Tag: teachers

  • ಜೆಎನ್‍ಯು ಕ್ಯಾಂಪಸ್‍ನಲ್ಲಿ ಘರ್ಷಣೆ- ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷೆ ಐಶಿ ಘೋಷ್ ಮೇಲೆ ಮಾರಣಾಂತಿಕ ಹಲ್ಲೆ

    ಜೆಎನ್‍ಯು ಕ್ಯಾಂಪಸ್‍ನಲ್ಲಿ ಘರ್ಷಣೆ- ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷೆ ಐಶಿ ಘೋಷ್ ಮೇಲೆ ಮಾರಣಾಂತಿಕ ಹಲ್ಲೆ

    ನವದೆಹಲಿ: ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಜೆಎನ್‍ಯು ವಿಶ್ವವಿದ್ಯಾಲಯದ ಕ್ಯಾಂಪಸ್ ಪ್ರವೇಶಿಸಿದ ಗುಂಪೊಂದು ವಿದ್ಯಾರ್ಥಿಗಳು ಸೇರಿ ಉಪನ್ಯಾಸಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಘಟನೆಯಲ್ಲಿ ಜೆಎನ್‍ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶಿ ಘೋಷ್, ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಸೇರಿದಂತೆ ಹಲವು ವಿದ್ಯಾರ್ಥಿಗಳು ಗಾಯಾಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಪ್ರತ್ಯೇಕ್ಷದರ್ಶಿಗಳ ಪ್ರಕಾರ, ಕಲ್ಲು ಮತ್ತು ಲಾಠಿ ಹಿಡಿದ ಗುಂಪೊಂದು ಹಾಸ್ಟೆಲ್ ಪ್ರವೇಶಿಸಿತ್ತು. ಈ ವೇಳೆ ಹಾಸ್ಟೇಲ್‍ನಲ್ಲಿದ್ದ ಐಶಿ ಘೋಷ್ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳು ಹೆಚ್ಚಾಗಿ ವಿದ್ಯಾರ್ಥಿಗಳ ತಲೆಗೆ ರಕ್ತಬರುವಂತೆ ಹೊಡೆದಿದ್ದಾರೆ ಎನ್ನಲಾಗಿದೆ.

    ಹಲ್ಲೆಗೊಳಗಾದ ಐಶಿ ಘೋಷ್ ಅವರು, ಮಾಸ್ಕ್ ಧರಿಸಿಕೊಂಡ ಬಂದಿದ್ದ ಗುಂಪು ನಮ್ಮ ಮೇಲೆ ದಾಳಿ ಮಾಡಿದೆ ಎಂದು ಹೇಳಿದ್ದಾರೆ. ಫೀ ಹೆಚ್ಚಳ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಾದಿ ತಪ್ಪಿಸಲು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಪ್ರಯತ್ನಿಸುತ್ತಿದ್ದು ಘಟನೆ ಹಿಂದೆ ಎಬಿವಿಪಿ ಕೈವಾಡವಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ಇದಕ್ಕೆ ಪ್ರತ್ಯಾರೋಪ ಮಾಡಿರುವ ಎಬಿವಿಪಿ, ಘಟನೆಯಲ್ಲಿ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ದಾಳಿ ಆಗಿದ್ದು, 25 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. 11 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಘಟನೆ ಹಿಂದೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಕೈವಾಡ ಇದೆ ಎಂದು ಟ್ವೀಟ್ ಮಾಡಿದೆ.

    ಸ್ಥಳದಲ್ಲಿ ಸದ್ಯ ಬಿಗುವಿನ ವಾತಾವರಣವಿದ್ದು ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಆಂಬುಲೆನ್ಸ್ ಕಳುಹಿಸಿಕೊಡಲಾಗಿದೆ. ವಿಶ್ವವಿದ್ಯಾಲಯ ಮುಖ್ಯ ಗೇಟ್ ಬಳಿ ದೆಹಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಭದ್ರತೆ ಸಂಬಂಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ಭದ್ರತೆಗೆ ಮನವಿ ಮಾಡಿದ್ದಾರೆ. ಇತ್ತ ಘಟನೆ ಬೆನ್ನಲೆ ಟ್ವಿಟರ್ ನಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

  • ಅಕ್ಕರೆಯಿಂದ ಕನ್ನಡ ಕಲಿಸಿ, ಇಲ್ಲವೇ ಶಿಕ್ಷೆ ಅನುಭವಿಸಿ: ಸುರೇಶ್ ಕುಮಾರ್ ಎಚ್ಚರಿಕೆ

    ಅಕ್ಕರೆಯಿಂದ ಕನ್ನಡ ಕಲಿಸಿ, ಇಲ್ಲವೇ ಶಿಕ್ಷೆ ಅನುಭವಿಸಿ: ಸುರೇಶ್ ಕುಮಾರ್ ಎಚ್ಚರಿಕೆ

    ಬೆಂಗಳೂರು : ಕನ್ನಡ ಭಾಷೆಯನ್ನು ಕಲಿಸದ ಖಾಸಗಿ ಶಾಲೆಗಳು, ಸಿಬಿಎಸ್‍ಸಿ, ಐಸಿಎಸ್‍ಸಿ, ಕೇಂದ್ರೀಯ ವಿದ್ಯಾಲಯದ ಶಾಲೆಗಳಿಗೆ ಸಚಿವ ಸುರೇಶ್ ಕುಮಾರ್ ಕೊನೆ ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಸಿಬಿಎಸ್‍ಸಿ, ಐಸಿಎಸ್‍ಸಿ, ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಭಾಷೆ ಕಲಿಕಾ ಕಾಯ್ದೆ ಅನುಷ್ಠಾನ ಕುರಿತ ಸಂವಾದದಲ್ಲಿ ಮಾತನಾಡಿದ ಸಚಿವರು, ಕಾವೇರಿ ನೀರು ಕುಡಿದ ಮೇಲೆ ಕನ್ನಡ ಕಲಿಬೇಕು, ಕನ್ನಡದಲ್ಲಿ ಮಾತಾಡಬೇಕು. ಕನ್ನಡವನ್ನು ಅಕ್ಕರೆಯಿಂದ ಕಲಿಸಬೇಕು ಅಂತ ಮನವಿ ಮಾಡಿದ್ರು. ಕೆಲವು ಶಾಲೆಗಳಲ್ಲಿ ಕನ್ನಡ ಕಲಿಸೋದು ಕೀಳು ಅಂತ ಭಾವಿಸಿದ್ದಾರೆ. ಕೆಲ ಶಾಲೆಯಲ್ಲಿ ಕನ್ನಡ ಶಿಕ್ಷಕರೇ ಇರೋದಿಲ್ಲ. ಕನ್ನಡ ಕಲಿಸದೇ ಇರೋದನ್ನ ಸರ್ಕಾರ ಸಹಿಸೊಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

