Tag: Tears

  • ವೇದಿಕೆಯಲ್ಲೇ ‘ರಾಧಾ ಕಲ್ಯಾಣ’ ಖ್ಯಾತಿಯ ರಾಧಾ ಕಣ್ಣೀರು

    ವೇದಿಕೆಯಲ್ಲೇ ‘ರಾಧಾ ಕಲ್ಯಾಣ’ ಖ್ಯಾತಿಯ ರಾಧಾ ಕಣ್ಣೀರು

    ಬೆಂಗಳೂರು: ಇತ್ತೀಚೆಗಷ್ಟೆ ಕಿರುತೆರೆ ನಟಿ ರಾಧಿಕಾ ರಾವ್ ತಮ್ಮ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ರಾಧಿಕಾ ರಾವ್ ತಮ್ಮ ತಾಯಿಯನ್ನು ನೆನಪಿಸಿಕೊಂಡು ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಶೋನಲ್ಲಿ ರಾಧಿಕಾ ರಾವ್ ಭಾಗವಹಿಸಿದ್ದಾರೆ. ಈ ಶೋನಲ್ಲಿ ಕುಟುಂಬದ ಬಗ್ಗೆ ಮಾತನಾಡುತ್ತಾ, “ನಾನು ಇಂಡಸ್ಟ್ರೀಗೆ ಬಂದಾಗಿನಿಂದ ತಿಂಗಳಿಗೆ ಎರಡು ಬಾರಿ ಅಮ್ಮನನ್ನು ಭೇಟಿ ಮಾಡುಲು ಹೋಗುತ್ತಿದ್ದೆ. ನಾನು ಮೂಲತಃ ಮಂಗಳೂರು, ಆದರೆ ನಾನು ಬೆಂಗಳೂರಿನಲ್ಲಿದ್ದೇನೆ. ಅಮ್ಮ ಮಂಗಳೂರಿನಲ್ಲಿ ಇದ್ದಾರೆ. ಅಮ್ಮನ ಫೋನಿನಿಂದ ನನ್ನ ಪ್ರತಿದಿನ ಶುರುವಾಗುತ್ತಿತ್ತು” ಎಂದು ವೇದಿಕೆ ಮೇಲೆಯೇ ಕಣ್ಣೀರು ಹಾಕಿದರು.

    “ಈಗ ನನಗೆ ಮದುವೆಯಾಗಿದೆ. ಹೀಗಾಗಿ ಪತಿಯ ಕುಟುಂಬವನ್ನು ನೋಡಿಕೊಳ್ಳಬೇಕು. ಅಮ್ಮನನ್ನು ನೋಡಿಕೊಳ್ಳಬೇಕು. ಎರಡು ಕುಟುಂಬವನ್ನು ಹೇಗೇ ನೋಡಿಕೊಳ್ಳುತ್ತೇನೆ ಎಂದು ನನಗೆ ಗೊತ್ತಿಲ್ಲ. ಆದರೆ ನಾನು ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಗಳಗಳನೇ ರಾಧಿಕಾ ಅತ್ತಿದ್ದಾರೆ.

    ಮೂಲತಃ ಮಂಗಳೂರಿನವರಾಗಿರುವ ರಾಧಿಕಾ ರಾವ್ ಮಾರ್ಚ್ 11ರಂದು ಬುಧವಾರ ತಮ್ಮ ಗೆಳೆಯ ಆಕರ್ಷ್ ಭಟ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ದಂಪತಿಯ ಮದುವೆ ಮೂಡಬಿದಿರೆಯಲ್ಲಿ ಅದ್ಧೂರಿಯಾಗಿ ನಡೆದಿತ್ತು. ಎಂಜಿನಿಯರಿಂಗ್ ಓದಿರುವ ವರ ಆಕರ್ಷ್ ಭಟ್ ಇಂಟರ್ ನ್ಯಾಷನಲ್ ಮ್ಯಾಜಿಷಿಯನ್ ಮತ್ತು ಮೈಂಡ್ ರೀಡರ್ ಆಗಿದ್ದಾರೆ. ಇವರು ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

    ರಾಧಿಕಾ ರಾವ್ ಈ ಹಿಂದೆ ‘ಮಂಗಳೂರು ಹುಡ್ಗಿ, ಹುಬ್ಬಳ್ಳಿ ಹುಡ್ಗ’ ಸೀರಿಯಲ್‍ನಲ್ಲಿ ಅಭಿನಯಿಸುತ್ತಿದ್ದರು. ಈ ಸೀರಿಯಲ್‍ನಲ್ಲಿ ಅಮೂಲ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಿಂದ ಈಕೆ ಅಮುಲ್ಯಾ ಎಂದೇ ಪ್ರೇಕ್ಷಕರಿಗೆ ಚಿರಪರಿಚಿತಾಗಿದ್ದರು. ಈಗ ‘ರಾಧಾ ಕಲ್ಯಾಣ’ ಧಾರವಾಹಿಯಲ್ಲಿ ರಾಧಾ ಪಾತ್ರಧಾರಿಯಾಗಿ ಜನರ ಮನ ಸೆಳೆದಿದ್ದಾರೆ.

     

  • ಸಂವಿಧಾನದ ಮೇಲಿನ ಚರ್ಚೆ ಪೂರ್ಣ- ಸದನದಲ್ಲಿ ಸ್ಪೀಕರ್ ಕಣ್ಣೀರು

    ಸಂವಿಧಾನದ ಮೇಲಿನ ಚರ್ಚೆ ಪೂರ್ಣ- ಸದನದಲ್ಲಿ ಸ್ಪೀಕರ್ ಕಣ್ಣೀರು

    ಬೆಂಗಳೂರು: ವಿಧಾನಸಭೆಯಲ್ಲಿ ನಡೆಯುತ್ತಿದ್ದ ಸಂವಿಧಾನ ಮೇಲಿನ ಚರ್ಚೆ ಪೂರ್ಣಗೊಂಡಿದೆ. ಸಂವಿಧಾನದ 70ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸಂವಿಧಾನದ ಚರ್ಚೆ ಏರ್ಪಡಿಸಿದ್ರು. ಅಂತಿಮ ದಿನವಾದ ಇಂದು ಚರ್ಚೆ ಯಶಸ್ವಿಯಾಗಿ ಪೂರ್ಣಗೊಂಡಿದ್ದಕ್ಕೆ ಸ್ಪೀಕರ್ ಭಾವುಕರಾಗಿ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.

