Tag: Tej Bahadur

  • ಬಿಜೆಪಿ ಜೊತೆ ಮೈತ್ರಿ – ಜೆಜೆಪಿ ತೊರೆದ ಮಾಜಿ ಯೋಧ

    ಬಿಜೆಪಿ ಜೊತೆ ಮೈತ್ರಿ – ಜೆಜೆಪಿ ತೊರೆದ ಮಾಜಿ ಯೋಧ

    ಚಂಡೀಗಢ: ಹರ್ಯಾಣ ವಿಧಾನ ಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದಕ್ಕೆ, ಬಿಜೆಪಿ ಜೊತೆ ಜನನಾಯಕ ಜನತಾ ಪಕ್ಷ (ಜೆಜೆಪಿ) ಮೈತ್ರಿ ಮಾಡಿಕೊಂಡಿದೆ. ಈ ಕಾರಣಕ್ಕೆ ಮಾಜಿ ಯೋಧ ತೇಜ್ ಬಹದ್ದೂರ್ ಇಂದು ಜೆಜೆಪಿ ಪಕ್ಷವನ್ನು ತೊರೆದಿದ್ದಾರೆ.

    ಸೇನೆಯಿಂದ ವಜಾಗೊಂಡಿದ್ದ ತೇಜ್ ಬಹದ್ದೂರ್ ಅವರು, ನಂತರ ರಾಜಕೀಯಕ್ಕೆ ಬಂದಿದ್ದರು. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಹರ್ಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಜೆಜೆಪಿಯಿಂದ ಸ್ಪರ್ಧಿಸಿ ಭಾರಿ ಅಂತರದಲ್ಲಿ ಸೋಲು ಕಂಡಿದ್ದರು.

    ಆದರೆ ಗುರುವಾರ ಬಂದ ಹರ್ಯಾಣ ಚುನಾವಣಾ ಫಲಿತಾಂಶದಲ್ಲಿ ಮತದಾರ ಪ್ರಭು ಯಾವ ಪಕ್ಷಕ್ಕೂ ಬಹುಮತ ನೀಡಿರಲಿಲ್ಲ. ಹರ್ಯಾಣದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ 40 ಸ್ಥಾನದಲ್ಲಿ ಗೆದ್ದು ಮುಂಚೂಣಿಯಲ್ಲಿತ್ತು. ಆದ್ದರಿಂದ ಬಹುಮತ ಸಾಧಿಸಲು ಬಿಜೆಪಿಗೆ 6 ಸ್ಥಾನಗಳ ಅವಶ್ಯಕತೆ ಇತ್ತು. ಇದರಿಂದ ಬಿಜೆಪಿಗೆ ಸಿಎಂ ಸ್ಥಾನ ಜೆಜೆಪಿ ಪಕ್ಷದ ನಾಯಕ ದುಷ್ಯಂತ್ ಚೌಟಾಲಗೆ ಡಿಸಿಎಂ ಸ್ಥಾನ ಎಂಬ ಒಪ್ಪಿಗೆ ಮೇರೆಗೆ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.

    ಸೇನೆಯಿಂದ ವಜಾಗೊಂಡು ರಾಜಕೀಯಕ್ಕೆ ಬಂದಿದ್ದ ತೇಜ್ ಬಹದ್ದೂರ್ ಆರಂಭದ ದಿನದಿಂದಲೂ ಬಿಜೆಪಿಯನ್ನು ವಿರೋಧಿಸಿಕೊಂಡು ಬಂದಿದ್ದರು. ಆದರೆ ಈಗ ತಮ್ಮ ಪಕ್ಷ ಅಧಿಕಾರದ ಆಸೆಗೆ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡು ಜನರಿಗೆ ಮೋಸ ಮಾಡಿದೆ ರಾಜ್ಯದ ಜನರು ಇವರನ್ನು ತಿರಸ್ಕಾರ ಮಾಡಬೇಕು ಎಂದು ಹೇಳಿ ಪಕ್ಷದಿಂದ ತೇಜ್ ಬಹದ್ದೂರ್ ಹೊರ ಬಂದಿದ್ದಾರೆ.

