Tag: Team Indian

  • ಟೀಂ ಇಂಡಿಯಾಗೆ ಈ ನಾಲ್ವರ ಕಮ್‍ಬ್ಯಾಕ್ ಕಷ್ಟ ಕಷ್ಟ!

    ಟೀಂ ಇಂಡಿಯಾಗೆ ಈ ನಾಲ್ವರ ಕಮ್‍ಬ್ಯಾಕ್ ಕಷ್ಟ ಕಷ್ಟ!

    ನವದೆಹಲಿ: ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಮಾಜಿ ನಾಯಕ ಎಂ.ಎಸ್.ಧೋನಿ ಸೇರಿದಂತೆ ಅನೇಕರು ಸರ್ವ ಪ್ರಯತ್ನ ನಡೆಸಿದ್ದಾರೆ. ಈ ಪೈಕಿ ನಾಲ್ವರು ಮತ್ತೆ ರಾಷ್ಟ್ರೀಯ ತಂಡ ಸೇರುವುದು ಕಷ್ಟ ಎಂಬ ಮಾತುಗಳು ಕೇಳಿ ಬಂದಿವೆ.

    ಭಾರತದ ಕ್ರಿಕೆಟ್ ತಂಡದ ಪರ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಹರ್ಭಜನ್ ಸಿಂಗ್ ಇತ್ತೀಚೆಗೆ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಐಪಿಎಲ್ ಮೂಲಕ ಟೀಂ ಇಂಡಿಯಾಗೆ ರೀ ಎಂಟ್ರಿ ಕೊಡಲು ಎಂ.ಎಸ್.ಧೋನಿ ಮುಂದಾಗಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಟೂರ್ನಿ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

    ಹರ್ಭಜನ್ ಸಿಂಗ್ ಸುಮಾರು 11 ವರ್ಷಗಳ ಕಾಲ ರಾಷ್ಟ್ರೀಯ ತಂಡದಲ್ಲಿ ಪ್ರಮುಖ ಆಯ್ಕೆಯಾಗಿದ್ದರು. 2011ರ ವಿಶ್ವಕಪ್ ನಂತರ ಎಂ.ಎಸ್. ಧೋನಿ ಮತ್ತು ತಂಡದ ಆಡಳಿತ ಮಂಡಳಿ ಅವರನ್ನು ಕೈಬಿಟ್ಟು ಆರ್.ಅಶ್ವಿನ್‍ಗೆ ಮಣೆ ಹಾಕಿತು. ಹೀಗಾಗಿ ಮುಂದಿನ 6 ವರ್ಷಗಳವರೆಗೆ ಎಲ್ಲಾ ಸ್ವರೂಪಗಳಲ್ಲಿ ಸ್ಪಿನ್ ದಾಳಿಯನ್ನು ಆರ್.ಅಶ್ವಿನ್ ಮುನ್ನಡೆಸಿದರು.

    ಸದ್ಯ ಐಪಿಎಲ್ ಮಾತ್ರ ಆಡುತ್ತಿರುವ ಹರ್ಭಜನ್ ಸಿಂಗ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗುವ ನಿರೀಕ್ಷೆಯಿಲ್ಲ. ಆದರೆ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಹೊರತಾಗಿಯೂ ಐಪಿಎಲ್ ಅಥವಾ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಇತ್ತ ಅಂಬಟಿ ರಾಯುಡು, ಸ್ಟುವರ್ಟ್ ಬಿನ್ನಿ, ಮನೋಜ್ ತಿವಾರಿ ಹಾಗೂ ಪಾರ್ಥಿವ್ ಪಟೇಲ್ ಅವರು ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡುವುದು ಭಾರೀ ಕಷ್ಟ ಎನ್ನಲಾಗುತ್ತಿದೆ.

    ಅಂಬಟಿ ರಾಯುಡು:
    2019ರ ವಿಶ್ವಕಪ್‍ಗೆ ಅಂಬಟಿ ರಾಯುಡು ಅವರನ್ನು ಆಯ್ಕೆ ಸಮಿತಿ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿತ್ತು. ಅಷ್ಟೇ ಅಲ್ಲದೆ ಟೂರ್ನಿ ನಡುವೆ ಆಟಗಾರರು ಗಾಯದಿಂದ ವಿಶ್ರಾಂತಿಗೆ ಜಾರಿದಾಗ ಎರಡು ಅವಕಾಶಗಳು ಇದ್ದಾಗಲೂ ಅವರನ್ನು ಕಡೆಗಣಿಸಲಾಗಿತ್ತು. ಬದಲಾಗಿ ರಿಷಬ್ ಪಂತ್ ಮತ್ತು ಮಾಯಾಂಕ್ ಅಗರ್ವಾಲ್ ಅವರಿಗೆ ಮಣೆ ಹಾಕಲಾಗಿತ್ತು. ಈ ಮೂಲಕ ಟೀಂ ಇಂಡಿಯಾದಲ್ಲಿ ಅಂಬಟಿ ರಾಯುಡು ಕಮ್‍ಬ್ಯಾಕ್ ಕಷ್ಟ ಎನ್ನುವ ಸಂದೇಶವನ್ನು ಬಿಸಿಸಿಐ ಪರೋಕ್ಷವಾಗಿ ರವಾನಿಸಿತ್ತು. ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್ ನಲ್ಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದರಿಂದಾಗಿ ರಾಯುಡು ಅವರಿಗಿದ್ದ ಅವಕಾಶ ಕೈತಪ್ಪಿದೆ.

    ಸ್ಟುವರ್ಟ್ ಬಿನ್ನಿ:
    2016ರಿಂದ ಟೀಂ ಇಂಡಿಯಾದಿಂದ ಹೊರಗುಳಿದ ನಂತರ ಸ್ಟುವರ್ಟ್ ಬಿನ್ನಿ ದೇಶೀಯ ಕ್ರಿಕೆಟ್‍ನಲ್ಲಿ ಮುಂದುವರಿದಿದ್ದಾರೆ. 2018ರಲ್ಲಿ ಅವರು ಕರ್ನಾಟಕ ತಂಡದಿಂದ ಹೊರಗುಳಿದಿದ್ದರು. 2019-20ರ ಮಧ್ಯೆ ನಾಗಾಲ್ಯಾಂಡ್ ತಂಡ ಸೇರಲು ಮುಂದಾಗಿದ್ದರು. ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ತಂಡವು ಬಿನ್ನಿ ಅವರನ್ನು 13ನೇ ಆವೃತ್ತಿಗೆ ಕೈಬಿಟ್ಟಿದೆ. ಬಳಿಕ ನಡೆದ ಹರಾಜಿನಲ್ಲಿ ಸ್ಟುವರ್ಟ್ ಬಿನ್ನಿ ಅವರನ್ನು ಯಾವುದೇ ತಂಡ ಖರೀದಿಸಲು ಮುಂದೆ ಬರಲಿಲ್ಲ.

    ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಲ್ಲಿ ಆಲ್‍ರೌಂಡರ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ಬಿನ್ನಿ ಕಮ್‍ಬ್ಯಾಕ್ ಕಷ್ಟ ಎಂದು ಹೇಳಲಾಗುತ್ತಿದೆ. 2015ರ ವಿಶ್ವಕಪ್ ತಂಡದ ಸದಸ್ಯರಾಗಿದ್ದ ಬಿನ್ನಿ 2014ರಿಂದ 2016ರವರೆಗೆ ಆರು ಟೆಸ್ಟ್, 14 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ.

    ಮನೋಜ್ ತಿವಾರಿ:
    ಎಂ.ಎಸ್.ಧೋನಿ ಹಾಗೂ ತಂಡದ ಆಯ್ಕೆ ಸಮಿತಿಯ ಒಂದು ಕಾಲದ ಮೊದಲ ಆಯ್ಕೆಯ ಆಟಗಾರ ಮನೋಜ್ ತಿವಾರಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪರದಾಡಿದರು. ಶತಕ ಗಳಿಸಿದ ನಂತರವೂ ಅವರು ಆಡುವ ಇಲೆವನ್ ತಂಡದಿಂದ ಹೊರಗುಳಿದರು. ಟೀಂ ಇಂಡಿಯಾ ಜೊತೆಗೆ ಪ್ರಪಂಚದಾದ್ಯಂತ ಪ್ರವಾಸ ಮಾಡಿದರು ಮನೋಜ್ ತಿವಾರಿ, 2008ರಿಂದ 2015ರವರೆಗೆ ಕೇವಲ 12 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವರು 2018ರಿಂದ ಭಾರತ ಎ ಪರ ಆಡಿಲ್ಲ. ತಿವಾರಿ ದೇಶೀಯ ಕ್ರಿಕೆಟ್‍ನಲ್ಲಿ ಬಂಗಾಳ ಪರ ಆಡುವುದನ್ನು ಮುಂದುವರಿಸಿದ್ದಾರೆ. ಆದರೆ ರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆಗಳು ವಿರಳ ಎನ್ನಲಾಗುತ್ತಿದೆ.

    ಪಾರ್ಥಿವ್ ಪಟೇಲ್:
    ಎಂ.ಎಸ್.ಧೋನಿ ಅವರ ಎಂಟ್ರಿ ಪಾರ್ಥಿವ್ ಪಟೇಲ್ ಅವರನ್ನು ಟೀಂ ಇಂಡಿಯಾದಿಂದ ದೂರವಾಗುವಂತೆ ಮಾಡಿತು ಎನ್ನಲಾಗುತ್ತಿದೆ. 2018-19ರಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಅವರು ಟೆಸ್ಟ್ ತಂಡದ ಭಾಗವಾಗಿದ್ದರು. ಆದರೆ ರಿಷಬ್ ಪಂತ್ ಅವರು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರಿಂದ ಅವಕಾಶ ಸಿಗಲಿಲ್ಲ. ಪಾರ್ಥಿವ್ ಪಟೇಲ್ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ ಆಡುವುದನ್ನು ಮುಂದುವರಿಸಿದ್ದಾರೆ. ಆದರೆ ವೃದ್ಧಿಮಾನ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.

  • ಸ್ಮಿತ್ ಪರ ನಿಂತಿದ್ದ ಕೊಹ್ಲಿಗೆ ಸಿಕ್ತು ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ

    ಸ್ಮಿತ್ ಪರ ನಿಂತಿದ್ದ ಕೊಹ್ಲಿಗೆ ಸಿಕ್ತು ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ

    ದುಬೈ: 2018-19ನೇ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ‘ಸ್ಪಿರಿಟ್ ಆಫ್ ಕ್ರಿಕೆಟ್’ ಗೌರವ ಪಡೆದುಕೊಂಡಿದ್ದಾರೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ನಡತೆಯನ್ನು ಗಮನಿಸಿ ಐಸಿಸಿ ಈ ವಿಶೇಷ ಗೌರವ ನೀಡಿದೆ.

    ಏನಾಗಿತ್ತು?
    ಇಂಗ್ಲೆಂಡ್‍ನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಕೆಲ ಕ್ರಿಕೆಟ್ ಅಭಿಮಾನಿಗಳು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಮೋಸಗಾರ, ಚೀಟರ್ ಎಂದು ಕರೆಯುತ್ತಿದ್ದರು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಗರಂ ಆಗಿ, ಹಾಗೆ ಕರೆಯಬೇಡಿ, ಚೀಟರ್ ಹೇಳುವುದನ್ನು ನಿಲ್ಲಿಸಿ, ಚಪ್ಪಾಳೆ ತಟ್ಟಿ ನಮ್ಮನ್ನು ಪ್ರೋತ್ಸಾಹಿಸಿ ಎಂದು ಸನ್ನೆ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

    ವಿರಾಟ್ ಕೊಹ್ಲಿ ಅವರ ಕ್ರೀಡಾ ಸ್ಫೂರ್ತಿಯನ್ನು ಕಂಡು ಸ್ವತಃ ಸ್ಟೀವ್ ಸ್ಮಿತ್ ಭಾವುಕರಾಗಿದ್ದರು. ಜೊತೆಗೆ ಕೊಹ್ಲಿ ಬಳಿಗೆ ಬಂದು ಕೈ ಕುಲುಕಿ, ಬೆನ್ನುತಟ್ಟಿ ಧನ್ಯವಾದ ತಿಳಿಸಿದ್ದರು. ಈ ಸನ್ನಿವೇಶವನ್ನು ಪರಿಗಣಿಸಿರುವ ಐಸಿಸಿ, ವಿರಾಟ್ ಕೊಹ್ಲಿ ಅವರಿಗೆ ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ ನೀಡಿದೆ.

    2018-19ನೇ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿಯ ಪಟ್ಟಿಯಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಹಾಗೂ ಬೌಲರ್ ದೀಪಕ್ ಚಹರ್ ಸೇರಿದ್ದಾರೆ. ರೋಹಿತ್ ಶರ್ಮಾ ವರ್ಷದ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾದರೆ, ದೀಪಕ್ ಚಹರ್ ಅವರಿಗೆ ವರ್ಷದ ಅತ್ಯುತ್ತಮ ಟಿ-20 ಬೌಲರ್ ಪ್ರಶಸ್ತಿ ಲಭಿಸಿದೆ.

    ಇಂಗ್ಲೆಂಡ್‍ನ ವಿಶ್ವಕಪ್ ವಿಜೇತ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ವರ್ಷದ ಆಟಗಾರ ಎಂದು ಹೆಸರಿಸಲಾಯಿತು. ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರು 2019ರಲ್ಲಿ 59 ವಿಕೆಟ್ ಕಬಳಿಸಿ ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗರಾಗಿದ್ದಾರೆ. ರಿಚರ್ಡ್ ಇಲಿಂಗ್ವರ್ತ್ ಅವರಿಗೆ ವರ್ಷದ ಅಂಪೈರ್ ಪ್ರಶಸ್ತಿ ನೀಡಲಾಗಿದೆ.

    ಕೊಹ್ಲಿ ತಮ್ಮ ವೃತ್ತಿಜೀವನದುದ್ದಕ್ಕೂ ಒಳ್ಳೆಯ ಮತ್ತು ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತಾರೆ. 2019ರಲ್ಲಿ ಕೊಹ್ಲಿ ಅನೇಕ ಬಾರಿ ಸನ್ನೆಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ವಿಕೆಟ್ ಒಪ್ಪಿಸಿ ಮೈದಾನದಿಂದ ಹೊರಬಂದು ಶಾಂತ ವರ್ತನೆಯಿಂದ ಸುದ್ದಿಯಾಗಿದ್ದಾರೆ.

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಕೋಪದ ವ್ಯಕ್ತಿ ಎಂದೇ ಕರೆಯಲಾಗುತಿತ್ತು. ಆದರೆ ಈಗ ಕೊಹ್ಲಿಯ ಉತ್ತಮ ವರ್ತನೆಯಿಂದಲೇ ಅವರಿಗೆ ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ ಪ್ರಶಸ್ತಿ ಸಿಕ್ಕಿರುವುದು ವಿಶೇಷ.

  • ಹುಟ್ಟುಹಬ್ಬದಂದು 15 ವರ್ಷದ ಚಿಕ್ಕುಗೆ ಭಾವನಾತ್ಮಕ ಪತ್ರ ಬರೆದ ಕೊಹ್ಲಿ

    ಹುಟ್ಟುಹಬ್ಬದಂದು 15 ವರ್ಷದ ಚಿಕ್ಕುಗೆ ಭಾವನಾತ್ಮಕ ಪತ್ರ ಬರೆದ ಕೊಹ್ಲಿ

    – ನಿನ್ನ ಕನಸನ್ನು ಬೆನ್ನಟ್ಟು
    – ಗೊತ್ತಿಲ್ಲದ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ 15 ವರ್ಷದ ಚಿಕ್ಕುಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

    15 ವರ್ಷದ ಚಿಕ್ಕು ಬೇರೆ ಯಾರೂ ಅಲ್ಲ. ಸ್ವತಃ ವಿರಾಟ್ ಕೊಹ್ಲಿ ಅವರ ನಿಕ್ ನೆಮ್ ಚಿಕ್ಕು. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪತ್ರವನ್ನು ಹಂಚಿಕೊಂಡಿರುವ ಕೊಹ್ಲಿ, ನನ್ನ ಪ್ರಯಾಣ ಮತ್ತು ಜೀವನದ ಪಾಠಗಳು 15 ವರ್ಷದ ನನಗೆ ವಿವರಿಸಿದೆ. ಸರಿ, ನಾನು ಇದನ್ನು ಬರೆಯಲು ಪ್ರಯತ್ನ ಮಾಡಿದ್ದೇನೆ. ಅದನ್ನು ಓದಲು ನಿಮಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿ ಜೊತೆ ವಿರಾಟ್ ಜಾಲಿ ಟ್ರಿಪ್- ಹಳ್ಳಿಯ ಪುಟ್ಟ ಮನೆಯನ್ನ ಪರಿಚಯಿಸಿದ ವಿರುಷ್ಕಾ

    ಭಾರತದ ತಂಡದ ಮಾಜಿ, ಹಾಲಿ ಆಟಗಾರರು ಸೇರಿದಂತೆ ಅನೇಕರು ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಟಿ-20 ಸರಣಿಗೆ ವಿಶ್ರಾಂತಿ ಪಡೆದಿರುವ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಜೊತೆಗೆ ಜಾಲಿ ಟ್ರಿಪ್ ಮೂಡ್‌ನಲ್ಲಿದ್ದಾರೆ.

    ಪತ್ರದಲ್ಲಿ ಏನಿದೆ?:
    ಹಾಯ್ ಚಿಕ್ಕು, ಮೊದಲನೆಯದಾಗಿ ಜನ್ಮದಿನದ ಶುಭಾಶಯಗಳು. ನನ್ನ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳು ನಿನ್ನ ಬಳಿ ಇದೆ ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ. ಪ್ರಶ್ನೆಗಳ ಪೈಕಿ ಹೆಚ್ಚಿನದಕ್ಕೆ ಉತ್ತರಿಸಲು ನಾನು ಹೋಗುವುದಿಲ್ಲ. ಇದಕ್ಕೆ ಕ್ಷಮೆ ಇರಲಿ. ಪ್ರತಿ ಆಶ್ಚರ್ಯವು ಸಿಹಿಗೊಳಿಸುತ್ತದೆ, ಪ್ರತಿ ಸವಾಲು ರೋಮಾಂಚನಗೊಳಿಸುತ್ತದೆ ಮತ್ತು ಪ್ರತಿ ನಿರಾಶೆಯು ಕಲಿಯಲು ಅವಕಾಶ ಕಲ್ಪಿಸುತ್ತದೆ. ನಿನ್ನ ಪ್ರಯಾಣವು ಸೂಪರ್ ಆಗಿದೆ.

    ಜೀವನದಲ್ಲಿ ವಿರಾಟ್‌ಗಾಗಿ ಅತ್ಯುನ್ನತ ಸಂಗತಿಗಳಿವೆ. ಆದರೆ ನಿನ್ನ ಜೀವನದಲ್ಲಿ ಬರುವ ಪ್ರತಿಯೊಂದು ಅವಕಾಶಕ್ಕೂ ಸಿದ್ಧನಾಗಿರಬೇಕು. ಆ ಗುಣವನ್ನು ಗಳಿಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ನಿನ್ನ ಸಾಮರ್ಥ್ಯವನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬೇಡ. ಸವಾಲುಗಳ ವಿರುದ್ಧ ಏಳಲು ನೀನೇ ಭರವಸೆ ನೀಡಬೇಕು. ಮೊದಲಿಗೆ ಸೋತರೆ ಮತ್ತೆ ಪ್ರಯತ್ನಿಸಬೇಕು.

    ನೀನು ಅನೇಕರಿಂದ ಪ್ರೀತಿಸಲ್ಪಡುವೆ, ಕೆಲವರಿಗೆ ಇಷ್ಟವಾಗುವುದಿಲ್ಲ. ನಿನ್ನ ಬಗ್ಗೆ ಗೊತ್ತಿಲ್ಲದವರ ವಿಚಾರವಾಗಿ ತಲೆ ಕೆಡಿಸಿಕೊಳ್ಳಬೇಡ. ನಿನ್ನ ಬಗ್ಗೆ ನೀನು ನಂಬಿಕೆ ಇಡು. ನಿನ್ನ ಜನ್ಮದಿನದಂದು ಆ ಶೂಗಳನ್ನು ತಂದೆ ಉಡುಗೊರೆಯಾಗಿ ನೀಡಲಿಲ್ಲವೆಂದು ನೀನು ಯೋಚಿಸುತ್ತಿರುವೆ ಎನ್ನುವುದು ನನಗೆ ತಿಳಿದಿದೆ.

    ಅಂದು ಬೆಳಗ್ಗೆ ಅವರು ನಿನಗೆ ನೀಡಿದ ಅಪ್ಪುಗೆ ಅಥವಾ ನಿನ್ನ ಎತ್ತರ ಬಗ್ಗೆ ಮಾಡಿದ ತಮಾಷೆಗೆ ಹೋಲಿಸಿದಾಗ ಅವು ಏನೂ ಅಲ್ಲ. ತಂದೆ ಕೆಲವೊಮ್ಮೆ ಕಟ್ಟುನಿಟ್ಟಾಗಿ ಕಾಣಿಸಿರಬಹುದು. ಆದರೆ ಅವರು ನಿನ್ನ ಒಳ್ಳೆಯದನ್ನೇ ಬಯಸುತ್ತಾರೆ.

    ಕೆಲವೊಮ್ಮೆ ನಿನ್ನ ಪೋಷಕರು ನಿನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಭಾವಿಸುವೆ. ಆದರೆ ನಿನ್ನ ಕುಟುಂಬದವರು ಮಾತ್ರ ನಿನ್ನನ್ನು ಹೆಚ್ಚು ಪ್ರೀತಿಸುತ್ತಾರೆ ಎನ್ನುವುದನ್ನು ನೀನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳು. ಅವರನ್ನು ಮತ್ತೆ ಪ್ರೀತಿಸು, ಗೌರವಿಸು, ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಮೀಸಲಿಡು. ನೀನು ಅವರನ್ನು ಪ್ರೀತಿಸುತ್ತೀರುವೆ ಎಂದು ಅಪ್ಪನಿಗೆ ಹೇಳು.

    ಅಂತಿಮವಾಗಿ ನೀನು ನಿನ್ನ ಹೃದಯವನ್ನು ಅನುಸರಿಸು. ನಿನ್ನ ಕನಸನ್ನು ಬೆನ್ನಟ್ಟು. ದಯೆಯನ್ನು ಹೊಂದು ಮತ್ತು ದೊಡ್ಡದಾದ ಕನಸು ಹೇಗೆ ವ್ಯತ್ಯಾಸಗಳನ್ನು ತರುತ್ತದೆ ಎಂಬುದನ್ನು ಜಗತ್ತಿಗೆ ತೋರಿಸು. ನೀನು ನೀನಾಗಿರು.

  • ಕಮಾಂಡೋ ಲುಕ್‍ನಲ್ಲಿ ಧೋನಿ ಮಿಂಚಿಂಗ್

    ಕಮಾಂಡೋ ಲುಕ್‍ನಲ್ಲಿ ಧೋನಿ ಮಿಂಚಿಂಗ್

    ಜೈಪುರ್: ವೆಸ್ಟ್ ಇಂಡೀಸ್ ಪ್ರವಾಸದಿಂದ ದೂರ ಉಳಿದಿದ್ದರೂ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಸುದ್ದಿಯಾಗುತ್ತಲ್ಲೇ ಇದ್ದಾರೆ. ಭಾರತೀಯ ಸೇನೆಯೊಂದಿಗೆ 15 ದಿನಗಳ ಕಾಲ ಕಾರ್ಯನಿರ್ವಹಿಸಿ ದೆಹಲಿಗೆ ವಾಪಸ್ ಆಗಿದ್ದಾರೆ.

    ಎಂ.ಎಸ್.ಧೋನಿ ಇತ್ತೀಚೆಗಷ್ಟೇ ಜಾಹೀರಾತು ಚಿತ್ರೀಕರಣ ವೇಳೆ ಕಾಣಿಸಿಕೊಂಡಿದ್ದರು. ಸದ್ಯ ಕಮಾಂಡೋ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

    https://www.instagram.com/p/B1lEVq3AeAk/?utm_source=ig_embed

    ಕಾರ್ಯಕ್ರಮದ ಧೋನಿ ನಿಮಿತ್ತ ಶನಿವಾರ ಜೈಪುರಕ್ಕೆ ಭೇಟಿ ನೀಡಿದ್ದರು. ವಿಮಾನ ನಿಲ್ದಾಣದಲ್ಲಿ ಧೋನಿ ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿ ಕಿಕ್ಕಿಸಿಕೊಳ್ಳು ಮುಗಿಬಿದ್ದರು. ಕೆಲವರು ತಮ್ಮ ಮೊಬೈಲ್‍ನಲ್ಲಿ ಧೋನಿಯ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಸೈನಿಕನಂತೆ ಧೋನಿ ತಲೆಗೆ ಕಪ್ಪು ಬಟ್ಟೆಯನ್ನು ಧರಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರು ಜೈಪುರದಲ್ಲಿ ಸುಮಾರು ಆರು ಗಂಟೆಗಳ ಕಾಲ ಇದ್ದರು. ಈ ಸಮಯದಲ್ಲಿ ಅವರು ಕುಕುಸ್‍ನ ಹೋಟೆಲ್‍ನಲ್ಲಿ ತಂಗಿದ್ದರು. ನಂತರ ಸಂಜೆ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

    https://www.instagram.com/p/B1ihLwcgA6p/

    ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‍ನಿಂದ ಧೋನಿ 2 ತಿಂಗಳ ವಿರಾಮ ತೆಗೆದುಕೊಂಡಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವರು ಅಲಭ್ಯವಾಗಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ, ಲೆಫ್ಟಿನೆಂಟ್ ಕರ್ನಲ್ ಧೋನಿ ಅವರನ್ನು ಜುಲೈ 30ರಿಂದ ಆಗಸ್ಟ್ 15 ರವರೆಗೆ ಕಾಶ್ಮೀರದ ಭಯೋತ್ಪಾದನಾ ನಿಗ್ರಹ ಘಟಕದಲ್ಲಿ ನೇಮಿಸಲಾಗಿತ್ತು. ಅವರು ಪ್ಯಾರಾ ಕಮಾಂಡೋಗಳ ಬೆಟಾಲಿಯನ್‍ನಲ್ಲಿ 15 ದಿನಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ದಿನದಂದು ಧೋನಿ, ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿ ಅವರೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದು ದೊಡ್ಡ ಸುದ್ದಿಯಾಗಿತ್ತು.

  • ಕಪ್ಪು ಪಟ್ಟಿ ಧರಿಸಿ ಆಡಲಿದ್ದಾರೆ ಟೀಂ ಇಂಡಿಯಾ ಆಟಗಾರರು

    ಕಪ್ಪು ಪಟ್ಟಿ ಧರಿಸಿ ಆಡಲಿದ್ದಾರೆ ಟೀಂ ಇಂಡಿಯಾ ಆಟಗಾರರು

    ನವದೆಹಲಿ: ಮಾಜಿ ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ನಿಧನಕ್ಕೆ ಬಿಸಿಸಿಐ ಶನಿವಾರ ಸಂತಾಪ ಸೂಚಿಸಿದೆ.

    ರಾಜಕಾರಣಿ ಅರುಣ್ ಜೇಟ್ಲಿ ಅವರು ಕ್ರಿಕೆಟ್ ಬೆಂಬಲಿಗರಾಗಿದ್ದರು. ಅವರು ಅತ್ಯಂತ ಸಮರ್ಥ ಮತ್ತು ಗೌರವಾನ್ವಿತ ಕ್ರಿಕೆಟ್ ಆಡಳಿತಗಾರರಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಶನಿವಾರ ಕಪ್ಪು ಪಟ್ಟಿ ಧರಿಸಿ ಆಡಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

    ಅರುಣ್ ಜೇಟ್ಲಿ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘದ (ಡಿಡಿಸಿಎ) ಅಧ್ಯಕ್ಷರಾಗಿದ್ದರು. ಈ ವೇಳೆ ರಾಜ್ಯ ಕ್ರಿಕೆಟ್‍ನ ಆಡಳಿತದಲ್ಲಿ ಬದಲಾವಣೆ ತಂದಿದ್ದರು ಎಂದು ಶ್ಲಾಘಿಸಿದೆ.

    ಡಿಡಿಸಿಎ ಅಧ್ಯಕ್ಷರಾಗಿ ಸುದೀರ್ಘ ಅವಧಿಯಲ್ಲಿ ಅವರು ಮೂಲಸೌಕರ್ಯದಲ್ಲಿ ಭಾರೀ ಬದಲಾವಣೆಯನ್ನು ತಂದರು. ಕ್ರಿಕೆಟಿಗರ ಆಪ್ತ ಸ್ನೇಹಿತರಾದ ಅವರು ಯಾವಾಗಲೂ ಅವರೊಂದಿಗೆ ನಿಲ್ಲುತ್ತಿದ್ದರು, ಆಟಗಾರರನ್ನು ಪ್ರೋತ್ಸಾಹಿಸಿದರು. ಉತ್ತಮ ಆಟಗಾರರಿಗೆ ಆಯ್ಕೆ ಮಾಡಿ ಅವರನ್ನು ಬೆಂಬಲಿಸುತ್ತಿದ್ದರು ಎಂದು ಬಿಸಿಸಿಐ ನೆನೆದಿದೆ.

    ಬಿಸಿಸಿಐ ಜೇಟ್ಲಿ ಅವರ ಕುಟುಂಬದ ನೋವು ಮತ್ತು ದುಃಖವನ್ನು ಹಂಚಿಕೊಳ್ಳುತ್ತದೆ. ಅರುಣ್ ಜೇಟ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತದೆ ಎಂದು ಮಂಡಳಿ ತಿಳಿಸಿದೆ.