Tag: Tejas Rail

  • ಖಾಸಗೀಕರಣಗೊಳ್ಳಲಿದೆ ದೇಶದ ಮೊದಲ ಐಶಾರಾಮಿ ರೈಲು

    ಖಾಸಗೀಕರಣಗೊಳ್ಳಲಿದೆ ದೇಶದ ಮೊದಲ ಐಶಾರಾಮಿ ರೈಲು

    ನವದೆಹಲಿ: ದೆಹಲಿ-ಲಕ್ನೋ ನಡುವೆ ಸಂಚರಿಸುವ ತೇಜಸ್ ಎಕ್ಸ್‍ಪ್ರೆಸ್ ರೈಲು ನಿರ್ವಹಣೆಯ ಹೊಣೆಯನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ತೇಜಸ್ ಎಕ್ಸ್‍ಪ್ರೆಸ್ ಖಾಸಗಿಯವರಿಂದ ನಿರ್ವಹಣೆಯಾಗಲಿರುವ ದೇಶದ ಮೊದಲ ರೈಲು ಎನಿಸಿಕೊಳ್ಳಲಿದೆ.

    ತೇಜಸ್ ಮಾತ್ರವಲ್ಲದೆ, 500 ಕಿ.ಮೀ. ಯೊಳಗಿನ ಇನ್ನೊಂದು ರೈಲ್ವೆ ಮಾರ್ಗವನ್ನು ಸಹ ಖಾಸಗಿಯವರಿಗೆ ವಹಿಸಲು ರೈಲ್ವೆ ಇಲಾಖೆ ಉದ್ದೇಶಿಸಿದೆ. ಈ ಎರಡು ರೈಲುಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವ 100 ದಿನಗಳ ಕಾರ್ಯಸೂಚಿಯನ್ನು ಸರ್ಕಾರ ಹಾಕಿಕೊಂಡಿದೆ. ರೈಲ್ವೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸುತ್ತಿದೆ ಎಂಬ ವಿಪಕ್ಷಗಳ ಆರೋಪಗಳ ನಡುವೆಯೂ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ದೆಹಲಿ – ಲಕ್ನೋ ತೇಜಸ್ ಎಕ್ಸ್‍ಪ್ರೆಸ್ ರೈಲನ್ನು 2016ರಲ್ಲಿ ಘೋಷಿಸಲಾಗಿತ್ತು. ಇತ್ತೀಚೆಗಷ್ಟೇ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸದ್ಯ ಆನಂದ್‍ನಗರ್ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತಿದ್ದು, ರೈಲಿನ ಕಾರ್ಯನಿರ್ವಹಣೆಗೆ ಖಾಸಗಿಯವರಿಂದ ಶೀಘ್ರದಲ್ಲೇ ಬಿಡ್ಡಿಂಗ್ ಆಹ್ವಾನಿಸಲಾಗುತ್ತದೆ. ಇದಕ್ಕೂ ಮುನ್ನ ರೈಲಿನ ಸುಪರ್ದಿಯನ್ನು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‍ಸಿಟಿಸಿ) ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಲಿದೆ. ಜು.10ರ ಒಳಗಾಗಿ ಹಣಕಾಸು ಪ್ರಸ್ತಾವನೆ ಸಲ್ಲಿಸುವಂತೆ ಐಆರ್‍ಸಿಟಿಸಿಗೆ ಸೂಚಿಸಲಾಗಿದೆ. ದೆಹಲಿ- ಲಕ್ನೋ ಮಾರ್ಗದಲ್ಲಿ ಸದ್ಯ 53 ರೈಲುಗಳು ಸಂಚರಿಸುತ್ತಿವೆ. ಆದರೆ, ರಾಜಧಾನಿ ಎಕ್ಸ್‍ಪ್ರೆಸ್ ರೈಲು ಸಂಚರಿಸುತ್ತಿಲ್ಲ. ಸ್ವರ್ಣ ಶತಾಬ್ದಿ ಎಕ್ಸ್‍ಪ್ರೆಸ್ ಬಹುಬೇಡಿಕೆಯ ರೈಲಾಗಿದೆ.