    ಅಂದಹಾಗೆ ಒಟ್ಟು 7 ದಿನಗಳ ಕಾಲ 28 ಗಂಟೆ ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆ ನಡೆಯಿತು. ಸುಮಾರು 48 ಶಾಸಕರು ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ರು. ಸಂವಿಧಾನ ಮೇಲಿನ ಚರ್ಚೆಯ ಅಂತಿಮ ದಿನವಾದ ಇಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದ್ರು. ಸಿದ್ದರಾಮಯ್ಯ ಮಾತನಾಡುವಾಗ ಪಕ್ಷಾಂತರ ಪಿಡುಗು ಪ್ರಜಾಪ್ರಭುತ್ವಕ್ಕೆ ಮಾರಕ. ಷೆಡ್ಯೂಲ್ 10 ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಯಾರೇ ಪಕ್ಷಾಂತರ ಮಾಡಿದ್ರೂ ತಪ್ಪು. ನಾನು ಪಕ್ಷಾಂತರ ಮಾಡಲಿಲ್ಲ. ನನ್ನ ಉಚ್ಛಾಟನೆ ಮಾಡಿದ್ರು. ಹಾಗಾಗಿ ನಾನು ಕಾಂಗ್ರೆಸ್ ಸೇರಬೇಕಾಯ್ತು ಅಂತ ಹೇಳಿದ್ರು.

    ಸಂವಿಧಾನ ಮೇಲಿನ ಚರ್ಚೆಯ ಒಟ್ಟಾರೆ ನಿರ್ಣಯವನ್ನು ಸ್ಪೀಕರ್ ಓದಿದ್ರು. ಸಂವಿಧಾನದ ಮೇಲಿನ ಚರ್ಚೆಯ ಎಲ್ಲ ಅಂಶಗಳನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ, ಲೋಕಸಭಾ ಸ್ಪೀಕರ್ ಅವರಿಗೆ ಕಳುಹಿಸಿಕೊಡಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಹೇಳಿದ್ರು. ಇದೇ ವೇಳೆ ಸಂವಿಧಾನ ಮೇಲಿನ ಚರ್ಚೆಯ ಸಾರಾಂಶ ಓದುವಾಗ ಭಾವುಕರಾಗಿ ಪೀಠದ ಮೇಲಿಯೇ ಸ್ಪೀಕರ್ ಕಣ್ಣೀರು ಹಾಕಿದ್ರು. ಬಳಿಕ ರಮೇಶ್ ಕುಮಾರ್, ಬಸವರಾಜ ಬೊಮ್ಮಾಯಿ, ಹೆಚ್.ಕೆ.ಕುಮಾರಸ್ವಾಮಿ ಅವರು ಸ್ಪೀಕರ್ ನಿರ್ಧಾರವನ್ನು ಶ್ಲಾಘಿಸಿದರು.

  • ಅಮ್ಮನನ್ನು ಮರೆಯುತ್ತಿದ್ದೇನೆಂದು ದೀಪಿಕಾ ಕಣ್ಣೀರು

    ಅಮ್ಮನನ್ನು ಮರೆಯುತ್ತಿದ್ದೇನೆಂದು ದೀಪಿಕಾ ಕಣ್ಣೀರು

    ಬೆಂಗಳೂರು: ಅಮ್ಮನನ್ನು ಮರೆಯುತ್ತಿದ್ದೇನೆ ಎಂದು ದೀಪಿಕಾ ದಾಸ್ ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ.

    ದೀಪಿಕಾ ದಾಸ್ ಬಿಗ್‍ಮನೆಗೆ ಎಂಟ್ರಿ ಕೊಟ್ಟ ಮೊದಲ ಎರಡು ವಾರಗಳ ಕಾಲ ಯಾವುದೇ ಸ್ಪರ್ಧಿಯ ಜೊತೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ನಂತರ ಬಿಗ್‍ಬಾಸ್ ನೀಡುತ್ತಿದ್ದ ಟಾಸ್ಕ್ ಮಾಡುತ್ತಾ, ಮಾಡುತ್ತಾ ಮನೆಯ ಸದಸ್ಯರ ಜೊತೆ ಚೆನ್ನಾಗಿ ಮಾತನಾಡಲು ಶುರು ಮಾಡಿದ್ದಾರೆ. ದೀಪಿಕಾ ಯಾವುದೇ ಗೇಮ್ ಬಂದರೂ ತುಂಬಾ ಚೆನ್ನಾಗಿ ಆಟವಾಡುತ್ತಿದ್ದರು. ಆದರೆ ಸೋಮವಾರದ ಸಂಚಿಕೆಯಲ್ಲಿ ದೀಪಿಕಾ ಅಮ್ಮನನ್ನು ನೆನಪಿಸಿಕೊಂಡು ಗಳಗಳನೇ ಅತ್ತಿದ್ದಾರೆ.

    ಹೌದು. ಸೋಮವಾರ ಪ್ರಸಾರವಾದ ಸಂಚಿಕೆಯಲ್ಲಿ ಕ್ಯಾಪ್ಟನ್ ಆಯ್ಕೆಗಾಗಿ ಪ್ರಿಯಾಂಕಾ, ದೀಪಿಕಾ ಮತ್ತು ಚಂದನ್ ಆಚಾರ್ ಮೂವರಿಗೆ ಬಿಗ್‍ಬಾಸ್ ಒಂದು ಟಾಸ್ಕ್ ಕೊಟ್ಟಿದ್ದರು. ಟಾಸ್ಕಿನಲ್ಲಿ ಪ್ರಿಯಾಂಕಾ ವಿಜೇತರಾಗಿದರು. ಕ್ಯಾಪ್ಟನ್ ಆದವರಿಗೆ ಅವರ ಮನೆಯವರಿಂದ ಬಿಗ್‍ಬಾಸ್ ಧ್ವನಿ ಕೇಳಿಸುತ್ತಾರೆ. ಅದೇ ರೀತಿ ಪ್ರಿಯಾಂಕಾ ಅವರ ಅಮ್ಮ ಮಾತಾಡಿದ್ದಾರೆ.

