Tag: teachers

  • ಮಾರ್ಚ್ 31ರವರೆಗೂ ಶಾಲಾ ಶಿಕ್ಷಕರಿಗೂ ರಜೆ ಘೋಷಣೆ

    ಮಾರ್ಚ್ 31ರವರೆಗೂ ಶಾಲಾ ಶಿಕ್ಷಕರಿಗೂ ರಜೆ ಘೋಷಣೆ

    ಬೆಂಗಳೂರು: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಂತೆ ಶಾಲಾ ಶಿಕ್ಷಕರಿಗೂ ರಜೆ ಘೋಷಿಸಲಾಗಿದೆ.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರಿಗೆ ಮಾರ್ಚ್ 31ರವರೆಗೆ ಸರ್ಕಾರ ರಜೆ ಘೋಷಿಸಿದೆ. 7-9ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 31 ರವರೆಗೆ ಪರೀಕ್ಷೆ ಮುಂದೂಡಿ ಶಿಕ್ಷಣ ಇಲಾಖೆ ರಜೆ ನೀಡಿದೆ. ಶಿಕ್ಷಕರಿಗೆ ಮಾತ್ರ ಶಾಲೆಗೆ ಹಾಜರಾಗುವಂತೆ ಶಿಕ್ಷಣ ಇಲಾಖೆ ಆದೇಶ ಮಾಡಿತ್ತು. ಆದರೆ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಈಗ ಶಿಕ್ಷಕರಿಗೂ ಮಾರ್ಚ್ 31ರವರೆಗೆ ರಜೆ ನೀಡಲು ಸರ್ಕಾರ ನಿರ್ಧರಿಸಿದೆ.

    ಆದೇಶದಲ್ಲಿ ಏನಿದೆ?
    1. ಶಿಕ್ಷಕರು ಮಾರ್ಚ್ 31ರವರೆಗೆ ಮನೆಯಿಂದಲೇ ಶಾಲಾ ಕೆಲಸ ನಿರ್ವಹಿಸುವುದು.
    2. ಮಾರ್ಚ್ 31ರವರೆಗೆ ಶಿಕ್ಷಕರು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರ ರಜಾ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವುದು.
    3. ಶಿಕ್ಷಕರು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರನ್ನು ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಅವರ ದೂರವಾಣಿ ಸಂಖ್ಯೆಗಳನ್ನು/ಇಮೇಲ್ ವಿಳಾಸಗಳನ್ನು ಶಾಲಾ ಶಿಕ್ಷಕರು ಪಡೆದುಕೊಳ್ಳುವುದು.
    4. ಈ ರಜಾ ಅವಧಿಯಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿ ಯಾವುದೇ ಕಾರಣಕ್ಕೂ ಕೇಂದ್ರಸ್ಥಾನವನ್ನು ಬಿಡುವಂತಿಲ್ಲ ಹಾಗೂ ಸರ್ಕಾರಕ್ಕೆ ಶಿಕ್ಷಕರ ಸೇವೆ ಅಗತ್ಯವಿದ್ದಾಗ ಕಡ್ಡಾಯವಾಗಿ ಸೇವೆ ಹಾಜರಾಗತಕ್ಕದ್ದು.

  • ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಟಿಇಟಿ ಪರೀಕ್ಷೆ ಮಾ. 29ಕ್ಕೆ ಮುಂದೂಡಿಕೆ

    ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಟಿಇಟಿ ಪರೀಕ್ಷೆ ಮಾ. 29ಕ್ಕೆ ಮುಂದೂಡಿಕೆ

    ಚಿತ್ರದುರ್ಗ: ಮಾರ್ಚ್ 15ಕ್ಕೆ ನಡೆಯಬೇಕಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು(ಟಿಇಟಿ) ಮಾರ್ಚ್ 29ರಂದು ನಡೆಯಲಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಡಿಸಿ ಅವರು ಮಾತನಾಡಿದರು. ಈ ವೇಳೆ ಮಾರ್ಚ್ 15ರಂದು ನಡೆಯಬೇಕಿದ್ದ ಟಿಇಟಿ ಪರೀಕ್ಷೆ ಅನಿವಾರ್ಯ ಕಾರಣದಿಂದಾಗಿ ಮಾರ್ಚ್ 29ಕ್ಕೆ ಮುಂದೂಡಲಾಗಿದೆ. 1 ರಿಂದ 5ನೇ ತರಗತಿ ಬೋಧಿಸುವ ಶಿಕ್ಷಕರಿಗೆ ಮಾರ್ಚ್ 29ರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಜಿಲ್ಲೆಯ 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು 2,513 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ಡಿಸಿ ಮಾಹಿತಿ ನೀಡಿದರು.

    6 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರಿಗೆ ಮಧ್ಯಾಹ್ನ 2ರಿಂದ ಸಂಜೆ 4.30 ಗಂಟೆಯವರೆಗೆ 34 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು 7,022 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮುಂಚಿತವಾಗಿ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವಕಾಶ ಕಲ್ಪಿಸಬೇಕು ಎಂದರು.

