Tag: Tejasvi Surya

  • ಜಿಲ್ಲಾ, ತಾಲೂಕು, ಬಿಬಿಎಂಪಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ: ಆರ್.ಅಶೋಕ್

    ಜಿಲ್ಲಾ, ತಾಲೂಕು, ಬಿಬಿಎಂಪಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ: ಆರ್.ಅಶೋಕ್

    ಬೆಂಗಳೂರು: ರಾಜ್ಯದಲ್ಲಿ ನಡೆಯುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಗೆದ್ದೇ ಗೆಲ್ಲಬೇಕಿದೆ. ಇದಕ್ಕಾಗಿ ಯುವ ಮೋರ್ಚಾವು ಒಂದು ತಂಡವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ರಾಜ್ಯದ ಕಂದಾಯ ಸಚಿವರಾದ ಆರ್. ಅಶೋಕ್ ಅವರು ಕರೆನೀಡಿದ್ದಾರೆ.

    ನಗರದ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಇಂದು ನಡೆದ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಆರ್. ಅಶೋಕ್ ಅವರು, ಚುನಾವಣೆಯ ಪರೀಕ್ಷೆಯಲ್ಲಿ ಗೆದ್ದು ನಿಮ್ಮ ನಾಯಕತ್ವವನ್ನು ದೃಢಪಡಿಸಿಕೊಳ್ಳಿ. ಬಿಜೆಪಿಯನ್ನು ಈಗ ಪ್ರಪಂಚವೇ ದೊಡ್ಡ ಪಕ್ಷವಾಗಿ ಗುರುತಿಸುತ್ತಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು. ಪ್ರಧಾನಿಯವರು 18 ರಿಂದ 20 ಗಂಟೆ ಕೆಲಸ ಮಾಡುತ್ತಾರೆ. ಕೋವಿಡ್ ನಿಂದ ಹೊರಬರಲು ನರೇಂದ್ರ ಮೋದಿ ಅವರ ಶ್ರಮವೂ ಕಾರಣವಾಗುತ್ತಿದೆ. ಅಯೋಧ್ಯೆ, ಕಾಶ್ಮೀರದ ವಿಚಾರ, ಭಯೋತ್ಪಾದನೆ ಮೊದಲಾದ ವಿಚಾರಗಳಲ್ಲಿ ದಿಟ್ಟ ನಿರ್ಧಾರವನ್ನು ಪ್ರಧಾನಿಯವರು ಕೈಗೊಂಡಿದ್ದಾರೆ. ಅಂಥ ಚಮತ್ಕಾರವನ್ನು ಬಿಜೆಪಿ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿಯವರೇ 56 ಇಂಚಿನ ಎದೆ ಇದ್ದರೆ ಸಾಲದು: ಸಿದ್ದರಾಮಯ್ಯ

    ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಆಡ್ವಾಣಿ ಅವರ ದೂರದೃಷ್ಟಿಯ ಯೋಜನೆಗಳಿಂದ ಪಕ್ಷ ಬಲಿಷ್ಠವಾಗಿದೆ. ನಮ್ಮ ಸರ್ಕಾರಗಳ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಎಲ್ಲಾ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಜೊತೆಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಬಿಜೆಪಿ ಈ ದೇಶಕ್ಕೆ ಅನಿವಾರ್ಯ. ಮತಬ್ಯಾಂಕ್ ಗಾಗಿ ದೇಶವನ್ನು ಬಲಿ ಕೊಡುವ ಪರಿಸ್ಥಿತಿ ಬರದಂತೆ ಕೆಲಸ ಮಾಡಬೇಕು. ನಾನೂ ಇಲ್ಲಿಂದಲೇ ಬಂದವನು. ಅದಕ್ಕೇ ನನಗೆ ಯುವ ಮೋರ್ಚಾ ವೇದಿಕೆ ಅತ್ಯಂತ ಇಷ್ಟವಾದುದು. ಕಾವೇರಿ ನದಿಯ ಮಾದರಿಯಲ್ಲಿ ಬಿಜೆಪಿ ಹರಿಯುವ ನದಿ. ಆ ಹರಿಯುವ ನದಿಗೆ ಯುವ ಮೋರ್ಚಾ ಒಂದು ಕವಲಾಗಿ ಸೇರುತ್ತದೆ. ದೊಡ್ಡ ನದಿ ಸೇರುವ ದೊಡ್ಡ ತೊರೆ ಇದಾಗಿದೆ. ಯು ಮೋರ್ಚಾ ಸಂಘಟನೆಯಿಂದ ಬಂದವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತದೆ. ನಾನು ಕೂಡ ತುರ್ತು ಪರಿಸ್ಥಿತಿ ಜೈಲಿಗೆ ಹೋಗಿ ಬಂದ ಬಳಿಕ ಒಂದು ವರ್ಷ ಅಜ್ಞಾತವಾಸದಲ್ಲಿದ್ದೆ. ನಾನು ಪೆಟ್ರೋಲ್ ಬಂಕ್ ನಲ್ಲಿ ಸ್ಕೂಟರ್ ಗೆ ಪೆಟ್ರೋಲ್ ಹಾಕಿಸ್ತಾ ಇದ್ದೆ. ಅಲ್ಲಿಂದ ಕರೆದುಕೊಂಡು ಹೋಗಿ ದೊಡ್ಡಬಳ್ಳಾಪುರದಲ್ಲಿ ಯುವ ಮೋರ್ಚಾ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿಯಾಗಿ ಮಾಡಿದರು. ಅಲ್ಲಿಂದ ಬೆಳೆದು ಈಗ ಸಚಿವನಾಗಿ ನಿಮ್ಮೆದುರು ನಿಂತಿದ್ದೇನೆ ಎಂದು ವಿವರಿಸಿದರು.

    ಯುವ ಮೋರ್ಚಾ ಛಾಪು ಬೆಳೆಸಲು ಮುಂದಾಗಿ. ಸಿಂಹಕ್ಕೆ ಯಾರೂ ಪಟ್ಟಾಭಿಷೇಕ ಮಾಡುವುದಿಲ್ಲ. ಹೋರಾಟದ ಮೂಲಕ ಗುರುತಿಸಿಕೊಂಡರೆ ಯುವ ಮೋರ್ಚಾಗೆ ಶಕ್ತಿ ಬರುತ್ತದೆ. ಯುವ ಮೋರ್ಚಾಗೆ ಮಾರ್ಗದರ್ಶನ ಮಾಡುವ ನಾಯಕರಿಗೆ ಕೊರತೆ ಇಲ್ಲ. ನಿಮ್ಮ ವೈಯಕ್ತಿಕ ನಾಯಕತ್ವವನ್ನು ಬೆಳೆಸುವ ಕೆಲಸವನ್ನು ನೀವೇ ಮಾಡಬೇಕು ಎಂದು ನುಡಿದರು.

    ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸದರೂ ಆದ ತೇಜಸ್ವಿ ಸೂರ್ಯ ಅವರು ಮಾತನಾಡಿ, ಯುವ ಮೋರ್ಚಾವು ನಿರಂತರವಾಗಿ ಅನೇಕ ನಾಯಕರನ್ನು ಪಕ್ಷಕ್ಕೆ ನೀಡಿದೆ. ಅದನ್ನು ಸ್ಫೂರ್ತಿಯ ವಿಷಯವನ್ನಾಗಿ ಯುವ ಮೋರ್ಚಾದ ಪದಾಧಿಕಾರಿಗಳು ಮಾಡಿಕೊಂಡು ಬೆಳೆಯಬೇಕು. ಯುವ ಮೋರ್ಚಾವು ಮಾದರಿ ಸಂಘಟನೆ. ಅದು ಎಲ್ಲ ರೀತಿಯ ಯುವಕರನ್ನು ಪ್ರತಿನಿಧಿಸುವ ಸಂಘಟನೆಯಾಗಿ ಬೆಳೆಯಬೇಕು. ಯುವ ಮೋರ್ಚಾವು ರಾಜಕೀಯದಲ್ಲಿ ಹೊಸ ಪ್ರಯತ್ನ ಅಳವಡಿಸಿಕೊಳ್ಳುವಂತಾಗಬೇಕು. ಮೂಲ ತತ್ವ, ಸಿದ್ಧಾಂತಗಳಲ್ಲಿ ಸ್ಥಿರತೆ ಮತ್ತು ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ಬದಲಾವಣೆ ನಮ್ಮದಾಗಿರಬೇಕು ಎಂದು ಅಭಿಪ್ರಾಯಪಟ್ಟರು.

    ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷತೆಗೆ ರಾಜೀನಾಮೆ ಕೊಟ್ಟರು. ಕೊರೊನಾ ಎರಡು ಅಲೆಗಳು ಬಂದು ಹೋಗಿವೆ. ಮೂರನೇ ಅಲೆ ಬರುವಂತಿದೆ. ಆದರೂ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರೇ ಸಿಕ್ಕಿಲ್ಲ. ರಾಜ್ಯದ ಯುವ ಕಾಂಗ್ರೆಸ್‍ನಲ್ಲೂ ಸಮಸ್ಯೆ ಮುಂದುವರಿದಿದೆ. ಗೆದ್ದವರು ಒಬ್ಬರು, ಇನ್ನೊಬ್ಬರಿಗೆ ಅಧ್ಯಕ್ಷತೆ, ಅದರಲ್ಲೂ ಗುಂಪುಗಾರಿಕೆ, ಹೊಡೆದಾಟ ಮುಂದುವರಿದಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಎಂ ಬಿಎಸ್‍ವೈ ಬದಲಾವಣೆ ವಿಚಾರ – ಒಂದು ವಾರ ಕಾಯಿರಿ: ಡಿಕೆಶಿ

    ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಡಾ.ಸಂದೀಪ್ ಕುಮಾರ್ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ನಮ್ಮದೇ ಸರ್ಕಾರವಿದೆ. ಯುವ ಮೋರ್ಚಾವು ಸಮಾಜದ ನೊಂದವರ ತೊಂದರೆಗೆ ಒಳಗಾದವರಿಗೆ ನೇರವಾಗಿ ಹೋರಾಟಕ್ಕೂ ಸೈ, ಸೇವೆಗೂ ಸೈ ಎಂದು ಸಾಬೀತುಪಡಿಸಿದೆ. ಯುವ ಮೋರ್ಚಾ ಸಂವೇದನಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

    ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ ಮತ್ತು ಆಹ್ವಾನಿತ ಪದಾಧಿಕಾರಿಗಳು ಭಾಗವಹಿಸಿದ್ದರು.

  • ಕೊರೊನಾ ಸೋಂಕಿತರಿಗೆ ಬೆಡ್ ಕಾಯ್ದಿರಿಸುವ ನೂತನ ‘ಕ್ಯೂ ಪದ್ಧತಿ’ ವ್ಯವಸ್ಥೆ ಲೋಕಾರ್ಪಣೆ

    ಕೊರೊನಾ ಸೋಂಕಿತರಿಗೆ ಬೆಡ್ ಕಾಯ್ದಿರಿಸುವ ನೂತನ ‘ಕ್ಯೂ ಪದ್ಧತಿ’ ವ್ಯವಸ್ಥೆ ಲೋಕಾರ್ಪಣೆ

    ಬೆಂಗಳೂರು : ಕೋವಿಡ್ ಸೋಂಕಿತರಿಗೆ ಸರತಿ ಸಾಲಿನಲ್ಲಿ ಬೆಡ್ (ಕ್ಯೂ ಸಿಸ್ಟಮ್) ಕಾಯ್ದಿರಿಸುವ ಹೊಸ ವ್ಯವಸ್ಥೆ ಯನ್ನು ಅರಣ್ಯ ಕನ್ನಡ ಮತ್ತು ಸಂಸ್ಕೃತಿ  ಸಚಿವ ಅರವಿಂದ ಲಿಂಬಾವಳಿ ಇಂದು ಲೋಕಾರ್ಪಣೆ ಮಾಡಿದರು.

    ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಚಿವರೊಂದಿಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬಂದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು. ಈ ಹೊಸ ತಂತ್ರಾಂಶ ಸಿದ್ಧಪಡಿಸುವಲ್ಲಿ ನೆರವಾದ ನಂದನ್ ನಿಲೇಕಣಿ, ಐ-ಸ್ಪಿರಿಟ್ ಮತ್ತು ಫಾರ್ಟಲ್ ಸಂಸ್ಥೆಗಳಿಗೆ ಹಾಗೂ ಸ್ವಯಂ ಮುಂದೆ ಬಂದ ಅನೇಕ ಐಟಿ ಪರಿಣಿತರಿಗೆ ಕೃತಜ್ಞತೆ ಸಲ್ಲಿಸಿದರು.

    ಈ ಹೊಸ ಸರತಿ ಸಾಲಿನ ವ್ಯವಸ್ಥೆಯು ಹಾಸಿಗೆ ಕಾಯ್ದಿರಿಸುವಿಕೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ನೆರವಾಗುತ್ತದೆ, ಇದು ಸಂಯೋಜಿತ ವ್ಯವಸ್ಥೆಯನ್ನು ಹೊಂದಿದ್ದು ಆಸ್ಪತ್ರೆ ಪ್ರವೇಶ ಪಡೆಯುವ ಎಲ್ಲ ರೋಗಿಗಳಿಗೆ ಸುಲಭವಾಗಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

    ಆಸ್ಪತ್ರೆಯ ಹಾಸಿಗೆ ಹಂಚಿಕೆ ಫಿಸಿಕಲ್ ಟ್ರಯಾಜಿಂಗ್ ಆಧರಿಸಿ ಮಾಡಲಾಗುವುದು,ಕ್ಯೂಯಿಂಗ್ ವ್ಯವಸ್ಥೆಯಿಂದ ಆಸ್ಪತ್ರೆ ಪ್ರವೇಶ ಪಡೆಯಲು ಬಯಸುವ ಎಲ್ಲಾ ರೋಗಿಗಳ ಟ್ರಯಾಜ್ ವಿವರಗಳನ್ನು ಎಲೆಕ್ಟ್ರಾನಿಕ್ ಪದ್ಧತಿ ಮೂಲಕ ದಾಖಲಿಸಲಾಗುತ್ತದೆ ಎಂದರು. ಇದನ್ನೂ ಓದಿ : ಕತ್ರಿನಾ, ವಿಕ್ಕಿ ಸಂಬಂಧ ರಿವೀಲ್ ಮಾಡಿದ ಅನಿಲ್ ಕಪೂರ್ ಪುತ್ರ

    ಕ್ಲಿನಿಕಲ್ ಪರಿಸ್ಥಿತಿಗಳ ಆಧಾರದ ಮೇಲೆ ಸೊಂಕಿತರಿಗೆ ಆಸ್ಪತ್ರೆ / ಸಿಸಿಸಿ ಹಾಸಿಗೆ ಯನ್ನು ಶಿಫಾರಸು ಮಾಡಲಾಗುವುದು, ಈ ರೋಗಿಗಳಿಗೆ ನಿರ್ದಿಷ್ಟ ಹಾಸಿಗೆ ಮತ್ತು ವಲಯದ ಪ್ರಕಾರ ಕ್ಯೂ ಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

    ಚಿಕಿತ್ಸೆಯ ಸಮಯದ ಆಧಾರದ ಮೇಲೆ ಕ್ಯೂ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ನಿಯೋಜಿಸುವುದು. ನಿರ್ದಿಷ್ಟ ಹಾಸಿಗೆ ಪ್ರಕಾರ ಮತ್ತು ವಲಯಕ್ಕೆ ಕ್ಯೂ ಸಂಖ್ಯೆಯನ್ನು ನಿಗದಿ ಪಡಿಸಲಾಗಿದೆ ಇದರಿಂದ ಅನಗತ್ಯ ಗೊಂದಲ ನಿವಾರಣೆಯಾಗುತ್ತದೆ ಎಂದು ಅವರು ತಿಳಿಸಿದರು.

    ಕ್ಯೂನ ಕ್ರಮದಲ್ಲಿ ರೋಗಿಗಳ ಮೇಲೆ ಮಾತ್ರ ಕಾರ್ಯನಿರ್ವಹಿಸುವ ವಲಯ, ಅಗತ್ಯವಾದ ಹಾಸಿಗೆಯ ಪ್ರಕಾರದಲ್ಲಿ ಬದಲಾವಣೆಯ ಬೇಕಾದ ಸಂದರ್ಭದಲ್ಲಿ ರೋಗಿಯ ಮರು-ಕ್ಯೂ ಅಥವಾ ಅವರ ಮನೆಯ ಪ್ರತ್ಯೇಕತೆಯನ್ನು ಆರಿಸಿಕೊಳ್ಳುವಾಗ ಅಥವಾ ಖಾಸಗಿ ಪ್ರವೇಶ ಇತ್ಯಾದಿಗಳನ್ನು ಆಯ್ಕೆ ಮಾಡಲು ಆದ್ಯತೆ ನೀಡಿದಾಗ, ಅಂಥವರನ್ನು ಸರದಿ ಯಿಂದ ತೆಗೆದು ಹಾಕಬಹುದು ಎಂದು ಅವರು ಸ್ಪಷ್ಟಪಡಿಸಿದರು.

