Tag: teachers

  • ಮಾರ್ಚ್ 2ನೇ ವಾರದಲ್ಲಿ ಮೌಲ್ಯಾಂಕನ ಪರೀಕ್ಷೆ- ಮಾಹಿತಿ ಮಿಸ್ ಆದ್ರೆ ಶಿಕ್ಷಕರೇ ಹೊಣೆ

    ಮಾರ್ಚ್ 2ನೇ ವಾರದಲ್ಲಿ ಮೌಲ್ಯಾಂಕನ ಪರೀಕ್ಷೆ- ಮಾಹಿತಿ ಮಿಸ್ ಆದ್ರೆ ಶಿಕ್ಷಕರೇ ಹೊಣೆ

    ಬೆಂಗಳೂರು: ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ಮಾರ್ಚ್ 2 ನೇ ವಾರ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ತೀರ್ಮಾನ ಮಾಡಿದೆ. ಈ ಸಂಬಂಧ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಆದೇಶ ಹೊರಡಿಸಿರುವ ಇಲಾಖೆ, ವಿದ್ಯಾರ್ಥಿಗಳ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.

    7 ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸೋ ಬದಲು ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ತೀರ್ಮಾನ ಮಾಡಿದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪರೀಕ್ಷೆ ಸಿದ್ಧತೆಗಳನ್ನ ಆರಂಭ ಮಾಡಿದೆ. ಫೆಬ್ರವರಿ 5ರ ಒಳಗೆ ವಿದ್ಯಾರ್ಥಿಗಳ ಸಂಖ್ಯೆ, ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ, ಮೀಡಿಯಂ ಸೇರಿದಂತೆ ಸಂಪೂರ್ಣ ಮಾಹಿತಿಗಳನ್ನ ಸ್ಯಾಟ್ಸ್( ಸ್ಟೂಡೆಂಟ್ ಅಚೀವ್ ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್) ತಂತ್ರಾಂಶದ ಮೂಲಕ ಅಪ್ ಲೋಡ್ ಮಾಡಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಮಾಹಿತಿ ಲಭ್ಯವಾದ ಬಳಿಕ ಪ್ರಶ್ನೆ ಪತ್ರಿಕೆ ಮುದ್ರಣ ಕೆಲಸ ಪ್ರಾರಂಭವಾಗಲಿದೆ.

    ಪ್ರಶ್ನೆ ಪತ್ರಿಕೆ ಮಾದರಿಯನ್ನ ಶಿಕ್ಷಣ ಇಲಾಖೆ ಇನ್ನೂ ತೀರ್ಮಾನ ಮಾಡಿಲ್ಲ. ಮಕ್ಕಳ ಮಾಹಿತಿ ಬಂದ ಬಳಿಕ ಪ್ರಶ್ನೆ ಪತ್ರಿಕೆ ಮಾದರಿ ಇಲಾಖೆ ತೀರ್ಮಾನ ಮಾಡಲಿದೆ. ಪ್ರತಿಯೊಬ್ಬ 7 ನೇ ತರಗತಿ ವಿದ್ಯಾರ್ಥಿ ಮೌಲ್ಯಾಂಕನ ಪರೀಕ್ಷೆ ಬರೆಯೋದು ಕಡ್ಡಾಯ. ಒಂದು ವೇಳೆ ವಿದ್ಯಾರ್ಥಿಗಳ ಮಾಹಿತಿ ತಪ್ಪಿ ಹೋದರೆ ಅದಕ್ಕೆ ಶಾಲೆ ಮತ್ತು ಶಿಕ್ಷಕರೇ ಹೊಣೆಯಾಗಲಿದ್ದಾರೆ ಅಂತ ಇಲಾಖೆ ಎಚ್ಚರಿಕೆ ನೀಡಿದೆ.

    ಏನಿದು ಮೌಲ್ಯಾಂಕನ ಪರೀಕ್ಷೆ?:
    7 ನೇ ತರಗತಿ ಪಬ್ಲಿಕ್ ಪರೀಕ್ಷೆ ಬದಲಾಗಿ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಗುಣಮಟ್ಟ ಅಳೆದು, ಯಾವ ವಿಷಯದಲ್ಲಿ ವಿದ್ಯಾರ್ಥಿ ವೀಕ್ ಇರುತ್ತಾನೋ ಅ ವಿಷಯದ ಮೇಲೆ ಹೆಚ್ಚು ಗಮನ ಕೊಟ್ಟು ಆತನಿಗೆ ಅಭ್ಯಾಸ ಮಾಡಿಸೋದಾಗಿದೆ. ಈ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯನ್ನ ಫೇಲ್ ಮಾಡೋದಿಲ್ಲ. ಆಯಾ ಶಾಲೆಯಲ್ಲಿ ಈ ಪರೀಕ್ಷೆಗಳು ನಡೆಯುತ್ತೆ. ಜಿಲ್ಲಾ ಮಟ್ಟದಲ್ಲಿ ಶಿಕ್ಷಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಾರೆ. ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆ ತಯಾರು ಮಾಡುತ್ತದೆ. ಯಾವ ವಿಷಯದಲ್ಲಿ ವಿದ್ಯಾರ್ಥಿ ವೀಕ್ ಇರುತ್ತಾನೋ ಅ ವಿಷಯಕ್ಕೆ 8ನೇ ತರಗತಿಯಿಂದ ಹೆಚ್ಚಿನ ಪ್ರಾಮುಖ್ಯತೆ ನೀಡಿ ಆತನಿಗೆ ತರಬೇತಿ ಕೊಡುವುದೇ ಈ ಪರೀಕ್ಷೆಯ ಉದ್ದೇಶವಾಗಿದೆ. ಈ ಮೂಲಕ ಗುಣಮಟ್ಟದ ಶಿಕ್ಷಣ ನಿಡೋದು ಈ ಪರೀಕ್ಷೆಯ ಗುರಿಯಾಗಿದೆ.

