Tag: teachers

  • ಸರ್ಕಾರಿ ಉರ್ದು ಶಾಲೆಯಲ್ಲಿ ಬಿರಿಯಾನಿ ಬಾಡೂಟ

    ಸರ್ಕಾರಿ ಉರ್ದು ಶಾಲೆಯಲ್ಲಿ ಬಿರಿಯಾನಿ ಬಾಡೂಟ

    ದಾವಣಗೆರೆ: ಸರ್ಕಾರಿ ಉರ್ದು ಶಾಲೆಯಲ್ಲಿ ಇಂದು ಬಿರಿಯಾನಿ ಬಾಡೂಟ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಜಿಲ್ಲೆಯ ವಿನೋಬನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಶಿಕ್ಷಕರು ಹಾಗೂ ಪೋಷಕರು ಬಿರಿಯಾನಿ ಮಾಡಿಸಿ ಶಾಲೆಯಲ್ಲೇ ಮಜಾ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಮಾಧ್ಯಮಗಳು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆಯೇ ಬಿರಿಯಾನಿ ಮಾಡಿದ ಪಾತ್ರೆಗಳನ್ನ ಒಂದು ರೂಮಿನಲ್ಲಿ ಇಟ್ಟು ಬೀಗ ಹಾಕಲಾಗಿದೆ.

    ಈ ಸಂಬಂಧಪಟ್ಟ ದೃಶ್ಯವನ್ನ ಸೆರೆ ಹಿಡಿಯಲು ಮುಂದಾದಾಗ ಅಲ್ಲಿನ ಶಿಕ್ಷಕರು ಹಾಗೂ ಪೋಷಕರು ಮಾಧ್ಯಮಗಳ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೇ, ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಉದ್ಧಟತನ ಮೆರೆದಿದ್ದಾರೆ.

  • ಆಟವಾಡುವ ವೇಳೆ ಕಾರಿಗೆ ಹಾನಿಯಾಗಿದ್ದಕ್ಕೆ ವಿದ್ಯಾರ್ಥಿಗಳನ್ನು ಕೋಲು, ಬೆಲ್ಟ್ ನಿಂದ ಹೊಡೆದು, ರೂಮ್‍ನಲ್ಲಿ ಕೂಡಿ ಹಾಕಿದ ಶಿಕ್ಷಕರು!

    ಆಟವಾಡುವ ವೇಳೆ ಕಾರಿಗೆ ಹಾನಿಯಾಗಿದ್ದಕ್ಕೆ ವಿದ್ಯಾರ್ಥಿಗಳನ್ನು ಕೋಲು, ಬೆಲ್ಟ್ ನಿಂದ ಹೊಡೆದು, ರೂಮ್‍ನಲ್ಲಿ ಕೂಡಿ ಹಾಕಿದ ಶಿಕ್ಷಕರು!

    ಛತ್ತೀಸ್‍ಗಢ್: ಶಾಲೆಯ ಆವರಣದಲ್ಲಿ ನಿಲ್ಲಿಸಿದ್ದ ಶಿಕ್ಷಕರ ಕಾರಿನ ಮೇಲೆ ಸಣ್ಣ ಗೀಟು ಹಾಗೂ ನಂಬರ್ ಪ್ಲೇಟ್ ಗೆ ಹಾನಿ ಮಾಡಿದ್ದಕ್ಕೆ ಇಬ್ಬರು ಶಿಕ್ಷಕರು ಮೂವರು ವಿದ್ಯಾರ್ಥಿಗಳನ್ನು ಕೊಣೆಯಲ್ಲಿ ಕೂಡಿಹಾಕಿ ಥಳಿಸಿದ ಘಟನೆ ಛತ್ತೀಸ್‍ಗಢದ ಕೊರಿಯ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಬೈಕುಂಥಪುರ ಪಟ್ಟಣದಲ್ಲಿರುವ ಜವಾಹರ್ ಸರ್ಕಾರಿ ವಸತಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿದ್ದರು. ಈ ವೇಳೆ ಅಲ್ಲಿಯೇ ನಿಲ್ಲಿಸಿದ್ದ ಬಿಪಿ ಗುಪ್ತಾ ಎಂಬ ಶಿಕ್ಷಕನ ಕಾರಿಗೆ ಹಾನಿಯಾಗಿತ್ತು. ಇದರಿಂದ ಸಿಟ್ಟಾದ ಶಿಕ್ಷಕ ತನ್ನ ಸಹೋದ್ಯೋಗಿ ಕುಮಾರ್ ಚಕ್ರವರ್ತಿ ಜೊತೆ ಸೇರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶಾಲೆಯ ಮುಖ್ಯಸ್ಥರ ಬುಧವಾರ ಸಂಜೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಬಿಪಿ ಗುಪ್ತಾ ಮತ್ತು ಕುಮಾರ್ ಚಕ್ರವರ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವೈದ್ಯಕೀಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಶಿಕ್ಷಕರ ಮೇಲೆ 342, 323 ಮತ್ತು 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅವರ ಬಂಧನ ಶೀಘ್ರದಲ್ಲೇ ಮಾಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎಸ್.ಕೆ ಅನಂತ್ ಮಾಹಿತಿ ನೀಡಿದ್ದಾರೆ.

    ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಪೊಲೀಸರು, ಘಟನೆಯಲ್ಲಿ ಶಿಕ್ಷರಿಂದ ಹೊಡೆದ ತಿಂದ ಮೂವರು ವಿದ್ಯಾರ್ಥಿಗಳು 12 ವರ್ಷದವರಾಗಿದ್ದು, ಶಿಕ್ಷಕರು ಶಾಲೆಯಲ್ಲಿ ಥಳಿಸಿದ್ದಲ್ಲದೇ ಕ್ಯಾಂಪಸ್‍ನಲ್ಲೇ ಇರುವ ಅವರ ಅಧಿಕೃತ ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿ ಮಕ್ಕಳಿಗೆ ಕೋಲು ಮತ್ತು ಬೆಲ್ಟ್‍ನಿಂದ ಥಳಿಸಿ ಮೂರು ಗಂಟೆಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

    ಸದ್ಯ ಶಿಕ್ಷಕರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಆದರೆ ಬಂದನ ಮಾಡಿಲ್ಲ. ಘಟನೆ ಬಳಿಕ ಶಿಕ್ಷಕರನ್ನು ಶಾಲೆಯಿಂದ ಅಮಾತನತು ಮಾಡಿ ಆದೇಶ ಮಾಡಲಾಗಿದೆ ಎಂದು ಶಾಲೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

  • ಪ್ರೌಢಶಾಲಾ ಶಿಕ್ಷಕರಿಗೆ ಪರೀಕ್ಷೆ ನಡೆಸಲು ಮುಂದಾಗಿದ್ದ ರೋಹಿಣಿ ಸಿಂಧೂರಿಗೆ ತೀವ್ರ ಹಿನ್ನಡೆ!

    ಪ್ರೌಢಶಾಲಾ ಶಿಕ್ಷಕರಿಗೆ ಪರೀಕ್ಷೆ ನಡೆಸಲು ಮುಂದಾಗಿದ್ದ ರೋಹಿಣಿ ಸಿಂಧೂರಿಗೆ ತೀವ್ರ ಹಿನ್ನಡೆ!

    ಹಾಸನ: ಪ್ರೌಢಶಾಲಾ ಶಿಕ್ಷಕರಿಗೆ ಪರೀಕ್ಷೆ ನಡೆಸಲು ಮುಂದಾಗಿದ್ದ ರೋಹಿಣಿ ಸಿಂಧೂರಿಗೆ ತೀವ್ರ ಹಿನ್ನಡೆಯಾಗಿದೆ. ಜುಲೈ 28ಕ್ಕೆ ಪ್ರೌಢಶಾಲಾ ಶಿಕ್ಷಕರಿಗೆ ಪರೀಕ್ಷೆ ನಡೆಸಲು ಹಾಸನ ಜಿಲ್ಲಾದಿಕಾರಿ ಸಿಂಧೂರಿ ತೀರ್ಮಾನಿಸಿದ್ದರು.

    ಆದ್ರೆ ಡಿಸಿ ನಿರ್ಧಾರಕ್ಕೆ ಈಗ ಸರ್ಕಾರದಿಂದ ಬ್ರೇಕ್ ಬಿದ್ದಿದೆ. ಪರೀಕ್ಷೆ ನಡೆಸದಂತೆ ನಿರ್ದೇಶನ ನೀಡೋದಾಗಿ ಶಿಕ್ಷಣ ಸಚಿವರು ಸದನಕ್ಕೆ ಲಿಖಿತ ಉತ್ತರ ನೀಡಿದ್ದಾರೆ. ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮಗೊಳಿಸಲು ಡಿಸಿ ಸಿಂಧೂರಿ ಶಿಕ್ಷಕರಿಗ ಪರೀಕ್ಷೆ ನಿಗದಿಗೊಳಿಸಿದ್ದರು.

    ಬದಲಾದ ಪಠ್ಯ ಕ್ರಮಕ್ಕೆ ಶಿಕ್ಷಕರು ಹೊಂದಿಕೊಂಡಿರುವ ಬಗ್ಗೆ ಪರಿಶೀಲಿಸಲು ರೋಹಿಣಿ ಸಿಂಧೂರಿ ಈ ಪರೀಕ್ಷೆ ನಡೆಸಲು ಮುಂದಾಗಿದ್ದರು. ಆದರೆ ಈಗ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯ ಶಿಕ್ಷಕರಿಗೆ ನಿಗದಿಯಾಗಿದ್ದ ಪರೀಕ್ಷೆ ರದ್ದಾಗಿದೆ. ವಿಧಾನ ಪರಿಷತ್ ನಲ್ಲಿ ಈ ಬಗ್ಗೆ ಶಿಕ್ಷಣ ಸಚಿವ ಎನ್.ಮಹೇಶ್ ಲಿಖಿತ ಉತ್ತರ ನೀಡಿದ್ದು, ತರಬೇತಿ ಮೂಲಕವೇ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಪರೀಕ್ಷೆಯ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದಾರೆ.

