Tag: teachers

  • ಲಾಕ್‍ಡೌನ್ ನಡುವೆಯೇ ನಾಳೆಯಿಂದ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ

    ಲಾಕ್‍ಡೌನ್ ನಡುವೆಯೇ ನಾಳೆಯಿಂದ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ

    – ಶಿಕ್ಷಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಎಸ್‍ಎಸ್‍ಎಲ್ ಬೋರ್ಡ್

    ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೀಗ ಎಸ್‍ಎಸ್‍ಎಲ್‍ಸಿ ಮೌಲ್ಯಮಾನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಲಾಕ್‍ಡೌನ್ ನಡುವೆಯೇ ಅಂದರೆ ನಾಳೆಯಿಂದಲೇ ಮೌಲ್ಯಮಾಪನ ಪ್ರಾರಂಭವಾಗಲಿದೆ.

    ಈಗಾಗಲೇ ಶಿಕ್ಷಕರು, ಡಿಡಿಪಿಐ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷ ಮಂಡಳಿಯಿಂದ ನೋಟಿಸ್ ನೀಡಲಾಗಿದ್ದು, ನಾಳೆಯಿಂದಲೇ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಲಾಕ್‍ಡೌನ್ ನಡುವೆಯೇ ನಾಳೆಯಿಂದ ಮೌಲ್ಯಮಾಪನ ಪ್ರಾರಂಭವಾಗಲಿದ್ದು, ಮೌಲ್ಯಮಾಪನಕ್ಕೆ ವಿನಾಯಿತಿ ನೀಡಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

    ಲಾಕ್‍ಡೌನ್ ಜಾರಿಯಲ್ಲಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ನಾಳೆಯಿಂದ ಮೌಲ್ಯಮಾಪನ ನಡೆಯಲಿದೆ. ಎಲ್ಲ ಶಿಕ್ಷಕರು, ಅಧಿಕಾರಿಗಳಿಗೆ ಈ ಕುರಿತು ಎಸ್‍ಎಸ್‍ಎಲ್ಸಿ ಬೋರ್ಡ್ ನಿರ್ದೇಶಕಿ ಎಂ.ಕನಗವಲ್ಲಿ ಸೂಚನೆ ನೀಡಿದ್ದು, ಮೌಲ್ಯಮಾಪನಕ್ಕೆ ಹಾಜರಾಗುವ ಎಲ್ಲ ಶಿಕ್ಷಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದಾಗಿಯೂ ತಿಳಿಸಿದ್ದಾರೆ. ಡಿಡಿಪಿಐಗಳು ಮತ್ತು ಬಿಇಓಗಳು ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.

    ಮೌಲ್ಯಮಾಪನಕ್ಕೆ ಆಗಮಿಸುವ ಶಿಕ್ಷಕರಿಗೆ ಪಿಕ್ ಅಪ್ ಮತ್ತು ಡ್ರಾಪ್ ವ್ಯವಸ್ಥೆ ಮಾಡಲು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ಸೂಚನೆ ನೀಡಿದೆ. ಅಲ್ಲದೆ ಶಿಕ್ಷಕರ ಸಾರಿಗೆ ವ್ಯವಸ್ಥೆ ಜವಾಬ್ದಾರಿಯನ್ನು ಡಿಡಿಪಿಐಗಳು ಮತ್ತು ಬಿಇಓಗಳಿಗೆ ವಹಿಸಲಾಗಿದೆ.

  • ಆನ್‍ಲೈನ್ ಶಿಕ್ಷಣಕ್ಕೆ ಸೆಡ್ಡು ಹೊಡೆದ ಆಡಳಿತ ಮಂಡಳಿ- ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ

    ಆನ್‍ಲೈನ್ ಶಿಕ್ಷಣಕ್ಕೆ ಸೆಡ್ಡು ಹೊಡೆದ ಆಡಳಿತ ಮಂಡಳಿ- ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ

    – ದಿನನಿತ್ಯ 50ಕ್ಕೂ ಹೆಚ್ಚು ಮನೆಗಳಿಗೆ ಶಿಕ್ಷಕರು ಭೇಟಿ
    – ಪಾಠದ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಕಾಳಜಿ

    ಬೆಳಗಾವಿ/ಚಿಕ್ಕೋಡಿ: ಕೊರೊನಾ ಮಹಾಮಾರಿಯಿಂದ ಶಾಲೆಗಳನ್ನ ಯಾವಾಗ ಆರಂಭ ಮಾಡಬೇಕು ಎನ್ನುವ ಗೊಂದಲದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗೊಂದಲದಲ್ಲಿವೆ. ಕೆಲ ಶಾಲೆಗಳು ಸರ್ಕಾರ ಬೇಡ ಎಂದರೂ ಆನ್‍ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಿವೆ. ಆದರೆ ಇಲ್ಲೊಂದು ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ವಿಭಿನ್ನವಾಗಿ ಪಾಠ ಮಾಡುವ ಹೊಸ ಐಡಿಯಾ ಕಂಡು ಕೊಂಡಿದೆ.