  • ಶಿಕ್ಷಕರ ಸಿಇಟಿ ಪರೀಕ್ಷಾ ಗೊಂದಲ ನಿವಾರಿಸಲಾಗುವುದು: ಸುರೇಶ್ ಕುಮಾರ್

    ಶಿಕ್ಷಕರ ಸಿಇಟಿ ಪರೀಕ್ಷಾ ಗೊಂದಲ ನಿವಾರಿಸಲಾಗುವುದು: ಸುರೇಶ್ ಕುಮಾರ್

    ತುಮಕೂರು: ಶಿಕ್ಷಕರ ನೇಮಕಾತಿ ವಿಚಾರವಾಗಿ ನಡೆಸುವ ಸಿಇಟಿ ಪರೀಕ್ಷೆಯಲ್ಲಿನ ತೊಡಕುಗಳನ್ನು ನಿವಾರಿಸಲು ಚರ್ಚೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ತುಮಕೂರಿನ ರಾಮಕೃಷ್ಣ ಆಶ್ರಮದಲ್ಲಿ 27ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಿಇಟಿ ಪರೀಕ್ಷೆಯಲ್ಲಿ ಅರ್ಹತಾ ಮಟ್ಟ ಹೆಚ್ಚಿಸಲು ಸಿ ಆ್ಯಂಡ್ ಆರ್ ನಿಯಮವನ್ನು ಇಡಲಾಗಿದೆ. ಈ ಸಿ ಆ್ಯಂಡ್ ಆರ್ ರೂಲ್ಸ್ ನಲ್ಲಿನ ತೊಡಕನ್ನ ನಿವಾರಿಸಲು ಚರ್ಚಿಸಿದ್ದು, ಶೀಘ್ರವೇ ನಿವಾರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಸಿ ಆ್ಯಂಡ್ ಆರ್ ರೂಲ್ಸ್‍ನಿಂದ ಶಿಕ್ಷಕರ ಆಯ್ಕೆ ಕಠಿಣವಾಗುತ್ತಿದೆ. ಹಾಗಾಗಿ ಈ ನಿಯಮವನ್ನು ನಡೆಸಬೇಕೋ ಅಥವಾ ಬೇಡವೋ ಎಂಬ ಚರ್ಚೆ ನಡೆಯುತ್ತಿದ್ದು, ಶೀಘ್ರವೇ ಒಂದು ನಿರ್ಧಾರಕ್ಕೆ ಬರಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಆರ್.ಟಿ.ಇ ಬಗ್ಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಹಿಂದಿನ ಸರ್ಕಾರದ ಅವಧಿಯಲ್ಲಿ ಹೊರಡಿಸಿರುವ ಆದೇಶವನ್ನೇ ಮುಂದುವರಿಸುವುದಾಗಿ ಖಡಕ್ಕಾಗಿ ನುಡಿದ ಅವರು, ಬದಲಾವಣೆ ಬಗ್ಗೆ ಸಿ.ಎಂ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

    ಸರ್ಕಾರಿ ಶಾಲೆಗಳನ್ನು ಸದೃಢವನ್ನಾಗಿ ಮಾಡಬೇಕೆಂಬುದು ನನ್ನ ಆಶಯ ಎಂದ ಸಚಿವರು, ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆರ್.ಒ ಪ್ಲಾಂಟ್‍ಗಳನ್ನು ಕೊಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಹೆಚ್ಚು ನೀರು ಕುಡಿಸುವ ಅಭ್ಯಾಸ ಕೂಡ ಆಗಬೇಕಿದೆ. ಕೇರಳ ಮಾದರಿಯಲ್ಲಿ ವಾಟರ್ ಬೆಲ್ ಪದ್ಧತಿಯನ್ನು ಕೂಡ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಸರ್ಕಾರಿ ಶಾಲೆಯ ಆಂಗ್ಲ ಮಾಧ್ಯಮದ ತರಗತಿಗಳು ಚೆನ್ನಾಗಿ ನಡೆಯುತ್ತಿವೆ ಎಂಬ ಅಂಶ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಹೆಚ್ಚು ಪಬ್ಲಿಕ್ ಶಾಲೆಗಳು ಬೇಕೆಂದು ಶಾಸಕರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಚಿಂತನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • SSLC ಯಲ್ಲಿ ಮತ್ತೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಹಾಸನದಲ್ಲಿ ಮಾಸ್ಟರ್ ಪ್ಲಾನ್

    SSLC ಯಲ್ಲಿ ಮತ್ತೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಹಾಸನದಲ್ಲಿ ಮಾಸ್ಟರ್ ಪ್ಲಾನ್

    ಹಾಸನ: ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮತ್ತೆ ಪ್ರಥಮ ಸ್ಥಾನ ಪಡೆಯಲು ಜಿಲ್ಲೆಯ ಶಿಕ್ಷಕರು ಪಣತೊಟ್ಟಿದ್ದು, ಅದಕ್ಕಾಗಿ ರಾತ್ರಿ ಒಂಬತ್ತು ಗಂಟೆವರೆಗೂ ವಿದ್ಯಾರ್ಥಿಗಳಿಗೆ ಪಾಠಬೋಧನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಸಾಮೂಹಿಕ ನಕಲಿನಿಂದಾಗಿ SSLC ಫಲಿತಾಂಶದಲ್ಲಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ – ಪತ್ರ ವೈರಲ್