    ವಿಶೇಷ ಆದ್ಯತೆ
    ಪರಿಸ್ಥಿತಿ ಗಂಭೀರವಾಗಿರುವ ಸೋಂಕಿತರು ಹಾಗೂ ಮಕ್ಕಳ ಚಿಕಿತ್ಸೆ, (ಪೀಡಿಯಾಟ್ರಿಕ್ಸ್,) ಗರ್ಭಿಣಿಯರು, ಶುಶ್ರೂಷಾ ತಾಯಂದಿರು, ಕ್ಯಾನ್ಸರ್, ವಿಶೇಷ ರೋಗಪೀಡಿತರು ಮತ್ತು ವಿಕಲಚೇತನರು ಚಿಕಿತ್ಸೆಗೆ ಬಂದಂತಹ ವಿಶೇಷ ಸಂದರ್ಭಗಳಲ್ಲಿ ಅವರಿಗೆ ತಕ್ಷಣದಲ್ಲಿ ಚಿಕಿತ್ಸೆ ನೀಡಲು ಸೂಪರ್ ಯೂಸರ್ ಗೆ ರೆಫರ್ ಮಾಡಲು ಈ ಕ್ಯೂ ಸಿಸ್ಟಮ್ ನಲ್ಲಿ ಅವಕಾಶ ಇದ್ದು,ಇದು ತುರ್ತುಚಿಕಿತ್ಸೆ ಬೇಕಾಗಿರುವ ರೋಗಿಗಳಿಗೆ ಸಹಾಯಕಾರಿಯಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

    ವೈದ್ಯರ ಶಿಫಾರಸುಗಳ ಪ್ರಕಾರ ವಲಯ ಮಟ್ಟ ಮತ್ತು ಹಾಸಿಗೆಯ ಪ್ರಕಾರದ ಕ್ಯೂ ಸಂಖ್ಯೆ ರೋಗಿಗಳು ತಮ್ಮ ಬಿಯು ಸಂಖ್ಯೆಗಳು ಅಥವಾ ಎಸ್ ಆರ್ ಎಫ್ ಐಡಿಗಳನ್ನು ಬಳಸಿಕೊಂಡು ಸಾರ್ವಜನಿಕ ಡ್ಯಾಶ್‍ಬೋರ್ಡ್‍ನಲ್ಲಿ ನೈಜ ಸಮಯವನ್ನು ಟ್ರ್ಯಾಕ್ ಮಾಡಬಹುದು ಎಂದು ಅವರು ವಿವರಿಸಿದರು.

    ಪ್ರಸ್ತುತ 8 ವಾರ್ ರೂಮ್ , 1912 ಮತ್ತು 108 ನಿಯಂತ್ರಣ ಕೊಠಡಿಗಳಿವೆ, ಇವೆಲ್ಲವೂ ರೋಗಿಗಳ ಪ್ರಶ್ನೆಗಳನ್ನು ಸ್ವೀಕರಿಸುತ್ತಿವೆ ಮತ್ತು ಮನವಿಗಳನ್ನು ನಿರ್ವಹಿಸುತ್ತಿವೆ. ಇವುಗಳನ್ನು ಪ್ರತಿದಿನ 50 ಕ್ಕೂ ಹೆಚ್ಚು ವೈದ್ಯರು ನೋಡಿಕೊಳ್ಳುತ್ತಾರೆ, ರೋಗಿಯು ಯಾವುದೇ ಮಾಧ್ಯಮದ ಮೂಲಕ ಹಾಸಿಗೆಯನ್ನು ಕೋರಿದರೆ, ಮತ್ತು ಒಮ್ಮೆ ಸಿ ಎಚ್ ಬಿ ಎಂ ಎಸ್ ನಲ್ಲಿ ಪರೀಕ್ಷೆಗೆ ಒಳಪಡಿಸಿದರೆ – ಸಿಸ್ಟಂನಲ್ಲಿರುವ ಪ್ರತಿಯೊಬ್ಬರೂ ಮತ್ತು ರೋಗಿಯು ಅವರ ಕ್ಯೂ ಸ್ಥಾನವನ್ನು ನೋಡಲು ಸಾಧ್ಯವಾಗುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

    ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಬಿಬಿಎಂಪಿ ವಾರ್ ರೂಮ್ ನಿರ್ವಹಣೆಯ ಹೊಣೆಹೊತ್ತಿರುವ ತುಷಾರ್ ಗಿರಿನಾಥ್, ವಿ ಪೊನ್ನುರಾಜ್, ಕುಮಾರ್ ಪುಷ್ಕರ್, ಬಿಸ್ವಜಿತ್ ಸಿಂಗ್, ವಿಶೇಷ ಆಯುಕ್ತ ರಣದೀಪ್ ಹಾಗು ಡಾ. ಭಾಸ್ಕರ್ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

  • ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಿನಲ್ಲಿ ವಂಚನೆ- ಎಫ್‍ಐಆರ್ ದಾಖಲು

    ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಿನಲ್ಲಿ ವಂಚನೆ- ಎಫ್‍ಐಆರ್ ದಾಖಲು

    – ಬೆಡ್, ವೆಂಟಿಲೇಟರ್, ರೆಮ್‍ಡಿಸಿವಿರ್ ಕೊಡಿಸುವುದಾಗಿ ಹಣ ಪಡೆದು ವಂಚನೆ

    ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಜಯನಗರ ಠಾಣಾ ವ್ಯಾಪ್ತಿಯ ಕೆಲ ಆಸ್ಪತ್ರೆ ಬಳಿ ಕೊರೊನಾ ರೋಗಿಗಳ ಪೋಷಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ ಶಿವಲಿಂಗಯ್ಯ, ನಾನು ಸಂಸದ ತೇಜಸ್ವಿ ಸೂರ್ಯ ಪಿಎ ಎಂದು ಹೇಳಿಕೊಳ್ಳುತ್ತಿದ್ದ. ನಂತರ ಕೊರೊನಾ ಸಂಬಂಧಿಸಿದ ಚಿಕಿತ್ಸೆ, ಬೆಡ್ ವ್ಯವಸ್ಥೆ, ವೆಂಟಿಲೇಟರ್, ರೆಮ್‍ಡಿಸಿವಿರ್ ಬೇಕಾದರೆ ನಾನು ಕೊಡಿಸುತ್ತೇನೆ ಎಂದು ಹೇಳಿ ಹಣ ಪಡೆದು ವಂಚನೆ ಮಾಡುತ್ತಿದ್ದ.

    ಇದೇ ರೀತಿ ವ್ಯಕ್ತಿಯೊಬ್ಬರ ಬಳಿ, ಹತ್ತು ಸಾವಿರ ಹಣ ನೀಡಿದರೆ ಐದು ರೆಮ್‍ಡಿಸಿವಿರ್ ಇಂಜೆಕ್ಷನ್ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದ. ಈ ಸಂಬಂಧ ತೇಜಸ್ವಿ ಸೂರ್ಯರ ಕಚೇರಿ ಬಳಿ ತೆರಳಿ ವಿಚಾರಿಸಿದಾಗ ಆ ವ್ಯಕ್ತಿ ನಕಲಿ ಅನ್ನೋದು ಪತ್ತೆಯಾಗಿತ್ತು. ಅವರ ಬಳಿ ಫೋನ್ ನಂಬರ್ ಪಡೆದು ಖುದ್ದು ತೇಜಸ್ವಿ ಸೂರ್ಯ ಪಿಎ ಭಾನುಪ್ರಕಾಶ್ ಫೋನ್ ಮಾಡಿದಾಗ ನಾನೇ ಅವರ ಪಿಎ ಎಂದು ಶಿವಲಿಂಗಯ್ಯ ಪರಿಚಯ ಮಾಡಿಕೊಂಡಿದ್ದ.

    ನಂತರ ಅಸಲಿ ವಿಚಾರ ತಿಳಿದ ಆರೋಪಿ ಶಿವಲಿಂಗಯ್ಯ ಫೋನ್ ಸ್ವೀಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಜಯನಗರ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

  • ತೇಜಸ್ವಿ ಸೂರ್ಯರಿಂದ ಉಚಿತ ಕೋವಿಡ್ ಲಸಿಕಾ ಅಭಿಯಾನ – ಸಾವಿರಕ್ಕೂ ಅಧಿಕ ಆಟೋ ಚಾಲಕರಿಗೆ ಲಸಿಕೆ ಆಯೋಜನೆ

    ತೇಜಸ್ವಿ ಸೂರ್ಯರಿಂದ ಉಚಿತ ಕೋವಿಡ್ ಲಸಿಕಾ ಅಭಿಯಾನ – ಸಾವಿರಕ್ಕೂ ಅಧಿಕ ಆಟೋ ಚಾಲಕರಿಗೆ ಲಸಿಕೆ ಆಯೋಜನೆ

    ಬೆಂಗಳೂರು: 1 ಸಾವಿರಕ್ಕೂ ಅಧಿಕ ಆಟೋ ಚಾಲಕರು ಇಂದು ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯರವರು ಜಯನಗರ & ಬೊಮ್ಮನಹಳ್ಳಿಯಲ್ಲಿ ಆಯೋಜನೆಗೊಳಿಸಿದ್ದ ಒಂದು ದಿನದ ಉಚಿತ ಸಾಮೂಹಿಕ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ಉಚಿತ ಕೋವಿಡ್ ಲಸಿಕೆ ಪಡೆದುಕೊಂಡಿರುತ್ತಾರೆ.

    ಏಕಕಾಲಕ್ಕೆ ಎರಡೂ ಸ್ಥಳಗಳಲ್ಲಿ (ಜಯನಗರದ ಶಾಲಿನಿ ಗ್ರೌಂಡ್ಸ್ & ಬೊಮ್ಮನಹಳ್ಳಿಯ ಆರ್.ಎಂ.ಆರ್ ಪಾಕ್ರ್ನಲ್ಲಿ) ಆಯೋಜಿಸಲಾಗಿದ್ದ ಲಸಿಕಾ ಅಭಿಯಾನದಲ್ಲಿ, 100ಕ್ಕೂ ಅಧಿಕ ಡಂಜೋ, ಜೊಮ್ಯಾಟೋ, ಸ್ವಿಗ್ಗಿ ಕಾರ್ಯಕರ್ತರು, ಓಲಾ & ಉಬರ್ ನ ಟ್ಯಾಕ್ಸಿ ಡ್ರೈವರ್ ಗಳು ಕೋವಿಡ್ ಲಸಿಕೆ ಪಡೆದಿದ್ದು, ಈ ಕಾರ್ಯಕ್ಕೆ ಆಕ್ಷನ್ ಕೋವಿಡ್-19 ಟೀಮ್(ಆಕ್ಟ್), Clinikk, ಯುನೈಟೆಡ್ ವೇ ಮತ್ತು ವರ್ಷನ್ 1 ಸಹಕಾರ ನೀಡಿದ್ದು ಶ್ಲಾಘನೀಯ.

    ಅಭಿಯಾನದ ಕುರಿತು ಮಾತನಾಡಿದ ಸಂಸದ ತೇಜಸ್ವೀ ಸೂರ್ಯ, “ಆಟೋ ಚಾಲಕರು ನಮ್ಮ ಸಮಾಜದ ಅತ್ಯಂತ ಆದ್ಯತಾ ವರ್ಗವಾಗಿದ್ದು, ಗರ್ಭಿಣಿಯೊಬ್ಬರ ಆಸ್ಪತ್ರೆಯ ತುರ್ತು ಭೇಟಿ ಇರಬಹುದು, ಕುಟುಂಬ ವರ್ಗದವರೊಂದಿಗೆ ಎಂ.ಜಿ ರೋಡ್ ಗೆ ವಾರಾಂತ್ಯ ಕಳೆಯಲು ತೆರಳುವುದಿರಬಹುದು, ಶಾಲೆಯಿಂದ ಮನೆಗೆ ಬರುವ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವುದಿರಲಿ ಆಟೋ ಡ್ರೈವರ್ ಗಳು ಮುಂಚೂಣಿಯಲ್ಲಿ ನಿಂತು ಸೇವಾ ಕಾರ್ಯನಿರ್ವಹಿಸುತ್ತಾರೆ. ಎಂತಹ ಸನ್ನಿವೇಶದಲ್ಲೂ ಮುಂಚೂಣಿ ಕಾರ್ಯನಿರ್ವಹಿಸುವ ಆಟೋ ಚಾಲಕರನ್ನು ಆದಷ್ಟು ಶೀಘ್ರ ಲಸಿಕೆಗೆ ಒಳಪಡಿಸುವುದು ನಮ್ಮ ಕರ್ತವ್ಯವಾದ್ದರಿಂದ ಈ ಉಚಿತ ಲಸಿಕಾ ಅಭಿಯಾನವನ್ನು ಆಯೋಜನೆಗೊಳಿಸಲಾಗಿದೆ” ಎಂದು ತಿಳಿಸಿದರು.

    ಲಸಿಕಾ ಅಭಿಯಾನಕ್ಕೆ ಕಂದಾಯ ಸಚಿವರಾದ ಆರ್ ಅಶೋಕ್ ಮತ್ತು ತೇಜಸ್ವೀ ಸೂರ್ಯ ಜಯನಗರದ ಶಾಲಿನಿ ಗ್ರೌಂಡ್ ನಲ್ಲಿ ಚಾಲನೆ ನೀಡಿದ್ದು, ಕೇವಲ 4-5 ಗಂಟೆಗಳಲ್ಲಿಯೇ 1ಸಾವಿರಕ್ಕೂ ಅಧಿಕ ಚಾಲಕರು ಕೋವಿಡ್ ಲಸಿಕೆ ಪಡೆದಿದ್ದು ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ನಡೆದ ದೇಶದ ಲಸಿಕಾ ಅಭಿಯಾನಗಳಲ್ಲೊಂದಾಗಿದೆ. 80ಕ್ಕೂ ಅಧಿಕ ಸ್ವಯಂಸೇವಕರು, ನರ್ಸ್ ಗಳು, ಡಾಕ್ಟರ್ ಗಳು, ಮೇಲ್ವಿಚಾರಕರ ಉಸ್ತುವಾರಿಯಲ್ಲಿ ಅತ್ಯಂತ ಯಶಸ್ವಿಯಾಗಿ ಈ ಅಭಿಯಾನ ನಡೆದಿದ್ದು ವಿಶೇಷ. ಕೋವಿಡ್ ಲಸಿಕೆ ಪಡೆದುಕೊಂಡ ಎಲ್ಲ ಚಾಲಕರಿಗೂ ರೇಷನ್ ಕಿಟ್ ಹಾಗೂ Clinikk ವತಿಯಿಂದ 6 ತಿಂಗಳವರೆಗಿನ ಉಚಿತ ಹೆಲ್ತ್ ಕೇರ್ ಚಂದಾದರಿಕೆ ಕೂಡ ಇದೇ ಸಂದರ್ಭದಲ್ಲಿ ಒದಗಿಸಲಾಗಿದೆ.

    ಇದರೊಂದಿಗೆ ತೇಜಸ್ವೀ ಸೂರ್ಯ ರವರು, ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ನೇರವಾಗಿ ಕೋವಿಡ್ ಸೋಂಕಿತರ/ಕೋವಿಡ್ ಚಿಕಿತ್ಸೆ ಪಡೆದು ಮನೆಯಲ್ಲಿರುವ ರೋಗಿಗಳ ಮನೆಬಾಗಿಲಿಗೆ ತಲುಪಿಸುವ ‘ಎಂಪಿ ಆಕ್ಸಿಬ್ಯಾಂಕ್’ ಅನ್ನು ಸ್ಥಾಪಿಸಿದ್ದು, ಇಡೀ ದೇಶದಲ್ಲಿಯೇ ಇಂತಹ ಪ್ರಯತ್ನ ನಡೆಸಿದ ಏಕೈಕ ಚುನಾಯಿತ ಪ್ರತಿನಿಧಿಗಳಾಗಿದ್ದಾರೆ. ‘ಎಂಪಿ ಆಕ್ಸಿಬ್ಯಾಂಕ್’ ನಲ್ಲಿ 512 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳಿದ್ದು, 85 ರಿಂದ 92 ವರೆಗಿನ ಆಮ್ಲಜನಕ ಪ್ರಮಾಣ ಹೊಂದಿರುವ ಕೋವಿಡ್ ಸೋಂಕಿತರು ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದ್ದು, ಸಹಾಯವಾಣಿ ಸಂಖ್ಯೆ 080 6191 4960 ಗೆ ಕರೆ ಮಾಡುವ ಮೂಲಕ ಈ ಸೇವೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಕಳೆದ 10 ದಿನಗಳಲ್ಲಿ 500ಕ್ಕೂ ಅಧಿಕ ನಾಗರಿಕರು ಈ ಸೇವೆಯನ್ನು ಪಡೆದಿರುತ್ತಾರೆ.ಇದರೊಂದಿಗೆ ಕಂದಾಯ ಸಚಿವ ಆರ್ ಅಶೋಕ್ ರೊಂದಿಗೆ ಸಂಸದರು, ಕುಮಾರಸ್ವಾಮಿ ಲೇಔಟ್ ನಲ್ಲಿ ಟ್ರಯಾಜಿಂಗ್ ಸೆಂಟರ್ ಗೆ ಚಾಲನೆ ನೀಡಿದ್ದು, ಕೋವಿಡ್ ಗುಣಲಕ್ಷಣಗಳನ್ನು ಹೊಂದಿರುವವರು ಆಸ್ಪತ್ರೆ ಬೆಡ್ ಸಿಗುವ ತನಕವೂ ತುರ್ತು ಚಿಕಿತ್ಸೆಗೆ ಇಂತಹ ಟ್ರಯಾಜಿಂಗ್ ಸೆಂಟರ್ ಗಳಲ್ಲ, ಚಿಕಿತ್ಸೆ ಪಡೆಯಬಹುದು ಎಂದು ತೇಜಸ್ವೀ ಸೂರ್ಯ ತಿಳಿಸಿದರು.