    ಪರೀಕ್ಷಾ ಕೇಂದ್ರಗಳಲ್ಲಿ ಸಮರ್ಪಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಒದಗಿಸಬೇಕು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಪರೀಕ್ಷೆಯನ್ನು ಯಾವುದೇ ಲೋಪವಿಲ್ಲದಂತೆ ಪಾರದರ್ಶಕವಾಗಿ ನಡೆಸಬೇಕು. ಸ್ಥಾನಿಕ ಜಾಗೃತದಳದ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ 1 ಗಂಟೆ ಮುಂಚಿತವಾಗಿ ಹಾಜರಿರಬೇಕು. ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿ ಹೊರತುಪಡಿಸಿ ಸಾರ್ವಜನಿಕರಿಗೆ ಪ್ರವೇಶ ನೀಡಬಾರದು. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಪರೀಕ್ಷಾ ಸಮಯದಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

    ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರವಿಶಂಕರ್ ರೆಡ್ಡಿ ಮಾತನಾಡಿ, ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದು ನಿಗದಿತ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವಂತೆ, ಪರೀಕ್ಷಾ ನಂತರ ಉತ್ತರ ಪತ್ರಿಕೆ ಹಾಗೂ ಗೌಪ್ಯ ಸಾಮಗ್ರಿಗಳನ್ನು ಮುಖ್ಯ ಅಧೀಕ್ಷಕರಿಂದ ಹಿಂಪಡೆದು ಖಜಾನೆಗೆ ಸಲ್ಲಿಸಲು 11 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಕೇಂದ್ರಕ್ಕೆ ನಿಗದಿಪಡಿಸಿದ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ ಮೇಲ್ವಿಚಾರಕರನ್ನಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಶಿಕ್ಷಕರನ್ನು ಮಾತ್ರ ನೇಮಿಸಿಕೊಳ್ಳಬೇಕು. ಕೊಠಡಿ ಮೇಲ್ವಿಚಾರಕರ ಪಟ್ಟಿಯನ್ನು ಉಪನಿರ್ದೇಶಕರಿಂದ ಅನುಮೋದಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದರು.

    ಈ ಸಭೆಯಲ್ಲಿ ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ಹೊಸದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಇನ್ಸ್‌ಪೆಕ್ಟರ್ ಮೃತ್ಯುಂಜಯ ಸೇರಿದಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

  • ಕೊರೊನಾ ಬಗ್ಗೆ ಕೇಳಿ ಅಸ್ವಸ್ಥರಾದ ವಿದ್ಯಾರ್ಥಿಗಳು

    ಕೊರೊನಾ ಬಗ್ಗೆ ಕೇಳಿ ಅಸ್ವಸ್ಥರಾದ ವಿದ್ಯಾರ್ಥಿಗಳು

    ಚಾಮರಾಜನಗರ: ವಿಶ್ವದೆಲ್ಲೆಡೆ ರೋಗ ಭೀತಿ ಹುಟ್ಟಿಸಿರುವ ಕೊರೊನಾ ಬಗ್ಗೆ ಕೇಳಿ ಶಾಲಾ ಮಕ್ಕಳು ಬೆದರಿ ಅಸ್ವಸ್ಥರಾದ ಘಟನೆ ಹನೂರು ತಾಲೂಕಿನಲ್ಲಿ ನಡೆದಿದೆ.

    ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಮೀಪದ ಗೊರಸಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಸೂಚನೆ ಮೇರೆಗೆ ಕೊರೊನಾ ಲಕ್ಷಣಗಳು ಮತ್ತು ರೋಗ ಬಂದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಶಿಕ್ಷಕರು ವಿವರಿಸುತ್ತಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ತಲೆ ಸುತ್ತು, ತಲೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದರು.

    ಗೊರಸಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ 146 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಾರ್ಥನೆ ವೇಳೆ ಶಿಕ್ಷಕ ಪ್ರೇಮ್‍ಕುಮಾರ್ ಕೊರೊನಾದ ಲಕ್ಷಣಗಳ ಬಗ್ಗೆ ತಿಳಿಸುತ್ತಿದ್ದಂತೆ 20 ವಿದ್ಯಾರ್ಥಿಗಳು ಅಸ್ವಸ್ಥರಾದರು.

    ಅಸ್ವಸ್ಥರಾದ ತಕ್ಷಣ ವಿದ್ಯಾರ್ಥಿಗಳನ್ನು ಶಿಕ್ಷಕರು ಮಹದೇಶ್ವರ ಬೆಟ್ಟದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ದಾಖಲು ಮಾಡಿ ಆರೋಗ್ಯ ತಪಾಸಣೆ ಮಾಡಿಸಿದರು. ಈ ವೇಳೆ ಕೆಲ ವಿದ್ಯಾರ್ಥಿಗಳು ಜ್ವರ, ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಮತ್ತೆ ಕೆಲ ವಿದ್ಯಾರ್ಥಿಗಳು ಬೆಳಗ್ಗಿನ ಉಪಹಾರ ಸೇವಿಸದೆ ಶಾಲೆಗೆ ಆಗಮಿಸಿದ್ದರಿಂದ ನಿಶಕ್ತರಾಗಿದ್ದರು. ಕೊರೊನಾ ಬಗ್ಗೆ ಕೇಳುತ್ತಿದ್ದಂತೆ ರೋಗಭಯ ಹೆಚ್ಚಾಗಿ ಗಾಬರಿಗೊಂಡಿದ್ದರು ಎಂದು ತಿಳಿದು ಬಂದಿದೆ.

    ಕೊರೊನಾ ವೈರಸ್ ಬಗ್ಗೆ ಶಿಕ್ಷಕರು ತಿಳಿಸುತ್ತಿದ್ದಂತೆ ನಮಗೂ ಹಾಗೇ ಆಗುತ್ತಿದೆ ಎನ್ನಿಸಿತು ಎಂದು ಕೆಲ ವಿದ್ಯಾರ್ಥಿಗಳು ಹೇಳಿದರೆ, ಉಳಿದವರು ನಮಗೆ ಹಲವು ದಿನಗಳಿಂದ ಆರೋಗ್ಯ ಸರಿ ಇಲ್ಲ ಎಂದು ಅಳಲು ತೋಡಿಕೊಂಡರು. ಮಕ್ಕಳಿಗೆ ರಕ್ತ ಪರೀಕ್ಷೆ ಮಾಡಿಸಿ ತಲೆ ಸುತ್ತು ಮತ್ತು ತಲೆನೋವಿಗೆ ಔಷಧಿಗಳನ್ನು ಕೊಡಿಸಿ ನಂತರ ಶಿಕ್ಷಕರು ಅವರನ್ನು ಗ್ರಾಮಕ್ಕೆ ಕರೆದೊಯ್ದರು.

  • ಮೈಸೂರಿನಲ್ಲಿ ಸ್ಟೂಡೆಂಟ್ಸ್ ವರ್ಸಸ್ ಟೀಚರ್ ಪ್ರತಿಭಟನೆ

    ಮೈಸೂರಿನಲ್ಲಿ ಸ್ಟೂಡೆಂಟ್ಸ್ ವರ್ಸಸ್ ಟೀಚರ್ ಪ್ರತಿಭಟನೆ

    ಮೈಸೂರು: ನಗರದ ಹೊರವಲಯದಲ್ಲಿನ ಎಂಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾಕೂಟದ ವೇಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಗಲಾಟೆಯಾಗಿದೆ.

    ಮೈಸೂರು-ನಂಜನಗೂಡು ರಸ್ತೆಯ ತಾಂಡವಪುರ ಬಳಿಯಿರುವ ಎಂಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಾಪಕಿ ರಂಜಿತಾ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

    ತಮ್ಮ ಮೇಲೆ ಹಲ್ಲೆ ಮಾಡಿದ್ದಕ್ಕೆ ತಿರುಗಿಬಿದ್ದ ವಿದ್ಯಾರ್ಥಿಗಳು, ತರಗತಿ ಮತ್ತು ಕ್ರೀಡಾಕೂಟ ಬಹಿಷ್ಕರಿಸಿ ಪ್ರತಿಭಟಿಸಿದ್ದಾರೆ. ವಿದ್ಯಾರ್ಥಿಗಳ ಪರ ನಿಂತ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ನಾಗೇಂದ್ರ ಪ್ರಸಾದ್‍ಗೆ ರಂಜಿತಾ ಪತಿ ಚೇತನ್ ಕಪಾಳಮೋಕ್ಷ ಮಾಡಿದ್ದಾರೆ ಎಂದು ಕೂಡ ಆರೋಪಗಳು ಕೇಳಿಬರುತ್ತಿದೆ.

    ಚೇತನ್ ಕಾಲೇಜಿನ ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ. ವಿಭಾಗದ ಮುಖ್ಯಸ್ಥರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ. ಸ್ಥಳಕ್ಕಾಗಮಿಸಿದ ನಂಜನಗೂಡು ಗ್ರಾಮಾಂತರ ಪೊಲೀಸರು ಹಲ್ಲೆ ಪ್ರಕರಣದ ಬಗ್ಗೆ ನಾಗೇಂದ್ರ ಪ್ರಸಾದ್ ನೀಡಿದ ದೂರು ಸ್ವೀಕರಿಸಿದ್ದಾರೆ.

    ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

  • ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಜೇಬಿನಲ್ಲಿದ್ದ ಎಲ್ಲ ಹಣ ಕೊಟ್ಟ ಶಾಸಕ

    ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಜೇಬಿನಲ್ಲಿದ್ದ ಎಲ್ಲ ಹಣ ಕೊಟ್ಟ ಶಾಸಕ

    ಚಿಕ್ಕೋಡಿ: ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ತಮ್ಮ ಜೇಬಿನಲ್ಲಿದ್ದ ಎಲ್ಲ ಹಣವನ್ನು ಕುಡಚಿ ಶಾಸಕ ಪಿ.ರಾಜೀವ್ ನೀಡಿದ್ದಾರೆ. ಶಾಲೆಯ ಬೆಳವಣಿಗೆ ಕಂಡು ಮತ್ತಷ್ಟು ಅಭಿವೃದ್ಧಿ ಆಗಲಿ ಎಂದು ತನ್ನ ಜೇಬಿನಲ್ಲಿದ್ದ ಎಲ್ಲಾ ಹಣ ನೀಡಿದರು.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ ನಗರದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಕುಡಚಿ ಶಾಸಕ ಪಿ ರಾಜೀವ್ ಭೇಟಿ ನೀಡಿದ್ದರು. ಖಾಸಗಿ ಶಾಲೆಗಳನ್ನು ಮೀರಿಸುವ ಮಟ್ಟದಲ್ಲಿ ಅಭಿವೃದ್ಧಿ ಆಗಿರುವ ಈ ಶಾಲೆಯನ್ನ ಕಂಡು ಸಂತಸಗೊಂಡ ರಾಜೀವ್ ಅವರು ತನ್ನ ಜೇಬಿನಲ್ಲಿದ್ದ 18 ಸಾವಿರ ರೂ. ಅನ್ನು ಶಾಲೆ ಅಭಿವೃದ್ಧಿಗಾಗಿ ಶಿಕ್ಷಕರಿಗೆ ನೀಡಿದರು.

    ಇದೇ ವೇಳೆ ಶಾಲೆ ಅನುದಾನಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ನಿಡಗುಂದಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಖಾಸಗಿ ಶಾಲೆಗಳಂತೆ ಡಿಜಿಟಲ್ ಕ್ಲಾಸ್ ರೂಮ್ ಹಾಗೂ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಇಂಗ್ಲಿಷ್ ಭಾಷೆಯಲ್ಲಿ ಪ್ರಾವಿಣ್ಯರನ್ನಾಗಿ ಮಾಡುತ್ತಿರುವ ಶಾಲಾ ಮುಖ್ಯೋಪಾಧ್ಯಯ ವೀರಣ್ಣಾ ಮಡಿವಾಳರ ಅವರನ್ನ ಶಾಸಕರು ಹಾಡಿ ಹೊಗಳಿದರು. ಜೊತೆಗೆ ನಿಮ್ಮ ಈ ಸಾರ್ಥಕ ಸೇವೆ ಮುಂದುವರಿಯಲಿ ಎಂದು ಆಶಿಸಿದರು.

  • ಮಲತಾಯಿ, ಮಗನ ನಡ್ವೆ ಅನೈತಿಕ ಸಂಬಂಧ – ಶಾಲೆಯಲ್ಲೇ ಶಿಕ್ಷಣ ಸಂಸ್ಥೆ ಅಧ್ಯಕ್ಷನ ಬರ್ಬರ ಕೊಲೆ

    ಮಲತಾಯಿ, ಮಗನ ನಡ್ವೆ ಅನೈತಿಕ ಸಂಬಂಧ – ಶಾಲೆಯಲ್ಲೇ ಶಿಕ್ಷಣ ಸಂಸ್ಥೆ ಅಧ್ಯಕ್ಷನ ಬರ್ಬರ ಕೊಲೆ

    ವಿಜಯಪುರ: ಶಿಕ್ಷಣ ಸಂಸ್ಥೆ ಅಧ್ಯಕ್ಷ ದಾಮುನಾಯಕ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮೊದಲ ಪತ್ನಿಯ ಮಗ ಮತ್ತು ಎರಡನೇ ಪತ್ನಿ ಸೇರಿಕೊಂಡು ಬರ್ಬರವಾಗಿ ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

    ದಾಮುನಾಯಕ್ ಕೊಲೆಯಾದ ಶಿಕ್ಷಣ ಸಂಸ್ಥೆ ಅಧ್ಯಕ್ಷ. ದಾಮುನಾಯಕ್ 2ನೇ ಪತ್ನಿ ಪ್ರೇಮಾ ದಾಮುನಾಯಕ್ ಹಾಗೂ ಮಗ ಸುಭಾಷ್ ದಾಮುನಾಯಕ್‍ನನ್ನ ಬಸವನಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆ ಕೊಲೆಯಲ್ಲಿ ಭಾಗಿಯಾಗಿದ್ದ ಶಾಲೆಯ ಇಬ್ಬರು ಶಿಕ್ಷಕರು, ಓರ್ವ ಸುಪಾರಿ ಕಿಲ್ಲರ್ ಅಶೋಕ್ ಲಮಾಣಿ ಸೇರಿ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.

    ಫೆ.25 ರಂದು ಬಸವನಬಾಗೇವಾಡಿ ಪಟ್ಟಣದ ಮಡಿವಾಳೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ದಾಮುನಾಯಕ್ ಕೊಲೆ ನಡೆದಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ತನಿಖೆಯಲ್ಲಿ ಮಲತಾಯಿ ಮತ್ತು ಮಗನ ನಡುವಿನ ಅನೈತಿಕ ಸಂಬಂಧ ಮತ್ತು ಆಸ್ತಿಗಾಗಿ ಕೊಲೆ ನಡೆದಿರುವುದು ಬಯಲಾಗಿದೆ.

    ದಾಮುನಾಯಕ್ 2ನೇ ಹೆಂಡತಿ ಪ್ರೇಮಾ ಹಾಗೂ ಮಗ ಸುಭಾಷ್ ನಡುವೆ ಅಕ್ರಮ ಸಂಬಂಧ ಇತ್ತು. ಹೀಗಾಗಿ ಅನೈತಿಕ ಸಂಬಂಧ ಹಾಗೂ ಆಸ್ತಿಗಾಗಿ ತಾಯಿ ಮತ್ತು ಮಗ ಒಟ್ಟಿಗೆ ಸೇರಿ ಕೊಲೆ ಮಾಡಿದ್ದಾರೆ. ಸುಪಾರಿ ಕಿಲ್ಲರ್ ಅಶೋಕ್ ಲಮಾಣಿಯಿಂದ ಈ ಕೊಲೆ ಮಾಡಿಸಿದ್ದಾರೆ. ಈ ಕೊಲೆಯಲ್ಲಿ ಇಬ್ಬರು ಶಿಕ್ಷಕರಾದ ಅವ್ವಣ್ಣ ಗ್ವಾತಗಿ ಮತ್ತು ಶಿವಣ್ಣ ಕೊಣ್ಣೂರ್ ಭಾಗಿಯಾಗಿದ್ದಾರೆ. ಹೀಗಾಗಿ ಐವರನ್ನು ಬಂಧಿಸಿದ್ದೇನೆ ಎಂದು ಎಸ್‍ಪಿ ಅನುಪಮ್ ಅಗರವಾಲ್ ಸ್ಪಷ್ಟನೆ ನೀಡಿದ್ದಾರೆ.

  • ಒಂದೇ ಹುಡ್ಗಿಯನ್ನ ಪ್ರೀತಿಸಿದ ಇಬ್ಬರು ಶಿಕ್ಷಕರು – ಇಬ್ಬರ ಸಾವಿನಲ್ಲಿ ತ್ರಿಕೋನ ಪ್ರೇಮ ಕಥೆ ಅಂತ್ಯ

    ಒಂದೇ ಹುಡ್ಗಿಯನ್ನ ಪ್ರೀತಿಸಿದ ಇಬ್ಬರು ಶಿಕ್ಷಕರು – ಇಬ್ಬರ ಸಾವಿನಲ್ಲಿ ತ್ರಿಕೋನ ಪ್ರೇಮ ಕಥೆ ಅಂತ್ಯ

    – 3 ವರ್ಷದಿಂದ ಒಬ್ಬ, 2 ತಿಂಗಳಿಂದ ಇನ್ನೊಬ್ಬ
    – ಶಿಕ್ಷಕನನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡ್ಕೊಂಡ

    ಲಕ್ನೋ: ಒಂದೇ ಹುಡುಗಿಯ ಹಿಂದೆ ಇಬ್ಬರು ಶಿಕ್ಷಕರು ಬಿದ್ದು, ಇಬ್ಬರೂ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

    ಸೂರಜ್ ಪಾಂಡೆ ಮತ್ತು ಅನೂಜ್ ಮೃತ ಶಿಕ್ಷಕರು. ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿ ಅನೂಜ್, ಪಾಂಡೆಯನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಏನಿದು ಪ್ರಕರಣ?
    ಮಿರ್ಜಾಪುರದ ವಿಂಧ್ಯಾಚಲ್ ಪೊಲೀಸ್ ಠಾಣೆ ಪ್ರದೇಶದ ರಾಪುರಿ ಗ್ರಾಮದ ಬಾವಿಯೊಂದರಲ್ಲಿ ಶಿಕ್ಷಕ ಸೂರಜ್ ಪಾಂಡೆ ಮೃತದೇಹ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ತನಿಖೆ ಕೈಗೊಂಡಿದ್ದು, ಕೊಲೆಯ ರಹಸ್ಯವನ್ನು ಭೇದಿಸಿದ್ದಾರೆ. ಪಾಂಡೆ ಜೊತೆ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇಬ್ಬರು ಸಹ ಶಿಕ್ಷಕರು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಸೂರಜ್ ಪಾಂಡೆ, ಅನೂಜ್ ಮತ್ತು ರತ್ನೇಶ್ ಮೂವರು ಖುರೈತಿ ಎಂಬ ಸಾರ್ವಜನಿಕ ಶಾಲೆಯಲ್ಲಿ ಖಾಸಗಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಪಾಂಡೆ ಮತ್ತು ಅನೂಜ್ ಒಳ್ಳೆಯ ಸ್ನೇಹಿತರಾಗಿದ್ದರು. ಅನೂಜ್ ಮೂರು ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಕಳೆದ ಎರಡು ತಿಂಗಳಿನಿಂದ ಅದೇ ಹುಡುಗಿ ಮೃತ ಪಾಂಡೆ ಜೊತೆ ಫೋನ್‍ನಲ್ಲಿ ಮಾತನಾಡಲು ಪ್ರಾರಂಭಿಸಿದ್ದಳು. ಈ ವಿಚಾರ ಅನೂಜ್‍ಗೆ ಗೊತ್ತಾಗಿ ಆಕೆಯ ಜೊತೆ ಫೋನಿನಲ್ಲಿ ಮಾತಾಡಬೇಡ ಎಂದು ಪಾಂಡೆಗೆ ಬುದ್ಧಿವಾದ ಹೇಳಿದ್ದಾನೆ. ಆದರೆ ಸೂರಜ್ ಪಾಂಡೆ ಆತನ ಮಾತನ್ನು ಕಡೆಗಣಿಸಿದ್ದಾನೆ.

    ಕೊನೆಗೆ ಅನೂಜ್ ತನ್ನ ಗೆಳೆಯ ರತ್ನೇಶ್ ಜೊತೆ ಸೇರಿ ಫೆ. 11ರಂದು ಮಫ್ಲರ್ ನಿಂದ ಪಾಂಡೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಲ್ಲದೇ ಪಾಂಡೆಯ ಬೈಕನ್ನು ಸುಮಾರು 2 ಕಿ.ಮೀ ದೂರಕ್ಕೆ ಎಸೆದಿದ್ದಾನೆ. ಇತ್ತ ಕೊಲೆ ಮಾಡಿದ ಮರುದಿನ ಅನೂಜ್ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

    ಸೂರಜ್ ಪಾಂಡೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದೆವು. ಸೂರಜ್ ಪಾಂಡೆ ಕುಟುಂಬದವರು ಮತ್ತು ಸ್ಥಳೀಯರು ಅನೂಜ್ ಮತ್ತು ಸೂರಜ್ ಬೈಕಿನಲ್ಲಿ ಹೋಗಿದ್ದನ್ನು ನೋಡಿದ್ದರು. ಹೀಗಾಗಿ ಪೊಲೀಸರು ಕೂಡ ಆರೋಪಿ ಅನೂಜ್‍ನನ್ನು ಹುಡುಕುತ್ತಿದ್ದರು. ಆದರೆ ಅನೂಜ್ ತಾನೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯಕ್ಕೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ನೇಹಿತ ರತ್ನೇಶ್‍ನನ್ನು ಬಂಧಿಸಿದ್ದು, ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮೃತ ಸೂರಜ್ ಪಾಂಡೆಯ ಬೈಕನ್ನು ಸಹ ವಶಪಡಿಸಿಕೊಂಡಿದ್ದೇವೆ. ಒಂದೇ ಹುಡುಗಿಯನ್ನು ಇಬ್ಬರು ಪ್ರೀತಿ ಮಾಡಿದ್ದಕ್ಕೆ ಈ ಕೃತ್ಯ ನಡೆದಿದೆ ಎಂದು ಎಸ್‍ಪಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.

  • ವಿವಾಹಿತ ಶಿಕ್ಷಕನಿಂದ ಪ್ರೀತಿ ನಾಟಕ- ಶಿಕ್ಷಕಿ ಆತ್ಮಹತ್ಯೆ

    ವಿವಾಹಿತ ಶಿಕ್ಷಕನಿಂದ ಪ್ರೀತಿ ನಾಟಕ- ಶಿಕ್ಷಕಿ ಆತ್ಮಹತ್ಯೆ

    ಹಾಸನ: ವಿವಾಹಿತ ಶಿಕ್ಷಕನೋರ್ವ ಪ್ರೀತಿಯ ನಾಟಕವಾಡಿದ ಕಾರಣ ಮೋಸ ಹೋದ ಶಿಕ್ಷಕಿಯೊಬ್ಬರು ವಿಷ ಸೇವಿಸಿ ಆಹ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿಯನ್ನು ರಾಣಿ ಎಂದು ಗುರುತಿಸಲಾಗಿದೆ. ರಾಣಿಯ ಸಹೋದ್ಯೋಗಿ ಧನಂಜಯ್ ಮೋಸ ಮಾಡಿದ ಶಿಕ್ಷಕ. ಈ ಹಿಂದೆಯೇ ಬೇರೆ ಯುವತಿಯ ಜೊತೆ ಮದುವೆಯಾಗಿದ್ದ ಧನಂಜಯ್, ನಾನು ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ರಾಣಿಯನ್ನು ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದಾನೆ.

    ರಾಣಿ ಮತ್ತು ಧನಂಜಯ್ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ, ಮಲ್ಲಂದೂರಿನ ಫ್ರೌಢಶಾಲೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ತನಗೆ ಮದುವೆಯಾಗಿರುವುದನ್ನು ಮುಚ್ಚಿಟ್ಟ ಶಿಕ್ಷಕ ಧನಂಜಯ್, ಸಹೋದ್ಯೋಗಿ ಶಿಕ್ಷಕಿ ರಾಣಿ ಜೊತೆ ಪ್ರೀತಿ ನಾಟಕವಾಡಿ ಸಂಬಂಧ ಬೆಳೆಸಿದ್ದ. ಅಲ್ಲದೆ ರಾಣಿಯಿಂದ ಲಕ್ಷಗಟ್ಟಲೆ ಹಣ ಪಡೆದು ವಂಚಿಸಿದ್ದಾನೆ ಎಂದು ಶಿಕ್ಷಕಿ ರಾಣಿ ಸಹೋದರ ರಾಕೇಶ್ ಆರೋಪ ಮಾಡಿದ್ದಾರೆ.

    ತದನಂತರ ಶಿಕ್ಷಕಿ ರಾಣಿ ಹಾಸನ ಜಿಲ್ಲೆಗೆ ವರ್ಗಾವಣೆಯಾಗಿದ್ದಾಳೆ. ಈ ವೇಳೆ ರಾಣಿಗೆ ಧನಂಜಯ್ ಮದುವೆ ವಿಚಾರ ತಿಳಿದು ಬಂದಿದೆ. ಆಗ ರಾಣಿ ಮತ್ತು ಧನಂಜಯನ ನಡುವೆ ಜಗಳವಾಗಿದೆ. ಈ ಜಗಳದ ವಿಡಿಯೋ ಕೂಡ ರಾಣಿ ಸಹೋದರ ಬಯಲು ಮಾಡಿದ್ದು, ತನಗಾಗಿರುವ ನೋವನ್ನು ಹೇಳಿಕೊಂಡು ನನ್ನ ಜೀವನ, ನನ್ನ ಮನಸ್ಸನ್ನು ಹಾಳು ಮಾಡಿದೆ ಎಂದು ಮೋಸ ಮಾಡಿದ ಸಹೋದ್ಯೋಗಿ ಶಿಕ್ಷಕನನ್ನು ರಾಣಿ ಬೈದಿದ್ದಾರೆ. ಎಲ್ಲ ದಾಖಲೆಯೊಂದಿಗೆ ನಿನ್ನ ಮನೆಗೆ ಬರುತ್ತೇನೆ, ಎಲ್ಲವನ್ನೂ ಬಯಲು ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದುಕೊಂಡಿದ್ದಾರೆ.

    ಇದಾದ ನಂತರ ನೊಂದ ಶಿಕ್ಷಕಿಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಗ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಣಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ನ್ಯಾಯಕ್ಕಾಗಿ ರಾಣಿ ಸಹೋದರ ಕಾನೂನು ಹೋರಾಟ ಮಾಡುತ್ತಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರೇ ತನ್ನ ತಂಗಿ ಸಾವಿಗೆ ಕಾರಣವಾದ ಶಿಕ್ಷಕ ಧನಂಜಂಯ್ ಗೆ ಸಹಾಯ ಮಾಡುತ್ತಿದ್ದಾರೆಂದು ರಾಣಿ ಸಹೋದರ ರಾಕೇಶ್ ಗಂಭೀರ ಆರೋಪ ಮಾಡಿದ್ದಾರೆ.

  • ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ಇಬ್ಬರು ಶಿಕ್ಷಕರ ಅಮಾನತು

    ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ಇಬ್ಬರು ಶಿಕ್ಷಕರ ಅಮಾನತು

    ಚಿಕ್ಕಮಗಳೂರು: ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜಕ್ಕೆ ಅವಮಾನಗೈದ ಆರೋಪ ಹಿನ್ನೆಲೆ ಜಿಲ್ಲೆಯ ಇಬ್ಬರು ಶಿಕ್ಷಕರನ್ನ ಸೇವೆಯಿಂದ ಅಮಾನಗೊಳಿಸಲಾಗಿದೆ.

    ಕೊಪ್ಪ ತಾಲೂಕಿನ ತಲಮಕ್ಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಹಾಗೂ ಸಹ ಶಿಕ್ಷಕ ಓಂಕಾರಪ್ಪ ಅಮಾನತುಗೊಂಡವರು. ಜನವರಿ 26ರ ಗಣರಾಜ್ಯೋತ್ಸವದಂದು ಶಿಕ್ಷಕರಾದ ರೇವತಿ ಹಾಗೂ ಓಂಕಾರಪ್ಪ ಅವರ ಬೇಜವಾಬ್ದಾರಿಯಿಂದ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ. ಈ ವಿಷಯವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನಮ್ಮ ಗ್ರಾಮದ ಶಾಲೆಯ ಗೌರವನ್ನು ಹಾಳು ಮಾಡಿರುವುದಲ್ಲದೆ, ಇವರಿಬ್ಬರ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಶಾಲೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಶಾಲಾಭಿವೃದ್ಧಿ ಮಂಡಳಿ, ಪೋಷಕರು ಹಾಗೂ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ಬಿಇಓಗೆ ದೂರು ನೀಡಿದ್ದರು.

    ಶಿಕ್ಷಕರಾದ ರೇವತಿ ಹಾಗೂ ಓಂಕಾರಪ್ಪ ಅವರನ್ನು ಬೇರೆ ಶಾಲೆಗೆ ವರ್ಗಾಯಿಸಿ ಪ್ರಕರಣದ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ದೂರಿನಲ್ಲಿ ಒತ್ತಾಯಿಸಲಾಗಿತ್ತು. ಅಷ್ಟೇ ಅಲ್ಲದೆ ಅವರ ಮೇಲೆ ಕಾನೂನು ಕ್ರಮ ಜರುಗಿಸದಿದ್ದರೆ ನಾವೆಲ್ಲರೂ ಸಾಮೂಹಿಕವಾಗಿ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

    ಇದು ಶಿಕ್ಷಕರ ವೃತ್ತಿಗೆ ತರವಲ್ಲದ ಕೆಲಸವಾಗಿದೆ. ರಾಷ್ಟ್ರಧ್ವಜಕ್ಕೆ ಶಿಕ್ಷಕರು ಅವಮಾನ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಜೊತೆಗೆ ಇಲಾಖೆಯ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

  • ಫೇಲಾದ ಗಣಿತದಲ್ಲಿಯೇ ಐಎಎಸ್ ಮಾಡಿದೆ- ವಿದ್ಯಾರ್ಥಿಗಳಿಗೆ ಸಿಇಓ ಪಾಠ

    ಫೇಲಾದ ಗಣಿತದಲ್ಲಿಯೇ ಐಎಎಸ್ ಮಾಡಿದೆ- ವಿದ್ಯಾರ್ಥಿಗಳಿಗೆ ಸಿಇಓ ಪಾಠ

    – ಎಸ್‍ಎಲ್‍ಎಲ್‍ಸಿ ಫಲಿತಾಂಶದಲ್ಲಿ ಬಳ್ಳಾರಿ ಅಗ್ರಸ್ಥಾನಕ್ಕೇರಲು ಶ್ರಮಿಸಿ

    ಬಳ್ಳಾರಿ: ಜಿಲ್ಲೆಯಲ್ಲಿ ಈ ಬಾರಿ ಎಸ್‍ಎಲ್‍ಎಲ್‍ಸಿ ಫಲಿತಾಂಶ ವೃದ್ಧಿಸುವ ನಿಟ್ಟಿನಲ್ಲಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಬಾರಿ ಜಿಲ್ಲೆ ಅಗ್ರಸ್ಥಾನಕ್ಕೇರಿಸಲು ಎಲ್ಲ ಶಿಕ್ಷಕ ಸಮುದಾಯ ಶ್ರಮಿಸಬೇಕು. ಎಲ್ಲ ಮಕ್ಕಳನ್ನು ಪಾಸ್ ಮಾಡುವ ಸಾಮರ್ಥ್ಯ ಹಾಗೂ ಅಸಾಧ್ಯವನ್ನು ಸಾಧ್ಯವಾಗಿಸುವ ಸಾಮರ್ಥ್ಯ ತಮ್ಮಲ್ಲಿದೆ ಎಂದು ಜಿ.ಪಂ ಸಿಇಒ ಕೆ.ನಿತೀಶ್ ಹೇಳಿದ್ದಾರೆ.

    ಜಿಲ್ಲಾಡಳಿತ, ಜಿ.ಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಎಸ್‍ಎಲ್‍ಎಲ್‍ಸಿ ಫಲಿತಾಂಶ ಉತ್ತಮಗೊಳಿಸುವ ಕುರಿತು ಜಿಲ್ಲೆಯ ಎಲ್ಲಾ ಪ್ರೌಢಶಾಲೆ ಮುಖ್ಯಗುರುಗಳು, ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಬದುಕು ರೂಪಿಸುವ ನಿಟ್ಟಿನಲ್ಲಿ ಎಸ್‍ಎಲ್‍ಎಲ್‍ಸಿ ಮುಖ್ಯ ಘಟ್ಟ. ತಾವು ವಿದ್ಯಾರ್ಥಿಗಳನ್ನು ಯಾವ ರೀತಿ ಪರಿಣಾಮಕಾರಿಯಾದ ಬೋಧನೆಯ ಮೂಲಕ ಅಣಿಗೊಳಿಸುತ್ತೀರೋ ಅವರು ಉತ್ತಮ ಫಲಿತಾಂಶ ಪಡೆಯಲು ಸಜ್ಜಾಗುತ್ತಾರೆ ಎಂದರು.

    ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಅವರನ್ನು ಪರಿಗಣಿಸಿ ಮತ್ತು ಬೋಧಿಸಿ. ಶಿಕ್ಷಕರು ಸರಿಯಾಗಿ ಪಾಠ ಮಾಡಿದರೇ ವಿದ್ಯಾರ್ಥಿಗಳು ಭವಿಷ್ಯ ಕಟ್ಟಿಕೊಂಡ ಬಳಿಕ ನಿಮ್ಮನ್ನು ಸ್ಮರಿಸಲಿದ್ದಾರೆ. ಶಿಕ್ಷಕರಿಗೆ ಪ್ರತಿ ವರ್ಷ 10ನೇ ಕ್ಲಾಸ್ ಬರುತ್ತೆ. ಆದರೆ ವಿದ್ಯಾರ್ಥಿಗಳಿಗೆ ಒಂದೆ ಸಾರಿ ಬರುವುದು. ಇದೊಂದು ನಿಮಗೆ ಸದಾವಕಾಶ, ಅದನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು.

    ತಾವು ಖುಷಿಯಿಂದ ಮಕ್ಕಳಿಗೆ ಪಾಠ ಹೇಳಿಕೊಟ್ಟರೇ ಅದು ಅವರ ತಲೆಗೆ ಹೋಗುತ್ತದೆ. ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ತಮಗೆ ಯಾವ ಸಹಾಯ-ಸಹಕಾರ ಬೇಕು ಅದನ್ನು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ಚಿತ್ರದುರ್ಗದಲ್ಲಿ ನವೋದಯ ಶಾಲೆಯಲ್ಲಿ ನಾನು 8ನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಗಣಿತ ವಿಷಯದಲ್ಲಿ ಫೇಲಾಗಿದ್ದೆ. ಆದರೆ ನಂತರ ಅದೇ ಗಣಿತ ಶಿಕ್ಷಕರು ಅತ್ಯಂತ ಇಷ್ಟವಾಗಿ ಅವರ ಪಾಠವನ್ನು ಪ್ರೀತಿಯಿಂದ ಕಲಿತು ಎಸ್‍ಎಲ್‍ಎಲ್‍ಸಿಯಲ್ಲಿ 99 ಹಾಗೂ ಪಿಯುಸಿಯಲ್ಲಿ 100ಕ್ಕೆ 100 ಅಂಕಗಳನ್ನು ಪಡೆದುಕೊಂಡೆ ಎಂದು ಕೆ.ನಿತೀಶ್ ಹೇಳಿದ್ದಾರೆ.

    ನಂತರದ ದಿನಗಳಲ್ಲಿ ಗಣಿತ ಇಷ್ಟದ ವಿಷಯವಾಯ್ತು. ಇಂಜನಿಯರಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದೆ. ಐಎಎಸ್ ಪರೀಕ್ಷೆಯನ್ನು ಗಣಿತದಲ್ಲಿಯೇ ಎದುರಿಸಿ ಇಡೀ ದೇಶಕ್ಕೆ 8ನೇ ರ‌್ಯಾಂಕ್ ಗಳಿಸಿದೆ. ಇದಕ್ಕೆ ಕಾರಣ ನನಗೆ ಕಲಿಸಿದ ಗಣಿತ ಶಿಕ್ಷಕರು ಎಂದು ಅವರು ಸ್ಮರಿಸಿದರು. ತಾವು ತಮ್ಮ ಮಕ್ಕಳನ್ನು ಅತ್ಯಂತ ಇಷ್ಟದಿಂದ ಕಲಿಸಿ. ಅವರು ಉನ್ನತ ಸ್ಥಾನಕ್ಕೇರಿದಾಗ ತಮ್ಮನ್ನು ಸದಾ ಸ್ಮರಿಸುತ್ತಾರೆ. ಅಂದು ಫೇಲಾಗಿದ್ದ ನನ್ನನ್ನೇ ಐಎಎಸ್ ಅಧಿಕಾರಿಯನ್ನಾಗಿ ಮಾಡಿದ ಕೀರ್ತಿ ಶಿಕ್ಷಕ ಸಮೂಹಕ್ಕೆ ಸೇರುತ್ತದೆ ಎಂದು ತಮ್ಮ ಬಾಲ್ಯವನ್ನು ನೆನೆದರು.