Tag: teaser

  • ಕಿಚ್ಚನ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ-3 ತಂಡದಿಂದ ಭರ್ಜರಿ ಗಿಫ್ಟ್

    ಕಿಚ್ಚನ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ-3 ತಂಡದಿಂದ ಭರ್ಜರಿ ಗಿಫ್ಟ್

    ಬೆಂಗಳೂರು: ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಪ್ರೈಸ್ ವೊಂದು ರಿವೀಲ್ ಆಗಿದೆ.

    ಇದೇ ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬವಾಗಿದ್ದು, 48ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆ ಕೋಟಿಗೊಬ್ಬನ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾಮನ್ ಡಿಸ್‍ಪ್ಲೇ(ಸಿಡಿಪಿ) ಬಿಡುಗಡೆಗೂ ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಇದೀಗ ಮತ್ತೊಂದು ಸರ್ಪ್ರೈಸ್ ಹೊರ ಬಿದ್ದಿದೆ.

    ಈ ಕುರಿತು ಆನಂದ್ ಆಡಿಯೋ ಟ್ವೀಟ್ ಮಾಡುವ ಸರ್ಪ್ರೈಸ್ ರಿವೀಲ್ ಮಾಡಿದ್ದು, ಸುದೀಪ್ ಹುಟ್ಟುಹಬ್ಬದ ಹಿನ್ನೆಲೆ ಕೋಟಿಗೊಬ್ಬ-3 ಟೀಸರ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಮೂಲಕ ಕಿಚ್ಚನ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಇದರಿಂದಾಗಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

    ಈ ಹಿಂದೆ ಕೋಟಿಗೊಬ್ಬ-3 ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಲಾಗಿತ್ತು. ಅದಾದ ಬಳಿಕ ಸಿನಿಮಾ ಕುರಿತು ಯಾವುದೇ ಟಪ್‍ಡೇಟ್ ಸಿಕ್ಕಿರಲಿಲ್ಲ. ಹೀಗಾಗಿ ಅಭಿಮಾನಿಗಳು ಸಹ ನಿರಾಶೆಗೊಳಾಗಿದ್ದರು. ಇದೀಗ ಟೀಸರ್ ಬಿಡುಗಡೆ ಮಾಡುವುದಾಗಿ ಆನಂದ್ ಆಡಿಯೋ ತಿಳಿಸಿದೆ. ಈಗಾಗಲೇ ಕೋಟಿಗೊಬ್ಬ-3 ಸಿನಿಮಾ ಕುರಿತು ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದ್ದು, ಈ ಬಾರಿ ಬಿಡುಗಡೆಯಾಗಲಿರುವ ಟೀಸರ್ ಹೇಗಿರಲಿದೆ ಎಂದು ಅಭಿಮಾನಿಗಳು ಲೆಕ್ಕ ಹಾಕುತ್ತಿದ್ದಾರೆ.

    ಸುದೀಪ್ ಸದ್ಯ ಫ್ಯಾಂಟಮ್ ಚಿತ್ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಜೊತೆಗೆ ಕೋಟಿಗೊಬ್ಬ-3 ಚಿತ್ರೀಕರಣವನ್ನು ನಿಭಾಯಿಸುತ್ತಿದ್ದಾರೆ. ಈ ಮೂಲಕ ಎರಡೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇಂದು ಬಿಡುವು ಮಾಡಿಕೊಂಡು ತಾಯಿಯ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಹೀಗಾಗಿ ಮನೆಯಲ್ಲೇ ಇದ್ದಾರೆ.

  • ಬರ್ತ್ ಡೇಗೆ ನಿಗೂಢ ಲೋಕಕ್ಕೆ ಕರೆದೊಯ್ದ ಭಜರಂಗಿ

    ಬರ್ತ್ ಡೇಗೆ ನಿಗೂಢ ಲೋಕಕ್ಕೆ ಕರೆದೊಯ್ದ ಭಜರಂಗಿ

    ಬೆಂಗಳೂರು: ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ನೇರವಾಗಿ ಆಚರಿಸದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದ್ದು, ಸಿಡಿಪಿ(ಕಾಮನ್ ಡಿಸ್‍ಪ್ಲೇ) ಮೂಲಕ ತಮ್ಮ ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ. ಅಲ್ಲದೆ ವಿವಿಧ ರೀತಿಯ ಪೋಸ್ಟ್ ಗಳನ್ನು ಹಾಕುವ ಮೂಲಕ ಸಾಮಾಜಿಕ ಜಾಲತಾಣಗಲ್ಲೇ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಭಜರಂಗಿ 2 ಚಿತ್ರ ತಂಡ ಸಹ ಅಭಿಮಾನಿಗಳು ಖುಷಿಯನ್ನು ಇಮ್ಮಡಿಗೊಳಿಸಿದೆ.

    ಹೌದು ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ 2 ಚಿತ್ರತಂಡ ಸರ್ಪ್ರೈಸ್ ನೀಡಿದ್ದು, ಅಭಿಮಾನಿಗಳು ಕುಣಿದುಕುಪ್ಪಳಿಸುವಂತೆ ಮಾಡಿದೆ. ವಿಶೆಷ ದಿನದಂದು ವಿಶೇಷ ಉಡುಗೊರೆ ನೀಡಿದ್ದು, ಭಜರಂಗಿ 2 ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್‍ನಲ್ಲಿ ಟೀಸರ್ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಸಂಭ್ರಮದಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಸಂಜೆ ಹೊತ್ತಿಗಾಗಲೇ 3 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ.

    ಟೀಸರ್ ನಲ್ಲಿ ಸಹ ಆರೋಗ್ಯದ ಕುರಿತು ಮಾತನಾಡಲಾಗಿದ್ದು, ವಿಡಿಯೋದಲ್ಲಿ ವೈದ್ಯೋ ನಾರಾಯಣೋ ಹರಿಃ ಎಂದು ಪ್ರಾರಂಭವಾಗುತ್ತದೆ. ಭಗವಂತ ಮನುಷ್ಯನಿಗೆ ಎಲ್ಲ ಸೌಲಭ್ಯಗಳನ್ನು ಕೊಟ್ಟನು, ಕಾಲ ಕ್ರಮೇಣ ಅದು ಹೆಚ್ಚಾದಂತೆ ರೋಗ ರುಜಿನಗಳು ಹೆಚ್ಚಾದವು. ಇದಕ್ಕೆ ಪರಿಹಾರವನ್ನು ಪ್ರಕೃತಿಯಲ್ಲಿಯೇ ಇಟ್ಟನು ಎಂದು ಹೇಳಲಾಗಿದೆ. ಫುಲ್ ಮಾಸ್ ವಿಡಯೋ ಬಿಡುಗಡೆ ಮಾಡಲಾಗಿದ್ದು, ಶಿವಣ್ಣ ವಿಭಿನ್ನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಶೃತಿ ಸಿಗರೇಟ್ ಹಿಡಿದು ಮಾಸ್ ಲುಕ್ ನೀಡಿದ್ದಾರೆ. ವಿಡಿಯೋ ಯೂಟ್ಯೂಬ್‍ನಲ್ಲಿ ಅಖತ್ ಸದ್ದು ಮಾಡುತ್ತಿದೆ.

    ಟೀಸರ್ ನೋಡಿದ್ರೆ ಯಾವುದೋ ಒಂದು ನಿಗೂಢ ಲೋಕಕ್ಕೆ ಭೇಟಿ ನೀಡಿದ ಅನುಭವ ಆಗೋದು ಖಂಡಿತ. ಎಲ್ಲವೂ ದೃಶ್ಯಗಳು ಅಮೋಘವಾಗಿ ಮೂಡಿ ಬಂದಿವೆ. ಅದ್ಧೂರಿ ವೆಚ್ಚದಲ್ಲಿ ಬೃಹತ್ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದ್ದು, ಕಪ್ಪು-ಬಿಳುಪಿನ ಟೀಸರ್ ಒಂದು ರೀತಿಯ ಹೊಸತನದೊಂದಿಗೆ ಅಭಿಮಾನಿಗಳ ಮುಂದೆ ಬಂದಿದ್ದು, ಗಂಡುಗಲಿ ಅಭಿಮಾನಿಗಳು ಜೈ ಜೈ ಅನ್ನುತ್ತಿದ್ದಾರೆ.

    ಶಿವಣ್ಣನ ಹುಟ್ಟುಹಬ್ಬಕ್ಕೆ ಇತ್ತೀಚೆಗೆ ಅವರ ಅಭಿಮಾನಿಗಳು ಸಿಡಿಪಿ ತಯಾರಿಸಿದ್ದರು, ಇದನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದರು. ಇಂದೂ ಸಹ ಟ್ವೀಟ್ ಮೂಲಕ ಶಿವಣ್ಣನಿಗೆ ಕಿಚ್ಚ ವಿಶೇಷ ಶುಭಾಶಯ ತಿಳಿಸಿದ್ದಾರೆ. ಚಿತ್ರರಂಗದ ಹಲವು ಗಣ್ಯರು ಸಹ ಶುಭ ಕೋರುತ್ತಿದ್ದಾರೆ. ಶಿವಣ್ಣನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡುವುದು ಸವಾಲಿನ ಕೆಲಸವಾಗುತ್ತದೆ. ಹೀಗಾಗಿ ಯಾವುದೇ ಅಭಿಮಾನಿಗಳು ನನ್ನ ಹುಟ್ಟುಹಬ್ಬ ಆಚರಿಸಲು ಮನೆ ಬಳಿ ಬರಬೇಡಿ ಎಂದು ಶಿವರಾಜ್ ಕುಮಾರ್ ಮನವಿ ಮಾಡಿದ್ದರು. ವಿಡಿಯೋ ಮೂಲಕ ಕೇಳಿಕೊಂಡಿದ್ದರು. ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕವೇ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಭಜರಂಗಿ 2 ಟೀಸರ್ ಬಿಡುಗಡೆಯಾಗಿರುವುದು ಅಭಿಮಾನಿಗಳಲ್ಲಿ ಇನ್ನೂ ಹೆಚ್ಚಿನ ಸಂತಸವನ್ನುಂಟು ಮಾಡಿದೆ.

    https://www.youtube.com/watch?v=kwpkKA_M3lc

  • ಸದ್ಯಕ್ಕಿಲ್ಲ ಕೆಜಿಎಫ್2 ಟೀಸರ್ – ಮನೆಯಲೇ ಇರಿ, ಸೇಫ್ ಆಗಿರಿ ಎಂದ ಕೆಜಿಎಫ್ ಟೀಂ

    ಸದ್ಯಕ್ಕಿಲ್ಲ ಕೆಜಿಎಫ್2 ಟೀಸರ್ – ಮನೆಯಲೇ ಇರಿ, ಸೇಫ್ ಆಗಿರಿ ಎಂದ ಕೆಜಿಎಫ್ ಟೀಂ

    ಬೆಂಗಳೂರು: ಕೆಜಿಎಫ್-2 ಚಿತ್ರದ ಟೀಸರ್ ಬಿಡುಗಡೆಯಾಗುತ್ತೆ ಎಂಬ ನಿರೀಕ್ಷೆಯಲ್ಲಿ ಇದ್ದ ಯಶ್ ಅಭಿಮಾನಿಗಳಿಗೆ ಕೆಜಿಎಫ್-2 ಚಿತ್ರತಂಡ ನಿರಾಸೆ ಮೂಡಿಸಿದೆ.

    ಇಡೀ ಭಾರತ ಚಿತ್ರರಂಗವೇ ಕೆಜಿಎಫ್-2 ಚಿತ್ರದ ಬಿಡುಗಡೆಯ ಕಡೆ ನೋಡುತ್ತಿದೆ. ಕೆಜಿಎಫ್-1ರ ಭರ್ಜರಿ ಯಶಸ್ಸಿನ ನಂತರ ಯಶ್ ಕೆಜಿಎಫ್-2 ಚಿತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೂ ಚಿತ್ರ ಕೆಲ ಪೋಸ್ಟರ್ ಗಳನ್ನು ಮಾತ್ರ ಬಿಡುಗಡೆ ಮಾಡಿದ್ದು, ಚಿತ್ರದ ಟೀಸರ್ ನೋಡಲು ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    https://twitter.com/BeingNimmaYash/status/1249316045455642624

    ಈ ವಿಚಾರವಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಟೀಸರ್ ಬಿಡುಗಡೆ ಮಾಡುವಂತೆ ಬೇಡಿಕೆ ಇಡುತ್ತಿದ್ದಾರೆ. ಪ್ರೀತಿಯ ಯಶ್ ಮತ್ತು ಹೊಂಬಾಳೆ ಫಿಲ್ಮ್ ಅವರೇ ನಾವು ನಿಮ್ಮ ಅಪ್ಪಟ ಅಭಿಮಾನಿಗಳಾಗಿದ್ದು, ಕೆಜಿಎಫ್-2 ಚಿತ್ರದ ಟೀಸರ್ ಗಾಗಿ ಬಹಳ ತಿಂಗಳುಗಳಿಂದ ಕಾಯುತ್ತಿದ್ದೇವೆ. ದಯವಿಟ್ಟು ಸಿನಿಮಾದ ಟೀಸರ್ ಬಿಡುಗಡೆಯ ದಿನಾಂಕವನ್ನು ಘೋಷಿಸಿ ಅಭಿಮಾನಿಗಳ ಆಸೆ ಈಡೇರಿಸಿ ಎಂದು ಟ್ವೀಟ್ ಮಾಡುವ ಮೂಲಕ ಕೇಳಿಕೊಳ್ಳುತ್ತಿದ್ದಾರೆ.

    ಅಭಿಮಾನಿಗಳ ಟ್ವೀಟ್ ಗೆ ಉತ್ತರಿಸಿರುವ ಹೊಂಬಾಳೆ ಸಂಸ್ಥೆಯ ಕಾರ್ತಿಕ್ ಗೌಡ, ಕೆಜಿಎಫ್-2 ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗುವುದಿಲ್ಲ. ಚಿತ್ರದ ಬಿಡುಗಡೆಯ ವೇಳೆಗೆ ಟೀಸರ್ ಮತ್ತು ಟ್ರೈಲರ್ ಅನ್ನು ಬಿಡುಗಡೆ ಮಾಡುತ್ತೇವೆ. ಸದ್ಯಕ್ಕೆ ಈಗ ಮನೆಯಲ್ಲೇ ಇರಿ, ಸೇಫ್ ಆಗಿ ಇರಿ ಮುಂದೆ ನೋಡೋಣ ಎಂದು ಟ್ವೀಟ್ ಮಾಡಿದ್ದಾರೆ.

