Tag: Teaching

  • ಉತ್ತರ ಪ್ರದೇಶದಲ್ಲಿ ಮದರಸಾ ಆಧುನೀಕರಣಕ್ಕೆ 479 ಕೋಟಿ ರೂ. ಅನುದಾನ

    ಉತ್ತರ ಪ್ರದೇಶದಲ್ಲಿ ಮದರಸಾ ಆಧುನೀಕರಣಕ್ಕೆ 479 ಕೋಟಿ ರೂ. ಅನುದಾನ

    ಲಕ್ನೋ: ಉತ್ತರ ಪ್ರದೇಶ ಸರ್ಕಾರ ಮದರಸಾ ಆಧುನೀಕರಣಕ್ಕಾಗಿ ಬಜೆಟ್‌ನಲ್ಲಿ 479 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ.

    ಸರ್ಕಾರದ ನಿರ್ಧಾರದ ನಗ್ಗೆ ಮದರಸಾ ಬೋರ್ಡ್‌ ಅಧಿಕಾರಿಗಳು ಪ್ರತಿಕ್ರಿಯಿಸಿ ಈ ಹಣ ಮದರಸಾ ಅಭಿವೃದ್ಧಿಗೆ ಬಳಕೆಯಾಗಲಿದೆ. ವಿಶೇಷವಾಗಿ ಆಧುನಿಕ ವಿಷಯಗಳಾದ ಗಣಿತ, ಇಂಗ್ಲಿಷ್‌, ಹಿಂದಿ, ವಿಜ್ಞಾನ, ಗೃಹ ವಿಜ್ಞಾನ ವಿಷಯಗಳನ್ನು ಮದರಸಾದಲ್ಲಿ ಬೋಧಿಸಲಾಗುತ್ತದೆ ಎಂದು ಅವರು ತಿಳಿಸಿದರು.

    ಮದರಸಾ ಆಧುನೀಕರಣ ಸಂಬಂಧ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಈಗಾಗಲೇ ಒಟ್ಟು 7,500 ಮಂದಿ ಶಿಕ್ಷಕರನ್ನು ನೇಮಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಅನುದಾನವನ್ನು ಬಳಸಿಕೊಂಡು ಮತ್ತಷ್ಟು ಶಿಕ್ಷಕರನ್ನು ನೇಮಿಸಲು ಸರ್ಕಾರ ಮುಂದಾಗಿದೆ.

    ಸರ್ಕಾರಿ ದಾಖಲೆಗಳ ಪ್ರಕಾರ ಒಟ್ಟು 16 ಸಾವಿರ ಮದರಸಾಗಳು ನೋಂದಣಿಯಾಗಿದೆ. ಇದರಲ್ಲಿ 550 ಅನುದಾನಿತ ಮದರಸಾಗಳಿವೆ. ಒಟ್ಟು 20 ಲಕ್ಷ ವಿದ್ಯಾರ್ಥಿಗಳು ಉತ್ತರ ಪ್ರದೇಶದಲ್ಲಿ ಮದರಸಾಗಳಿಗೆ ಅಧ್ಯಯನಕ್ಕೆ ತೆರಳುತ್ತಿದ್ದಾರೆ.

  • ಅಂಗಾಂಗಗಳ ಸೂಟ್ ಧರಿಸಿ ಮಕ್ಕಳಿಗೆ ಶಿಕ್ಷಕಿಯಿಂದ ಪಾಠ

    ಅಂಗಾಂಗಗಳ ಸೂಟ್ ಧರಿಸಿ ಮಕ್ಕಳಿಗೆ ಶಿಕ್ಷಕಿಯಿಂದ ಪಾಠ

    ಮ್ಯಾಡ್ರಿಡ್: ಅಂಗಾಂಗಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಅರ್ಥ ಮಾಡಿಸಬೇಕು ಎಂಬ ಉದ್ದೇಶದಿಂದ ಶಿಕ್ಷಕಿಯೊಬ್ಬರು ಮಾನವನ ಅಂಗ ರಚನೆಗಳ ಚಿತ್ರವಿರುವ ಸೂಟ್ ಧರಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

    ಸ್ಪೇನ್‍ನ ಶಾಲೆಯೊಂದರ ಶಿಕ್ಷಕಿ ಈ ಪ್ರಯೋಗ ಮಾಡಿದ್ದು, ಜೀವಶಾಸ್ತ್ರ ತರಗತಿಯ ಸಂದರ್ಭದಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಮನುಷ್ಯನ ಅಂಗಾಗಳ ರಚನೆ ಇರುವ ಸೂಟ್ ಧರಿಸಿ ತಿಳಿಸಿದ್ದಾರೆ. ಶಿಕ್ಷಕಿ ವೆರೋನಿಕಾ ಡ್ಯೂಕ್ 15 ವರ್ಷಗಳ ಅನುಭವ ಹೊಂದಿದ್ದು, ಪ್ರಸ್ತುತ 3ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಇಂಗ್ಲಿಷ್, ಕಲೆ, ಸಮಾಜ ಹಾಗೂ ಸ್ಪ್ಯಾನಿಷ್ ವಿಷಯಗಳನ್ನು ಬೋಧಿಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    43 ವರ್ಷದ ಶಿಕ್ಷಕಿ ಬೋಧಿಸುತ್ತಿರುವ ಶೈಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಡ್ಯೂಕ್ ಅವರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಪಾಠ ಮಾಡಲು ಹಾಗೂ ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹಿಡಿದಿಡಲು ಮಾನವನ ದೇಹದ ಅಂಗಾಂಗಳನ್ನು ಸೂಚಿಸುವ ಸೂಟ್ ಹಾಕಿಕೊಂಡೇ ಪಾಠ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಜೀವಶಾಸ್ತ್ರವನ್ನು ಬೋಧಿಸುವುದು ಕಷ್ಟದ ಕೆಲಸವಾಗಿತ್ತು. ಹೀಗಾಗಿ ಅಂಗಾಂಗಳ ದೇಹದ ಸೂಟ್ ಧರಿಸಿ ವಿವರಿಸುವುದೇ ಸೂಕ್ತ ಎಂದು ಈ ಪ್ರಯತ್ನಕ್ಕೆ ಮುಂದಾದೆ ಎಂದು ಶಿಕ್ಷಕಿ ಡ್ಯೂಕ್ ತಿಳಿಸಿದ್ದಾರೆ.

    ಒಂದು ದಿನ ಶಿಕ್ಷಕಿಯ ಪತಿ ಶಾಲೆಯ ತರಗತಿ ಕೊಠಡಿಗೆ ತೆರಳಿದ್ದು, ಈ ವೇಳೆ ಕೆಲ ಫೋಟೋಗಳನ್ನು ತೆಗೆದಿದ್ದಾರೆ. ನಂತರ ಈ ಚಿತ್ರಗಳನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಫುಲ್ ವೈರಲ್ ಆಗಿದೆ. ಅಲ್ಲದೆ ಬಹುತೇಕರು ಶಿಕ್ಷಕಿಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ 66 ಸಾವಿರಕ್ಕೂ ಅಧಿಕ ಲೈಕ್‍ಗಳನ್ನು ಪಡೆದಿದ್ದು, 13 ಸಾವಿರಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

    ಪತ್ನಿಯ ಈ ಆಲೋಚನೆ ಕುರಿತು ಹೆಮ್ಮೆಯಾಗುತ್ತಿದೆ. ಇವಳನ್ನು ಪತ್ನಿಯಾಗಿ ಪಡೆದ ನಾನೇ ಅದೃಷ್ಟಶಾಲಿ. ಇಂದು ತನ್ನ ವಿದ್ಯಾರ್ಥಿಗಳಿಗೆ ಮಾನವನ ಅಂಗಾಂಗಗಳ ಕುರಿತು ವಿವರಿಸಿದ ರೀತಿ ತುಂಬಾ ಇಷ್ಟವಾಯಿತು. ಈ ಕುರಿತು ಮಕ್ಕಳು ಸಹ ತುಂಬಾ ಆಸಕ್ತಿಯಿಂದ ಕಲಿತರು ಎಂದು ತಮ್ಮ ಟ್ವೀಟ್ ನಲ್ಲಿ ಶಿಕ್ಷಕಿ ಪತಿ ಬರೆದುಕೊಂಡಿದ್ದಾರೆ.

    ಇದೊಂದೆ ಅಲ್ಲ ಡ್ಯೂಕ್ ಅವರು ಈ ಹಿಂದೆ ಹಲವು ಬಾರಿ ಇಂತಹ ಪ್ರಯೋಗಗಳ ಮೂಲಕ ಪಾಠ ಮಾಡಿದ್ದಾರೆ. ಇತಿಹಾಸ ಹಾಗೂ ಇಂಗ್ಲಿಷ್ ವ್ಯಾಕರಣ ಪಾಠ ಮಾಡುವಾಗಲೂ ಇವರು ಕಾರ್ಡ್ ಬೋರ್ಡ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಬಳಸಿ ಪರಿಣಾಮಕಾರಿಯಾಗಿ ಪಾಠ ಮಾಡಿದ್ದರು ಎಂದು ಹೇಳಲಾಗಿದೆ. ಯಾವಾಗಲೂ ಗಂಟು ಮುಖ ಹಾಕಿಕೊಂಡು, ಬೇಸರದಿಂದ ಪಾಠ ಮಾಡುವ ಶಿಕ್ಷಕ, ಶಿಕ್ಷಕಿಯರಲ್ಲಿ ಇದು ಬದಲಾವಣೆ ತರಲಿದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದು ಡ್ಯೂಕ್ ಅಭಿಪ್ರಾಯ ಪಟ್ಟಿದ್ದಾರೆ.

  • ಎಂ.ಟೆಕ್, ಬಿ.ಟೆಕ್ ವಿದ್ಯಾರ್ಥಿಗಳಿಗೆ 7ನೇ ತರಗತಿ ವಿದ್ಯಾರ್ಥಿಯಿಂದ ಪಾಠ!

    ಎಂ.ಟೆಕ್, ಬಿ.ಟೆಕ್ ವಿದ್ಯಾರ್ಥಿಗಳಿಗೆ 7ನೇ ತರಗತಿ ವಿದ್ಯಾರ್ಥಿಯಿಂದ ಪಾಠ!

    – 2020ರ ವೇಳೆ ಒಂದು ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡೋ ಗುರಿ

    ಹೈದ್ರಾಬಾದ್: ಟ್ಯೂಷನ್ ಪಡೆಯುವ ವಯಸ್ಸಿನಲ್ಲಿಯೇ 11 ವರ್ಷದ ಬಾಲಕನೊಬ್ಬ ಎಂಜಿನಿಯರಿಂಗ್ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾನೆ.

    ಹೌದು, ಹೈದ್ರಾಬಾದ್‍ನ ಬಾಲಕ ಮಹಮ್ಮದ್ ಹಸನ್ ಅಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಯಲ್ಲಿ ನೀಡಿದ, ಮನೆಗೆಲಸವನ್ನು ಸಂಜೆ 6ಗಂಟೆಗೆ ಪೂರ್ಣಗೊಳಿಸಿ, ಬಳಿಕ ಬಿ.ಟೆಕ್ ಹಾಗೂ ಎಂ.ಟೆಕ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾನೆ. ಬಾಲಕನ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹಣ ಗಳಿಕೆಗಾಗಿ ಬೋಧನೆ ಮಾಡುತ್ತಿಲ್ಲ. ಹೊರತಾಗಿ 2020ರ ವೇಳೆ ತಾನು ಒಂದು ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎನ್ನುವ ಗುರಿಯನ್ನು ಅಲಿ ಹೊಂದಿದ್ದಾನೆ.

    ನಾನು ಕಳೆದ ವರ್ಷದಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆರಂಭಿಸಿದೆ. ಬೆಳಗ್ಗೆ ಶಾಲೆಗೆ ಹೋಗಿ ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳುತ್ತೇನೆ. ಆಟವಾಡಿ ಹಾಗೂ ನನ್ನ ವಿದ್ಯಾಭ್ಯಾಸ ಮುಗಿಸುತ್ತೇನೆ. 6 ಗಂಟೆಗೆ ತರಬೇತಿ ಶಾಲೆಗೆ ಹೋಗಿ ಸಿವಿಲ್, ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಿಕಲ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತೇನೆ ಎಂದು ಮಹಮ್ಮದ್ ಹಸನ್ ಅಲಿ ತಿಳಿಸಿದ್ದಾರೆ.

    ನಾನು ಇಂಟರ್ ನೆಟ್‍ನಲ್ಲಿ ಕೆಲವು ವಿಡಿಯೋ ನೋಡಿದ್ದೆ. ಅದರಲ್ಲಿ ನಮ್ಮ ದೇಶದ ಅನೇಕ ಎಂಜಿನಿಯರಿಂಗ್ ಪದವಿಧರರು ನಮ್ಮ ವೃತ್ತಿಗೆ ಹೊರತಾದ ಕೆಲಸ ಮಾಡುತ್ತಿದ್ದಾರೆ ಎನ್ನವ ಮಾಹಿತಿ ಸಿಕ್ಕಿತು. ಇಂತಹ ಪರಿಸ್ಥಿತಿಗೆ ಸಂವಹನದ ಕೊರತೆಯೇ ಪ್ರಮುಖ ಕಾರಣ ಅಂತಾ ನನಗೆ ಅರ್ಥವಾಯಿತು. ಆದ್ದರಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಕೆಲಸ ಆರಂಭಿಸಿದೆ ಎಂದು ಅಲಿ ಹೇಳಿಕೊಂಡಿದ್ದಾನೆ.

    ನನ್ನ ಅಜ್ಜ ಶಿಕ್ಷಕರು, ತಂದೆ, ಚಿಕ್ಕಪ್ಪ, ಅತ್ತೆಯಂದಿರು ಶಿಕ್ಷಕರು. ಹೀಗಾಗಿ ಬೋಧನೆ ರಕ್ತಗತವಾಗಿಯೇ ನನಗೆ ಬಂದಿದೆ. ಕಲಿಸಲು ಹಾಗೂ ಕಲಿಯಲು ನನಗೆ ಯಾವುದೇ ಅಂಜಿಕೆಯಿಲ್ಲ ಎಂದು ಅಲಿ ತಿಳಿಸಿದ್ದಾನೆ.

    ಕಳೆದ ತಿಂಗಳಿನಿಂದ ನಾನು ಅಲಿ ಬಳಿಗೆ ಸಿವಿಲ್ ಎಂಜಿನಿಯರಿಂಗ್ ಸಾಫ್ಟ್‍ವೇರ್ ಪಾಠ ಹೇಳಿಕೊಳ್ಳಲು ಬರುತ್ತಿರುವೆ. ಆತನು ನಮಗಿಂತ ಕಿರಿಯನಾಗಿದ್ದರೂ, ನಮ್ಮ ಮಟ್ಟಕ್ಕೆ ಇಳಿದು ವಿಷಯವನ್ನು ಸರಳಗೊಳಿಸಿ ಬೋಧನೆ ಮಾಡುತ್ತಾನೆ ಎಂದು ಎಂಜಿನಿಯರ್ ವಿದ್ಯಾರ್ಥಿನಿ ಜಿ.ಸುಷ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂ.ಟೆಕ್ ವಿದ್ಯಾರ್ಥಿನಿ ಸಾಯಿ ರೇವತಿ ಕೂಡ ಮಹಮ್ಮದ ಹಸನ್ ಅಲಿ ಬಳಿ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv