Tag: teachers

  • ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಮಧ್ಯಂತರ ರಜೆ ಘೋಷಿಸಿದ ಸಿಎಂ

    ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಮಧ್ಯಂತರ ರಜೆ ಘೋಷಿಸಿದ ಸಿಎಂ

    – 3 ವಾರಗಳ ಕಾಲ ಶಾಲೆಗಳಿಗೆ ರಜೆ

    ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ ಸರ್ಕಾರ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಮಧ್ಯಂತರ ರಜೆ ಘೋಷಿಸಿದೆ.

    ಶಿಕ್ಷಕರ ಹಾಗೂ ಮಕ್ಕಳ ಹಿತದೃಷ್ಟಿಯಿಂದ 3 ವಾರಗಳ ಕಾಲ ರಜೆ ಶಾಲೆಗಳಿಗೆ ಘೋಷಣೆ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 12 ರಿಂದ 30 ರವರೆಗೆ ಶಾಲೆಗಳಿಗೆ ಮಧ್ಯಂತರ ರಜೆ ನೀಡಲಾಗಿದೆ. ಕೊರೊನಾದ ಸಂಕಷ್ಟದ ಕಾಲದಲ್ಲೂ ಶಿಕ್ಷಕರು ಶಾಲೆಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಕನಿಷ್ಟ ಮಧ್ಯಂತರ ರಜೆಯನ್ನು ಅವರಿಗೆ ನೀಡಿಲ್ಲ. ಇದೀಗ ದಸರಾ ರಜೆ ಹಿನ್ನೆಲೆ ಶಿಕ್ಷಕರಿಗೆ ಮಧ್ಯಂತರ ರಜೆಯನ್ನು ಸರ್ಕಾರ ಘೋಷಿಸಿದೆ.

    ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮಧ್ಯಂತರ ರಜೆ ನೀಡುವಂತೆ ಬೆಳಗ್ಗೆಯಷ್ಟೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಜೆ ಘೋಷಿಸಿದ್ದಾರೆ. ಶಿಕ್ಷಕರು ನಾಳೆಯಿಂದಲೇ ರಜೆ ಪಡೆಯಬಹುದಾಗಿದೆ. ಇದನ್ನೂ ಓದಿ: ಎತ್ತಿಗೆ ಜ್ವರ ಬಂದ್ರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸ್ತಿದೆ- ಶಿಕ್ಷಕರಿಗೆ ರಜೆ ನೀಡದ್ದಕ್ಕೆ ಎಚ್‍ಡಿಕೆ ಆಕ್ರೋಶ

    ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸುತ್ತಿದೆ ಎಂದು ಶಿಕ್ಷಕರಿಗೆ ಮಧ್ಯಂತರ ರಜೆಯನ್ನು ನೀಡದ್ದಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕುಮಾರಸ್ವಾಮಿ ಶಿಕ್ಷಕರ ಪರ ಸರಣಿ ಟ್ವೀಟ್ ಮಾಡಿ ರಜೆ ನೀಡದ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದರು. `ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಕೊರೊನಾದ ಸಂಕಷ್ಟದ ಸಮಯದಲ್ಲೂ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು ಶಾಲೆಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದರು.

    ಸರ್ಕಾರಿ ಶಾಲೆ ಶಿಕ್ಷಕರು ಕೋವಿಡ್ ಕರ್ತವ್ಯ ಹಾಗೂ ವಿದ್ಯಾಗಮ ಯೋಜನೆಯಡಿ ಈ ದಿನದ ತನಕ ಕೆಲಸ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ವರ್ಷ ಶೈಕ್ಷಣಿಕ ವರ್ಷದ ಮಧ್ಯಂತರ ರಜೆಯನ್ನು ರದ್ದುಗೊಳಿಸಿ ಶಿಕ್ಷಕರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಎತ್ತಿಗೆ ಜ್ವರ ಬಂದ್ರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸ್ತಿದೆ- ಶಿಕ್ಷಕರಿಗೆ ರಜೆ ನೀಡದ್ದಕ್ಕೆ ಎಚ್‍ಡಿಕೆ ಆಕ್ರೋಶ

    ಎತ್ತಿಗೆ ಜ್ವರ ಬಂದ್ರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸ್ತಿದೆ- ಶಿಕ್ಷಕರಿಗೆ ರಜೆ ನೀಡದ್ದಕ್ಕೆ ಎಚ್‍ಡಿಕೆ ಆಕ್ರೋಶ

    ಬೆಂಗಳೂರು: ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸುತ್ತಿದೆ ಎಂದು ಶಿಕ್ಷಕರಿಗೆ ಮಧ್ಯಂತರ ರಜೆಯನ್ನು ನೀಡದ್ದಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕುಮಾರಸ್ವಾಮಿ ಶಿಕ್ಷಕರ ಪರ ಸರಣಿ ಟ್ವೀಟ್ ಮಾಡುವ ಮೂಲಕ ರಜೆ ನೀಡದ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. “ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಕೊರೊನಾದ ಸಂಕಷ್ಟದ ಸಮಯದಲ್ಲೂ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು ಶಾಲೆಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ” ಎಂದರು.

    “ಸರ್ಕಾರಿ ಶಾಲೆ ಶಿಕ್ಷಕರು ಕೋವಿಡ್ ಕರ್ತವ್ಯ ಹಾಗೂ ವಿದ್ಯಾಗಮ ಯೋಜನೆಯಡಿ ಈ ದಿನದ ತನಕ ಕೆಲಸ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ವರ್ಷ ಶೈಕ್ಷಣಿಕ ವರ್ಷದ ಮಧ್ಯಂತರ ರಜೆಯನ್ನು ರದ್ದುಗೊಳಿಸಿ ಶಿಕ್ಷಕರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    “ಈ ವರ್ಷದ ಅಕ್ಟೋಬರ್ 3 ರಿಂದ 26 ರವರೆಗೆ ನೀಡಬೇಕಿದ್ದ ಮಧ್ಯಂತರ ರಜೆಯನ್ನು ಸರ್ಕಾರ ರದ್ದು ಮಾಡಿರುವುದಕ್ಕೆ ಆಧಾರ ಏನು? ಶಿಕ್ಷಕರೆಂದರೆ ಸರ್ವಾಧಿಕಾರದ ಕೆಳಗೆ ದುಡಿಯುವ ದಿನಗೂಲಿ ನೌಕರರೆ? ಎಂದಿದ್ದಾರೆ.