  • ಬೆಡ್ ಬ್ಲಾಕಿಂಗ್- ಬಿಜೆಪಿ ಸಂಸದ, ಶಾಸಕನ ವಿರುದ್ಧ ತನಿಖೆ ನಡೆಸುವಂತೆ ದೂರು

    ಬೆಡ್ ಬ್ಲಾಕಿಂಗ್- ಬಿಜೆಪಿ ಸಂಸದ, ಶಾಸಕನ ವಿರುದ್ಧ ತನಿಖೆ ನಡೆಸುವಂತೆ ದೂರು

    ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಯ ಹಿಂದೆ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ ಕೈವಾಡವಿದ್ದು, ಸೂಕ್ತ ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೂರು ನೀಡಲಾಗಿದೆ.

    ಈ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅಪ್ತ ಬಾಬುವನ್ನು ಬಂಧಿಸಿದ್ದಾರೆ. ಬಾಬು ಮೂಲಕ ಸತೀಶ್ ರೆಡ್ಡಿ ಸೇರಿದಂತೆ ಕೆಲ ಬಿಜೆಪಿ ಗರು ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದರು. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಕೂಡ ಬೆಂಬಲ ನೀಡಿದ್ದಾರೆ. ಹಾಗಾಗಿ ಈ ಇಬ್ಬರು ನಾಯಕರನ್ನು ಬಂಧಿಸಿ ಸೂಕ್ತ ತನಿಖೆ ಮಾಡಬೇಕು ಅಂತಾ ದೂರಿನಲ್ಲಿ ತಿಳಿಸಲಾಗಿದೆ.

    ಕೊರೋನಾ ಲಸಿಕೆ ಯನ್ನು ಉಚಿತವಾಗಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಕೊಟ್ಟಿದ್ರು. ಆದ್ರೆ ಸಂಸದ ತೇಜಸ್ವಿ ಸೂರ್ಯ ಕ್ಷೇತ್ರದಲ್ಲೇ ಖಾಸಗಿ ಆಸ್ಪತ್ರೆಗಳು ಲಸಿಕೆ ಯನ್ನು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಖಾಸಗಿ ಆಸ್ಪತ್ರೆ ಮುಂದೆ ಯಾವ್ಯಾವ ಲಸಿಕೆಗೆ ಎಷ್ಟು ಹಣ ಅಂತಾ ಬ್ಯಾನರ್ ಹಾಕಲಾಗಿದೆ, ವಿಪರ್ಯಾಸವೆಂದರೆ ಸಂಸದ ತೇಜಸ್ವಿ ಸೂರ್ಯರವರ ಫೋಟೋ ಕೂಡ ಅದೇ ಬ್ಯಾನರ್‍ಗಳಲ್ಲಿ ಹಾಕಲಾಗಿದೆ. ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಯಲ್ಲೂ ಸಂಸದರ ಕೈವಾಡ ವ್ಯಕ್ತವಾಗಿದೆ. ಹಾಗಾಗಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿಯ ಈ ಇಬ್ಬರು ಪ್ರಭಾವಿ ನಾಯಕರು ಮತ್ತು ಕೆಲ ಕಾರ್ಯಕರ್ತರು ಕೂಡ ಭಾಗಿಯಾಗಿದ್ದು, ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಅಂತಾ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೂರು ನೀಡಲಾಗಿದೆ.

  • ತೇಜಸ್ವಿ ಸೂರ್ಯ ವಿಷ ಬೀಜ – ಡಿಕೆಶಿ ಕಿಡಿ

    ತೇಜಸ್ವಿ ಸೂರ್ಯ ವಿಷ ಬೀಜ – ಡಿಕೆಶಿ ಕಿಡಿ

    ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ವಿಷ ಬೀಜಕ್ಕೆ ಹೋಲಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.

    ಬೆಡ್‍ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ತೇಜಸ್ವಿ ಸೂರ್ಯ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವನ ಬಗ್ಗೆ ಏನು ಹೇಳೋದು? ಅಧಿಕಾರಿ ಕೊಟ್ಟಿದ್ದ ಹೆಸರನ್ನು ಓದಿದ್ದೇನೆ ಎಂದು ಹೇಳಿದ್ದಾರೆ. ಅಧಿಕಾರಿ ಒಂದೇ ಸಮುದಾಯದ ಹೆಸರು ಕೊಡುತ್ತಾರಾ? ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅಧಿಕಾರಿ ಮೇಲೆ ಎತ್ತಿಹಾಕುತ್ತಿದ್ದಾರೆ ಎಂದು ಟೀಕಿಸಿದರು.

    ಬೆಡ್, ಆಕ್ಸಿಜನ್ ಏಲ್ಲಿ ಸಿಗುತ್ತೆ ಅಂತ ಒಂದು ಬೋರ್ಡ್ ಹಾಕಿ. ಬೆಡ್ ಆಕ್ಸಿಜನ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಸಾರ್ವಜನಿಕರಿಗೆ ಲಸಿಕೆ ಏಲ್ಲಿ ಸಿಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ದೂರಿದರು.

    ತಮಿಳುನಾಡಿನಲ್ಲಿ ಎಲ್ಲ ಬಿಪಿಎಲ್ ಕಾರ್ಡ್‍ದಾರರಿಗೆ 4 ಸಾವಿರ ಹಾಕುತ್ತೇವೆ ಎಂದು ಘೋಷಣೆ ಮಾಡುತ್ತಾರೆ. ಏನೋ ಒಂದು ಕೊಡಿ ಎಂದು ಜನ ಕೇಳುತ್ತಿದ್ದಾರೆ. ಕೊಡಲು ಆಗುವುದಿಲ್ಲ ಅಂದರೆ ಆಗುವುದಿಲ್ಲ ಎಂದು ಹೇಳಿಬಿಡಿ. ಸುಮ್ಮನೇ ಏನೇನೂ ಹೇಳಬೇಡಿ ಎಂದು ಟೀಕಿಸಿದರು.

    ರೈತರ ತರಕಾರಿಯನ್ನು ಕೊಳ್ಳುವವರಿಲ್ಲ. ತೋಟಗಾರಿಕಾ ಸಚಿವರು, ಕೃಷಿ ಸಚಿವರು ರೈತರ ಹೊಲಗಳಿಗೆ ಭೇಟಿ ನೀಡಿದ್ದಾರಾ? ಎಪಿಎಂಸಿಗಳಿಗೆ ಭೇಟಿ ನೀಡಿ ರೈತರ ಕಷ್ಟ ಅರಿತುಕೊಳ್ಳಲಿ. ಕಾರ್ಮಿಕರು, ಬೀದಿ ವ್ಯಾಪಾರಿಗಳು, ಬಡವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಬಡವರ ಖಾತೆಗಳಿಗೆ 10 ಸಾವಿರ ಹಣ ಹಾಕಬೇಕು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

    ಕೊರೊನಾ ಮೂರನೇ ಅಲೆ ಎದುರಿಸಲು ತಯಾರಿ ಮಾಡಿಕೊಳ್ಳಿ ಅಂತ ಸಿಎಂ ಹೇಳಿದ್ದಾರೆ. ಮೊದಲು ಸಿಎಂ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಣ ಮಾಡಲಿ. ಬಳಿಕ ಮೂರನೇ ಕೊರೊನಾ ಅಲೆಗೆ ತಯಾರಿ ಮಾಡೋಣ. ಈಗ ಮೊದಲು ಸಾಯುತ್ತಿರುವ ಜನವನ್ನು ಬದುಕಿಸಿ ಎಂದು ಸಲಹೆ ನೀಡಿದರು.

  • ಬೆಡ್ ಬ್ಲಾಕಿಂಗ್ ದಂಧೆಗೆ ಕೋಮು ಬಣ್ಣ ಹಚ್ಚಿಲ್ಲ: ತೇಜಸ್ವಿ ಸೂರ್ಯ

    ಬೆಡ್ ಬ್ಲಾಕಿಂಗ್ ದಂಧೆಗೆ ಕೋಮು ಬಣ್ಣ ಹಚ್ಚಿಲ್ಲ: ತೇಜಸ್ವಿ ಸೂರ್ಯ

    ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಗೆ ಕೋಮು ಬಣ್ಣ ಹಚ್ಚಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

    ಬೆಡ್ ಬ್ಲಾಕಿಂಗ್ ದಂಧೆ ಬಯಲಾದ ಪರಿಣಾಮ ಕೇವಲ ನಾಲ್ಕೇ ದಿನದಲ್ಲಿ ಬೆಡ್ ನಿಗದಿ ಅವ್ಯವಹಾರಕ್ಕೆ ಬ್ರೇಕ್ ಹಾಕುವ ತಂತ್ರಾಂಶವನ್ನು ಬಿಬಿಎಂಪಿ ಕೋವಿಡ್ ವಾರ್ ರೂಂಗಳಲ್ಲಿ ಅಳವಡಿಸಲಾಗಿದೆ. ಹಿಂದೆ ಯಾರು, ಯಾರಿಗೆ, ಯಾವ ಕಂಪ್ಯೂಟರ್ ನಲ್ಲಿ ಬೆಡ್ ಬುಕ್ ಮಾಡ್ತಿದ್ರು ಅನ್ನೋದಕ್ಕೆ ದಾಖಲೆ ಇರುತ್ತಿರಲಿಲ್ಲ. ಆದ್ರೆ, ಇದೀಗ ಬೆಡ್ ಬುಕ್ ಮಾಡುವವರ ಹೆಸರು ತೋರಿಸುವ ವ್ಯವಸ್ಥೆ ಬಂದಿದೆ. ಇದು ಅಕ್ರಮ ತಡೆಗೆ ಸಹಕಾರಿಯಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ರು.