    ಸತತ ಎರಡು ವರ್ಷದಿಂದ ಕೆಜಿಎಫ್-2 ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು, ಚಿತ್ರತಂಡ ಅಕ್ಟೋಬರ್ 23ರಂದು ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ ಎಂದು ಕೂಡ ಘೋಷಿಸಿದೆ. ಈ ನಡುವೆ ಯಶ್ ಹುಟ್ಟುಹಬ್ಬದಂದೇ ಬಿಡುಗಡೆಯಾಗಬೇಕಿದ್ದ ಟೀಸರ್ ಇಷ್ಟು ದಿನ ಕಳೆದರೂ ಬಿಡುಗಡೆಯಾಗಿಲ್ಲ. ಆದ್ದರಿಂದ ಬೇಸರಗೊಂಡ ಯಶ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟೀಸರ್ ಬಿಡುಗಡೆ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ.

    ಭಾರತ ಚಿತ್ರರಂಗದಲ್ಲೇ ಒಂದು ಹೊಸ ಟ್ರೆಂಡ್ ಸೆಟ್ ಮಾಡಿರುವ ಕೆಜಿಎಫ್-2 ಚಿತ್ರಕ್ಕಾಗಿ ಇಡೀ ದೇಶವೇ ಕಾಯುತ್ತಿದೆ. ಈ ಚಿತ್ರದಲ್ಲಿ ಭಾರತ ಚಿತ್ರರಂಗದ ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಈಗಾಗಲೇ ಅಧಿರನ ಪಾತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್, ಪ್ರಧಾನಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ನಟಿಸಿದ್ದಾರೆ. ಹೀಗಾಗಿ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  • ಹತ್ತು ಹಲವು ವಿಶೇಷತೆಗಳ ‘ವಿರಾಟಪರ್ವ’ ಟೀಸರ್ ಮಾರ್ಚ್ 14ಕ್ಕೆ?

    ಹತ್ತು ಹಲವು ವಿಶೇಷತೆಗಳ ‘ವಿರಾಟಪರ್ವ’ ಟೀಸರ್ ಮಾರ್ಚ್ 14ಕ್ಕೆ?

    ಇತ್ತೀಚೆಗೆ ಚಂದನವನದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಗಾಂಧಿನಗರದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡುತ್ತಿವೆ. ಅಂತಹ ಸಿನಿಮಾಗಳು ಸಿನಿಪ್ರೇಕ್ಷಕರ ಮನಗೆಲ್ಲುವಲ್ಲಿಯೂ ಯಶಸ್ವಿ ಕೂಡ ಆಗುತ್ತಿದೆ. ಇದೀಗ ಅದೇ ಸಾಲಿಗೆ ಮತ್ತೊಂದು ತಂಡವೊಂದು ಸೇರ್ಪಡೆಗೊಂಡಿದೆ. ಆ ಚಿತ್ರತಂಡವೇ `ವಿರಾಟಪರ್ವ’. ಈಗಾಗಲೇ ಎರಡು ವಿಭಿನ್ನ ಪೋಸ್ಟರ್ ಗಳ ಮೂಲಕ ಈ ಚಿತ್ರ ಗಾಂಧಿನಗರ ಮಂದಿಯ ಹುಬ್ಬೇರಿಸುವಂತೆ ಮಾಡಿದೆ. ಇಂದೊಂದು ಹೈಪರ್ ಲಿಂಕ್ ಥ್ರಿಲ್ಲರ್ ಸಿನಿಮಾವಾಗಿದ್ದು, ಈ ಹಿಂದೆ ಮುದ್ದು ಮನಸ್ಸೇ ಸಿನಿಮಾ ನಿರ್ದೇಶನ ಮಾಡಿದ್ದ ಅನಂತ್ ಶೈನ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪ್ರಯೋಗಾತ್ಮಕ ಸಿನಿಮಾವಾಗಿರೋ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಅರು ಗೌಡ, ಸಿದ್ದು, ಎಂ.ಜಿ. ಅಭಿನಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

    ಮೂರು ವಿಭಿನ್ನ ಕ್ಯಾರೆಕ್ಟರ್ ಗಳ ಮನಸ್ಥಿತಿಗಳ ಸಮಾಗಮ ಚಿತ್ರದಲ್ಲಿದ್ದು, ಯಶ್ ಶೆಟ್ಟಿ ಚಿತ್ರದಲ್ಲಿ ಯೋಧನಾಗಿ ಬಣ್ಣಹಚ್ಚಿದ್ದು ಚಿತ್ರದ ಇಂಟ್ರಸ್ಟಿಂಗ್ ವಿಚಾರಗಳಲ್ಲಿ ಒಂದಾಗಿದೆ. ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಹರಿವು ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಮಂಸೂರೆ ಈ ಚಿತ್ರದ ಪಾತ್ರವೊಂದಕ್ಕೆ ಮೊದಲ ಬಾರಿ ಬಣ್ಣಹಚ್ಚಿದ್ದಾರೆ. 130ಕ್ಕೂ ಹೆಚ್ಚು ಲೊಕೇಶನ್ ಗಳಲ್ಲಿ `ವಿರಾಟಪರ್ವ’ ಚಿತ್ರ ಚಿತ್ರಣಗೊಂಡಿದ್ದು ಹೀಗೆ ಹತ್ತು ಹಲವು ವಿಶೇಷತೆಗಳು ಚಿತ್ರದಲ್ಲಿದೆ.

    ಎಸ್.ಆರ್.ಮೀಡಿಯಾ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿರೋ ಈ ಚಿತ್ರಕ್ಕೆ ಸುನೀಲ್ ರಾಜ್ ಬಂಡವಾಳ ಹೂಡಿದ್ದಾರೆ. ವಿನೀತ್ ರಾಜ್ ಮೆನನ್ ಸಂಗೀತ ನಿರ್ದೇಶನ, ಶಿವ ಬಿ.ಕೆ ಹಾಗೂ ಶಿವಸೇನಾ ಇಬ್ಬರು ಕ್ಯಾಮೆರಾಮ್ಯಾನ್ ಗಳ ಕ್ಯಾಮೆರಾ ವರ್ಕ್ ವಿರಾಟಪರ್ವ ಚಿತ್ರಕ್ಕಿದೆ.

  • ಯುಟ್ಯೂಬ್‍ನಲ್ಲಿ ಕೋಟಿಗೊಬ್ಬ-3 ಟೀಸರ್ ಡಿಲೀಟ್- ನಿರ್ಮಾಪಕ ಸೂರಪ್ಪಬಾಬು ಸ್ಪಷ್ಟನೆ

    ಯುಟ್ಯೂಬ್‍ನಲ್ಲಿ ಕೋಟಿಗೊಬ್ಬ-3 ಟೀಸರ್ ಡಿಲೀಟ್- ನಿರ್ಮಾಪಕ ಸೂರಪ್ಪಬಾಬು ಸ್ಪಷ್ಟನೆ

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಚಿತ್ರದ ಟೀಸರ್ ಯುಟ್ಯೂಬ್‍ನಿಂದ ಡಿಲೀಟ್ ಆಗಿದ್ದಕ್ಕೆ ನಿರ್ಮಾಪಕ ಸೂರಪ್ಪಬಾಬು ಅವರು ಸ್ಪಷ್ಟನೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರಪ್ಪ ಅವರು, ಕೋಟಿಗೊಬ್ಬ-3 ಚಿತ್ರದ ಟೀಸರ್ ಯುಟ್ಯೂಬ್‍ನಿಂದ ಏಕೆ ಡಿಲೀಟ್ ಆಯ್ತು ಎಂದು ಕೇಳುತ್ತಿದ್ದರು. ಕೊರೊನಾ ವೈರಸ್‍ಗಿಂತ ಇದು ಜಾಸ್ತಿ ಸುದ್ದಿಯಾಗುತ್ತಿತ್ತು. ಪೋಲ್ಯಾಂಡ್‍ನಿಂದ ಶೂಟಿಂಗ್ ಆದ ಬಳಿಕ ಅಲ್ಲಿ ಸಹೋದರರಾದ ಸಂಜಯ್ ಪಾಲ್ ಹಾಗೂ ಅಜಯ್ ಪಾಲ್ ಇದ್ದರು. ಅವರು ಯಾರೆಂಬುದು ನನಗೆ ಗೊತ್ತಿರಲಿಲ್ಲ. ನನಗೆ ಯಾರೋ ಒಬ್ಬರು ಇಬ್ಬರು ಸಹೋದರರನ್ನು ಪರಿಚಯ ಮಾಡಿಸಿ ಅಲ್ಲಿ ಶೂಟಿಂಗ್ ಮಾಡೋಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಆದರೆ ಅವರು ಇಲ್ಲಿ ಹೋಗುವಾಗ ಆಡಿದ ಮಾತುಗಳನ್ನು ಅಲ್ಲಿ ಏನು ಮಾಡಿಕೊಟ್ಟಿಲ್ಲ. ಅವರಿಗೆ ಸಲ್ಲಬೇಕಾದ ಹಣವನ್ನು ನಮ್ಮ ಖಾತೆ ಮೂಲಕ ಕೊಟ್ಟಿದ್ದು, ಇದಕ್ಕೆ ನನ್ನ ಬಳಿ ದಾಖಲೆ ಇವೆ ಎಂದರು.

    ಯುಟ್ಯೂಬ್‍ನಲ್ಲಿ ಈಗ ಯಾರು ಏನಾದರೂ ದೂರು ನೀಡಿದರೆ ತಕ್ಷಣ ಅದನ್ನು ಡಿಲೀಟ್ ಮಾಡುತ್ತದೆ ಎಂಬುದು ನನಗೆ ನಿನ್ನೆ ಗೊತ್ತಾಗಿದೆ. ಇದರ ವಿರುದ್ಧವಾಗಿ ಆನಂದ್ ಆಡಿಯೋ ಶ್ಯಾಮ್ ಅವರು ಕಾನೂನಿನ ಪ್ರಕಾರ ಕ್ರಮಕೈಗೊಂಡಿದ್ದಾರೆ. ನಿನ್ನೆ, ಮೊನ್ನೆ ಶನಿವಾರ, ಭಾನುವಾರ ಆಗಿದ್ದ ಕಾರಣ ಅದು ವರ್ಕ್ ಆಗಿಲ್ಲ ಎಂಬ ಕಾರಣದಿಂದ ಇಂದು ಸಂಜೆಯೊಳಗೆ ಟೀಸರ್ ಅಪ್ಲೋಡ್ ಆಗುತ್ತದೆ ಎಂದು ನನಗೆ ಭರವಸೆ ಕೊಟ್ಟಿದ್ದಾರೆ. ಯುಟ್ಯೂಬ್ ಎನ್ನುವಂತದ್ದು ಮಶಿನ್ ಆಗಿದ್ದು, ಮನುಷ್ಯರು ಅಲ್ಲಿ ಕೆಲಸ ಮಾಡಲ್ಲ ಎಂದು ಶ್ಯಾಮ್ ಅವರು ತಿಳಿಸಿದ್ದರು. ಮನುಷ್ಯರು ಕೆಲಸ ಮಾಡುವಂತಿದ್ದರೆ ಈ ಸಮಸ್ಯೆಯನ್ನು ಅಲ್ಲಿಯೇ ಹೋಗಿ ಸರಿಪಡಿಸಬಹುದಿತ್ತು. ಆದರೆ ಅದು ಆಗಲ್ಲ ಎಂದು ತಿಳಿಸಿದರು.

    ಪಾಲ್ ಸಹೋದರರಿಂದ ಆದ ಅನ್ಯಾಯವನ್ನು ಪದೇ ಪದೇ ಹೇಳುತ್ತಾ ಕೋರ್ಟ್‍ಗೆ ಹೋಗುತ್ತೇನೆ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ನನ್ನ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದು ಬ್ಯಾಕ್‍ಮೇಲ್ ಮಾಡಿದ್ದರು ಎಂಬುದು ಈ ಹಿಂದೆಯೇ ದಾಖಲೆಯೊಂದಿಗೆ ತೋರಿಸಿದ್ದೇನೆ. ಬಳಿಕ ನನ್ನ ಸಿಬ್ಬಂದಿಯನ್ನು ಕೇಂದ್ರ ಸಚಿವ ಸದಾನಂದ ಗೌಡ ಅವರ ಮೂಲಕ ಕರೆಸಿಕೊಂಡಿದ್ದೇವು. ಪಾಲ್ ಸಹೋದರರ ಮುಖಾಂತರ ನಾವು ಎಲ್ಲಾ ಲೋಕೇಶನ್‍ಗೆ ಹಣ ಕಟ್ಟಿದ್ದೇವೆ. ಆದರೆ ಈಗ ನನ್ನ ಸಂಬಂಧಪಟ್ಟವರಿಂದ ನನಗೆ ದುಡ್ಡು ಬಂದಿಲ್ಲ, ನಮ್ಮ ಲೋಕೇಶನ್ ಬಳಸಿಕೊಂಡಿದ್ದೀರಾ ಎಂದು ಪತ್ರ ಬರೆದು ಕಳುಹಿಸಿದ್ದರು ಎಂದು ಹೇಳಿದರು.

    ಶೂಟಿಂಗ್ ಕಡೆ ದಿನ ಅಂದರೆ 95 ಲಕ್ಷ ರೂ. ಕೊಟ್ಟರೆ ಮಾತ್ರ ನಿಮ್ಮ ತಂಡವನ್ನು ಹೊರಗೆ ಕಳುಹಿಸುತ್ತೇನೆ ಎಂದಿದ್ದ ವ್ಯಕ್ತಿ ಕೊನೆ ಕ್ಷಣದಲ್ಲಿ ಅಕೌಂಟ್ ಎಲ್ಲಾ ನೋಡಿ 45 ಲಕ್ಷ ರೂ. ಕೇಳಿದ್ದಾನೆ. ಇದರಿಂದ ನನ್ನ ಅಕೌಂಟೆಂಟ್ ಹೆದರಿ ನನಗೆ ಕರೆ ಮಾಡಿ ಸರ್ ಹಣ ಕಳುಹಿಸಿಕೊಡಿ ಇವರು ನನ್ನ ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಆಗ ನಾನು ಜಗ್ಗೇಶ್ ಅವರ ಮುಖಾಂತರ ದೂರು ನೀಡಿ ಅಕೌಂಟೆಂಟ್‍ನನ್ನು ಹಾಗೆ ಕರೆದುಕೊಂಡು ಬಂದೇವು. ನನ್ನ ಲೆಕ್ಕದ ಪ್ರಕಾರ ನಾನು ಅವರಿಗೆ 45 ಲಕ್ಷ ರೂ. ಕೊಡುವಂತಿಲ್ಲ. ಆ ಹಣವನ್ನು ನಾನು ಕೋರ್ಟ್‍ನಲ್ಲಿ ಡೆಪಾಸಿಟ್ ಇಟ್ಟು ಕಾನೂನಿನ ಹೋರಾಟ ಕೈಗೊಳ್ಳುತ್ತೇನೆ. ಆ ಹಣ ಕೊಡುವಂತಿದ್ರೆ ನಾನು ಕೊಡುತ್ತೇನೆ ಎಂದು ಸೂರಪ್ಪ ಸ್ಪಷ್ಟನೆ ನೀಡಿದರು.