    ಸೇನೆಯಲ್ಲಿ ನೀಡುವ ಆಹಾರ ಸರಿಯಿಲ್ಲ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ತೇಜ್ ಬಹದ್ದೂರ್ ಅವರನ್ನು ಸೇನೆ ಸೇವೆಯಿಂದ ವಜಾಮಾಡಿತ್ತು. ನಂತರ ಅವರು ರಾಜಕೀಯಕ್ಕೆ ಬಂದಿದ್ದರು. ವಿಧಾನಸಭೆಯ ಚುನಾವಣೆ ಹಿನ್ನೆಲೆ ಈ ಸೆಪ್ಟಂಬರ್ ನಲ್ಲಿ ದುಷ್ಯಂತ್ ಚೌಟಾಲ ಅವರ ಸಮ್ಮುಖದಲ್ಲಿ ಜೆಜೆಪಿ ಪಕ್ಷ ಸೇರಿದ್ದರು. ಆದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ ಎಂದು ಜೆಜೆಪಿ ಪಕ್ಷವನ್ನು ತೊರೆದಿದ್ದಾರೆ.

  • ಸೇನೆ ಕಳಪೆ ಆಹಾರ ನೀಡುತ್ತಿದೆ ಎಂದಿದ್ದ ಬಿಎಸ್‍ಎಫ್ ಯೋಧ ವಜಾ

    ಸೇನೆ ಕಳಪೆ ಆಹಾರ ನೀಡುತ್ತಿದೆ ಎಂದಿದ್ದ ಬಿಎಸ್‍ಎಫ್ ಯೋಧ ವಜಾ

    ನವದೆಹಲಿ: ಭಾರತೀಯ ಸೇನೆ ಯೋಧರಿಗೆ ಕಳಪೆ ಆಹಾರ ನೀಡುತ್ತಿದೆ ಎಂದು ಆರೋಪಿಸಿದ್ದ ಬಿಎಸ್‍ಎಫ್ ಯೋಧ ತೇಜ್ ಬಹದ್ದೂರು ಯಾದವ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

    ತೇಜ್ ಬಹದ್ದೂರು ಯಾದವ್ ಅವರು ಆರೋಪ ಮಾಡಿದ ಬಳಿಕ ಪ್ರತ್ಯೇಕ ತನಿಖೆ ನಡೆಸಲಾಗಿತ್ತು. ಈಗ ಸ್ಟಾಫ್ ಕೋರ್ಟ್ ತನಿಖೆಯ ವರದಿ ಬಂದ ಬಳಿಕ ಬುಧವಾರ ವಜಾಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ತನಿಖೆಯಲ್ಲಿ ಯಾದವ್ ಸುಳ್ಳು ಆರೋಪ ಮಾಡಿದ್ದಾರೆ. ಫೇಸ್‍ಬುಕ್‍ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಬಿಎಸ್‍ಎಫ್ ಕಾಯ್ದೆಯ ಪ್ರಕಾರ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ಯಾದವ್ ಮೂರು ತಿಂಗಳ ಒಳಗಡೆ ಮೇಲ್ಮನವಿ ಸಲ್ಲಿಸಬಹುದು ಎಂದು ಅಧಿಕಾರಿ ತಿಳಿಸಿದರು.

    ತೇಜ್ ಬಹದ್ದೂರು ಯಾದವ್ ಜನವರಿಯಲ್ಲಿ ಬಿಎಸ್‍ಎಫ್ ಯೋಧರಿಗೆ ನೀಡುವ ಆಹಾರ ಹೀಗಿದೆ ಎಂದು ಅರೆ ಬೆಂದ ಪರೋಟಾ, ಒಂದು ಲೋಟ ಚಹಾವನ್ನು ತೋರಿಸಿ, ಯೋಧರ ಕಷ್ಟಗಳನ್ನು ಹೇಳಿಕೊಂಡು ಫೇಸ್‍ಬುಕ್‍ನಲ್ಲಿ ವಿಡಿಯೋ ವನ್ನು ಅಪ್‍ಲೋಡ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರದ ಬಗ್ಗೆ ನನ್ನನ್ನು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿಗೂ ಅವರು ಮನವಿಯನ್ನು ಸಲ್ಲಿಸಿದ್ದರು.

    ಬಿಎಸ್‍ಎಫ್ ಐಜಿ ಡಿ.ಕೆ ಉಪಾಧ್ಯಾಯ್ ಯಾದವ್ ಅವರ ಈ ಆರೋಪಕ್ಕೆ ಈ ಹಿಂದೆ ಪ್ರತಿಕ್ರಿಯೆ ನೀಡಿ, 2010ರಲ್ಲಿ ಯೋಧ ತೇಜ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು. ಆದರೆ ಅವರ ಕುಟುಂಬವನ್ನು ಪರಿಗಣಿಸಿ ಅವರನ್ನು ಸೇನೆಯಿಂದ ವಜಾ ಮಾಡಿರಲಿಲ್ಲ ಎಂದು ತಿಳಿಸಿದ್ದರು.