    ಈಗ ಬೆಡ್ ಬುಕ್ ಆದ ರೋಗಿಯ ಮೊಬೈಲಿಗೆ ಎಸ್‍ಎಂಎಸ್ ಹೋಗುತ್ತೆ. ಅದರಲ್ಲಿ ರೋಗಿ ಹೆಸರು, ಬೆಡ್ ಇರೋ ಆಸ್ಪತ್ತೆ ವಿವರ ಇರುತ್ತೆ. ಈ ಎಸ್‍ಎಂಎಸ್ ತೋರಿಸಿದ್ರೆ ಸಾಕು ಆಸ್ಪತ್ರೆಯವರು ಬೆಡ್ ಕೊಡ್ತಾರೆ ಎಂದು ತೇಜಸ್ವಿ sಸೂರ್ಯ ವಿವರ ನೀಡಿದರು. ಈ ಮಹತ್ತರ ಬದಲಾವಣೆಗೆ ಸಾಫ್ಟ್‍ವೇರ್ ದಿಗ್ಗಜ ನಂದನ್ ನಿಲೇಕಣಿ, ಬಿಬಿಎಂಪಿ ಹಿರಿಯ ಅಧಿಕಾರಿಗಳು ಕಾರಣ. ಇನ್ನೂ ಹಲವು ಬದಲಾವಣೆ ಆಗಲಿವೆ. ಕೆಲವೇ ದಿನಗಳಲ್ಲಿ ಬೆಡ್ ಪಡೆಯಲು ಕ್ಯೂ ವ್ಯವಸ್ಥೆ ಬರಲಿದೆ ಅಂತಾ ತೇಜಸ್ವಿ ಸೂರ್ಯ ಹೇಳಿದರು.

    ಇದೇ ವೇಳೆ, ನಾವು ಯಾರನ್ನೂ ಟಾರ್ಗೆಟ್ ಮಾಡಿರ್ಲಿಲ್ಲ ಎಂದು ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದರು. ನಾವು ಕೋವಿಡ್ ವಾರ್ ರೂಂಗೆ ತೆರಳುವ ಮೊದಲೇ ಆ 17 ಜನರನ್ನ ಕೆಲಸದಿಂದ ತೆಗೆಯಲಾಗಿತ್ತು. ಅವರ ವಿಚಾರಣೆಯನ್ನು ಸಿಸಿಬಿ ನಡೆಸಿಯೇ ಇಲ್ಲ. ಅವರಿಗೆ ಕ್ಲೀನ್ ಚಿಟ್ ಅಂದ್ರೆ ಹೇಗೆ? ಇದು ಕಾಂಗ್ರೆಸ್‍ನ ಸುಳ್ಳು ಅಲ್ಲವೇ ಎಂದು ತೇಜಸ್ವಿ ಪ್ರಶ್ನಿಸಿದ್ರು. ನನ್ನನ್ನು ಕಸಬ್‍ಗೆ ಹೋಲಿಸಿ ತೇಜೋವಧೆ ಮಾಡಿದ್ರು. ಆದ್ರೆ ನಾನು ಇದಕ್ಕೆ ಕೋಮುಬಣ್ಣ ಹಚ್ಚಿಲ್ಲ. ವಾರ್ ರೂಂಗೆ ಹೋಗಿ ಕ್ಷಮೆಯೂ ಕೇಳಿಲ್ಲ. ಕೇಳಲ್ಲ ಕೂಡ ಅಂತಾ ತೇಜಸ್ವಿ ಸೂರ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದರು.

    ಬೆಡ್ ಬ್ಲಾಕಿಂಗ್‍ನಲ್ಲಿ ಶಾಸಕ ಸತೀಶ್ ರೆಡ್ಡಿ ಹೆಸರು ಕೇಳಿ ಬರುತ್ತಿರೋ ಬಗ್ಗೆ ಸ್ಪಷ್ಟಪಡಿಸಿದ ತೇಜಸ್ವಿ ಸೂರ್ಯ, ಕ್ಷೇತ್ರದ ಜನರ ಪರವಾಗಿ ಬೆಡ್ ಕೇಳೋದು ತಪ್ಪಾ? ಸಿಸಿಬಿ ತನಿಖೆ ನಡೆಸುತ್ತಿದೆ. ಸತ್ಯಾಂಶ ಬಯಲಾಗಲಿದೆ ಎಂದರು.

  • ಸಂಸದ ತೇಜಸ್ವಿ ವಿರುದ್ಧ ಕಂಪ್ಲೆಂಟ್ – ತನಿಖೆಗೆ ಆಗ್ರಹಿಸಿ ಕಾಂಗ್ರೆಸ್‍ನಿಂದಲೂ ದೂರು

    ಸಂಸದ ತೇಜಸ್ವಿ ವಿರುದ್ಧ ಕಂಪ್ಲೆಂಟ್ – ತನಿಖೆಗೆ ಆಗ್ರಹಿಸಿ ಕಾಂಗ್ರೆಸ್‍ನಿಂದಲೂ ದೂರು

    ಬೆಂಗಳೂರು: ಸೌತ್ ಝೋನ್‍ನಲ್ಲಿ ಬೆಡ್‍ಬ್ಲಾಕ್ ದಂಧೆ ಪ್ರಕರಣದಲ್ಲಿ ಕೋಮು ವೈಷಮ್ಯ ಬಿತ್ತುವ ಯತ್ನ ಆರೋಪ ಕೇಳಿ ಬಂದಿದೆ.

    ಐಎಎಸ್ ಅಧಿಕಾರಿ ಮೇಲಿನ ದೌರ್ಜನ್ಯ, ಬೆಡ್‍ಗಳ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಿದ ತೇಜಸ್ವಿ ಸೂರ್ಯ ಹಾಗೂ ಸತೀಶ್ ರೆಡ್ಡಿ ವಿರುದ್ಧ ಪೊಲೀಸ್ ಆಯುಕ್ತರು, ಬಿಬಿಎಂಪಿ ಚೀಪ್ ಗೌರವ್ ಗುಪ್ತಾಗೆ ಕಾಂಗ್ರೆಸ್ ನಿಯೋಗ ದೂರು ಕೊಟ್ಟಿದೆ.

    ಇನ್ನೊಂದೆಡೆ ತೇಜಸ್ವಿ ಸೂರ್ಯ ವಿರುದ್ಧ ಎಫ್‍ಐಆರ್‍ಗೆ ಕೋರಿ ಜೆಡಿಎಸ್ ಸ್ಟೇಟ್ ಕಮಿಟಿ ಅಬ್ಸರ್ವರ್ ನಜ್ಮಾ ಜನೀರ್ ಬಾನು ಅವರು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್‍ಗೆ ದೂರು ನೀಡಿದ್ದಾರೆ. ಅಲ್ಲದೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ವಿರುದ್ಧ ದೂರು ನೀಡಿದ್ದಾರೆ.

    ಬೆಡ್ ಬ್ಲಾಕ್ ದಂಧೆ ಬಯಲಿಗೆಳೆದ ತೇಜಸ್ವಿ ಸೂರ್ಯಗೆ ಶಾಸಕ ರೇಣುಕಾಚಾರ್ಯ, ಎಂಎಲ್‍ಸಿ ವಿಶ್ವನಾಥ್ ಬೆಂಬಲ ನೀಡಿದ್ದಾರೆ. ಈ ಮಧ್ಯೆ ತಮ್ಮನ್ನು ಹೀಗಳೆದ ಜಮೀರ್ ಮತ್ತು ಡಿಕೆಶಿ ವಿರುದ್ಧ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಡ್ ಬ್ಲಾಕ್ – 17 ಮಂದಿಯನ್ನು ತೆಗೆದು ಹಾಕಿದ್ದು ಯಾಕೆ? ಹೊಸ ಬದಲಾವಣೆ ಏನು? ಗೌರವ್ ಗುಪ್ತಾ ಹೇಳೋದು ಏನು?

  • ಈಶ್ವರಪ್ಪನವರೇ ಮುಸಲ್ಮಾನ್ ಮುಸಲ್ಮಾನ್ ಅಂತ ಸಾಯಬೇಡಿ: ಜಮೀರ್ ಅಹ್ಮದ್ ಕಿಡಿ

    ಈಶ್ವರಪ್ಪನವರೇ ಮುಸಲ್ಮಾನ್ ಮುಸಲ್ಮಾನ್ ಅಂತ ಸಾಯಬೇಡಿ: ಜಮೀರ್ ಅಹ್ಮದ್ ಕಿಡಿ

    – ತೇಜಸ್ವಿ ಸೂರ್ಯ ಬರೀ ಮುಸಲ್ಮಾನರು ಕಾಣೋದಾ ನಿಮ್ಮ ಕಣ್ಣಿಗೆ?

    ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪನವರೇ ಮುಸಲ್ಮಾನ್, ಮುಸಲ್ಮಾನ್ ಅಂತ ಸಾಯಬೇಡಿ. ಸಂಸದ ತೇಜಸ್ವಿ ಸೂರ್ಯ ಅವರೇ ನಿಮ್ಮ ಕಣ್ಣಿಗೆ ಕೇವಲ ಮುಸಲ್ಮಾನರು ಕಾಣಿಸ್ತಾರಾ ಎಂದು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮುಸಲ್ಮಾನರೇ ಕಾಣೋದಾ ನಿಮ್ಮ ಕಣ್ಣಿಗೆ?:
    ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದ 17 ಮುಸ್ಲಿಂ ಯುವಕರನ್ನ ಜೊತೆಗೆ ಕರೆದುಕೊಂಡು ಶಾಸಕ ಜಮೀರ್ ಅಹ್ಮದ್ ಸುದ್ದಿಗೋಷ್ಠಿ ನಡೆಸಿದರು. ಮಾನ್ಯ ಗ್ರೇಟ್ ಎಂಪಿಯವರು ಒಳ್ಳೆ ಕೆಲಸ ಮಾಡಿದ್ದೀರಿ. ಕಾಂಗ್ರೆಸ್ ಸರ್ಕಾರ ಇದೆ ಅದರ ವಿರುದ್ಧ ಆರೋಪ ಮಾಡಿದ್ದೀನಿ ಅನ್ನೋ ರೀತಿ ನಿಮ್ಮದೇ ಸರ್ಕಾರದ ವಿರುದ್ಧ ಕೆಲಸ ಮಾಡಿದ್ದೀರಿ. ನಿಮ್ಮ ಸಿಎಂ, ಬಿಜೆಪಿ ಸರ್ಕಾರ ಇರೋದು ಯಾಕೆ ರಾಜೀನಾಮೆ ಕೇಳಿಲ್ಲ. ಕೇವಲ ಮುಸಲ್ಮಾನರೇ ಕಾಣೋದಾ ನಿಮ್ಮ ಕಣ್ಣಿಗೆ? ಕ್ರಿಸ್ಟಲ್ ಅನ್ನೋ ಕಂಪನಿ 205 ಜನರನ್ನ ನೇಮಕ ಮಾಡಿದೆ. ಅದರಲ್ಲಿ ಮಹಮ್ಮದ್ ಜಯಿದ್ ಅನ್ನೋ ಒಬ್ಬ ಮಾತ್ರ ಬೆಡ್ ಹಂಚಿಕೆಯಲ್ಲಿರೋದು. ಉಳಿದವರು ಹೆಲ್ಪ್ ಲೈನ್ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

    ಶವ ಸಂಸ್ಕಾರ ಮಾಡಿದ್ದು ನಾವು:
    2020ರಲ್ಲೂ 500ಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿದ್ದು ನಾವು. ಈಗಲು ಮಾಡುತ್ತಿದ್ದೇವೆ. ನೀವು ಈ ರೀತಿ ಚೀಫ್ ರಾಜಕೀಯ ಮಾಡೋದು ಬೇಡ. ಸತೀಶ್ ರೆಡ್ಡಿ ಅವರೇ ಮದರಸ ಮಾಡೋಕೆ ಹೊರಟಿದ್ದಾರೆ ಅಂತಾರೆ. ತಿಳಿದು ಮಾತಾಡಿ 205ರಲ್ಲಿ 16 ಜನ ಮಾತ್ರ ಮುಸಲ್ಮಾನರು. ಪಂಚರ್ ಹಾಕೋರು ನಾವು. ಅನ್ ಎಜ್ಯುಕೆಟೆಡ್ ಹೌದು ಸ್ವಾಮಿ ಆದರೆ ನಿಮ್ಮ ಕಾರು ಪಂಚರ್ ಆದರು ನಮ್ಮ ಹತ್ರನೆ ಬರಬೇಕು ಎಂದು ವ್ಯಂಗ್ಯ ಮಾಡಿದರು.

    ಹುಷಾರ್ ಎಷ್ಟು ಅಂತ ಸಹಿಸಿಕೊಳ್ಳಬೇಕು:
    ಮುಸಲ್ಮಾನರು ಈ ದೇಶದ ಸ್ವಾತಂತ್ರಕ್ಕೆ ಹೋರಾಡಿದ್ದಾರೆ. ಇಂಡಿಯ ಗೇಟಲ್ಲಿ ಹೆಸರಿದೆ ಹೋಗಿ ನೋಡಿ. ಇಸ್ಲಾಂ ಧರ್ಮದಲ್ಲಿ ಜಾತಿ ಅಂತ ಇಲ್ಲಾ. 400 ಜನ ಹಿಂದೂಗಳು ಇದ್ದರೆ ನಾವು ಹೋಗಿ ವಾಸ ಮಾಡೋ ಹಾಗಿಲ್ಲ. ನಾವು ನಾನ್ ವೆಜ್ ತಿಂತಿವಿ ಅಂತ ಪರ್ಮಿಷನ್ ತಗೊಂಡು ವಾಸ ಮಾಡಬೇಕು. ಇನ್ನೊಮ್ಮೆ ಜಾತಿ ಮಾಡಿದರೆ ಹುಷಾರ್ ಎಷ್ಟು ಅಂತ ಸಹಿಸಿಕೊಳ್ಳಬೇಕು ಎಂದು ಸಂಸದ ತೇಜಸ್ವಿ ಸೂರ್ಯಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸಚಿವರು, ಶಾಸಕರು, ಸಂಸದರೆಲ್ಲರೂ ಯಾವ ಧರ್ಮದವರು? – ತೇಜಸ್ವಿ ಸೂರ್ಯ ವಿರುದ್ಧ ಸಿದ್ದರಾಮಯ್ಯ ಕಿಡಿ

    ಮುಸ್ಲಿಂ ದೇಶದ ಆಕ್ಸಿಜನ್ ಬೇಡ ಅನ್ನಬೇಕಿತ್ತು:
    ಕತಾರ್, ಸೌದಿ ಅರೆಬಿಯಾದಿಂದ ಆಕ್ಸಿಜನ್ ಬಂದಿದೆ. ಬರಿ ಮುಸ್ಲಿಮರಿಗೆ ಹಾಕಿ ಅಂತ ಹೇಳಿ ಕಳುಹಿಸಿದ್ದಾರಾ? ಮುಸ್ಲಿಂ ದೇಶದ ಆಕ್ಸಿಜನ್ ಬೇಡ ಅನ್ನಬೇಕಿತ್ತು. ನಾಚಿಕೆ ಆಗಬೇಕು ನಿಮಗೆ. ನಾನು ಮುಸ್ಲಿಂ ಇರಬಹುದು, ನಾನು ಹಿಂದುಸ್ಥಾನಿ. ಮೊದಲು ಆಮೇಲೆ ಕನ್ನಡಿಗ ಆಮೇಲೆ ನಾನೊಬ್ಬ ಮುಸ್ಲಿಂ ಎಂದು ಎದೆ ತಟ್ಟಿಕೊಂಡರು. ಯಾವನೇ ಆಗಲಿ ತಪ್ಪು ಮಾಡಿದ್ದರೆ ಗಲ್ಲು ಶಿಕ್ಷೆ ಆಗಬೇಕು. ನಿಮ್ಮ ವೈಫಲ್ಯತೆ ಮುಚ್ಚೋಕೆ ಹೀಗೆ ಆರೋಪ ಮಾಡಿದ್ದಾರೆ. ಚಾಮರಾಜನಗರದ ದುರಂತವನ್ನ ಮರೆಮಾಚಲು ಈ ವಿಷಯ ತಂದಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬೆಡ್ ಬ್ಲಾಕ್ – 17 ಮಂದಿಯನ್ನು ತೆಗೆದು ಹಾಕಿದ್ದು ಯಾಕೆ? ಹೊಸ ಬದಲಾವಣೆ ಏನು? ಗೌರವ್ ಗುಪ್ತಾ ಹೇಳೋದು ಏನು?