    ಪರೀಕ್ಷೆ ನಡೆಸದಂತೆ ನಿರ್ದೇಶನ ನೀಡಿರುವುದಕ್ಕೆ ಪರಿಷತ್ ಸದಸ್ಯ ಮರಿತಿಬ್ಬೆಗೌಡರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಈ ವೇಳೆ ಉದ್ದೇಶಿತ ಪರೀಕ್ಷೆಯಿಂದ ಶಿಕ್ಷಕರ ಬೋಧನಾ ಆಸಕ್ತಿ ಕಡಿಮೆಯಾಗಲಿದ್ದು, ಶಿಕ್ಷಕರು ಆತಂಕ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆಂದು ಸದಸ್ಯ ಮರಿತಿಬ್ಬೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

  • ಶಾಲೆಯ ಗೋಡೆ ಮೇಲೆ ಅಶ್ಲೀಲ ಪದ- ಮುಜುಗರಕ್ಕೀಡಾದ ವಿದ್ಯಾರ್ಥಿ, ಶಿಕ್ಷಕ ವೃಂದ

    ಶಾಲೆಯ ಗೋಡೆ ಮೇಲೆ ಅಶ್ಲೀಲ ಪದ- ಮುಜುಗರಕ್ಕೀಡಾದ ವಿದ್ಯಾರ್ಥಿ, ಶಿಕ್ಷಕ ವೃಂದ

    ಹಾಸನ: ಶಾಲೆಯ ಗೋಡೆಗಳ ಮೇಲೆ ಶಿಕ್ಷಕರ ವಿರುದ್ಧವೇ ಬರಹಗಳನ್ನು ಬರೆದಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

    ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹುರುಡಿ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾ ದೇಗುಲದಲ್ಲಿ ಅಶ್ಲೀಲ ಶಬ್ಧಗಳ ಬರಹ ವಿದ್ಯಾರ್ಥಿಗಳು, ಶಿಕ್ಷಕರು ಗ್ರಾಮಸ್ಥರು ಮುಜುಗರಕ್ಕೆ ಈಡಾಗುವಂತಾಗಿದೆ.

    ಪ್ರೌಢ ಶಾಲೆಯಾಗಿರುವುದರಿಂದ ವಿದ್ಯಾರ್ಥಿಗಳು ಸಹ ಅಶ್ಲೀಲ ಬರಹಗಳಿಂದ ಪೋಷಕರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದೇ ಶಾಲೆಯ ಇಬ್ಬರು ಶಿಕ್ಷಕರ ನಡುವೆಯ ಕಲಹವಿದ್ದು ಈ ಗೋಡೆ ಬರಹಕ್ಕೆ ಅವರೇ ಕಾರಣ ಎಂದು ಹೇಳಲಾಗಿದೆ.

    ಎರಡು ವರ್ಷಗಳಿಂದ ಶಿಕ್ಷಕರ ನಡುವೆಯ ಕಲಹದಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

  • ಶಾಲಾ ಮಕ್ಕಳಿಗೆ ಪಿಎಸ್‍ಐ ರಿಂದ ವಿಶೇಷ ಕ್ಲಾಸ್ – ಮಕ್ಕಳೊಂದಿಗೆ ಪ್ರಮಾಣ ಸ್ವೀಕರಿಸಿದ ಪೊಲೀಸರು

    ಶಾಲಾ ಮಕ್ಕಳಿಗೆ ಪಿಎಸ್‍ಐ ರಿಂದ ವಿಶೇಷ ಕ್ಲಾಸ್ – ಮಕ್ಕಳೊಂದಿಗೆ ಪ್ರಮಾಣ ಸ್ವೀಕರಿಸಿದ ಪೊಲೀಸರು

    ಬೆಂಗಳೂರು: ಅಂತರರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಶಾಲಾ ಮಕ್ಕಳಿಗೆ, ನೀತಿ ಪಾಠ, ಕಾನೂನು ಸಲಹೆ, ಸಂಚಾರಿ ನಿಯಮಗಳ ಬಗ್ಗೆ ಶಾಲಾ ಮಕ್ಕಳಿಗೆ ವಿಶೇಷ ತರಗತಿ ತೆಗೆದುಕೊಂಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಥಾಮಸ್ ಮೆಮೋರಿಯಲ್ ಶಾಲೆಯಲ್ಲಿ, ಪಟ್ಟಣ ಪಿಎಸ್‍ಐ ಮಂಜುನಾಥ್ ಜಾಗೃತಿ ಮೂಡಿಸಿ ಕಾರ್ಯಕ್ರಮ ನಡೆಸಿದ್ದು, ಮಕ್ಕಳ ಭಾವನೆಗೆ ತಕ್ಕಂತೆ ಮನೆಯಲ್ಲಿ ತಂದೆ ತಾಯಿಯ ಪಾತ್ರ, ಶಾಲೆಯಲ್ಲಿ ಶಿಕ್ಷಕರ ಪಾತ್ರ, ಹೊರಗಡೆ ಸ್ನೇಹಿತ, ಸಾರ್ವಜನಿಕರ ಪಾತ್ರ ಬಹುಮುಖ್ಯವಾದದ್ದು. ಈ ಎಲ್ಲಾ ಪಾತ್ರಗಳಲ್ಲಿ ಒಂದರಲ್ಲಿ ನ್ಯೂನತೆ ಎದುರಾದರೆ ಆ ಮಕ್ಕಳ ಭವಿಷ್ಯಕ್ಕೆ ಕುತ್ತು ಎದುರಾಗಲಿದೆ. ಅಲ್ಲದೆ ಆ ಮಕ್ಕಳು ಕೆಟ್ಟ ಚಟಗಳ ಕಡೆ ಗಮನವರಿಸುವುದು ಸಾಮಾನ್ಯ. ಹೀಗಾಗಿ ಓದಿನ ಜೊತೆ ಸಂಬಂಧಗಳ ಪಾತ್ರ ಅಷ್ಟೇ ಮುಖ್ಯವಾದದ್ದು ಎಂದು ಪಿಎಸ್‍ಐ ಮಂಜುನಾಥ್ ಅವರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.