    ಈ ಕುರಿತು ರೈಲ್ವೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಈ ಎರಡು ರೈಲುಗಳನ್ನು ಪ್ರಾಯೋಗಿಕವಾಗಿ ಕೇವಲ 100 ದಿನಗಳ ಕಾಲ ಖಾಸಗಿಯವರ ನಿರ್ವಹಣೆಗೆ ವಹಿಸಲಾಗುತ್ತಿದೆ. ಹೆಚ್ಚು ದಟ್ಟಣೆ ಇರುವ ಮಾರ್ಗಗಳು ಹಾಗೂ ಪ್ರವಾಸೋದ್ಯಮ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳನ್ನು ಗುರುತಿಸುತ್ತಿದ್ದೇವೆ. ಶೀಘ್ರದಲ್ಲೇ ಎರಡನೇ ಮಾರ್ಗವನ್ನು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.

    ಭೂಮಿಯ ಮೇಲೆ ಚಲಿಸುವ ವಿಮಾನ ಎಂದೇ ಈ ರೈಲನ್ನು ಭಾರತೀಯ ರೈಲ್ವೇ ಬಣ್ಣಿಸಿದೆ. ಜರ್ಮನ್ ಕೋಚ್ ಹೊಂದಿರುವ ತೇಜಸ್ ರೈಲಿನ ಪ್ರತಿ ಸೀಟ್‍ನಲ್ಲಿ ಎಲ್‍ಇಡಿ ಸ್ಕ್ರೀನ್, ಕಾಫಿ ಮತ್ತು ಟೀ ಪೂರೈಕೆ ಯಂತ್ರ, ವೈಫೈ ಸಂಪರ್ಕವಿದೆ.

    ಈ ರೈಲು 13 ಬೋಗಿಗಳನ್ನು ಒಳಗೊಂಡಿದೆ. 56 ಸೀಟಿನ ಸಾಮಥ್ರ್ಯ ಇರುವ ಒಂದು ಎಕ್ಸ್ ಕ್ಯೂಟಿವ್ ಬೋಗಿ, ಮಾತ್ರಲ್ಲದೆ ಎಲ್ಲ ಬೋಗಿಗಳಿಗೆ ಸ್ವಯಂಚಾಲಿತ ಬಾಗಿಲುಗಳು ಇವೆ.

    ಸಿಸಿಟಿವಿ ಕ್ಯಾಮೆರಾ, ಬೆಂಕಿ ನಿರೋಧಕ ಮತ್ತು ಹೊಗೆ ಪತ್ತೆ ಹಚ್ಚುವ ವ್ಯವಸ್ಥೆ, ಅಲ್ಲದೆ, ಕೋಚ್‍ನಲ್ಲಿ ಗ್ರಾಫಿಟಿ ಪೇಂಟ್ ಬಳಸಲಾಗಿದೆ. ಇದರಿಂದಾಗಿ ಕೋಚ್ ಸ್ವಚ್ಛವಾಗಿರಲಿದೆ. ವಿಮಾನದ ಟಿಕೆಟ್ ದರಕ್ಕಿಂತ ತೇಜಸ್ ರೈಲಿನ ದರ ಅಗ್ಗವಾಗಿದ್ದು, ಶತಾಬ್ದಿ ಎಕ್ಸ್‍ಪ್ರೆಸ್ ರೈಲಿಗಿಂತ ಶೇ.20 ರಷ್ಟು ಅಧಿಕವಾಗಿದೆ.

    ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮಥ್ರ್ಯವನ್ನು ರೈಲು ಹೊಂದಿದ್ದು, ಪ್ರತಿಯೊಂದು ಕೋಚ್ ತಯಾರಿಕೆಗೆ 3.25 ಕೋಟಿ ರೂ. ಖರ್ಚಾಗಿದೆ. ಚರ್ಮದ ಸೀಟ್‍ಗಳು, ಎಲ್‍ಸಿಡಿ ಸ್ಕ್ರೀನ್ ಗಳು ಮತ್ತು ಕೂಡಲೇ ಯಾರನ್ನಾದರೂ ಕರೆಯಲು ಕಾಲ್ ಬಟನ್ ವಿಶೇಷ ಸೌಲಭ್ಯವನ್ನು ಹೊಂದಿದೆ.

  • ಭೂಮಿಯ ಮೇಲೆ ಚಲಿಸುವ ವಿಮಾನದ ವಿಶೇಷತೆ ಏನು? ಇಲ್ಲಿದೆ ಪೂರ್ಣ ಮಾಹಿತಿ

    ಭೂಮಿಯ ಮೇಲೆ ಚಲಿಸುವ ವಿಮಾನದ ವಿಶೇಷತೆ ಏನು? ಇಲ್ಲಿದೆ ಪೂರ್ಣ ಮಾಹಿತಿ

    ಮುಂಬೈ: ವಿಮಾನದಲ್ಲಿ ಪ್ರತಿ ಸೀಟಿನಲ್ಲಿ ಟಿವಿ, ವೈಫೈ, ಕಾಫಿ- ಟೀ ಪೊರೈಕೆ ಯಂತ್ರಗಳನ್ನು ನೋಡಿರುತ್ತಿರಿ. ಆದರೆ ಇನ್ನು ಮುಂದೆ ನೀವು ವಿಮಾನ ಟಿಕೆಟ್ ಬೆಲೆಗಿಂತ ಅಗ್ಗವಾಗಿ ಇಷ್ಟೇ ಸೌಲಭ್ಯಗಳನ್ನು ಭಾರತೀಯ ರೈಲ್ವೇಯಲ್ಲಿ ಪಡೆಯಬಹುದು.

    ಹೌದು. ಬಹುನಿರೀಕ್ಷಿತ ತೇಜಸ್ ರೈಲು ಇಂದಿನಿಂದ ಅಧಿಕೃತವಾಗಿ ತನ್ನ ಓಡಾಟ ಆರಂಭಿಸಿದೆ. ಭೂಮಿಯ ಮೇಲೆ ಚಲಿಸುವ ವಿಮಾನ ಎಂದೇ ಈ ರೈಲನ್ನು ಭಾರತೀಯ ರೈಲ್ವೇ ಬಣ್ಣಿಸಿದೆ. ಹೀಗಾಗಿ ಈ ರೈಲಿನ ವಿಶೇಷತೆಯನ್ನು ಇಲ್ಲಿ ನೀಡಲಾಗಿದೆ.

    #1. ಜರ್ಮನ್ ಕೋಚ್ ಹೊಂದಿರುವ ತೇಜಸ್ ರೈಲಿನ ಪ್ರತಿ ಸೀಟ್‍ನಲ್ಲಿ ಎಲ್‍ಇಡಿ ಸ್ಕ್ರೀನ್, ಕಾಫಿ ಮತ್ತು ಟೀ ಪೂರೈಕೆ ಯಂತ್ರ, ವೈಫೈ ಸಂಪರ್ಕ ಇರಲಿದೆ.

    #2. ಈ ರೈಲು 13 ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ 56 ಸೀಟಿನ ಸಾಮರ್ಥ್ಯ ಇರುವ ಒಂದು ಎಕ್ಸ್ ಕ್ಯೂಟಿವ್ ಬೋಗಿ ಇರಲಿದೆ. ಅಷ್ಟೇ ಅಲ್ಲದೇ ಎಲ್ಲ ಬೋಗಿಗಳಿಗೆ ಸ್ವಯಂಚಾಲಿತ ಬಾಗಿಲುಗಳು ಇರಲಿದೆ.

    #3. ಈ ರೈಲು ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿದ್ದು ಬೆಂಕಿ ನಿರೋಧಕ ಮತ್ತು ಹೊಗೆ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಹೊಂದಿದೆ. ಅಷ್ಟೇ ಅಲ್ಲದೇ ಕೋಚ್ ನಲ್ಲಿ ಗ್ರಾಫ್ಫಿಟಿ ಪೇಂಟ್ ಬಳಸಲಾಗಿದೆ. ಇದರಿಂದಾಗಿ ಕೋಚ್ ಸ್ವಚ್ಛವಾಗಿರಲಿದೆ.

    #4. ಆರಂಭಿಕ ಹಂತವಾಗಿ ಈ ರೈಲು ವಾರದ ಐದು ದಿನಗಳ ಕಾಲ ಮುಂಬೈ ಮತ್ತು ಗೋವಾ ಮಧ್ಯೆ ಸಂಚರಿಸಲಿದೆ. ಮಳೆಗಾಲದಲ್ಲಿ ಮೂರು ದಿನಗಳಿಗೊಮ್ಮೆ ಸಂಚರಿಸಲಿದೆ.

    #5. 640 ಕಿ.ಮೀ ಕ್ರಮಿಸುವ ಈ ರೈಲಿನಲ್ಲಿ ಎಕ್ಸಿಕ್ಯೂಟಿವ್ ಕೋಚ್ ಟಿಕೆಟ್ ಬೆಲೆ ಆಹಾರ ಸೇರಿ 2680 ರೂ. ಇದ್ದರೆ, ಆಹಾರವಿಲ್ಲದ 1 ಟಿಕೆಟಿಗೆ 2525ರೂ. ನಿಗದಿಯಾಗಿದೆ. ಎಸಿ ಚೇರ್ ಗೆ ಆಹಾರದೊಂದಿಗೆ 1280 ರೂ. ನಿಗದಿಯಾಗಿದ್ದರೆ, ಆಹಾರವಿಲ್ಲದ ಟಿಕೆಟಿಗೆ 1155 ರೂ. ನಿಗದಿಯಾಗಿದೆ.

    #6. ವಿಮಾನದ ಟಿಕೆಟ್ ದರಕ್ಕಿಂತ ತೇಜಸ್ ರೈಲಿನ ದರ ಅಗ್ಗವಾಗಿದ್ದು, ಶತಬ್ದಿ ಎಕ್ಸ್ ಪ್ರೆಸ್ ರೈಲಿಗಿಂತ ಶೇ.20 ರಷ್ಟು ಅಧಿಕವಾಗಿದೆ.

    #7. ರೈಲು ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

    #8. ಪ್ರತಿಯೊಂದು ಕೋಚ್ ತಯಾರಿಕೆಗೆ 3.25 ಕೋಟಿ ರೂ. ಖರ್ಚಾಗಿದೆ. ಚರ್ಮದ ಸೀಟ್‍ಗಳು, ಎಲ್‍ಸಿಡಿ ಸ್ಕ್ರೀನ್ ಗಳು ಮತ್ತು ಕೂಡಲೇ ಯಾರನ್ನದರೂ ಕರೆಯಲು ಕಾಲ್ ಬಟನ್ ವಿಶೇಷ ಸೌಲಭ್ಯವನ್ನು ಹೊಂದಿದೆ.

    #9. ಮುಂದಿನ ದಿನಗಳಲ್ಲಿ ತೇಜಸ್ ರೈಲು ದೆಹಲಿ ಮತ್ತು ಚಂಡೀಗಢ, ಸೂರತ್ ಮತ್ತು ಮುಂಬೈ ನಡುವೆ ಸಂಚರಿಸಲಿದೆ.

    #10. ಸೋಮವಾರ ಲೋಕಾರ್ಪಣೆಯಾಗುವ ಹಿನ್ನೆಲೆಯಲ್ಲಿ ಈ ರೈಲನ್ನು ಮುಂಬೈ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಭಾನುವಾರ ದುಷ್ಕರ್ಮಿಗಳು ಈ ರೈಲಿಗೆ ಕಲ್ಲು ತೂರಿದ್ದು, ಕಿಟಕಿಯ ಗಾಜನ್ನು ಜಖಂಗೊಳಿಸಿದ್ದಾರೆ.