Tag: teachers

  • ಟ್ರೈನಿಂಗ್ ವೇಳೆ ನಾಗಿಣಿ ಡ್ಯಾನ್ಸ್ ಮಾಡಿದ ಟೀಚರ್ ಅಮಾನತು

    ಟ್ರೈನಿಂಗ್ ವೇಳೆ ನಾಗಿಣಿ ಡ್ಯಾನ್ಸ್ ಮಾಡಿದ ಟೀಚರ್ ಅಮಾನತು

    ಜೈಪುರ: ಟ್ರೈನಿಂಗ್ ವೇಳೆ ನಾಗಿಣಿ ಡ್ಯಾನ್ಸ್ ಮಾಡಿದ ಟೀಚರ್ ಒಬ್ಬರನ್ನು ಅಲ್ಲಿನ ಜಿಲ್ಲಾಡಳಿತ ಅಮಾನತು ಮಾಡಿರುವ ಘಟನೆ ರಾಜಸ್ಥಾನದ ಜಲೋರೆಯಲ್ಲಿ ನಡೆದಿದೆ.

    ಈ ಘಟನೆ ನಡೆದಿರುವುದು 10 ದಿನಗಳ ಹಿಂದೆ. ಮೂವರು ಶಿಕ್ಷಕರು ನಾಗಿಣಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಎಚ್ಚೆತ್ತ ಜಿಲ್ಲಾಡಳಿತ ಆ ಮೂವರಲ್ಲಿ ಒಬ್ಬರನ್ನು ಅಮಾನತು ಮಾಡಿ ಉಳಿದ ಇಬ್ಬರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ತರಬೇತಿ ಎಂದು ಬಂದಿರುವ ಶಿಕ್ಷಕರು ಊಟದ ಬಿಡುವಿನ ವೇಳೆ ಒಂದು ಕೊಠಡಿಯಲ್ಲಿ ಕುಳಿತುಕೊಂಡು ನಾಗಿಣಿ ಸಾಂಗ್ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಒಬ್ಬರು ಮಹಿಳಾ ಶಿಕ್ಷಕಿ ಮತ್ತು ಇಬ್ಬರು ಶಿಕ್ಷಕರು ಸೇರಿ ಕರ್ಚಿಫ್ ಹಿಡಿದು ಮಾಡಿರುವ ನೃತ್ಯವನ್ನು ಅಲ್ಲಿ ಕುಳಿತ ಉಳಿದ ಶಿಕ್ಷಕರು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜಲೋರೆ ಜಿಲ್ಲೆಯ ಶಿಕ್ಷಣ ಅಧಿಕಾರಿ ಅಶೋಕ್ ರೋಶ್ವಾಲ್, ಡ್ಯಾನ್ಸ್ ಪಾರ್ಟಿ ಆಯೋಜನೆ ಮಾಡಿದ ಒಬ್ಬರು ಶಿಕ್ಷಕರನ್ನು ನಾವು ಅಮಾನತು ಮಾಡಿದ್ದೇವೆ. ಇನ್ನುಳಿದ ಇಬ್ಬರು ಶಿಕ್ಷಕರು ಹೊಸಬರು ಆದ ಕಾರಣ ಅವರಿಗೆ ನಿಯಮದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಅವರಿಗೆ ಕೇವಲ ಶೋಕಾಸ್ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದೆ. ಅವರು ಮಾಡಿದ್ದು ತಪ್ಪಲ್ಲ ಆದರೆ ನೀತೆ ಸಂಹಿತೆಯನ್ನು ಕಾಪಾಡಿಲ್ಲದ ಕಾರಣ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಜಿಲ್ಲಾಡಳಿತದ ಈ ಕ್ರಮವನ್ನು ಕೆಲ ಶಿಕ್ಷಕರು ಖಂಡಿಸಿದ್ದು, ವಿರಾಮದ ಸಮಯದಲ್ಲಿ ನಾವು ಎಂಜಾಯ್ ಮಾಡಿದರೆ ಏನು ತಪ್ಪು? ಆ ವಿಡಿಯೋದಲ್ಲಿ ಅಶ್ಲೀಲ ಅಥವಾ ಕೆಟ್ಟದ್ದು ಏನಿದೆ? ಸರ್ಕಾರಿ ನೌಕರರು ಬಿಡುವಿನ ಸಮಯದಲ್ಲೂ ಸಹೋದ್ಯೋಗಿಗಳ ಜೊತೆ ಎಂಜಾಯ್ ಮಾಡಬಾರದೇ? ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಧಾರ ನ್ಯಾಯವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

