Tag: teaser

  • ಚೇಸ್ ಟೀಸರ್ ರಿಲೀಸ್ ಮಾಡಿದ ದಿಗ್ಗಜರು

    ಚೇಸ್ ಟೀಸರ್ ರಿಲೀಸ್ ಮಾಡಿದ ದಿಗ್ಗಜರು

    ಬೆಂಗಳೂರು: ಮಹಿಳೆಯರು ರಾತ್ರಿ ಹೊತ್ತು ಕ್ಯಾಬ್‍ಗಳಲ್ಲಿ ಪ್ರಯಾಣಿಸುವುದು ಅದೆಷ್ಟು ಸೂಕ್ತ ಎಂಬ ವಿಷಯವನ್ನಿಟ್ಟುಕೊಂಡು ಒಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೆಣೆದಿರುವ ಚಿತ್ರ ಚೇಸ್. ವಿಲೋಕ್ ಶೆಟ್ಟಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಎಸ್.ಕೆ. ಭಗವಾನ್, ಓಂ ಸಾಯಿಪ್ರಕಾಶ್ ಹಾಗೂ ಬರಗೂರು ರಾಮಚಂದ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಯುವ ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದು ವಿಶೇಷವಾಗಿತ್ತು. ಚೇಸ್ ಚಿತ್ರತಂಡ ಈ ಮೂವರು ದಿಗ್ಗಜರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿತು. ಈಗಿನ ಕಾಲದ ಜನರಿಗೆ ಹಿಡಿಸುವಂಥ ಹೊಸ ಶೈಲಿಯಲ್ಲಿ ಚಿತ್ರವನ್ನು ನಿರ್ಮಿಸಿರುವ ಈ ಯುವ ತಂಡಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರಲಿ ಎಂಬ ಶುಭ ಹಾರೈಕೆಯ ಮಾತುಗಳು ದಿಗ್ಗಜರಿಂದ ಕಾಣಿಕೆಯಾಗಿ ಸಿಕ್ಕಿತು.

    ಕ್ರೈಂ, ಥ್ರಿಲ್ಲರ್, ಮಿಸ್ಟ್ರಿ ಕಥಾನಕ ಒಳಗೊಂಡ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಅರವಿಂದರಾವ್, ಪ್ರಮೋದ್ ಶೆಟ್ಟಿ, ರಾಜೇಶ್ ನಟರಂಗ, ರೆಹಮಾನ್ ಹಾಗೂ ಬಾಲಿವುಡ್‍ನ ಎಬಿಸಿಡಿ ಚಿತ್ರದಲ್ಲಿ ನಟಿಸಿದ ಸುಶಾಂತ್ ಪೂಜಾರಿ ಸಹ ನಟಿಸಿದ್ದಾರೆ.

    ನಿರ್ದೇಶಕ ವಿಲೋಕ್ ಶೆಟ್ಟಿ ಮಾತನಾಡಿ, ಈ ಚಿತ್ರ ನಮ್ಮ ತಂಡದ 2 ವರ್ಷಗಳ ಪ್ರಯತ್ನದ ಫಲ. ನಮ್ಮ ಚಿತ್ರದ ಟೀಸರನ್ನು ಹಿರಿಯ ನಿರ್ದೇಶಕರಿಂದಲೇ ಬಿಡುಗಡೆ ಮಾಡಿಸಿದರೆ ಅರ್ಥಪೂರ್ಣವಾಗಿರುತ್ತೆ ಎಂದು ಆಹ್ವಾನಿಸಿದಾಗ ಅವರೆಲ್ಲ ಪ್ರೀತಿಯಿಂದ ಬಂದು ಹರಸಿದ್ದಾರೆ. ಬಹಳಷ್ಟು ಕಲಾವಿರು ಈ ಚಿತ್ರದಲ್ಲಿ ಅಭಿನಯಿಸಿರುವುದರಿಂದ ಅವರೆಲ್ಲರ ಡೇಟ್ಸ್ ಹೊಂದಿಸಿಕೊಂಡು ಶೂಟ್ ಮಾಡುವುದು ಸ್ವಲ್ಪ ತಡವಾಯಿತು ಎಂದು ಹೇಳಿದರು.

    ನಾಯಕಿ ರಾಧಿಕಾ ನಾರಾಯಣ್ ಮಾತನಾಡಿ, ನನ್ನ ಕೆರಿಯರ್‍ನಲ್ಲೇ ಇಂಥ ಪಾತ್ರ ಮಾಡಿಲ್ಲ, ಇದು ನನಗೆ ತುಂಬಾ ವಿಶೇಷ ಪಾತ್ರ. ಪೊಲೀಸ್ ಇನ್‍ಸ್ಪೆಕ್ಟರ್ ಟ್ರೈನಿಂಗ್ ಪಡೆಯುತ್ತಿರುವ ಯುವತಿಯಾಗಿ ನಾನು ಅಭಿನಯಿಸಿದ್ದೇನೆ ಎಂದು ಹೇಳಿದರು. ನಂತರ ನಟ ಸುಶಾಂತ್ ಪೂಜಾರಿ ಮಾತನಾಡಿ ನನ್ನ ತಾಯಿ ಉಡುಪಿಯವರು, ನಾನು ಇಲ್ಲೇ ಹುಟ್ಟಿದ್ದರೂ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ನನಗೆ ತುಂಬಾ ಸ್ಪೆಷಲ್ ರೋಲ್ ಈ ಚಿತ್ರದಲ್ಲಿದೆ ಎಂದು ಹೇಳಿದರು.

    ನಟ ಅರವಿಂದರಾವ್ ಮಾತನಾಡಿ ಬರೀ ಇನ್‍ಸ್ಪೆಕ್ಟರ್ ಪಾತ್ರಗಳನ್ನೇ ಮಾಡಿ ಬೇಸತ್ತಿದ್ದ ನನಗೆ ಈ ಚಿತ್ರದಲ್ಲಿ ಒಬ್ಬ ಡಾಕ್ಟರ್ ಪಾತ್ರ ಕೊಟ್ಟಿದ್ದರು. ಕನ್ನಡದಲ್ಲಿ ಈ ಥರದ ಸಿನಿಮಾ ಬಂದಿಲ್ಲ ಎಂದು ಹೇಳಿದರು. ಈ ಚಿತ್ರಕ್ಕೆ ಕಾರ್ತಿಕ್ ಆಚಾರ್ಯ ಅವರ ಸಂಗೀತವಿದ್ದು, ಅನಂತರಾಜ ಅರಸ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಿಂಪ್ಲಿ ಫನ್ ಮೀಡಿಯಾ ನೆಟ್‍ವರ್ಕ್ ಮೂಲಕ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಅವರ ನಿರ್ಮಾಣದ ಚೇಸ್ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ.

  • ಕಾಲವೇ ಮೋಸಗಾರ ಟೀಸರ್ ನಲ್ಲಿ ಪ್ರೀತಿ ದ್ವೇಷಗಳ ಪಸೆ!

    ಕಾಲವೇ ಮೋಸಗಾರ ಟೀಸರ್ ನಲ್ಲಿ ಪ್ರೀತಿ ದ್ವೇಷಗಳ ಪಸೆ!

    ಬೆಂಗಳೂರು: ಶೀರ್ಷಿಕೆಯಲ್ಲಿಯೇ ಕುತೂಹಲದ ಸೆಲೆಯಿಟ್ಟುಕೊಂಡಿರೋ ಸಿನಿಮಾಗಳು ಆಗಾಗ ರೂಪುಗೊಳ್ಳುತ್ತಿರುತ್ತವೆ. ಅದಕ್ಕೆ ತಕ್ಕುದಾದ ಕಂಟೆಂಟಿನೊಂದಿಗೆ ಇಂಥಾ ಹೊಸ ಅಲೆಯ ಚಿತ್ರಗಳೆಲ್ಲ ಗೆಲ್ಲುತ್ತಿರೋದರಿಂದಾಗಿ ಆ ಬಗ್ಗೆ ವ್ಯಾಪಕ ಭರವಸೆಯೂ ಮೂಡಿಕೊಂಡಿದೆ. ಪ್ರೇಕ್ಷಕರಲ್ಲಿ ಪಡಿಮೂಡಿಕೊಂಡಿರೋ ಅಂಥಾ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವಂತೆ ಅಣಿಗೊಂಡಿರುವ ಚಿತ್ರ ‘ಕಾಲವೇ ಮೋಸಗಾರ’. ಈ ಹಿಂದೆ ಮೋಷನ್ ಪೋಸ್ಟರ್ ನೊಂದಿಗೆ ಚಕಿತಗೊಳಿಸಿದ್ದ ಈ ಸಿನಿಮಾದ ಟೀಸರ್ ಇದೀಗ ಲಾಂಚ್ ಆಗಿದೆ.

    ಭರತ್ ಸಾಗರ್ ಮತ್ತು ಕಿರುತೆರೆ ನಟಿ ಯಶಸ್ವಿನಿ ರವೀಂದ್ರ ನಾಯಕ ನಾಯಕಿಯರಾಗಿ ನಟಿಸಿರೋ ಈ ಚಿತ್ರವನ್ನು ಸಂಜಯ್ ವದತ್ ನಿರ್ದೇಶನ ಮಾಡಿದ್ದಾರೆ. ಹೊಸತನ ಹೊಮ್ಮಿಸುವಂಥಾ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್‍ಗಳನ್ನು ನೋಡಿದ್ದ ಪ್ರೇಕ್ಷಕರೆಲ್ಲ ಇದು ಯಾವ ಥರದ ಕಥೆಯನ್ನೊಳಗೊಂಡಿರುವ ಚಿತ್ರವೆಂಬ ಪ್ರಶ್ನೆ ಕಾಡಿತ್ತು. ಚಿತ್ರತಂಡವೀಗ ಈ ಟೀಸರ್ ಮೂಲಕ ಅದಕ್ಕೆ ಉತ್ತರಿಸೋ ಪ್ರಯತ್ನ ಮಾಡಿದೆ. ಇದುವೇ ಈ ಸಿನಿಮಾ ಪ್ರೀತಿ, ಪ್ರೇಮ ಮತ್ತು ದ್ವೇಷದ ಕಥೆ ಹೊಂದಿದೆ ಎಂಬಂಥಾ ಸುಳಿವನ್ನೂ ರವಾನಿಸಿದೆ. ‘ಈ ಹುಡುಗೀರು ಮೆಡಿಸಿನ್ ಇದ್ದಂಗೆ, ಎಕ್ಸ್ ಪೆರಿ ಡೇಟ್ ಜೊತೇಲೇ ಬರ್ತಾರೆ’ ಎಂಬ ಡೈಲಾಗಂತೂ ಯುವ ಸಮುದಾಯವನ್ನು ಒಂದೇ ಗುಕ್ಕಿಗೆ ಸೆಳೆಯುವಂತಿದೆ.