  • ಬಂಡೀಪುರ ಅರಣ್ಯದಲ್ಲಿ ಹುಲಿ ಘರ್ಜನೆಯ ಮಧ್ಯೆ ತಲೈವಾ ನಗು

    ಬಂಡೀಪುರ ಅರಣ್ಯದಲ್ಲಿ ಹುಲಿ ಘರ್ಜನೆಯ ಮಧ್ಯೆ ತಲೈವಾ ನಗು

    ಚಾಮರಾಜನಗರ: ಡಿಸ್ಕವರಿ ಚಾನೆಲ್‍ನಲ್ಲಿ ಪ್ರಸಾರವಾಗುವ ಜನಪ್ರಿಯ ಶೋ ‘ಮ್ಯಾನ್ ವರ್ಸಸ್ ವೈಲ್ಡ್’ನಲ್ಲಿ ಬಂಡೀಪುರದಲ್ಲಿ ಚಿತ್ರೀಕರಣಗೊಂಡ ಸೂಪರ್ ಸ್ಟಾರ್ ರಜನಿಕಾಂತ್‍ರ ವಿಶೇಷ ಸಂಚಿಕೆಯ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ನಲ್ಲಿ ಅರಣ್ಯದಲ್ಲಿ ಹುಲಿ ಘರ್ಜನೆಯ ನಡುವೆ ತಲೈವಾರ ನಗು ಕಂಡು ಅಭಿಮಾನಿಗಳು ಖುಷ್ ಆಗಿದ್ದಾರೆ.

    ರಜನಿಕಾಂತ್ ಅವರು ಬೇರ್ ಗ್ರಿಲ್ಸ್ ಜೊತೆ ಬಂಡೀಪುರದ ಅರಣ್ಯದಲ್ಲಿ ‘ಮ್ಯಾನ್ ವರ್ಸಸ್ ವೈಲ್ಡ್’ನ ವಿಶೇಷ ಸಂಚಿಕೆಯ ಚಿತ್ರೀಕರಣ ನಡೆಯುತ್ತಿದ್ದ ವಿಚಾರವೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಆದರೆ ಈಗ ಮ್ಯಾನ್ ವರ್ಸಸ್ ವೈಲ್ಡ್‌ನ ರಜನಿಕಾಂತ್‍ರ ವಿಶೇಷ ಸಂಚಿಕೆಯ ಟೀಸರ್ ನಲ್ಲಿ ಹುಲಿ ಘರ್ಜನೆ ನಡುವೆ ತಲೈವಾರ ನಗು ಅಭಿಮಾನಿಗಳ ಗಮನ ಸೆಳೆದಿದೆ.

    ಈ ವಿಶೇಷ ಸಂಚಿಕೆಯ 40 ಸೆಕೆಂಡ್‍ಗಳ ಟೀಸರ್ ನಲ್ಲಿ ಬುಲೆಟ್ ಏರಿ ಬರುವ ಸಾಹಸಿಗ ಬೇರ್ ಗ್ರಿಲ್ಸ್ ಹಾಗೂ ಹುಲಿ ಘರ್ಜನೆ ಮತ್ತು ರಜಿನಿಯ ನಗುವಿದ್ದು ಸಾಕಷ್ಟು ಕೂತೂಹಲ ಕೆರಳಿಸಿದೆ. ಜೊತೆಗೆ ಮಾರ್ಚ್ 23ರ ರಾತ್ರಿ 8ಕ್ಕೆ ವಿಶೇಷ ಸಂಚಿಕೆ ಪ್ರಸಾರಗೊಳ್ಳಲಿದೆ ಎಂದು ಡಿಸ್ಕವರಿ ಚಾನೆಲ್ ಅಧಿಕೃತ ಟ್ವಿಟರ್ ಅಕೌಂಟ್‍ನಲ್ಲಿ ತಿಳಿಸಲಾಗಿದೆ. ಟೀಸರ್ ನಲ್ಲಿ ರಜಿನಿಯವರ ಮುಖ ತೋರಿಸದೇ ಅವರ ನಗುವಿನ ಶಬ್ಧವನ್ನು ಬಳಸಿಕೊಂಡಿರುವುದು ತಲೈವಾ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ.

    ಕಾರ್ಯಕ್ರಮದ ನಿರ್ದೇಶಕ ಬೇರ್ ಗ್ರಿಲ್ಸ್ ನೇತೃತ್ವದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರ ಮ್ಯಾನ್ ವರ್ಸಸ್ ವೈಲ್ಡ್‌ನ ವಿಶೇಷ ಸಂಚಿಕೆಯ ಶೂಟಿಂಗ್ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿತ್ತು. ಜನವರಿ 27 ರಿಂದ ಜನವರಿ 29 ರವರೆಗೆ ಅರಣ್ಯ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಈ ವಿಶೇಷ ಸಂಚಿಕೆಯ ಶೂಟಿಂಗ್ ನಡೆದಿತ್ತು. ಮೂರು ದಿನಗಳ ಕಾಲ ನಡೆದಿದ್ದ ಶೂಟಿಂಗ್‍ಗೆ ಅನುಮತಿ ನೀಡಲು ಅರಣ್ಯ ಇಲಾಖೆಯಿಂದ 17 ಕಂಡೀಷನ್ ವಿಧಿಸಲಾಗಿತ್ತು. ಶಬ್ದಮಾಲಿನ್ಯ, ವಾಯುಮಾಲಿನ್ಯ, ಬೆಂಕಿ ಅನಾಹುತ ನಡೆಯದಂತೆ ನೋಡಿಕೊಳ್ಳುವ 17 ಕಂಡೀಷನ್ ವಿಧಿಸಿ ಅನುಮತಿ ನೀಡಲಾಗಿತ್ತು.

    ಮೂಳೆಹೊಲೆ ಅರಣ್ಯ ವಲಯದಲ್ಲಿ ರಜನಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಗುಡ್ಡದಿಂದ ಹತ್ತಿ ಜಾರುವ ದೃಶ್ಯವೊಂದಿತ್ತು. ಆ ವೇಳೆ ನೆಲಕ್ಕೆ ಕೈ ಊರಿದಾಗ ಲಂಟಾನ ಮುಳ್ಳು ತರಚಿ ರಜನಿ ಗಾಯಮಾಡಿಕೊಂಡಿದ್ದರು. ಚಿತ್ರೀಕರಣದ ವೇಳೆ ಬಂಡೀಪುರ ಕಾಡನ್ನು ಕಂಡು ಫಿದಾ ಆಗಿದ್ದ ತಲೈವಾ, ಈ ರೀತಿಯ ಕಾಡನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಈ ಕುರಿತು ನಾನೊಂದು ಸಂದೇಶವನ್ನು ನೀಡುತ್ತೇನೆ ಎಂದು ಹೇಳಿದ್ದರು.

  • ‘ದ ಚೆಕ್ ಮೇಟ್’ ಬಂಗಲೆಯಲ್ಲಿ ಬಂಧಿಯಾಗಿದ್ದಾರೆ ನಾಲ್ವರು..!

    ‘ದ ಚೆಕ್ ಮೇಟ್’ ಬಂಗಲೆಯಲ್ಲಿ ಬಂಧಿಯಾಗಿದ್ದಾರೆ ನಾಲ್ವರು..!

    ಇಷ್ಟು ದಿನ ಕೇವಲ ಒಂದು ಅಥವಾ ಎರಡು ಜಾನರ್ ಮಿಶ್ರಿತ ಸಿನಿಮಾಗಳನ್ನ ನೋಡಿದ್ದೇವೆ. ಆದ್ರೆ ಹೊಸದೊಂದು ಸಿನಿಮಾ ಗಾಂಧಿನಗರದಲ್ಲಿ ಸುಳಿದಾಡುತ್ತಿದ್ದು, ಮಿಶ್ರ ಜಾನರ್ ನಡಿ ಸಿನಿಮಾ ಸಿದ್ಧವಾಗಿದೆ. ಹೌದು, ಕಾಮಿಡಿ, ಥ್ರಿಲ್ಲರ್, ಸಸ್ಪೆನ್ಸ್, ಲವ್ ಹೀಗೆ ಎಲ್ಲ ವರ್ಗದವರು ಕುಳಿತು ನೋಡವಹುದಾದಂತ ಸಿನಿಮಾವೊಂದು ಸಖತ್ ಸದ್ದು ಮಾಡುತ್ತಿದೆ. ಸಿನಿಮಾದ ಹೆಸರು ಕೂಡ ತುಂಬಾ ಭಿನ್ನವಾಗಿದೆ. ‘ದ ಚೆಕ್ ಮೇಟ್’ ಸಿನಿಮಾ ಹೊಸ ಅಲೆಯನ್ನು ಸೃಷ್ಠಿಸಿದೆ. ಆನಂದ್ ಯೂಟ್ಯೂಬ್ ಚಾನೆಲ್ ನಲ್ಲಿ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಕೆಲವೊಂದು ದೃಶ್ಯ ಎದೆನಡುಗಿಸುತ್ತೆ.

    ಕಿರುಚಿತ್ರಗಳನ್ನು ಮಾಡಿ ಅನುಭವವಿದ್ದ ನಿರ್ದೇಶಕ ಭಾರತೀಶ ವಸಿಷ್ಠ ಇದೀಗ ಮೊದಲ ಬಾರಿಗೆ ಸಿನುಮಾ ನಿರ್ದೇಶಿಸಿ ಬೆಳ್ಳಿ ಪರದೆ ಮೇಲೆ ತರೋದಕ್ಕೆ ರೆಡಿಯಾಗಿದ್ದಾರೆ. ಟೀಸರ್ ನೋಡಿದ ಮೇಲಂತು ಸಿನಿಮಾದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಕಥೆಯಲ್ಲಿರುವ ಮನೆ ಕಣ್ಣೆದುರು ಕಾಣುವುದು, ಆ ಮನೆಯೊಳಗೆ ಸ್ನೇಹಿತರೆಲ್ಲಾ ಹೋದಾಗ ನಡೆಯುವ ಕೆಲವೊಂದು ಘಟನೆಗಳು, ಅದು ದೆವ್ವ ಇರಬೇಕೆಂಬ ಕಲ್ಪನೆ ನೋಡುಗರಿಗೆ ಹುಟ್ಟುತ್ತೆ. ಸಾವು, ದೆವ್ವ, ದುಶ್ಮನಿ ಎಲ್ಲಾ ಮಿಕ್ಸ್ ಆಗಿ ಪ್ರೇಕ್ಷಕನ ಮನಸ್ಸೊಳಗೆ ಕುತೂಹಲವನ್ನುಟ್ಟು ಹಾಕುವಂತಿದೆ ಸಿನಿಮಾದ ಟೀಸರ್.

    ರಂಜನ್ ಹಾಸನ್ ನಾಯಕನಾಗಿರುವುದರ ಜೊತೆಗೆ ಸಿನಿಮಾಗೆ ಬಂಡವಾಳವನ್ನು ಹೂಡಿದ್ದಾರೆ. ರಂಜನ್ ಗೆ ಪ್ರೀತೂ ಪೂಜಾ ನಾಯಕಿಯಾಗಿದ್ದಾರೆ. ಭಾರತೀಶ ವಸಿಷ್ಠ ಹಾಗೂ ಸಂತೋಷ್ ಚಿಪ್ಪಾಡಿ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಹಣ ಸತೀಶ್ ರಾಜೇಂದ್ರನ್, ಸಂಕಲನ ಈ. ಎಸ್. ಈಶ್ವರ್ ಮತ್ತು ಸುನೀಲ್ ಕಶ್ಯಪ್, ವೈಲೆಂಟ್ ವೇಲು ಸಾಹಸವಿದೆ. ಉಳಿದಂತೆ ವಿಜಯ್ ಚೆಂಡೂರ್, ಸುಧೀರ್ ಕಾಕ್ರೋಚ್, ಪ್ರದೀಪ್ ಪೂಜಾರಿ, ನಿನಾಸಂ ಅಶ್ವತ್, ರಾಜಶೇಖರ, ವಿಸ್ಮಯ, ಸ್ತುತಿ, ಅಮೃತ ನಾಯರ್, ದಿವ್ಯಾ, ಕಾರ್ತಿಕ್ ಹುಲಿ, ಚಿಲ್ಲರ್ ಮಂಜು, ವಿಶ್ವ ವಿಜೇತ್ ತಾರಾಬಳಗದಲ್ಲಿದ್ದಾರೆ.

  • ಶಿವರಾತ್ರಿಗೆ ಕಿಚ್ಚನ ಅಭಿಮಾನಿಗಳಿಗೆ ಬಂಪರ್ ಗಿಫ್ಟ್

    ಶಿವರಾತ್ರಿಗೆ ಕಿಚ್ಚನ ಅಭಿಮಾನಿಗಳಿಗೆ ಬಂಪರ್ ಗಿಫ್ಟ್

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಮೋಷನ್ ಪೋಸ್ಟರ್ ಸಖತ್ ಸದ್ದು ಮಾಡಿದ್ದು, ಈಗ ಚಿತ್ರ ತಂಡ ಟೀಸರ್ ರಿಲೀಸ್ ಮಾಡಲು ರೆಡಿಯಾಗಿದೆ.

    ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನೀರಿಕ್ಷಿತ ಚಿತ್ರ ಕೋಟಿಗೊಬ್ಬ-3 ಚಿತ್ರದ ಟೀಸರ್ ಅನ್ನು ಫೆಬ್ರವರಿ 21 ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಶಿವರಾತ್ರಿ ಹಬ್ಬಕ್ಕೆ ಕಿಚ್ಚನ ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ಕೊಡಲು ತಯಾರಾಗಿದೆ.

    ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿರುವ ಕೋಟಿಗೊಬ್ಬ-3 ಚಿತ್ರವನ್ನು ಶಿವಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಕೋಟಿಗೊಬ್ಬ-2 ಚಿತ್ರ 2016 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈಗ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದ ಟೀಸರ್ ಅನ್ನು ಫೆಬ್ರವರಿ 21 ಶಿವರಾತ್ರಿ ಹಬ್ಬದ ದಿನ ಮಧ್ಯಾಹ್ನ 12 ಗಂಟೆ 1 ನಿಮಿಷಕ್ಕೆ ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.

    ಜನವರಿ 14 ರಂದು ಚಿತ್ರತಂಡ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು. ಪೋಸ್ಟರ್ ನಲ್ಲಿ ಕಿಚ್ಚನ ಸ್ಟೈಲಿಶ್ ಲುಕ್ ನೋಡಿದ್ದ ಅಭಿಮಾನಿಗಳು ಫಿದಾ ಆಗಿದ್ದರು. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಮೊದಲ ಬಾರಿಗೆ ಕನ್ನಡದಲ್ಲಿ ಮಲಯಾಳಂ ನಟಿ ಮಡೋನಾ ಸೆಬಾಸ್ಟಿಯನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

    ಮಡೋನಾ ಸೆಬಾಸ್ಟಿಯನ್ ಜೊತೆ ಶ್ರದ್ಧಾ ದಾಸ್ ಕೂಡ ಕೋಟಿಗೊಬ್ಬನಿಗೆ ನಾಯಕಿಯಾಗಿದ್ದಾರೆ. ಇವರನ್ನು ಬಿಟ್ಟರೆ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಇದೇ ಮೊದಲ ಬಾರಿಗೆ ಕೋಟಿಗೊಬ್ಬ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಫ್ತಾಬ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತ್ರ ಚಿತ್ರತಂಡ ಹೇಳಿಕೊಂಡಿದ್ದು, ಅವರ ಪಾತ್ರ ಏನು ಎಂಬ ಸುಳಿವುನ್ನು ಬಿಟ್ಟುಕೊಟ್ಟಿಲ್ಲ.

    ಈ ಹಿಂದೆ ಮಾತನಾಡಿದ್ದ ಅಫ್ತಾಬ್, ಕೋಟಿಗೊಬ್ಬ-3 ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. ಇದು ನನ್ನ ಮೊದಲ ಕನ್ನಡ ಸಿನಿಮಾವಾಗಿದೆ. ನಾನು ಮೊದಲ ಬಾರಿಗೆ ಸುದೀಪ್ ಜೊತೆ ನಟಿಸುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ. ನಮ್ಮಿಬ್ಬರಿಗೆ ಸುಮಾರು 8 ವರ್ಷಗಳ ಹಿಂದೆ ಸೆಲೆಬ್ರೆಟಿ ಟಿ-20 ಕ್ರಿಕೆಟ್ ಮ್ಯಾಚಿನಲ್ಲಿ ಪರಿಚಯವಾಗಿತ್ತು. ಅಂದಿನಿಂದ ನಾವಿಬ್ಬರೂ ಸ್ನೇಹಿತರಾಗಿದ್ದೇವೆ. ಸುದೀಪ್ ಅವರು ಯಾವಾಗಲೂ ಕನ್ನಡ ಸಿನಿಮಾದಲ್ಲಿ ಅಭಿನಯಿಸು ಎಂದು ಹೇಳುತ್ತಿದ್ದರು. ಆದರೆ ಇಷ್ಟುಬೇಗ ಅವಕಾಶ ಸಿಗುತ್ತದೆ ಎಂದುಕೊಂಡಿರಲಿಲ್ಲ. ಸಿನಿಮಾದಲ್ಲಿ ಈ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಹೀಗಾಗಿ ನೀನೇ ಅಭಿನಯಿಸಬೇಕು ಎಂದು ಒತ್ತಾಯಿಸಿದ್ದರು. ಆದ್ದರಿಂದ ಸುದೀಪ್ ಜೊತೆ ಅಭಿನಯಿಸಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದರು.

  • ಪ್ರೀತಿಯಿಂದ ಬಂದ್ರೆ ರಾಮ, ತಿರುಗಿ ಬಿದ್ರೆ ರಾವಣ ಎಂದ ‘ರಾಬರ್ಟ್’

    ಪ್ರೀತಿಯಿಂದ ಬಂದ್ರೆ ರಾಮ, ತಿರುಗಿ ಬಿದ್ರೆ ರಾವಣ ಎಂದ ‘ರಾಬರ್ಟ್’

    ಬೆಂಗಳೂರು: ತಾಳ್ಮೆ, ಪ್ರೀತಿಯಿಂದ ಬಂದರೆ ರಾಮ, ಅದೇ ತಿರುಗಿ ಬಿದ್ದರೆ ಲಂಕಾಧಿಪತಿ ದಶಕಂಠ ರಾವಣ ಎಂದು ರಾಬರ್ಟ್ ಅವತಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಘರ್ಜಿಸಿದ್ದಾರೆ.

    ಇಂದು 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದಾಸನಿಗೆ ಅಭಿಮಾನಿಗಳು ರಾತ್ರಿಯೇ ಶುಭಕೋರಿ ಬರ್ತ್ ಡೇ ಆಚರಿಸಿ ಖುಷಿಪಟ್ಟಿದ್ದಾರೆ. ಇದೇ ಸಂಭ್ರಮದ ನಡುವೆ ರಾಬರ್ಟ್ ಚಿತ್ರ ತಂಡ ದರ್ಶನ್ ಹುಟ್ಟುಹಬ್ಬದ ದಿನವೇ ದಾಸನ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಡಿ ಬಾಸ್ ಹಾಗೂ ಅವರ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. ಇದನ್ನೂ ಓದಿ: 43ನೇ ವಸಂತಕ್ಕೆ ಕಾಲಿಟ್ಟ ದರ್ಶನ್ – ಕೇಕ್ ಕತ್ತರಿಸದೆ ಸರಳವಾಗಿ ಡಿ ಬಾಸ್ ಹುಟ್ಟುಹಬ್ಬ

    ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ತಮ್ಮ ಹುಟ್ಟು ಹಬ್ಬವನ್ನ ಡಿ ದಾಸ್ ಆಚರಿಸಿಕೊಂಡರು. ಅಲ್ಲದೇ ಇದೇ ವೇಳೆ ರಾಬರ್ಟ್ ಟೀಸರ್ ಕೂಡ ಅಭಿಮಾನಿಗಳ ಎದುರೇ ಲಾಂಚ್ ಮಾಡಲಾಯ್ತು. ಟೀಸರ್ ನಲ್ಲಿ ಖಡಕ್ ಲುಕ್ಕು, ಡೈಲಾಗ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಟೀಸರ್ ಬಿಡುಗಡೆಯಾದ 7 ಗಂಟೆಗಳಲ್ಲೇ ಭರ್ತಿ 4 ಲಕ್ಷಕ್ಕೂ ಅಧಿಕ ವ್ಯೂವ್ ಆಗಿದೆ.

    ಇಷ್ಟು ದಿನ ಪೋಸ್ಟರ್ ಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದ ಚಿತ್ರತಂಡ, ಮೊದಲ ಬಾರಿಗೆ ಸಿನಿಮಾದ ದೃಶ್ಯವನ್ನು ಹಂಚಿಕೊಂಡಿದೆ. ಟೀಸರ್ ನಲ್ಲಿ ಎರಡ್ಮೂರು ಲುಕ್‍ಗಳು ಬಂದು ಹೋಗುತ್ತದೆ. ಅದರಲ್ಲೂ ಆ್ಯಕ್ಷನ್ ದೃಶ್ಯಗಳಂತೂ ಅಭಿಮಾನಿಗಳ ಗಮನ ಸೆಳೆದಿದೆ. ರಾಬರ್ಟ್ ಇಲ್ಲಿ ರಾಮನೂ ಆಗಿದ್ದಾರೆ, ರಾಮಣನೂ ಆಗಿದ್ದಾರೆ. ಟೀಸರ್ ಕ್ವಾಲಿಟಿ, ಮೇಕಿಂಗ್ ಸೂಪರ್ ಆಗಿದ್ದು, ‘ಹ್ಯಾಪಿ ಬರ್ತ್ ಡೇ ಬಾಸ್’ ಎಂದು ಚಿತ್ರತಂಡ ಶುಭಾಶಯ ತಿಳಿಸಿದೆ.