  • ಮಧ್ಯಾಹ್ನವಾದ್ರೂ ಶಾಲೆಗೆ ಹಾಜರಾಗದ ಶಿಕ್ಷಕರು – ವಿಡಿಯೋ ಮಾಡಿ ಗ್ರಾಮಸ್ಥರ ಆಕ್ರೋಶ

    ಮಧ್ಯಾಹ್ನವಾದ್ರೂ ಶಾಲೆಗೆ ಹಾಜರಾಗದ ಶಿಕ್ಷಕರು – ವಿಡಿಯೋ ಮಾಡಿ ಗ್ರಾಮಸ್ಥರ ಆಕ್ರೋಶ

    ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ತೆಗಂಪೂರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನವಾದರೂ ಶಾಲೆಗೆ ಶಿಕ್ಷಕರು ಹಾಜರಾಗಿಲ್ಲ. ಹಾಗಾಗಿ ಬೆಳಗ್ಗೆಯಿಂದ ಶಿಕ್ಷಕರಿಗಾಗಿ ಕಾದು ಕುಳಿತ ಮಕ್ಕಳು ಗೇಟ್ ಏರಿ ಶಾಲೆಯೊಳಗೆ ಹೋಗಿರುವ ಘಟನೆ ನಡೆದಿದೆ.

    ಮಕ್ಕಳು ಗೇಟ್ ಏರಿ ಶಾಲೆಯೊಳಗೆ ಹೋಗಿರುವ ದೃಶ್ಯವನ್ನು ಸ್ಥಳೀಯರು ಚಿತ್ರೀಕರಿಸಿ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟು 3 ಜನ ಶಿಕ್ಷಕರು ಇರುವ ಈ ಶಾಲೆಯಲ್ಲಿ 50ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

    ಗ್ರಾಮದಲ್ಲಿ ಬಹುತೇಕ ಮಕ್ಕಳು ಶಾಲೆಯ ದುರಾವಸ್ಥೆಯಿಂದ ಬೇಸತ್ತು ಸಮೀಪದ ಔರಾದ್ ಪಟ್ಟಣದ ಶಾಲೆಗೆ ತೆರಳುತ್ತಿದ್ದಾರೆ. ಆದರೂ ತಮ್ಮ ವರಸೆ ಬಿಡದ ಶಿಕ್ಷಕರು ಕಳೆದ 10 ವರ್ಷಗಳಿಂದ ಇದೇ ಚಾಳಿ ಮುಂದುವರಿಸಿದ್ದಾರೆ. ಇದರಿಂದ ಬಡವರ ಮಕ್ಕಳ ಭವಿಷ್ಯದ ಜೊತೆ ಶಿಕ್ಷಕರು ಆಟವಾಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಚುನಾವಣೆ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಬೇಡಿ – ಆಯೋಗಕ್ಕೆ ಸುರೇಶ್ ಕುಮಾರ್ ಪತ್ರ

    ಚುನಾವಣೆ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಬೇಡಿ – ಆಯೋಗಕ್ಕೆ ಸುರೇಶ್ ಕುಮಾರ್ ಪತ್ರ

    ಬೆಂಗಳೂರು: ಚುನಾವಣೆ ಕೆಲಸಗಳಿಗೆ ಶಿಕ್ಷರನ್ನು ಬಳಸಿಕೊಳ್ಳದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

    ಕರ್ನಾಟಕ ಮುಖ್ಯ ಚುನಾವಣೆ ಆಯೋಗಕ್ಕೆ ಈ ಕುರಿತು ಸುರೇಶ್ ಕುಮಾರ್ ಅವರು ಪತ್ರ ಬರೆದಿದ್ದು, ಚುನಾವಣೆ ಪ್ರಕ್ರಿಯೆ ಸೇರಿದಂತೆ ಹಲವು ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಪಾಠಗಳು ಸರಿಯಾದ ಸಮಯಕ್ಕೆ ಮುಗಿಯುತ್ತಿಲ್ಲ. ಶಿಕ್ಷಕರಿಗೆ ಶಾಲಾ ಚಟುವಟಿಕೆಗಳಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಿಕ್ಷಕರನ್ನು ಚುನಾವಣೆ ಕೆಲಸಗಳಿಗೆ ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

