Tag: teachers

  • ಶಾಲಾ ಪ್ರವಾಸದ ವೇಳೆ ಮಲ್ಪೆ ಬೀಚ್‍ನಲ್ಲಿ ಫಿಟ್ಸ್ ಬಂದು ಬಾಲಕ ಸಾವು- ಮುಗಿಲುಮುಟ್ಟಿದ ಪೋಷಕರ ಆಕ್ರಂದನ

    ಶಾಲಾ ಪ್ರವಾಸದ ವೇಳೆ ಮಲ್ಪೆ ಬೀಚ್‍ನಲ್ಲಿ ಫಿಟ್ಸ್ ಬಂದು ಬಾಲಕ ಸಾವು- ಮುಗಿಲುಮುಟ್ಟಿದ ಪೋಷಕರ ಆಕ್ರಂದನ

    ಉಡುಪಿ: ಪ್ರವಾಸಕ್ಕೆಂದು ಮಲ್ಪೆ ಬೀಚ್ ಗೆ ಬಂದು ಬಾಲಕನೊಬ್ಬ ಮೃತಪಟ್ಟ ಆಘಾತಕಾರಿ ಘಟನೆಯೊಂದು ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ಮಂಜುನಾಥ್(14) ಎಂದು ಗುರುತಿಸಲಾಗಿದೆ. ಈತ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಲಿವಣ ಗ್ರಾಮದ ನಿವಾಸಿ ಎಂಬುದಾಗಿ ತಿಳಿದುಬಂದಿದೆ. ಜಿಲ್ಲೆಯ ಶಾಲೆಯೊಂದರಿಂದ ಉಡಪಿಯ ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಬೀಚ್ ಬದಿಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲಕನಿಗೆ ಫಿಟ್ಸ್ ಬಂದು ಏಕಾಏಕಿ ಬಿದ್ದು ಮರಳಲ್ಲಿ ಒದ್ದಾಡಿದ್ದಾನೆ.

    ಕೂಡಲೇ ಎಚ್ಚೆತ್ತ ಶಿಕ್ಷಕರು ಆತನನ್ನು ಆಸ್ಪತ್ರೆಗೆ ಕೊಂಡೊಯ್ದರಾದ್ರೂ, ಅದಾಗಲೇ ಬಾಲಕ ಮೃತಪಟ್ಟದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಬಾಲಕನ ಮೃತದೇಹವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದೆ. ಬಾಲಕನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

     

  • ನಕಲಿಗೆ ಅವಕಾಶ ಕೊಟ್ಟ 7 ದಾವಣಗೆರೆ ಶಿಕ್ಷಕರು ಅಮಾನತು

    ನಕಲಿಗೆ ಅವಕಾಶ ಕೊಟ್ಟ 7 ದಾವಣಗೆರೆ ಶಿಕ್ಷಕರು ಅಮಾನತು

    ದಾವಣಗೆರೆ: ಪ್ರಾಥಮಿಕ ಶಾಲೆಯ ಸಿಎಸ್‍ಎಎಸ್ ಪರೀಕ್ಷೆಯಲ್ಲಿ ಸಾಮೂಹಿಕವಾಗಿ ನಕಲು ಮಾಡಿಸಿದ್ದ 7 ಮಂದಿ ಶಿಕ್ಷಕರನ್ನು ದಾವಣಗೆರೆ ಡಿಡಿಪಿಐ ಅಮಾನತು ಮಾಡಿ ಖಡಕ್ ಆದೇಶ ಹೊರಡಿಸಿದ್ದಾರೆ.

    ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಸೇವಾನಗರ ಶಾಲೆಯಲ್ಲಿ ಶಿಕ್ಷಕರು ಸಾಮೂಹಿಕ ನಕಲು ಮಾಡಿಸಿದ್ದರು. ನಕಲು ಮಾಡಿಸುತ್ತಿದ್ದ ವೀಡಿಯೋ ವೈರಲ್ ಆದ ಹಿನ್ನಲೆ ಡಿಡಿಪಿಐ ಕೋದಂಡರಾಮ ಅವರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಪ್ರಕಟಿಸಿದ್ದಾರೆ.

    ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರುಕ್ಮಿಣಿ, ಸಹ ಶಿಕ್ಷಕರಾದ ಅಂಗಡಿ ಶಾಂತಪ್ಪ, ಮಮತಾ, ಪರಮೇಶ್ವರನಾಯ್ಕ, ಹನುಮಂತಪ್ಪ, ಮಹದೇವಮ್ಮ ಮತ್ತು ಲಲಿತಾಬಾಯಿ ಅಮಾನತುಗೊಂಡವರು ಎಂದು ತಿಳಿದುಬಂದಿದೆ. 4 ರಿಂದ 7 ನೇ ತರಗತಿ ಮಕ್ಕಳ ಕಲಿಕಾ ಗುಣಮಟ್ಟ ತಿಳಿದುಕೊಳ್ಳಲು ನಡೆಸುವ ಪರೀಕ್ಷೆ ಇದಾಗಿದ್ದು, ಇದರಲ್ಲಿ ನಮ್ಮ ಶಾಲೆಯಿಂದ ಉತ್ತಮ ಫಲಿತಾಂಶ ಬರಲಿ ಎನ್ನುವ ನಿಟ್ಟಿನಲ್ಲಿ ಶಿಕ್ಷಕರೇ ನಕಲು ಮಾಡಿಸಿದ್ದರು ಎನ್ನಲಾಗಿದೆ.

    ಸಾರ್ವಜನಿಕ ದೂರಿನನ್ವಯ ಡಿಡಿಪಿಐರವರು ನಾಗರಿಕ ಸೇವಾ ನಿಯಮಾವಳಿ 1957 ರ ನಿಯಮ 3 (123) ಹಾಗೂ ರಾಜ್ಯ ಕಾಪಿ ನಿಯಂತ್ರಣ ಕಾಯ್ದೆ ಉಲ್ಲಂಘನೆ ಪ್ರಕಾರ ಕ್ರಮ ಕೈಗೊಂಡಿದ್ದಾರೆ.

  • ತಡವಾಗಿ ಸ್ಕೂಲ್ ಫೀಸ್ ಕಟ್ಟಿ ಫೈನ್ ಕಟ್ಟಿಲ್ಲವೆಂದು ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗೆ ಕೂರಿಸಿದ ಶಿಕ್ಷಕರು

    ತಡವಾಗಿ ಸ್ಕೂಲ್ ಫೀಸ್ ಕಟ್ಟಿ ಫೈನ್ ಕಟ್ಟಿಲ್ಲವೆಂದು ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗೆ ಕೂರಿಸಿದ ಶಿಕ್ಷಕರು

    ಹೈದರಾಬಾದ್: ಶಾಲೆಯ ಫೀಸ್ ಕಟ್ಟಲು ಪೋಷಕರು ಲೇಟ್ ಮಾಡಿದ ಕಾರಣ ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗಡೆ ಕೂರಿಸಿರುವ ಅಮಾನವೀಯ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಸಿರಿಲಿಂಗಮ್‍ಪಲ್ಲಿಯ ಎಂಎನ್‍ಆರ್ ಎಂಬ ಖಾಸಗಿ ಶಾಲೆಯಲ್ಲಿ ನಡೆದಿದೆ.

    ಶಿಕ್ಷಕರು ಇಬ್ಬರು ವಿದ್ಯಾರ್ಥಿನಿಯರು ಮತ್ತು ಓರ್ವ ವಿದ್ಯಾರ್ಥಿಯನ್ನು ಶಾಲೆಯ ಕಾರಿಡಾರ್ ನಲ್ಲಿ ಯೇ ಕೂರಿಸಿದ್ದಾರೆ. ಮಕ್ಕಳು 7 ಮತ್ತು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬರೋಬ್ಬರಿ ಮೂರು ಗಂಟೆಗಳ ಕಾಲ ಹೊರಗಡೆ ಕುಳಿತಿದ್ದಾರೆ. ಈ ಮಕ್ಕಳು ಶಾಲೆಯ ಫೀಸ್ ತಡವಾಗಿ ಕಟ್ಟಿದ್ದು, ಇದಕ್ಕೆ ಫೈನ್ ಹಾಕಲಾಗಿತ್ತು. ಆದ್ರೆ ಫೈನ್ ಹಣ ಕಟ್ಟಿಲ್ಲವೆಂದು ಈ ರೀತಿ ಶೀಕ್ಷೆ ನೀಡಿದ್ದಾರೆ ಎಂದು ವರದಿಯಾಗಿದೆ.

    ಮಕ್ಕಳನ್ನ ಈ ರೀತಿ ತರಗತಿಯಿಂದ ಹೊರಗೆ ಕೂರಿಸಿದ್ದು ಮಾನಸಿಕ ಅವಮಾನ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಮಕ್ಕಳ ಹಕ್ಕುಗಳ ಸಂಘದವರಾದ ಅಚ್ಯುತ್ ರಾವ್ ತಿಳಿಸಿದ್ದಾರೆ.

    ಈ ಕುರಿತು ರಂಗಾರೆಡ್ಡಿ ಜಿಲ್ಲೆಯ ಶಿಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ಎಂಎನ್‍ಆರ್ ಶಾಲೆ ಮಕ್ಕಳ ಹಕ್ಕುಗಳನ್ನ ಉಲ್ಲಂಘನೆ ಮಾಡಿದೆ. ಈ ಕುರಿತು ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಒತ್ತಾಯಿಸಿದ್ದೇವೆ ಎಂದು ಅಚ್ಯುತ್ ರಾವ್ ಹೇಳಿದ್ದಾರೆ.

  • 12ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಶಾಲೆಯ ನಿರ್ದೇಶಕ, ಶಿಕ್ಷಕನಿಂದ ಗ್ಯಾಂಗ್ ರೇಪ್

    12ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಶಾಲೆಯ ನಿರ್ದೇಶಕ, ಶಿಕ್ಷಕನಿಂದ ಗ್ಯಾಂಗ್ ರೇಪ್

    ಜೈಪುರ: ಶಾಲಾ ನಿರ್ದೇಶಕ ಮತ್ತು ಶಿಕ್ಷಕ ಇಬ್ಬರು ಸೇರಿ 12 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿರುವುದಲ್ಲದೇ ಗರ್ಭಪಾತ ಮಾಡಿಸಿರುವಂತಹ ಹೃದಯ ಕಲಕುವಂತಹ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.

    ಸಿಕರ್ ಜಿಲ್ಲೆಯ ಜನತಾ ಬಾಲ್ ನಿಕೇತನ್ ಶಾಲೆಯ ನಿರ್ದೇಶಕ ಜಗದೀಶ್ ಮತ್ತು ಶಿಕ್ಷಕ ಜಗತ್ ಸಿಂಗ್ ಸೇರಿ ಈ ಕೃತ್ಯವನ್ನು ಮಾಡಿದ್ದಾರೆ. ಸದ್ಯಕ್ಕೆ ಜಿಲ್ಲೆಯ ಅಜೀತ್‍ಗಢ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.

    ಏನಿದು ಪ್ರಕರಣ?: ಜನತಾ ಬಾಲ್ ನಿಕೇತನ್ ಶಾಲೆಯ 12 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಈ ಇಬ್ಬರು ಆರೋಪಿಗಳು ಅತ್ಯಾಚಾರ ಮಾಡಿದ್ದಾರೆ. ಯಾವಾಗ ಆರೋಪಿಗಳಿಗೆ ಆಕೆ ಗರ್ಭಿಣಿ ಎಂದು ತಿಳಿಯಿತೋ ತಕ್ಷಣ ಆಕೆಯನ್ನು ಶಾಹಪುರ ಪ್ರದೇಶದ ಖಾಸಗಿ ಆಸ್ಪತ್ರೆಗೆ ಕರೆದಕೊಂಡು ಹೋಗಿ ಗರ್ಭಪಾತ ಮಾಡಿಸಿ ಮನೆಗೆ ಕಳುಹಿಸಿದ್ದಾರೆ.

    ಮನೆಗೆ ಹೋದ ಬಳಿಕ ಅತಿಯಾದ ರಕ್ತಸ್ರಾವದಿಂದ ಹುಡುಗಿ ಬಳಲಾರಂಭಿಸಿದ್ದಾಳೆ, ಅದನ್ನು ಗಮನಿಸಿದ ಪೋಷಕರು ತಕ್ಷಣ ಅಜೀತ್‍ಗಢನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ವೈದ್ಯರು ಪರೀಕ್ಷಿಸಿ ಗರ್ಭಪಾತ ಚಿಕಿತ್ಸೆಯನ್ನು ಮಾಡಿಸಿದ್ದಾರೆ ಎಂದು ಕುಟುಂಬಕ್ಕೆ ತಿಳಿಸಿದ್ದಾರೆ. ಪೋಷಕರು ಆರೋಪಿಗಳ ಬಗ್ಗೆ ಮಾಹಿತಿ ತಿಳಿದು ಪೋಲಿಸರಿಗೆ ದೂರು ನೀಡಿದ್ದಾರೆ. ಈ ವಿಚಾರ ತಿಳಿದು ಆರೋಪಿಗಳು ನಾಪತ್ತೆಯಾಗಿದ್ದಾರೆ.

    ಹುಡುಗಿಯ ಆರೋಗ್ಯದಲ್ಲಿ ಯಾವ ಚೇತರಿಕೆ ಕಂಡುಬಾರದ ಕಾರಣ ಆಕೆಯನ್ನು ಜೈಪುರ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯಕ್ಕೆ ಚಿಕಿತ್ಸೆ ಮುಂದುವರಿಯುತ್ತಿದೆ.

  • ಮಕ್ಕಳಿಗೆ ಹೈಟೆಕ್ ಶಿಕ್ಷಣ, ಮಾದರಿ ಶಾಲೆಯನ್ನಾಗಿಸಿದ ಟೀಚರ್ಸ್- ಇದು ಟೀಚರ್ಸ್ ಡೇ ಸ್ಪೆಷಲ್

    ಮಕ್ಕಳಿಗೆ ಹೈಟೆಕ್ ಶಿಕ್ಷಣ, ಮಾದರಿ ಶಾಲೆಯನ್ನಾಗಿಸಿದ ಟೀಚರ್ಸ್- ಇದು ಟೀಚರ್ಸ್ ಡೇ ಸ್ಪೆಷಲ್

    ಹಾವೇರಿ: ಇಂದು ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ 129ನೇ ಜನ್ಮದಿನ. ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಂದ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗ್ತಿದೆ. ಆದ್ರೆ ಹಾವೇರಿಯ ಹಿರೇಕೆರೂರು ತಾಲೂಕಿನ ಹೊಸಕಟ್ಟಿ ಗ್ರಾಮದ ಶಿಕ್ಷಕರು ಎಲ್ಲರಿಗೂ ಮಾದರಿಯಾಗಿದ್ದಾರೆ.

    ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಾಮಿಕ ಶಾಲೆಯ ವಿಶೇಷ ಅಂದ್ರೆ ಎಲ್ಲಾ ಮಕ್ಕಳಿಗೆ ಡಿಜಿಟಲ್ ಶಿಕ್ಷಣದ ಜೊತೆಗೆ ಸ್ಮಾರ್ಟ್ ಕ್ಲಾಸ್‍ಗಳಾಗಿವೆ. ಕಳೆದ ವರ್ಷ 130 ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಇದೀಗ 230ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

    ಕೇವಲ ಒಂದು ವರ್ಷದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಶಾಲೆಯ 9 ಜನ ಶಿಕ್ಷಕರ ಆಸಕ್ತಿ ಕಾರಣವಾಗಿದೆ. ಶಾಲೆಯಲ್ಲಿ ಬೋಧನ ಮಟ್ಟ ಸುಧಾರಣೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಉತ್ಸಾಹ ತುಂಬುತ್ತಿದ್ದಾರೆ. ಶನಿವಾರ ಮತ್ತು ಭಾನುವಾರವೂ ಒಬ್ಬೊಬ್ಬ ಶಿಕ್ಷಕರು ಮಕ್ಕಳಿಗೆ ವಿಶೇಷ ಪಾಠ ಪ್ರವಚನ ಮಾಡುತ್ತಾರೆ.

    ಶಿಕ್ಷಕರ ಈ ಕಾರ್ಯಕ್ಕೆ ಗ್ರಾಮಸ್ಥರೂ ಸಾಥ್ ನೀಡಿದ್ದಾರೆ. ಸಭೆ ಕರೆದು ಶಾಲೆಯ ಕುಂದುಕೊರತೆ ಚರ್ಚಿಸಿ, ಮಕ್ಕಳಿಗೆ ಬೇಕಾದ ಕಂಪ್ಯೂಟರ್, ಆಟದ ವಸ್ತುಗಳು, ಪೀಠೋಪಕರಣಗಳನ್ನ ಕೊಡುಗೆಯಾಗಿ ನೀಡಿದ್ದಾರೆ. ಶಿಕ್ಷಕರ ದಿನಾಚರಣೆಯ ಇವತ್ತಿನ ಸುಸಂದರ್ಭದಲ್ಲಿ ಹೊಸಕಟ್ಟಿ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರ ಕಾರ್ಯ ಶ್ಲಾಘನಾರ್ಹವಾಗಿದೆ.

     

  • ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಕೊಪ್ಪಳದಲ್ಲಿ 12 ಸಾವಿರ ಜನರಿಂದ ಬೃಹತ್ ಮಾನವ ಸರಪಳಿ

    ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಕೊಪ್ಪಳದಲ್ಲಿ 12 ಸಾವಿರ ಜನರಿಂದ ಬೃಹತ್ ಮಾನವ ಸರಪಳಿ

    ಕೊಪ್ಪಳ: ಜಿಲ್ಲೆಯನ್ನು ಅಕ್ಟೋಬರ್ 2ರ ಒಳಗಡೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಸಪ್ತಾಹ ಜಾಗೃತಿ ಕಾರ್ಯಕ್ರಮದಡಿಯಲ್ಲಿ ಜಿಪಂ ವತಿಯಿಂದ ನಗರದ ಗವಿಮಠ ಮೈದಾನದಲ್ಲಿ ಸುಮಾರು 12 ಸಾವಿರ ಜನರರಿಂದ ಬೃಹತ್ ಮಾನವ ಸರಪಳಿಯನ್ನು ಆಯೋಜಿಸಲಾಯಿತು.

    ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸುಮಾರು ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ಬೃಹತ್ ಮಾನವ ಸರಪಳಿ ಆಯೋಜಿಸಿದ್ದು ವಿಶೇಷವಾಗಿತ್ತು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಅವರು, ಶೌಚಾಲಯ ಜಾಗೃತಿಗೆ ಇಡೀ ದೇಶದಲ್ಲಿಯೇ ವೈವಿದ್ಯಮಯ ಕಾರ್ಯಕ್ರಮಗಳ ಮೂಲಕ ಸಂಚಲನ ಮೂಡಿಸಿದ ಜಿಲ್ಲೆಯಾಗಿದೆ. ಅಲ್ಲದೆ ಶೌಚಾಲಯ ನಿರ್ಮಾಣದಲ್ಲೂ ಕೊಪ್ಪಳ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದು, ಅತಿ ಹೆಚ್ಚು ಶೌಚಾಲಯ ನಿರ್ಮಾಣವಾಗಿದೆ ಎಂದರು.

     

    ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಶೌಚಾಲಯ ನಿರ್ಮಾಣವಾಗಿದ್ದು, ಇನ್ನೂ ಸುಮಾರು 50 ಸಾವಿರ ಶೌಚಾಲಯ ನಿರ್ಮಾಣ ಮಾತ್ರ ಬಾಕಿ ಇದೆ. ಇದುವರೆಗೂ ಶೌಚಾಲಯ ನಿರ್ಮಾಣ ಮಾಡಿಸಿಕೊಳ್ಳದೇ ಇರುವ ಕುಟುಂಬಗಳು ಎರಡು ತಿಂಗಳ ಒಳಗಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಇದಕ್ಕಾಗಿ ಸ್ವಚ್ಛ ಭಾರತ ಅಭಿಯಾನದಲ್ಲಿ ಸಹಾಯಧನವನ್ನು ಸರ್ಕಾರ ನೀಡಲಿದೆ. ಅ.2 ರಂದು ಗಾಂಧಿ ಜಯಂತಿ ಕಾರ್ಯಕ್ರಮವಿದ್ದು, ಸ್ವಚ್ಛ ಭಾರತ ನಿರ್ಮಾಣದ ಕನಸು ಕಂಡಿದ್ದ ಗಾಂಧೀಜಿಯವರ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸಲು ಜಿಲ್ಲಾ ಪಂಚಾಯತಿ ಈ ಗುರಿ ಹಾಕಿಕೊಂಡಿದೆ ಎಂದು ತಿಳಿಸಿದರು.

    ನಗರದ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ದೈಹಿಕ ಶಿಕ್ಷಕರು, ಸಾರ್ವಜನಿಕರು ಸೇರಿದಂತೆ 12 ಸಾವಿರಕ್ಕೂ ಹೆಚ್ಚು ಜನರಿಂದ ಶೌಚಾಲಯ ಜಾಗೃತಿಗಾಗಿ ನಿರ್ಮಿತವಾದ ಮಾನವ ಸರಪಳಿಯ ಅಭೂತಪೂರ್ವ ದೃಶ್ಯ ಎಲ್ಲರ ಗಮನ ಸೆಳೆಯಿತು. ಒಟ್ಟಾರೆ ಕೊಪ್ಪಳ ಜಿಲ್ಲೆಯಲ್ಲಿ ಶೌಚಾಲಯ ಜಾಗೃತಿಗಾಗಿ ಏರ್ಪಡಿಸಲಾಗಿದ್ದ ಬೃಹತ್ ಮಾನವ ಸರಪಳಿ ವಿಶೇಷವಾಗಿದೆ.

    ಶುಕ್ರವಾರದಿಂದ ಆರಂಭಗೊಂಡ ಈ ಜಾಗೃತಿ ಕಾರ್ಯಕ್ರಮ ಅಕ್ಟೋಬರ್ 2 ರವರೆಗೆ ನಡೆಯಲಿದೆ.

     

     

  • ಸರ್ಕಾರಿ ಶಾಲೆಯಲ್ಲಿ ಮಾಂಸಾಹಾರ- ಬಿಸಿಯೂಟದ ಸಾಮಗ್ರಿಗಳನ್ನೇ ಬಳಸಿ ಶಿಕ್ಷಕರ ಭರ್ಜರಿ ಬಾಡೂಟ

    ಸರ್ಕಾರಿ ಶಾಲೆಯಲ್ಲಿ ಮಾಂಸಾಹಾರ- ಬಿಸಿಯೂಟದ ಸಾಮಗ್ರಿಗಳನ್ನೇ ಬಳಸಿ ಶಿಕ್ಷಕರ ಭರ್ಜರಿ ಬಾಡೂಟ

    ಮೈಸೂರು: ಸರ್ಕಾರಿ ಜಾಗದಲ್ಲಿ ಗೋಮಾಂಸ ತಿಂದ ಪ್ರಕರಣ ಮಾಸುವ ಮುನ್ನವೆ ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಮಾಂಸದೂಟ ಪ್ರಕರಣ ನಡೆದಿದೆ. ಸರ್ಕಾರಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರು ಮಾಂಸದೂಟ ಮಾಡಿದ್ದಾರೆ.

    ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಸೆಂಟ್ ಮೇರಿಸ್ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ಶಿಕ್ಷಕರು ಶಾಲೆಯ ಕಚೇರಿಯ ಒಳಗಡೆ ಕುಳಿತು ಮಾಂಸದೂಟ ಸವಿದಿದ್ದಾರೆ. ಬಿಸಿ ಊಟ ತಯಾರಿಸುವ ಸಿಬ್ಬಂದಿಯಿಂದಲೇ, ಬಿಸಿಯೂಟಕ್ಕೆ ಸರ್ಕಾರ ನೀಡುವ ಸಾಮಗ್ರಿಗಳನ್ನು ಬಳಸಿ ಈ ಮಾಂಸದೂಟ ಮಾಡಿಸಲಾಗಿದೆ.

    ಶಾಲೆಯ ಸಿಬ್ಬಂದಿಯೊಬ್ಬರ ವರ್ಗಾವಣೆ ಹಾಗೂ ಇಬ್ಬರು ನೂತನ ಶಿಕ್ಷಕರ ಆಗಮನದ ಅಂಗವಾಗಿ ಈ ಮಾಂಸದೂಟ ಮಾಡಿಸಲಾಗಿದೆ. ಸರ್ಕಾರಿ ಕಚೇರಿ, ಸರ್ಕಾರಿ ಅನುದಾನಿತ ಕಚೇರಿಗಳಲ್ಲಿ ಮಾಂಸದೂಟ ಸೇವಿಸುವಂತಿಲ್ಲ. ಇಂತಹದರಲ್ಲಿ ಹೀಗೆ ಬಿಸಿ ಊಟದ ಸಾಮಗ್ರಿಗಳನ್ನು ಬಳಸಿ ಮಾಂಸದೂಟ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಹೆಚ್.ಡಿ.ಕೋಟೆಯ ಪ್ರೌಢಶಾಲಾ ವ್ಯಾಪ್ತಿಯ ಬಿ.ಆರ್.ಸಿ ಅಧಿಕಾರಿ ಶಶಿಧರ್ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಕುರಿತು ತಾಲೂಕು ಬಿಇಓಗೆ ಮಾಹಿತಿ ನೀಡಿದ್ಧಾರೆ. ಇಂದು ಬಿಇಓ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

  • ಸರ್ಕಾರಿ ಶಾಲೆ ಬಳಿ ವಾಮಾಚಾರ: ಮಕ್ಕಳನ್ನ ಮನೆಗೆ ವಾಪಸ್ ಕರೆದುಕೊಂಡು ಹೋದ ಪೋಷಕರು

    ಸರ್ಕಾರಿ ಶಾಲೆ ಬಳಿ ವಾಮಾಚಾರ: ಮಕ್ಕಳನ್ನ ಮನೆಗೆ ವಾಪಸ್ ಕರೆದುಕೊಂಡು ಹೋದ ಪೋಷಕರು

    ಕೊಪ್ಪಳ: ಸರ್ಕಾರಿ ಶಾಲೆಯಲ್ಲಿ ವಾಮಾಚಾರ ಮಾಡಿರೋದ್ರಿಂದ ವಿದ್ಯಾರ್ಥಿಗಳು ಭಯಭೀತರಾಗಿರೋ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ಶಾಲೆಯ ಬಳಿ ವಾಮಾಚಾರ ಮಾಡಿ ಗೊಂಬೆ ಬಿಸಾಕಿದ್ದಾರೆ. ಅಷ್ಟೇ ಅಲ್ಲದೆ ಕುಡಿಯುವ ನೀರಿನ ಟ್ಯಾಂಕ್‍ನಲ್ಲಿ ಮಾತ್ರೆ ಹಾಕಿದ್ದಾರೆ. ಇದರಿಂದ ಶಿಕ್ಷಕರು ಹಾಗೂ ಪೋಷಕರು ಆತಂಕಗೊಂಡಿದ್ದಾರೆ. ವಾಮಾಚಾರ ಮಾಡಿರೋ ಕಿಡಿಗೇಡಿಗಳ ವಿರುದ್ಧ ಪೋಷಕರು ಮತ್ತು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಶಾಲೆಯಲ್ಲಿ 1 ರಿಂದ 7 ತರಗತಿಯವರೆಗೆ 250 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ವಾಮಾಚಾರ ಮಾಡಿದ್ದರಿಂದ ಪಾಲಕರು ಶಾಲೆ ಬಳಿ ಜಮಾಯಿಸಿದ್ದರು. ತಮ್ಮ ಮಕ್ಕಳನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಿದ್ದಾರೆ .

  • ಮಕ್ಕಳಿಗೆ ಪಾಠ ಮಾಡೋದು ಬಿಟ್ಟು ಶೂಟಿಂಗ್ ನೋಡಲು ಹೋದ ಶಿಕ್ಷಕರು

    ಮಕ್ಕಳಿಗೆ ಪಾಠ ಮಾಡೋದು ಬಿಟ್ಟು ಶೂಟಿಂಗ್ ನೋಡಲು ಹೋದ ಶಿಕ್ಷಕರು

    ವಿಜಯಪುರ: ಮಕ್ಕಳಿಗೆ ಪಾಠ ಮಾಡದೆ ಸಿನಿಮಾ ಶೂಟಿಂಗ್ ನೋಡಲು ತೆರಳಿದ ಬೇಜವಬ್ದಾರಿ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಇಂಡಿ ತಾಲೂಕಿನ ಕೊಟ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಕ್ಲಾಸಿನಲ್ಲಿ ಕುಳ್ಳಿರಿಸಿ, ಶಿಕ್ಷಕರು ತೆಲುಗಿನ `ರಾಮಾ ರಾಮಾ ರೇ’ ಚಿತ್ರದ ಶೂಟಿಂಗ್ ವೀಕ್ಷಿಸಲು ತೆರಳಿದ್ದಾರೆ.

    6 ಜನ ಶಿಕ್ಷಕರ ಪೈಕಿ, 5 ಜನ ಶಿಕ್ಷಕರು ಸಿನಿಮಾ ಶೂಟಿಂಗ್ ನೋಡಲು ತೆರಳಿದ್ದಾರೆ. ಇದರಿಂದ ಕೋಪಗೊಂಡ ಪೋಷಕರು ಕೊಟ್ನಾಳ ಗ್ರಾಮದ ಸರ್ಕಾರಿ ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐದು ಜನ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುಬೇಕು ಹಾಗೂ ಡಿಡಿಪಿಐ ಸ್ಥಳಕ್ಕೆ ಆಗಮಿಸಬೇಕು ಎಂದು ಪೋಷಕರು ಒತ್ತಾಯ ಮಾಡಿದ್ದಾರೆ.