    ಕೊರೊನಾ ಕಾರಣಕ್ಕೆ ಮಕ್ಕಳು ಶಾಲೆಗೆ ಬಾರದಿದ್ದರೂ ಶಿಕ್ಷಕರನ್ನು ಅನ್ಯ ಸೇವೆಗೆ ಯಥೇಚ್ಛವಾಗಿ ಬಳಸಲಾಗುತ್ತಿದೆ. ಆದಾಗ್ಯೂ ಮಧ್ಯಂತರ ರಜೆ ರದ್ದುಪಡಿಸಿ ಸರ್ಕಾರ ಯಾವ ಪುರುಷಾರ್ಥ ಸಾಧನೆಗೆ ಹೊರಟಿದೆ? ಎಂದು ಎಚ್‍ಡಿಕೆ ಪ್ರಶ್ನೆ ಮಾಡಿದ್ದಾರೆ.

    ಶಿಕ್ಷಕ ಸಮೂಹವನ್ನು ಗೌರವದಿಂದ ನಡೆಸಿಕೊಳ್ಳಬೇಕಾದ ಸರ್ಕಾರ, ದರ್ಪದ ಆದೇಶಗಳನ್ನು ಜಾರಿ ಮಾಡಿ ಶಾಪಕ್ಕೆ ಗುರಿಯಾಗುತ್ತಿದೆ. ‘ಹರ ಮುನಿದರೂ ಗುರು ಕಾಯ್ವನು’ ಎಂಬುದನ್ನು ಸರ್ಕಾರ ಮರೆಯಬಾರದು. ರಾಜ್ಯ ಸರ್ಕಾರ ಅಕ್ಟೋಬರ್ 1ರಂದು ಮಧ್ಯಂತರ ರಜಾ ರದ್ದುಪಡಿಸಿ ಹೊರಡಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆದು ಶಿಕ್ಷಕರಿಗೆ ಮಧ್ಯಂತರ ರಜೆ ಘೋಷಿಸಬೇಕು” ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದರು.

  • ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್ – ವಿದ್ಯಾಗಮ ಯೋಜನೆ ತಾತ್ಕಾಲಿಕ ಸ್ಥಗಿತ

    ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್ – ವಿದ್ಯಾಗಮ ಯೋಜನೆ ತಾತ್ಕಾಲಿಕ ಸ್ಥಗಿತ

    ಬೆಂಗಳೂರು: ಪಬ್ಲಿಕ್ ಟಿವಿಯ ನಿರಂತರ ವರದಿಯ ಬೆನ್ನಲ್ಲೇ ವಿವಾದಾತ್ಮಕ ಯೋಜನೆಯನ್ನು ಕೈ ಬಿಡಲು ಸರ್ಕಾರ ನಿರ್ಧರಿಸಿದ್ದು, ವಿದ್ಯಾಗಮ ಯೋಜನೆಯನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ.

    ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಅಲ್ಲದೇ ಜಿಲ್ಲಾವಾರು ಅಂಕಿ-ಅಂಶ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಅಂಕಿ-ಅಂಶಗಳ ವಿಶ್ಲೇಷಣೆ ಆಗೋವರೆಗೂ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

    ವಿದ್ಯಾಗಮ ಸ್ಥಗಿತಕ್ಕೆ ಒತ್ತಾಯ ಹೆಚ್ಚಾದ ಹಿನ್ನೆಲೆಯಲ್ಲಿ ಸಚಿವ ಸುರೇಶ್ ಕುಮಾರ್ ಗೆ ಸಿಎಂ ಯಡಿಯೂರಪ್ಪ ಕರೆ ಮಾಡಿದ್ದರು. ಜನರಿಂದ ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಸಚಿವರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ. ನಂತರ ಸಿಎಂ ವಿದ್ಯಾಗಮ ತಾತ್ಕಾಲಿಕ ಸ್ಥಗಿತಕ್ಕೆ ಸೂಚಿಸಿದ್ದರು. ಸಿಎಂ ಸೂಚನೆ ಹಿನ್ನೆಲೆಯಲ್ಲಿ ಯೋಜನೆ ತಾತ್ಕಾಲಿಕ ಸ್ಥಗಿತಕ್ಕೆ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

    ರಾಜ್ಯದಲ್ಲಿ ಜಾರಿಗೆ ತಂದಿರುವ ವಿದ್ಯಾಗಮ ಕಾರ್ಯಕ್ರಮದ ಕುರಿತು ಕೆಲವು ವಲಯಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿರುವುದನ್ನು ಗಮನಿಸಿದ್ದೇನೆ. ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ. ಆದರೂ ವಿವಿಧ ವಲಯಗಳಿಂದ ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ಉದ್ದೇಶಿಸಿದೆ. ಹೀಗಾಗಿ ಜಿಲ್ಲಾವಾರು ಅಂಕಿ ಅಂಶಗಳ ಸ್ವೀಕಾರ ಹಾಗೂ ಅದರ ಸಮರ್ಪಕ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೂ ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.

    ಆರೋಪ:
    ನೂರಾರು ಶಿಕ್ಷಕರು, 30ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಗಮದಿಂದ ಕೊರೊನಾ ಸೋಂಕು ತಾಗಿದೆ ಎಂದು ಆರೋಪ ಮಾಡಲಾಗಿತ್ತು. ಅಲ್ಲದೇ ವಿದ್ಯಾಗಮ ಯೋಜನೆಯಲ್ಲಿದ್ದ 160ಕ್ಕೂ ಹೆಚ್ಚು ಶಿಕ್ಷಕರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿದ್ಯಾಗಮದಿಂದ ಸೋಂಕು ಬಂದಿದ್ದು, ಅನೇಕ ಸಂದರ್ಭದಲ್ಲಿ ಸಾವಿಗೀಡಾಗಿರುವ ಶಿಕ್ಷಕರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ವಿದ್ಯಾಗಮ ಯೋಜನೆಯ ನಂತರ ಶಿಕ್ಷಕರು, ಪೋಷಕರು, ಮಕ್ಕಳಲ್ಲಿ ಕೋವಿಡ್ ಭೀತಿ ಹೆಚ್ಚಾಗುತ್ತಿದೆ ಎಂದು ವಿದ್ಯಾಗಮ ಯೋಜನೆ ರದ್ದಿಗೆ ಶಿಕ್ಷಕರು ಹಾಗೂ ಪೋಷಕರಿಂದ ಒತ್ತಾಯಿಸುತ್ತಿದ್ದರು.

    ಏನಿದು ವಿದ್ಯಾಗಮ ಯೋಜನೆ ಏಕೆ?
    ಶಾಲೆಗಳು ಪ್ರಾರಂಭವಾಗುವವರೆಗೂ ವಿದ್ಯಾರ್ಥಿಗಳು ವಿದ್ಯೆ ಕಲಿಕೆಯಿಂದ ದೂರವಾಗಬಾರದೆನ್ನುವ ಕಾರಣಕ್ಕೆ ವಿದ್ಯಾಗಮ ಯೋಜನೆ ಜಾರಿ ಮಾಡಲಾಗಿತ್ತು. ಗ್ರಾಮೀಣ ಪ್ರದೇಶದ, ನಗರ ಪ್ರದೇಶದ ಸರ್ಕಾರಿ ಮಕ್ಕಳನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿತ್ತು. ರಾಜ್ಯ ಸರ್ಕಾರ ಆಗಸ್ಟ್ 4ರಂದು ಅಧಿಕೃತ ಆದೇಶ ಜಾರಿಗೆ ತಂದಿತ್ತು. ಸುಮಾರು 47 ಲಕ್ಷ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ಸರ್ಕಾರ ಯೋಜನೆ ಜಾರಿಗೆ ತಂದಿತ್ತು.

    ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗದಂತೆ ಮಕ್ಕಳಿರುವ ಜಾಗಕ್ಕೆ ಹೋಗಿ ಶಿಕ್ಷಕರು ಪಾಠ ಮಾಡಬೇಕು. ಒಂದೇ ಊರಿನ ಒಂದೇ ತರಗತಿಯ ವಿದ್ಯಾರ್ಥಿಗಳ ಗುಂಪು ಮಾಡಬೇಕು. ಗ್ರಾಮದ ದೇವಸ್ಥಾನ, ಸಮುದಾಯ ಭವನ, ಖಾಲಿ ಮನೆ ಹೀಗೆ ಪಾಠ ಮಾಡಲು ಸೂಕ್ತವಾದ ಶುಚಿತ್ವ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು. ಆದರೆ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡುವಂತಿರಲಿಲ್ಲ.

    ವಿದ್ಯಾರ್ಥಿಗಳ ಬಳಿ ಇರುವ ಮೊಬೈಲ್ ಸೌಲಭ್ಯದ ಆಧಾರದ ಮೇಲೆ ಮೂರು ಗುಂಪುಗಳನ್ನಾಗಿ ಮಾಡಬೇಕಿತ್ತು. ಮೊದಲ ಗುಂಪಿನಲ್ಲಿ ಯಾವುದೇ ಮೊಬೈಲ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳ ಸೇರ್ಪಡೆ, ಇವರ ಬಳಿ ಶಿಕ್ಷಕರೇ ಹೋಗಿ ಪಾಠ ಮಾಡಬೇಕಿತ್ತು. ಬೇಸಿಕ್ ಮೊಬೈಲ್ ಸೌಲಭ್ಯ ಇರುವ ವಿದ್ಯಾರ್ಥಿಗಳು, ಇವರಿಗೆ ದೂರವಾಣಿ ಮೂಲಕ ಶಿಕ್ಷಕರು ಪಾಠ ಮಾಡಬಹುದಿತ್ತು. ಮೂರನೇ ಗುಂಪಿನಲ್ಲಿ ಸ್ಮಾರ್ಟ್ ಪೋನ್ ಹೊಂದಿರುವ ವಿದ್ಯಾರ್ಥಿಗಳು, ಇವರಿಗೆ ಅನ್‍ಲೈನ್ ಕ್ಲಾಸ್ ಮಾಡಬಹುದಿತ್ತು.

    ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಸೇತುಬಂಧ ಕಾರ್ಯಕ್ರಮದಲ್ಲಿನ ತರಗತಿಗಳ ಬಗ್ಗೆ ಗೊಂದಲ ಇದ್ದವರು ಮನೆಗೆ ಬರುವ ಶಿಕ್ಷಕರು ಬಗೆಹರಿಸಬಹುದಿತ್ತು

    ವಿದ್ಯಾಗಮ ಜಾರಿಗೆ ಮೊದಲು ಸರ್ಕಾರ ಏನು ಮಾಡಬೇಕಿತ್ತು?
    * ಆಯಾ ಗ್ರಾಮಗಳಲ್ಲಿ ಸೂಕ್ತವಾದ ವಿಶಾಲ ಸ್ಥಳಗಳನ್ನು ಗುರುತಿಸಬೇಕಿತ್ತು
    * ಶಾಲೆಗಳಲ್ಲಿ ಪಾಠ ಮಾಡಬಾರದು ಅಂತ ನಿಯಮವಿದ್ದರೂ ಶಾಲೆಯ ಹೊರಗೆ ಕೂರಿಸಿ ಕೆಲವೆಡೆ ಪಾಠ
    * ಎಲ್ಲ ಗ್ರಾಮಗಳಲ್ಲೂ ಖಾಲಿ ಮನೆ, ಸಮುದಾಯ ಭವನ, ಸೂಕ್ತ ಸ್ಥಳ ಇದೆಯಾ ಎಂಬ ಸರ್ವೇ ಮಾಡಿಸಬೇಕಿತ್ತು
    * ಎಸ್ ಡಿಎಂಸಿ ಅಧ್ಯಕ್ಷರು, ಪೋಷಕರ ನೇತೃತ್ವದಲ್ಲಿ ಸರ್ವೇ ನಡೆಸಿ ಬಳಿಕ ಸಲಹೆಯ ಆಧಾರದ ಮೇಲೆ ವಿದ್ಯಾಗಮ ಜಾರಿ ಮಾಡಬೇಕಿತ್ತು
    * ವಿದ್ಯಾಗಮಕ್ಕೆ ತೆರಳುವ ಶಿಕ್ಷಕರಿಗೆ ನಾಲ್ಕು ದಿನಕ್ಕೆ ಒಂದು ಬಾರಿ ಉಚಿತ ಕೊರೊನಾ ತಪಾಸಣೆ ಸೌಲಭ್ಯ ನೀಡಬೇಕಿತ್ತು


    * ವಿದ್ಯಾಗಮಕ್ಕೆ ತೆರಳುವ ಶಿಕ್ಷಕರಿಗೆ ಸಾಮಾಜಿಕ ಅಂತರದಡಿ ಸಾರಿಗೆ ವ್ಯವಸ್ಥೆ ಮಾಡಬೇಕಿತ್ತು

    * ಸೇತುಬಂಧ ಕಾರ್ಯಕ್ರಮ ವೀಕ್ಷಣೆಗೆ ಹಲವು ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ನೀಡಬೇಕಿತ್ತು
    * ಆನ್‍ಲೈನ್ ವಂಚಿತ ಮಕ್ಕಳು ಎನ್ನುವ ಸರ್ಕಾರಕ್ಕೆ ಉಚಿತ ಲ್ಯಾಪ್‍ಟಾಪ್ ಮಾದರಿಯಲ್ಲಿ ಉಚಿತ ಸ್ಮಾರ್ಟ್ ಫೋನ್ ಕೊಡಿಸಬೇಕಿತ್ತು
    * ಯಾವುದೇ ಸಿದ್ಧತೆ, ಮುಂದಾಲೋಚನೆ ಇಲ್ಲದೆ ವಿದ್ಯಾಗಮ ಆರಂಭಿಸಬಾರದಿತ್ತು
    * ಜೀವ ಮೊದಲು, ಶಿಕ್ಷಣ ನಂತರ ಎಂಬ ಪರಿಜ್ಞಾನ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇರಬೇಕಿತ್ತು

  • 2020 ಜೀವ ಉಳಿಸುವ ವರ್ಷವಾಗಿದೆ, ಇದನ್ನು ಪರೀಕ್ಷೆ ಇಲ್ಲದ ವರ್ಷವೆಂದು ಘೋಷಿಸಿ: ಶೋಭಾ

    2020 ಜೀವ ಉಳಿಸುವ ವರ್ಷವಾಗಿದೆ, ಇದನ್ನು ಪರೀಕ್ಷೆ ಇಲ್ಲದ ವರ್ಷವೆಂದು ಘೋಷಿಸಿ: ಶೋಭಾ

    ಚಿಕ್ಕಮಗಳೂರು: 2020 ಜೀವ ಉಳಿಸುವ ವರ್ಷವಾಗಿದೆ, ಈ ವರ್ಷವನ್ನು ಪರೀಕ್ಷೆ ಇಲ್ಲದ ವರ್ಷವೆಂದು ಘೋಷಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಜೀವ ಉಳಿಸೋಣ, ನಂತರ ಜೀವನ ಮಾಡೋಣ ಎಂದು ಪ್ರಧಾನಿ ಮೋದಿ ಹೇಳಿದ್ದರು. ಹೀಗಾಗಿ ಮೊದಲು ಜೀವ ಉಳಿಸೋಣ, ನಂತರ ಜೀವನ ಮಾಡೋಣ. ಸದ್ಯಕ್ಕೆ ಯಾವುದೇ ಕಾರಣಕ್ಕೂ ಶಾಲೆ ಆರಂಭ ಬೇಡ. ಆನ್‍ಲೈನ್ ತರಗತಿಗಳನ್ನು ಮುಂದುವರಿಸಲು ಅಭ್ಯಂತರವಿಲ್ಲ ಎಂದು ಅವರು ಸರ್ಕಾಕ್ಕೆ ಸಲಹೆ ನೀಡಿದ್ದಾರೆ. ಈ ಮೂಲಕ ಶಾಲೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ರಾಜ್ಯ ಸೇರಿ ದೇಶಾದ್ಯಂತ ಶಿಕ್ಷಕರ ಸಾವು ಸಂಭವಿಸಿದೆ, ಶಿಕ್ಷಕರು ದೇಶದ ಆಸ್ತಿ. ಶಿಕ್ಷಕರ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಬೇಕು. ಶಿಕ್ಷಕರ ರಕ್ಷಣೆ, ಜೀವ ಉಳಿಸಲು ಆದ್ಯತೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಅಲ್ಲದೆ ಪೋಷಕರು ಸಹ ಮಕ್ಕಳನ್ನು ಶಾಲೆಗೆ ಕಳುಹಿಸುವ ಸ್ಥಿತಿಯಲ್ಲಿಲ್ಲ. ಮಕ್ಕಳನ್ನು ಖಾಯಿಲೆ ಅಥವಾ ಸಮಸ್ಯೆಗೆ ದೂಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಶಿಕ್ಷಕರ ಬಗ್ಗೆ ಕಾಳಜಿ ವಹಿಸುವಂತೆ ಸಹ ಮನವಿ ಮಾಡಿದ್ದಾರೆ.

  • 31 ಸಾವಿರ ಕೊರೊನಾ ಪ್ರಕರಣವಿರುವ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಓಪನ್

    31 ಸಾವಿರ ಕೊರೊನಾ ಪ್ರಕರಣವಿರುವ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಓಪನ್

    – ಶಾಲೆಯಲ್ಲಿ ಪಾಠ ಮಾಡೋ ಶಿಕ್ಷಕರೇ ಹಾಕಿಲ್ಲ ಮಾಸ್ಕ್

    ಬಳ್ಳಾರಿ: ಕೊರೊನಾ ಮಹಾಮಾರಿ ಅಟ್ಟಹಾಸ ನಡೆಸುತ್ತಿರುವ ಈ ಸಮಯದಲ್ಲಿ ಶಾಲೆಯನ್ನು ಯಾವಾಗ ಆರಂಭ ಮಾಡಬೇಕು ಎನ್ನುವ ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಆದರೆ ಗಣಿನಾಡು ಬಳ್ಳಾರಿಯಲ್ಲಿ ಸರ್ಕಾರಿ ಶಾಲೆಯೊಂದನ್ನು ಆರಂಭವಾಗಿದೆ.

    ಹೌದು ಸರ್ಕಾರ ವಿದ್ಯಾಗಮ ಯೋಜನೆಯನ್ನು ಜಾರಿ ಮಾಡಿ ಮಕ್ಕಳನ್ನು ಶಾಲೆಯಿಂದ ದೂರ ಉಳಿಯದಂತೆ ವಠಾರ ಶಾಲೆ ಆರಂಭ ಮಾಡಿದೆ. ಆದರೆ ಶಿಕ್ಷಣ ಇಲಾಖೆಯ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಬಳ್ಳಾರಿ ದುರ್ಗಾಮ್ಮ ದೇವಸ್ಥಾನದ ಬಳಿ ಇರುವ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯನ್ನು ಶಿಕ್ಷಕರು ಆರಂಭ ಮಾಡಿದ್ದಾರೆ.

    ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳು ಜೀವದ ಜೊತೆಯಲ್ಲಿ ಇಲ್ಲಿನ ಶಿಕ್ಷಕರು ಚೆಲ್ಲಾಟ ಆಡುತ್ತಿದ್ದಾರೆ. ಶಾಲಾ ಕೊಠಡಿಯ ಒಳಗಡೆಯೇ ಮಕ್ಕಳನ್ನು ಕೂರಿಸಿ ಪಾಠ ಮಾಡುತಿದ್ದಾರೆ. ವಿಪರ್ಯಾಸವೆಂದರೆ ಪಾಠ ಮಾಡುವ ಶಿಕ್ಷಕರೇ ಮಾಸ್ಕ್ ಹಾಕಿಲ್ಲ. ಜೊತೆಗೆ ಹಲವಾರು ಮಕ್ಕಳು ಶಾಲೆಗೆ ಮಾಸ್ಕ್ ಧರಿಸದೇ ಬಂದಿದ್ದಾರೆ. 31 ಸಾವಿರ ಸೋಂಕಿತರು ಇರುವ ಜಿಲ್ಲೆಯಲ್ಲಿ ಇದೆಂತಾ ನಿರ್ಲಕ್ಷ್ಯ ಎಂದು ಜನರು ಪ್ರಶ್ನೆ ಮಾಡಿದ್ದಾರೆ.

  • ಶಿಕ್ಷಕರಿಗೆ 60 ಸಾವಿರ ಸಹಾಯ ಧನ ನೀಡಿದ ವಿದ್ಯಾರ್ಥಿಗಳು

    ಶಿಕ್ಷಕರಿಗೆ 60 ಸಾವಿರ ಸಹಾಯ ಧನ ನೀಡಿದ ವಿದ್ಯಾರ್ಥಿಗಳು

    – ಗುರು ದಕ್ಷಿಣೆ ನೀಡಿ, ಶಿಕ್ಷಕರ ದಿನ ಆಚರಣೆ

    ಚಿಕ್ಕಮಗಳೂರು: ತಾವು ಓದಿ ಬೆಳೆದು, ಉನ್ನತ ಹುದ್ದೆಯನ್ನೇರಿದ ವಿದ್ಯಾರ್ಥಿಗಳು ತಮ್ಮ ಗುರು ವೃಂದ ಸಂಕಷ್ಟದಲ್ಲಿದೆ ಎಂಬುದನ್ನು ಅರಿತು ಹಳೆ ವಿದ್ಯಾರ್ಥಿಗಳು ಶಿಕ್ಷಕ ದಿನಾಚರಣೆಯ ಅಂಗವಾಗಿ 20 ಶಿಕ್ಷಕರಿಗೆ ತಲಾ ಮೂರು ಸಾವಿರದಂತೆ 60 ಸಾವಿರ ರೂ. ಹಣ ನೀಡಿದ್ದಾರೆ. ಈ ಮೂಲಕ ಅರ್ಥಪೂರ್ಣವಾಗಿ ಶಿಕ್ಷಕರ ದಿನವನ್ನು ಆಚರಿಸಿದ್ದಾರೆ.

    ಜಿಲ್ಲೆಯ ಕಡೂರಿನ ಬ್ರೈಟ್ ಫ್ಯೂಚರ್ ಇಂಗ್ಲೀಷ್ ಸ್ಕೂಲಿನ ಹಳೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ. ಕೊರೊನಾ ಕಾಲದಲ್ಲಿ ಕಳೆದ ಐದಾರು ತಿಂಗಳಿಂದ ಖಾಸಗಿ ಶಾಲೆಯ ಶಿಕ್ಷಕರು ತೀವ್ರ ಸಂಕಷ್ಟದಲ್ಲಿದ್ದರು. ಶಾಲಾ ಆಡಳಿತ ಮಂಡಳಿ ಕೂಡ ಸಂಬಳ ನೀಡಲಾಗದೆ ಶಿಕ್ಷಕರಿಗೆ ಅರ್ಧ ಸಂಬಳ ನೀಡಿತ್ತು. ಹೀಗಾಗಿ ಹಳೆ ವಿದ್ಯಾರ್ಥಿಗಳು ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ.

    ಈ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿಗಳು ಅಮೆರಿಕಾ, ಜರ್ಮನಿಯಲ್ಲಿದ್ದಾರೆ. ಕೆಲವರು ವೈದ್ಯರು, ಇಂಜಿನಿಯರ್ ಆಗಿದ್ದಾರೆ. ಇನ್ನೂ ಹಲವರು ವಿವಿಧ ರೀತಿಯ ಉದ್ಯೋಗದಲ್ಲಿದ್ದು, ಆರ್ಥಿಕವಾಗಿ ಸದೃಢವಾಗಿದ್ದಾರೆ. ಉತ್ತಮ ಸ್ಥಾನದಲ್ಲಿರುವ ಸುಮಾರು 30 ವಿದ್ಯಾರ್ಥಿಗಳು ಹಣ ಹಾಕಿ ಶಿಕ್ಷಕರ ನೆರವಿಗೆ ಧಾವಿಸಿದ್ದಾರೆ. ಇದೇ ವೇಳೆ ಶಾಲೆಯ ಬೋಧಕೇತರ ವರ್ಗದ 18 ಜನರಿಗೂ ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಾಗ್ರಿಯ ಕಿಟ್ ವಿತರಿಸಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಹಾಗೂ ಗೌರವವನ್ನು ಆಡಳಿತ ಮಂಡಳಿ, ಶಿಕ್ಷಕ ವೃಂದ ಶ್ಲಾಘಿಸಿದೆ.

  • ಬೆಳಗಾವಿಯ ಇಂಚಲ ಗ್ರಾಮದ ಪ್ರತಿ ಮನೆಯಲ್ಲಿಯೂ ಓರ್ವ ಶಿಕ್ಷಕ

    ಬೆಳಗಾವಿಯ ಇಂಚಲ ಗ್ರಾಮದ ಪ್ರತಿ ಮನೆಯಲ್ಲಿಯೂ ಓರ್ವ ಶಿಕ್ಷಕ

    -ಗ್ರಾಮದ 300ಕ್ಕೂ ಹೆಚ್ಚು ಯುವಕರು ಸೇನೆ ಸೇರ್ಪಡೆ

    ಬೆಳಗಾವಿ: ಹಿಂದುಳಿದ ತಾಲೂಕಿನಲ್ಲಿ ಅದೊಂದು ಕುಗ್ರಾಮ. ಶಿಕ್ಷಣದ ಬದಲು ಈ ಗ್ರಾಮದಲ್ಲಿ ಕೊಲೆ ಸುಲಿಗೆ, ಮಚ್ಚುಲಾಂಗು ಅಬ್ಬರ ಜಾಸ್ತಿಯಾಗಿತ್ತು. ಹೀಗಿದ್ದ ಗ್ರಾಮದಲ್ಲಿ ಇದೀಗ ಶಿಕ್ಷಣದ ಕಂಪು ಪಸರಿಸಿ ಮನಗೊಬ್ಬರಂತೆ ಶಿಕ್ಷಕರಿದ್ದಾರೆ. ಸ್ವಾಮೀಜಿಯವರ ನಿಸ್ವಾರ್ಥ ಸೇವೆಯಿಂದ ಗ್ರಾಮದ ಮನೆಯಲ್ಲೊಬ್ಬರು ಶಿಕ್ಷಕರಿದ್ದಾರೆ. ಗ್ರಾಮವನ್ನ ಇದೀಗ ರಾಜ್ಯದಲ್ಲಿ ಶಿಕ್ಷಕರ ತವರೂರು ಎಂದೇ ಗುರುತಿಸಲಾಗುತ್ತಿದೆ.

    ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮ ಇದೀಗ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಗ್ರಾಮ. ಈ ಗ್ರಾಮದಲ್ಲಿ ಮನಗೆ ಒಬ್ಬರಂತೆ ಶಿಕ್ಷರಿದ್ದಾರೆ ಅಂದ್ರೆ ನೀವು ನಂಬಲೇಬೇಕು. ನಲತ್ತೈದು ವರ್ಷದ ಹಿಂದೆ ಇಂಚಲ ಗ್ರಾಮದಲ್ಲಿ ಕೊಲೆ ಸುಲಿಗೆ ಅಕ್ರಮ ಚಟುವಟಿಕೆಗಳೇ ಹೆಚ್ಚಾಗಿತ್ತು. ಇದನ್ನ ಕಂಡ ಅದೇ ಗ್ರಾಮದಲ್ಲಿರುವ ಇಂಚಲ ಮಠದ ಶಿವಾನಂದ ಭಾರತಿ ಮಹಾಸ್ವಾಮಿಗಳು ಎಲ್ಲರೂ ವಿದ್ಯಾವಂತರಾದರೆ ನೆಮ್ಮದಿ ನೆಲಸಬಹುದು ಅಂದುಕೊಂಡು ಶಾಲೆಯನ್ನ ಪ್ರಾರಂಭಿಸುತ್ತಾರೆ.

    1975ರಲ್ಲಿ ಪ್ರೌಢ ಶಿಕ್ಷಣ, 1982ರಲ್ಲಿ ಪಿಯು ಕಾಲೇಜು, 1985ರಲ್ಲಿ ಡಿಎಡ್ ಕಾಲೇಜು ಆರಂಭ ಮಾಡ್ತಾರೆ. ಹೀಗೆ ಆರಂಭದಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿದ್ದರು. ಇದೀಗ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ಇಂಚಲ ಗ್ರಾಮದಲ್ಲಿ ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಸುಮಾರು ಒಂದು ಸಾವಿರಕ್ಕೂ ಅಧಿಕ ಮನೆಗಳಿವೆ. ಗ್ರಾಮದಲ್ಲಿ ಇಲ್ಲಿವರೆಗೂ ಸುಮಾರು ಒಂಬತ್ತನೂರಕ್ಕೂ ಅಧಿಕ ಶಿಕ್ಷಕರಿದ್ದು, ಎಲ್ಲರೂ ಸರ್ಕಾರಿ ಶಿಕ್ಷರೇ ಎಂಬುದು ವಿಶೇಷ. ಕೆಲವು ಮನೆಗಳಲ್ಲಿ ಮೂರು ನಾಲ್ಕರಿಂದ ಹನ್ನೆರಡು ಜನರವರೆಗೂ ಶಿಕ್ಷಕರಿದ್ದಾರೆ. ಸತಾರ್ ಇಸ್ಮಾಯಿಲ್ ಸಾಬ್ ಎಂಬವರ ಮನೆಯಲ್ಲೇ ಹನ್ನೆರಡು ಜನ ಶಿಕ್ಷರಿದ್ದಾರೆ.

    ಕೇವಲ ಶಿಕ್ಷಣ ಇಲಾಖೆಯಲ್ಲಿ ಮಾತ್ರ ಸೇವೆ ಸಲ್ಲಿಸುತ್ತಿಲ್ಲ, 300ಕ್ಕೂ ಹೆಚ್ಚು ಯುವಕರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ 70ಕ್ಕೂ ಹೆಚ್ಚು ಸೈನಿಕರು ನಿವೃತ್ತರಾಗಿ ಗ್ರಾಮಕ್ಕೆ ಮರಳಿದ್ದಾರೆ. ಇದಲ್ಲದೇ ಡಾಕ್ಟರ್, ಇಂಜಿನಿಯರ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.

  • ಕೊಡಗು ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಸಾಲು ಸಾಲು ಸಮಸ್ಯೆಗಳು

    ಕೊಡಗು ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಸಾಲು ಸಾಲು ಸಮಸ್ಯೆಗಳು

    ಮಡಿಕೇರಿ: ಕೊರೊನಾ ಬಳಿಕ ಸರ್ಕಾರ ಘೋಷಿಸಿದ ಲಾಕ್‍ಡೌನ್ ನಂತರ ಎಲ್ಲಾ ಚಟುವಟಿಕೆಗಳು ಕುಂಟುತ್ತಾ ಸಾಗುತ್ತಿವೆ. ದೀರ್ಘಾವಧಿವರೆಗೆ ಪ್ರಭಾವವನ್ನು ಮುಂದುವರಿಸಿದ ಮಾರಣಾಂತಿಕ ವೈರಸ್ ತೀವ್ರತೆಯನ್ನು ಮನಗಂಡ ಸರ್ಕಾರ ಶೈಕ್ಷಣಿಕ ಚಟುವಟಿಕೆಗಳ ಸ್ವರೂಪವನ್ನೇ ಬದಲಿಸಿದೆ. ಶಾಲೆ-ಕಾಲೇಜುಗಳನ್ನು ಬಂದ್ ಮಾಡಿ, ವಿದ್ಯಾರ್ಥಿಗಳಿಗೆ ವಿನೂತನ ವಿಧಾನಗಳ ಮೂಲಕ ಪಾಠ ಭೋಧಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಆದರೆ ಪಾಠ ಭೋಧನೆಗೆ ಶಿಕ್ಷಕರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ.

    ಕೊರೊನಾ ಮಹಾಮಾರಿ ಕಾಳ್ಗಿಚ್ಚಿನಂತೆ ವ್ಯಾಪಿಸಿದ ಬಳಿಕ ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕತೆ ಹಿತದೃಷ್ಠಿಯಿಂದ ಸರ್ಕಾರ ರಾಜ್ಯದಾದ್ಯಂತ ಸರ್ಕಾರಿ ಪ್ರಾಥಮಿಕ ಹಾಗೂ ಪೌಢಶಾಲೆಗಳ ವಿದ್ಯಾರ್ಥಿಗಳಿಗೆ ವಠಾರ ಶಾಲೆ ಮತ್ತು ವಿದ್ಯಾಗಮ ಎನ್ನುವ ಚಟುಚಟಿಕೆಗಳನ್ನು ಹಾಕಿಕೊಂಡು ಮಕ್ಕಳಿಗೆ ತರಗತಿಗಳನ್ನು ಹೇಳಿಕೊಡಲಾಗುತ್ತಿದೆ. ಶಾಲೆಗಳ ಬಾಗಿಲನ್ನು ತೆರೆಯದೇ ಹೆಚ್ಚಿನ ಮಕ್ಕಳು ಇದ್ದಲ್ಲಿಗೆ ಶಿಕ್ಷಕರು ಹೋಗಬೇಕಿದೆ. ಆದರೆ ಇದು ಮಕ್ಕಳ ಶೈಕ್ಷಣಿಕ ದೃಷ್ಠಿಯಿಂದ ಉತ್ತಮವಾಗಿದೆ. ಆದರೆ ಇದನ್ನು ಸಕಾರಗೊಳಿಸಲು ಶಿಕ್ಷಕರಿಗೆ ಕೆಲವು ಸಮಸ್ಯೆಗಳು ಎದುರಾಗಿವೆ.

    ಕೊಡಗು ಜಿಲ್ಲೆಯಲ್ಲಿ ಮುಖ್ಯವಾಗಿ ಕೊರೊನಾ ಪರಿಣಾಮದಿಂದ ಜನರ ಸಂಪರ್ಕ ಕೊಂಡಿಯಾಗಿರುವ ಖಾಸಗಿ ಬಸ್‍ಗಳ ಸಂಚಾರವಿಲ್ಲದೆ ಪರದಾಡುತ್ತಿದ್ದಾರೆ. ಅಲ್ಲದೆ ಮಕ್ಕಳನ್ನು ಸಂಪರ್ಕಿಸಲು ಸಮಸ್ಯೆಯಾಗಿದೆ. ಕೊಡಗು ದಟ್ಟ ಹಸಿರಿನಿಂದ ಕೂಡಿದೆ. ಅಲ್ಲದೆ ಮನೆಗಳೂ ಕೂಡ ದೂರದಲ್ಲಿ ಇರುವುದರಿಂದ ಶಿಕ್ಷಕರು ಮಕ್ಕಳನ್ನು ಸಂಪರ್ಕಿಸಲು ಕಷ್ಟವಾಗುತ್ತಿದೆ. ಒಂದೆಡೆ ನಾಲ್ಕೈದು ಮಕ್ಕಳನ್ನು ಸೇರಿಸುವುದೇ ಕಷ್ಟವಾಗುತ್ತಿದೆ. ಮತ್ತೊಂದೆಡೆ ಚಿಕ್ಕ ಮಕ್ಕಳನ್ನು ಒಬ್ಬೊಬ್ಬರಾಗಿಯೇ ಕಳುಹಿಸುವುದಕ್ಕೂ ಪೋಷಕರೂ ಭಯಪಡುತ್ತಿದ್ದಾರೆ. ಹೀಗಾಗಿ ಕೆಲವು ಶಿಕ್ಷಕರು ಅನುಕೂಲವಾಗಿರುವ ರಸ್ತೆ ಬದಿಯ ಬಸ್ ನಿಲ್ದಾಣಗಳಲ್ಲಿ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಹೇಳಿಕೊಡುತ್ತಿದ್ದಾರೆ.

    ಪೋಷಕರು ಕೂಡ ಮಕ್ಕಳೊಂದಿಗೆ ಬಂದು ಜೊತೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಪರ್ಯಾಯ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಈ ಕ್ರಮ ಎಲ್ಲಾ ಜಿಲ್ಲೆಗಳಿಗೆ ಸೂಕ್ತವಾಗಿಲ್ಲ. ಮಕ್ಕಳ ಸಂಖ್ಯೆ ಕಡಿಮೆ ಇರುವಂತಹ ಹಲವು ಶಾಲೆಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶೈಕ್ಷಣಿಕ ಚಟುವಟಿಕೆ ನಡೆಸಲು ಸರ್ಕಾರ ಅನುಮತಿ ಕೊಟ್ಟರೆ ಒಳ್ಳೆಯದು ಎಂದು ಸ್ಥಳೀಯ ಪೋಷಕರು ಹೇಳುತ್ತಿದ್ದಾರೆ.

  • ಮನೆ ಮನೆಗೆ ತೆರಳಿ ಪಾಠದ ಜೊತೆ ಕೊರೊನಾ ಜಾಗೃತಿ ಮೂಡಿಸ್ತಿರೋ ಶಿಕ್ಷಕರು

    ಮನೆ ಮನೆಗೆ ತೆರಳಿ ಪಾಠದ ಜೊತೆ ಕೊರೊನಾ ಜಾಗೃತಿ ಮೂಡಿಸ್ತಿರೋ ಶಿಕ್ಷಕರು

    ರಾಯಚೂರು: ಕೋವಿಡ್ 19 ಅಟ್ಟಹಾಸದಿಂದ ಜನಜೀವನವೇ ಬದಲಾಗಿದೆ. ಶಾಲಾ ಕಾಲೇಜುಗಳು ಯಾವಾಗ ಆರಂಭವಾಗುತ್ತವೆ ಅನ್ನೋ ಸ್ಪಷ್ಟತೆ ಇನ್ನೂ ಮೂಡಿಲ್ಲ. ಹೀಗಾಗಿ ಮಕ್ಕಳ ಅಕ್ಷರಭ್ಯಾಸ ತಪ್ಪಬಾರದು ಅಂತ ಶಾಲೆಗೆ ಬೀಗ ಹಾಕಿದ್ರೂ ರಾಯಚೂರಿನ ಲಿಂಗಸುಗೂರಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತೆರಳಿ ಪಾಠ ಮಾಡುತ್ತಿದ್ದಾರೆ.

    ತಾಲೂಕಿನ ಪುಟ್ಟಹಳ್ಳಿ ಕೆಸರಟ್ಟಿ ಗ್ರಾಮದ ಮುಖ್ಯೋಪಾಧ್ಯಾಯ ಚಂದ್ರಶೇಖರಪ್ಪ ಹಾಗೂ ಸಹ ಶಿಕ್ಷಕರು ಮಧ್ಯಾಹ್ನದವರೆಗೆ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಠ ಹೇಳುತ್ತಿದ್ದಾರೆ. ಹೋಂ ವರ್ಕ್ ಕೊಟ್ಟು ಮರುದಿನ ಬಂದು ಪರಿಶೀಲಿಸುತ್ತಿದ್ದಾರೆ. ಪಾಠದ ಜೊತೆಗೆ ಮಕ್ಕಳು ಹಾಗೂ ಪೋಷಕರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

    ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪಾಠ ಮಾಡುತ್ತಾರೆ. ಮಕ್ಕಳಿಗೆ ನೀಡಿದ ಹೋಂ ವರ್ಕ್‍ನ್ನ ಮಾಡಿಸುವಂತೆ ಪೋಷಕರಿಗೆ ಸೂಚನೆ ನೀಡುತ್ತಿದ್ದಾರೆ. ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ, ಗ್ರಾಮದ ಸ್ವಚ್ಛತೆ ಬಗ್ಗೆಯೂ ಅರಿವು ಮೂಡಿಸುತ್ತಿದ್ದಾರೆ. ಶಿಕ್ಷಕರ ನಡೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಜು.31ರ ವರೆಗೆ ಶಿಕ್ಷಕರಿಗೆ ವರ್ಕ್ ಫ್ರಮ್ ಹೋಂ- ಶಿಕ್ಷಣ ಇಲಾಖೆ ಆದೇಶ

    ಜು.31ರ ವರೆಗೆ ಶಿಕ್ಷಕರಿಗೆ ವರ್ಕ್ ಫ್ರಮ್ ಹೋಂ- ಶಿಕ್ಷಣ ಇಲಾಖೆ ಆದೇಶ

    ಬೆಂಗಳೂರು: ಮಹಾಮಾರಿ ಕೊರೊನಾ ಹೆಚ್ಚಳ ಹಾಗೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಶಿಕ್ಷಕರು ಮನೆಯಿಂದಲೇ ಕೆಲಸ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

    ಸದ್ಯಕ್ಕೆ ಜುಲೈ 31 ವರೆಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ರಾಜ್ಯದ ಎಲ್ಲಾ ಶಾಲೆಗಳಿಗೆ ಶಿಕ್ಷಣ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದೆ. ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಮಾಡುತ್ತಿರುವ ಶಿಕ್ಷಕರನ್ನ ಹೊರತುಪಡಿಸಿ ಉಳಿದವರು ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ.

    ಶಿಕ್ಷಣ ಇಲಾಖೆ ಕೆಲಸ ನಿಯಮ ವಿಧಿಸಿ ವರ್ಕ್ ಫ್ರಮ್ ಹೋಂಗೆ ಅವಕಾಶ ಮಾಡಿಕೊಟ್ಟಿದೆ. ಯಾವುದೇ ಮಾಹಿತಿ ನೀಡದೆ ಶಿಕ್ಷಕರು ಕೇಂದ್ರ ಸ್ಥಾನವನ್ನು ಬಿಡುವಂತೆ ಇಲ್ಲ. ಜೊತೆಗೆ ಶಿಕ್ಷಕರನ್ನ ಸಂಪರ್ಕಕ್ಕೆ ಪಡೆಯಲು ದೂರವಾಣಿ ಸಂಖ್ಯೆ, ಇಮೇಲ್ ಐಡಿಯನ್ನು ಶಿಕ್ಷಣ ಇಲಾಖೆ ನೀಡುವುದು.

    ಅಷ್ಟೇ ಅಲ್ಲದೇ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಶಿಕ್ಷಕರು ಆರೋಗ್ಯ ಸೇತು ಆಪ್ ಅನ್ನು ಕಡ್ಡಾಯವಾಗಿ ಬಳಸಬೇಕಾಗುತ್ತದೆ. ಆನ್‍ಲೈನ್ ತರಗತಿ ನಡೆಸುವ ಶಿಕ್ಷಕರು ಮನೆಯಿಂದಲೇ ತರಗತಿಯನ್ನು ನಡೆಸಬೇಕು. ಇದಲ್ಲದೇ ಶಿಕ್ಷಣ ಇಲಾಖೆಯ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಬಗ್ಗೆ ಶಿಕ್ಷಕರು ಅಗತ್ಯ ಕೆಲಸ ನಿರ್ವಹಿಸಬೇಕು.

    ಬೆಂಗಳೂರಿನಲ್ಲಿ ಕೊರೊನಾ ಸ್ಫೋಟವಾಗಿದ್ದು, ಗುರುವಾರ ಒಂದೇ ದಿನ 2,344 ಪ್ರಕರಣಗಳು ವರದಿ ಆಗಿವೆ. ಒಟ್ಟಾರೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ 1032 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.