    ಇತರೆ ಕೆಲಸಗಳಿಂದ ಶಿಕ್ಷಕರಿಗೆ ವಿದ್ಯಾರ್ಥಿಗಳ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಿಕ್ಷಕರನ್ನು ಚುನಾವಣೆ ಕೆಲಸ ಹಾಗೂ ಮತಹಾಕಿಸುವ ಬಿಎಲ್‍ಓ ದಂತಹ ಕೆಲಸಗಳಿಂದ ವಿಮುಕ್ತಿಗೊಳಿಸಬೇಕು ಎಂದು ಚುನಾವಣೆ ಆಯೋಗಕ್ಕೆ ಬರೆದ ಪತ್ರದಲ್ಲಿ ಸಚಿವ ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ.

    ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೈತ್ರಿ ಸರ್ಕಾರ ಕೆಡವಿದ್ದ 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ ಆರ್.ಆರ್ ನಗರ, ಮಸ್ಕಿ ಹೊರತುಪಡಿಸಿ 15 ಕ್ಷೇತ್ರಗಳ ಉಪಚುನಾವಣೆಗೆ ಭರದ ಸಿದ್ಧತೆ ನಡೆದಿದೆ. ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೇರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ, ಹುಣಸೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ.

    ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನ.18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನ.19ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನ.21 ರಂದು ನಾಮಪತ್ರ ವಾಪಸ್‍ಗೆ ಕಡೆಯ ದಿನವಾಗಿದೆ. ಡಿಸೆಂಬರ್ 5 ರಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ನಡೆಯಲಿದೆ.

  • ಶಿಕ್ಷಕಿಯರ ವರ್ಗಾವಣೆ- ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿಗಳು

    ಶಿಕ್ಷಕಿಯರ ವರ್ಗಾವಣೆ- ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿಗಳು

    – ಭಾವುಕರಾದ ಶಿಕ್ಷಕಿಯರು

    ಬೆಂಗಳೂರು: ಇಬ್ಬರು ಪ್ರೌಢಶಾಲಾ ಶಿಕ್ಷಕಿಯರ ವರ್ಗಾವಣೆ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಿಗೆ ಕಣ್ಣೀರಿನಲ್ಲಿಯೇ ಬೀಳ್ಕೊಟ್ಟ ಅಪರೂಪದ ದೃಶ್ಯ ಕಂಡು ಬಂದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೊಡ್ಡಬೆಲೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಹಾಗೂ ವರ್ಗಾವಣೆ ಶಿಕ್ಷಕಿಯರ ನಡುವೆ ಭಾವ ಲಹರಿಯೇ ಏರ್ಪಟ್ಟಿದೆ. ಶಿಕ್ಷಕಿಯರಾದ ಪ್ರತಿಭಾ ಮತ್ತು ಸೌಮ್ಯ ದೊಡ್ಡಬೆಲೆ ಶಾಲೆಯಲ್ಲಿ ಕಳೆದ 15 ವರ್ಷಗಳಿಗೂ ಅಧಿಕ ಕಾಲ ಹಿಂದಿ ಮತ್ತು ಸಮಾಜ ವಿಜ್ಞಾನ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸಿ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದರು.

    ವಿದ್ಯಾರ್ಥಿಗಳು ಬಿಕ್ಕಿಬಿಕ್ಕಿ ಅತ್ತು ಭಾವುಕರಾದರೆ, ಮಕ್ಕಳನ್ನು ನೋಡಿ ಶಿಕ್ಷಕಿಯರೂ ಭಾವುಕರಾಗಿದ್ದಾರೆ. ತಮ್ಮ ಮಕ್ಕಳಂತೆ ತಬ್ಬಿ ಶಿಕ್ಷಕಿಯರು ಸಮಾಧಾನಪಡಿಸಿದ ಕ್ಷಣಗಳು ಎಂಥವರನ್ನು ಮೂಕ ವಿಸ್ಮಿತರನ್ನಾಗಿಸಿತು. ಈ ಗುರು ಶಿಷ್ಯರ ಸಂಬಂಧ ಜನುಮಜನಮದ ಅನುಬಂಧಕ್ಕೆ ಈ ಇಡೀ ಕ್ಷಣ ಸಾಕ್ಷಿಯಾಗಿದೆ.