    ಕೇವಲ 1.11 ನಿಮಿಷ ಇರುವ ಟೀಸರ್‍ನಲ್ಲಿ ದರ್ಶನ್ ಹೇಳೋದು ಒಂದೇ ಡೈಲಾಗ್. ಆದ್ರೆ ಆ ಖಡಕ್ ಡೈಲಾಗ್ ಟೀಸರ್ ನ ಹೈಲೈಟ್. ಹೌದು. ಅವನು ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ಟ್ರೆ ದಶರಥ ರಾಮ, ಪ್ರೀತಿಯಿಂದ ಬಂದ್ರೆ ಜಾನಕಿ ರಾಮ ಎಂದು ರಾಬರ್ಟ್‍ನನ್ನು ವರ್ಣಿಸುವ ಡೈಲಾಗ್‍ನೊಂದಿಗೆ ಟೀಸರ್ ಆರಂಭವಾಗುತ್ತೆ. ಬಳಿಕ ದರ್ಶನ್ ಬೈಕ್ ಏರಿಬಂದು, ಫೈಟ್ ಮಾಡುವ ಆ್ಯಕ್ಷನ್ ದೃಶ್ಯದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಆದ್ರೆ ನಂತರ ಪ್ರೀತಿ ತೋರುವ ರಾಮ ತಿರುಗಿ ಬಿದ್ರೆ ರಾವಣ ಆಗ್ತಾನೆ ಎನ್ನೊಂದನ್ನ ಕೂಡ ಟೀಸರ್ ನಲ್ಲಿ ತಿಳಿಸಲಾಗಿದೆ. ಅದರಲ್ಲೂ ನಾನು ಲಂಕೇಶ್ವರ ದಶಕಂಠ ರಾವಣ ಎಂದು ದರ್ಶನ್ ಹೇಳುವ ಖಡಕ್ ಡೈಲಾಗ್ ಅಭಿಮಾನಿಗಳ ಮನಗೆದ್ದಿದೆ.

    ಸಂಜಯ್, ಅಕ್ಬರ್ ಹಾಗೂ ರಾಬರ್ಟ್ ಎಂದು ಮೂರು ಪಾತ್ರದಲ್ಲಿ ದರ್ಶನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದು, ಜಗಪತಿ ಬಾಬು ವಿಲನ್ ಆಗಿ ದರ್ಶನ್‍ಗೆ ಟಕ್ಕರ್ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಸಿನಿಮಾದ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಹಿನ್ನಲೆ ಸಂಗೀತ ನೀಡಿದ್ದಾರೆ.

  • 43ನೇ ವಸಂತಕ್ಕೆ ಕಾಲಿಟ್ಟ ದರ್ಶನ್ – ಕೇಕ್ ಕತ್ತರಿಸದೆ ಸರಳವಾಗಿ ಡಿ ಬಾಸ್ ಹುಟ್ಟುಹಬ್ಬ

    43ನೇ ವಸಂತಕ್ಕೆ ಕಾಲಿಟ್ಟ ದರ್ಶನ್ – ಕೇಕ್ ಕತ್ತರಿಸದೆ ಸರಳವಾಗಿ ಡಿ ಬಾಸ್ ಹುಟ್ಟುಹಬ್ಬ

    – ಶುಭ ಕೋರಲು ಅಭಿಮಾನಿಗಳ ನೂಕು ನುಗ್ಗಲು
    – ಬರ್ತ್ ಡೇಗೆ ರಾಬರ್ಟ್ ಟೀಸರ್ ಔಟ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ತಮ್ಮ ಹುಟ್ಟು ಹಬ್ಬವನ್ನ ಡಿ ದಾಸ್ ಆಚರಿಸಿಕೊಂಡಿದ್ದಾರೆ.

    ರಾತ್ರಿಯೇ ದರ್ಶನ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದರ್ಶನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ರಾಜ್ಯದ ನಾನಾ ಭಾಗಗಳಿಂದ ದರ್ಶನ್ ನೋಡೋಕೆ ಜಮಾಯಿಸಿದ್ದ ದಚ್ಚು ಅಭಿಮಾನಿಗಳಿಗೆ ದರ್ಶನ್ ಸರಿಯಾಗಿ 12 ಗಂಟೆಗೆ ದರ್ಶನ ನೀಡಿದರು. ಯಾವುದೇ ಕೇಕ್, ಹಾರ ತುರಾಯಿಗಳನ್ನ ತರೋ ಬದಲು ದವಸ ಧಾನ್ಯಗಳನ್ನ ನೀಡಿ ಎಂದು ದರ್ಶನ್ ತಮ್ಮ ಅಭಿಮಾನಿಗಳಿಗೆ ಈ ಹಿಂದೆಯೇ ಕರೆ ನೀಡಿದ್ದರು. ಅದರಂತೆ ಅಭಿಮಾನಿಗಳು ದಾಸನ ಹುಟ್ಟು ಹಬ್ಬಕ್ಕೆ ದವಸ ಧಾನ್ಯ ನೀಡುವ ಮೂಲಕ ಬರ್ತ್ ಡೇಯನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಿದರು. ದರ್ಶನ್ ಪುತ್ರ, ಸ್ಯಾಂಡಲ್‍ವುಡ್ ನಟರು, ಆಪ್ತರಾದ ಆದಿತ್ಯ, ಸೃಜನ್ ಲೋಕೇಶ್, ವಿನೋದ್ ಪ್ರಭಾಕರ್ ಸೇರಿದಂತೆ ಅನೇಕ ನಟರು ದರ್ಶನ್‍ಗೆ ಶುಭಾಶಯ ಕೋರಿದರು.

    ನೆಚ್ಚಿನ ನಟನ ನೋಡೋಕೆ ಕಿಲೋ ಮೀಟರ್ ಗಟ್ಟಲೇ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು. ಯಾರೊಬ್ಬರಿಗೂ ನಿರಾಸೆ ಮಾಡದ ದರ್ಶನ್ ಎಲ್ಲಾ ಅಭಿಮಾನಿಗಳಿಗೆ ದರ್ಶನ ನೀಡಿ, ಶೆಕ್ ಹ್ಯಾಂಡ್ ಕೊಟ್ಟು ಖುಷಿ ಪಡಿಸಿದರು. ಆದರೆ ಸೆಲ್ಫಿಗೆ ಮಾತ್ರ ನೋ ಅಂದರು. ಹೀಗಾಗಿ ಮೊಬೈಲ್ ಬಳಕೆ ನಿಷೇಧಿಸಲಾಗಿತ್ತು. ಆದರೂ ಫೋಟೋ ಕ್ಲಿಕ್ಕಿಸಲು ಯತ್ನಿಸಿದ ಕೆಲವು ಕ್ರೇಜಿ ಫ್ಯಾನ್ಸ್ ಗೆ ಡಿಬಾಸ್ ಟೀಮ್ ಅವಕಾಶ ಕೊಡಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ದರ್ಶನ್ ಮನೆ ಮುಂದೆ ನೂಕು ನುಗ್ಗಲು ಸೃಷ್ಟಿಯಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಮಹಿಳೆಯರು, ಹೆಣ್ಣು ಮಕ್ಕಳು, ಅಂಗವಿಕಲ ಅಭಿಮಾನಿಗಳು ಕೂಡ ದರ್ಶನ್‍ಗೆ ಹುಬ್ಬಹಬ್ಬಕ್ಕೆ ಶುಭಕೋರಿ ಹರಸಿದರು.

    ಅಲ್ಲದೇ ದರ್ಶನ್ ಬರ್ತ್ ಡೇ ಪ್ರಯುಕ್ತ ಬಹುನಿರೀಕ್ಷಿತ `ರಾಬರ್ಟ್’ ಟೀಸರ್ ಲಾಂಚ್ ಆಗಿದೆ. ಟೀಸರ್‍ನಲ್ಲಿ ಖಡಕ್ ಲುಕ್ಕು, ಡೈಲಾಗ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಟೀಸರ್ ಬಿಡುಗಡೆಯಾದ 7 ಗಂಟೆಗಳಲ್ಲೇ ಭರ್ತಿ 4 ಲಕ್ಷಕ್ಕೂ ಹೆಚ್ಚು ವ್ಯೂವ್ ಆಗಿದೆ.