    ಇವರಲ್ಲಿ ಎಷ್ಟು ವಿಷ ಇರಬೇಕು:
    16 ಜನರಿಗೆ ನೋಟಿಸ್ ಕೊಟ್ಟಿದ್ದಾರೆ. ನಿಮಗೆ ಕೆಲಸದಿಂದ ತಗೆದರೆ ನಾನು 15 ಸಾವಿರ ಸಂಬಳ ಕೊಡ್ತಿನಿ. 5 ತಿಂಗಳು ಕೆಲಸ ಕೊಡುವೆ. ನನ್ನ ಜೊತೆ 5 ತಿಂಗಳು ಹಿಂದು ಮುಸ್ಲಿಂ ನೋಡದೆ ಎಲ್ಲರ ಸೇವೆ ಮಾಡಿ ಎಂದು ಧೈರ್ಯ ತುಂಬಿದರು. 205 ಜನರಲ್ಲಿ 16 ಜನರ ಪಟ್ಟಿ ಮಾಡಬೇಕಾದರೆ ಇವರಲ್ಲಿ ಎಷ್ಟು ವಿಷ ಇರಬೇಕು. ಸೋಶಿಯಲ್ ಮೀಡಿಯದಲ್ಲಿ ಹೆಣ್ಣು ಮಕ್ಕಳು ಬೈಯುತ್ತಿದ್ದಾರೆ. ಬಾಯಲ್ಲಿ ಲಡ್ಡು ಇಟ್ಟುಕೊಂಡಿದ್ದಿರಾ? ಸಂಸತ್ ನಲ್ಲಿ ಆಕ್ಸಿಜನ್ ಬಗ್ಗೆ ಒಂದು ದಿನವಾದರು ಬಾಯಿ ಬಿಟ್ಟರಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ದಂಧೆಯ ಅತೀ ದೊಡ್ಡ ಜಾಲ – ಇಬ್ಬರು ವೈದ್ಯರು ಸೇರಿ 17 ಮಂದಿ ಅರೆಸ್ಟ್

    ಇದೆನಾ ಅಚ್ಛೇ ದಿನ್:
    ಈಶ್ವರಪ್ಪ ಸೀನಿಯರ್ ಲೀಡರ್ ನೋಡಿ ಮಾತಾಡಿ. ಸುಮ್ಮನೆ ಮುಸಲ್ಮಾನ್ ಮುಸಲ್ಮಾನ್ ಅಂತ ಸಾಯಬೇಡಿ. ಮುಸಲ್ಮಾನರ ಹೆಸರು ಹೇಳಿದರೆ ಹಿಂದೂಗಳು ಒಟ್ಟಾಗಿ ವೋಟು ಕೊಡ್ತಾರೆ ಅನ್ನೋದು ಬಿಜೆಪಿ ಲೆಕ್ಕಾಚಾರ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. ಇದೆನಾ ಸಬ್ ಕಾ ಸಾಥ್ 16 ಜನರ ಹೆಸರು ಹೇಳೋದು. ಪ್ರಧಾನಿಗಳು ಅಚ್ಛೇ ದಿನ್ ಆಯೇಗಾ ಅಂದ್ರು. ಇದೆನಾ ಅಚ್ಛೇ ದಿನ್, ನಮಗೆ ಅಚ್ಛೆ ದಿನ್ ಬೇಡ. ನಮಗೆ ನಮ್ಮ ಹಳೆ ದಿನವೇ ಸಾಕು ಎಂದು ಹಲ್ಲು ಕಡಿದರು. ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ದಂಧೆಯನ್ನು ಮುಸ್ಲಿಂ ಸಂಘಟನೆಯೇ ಮಾಡಿರುವ ಅನುಮಾನವಿದೆ: ಈಶ್ವರಪ್ಪ

  • ಬೆಡ್ ಬ್ಲಾಕಿಂಗ್ ದಂಧೆಯ ಅತೀ ದೊಡ್ಡ ಜಾಲ – ಇಬ್ಬರು ವೈದ್ಯರು ಸೇರಿ 17 ಮಂದಿ ಅರೆಸ್ಟ್

    ಬೆಡ್ ಬ್ಲಾಕಿಂಗ್ ದಂಧೆಯ ಅತೀ ದೊಡ್ಡ ಜಾಲ – ಇಬ್ಬರು ವೈದ್ಯರು ಸೇರಿ 17 ಮಂದಿ ಅರೆಸ್ಟ್

    – ನಾಲ್ಕು ವಾರ್ ರೂಂಗಳ ಮೇಲೆ ಸಿಸಿಬಿ ರೇಡ್

    ಬೆಂಗಳೂರು: ಸಿಲಿಕಾನ್ ಸಿಟಿ ವ್ಯಾಪ್ತಿಯಲ್ಲಿ ನಡೆದಿದ್ದ ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆ ಕುರಿತು ಪಬ್ಲಿಕ್ ಟಿವಿ ಬಿತ್ತರಿಸಿದ ಸುದ್ದಿ ಅಲ್ಲೋಲಕಲ್ಲೋಲ ಉಂಟು ಮಾಡಿತ್ತು.

    ಸಂಸದ ತೇಜಸ್ವಿ ಸೂರ್ಯ ಭೇಟಿ ಬಳಿಕ ಮಾತನಾಡಿದ್ದ ಮುಖ್ಯಮಂತ್ರಿ ಸೂಕ್ತ ತನಿಖೆಯ ಭರವಸೆ ನೀಡಿದ್ರು. ಅಲ್ಲದೇ ಪ್ರಕರಣವನ್ನು ಕಳೆದ ರಾತ್ರಿಯೇ ಸಿಸಿಬಿಗೆ ಕೂಡ ವರ್ಗಾಯಿಸಿದ್ರು. ಈ ಬೆನ್ನಲ್ಲೇ ತನಿಖೆ ಶುರು ಮಾಡಿದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಜಯನಗರ ಠಾಣೆಗೆ ಭೇಟಿ ಕೊಟ್ಟು, ಆರೋಪಿಗಳಾದ ರೋಹಿತ್, ನೇತ್ರಾ ವಿಚಾರಣೆ ನಡೆಸಿದ್ರು. ಇದನ್ನೂ ಓದಿ: ಬೆಡ್ ಬ್ಲಾಕ್ – 17 ಮಂದಿಯನ್ನು ತೆಗೆದು ಹಾಕಿದ್ದು ಯಾಕೆ? ಹೊಸ ಬದಲಾವಣೆ ಏನು? ಗೌರವ್ ಗುಪ್ತಾ ಹೇಳೋದು ಏನು?

    ಇವರು ನೀಡಿದ ಮಾಹಿತಿ ಮೇರೆಗೆ ರಾತ್ರೋರಾತ್ರಿ ಕಾರ್ಯಚರಣೆ ನಡೆಸಿದ ಸಿಸಿಬಿ ಪೊಲೀಸರು 17 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕೋವಿಡ್ ವಾರ್ ರೂಂ ಉಸ್ತುವಾರಿ ವಹಿಸಿದ್ದ ಡಾ. ರೆಹಾನ್, ಬಿಬಿಎಂಪಿಯ ಇಬ್ಬರು ವೈದ್ಯರು, ಡಾಟಾ ಎಂಟ್ರಿ ಆಪರೇಟರ್‍ಗಳು, ನೋಡಲ್ ಆಫೀಸರ್‍ಗಳು, ಕೆಲವು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳ ಪಿಆರ್‍ಓಗಳು, ಸಣ್ಣ ಪುಟ್ಟ ಆಸ್ಪತ್ರೆಗಳ ವೈದ್ಯರು ಕೂಡ ಸೇರಿದ್ದಾರೆ. ಇದನ್ನೂ ಓದಿ: ಬೆಡ್ ಬ್ಲಾಕ್ ದಂಧೆ – ಖಾಸಗಿ ಆಸ್ಪತ್ರೆಗಳ ಪಿಆರ್‍ಓಗಳು, ಸಣ್ಣ ಆಸ್ಪತ್ರೆಗಳ ವೈದ್ಯರು ನೇರ ಭಾಗಿ

    ಇನ್ನೂ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಂಭವ ಇದೆ. ಸಂಜೆ ದಕ್ಷಿಣ ವಲಯ ಕೋವಿಡ್ ವಾರ್ ರೂಂ ಸೇರಿದಂತೆ ನಾಲ್ಕು ವಾರ್ ರೂಂಗಳ ಮೇಲೆ ಸಿಸಿಬಿ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಹಲವು ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಯಾವುದೇ ಕಾರಣಕ್ಕೂ ಈ ಅಕ್ರಮ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಸಿಸಿಬಿ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಡ್ ಬ್ಲಾಕ್ ದಂಧೆ – ಕೈ ನಾಯಕರ ಜೊತೆ ಆರೋಪಿ ಇರುವ ಫೋಟೋ ವೈರಲ್