    ಈ ಘಟನೆ ನೋಡಿದರೆ ಹಿಂದೆ ಮೈಸೂರಲ್ಲಿ ಶಿಕ್ಷಕರಾಗಿ ವರ್ಗಾವಣೆಯಾದ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ರೈಲು ನಿಲ್ದಾಣದ ತನಕ ಯಾವ ರೀತಿ ಬಿಳ್ಕೊಟ್ಟರೋ, ಅದೇ ರೀತಿ ಸರದಿ ಸಾಲಿನಲ್ಲಿ ನಿಂತು, ಶಿಕ್ಷಕಿಯರು ಕಾರು ಏರುವ ತನಕ ಮಕ್ಕಳು ಜೊತೆಯಲ್ಲಿಯೇ ಇದ್ದರು. ಈ ಇಬ್ಬರು ಶಿಕ್ಷಕಿಯರು, ಪಾಠ ಪ್ರವಚನದಲ್ಲಿ ವಿದ್ಯಾರ್ಥಿಗಳ ಮನಗೆದ್ದು, ಎಲ್ಲರಿಗೂ ಮನೆ ಮಾತಾಗಿದ್ದರು.

  • ಹುಟ್ಟುಹಬ್ಬದ ಚಾಕ್ಲೇಟ್ ತಿಂದು 16 ವಿದ್ಯಾರ್ಥಿಗಳು ಅಸ್ವಸ್ಥ

    ಹುಟ್ಟುಹಬ್ಬದ ಚಾಕ್ಲೇಟ್ ತಿಂದು 16 ವಿದ್ಯಾರ್ಥಿಗಳು ಅಸ್ವಸ್ಥ

    ಮೈಸೂರು: ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಯೊಬ್ಬ ನೀಡಿದ ಚಾಕ್ಲೇಟ್ ತಿಂದು 16 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.

    ವಿದ್ಯಾರಣ್ಯಪುರಂನಲ್ಲಿರುವ ನಳಂದ ಶಾಲೆಯ ಓದುತ್ತಿದ್ದ ವಿದ್ಯಾರ್ಥಿ ತನ್ನ ಹುಟ್ಟುಹಬ್ಬ ಹಿನ್ನೆಲೆ ಶಾಲೆಯ ಎಲ್ಲ ಮಕ್ಕಳಿಗೂ ಚಾಕ್ಲೇಟ್ ನೀಡಿದ್ದಾನೆ. ಚಾಕ್ಲೇಟ್ ತಿಂದ ಮಕ್ಕಳಿಗೆ ತಕ್ಷಣ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ.

    ವಾಂತಿ ಮತ್ತು ಹೊಟ್ಟೆ ನೋವಿನಿಂದ ಅಸ್ವಸ್ಥರಾದ 16 ಜನ ಮಕ್ಕಳನ್ನು ಶಾಲಾ ಶಿಕ್ಷಕರು ತಕ್ಷಣ ರಾಮಕೃಷ್ಣ ನರ್ಸಿಂಗ್ ಹೋಂಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಎಲ್ಲಾ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿರುವುದಾಗಿ ಶಿಕ್ಷಕರು ತಿಳಿಸಿದ್ದಾರೆ. ಈ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಶಿಕ್ಷಕರ ಕಳ್ಳಾಟ – ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಗ್ರಾಮಸ್ಥರು

    ಶಿಕ್ಷಕರ ಕಳ್ಳಾಟ – ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಗ್ರಾಮಸ್ಥರು

    ಚಾಮರಾಜನಗರ: ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಶಿಕ್ಷಕರ ಕಳ್ಳಾಟ ಹೆಚ್ಚಾಗಿದ್ದು, ಶಿಕ್ಷಕರು ಪದೆ ಪದೇ ಶಾಲೆಗೆ ಚಕ್ಕರ್ ಹಾಕುವ ಮೂಲಕ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಚಾಮರಾಜನಗರ ತಾಲೂಕು ಹೊಮ್ಮ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕರು ಶಾಲೆಗೆ ಸರಿಯಾಗಿ ಬರದಿದ್ದಕ್ಕೆ ಗ್ರಾಮಸ್ಥರು ಹಾಗೂ ಪೋಷಕರು ಬೇಸತ್ತು, ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಮೂವರು ಶಿಕ್ಷಕರಿದ್ದು, ಇರುವ ಶಿಕ್ಷಕರೂ ಸಹ ಸರಿಯಾಗಿ ಶಾಲೆಗೆ ಬಾರದ್ದನ್ನು ಕಂಡು ಹಾಗೂ ಮಕ್ಕಳಿಗೆ ಏನೂ ಕಲಿಸದ್ದನ್ನು ಕಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ಶಾಲೆಗೆ ಬರುವುದಿಲ್ಲ ಹೀಗಿರುವಾಗ ಶಾಲೆ ಯಾಕೆ ತೆರಯಬೇಕು ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಮೂವರು ಶಿಕ್ಷಕರೂ ಸಹ ಪದೆ ಪದೇ ರಜೆ ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

    ಶಾಲೆಯಲ್ಲಿ 1ರಿಂದ 7 ತರಗತಿ ವರೆಗೆ ಕೇವಲ 14 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಶಿಕ್ಷಕರ ವರ್ತನೆಯೇ ಕಾರಣ. ಶಿಕ್ಷಕರು ಮಕ್ಕಳಿಗೆ ಏನೂ ಹೇಳಿಕೊಡುವುದಿಲ್ಲ. ಹೆಚ್ಚು ರಜೆ ಹಾಕುತ್ತಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

    ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಇಲ್ಲದೆ ಶಿಕ್ಷಕರು 5 ದಿನ ನಿರಂತರವಾಗಿ ರಜೆ ಪಡೆದಿದ್ದಾರೆ. ಅಲ್ಲದೆ ಇತರ ಶಿಕ್ಷಕರಿಗೆ ಬುದ್ಧಿ ಹೇಳಬೇಕಿದ್ದ ಮುಖ್ಯ ಶಿಕ್ಷಕರು ಸಹ ಪತ್ನಿಗೆ ಹುಷಾರಿಲ್ಲ ಎಂದು ರಜೆ ಹಾಕುವುದು ಇಲ್ಲವೆ ಬೆಳಗ್ಗೆ ಶಾಲೆಗೆ ಆಗಮಿಸಿ ಮಧ್ಯಾಹ್ನವೇ ಮನೆಗೆ ತೆರಳುವುದನ್ನು ಮಾಡಿದ್ದಾರೆ. ಹಲವು ದಿನಗಳಿಂದ ಮೂವರು ಶಿಕ್ಷಕರು ಸಹ ಇದೇ ರೀತಿ ಮಾಡಿದ್ದು, ಇದರಿಂದ ಗ್ರಾಮಸ್ಥರು ಬೇಸತ್ತಿದ್ದಾರೆ. ಶಿಕ್ಷಕರು ಬಾರದೇ ಪಾಠ ಪ್ರವಚನ ಸರಿಯಾಗಿ ನಡೆಯುತ್ತಿಲ್ಲ. ಶಿಕ್ಷಕರ ಗೈರಿನಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಮೂವರು ಶಿಕ್ಷಕರು ಸಹ ಮಾತನಾಡಿಕೊಂಡು, ಪ್ರತಿ ದಿನ ಒಬ್ಬರೇ ಶಾಲೆಗೆ ಆಗಮಿಸುತ್ತಿದ್ದರು. ಉಳಿದ ಇಬ್ಬರು ಒಬ್ಬರು ರಜೆ ತೆಗೆದುಕೊಳ್ಳುತ್ತಿದ್ದರು. ಗುರುವಾರ ಇಬ್ಬರು ಶಿಕ್ಷಕರು ಬಂದಿರಲಿಲ್ಲ. ಬಂದಿದ್ದ ಒಬ್ಬ ಶಿಕ್ಷಕರು ಸಹ ಮಧ್ಯಾಹ್ನವೇ ಶಾಲೆಯ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ, ಶಾಲೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಇನ್ನು ಕೆಲವು ದಿನ ಮೂವರು ಶಿಕ್ಷಕರು ಸಹ ಒಟ್ಟಿಗೆ ರಜೆ ಹಾಕುತ್ತಿದ್ದರು ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

    ಶಿಕ್ಷಕರ ಧೋರಣೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಕಡೆಗೆ ಚಾಮರಾಜನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿಪತಿ ಅವರು ಶಾಲೆಗೆ ಆಗಮಿಸಿ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಚಕ್ಕರ್ ಹಾಕುವ ಶಿಕ್ಷಕರನ್ನು ಕೆಲಸದಿಂದ ವಜಾಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಲಕ್ಷ್ಮಿಪತಿ ಭರವಸೆ ನೀಡಿದ್ದಾರೆ.

  • ಸರ್ಕಾರಿ ಶಾಲೆಯಲ್ಲಿ ಸಚಿವ ಸುರೇಶ್ ಕುಮಾರ್ ವಾಸ್ತವ್ಯ

    ಸರ್ಕಾರಿ ಶಾಲೆಯಲ್ಲಿ ಸಚಿವ ಸುರೇಶ್ ಕುಮಾರ್ ವಾಸ್ತವ್ಯ

    ತುಮಕೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಎನ್ ಅಚ್ಚಮನಹಳ್ಳಿಯಲ್ಲಿ ಸರ್ಕಾರಿ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ.

    ಅಚ್ಚಮನಹಳ್ಳಿಯ ಶಾಲೆಯಲ್ಲಿಯೇ ಇಡೀ ರಾತ್ರಿ ಕಳೆದ ಸಚಿವರು, ಅಲ್ಲಿನ ಮಕ್ಕಳ ಹಾಗೂ ಶಿಕ್ಷಕರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದ್ದಾರೆ. ತಿರುಮಣಿಯಲ್ಲಿ ಸೋಲಾರ್ ಪ್ಲಾಂಟ್‍ಗೆ ಜಾಗ ಕೊಟ್ಟರೂ ಅಚ್ಚಮನಹಳ್ಳಿಯ ಗ್ರಾಮದಲ್ಲಿ ವಿದ್ಯುತ್ ಕೊರತೆ ಇದೆ. ಅಲ್ಲದೆ ಲೋಡ್ ಶೆಡ್ಡಿಂಗ್‍ನಿಂದಾಗಿ ನಮಗೆ ಇಲ್ಲಿ ಓದೋಕೆ ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಕೂಡ ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

    ಇದರ ಜೊತೆಗೆ ಗ್ರಾಮಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದೇ ಈ ಭಾಗದ ಜನ ಕಷ್ಟಪಡುತ್ತಿದ್ದಾರೆ. ರಸ್ತೆ ಮತ್ತು ಬಸ್ ವ್ಯವಸ್ಥೆ ಕೂಡ ಇಲ್ಲದ ಕಾರಣಕ್ಕೆ ಶಾಲೆಗೆ ಹೋಗಲು ಕಷ್ಟವಾಗುತ್ತಿದೆ. ಶಾಲೆಯಲ್ಲಿ ಶಿಕ್ಷಕರ ಕೊರತೆ ಕೂಡ ಇದೆ ಎಂದು ವಿದ್ಯಾರ್ಥಿಗಳು ಸಚಿವರ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಸಮಸ್ಯೆಗಳನ್ನು ಆಲಿಸಿದ ಸಚಿವ ಸುರೇಶ್ ಕುಮಾರ್ ಅದನ್ನೆಲ್ಲ ಬಗೆಹರಿಸುವ ಭರವಸೆ ನೀಡಿದರು.