    2015 ರಲ್ಲಿ ಸರ್ಕಾರ ಕಾಯ್ದೆ ಜಾರಿಗೆ ತಂದಿದೆ. 2017ರಿಂದ ರಾಜ್ಯದಲ್ಲಿ ಕಾಯ್ದೆ ಅನುಷ್ಠಾನವಾಗಿದೆ. ಆದ್ರೆ ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು, ಸಿಬಿಎಸ್‍ಸಿ, ಐಸಿಎಸ್‍ಸಿ, ಕೆ.ವಿ.ಶಾಲೆಗಳಲ್ಲಿ ಕನ್ನಡ ಕಲಿಸುತ್ತಿಲ್ಲ. ಹೀಗಾಗಿ ಈಗ ಸರ್ಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಾಲೆಗಳಿಗೆ ಜಾಗೃತಿ ಜೊತೆಗೆ ಎಚ್ಚರಿಕೆ ಕೊಡೋ ಕೆಲಸ ಮಾಡಿದೆ. ಆಡಳಿತ ಮಂಡಳಿಗಳ ಜೊತೆ ಚರ್ಚೆ ಮಾಡಿ ಕಾಯ್ದೆ ಅನುಷ್ಠಾನಕ್ಕೆ ಅಗತ್ಯ ಕ್ರಮ ತೆಗೆದುಕೊಂಡಿದೆ.

    2017ರ ಕಾಯ್ದೆ ಪ್ರಕಾರ ಕಡ್ಡಾಯವಾಗಿ ಎಲ್ಲಾ ಶಾಲೆಗಳು ಕನ್ನಡ ಭಾಷೆಯನ್ನು ಕಲಿಸಲೇಬೇಕು. ಅದರಲ್ಲೂ ಮೊದಲ ವಿಷಯ ಅಥವಾ ಎರಡನೇ ವಿಷಯವಾಗಿ ಕನ್ನಡ ಭಾಷೆ ಕಲಿಸಬೇಕು. ಬೇರೆ ರಾಜ್ಯದಿಂದ ಅರ್ಧಕ್ಕೆ ಓದಲು ಬರೋ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದನೇ ತರಗತಿಯಿಂದ ಕನ್ನಡ ಭಾಷೆ ಓದಬೇಕು ಅಂತ ನಿಯಮ ರೂಪಿಸಲಾಗಿದೆ. ನಿಯಮ ಪಾಲನೆ ಮಾಡದೇ ಇದ್ದರೆ ದಂಡ ಹಾಕುವ, ಶಾಲೆಗಳ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಸರ್ಕಾರಕ್ಕೆ ಇದೆ.

  • ಸಾಂಪ್ರದಾಯಿಕ ಉಡುಗೆ ತೊಟ್ಟು, ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಪ್ರತಿಜ್ಞೆ ಮಾಡಿದ ಪುಟಾಣಿಗಳು

    ಸಾಂಪ್ರದಾಯಿಕ ಉಡುಗೆ ತೊಟ್ಟು, ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಪ್ರತಿಜ್ಞೆ ಮಾಡಿದ ಪುಟಾಣಿಗಳು

    ಹಾವೇರಿ: ಇಂದು ಹೊಸವರ್ಷದ ಹೊಸದಿನ ಆದರೆ ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಕಾನ್ವೆಂಟ್ ಶಾಲೆಯಲ್ಲಿ ಸಾಂಪ್ರದಾಯಿಕ ದಿನವನ್ನಾಗಿ ಆಚರಿಸಲಾಯಿತು.

    ಇದೇ ವೇಳೆ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ 1ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು 2020ರ ಮೊದಲ ದಿನದಂದು ಸಾಂಪ್ರದಾಯಿಕ ಉಡುಗೆ ತೊಟ್ಟು ಶಾಲೆಗೆ ಆಗಮಿಸಿದ್ದರು. ಒಂದೆಡೆ ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರೆ, ಇತ್ತ ಶಿಕ್ಷಕರು ಪಂಚೆ- ಶರ್ಟ್‍ನಲ್ಲಿ, ಶಿಕ್ಷಕೀಯರು ಸೀರೆ ಉಟ್ಟು ಶಾಲೆಗೆ ಬಂದು ಸಂಭ್ರಮಿಸಿದರು.

    ಅಲ್ಲದೇ ಹೊಸ ವರ್ಷದ ಸಂಕಲ್ಪವೆಂದು ಪ್ಲಾಸ್ಟಿಕ್ ಬಳಕೆ ನಿಷೇಧಿಸುತ್ತೇವೆ. ಸಂತೆ ಹಾಗೂ ಮಾರುಕಟ್ಟೆಗೆ ಹೋಗುವಾಗ ಬಟ್ಟೆಯ ಚೀಲ ಬಳಕೆ ಮಾಡುತ್ತೇವೆ ಎಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ದು ವಿಶೇಷವಾಗಿತ್ತು.

  • ಸೌರ ಕನ್ನಡಕಗಳ ಮೂಲಕ ಸೂರ್ಯಗ್ರಹಣ ಕಣ್ತುಂಬಿಕೊಂಡ ವಿದ್ಯಾರ್ಥಿಗಳು

    ಸೌರ ಕನ್ನಡಕಗಳ ಮೂಲಕ ಸೂರ್ಯಗ್ರಹಣ ಕಣ್ತುಂಬಿಕೊಂಡ ವಿದ್ಯಾರ್ಥಿಗಳು

    ಚಿಕ್ಕಬಳ್ಳಾಪುರ: ಕೇತುಗ್ರಸ್ಥ ಸೂರ್ಯಗ್ರಹಣವನ್ನ ಚಿಕ್ಕಬಳ್ಳಾಪುರ ನಗರದ ಬಿಜಿಎಸ್ ಅಗಲಗುರ್ಕಿ ಶಾಲೆಯಲ್ಲಿ ಸೌರ ಕನ್ನಡಕಗಳ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಕಣ್ತುಂಬಿಕೊಂಡಿದ್ದಾರೆ.

    ಸೂರ್ಯ ಗ್ರಹಣದ ಹಿನ್ನಲೆ ಬಿಜಿಎಸ್ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೌರ ಕನ್ನಡಕಗಳನ್ನ ಒದಗಿಸುವ ಮೂಲಕ ಸೂರ್ಯ ಗ್ರಹಣ ಕಣ್ತುಂಬಿಕೊಳ್ಳುವ ಅವಕಾಶ ಮಾಡಿತ್ತು. ಶಾಲಾ ಆವರಣದ ಮುಂಭಾಗದಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಸೌರ ಕನ್ನಡಕಗಳನ್ನ ಬಳಸಿ ಅಪರೂಪದ ಸೂರ್ಯ ಗ್ರಹಣ ವೀಕ್ಷಣೆ ಮಾಡಿದರು. ಸೂರ್ಯ ಗ್ರಹಣ ದರ್ಶನ ಪಡೆದ ಶಿಕ್ಷಕರು, ವಿದ್ಯಾರ್ಥಿಗಳು ಸಾಕಷ್ಟು ಸಂತಸಗೊಂಡರು.

    ಮೋಡ ಮುಸುಕಿದ ವಾತಾವಾರಣದ ನಡುವೆಯೂ ಕೇತುಗ್ರಸ್ಥ ಸೂರ್ಯ ಗ್ರಹಣ ಚಿಕ್ಕಬಳ್ಳಾಪುರದಲ್ಲಿ ಗೋಚರವಾಗಿದೆ. ಗ್ರಹಣ ಸ್ಪರ್ಶಕಾಲದಲ್ಲಿ ಮೋಡ ಮುಸುಕಿದ ವಾತಾವರಣವಿದ್ದ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಗ್ರಹಣ ದರ್ಶನ ಭಾಗ್ಯ ಸಿಗಲಿಲ್ಲ. ಆದರೆ ಗ್ರಹಣ ಮಧ್ಯೆ ಕಾಲ ಆಗಮಿಸುತ್ತಿದ್ದಂತೆ ಮೋಡಗಳು ಮರೆಯಾದ ಕಾರಣ ಜನರಿಗೆ ಸೂರ್ಯ ಗ್ರಹಣ ದರ್ಶನ ಭಾಗ್ಯ ಸಿಕ್ಕಿತು.

    ಆಗೊಮ್ಮೆ ಈಗೊಮ್ಮೆ ಎಂದು ಮೋಡಗಳು ಮರೆಯಾಗುತ್ತಿದ್ದಂತೆ ಜನರಿಗೆ ಸೂರ್ಯ ಗ್ರಹಣ ಭಾಗ್ಯ ಕಣ್ತುಂಬಿಕೊಳ್ಳುವ ಅವಕಾಶ ಸಿಗುತಿತ್ತು. ಮೋಡಗಳ ಆಟ ನೋಡುಗರಿಗೆ ಇರುಸು ಮುರುಸಾದರೂ ಆಗಾಗ ಮೋಡಗಳ ಮರೆಯಲ್ಲಿ ನಾನು ಇರುವೆ ಎಂದು ಬಂದು ಹೋಗುತ್ತಿದ್ದ ಸೂರ್ಯಗ್ರಹಣದ ಭಾಗ್ಯ ನೋಡುಗರ ಮನ ಸಂತಸಗೊಳಿಸಿತ್ತು. ಹಲವು ವರ್ಷಗಳ ನಂತರ ಸೂರ್ಯಗ್ರಹಣ ಕಂಡ ಜಿಲ್ಲೆಯ ಜನರಿಗೆ ಕೊನೆಗೂ ಮೋಡಗಳ ಮರೆಯಿಂದ ಸೂರ್ಯ ಗ್ರಹಣದ ದರ್ಶನ ಭಾಗ್ಯ ಸಿಕ್ಕಿದೆ.

  • ನಾಡಗೀತೆ ಹಾಡಿ ಕುವೆಂಪು ಸಮಾಧಿಗೆ ನಮಸ್ಕರಿಸಿದ ಮಕ್ಕಳು

    ನಾಡಗೀತೆ ಹಾಡಿ ಕುವೆಂಪು ಸಮಾಧಿಗೆ ನಮಸ್ಕರಿಸಿದ ಮಕ್ಕಳು

    ಚಿಕ್ಕಮಗಳೂರು: ಕುವೆಂಪು ಹುಟ್ಟುಹಬ್ಬ ಮಾಸದ ಅಂಗವಾಗಿ ಮಕ್ಕಳನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋದಾಗ ಮಕ್ಕಳೆಲ್ಲಾ ಸ್ವಯಂಪ್ರೇರಿತರಾಗಿ ಸಾಲಾಗಿ ನಿಂತು ಕುವೆಂಪು ಸಮಾಧಿ ಎದುರು ನಾಡಗೀತೆ ಹಾಡಿ ರಾಷ್ಟ್ರಕವಿಗೆ ಗೌರವ ಸಲ್ಲಿಸಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಮುದ್ದೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಐದನೇ ತರಗತಿ ಓದುತ್ತಿರೋ 15 ಮಕ್ಕಳನ್ನ ಪ್ರವಾಸಕ್ಕೆಂದು ಕುಪ್ಪಳ್ಳಿಯ ಕವಿಶೈಲಕ್ಕೆ ಕರೆದುಕೊಂಡು ಹೋಗಿದ್ದರು. ಆಗ ಸಮವಸ್ತ್ರ ಧರಿಸಿದ್ದ ಮಕ್ಕಳೆಲ್ಲರೂ ಸಾಲಾಗಿ ನಿಂತು ನಾಡಗೀತೆಯನ್ನ ಸಂಪೂರ್ಣವಾಗಿ ಹಾಡಿ ಕುವೆಂಪು ಸಮಾಧಿಗೆ ನಮಸ್ಕರಿಸಿದ್ದಾರೆ.