    ಬೈಕ್ ಮೇಲೆ ಹಾಗೂ ನಡೆದುಕೊಂಡು ಶಾಲಾ ಮಕ್ಕಳ ಮನೆಗಳಿಗೆ ತೆರಳಿ ಶಿಕ್ಷಕರು ಪಾಠ ಮಾಡುತ್ತಿರುವ ಹೊಸ ಐಡಿಯಾವನ್ನ ಮಾಡಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಜಿ.ಎಂ.ಹಂಜಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆಡಳಿತ ಮಂಡಳಿ ಮಾಡಿದೆ. ಮಹಾಮಾರಿ ಕೊರೊನಾದಿಂದ ವಿದ್ಯಾರ್ಥಿಗಳು ಪಾಠ ಬಿಟ್ಟು ಕೇವಲ ಆಟ ಆಡಿ ಕಾಲಹರಣ ಮಾಡುವುದನ್ನ ಗಮನಿಸಿ ಹಾಗೂ ಆನ್‍ಲೈನ್ ಶಿಕ್ಷಣದಿಂದ ಮಕ್ಕಳಿಗೆ, ಪಾಲಕರಲ್ಲಿ ತೊಂದರೆಯಾಗುವುದನ್ನ ಮನಗಂಡು ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರು ತೆರಳಿ ಪಾಠ ಹೇಳುವ ಹೊಸ ಐಡಿಯಾ ಕಂಡುಕೊಂಡಿದೆ.

    600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರೇ ಖುದ್ದಾಗಿ ತೆರಳಿ ಪಾಠ ಮಾಡುತ್ತಿದ್ದಾರೆ. ದಿನನಿತ್ಯ 50ಕ್ಕೂ ಹೆಚ್ಚು ಮನೆಗಳಿಗೆ ಶಿಕ್ಷಕರು ತೆರಳಿ ಹೋಂವರ್ಕ್ ಕೊಟ್ಟು ಬರುತ್ತಾರೆ. ಬಳಿಕ ಮತ್ತೆ ಮೂರು ದಿನಗಳ ಬಳಿಕ ಹೋಂವರ್ಕ್ ಚೆಕ್ ಮಾಡಿ ಹೊಸ ಹೋಂವರ್ಕ್ ಕೊಟ್ಟು ಬರುವ ಕೆಲಸವನ್ನ ಶಿಕ್ಷಕರು ಮಾಡುತ್ತಿದ್ದಾರೆ. 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ 28 ಶಿಕ್ಷಕರ ತಂಡ ದಿನನಿತ್ಯ ಹೋಗಿ ಪಾಠ ಮಾಡಿ ಬರುತ್ತಿದ್ದಾರೆ. ಈ ಹೊಸ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಪಾಲಕರು ಸಂತಸ ವ್ಯಕ್ತಪಡಿಸಿದ್ದು, ಲಾಕ್‍ಡೌನ್‍ನಿಂದ ನಮ್ಮ ಮಕ್ಕಳು ವಿದ್ಯಾಭ್ಯಾಸ ಮರೆತು ಬಿಟ್ಟಿದ್ದರು. ಆದರೆ ಈ ಹೊಸ ವ್ಯವಸ್ಥೆಯಿಂದ ದಿನನಿತ್ಯ ಅಭ್ಯಾಸದ ಕಡೆಗೆ ಗಮನ ಕೊಡುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

    ಅನುದಾನಿತ ಶಾಲೆ ಆದರೂ ಶಿಕ್ಷಕರು ಹೆಚ್ಚು ಇರುವ ಈ ಶಾಲೆಯಲ್ಲಿ ಶಾಲೆಗಳು ಬಂದ ಆಗಿದ್ದ ಕಾರಣ ವೇತನವಿಲ್ಲದೇ ಪರದಾಡುತ್ತಿದ್ದರು. ಇದನ್ನ ಗಮನಿಸಿದ ಆಡಳಿತ ಮಂಡಳಿ ಈಗ ಶಿಕ್ಷಕರಿಗೆ ಹೊಸ ಕಾಯಕ ನೀಡಿ ವೇತನ ನೀಡುತ್ತಿರುವುದಕ್ಕೆ ಶಿಕ್ಷಕರ ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ. ಅಲ್ಲದೇ ದಿನನಿತ್ಯ ಶಿಕ್ಷಕರು ಪಾಠ ಮಾಡುವುದಷ್ಟೇ ಅಲ್ಲದೇ ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿಗಳ ಮನೆಯವರ ಆರೋಗ್ಯದ ಮಾಹಿತಿ ಪಡೆದು, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ ಅವರಿಗೆ ಸಲಹೆ ನೀಡಿ ಆಸ್ಪತ್ರೆಗೆ ಕಳಿಸಿಕೊಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಪಾಠದ ಜೊತೆಗೆ ಆರೋಗ್ಯದ ಕಡೆಯೂ ಈ ಶಾಲೆಯ ಶಿಕ್ಷಕರು ಕಾಳಜಿವಹಿಸುತ್ತಿದ್ದಾರೆ.

    ಕೊರೊನಾ ಮಹಾಮಾರಿಗೆ ಶಿಕ್ಷಣ ವ್ಯವಸ್ಥೆಯೇ ಅದಲು ಬದಲಾಗಿದೆ. ಆನ್‍ಲೈನ್ ಶಿಕ್ಷಣ ಬೇಕಾ ಅಥವಾ ಶಾಲೆ ಆರಂಭಿಸಬೇಕಾ ಎನ್ನುವ ಗೊಂದಲದಲ್ಲಿ ಸರ್ಕಾರ ಇದೆ. ಆದರೆ ಈ ಎಲ್ಲ ಗೊಂದಲಗಳನ್ನ ಬದಿಗಿಟ್ಟು ಜಿ.ಎಂ.ಹಂಜಿ ಶಿಕ್ಷಣ ಸಂಸ್ಥೆಯು ಕಂಡುಕೊಂಡಿರುವ ಈ ಹೊಸ ಐಡಿಯಾ ಇತರರಿಗೂ ಮಾದರಿಯಾಗಿದೆ.

  • ಪರೀಕ್ಷೆಯಲ್ಲಿ ನಕಲಿಗೆ ಸಹಕಾರ- 4 ಶಿಕ್ಷಕರು, ಕೊಠಡಿಯ ಮೇಲ್ವಿಚಾರಕನ ಮೇಲೆ ಕೇಸ್

    ಪರೀಕ್ಷೆಯಲ್ಲಿ ನಕಲಿಗೆ ಸಹಕಾರ- 4 ಶಿಕ್ಷಕರು, ಕೊಠಡಿಯ ಮೇಲ್ವಿಚಾರಕನ ಮೇಲೆ ಕೇಸ್

    ಹಾವೇರಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನಕಲಿಗೆ ಸಹಕರಿಸುತ್ತಿದ್ದ ಖಾಸಗಿ ಶಾಲೆಯ ನಾಲ್ವರು ಶಿಕ್ಷಕರು ಹಾಗೂ ಕೊಠಡಿಯ ಮೇಲ್ವಿಚಾರಕನನ್ನು ವಶಕ್ಕೆ ಪಡೆದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ನಡೆದಿದೆ.

    ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೇಳಿಕೊಡಲು ಬಂದ ಶಿಕ್ಷಕರನ್ನು ಜಗದೀಶ್ ಶಿವಪ್ಪನವರ, ಮನೋಹರ ಬಿ.ಆರ್, ಗುತ್ತೆಪ್ಪ ಬಾಳಂಬೀಡ, ಶಿವಯೋಗಿ ರಾಗಿ ಎಂದು ಗುರುತಿಸಲಾಗಿದೆ. ಹಿರೇಕೆರೂರು ತಹಶೀಲ್ದಾರ ಆರ್.ಎಚ್.ಭಾಗವಾನ ಭೇಟಿ ನೀಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

    ತಹಶೀಲ್ದಾರ್ ಹಾಗೂ ಪೊಲೀಸರನ್ನು ಕಂಡು ಶಿಕ್ಷಕರು ಓಡಿ ಹೋಗುತ್ತಿದ್ದರು. ಇದನ್ನು ಗಮನಿಸಿದ ತಹಶೀಲ್ದಾರ್ ಭಾಗವಾನ ನಾಲ್ವರು ಶಿಕ್ಷಕರನ್ನು ಹಾಗೂ ಕೊಠಡಿಯ ಮೇಲ್ವಿಚಾರಕ ನಾಗರಾಜ್ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ನಂತರ ಪೊಲೀಸರು ಶಿಕ್ಷಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

  • ಸರ್ಕಾರಿ ಆದೇಶ ಲೆಕ್ಕಿಸದೆ ಶಾಲೆ ತೆರೆದ ಖಾಸಗಿ ಸಂಸ್ಥೆಗಳು

    ಸರ್ಕಾರಿ ಆದೇಶ ಲೆಕ್ಕಿಸದೆ ಶಾಲೆ ತೆರೆದ ಖಾಸಗಿ ಸಂಸ್ಥೆಗಳು

    – ಪೋಷಕರು ಒಪ್ಪದಿದ್ರೂ ಮಕ್ಕಳನ್ನು ಶಾಲೆಗೆ ಕರೆಸಿಕೊಂಡ ಶಿಕ್ಷಕರು
    – ಶಾಸಕರ ಒಡೆತನದ ಶಾಲೆಯೂ ಓಪನ್
    – ಮಾಸ್ಕ್ ಧರಿಸದೆ ಶಿಕ್ಷಕರಿಂದ ಪಾಠ

    ಮಂಡ್ಯ: ಜಿಲ್ಲೆಯಲ್ಲಿ ಸರ್ಕಾರಿ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿದ್ದು, ಬಹುತೇಕ ಖಾಸಗಿ ಶಾಲೆಗಳನ್ನು ತೆರೆಯಲಾಗಿದೆ. ಈ ಮೂಲಕ ಪರೀಕ್ಷೆ ಹೆಸರಿನಲ್ಲಿ ತರಗತಿ ಆರಂಭಿಸಿ ಮಕ್ಕಳ ಜೀವದ ಜೊತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಚೆಲ್ಲಾಟವಾಡುತ್ತಿವೆ.

    ಜೂ.25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನೆಲೆ ತರಗತಿಗಳನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಒಡೆತನದ ವಿವೇಕ ವಿದ್ಯಾಸಂಸ್ಥೆಯನ್ನೂ ತೆರೆಯಲಾಗಿದ್ದು, ಮಕ್ಕಳನ್ನು ಕೂಡಿ ಹಾಕಿಕೊಂಡು ಪಾಠ ಮಾಡಲಾಗುತ್ತಿದೆ. ಅಲ್ಲದೆ ರೋಟರಿ ಎಜುಕೇಶನ್ ಸೊಸೈಟಿ, ಆದರ್ಶ ಪ್ರೌಢಶಾಲೆ ಸೇರಿದಂತೆ ಜಿಲ್ಲೆಯ ಬಹುತೇಕ ಶಾಲೆಗಳನ್ನು ತೆರೆಯಲಾಗಿದೆ. ಸಾಮಾಜೀಕ ಅಂತರ ಕಾಯ್ದುಕೊಂಡು ಪಾಠ ಮಾಡಲಾಗುತ್ತಿದೆ. ಆದರೆ ಶಿಕ್ಷಕರು ಮಾತ್ರ ಮಾಸ್ಕ್ ಧರಿಸದೆ ಬೋಧಿಸುತ್ತಿದ್ದಾರೆ.

     

    ಕಳೆದ ಒಂದು ವಾರದಿಂದ ಶಾಲೆಗಳು ಆರಂಭವಾಗಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ತರಗತಿಗಳು ನಡೆಯುತ್ತಿವೆ. ಶಾಲೆ ತೆರೆಯಲು ಅನುಮತಿ ಇಲ್ಲದಿದ್ದರೂ ಸರ್ಕಾರದ ನಿಯಮ ಗಾಳಿಗೆ ತೂರಿ ಖಾಸಗಿ ಶಾಲೆಗಳನ್ನು ತೆರೆಯಲಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಒಪ್ಪದಿದ್ದರೂ, ಒತ್ತಾಯಪೂರ್ವಕವಾಗಿ ಶಿಕ್ಷಕರು ಮಕ್ಕಳನ್ನು ಶಾಲೆಗೆ ಕರೆಸಿಕೊಂಡಿದ್ದಾರೆ. ಕೊರೊನಾ ಭಯದ ನಡುವೆಯೇ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ.

  • ಶಾಲೆ ಆರಂಭ ಮುನ್ನವೇ ಆಘಾತಕಾರಿ ಸುದ್ದಿ- 8 ಮಂದಿ ಶಾಲಾ ಶಿಕ್ಷಕರಿಗೆ ಸೋಂಕು ಪತ್ತೆ

    ಶಾಲೆ ಆರಂಭ ಮುನ್ನವೇ ಆಘಾತಕಾರಿ ಸುದ್ದಿ- 8 ಮಂದಿ ಶಾಲಾ ಶಿಕ್ಷಕರಿಗೆ ಸೋಂಕು ಪತ್ತೆ

    ಧಾರವಾಡ: ಶಾಲೆ ಆರಂಭ ಮುನ್ನವೇ ಆಘಾತಕಾರಿ ಸುದ್ದಿಯೊಂದು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. 8 ಮಂದಿ ಶಾಲಾ ಶಿಕ್ಷಕರಲ್ಲಿ ಮಹಾಮಾರಿ ಕೊರೊನಾ ಸೋಂಕು ಪತ್ತೆಯಾಗಿದೆ.

    ಧಾರವಾಡದ ಪ್ರತಿಷ್ಠಿತ ಶಾಲೆಯ ಶಿಕ್ಷಕರು ಎಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಭಾನುವಾರ ಬಂದ 10 ಜನರಲ್ಲಿ 7 ಮಂದಿ ಶಿಕ್ಷಕರಿಗೆ ಸೋಂಕು ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಧಾರವಾಡ ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ಶಿಕ್ಷಕಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಅವರ ಪತಿಯಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದೀಗ ಈ ಶಿಕ್ಷಕಿಯು ಸಂಪರ್ಕಕ್ಕೆ ಬಂದಿದ್ದ ಇನ್ನುಳಿದ ಏಳು ಜನ ಶಿಕ್ಷಕರಲ್ಲೂ ಭಾನುವಾರದಂದು ಸೋಂಕು ದೃಢಪಟ್ಟಿದೆ.

    ಸೋಂಕು ಬಂದ ಶಿಕ್ಷಕಿ ಶಾಲೆಯ ಪೂರ್ವಭಾವಿ ಸಭೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಸೋಂಕು ಬಂದಿದೆ. ಜೂನ್ 8ರಂದು ಪೂರ್ವಭಾವಿ ಸಭೆ ನಡೆದಿತ್ತು. ಸಭೆಯಲ್ಲಿ ಸೋಂಕಿತ ಶಿಕ್ಷಕಿ ಜೊತೆ ಸಂಪರ್ಕಕ್ಕೆ ಬಂದ 7 ಮಂದಿ ಶಿಕ್ಷಕರಿಗೆ ಸೋಂಕು ದೃಢವಾಗಿದೆ. ಶಾಲೆ ಆರಂಭಕ್ಕೂ ಮುನ್ನವೇ ಶಿಕ್ಷಕರಲ್ಲಿ ಕೊರೊನಾ ದೃಢಪಟ್ಟಿರುವುದು ಪೋಷಕರಲ್ಲಿ ಆಂತಕ ಮನೆ ಮಾಡಿದೆ. 24 ಮಂದಿ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿದ್ದರು. ಈಗ 24 ಜಿಲ್ಲಾಡಳಿತ ಎಲ್ಲರನ್ನು ಕ್ವಾರಂಟೈನ್ ಮಾಡಿದೆ.

    ಸೋಂಕು ಬಂದಿದ್ದು ಹೇಗೆ?
    ತೀವ್ರ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಧಾರವಾಡ ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ನಿವಾಸಿಯಾದ 31 ವರ್ಷ ಶಿಕ್ಷಕಿಯನ್ನು (ರೋಗಿ-5970) ತಪಾಸಣೆಗೆ ಒಳಪಡಿಸಿದಾಗ ಜೂನ್ 11 ರಂದು ಸೋಂಕು ಇರುವುದು ದೃಢಪಟ್ಟಿತ್ತು. ಆ ಬಳಿಕ ರೋಗಿ-5970 ಸಂಪರ್ಕದಿಂದ ಅದೇ ಕಾಲನಿಯ ನಿವಾಸಿಯಾದ 34 ವರ್ಷದ ಅವರ ಪತಿಗೂ (ರೋ-6260) ಸೋಂಕು ತಗುಲಿದ್ದು, ಅದು ಜೂ.12ಕ್ಕೆ ದೃಢಪಟ್ಟಿತ್ತು. ಇದೀಗ ರೋಗಿ-5970 ಸಂಪರ್ಕದಿಂದಲೇ ಬರೋಬ್ಬರಿ ಏಳು ಜನ ಶಿಕ್ಷಕರಿಗೆ ಸೋಂಕು ಬಂದಿದೆ.

    ಸೋಂಕಿತ ರೋಗಿ-5970 ಮಹಿಳೆಯು ಖಾಸಗಿಯ ಅನುದಾನರಹಿತ ಹೈಸ್ಕೂಲ್‍ನ ಶಿಕ್ಷಕಿಯಾಗಿದ್ದರು. ಈ ನಡುವೆ ಶಿಕ್ಷಕಿಯು ಜೂನ್ 8ರಂದು ಹೈಸ್ಕೂಲ್‍ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿದ್ದರು. ಅವರ ಸಂಪರ್ಕಕ್ಕೆ ಬಂದ ಹೈಸ್ಕೂಲ್‍ನ 20ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಿದ್ದು, ಈ ಪೈಕಿ ಭಾನುವಾರ ಏಳು ಜನ ಶಿಕ್ಷಕರಿಗೆ ಸೋಂಕು ಇರುವುದು ಖಚಿತವಾಗಿದೆ.

    ಸೋಂಕಿತರ ವಿವರ:
    54 ವರ್ಷದ ಪುರುಷ (ರೋಗಿ-6833), 30 ವರ್ಷದ ಮಹಿಳೆ (ರೋಗಿ-6834), 46 ವರ್ಷದ ಮಹಿಳೆ (ರೋಗಿ-6835), 49 ವರ್ಷದ ಮಹಿಳೆ (ರೋಗಿ-6836), 26 ವರ್ಷದ ಮಹಿಳೆ (ರೋಗಿ-6837), 39 ವರ್ಷದ ಮಹಿಳೆ (ರೋಗಿ-6841) ಮತ್ತು 35 ವರ್ಷದ ಮಹಿಳೆ (ರೋಗಿ-6842) ಇವರೆಲ್ಲರಲ್ಲಿ ಕೋವಿಡ್ 19 ಸೋಂಕಿರುವುದು ದೃಢಪಟ್ಟಿದೆ.

    ನವಲಗುಂದ ತಾಲೂಕಿನ ಮೊರಬ ಗ್ರಾಮದ ಸೋಂಕಿತ 59 ವರ್ಷದ ಪುರುಷ (ರೋಗಿ-6222) ಸಂಪರ್ಕದಿಂದ 8 ವರ್ಷದ ಬಾಲಕನಿಗೂ (ರೋಗಿ-6838) ಸೋಂಕು ಬಂದಿದೆ. ಇನ್ನುಳಿದಂತೆ ತೀವ್ರ ಉಸಿರಾಟ ಸಮಸ್ಯೆಯಿಂದ 20 ವರ್ಷದ ರೋಗಿ-6839 ಹಾಗೂ ರೋಗಿ-6840 ಯುವಕರಿಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

  • ದೆಹಲಿಯಲ್ಲಿ ಶಾಲೆ ತೆರೆಯಬೇಡಿ – ಝೀರೋ ಅಕಾಡೆಮಿಕ್ ಇಯರ್ ಘೋಷಿಸಲು ಪೋಷಕರ ಒತ್ತಾಯ

    ದೆಹಲಿಯಲ್ಲಿ ಶಾಲೆ ತೆರೆಯಬೇಡಿ – ಝೀರೋ ಅಕಾಡೆಮಿಕ್ ಇಯರ್ ಘೋಷಿಸಲು ಪೋಷಕರ ಒತ್ತಾಯ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಎದುರಿಸುತ್ತಿದೆ. ಈ ನಡುವೆ ಹೊಸ ಶೈಕ್ಷಣಿಕ ವರ್ಷದ ಆರಂಭಿಸುವ ಬಗ್ಗೆ ಚರ್ಚೆ ಶುರುವಾಗಿದ್ದು, ಈ ಬಾರಿ ಶಾಲೆಗಳನ್ನೇ ತೆರೆಯುವುದೇ ಬೇಡ ಎಂದು ಶಿಕ್ಷಕರು ಮತ್ತು ಪೋಷಕರು ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ 5.5 ಲಕ್ಷ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಲಿದೆ ಎಂದು ಡಿಸಿಎಂ ಮನಿಷ್ ಸಿಸೊಡಿಯಾ ಪ್ರತಿಕ್ರಿಯಿಸಿದ್ದು, ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂದು ಆರೋಗ್ಯ ಸಚಿವ ಸತ್ಯಂದ್ರ ಜೈನ್ ಹೇಳಿದ್ದಾರೆ. ಈ ಹಂತದಲ್ಲಿ ಶಾಲೆಗಳನ್ನು ಪುನಾರಂಭಿಸುವುದು ಸರಿಯಲ್ಲ ಎಂದು ಪೋಷಕರ ಅಭಿಪ್ರಾಯಪಟ್ಟಿದ್ದಾರೆ.

    ಶಾಲೆಗಿಂತ ಮಕ್ಕಳ ಆರೋಗ್ಯ ಮುಖ್ಯವಾಗಿದ್ದು ಈ ವರ್ಷ ಪೂರ್ತಿ ಶಾಲೆಗಳನ್ನು ತೆರೆಯುವುದು ಬೇಡ. ಈ ವರ್ಷವನ್ನು ‘ಝೀರೋ ಅಕಾಡೆಮಿಕ್ ಇಯರ್’ ಎಂದು ಘೋಷಿಸುವಂತೆ ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಇಸ್ರೇಲ್‍ನಲ್ಲಿ ಶಾಲೆಗಳನ್ನು ಆರಂಭಿಸಿದ ಕಾರಣಕ್ಕೆ ಕೊರೊನಾ ಸೋಂಕು ಮತ್ತಷ್ಟು ಹರಡಿ ಇಡೀ ದೇಶವನ್ನೇ ಕಷ್ಟಕ್ಕೆ ಸಿಲುಕಿಸಿತ್ತು. ಇಸ್ರೇಲ್ ನಲ್ಲಿ ಶಾಲೆ ತೆರೆದು ಆಗಿರುವ ಅನಾಹುತಗಳನ್ನು ಮರೆಯಬಾರದು. ಭಾರತದಲ್ಲಿ ಶಾಲೆಗಳನ್ನು ತೆರೆದರೆ ಏನಾಗಲಿದೆ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ದೆಹಲಿ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಮತ್ತು ದೆಹಲಿಯ ವಿವಿಧ ಶಾಲೆಗಳಲ್ಲಿನ ಪೋಷಕರ ಸಂಘಗಳು ಆತಂಕ ವ್ಯಕ್ತಪಡಿಸಿವೆ.

    ದೆಹಲಿಯಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಬಂದಿದೆ. ಆ ಪೈಕಿ ನಾಲ್ವರು ಶಿಕ್ಷಕರು ಕೊರೊನಾದಿಂದ ಮೃತಪಟ್ಟಿದ್ದಾರೆ. ಆದರಿಂದ ಸದ್ಯ ಶಾಲೆ ತೆರೆಯುವುದು ಒಳ್ಳೆಯದಲ್ಲ ಎನ್ನುವುದು ದೆಹಲಿ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಅಭಿಪ್ರಾಯಪಟ್ಟಿದೆ.

  • ಶಿಕ್ಷಕರ ವಿರುದ್ಧ ಸಚಿವ ಸುರೇಶ್ ಕುಮಾರ್ ಕೆಂಡಾಮಂಡಲ

    ಶಿಕ್ಷಕರ ವಿರುದ್ಧ ಸಚಿವ ಸುರೇಶ್ ಕುಮಾರ್ ಕೆಂಡಾಮಂಡಲ

    ಬಳ್ಳಾರಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಸುರೇಶ್ ಕುಮಾರ್ ಅವರು ಇಂದು ಶಿಕ್ಷಕರ ವಿರುದ್ಧ ಗರಂ ಆದ ಘಟನೆ ನಡೆದಿದೆ.

    ಬಳ್ಳಾರಿ ಜಿಲ್ಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೂರ್ವ ಸಿದ್ಧತಾ ಸಭೆಗೆ ಆಗಮಿಸಿದ ಸುರೇಶ್ ಕುಮಾರ್ ಅವರನ್ನು ಜಿಲ್ಲಾಧಿಕಾರಿ ಪುಸ್ತಕ ಕೊಟ್ಟು ಬರಮಾಡಿಕೊಂಡರು. ಬಳಿಕ ಸ್ಥಳೀಯ ಕೆಲ ಶಿಕ್ಷಕರು ಹಾರ ಹಾಕಿ ಶಾಲು ಹೊದಿಸಿ ಬರಮಾಡಿಕೊಳ್ಳಲು ಮುಂದಾದರು. ಆಗ ಇದೆಲ್ಲ ಬೇಡ ಈಗ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಎಂದು ತಿಳಿ ಹೇಳಿದರು.

    ಆದರೆ ಕೆಲ ಶಿಕ್ಷಕರು ಮತ್ತೆ ಶಾಲು ಹೊದಿಸಲು ಮುಂದಾದರು. ಆಗ ಮತ್ತೆ ಬೇಡಪ್ಪಾ ಇದೆಲ್ಲ ನನಗೆ ಇಷ್ಟ ಆಗಲ್ಲ ಎಂದು ಗದರಿದ್ರು. ಸಚಿವರ ಮಾತು ಕೇಳದ ಶಿಕ್ಷಕರು ಮಾತ್ರ ಶಾಲು ಹಾಕಲು ಮುಂದಾದರು. ಆಗ ಸಚಿವರಿಗೆ ಕೋಪ ನೆತ್ತಿಗೆ ಏರಿದ್ದು, ಒಮ್ಮೆ ಹೇಳಿದ್ರೆ ಅರ್ಥ ಮಾಡಿಕೊಳ್ಳ ಬೇಕು ನೀವು ಪಾಠ ಮಾಡುವ ಶಿಕ್ಷಕರು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಿಗೆ ತಿಳಿ ಹೇಳಬೇಕು. ಆದರೆ ನೀವೂ ಹೀಗೆ ಮಾಡಿದ್ರೆ ಹೇಗೆ. ಒಮ್ಮೆ ಹೇಳಿದರೆ ಅರ್ಥ ಆಗಬೇಕು. ನನಗೆ ಇದೆಲ್ಲ ಇಷ್ಟ ಆಗಲ್ಲ ಎಂದು ಗದರಿ ಸಭೆಗೆ ತೆರಳಿದರು.

  • ನೀವಿರುವ ಊರಿನ ಶಾಲೆಗಳಲ್ಲೇ ಕೆಲಸ ಮಾಡಿ: ಶಿಕ್ಷಕರಿಗೆ ಸಚಿವ ಸುರೇಶ್ ಕುಮಾರ್ ಸೂಚನೆ

    ನೀವಿರುವ ಊರಿನ ಶಾಲೆಗಳಲ್ಲೇ ಕೆಲಸ ಮಾಡಿ: ಶಿಕ್ಷಕರಿಗೆ ಸಚಿವ ಸುರೇಶ್ ಕುಮಾರ್ ಸೂಚನೆ

    ಬೆಂಗಳೂರು: ಅನ್ಯ ಶಾಲೆಗಳಲ್ಲಿ ಕೆಲಸ ನಿರ್ವಹಿಸಿಸುತ್ತಿರುವ ಶಿಕ್ಷಕರು ತಾವು ಇರುವ ಸ್ಥಳದಲ್ಲಿ ಕೆಲಸ ನಿರ್ವಹಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

    ಈ ಕುರಿತು ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದು, ಬೇರೆ ಬೇರೆ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ತಾವಿರುವ ಊರು ಅಥವಾ ನಗರದ ಶಾಲೆಗಳಲ್ಲೇ ಕಾರ್ಯನಿರ್ವಹಿಸಬೇಕು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಸದ್ಯ ಇರುವ ಸ್ಥಳದಲ್ಲಿ ಕೆಲಸ ಮುಂದುವರೆಸುವಂತೆ ತಿಳಿಸಿದ್ದಾರೆ. ಸರ್ಕಾರದ ಅನುಮತಿ ಮೇರೆಗೆ ಸುರೇಶ್ ಕುಮಾರ್ ಅವರು ಈ ಆದೇಶ ಹೊರಡಿಸಿದ್ದು, ಶಿಕ್ಷಕರು ತಾವಿರುವ ಸ್ಥಳದಲ್ಲೇ ಕಾರ್ಯನಿರ್ವಹಿಸಬಹುದಾಗಿದೆ.

    ಇದೆಲ್ಲದರ ಮಧ್ಯೆ ಈ ಬಾರಿ ಶುಲ್ಕ ಹೆಚ್ಚಳ ಮಾಡದಂತೆ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಲಾಗಿದ್ದು, ಕೊರೊನಾ ಹಿನ್ನೆಲೆ ಯಾವುದೇ ಖಾಸಗಿ ಶಾಲೆ ಶುಲ್ಕವನ್ನು ಹೆಚ್ಚಳ ಮಾಡಕೂಡದು ಎಂದು ಸುರೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ.

    ಕ್ಷೌರಿಕ ಹಾಗೂ ದಂತ ವೈದ್ಯಕೀಯ ಚಿಕಿತ್ಸೆಯನ್ನು ಸಹ ಪುನರಾರಂಭಿಸಲು ಅನುಮತಿ ನೀಡಬೇಕೆಂದು ಮುಖ್ಯಮಂತ್ರಿಗಳಿವೆ ಸಚಿವ ಸುರೇಶ್ ಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕ್ಷೌರಿಕ ವೃತ್ತಿ(ಸವಿತಾ ಸಮಾಜ)ಯವರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ದಂತ ವೈದ್ಯಕೀಯ ಚಿಕಿತ್ಸೆಯೂ ಅವಶ್ಯಕವಾಗಿದೆ. ಈ ಎರಡು ವಲಯಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಪ್ರಾರಂಭ ಮಾಡಲು ಅವಕಾಶ ಕೊಡಬೇಕು ಎಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

  • ಬಿಡುವಿದ್ದಾಗ ಮಾಸ್ಕ್ ತಯಾರಿಸಿ ಗ್ರಾಮೀಣ ಜನರಿಗೆ ವಿತರಿಸ್ತಿದ್ದಾರೆ ಅಂಗನವಾಡಿ ಶಿಕ್ಷಕಿಯರು

    ಬಿಡುವಿದ್ದಾಗ ಮಾಸ್ಕ್ ತಯಾರಿಸಿ ಗ್ರಾಮೀಣ ಜನರಿಗೆ ವಿತರಿಸ್ತಿದ್ದಾರೆ ಅಂಗನವಾಡಿ ಶಿಕ್ಷಕಿಯರು

    – ಕೊರೊನಾ ಕೆಲಸದ ಮಧ್ಯೆಯೂ ಜನರಿಗೆ ಸಹಾಯ
    – ಬಿಡುವಿದ್ದಾಗಲೆಲ್ಲ ಮಾಸ್ಕ್ ಹೊಲಿಯುವ ಶಿಕ್ಷಕಿಯರು

    ಮಡಿಕೇರಿ: ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದರ ಭಾಗವಾಗಿ ಆಶಾ ಕಾರ್ಯಕರ್ತೆಯರು ಸಹ ಟೆಸ್ಟಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಇಲ್ಲೊಂದಿಷ್ಟು ಅಂಗನವಾಡಿ ಕಾರ್ಯಕರ್ತರು ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ.

    ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಬಾಡಗ ಗ್ರಾಮದ ಅಂಗನವಾಡಿ ಶಿಕ್ಷಕಿ ಜಯಂತಿ ಸೇರಿದಂತೆ ನಾಲ್ಕೈದು ಅಂಗನವಾಡಿಗಳ ಶಿಕ್ಷಕಿಯರು ಕೊರೊನಾ ನಿಯಂತ್ರಣಕ್ಕೆ ಸಹಾಯ ಮಾಡುತ್ತಿದ್ದು, ಮಾಸ್ಕ್ ಹೊಲೆದು ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಮಾಸ್ಕ್ ಹೊಲೆಯುವ ಕಾರ್ಯ ಮಾಡುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ಕೊರೊನಾ ಹರಡಬಾರದು ಎಂಬ ಉದ್ದೇಶದಿಂದ ಉಚಿತವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚು ಮಾಸ್ಕ್ ಗಳನ್ನು ಹೊಲೆದು ಬಡ ಜನರಿಗೆ ನೀಡಿದ್ದಾರೆ.

    ಈ ಶಿಕ್ಷಕಿಯರು ಕೂಡ ಸರ್ಕಾರ ವಹಿಸಿದ ಕೊರೊನಾ ಸಂಬಂಧಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನದವರೆಗೆ ಕೆಲಸ ಮಾಡಿ ಬಿಡುವಿನ ವೇಳೆಯಲ್ಲಿ ಮಾಸ್ಕ್ ಹೊಲಿಯುತ್ತಿದ್ದಾರೆ. ಕೊರೊನಾ ಕೆಲಸಕ್ಕೆ ತೆರಳಿದಾಗ ಯಾವ ಗ್ರಾಮಗಳಲ್ಲಿ ಬಡ ಜನರು ಮಾಸ್ಕ್ ಧರಿಸಿರುವುದಿಲ್ಲವೋ ಅವರನ್ನು ಗಮನಿಸಿ ಅಂತಹವರಿಗೆ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

    ಗ್ರಾಮೀಣ ಭಾಗದ ಜನರಿಗೆ ಹಣ ನೀಡಿ ಮಾಸ್ಕ್ ಕೊಂಡು ಧರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಮಾಸ್ಕ್ ಧರಿಸದೆಯೇ ಓಡಾಡುತ್ತಿದ್ದಾರೆ. ಇಂತಹವರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದೇವೆ. ಜೊತೆಗೆ ಕೊರೊನಾ ಕುರಿತು ಜನರಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಶಿಕ್ಷಿಯೊಬ್ಬರು ತಿಳಿಸಿದ್ದಾರೆ. ಸಾಕಷ್ಟು ಸಂಘ ಸಂಸ್ಥೆಗಳು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿವೆ. ಈ ಶಿಕ್ಷಕಿಯರು ಸಹ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

  • ಬಲವಂತವಾಗಿ ಪೋಷಕರಿಂದ ಶುಲ್ಕ ವಸೂಲು ಮಾಡುವಂತಿಲ್ಲ – ಖಾಸಗಿ ಶಾಲೆಗಳಿಗೆ ಖಡಕ್ ಸೂಚನೆ

    ಬಲವಂತವಾಗಿ ಪೋಷಕರಿಂದ ಶುಲ್ಕ ವಸೂಲು ಮಾಡುವಂತಿಲ್ಲ – ಖಾಸಗಿ ಶಾಲೆಗಳಿಗೆ ಖಡಕ್ ಸೂಚನೆ

    ಬೆಂಗಳೂರು: ಆರ್ಥಿಕವಾಗಿ ಸಮರ್ಥರಿರುವ ಪೋಷಕರು ಸ್ವಯಂಪ್ರೇರಿತವಾಗಿ ತಮ್ಮ ಮಕ್ಕಳ ಶಾಲಾ ಶುಲ್ಕ ಕಟ್ಟಿಲು ಮುಂದಾದರೆ, ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ನಿರ್ದೇಶನವನ್ನು ಹೊರಡಿಸುವಂತೆ ಸಚಿವ ಸುರೇಶ್ ಕುಮಾರ್ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

    ಕೋವಿಡ್-19 ಲಾಕ್‍ಡೌನ್ ಅವಧಿಯ ಅನಿಶ್ಚಿತತೆಯು ಅನಿರ್ದಿಷ್ಟಾವಧಿಯವರೆಗೆ ಮುಂದುವರೆಯುತ್ತಿರುವುದರಿಂದ ತಮ್ಮ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಕೂಡಾ ತೊಂದರೆಯುಂಟಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಅನುಕೂಲ ಮಾಡಿಕೊಡುವಂತೆ ಹಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಸಂಘಟನೆಗಳು ಶಿಕ್ಷಣ ಇಲಾಖೆಗೆ ಮನವಿಗಳನ್ನು ಸಲ್ಲಿಸಿದ್ದವು.

    ಈ ಹಿನ್ನೆಲೆಯಲ್ಲಿ ಯಾವ ಪೋಷಕರು ತಮ್ಮ ಮಕ್ಕಳ ಬೋಧನಾ ಶುಲ್ಕವನ್ನು ಕಟ್ಟಲು ಆರ್ಥಿಕವಾಗಿ ಸಮರ್ಥರಿದ್ದಾರೋ, ಯಾವ ಪೋಷಕರು ಸ್ವಯಂಪ್ರೇರಿತರಾಗಿ ಶುಲ್ಕ ಪಾವತಿಗೆ ಮುಂದಾಗುತ್ತಾರೋ ಅಂತಹ ಪೋಷಕರಿಂದ ಅವರು ಇಚ್ಛಿಸುವ ಸಂಖ್ಯೆಯ ಕಂತುಗಳಲ್ಲಿ ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಶಿಕ್ಷಣ ಕಾಯ್ದೆಯ ಅವಕಾಶಗಳ ಅಡಿಯಲ್ಲಿ ಈ ನಿರ್ದೇಶನವನ್ನು ಹೊರಡಿಸುವಂತೆ ಸಚಿವರು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

    ಯಾವ ಪೋಷಕರು ತಮ್ಮ ಮಕ್ಕಳ ಶುಲ್ಕವನ್ನು ಕಟ್ಟಲು ಅಸಹಾಯಕರೋ, ಸದ್ಯಕ್ಕೆ ತಮಗೆ ಸಾಧ್ಯವಿಲ್ಲವೆಂದು ನಿರಾಕರಿಸುತ್ತಾರೋ ಅಂತಹವರಿಂದ ಯಾವುದೇ ಕಾರಣಕ್ಕೂ ಶುಲ್ಕ ವಸೂಲು ಮಾಡುವ ಹಾಗಿಲ್ಲ. ಒಂದು ವೇಳೆ ಶುಲ್ಕ ಕಟ್ಟಲು ಸಾಧ್ಯವಾಗದ ಪೋಷಕರ ಮೇಲೆ ಒತ್ತಡ ಹೇರುವುದರ ಕುರಿತು ದೂರುಗಳು ಬಂದಲ್ಲಿ ಅಂತಹ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತೆ. ಪೋಷಕರು ನೀಡುವ ಹಣವನ್ನು ಈ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಬಳಸಿಕೊಳ್ಳಲು ಪ್ರಥಮ ಆದ್ಯತೆಯನ್ನು ನೀಡಬೇಕು. ಅಲ್ಲದೇ ಈ ಅಂಶವನ್ನು ಶಿಕ್ಷಣ ಇಲಾಖೆಯ ನಿರ್ದೇಶನದಲ್ಲಿ ಸ್ಪಷ್ಟಪಡಿಸಬೇಕೆಂಬ ಸೂಚನೆಯನ್ನು ಸಹ ಸುರೇಶ್ ಕುಮಾರ್ ನೀಡಿದ್ದಾರೆ.