  • ಮಕ್ಕಳ ಬಿಸಿಯೂಟದಲ್ಲಿ ಹುಳು – ಶಾಲೆಗೆ ರಜೆ ಘೋಷಿಸಿದ ಶಿಕ್ಷಕರು

    ಮಕ್ಕಳ ಬಿಸಿಯೂಟದಲ್ಲಿ ಹುಳು – ಶಾಲೆಗೆ ರಜೆ ಘೋಷಿಸಿದ ಶಿಕ್ಷಕರು

    ಬೆಳಗಾವಿ: ಮಕ್ಕಳ ಬಿಸಿಯೂಟದಲ್ಲಿ ಹುಳುಗಳು ಕಾಣಿಸಿಕೊಂಡಿದ್ದಕ್ಕೆ ಹೆದರಿ ಶಿಕ್ಷಕರು ಶಾಲೆಗೆ ರಜೆ ಘೋಷಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ಬಿಸಿಯೂಟದಲ್ಲಿ ಹುಳ ಕಾಣಿಸಿಕೊಂಡಿದ್ದಕ್ಕೆ ಶಿಕ್ಷಕರು ಮಕ್ಕಳಿಗೆ ರಜೆ ನೀಡಿ ಮನೆಗೆ ಕಳುಹಿಸಿದ್ದಾರೆ. ಇದರಿಂದ ಮಧ್ಯಾಹ್ನದ ಬಿಸಿಯೂಟವಿಲ್ಲದೆ 400 ಕ್ಕೂ ಹೆಚ್ಚು ಮಕ್ಕಳ ಪರದಾಡಿದ್ದಾರೆ. ಶುಚಿತ್ವವಿಲ್ಲದೆ ಅಡುಗೆ ತಯಾರಿಸಿದ್ದೆ ಊಟದಲ್ಲಿ ಹುಳು ಕಾಣಿಸಿಕೊಳ್ಳಲು ಕಾರಣ ಎಂದು ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹುಳು ಬಿದ್ದ ಊಟ ನೀಡಿದರೆ ತೊಂದರೆಯಾಗುತ್ತದೆ. ಮಕ್ಕಳು ಖಾಲಿ ಹೊಟ್ಟೆಯಲ್ಲಿ ಪಾಠ ಕೇಳುವುದಿಲ್ಲ ಎಂದು ಶಿಕ್ಷಕರು ಶಾಲೆಗೆ ರಜೆ ಘೋಷಣೆ ಮಾಡಿದ್ದಾರೆ. ಅದ್ದರಿಂದ ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಮಾಡದೆ ಹಾಗೆ ಬರಿ ಹೊಟ್ಟೆಯಲ್ಲಿ ಮನೆಗೆ ಹೋಗಿದ್ದಾರೆ. ಮನೆಗೆ ಬೇಗ ಬಂದ ಮಕ್ಕಳನ್ನು ವಿಚಾರಿಸಿದ ಪೋಷಕರಿಗೆ ವಿಷಯ ತಿಳಿದು ಬಂದಿದೆ. ಹುಳು ಬಿದ್ದಿದ್ದಕ್ಕೆ ಮಕ್ಕಳಿಗೆ ಬೇರೆ ಅಡುಗೆ ವ್ಯವಸ್ಥೆ ಮಾಡದೆ ಶಾಲೆಗೆ ರಜೆ ಘೋಷಿಸಿ ಹೊರಟು ಹೋದ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ವಿರುದ್ಧ ಪಾಲಕರು ಅಸಮಾಧಾನ ಹೊರಹಾಕಿದ್ದಾರೆ.

  • 33 ವರ್ಷದ ನಂತರ ಶಾಲೆಗೆ ಬಂದು ಭಾವುಕರಾದ ಹಳೆ ವಿದ್ಯಾರ್ಥಿಗಳು

    33 ವರ್ಷದ ನಂತರ ಶಾಲೆಗೆ ಬಂದು ಭಾವುಕರಾದ ಹಳೆ ವಿದ್ಯಾರ್ಥಿಗಳು

    ಬೆಂಗಳೂರು: ಮೂವತ್ತುಮೂರು ವರ್ಷಗಳ ನಂತರ ಶಾಲೆಯ ವಾತಾವರಣಕ್ಕೆ ಆಗಮಿಸಿದ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ನೋಡಿ ಭಾವುಕರಾಗಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರೈಲ್ವೆಗೊಲ್ಲಹಳ್ಳಿ ಬಳಿಯ ಶ್ರೀ ಬೈಲಾಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಹಳೆಯ ಹಾಗೂ ಹೊಸ ವಿದ್ಯಾರ್ಥಿಗಳು ಒಂದಾಗಿದ್ದಾರೆ. 1986 ಮತ್ತು 87ನೇ ಸಾಲಿನಲ್ಲಿ ಎಸ್‍ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು, ಗುರುವಂದನಾ ಎಂಬ ವೇದಿಕೆಯಿಂದ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕಿದರು.

    ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮಿಜೀಗಳು, ರಸ ಪ್ರಶ್ನೆ ಮಾಡುವ ಮೂಲಕ 33 ವರ್ಷದ ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದರು. ಎಲ್ಲಾ ಹಳೆಯ ವಿದ್ಯಾರ್ಥಿಗಳು ತಮ್ಮ ಹಿಂದಿನ ಶಾಲೆಯನ್ನು ನೆನಪಿಸಿಕೊಳ್ಳುವಂತೆ, ವಿದ್ಯಾರ್ಥಿಗಳ ಜಾಗದಲ್ಲಿ ಕುಳಿತು ತಮ್ಮ ಹಳೆಯ ಶಿಕ್ಷಕರ ನೀತಿ ಮಾತುಗಳನ್ನು ಕೇಳಿದರು.

    ತಮ್ಮ ಶಾಲೆಯನ್ನು ಮದುಮಗಳಂತೆ ತಳಿರು ತೋರಣಗಳಿಂದ ಹಳೆಯ ವಿದ್ಯಾರ್ಥಿಗಳು ಸಿಂಗರಿಸಿದರು. ಇನ್ನೂ ಹಳೆಯ 55 ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ತಮ್ಮ ನೆನಪನ್ನು ಹಂಚಿಕೊಂಡರು.

  • ಕ್ಲಾಸಿನಲ್ಲಿ ಪಾಠ ಬದಲು ನಿದ್ದೆ ಮಾಡ್ತಿದ್ದ ಶಿಕ್ಷಕರ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿಗಳು

    ಕ್ಲಾಸಿನಲ್ಲಿ ಪಾಠ ಬದಲು ನಿದ್ದೆ ಮಾಡ್ತಿದ್ದ ಶಿಕ್ಷಕರ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿಗಳು

    ಬೀದರ್: ಕ್ಲಾಸ್ ರೂಮಿನಲ್ಲಿ ಪಾಠ ಮಾಡದೇ ನಿದ್ದೆ ಮಾಡುತ್ತಿದ್ದ ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ತಿರುಗಿಬಿದ್ದ ಘಟನೆ ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದಿದೆ.

    ಬೀದರ್ ತಾಲೂಕಿನ ಮೊಗದಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಕುಂಭಕರ್ಣ ನಿದ್ದೆಗೆ ನೊಂದು ಹೋಗಿದ್ದಾರೆ. ಒಟ್ಟು 107 ವಿದ್ಯಾರ್ಥಿಗಳಿಗೆ ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಗೆ ಹೋದ ತಕ್ಷಣ ಶಿಕ್ಷಕರು ಬೆಂಚ್ ಮೇಲೆ ಕಾಲು ಹಾಕಿ ಪಾಠ ಮಾಡದೆ ನಿದ್ದೆಗೆ ಜಾರುತ್ತಾರೆ. 6 ತಿಂಗಳಿನಿಂದ ಶಿಕ್ಷಕರು ಅಲ್ಪಸ್ವಲ್ಪ ಪಾಠ ಮಾಡಿದ್ದು ಬಿಟ್ಟರೆ ಇನ್ನುಳಿದ ಸಮಯ ಕೇವಲ ನಿದ್ದೆ ಮಾಡಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿಗಳು ನ್ಯಾಯ ಕೇಳಲು ನೇರವಾಗಿ ಕ್ಷೇತ್ರ ಶಿಕ್ಷಣಾಧಿರಿಗಳ ಕಚೇರಿಗೆ ಬಂದು ಬಿಇಓಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಆಟೋದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ನ್ಯಾಯ ಕೇಳಿದ್ದಾರೆ. ಸ್ವತಃ ವಿದ್ಯಾರ್ಥಿಗಳೇ ಕಚೇರಿಗೆ ಬಂದು ಬಿಇಓಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕೂಡ ಒಂದು ಕ್ಷಣ ಕಕ್ಕಾಬಿಕ್ಕಿ ಆದರು. ಏನೇ ಮಾಡಿದ್ರೂ ನಡೆಯುತ್ತೆ ಎಂಬ ಶಿಕ್ಷಕರ ನಡೆಗೆ ಗಡಿ ಜಿಲ್ಲೆಯ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ಶಿಕ್ಷಕರ ವಿರುದ್ಧ ಸಿಡಿದೆದ್ದು ಪಾಠ ಮಾಡಿದ್ದಾರೆ.