Tag: teaser

  • ಮೋಹಕ ನಿಗೂಢ ಬಚ್ಚಿಟ್ಟುಕೊಂಡ ಮೀನಾಬಜಾರ್ ಟೀಸರ್!

    ಮೋಹಕ ನಿಗೂಢ ಬಚ್ಚಿಟ್ಟುಕೊಂಡ ಮೀನಾಬಜಾರ್ ಟೀಸರ್!

    ಬೆಂಗಳೂರು: ಕಿರುತೆರೆ ಜಗತ್ತಿನಲ್ಲಿ ಅದ್ದೂರಿತನದ ಸೂಪರ್ ಹಿಟ್ ಮೆಗಾ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದವರು ರಾಣಾ ಸುನೀಲ್ ಕುಮಾರ್ ಸಿಂಗ್. ಅವರು ಧಾರಾವಾಹಿ ಲೋಕದಿಂದ ಹಿರಿತೆರೆಯತ್ತ ಮುಖ ಮಾಡಿ ಒಂದಷ್ಟು ವರ್ಷಗಳೇ ಕಳೆದಿವೆ. ಈ ಹಿಂದೆ ‘ಮದುವೆ ಮನೆ’ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಅವರು ಇದೀಗ ತಮ್ಮ ಜೀವಿತದ ಮಹಾ ಕನಸಿನಂಥಾ ‘www.ಮೀನಾ ಬಜಾರ್.ಕಾಮ್’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದ್ದೂರಿ ಮೇಕಿಂಗ್ ಸೂಚನೆಗಳೊಂದಿಗೇ ಮನಸೆಳೆದಿರೋ ಈ ಚಿತ್ರವೀಗ ಬಿಡುಗಡೆಗೆ ಸಜ್ಜಾಗಿದೆ. ಇದೀಗ ‘ಮೀನಾ ಬಜಾರ್’ನ ಮೋಹಕವಾದ ಟೀಸರ್ ಬಿಡುಗಡೆಗೊಂಡಿದೆ.

    ಹೇಳಿಕೇಳಿ ರಾಣಾ ಸುನೀಲ್ ಕುಮಾರ್ ಸಿಂಗ್ ಎಂದರೆ ಅದ್ದೂರಿತನ ಎಂಬಂಥಾ ಇಮೇಜ್ ಇದೆ. ಅದಕ್ಕೆ ತಕ್ಕುದಾಗಿಯೇ ಈ ಟೀಸರ್ ರೂಪುಗೊಂಡಿದೆ. ರೋಮಾಂಚಕ ಸನ್ನಿವೇಶಗಳ ಆಳದಲ್ಲಿ ರೌದ್ರ ಲೋಕದ ಕಥೆಯೊಂದಿರೋ ಸುಳಿವಿನೊಂದಿಗೆ ಈ ಟೀಸರ್ ಈಗ ವ್ಯಾಪಕ ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತಿದೆ. ಎಲ್ಲವನ್ನೂ ಕಾಣಿಸಿ ಏನೂ ಗೊತ್ತಾಗದಂಥಾ ಭಾವ ಹುಟ್ಟಿಸಿ ಅಚ್ಚರಿ ಮತ್ತು ಸಿನಿಮಾದೆಡೆಗಿನ ಕುತೂಹಲ ಕಾಯ್ದಿಟ್ಟುಕೊಳ್ಳುವ ತಂತ್ರಗಾರಿಕೆಯೊಂದಿಗೆ ಮೂಡಿ ಬಂದಿರೋ ಈ ಟೀಸರ್ ನಿಜಕ್ಕೂ ಪ್ರಾಮಿಸಿಂಗ್ ಆಗಿದೆ.

    ಸಿ.ಎನ್.ನಾಗೇಂದ್ರ ಸಿಂಗ್ ನಿರ್ಮಾಣ ಮಾಡಿರೋ ‘ಮೀನಾ ಬಜಾರ್’ ಏಕ ಕಾಲದಲ್ಲಿಯೇ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಂಡಿದೆ. ಅತ್ಯಂತ ಸಾವಕಾಶದಿಂದ ವರ್ಷಗಟ್ಟಲೆ ಸಮಯ ತೆಗೆದುಕೊಂಡೇ ಸುನೀಲ್ ಕುಮಾರ್ ಸಿಂಗ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಈ ಟೀಸರ್‍ನಲ್ಲಿಯೇ ಈ ಸಿನಿಮಾ ಮೂಡಿ ಬಂದಿರೋ ರೀತಿಯೂ ಸ್ಪಷ್ಟವಾಗಿ ಜಾಹೀರಾಗಿದೆ. ಪ್ರತಿ ದೃಶ್ಯಗಳೂ ಕಣ್ಣಿಗೆ ಹಬ್ಬದಂತೆ ಕಾಣಿಸುತ್ತಾ, ಮೋಹಕ್ಕೀಡು ಮಾಡುತ್ತಲೇ ಬೆಚ್ಚಿ ಬೀಳೋ ಹೊಳಹುಗಳನ್ನೂ ನೀಡುವ ಮೂಲಕ ಮೀನಾ ಬಜಾರ್ ಟೀಸರ್ ಇದೀಗ ಎಲ್ಲೆಡೆ ಹರಿದಾಡಲಾರಂಭಿಸಿದೆ.

  • ನಾನು ಮತ್ತು ಗುಂಡ: ಶ್ವಾನ ಬಾಂಧವ್ಯದ ಮನಮುಟ್ಟುವ ಕಥೆಗಳಿಗೆ ಆಹ್ವಾನ!

    ನಾನು ಮತ್ತು ಗುಂಡ: ಶ್ವಾನ ಬಾಂಧವ್ಯದ ಮನಮುಟ್ಟುವ ಕಥೆಗಳಿಗೆ ಆಹ್ವಾನ!

    ಬೆಂಗಳೂರು: ರಘು ಹಾಸನ್ ನಿರ್ದೇಶನ ಮಾಡಿರುವ ನಾನು ಮತ್ತು ಗುಂಡ ಅಪರೂಪದ್ದೊಂದು ಕಥೆಯ ಸುಳಿವಿನೊಂದಿಗೆ, ಹೊಸ ಅಲೆಯ ಚಿತ್ರವಾಗಿ ಪ್ರೇಕ್ಷಕರೆಲ್ಲರನ್ನು ಆಕರ್ಷಿಸಿಕೊಂಡಿದೆ. ಈಗಾಗಲೇ ಎರಡೆರಡು ಟೀಸರ್‍ಗಳ ಮೂಲಕ ಈ ಸಿನಿಮಾ ಮನುಷ್ಯ ಮತ್ತು ಶ್ವಾನದ ನಡುವಲ್ಲಿರೋ ಮೂಕಪ್ರೇಮ ಎಲ್ಲರ ಮನಸುಗಳಿಗೂ ದಾಟಿ ನಾಟಿಕೊಂಡಿದೆ. ನಾಯಿ ಅಂದರೆ ಅದೊಂದು ಸಾಕು ಪ್ರಾಣಿ ಎಂಬುದರಾಚೆಗೆ ಅದನ್ನು ಹಚ್ಚಿಕೊಂಡ ಜೀವಗಳ ಭಾವುಕತೆ ಹರಡಿಕೊಂಡಿದೆ. ಅಂಥಾದ್ದೇ ಮನಮಿಡಿಯುವ ಅಪರೂಪದ ಕಥೆ ಈ ಚಿತ್ರದಲ್ಲಿದೆ.

    ಇದೀಗ ಶ್ವಾನ ಮತ್ತು ಮನುಷ್ಯರ ಬಾಂಧವ್ಯದ ನೈಜವಾದ ಘಟನೆಗಳನ್ನು ಬಿಡಿ ಬಿಡಿಯಾಗಿ ಜನರ ಮುಂದಿಡಲು ತಯಾರಾಗಿದೆ. ನಾನು ಮತ್ತು ಗುಂಡ ಸಿನಿಮಾದ ಟೀಸರ್ ಬಿಡುಗಡೆಯಾದ ನಂತರದಲ್ಲಿ ಚಿತ್ರತಂಡಕ್ಕೆ ಬರುತ್ತಿರೋ ಪ್ರತಿಕ್ರಿಯೆಗಳಿಂದ ಇದೀಗ ಹೊಸ ಆಲೋಚನೆಯೊಂದನ್ನು ಮಾಡಲಾಗಿದೆ. ಶ್ವಾನಗಳೊಂದಿಗಿನ ನೈಜವಾದ ಅಪರೂಪದ ಬಾಂಧವ್ಯದ ಘಟನಾವಳಿಗಳು ನಿಮ್ಮ ಬದುಕಲ್ಲಿಯೂ ಇದ್ದರೆ, ಅದನ್ನು ವೀಡಿಯೋ ತುಣುಕುಗಳ ಮೂಲಕ ಚಿತ್ರತಂಡಕ್ಕೆ ಕಳುಹಿಸಬಹುದು. ಅದರಲ್ಲಿ ಕಾಡುವಂಥವುಗಳನ್ನು ಆಯ್ಕೆ ಮಾಡಿ ಪ್ರತೀವಾರ ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರತಂಡವೇ ಪ್ರಚುರಪಡಿಸಲಿವೆ.

    ನಾನು ಮತ್ತು ಗುಂಡ ಎಂಬುದೇ ನಾಯಿ ಮತ್ತು ಮನುಷ್ಯನ ಬಾಂಧವ್ಯದ ಕಥೆ ಹೊಂದಿರೋ ಚಿತ್ರವಾದ್ದರಿಂದ, ಅಂಥಾ ಬಾಂಧವ್ಯದ ನೈಜ ಘಟನಾವಳಿಗಳ ಮೂಲಕವೇ ಈ ಚಿತ್ರದ ಪ್ರಚಾರ ಕಾರ್ಯ ನಡೆಸುವ ವಿನೂತನ ಆಲೋಚನೆ ನಿರ್ದೇಶಕ ರಘು ಹಾಸನ್ ಅವರದ್ದು. ನಿಮ್ಮ ಶ್ವಾನ ಬಾಂಧವ್ಯದ ಅಪರೂಪದ ವೀಡಿಯೋ ತುಣುಕುಗಳನ್ನು ಕಳಿಸಿದರೆ, ಅದು ಅಪರೂಪದ್ದಾಗಿದ್ದರೆ ಚಿತ್ರತಂಡವೇ ಬಂದು ಅದನ್ನು ಚಿತ್ರೀಕರಿಸಿಕೊಳ್ಳುತ್ತದೆ. ಈಗಾಗಲೇ ಒಂದಷ್ಟು ಇಂಥಾ ಘಟನಾವಳಿಗಳು ಚಿತ್ರತಂಡ ತಲುಪಿದೆ. ಅದರಲ್ಲಿ ಒಂದಷ್ಟು ನಿಜಕ್ಕೂ ಕಾಡುವಂತಿವೆಯಂತೆ.

    ಯಾರೇ ಈ ಶ್ವಾನಪ್ರೇಮದ ವೀಡಿಯೋ ಕಳಿಸೋದಾದರೂ ಅದು ಕಾಡುವಂತಿರಲಿ ಅನ್ನೋದು ಚಿತ್ರತಂಡದ ಮನವಿ. ರಘು ಹಾಸನ್ ನಾನು ಮತ್ತು ಗುಂಡ ಚಿತ್ರದ ಮೂಲಕ ಭಾವುಕವಾದ ಕಥೆಯೊಂದನ್ನು ಹೇಳ ಹೊರಟಿದ್ದಾರೆ. ಆದರೆ ಈಗ ಅದಕ್ಕೆ ಬರುತ್ತಿರೋ ಪ್ರತಿಕ್ರಿಯೆ, ಕೆಲವರು ತಮ್ಮ ಶ್ವಾನ ಪ್ರೇಮದ ಬಗ್ಗೆ ಹಂಚಿಕೊಳ್ಳುತ್ತಿರೋ ಅಭಿಪ್ರಾಯಗಳನ್ನೆಲ್ಲ ನೋಡಿದರೆ ಮನುಷ್ಯ ಮತ್ತು ಶ್ವಾನ ಬಾಂಧವ್ಯ ತಮ್ಮ ಎಣಿಕೆಯನ್ನೂ ಮೀರಿದ್ದೆಂಬ ವಿಚಾರವೂ ನಿರ್ದೇಶಕರಿಗೆ ಮನವರಿಕೆಯಾಗಿದೆಯಂತೆ. ಇಂಥಾ ಕಾಡುವ ಕಥೆಗಳಿದ್ದರೆ ಅದನ್ನು ಚಿತ್ರತಂಡಕ್ಕೆ ಕಳಿಸಿಕೊಡಬಹುದು. ಅದನ್ನು ಮೂರು ನಿಮಿಷಗಳ ವೀಡಿಯೋ ಮೂಲಕ ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದೆ.

  • 30ನೇ ವಸಂತಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ- ಬರ್ತ್ ಡೇಯಲ್ಲಿ ಬಾರ್ಬಿ ಡಾಲ್

    30ನೇ ವಸಂತಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ- ಬರ್ತ್ ಡೇಯಲ್ಲಿ ಬಾರ್ಬಿ ಡಾಲ್

    ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ 30ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳೊಂದಿಗೆ ತಮ್ಮ ನಿವಾಸದ ಬಳಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚಂದನ್ ಶೆಟ್ಟಿ, ಹುಟ್ಟು ಹಬ್ಬದ ವಿಶೇಷವಾಗಿ ‘ಬ್ಯಾಡ್ ಬಾಯ್’ ಹಾಡಿನ ಟೀಸರ್ ಇಂದು ಸಂಜೆ ಲಹರಿ ಸಂಸ್ಥೆಯ ಅಡಿ ಬಿಡುಗಡೆ ಮಾಡಲಿದ್ದೇವೆ. ‘ರೋಡ್ ಕಿಂಗ್’ ಸಿನಿಮಾಗೆ ಈ ಹಾಡನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ನಾನು ಹಾಡಿರುವ ಹಾಡು ಬಿಡುಗಡೆಯಾಗಲಿದೆ. ಇದು ನನ್ನ ಕಡೆಯಿಂದ ಅಭಿಮಾನಿಗಳಿಗೆ ನೀಡುತ್ತಿರುವ ಉಡುಗೊರೆಯಾಗಿದ್ದು, ನಿಮ್ಮ ಬೆಂಬಲ ಸದಾ ಮುಂದುವರಿಯಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದನ್ನು ಓದಿ: 5 ಹಾಡಿಗೆ ಚಂದನ್ ಶೆಟ್ಟಿಗೆ ಸಿಕ್ತು ಊಹಿಸಲಾಗದಷ್ಟು ಸಂಭಾವನೆ

    ಅಭಿಮಾನಿಗಳೊಂದಿಗೆ ನಟಿ ನಿವೇದಿತಾ ಗೌಡ ಅವರು ಕೂಡ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಂದನ್ ಶೆಟ್ಟಿ ಅವರಿಗೆ ಹುಟ್ಟ ಹಬ್ಬದ ಶುಭಾಶಯ ಕೋರಿದರು.

    ಮೂಲತಃ ಹಾಸನದವರಾದ ಚಂದನ್ ಶೆಟ್ಟಿ ಹುಟ್ಟಿದ್ದು, 1989 ರಲ್ಲಿ, 2012 ರಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಅಲೆಮಾರಿ ಸಿನಿಮಾಗೆ ಗೀತ ರಚನೆ ಮಾಡಿದ್ದರು. ಕನ್ನಡ ಬಿಗ್ ಬಾಸ್ ನ ಸೀಸನ್ 5ರ ರಿಯಾಲಿಟಿ ಶೋದಲ್ಲಿ ವಿಜೇತರಾಗಿದ್ದರು. ಇವರಿಗೆ ‘ಹಾಳಾಗೋದೆ’ ಆಲ್ಬಂ ಬಹುದೊಡ್ಡ ಬ್ರೇಕ್ ನೀಡಿತ್ತು. ಇದರೊಂದಿಗೆ 2 ಪೇಗ್, ಚಾಕೋಲೇಟ್ ಗರ್ಲ್, ಟಕಿಲಾ, ಫೈಯರ್ ಆಲ್ಬಂ ಗಳನ್ನು ಮಾಡಿದ್ದಾರೆ. ಸದ್ಯ ಸಿನಿಮಾ ಸಂಗೀತ ನಿರ್ದೇಶನದೊಂದಿಗೆ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ.

  • ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಹಾಡಿದ ಮೊದಲ ಹಾಡು ಬಿಡುಗಡೆ

    ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಹಾಡಿದ ಮೊದಲ ಹಾಡು ಬಿಡುಗಡೆ

    ಮುಂಬೈ: ಇಂಟರ್‌ನೆಟ್‌ ಸೆನ್ಸೇಷನ್ ರಾನು ಮೊಂಡಲ್ ಅವರು ಹಾಡಿದ ಮೊದಲ ಹಾಡು ಇಂದು ಅದ್ಧೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ.

    ರಾನು ಅವರು ಗಾಯಕ ಹಿಮೇಶ್ ರೇಶ್ಮಿಯಾ ನಟಿಸಿದ ‘ಹ್ಯಾಪಿ ಹಾರ್ಡಿ ಹಾಗೂ ಹೂರ್’ ಚಿತ್ರದಲ್ಲಿ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಿದ್ದಾರೆ. ರಾನು ಅವರು ಹಾಡುತ್ತಿದ್ದ ವಿಡಿಯೋವನ್ನು ಹಿಮೇಶ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

    ಇತ್ತೀಚೆಗೆ ತೇರಿ ಮೇರಿ ಕಹಾನಿ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿತ್ತು. ಈ ವಿಡಿಯೋ ಸಾಕಷ್ಟು ಹಿಟ್ ಕೂಡ ಆಗಿತ್ತು. ಜನರು ಈ ವಿಡಿಯೋವನ್ನು ಶೇರ್ ಮಾಡುವುದರ ಮೂಲಕ ರಾನು ಅವರಿಗೆ ತಮ್ಮ ಪ್ರೀತಿಯನ್ನು ತೋರಿಸಿದ್ದರು.

    ಇಂದು ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಅವರು ಹಾಡಿದ ಮೊದಲ ಹಾಡು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಲ್ಲದೆ ಚಿತ್ರದ ನಿರ್ಮಾಪಕರಾದ ದೀಪ್ಷಿಕಾ ದೇಶ್‍ಮುಖ್ ಹಾಗೂ ಸಬಿತಾ ಮನಕ್ಚಂದ್ ಅವರು ಮೊದಲು ಚಿತ್ರದ ಎಲ್ಲಾ ಹಾಡುಗಳನ್ನು ಬಿಡುಗಡೆ ಮಾಡಿ ನಂತರ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಹಿಮೇಶ್ ರೇಶ್ಮಿಯಾ ಅವರು, “ಹ್ಯಾಪಿ, ಹಾರ್ಡಿ ಹಾಗೂ ಹೀರ್ ಚಿತ್ರಕ್ಕೆ ಜನರು ಪ್ರೀತಿ ತೋರಿಸುತ್ತಿರುವುದು ನೋಡಿ ನನಗೆ ಸಾಕಷ್ಟು ಖುಷಿ ಆಗುತ್ತಿದೆ. ದೇವರ ದಯೆಯಿಂದ ಈ ಚಿತ್ರ ಹೊಸ ಪ್ರವೃತ್ತಿಯನ್ನು ಹೊಂದುತ್ತದೆ ಎಂಬ ವಿಶ್ವಾಸ ನನಗೆ ಇದೆ. ರಾನು ಅವರು ಕೂಡ ತುಂಬಾ ಅದ್ಭುತವಾಗಿ ಹಾಡುಗಳನ್ನು ಹಾಡಿದ್ದಾರೆ. ಪ್ರೇಕ್ಷಕರು ಹಾಡನ್ನು ಇಷ್ಟಪಡುತ್ತಾರೆ ಹಾಗೂ ಎಂಜಾಯ್ ಮಾಡುತ್ತಾರೆ ಎಂದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.

  • ಪರಿಮಳಾ ಲಾಡ್ಜ್ ಚಿತ್ರದ ವಿರುದ್ಧ ದೂರು

    ಪರಿಮಳಾ ಲಾಡ್ಜ್ ಚಿತ್ರದ ವಿರುದ್ಧ ದೂರು

    ಬೆಂಗಳೂರು: ಪರಿಮಳ ಲಾಡ್ಜ್ ಚಿತ್ರದ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಫಿಲ್ಮ್ ಚೇಂಬರ್ ಗೆ ಲಿಖಿತ ದೂರು ನೀಡಿದೆ.

    ಈ ಚಿತ್ರದಲ್ಲಿ ಬಳಸಿದ ಅಶ್ಲೀಲ ಸಂಭಾಷಣೆ ತೆಗೆಯುವಂತೆ ದೂರಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಅಲ್ಲದೆ ಚಿತ್ರದ ಟೀಸರಿನಲ್ಲಿ ಇರುವ ಅಶ್ಲೀಲ ಸಂಭಾಷಣೆ ತೆಗೆಯದೇ ಇದಲ್ಲಿ ಫಿಲ್ಮಂ ಚೇಂಬರ್ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.

    ದೂರಿನಲ್ಲಿ ಏನಿದೆ?
    ವಿಜಯಪ್ರಸಾದ್ ನಿರ್ದೇಶನದ ಲೂಸ್ ಮಾದ, ನೀನಾಸಂ ಸತೀಶ್ ಹಾಗೂ ಸುಮನ್ ರಂಗನಾಥ್ ನಟನೆಯ ಪರಿಮಳ ಲಾಡ್ಜ್ ಎಂಬ ಹೆಸರಿನ ಈ ಚಿತ್ರದ ನಾಯಕ ನಟರ ಮೇಲೆ ಹಾಗೂ ನಿರ್ದೇಶಕ, ನಿರ್ಮಾಪಕ ಅವರ ಮೇಲೆ ಕ್ರಮಕೈಗೊಳ್ಳಲು ಒತ್ತಾಯ ಮಾಡುತ್ತಿದ್ದೇವೆ. ಹಾಗೆ ಈ ಚಿತ್ರದಲ್ಲಿ ಇರುವ ಅಶ್ಲೀಲ ಸಂಭಾಷಣೆ ತೆಗಿಸಬೇಕು ಇಲ್ಲವಾದರೆ ನಾವು ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಅದನ್ನು ಮೀರಿ ಇವರು ಈ ಚಿತ್ರವನ್ನು ಬಿಡುಗಡೆ ಮಾಡಿದ ಪಕ್ಷದಲ್ಲಿ ವಾಣಿಜ್ಯ ಮಂಡಳಿ ಮುಂದೆ ಹಾಗೂ ಈ ಚಲನಚಿತ್ರ ಪ್ರದರ್ಶನ ಮಾಡಲು ಚಿತ್ರಮಂದಿರದ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

    ಇತ್ತೀಚೆಗೆ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ನೀನಾಸಂ ಸತೀಶ್ ಹಾಗೂ ಲೂಸ್ ಮಾದ ಯೋಗಿ ಅವರಿಗೆ ಸಲಿಂಗಕಾಮಿಗಳು ಎಂಬ ಟೈಟಲ್ ನೀಡಲಾಗಿದೆ. ಅಲ್ಲದೇ ಚಿತ್ರದಲ್ಲಿ ನಟಿಸುತ್ತಿರುವ ಪ್ರತಿಯೊಬ್ಬರಿಗೂ ಒಂದೊಂದು ವಿಶೇಷ ಟೈಟಲ್ ನೀಡಿದೆ. ಈ ಸಿನಿಮಾದಲ್ಲಿ ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.

  • ಸೈರಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನುಷ್ಕಾ ಶೆಟ್ಟಿ

    ಸೈರಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನುಷ್ಕಾ ಶೆಟ್ಟಿ

    ಹೈದರಾಬಾದ್: ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿ ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಈಗ ನಿಜವಾಗಿದೆ. ಈ ಕುರಿತು ಸೈರಾ ಚಿತ್ರತಂಡವೇ ಸ್ಪಷ್ಟಪಡಿಸಿದೆ.

    ಸೈರಾ ಪ್ರಚಾರ ಕಾರ್ಯದಲ್ಲಿರುವ ಚಿತ್ರತಂಡ ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಈ ಅಂಶವನ್ನು ರಿವೀಲ್ ಮಾಡಿದೆ. ಅನುಷ್ಕಾ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದಾರೆ ಎಂಬ ಸಂಗತಿಯನ್ನು ಬಿಚ್ಚಿಟ್ಟಿರುವ ಚಿತ್ರತಂಡ, 1857ರ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಣಿ ಲಕ್ಷ್ಮೀ ಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ಮಾಪಕ ರಾಮ್ ಚರಣ್ ಸ್ಪಷ್ಟಪಡಿಸಿದ್ದಾರೆ.

    ಸಂದರ್ಶನದಲ್ಲಿ ನಿರ್ಮಾಪಕ ರಾಮ್ ಚರಣ್ ಹಾಗೂ ಚಿರಂಜೀವಿ ಅವರು ಭಾಗವಹಿಸಿದ್ದು, ಈ ವೇಳೆ ಅನುಷ್ಕಾ ಅವರು ಸಿನಿಮಾ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಪಾತ್ರದ ಶೂಟಿಂಗ್ ಕೂಡ ನಡೆದಿದೆ ಎಂಬ ಅಂಶವನ್ನು ತಿಳಿಸಿದ್ದಾರೆ. ಚಿತ್ರದ ಆರಂಭದಲ್ಲಿ ರಾಣಿ ಲಕ್ಷ್ಮೀ ಬಾಯಿ ಯುದ್ಧಭೂಮಿಯಲ್ಲಿ ಗಾಯಗೊಂಡ ಸೈನಿಕರಿಗೆ ಉಯಲವಾಡ ನರಸಿಂಹ ರೆಡ್ಡಿ ಅವರ ಸ್ಪೂರ್ತಿದಾಯಕ ಕಥೆಯನ್ನು ಹೇಳುವ ಮೂಲಕವೇ ಚಿತ್ರ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.

    https://twitter.com/VICKY__264/status/1164774167603892226

    ಈಗಾಗಲೇ ಚಿತ್ರದಲ್ಲಿ ನಟಿಸುತ್ತಿರುವ ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ತಮನ್ನಾ, ಜಗಪತಿ ಬಾಬು, ನಯನತಾರಾ ಅವರು ಶೂಟಿಂಗ್‍ನಲ್ಲಿ ಭಾಗಿಯಾಗಿದ್ದಾರೆ. ಚಿರಂಜೀವಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾದ ಟೀಸರ್ ಬಿಡುಗಡೆ ಮಾಡಿತ್ತು. ಅಕ್ಟೋಬರ್ 2 ರಂದು ಸಿನಿಮಾ ತೆರೆಕಾಣುತ್ತಿದೆ.

  • ಕನ್ನಡದಲ್ಲಿ ದಾಖಲೆ ಬರೆದ ಸೈರಾ

    ಕನ್ನಡದಲ್ಲಿ ದಾಖಲೆ ಬರೆದ ಸೈರಾ

    ಹೈದರಾಬಾದ್: ಟಾಲಿವುಡ್‍ನ ಬಹುನಿರೀಕ್ಷಿತ ‘ಸೈರಾ ನರಸಿಂಹರೆಡ್ಡಿ’ ಚಿತ್ರದ ಟೀಸರ್ ಮಂಗಳವಾರ ಬಿಡುಗಡೆ ಆಗಿದೆ. ಈ ಟೀಸರ್ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಕನ್ನಡದಲ್ಲಿ ದಾಖಲೆ ಬರೆದಿದೆ.

    ಸೈರಾ ಸಿನಿಮಾ ಸೇರಿದಂತೆ ಈ ಹಿಂದೆ ಹಲವು ಡಬ್ ಆಗಿರುವ ಟೀಸರ್ ಕನ್ನಡದಲ್ಲಿ ಬಿಡುಗಡೆ ಆಗಿದೆ. ಆದರೆ ಕನ್ನಡದಲ್ಲಿ ಡಬ್ ಆಗಿರುವ ಸೈರಾ ಟೀಸರ್ ರಿಲೀಸ್ ಆದ 24 ಗಂಟೆಯ ಒಳಗಡೆ 10 ಲಕ್ಷಕ್ಕೂ ಹೆಚ್ಚು ವ್ಯೂ ಪಡೆಯುವ ಮೂಲಕ ದಾಖಲೆ ಬರೆದಿದೆ. ಈ ಹಿಂದೆ ‘ಡಿಯರ್ ಕಾಮ್ರೆಡ್’ ಸೇರಿದಂತೆ ಹಲವು ಚಿತ್ರದ ಟ್ರೇಲರ್ ಕನ್ನಡದಲ್ಲಿ ಬಿಡುಗಡೆ ಆಗಿತ್ತು. ಆದರೆ ಯಾವ ಟೀಸರ್ 24 ಗಂಟೆಯ ಒಳಗಡೆ 10 ಲಕ್ಷ ವ್ಯೂ ಪಡೆದಿರಲಿಲ್ಲ.

    ಬಹುತಾರಾಗಣ ಇರುವ ಸೈರಾ ನರಸಿಂಹರೆಡ್ಡಿ ಚಿತ್ರದ ಕನ್ನಡ ಟೀಸರ್ ಇದುವರೆಗೂ 31 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, ತೆಲುಗಿನಲ್ಲಿ 55 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದೆ. ಹಿಂದಿಯಲ್ಲಿ 41 ಲಕ್ಷಕ್ಕೂ ಹೆಚ್ಚು ವ್ಯೂ, ತಮಿಳಿನಲ್ಲಿ 7 ಲಕ್ಷಕ್ಕೂ ಹೆಚ್ಚು ವ್ಯೂ ಹಾಗೂ ಮಲೆಯಾಳಂನಲ್ಲಿ 10 ಲಕ್ಷಕ್ಕೂ ಹೆಚ್ಚು ವ್ಯೂ ಆಗಿದೆ. ಸದ್ಯ ಸೈರಾ ಟೀಸರ್ ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

    ಇತ್ತೀಚೆಗಷ್ಟೆ ಚಿತ್ರತಂಡ ಸಿನಿಮಾದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಈ ವಿಡಿಯೋ ಯೂಟ್ಯೂಬ್‍ನಲ್ಲಿ ಭಾರೀ ಸದ್ದು ಮಾಡಿತ್ತು. ಈ ಸಿನಿಮಾವನ್ನು ನಟ ರಾಮ್ ಚರಣ್ ನಿರ್ಮಿಸುತ್ತಿದ್ದು, ಸ್ಟಾರ್ ನಟರಾದ ಚಿರಂಜೀವಿ, ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ತಮನ್ನಾ, ನಯನತಾರ, ಜಗಪತಿ ಬಾಬು ಸೇರಿದಂತೆ ಬಹುದೊಡ್ಡ ಕಲಾವಿದರ ಬಳಗ ಚಿತ್ರದಲ್ಲಿದೆ.

    ಚಿರಂಜೀವಿ ನಾಯಕನಾಗಿರುವ ಈ ಚಿತ್ರ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲುವಾಡ ನರಸಿಂಹ ರೆಡ್ಡಿಯ ಕಥೆಯಾಧಾರಿತವಾಗಿದೆ. ಮೆಗಾ ಸ್ಟಾರ್, ರೆಡ್ಡಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಸುದೀಪ್ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಸೆಣಸಾಡುವ ಅವುಕು ಪ್ರಾಂತ್ಯದ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಇತಿಹಾಸದಲ್ಲಿಯೂ ಕೂಡ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಈ ಅವುಕು ರಾಜನ ಕ್ರಾಂತಿಯ ಬಗ್ಗೆ ಉಲ್ಲೇಖಗಳಿವೆ.

  • ‘ಅಂದವಾದ’ ಟೀಸರ್ ಬಿಡುಗಡೆ

    ‘ಅಂದವಾದ’ ಟೀಸರ್ ಬಿಡುಗಡೆ

    ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ಅಂದವಾದ ಚಿತ್ರವು ಸದ್ಯ ತನ್ನ ಟೀಸರ್‌ನಿಂದಲೇ ಸದ್ದು ಮಾಡುತ್ತಿದೆ. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ವಿಜಯಪ್ರಕಾಶ್ ಹಾಡಿರುವ ಟೈಟಲ್‍ ಸಾಂಗ್ ಮತ್ತು ಪ್ಯಾಥೋಸಾಂಗ್, ಸೋನುನಿಗಮ್, ಆಲಾ ಬಿ ಬಾಲಾ ಅವರ ಹಾಡುಗಳನ್ನು ಕೇಳುಗರು ಮೆಚ್ಚಿಕೊಂಡಿದ್ದಾರೆ. ಇದೀಗ ಅಂದವಾದ ಚಿತ್ರದ ಟೀಸರ್ ಕೂಡ ಗಮನ ಸೆಳೆಯುತ್ತಿದೆ. ಅದಕ್ಕೆ ಮುಖ್ಯ ಕಾರಣ ಕುರುಕ್ಷೇತ್ರ. ದರ್ಶನ್ ನಟನೆಯ ಕುರುಕ್ಷೇತ್ರ ಚಿತ್ರದ ಜೊತೆಗೆ ಅಂದವಾದ ಚಿತ್ರದ ಟೀಸರನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸಿನಿಮಾ ನೋಡಲು ಬಂದವರೆಲ್ಲಾ ಅಂದವಾದ ಚಿತ್ರದ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲೂ ಈ ಟೀಸರ್‌ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿರೋದು ಹೊಸಬರ ತಂಡಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿದಂತಾಗಿದೆ.

    ಇಡೀ ಸಿನಿಮಾವನ್ನು ಮಾನ್ಸೂನ್ ಫೀಲ್‍ನಲ್ಲಿ ಕಟ್ಟಿಕೊಟ್ಟಿರುವ ನಿರ್ದೇಶಕ ಚಲ, ಹಾಡುಗಳನ್ನೂ ಮಾನ್ಸೂನ್‍ನಲ್ಲೇ ಹೊರತಂದಿದ್ದರು. ಅಲ್ಲದೆ ಮುಂಗಾರು ಮಳೆ, ಗಾಳಿಪಟ ಮೊದಲಾದ ಚಿತ್ರಗಳ ಅಪರೂಪದ ಕಾಂಬಿನೇಷನ್ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಹಾಗೂ ಹೃದಯಶಿವ ತುಂಬಾ ವರ್ಷಗಳ ನಂತರ ಒಂದಾಗಿ ‘ಅಂದವಾದ’ ಹಾಡುಗಳಿಗೆ ಸಾಹಿತ್ಯ ಒದಗಿಸಿರುವುದು ಚಿತ್ರದ ವಿಶೇಷತೆಗಳಲ್ಲೊಂದು. ಸಂಗೀತ ನಿರ್ದೇಶಕ ಗುರುಕಿರಣ್ ಅವರ ಆಡಿಯೋ ಕಂಪನಿಯಲ್ಲೇ ಹಾಡುಗಳನ್ನು ಹೊರತಂದಿರೋದು ಚಿತ್ರದ ಹೆಚ್ಚುಗಾರಿಕೆ.

    ಇಡೀ ಸಿನಿಮಾವನ್ನು ಮಳೆಗಾಲದಲ್ಲೇ ಚಿತ್ರೀಕರಿಸಿರೋದು ವಿಶೇಷ. ಮಾನ್ಸೂನ್‍ನಲ್ಲಿ ನಡೆಯುವ ಬೆಚ್ಚಗಿನ ಪ್ರೇಮಕಥೆ ಇದಾಗಿದ್ದು, ಅದಕ್ಕೆ ತಕ್ಕಂಥ ಹಾಡುಗಳೂ ಚಿತ್ರದಲ್ಲಿವೆ. ಅಲ್ಲದೇ ಇದೊಂದು ಮ್ಯೂಸಿಕಲ್ ಲವ್ ಸ್ಟೋರಿಯಾದರೂ, ನಗ್ತಾ ನಗ್ತಾನೇ ಅಳಿಸುವಂಥ ಕಥೆಯಿದೆ. ವಿಕ್ರಮ್ ವರ್ಮನ್ ಚಿತ್ರದ ಏಳು ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ಗುರುಕಿರಣ್‍ರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ತಲಾ ಎರಡೆರಡು ಹಾಡಿಗೆ, ಇನ್ನುಳಿದಂತೆ ಹೃದಯಶಿವ ಸಾಹಿತ್ಯ ಬರೆದಿದ್ದಾರೆ. ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಇನ್ನು ಮೊನ್ನೆ ರಿಲೀಸ್ ಆಗಿರುವ ಟೀಸರ್‌ಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲರೂ ತಂತಮ್ಮ ಹುಡುಗಿಯರಿಗೆ ತಾಜಮಹಲ್ ತೋರಿಸ್ಬೇಕು ಅನ್ಕೋಳ್ತಾರೆ. ಆದ್ರೆ, ತಾಜ್‍ಮಹಲ್‍ಗೆ ನಮ್ ಹುಡ್ಗೀನ ತೋರಿಸ್ಬೇಕು ಅನ್ಕೊಂಡಿದ್ದೀನಿ ಎಂಬ ಡೈಲಾಗ್ ಇರುವ ಈ ಟೀಸರ್ ನೋಡಿದವರು ಫಿದಾ ಆಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಆಲೋಚನೆಯಿದೆ’ ಎನ್ನುತ್ತಾರೆ ನಿರ್ದೇಶಕ ಚಲ.

