Tag: tehshildar

  • ಇದು ತಹಶೀಲ್ದಾರ್ ತಪ್ಪು, ಕಣ್ಣನ್ ಅವರದ್ದಲ್ಲ- ಸಂಬಳ ವಾಪಸ್ ಕೇಳಿದ ವಿಚಾರಕ್ಕೆ ರಾಮಲಿಂಗಾರೆಡ್ಡಿ ಸ್ಪಷ್ಟನೆ

    ಇದು ತಹಶೀಲ್ದಾರ್ ತಪ್ಪು, ಕಣ್ಣನ್ ಅವರದ್ದಲ್ಲ- ಸಂಬಳ ವಾಪಸ್ ಕೇಳಿದ ವಿಚಾರಕ್ಕೆ ರಾಮಲಿಂಗಾರೆಡ್ಡಿ ಸ್ಪಷ್ಟನೆ

    ಬೆಂಗಳೂರು: ಸಂಬಳ ವಾಪಸ್ ಕೇಳಿ ನೋಟಿಸ್ ನೀಡಿರುವ ವಿಚಾರದಲ್ಲಿ ತಹಶೀಲ್ದಾರ್ ತಪ್ಪಿದೆ ಹೊರತು ಹಿರೇಮಗಳೂರು ಕಣ್ಣನ್ (Hiremagaluru Kannan) ತಪ್ಪಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸ್ಪಷ್ಟನೆ ನೀಡಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪ್ರತಿವರ್ಷ ದೇವಸ್ಥಾನಕ್ಕೆ ತಸ್ತಿಕ್ ಹಣ ಅಂತ ಕೊಡ್ತಾರೆ. ಮುಜರಾಯಿ ದೇವಸ್ಥಾನಗಳಿಗೆ ಈ ಹಣ ಕೊಡ್ತಾರೆ. 2013 ರಲ್ಲಿ 24 ಸಾವಿರ ತಸ್ತಿಕ್ ಹಣ ಇತ್ತು, ತಹಶೀಲ್ದಾರ್ 24 ಸಾವಿರ ಕೊಡುವ ಬದಲು 90 ಸಾವಿರ ಹಣ ನೀಡಿದ್ದಾರೆ. ತಹಶೀಲ್ದಾರ್ ತಪ್ಪು ಇದು.. ಕಣ್ಣನ್ ಅವ್ರ ತಪ್ಪಲ್ಲ ಎಂದು ಹೇಳಿದರು.

    ತಹಶೀಲ್ದಾರ್ ಬಳಿಯೇ ಹಣ ಪಡೆಯುತ್ತೇವೆ. ಕಣ್ಣನ್ ಅವರ ಬಳಿ ಹಣ ಕೇಳಲ್ಲ. ನಾನು ಆಯುಕ್ತರ ಜೊತೆ ಈ ಬಗ್ಗೆ ಮಾತನಾಡ್ತೇನೆ. ತಲೆ ಸರಿಯಿಲ್ಲದವರು ಈ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನ ಹೇಳ್ತಿದ್ದಾರೆ. 10 ವರ್ಷದ ಹಣವನ್ನ ತಹಶೀಲ್ದಾರ್ ರಿಂದಲೇ ವಸೂಲಿ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ದೇವಾಲಯದ ಆದಾಯ ಕಡಿಮೆ- ಅರ್ಚಕರ ಸಂಬಳ ವಾಪಸ್ ಕೇಳಿ‌ ರಾಜ್ಯ ಸರ್ಕಾರ ನೋಟಿಸ್

    24 ಸಾವಿರ ಹಣದ ಬದಲು 90 ಸಾವಿರ ಹಣವನ್ನ ತಹಶೀಲ್ದಾರ್ ಕೊಟ್ಟಿದ್ದಾರೆ. 24 ಸಾವಿರ ಹಣ ಕೊಡುವ ಜಾಗದಲ್ಲಿ 90 ಸಾವಿರ ಹಣ ಕೊಟ್ಟಿದ್ದು ತಹಶೀಲ್ದಾರ್ ದು ತಪ್ಪು. ಹೀಗಾಗಿ ಅವರಿಂದಲೇ ಈ ಹಣವನ್ನು ರಿಕವರಿ ಮಾಡುತ್ತೇವೆ. ರಾಜ್ಯದಲ್ಲಿ ಇದೇ ಮೊದಲ ಘಟನೆ ಎಂದು ಅವರು ಹೇಳಿದರು.

    ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ಜಮೆಯಾಗುತ್ತಿತ್ತು. ಇದರಲ್ಲಿ 4,500 ರೂ. ವಾಪಸ್ ನೀಡುವಂತೆ ಜಿಲ್ಲಾಡಳಿತವು ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿರುವ, ಕನ್ನಡದ ಪಂಡಿತ ಹಿರೇಮಗಳೂರು ಕಣ್ಣನ್ ಅವರಿಗೆ ನೋಟಿಸ್ ಜಾರಿತ್ತು, ಇದರಿಂದ ಕಣ್ಣನ್ ಅವರು ಕಂಗಾಲಾಗಿದ್ದರು.

  • ನಮ್ಮ ಮಗನನ್ನು ನೋಡ್ಬೇಕು ಅನಿಸುತ್ತಿದೆ- ಉಕ್ರೇನ್‍ನಲ್ಲಿ ಸಿಲುಕಿರುವ ಮಗನನ್ನು ನೆನೆದು ಕಣ್ಣೀರಾಕಿದ ತಂದೆ

    ನಮ್ಮ ಮಗನನ್ನು ನೋಡ್ಬೇಕು ಅನಿಸುತ್ತಿದೆ- ಉಕ್ರೇನ್‍ನಲ್ಲಿ ಸಿಲುಕಿರುವ ಮಗನನ್ನು ನೆನೆದು ಕಣ್ಣೀರಾಕಿದ ತಂದೆ

    ಬೀದರ್: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು ಉಕ್ತಯನಲ್ಲಿ ಸಿಲುಕಿರುವ ಕನ್ನಡಿಗರು ಯಾವಾಗ ಏನಾಗುತ್ತೋ ಎಂಬ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಗಡಿ ಜಿಲ್ಲೆ ಬೀದರ್ ನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದು ಅವರ ಪೋಷಕರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

    ಮಕ್ಕಳಿಂದ ಪೋಷಕರು ಪ್ರತಿ ಕ್ಷಣದ ಮಾಹಿತಿ ಪಡೆಯುತ್ತಿದ್ದು ಸದ್ಯ ಪರಿಸ್ಥಿತಿ ಬಗ್ಗೆ ಪೋಷಕರು ಆಂತಕಗೊಂಡಿದ್ದಾರೆ. ಉಕ್ರೇನ್ ನೆಲ ಮಹಡಿಯಲ್ಲಿ ನಮ್ಮ ಮಕ್ಕಳು ವಾಸವಾಗಿದ್ದು, ಸದ್ಯ ಪರಿಸ್ಥಿತಿ ತಿಳಿಯಾಗಿದೆ. ಆದಷ್ಟು ಬೇಗ ಸರ್ಕಾರ ನಮ್ಮ ಮಗನನ್ನು ಭಾರತಕ್ಕೆ ಕರೆದುಕೊಂಡು ಬಂದ್ರೆ ಒಳ್ಳೆಯದು, ಯಾಕೆಂದರೆ ನಮ್ಮ ಮಕ್ಕಳನ್ನು ನೋಡಬೇಕು ಅನಿಸುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: Russia-Ukraine Crisis: 4 ಬಸ್‍ಗಳಲ್ಲಿ 240 ವಿದ್ಯಾರ್ಥಿಗಳು ರೊಮೇನಿಯಾಗೆ ಶಿಫ್ಟ್

    ಇತ್ತ ಉಕ್ರೇನ್ ನಲ್ಲಿ ಸಿಲುಕಿರುವ ವೈದ್ಯಕೀಯ ವಿದ್ಯಾರ್ಥಿನಿ ಜೊತೆ ಬಸವಕಲ್ಯಾಣ ತಹಶೀಲ್ದಾರ್ ವೀಡಿಯೋ ಕಾಲ್ ಮೂಲಕ ಮಾತನಾಡಿ ಅತ್ಮಸ್ಥೈರ್ಯ ತುಂಬಿದ್ದಾರೆ. ಬಸವಕಲ್ಯಾಣ ತಾಲೂಕಿನಲ್ಲಿ ನಾರಾಯಣಪೂರ್ ಗ್ರಾಮದ ವೈಷ್ಣವಿ ವಿಷ್ಣುರೆಡ್ಡಿ ಮನೆಗೆ ಭೇಟಿ ನೀಡಿದ ಬಸವಕಲ್ಯಾಣ ತಹಶೀಲ್ದಾರ್ ಸಾವಿತ್ರಿ ಸಲಗಾರ ವೈಷ್ಣವಿ ಜೊತೆ ವೀಡಿಯೋ ಕಾಲ್ ನಲ್ಲಿ ಮಾತನಾಡಿದ್ರು. ಇದನ್ನೂ ಓದಿ: ನವಜಾತ ಶಿಶುಗಳಿಗೂ ಯುದ್ಧದ ಬಿಸಿ – ಬಾಂಬ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆದ ಹಾಲುಗಲ್ಲದ ಕಂದಮ್ಮಗಳು

    ವೀಡಿಯೋ ಕಾಲ್ ಮಾಡಿದ ತಹಶೀಲ್ದಾರ್ ಗೆ ಉಕ್ರೇನ್ ನಲ್ಲಿರುವ ಸದ್ಯದ ಪರಿಸ್ಥಿತಿ ಬಗ್ಗೆ ವೈದ್ಯಕೀಯ ವಿದ್ಯಾರ್ಥಿನಿ ವೈಷ್ಣವಿ ವಿವರಣೆ ನೀಡಿದರು. ನೀವು ಒಂಥರಾ ಯೋಧರಿದ್ದಂತೆ, ಯಾವುದಕ್ಕೂ ಭಯಪಡೆಬೇಡಿ, ತಾಯ್ನಾಡಿಗೆ ನಿಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತೆವೆ, ಯಾವ ಸಮಯದಲ್ಲಿ ಬೇಕಾದ್ರು ನನ್ನ ನಂಬರ್ ಗೆ ಫೋನ್ ಮಾಡಬಹುದು ಎಂದು ಹೇಳುವ ಮೂಲಕ ತಹಶೀಲ್ದಾರ್ ಧೈರ್ಯ ತುಂಬಿದ್ದಾರೆ.

  • ಭ್ರಷ್ಟಾಚಾರದಡಿ ಬಂಧನಕ್ಕೊಳಗಾಗಿದ್ದ ಶೃಂಗೇರಿ ತಹಶೀಲ್ದಾರ್ ಡ್ರೈವರ್ ಸೂಸೈಡ್

    ಭ್ರಷ್ಟಾಚಾರದಡಿ ಬಂಧನಕ್ಕೊಳಗಾಗಿದ್ದ ಶೃಂಗೇರಿ ತಹಶೀಲ್ದಾರ್ ಡ್ರೈವರ್ ಸೂಸೈಡ್

    ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ತಹಶೀಲ್ದಾರ್ ಅಂಬುಜಾ ಅವರ ಕಾರು ಚಾಲಕ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಆತ್ಮಹತ್ಯೆಗೆ ಶರಣಾದ ಚಾಲಕನನ್ನ ವಿಜೇತ್(26) ಎಂದು ಗುರುತಿಸಲಾಗಿದೆ. ಶೃಂಗೇರಿ ತಾಲೂಕಿನ ಹೆಗ್ತೂರು ಮೂಲದ ವಿಜೇತ್ ತಮ್ಮ ಮನೆಯ ಸಮೀಪದ ಅಡಿಕೆ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈತ ಅವಿವಾಹಿತನಾಗಿದ್ದು, ಇತ್ತೀಚೆಗಷ್ಟೆ ಆತನ ತಂಗಿ ಮದುವೆ ನಿಶ್ಚಯವಾಗಿತ್ತು ಎಂದು ಮೂಲಗಳು ತಿಳಿಸಿವೆ.

    ಕಳೆದ 20 ದಿನಗಳ ಹಿಂದಷ್ಟೆ ಶೃಂಗೇರಿ ತಹಶೀಲ್ದಾರ್ ಅಂಬುಜಾ ಕೂಡ ಭ್ರಷ್ಟಾಚಾರದಡಿ ಬಂಧನಕ್ಕೊಳಗಾಗಿದ್ದರು. ಇದೇ ಜ.6ರಂದು ಹಕ್ಕುಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಂಬುಜಾ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಎಸಿಬಿ ಬಲೆಗೆ ಬಿದ್ದಿದ್ದರು. ಹಕ್ಕುಪತ್ರ ನೀಡಲು ಶೃಂಗೇರಿಯ ಪ್ರವಾಸಿ ಮಂದಿರದಲ್ಲಿ 25 ಸಾವಿರ ಲಂಚ ಪಡೆದುಕೊಳ್ಳುವಾಗ ಗ್ರಾಮ ಲೆಕ್ಕಾಧಿಕಾರಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದಿದ್ದರು.

    ಪ್ರಕರಣ ಸಂಬಂಧ ಅಂಬುಜಾ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪರನ್ನ ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಇದಾದ ಸುಮಾರು 25 ದಿನಗಳ ಬಳಿಕ ತಹಶೀಲ್ದಾರ್ ಡ್ರೈವರ್ ವಿಜೇತ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿಜೇತ್ ಸಾವಿಗೆ ಶೃಂಗೇರಿ ತಹಶೀಲ್ದಾರ್ ಕಚೇರಿಯಲ್ಲಿನ ಬ್ರೋಕರ್ ಗಳ ಹಾವಳಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಗಾಡಿ ಟೋಯಿಂಗ್ ಮಾಡ್ತಿದ್ದ ASIಗೆ ಕಲ್ಲೇಟು- ವಿಕಲಚೇತನ ಮಹಿಳೆಗೆ ಬೂಟಿನಿಂದ ಒದ್ದ ನಾರಾಯಣ್

    ಕಳೆದೊಂದು ತಿಂಗಳಿಂದ ಶೃಂಗೇರಿ ತಾಲೂಕು ಕಚೇರಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಬೆಳಕಿಗೆ ಬಂದಿತ್ತು. ತಹಶೀಲ್ದಾರ್ ಕಚೇರಿಯಲ್ಲಿ ಬ್ರೋಕರ್ ಹಾವಳಿಯೂ ಮಿತಿಮೀರಿತ್ತು. ತಹಶೀಲ್ದಾರ್ ಕಚೇರಿಯಲ್ಲಿನ ಬ್ರೋಕರ್ ಗಳ ಹಾವಳಿಯಿಂದಲೇ ವಿಜೇತ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದು, ಈ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

    ವಿಜೇತ್ ಸಾವಿಗೆ ತಹಶೀಲ್ದಾರ್ ಅಂಬುಜಾ ಹಾಗೂ ಹಿರಿಯ ಅಧಿಕಾರಿಗಳೇ ನೇರಹೊಣೆ. ಹಾಗಾಗಿ ಪ್ರಕರಣದ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿ ಸ್ಥಳೀಯರು ರಾತ್ರೋರಾತ್ರಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಮಾಯಕನ ಸಾವಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

  • ಅಡಿಕೆ, ತೆಂಗಿನ ಮರ ಕಡಿಯಲು ಆದೇಶಿಸಿದ್ದ ತಹಶೀಲ್ದಾರ್‌ಗೆ ತರಾಟೆ

    ಅಡಿಕೆ, ತೆಂಗಿನ ಮರ ಕಡಿಯಲು ಆದೇಶಿಸಿದ್ದ ತಹಶೀಲ್ದಾರ್‌ಗೆ ತರಾಟೆ

    – ಹುದ್ದೆಯಿಂದ ಬಿಡುಗಡೆಗೊಳಿಸಿ ಸರ್ಕಾರ ಆದೇಶ

    ಬೆಂಗಳೂರು: ಸುಮಾರು 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟವನ್ನು ಏಕಾಏಕಿ ಉರುಳಿಸಿ ದರ್ಪ ತೋರಿದ್ದ ತಹಶೀಲ್ದಾರ್ ನಡೆಗೆ ಸರ್ಕಾರ ಗರಂ ಆಗಿದೆ. ತುಮಕೂರು ಜಿಲ್ಲೆ ಗುಬ್ಬಿ ತಹಶೀಲ್ದಾರ್ ಮಮತಾ ಅವರನ್ನ ಹುದ್ದೆಯಿಂದ ಬಿಡುಗಡೆಗೊಳಿಸಿ ಕಂದಾಯ ಇಲಾಖೆ ಆದೇಶಿಸಿದೆ. ಅಷ್ಟೇ ಅಲ್ಲ ತಹಶೀಲ್ದಾರ್ ಅವರನ್ನ ವಿಧಾನಸೌಧಕ್ಕೆ ಕರೆಸಿ ಸಿಎಂ, ಕಂದಾಯ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ.

    ವಿಧಾನಸೌಧಕ್ಕೆ ಗುಬ್ಬಿ ತಹಶೀಲ್ದಾರ್ ಮಮತಾ ಅವರನ್ನು ಕಂದಾಯ ಸಚಿವ ಆರ್.ಅಶೋಕ್ ಕರೆಸಿದ್ರು. ತಹಶೀಲ್ದಾರ್ ಅವರಿಂದ ವಿವರಣೆ ಕೇಳಿ ತರಾಟೆಗೆ ತೆಗೆದುಕೊಂಡ್ರು ಎನ್ನಲಾಗಿದೆ. ಬಳಿಕ ತಹಶೀಲ್ದಾರ್ ಅವರನ್ನ ಕಂದಾಯ ಸಚಿವ ಆರ್.ಅಶೋಕ್ ಸಿಎಂ ಬಳಿ ಕರೆದುಕೊಂಡು ಹೋಗಿದ್ರು. ಸಿಎಂ ಕೂಡ ತಹಶೀಲ್ದಾರ್ ಅವರನ್ನ ತರಾಟೆಗೆ ತೆಗೆದುಕೊಂಡು ಗರಂ ಆದ್ರು ಎನ್ನಲಾಗಿದೆ. ನಂತರ ಮಮತಾ ಅವರನ್ನ ತಹಶೀಲ್ದಾರ್ ಹುದ್ದೆಯಿಂದ ಬಿಡುಗಡೆಗೊಳಿಸಿ ಸರ್ಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಕಂದಾಯ ಇಲಾಖೆ ಆದೇಶ ಮಾಡಿದೆ.

    ಅಂದಹಾಗೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಎಂಬುವವರಿಗೆ ಉಡುಸಲಮ್ಮ ದೇವರಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನು ನೀಡಲಾಗಿತ್ತು ಎನ್ನಲಾಗಿದೆ. ಕಳೆದ 30 ವರ್ಷಗಳಿಂದಲೂ ತೆಂಗು, ಅಡಿಕೆ ಬಾಳೆ ಬೆಳೆದುಕೊಂಡು ಬಂದಿದ್ದಾರೆ. ಈ ನಡುವೆ ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗೋದಿಲ್ಲ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಶೀಲ್ದಾರ್ ಮಮತಾ ಅವರು ತೋಟವನ್ನು ಉರುಳಿಸಲು ಆದೇಶ ಕೊಟ್ಟಿದ್ದಾರೆ ಎನ್ನಲಾಗಿದೆ. ಅದರಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಾಏಕಿ ಫಸಲಿಗೆ ಬಂದಿದ್ದ ತೋಟಕ್ಕೆ ನುಗ್ಗಿ 150 ಅಡಿಕೆ, 20 ತೆಂಗು ಮತ್ತು ಬಾಳೆ ಗಿಡವನ್ನು ಉರುಳಿಸಿದ್ದರು. ಇದರಿಂದ ಸಣ್ಣ ಕೆಂಪಯ್ಯ, ಸಿದ್ದಮ್ಮ ಕುಟುಂಬದ ಗೋಳಾಟದ ವಿಡಿಯೋ ವೈರಲ್ ಆಗಿತ್ತು. ತಹಶೀಲ್ದಾರ್ ವಿರುದ್ಧ, ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

  • ಏಸು ಕ್ರಿಸ್ತ ಪ್ರತಿಮೆ ವಿವಾದ- ಸರ್ಕಾರಕ್ಕೆ ವರದಿ ನೀಡೋ ಮುನ್ನವೇ ತಹಶೀಲ್ದಾರ್ ಎತ್ತಂಗಡಿ

    ಏಸು ಕ್ರಿಸ್ತ ಪ್ರತಿಮೆ ವಿವಾದ- ಸರ್ಕಾರಕ್ಕೆ ವರದಿ ನೀಡೋ ಮುನ್ನವೇ ತಹಶೀಲ್ದಾರ್ ಎತ್ತಂಗಡಿ

    – ವರ್ಷಾಂತ್ಯದಲ್ಲಿ ಡಿಕೆಶಿಗೆ ಶಾಕ್

    ರಾಮನಗರ: ಏಸು ಪ್ರತಿಮೆ ನಿರ್ಮಾಣ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಸರ್ಕಾರಕ್ಕೆ ವರದಿ ನೀಡುವ ಮುನ್ನವೇ ಕನಕಪುರ ತಹಶೀಲ್ದಾರ್ ಆನಂದಯ್ಯ ಅವರನ್ನು ಸ್ಥಳ ನಿಯೋಜನೆ ಮಾಡದೇ ಏಕಾಏಕಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಚಾಮರಾಜನಗರ ಜಿಲ್ಲೆಯ ಯಳಂದೂರು ತಹಶೀಲ್ದಾರ್ ಆಗಿದ್ದ ವರ್ಷ ಅವರನ್ನು ಕನಕಪುರ ತಹಶೀಲ್ದಾರ್ ಆಗಿ ನೇಮಕ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆರ್.ಉಮಾದೇವಿ ಸೋಮವಾರ ರಾತ್ರಿ ಆದೇಶ ಹೊರಡಿದ್ದಾರೆ.

    ಕನಕಪುರ ತಾಲೂಕಿನ ಹಾರೊಬೆಲೆ ಸಮೀಪದಲ್ಲಿನ ಕಪಾಲ ಬೆಟ್ಟದಲ್ಲಿನ 10 ಎಕರೆ ಸರ್ಕಾರಿ ಗೋಮಾಳದಲ್ಲಿ ಶಾಸಕ ಡಿ.ಕೆ ಶಿವಕುಮಾರ್ ಅವರು ಅತೀ ಎತ್ತರದ ಏಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಡಿ.25 ರಂದು ಚಾಲನೆ ನೀಡಿದ್ದರು. ಇದಾದ ಬಳಿಕ ಡಿಕೆಶಿ ನಡೆ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಈ ಬಗ್ಗೆ ಕಂದಾಯ ಸಚಿವರು ತನಿಖೆಗೆ ಆದೇಶಿಸಿ, ವರದಿ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

    ತನಿಖೆಗೆ ಆದೇಶ ಮಾಡಿದ ಮೂರೇ ದಿನದಲ್ಲಿ ಕನಕಪುರ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ಕಂದಾಯ ಇಲಾಖೆಗೆ ಸೇರಿದ ಭೂಮಿಯಲ್ಲಿಯೇ ಏಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದ್ದರಿಂದ ಸಹಜವಾಗಿ ಅಲ್ಲಿನ ತಹಶೀಲ್ದಾರ್ ಅವರೇ ಜಿಲ್ಲಾಧಿಕಾರಿಗಳಿಗೆ ಪ್ರಾಥಮಿಕ ವರದಿ ಸಲ್ಲಿಸಬೇಕಿತ್ತು. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೇ, ಕನಕಪುರ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: “ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಲ್ಲ, ಕೃಷ್ಣನೂ ಒಂದೇ, ಏಸುವೂ ಒಂದೇ, ಆದರೆ..”

    ತಹಶೀಲ್ದಾರ್ ಆನಂದಯ್ಯ ವರ್ಗಾವಣೆಯಲ್ಲಿ ಸಾಕಷ್ಟು ಅನುಮಾನಗಳು ಮೂಡಿದ್ದು, ಡಿಕೆಶಿ ಆಪ್ತರು ಎಂಬ ಕಾರಣಕ್ಕೆ ಹಲವಾರು ವರ್ಷಗಳಿಂದ ಕನಕಪುರದಲ್ಲೇ ಆನಂದಯ್ಯ ಕೆಲಸ ಮಾಡುತ್ತಿದ್ದಾರೆ. ಡಿಕೆಶಿ ಅಣತಿಯಂತೆ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ಹೀಗಾಗಿ ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ ಎನ್ನಲಾಗಿದೆ. ಮತ್ತೊಂದು ಕಡೆ ಡಿಕೆಶಿ ಅವರ ಒತ್ತಡ ಹಾಗು ಪ್ರಭಾವದಿಂದಾಗಿ ತಹಶೀಲ್ದಾರ್ ವರ್ಗಾವಣೆ ಮೂಲಕ ಗೋಮಾಳದ ವರದಿಯನ್ನು ಇನ್ನಷ್ಟು ದಿನ ಮೂಂದೂಡುವ ತಂತ್ರವೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಏಸು ಪ್ರತಿಮೆಗೆ ಜಮೀನು- ಡಿಕೆಶಿ ಸಮರ್ಥನೆ, ಬಿಜೆಪಿ ಕಟು ಟೀಕೆ

    ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಕೆಲ ದಿನಗಳ ಹಿಂದಯಷ್ಟೇ ಜಿಲ್ಲೆಯಲ್ಲಿ ಕ್ಲೀನಿಂಗ್ ಕೆಲಸ ಆರಂಭಿಸಲಾಗುವುದು ಎಂದಿದ್ದರು. ಹಾಗಾಗಿ ತಹಶೀಲ್ದಾರ್ ಆನಂದಯ್ಯ ವರ್ಗಾವಣೆ ಆಗಿದ್ದಾರೆ ಎನ್ನಲಾಗಿದೆ. ಆದರೆ, ಕನಕಪುರ ತಾಲೂಕಿನ ಏಸು ಪ್ರತಿಮೆ ವಿವಾದದ ಬೆನ್ನಲ್ಲೇ ಅಲ್ಲಿನ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಮಾತ್ರ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.