯು ಹಾಗೂ ಜಲಫಿರಂಗಿ ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದರು. ಇದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

    ಬ್ರೀಚ್ ಆಫ್ ಪ್ರಿವಿಲೇಜ್ ಎಂದರೇನು?
    ಸಂಸತ್ ಸದಸ್ಯರಿಗೆ ಸಂವಿಧಾನದಲ್ಲಿ ಸಂಸದೀಯ ಸವಲತ್ತುಗಳನ್ನು ನಿಡಲಾಗಿದೆ. ಇದಕ್ಕೆ ಪಾರ್ಲಿಮೆಂಟರಿ ಪ್ರಿವಿಲೇಜ್ ಎನ್ನುತ್ತಾರೆ. ಸಂಸದರು ತಮ್ಮ ವೈಯಕ್ತಿಕ ಸಾಮಥ್ರ್ಯದಿಂದ ಹಕ್ಕು ಚಲಾಯಿಸಬಹುದು ಹಾಗೂ ವಿನಾಯಿತಿಗಳನ್ನು ಸಹ ಇದರ ಅಡಿಯಲ್ಲಿ ನೀಡಲಾಗಿದೆ. ಈ ಯಾವುದೇ ಹಕ್ಕುಗಳು ಹಾಗೂ ವಿನಾಯಿತಿಗಳನ್ನು ಕಡೆಗಣಿಸಿದಾಗ ಇದನ್ನು ಬ್ರೀಚ್ ಆಫ್ ಪ್ರಿವಿಲೇಜ್ ಎಂದು ಕರೆಯಲಾಗುತ್ತದೆ. ಇದು ಸಂಸತ್ತಿನ ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ.