Tag: teachers

  • ಮಕ್ಕಳ ಸಮವಸ್ತ್ರಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು

    ಮಕ್ಕಳ ಸಮವಸ್ತ್ರಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು

    ಶಿವಮೊಗ್ಗ: ಶಾಲಾ ಮಕ್ಕಳಿಗೆ ವಿತರಿಸಲು ಕೊಠಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಸಮವಸ್ತ್ರಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮದಲ್ಲಿ ನಡೆದಿದೆ.

    ಮಾರುತಿಪುರದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಸಲುವಾಗಿ ಕಳೆದ ನಾಲ್ಕು ದಿನಗಳ ಹಿಂದೆ ಶಿಕ್ಷಕರು ಸುಮಾರು 300 ಜೊತೆ ಸಮವಸ್ತ್ರ ತೆಗೆದುಕೊಂಡು ಬಂದು ಶಾಲೆಯ ಕೊಠಡಿಯೊಂದರಲ್ಲಿ ಇರಿಸಿ ಬೀಗ ಹಾಕಿಕೊಂಡು ತೆರಳಿದ್ದರು. ಆದರೆ ಇಂದು ಶಾಲಾ ಕೊಠಡಿ ಬೀಗ ತೆರೆದು ನೋಡಿದಾಗ ಎಲ್ಲಾ ಸಮವಸ್ತ್ರಗಳು ಬೆಂಕಿಗಾಹುತಿ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಇನ್ನು ವಿಷಯ ತಿಳಿಯುತ್ತಿದ್ದಂತೆ ಶಾಸಕ ಹರತಾಳು ಹಾಲಪ್ಪ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಘಟನೆ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು. ಇನ್ನು ಘಟನೆ ಕುರಿತು ಶಾಲೆಯ ಶಿಕ್ಷಕರು ಹೊಸನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ:ಪ್ರಿಯತಮನ ಮೇಲಿನ ಮೋಹಕ್ಕಾಗಿ ಸ್ಕೆಚ್ ಹಾಕಿ ಗಂಡನನ್ನೇ ಕೊಲ್ಲಿಸಿದ್ಳು!

  • ಲಾಕ್‍ಡೌನ್ ಪೂರ್ಣಗೊಂಡ ತಕ್ಷಣ ಶಿಕ್ಷಕರ ಹಾಜರಿಗೆ ಸೂಚನೆ: ಸುರೇಶ್ ಕುಮಾರ್

    ಲಾಕ್‍ಡೌನ್ ಪೂರ್ಣಗೊಂಡ ತಕ್ಷಣ ಶಿಕ್ಷಕರ ಹಾಜರಿಗೆ ಸೂಚನೆ: ಸುರೇಶ್ ಕುಮಾರ್

    ಬೆಂಗಳೂರು : ಶಾಲಾರಂಭದ ಕುರಿತು ಈಗಾಗಲೇ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಾಗಿದೆಯಾದರೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಲಾಕ್‍ಡೌನ್ ಜಾರಿಯಲ್ಲಿದ್ದು, ಶಿಕ್ಷಕರ ಚಲನವಲನಕ್ಕೆ ತೊಂದರೆಯಾಗಿರುವುದರಿಂದ ಶಿಕ್ಷಕರು ಲಾಕ್‍ಡೌನ್ ತೆರವಾದ ದಿನದಿಂದಲೇ ಶಾಲೆಗಳಿಗೆ ಭೌತಿಕವಾಗಿ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಸೋಮವಾರ ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಂಗಳವಾರದಿಂದ ಶಾಲೆಗಳಿಗೆ ಶಿಕ್ಷಕರು ಹಾಜರಾಗಿ ಮಕ್ಕಳ ನೋಂದಣಿ ಪ್ರಾರಂಭಿಸಬೇಕಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಶಿಕ್ಷಕರ ಚಲನವಲನಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಪೂರ್ಣಗೊಂಡ ನಂತರ ಶಿಕ್ಷಕರು ಶಾಲೆಗಳಿಗೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

    ಮೊದಲ ಪಿಯು ಮೌಲ್ಯಾಂಕನ ಅವಧಿ ವಿಸ್ತರಣೆ
    ಹಲವು ಉಪನ್ಯಾಸಕ ಸಂಘಟನೆಗಳ ಕೋರಿಕೆಯ ಮೇರೆಗೆ ಮೊದಲ ಪಿ.ಯು.ಸಿ. ಮೌಲ್ಯಾಂಕನ ಪ್ರಕ್ರಿಯೆಯನ್ನು ಎಲ್ಲ ಜಿಲ್ಲೆಗಳ ಲಾಕ್‍ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ಸಮಯ ವಿಸ್ತರಿಸಿ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಸಹ ಸಚಿವರು ಹೇಳಿದ್ದಾರೆ. ಈ ಕುರಿತಂತೆ ಪದವಿಪೂರ್ವ ಶಿಕ್ಷಕರಿಗೆ ಸೂಚನೆ ನೀಡಲಾಗಿದ್ದು, ಸದ್ಯದಲ್ಲಿಯೇ ಅವರು ಕ್ರಮ ಜರುಗಿಸಲಿದ್ದಾರೆ ಎಂದು ಅವರು ಹೇಳಿದರು.

    ಚೈಲ್ಡ್ ಪ್ರೊಫೈಲ್ ನಿಯಮಿತ ದಾಖಲೆ:
    ಈ ಬಾರಿ ನಿಗದಿತ ಅವಧಿಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಹೆಚ್ಚು ಸಮರ್ಥವಾಗಿ ಜಾರಿಯಲ್ಲಿಡುವ ಅವಶ್ಯಕತೆ ಇದೆ. ಪ್ರತಿ ಸೂಚಿತ ಅವಧಿಗೆ ವಿದ್ಯಾರ್ಥಿಗಳ ಚೈಲ್ಡ್ ಪ್ರೊಫೈಲ್ ಗಳನ್ನು ನಿಯಮಿತವಾಗಿ ದಾಖಲಿಸುವ, ಕಲಿಕಾ ಸಾಮಥ್ರ್ಯಗಳನ್ನು ಅಳೆಯುವ ಮಾನದಂಡಗಳಾಗಿ ರೂಪಿಸುವ ಸದೃಢ ವ್ಯವಸ್ಥೆಯನ್ನು ಜಾರಿಯಲ್ಲಿಡುವ ವ್ಯವಸ್ಥೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಅತ್ಯವಶ್ಯಕವಾಗಿದ್ದು, ಇಂಥಹ ಸಂದರ್ಭದಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಮಂಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ
    ಈ ಬಾರಿಯ ಎರಡು ದಿನಗಳ ಎಸ್.ಎಸ್.ಎಲ್.ಸಿ. ಪರೀಕ್ಷೆ ನಿರ್ವಹಣೆ ಕುರಿತಂತೆ ಜೂ. 28 ರಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಿಡಿಯೋ ಸಂವಾದ ಸಭೆ ನಡೆಯಲಿದ್ದು, ಸಭೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಇಲಾಖೆಯ ಆಯುಕ್ತರನ್ನು ಸುರಕ್ಷತಾ ವಾತಾವರಣದಲ್ಲಿ ಪರೀಕ್ಷೆ ನಡೆಸುವ ಕ್ರಮಗಳ ಕುರಿತು ವಿಸ್ತ್ರತ ಚರ್ಚೆ ನಡೆಸಿ ಮಾರ್ಗದರ್ಶನ ನೀಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕೊಠಡಿ ಮೇಲ್ವಿಚಾರಕ ಶಿಕ್ಷಕರಿಗೆ ಕೋವಿಡ್ ಲಸಿಕೆ
    ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕೊಠಡಿ ಮೇಲ್ವಿಚಾರಕರುಗಳಿಗೆ ಕೋವಿಡ್ – 19ರ ಲಸಿಕೆಯನ್ನು ನೀಡುವ ಪ್ರಕ್ರಿಯೆಯನ್ನು ಪರೀಕ್ಷೆಗೆ ಮುನ್ನ ಪೂರ್ಣಗೊಳಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ವಹಿಸಬೇಕೆಂದೂ ಸೂಚಿಸಲಾಗಿದೆ ಎಂದೂ ಸಚಿವರು ಹೇಳಿದರು.

    ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟ
    ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯ ಕುರಿತಂತೆ ನಿಯಮಗಳ ಆಕ್ಷೇಪಣಾ ಸಲ್ಲಿಕೆ ಅವಧಿ ಪೂರ್ಣಗೊಳ್ಳುತಿರುವ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರದ ಅಧಿಸೂಚನೆಯನ್ನು ಹೊರಡಿಸಿ ಸಾಧ್ಯವಾದಷ್ಟು ಶೀಘ್ರವೇ ವರ್ಗಾವಣಾ ಪ್ರಕ್ರಿಯೆ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಯಾವುದೇ ಅಡೆತಡೆಗಳು ಬಾರದ ರೀತಿಯಲ್ಲಿ ತಂತ್ರಜ್ಞಾನಾಧಾರಿತ ವರ್ಗಾವಣಾ ಪ್ರಕ್ರಿಯೆ ನಡೆಸಬೇಕೆಂದು ಸೂಚಿಸಲಾಗಿದೆಯೆಂದರು.

    ಪ್ಯಾಕೇಜ್ ಪರಿಹಾರ ನೇರ ಶಿಕ್ಷಕರ ಖಾತೆಗೆ
    ಖಾಸಗಿ ಖಾಸಗಿ ಶಾಲಾ ಶಿಕ್ಷಕರಿಗೆ ಮುಖ್ಯಮಂತ್ರಿಗಳು ಘೋಷಿಸಿರುವ ಪ್ಯಾಕೇಜ್ ಪರಿಹಾರವನ್ನು ಕ್ಲಪ್ತ ಸಮಯದಲ್ಲಿ ಫಲಾನುಭವಿಗಳಿಗೆ ನೇರವಾಗಿ ವಿತರಿಸುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸಬೇಕೆಂದೂ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಿಕ್ಷಕರ, ಶಿಕ್ಷಕೇತರರ ಹಾಗೂ ಅತಿಥಿ ಶಿಕ್ಷಕರ ಬ್ಯಾಂಕ್‍ಖಾತೆಗಳ ವಿವರಗಳನ್ನು ಶೀಘ್ರ ಸಂಗ್ರಹಿಸಿ ಅನುದಾನವನ್ನು ನೇರ ಶಿಕ್ಷಕರ ಖಾತೆಗಳಿಗೆ ವರ್ಗಾಯಿಸಬೇಕು. ಅತ್ಯಂತ ಸಮರ್ಪಕವಾಗಿ ಈ ಪ್ರಕ್ರಿಯೆ ನಿರ್ವಹಣೆಯಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿಎಸ್.ಆರ್.ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್, ಪದವಿಪೂರ್ವ ಶಿಕ್ಷಣ ನಿರ್ದೇಶಕಿ ಸ್ನೇಹಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಶಿಕ್ಷಕರಿಗೆ ವರ್ಕ್ ಫ್ರಮ್ ಹೋಂ ಮುಂದುವರಿಸಿ – ಸರ್ಕಾರಕ್ಕೆ ಶಿಕ್ಷಕರ ಸಂಘ ಪತ್ರ

    ಶಿಕ್ಷಕರಿಗೆ ವರ್ಕ್ ಫ್ರಮ್ ಹೋಂ ಮುಂದುವರಿಸಿ – ಸರ್ಕಾರಕ್ಕೆ ಶಿಕ್ಷಕರ ಸಂಘ ಪತ್ರ

    ಬೆಂಗಳೂರು: ಸೋಮವಾರದಿಂದ ರಾಜ್ಯ ಸರ್ಕಾರ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುತ್ತಿದೆ. 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಯಥಾಸ್ಥಿತಿ ಮುಂದುವರಿಸುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಗೊಂದಲಕ್ಕೆ ಸಿಲುಕಿದೆ. ಹೀಗಾಗಿ ಜೂನ್ 20 ವರೆಗೂ ಶಿಕ್ಷಕರಿಗೆ ವರ್ಕ್ ಫ್ರಮ್ ಹೋಂ ವ್ಯವಸ್ಥೆ ಮುಂದುವರಿಸಿ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಶಿಕ್ಷಕರ ಸಂಘ ಪತ್ರ ಬರೆದು ಮನವಿ ಮಾಡಿದೆ.

    ರಾಜ್ಯ ಸರ್ಕಾರ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದಲ್ಲದೆ ರಾಜ್ಯಾದ್ಯಂತ ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ. ಸೇವೆಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: 25 ದಿನಗಳ ನಂತರ ಸಾರ್ವಜನಿಕ ಸಂಚಾರಕ್ಕೆ ಸಿಎಂ ನಿವಾಸದ ಬಳಿ ರಸ್ತೆ ಓಪನ್

    ಹೀಗಾಗಿ ಲಾಕ್ ಡೌನ್ ಅವಧಿಯು ಮುಗಿಯೋವರೆಗೂ ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟು ಆದೇಶ ಹೊರಡಿಸಬೇಕು ಅಂತ ಕರ್ನಾಟಕ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಮನವಿ ಮಾಡಿಕೊಂಡಿದೆ.

  • ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ಸರ್ಕಾರದಿಂದ ಪ್ಯಾಕೇಜ್ ಘೋಷಣೆ- ಸಿಎಂಗೆ ಬಸವರಾಜ ಹೊರಟ್ಟಿ ಅಭಿನಂದನೆ

    ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ಸರ್ಕಾರದಿಂದ ಪ್ಯಾಕೇಜ್ ಘೋಷಣೆ- ಸಿಎಂಗೆ ಬಸವರಾಜ ಹೊರಟ್ಟಿ ಅಭಿನಂದನೆ

    ಹುಬ್ಬಳ್ಳಿ: ಜಾಗತಿಕ ಮಹಾಮಾರಿ ಕೋವಿಡ್‍ದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ವಿಶೇಷ ಪ್ಯಾಕೇಜ್ ಒದಗಿಸುವಂತೆ ಕಳೆದ ವರ್ಷದಿಂದ ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತಿದ್ದು ತಮ್ಮ ಮನವಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಸಂತಸ ವ್ಯಕ್ತಪಡಿಸಿದರು.

    ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿ ಮಾಡಿದ ಬಿ.ಎಸ್.ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ ಬಸವರಾಜ ಹೊರಟ್ಟಿಯವರು ಕಳೆದ ಬಾರಿಯ ಕೋವಿಡ್ ಸಂದರ್ಭದಿಂದ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ವಿಶೇಷ ಪ್ಯಾಕೇಜ್ ನೀಡಿ ಅವರಿಗೆ ಸರ್ಕಾರ ಸೂಕ್ತ ಸಹಾಯ ಕಲ್ಪಿಸುವಂತೆ ಹಲವು ಬಾರಿ ಒತ್ತಾಯಿಸಿದ್ದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು.


    ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪನವರು, ಮಾನ್ಯ ಸಭಾಪತಿಗಳು ತಮಗೆ ಸಲಹೆ ರೂಪದಲ್ಲಿ ನೀಡಲಾದ ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ. ಸಭಾಪತಿಗಳು ಸೂಚಿಸಿದಂತೆ ಎಲ್ಲಾ ಶಿಕ್ಷಕರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಲಾಗಿದೆ ಹಾಗೂ ಅವರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ತೀವ್ರ ಸಂಕಷ್ಟದಲ್ಲಿರುವ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಸಹಾಯಧನ ನೀಡಬೇಕೆಂದು ತಾವೇ ಮೊದಲ ಬಾರಿಗೆ ನನ್ನನ್ನು ಹಲವಾರು ಬಾರಿ ಖುದ್ದಾಗಿ ಹಾಗೂ ಪತ್ರದ ಮೂಲಕ ಒತ್ತಾಯಿಸಿದ್ದು ತಮ್ಮ ಒತ್ತಾಸೆಯಂತೆ ಕೂಡಲೇ ಸ್ಪಂದಿಸಿ ರೂ. 5 ಸಾವಿರ ಪರಿಹಾರಧನ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ:ಶಿಕ್ಷಣ ಸಚಿವರಿಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ : ಪದವೀಧರ ಶಿಕ್ಷಕರಿಗೆ ಮುಂಬಡ್ತಿ ಕೊಡಲು ಒತ್ತಾಯ

    ಸಭಾಪತಿಗಳು ಈಗಾಗಲೇ ಸೂಚಿಸಿರುವಂತೆ ಎಲ್ಲ ಶಿಕ್ಷಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಸಭಾಪತಿಗಳ ಸಲಹೆಯಂತೆ ಬ್ಲ್ಯಾಕ್ ಫಂಗಸ್‍ದಿಂದ ಬಳಲುತ್ತಿರುವ ರೋಗಿಗಳಿಗೆ ಸರ್ಕರದಿಂದಲೇ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬರುವ ಕೋವಿಡ್ ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳಿಗಾಗುವ ತೊಂದರೆಗಳ ಕುರಿತು ತಜ್ಞರ ಸಮಿತಿ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಬಳಿಕ ಮಾತನಾಡಿದ ಬಸವರಾಜ ಹೊರಟ್ಟಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ಯಾಕೇಜ್ ಘೋಷಿಸಬೇಕು ಹಾಗೂ ಕೋವಿಡ್ ಕರ್ತವ್ಯದ ಸಂದರ್ಭದಲ್ಲಿ ಮರಣ ಹೊಂದಿದ ಶಿಕ್ಷಕರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕೆಂದು ಹಾಗೂ ಸೂಕ್ತ ಪರಿಹಾರ ಘೋಷಿಸುವಂತೆ ಸಲಹೆ ಮಾಡಿದರು. ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದರು.

    ಈಗ ಘೋಷಿಸಿರುವ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ನೀಡಿರುವ ಪ್ಯಾಕೇಜ್‍ನ್ನು ಸ್ವಾಗತಿಸಲಾಗುವೆಂದು ಮುಖ್ಯಮಂತ್ರಿಗಳಿಗೆ ತಿಳಿಸಿದ ಬಸವರಾಜ ಹೊರಟ್ಟಿ ಇಷ್ಟೇ ಪ್ಯಾಕೇಜ್ ಸಾಲದು ಇನ್ನೂ ಹೆಚ್ಚಿನ ಸಹಾಯಧನ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಿದರು. ರಾಜ್ಯದಲ್ಲಿರುವ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಅಗತ್ಯ ಪ್ಯಾಕೇಜ್ ಹಾಗೂ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುವಂತೆ ಮುಖ್ಯಮಂತ್ರಿಗಳೂ ಸೇರಿದಂತೆ ಉಪಮುಖ್ಯಗಳಾದ ಡಾ. ಅಶ್ವತ್ಥನಾಯಾರಾಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರಿಗೂ ಹಲವು ಬಾರಿ ಪತ್ರ ಬರೆದು ಈ ಹಿಂದೆ ಕೋರಿದ್ದಾಗಿ ಮುಖ್ಯಮಂತ್ರಿಗಳಿಗೆ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

  • ಶಿಕ್ಷಣ ಸಚಿವರಿಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ : ಪದವೀಧರ ಶಿಕ್ಷಕರಿಗೆ ಮುಂಬಡ್ತಿ ಕೊಡಲು ಒತ್ತಾಯ

    ಶಿಕ್ಷಣ ಸಚಿವರಿಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ : ಪದವೀಧರ ಶಿಕ್ಷಕರಿಗೆ ಮುಂಬಡ್ತಿ ಕೊಡಲು ಒತ್ತಾಯ

    ಬೆಂಗಳೂರು: ಪದವಿ ಪಡೆದ ಶಿಕ್ಷಕರ ಮುಂಬಡ್ತಿ ಗೊಂದಲ ಬಗೆಹರಿಸುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಪತ್ರ ಬರೆದು ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ (ರಿ) ರಾಜ್ಯ ಘಟಕ, ಧಾರವಾಡ ಇವರು ತಮಗೆ ಸಲ್ಲಿಸಿದ ಮನವಿ ಪತ್ರ ಸಭಾಪತಿಗಲು, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿ.ಇಡಿ. ಪದವಿ ಹೊಂದಿದ ಸುಮಾರು 8 ಸಾವಿರ ಜನ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ಜೇಷ್ಠತಾ ಪಟ್ಟಿ ಪ್ರಕಾರ ಪ್ರೌಢ ಶಾಲಾ ಸಹಶಿಕ್ಷಕರು ಗ್ರೇಡ್-2 ಹುದ್ದೆಗೆ ಬಡ್ತಿ ನೀಡಲಾಗಿದೆ. ಆದರೆ 1 ರಿಂದ 5ನೇ ತರಗತಿ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರು ಅರ್ಹರಲ್ಲ ಎಂದು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶಿಸಿದೆ.

    ಈ ಹಿನ್ನೆಲೆಯಲ್ಲಿ 1 ರಿಂದ 7ನೇ ತರಗತಿ ಬೋಧಿಸಲು 2016ಕ್ಕಿಂತ ಪೂರ್ವದಲ್ಲಿ ನೇಮಕವಾದ ಒಟ್ಟು ಶಿಕ್ಷಕರಲ್ಲಿ 8000ಕ್ಕಿಂತ ಹೆಚ್ಚು ಶಿಕ್ಷಕರು ಪದವೀಧರರಾಗಿದ್ದು ಮುಂಬಡ್ತಿಗಾಗಿ ಕಳೆದ 25-30 ವರ್ಷಗಳಿಂದ ಕಾಯುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾವಾರು ಶೇಕಡಾ 50 ರಷ್ಟು ಅನುಪಾತದಂತೆ ಹುದ್ದೆಗಳಿಗೆ ಬಡ್ತಿ ನೀಡಲಾಗುತ್ತಿದೆ.

    ಮಾನ್ಯ ನ್ಯಾಯಾಲಯದ ಆದೇಶದಂತೆ ಹಿಂಬಡ್ತಿ ಮಾಡಿದಲ್ಲಿ ಕಳೆದ 25-30 ವರ್ಷಗಳಿಂದ 1 ರಿಂದ 7ನೇ ತರಗತಿಗಳ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರೌಢ ಶಾಲಾ ಗ್ರೇಡ್-2 ವೃಂದಕ್ಕೆ ಬಡ್ತಿ ಹೊಂದಿದ ಹಾಗೂ ಬಿ.ಇಡಿ. ಪದವೀಧರ ಶಿಕ್ಷಕರಿಗೆ ಹಾಗೂ ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರು (1-7 ತರಗತಿ) ವೃಂದದ ಶಿಕ್ಷಕರಿಗೂ ಅನ್ಯಾಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಆದ್ದರಿಂದ ಕಾನೂನು ರೀತ್ಯ ಕೆ.ಎ.ಟಿ. ಆದೇಶಕ್ಕೆ ಮೇಲ್ಮನವಿ ಸಲ್ಲಿಸಬೇಕೆಂದು ಹಾಗೂ 2016ಕ್ಕಿಂತ ಪೂರ್ವದಲ್ಲಿ ನೇಮಕಾತಿ ಹೊಂದಿ ಬಿ.ಇಡಿ. ತರಬೇತಿ ಹೊಂದಿದ 1 ರಿಂದ 7ನೇ ತರಗತಿ ವೃಂದದ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರೌಢ ಶಾಲಾ ಸಹಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ಹೊಂದಿದ ಶಿಕ್ಷಕರಿಗೆ ಅನ್ಯಾಯವಾಗದಂತೆ ಪ್ರಸ್ತುತ ಶೇಕಡಾ 50 ರಷ್ಟು ಮುಂಬಡ್ತಿಯನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಮುಂದುವರೆಸುವುದು, ಪದವೀಧರ ಪ್ರೌಢ ಶಾಲಾ ಸಹಶಿಕ್ಷಕರು 6ರಿಂದ 8ನೇ ತರಗತಿ ವೃಂದದ ಶಿಕ್ಷಕರಿಗೆ ಅವರ ವೃಂದ ಬಲದ ಸಂಖ್ಯೆಗೆ ಅನುಗುಣವಾಗಿ ಅನುಪಾತದ ಪ್ರಮಾಣವನ್ನು ಪ್ರತ್ಯೇಕ ನಿಗದಿಪಡಿಸುವುದು. ಪ್ರೌಢ ಶಾಲಾ ಸಹಶಿಕ್ಷಕರು ಗ್ರೇಡ್-2 ವೃಂದದ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಯನ್ನು ತಂದು ಹಾಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕಕ್ಷಕರು (1-7 ಮೂಲ ವೃಂದ) ಮತ್ತು ಪಿ.ಎಸ್.ಟಿ. (1-5) ಪದವೀಧರ ಶಿಕ್ಷಕರಿಗೆ ಅನ್ಯಾಯವಾಗದಂತೆ ಶೇಕಡಾ 50ರಷ್ಟು ಮುಂಬಡ್ತಿ ಅನುಪಾತವನ್ನು 2016ಕ್ಕಿಂತ ಪೂರ್ವದಲ್ಲಿ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರು (1-7 ಮೂಲ ವೃಂದ) ನಿವೃತ್ತಿಯಾಗುವವರೆಗೂ ಮತ್ತು ಅರ್ಹ ಶಿಕ್ಷಕರ ಲಭ್ಯತೆ ಕೊನೆಗೊಳ್ಳುವವರೆಗೂ ಮುಂದುವರೆಸಲು ಕ್ರಮ ವಹಿಸುವಂತೆ ಸಭಾಪತಿಗಳು ಕೋರಿದ್ದಾರೆ.

    ಆದ್ದರಿಂದ ಶಿಕ್ಷಕರ ಸಂಘದ ಮನವಿಯಲ್ಲಿನ ಅಂಶಗಳು ಸಮಂಜಸವಾಗಿದ್ದು ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರೌಢ ಶಾಲಾ ಸಹಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ಹೊಂದಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ಹಿತದೃಷ್ಟಿಯಿಂದ ಅವರಿಗೆ ಹಿಂಬಡ್ತಿಯಾಗದಂತೆ ಸರ್ಕಾರದ ಹಂತದಲ್ಲಿ ಮೇಲ್ಮನವಿ ಸಲ್ಲಿಸಲು ಕ್ರಮ ವಹಿಸುವುದು ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿ ತರಲು ಕ್ರಮ ವಹಿಸಬೇಕೆಂದು ಈ ಮೂಲಕ ಸಭಾಪತಿಗಳು ಒತ್ತಾಯಿದ್ದಾರೆ.

  • ಖಾಸಗಿ ಶಾಲೆ ಸಿಬ್ಬಂದಿಗೆ ಪರಿಹಾರ ಘೋಷಿಸುವಂತೆ ಬಿಜೆಪಿ ಶಾಸಕರ ಒತ್ತಾಯ

    ಖಾಸಗಿ ಶಾಲೆ ಸಿಬ್ಬಂದಿಗೆ ಪರಿಹಾರ ಘೋಷಿಸುವಂತೆ ಬಿಜೆಪಿ ಶಾಸಕರ ಒತ್ತಾಯ

    ತುಮಕೂರು: ಖಾಸಗಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿ ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ಪರಿಹಾರ ಘೋಷಣೆ ಮಾಡುವಂತೆ ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರುಗಳು ಸಿಎಂ ಯಡಿಯೂರಪ್ಪರ ಅವರಿಗೆ ಮನವಿ ಮಾಡಿದ್ದಾರೆ.

    ಇಂದು ಸಿಎಂ ಗೃಹ ಕಚೇರಿಗೆ ಭೇಟಿಕೊಟ್ಟ ತುರುವೇಕೆರೆ ಶಾಸಕ ಮಸಾಲಾ ಜಯರಾಮ್, ನಗರ ಶಾಸಕ ಜ್ಯೋತಿಗಣೇಶ್ ಹಾಗೂ ಶಿರಾ ಶಾಸಕ ರಾಜೇಶ್ ಗೌಡರು ಸಿಎಂಗೆ ಮನವಿ ಪತ್ರ ನೀಡಿದ್ದಾರೆ. ಖಾಸಗಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಲಾಕ್‍ಡೌನ್ ನಿಂದಾಗಿ ಸಂಬಳ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಅಂಥವರ ನೆರವಿಗೆ ಸರ್ಕಾರ ಧಾವಿಸಿ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮನ ಬಂದಂತೆ ಕೊರೊನಾ ಚಿಕಿತ್ಸೆ ನೀಡುವಂತಿಲ್ಲ- ಮಾಧುಸ್ವಾಮಿ

    ಶಾಸಕರುಗಳ ಮನವಿಗೆ ಸ್ಪಂದಿಸಿದ ಸಿಎಂ ಶೀಘ್ರದಲ್ಲೇ ಪರಿಹಾರ ಘೋಷಣೆ ಮಾಡುವ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ಇದರ ಜೊತೆ ತುಮಕೂರು ಜಿಲ್ಲೆಯಲ್ಲಿ ನೇಕಾರರು ದೊಡ್ಡ ಸಂಖ್ಯೆಯಲ್ಲಿ ಇದ್ದು ವ್ಯಾಪಾರ ಇಲ್ಲದೇ ಸಂಕಷ್ಟದಲ್ಲಿ ಇದ್ದಾರೆ. ಅವರಿಗೂ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

  • ಕೊರೊನಾ 2ನೇ ಅಲೆಗೆ ಬೀದರ್‌ನಲ್ಲಿ 55 ಶಿಕ್ಷಕರು ಬಲಿ- ಮೃತರಲ್ಲಿ ಚುನಾವಣೆ ಕೆಲಸಕ್ಕೆ ತೆರಳಿದವರೇ ಹೆಚ್ಚು

    ಕೊರೊನಾ 2ನೇ ಅಲೆಗೆ ಬೀದರ್‌ನಲ್ಲಿ 55 ಶಿಕ್ಷಕರು ಬಲಿ- ಮೃತರಲ್ಲಿ ಚುನಾವಣೆ ಕೆಲಸಕ್ಕೆ ತೆರಳಿದವರೇ ಹೆಚ್ಚು

    ಬೀದರ್: ಕೊರೊನಾ ಎರಡನೇ ಅಲೆಗೆ ಶಿಕ್ಷಕ ವೃಂದ ಅಕ್ಷರಶಃ ಬೆಚ್ಚಿ ಬಿದ್ದಿದೆ. ಗಡಿ ಜಿಲ್ಲೆಯಲ್ಲಿ ಒಟ್ಟು 55 ಜನ ಶಿಕ್ಷಕರು ಡೆಡ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಸಾವನ್ನಪ್ಪಿದ ಶಿಕ್ಷಕರಲ್ಲಿ ಬಹುತೇಕರು ಉಪ ಚುನಾವಣೆ ಹಾಗೂ ನಗರಸಭೆ ಚುನಾವಣೆಗಳಲ್ಲಿ ಭಾಗವಹಸಿದ್ದರು. ಚುನಾವಣೆ ಕೆಲಸದ ವೇಳೆಯೇ ಸೋಂಕು ತಗುಲಿತಾ, ಚುನಾವಣೆಯಿಂದಲೇ ಹೆಚ್ಚು ಶಿಕ್ಷಕರು ಸಾವನ್ನಪ್ಪಿದ್ದಾರಾ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಕಾಡತೊಡಗಿದೆ.

    ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಅನುದಾನಿತ ಶಾಲೆಗಳ ಒಟ್ಟು 48 ಪ್ರೌಢ ಶಾಲಾ ಶಿಕ್ಷಕರು ಹಾಗೂ 7 ಜನ ಪ್ರಾಧ್ಯಾಪಕರು ಕೊರೊನಾಗೆ ಬಲಿಯಾಗಿದ್ದಾರೆ. ಬೀದರ್ ತಾಲೂಕಿನಲ್ಲಿ 16, ಬಸವಕಲ್ಯಾಣದಲ್ಲಿ 15, ಭಾಲ್ಕಿಯಲ್ಲಿ 7, ಔರಾದ್ ನಲ್ಲಿ 6, ಹುಮ್ನಬಾದ್ ನಲ್ಲಿ 4 ಶಿಕ್ಷಕರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

    ಕೋವಿಡ್‍ಗೆ ಬಲಿಯಾಗಿರುವ ಬಹುತೇಕ ಶಿಕ್ಷಕಕರು ಏಪ್ರಿಲ್ 17ರಂದು ನಡೆದ ಬಸವಕಲ್ಯಾಣ ಉಪ ಚುನಾವಣೆ ಹಾಗೂ ಏಪ್ರಿಲ್ 27ರಂದು ನಡೆದ ನಗರಸಭೆ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಚುನಾವಣೆಯೇ ಶಿಕ್ಷಕರ ಸಾವಿಗೆ ಕಾರಣವಾಯಿತಾ ಎಂಬ ಪ್ರಶ್ನೆ ಎದ್ದಿದೆ.

    ಈ ಚುನಾವಣೆಗಳು ಯಾರಿಗೆ ಬೇಕಿತ್ತು, ಚುನಾವಣೆಗಳಿಂದಾಗಿಯೇ ಶಿಕ್ಷಕರು ಕೋವಿಡ್‍ಗೆ ಬಲಿಯಾಗಿದ್ದಾರೆ. ಈ ಸಾವುಗಳಿಗೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಸಾವನ್ನಪ್ಪಿದ ಶಿಕ್ಷಕರ ಸಂಖ್ಯೆ ಇನ್ನೂ ಹೆಚ್ಚಿದೆ, ಶಿಕ್ಷಣ ಇಲಾಖೆ ನೈಜ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

  • ಎಲೆಕ್ಷನ್ ಡ್ಯೂಟಿಗೆ ಹಾಜರಾಗಿದ್ದ 2 ಸಾವಿರ ಜನರು ಕೊರೊನಾಗೆ ಬಲಿ – 700ಕ್ಕೂ ಹೆಚ್ಚು ಶಿಕ್ಷಕರು

    ಎಲೆಕ್ಷನ್ ಡ್ಯೂಟಿಗೆ ಹಾಜರಾಗಿದ್ದ 2 ಸಾವಿರ ಜನರು ಕೊರೊನಾಗೆ ಬಲಿ – 700ಕ್ಕೂ ಹೆಚ್ಚು ಶಿಕ್ಷಕರು

    – ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯ

    ಲಕ್ನೊ: ಚುನಾವಣೆ ಡ್ಯೂಟಿಗೆ ಹಾಜರಾಗಿದ್ದ ಸುಮಾರು ಎರಡು ಸಾವಿರ ಉದ್ಯೋಗಿಗಳು ಕೊರೊನಾಗೆ ಬಲಿಯಾಗಿದ್ದಾರೆ. ಇದರಲ್ಲಿ 700ಕ್ಕೂ ಹೆಚ್ಚು ಜನರು ಶಿಕ್ಷಕರಿದ್ದಾರೆ ಎಂದು ಪತ್ರಿಕೆಯೊಂದು ವರದಿಯಾಗಿದೆ.

    ಕೊರೊನಾ ಎರಡನೇ ಅಲೆಯ ನಡುವೆಯೂ ಉತ್ತರ ಪ್ರದೇಶದಲ್ಲಿ ಪಂಚಾಯ್ತಿ ಚುನಾವಣೆ ನಡೆದಿದೆ. ಆದ್ರೆ ಡ್ಯೂಟಿಗೆ ಹಾಜರಾಗಿದ್ದ ಬಹುತೇಕ ನೌಕರರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸದ್ಯ 706 ಶಿಕ್ಷಕರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಈ ಸಂಖ್ಯೆ ಸಾವಿರದ ಗಡಿ ದಾಟುವ ಆತಂಕವನ್ನ ಶಿಕ್ಷಣ ಇಲಾಖೆ ಹೊರ ಹಾಕಿದೆ.

    ಉತ್ತರ ಪ್ರದೇಶದ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ದಿನೇಶ್ ಚಂದ್ರ ಶರ್ಮಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ 10 ಪುಟಗಳ ದೀರ್ಘವಾದ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಚುನಾವಣೆ ಡ್ಯೂಟಿಗೆ ಹಾಜರಾಗಿ ಕೊರೊನಾದಿಂದ ಸಾವನ್ನಪ್ಪಿರುವ ಜಿಲ್ಲಾವಾರು ಶಿಕ್ಷಕರ ಮಾಹಿತಿಯನ್ನ ಮುಖ್ಯಮಂತ್ರಿಗಳಿಗೆ ನೀಡಲಾಗಿದೆ. ಕಳೆದ ಒಂದು ವಾರದಿಂದ ಶಿಕ್ಷಕರು ಮರಣ ಪ್ರಕರಣಗಳು ಹೆಚ್ಚಾಗುತ್ತಿದೆ. ಕಾರಣ ಚುನಾವಣೆ ಡ್ಯೂಟಿ. ಮೃತ ಕುಟುಂಬಗಳಿಗೆ ಸರ್ಕಾರ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ದಿನೇಶ್ ಚಂದ್ರ ಶರ್ಮಾ ಒತ್ತಾಯಿಸಿದ್ದಾರೆ.

    ಕೊರೊನಾ ಹಿನ್ನೆಲೆ ಬಹುತೇಕ ಸರ್ಕಾರ ಕಚೇರಿಗಳಿಗೆ ಸಿಬ್ಬಂದಿ ಆಗಮಿಸುತ್ತಿಲ್ಲ. ಚುನಾವಣೆ ಡ್ಯೂಟಿ ಮಾಡಿ ಬಂದ ನೌಕರರು ಸ್ವಯಂ ಕ್ವಾರಂಟೈನ್ ನಲ್ಲಿದ್ದಾರೆ. ಇನ್ನು ನಗರಸಭೆಗಳು ಸಿಬ್ಬಂದಿ ಇಲ್ಲದೇ ಖಾಲಿ ಹೊಡೆಯುತ್ತಿವೆ.

  • ಮಂಗಳೂರಲ್ಲಿ ಕೊರೊನಾ ತಾಂಡವ- ಬೆಥನಿ ಶಿಕ್ಷಣ ಸಂಸ್ಥೆಯ 19 ಶಿಕ್ಷಕಿಯರಿಗೆ ಪಾಸಿಟಿವ್

    ಮಂಗಳೂರಲ್ಲಿ ಕೊರೊನಾ ತಾಂಡವ- ಬೆಥನಿ ಶಿಕ್ಷಣ ಸಂಸ್ಥೆಯ 19 ಶಿಕ್ಷಕಿಯರಿಗೆ ಪಾಸಿಟಿವ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಬೆಥನಿ ಶಿಕ್ಷಣ ಸಂಸ್ಥೆಯ 19 ಶಿಕ್ಷಕಿಯರಿಗೆ ಸೋಂಕು ತಗುಲಿದೆ.

    ನಗರದಲ್ಲೇ ಶೇ.70ರಷ್ಟು ಪ್ರಕರಣ ಪತ್ತೆಯಾಗುತ್ತಿವೆ. ನಗರದ ಬೆಂದೂರುವೆಲ್ ನಲ್ಲಿರುವ ಬೆಥನಿ ಎಜ್ಯುಕೇಶನ್ ಸೊಸೈಟಿನ 19 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೀಲ್ ಡೌನ್ ಮಾಡಲಾಗಿದೆ.

    ಇಲ್ಲಿನ ಓರ್ವ ಸಿಸ್ಟರ್ ಗೆ ಪಾಸಿಟಿವ್ ಆಗಿದ್ದ ಹಿನ್ನೆಲೆಯಲ್ಲಿ 90 ಜನರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ 19 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸದ್ಯ ಬೆಥನಿ ಎಜುಕೇಶನ್ ಸೊಸೈಟಿ ಸೇರಿ ಇತರೆ ಸಂಸ್ಥೆಗಳನ್ನು ಸೀಲ್‍ಡೌನ್ ಮಾಡಿದ್ದು, ಸೋಂಕಿತರನ್ನು ಕಾನ್ವೆಂಟ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಬೆಂದೂರ್ ವೆಲ್ ಚರ್ಚ್ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಈ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.

  • ಹಳ್ಳಿಯಲ್ಲಿ ಚಂದಾ ಎತ್ತಿ ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಹೊಡೆಸಿದ ಶಿಕ್ಷಕರು

    ಹಳ್ಳಿಯಲ್ಲಿ ಚಂದಾ ಎತ್ತಿ ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಹೊಡೆಸಿದ ಶಿಕ್ಷಕರು

    – ದೇವಸ್ಥಾನಕ್ಕೆ ಮೀಸಲಿಟ್ಟಿದ್ದ ಹಣ ನೀಡಿದ ಗ್ರಾಮಸ್ಥರು

    ಚಿಕ್ಕಮಗಳೂರು: ಸರ್ಕಾರಿ ಶಾಲೆ ಇಂದೋ, ನಾಳೆಯೋ ಎನ್ನುತ್ತಿದೆ ಹೀಗೆ ಬಿಟ್ಟರೆ ಆಗುವುದಿಲ್ಲ ಎಂದು ಹಳ್ಳಿಗರ ಸಹಕಾರದಲ್ಲಿ ಶಿಕ್ಷಕರು ಗ್ರಾಮಸ್ಥರ ನೆರವಿನಿಂದ ಪ್ರತಿ ಮನೆಯಿಂದ ಚಂದಾ ಎತ್ತಿ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ್ದಾರೆ. ತಾಲೂಕಿನ ಗಡಿಗ್ರಾಮ ಸಿರಿಬಡಿಗೆ ಶಾಲೆಯೇ ಶಿಕ್ಷಕರಿಂದ ಮರುಜನ್ಮ ಪಡೆದ ಶಾಲೆ. 1 ರಿಂದ 7ನೇ ತರಗತಿವರೆಗಿನ ಈ ಶಾಲೆಯಲ್ಲಿ ಪ್ರಸ್ತುತ 48 ಮಕ್ಕಳಿದ್ದಾರೆ. ಕೊರೊನಾ ಬಳಿಕ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಸುಮಾರು 20 ಮಕ್ಕಳು ಈಗ ಈ ಶಾಲೆಗೆ ಸೇರಿದ್ದಾರೆ. ಎಂಟು ಕೊಠಡಿಗಳಿವೆ. ಆದರೆ ಶಾಲೆಯ ಮೇಲ್ಛಾವಣಿ ಸಂಪೂರ್ಣ ಹಾಳಾಗಿತ್ತು. ಹೆಂಚುಗಳೂ ಒಡೆದು ಹೋಗಿದ್ದವು. ಶಾಲೆ ಕಳೆದ ಎಂಟು ವರ್ಷಗಳಿಂದ ಸುಣ್ಣ-ಬಣ್ಣ ಕಂಡಿರಲಿಲ್ಲ. ಹಾಗಾಗಿ ಸಿ.ಆರ್.ಪಿ. ಹಾಗೂ ಎಸ್.ಡಿ.ಎಂ.ಸಿ. ಮೀಟಿಂಗ್‍ನಲ್ಲಿ ಶಿಕ್ಷಕರು ಹಾಗೂ ಗ್ರಾಮಸ್ಥರು ಮಾತುಕತೆಯಲ್ಲಿ ಶಾಲೆಗೆ ಹೊಸ ರೂಪ ನೀಡಿಲು ತೀರ್ಮಾನ ಕೈಗೊಂಡಿದ್ದಾರೆ.

    ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ತೀರ್ಮಾನದಂತೆ ಶಾಲೆಗೆ ಪುನರ್ಜನ್ಮ ಸಿಕ್ಕಿದೆ. ಊರಿನ ಮುಖಂಡರು ನಾವು ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ನಮ್ಮೂರ ಶಾಲೆ ನಮ್ಮೂರ ದೇವಸ್ಥಾನವಿದ್ದಂತೆ ಎಂದು ಹಳ್ಳಿಗರು ಸಂಪೂರ್ಣ ಬೆಂಬಲ ನೀಡಿದ ಪರಿಣಾಮ ಅವನತಿಯ ಅಂಚಿನಲ್ಲಿದ್ದ ಸರ್ಕಾರಿ ಶಾಲೆ ಇಂದು ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಗ್ರಾಮದಲ್ಲಿ ಚಂದಾ ಎತ್ತಿದ ಹಣದಿಂದ ಶಾಲೆಯ ಮೇಲ್ಛಾವಣಿ ದುರಸ್ತಿ ಮಾಡಿ ಇಡೀ ಶಾಲೆಗೆ ಬಣ್ಣ ಹೊಡೆಸಿ ಮಕ್ಕಳು ಕೂರಲು ಕುರ್ಚಿ-ಮೇಜಿನ ವ್ಯವಸ್ಥೆ ಮಾಡಿದ್ದಾರೆ. ಶಿಕ್ಷಕರಿಗೆ ಮಕ್ಕಳು ಹಾಗೂ ಶಾಲೆ ಮೇಲಿರೋ ಪ್ರೀತಿಗೆ ಸ್ಥಳೀಯರು ಕೂಡ ಅವರ ಕಾರ್ಯಕ್ಕೆ ಕೈಜೋಡಿದ್ದಾರೆ.

    ಎರಡೇ ಗಂಟೆಗೆ 35 ಸಾವಿರ ಸಂಗ್ರಹ : ಊರಿನ ಮುಖಂಡರ ಜೊತೆ ಗ್ರಾಮದಲ್ಲಿ ಹೊರಟ ಶಿಕ್ಷಕರಿಗೆ ಹಳ್ಳಿಯ ಸಹೃದಯಿಗಳು ಎರಡೇ ಗಂಟೆಗೆ 35 ಸಾವಿರ ಹಣ ನೀಡಿದ್ದಾರೆ. ಯಾರ ಮನೆ ಬಾಗಿಲಿಗೆ ಹೋದರೂ ಯಾರೂ ಕೂಡ ಬರಿಗೈಲಿ ಕಳಿಸಿಲ್ಲ. ತಮ್ಮ ಶಕ್ತಿಗನುಸಾರವಾಗಿ 100 ರಿಂದ 1000 ರೂಪಾಯಿವರೆಗೆ ಹಣ ನೀಡಿದ್ದಾರೆ. ಕೆಳಗಿನ ಸಿರಿಬಡಿಗೆ, ಮೇಲಿನ ಸಿರಿಬಡಿಗೆ ಎರಡೂ ಏರಿಯಾವನ್ನೂ ಸುತ್ತುವಷ್ಟರಲ್ಲಿ ಗ್ರಾಮಸ್ಥರ ಕೈಯಲ್ಲಿ 35 ಸಾವಿರ ಹಣವಿತ್ತು. ಆ ಹಣವನ್ನ ಗ್ರಾಮಸ್ಥರು ಶಿಕ್ಷಕರು ಕೈಗೆ ನೀಡಿದ್ದಾರೆ. ಆ ಹಣಕ್ಕೆ ಶಿಕ್ಷಕರು ತಾವೂ ಒಂದಿಷ್ಟು ಹಣ ಸೇರಿಸಿ ಶಾಲೆಗೆ ಹೊಸ ಭಾಷ್ಯ ಬರೆದಿದ್ದಾರೆ.

    ದೇವಸ್ಥಾನಕ್ಕೆ ಇಟ್ಟಿದ್ದ ಹಣವನ್ನೂ ಕೊಟ್ರು : ಗ್ರಾಮದಲ್ಲಿ ಎರಡು ಎಕರೆ ಗ್ರಾಮ ಠಾಣಾ ಜಾಗವಿತ್ತು. ಅದು ಪಾಳು ಬಿದ್ದಿತ್ತು. ಪಾಳು ಬೀಳೋದು ಯಾಕೆಂದು ಅದನ್ನ 11 ಸಾವಿರಕ್ಕೆ ಗುತ್ತಿಗೆ ನೀಡಿದ್ದರು. ಆ ಹಣವನ್ನ ಕೆಳಗಿನ ಸಿರಿಬಡಿಗೆ ಹಾಗೂ ಮೇಲಿನ ಸಿರಿಬಡಿಗೆ ಗ್ರಾಮದಲ್ಲಿನ ದೇವರಿಗೆಂದು ತಲಾ 5,500 ರೂ. ಹಣವನ್ನ ಹಂಚಿಕೊಂಡು ದೇವಸ್ಥಾನದ ಅಭಿವೃದ್ಧಿಗೆಂದು ಮೀಸಲಿಟ್ಟಿದ್ದರು. ಶಾಲೆಗೆ ಸುಣ್ಣ-ಬಣ್ಣ ಹೊಡೆಸುತ್ತಾರೆಂದು ಎರಡು ಏರಿಯಾದ ಜನರೂ ಮಾತನಾಡಿಕೊಂಡು ಆ ಹಣವನ್ನ ಹಾಗೆಯೇ ತಂದು ಶಿಕ್ಷಕರ ಕೈಗಿಟ್ಟಿದ್ದಾರೆ. ದೇವರ ಅಭಿವೃದ್ಧಿಗೆಂದು ಇಟ್ಟಿದ್ದ ಹಣ ಶಾಲೆಯ ಅಭಿವೃದ್ಧಿಗೆ ಸೇರಿತು. ನಮ್ಮೂರ ದೇವಸ್ಥಾನ ಹಾಗೂ ನಮ್ಮ ಮಕ್ಕಳು ಓದೋ ಶಾಲೆ ಎರಡೂ ನಮಗೆ ಬೇರೆ-ಬೇರೆ ಅಲ್ಲ ಅನ್ನೋದು ನಮ್ಮ ಭಾವನೆ ಅಂತಾರೆ ಊರಿನ ಮುಖಂಡರು.

    ಸರ್ಕಾರದಿಂದ ಹಣವಿಲ್ಲ : ಶಾಲಾ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಅನುದಾನವಿಲ್ಲ. ಈ ಹಿಂದೆ ವರ್ಷಕ್ಕೆ ಆರು ಸಾವಿರ ಹಣ ಬರುತ್ತಿತ್ತು. ಅದು ಎರಡು ಕಂತಿನಲ್ಲಿ ಮೂರು-ಮೂರು ಸಾವಿರ ಬರುತ್ತಿತ್ತು. ಆ ಹಣ ಸಾಲುತ್ತಿರಲಿಲ್ಲ. ಕಳೆದೊಂದು ವರ್ಷದಿಂದ ಕೊರೊನಾ ಕಾಲದಲ್ಲಿ ಆ ಹಣವೂ ಬಂದಿಲ್ಲ. ಹಾಗಾಗಿ, ಸ್ಥಳೀಯರು ಹಾಗೂ ಶಿಕ್ಷಕರೇ ಮಾತನಾಡಿಕೊಂಡು ಊರಲ್ಲಿ ಮನೆ-ಮನೆಯಿಂದ ಚಂದಾ ಎತ್ತಿ ತಮ್ಮೂರಿನ ಶಾಲೆಗೆ ಸುಣ್ಣ-ಬಣ್ಣ ಹೊಡೆಸಿ ಹೊಸ ರೂಪ ನೀಡಿದ್ದಾರೆ. ಸ್ಥಳೀಯರ ಈ ಕಾರ್ಯಕ್ಕೆ ಶಿಕ್ಷಣ ಇಲಾಖೆ ಕೂಡ ಶ್ಲಾಘನೆ ವ್ಯಕ್ತಪಡಿಸಿ, ಹಳ್ಳಿಗರ ಈ ಹೃದಯ ಶ್ರೀಮಂತಿಕೆಗೆ ಅಭಿನಂದನೆ ಸಲ್ಲಿಸಿದೆ.