    ಜೈ ಹಾಗೂ ಅನುಷಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಸಕಲೇಶಪುರ, ಬಿಸಿಲೆ ಘಾಟ್, ಚಿಕ್ಕಮಗಳೂರು ಹಾಗೂ ಅಂಡಮಾನ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮಧುಶ್ರೀ ಗೋಲ್ಡನ್ ಫ್ರೇಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಡಿ.ಆರ್.ಮಧು ಜಿ. ರಾಜ್ ಹಾಗೂ ಹೆಚ್.ಸಿ. ವಿಜಯಕುಮಾರ್ ಬಂಡವಾಳ ಹೂಡಿದ್ದಾರೆ.

  • ನಾನು ಮತ್ತು ಗುಂಡ: ತೆರೆಗಾಣೋ ಹಾದಿಯಲ್ಲೇ ಎರಡನೇ ಟೀಸರ್ ಅನಾವರಣ!

    ನಾನು ಮತ್ತು ಗುಂಡ: ತೆರೆಗಾಣೋ ಹಾದಿಯಲ್ಲೇ ಎರಡನೇ ಟೀಸರ್ ಅನಾವರಣ!

    ಬೆಂಗಳೂರು : ಈಗ ಕನ್ನಡ ಚಿತ್ರರಂಗದಲ್ಲಿ ಸಿದ್ಧಸೂತ್ರಗಳ ಚಿತ್ರಗಳ ಭರಾಟೆಯ ನಡುವೆಯೂ ಹೊಸಾ ಅಲೆಯ ಸಿನಿಮಾಗಳು ಸದ್ದು ಮಾಡುತ್ತಿವೆ. ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿಯೇ ಇಂಥಾ ವಿಶೇಷವಾದ ಕಥೆ ಹೇಳೋ ಕಲೆಗಾರಿಕೆಯೂ ಆಗಾಗ ಪ್ರದರ್ಶನವಾಗುತ್ತಲೇ ಬಂದಿದೆ. ಇದೀಗ ಅದೇ ರೀತಿಯ ವಿಶೇಷತೆ ಹೊಂದಿರೋ ಕಥೆ, ಪ್ರಯೋಗಾತ್ಮಕ ಅಂಶಗಳೊಂದಿಗೆ ಮೂಡಿ ಬಂದಿರೋ ಚಿತ್ರ ನಾನು ಮತ್ತು ಗುಂಡ. ಈ ಹಿಂದೆ ಮೊದಲ ಟೀಸರ್ ಮೂಲಕ ಗಮನ ಸೆಳೆದಿದ್ದ ಈ ಚಿತ್ರದ ಮತ್ತೊಂದು ಟೀಸರ್ ಬಿಡುಗಡೆಯಾಗಿದೆ.

    ಇದು ಆಟೋ ಶಂಕ್ರ ಮತ್ತು ಮುದ್ದಾದ ನಾಯಿಯ ಸುತ್ತ ಸುತ್ತೋ ಭಾವನಾತ್ಮಕ ಕಥೆಯ ಚಿತ್ರ. ಸಿನಿಮಾ ಅಂದಾಕ್ಷಣ ಸಿದ್ಧ ಸೂತ್ರದ ಕಲ್ಪನೆ ಸುಳಿದಾಡೋ ಹೊತ್ತಿನಲ್ಲಿಯೇ ನಾನು ಮತ್ತು ಗುಂಡ ಟೀಸರ್ ಬೇರೆಯದ್ದೇ ಹೊಳಹು ನೀಡುವ ಮೂಲಕ ಬಹು ನಿರೀಕ್ಷಿತ ಚಿತ್ರವಾಗಿ ಅನಾವರಣಗೊಂಡಿದೆ. ಮೊದಲ ಟೀಸರ್‍ನಲ್ಲಿಯೇ ಇದು ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಕಥನದ ಚಿತ್ರವೆಂಬುದು ಜಾಹೀರಾಗಿತ್ತು. ಈ ಎರಡನೇ ಟೀಸರ್‍ನಲ್ಲಿ ಅದು ಮತ್ತಷ್ಟು ತೀವ್ರವಾಗಿ ಅನಾವರಣಗೊಂಡು ಕಥೆಯ ಒಂದಷ್ಟು ಬೇರೆ ಆಯಾಮಗಳನ್ನೂ ಕಾಣಿಸಿದೆ.

    ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ನಟಿಸಿದ್ದಾರೆ. ಅವರು ಮತ್ತು ಮುದ್ದಾದ ನಾಯಿ ಈ ಸಿನಿಮಾ ಕೇಂದ್ರಬಿಂದುಗಳು. ಸಂಯುಕ್ತಾ ಹೊರನಾಡು ನಾಯಕಿಯಾಗಿ ನಟಿಸಿದ್ದಾರೆ. ಇಲ್ಲಿ ಇನ್ನೂ ಒಂದಷ್ಟು ಪಾತ್ರಗಳು ಶಿವರಾಜ್‍ಗೆ ಸಾಥ್ ಕೊಟ್ಟಿವೆ. ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಆದ ನಂತರ ಶಿವರಾಜ್ ಬಹು ಬೇಡಿಕೆಯ ಕಾಮಿಡಿ ನಟನಾಗಿ ಬ್ಯುಸಿಯಾಗಿದ್ದಾರೆ. ಆದರೆ ಆ ಶೋನ ಮುಕ್ತಾಯದ ಕ್ಷಣಗಳಲ್ಲಿಯೇ ಶುರುವಾಗಿದ್ದ ಚಿತ್ರ ನಾನು ಮತ್ತು ಗುಂಡ. ಇನ್ನೇನು ಶೀಘ್ರದಲ್ಲಿಯೇ ತೆರೆಗಾಣಲಿರೋ ಈ ಚಿತ್ರವೀಗ ಎರಡನೇ ಟೀಸರ್ ಮೂಲಕ ಮತ್ತಷ್ಟು ಜನರನ್ನು ತಲುಪಿಕೊಂಡಿದೆ.

  • ಶ್ಯಾನೆ ಟಾಪಾಗಿದೆಯಂತೆ ಸಿಂಗನ ಕಥೆ!

    ಶ್ಯಾನೆ ಟಾಪಾಗಿದೆಯಂತೆ ಸಿಂಗನ ಕಥೆ!

    ಬೆಂಗಳೂರು: ಚಿರಂಜೀವಿ ಸರ್ಜಾ `ಸಿಂಗ’ ಚಿತ್ರ ಇದೇ ತಿಂಗಳ ಹತ್ತೊಂಬತ್ತರಂದು ಬಿಡುಗಡೆಗೆ ರೆಡಿಯಾಗಿದೆ. ಹಾಡು, ಟ್ರೈಲರ್, ಪೋಸ್ಟರ್ ಸೇರಿದಂತೆ ಎಲ್ಲದರಲ್ಲಿಯೂ ಹೊಸ ಕಳೆ ತುಂಬಿಕೊಂಡಿರೋ ಈ ಚಿತ್ರಕ್ಕೆ ಪಾಸಿಟಿವ್ ಟಾಕ್‍ನ ಒಡ್ಡೋಲಗ ಭರ್ಜರಿ ಸಾಥ್ ನೀಡುತ್ತಿದೆ. ಟ್ರೈಲರ್ ಮುಂತಾದ ಬಿಡುಗಡೆ ಪೂರ್ವ ಚಟುವಟಿಕೆಗಳ ಮೂಲಕ ಚರ್ಚೆಗೆ ಕಾರಣವಾಗೋ ಚಿತ್ರಗಳು ಗೆಲುವು ಕಂಡ ಅದೆಷ್ಟೋ ಉದಾಹರಣೆಗಳಿವೆ. ಈ ಫಾರ್ಮುಲಾ ಆಧರಿಸಿ ಹೇಳೋದಾದರೆ ಸಿಂಗ ಚಿತ್ರದ ಗೆಲುವು ನಿಚ್ಚಳವಾದಂತಿದೆ!

    ಅದೇನೇ ಹೈಪು ಸೃಷ್ಟಿಯಾದರೂ ಚಿತ್ರವೊಂದು ಗೆಲ್ಲೋದರಲ್ಲಿ ಗಟ್ಟಿ ಕಥೆಯದ್ದು ಸಿಂಹಪಾಲು. ಸಿಂಗ ಚಿತ್ರದ ಕಥೆಯೂ ಅಷ್ಟೇ ಅದ್ಭುತವಾಗಿದೆಯಂತೆ. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ವಿಶಿಷ್ಟವಾದ ಟೇಸ್ಟ್ ಹೊಂದಿರುವವರು ಚಿರಂಜೀವಿ ಸರ್ಜಾ. ಅವರೇ ಈ ಕಥೆ ಕೇಳಿ ಆರಂಭದಲ್ಲಿಯೇ ಥ್ರಿಲ್ ಆಗಿದ್ದರಂತೆ. ಮಾಸ್ ಸೇರಿದಂತೆ ಎಲ್ಲ ಅಂಶಗಳಿಂದ ಮೈ ಕೈ ತುಂಬಿಕೊಂಡಿರೋ ಈ ಕಥೆಯ ಸೊಗಸು ಕಂಡೇ ವಿಶೇಷ ಆಸಕ್ತಿ ವಹಿಸಿ ಚಿರು ಈ ಚಿತ್ರವನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಸಿಂಗ ತಮ್ಮ ವೃತ್ತಿ ಬದುಕಿಗೆ ಹೊಸ ದಿಕ್ಕಾಗಲಿದೆ ಎಂಬ ಗಾಢ ವಿಶ್ವಾಸವೂ ಅವರಲ್ಲಿದೆ.

    ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಸಿನಿಮಾದ ಶ್ಯಾನೆ ಟಾಪಗೌಳೆ ಎಂಬ ಹಾಡೊಂದು ಭಾರೀ ಫೇಮಸ್ ಆಗಿ ಟ್ರೆಂಡ್ ಸೆಟ್ ಮಾಡಿದೆ. ಈ ಹಾಡಿನ ಅದ್ಧೂರಿತನ ಇಡೀ ಚಿತ್ರದಲ್ಲಿಯೂ ತುಂಬಿಕೊಂಡಿದೆಯಂತೆ. ನಿರ್ದೇಶಕರಾದ ವಿಜಯ್ ಕಿರಣ್ ಅಷ್ಟೊಂದು ಕಾಳಜಿಯಿಂದ, ಎಲ್ಲ ಪ್ರೇಕ್ಷಕ ವರ್ಗವನ್ನೂ ಸಂತುಷ್ಟಗೊಳಿಸುವ ಇರಾದೆಯಿಂದಲೇ ಸಿಂಗನನ್ನು ಶೃಂಗರಿಸಿದ್ದಾರೆ. ಯಶಸ್ವಿ ನಿರ್ಮಾಪಕ ಉದಯ್ ಕೆ ಮೆಹ್ತಾ ಅಂಥಾದ್ದೇ ಕಾಳಜಿಯಿಂದ ಪ್ರತಿ ಹೆಜ್ಜೆಯಲ್ಲಿಯೂ ಸಿಂಗನನ್ನು ಪೊರೆದಿದ್ದಾರೆ. ಇಂಥಾ ಪ್ರೀತಿಯಿಂದಲೇ ಪೊಗದಸ್ತಾಗಿ ಮೂಡಿ ಬಂದಿರೋ ಈ ಚಿತ್ರ ಇದೇ ಹತ್ತೊಂಬತ್ತರಂದು ನಿಮ್ಮ ಮುಂದೆ ಬರಲಿದೆ.