Tag: Team India Coach

  • ಜೂನ್‌ ಬಳಿಕ ಟೀಂ ಇಂಡಿಯಾಕ್ಕೆ ಹೊಸ ಮುಖ್ಯಕೋಚ್‌ – ಜಯ್‌ ಶಾ ಹೇಳಿದ್ದೇನು?

    ಜೂನ್‌ ಬಳಿಕ ಟೀಂ ಇಂಡಿಯಾಕ್ಕೆ ಹೊಸ ಮುಖ್ಯಕೋಚ್‌ – ಜಯ್‌ ಶಾ ಹೇಳಿದ್ದೇನು?

    ಮುಂಬೈ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಶೀಘ್ರದಲ್ಲೇ ಹೊಸ ಕೋಚ್‌ಗಾಗಿ ಜಾಹೀರಾತನ್ನು ಪ್ರಕಟಿಸಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್‌ ಬಳಿಕ ಟೀಂ ಇಂಡಿಯಾಕ್ಕೆ (Team India) ಹೊಸ ಮುಖ್ಯಕೋಚ್‌ ಬರಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.

    ಈ ಕುರಿತು ಮುಂಬೈನಲ್ಲಿ (Mumbai) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೀಂ ಇಂಡಿಯಾದ ಹಾಲಿ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ ಅವರ ಅಧಿಕಾರ ಅವಧಿಯು ಜೂನ್‌ ತಿಂಗಳವರೆಗೆ ಮಾತ್ರ ಇರಲಿದೆ. ಒಂದು ವೇಳೆ ರಾಹುಲ್‌ ದ್ರಾವಿಡ್‌ (Rahul Dravid) ಮತ್ತೆ ಕೋಚ್‌ ಆಗಲು ಬಯಸಿದ್ರೆ ಅರ್ಜಿ ಸಲ್ಲಿಸಬಹುದು ಎಂದು ಜಯ್‌ ಶಾ ಹೇಳಿದ್ದಾರೆ.

    ಮೊದಲಿಗೆ ಮುಖ್ಯಕೋಚ್‌ ಅನ್ನು ಆಯ್ಕೆ ಮಾಡಲಾಗುತ್ತದೆ. ಹೊಸ ಕೋಚ್‌ನೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಬ್ಯಾಟಿಂಗ್‌, ಫೀಲ್ಡಿಂಗ್‌ ಇತರ ಕೋಚ್‌ ಸಿಬ್ಬಂದಿಯನ್ನು ಆಯ್ಕೆ ಮಾಡುವ ಬಗ್ಗೆ ನಿರ್ಧರಿಸಲಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕದನದೊಳ್‌ ಕೊಹ್ಲಿ ಕೆಣಕಿ ಉಳಿದವರುಂಟೇ – ಐಪಿಎಲ್‌ನಲ್ಲಿ ಗನ್‌ಶೂಟ್‌ ಕದನ – ಕಲಾಶ್‌ ನಿಕಾವೋಗೆ ಹೋಲಿಸಿ ಟ್ರೆಂಡ್‌!

    ಇದೇ ವೇಳೆ ಭಾರತೀಯರೇ ಕೋಚ್‌ ಆಗ್ತಾರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಯ್‌ ಶಾ, ಹೊಸ ಕೋಚ್‌ ಭಾರತೀಯ ಅಥವಾ ವಿದೇಶಿಗರೋ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಇದು ಕ್ರಿಕೆಟ್‌ ಸಲಹಾ ಸಮಿತಿಗೆ (CAC)ಗೆ ಬಿಟ್ಟಿರುತ್ತದೆ. ಹೊಸ ಕೋಚ್‌ ಅನ್ನು ಆರಂಭಿಕ 3 ವರ್ಷ ಅವಧಿಗಳ ನಂತರ ದೀರ್ಘಾವಧಿಗೆ ಆಯ್ಕೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮನರಂಜನೆ ಮಾತ್ರವಲ್ಲ ಜಾಗೃತಿಯೂ ಉಂಟು – ಗಿಲ್‌ ಪಡೆ ಲ್ಯಾವೆಂಡರ್‌ ಜೆರ್ಸಿ ಧರಿಸಿ ಕಣಕ್ಕಿಳಿಯೋದು ಏಕೆ?

    ಇಂಪ್ಯಾಕ್ಟ್‌ ರೂಲ್ಸ್‌ ಬಗ್ಗೆ ಜಯ್‌ ಶಾ ಹೇಳಿದ್ದೇನು?
    ಇದೇ ವೇಳೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಬಳಕೆಯಾಗುತ್ತಿರುವ ಇಂಪ್ಯಾಕ್ಟ್‌ ಪ್ಲೇಯರ್‌ (Impact Player) ರೂಲ್ಸ್‌ ಬಗ್ಗೆ ಮಾತನಾಡಿದ ಜಯ್‌ ಶಾ, ಎಲ್ಲಾ ತಂಡಗಳ ನಾಯಕರು ಹಾಗೂ ತರಬೇತುದಾರರೊಂದಿಗೆ ಸಮಾಲೋಚಿಸಿದ ಬಳಿಕ ಈ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಐಪಿಎಲ್‌ನ ವೇದಿಕೆಯೊಂದರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ಬಗ್ಗೆ ಆಕ್ರೋಶ ಹೊರಹಾಕಿದ್ದರು.

  • ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯಿಂದ ಉಡುಪಿಯಲ್ಲಿ ನಾಗಾರಾಧನೆ

    ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯಿಂದ ಉಡುಪಿಯಲ್ಲಿ ನಾಗಾರಾಧನೆ

    ಉಡುಪಿ: ಕಾರ್ಕಳ ಸಮೀಪದ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಭೇಟಿ ನೀಡಿದರು. ದೇವಸ್ಥಾನಕ್ಕೆ ಆಗಮಿಸಿದ ಅವರು ದೇವರಿಗೆ ವಿಶೇಷ ಸೇವೆ ನೀಡಿದರು. ನಾಗಬನದಲ್ಲಿ ತನು ತಂಬಿಲ ಸೇವೆ ನೀಡಿದರು. ಟೀಂ ಇಂಡಿಯಾ ಬಗ್ಗೆ ಕೂಡಾ ಮಾತನಾಡಿದ್ರು.

    ಕ್ರಿಕೆಟಿಗೂ ನಾಗಬ್ರಹ್ಮನಿಗೂ ಏನಾದ್ರೂ ಸಂಬಂಧ ಇದ್ಯಾ? ಇಲ್ಲ ಅಂತ ಹೇಳ್ಬೇಡಿ. ವಿಶ್ವದ ನಂಬರ್ ಒನ್ ಟೀಂನ ಕೋಚ್ ರವಿಶಾಸ್ತ್ರಿಗೂ ಭಾರೀ ಸಂಬಂಧವಿದೆ. ಅವರ ವೃತ್ತಿ ಜೀವನಕ್ಕೆ ಕ್ರಿಕೆಟ್ ಕೈ ಹಿಡಿದ್ರೆ  ಸಾಂಸಾರಿಕಾ ಜೀವನದ ಕೈ ಹಿಡಿದದ್ದು ದೇವರ ಮೇಲಿನ ನಂಬಿಕೆ.

    ಮದುವೆಯಾಗಿ 17 ವರ್ಷ ಸಂತಾನ ಭಾಗ್ಯ ಇಲ್ಲದೇ ಇದ್ದಾಗ ರವಿಶಾಸ್ತ್ರಿ ಎರ್ಲಪ್ಪಾಡಿ ಕ್ಷೇತ್ರಕ್ಕೆ ಭೇಟಿಕೊಟ್ಟು ಹರಕೆ ಹೊತ್ತಿದ್ದರು. ನಂತರ ರವಿಶಾಸ್ತ್ರಿಗೆ ಸಂತಾನಭಾಗ್ಯ ದಕ್ಕಿತು. ನಾಗದೇವರ ಆಶೀರ್ವಾದವನ್ನು ನೆನೆಯುವ ರವಿಶಾಸ್ತ್ರಿ ಪ್ರತೀ ವರ್ಷ ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನ ಎರ್ಲಪ್ಪಾಡಿಗೆ ಬರುತ್ತಾರೆ. ನಾಗಾರಾಧನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಬಾರಿ ಕೂಡಾ ನಾಗಬನದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ರವಿಶಾಸ್ತ್ರಿ ಸಂಬಂಧಿ, ಆಪ್ತ ಮನೋಹರ ಪ್ರಸಾದ್ ಹೇಳಿದರು.

    ರವಿಶಾಸ್ತ್ರಿ ಪೂರ್ವಿಕರು ಕಾರ್ಕಳ ತಾಲೂಕಿನ ಎರ್ಲಪ್ಪಾಡಿಯಲ್ಲಿ ನೆಲೆಸಿದ್ದರು. ಇಲ್ಲಿಂದ ವಲಸೆ ಹೋದ ನಂತರವೂ ಇಲ್ಲಿನ ಕಾರ್ಣಿಕ ತಿಳಿದ ರವಿ ಶಾಸ್ತ್ರಿ ವರ್ಷಕ್ಕೊಮ್ಮೆಯಾದ್ರೂ ಇಲ್ಲಿಗೆ ಭೇಟಿ ಕೊಡುವ ಪರಿಪಾಠ ಬೆಳೆಸಿದ್ದಾರೆ.

    ವಿಷ್ಣುಮೂರ್ತಿ ದೇವಸ್ಥಾನ ಮತ್ತು ನಾಗಬನದ ಸೇವೆಯಲ್ಲಿ ನಾನು ಮನಶಾಂತಿ ಪಡೆಯುತ್ತೇನೆ. ಭಾರತ ಮುಂದೆ ದೊಡ್ಡ ಪಂದ್ಯಾಟವನ್ನು ಎದುರು ನೋಡುತ್ತಿದೆ. ಇದೇ ಸಂದರ್ಭ ದೇವರ ದರ್ಶನವಾಗಿರುವುದು ಖುಷಿಯಾಗಿದೆ ಎಂದರು. ಟೀಂನ ಹುಡುಗರಿಗೂ ನನಗೂ ಹೊಂದಾಣಿಕೆ ಚೆನ್ನಾಗಿದೆ. ಹೀಗಾಗಿ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.

    ರವಿಶಾಸ್ತ್ರಿ ಕರ್ವಾಲು ದೇವಸ್ಥಾನಕ್ಕೆ ಆಗಮಿಸುವುದೆಂದರೆ ಗ್ರಾಮಸ್ಥರಿಗೆ ಹಬ್ಬವಿದ್ದಂತೆ. ರವಿಶಾಸ್ತ್ರಿ ಬಂದ್ರೆ ದೇವಸ್ಥಾನದಲ್ಲಿ ಹಬ್ಬದೂಟ ಆಯೋಜನೆಯಾಗುತ್ತದೆ.  ಶಾಸ್ತ್ರಿ ಸಾಮಾನ್ಯ ಜನರಂತೆ ಸಹಭೋಜನದಲ್ಲಿ ಪಾಲ್ಗೊಂಡರು. ರವಿ ಶಾಸ್ತ್ರಿಯನ್ನು ದೇವಸ್ಥಾನದ ಆಡಳಿತ ಮಂಡಳಿ, ಊರಿನ ಜನರು ಸನ್ಮಾನಿಸಿದರು.

    ರವಿಶಾಸ್ತ್ರಿಗೂ ಈ ಊರಿನ ಜೊತೆ ಅವಿನಾಭಾವ ಸಂಬಂಧ. ಇಲ್ಲಿನ ಸರ್ಕಾರಿ ಶಾಲೆಗೆ ಒಂದು ಲಕ್ಷ ರೂಪಾಯಿ ನೀಡಿದ್ದರು. ದೇವಸ್ಥಾನಕ್ಕೆ ಆರ್ಥಿಕ ಸಹಾಯ ಮಾಡುತ್ತಾ ಬಂದಿದ್ದಾರೆ. ಮುಂದಿನ ಕ್ರಿಕೆಟ್ ಮಹಾಸಮರಕ್ಕೆ ಸಿದ್ಧಗೊಳ್ಳುತ್ತಿರುವ ರವಿಶಾಸ್ತ್ರಿಯ ತಂಡಕ್ಕೆ  ಎರ್ಲಪ್ಪಾಡಿ ಗ್ರಾಮದ ಜನ ಶುಭಕೋರಿದ್ದಾರೆ.