    ಮಕ್ಕಳ ನಡೆ ಕಂಡು ಶಿಕ್ಷಕರಿಗೆ ಆಶ್ಚರ್ಯವಾಗೋದ್ರ ಜೊತೆ ನಾವು ಬರೀ ಶಿಕ್ಷಣವನ್ನಷ್ಟೇ ಕಲಿಸಿದ್ದೇವೆ. ಆದರೆ ಮಕ್ಕಳು ನಾವು ಕಲಿಸಿದ ಶಿಕ್ಷಣದ ಜೊತೆ ಅದಕ್ಕಿಂತ ದೊಡ್ಡದ್ದಾದ ಸಂಸ್ಕಾರವನ್ನೂ ಕಲಿತ್ತಿದ್ದಾರೆಂದು ಮಕ್ಕಳನ್ನ ಕಂಡು ಶಿಕ್ಷಕರು ಖುಷಿ ಪಟ್ಟಿದ್ದಾರೆ. ಶಾಲೆಯ ಶಿಕ್ಷಕರಾದ ಸರ್ದಾರ್ ಖಾನ್, ಸತೀಶ್, ಅತಿಥಿ ಶಿಕ್ಷಕರಾದ ಶಿವಲೀಲಾ ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಗೀತಾ ಮಕ್ಕಳ ಜೊತೆಯಲ್ಲಿದ್ದರು.

  • SSLC ಫಲಿತಾಂಶ ಸುಧಾರಣೆಗೆ ಮುಂದಾದ ಶಿಕ್ಷಕರು

    SSLC ಫಲಿತಾಂಶ ಸುಧಾರಣೆಗೆ ಮುಂದಾದ ಶಿಕ್ಷಕರು

    ಕೊಪ್ಪಳ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ತೀವ್ರ ನಿಗಾ ಕಲಿಕಾ ತರಗತಿಯನ್ನು ಶುರು ಮಾಡಲಾಗಿದೆ. ಅದರಲ್ಲೂ ಹಿಂದುಳಿದ ಜಿಲ್ಲೆಯಾಗಿರುವ ಕೊಪ್ಪಳದಲ್ಲಿ ಶಿಕ್ಷಕರು ಹೆಚ್ಚು ಕ್ರಿಯಾಶೀಲರಾಗಿ, ಮಕ್ಕಳ ಮನೆಗೆ ತೆರಳಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

    ಗಂಗಾವತಿ ನಗರದ ಶ್ರೀ ಮತಿ ಎಂಎನ್‍ಎಂ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕರ ದಂಡೇ ಇದ್ದು, ಶಾಲೆಯಲ್ಲಿ 10ನೇ ತರಗತಿ ಮಕ್ಕಳಿಗೆ ವಿಶೇಷ ಕಾಳಜಿಯನ್ನು ತೋರಿಸಲಾಗುತ್ತಿದೆ. ಜೀವನದ ಪ್ರಮುಖ ಘಟ್ಟವಾಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಮಕ್ಕಳು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ತರಬೇತಿಯನ್ನು ನೀಡುತ್ತಿದ್ದಾರೆ. ಜೊತೆಗೆ ಇಡೀ ಪಠ್ಯಕ್ರಮವನ್ನು ಮತ್ತೊಂದು ಬಾರಿ ಬೋಧಿಸಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸುವುದು. ಪಠ್ಯದಲ್ಲಿನ ಕಠಿಣ ಅಂಶಗಳನ್ನು ತಿಳಿಯುವಂತೆ ಹೇಳುವುದು. ಇದೆಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಿ ಅವರನ್ನು ಪರೀಕ್ಷೆಗೆ ಅಣಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

    ಶಾಲೆಯಲ್ಲಿ 219 ವಿದ್ಯಾರ್ಥಿನಿಯರು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಕಳೆದ ಒಂದೂವರೆ ತಿಂಗಳಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಶಿಕ್ಷಕರು, ಶಾಲೆ ಆರಂಭಕ್ಕೂ ಮೊದಲು ಒಂದು ಗಂಟೆ, ಶಾಲಾ ಅವಧಿ ಪೂರ್ಣಗೊಂಡ ನಂತರ ಒಂದು ಗಂಟೆ ಮಕ್ಕಳಿಗೆ ಹೆಚ್ಚುವರಿ ಬೋಧನೆ ಮಾಡುತ್ತಾರೆ.

    ಆರು ವಿಷಯಗಳಿಗೆ ಒತ್ತು:
    ತೀವ್ರ ನಿಗಾ ಕಲಿಕಾ ತರಗತಿಯಲ್ಲಿ ಕೇವಲ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ಈ ಮೂರು ವಿಷಯಗಳಿಗೆ ಮಾತ್ರ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ ತಾಲೂಕಿನಾದ್ಯಂತ ಈ ಮೂರು ವಿಷಯಗಳಿಗೆ ಮಾತ್ರ ಹೆಚ್ಚು ಒತ್ತು ನೀಡಿದರೆ, ಇನ್ನುಳಿದ ಮೂರು ವಿಷಯಗಳಲ್ಲಿ ವಿದ್ಯಾರ್ಥಿಗಳು ಮಂಕಾಗುತ್ತಾರೆ ಎಂದು ಆರು ವಿಷಯಗಳಿಗೂ ತರಬೇತಿಯನ್ನು ನೀಡಲಾಗುತ್ತಿದೆ.

    ಮಿಸ್ ಕಾಲ್ ಪ್ರೋಗ್ರಾಂ:
    ನಗರದ ಶ್ರೀ ಮತಿ ಎಂಎನ್‍ಎಂ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿನ ಮಕ್ಕಳಿಗೆ ವಿಶೇಷ ಬೋಧನೆ ಜೊತೆಗೆ ಶಿಕ್ಷಕರು ಮನೆ ಮನೆಗೆ ತೆರಳಿ ಪಾಲಕರಿಗೆ ತಮ್ಮ ಮಕ್ಕಳ ಸಾಮಥ್ರ್ಯವನ್ನು ತಿಳಿಸುವುದಲ್ಲದೆ, ತಮ್ಮ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ನಂಬರ್‍ಗಳನ್ನು ತೆಗೆದುಕೊಂಡು ಶಿಕ್ಷಕರು, ಪ್ರತಿನಿತ್ಯ ಬೆಳಗ್ಗೆ ಐದು ಗಂಟೆಗೆ ಮಿಸ್ ಕಾಲ್ ಮಾಡುವ ಮೂಲಕ ಅವರ ಮಕ್ಕಳನ್ನು ಓದಿಕೊಳ್ಳಲು ಎಚ್ಚರಿಸುವಂತೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.

    ತಾಲೂಕಿನಾದ್ಯಂತ ಒಟ್ಟು 45 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಪ್ರತಿ ಶಾಲೆಯಲ್ಲೂ ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡುವುದಲ್ಲದೆ, ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಶ್ರಮವಹಿಸಲಾಗುತ್ತಿದೆ.

  • ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ

    ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ

    – ಒಂದೇ ರೂಮಿನಲ್ಲಿ 1 ರಿಂದ 4ರವರೆಗೆ ಕ್ಲಾಸ್
    – ಹೆಡ್ ಮೇಷ್ಟ್ರಿಗೆ ಇಲ್ಲ ಜಾಗ

    ಚಿಕ್ಕಮಗಳೂರು: ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ ಮಾಡುತ್ತಾರೆ. ನಮ್ ಟೀಚರ್ ಹೇಳೋ ಪಾಠವನ್ನ ಮಾತ್ರ ಕೇಳ್ಬೇಕು. ಬೇರೆಯವ್ರು ಹೇಳೋದ್ನ ಕೇಳಂಗಿಲ್ಲ. ಮಕ್ಕಳಿಗೆ ಅರ್ಥ ಆಗುತ್ತೋ ಇಲ್ವೋ ಗೊತ್ತಿಲ್ಲ. ಶಿಕ್ಷಕರು ಪಾಠವನ್ನಂತು ಮಾಡ್ಲೇಬೇಕು. ಇದು ಕಾಫಿನಾಡಿನ ಸರ್ಕಾರಿ ಕನ್ನಡ ಶಾಲೆಯ ಕಥೆ. ಕ್ಲಾಸ್ ರೂಂ ಒಂದೇ. ಪಾಠ ಮಾಡೋ ಶಿಕ್ಷಕರು ನಾಲ್ಕು ಜನ. ಕೇಳೋ ಮಕ್ಕಳು 45. ಎಲ್ಲರೂ ಬೇರೆ-ಬೇರೆ ತರಗತಿಯವ್ರು. ಯಾವ ಶಿಕ್ಷಕರು ಯಾವ ಪಾಠವನ್ನ ಯಾವ ತರಗತಿಯವ್ರಿಗೆ ಮಾಡ್ತಿದ್ದಾರೆ ಅನ್ನೋದು ಮಕ್ಕಳಿಗಲ್ಲ ಶಿಕ್ಷಕರಿಗೆ ಕನ್ಫ್ಯೂಸ್. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಟೀಚರ್ ಪಾಠ ಮಾಡ್ತಾರೆ, ಮಕ್ಕಳು ಅದನ್ನ ಕೇಳ್ತಿದ್ದಾರೆ.

    ಕಡೂರು ತಾಲೂಕಿನ ಕೆ.ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಬಸವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ 2007ರವರಗೆ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಾಗಿತ್ತು. ಸರ್ಕಾರ ಈ ಶಾಲೆಯನ್ನು 2008ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಎಂದು ಮೇಲ್ದರ್ಜೆಗೇರಿಸಿದೆ. ಆದ್ರೆ ಶಾಲೆಗೆ ಕೊಡಬೇಕಾದ ಮೂಲಭೂತ ಸೌಕರ್ಯವನ್ನು ಕೊಟ್ಟೇ ಇಲ್ಲ. ಅಂದು ಇದ್ದ ಐದೇ ಕೊಠಡಿಯಲ್ಲಿ ಪಾಠ-ಪ್ರವಚನ ನಡೆಯುತ್ತಿತ್ತು. ಮಳೆ-ಗಾಳಿಗೆ ಎರಡು ಕೊಠಡಿಗಳು ಹಾಳಾಗಿದ್ದು ಅಲ್ಲಿ ಮಕ್ಕಳನ್ನು ಕೂರಿಸ್ತಿಲ್ಲ. ಉಳಿದ ಮೂರು ಕೊಠಡಿಯಲ್ಲಿ ಒಂದರಲ್ಲಿ 1ನೇ ತರಗತಿಯಿಂದ 4ನೇ ತರಗತಿ ಮಕ್ಕಳು. ಮತ್ತೊಂದರಲ್ಲಿ ಐದನೇ ತರಗತಿಯಿಂದ 6 ನೇ ತತರಗತಿ ಮಕ್ಕಳು. ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಏಳನೇ ತರಗತಿ ಮಕ್ಕಳು. ಹೆಡ್ ಮಾಸ್ಟ್ರು ಮೀಟಿಂಗ್ ಅಂದ್ರೆ ಆ ಮಕ್ಕಳು ಹೊರಗೆ ಹೋಗಬೇಕಾಗುತ್ತದೆ. ಇದೇ ರೀತಿ ಮೂರು ವರ್ಷದಿಂದ ನಡೆದುಕೊಂಡು ಬಂದಿದೆ.

    ಪೂರ್ವ ದಿಕ್ಕಿಗೆ 1ನೇ ತರಗತಿ ಮಕ್ಕಳು, ಎದುರಿಗೆ ಶಿಕ್ಷಕಿ. ಪಶ್ಚಿಮಕ್ಕೆ 2ನೇ ತರಗತಿ ಮಕ್ಕಳು, ಎದುರಿಗೆ ಶಿಕ್ಷಕಿ. ಉತ್ತರಕ್ಕೆ 3, ದಕ್ಷಿಣಕ್ಕೆ 4ನೇ ತರಗತಿ ಮಕ್ಕಳು, ಎದುರಿಗೆ ಶಿಕ್ಷಕರು. ಇಲ್ಲಿ ಒಬ್ಬೊರಿಗೊಬ್ಬುರು ಬೆನ್ ಹಾಕಿಕೊಂಡೇ ಪಾಠ ಕೇಳಬೇಕು. ಇಲ್ಲಿ ಒಂದೇ ಕೊಠಡಿಯೊಳಗೆ ಏಕಕಾಲಕ್ಕೆ ನಾಲ್ಕು ಕ್ಲಾಸ್ ನೆಡೆಯುತ್ತವೆ. ದಯವಿಟ್ಟು ಮೂರು ರೂಂ ಕೊಡಿ ಎಂದು ಮೂರು ವರ್ಷಗಳಿಂದ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರು ಸರ್ಕಾರಕ್ಕೆ ಮನವಿ ಮಾಡ್ತಿದ್ದಾರೆ. ಆದ್ರೆ ಯಾರೂ ಸ್ಪಂದಿಸಿಲ್ಲ. ಎಸ್‍ಡಿಎಂಸಿ. ಸದಸ್ಯರು ಕೊಟ್ಟ ಮನವಿಗಳಿಗೆ ಸಹಿ ಹಾಕಿ-ಹಾಕಿ ಕೈ ನೋವಾಗಿದೆ ಅಷ್ಟು ಮನವಿ ಮಾಡಿದ್ದೀವಿ ಎನ್ನುತ್ತಾರೆ. ಅಧಿಕಾರಿಗಳು ಮನವಿ ಪತ್ರಗಳನ್ನು ಇಸ್ಕೊಂಡ್ರೇ ವಿನಃ ಬಿಲ್ಡಿಂಗ್ ಮಾತ್ರ ಕೊಟ್ಟಿಲ್ಲ.

    ಈ ಊರಲ್ಲಿ ಶ್ರೀಮಂತರಿಲ್ಲ. ಇರೋರೆಲ್ಲಾ ಹಿಂದುಳಿದ ವರ್ಗ, ಅಲೆಮಾರಿ ಹಾಗೂ ಯಾದವ ಜನಾಂಗಕ್ಕೆ ಸೇರಿದವರು. ಎಲ್ಲರೂ ಕೂಲಿ ಮಾಡಿಕೊಂಡೆ ಬದುಕ್ತಿರೋರು. ಇವ್ರಿಗೆ ಕಾನ್ವೆಂಟ್‍ಗಳಲ್ಲಿ ಓದಿಸೋ ಶಕ್ತಿಯೂ ಇಲ್ಲ. ಮಕ್ಕಳು ನಮ್ಮಂತಾಗೋದು ಬೇಡ ಎಂದು ಶಾಲೆಗೆ ಕಳಿಸಿ ಕೂಲಿಗೆ ಹೋಗ್ತಿದ್ದಾರೆ. ಆದ್ರೆ ಸರ್ಕಾರ ಉಚಿತ ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತೆ ಕಾಣ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಲ್ಲ ಎಂದೇಳೋ ಸರ್ಕಾರ ಉಳಿಯೋಕೆ ಬೇಕಾದ್ದನ್ನು ಮಾಡ್ತಿಲ್ಲ. ಈ ರೀತಿ ಸೌಲಭ್ಯ ಕೊಟ್ರೆ ಮಕ್ಕಳು ಓದು-ಬರಹ ಕಲಿಯೋದಾದ್ರು ಹೇಗೆ? ಇಲ್ಲಿ ಸಮರ್ಪಕವಾದ ಶಿಕ್ಷಕರಿದ್ದಾರೆ. ಮಕ್ಕಳೂ ಇದ್ದಾರೆ. ಆದರೆ ಬಿಲ್ಡಿಂಗ್ ಇಲ್ಲ. ಇದು ಹೀಗೆ ಮುಂದುವರೆದ್ರೆ ನಾಳೆ ಮಕ್ಕಳು ಹೆತ್ತವರ ಜೊತೆ ಕೂಲಿಗೆ ಹೋಗ್ತಾರೆ ಶಾಲೆಗೆ ಬೀಗ ಬೀಳುತ್ತೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಸ್ಥಳೀಯರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಬಿಲ್ಡಿಂಗ್‍ಗಾಗಿ ಸಂಸದೆ ಶೋಭಾ ಕರಂದ್ಲಾಜೆಗೂ ಮನವಿ ಮಾಡಿದ್ದಾರೆ. ಆದರೆ ಅವರು ಇದು ನನ್ನ ವ್ಯಾಪ್ತಿಗೆ ಬರಲ್ಲ ಅಂದ್ರಂತೆ. ಶಾಸಕ ಬೆಳ್ಳಿ ಪ್ರಕಾಶ್‍ಗೆ ಮನವಿ ಮಾಡಿದ್ದಾರೆ. ಅವರು ಕೇವಲ ಆಯ್ತು ಎಂದು ಸುಮ್ಮನಾಗಿದ್ದಾರೆ. ಅಧಿಕಾರಿಗಳಿಗೆ ಕೊಟ್ಟ ಮನವಿ ಪತ್ರಗಳಿಗೆ ಇಂದಿಗೂ ಬೆಲೆ ಸಿಕ್ಕಿಲ್ಲ. ಊರಿನ ಜನ ಮುಖ್ಯಮಂತ್ರಿ ಯಡಿಯೂರಪ್ಪನವರು ಇನ್ಮುಂದೆ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಎಂದು ಹೇಳಿದ್ದಾರೆ. ಆ ಪರ್ವ ಈ ಬಡ ಮಕ್ಕಳ ಶಾಲೆಯಿಂದಲೇ ಆರಂಭವಾಗಲಿ ಅನ್ನೋದು ಸ್ಥಳೀಯರ ಅಶಯವಾಗಿದೆ.

  • ಶಾಲೆಗೆ ಪೋಷಕರನ್ನ ಕರೆದುಕೊಂಡು ಬಾ ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

    ಶಾಲೆಗೆ ಪೋಷಕರನ್ನ ಕರೆದುಕೊಂಡು ಬಾ ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

    – ಶಾಲಾ ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ

    ಬೆಂಗಳೂರು: ಶಿಕ್ಷಕರು ಶಾಲೆಗೆ ಪೋಷಕರನ್ನ ಕರೆದುಕೊಂಡು ಬಾ ಎಂದಿದ್ದಕ್ಕೆ ಹೆದರಿದ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ದೊಮ್ಮಲೂರು ಲೇಔಟ್‍ನಲ್ಲಿ ನಡೆದಿದೆ.

    ವಿದ್ಯಾರ್ಥಿ ವೇಣುಗೋಪಾಲ್(13) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಆರ್‍ಎಲ್‍ಎಸ್ ಪಟೇಲ್ ರಾಮರೆಡ್ಡಿ ಸ್ಕೂಲ್‍ನಲ್ಲಿ ವೇಣುಗೋಪಾಲ್ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಶಾಲೆಗೆ ಆಗಾಗ ವೇಣುಗೋಪಾಲ್ ಗೈರಾಗುತ್ತಿದ್ದ ಹಿನ್ನೆಲೆ ಶಿಕ್ಷಕರು ಪೋಷಕರನ್ನು ಕರೆದುಕೊಂಡು ಬಾ ಎಂದು ಆತನಿಗೆ ಹೇಳಿದ್ದರಂತೆ. ಇದಕ್ಕೆ ಭಯಬಿದ್ದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

    ಬುಧವಾರ ಮಧ್ಯಾಹ್ನ ಶಾಲೆಯಲ್ಲಿ ಊಟಕ್ಕೆ ಬಿಟ್ಟ ವೇಳೆ ಇತರೇ ವಿದ್ಯಾರ್ಥಿಗಳ ಜೊತೆಗೆ ವೇಣುಗೋಪಾಲ್ ಗಲಾಟೆ ಮಾಡಿಕೊಂಡಿದ್ದನು. ಗಲಾಟೆ ವೇಳೆ ವೇಣುಗೋಪಾಲ್ ಮತ್ತೊಂದು ವಿದ್ಯಾರ್ಥಿಯ ಕೈಗೆ ಗಾಯ ಮಾಡಿದ್ದನು. ಗಾಯದ ಗುರುತು ನೋಡಿದ ಪೋಷಕರು ಸ್ಕೂಲ್‍ಗೆ ಬಂದು ವೇಣುಗೋಪಾಲ್ ವಿರುದ್ಧ ಶಾಲಾ ಆಡಳಿತದ ಬಳಿ ದೂರಿದ್ದರು. ಈ ದೂರು ಆಧಾರಿಸಿದ ಶಾಲೆ ವೇಣುಗೋಪಾಲ್ ನನ್ನು ಕರೆದು, ನಾಳೆ ಬರುವಾಗ ಪೋಷಕರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದರು. ಇದರಿಂದ ಭಯಗೊಂಡ ವಿದ್ಯಾರ್ಥಿ ಮನೆ ಹಿಂಭಾಗದ ನಿರ್ಜನ ಪ್ರದೇಶದ ಭಾವಿ ಬಳಿಯಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಪೋಷಕರು ಮಾತ್ರ ಮಗನ ಸಾವಿಗೆ ಶಾಲಾ ಸಿಬ್ಬಂದಿಯೇ ಕಾರಣ ಎಂದು ಆರೋಪಿಸಿದ್ದಾರೆ. ಮಗನಿಗೆ ಶಾಲೆಯಲ್ಲಿ ಶಿಕ್ಷಕರು ಹೊಡೆದಿದ್ದಾರೆ, ನಿಂದಿಸಿದ್ದಾರೆ. ಇದರಿಂದ ಆತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಅಲ್ಲದೆ ಮೃತ ವಿದ್ಯಾರ್ಥಿ ಪೋಷಕರು ಹಾಗೂ ಇತರೆ ಮಕ್ಕಳ ಪೋಷಕರು ಶಾಲೆ ಬಳಿ ತೆರಳಿ ಗಲಾಟೆ ಕೂಡ ಮಾಡಿದ್ದಾರೆ.

    ಶಾಲಾ ಮಂಡಳಿ ಈ ಆರೋಪವನ್ನು ತಳ್ಳಿಹಾಕಿದ್ದು, ವಿದ್ಯಾರ್ಥಿ ಆಗಾಗ ಶಾಲೆ ತಪ್ಪಿಸುತ್ತಿದ್ದನು. ಅಲ್ಲದೆ ಇತರೆ ಮಕ್ಕಳ ಜೊತೆ ಗಲಾಟೆ ಮಾಡಲು ಹೋಗುತ್ತಿದ್ದನು. ಅದಕ್ಕೆ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ನಮ್ಮ ಶಿಕ್ಷಕರು ಹೇಳಿದ್ದರು ಅಷ್ಟೇ. ಆದರೆ ವಿದ್ಯಾರ್ಥಿ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂದು ನಮಗೆ ತಿಳಿದಿಲ್ಲ ಎಂದು ಹೇಳುತ್ತಿದೆ.

    ವಿದ್ಯಾರ್ಥಿ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟುಕೊಂಡಿದೆ. ಒಂದು ಕಡೆ ಶಾಲಾ ಮಂಡಳಿ ನಾವು ಆತನಿಗೆ ಹೊಡೆದಿಲ್ಲ, ಕೇವಲ ಪೋಷಕರನ್ನು ಕರೆದುಕೊಂಡು ಬಾ ಎಂದು ತಿಳಿಸಿದ್ದೆವು ಎನ್ನುತ್ತಿದ್ದರೆ, ಪೋಷಕರು ಮಾತ್ರ ಶಾಲಾ ಸಿಬ್ಬಂದಿಯಿಂದಲೇ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಣ್ಣೀರಿಡುತ್ತಿದ್ದಾರೆ.

    ಈ ಬಗ್ಗೆ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, ವೇಣುಗೋಪಾಲ್ ಒಳ್ಳೆಯ ಹುಡುಗ. ಓದಿನಲ್ಲೂ ಚುರುಕಾಗಿದ್ದನು, ಎಲ್ಲರೊಡನೆ ಖುಷಿಯಿಂದ ಇರುತ್ತಿದ್ದನು. ಶಾಲೆಯಲ್ಲಿ ಆತನಿಗೆ ಶಿಕ್ಷಕರು ಹೊಡೆದು, ನಿಂದಿಸಿದ್ದರು ಎಂದು ಆತನ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ತಿಳಿಸಿದ್ದಾಳೆ. ಇದರಿಂದ ಮನನೊಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಮೃದು ಸ್ವಭಾವದ ಬಾಲಕ ಎಂದು ಶಾಲಾ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.

    ಬಾಲಕನ ಸಾವಿಗೆ ನಿಖರ ಕಾರಣವೇನೆಂದು ತಿಳಿಯುತ್ತಿಲ್ಲ. ಈ ಬಗ್ಗೆ ಹಲವು ಅನುಮಾನಗಳು ಕೂಡ ವ್ಯಕ್ತವಾಗುತ್ತಿದೆ. ಸದ್ಯ ಹಲಸೂರು ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಈ ಸಾವಿನ ಸತ್ಯಾಂಶ ತನಿಖೆ ನಡೆಸಿದ ಬಳಿಕವೇ ಬಯಲಿಗೆ ಬರಲಿದೆ.

  • ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೈಟೆಕ್ ಶಿಕ್ಷಣ

    ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೈಟೆಕ್ ಶಿಕ್ಷಣ

    ಕೊಪ್ಪಳ: ಅಧುನಿಕ ಯುಗದಲ್ಲಿ ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ಶಾಲೆ ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ. ಶಿಕ್ಷಕರ ಪ್ರಯತ್ನದಿಂದ ಅಲ್ಲಿನ ಶಾಲೆಯ ಮಕ್ಕಳಿಗೆ ಹೈಟೆಕ್ ಶಿಕ್ಷಣ ಸಿಗುತ್ತಿದೆ.

    ಕೊಪ್ಪಳ ತಾಲೂಕಿನ ಉಪಳಾಪೂರ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ. ಉಪಳಾಪೂರ ಮಕ್ಕಳಿಗೆ ಪ್ರೂಜೆಕ್ಟರ್ ಮೂಲಕ ಶಿಕ್ಷಣ ನೀಡಲಾಗುತ್ತದೆ. ಶಾಲೆಯ ಶಿಕ್ಷಕರು ಗ್ರಾಮಸ್ಥರ ನೆರವಿನಿಂದ ಶಾಲೆಯಲ್ಲಿ ಪ್ರೂಜೆಕ್ಟರ್ ಅಳವಡಿಕೆ ಮಾಡಲಾಗಿದೆ. ಆನ್‍ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.

    ಒಂದರಿಂದ ಮೂರನೇ ತರಗತಿ ಮಕ್ಕಳಿಗೆ ನಲಿ ಕಲಿ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಯ ನಲಿ ಕಲಿ ಕೊಠಡಿಯನ್ನು ಉತ್ತಮವಾಗಿ ವಿನ್ಯಾಸ ಮಾಡಲಾಗಿದೆ. ಉಪಳಾಪೂರ ಶಾಲೆಯ ಶಿಕ್ಷಕ ಮಹೇಶ್ ತಮ್ಮ ಸ್ವಂತ ಹಣದಿಂದ ನಲಿ ಕಲಿ ಕೊಠಡಿಯನ್ನು ವಿನ್ಯಾಸ ಮಾಡಿದ್ದಾರೆ. ಉಪಳಾಪರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಲಿ ಕಲಿ ಕೊಠಡಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇಡೀ ನಲಿ ಕಲಿ ಕೊಠಡಿಯನ್ನು ಶಿಕ್ಷಕರೇ ಪೈಟಿಂಗ್ ಮಾಡಿದ್ದಾರೆ. ಥರ್ಮಕೋಲ್ ಬಳಸಿ ಪಿಓಪಿ ಮಾದರಿಯಲ್ಲಿ ಕೊಠಡಿ ವಿನ್ಯಾಸ ಮಾಡಿದ್ದಾರೆ.

    ಪೇಪರ್ ಸೀಟ್‍ಗಳನ್ನು ಕಟ್ ಮಾಡಿ ಕಾಗುಣಿತ ಹೊಂದಿಸುವ ಮಾದರಿಯಲ್ಲಿ ಶಿಕ್ಷಕರು ಡಿಸೈನ್ ಮಾಡಿದ್ದಾರೆ. ಅದೇ ರೀತಿ ಗೋಡೆಯನ್ನು ನಲಿ ಕಲಿ ಮಾದರಿಯಲ್ಲಿ ಮೂರು ಮಕ್ಕಳಿಗೊಂದು ಬೋರ್ಡ್ ನಿರ್ಮಿಸಿದ್ದಾರೆ. ನಲಿ ಕಲಿ ಕೊಠಡಿಯಲ್ಲಿ ಆಡಿಯೋ ಸಾಂಗ್ಸ್ ಮೂಲಕ ಪಾಠ ಮಾಡಲಾಗುತ್ತದೆ. ಜೊತೆಗೆ ಶಾಲೆಯ ಹೊರಗಡೆ ಮಕ್ಕಳಿಗೆ ಲೈಬ್ರರಿಯನ್ನು ಕೂಡ ನಿರ್ಮಾಣ ಮಾಡಲಾಗಿದೆ.

  • ಸರ್ಕಾರಿ ಬಸ್, ಬೈಕ್ ನಡುವೆ ಅಪಘಾತ- ಶಿಕ್ಷಕರಿಬ್ಬರು ಸಾವು

    ಸರ್ಕಾರಿ ಬಸ್, ಬೈಕ್ ನಡುವೆ ಅಪಘಾತ- ಶಿಕ್ಷಕರಿಬ್ಬರು ಸಾವು

    ಕೊಪ್ಪಳ: ಬೈಕ್ ಮತ್ತು ಸರ್ಕಾರ ಬಸ್ ನಡುವೆ ಅಪಘಾತ ಸಂಭವಿಸಿ ಶಿಕ್ಷಕರಿಬ್ಬರು ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಬಳಿ ನಡೆದಿದೆ.

    ಗುರುವಾರ ರಾತ್ರಿ ಈ ಅವಘಡ ನಡೆದಿದ್ದು, ಶಿಕ್ಷಕಿ ನಿಖಿತ್ ಬೇಗಂ(35) ಮಹ್ಮದ್ ಸಲಾವುದ್ದೀನ್(45) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಹಮ್ಮದ್ ಸಲಾವುದ್ದೀನ್ ಬೀದರ್ ಮೂಲದವರಾಗಿದ್ದು, ಗಂಗಾವತಿಯ ಸಿಪಿಎಸ್ ಸರ್ಕಾರಿ ಉರ್ದು ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ನಿಖಿತ್ ಬೇಗಂ ಅವರು ಚಿತ್ರದುರ್ಗ ಮೂಲದವರಾಗಿದ್ದು, ಇವರು ಗಂಗಾವತಿಯ ಹೀರೆಜಂತಕಲ್ ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

    ರಾತ್ರಿ ಆನೆಗುಂದಿಯಲ್ಲಿ ತರಬೇತಿ ಮುಗಿಸಿಕೊಂಡು ಬೈಕ್‍ನಲ್ಲಿ ಇಬ್ಬರೂ ಗಂಗಾವತಿಗೆ ಹಿಂದಿರುಗಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಎದುರಿನಿಂದ ಬಂದ ಸರ್ಕಾರಿ ಬಸ್ ಹಾಗೂ ಶಿಕ್ಷಕರ ಬೈಕ್ ನಡುವೆ ಅಪಘಾತವಾಗಿದ್ದು, ಶಿಕ್ಷಕರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.