    ಇತ್ತ ಟಾಸ್ಕ್ ಬಗ್ಗೆ ದೀಪಿಕಾ, ಕಿಶನ್ ಮಾತಾಡುತ್ತಿದ್ದರು. ಆಗ ದೀಪಿಕಾ ನಾನು ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ. ನಂತರ ಅಮ್ಮನನ್ನು ನೆನಪಿಸಿಕೊಂಡು ಗಳಗಳನೇ ಅತ್ತಿದ್ದಾರೆ. ಆಗ ಪ್ರಿಯಾಂಕಾ ಮತ್ತು ಕಿಶನ್ ಸಮಾಧಾನ ಮಾಡಿದ್ದಾರೆ. ಆದರೂ ದೀಪಿಕಾ, ಅಮ್ಮನನ್ನು ನಾನು ಮರೆಯುತ್ತಿದ್ದೇನೆ ಎಂದು ಪ್ರಿಯಾಂಕಾರನ್ನು ತಬ್ಬಿಕೊಂಡು ಜೋರಾಗಿ ಕಣ್ಣೀರು ಹಾಕಿದ್ದಾರೆ.

  • ನನ್ನಿಂದ ನೋವಾಗಿದ್ದರೆ ಕ್ಷಮಿಸಿ- ಡಿಕೆಶಿ ಕಣ್ಣೀರಿಗೆ ಮರುಗಿದ ಶ್ರೀರಾಮುಲು

    ನನ್ನಿಂದ ನೋವಾಗಿದ್ದರೆ ಕ್ಷಮಿಸಿ- ಡಿಕೆಶಿ ಕಣ್ಣೀರಿಗೆ ಮರುಗಿದ ಶ್ರೀರಾಮುಲು

    ಚಿತ್ರದುರ್ಗ: ಇಡಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಕಣ್ಣೀರಿಟ್ಟ ವಿಚಾರಕ್ಕೆ ಆರೋಗ್ಯ ಮಂತ್ರಿ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿ,  ಅವರ ಕಣ್ಣೀರಿಗೆ ಮರುಗಿದ್ದಾರೆ. ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಡಿ.ಕೆ ಶಿವಕುಮಾರ್ ಅವರ ವೈಯಕ್ತಿಕ ವಿಚಾರಕ್ಕೆ ಎಂದಿಗೂ ಹೇಳಿಕೆ ಕೊಟ್ಟಿಲ್ಲ. ಅವರು ಹೇಗೆ ನನಗೆ ರಾಜಕೀಯವಾಗಿ ಕೆಣಕಿ, ಟೀಕೆ ಮಾಡುತ್ತಿದ್ದರೋ, ಅದರಂತೆ ನಾನೂ ಕೂಡ ರಾಜಕೀಯ ವಿಚಾರಕ್ಕೆ ಮಾತ್ರ ಅವರ ವಿರುದ್ಧ ಮಾತನಾಡಿದ್ದೇನೆ. ಒಬ್ಬ ಮನುಷ್ಯ ಕಷ್ಟದಲ್ಲಿರುವಾಗ ಅವರನ್ನು ಟೀಕಿಸುವವನು ನಾನಲ್ಲ. ನಾನು ಕೆಟ್ಟ ಮನಸ್ಸಿನಿಂದ ಯಾವ ಮಾತು ಆಡಿಲ್ಲ. ನನ್ನ ಮಾತಿನಿಂದ ನೋವಾಗಿದ್ದರೆ, ಡಿಕೆಶಿ ಅವರೇ ನನ್ನನ್ನು ಕ್ಷಮಿಸಿ ಎಂದು ಹೇಳಿದರು.

    ನನ್ನ ಮಾತು ಕೇವಲ ರಾಜಕಾರಣಕ್ಕೆ ಸೀಮಿತವಾಗಿತ್ತು, ವೈಯಕ್ತಿಕವಾಗಿ ನಾನು ಮಾತನಾಡಿಲ್ಲ. ಕಾನೂನು ಏನು ಕೆಲಸ ಮಾಡಬೇಕೋ ಅದು ಮಾಡುತ್ತೆ. ಅವರು ಕಷ್ಟದಲ್ಲಿರುವಾಗ ಕಣ್ಣೀರು ಹಾಕುವ ವೇಳೆ ಚುಚ್ಚು ಮಾತನಾಡಿದರೆ ನೋವಾಗುತ್ತೆ. ಇದರಿಂದ ಅವರ ಕುಟುಂಬಕ್ಕೂ ನೋವಾಗುತ್ತೆ. ಕಷ್ಟದಲ್ಲಿರುವವರಿಗೆ ನಾನು ಯಾವತ್ತೂ ಟೀಕೆ ಮಾಡಲ್ಲ, ಬೇರೆಯವರು ಕೂಡ ಕಷ್ಟದಲ್ಲಿರುವವರನ್ನು ನೋಡಿ ಟೀಕಿಸಬಾರದು. ಅದು ತಪ್ಪು. ನನ್ನ ಮಾತನ್ನು ಡಿಕೆಶಿ ಅವರು ರಾಜಕೀಯವಾಗಿ ಮಾತ್ರ ತೆಗೆದುಕೊಳ್ಳಬೇಕು, ವೈಯಕ್ತಿಕವಾಗಿ ನೋಡಬಾರದು ಎಂದು ಮರುಗಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರನ್ನ ತೆಗೆದು ಇಟ್ಟಿದ್ದಾರೆ, ಮೂಲೆ ಗುಂಪು ಮಾಡಿದ್ದಾರೆ, ಮತ್ತೆ ಸಿದ್ದರಾಮಯ್ಯ ಸಿಎಂ ಕನಸು ನನಸಾಗಲ್ಲ ಎಂದು ಟಾಂಗ್ ಕೊಟ್ಟರು.

  • ಹಬ್ಬದ ದಿನವೇ ಗಳಗಳನೆ ಅತ್ತ ಡಿಕೆಶಿ

    ಹಬ್ಬದ ದಿನವೇ ಗಳಗಳನೆ ಅತ್ತ ಡಿಕೆಶಿ

    ನವದೆಹಲಿ: ಮೂರನೇ ದಿನವಾದ ಇಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ ಮುನ್ನ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಣ್ಣೀರು ಹಾಕಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕಣ್ಣಲ್ಲಿ ನೀರು ಹಾಕುತ್ತಿರೋದು ನಮ್ಮ ತಂದೆಗೆ ಪೂಜೆ ಮಾಡುವ ಅವಕಾಶವನ್ನು ನನ್ನ ಬಿಜೆಪಿ ಸ್ನೇಹಿತರು ಅಧಿಕಾರದ ಮುಖಾಂತರ ಕೊಟ್ಟಿಲ್ಲ. ನನಗೆ ದುಃಖ ಯಾಕೆ ಆಗುತ್ತಿದೆ ಎಂದರೆ ಇವತ್ತು ತಂದೆ ಹಾಗೂ ಹಿರಿಯರಿಗೆ ನಾನು, ನನ್ನ ತಮ್ಮ ಪೂಜೆ ಮಾಡಬೇಕಿತ್ತು. ಆದರೆ ಅವರಿಗೆ ಎಡೆ ಇಡಲು ಕೂಡ ಇವರು ನನಗೆ ಕೊಟ್ಟಿಲ್ಲ. ಪರವಾಗಿಲ್ಲ, ಇಡಿ ಕಚೇರಿಯಲ್ಲೇ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸುತ್ತೇನೆ ಎಂದು ಡಿಕೆಶಿ ಕಣ್ಣೀರಿಟ್ಟಿದ್ದಾರೆ.

    ಉಪ್ಪು ತಿಂದವರು ನೀರು ಕುಡಿಬೇಕು ಎಂದು ನನ್ನ ಸ್ನೇಹಿತರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೋಸ್ಕರ, ನಮ್ಮ ನಾಯಕರಿಗೋಸ್ಕರ, ನನ್ನನ್ನು ನಂಬಿದ ಜನಕ್ಕೋಸ್ಕರ ಹೋರಾಟ ಮಾಡಿಕೊಂಡು ನಾನು ಬಂದಿದ್ದೇನೆ. ಇಂದು ನಮ್ಮ ಅನೇಕ ಸ್ನೇಹಿತರು, ಕಾರ್ಯಕರ್ತರು, ನಾಯಕರು ಪಕ್ಷ ಬೆಳೆಸಿರುವುದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ಇದನ್ನೆಲ್ಲಾ ಎದುರಿಸುವಂತಹ ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ನಾನು ಯಾರಿಗೂ ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ, ಲಂಚದ ಆರೋಪವಿಲ್ಲ, ಅಧಿಕಾರ, ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿಲ್ಲ. ನೇರವಾಗಿ ನುಡಿದಂತೆ ನಡೆದಿದ್ದೇನೆ.

    ಈ ಹಿಂದೆ ಎಲ್ಲಾ ನಾಯಕರುಗಳು ಮಾತನಾಡಿದ್ದು ಈಗಲೂ ನನ್ನ ಮನದಲ್ಲಿ ಉಳಿದಿದೆ. ಅನೇಕ ಉದಾಹರಣೆಗಳು ಇದ್ದರು ಕೂಡ ಯಾರ ಮೇಲೂ ಒಂದು ತನಿಖೆಯನ್ನು ಮಾಡಿಲ್ಲ. ಸಿಎಂ ಯಡಿಯೂರಪ್ಪ ಅವರ ಅನೇಕ ದಾಖಲೆಗಳು ನಮ್ಮ ಮನೆಯಲ್ಲಿ ಸಿಕ್ಕರು ಕೂಡ ಯಾವುದನ್ನು ತನಿಖೆ ಮಾಡದೆ, ನನ್ನನ್ನು ಮಾತ್ರ ಈ ಸ್ಥಿತಿಗೆ ತಂದಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎನ್ನುವ ಎಲ್ಲಾ ಸಂಗತಿ ನನಗೆ ಗೊತ್ತು. ಏನು ಮಾಡಬೇಕು ಎನ್ನುವುದು ನನಗೆ ತಿಳಿದಿದೆ. ಯಾವುದಕ್ಕೂ ನಾನು ಹೆದರಲ್ಲ, ಎಲ್ಲದ್ದಕ್ಕೂ ಸಿದ್ಧನಾಗಿಯೇ ನಾನು ಇಲ್ಲಿಗೆ ಬಂದ್ದಿದ್ದೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪ್ರತಿವರ್ಷ ಮಗಳ ಜೊತೆ ಗಣೇಶ ಚತುರ್ಥಿ ಮಾಡುತ್ತಿದ್ದೆ. ಸ್ಯಾಂಕಿ ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡುತ್ತಿದ್ದೆವು. ಈ ವರ್ಷ ಹಬ್ಬದಿಂದ ನನ್ನ ದೂರ ಮಾಡಿದ್ದಾರೆ. ಕನಿಷ್ಠ ಹಿರಿಯರ ಪೂಜೆಗೂ ಅವಕಾಶ ಕೊಟ್ಟಿಲ್ಲ. ದೇವರಿಗೆ ಪೂಜಿಸುವ ಅವಕಾಶ ಸಿಕ್ಕಿಲ್ಲ. ಕಾರ್ಯಕರ್ತರು ನನ್ನ ಪರಿಸ್ಥಿತಿ ನೋಡಿ ದೆಹಲಿಗೆ ಬರುತ್ತಿದ್ದಾರೆ. ಯಾರು ದೆಹಲಿಗೆ ಬರುವುದು ಬೇಡ, 50-60 ಸಾವಿರ ಖರ್ಚು ಮಾಡಿ ಬರಬೇಡಿ. ನಿಮ್ಮೆಲ್ಲರ ಹಾರೈಕೆ ನನ್ನ ಜೊತೆ ಇದೆ. ಕುಮಾರಸ್ವಾಮಿ ಸೇರಿ ಹಲವು ನಾಯಕರು ಧೈರ್ಯ ತುಂಬಿದ್ದಾರೆ ಅವರಿಗೆಲ್ಲ ಅಭಿನಂದನೆಗಳು ಎಂದು ಹೇಳಿದರು.

  • ನಾನು ಗುರುತಿಸಿದವರೇ, ನನಗೆ ಮೋಸ ಮಾಡಿದರು – ಸುದ್ದಿಗೋಷ್ಠಿಯಲ್ಲಿ ಎಚ್‍ಡಿಡಿ ಕಣ್ಣೀರು

    ನಾನು ಗುರುತಿಸಿದವರೇ, ನನಗೆ ಮೋಸ ಮಾಡಿದರು – ಸುದ್ದಿಗೋಷ್ಠಿಯಲ್ಲಿ ಎಚ್‍ಡಿಡಿ ಕಣ್ಣೀರು

    ಬೆಂಗಳೂರು: ನೀವು ಗುರುತಿಸಿದವರು ಹೇಗೆ ಮೋಸ ಮಾಡಿದರು ಎಂದು ಸಭೆಯಲ್ಲಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಅವರು ಮಾತನಾಡಿದ್ದು ಸರಿ, ನಾನು ತಪ್ಪಿತಸ್ಥರ ಸ್ಥಾನದಲ್ಲಿದ್ದೇನೆ ಎನ್ನುತ್ತಲೇ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕಣ್ಣೀರು ಹಾಕಿದ್ದಾರೆ.

    ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಸಭೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಷ್ಟಾವಂತ ಕಾರ್ಯಕರ್ತರು ಗುರುತಿಸಿದ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೆನೆ. ನಾನು ನಿಷ್ಟಾವಂತ ಕಾರ್ಯಕರ್ತರನ್ನು ಗುರುತಿಸುವಲ್ಲಿ ವಿಫಲನಾದೆ. ಹೀಗಾಗಿ ಅತ್ಯಂತ ನೋವಿನಲ್ಲಿದ್ದೇನೆ ಎಂದು ಹೇಳಿ ಕಣ್ಣೀರು ಹಾಕಿದರು.

    ಕಾರ್ಪೋರೇಷನ್, ಬಿಡಿಎ, ಎಲ್ಲಾ ಹುದ್ದೆ ಕೊಟ್ಟಿದ್ದೇವೆ. ಆದರೂ ಮೋಸ ಮಾಡಿದರು. ನನಗೋಸ್ಕರ ಹೋರಾಟ ಮಾಡಿದ ಕಾರ್ಯಕರ್ತರಿಗೆ ನಾನು ಯಾವುದೇ ಸ್ಥಾನ ಮಾನ ಕೊಡಲಿಲ್ಲ. ಅಲ್ಲದೆ, ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದಾಗಲೂ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂದು ಸಭೆಯಲ್ಲಿ ನನ್ನ ಮನದಾಳದ ನೋವನ್ನ ಪ್ರಶ್ನೆ ಮಾಡಿದ್ದಾರೆ. ನೀವು ಗುರುತಿಸಿದವರೇ ಹೇಗೆ ಮೋಸ ಮಾಡಿದರು ನೋಡಿ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಮಾತಾಡಿದ್ದು ಸರಿ ನಾನು ತಪ್ಪಿತಸ್ಥರ ಸ್ಥಾನದಲ್ಲಿ ನಿಂತಿದ್ದೆನೆ ಎಂದು ಗಳಗಳನೆ ಅತ್ತಿದ್ದಾರೆ.

    ಸ್ಪೀಕರ್ 14 ಜನ ಶಾಸಕರನ್ನು ಅನರ್ಹ ಮಾಡಿದ್ದಾರೆ. ದೇಶದಲ್ಲೇ ಇದು ಐತಿಹಾಸಿಕ ತೀರ್ಪು ಎಂದು ಭಾವಿಸುತ್ತೆನೆ. ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಹಲವಾರು ತೀರ್ಪುಗಳು ಹೈ ಕೋರ್ಟ್‍ನಲ್ಲಿ ಹೊರಬಿದ್ದಿದೆ. ಆದರೆ ರಾಜ್ಯದಲ್ಲಿ ಸಭಾಧ್ಯಕ್ಷರು ವಿಶೇಷವಾದ ತೀರ್ಪು ಕೊಟ್ಟಿದ್ದಾರೆ. ಸ್ಪೀಕರ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲು 3 ಜನ ಅತೃಪ್ತ ಶಾಸಕರು ಹೊರಟಿದ್ದಾರೆ. ನಾಳೆ ಅವರೆಲ್ಲಾ ನಮ್ಮನ್ನುದ್ದೇಶಿಸಿ ಮಾತನಾಡಬಹುದು. ಹೀಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ರೀಯಾ ಲೋಪ ಎತ್ತಿದ್ದಾರೆ. ನಾಳೆ ವಿಧಾನಸಭೆ ಅಧಿವೇಶನ ಕರೆದಿರೋದು ಸರಿ ಅಲ್ಲ ಎಂದು ಕ್ರಿಯಾಲೋಪ ಎತ್ತಿದ್ದಾರೆ. ಆದರೆ ಬಿಜೆಪಿಯವರು ಸ್ಪೀಕರ್ ವಿರುದ್ದವೇ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತಾರೆಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ನಾಳೆ ಅಧಿವೇಶನ ಕರೆದಿರುವ ಕಾರಣವನ್ನು ಅವರೇ ತಿಳಿಸುತ್ತಾರೆ. ಅವರ ಹಕ್ಕಿನಲ್ಲಿ ಮಧ್ಯೆ ಪ್ರವೇಶ ಮಾಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್‍ಗೆ ಓಟಿನ ಬಜೆಟ್ ಎಂದು ಟೀಕಿಸುತ್ತಾರೆ. ನಾಳೆ ಕುಮಾರಸ್ವಾಮಿ ಬಜೆಟ್ ಮೇಲೆಯೇ ಹಣಕಾಸು ಮಸೂದೆ ಬಿಲ್ ಪಡೆಯಲಿದ್ದಾರೆ. ಹೀಗಾಗಿ ವಿರೋಧ ಮಾಡುವುದಿಲ್ಲ ಎಂದು ತಿಳಿಸಿದರು.

    ಇನ್ನೂ ಮೂರು ವರ್ಷ ಎಂಟು ತಿಂಗಳು ಯಡಿಯೂರಪ್ಪ ಸರ್ಕಾರ ನಡೆಸಿದಲ್ಲಿ ಸಿದ್ದರಾಮಯ್ಯನವರು ಪ್ರತಿಪಕ್ಷ ನಾಯಕರಾಗಿ ಮುಂದುವರಿಯಲಿದ್ದಾರೆ. ಕುಮಾರಸ್ವಾಮಿ ಫ್ಲೋರ್ ಲೀಡರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಕುಮಾರಸ್ವಾಮಿ ಅಧಿಕೃತ ವಿರೋಧ ಪಕ್ಷದ ನಾಯಕರಲ್ಲ ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ಹೇಗೆ ಕೆಲಸ ಮಾಡಿದ್ದಾರೋ, ಅದೇ ರೀತಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಸುವ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಕಾಂಗ್ರೆಸ್‍ನ ವರಿಷ್ಠರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಹಾಗೂ ರಾಷ್ಟ್ರದ ಮುಖಂಡರ ಜೊತೆ ಚರ್ಚಿಸಿ, ಅಭಿಪ್ರಾಯ ಪಡೆದು, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

  • ಜೆಡಿಎಸ್ ಕಚೇರಿಯಲ್ಲಿ 15 ನಿಮಿಷ ಕಣ್ಣೀರು ಹಾಕಿದ್ರು ಎಚ್‍ಡಿಕೆ : ಎಚ್‍ಡಿಡಿ

    ಜೆಡಿಎಸ್ ಕಚೇರಿಯಲ್ಲಿ 15 ನಿಮಿಷ ಕಣ್ಣೀರು ಹಾಕಿದ್ರು ಎಚ್‍ಡಿಕೆ : ಎಚ್‍ಡಿಡಿ

    – ಮೈತ್ರಿ ಸರ್ಕಾರ ಹೋದ್ರು ಚಿಂತೆ ಇಲ್ಲ

    ಬೆಂಗಳೂರು: ಮೈತ್ರಿ ಸರ್ಕಾರದ ಸಿಎಂ ಆಗಿ ಕುಮಾರಸ್ವಾಮಿ ಅವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಸರ್ಕಾರ ಉರುಳಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡರು, ಸರ್ಕಾರ ಹೋದರು ಕೂಡ ಚಿಂತೆ ಇಲ್ಲ. ಯಾರು ಬಂದರು ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಅತೃಪ್ತ ಶಾಸಕರ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಸಿದ್ಧತೆ ನಡೆಸಿರುವ ಎಚ್‍ಡಿಡಿ ಇಂದು ಜೆಪಿ ಭವನದ ಪಕ್ಷದ ಕಚೇರಿಯಲ್ಲಿ ರಾಜರಾಜೇಶ್ವರಿ ನಗರ, ಕೆ.ಆರ್.ಪುರಂ ಕ್ಷೇತ್ರದ ಮುಖಂಡರ ಸಭೆ ಆರಂಭ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಮಗ ಸಿಎಂ ಆದ ಸಂದರ್ಭದಿಂದ ಸಾಕಷ್ಟು ನೋವು ಅನುಭವಿಸಿದ್ದಾರೆ. ಸುಮಾರು 15 ನಿಮಿಷ ಪಕ್ಷದ ಕಚೇರಿಯಲ್ಲಿ ಕಣ್ಣೀರು ಹಾಕಿದ್ದರು. ಎಲ್ಲವೂ ನನಗೆ ಗೊತ್ತಿದೆ ಎಂದರು.

    ನಾವು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡುತ್ತೇವೆ. ಜೆಡಿಎಸ್ ಅವರು ಬಿಜೆಪಿಗೆ ಬೆಂಬಲ ನೀಡುವ ವರದಿ ಸುಳ್ಳು. ಏನೇ ಮಾಡಿದರು ಜೆಡಿಎಸ್ ಪಕ್ಷವನ್ನು ನಾಶ ಪಡಿಸಲು ಅಗಲ್ಲ. ಆದರೆ ಸರ್ಕಾರದ ಎಲ್ಲ ಕೆಲಸಗಳನ್ನು ವಿರೋಧ ಮಾಡಲ್ಲ. ವಿಷಯಾಧರಿತವಾಗಿ ಕೆಲಸ ಮಾಡುತ್ತೇವೆ. ಸರ್ಕಾರ ಹೋದರು ಪರವಾಗಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಪಕ್ಷ ಸಂಘಟನೆ ಮಾಡಲು ತಿಳಿಸಿದ್ದೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಬಿಜೆಪಿ ಬೆಂಬಲ ನೀಡುವ ಬಗ್ಗೆ ಮಾತನಾಡಿದ ಅವರು, ನಾವು 34 ಶಾಸಕರಿದ್ದು, ಜಿಟಿ ದೇವೇಗೌಡರ ಹೇಳಿಕೆಯನ್ನ ನಾನು ಅಲ್ಲಗೆಳೆಯುವುದಿಲ್ಲ. ಸರ್ಕಾರ ಕೇವಲ 14 ತಿಂಗಳಿಗೆ ಪತನವಾದ ಹಿನ್ನೆಲೆಯಲ್ಲಿ ಮನೆಗೆ ಹೋಗಬೇಕು ಎಂಬ ನೋವಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಅಭಿಪ್ರಾಯ ಕಾಂಗ್ರೆಸ್ ಶಾಸಕರಲ್ಲೂ ಇದೆ. ಇದನ್ನೇ ಜಿಟಿಡಿ ಹೇಳಿದ್ದಾರೆ ಅಷ್ಟೇ. ಆದರೆ ಅದನ್ನೇ ದೊಡ್ಡ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.

    ನಮ್ಮ ಪಕ್ಷದಿಂದ 34 ಶಾಸಕರು ಇದ್ದಾರೆ. ಒಂದೊಮ್ಮೆ ಬಿಎಸ್ ಯಡಿಯೂರಪ್ಪ ಅವರು ಸರ್ಕಾರ ರಚಿಸಲು ವಿಫಲವಾದರೆ ಬೆಂಬಲ ನೀಡುವ ಬಗ್ಗೆ ಹೇಳಿದ್ದಾರೆ. ಅತೃಪ್ತ ಶಾಸಕರ ಕಥೆ ಏನಾಗುತ್ತದೆ ಎಂದು ಕಾದು ನೋಡುತ್ತೇನೆ. ಕುಮಾರಸ್ವಾಮಿ ಏಕಾಂಗಿಯಾಗಿ 40 ಸೀಟು ತಂದಿದ್ದರಿಂದ ಅವರೇ ನಮಗೆ ಸ್ಟಾರ್ ಕ್ಯಾಂಪೇನರ್. ಅಲ್ಲದೇ ದ್ವೇಷ ರಾಜಕಾರಣ ಮಾಡಲ್ಲ ಎಂದ ಬಿಎಸ್‍ವೈ ನಿರ್ಧಾರಕ್ಕೆ ಸ್ವಾಗತ ಕೋರಿದರು. ಅಲ್ಲದೇ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಿದ್ದು, ಇದಕ್ಕೆ ಯಾವುದೇ ಚರ್ಚೆ ನಡೆಸದೆ ಅಂಗೀಕಾರ ಮಾಡುವ ಅಗತ್ಯ ಇದೆ. ಇದಕ್ಕೆ ಸ್ಪೀಕರ್ ಅನುಮತಿ ನೀಡಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಯಾವ ಸಂದರ್ಭದಲ್ಲಿ ಕಣ್ಣೀರಿಟಿದ್ದರು, ಯಾವ ವಿಚಾರವಾಗಿ 15 ನಿಮಿಷ ಕಾಲ ದುಃಖ ವ್ಯಕ್ತಪಡಿಸಿದ್ದರು ಎಂಬ ಬಗ್ಗೆ ಮಾತ್ರ ದೇವೇಗೌಡರು ಮಾಹಿತಿ ನೀಡಲಿಲ್ಲ.

    ಸಭೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಕಡಿದುಕೊಳ್ಳಲು ಪಕ್ಷದ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಉಪ ಚುನಾವಣೆ ಎದುರಿಸುವುದು ಬೇಡ. ಸದ್ಯ ಬಿಬಿಎಂಪಿ ಚುನಾವಣೆ ಬರುತ್ತಿರುವುದರಿಂದ ನಮ್ಮ ಪಕ್ಷದಿಂದಲೇ ಸ್ಪರ್ಧೆ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕಾರ್ಯಕರ್ತರ ಅಭಿಪ್ರಾಯ ಪಡೆದಿರುವ ಎಚ್‍ಡಿಡಿ ನೀವು ಈ ಬಗ್ಗೆ ತಲೆಕೆಡಿಸಿಕೊಳ್ಳುವುದ ಬೇಡ. ಮೈತ್ರಿ ಬಗ್ಗೆ ನಾನು, ಕುಮಾರಸ್ವಾಮಿ ತೀರ್ಮಾನ ಮಾಡುತ್ತೇವೆ. ಇಂದಿನಿಂದಲೇ ಪಕ್ಷ ಸಂಘಟನೆ ಮಾಡಿ. ಚುನಾವಣೆ ಏಕಾಂಗಿಯಾಗಿ ಸ್ಪರ್ಧೆ ಮಾಡೋ ವಿಚಾರ ಮುಂದೆ ನಿರ್ಧಾರ ಮಾಡೋಣ ಎಂದಿದ್ದಾರೆ ಎನ್ನಲಾಗಿದೆ.

  • ಮನೆಯಲ್ಲಿದ್ದವರು 9 ಮಂದಿ, ಬಂದಿದ್ದು 5 ಮತ ಮಾತ್ರ – ಕಣ್ಣೀರಿಟ್ಟ ಅಭ್ಯರ್ಥಿ

    ಮನೆಯಲ್ಲಿದ್ದವರು 9 ಮಂದಿ, ಬಂದಿದ್ದು 5 ಮತ ಮಾತ್ರ – ಕಣ್ಣೀರಿಟ್ಟ ಅಭ್ಯರ್ಥಿ

    ಚಂಡೀಗಢ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೂ 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.50ರಷ್ಟು ಮತಗಳನ್ನು ಪಡೆದಿದೆ. ಆದರೆ ಪಂಜಾಬ್ ರಾಜ್ಯದಲ್ಲಿ ಅಭ್ಯರ್ಥಿಯೊಬ್ಬರು ಕೇವಲ 5 ಮತಗಳನ್ನು ಪಡೆದಿದ್ದು, ಕಣ್ಣೀರು ಹಾಕಿದ್ದಾರೆ.

    ನೀತು ಶುಟ್ಟರ್ನ್ ವಾಲಾ ಕಣ್ಣೀರು ಹಾಕಿದ ಅಭ್ಯರ್ಥಿ. ಇವರು ಪಂಜಾಬ್‍ನ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಮತ ಎಣಿಕೆಯಲ್ಲಿ ಕೇವಲ 5 ಮತಗಳನ್ನು ಪಡೆದಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ತಮಗೆ ಐದು ಮತಗಳು ಬಂದಿದ್ದಕ್ಕೆ ಅವರು ಕಣ್ಣೀರು ಹಾಕಿರಲಿಲ್ಲ. ಅವರ ಕುಟುಂಬದವರೇ ತಮಗೆ ವೋಟು ಹಾಕಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾರೆ.

    ವಾಲಾ ನೀಡಿರುವ ಸಂದರ್ಶನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕ್ಯಾಮೆರಾ ಮುಂದೆಯೇ ಗಳಗಳನೇ ಅತ್ತಿದ್ದಾರೆ. ನನಗೆ ಐದು ಮತ ಬಂದಿದ್ದಕ್ಕೆ ನೋವಾಗಿಲ್ಲ. ಆದರೆ ನಮ್ಮೆ ಮನೆಯಲ್ಲಿ 9 ಮಂದಿ ಇದ್ದಾರೆ. ಅವರೇ ನನಗೆ ಮತ ಹಾಕಿಲ್ಲ. ಇದರಿಂದ ನನಗೆ ನೋವಾಗಿದೆ ಎಂದು ಕುಟುಂಬದವರ ಮೇಲೆ ಆರೋಪ ಮಾಡಿದ್ದಾರೆ. ಜೊತೆಗೆ ಇವಿಎಂ ಮೇಲೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

    ವಾಲಾ ಅವರು ಸಂದರ್ಶನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಭಿನ್ನವಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ.

  • ಜೆಡಿಎಸ್ ಕುಟುಂಬ ರಾಜಕಾರಣದ ಸಿಂಬಲ್ ಕಣ್ಣೀರು: ಜಗದೀಶ್ ಶೆಟ್ಟರ್ ಲೇವಡಿ

    ಜೆಡಿಎಸ್ ಕುಟುಂಬ ರಾಜಕಾರಣದ ಸಿಂಬಲ್ ಕಣ್ಣೀರು: ಜಗದೀಶ್ ಶೆಟ್ಟರ್ ಲೇವಡಿ

    ಹುಬ್ಬಳ್ಳಿ: ಜೆಡಿಎಸ್ ಕುಟುಂಬ ರಾಜಕಾರಣದ ಸಂಕೇತವೇ ಕಣ್ಣೀರಾಗಿದೆ. ಸಿಎಂ ಕುಮಾರಸ್ವಾಮಿ ಅವರು ಸೋಲುವ ಭೀತಿಯಿಂದ ಕಣ್ಣೀರು ಹಾಕುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ದೇವೇಗೌಡರು ಮತ್ತು ಜೆಡಿಎಸ್ ಕುಟುಂಬ ರಾಜಕಾರಣದ ಸಿಂಬಲ್ ಕಣ್ಣೀರಾಗಿದೆ.  ಸಿಎಂ ಕುಮಾರಸ್ವಾಮಿ ಅವರು ಹತಾಶರಾಗಿದ್ದು, ಯಾವುದೇ ಕಾರಣಕ್ಕೂ ನಾನು ಕಣ್ಣೀರು ಹಾಕುವುದಿಲ್ಲ ಎಂದು ಹೇಳಿದ್ದರು. ಆದರೆ ಮತ್ತೆ ಸೋಮವಾರ ಹತಾಶರಾಗಿ ಕಣ್ಣೀರು ಹಾಕಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಅಳುಮಂಜಿ ಅನ್ನೋದು ಮತ್ತೆ ಸಾಬೀತಾಗಿದೆ ಎಂದು ವ್ಯಂಗ್ಯವಾಡಿದರು.

    ಕಣ್ಣಿರು ಸುರಿಸಿ ಅಧಿಕಾರ ಹಿಡಿಯಬೇಕು ಅಂತ ಜೆಡಿಎಸ್ ಹೊರಟಿದೆ. ಆದರೆ ಅದು ಸಾಧ್ಯವಾಗುವುದಿಲ್ಲ. ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಬಿಜೆಪಿ ಅಲೆಯಿದೆ. ಬಿಜೆಪಿ ಶಿಸ್ತು ಬದ್ಧವಾಗಿ ಪ್ರಚಾರ ಮಾಡುತ್ತಿದೆ. ನರೇಂದ್ರ ಮೋದಿ, ಅಮಿತ್ ಷಾ ಅವರು ದೊಡ್ಡ ಮಟ್ಟದಲ್ಲಿ ರ‍್ಯಾಲಿಗಳಿಂದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ. ಕಾಂಗ್ರೆಸ್-ಜೆಡಿಎಸ್ ನಾಯಕರ ಮಧ್ಯೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಇದರಿಂದ ಮೈತ್ರಿ ಸರ್ಕಾರದಲ್ಲಿ ಅಸಮಾಧಾನದಿಂದ ಕಾಂಗ್ರೆಸ್ ಜೆಡಿಎಸ್ ಮುಳುವಾಗಲಿದೆ ಎಂದು ಶೆಟ್ಟರ್ ಹೇಳಿದರು.

  • ದೇವೇಗೌಡ್ರ ಕುಟುಂಬದ ಕಣ್ಣೀರ ಕಹಾನಿ ಯಾತಕ್ಕೆ- ಈಶ್ವರಪ್ಪ ಪ್ರಶ್ನೆ

    ದೇವೇಗೌಡ್ರ ಕುಟುಂಬದ ಕಣ್ಣೀರ ಕಹಾನಿ ಯಾತಕ್ಕೆ- ಈಶ್ವರಪ್ಪ ಪ್ರಶ್ನೆ

    ಬಾಗಲಕೋಟೆ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕುಟುಂಬದಲ್ಲಿ ಗೌಡರು ಸೇರಿದಂತೆ, ಸಿಎಂ ಕುಮಾರಸ್ವಾಮಿ, ರೇವಣ್ಣ ಏತಕ್ಕಾಗಿ ಕಣ್ಣೀರು ಹಾಕ್ತಾರೆ ಎಂದು ಸ್ಪಷ್ಟಪಡಿಸಲಿ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಗೌಡರ ಕುಟುಂಬಕ್ಕೆ ಪ್ರಶ್ನೆ ಮಾಡಿದ್ದಾರೆ.

    ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ, ಪ್ರಜ್ವಲ್, ಇವ್ರೆಲ್ಲ ಪುಲ್ವಾಮಾ ಸೈನಿಕರ ಸಾವಿಗಾಗಿ ಕಣ್ಣೀರು ಹಾಕಿದ್ರಾ?, ರಾಜ್ಯದಲ್ಲಿ ಬರಕ್ಕೆ ಸಿಕ್ಕಿ ಕಂಗಾಲಾಗಿರೋ ರೈತರಿಗಾಗಿ ಕಣ್ಣೀರು ಬಂತಾ? ಅಥವಾ ಐಟಿ ದಾಳಿಯಲ್ಲಿ ಸಿಕ್ಕಿಹಾಕಿಕೊಂಡ್ರು ಅಂತ ಕಣ್ಣೀರು ಬಂತಾ? ಹೀಗೆ ಯಾವ ವಿಷಯಕ್ಕೆ ಕಣ್ಣೀರು ಹಾಕ್ತಾರೆ ಎಂದು ದೇವೇಗೌಡರೇ ಸ್ಪಷ್ಟಪಡಿಸಬೇಕು ಎಂದು ವ್ಯಂಗ್ಯಭರಿತವಾಗಿ ಪ್ರಶ್ನಿಸಿದರು.

    ನಮ್ಮದು ಕುಟುಂಬ ರಾಜಕಾರಣ ಅಲ್ಲ ಎನ್ನುವ ದೇವೇಗೌಡರು, ಕುಟುಂಬ ರಾಜಕಾರಣದ ಅರ್ಥ ಏನು ಎಂದು ಹೇಳಲಿ ಎಂದು ಆಗ್ರಹಿಸಿದರು. ದೇವೇಗೌಡರು, ಇಬ್ಬರು ಮೊಮ್ಮಕ್ಕಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಒಬ್ಬ ಮಗ ಸಿಎಂ, ಇನ್ನೊಬ್ಬ ಮಗ ಲೋಕೋಪಯೋಗಿ ಸಚಿವ, ಸೊಸೆ ಶಾಸಕಿ ಆಗಿದ್ದಾರೆ. ಇನ್ನೂ ಯಾರು ಯಾರನ್ನು ಏನೇನು ಮಾಡ್ತಾರೆ ಎಂದು ನನಗೆ ಗೊತ್ತಿಲ್ಲ ಎಂದು ಈಶ್ವರಪ್ಪ ಲೇವಡಿ ಮಾಡಿದರು.