    ಕಳೆದ ಬಾರಿ ಸಾಮೂಹಿಕ ನಕಲು ಮಾಡಿಸಿ ಹಾಸನ ಜಿಲ್ಲೆ ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಶಿಕ್ಷಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಬಾರಿ ಕಳೆದ ವರ್ಷಕ್ಕಿಂತ ಕಳಪೆ ಫಲಿತಾಂಶ ಬಂದರೆ, ಕಳೆದ ವರ್ಷದ ಫಲಿತಾಂಶದ ಬಗ್ಗೆ ಅನುಮಾನ ಮೂಡಲಿದೆ. ಹೀಗಾಗಿ ಈ ವರ್ಷವೂ ಕಳೆದ ವರ್ಷದಂತೆ ಉತ್ತಮ ಫಲಿತಾಂಶ ನೀಡಬೇಕು ಎಂದು ಸೂಚಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಹಾಸನ ಉಪನಿರ್ದೇಶಕ ಪ್ರಕಾಶ್ ಮತ್ತೆ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಶಿಕ್ಷಕರಿಗೆ ಸೂಚಿಸಿದ್ದಾರೆ. ಇದರಿಂದ ಶಿಕ್ಷಕರು ರಾತ್ರಿ 7.00 ಗಂಟೆಯಿಂದ 9.00 ಗಂಟೆಯವರೆಗೂ ಮಕ್ಕಳಿಗೆ ಹೆಚ್ಚುವರಿ ಅವಧಿಯಲ್ಲಿ ಪಾಠ ಹೇಳಿಕೊಡುತ್ತಿದ್ದಾರೆ. ಶಿಕ್ಷಕರ ಶ್ರಮಕ್ಕೆ ಸಾಥ್ ನೀಡುತ್ತಿರುವ ಪೋಷಕರು, ತಮ್ಮ ಮಕ್ಕಳನ್ನು ಬೈಕ್‍ನಲ್ಲಿ ಶಾಲೆಗೆ ಕರೆದುಕೊಂಡು ಬಂದು, ನಂತರ ರಾತ್ರಿ ವಾಪಸ್ ಕರೆದುಕೊಂಡು ಹೋಗುತ್ತಿದ್ದಾರೆ.

    ಸದ್ಯ ಜಿಲ್ಲೆಯ ಅರಕಲಗೂಡು ತಾಲೂಕಿನ, ಬಿವಿಎಂ ಶಾಲೆಯಿಂದ ಹೆಚ್ಚುವರಿ ಬೋಧನೆ ಆರಂಭವಾಗಿದೆ. ಹೇಗಾದರೂ ಮಾಡಿ ಈ ಬಾರಿಯೂ ಮೊದಲ ಸ್ಥಾನ ಉಳಿಸಿಕೊಳ್ಳಲು ಹಾಸನ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

  • ವಿದ್ಯಾರ್ಥಿನಿಗೆ ಪಾಠ ಮಾಡಲು ಶಾಲೆಗೆ ಬರುತ್ತಿದ್ದಾರೆ ಇಬ್ಬರು ಶಿಕ್ಷಕರು

    ವಿದ್ಯಾರ್ಥಿನಿಗೆ ಪಾಠ ಮಾಡಲು ಶಾಲೆಗೆ ಬರುತ್ತಿದ್ದಾರೆ ಇಬ್ಬರು ಶಿಕ್ಷಕರು

    ಪಾಟ್ನಾ: ವಿದ್ಯಾರ್ಥಿನಿಗೆ ಪಾಠ ಮಾಡಲು ಪ್ರತಿದಿನ ಇಬ್ಬರು ಶಿಕ್ಷಕರು ಶಾಲೆಗೆ ಬರುತ್ತಿರುವ ಅಪರೂಪದ ಸಂಗತಿಯೊಂದು ಬಿಹಾರದ ಗಯಾದಲ್ಲಿ ನಡೆದಿದೆ.

    ಗಯಾದಿಂದ 20 ಕಿ.ಮೀ ದೂರದಲ್ಲಿರುವ ಮಾನ್ಸಾ ಬಿಘಾದಲ್ಲಿ ಸರ್ಕಾರಿ ಶಾಲೆ ಇದೆ. ಈ ಶಾಲೆಗೆ ಪ್ರತಿದಿನ ವಿದ್ಯಾರ್ಥಿನಿ ಜಾಹ್ನವಿ ಬರುತ್ತಿದ್ದಾಳೆ. ಜಾಹ್ನವಿ ಒಂದನೇ ತರಗತಿ ಓದುತ್ತಿದ್ದು, ಆಕೆಗೆ ಪಾಠ ಮಾಡಲು ಇಬ್ಬರು ಶಿಕ್ಷಕರು ಬರುತ್ತಿದ್ದಾರೆ.

    ಮಾನ್ಸಾ ಬಿಘಾದಲ್ಲಿ 35 ಕುಟುಂಬಗಳಿದ್ದು, ಈ ಕುಟುಂಬದ ಮಕ್ಕಳು ಖಿಜ್ರಸರಾಯ್‍ದಲ್ಲಿ ಇರುವ ಶಾಲೆಗೆ ಹೋಗುತ್ತಿದ್ದಾರೆ. ಈ ಸರ್ಕಾರಿ ಶಾಲೆಗೆ ಕೇವಲ ಜಾಹ್ನವಿ ಒಬ್ಬಳೇ ಹೋಗುತ್ತಿದ್ದಾಳೆ. ಮಿಡ್ ಡೇ ಮಿಲ್ ಯೋಜನೆ ಅಡಿಯಲ್ಲಿ ಜಾಹ್ನವಿಗೆ ಊಟವೂ ಕೂಡ ನೀಡಲಾಗುತ್ತಿದೆ. ಈ ಶಾಲೆಯಲ್ಲಿ ಒಟ್ಟು ನಾಲ್ಕು ಕ್ಲಾಸ್ ರೂಂಗಳಿವೆ.

    ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಪ್ರತಿಕ್ರಿಯಿಸಿ, ನಾನು ಗ್ರಾಮಕ್ಕೆ ಹೋಗಿ ಮಕ್ಕಳನ್ನು ಈ ಶಾಲೆಗೆ ದಾಖಲಿಸುವಂತೆ ಪೋಷಕರ ಬಳಿ ಮನವಿ ಮಾಡಿಕೊಂಡೆ. ಆದರೆ ಯಾರೂ ಆಸಕ್ತಿ ತೋರಲಿಲ್ಲ. ಇಡೀ ಶಾಲೆಗೆ ಒಂಬತ್ತು ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ ಅವರಲ್ಲಿ ಕೇವಲ ಜಾಹ್ನವಿ ಇಲ್ಲಿ ಓದಲು ಬರುತ್ತಿದ್ದಾಳೆ. ಶಾಲೆ ಗ್ರಾಮದಿಂದ 1 ಕಿ.ಮೀಯಿರುವ ಕಾರಣ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಯೇ ಕಳುಹಿಸುತ್ತಿದ್ದಾರೆ ಎಂದರು.

  • ಕಾರ್ಯಕ್ರಮದ ವಿಡಿಯೋ ಅಂತ ವಿದ್ಯಾರ್ಥಿನಿಗೆ ಸೆಕ್ಸ್ ವಿಡಿಯೋ ತೋರಿಸಿ ರೇಪ್‍ಗೈದ ಶಿಕ್ಷಕರು

    ಕಾರ್ಯಕ್ರಮದ ವಿಡಿಯೋ ಅಂತ ವಿದ್ಯಾರ್ಥಿನಿಗೆ ಸೆಕ್ಸ್ ವಿಡಿಯೋ ತೋರಿಸಿ ರೇಪ್‍ಗೈದ ಶಿಕ್ಷಕರು

    – ಶಾಲೆಯಲ್ಲೇ ಬಾಲಕಿಗೆ ವಿಡಿಯೋ ನೋಡಲು ಒತ್ತಾಯ
    – ಬೆಂಗ್ಳೂರಲ್ಲಿ ಕಿಟಕಿ ಹಾರಿ ಬಾಲಕಿಯ ಅತ್ಯಾಚಾರಕ್ಕೆ ಯತ್ನ

    ಮುಂಬೈ: ದೇಶದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆಯೇ ಹೊರತಾಗಿ ಕಡಿಮೆ ಆಗುತ್ತಿಲ್ಲ. ಅದರಲ್ಲೂ ಇತ್ತೀಚೆಗೆ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಈ ಸಾಲಿಗೆ ಈಗ ಮಹಾರಾಷ್ಟ್ರದಲ್ಲಿ ಶಿಕ್ಷಕರೇ ವಿದ್ಯಾರ್ಥಿನಿಯನ್ನು ಗ್ಯಾಂಗ್ ರೇಪ್ ಮಾಡಿರುವ ಪ್ರಕರಣ ಕೂಡ ಸೇರಿಕೊಂಡಿದೆ.

    ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮಾರಥ್‍ವಾಡ ಪ್ರದೇಶದಲ್ಲಿ ಕಳೆದ 7 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಇಬ್ಬರು ಶಿಕ್ಷಕರು ಸೇರಿ ಅತ್ಯಾಚಾರವೆಸಗಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ವಿಡಿಯೋ ತೋರಿಸುತ್ತೇವೆ ಎಂದು ಬಾಲಕಿಯನ್ನು ನಂಬಿಸಿ ಶಾಲೆಯ ಕೊಠಡಿಯೊಂದರಲ್ಲಿ ಆಕೆಗೆ ಸೆಕ್ಸ್ ವಿಡಿಯೋವನ್ನು ಶಿಕ್ಷಕರು ತೋರಿಸಿದ್ದರು. ಬಳಿಕ ಆಕೆಯನ್ನು ಅತ್ಯಾಚಾರಗೈದಿದ್ದರು. ಈ ಬಗ್ಗೆ ಬಾಲಕಿ ತನ್ನ ಪೋಷಕರ ಬಳಿ ತಿಳಿಸಿದಾಗ, ಹೆತ್ತವರು ಶಾಲೆಗೆ ಬಂದು ಮುಖ್ಯೋಪಾಧ್ಯಾಯರ ಬಳಿ ಶಿಕ್ಷಕರು ಬಗ್ಗೆ ದೂರಿದ್ದರು. ಅವರು ಯಾವುದೇ ಕ್ರಮ ತೆಗೆದುಕೊಳ್ಳದಿದ್ದಾಗ ಪೋಷಕರು ಪೊಲೀಸರ ಮೊರೆಹೋಗಿದ್ದರು.

    ಕಾಮುಕ ಶಿಕ್ಷಕರ ಬಗ್ಗೆ ದೂರು ಕೊಟ್ಟಾಗ ಪೊಲೀಸರು ಕೂಡ ದೂರನ್ನು ಸ್ವೀಕರಿಸಿರಲಿಲ್ಲ. ಆದರೂ ಬಾಲಕಿಯ ಪೋಷಕರು ಮಾತ್ರ ತಮ್ಮ ಪ್ರಯತ್ನ ಬಿಡದೆ ಶಿಕ್ಷಕರ ವಿರುದ್ಧ ಹೋರಾಟಕ್ಕೆ ನಿಂತರು. ಕೊನೆಗೂ ಜ. 18ರಂದು ಪೊಲೀಸರು ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಇಬ್ಬರು ಶಿಕ್ಷಕರು ಕೂಡ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

    ಇತ್ತ ಬೆಂಗಳೂರಿನಲ್ಲಿ ಕೂಡ ಕಾಮುಕನೋರ್ವ 9 ವರ್ಷದ ಬಾಲಕಿಯನ್ನು ಅತ್ಯಚಾರ ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮುಂಜಾನೆ 4:30ರ ವೆಳೆಗೆ ಬಾತ್‍ರೂಮ್ ಕಿಟಕಿಯಿಂದ ಮನೆಗೆ ನುಗ್ಗಿದ್ದ ಕಾಮುಕ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದನು. ಆದರೆ ಬಾಲಕಿ ಕಿರುಚಾಟ ಕೇಳಿ ಮನೆಮಂದಿ ಎಚ್ಚರಗೊಂಡಿದ್ದು, ಆರೋಪಿಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ. ಆದರೆ ಆರೋಪಿ ಮಾತ್ರ ಅವರಿಂದ ತಪ್ಪಿಸಿಕೊಂಡು ಬಾತ್‍ರೂಮ್ ಕಿಟಕಿಯಿಂದಲೇ ಪರಾಗಿಯಾಗಿದ್ದಾನೆ.

    ಅಷ್ಟೇ ಅಲ್ಲದೆ ಮುಂಬೈನಲ್ಲಿ ಇಬ್ಬರು ವಿಕಲಚೇತನ ಬಾಲಕಿಯರನ್ನು ಮನೆಗೆ ಬಿಡುವ ನೆಪದಲ್ಲಿ ಬಸ್ ಚಾಲಕ ಹಾಗೂ ಕ್ಲೀನರ್ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಚಾಲಕನನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ.

  • ಸರ್ಕಾರಿ ಶಾಲೆಯ ಅಂದ ಚೆಂದ ಹೆಚ್ಚಿಸಿದ ಬಸ್, ರೈಲು, ವಿಮಾನ, ಹಡುಗು!

    ಸರ್ಕಾರಿ ಶಾಲೆಯ ಅಂದ ಚೆಂದ ಹೆಚ್ಚಿಸಿದ ಬಸ್, ರೈಲು, ವಿಮಾನ, ಹಡುಗು!

    ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಬಹಳ ಮಂದಿ, ಪಾಳು ಬೀಳೋ ಸ್ಥಿತಿಯಲ್ಲಿರೋ ಕಟ್ಟಡಗಳು, ಮುರಿದ ಕಿಟಕಿಗಳು, ಬಾಗಿಲುಗಳೇ ಇಲ್ಲದ ಕೊಠಡಿಗಳು ಈ ತರ ಸರ್ಕಾರಿ ಶಾಲೆಗಳಲ್ಲಿ ನಾನಾ ಸಮಸ್ಯೆಗಳು, ಆದರೆ ಈ ಎಲ್ಲಾ ಸಮಸ್ಯೆಗಳ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಅಂದ-ಚೆಂದವಾಗಿ ಕಂಗೊಳಿಸುತ್ತಿದೆ.

    ಅಂದಹಾಗೆ ಶಾಲೆಯ ಗೋಡೆಗಳ ಮೇಲೆ 3ಡಿ ಮಾದರಿಯಲ್ಲಿ ಬಸ್, ರೈಲು, ವಿಮಾನದ ಚಿತ್ರಗಳನ್ನ ಬಿಡಿಸಲಾಗಿದ್ದು, ಶಾಲೆಯ ಅಂದ ಚೆಂದವೇ ಬದಲಾಗಿ ಹೋಗಿದ್ದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಜೊತೆಗೂಡಿ ಗ್ರಾಮಪಂಚಾಯತಿ ಅನುದಾನ ಪಡೆದು ಶಾಲೆಯ ಗೋಡೆಗಳ ಮೇಲೆ ಈ ಚಿತ್ರಗಳನ್ನ ಬಿಡಿಸಲಾಗಿದ್ದು ಶಾಲೆಯ ರೂಪವೇ ಬದಲಾಗಿ ಬಣ್ಣ ಬಣ್ಣಗಳಿಂದ ಮಿಂಚುತ್ತಿದೆ.

    ಶಾಲೆಯ ಹೊರಭಾಗದ ಗೋಡೆಗಳ ಮೇಲೆ ರೈಲು, ಬಸ್, ವಿಮಾನ ಹಾಗೂ ಹಡುಗು ಸೇರಿದಂತೆ ಶಾಲೆಯ ಕೊಠಡಿಗಳ ಒಳಭಾಗದಲ್ಲಿ ಶಿಡ್ಲಘಟ್ಟ ರೇಷ್ಮೆ ನಗರಿ ಅನ್ನೋ ಖ್ಯಾತಿ ಪ್ರತೀಕವಾಗಿ ರೇಷ್ಮೆ ಹುಳು. ಚಂದ್ರಿಕೆ ಹಾಗೂ ರೈತನ ಚಿತ್ರ ಬಿಡಿಸಲಾಗಿದೆ. ಈ ಗ್ರಾಮದಲ್ಲಿ ಸರ್ಕಾರಿ ಶಾಲೆ ಆರಂಭವಾಗಿ 75 ವರ್ಷಗಳ ಕಳೆದ ಹಿನ್ನೆಲೆ ಅಮೃತ ಮಹೋತ್ಸವ ಸಮಾರಂಭ ನಡೆಸಿ, ಶಿಕ್ಷಣ ಇಲಾಖಾಧಿಕಾರಿಗಳು, ಹಾಗೂ ತಹಶೀಲ್ದಾರ್ ರನ್ನ ಶಾಲೆಗೆ ಆಹ್ವಾನಿಸಿ, ನೂತನ ಚಿತ್ರಗಳನ್ನು ಉದ್ಘಾಟನೆ ಮಾಡಲಾಗಿದೆ.

    ಶಾಲೆಯ ಅಭಿವೃದ್ಧಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಸಾಕಷ್ಟು ಶ್ರಮಿಸುತ್ತಿದ್ದು, ಶಾಲೆಗಾಗಿ 9 ಎಕೆರೆ ಭೂಮಿಯನ್ನ ಮೀಸಲಿಡಲಾಗಿದೆ. ಈ ಜಾಗದಲ್ಲಿ ನೂರಾರು ಮರ ಗಿಡಗಳನ್ನ ಬೆಳೆಸಲಾಗುತ್ತಿದೆ. ಮತ್ತೊಂದೆಡೆ ಇದೇ ಜಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಿ ಆಧುನಿಕ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರ ಬಾ ಪುಲೆ ಹೆಸರನ್ನ ನಾಮಕರಣ ಮಾಡಲಾಗಿದೆ. ಸದ್ಯ ಶಾಲೆ ಬಣ್ಣ ಬಣ್ಣದ ಚಿತ್ರಗಳಿಂದ ಮಿರ ಮಿರ ಮಿಂಚುತ್ತಿದ್ದು, ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಗ್ರಾಮಸ್ಥರು ಹಾಗೂ ಅಧಿಕಾರಿಗಳಿಗೂ ಶಾಲೆ ಮಾದರಿಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.

  • ಮಕ್ಕಳನ್ನ ಅಪಹಾಸ್ಯ, ವಿಡಿಯೋ ಮಾಡಿದ್ರೆ ಶಿಕ್ಷಕರ ವಿರುದ್ಧ ಕ್ರಿಮಿನಲ್ ಕೇಸ್

    ಮಕ್ಕಳನ್ನ ಅಪಹಾಸ್ಯ, ವಿಡಿಯೋ ಮಾಡಿದ್ರೆ ಶಿಕ್ಷಕರ ವಿರುದ್ಧ ಕ್ರಿಮಿನಲ್ ಕೇಸ್

    ಬೆಂಗಳೂರು: ಶಾಲೆಗಳಲ್ಲಿ ಮಕ್ಕಳನ್ನ ಅಪಹಾಸ್ಯ ಮಾಡೋದು, ಅವಹೇಳನ ಮಾಡೋದು. ಮಕ್ಕಳ ಅಪಹಾಸ್ಯದ ವಿಡಿಯೋ ಮಾಡೋದನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಕಟ್ಟು ನಿಟ್ಟಾಗಿ ನಿಷೇಧ ಮಾಡಿದೆ. ಇನ್ಮುಂದೆ ಇಂತಹ ಕೃತ್ಯ ಮಾಡಿದ ಶಿಕ್ಷಕರು, ಮುಖ್ಯೋಪಾಧ್ಯಾಯರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶವನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿದ್ದಾರೆ.

    ಉತ್ತರ ಕರ್ನಾಟಕದ ಶಾಲೆಯೊಂದಲ್ಲಿ ಪಕ್ಕೆಲುಬು ಅನ್ನೋ ಪದ ಉಚ್ಛಾರಣೆ ಮಾಡದೆ ಬಾಲಕ ಕಷ್ಟ ಪಡುತ್ತಿದ್ದ. ಈ ವಿಡಿಯೋವನ್ನ ಆದೇ ಶಾಲೆಯ ಶಿಕ್ಷಕ ಅಪಹಾಸ್ಯ ಮಾಡಿವಂತೆ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿವಾದ ಸೃಷ್ಟಿ ಮಾಡಿತ್ತು. ಇದರಿಂದ ಎಚ್ಚೆತ್ತ ಶಿಕ್ಷಣ ಸಚಿವರು ಆ ಶಿಕ್ಷಕನ ವಿರುದ್ಧ ದೂರಿಗೆ ಸೂಚನೆ ನೀಡಿದ್ದಾರೆ. ಮಕ್ಕಳ ಹಕ್ಕು ಕಸಿಯುವ, ಮಕ್ಕಳನ್ನ ಅಪಹಾಸ್ಯ ಮಾಡುವ ಇಂತಹ ವರ್ತನೆಗೆ ಕಡಿವಾಣ ಹಾಕಲು ನಿಯಮ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಚಿವರ ಸೂಚನೆ ಮೇಲೆ ಕ್ರಿಮಿನಲ್ ಕೇಸ್ ದಾಖಲಾತಿ ಬಗ್ಗೆ ಇಲಾಖೆ ಪ್ರಸ್ತಾಪ ಮಾಡಿದೆ. ಇದನ್ನೂ ಓದಿ: ‘ಪಕ್ಕೆಲುಬು’ ಉಚ್ಚಾರಣೆ ತಪ್ಪಿದ ವಿದ್ಯಾರ್ಥಿ ವಿಡಿಯೋ ವೈರಲ್: ಶಿಕ್ಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

    ಸರ್ಕಾರಿ ಶಾಲೆಯೇ ಆಗಲಿ, ಖಾಸಗಿ ಶಾಲೆಯೇ ಆಗಲಿ ಮಕ್ಕಳನ್ನ ಅಪಹಾಸ್ಯ ಮಾಡೋ ಇಂತಹ ವರ್ತನೆಗೆ ಬ್ರೇಕ್ ಹಾಕೋದಕ್ಕೆ ಶಿಕ್ಷಣ ಇಲಾಖೆ ಕ್ರಿಮಿನಲ್ ಕೇಸ್ ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳುವ ನಿರ್ಧಾರ ಮಾಡಿದೆ.

  • ಶಿಕ್ಷಕರ ಕನ್ನಡ ಕಲಿಕೆ ಕಡ್ಡಾಯಕ್ಕೆ ಇಲಾಖೆ ಚಿಂತನೆ

    ಶಿಕ್ಷಕರ ಕನ್ನಡ ಕಲಿಕೆ ಕಡ್ಡಾಯಕ್ಕೆ ಇಲಾಖೆ ಚಿಂತನೆ

    ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳು ಕನ್ನಡ ಕಲಿಸೋದು ಕಡ್ಡಾಯ ಅನ್ನುವ ನಿಯಮ ಜಾರಿಗೆ ಬಂದ ಮೇಲೆ ಈಗ ಮತ್ತೊಂದು ಮಹತ್ವದ ನಿಯಮ ಜಾರಿಗೆ ತರುವುದಕ್ಕೆ ಪ್ರಾಥಮಿಕ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಮಕ್ಕಳು ಕನ್ನಡ ಕಲಿಸೋದರ ಜೊತೆ ಕನ್ನಡ ಬಾರದ ಖಾಸಗಿ ಶಾಲೆಯ ಶಿಕ್ಷಕರು ಕನ್ನಡ ಕಲಿಯೋದು ಕಡ್ಡಾಯ ಮಾಡೋ ಚಿಂತನೆಯಲ್ಲಿ ಶಿಕ್ಷಣ ಇಲಾಖೆ ಪರಿಶೀಲನೆ ಮಾಡುತ್ತಿದೆ.

    ಸಾವಿತ್ರಿ ಬಾಯಿ ಫುಲೆ ಜಯಂತಿ ದಿನ ಶಿಕ್ಷಣ ಇಲಾಖೆ ಕನ್ನಡ ಕಡ್ಡಾಯ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು. ಈ ವೇಳೆ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಕನ್ನಡ ಕಡ್ಡಾಯವಾಗಿ ಕಲಿಸೋದು ಒಪ್ಪುತ್ತೇವೆ. ಆದರೆನಮ್ಮ ಶಾಲೆ ಸೇರಿದಂತೆ ಖಾಸಗಿ ಶಾಲೆಗಳ ಶಿಕ್ಷಕರಿಗೆ ಕನ್ನಡವೇ ಬರುವುದಿಲ್ಲ. ಹೀಗಾಗಿ ಶಿಕ್ಷಕರಿಗೂ ಕನ್ನಡ ಕಲಿಕೆ ಕಡ್ಡಾಯ ಮಾಡಿ ಅಂತ ಮನವಿ ಮಾಡಿದರು. ಅಂದೇ ಸಚಿವರು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ಕೊಟ್ಟಿದ್ದರು. ಈಗ ಕನ್ನಡ ಕಲಿಕೆ ಕಡ್ಡಾಯ ನಿಯಮ ಜಾರಿಗೆ ತರೋ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡ್ತಿದ್ದಾರೆ.

    ಒಂದು ವೇಳೆ ಶಿಕ್ಷಕರು ಕನ್ನಡ ಕಲಿಯೋದು ನಿಯಮ ಬಂದರೆ ಖಾಸಗಿ ಶಾಲೆಗಳ ಶಿಕ್ಷಕರು ಕನ್ನಡ ಕಲಿಯೋದು ಕಡ್ಡಾಯವಾಗಲಿದೆ. ಮಕ್ಕಳಿಗೆ ಕನ್ನಡ ಕಲಿಸೋದು ಎಷ್ಟು ಮುಖ್ಯವೋ ಕರ್ನಾಟಕದಲ್ಲಿ ಪಾಠ ಮಾಡೋ ಶಿಕ್ಷಕರು ಕನ್ನಡದಲ್ಲಿ ಮಾತನಾಡೋದು ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

  • ಶಿಕ್ಷಕರಿಬ್ಬರ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ದೋಚಿದ ಖದೀಮರು

    ಶಿಕ್ಷಕರಿಬ್ಬರ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ದೋಚಿದ ಖದೀಮರು

    ಚಿಕ್ಕಬಳ್ಳಾಪುರ: ಖಾಸಗಿ ಶಾಲೆಯ ಶಿಕ್ಷಕರಿಬ್ಬರ ಮೇಲೆ ಹಲ್ಲೆ ನಡೆಸಿದ ಪುಂಡರು ಅವರ ಬಳಿ ಇದ್ದ ಹಣ ಹಾಗೂ ಮೊಬೈಲ್ ದೋಚಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಬಳಿ ನಡೆದಿದೆ.

    ಭಾನುವಾರ ಸ್ನೇಹಿತರೊಬ್ಬರ ಹುಟ್ಟುಹಬ್ಬದ ಆಚರಣೆಗೆ ತೆರಳುತ್ತಿದ್ದ ಶಿಕ್ಷಕರು ಬೈಕ್‍ನಲ್ಲಿ ಪೆಟ್ರೋಲ್ ಖಾಲಿಯಾದ ಹಿನ್ನೆಲೆ ಬೂದಿಗೆರೆ ಗ್ರಾಮದ ಬಳಿ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದರು. ಇದೇ ವೇಳೆ ಬಂಕ್ ಬಳಿ ಬಂದ ಮೂವರು ಪುಂಡರು ಶಿಕ್ಷಕರ ಬಳಿ ವಿನಾಕಾರಣ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ. ತದನಂತರ ಅವರನ್ನ ಬೈಕ್‍ನಲ್ಲಿ ಹಿಂಬಾಲಿಸಿ ಅರ್ಧ ದಾರಿಯಲ್ಲಿ ಅಡ್ಡಗಟ್ಟಿ ಅವರ ಬಳಿಯಿದ್ದ ನಗದು ಹಾಗೂ ಮೊಬೈಲ್ ಕಸಿದುಕೊಂಡಿದ್ದಾರೆ.

    ಗಂಗವಾರ ಗ್ರಾಮದ ಸನ್‍ರೈಸ್ ಶಾಲೆಯಲ್ಲಿ ಶಿಕ್ಷಕರಾಗಿರುವ ಪ್ರಶಾಂತ್ ಹಾಗೂ ಸುದರ್ಶನ್ ಹಲ್ಲೆಗೊಳಗಾಗಿದ್ದಾರೆ. ಪೆಟ್ರೋಲ್ ಬಂಕ್ ಬಳಿ ಹಲ್ಲೆಗೊಳಗಾಗಿ ಶಿಕ್ಷಕರು ಸುಮ್ಮನಾಗಿ ಹೊರಟು ಹೋಗಿದ್ದಾರೆ. ಆದರೆ ಅವರನ್ನು ಮೂವರು ಪುಂಡರು ಹಿಂಬಾಲಿಸಿ ಅರ್ಧದಾರಿಯಲ್ಲಿ ಅವರ ಬೈಕ್ ಅಡ್ಡಗಟ್ಟಿ ಶಿಕ್ಷಕರ ಬಳಿ ಇದ್ದ ವಸ್ತುಗಳನ್ನ ಕಿತ್ತುಕೊಂಡಿದ್ದಾರೆ. ಅಲ್ಲದೆ ಕಿರುಚಾಡಿ ಬೇರೆಯವರನ್ನ ಕರೆಯಲು ಯತ್ನಿಸಿದ ಸುದರ್ಶನ್ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾಗಿದ್ದ ಶಿಕ್ಷಕರಿಬ್ಬರು ಶಾಲೆಗೆ ಬಾರದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ಯಾವಾಗ ಶಿಕ್ಷಕರಿಬ್ಬರು ಶಾಲೆಗೆ ಬರಲಿಲ್ಲವೋ ಆಗ ಅನುಮಾನಗೊಂಡ ಸನ್‍ರೈಸ್ ಶಾಲೆಯ ಆಡಳಿತ ಮಂಡಳಿ ಶಿಕ್ಷಕರನ್ನ ವಿಚಾರಿಸಿದಾಗ ಪುಂಡರು ನಡೆಸಿದ್ದ ಕೃತ್ಯ ಬೆಳಕಿಗೆ ಬಂದಿದೆ. ಪುಂಡರು ಹಲ್ಲೆ ಮಾಡಿದ ಕೆಲ ದೃಶ್ಯಗಳು ಬೂದಿಗೆರೆ ಹೆಚ್‍ಪಿ ಪೆಟ್ರೋಲ್ ಬಂಕ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ಇಟ್ಟುಕೊಂಡು ಚನ್ನರಾಯಪಟ್ಟಣ ಪೊಲೀಸರಿಗೆ ದೂರು ನೀಡಲಾಗಿತ್ತು.

    ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಚನ್ನರಾಯಪಟ್ಟಣ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನ ಆಧರಿಸಿ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಸುಬ್ರಮಣಿ ಹಾಗೂ ಆಲಿ ಎಂಬ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

  • ಮಕ್ಕಳು, ಪೋಷಕರು, ಶಿಕ್ಷಕರಿಗಾಗಿ ಶಿಕ್ಷಣ ಇಲಾಖೆಯಿಂದ ಸಹಾಯವಾಣಿ

    ಮಕ್ಕಳು, ಪೋಷಕರು, ಶಿಕ್ಷಕರಿಗಾಗಿ ಶಿಕ್ಷಣ ಇಲಾಖೆಯಿಂದ ಸಹಾಯವಾಣಿ

    ಬೆಂಗಳೂರು: ಶಾಲೆಗಳ ಪರಿಸ್ಥಿತಿ ಸುಧಾರಣೆಗೆ ಶಿಕ್ಷಣ ಇಲಾಖೆ ಹೊಸ ಚಿಂತನೆ ಮಾಡಿದೆ. ಶಾಲೆಗಳ ಬಗ್ಗೆ ತಿಳಿಯಲು, ವಿದ್ಯಾರ್ಥಿಗಳ, ಶಿಕ್ಷಕರ ಸಮಸ್ಯೆ ತಿಳಿಯಲು ಸಹಾಯವಾಣಿ ಪ್ರಾರಂಭಿಸಲು ನಿರ್ಧಾರ ಮಾಡಿದೆ.

    ಸಹಾಯವಾಣಿಗೆ ವಿದ್ಯಾರ್ಥಿಗಳು, ಪೋಷಕರು ಏನೇ ಸಮಸ್ಯೆ ಇದ್ದರೂ ದೂರಿನ ಮೂಲಕ ನೀಡಬಹುದು. ದೂರು ಪಡೆದ ಅಧಿಕಾರಿಗಳು ಸಂಬಂಧಿಸಿದವರಿಗೆ ದೂರಿನ ಬಗ್ಗೆ ಮಾಹಿತಿ ನೀಡಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ.

    ಮಾರ್ಚ್ 31ರ ಒಳಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯವಾಣಿ ಪ್ರಾರಂಭ ಮಾಡಲು ಸಿದ್ಧತೆ ನಡೆಸಿದೆ. ಶಿಕ್ಷಣ ಇಲಾಖೆಯ ಅಧಿಕೃತ ಸಹಾಯವಾಣಿ ಇದಾಗಲಿದೆ. ಕೇವಲ ವಿದ್ಯಾರ್ಥಿಗಳು, ಪೋಷಕರು ಮಾತ್ರವಲ್ಲ. ತಮ್ಮ ಶಿಕ್ಷಕರು ಕೂಡಾ ತಮ್ಮ ಸಮಸ್ಯೆಗಳ ಹೇಳಿಕೊಳ್ಳಬಹುದು.

    ಶೈಕ್ಷಣಿಕ ಸಮಸ್ಯೆ, ಶಾಲೆಗಳ ಪರಿಸ್ಥಿತಿಗಳು ಹೀಗೆ ಶಾಲೆಗೆ ಸಂಬಂಧಿಸಿದ ಸಮಸ್ಯೆಗಳನ್ನ ಶಿಕ್ಷಕರು ಇಲಾಖೆ ಗಮನಕ್ಕೆ ತರಬಹುದು. ಇಲಾಖೆಗೆ ಅಗತ್ಯ ಸಲಹೆ ಸೂಚನೆಗಳನ್ನು ಶಿಕ್ಷಕರು ಕೊಡಬಹುದಾಗಿದೆ. ಶಿಕ್ಷಕರ ಸಲಹೆಗಳ ಮೇಲೆ ಅಗತ್ಯ ಕ್ರಮವನ್ನು ಇಲಾಖೆ ತೆಗೆದುಕೊಳ್ಳಲಿದೆ.