    ಸತತ ಒಂದು ಗಂಟೆಗಳ ಕಾಲ ಶಾಲಾ ಮಕ್ಕಳಿಗೆ ಅರಿವಿನ ಜಾಗೃತಿಯನ್ನ ಮೂಡಿಸಿದ ಪೊಲೀಸರು. ಬಳಿಕ ಜೊತೆಗೆ ಮಕ್ಕಳ ಜೊತೆ ತಾವು ಕೂಡ ಪ್ರಮಾಣ ಮಾಡುವ ಮೂಲಕ, ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಭಾಗಿಯಾಗಿ ಗಮನ ಸೆಳೆದರು.

  • ಮಗನಿಗಿಟ್ಟ ಹಣದಿಂದ ದತ್ತು ಮಕ್ಕಳಿಗೆ ಭವಿಷ್ಯ- ನೂರಕ್ಕೂ ಹೆಚ್ಚು ಮಂದಿಗೆ ದಾರಿದೀಪವಾದ್ರು ಚಿಕ್ಕೋಡಿಯ ದಂಪತಿ

    ಮಗನಿಗಿಟ್ಟ ಹಣದಿಂದ ದತ್ತು ಮಕ್ಕಳಿಗೆ ಭವಿಷ್ಯ- ನೂರಕ್ಕೂ ಹೆಚ್ಚು ಮಂದಿಗೆ ದಾರಿದೀಪವಾದ್ರು ಚಿಕ್ಕೋಡಿಯ ದಂಪತಿ

    ಚಿಕ್ಕೋಡಿ: ಈ ಕಾಲದಲ್ಲಿ ಹೆತ್ತ ಮಕ್ಕಳನ್ನ ಸಾಕೋಕೇ ಪೋಷಕರು ಒದ್ದಾಡ್ತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಶಿಕ್ಷಕ ದಂಪತಿ, ಶೈಕ್ಷಣಿಕವಾಗಿ ದತ್ತು ಪಡೆದ ಮಕ್ಕಳಿಗೆ ಉನ್ನತ ವ್ಯಾಸಂಗದವರೆಗೆ ಸಹಾಯ ಮಾಡ್ತಿದ್ದಾರೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದ ಡಿ.ಎಸ್.ನಾಡಗೆ ಅನುದಾನಿತ ಪ್ರೌಢ ಶಾಲೆಯಲ್ಲಿ ಶಿಕ್ಷಕರಾದ ಶಕುಂತಲಾ ಮತ್ತು ಜನವಾಡೆ ದಂಪತಿ, ಮಗನ ವಿದ್ಯಾಭ್ಯಾಸಕ್ಕೆ 5ಲಕ್ಷ ಕೂಡಿಟ್ಟಿದ್ದರು. ಆದ್ರೆ, ಮಗ 5ನೇ ತರಗತಿಯಲ್ಲಿ ಪರೀಕ್ಷೆ ಬರೆದು ನವೋದಯ ಶಾಲೆಗೆ ಸೇರಿದನು. ನಂತರ ಆ 5 ಲಕ್ಷವನ್ನ ಇತರೆ ಮಕ್ಕಳನ್ನ ಶೈಕ್ಷಣಿಕವಾಗಿ ದತ್ತು ಪಡೆದು ಸಹಾಯಕ್ಕೆ ವಿನಿಯೋಗಿಸ್ತಿದ್ದಾರೆ. ಕಳೆದ 10 ವರ್ಷಗಳಿಂದ ಈ ಕಾಯಕವನ್ನ ಮುಂದುವರಿಸಿದ್ದಾರೆ.

    ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರ ಪಾಲಕರಿಗೆ ಹೇಳಿ ಸಮವಸ್ತ್ರ, ಪಠ್ಯ ಪುಸ್ತಕ, ಶಾಲೆಯ ಫೀಸ್ ಸೇರಿದಂತೆ ವಿದ್ಯಾರ್ಥಿಯ 3 ವರ್ಷ ವಿದ್ಯಾಭ್ಯಾಸಕ್ಕೆ ತಗಲುವ ಖರ್ಚನ್ನು ಭರಿಸುತ್ತಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಬಡ ಮಕ್ಕಳಿಗೆ ಬದುಕು ರೂಪಿಸಿದ್ದಾರೆ. ಇವರಿಂದ ಸಹಾಯ ಪಡೆದವರು ಈಗ ವಕೀಲರು, ವೈದ್ಯರು ಹಾಗೂ ಎಂಜಿನಿಯರ್‍ಳಗಾಗಿದ್ದಾರೆ.

    ತಮ್ಮ ಮಗನ ಉಜ್ವಲ ಭವಿಷ್ಯಕ್ಕಾಗಿ ಕೂಡಿಟ್ಟ ಹಣದಿಂದ ಇದೀಗ ನೂರಾರು ಮಕ್ಕಳಿಗೆ ದಾರಿದೀಪವಾಗಿದ್ದಾರೆ.

    https://www.youtube.com/watch?v=S0ftceLWfvc

  • ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿ- ಚಾಲಕ, ಮೂವರು ಶಿಕ್ಷಕಿಯರು ಸೇರಿ ನಾಲ್ವರ ದುರ್ಮರಣ

    ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿ- ಚಾಲಕ, ಮೂವರು ಶಿಕ್ಷಕಿಯರು ಸೇರಿ ನಾಲ್ವರ ದುರ್ಮರಣ

    ಕಲಬುರಗಿ: ಸರ್ಕಾರಿ ಬಸ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಶಿಕ್ಷಕಿಯರು, ಚಾಲಕ ಸೇರಿ ಒಟ್ಟು ನಾಲ್ವರು ದುರ್ಮರಣಕ್ಕೀಡಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಜೇವರ್ಗಿ ತಾಲೂಕು ಕ್ರಿಡಾಂಗಣದ ಬಳಿ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಚಿಗರತಿಹಳ್ಳಿ ಸರ್ಕಾರಿ ಶಾಲಾ ಶಿಕ್ಷಕಿ ಆಯೇಷಾ ಸಿದ್ದಿಕಿ, ಫರೀನ್ ಬೇಗಂ ಹಾಗೂ ಯಾಳವಾರ ಸರ್ಕಾರಿ ಶಾಲೆಯ ಸಹರಾ ಕಲತೂನ್  ಹಾಗೂ ಚಾಲಕನನ್ನು 45 ವರ್ಷದ ರುಕ್ಕಯ್ಯ ಎಂದು ಗುರುತಿಸಲಾಗಿದೆ.

    ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಸದ್ಯ ಗಾಯಾಳುಗಳನ್ನು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲಬುರಗಿಯಿಂದ ದಾವಣಗೆರೆ ಕಡೆ ಚಲಿಸುತ್ತಿದ್ದ ಬಸ್ ಚಾಲಕನಿಗೆ ಓವರ್ ಟೈಂ ಡ್ಯೂಟಿಗೆ ಹಾಕಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಅಂತ ಹೇಳಲಾಗುತ್ತಿದೆ.

    ಕಲಬುರಗಿಯಿಂದ ದಾವಣಗೆರೆ ಹಾಗೂ ಯಾದಗಿರಿ ಜಿಲ್ಲೆಯ ಶಹಾಪೂರನಿಂದ ಕಲಬುರಗಿಗೆ ಬರುತ್ತಿದ್ದ ಬಸ್ ಗಳ ಮಧ್ಯೆ ಈ ಅಪಘಾತ ಸಂಭವಿಸಿದೆ. ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಬಸ್ ಚಾಲಕರಿಗೆ ಓವರ್ ಟೈಂ ಡ್ಯೂಟಿಗೆ ಹಾಕುವುದರಿಂದಲೇ ಪದೇ ಪದೇ ಇಂತಹ ಅವಘಡಗಳ ಸಂಭವಿಸುತ್ತಿದೆ ಅಂತ ಅಲ್ಲಿನ ಸಿಬ್ಬಂದಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

    ಈ ಸಂಬಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಕ್ಕಳಿಗೆ ಅನಧಿಕೃತ ರಜೆ ನೀಡಿ ಶಾಲೆಯ ಪಕ್ಕದಲ್ಲೇ ಮದ್ಯದ ಅಮಲಿನಲ್ಲಿ ತೇಲಾಡಿದ ಶಿಕ್ಷಕರು!

    ಮಕ್ಕಳಿಗೆ ಅನಧಿಕೃತ ರಜೆ ನೀಡಿ ಶಾಲೆಯ ಪಕ್ಕದಲ್ಲೇ ಮದ್ಯದ ಅಮಲಿನಲ್ಲಿ ತೇಲಾಡಿದ ಶಿಕ್ಷಕರು!

    ವಿಜಯಪುರ: ಶಾಲಾ ಅವಧಿಯಲ್ಲಿಯೇ ಮಕ್ಕಳಿಗೆ ರಜೆ ನೀಡಿ ಮುಖ್ಯೋಪಾಧ್ಯಾಯ ಹಾಗೂ ಸಹ ಶಿಕ್ಷಕರು ಗುಂಡು-ತುಂಡು ಪಾರ್ಟಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರಕ್ಕಸಗಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ. ಹೆಚ್ ಬಿರಾದಾರ್ ಹಾಗೂ 4 ಜನ ಶಿಕ್ಷಕರು ಜಮೀನೊಂದರಲ್ಲಿ ಪಾರ್ಟಿ ಮಾಡಿದ್ದಾರೆ. ಈ ಘಟನೆ ಜನವರಿ 31 ರಂದು ನಡೆದಿದ್ದು, ಶಿಕ್ಷಕರ ಈ ಆಟಾಟೋಪಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಹಾಗೂ ಪಾಲಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಈ ವೇಳೆ ನಾನು ಸುರಪೂರದ ದೊರೆ. ನನ್ನನ್ನು ಯಾರು ಕೇಳೋರು? ಎಂದು ಕುಡಿದ ಅಮಲಿನಲ್ಲಿ ಮುಖ್ಯೋಪಾಧ್ಯಾಯ ಬಿರಾದಾರ್ ಅವಾಜ್ ಹಾಕಿದ್ದಾನೆ.

    ಶಾಲೆ ಶಿಕ್ಷಕ ಆರ್.ಬಿ ಲಮಾಣಿ ಅವರು ನಿವೃತ್ತಿ ಆದ ಮೇಲೆ ಬಿರಾದಾರ್ ಹಾಗೂ ಸಹ ಶಿಕ್ಷಕರು ಸೇರಿ ಜನವರಿ 31 ರಂದು ಮಧ್ಯಾಹ್ನ ಮಕ್ಕಳಿಗೆ ಶಾಲೆಗೆ ಅನಧಿಕೃತವಾಗಿ ರಜೆ ನೀಡಿ ಎಲ್ಲರೂ ಶಾಲೆಯ ಪಕ್ಕದಲ್ಲೇ ಇದ್ದ ಜಮೀನಿನಲ್ಲೇ ಗುಂಡು-ತುಂಡಿನ ಬಾಡೂಟ ಮಾಡಿ ಮದ್ಯದ ಅಮಲಿನಲ್ಲಿ ತೇಲಿದ್ದಾರೆ. ಇದೇ ವೇಳೆ ಮಕ್ಕಳಿಂದ ಮಾಹಿತಿ ಪಡೆದು ಗುಂಡು ಪಾರ್ಟಿ ಮಾಡುತ್ತಿದ್ದ ಸ್ಥಳಕ್ಕೆ ಹೋದ ಸಾರ್ವಜನಿಕರಿಗೆ ಕುಡಿದ ಅಮಲಿನಲ್ಲಿ ಶಿಕ್ಷಕರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

    ಬಿಇಓ ಗೆ ಹೇಳುತ್ತೇವೆ ಎಂದರೆ ಬಿಇಓ ಗೂ ಕೂಡ ನಿಂದಿಸಿದ್ದಾರೆ. ಕುಡುಕ ಶಿಕ್ಷಕರ ಆಟಾಟೋಪ ಮೊಬೈಲ್ ನಲ್ಲಿ ಸೆರೆಯಾಗಿದೆ. ಇನ್ನು ಪ್ರಕರಣ ಕುರಿತು ಶಾಸಕ ನಾಡಗೌಡ ಅಮಾನತ್ತಿಗೆ ಆದೇಶ ನೀಡಿದ್ದಾರೆ. ಅಲ್ಲದೇ ಬಿಇಓ ಎಸ್.ಡಿ ಗಂಜಿ, ಅಮಾನತ್ತಿಗೆ ಡಿಡಿಪಿಐಗೆ ಶಿಫಾರಸ್ಸು ಪತ್ರ ರವಾನಿಸಿದ್ದಾರೆ.

  • ಹಣ ಕದ್ದರೆಂಬ ಆರೋಪ- ಇಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿಯರ ವಿರುದ್ಧ ದೂರು

    ಹಣ ಕದ್ದರೆಂಬ ಆರೋಪ- ಇಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿಯರ ವಿರುದ್ಧ ದೂರು

    ಭೋಪಾಲ್: 11ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು 1000 ರೂ. ಹಣ ಕಳ್ಳತನ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕಿಯರೇ ಅವರ ಬಟ್ಟೆ ಬಿಚ್ಚಿಸಿರುವ ಆರೋಪ ಕೇಳಿಬಂದಿದೆ.

    ಮಧ್ಯಪ್ರದೇಶದ ಅಲಿರಾಜ್ಪುರ್ ಜಿಲ್ಲೆಯ ಜೋಬಾತ್‍ನಲ್ಲಿ ಜನವರಿ 8 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ವಿದ್ಯಾರ್ಥಿನಿಯರು ಜೋಬಾತ್ ಪೊಲೀಸ್ ಠಾಣೆಗೆ ಬುಧವಾರದಂದು ದೂರು ನೀಡಿದ್ದಾರೆ.

    ತನ್ನ ಬಳಿ ಇದ್ದ 1000 ರೂಪಾಯಿ ಕಳವು ಮಾಡಿದ್ದಾರೆಂದು 11 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಅವರ ಸಹಪಾಠಿಯಿಂದಲೇ ಆರೋಪ ಮಾಡಲಾಗಿತ್ತು. ಹೀಗಾಗಿ ಹಣವನ್ನು ಪತ್ತೆ ಮಾಡುವ ಭರದಲ್ಲಿ ಶಿಕ್ಷಕಿಯರು ಇಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾರೆ. ಆದರೆ ವಿದ್ಯಾರ್ಥಿನಿಯರ ಬಳಿ ಯಾವುದೇ ಹಣ ಸಿಕ್ಕಿಲ್ಲ ಎಂದು ಸಬ್ ಇನ್ಸ್ ಪೆಕ್ಟರ್ ಶಂಕರ್ ಸಿಂಗ್ ಜಮ್ರಾ ತಿಳಿಸಿದ್ದಾರೆ.

    ವಿದ್ಯಾರ್ಥಿನಿಯರು ಹಣ ಕದ್ದಿದ್ದೀರಾ ಎಂದು ಶಿಕ್ಷಕಿಯರು ಮೊದಲು ತರಗತಿಯಲ್ಲೇ ಇಬ್ಬರನ್ನೂ ಪ್ರಶ್ನೆ ಮಾಡಿದ್ದಾರೆ. ಅವರ ಸ್ಕೂಲ್ ಬ್ಯಾಗ್ ಶೋಧಿಸಿದ್ದಾರೆ. ನಂತರ ಶಾಲೆಯ ಇನ್ನೊಂದು ಕೊಠಡಿಗೆ ಕರೆದೊಯ್ದು ಬಟ್ಟೆ ಬಿಚ್ಚಿಸಿ, ಹಣಕ್ಕಾಗಿ ಹುಡುಕಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಶಾಲೆಯ ಮುಖ್ಯೋಪಾಧ್ಯಾಯರು ಈ ಆರೋಪವನ್ನ ತಳ್ಳಿಹಾಕಿದ್ದಾರೆ. ಶಾಲೆಯಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 1000 ರೂ. ಕದ್ದರೆಂದು ಸಾಮಾನ್ಯವಾಗಿ ಚೆಕ್ ಮಾಡಲಾಗಿದೆ. ಆದ್ರೆ ಬಟ್ಟೆ ಬಿಚ್ಚಿಸಿದ್ರು ಅನ್ನೋ ಆರೋಪ ಆಧಾರರಹಿತ ಎಂದು ಹೇಳಿದ್ದಾರೆ.

    ಈ ಬಗ್ಗೆ ಎಲ್ಲಾ ರೀತಿಯಲ್ಲೂ ತನಿಖೆ ನಡೆಸಲಾಗುತ್ತಿದೆ. ತನಿಖೆಯ ನಂತರ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ಜಮ್ರಾ ತಿಳಿಸಿದ್ದಾರೆ.

  • ಗ್ರಾಮಸ್ಥರ, ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆಗೆ ಸಿಕ್ತು ಹೈಟಕ್ ಟಚ್

    ಗ್ರಾಮಸ್ಥರ, ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆಗೆ ಸಿಕ್ತು ಹೈಟಕ್ ಟಚ್

    ಹಾವೇರಿ: ಖಾಸಗಿ ಶಾಲೆಗಳ ಪ್ರಭಾವದಿಂದ ವರ್ಷದಿಂದ ವರ್ಷಕ್ಕೆ  ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಾಲೆಯ ದಾಖಲಾತಿ ಹೆಚ್ಚಳ ಹಾಗೂ ಉತ್ತಮ ಶಿಕ್ಷಣ ನೀಡಲು ಶಿಕ್ಷಕರ ಬಳಗ ಹೊಸ ಪ್ಲಾನ್ ಮಾಡಿದ್ದಾರೆ. ಗ್ರಾಮದ ದಾನಿಗಳ ಸಹಾಯ ಪಡೆದು ಕಂಪ್ಯೂಟರ್, ಸ್ಮಾರ್ಟ ಕ್ಲಾಸ್, ಡೆಸ್ಕ್ ಸೇರಿದಂತೆ ಮೂಲಭೂತ ಸೌಕರ್ಯವನ್ನ ಶಾಲೆಗೆ ಪಡೆದುಕೊಂಡಿದ್ದಾರೆ. ಈ ಮೂಲಕ ಖಾಸಗಿ ಶಾಲೆಯನ್ನು ಮೀರಿಸುವಂತೆ ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಮಾಡಿದ್ದಾರೆ.

    ಹೌದು, ಇದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸಕಟ್ಟಿ ಗ್ರಾಮದಲ್ಲಿ ಕಂಡು ಬಂದ ದೃಶ್ಯಗಳು. ಕಳೆದ ಒಂದು ವರ್ಷದಿಂದ ಸರ್ಕಾರಿ ಶಾಲೆಯ ಚಿತ್ರಣವೇ ಬದಲಾವಣೆಯಾಗಿದೆ. ಪುಟ್ಟಗ್ರಾಮ ಹೊಸಕಟ್ಟಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿ ವರೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಕಳೆದ ಮೂರು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಶಾಲೆಯ ದಾಖಲಾತಿ ಪ್ರಮಾಣ ಕಡಿಮೆಯಾಗಿತ್ತು. ಶಾಲೆಯ ಅಭಿವೃದ್ಧಿ ಪಡಿಸಲು ಶಿಕ್ಷಕರ ಬಳಗವು ಒಂದು ಹೊಸ ಪ್ಲಾನ್ ಮಾಡಿ, ಗ್ರಾಮದ ಮನೆ ಮನೆಗೆ ತೆರಳಿ ದಾನ ರೂಪದಲ್ಲಿ ಮೂಲಭೂತ ಸೌಕರ್ಯವನ್ನ ಕೇಳಿದ್ದಾರೆ. ಹೊಸಕಟ್ಟಿ ಗ್ರಾಮದ ಜನರಿಂದ 10 ರೂ. ನಿಂದ ಒಂದು ಸಾವಿರ ರೂ. ವರೆಗೂ ಹಣವನ್ನು ವಂತಿಕೆಯಾಗಿ ಸಂಗ್ರಹಿಸಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.

    ಗ್ರಾಮದ ಜನರು ಇದುವರೆಗೆ ಐದು ಕಂಪ್ಯೂಟರ್, ಒಂದೂವರೇ ಲಕ್ಷ ರುಪಾಯಿ ಖರ್ಚು ಮಾಡಿ ಡಿಜಿಟಲ್ ಕ್ಲಾಸ್ ರೂಂ ನಿರ್ಮಿಸಿ, ಖಾಸಗಿ ಶಾಲೆಗಳಿಗಿಂತ ನಾವು ಕಮ್ಮಿ ಇಲ್ಲ ಎಂದು ತಂತ್ರಜ್ಞಾನ ಬಳಿಸಿ ಮಕ್ಕಳಿಗೆ ಪಾಠಭೋಧನೆ ಮಾಡುತ್ತಿದ್ದಾರೆ. ಶಿಕ್ಷಕರು ಹಾಗೂ ಗ್ರಾಮಸ್ಥರ ಈ ಕಾರ್ಯದಿಂದ ಹೊಸಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

    ಪ್ರಸ್ತುತ ಗ್ರಾಮದ ಮಕ್ಕಳು ಖಾಸಗಿ ಶಾಲೆಗೆ ಹೋಗುವದನ್ನ ನಿಲ್ಲಿಸಿ, ಸರ್ಕಾರಿ ಶಾಲೆಯ ಕಡೆ ಬರುತ್ತಿದ್ದಾರೆ. 180 ಮಕ್ಕಳು ಇದ್ದ ಸಂಖ್ಯೆ ಈಗ 240 ಕ್ಕೆ ಏರಿಕೆಯಾಗಿದೆ. ಒಂಬತ್ತು ಜನ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಶನಿವಾರ ಮತ್ತು ಭಾನುವಾರು ಮಕ್ಕಳಿಗೆ ರಜೆ ನೀಡಿದ ಪ್ರತಿವಾರ ಒಬ್ಬರು ಸ್ಪೇಷಲ್ ಕ್ಲಾಸ್ ನೀಡುತ್ತಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮದ ಮಕ್ಕಳು ಸರ್ಕಾರಿ ಶಾಲೆಯ ಪ್ರವೇಶ ಪಡೆಯುತ್ತಿದ್ದಾರೆ.

    ಇನ್ನು ಗ್ರಾಮದ ಜನರಿಗೆ ತಮ್ಮ ಕಾರ್ಯದ ಬಗ್ಗೆ ಮೆಚ್ಚುಗೆ ಇದ್ದು, ಶಾಲೆಯನ್ನ ಇನ್ನು ಹೆಚ್ಚು ಅಭಿವೃದ್ದಿ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನ ಕೊಡಿಸುತ್ತೆವೆ ಎನ್ನುತ್ತಿದ್ದಾರೆ. ಶಾಲೆಯ ಶಿಕ್ಷಕರ ಬಳಗದ ಪರಿಶ್ರಮ ಹಾಗೂ ಗ್ರಾಮದ ದಾನಿಗಳಿಗೆ ಬಡಮಕ್ಕಳು ಡಿಜಿಟಲ್ ಶಿಕ್ಷಣ ಸೇರಿದಂತೆ ಕಂಪ್ಯೂಟರ್ ಶಿಕ್ಷಣವನ್ನ ಪಡೆದು ಜಿಲ್ಲೆಯಲ್ಲಿ ಮಾದರಿ ಶಾಲೆಯಲ್ಲಿಗೆ. ಗ್ರಾಮದ ಸರ್ಕಾರಿ ಶಾಲೆಯನ್ನ ಅಭಿವೃದ್ದಿ ಮಾಡಿದ ಹೊಸಕಟ್ಟಿ ಗ್ರಾಮಸ್ಥರಿಗೆ ನಮ್ಮದೊಂದು ಸಲಾಂ.

    https://www.youtube.com/watch?v=o0_5VconZHU