    https://www.youtube.com/watch?v=sTSLk_VY5EA

    ಒಟ್ಟಾರೆಯಾಗಿ ಇದೊಂದು ಅಪರೂಪದ ಕಥೆಯನ್ನೊಳಗೊಂಡಿರುವ ಚಿತ್ರ ಅನ್ನೋದಂತೂ ಈ ಟೀಸರ್ ಮೂಲಕ ಸ್ಪಷ್ಟವಾಗಿದೆ. ಅಂದಹಾಗೆ ಇದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನೊಳಗೊಂಡಿರೋ ಚಿತ್ರ. ಭಾವ ಸ್ಪಂದನ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಇದನ್ನು ರಜತ್ ಸಾಳಂಕೆ ನಿರ್ಮಾಣ ಮಾಡಿದ್ದಾರೆ. ದೊಡ್ಡ ತಾರಾಗಣ, ಪ್ರತಿಭಾನ್ವಿತ ತಾಂತ್ರಿಕ ವರ್ಗದೊಂದಿಗೆ ಈ ಸಿನಿಮಾ ಎಲ್ಲರನ್ನೂ ಬೆರಗಾಗಿಸುವ ಉಮೇದಿನೊಂದಿಗೆ ಚಿತ್ರಮಂದಿರಗಳತ್ತ ಮುಖ ಮಾಡಿ ನಿಂತಿದೆ. ಹೀಗೆ ಹಂತ ಹಂತವಾಗಿ ಕ್ರಿಯೇಟಿವ್ ಕೆಲಸ ಕಾರ್ಯಗಳ ಮೂಲಕವೇ ಸುದ್ದಿಯಲ್ಲಿರೋ ಈ ಸಿನಿಮಾವನ್ನು ಆದಷ್ಟು ಬೇಗನೆ ತೆರೆಗಾಣಿಸುವ ತಯಾರಿ ನಡೆಯುತ್ತಿದೆ.

  • ಟೀಸರ್ ಮೂಲಕ ಮಗನ ಹೆಸ್ರು ರಿವೀಲ್ ಮಾಡಿದ ರಿಷಬ್

    ಟೀಸರ್ ಮೂಲಕ ಮಗನ ಹೆಸ್ರು ರಿವೀಲ್ ಮಾಡಿದ ರಿಷಬ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಟೀಸರ್ ಮೂಲಕ ತಮ್ಮ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ.

    ರಿಷಬ್ ತಮ್ಮ ಮಗನ ವಿಡಿಯೋ ಮಾಡುವ ಮೂಲಕ ಮನೆಯ ಹೀರೋನನ್ನು ಪರಿಚಯಿಸಿದ್ದಾರೆ. ರಿಷಬ್ ಶೆಟ್ಟಿ ತಮ್ಮ ಮಗನಿಗೆ ರಣ್‍ವಿತ್ ಶೆಟ್ಟಿ ಎಂದು ನಾಮಕರಣ ಮಾಡಿದ್ದಾರೆ. ಮೊದಲಿಗೆ ರಿಷಬ್ ಶೆಟ್ಟಿ ಟೀಸರಿನಲ್ಲಿ ಡಿಟೆಕ್ಟಿವ್ ಆಗಿ ಕಾಣಿಸಿಕೊಂಡಿದ್ದು, ನಂತರ ಮಗನಿಗೆ ಬೇರೆ ಬೇರೆ ಗೆಟಪಿನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.

    ಗುರುವಾರ ಮಕ್ಕಳ ದಿನಾಚರಣೆ ಇದ್ದ ಹಿನ್ನೆಲೆಯಲ್ಲಿ ರಿಷಬ್ ತಮ್ಮ ಟ್ವಿಟ್ಟರಿನಲ್ಲಿ ಈ ಟೀಸರ್ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನಮ್ಮನೆ ಮುದ್ದು ಮಗುವನ್ನು ನಿಮಗೆ ಪರಿಚಯ ಮಾಡಿಕೊಡುತ್ತಿದ್ದೀವಿ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಏಪ್ರಿಲ್ 7ರಂದು ರಿಷಬ್ ಅವರ ಪತ್ನಿ ಪ್ರಗತಿ ಶೆಟ್ಟಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ತಮ್ಮ ಟ್ವಿಟ್ಟರಿನಲ್ಲಿ, “Yes?? it’s a Hero” ಎಂದು ಬರೆದ ಹುಡುಗನ ಎಮೋಜಿ ಹಾಕಿದ್ದರು. ಜೊತೆಗೆ ಆಸ್ಪತ್ರೆಯ ಬೆಡ್ ಮೇಲಿರುವ ಪತ್ನಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.

    ರಿಷಬ್ ಶೆಟ್ಟಿ ಅವರು ಫ್ರೆಬವರಿ 9 ರಂದು 2017 ರಲ್ಲಿ ಮೂಲತಃ ಶಿವಮೊಗ್ಗದ ರಿಪ್ಪನ್ ಪೇಟೆಯ ಪ್ರಗತಿ ಅವರನ್ನು ಮದುವೆಯಾಗಿದ್ದರು.

  • ಕನ್ನಡ ರಾಜ್ಯೋತ್ಸವಕ್ಕೆ ‘ಒಡೆಯ’ನ ಗಿಫ್ಟ್- ಟೀಸರ್ ರಿಲೀಸ್

    ಕನ್ನಡ ರಾಜ್ಯೋತ್ಸವಕ್ಕೆ ‘ಒಡೆಯ’ನ ಗಿಫ್ಟ್- ಟೀಸರ್ ರಿಲೀಸ್

    ಬೆಂಗಳೂರು: ಇಂದು ಸಮಸ್ತ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದಾರೆ. ಇತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ‘ಒಡೆಯ’ ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ದೀಪಾವಳಿ ಹಬ್ಬಕ್ಕೆ ಸಿಹಿ ಸುದ್ದಿ ಕೊಟ್ಟಿದ್ದರು. ಅವರು ಹೇಳಿದಂತೆ ಕನ್ನಡಿಗರಿಗೆ ಆ್ಯಕ್ಷನ್ ‘ಒಡೆಯ’ ನ ದರ್ಶನ ಮಾಡಿಸಿದ್ದಾರೆ.

    ದರ್ಶನ್ ಅಭಿನಯದ ‘ಒಡೆಯ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ವಿಡಿಯೋ ಕೇವಲ 1 ನಿಮಿಷ 4 ಸೆಕೆಂಡ್‍ಗಳು ಮಾತ್ರ ಇದೆ. “ನಾನು ಅಧಿಕಾರದ ಆಸೆಯಿಂದ ಬಂದಿಲ್ಲ. ಅಧಿಕಾರನೇ ಆಸೆ ಪಟ್ಟು ನನ್ನನ್ನು ಇಲ್ಲಿಗೆ ಕರೆಸಿಕೊಂಡಿದೆ. ಇನ್ಮುಂದೆ ಅಧಿಕಾರನೂ ನಂದೆನೇ, ಆಜ್ಞೆಯೂ ನಂದೆನೇ” ಎಂಬ ಮಾಸ್ ಡೈಲಾಗ್ ಮೂಲಕ ಟೀಸರ್ ಶುರುವಾಗಿದೆ.

    ಟೀಸರ್ ಪೂರ್ತಿ ದರ್ಶನ್ ಅವರ ಆ್ಯಕ್ಷನ್ ಝಲಕನ್ನು ನೋಡಬಹುದು. ಈ ಮೂಲಕ ಆ್ಯಕ್ಷನ್ ಪ್ರಿಯರಿಗೆ ದರ್ಶನ್ ಲಾಂಗ್ ಹಿಡಿದು ದರ್ಶನ ಕೊಟ್ಟಿದ್ದಾರೆ. ಈಗಾಗಲೇ ಯೂಟ್ಯೂಬ್‍ನಲ್ಲಿ 4 ಲಕ್ಷಕ್ಕೂ ಅಧಿಕ ವ್ಯೂವ್ಸ್ ಕಂಡಿದೆ. 67 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.

    ‘ಒಡೆಯ’ ಸಿನಿಮಾದಲ್ಲಿ ದರ್ಶನ್ ಗಜೇಂದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಎಂ.ಡಿ. ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಎನ್.ಸಂದೇಶ್ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಅಣ್ಣ-ತಮ್ಮಂದಿರ ಸಿನಿಮಾವಾಗಿದೆ.

    ದರ್ಶನ್ ಅವರು ಕೂಡ ಟ್ವೀಟ್ ಮಾಡುವ ಮೂಲಕ ಜನರಿಗೆ ಕನ್ನಡ ರಾಜ್ಯೋತ್ವವಕ್ಕೆ ಶುಭಾ ಕೋರಿದ್ದಾರೆ. “ಕನ್ನಡ ನಾಡಲ್ಲಿ ಹುಟ್ಟಿಬರಲು ಪುಣ್ಯ ಮಾಡಿರಲೇಬೇಕು. ಸಮಸ್ತ ಕನ್ನಡ ಕುಲಕೋಟಿಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ” ಎಂದು ಬರೆದು ವಿಶ್ ಮಾಡಿದ್ದಾರೆ.

  • ಕನ್ನಡ ರಾಜ್ಯೋತ್ಸವಕ್ಕೆ ದರ್ಶನ್ ಭರ್ಜರಿ ಗಿಫ್ಟ್ – ಒಡೆಯ ಚಿತ್ರದ ಟೀಸರ್ ರಿಲೀಸ್

    ಕನ್ನಡ ರಾಜ್ಯೋತ್ಸವಕ್ಕೆ ದರ್ಶನ್ ಭರ್ಜರಿ ಗಿಫ್ಟ್ – ಒಡೆಯ ಚಿತ್ರದ ಟೀಸರ್ ರಿಲೀಸ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ರಾಜ್ಯೋತ್ಸವ ದಿನದಂದು ತಮ್ಮ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಲಿದ್ದಾರೆ.

    ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ನಮ್ಮ ‘ಒಡೆಯ’ ಚಿತ್ರದ ಟೀಸರ್ ಇದೇ ನವೆಂಬರ್ 1 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಬೆಳಗ್ಗೆ 9:55ಕ್ಕೆ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ- ಆಶೀರ್ವಾದ ಸದಾ ಹೀಗೆ ಇರಲಿ. ನಿಮ್ಮ ದಾಸ ದರ್ಶನ್” ಎಂದು ಟ್ವೀಟ್ ಮಾಡಿದ್ದಾರೆ.

    ಶನಿವಾರ ದರ್ಶನ್, “ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮ್ಮ ಬಾಳಿಗೆ ಮತ್ತಷ್ಟು ಹೊಸ ಬೆಳಕನ್ನು ತರಲಿ ಎಂದು ಆಶಿಸುತ್ತೇನೆ. ಒಡೆಯ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ? ನಿಮ್ಮ ಪ್ರೀತಿಗೆ ಸದಾ ಆಭಾರಿ” ಎಂದು ಟ್ವೀಟ್ ಮಾಡಿದ್ದರು.

    ಇತ್ತೀಚೆಗೆಷ್ಟೆ ಒಡೆಯ ಚಿತ್ರತಂಡ ಸ್ವಿಡ್ಜರ್ ಲೆಂಡ್‍ಗೆ ತೆರಳಿದ್ದು, ಅಲ್ಲಿನ ಸಾಂಗ್ ಶೂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೊಂದು ಅಣ್ಣ-ತಮ್ಮಂದಿರ ಸಿನಿಮಾವಾಗಿದ್ದು, ದರ್ಶನ್ ಗಜೇಂದ್ರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಒಡೆಯ ತಮಿಳಿನ ‘ವೀರಂ’ ಚಿತ್ರದ ರಿಮೇಕ್ ಆಗಿದ್ದು, ಎಂ.ಡಿ ಶ್ರೀಧರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ರಾಘವಿ ತಿಮ್ಮಯ್ಯ, ಯಶಸ್ ಸೂರ್ಯ, ಚಿಕ್ಕಣ್ಣ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

  • ‘ದಿಲ್ ಕಾ ರಾಜ’ ಎಂದು ಸಿನಿರಂಗಕ್ಕೆ ಪದ್ಮಾವತಿ ರೀ ಎಂಟ್ರಿ

    ‘ದಿಲ್ ಕಾ ರಾಜ’ ಎಂದು ಸಿನಿರಂಗಕ್ಕೆ ಪದ್ಮಾವತಿ ರೀ ಎಂಟ್ರಿ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿದ್ದ ನಟಿ ರಮ್ಯಾ ಸಿನಿಮಾರಂಗದಿಂದ ದೂರ ಸರಿದು ತುಂಬಾ ವರ್ಷಗಳೇ ಕಳೆದಿವೆ. ಇತ್ತ ಲೋಕಸಭೆ ಚುನಾವಣೆ ಬಳಿಕ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದೀಗ ನನ್ನ ‘ದಿಲ್ ಕಾ ರಾಜ’ ಎಂದು ಪದ್ಮಾವತಿ ಸಿನಿರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.

    ಹೌದು. ನಟ ಪುನೀತ್ ರಾಜ್‍ಕುಮಾರ್ ಅಭಿನಯದ ‘ಅಭಿ’ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಮೋಹಕ ತಾರೆ ರಮ್ಯಾ ಸ್ಯಾಂಡಲ್‍ವುಡ್ ಕ್ವೀನ್ ಎಂದೇ ಖ್ಯಾತಿ ಪಡೆದಿದ್ದರು. ಆದರೆ ರಮ್ಯಾ ಸಿನಿಮಾರಂಗದಿಂದ ದೂರ ಸರಿದು ವರ್ಷಗಳೇ ಕಳೆದಿತ್ತು. ಕೊನೆಯದಾಗಿ ‘ನಾಗರಹಾವು’ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಂತರ ಎಲ್ಲೂ ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಇದೀಗ ರಮ್ಯಾ ‘ದಿಲ್ ಕಾ ರಾಜ’ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

    ಇತ್ತೀಚೆಗಷ್ಟೆ ಈ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟೀಸರಿನಲ್ಲಿ ರಮ್ಯಾ ಅಭಿನಯಿಸಿರುವುದನ್ನು ಕಾಣಬಹುದಾಗಿದೆ. ಈ ಮೂಲಕ ಸುಮಾರು 5 ವರ್ಷಗಳ ಬಳಿಕ ಅಭಿಮಾನಿಗಳ ಮುಂದೆ ಮೋಹಕ ತಾರೆ ಬರಲಿದ್ದಾರೆ. ‘ದಿಲ್ ಕಾ ರಾಜ’ ಸಿನಿಮಾ ಸೆಟ್ಟೇರಿ ಐದಾರು ವರ್ಷಗಳೇ ಕಳೆದಿದೆ. ಚಿತ್ರೀಕರಣ ಕೂಡ ಬೇಗ ಮುಗಿದಿತ್ತು. ಆದರೆ ಇನ್ನೂ ಒಂದಿಷ್ಟು ಶೂಟಿಂಗ್ ಬಾಕಿ ಇರುವಾಗಲೇ ರಮ್ಯಾ ಸಿನಿಮಾದಲ್ಲಿ ದೂರ ಸರಿದಿದ್ದರು. ಹೀಗಾಗಿ ಸಿನಿಮಾ ಬರುವುದು ತಡವಾಗಿದೆ.

    ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಮಿಂಚಿದ್ದು, ರಮ್ಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ರಮ್ಯಾ ರಾಜಕೀಯ ಚಟುವಟಿಕೆಗಳಿಗೆ ಪೂರ್ಣವಿರಾಮ ಹಾಕಿ, ಮತ್ತೆ ಬಣ್ಣದ ಬದುಕಿಗೆ ಎಂಟ್ರಿ ಆಗುತ್ತಿದ್ದಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

    ಸೋಮನಾಥ್ ಪಿ ಪಾಟೀಲ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಟೀಸರಿನಲ್ಲಿ ಯಾವುದೇ ಡೈಲಾಗ್ ಇಲ್ಲ, ಕಥೆ ಏನೆಂಬುದರ ಸುಳಿವೂ ಕೂಡ ಇಲ್ಲ. ಆದರೆ ನಾಯಕ-ನಾಯಕಿ ನಡುವಿನ ಲವ್‍ಸ್ಟೋರಿ ಮತ್ತು ಕೊಂಚ ಆ್ಯಕ್ಷನ್ ಝುಲಕ್ ಮಾತ್ರ ಇದೆ.

  • ಖಾಕಿ ಟೀಸರ್ ಲಾಂಚ್‍ಗೆ ಮುಹೂರ್ತ ಫಿಕ್ಸ್!

    ಖಾಕಿ ಟೀಸರ್ ಲಾಂಚ್‍ಗೆ ಮುಹೂರ್ತ ಫಿಕ್ಸ್!

    ಬೆಂಗಳೂರು: ಚಿರಂಜೀವಿ ಸರ್ಜಾ ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತಿರೋ ವಿಚಾರವೇ. ಆ ಸಾಲಿನಲ್ಲಿ ಖ್ಯಾತ ನಿರ್ಮಾಪಕ ತರುಣ್ ಶಿವಪ್ಪ ನಿರ್ಮಾಣ ಮಾಡಿರೋ ‘ಖಾಕಿ’ ಚಿತ್ರ ತುಂಬಾನೇ ಕುತೂಹಲಕ್ಕೆ ಕಾರಣವಾಗಿದೆ. ಖಾಕಿ ಎಂಬ ಶೀರ್ಷಿಕೆಗೆ ಪವರ್ ಆಫ್ ಕಾಮನ್ ಮ್ಯಾನ್ ಎಂಬ ಟ್ಯಾಗ್ ಲೈನ್ ಇರೋದರಿಂದ ಈ ಸಿನಿಮಾ ಕಥೆಯೇನೆಂಬ ಬಗ್ಗೆ ಆರಂಭದಿಂದಲೇ ಚರ್ಚೆಗಳು ಶುರುವಾಗಿವೆ. ತರುಣ್ ಶಿವಪ್ಪ ಭಿನ್ನ ಕಥೆಗಳ ಅದ್ಧೂರಿಯಾದ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವವರು. ಅದಕ್ಕೆ ತಕ್ಕುದಾಗಿಯೇ ರೂಪುಗೊಂಡಿರೋ ಖಾಕಿ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸಾಗಿದೆ.

    ಅಕ್ಟೋಬರ್ ಮೂವತ್ತು ಅಂದರೆ, ಇದೇ ಬುಧವಾರ ಖಾಕಿ ಟೀಸರ್ ಲಾಂಚ್ ಆಗಲಿದೆ. ಈ ಚಿತ್ರವನ್ನು ನವೀನ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಇದು ನವೀನ್ ಪಾಲಿಗೆ ಮೊದಲ ಚಿತ್ರ. ಆದರೆ ಅವರು ಈ ಮೂಲಕ ಪಕ್ಕಾ ಮಾಸ್ ಕಥಾನಕವೊಂದನ್ನು ಪ್ರೇಕ್ಷಕರ ಮುಂದಿಡಲು ತಯಾರಾಗಿದ್ದಾರೆ. ಖಾಕಿ ಎಂಬ ಹೆಸರು ಕೇಳಿದಾಕ್ಷಣವೇ ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಪೊಲೀಸ್ ಗೆಟಪ್ಪಿನಲ್ಲಿ ಮಿಂಚಿರಬಹುದೆನ್ನಿಸುತ್ತೆ. ಆದರೆ ಅವರಿಲ್ಲಿ ದಿ ಪವರ್ ಆಫ್ ಕಾಮನ್ ಮ್ಯಾನ್ ಎಂಬ ಟ್ಯಾಗ್‍ಲೈನಿಗೆ ತಕ್ಕುದಾದ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಮೂಲದ ಪ್ರಕಾರ ಅವರು ಈ ಚಿತ್ರದಲ್ಲಿ ಕೇಬಲ್ ಆಪರೇಟರ್ ಆಗಿ ಕಾಣಿಸಿಕೊಂಡಿದ್ದಾರಂತೆ. ಈ ವಿಚಾರ ಕೇಳಿ ನಿಮ್ಮೊಳಗೊಂದು ಅಚ್ಚರಿ ಮೂಡಿಕೊಂಡರೆ, ಅದು ಮತ್ತಷ್ಟು ಮಿರುಗಿಸವಂಥಾ ವಿಚಾರಗಳೇ ಈ ಸಿನಿಮಾದಲ್ಲಿ ಅಡಕವಾಗಿವೆಯಂತೆ.

    ಓರ್ವ ನಟನಾಗಿ ಚಿರಂಜೀವಿ ಸರ್ಜಾ ಅವರದ್ದು ವಿಶಿಷ್ಟವಾದ ಯಾನ. ಈವರೆಗೂ ಥರ ಥರದ ಪಾತ್ರಗಳಲ್ಲಿ ಕಂಗೊಳಿಸಿರೋ ಅವರು ಈ ಹಿಂದೆ ಸಿಂಗ ಚಿತ್ರದ ಮೂಲಕ ಪಕ್ಕಾ ಮಾಸ್ ಅವತಾರದಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದರೆ ಖಾಕಿ ಚಿತ್ರದಲ್ಲಿ ಅದೆಲ್ಲವನ್ನೂ ಮೀರಿಸುವಂಥಾ ಮಾಸ್ ಸನ್ನಿವೇಶಗಳಿವೆಯಂತೆ. ಕಥೆಯ ವಿಚಾರದಲ್ಲಿಯೂ ತೀರಾ ಭಿನ್ನವಾಗಿರೋ ಖಾಕಿ ಚಿರು ಪಾಲಿಗೆ ಮತ್ತೊಂದು ಗೆಲುವು ದಕ್ಕಿಸಿಕೊಡಲಿರೋದು ಗ್ಯಾರೆಂಟಿ ಎಂಬಂಥಾ ವಾತಾವರಣವಿದೆ. ಈ ಹಿಂದೆ ಮಾಸ್ ಲೀಡರ್, ವಿಕ್ಟರಿ 2 ಚಿತ್ರಗಳ ಮೂಲಕ ಯಶಸ್ವಿ ನಿರ್ಮಾಪಕರೆನ್ನಿಸಿಕೊಂಡಿರುವವರು ತರುಣ್ ಶಿವಪ್ಪ. ಅವರು ಬಲು ಆಸ್ಥೆಯಿಂದಲೇ ಖಾಕಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿಕೊಂಡಿರೋ ಖಾಕಿ ಬಿಡುಗಡೆಯ ಹಂತದಲ್ಲಿದೆ. ಈ ಕ್ಷಣಗಳನ್ನು ಇನ್ನು ದಿನದೊಪ್ಪತ್ತಿನಲ್ಲಿಯೇ ಟೀಸರ್ ಮತ್ತಷ್ಟು ಕಳೆಗಟ್ಟುವಂತೆ ಮಾಡಲಿದೆ.

  • ಶಿವಾರ್ಜುನ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ

    ಶಿವಾರ್ಜುನ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ

    ಬೆಂಗಳೂರು: ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿರ್ಮಿಸುತ್ತಿರುವ, ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ‘ಶಿವಾರ್ಜುನ’ ಚಿತ್ರದ ಫಸ್ಟ್ ಲುಕ್ ಟೀಸರ್ ಧ್ರುವಸರ್ಜಾ ಬಿಡುಗಡೆ ಮಾಡಿದರು.

    ಇತ್ತೀಚೆಗೆ ನಡೆದ ನಾಯಕ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ದಿನ ಈ ಫಸ್ಟ್ ಲುಕ್ ಟೀಸರ್ ಅನಾವರಣಗೊಂಡಿದೆ. ನಟಿ ತಾರಾ ವೇಣು, ಮೇಘನಾ ರಾಜ್, ನಿರ್ಮಾಪಕ ಉದಯ್ ಕೆ ಮೆಹ್ತಾ, ಚಿತ್ರತಂಡ ಹಾಗೂ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಈ ಫಸ್ಟ್ ಲುಕ್ ಟೀಸರ್ ಲೋಕಾರ್ಪಣೆಯಾಗಿದೆ.


    ಶಿವತೇಜಸ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಮಾತಿನ ಜೋಡಣೆ ಮುಕ್ತಾಯವಾಗಿದೆ. ಹೆಚ್.ಸಿ.ವೇಣು ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರಾಗ್ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ವಿನೋದ್, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಯೋಗರಾಜ್ ಭಟ್ ಹಾಗೂ ಚೇತನ್ ಕುಮಾರ್ (ಬಹದ್ದೂರ್) ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

    ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಅಮೃತ, ಅಕ್ಷತ, ತಾರಾ, ಅವಿನಾಶ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧುಕೋಕಿಲ, ರವಿ ಕಿಶನ್, ತರಂಗ ವಿಶ್ವ, ಕೆ.ಆರ್.ಪೇಟೆ ಶಿವರಾಜ್, ನಯನ ಮುಂತಾದವರಿದ್ದಾರೆ.

  • ರಾಜಕೀಯ- ಇಂಗ್ಲಿಷ್ ಬಳಕೆ, ರಂಗನಾಯಕನಿಗೆ ಕರಾವಳಿಯಿಂದ ಆರಂಭಿಕ ವಿರೋಧ

    ರಾಜಕೀಯ- ಇಂಗ್ಲಿಷ್ ಬಳಕೆ, ರಂಗನಾಯಕನಿಗೆ ಕರಾವಳಿಯಿಂದ ಆರಂಭಿಕ ವಿರೋಧ

    ಉಡುಪಿ: ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ದ ಜೋಡಿ ‘ರಂಗನಾಯಕ’ನಾಗಿ ರೀ ಎಂಟ್ರಿ ಕೊಡುತ್ತಿದ್ದಾರೆ. 2020ರಲ್ಲಿ ಗುರುಪ್ರಸಾದ್ ಡೈರೆಕ್ಷನ್, ಜಗ್ಗೇಶ್ ಅಭಿನಯದ ಚಿತ್ರ ರಿಲೀಸ್ ಆಗಲಿದ್ದು, ಟೀಸರ್ ಗದ್ದಲ ಎಬ್ಬಿಸಿದೆ. ಯಕ್ಷಗಾನಕ್ಕೆ ಅಪಮಾನ ಮಾಡಿದ್ದಾರೆ ಎಂಬುದು ಕರಾವಳಿಯ ಯಕ್ಷ ಪ್ರೇಮಿಗಳ ಆರೋಪ.

    ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರದ ಮೂಲಕ ಸೂಪರ್ ಹಿಟ್ ಜೋಡಿಯಾಗಿರುವ ಜಗ್ಗೇಶ್ ಮತ್ತು ಗುರುಪ್ರಸಾದ್ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರಕ್ಕೆ ರಂಗನಾಯಕ ಎನ್ನುವ ನಾಮಕರಣವಾಗಿದೆ. ಟೀಸರ್ ಬಿಡುಗಡೆಯಾಗಿ ಬಹಳ ಪ್ರಚಾರ ಗಿಟ್ಟಿಸಿದೆ. ಹೊಸ ಚಿತ್ರ ರಂಗನಾಯಕದ ಟೀಸರ್ ಯಕ್ಷಗಾನ ಅಭಿಮಾನಿಗಳ ಮತ್ತು ಕಲಾವಿದರ ಕಣ್ಣು ಕೆಂಪು ಮಾಡಿದೆ. ಯಕ್ಷಗಾನ ಶೈಲಿಯ ಟೀಸರಿನಲ್ಲಿ ಇಂಗ್ಲಿಷ್ ಮಿಕ್ಸ್ ಆಗಿದೆ. ಆರಂಭದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಚಿಹ್ನೆ ಬಳಸಲಾಗಿದ್ದು, ಯಕ್ಷಗಾನವನ್ನು ಅಪಭ್ರಂಶ ಮಾಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾಗವತಿಕೆಯ ಹಲವೆಡೆ ಇಂಗ್ಲಿಷ್ ಶಬ್ದ ಪ್ರಯೋಗ ಮಾಡಲಾಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬಹಳ ವಿರೋಧಿ ಚರ್ಚೆಯಾಗುತ್ತಿದೆ. ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಯಕ್ಷಗಾನ ಪ್ರೇಮಿಗಳು, ಪ್ರಸಂಗಕರ್ತರು, ಹಿಮ್ಮೇಳ ಮುಮ್ಮೇಳ ಕಲಾವಿದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಕ್ಷಗಾನಕ್ಕೆ ತನ್ನದೇ ಆದ ಮಹತ್ವ ಇದೆ. ದೇವಸ್ಥಾನಗಳ ಮೂಲಕ ಮೇಳಗಳನ್ನು ಕಟ್ಟಿ ಪುರಾಣದ ಕಥೆಗಳನ್ನು ಮತ್ತು ಸಾಮಾಜಿಕ ಕಾಳಜಿಯಿರುವ ಪ್ರಸಂಗಗಳನ್ನು ಮೇಳಗಳು ಪ್ರದರ್ಶನ ಮಾಡುತ್ತದೆ. ಆದರೆ ರಂಗನಾಯಕ ಚಿತ್ರ ತಂಡ ಎಲ್ಲಾ ಸಂಪ್ರದಾಯ ಚೌಕಟ್ಟನ್ನು ಗಾಳಿಗೆ ತೂರಿದೆ ಎಂದು ಯಕ್ಷಾರಾಧಕರು ಗಂಭೀರವಾಗಿ ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹವ್ಯಾಸಿ ಕಲಾವಿದ ಸಂದೇಶ್ ಶೆಟ್ಟಿ ಆರ್ಡಿ, ಯಕ್ಷಗಾನದ ಪದ್ಯದಲ್ಲಿ ಆಂಗ್ಲ ಪದ ಬಳಕೆ ಮತ್ತು ರಾಜಕೀಯ ತೂರಿಕೊಂಡಿರುವುದಕ್ಕೆ ನಮ್ಮ ಆಕ್ಷೇಪ. ಕಾಂಗ್ರೆಸ್, ಬಿಜೆಪಿಯ ಚಿಹ್ನೆ ಬಳಸಿರುವುದು ಸರಿಯಲ್ಲ. ಯಕ್ಷಗಾನ ದೇವರ ಹೆಸರಿನಲ್ಲಿ, ನಂಬಿಕೆಯ ಆಧಾರದಲ್ಲಿ ನಡೆಯುತ್ತಿದೆ. ಹರಕೆಯ ರೂಪದಲ್ಲಿ ಆಟ ಆಡಿಸುವವರು ಯಕ್ಷಗಾನವನ್ನು ದೇವರ ಸೇವೆಯಂತೆ ಕಾಣುತ್ತಾರೆ. ಹೀಗಿರುವಾಗ ಜನರ ಭಾವನೆಗಳ, ನಂಬಿಕೆ ಶ್ರದ್ಧೆಯ ಜೊತೆ ಆಟವಾಡುವುದು ಸರಿಯಲ್ಲ ಎಂದು ಹೇಳಿದರು.

    ಮೋದಿ ಪ್ರಧಾನಿಯಾದರೆ ಯಕ್ಷಗಾನ ಮಾಡಿಸುವ ಹರಕೆ ಹೊತ್ತಿರುವ ಉದಾಹರಣೆ ಕರಾವಳಿಯಲ್ಲಿದೆ. ಯಕ್ಷಗಾನ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ತರ್ಜುಮೆಗೊಂಡು ಪ್ರದರ್ಶನವಾಗಿದ್ದೂ ಇದೆ. ಇಷ್ಟಕ್ಕೂ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಾಡಿನ ಗಂಡುಕಲೆಗೆ ಅಪಮಾನ ಮಾಡಬೇಡಿ ಎಂದು ಚಿತ್ರದ ಡೈರೆಕ್ಟರ್ ಗುರುಪ್ರಸಾದ್ ಅವರಲ್ಲಿ ಕರಾವಳಿಯ ಯಕ್ಷಗಾನ ಕಲಾವಿದರು ವಿನಂತಿ ಮಾಡಿಕೊಂಡಿದ್ದಾರೆ.

    https://www.youtube.com/watch?v=iQjHpDHxnf8

  • ‘ಯುವರತ್ನ’ ಟೀಸರ್ ರಿಲೀಸ್ – ರಗ್ಬಿ ಆಟಗಾರನಾದ ಪುನೀತ್

    ‘ಯುವರತ್ನ’ ಟೀಸರ್ ರಿಲೀಸ್ – ರಗ್ಬಿ ಆಟಗಾರನಾದ ಪುನೀತ್

    ಬೆಂಗಳೂರು: ಆಯುಧ ಪೂಜೆ ಹಿನ್ನೆಲೆಯಲ್ಲಿ ಈ ಮೊದಲೇ ಹೇಳಿದಂತೆ ಪವರ್‌ಸ್ಟಾರ್‌ ಪುನೀತ್ ರಾಜ್‍ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

    ನಿರ್ದೇಶಕ ಹೇಳಿದಂತೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನಲ್‍ನಲ್ಲಿ ‘ಯುವರತ್ನ’ ಟೀಸರನ್ನು ರಿಲೀಸ್ ಮಾಡಿದೆ. ಟೀಸರಿನಲ್ಲಿ ರಗ್ಬಿ ಆಟಗಾರನಾಗಿ ಪುನೀತ್ ರಾಜ್‍ಕುಮಾರ್ ಕಾಣಿಸಿಕೊಂಡಿದ್ದಾರೆ.

    “ಈ ದುನಿಯಾದಲ್ಲಿ ಮೂರು ತರ ಗಂಡಸರಿಸುತ್ತಾರೆ. ನಿಯಮವನ್ನು ಪಾಲೋ ಮಾಡೋನು, ನಿಯಮವನ್ನು ಬ್ರೇಕ್ ಮಾಡೋನು, ಮೂರನೇಯವನು ನನ್ನ ತರ ರೂಲ್ ಮಾಡೋನು” ಎಂಬ ಮಾಸ್ ಡೈಲಾಗ್ ಮೂಲಕ ಟೀಸರ್ ಆರಂಭವಾಗಿದೆ. ರಗ್ಬಿ ಆಟದ ಮೃದಾನದಲ್ಲಿ ಅದರಲ್ಲೂ ಮಳೆಯಲ್ಲೇ ಪುನೀತ್ ಖಡಕ್ ಆಟಗಾರನಾಗಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಆಟವನ್ನು ಗೆಲ್ಲುತ್ತಾರೆ.

    ಟೀಸರ್ ಬಿಡುಗಡೆಯಾದ ಕೆಲವು ನಿಮಿಷಗಳಲ್ಲೇ 83 ಸಾವಿರಕ್ಕೂ ಅಧಿಕ ವೀವ್ಸ್ ಕಂಡಿದ್ದು, 28 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ. ಸಿನಿಮಾ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ದಸರಾ ಹಬ್ಬಕ್ಕಾಗಿ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಮೊದಲೇ ತಿಳಿಸಿತ್ತು.

    ಬಹು ವರ್ಷಗಳ ಬಳಿಕ ಯುವರತ್ನ ಸಿನಿಮಾದಲ್ಲಿ ಪುನೀತ್ ಕಾಲೇಜು ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಮೊದಲ ಬಾರಿಗೆ ನಟಿ ಸಯೇಷಾ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದು, ಪ್ರಕಾಶ್ ರೈ, ಸುಧಾರಾಣಿ, ಸೋನುಗೌಡ, ಗುರುದತ್, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ವಸಿಷ್ಠ ಸಿಂಹ ಸೇರಿದಂತೆ ಬಹುದೊಡ್ಡ ತಾರಾಗಣವನ್ನು ಚಿತ್ರತಂಡ ಹೊಂದಿದೆ.