Tag: teacher

  • ಫ್ಲೋರಿಡಾ ಶಾಲೆಯಲ್ಲಿ ಗುಂಡಿನ ದಾಳಿ ಪ್ರಕರಣ- ಸಮಯಪ್ರಜ್ಞೆ ತೋರಿ ವಿದ್ಯಾರ್ಥಿಗಳ ಜೀವ ಉಳಿಸಿದ್ರು ಭಾರತೀಯ ಮೂಲದ ಶಿಕ್ಷಕಿ

    ಫ್ಲೋರಿಡಾ ಶಾಲೆಯಲ್ಲಿ ಗುಂಡಿನ ದಾಳಿ ಪ್ರಕರಣ- ಸಮಯಪ್ರಜ್ಞೆ ತೋರಿ ವಿದ್ಯಾರ್ಥಿಗಳ ಜೀವ ಉಳಿಸಿದ್ರು ಭಾರತೀಯ ಮೂಲದ ಶಿಕ್ಷಕಿ

    ವಾಷಿಂಗ್ಟನ್: ಕೆಲ ದಿನಗಳ ಹಿಂದೆ ಫ್ಲೋರಿಡಾದ ಶಾಲೆಯೊಂದರಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿ ವೇಳೆ ಶಾಲೆಯ ಗಣಿತ ಶಿಕ್ಷಕಿ ಸಮಯಪ್ರಜ್ಞೆ ಪ್ರದರ್ಶಿಸಿ ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಡೆದ ಘಟನೆ ವರದಿಯಾಗಿದೆ.

    ಶಾಲೆಯ ಗಣಿತ ಶಿಕ್ಷಕಿ ಭಾರತ ಮೂಲದ ಶಾಂತಿ ವಿಶ್ವನಾಥನ್ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಅವರನ್ನು ಶಾಲೆಯಲ್ಲಿ `ವಿ’ ಎಂದು ಕರೆಯಲಾಗುತ್ತಿತ್ತು ಎಂದು ತಿಳಿಸಿವೆ.

    ಅಂದು ಎಆರ್-15 ರೈಫಲ್ ನೊಂದಿಗೆ ಶಾಲೆ ಒಳಪ್ರವೇಶಿಸಿದ್ದ ಆರೋಪಿ ಕ್ಯಾಂಪಸ್‍ನಲ್ಲಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದ. ಈ ವೇಳೆ ಶಾಲೆಯ ಎಚ್ಚರಿಕೆ ಗಂಟೆ ಮೊಳಗುತ್ತಿದಂತೆ ಎಚ್ಚೆತ ಶಾಂತಿ ಅವರು ವಿದ್ಯಾರ್ಥಿಗಳನ್ನು ಕೊಠಡಿಯ ನೆಲದ ಮೇಲೆ ಮಲಗಲು ಸೂಚಿಸಿದ್ದರು. ಅಲ್ಲದೇ ಕೊಠಡಿಯ ಎಲ್ಲಾ ಕಿಟಕಿ, ಬಾಗಿಲು ಮುಚ್ಚಿ ಯಾರೂ ತರಗತಿಯ ಒಳಪ್ರವೇಶ ಮಾಡದಂತೆ ಮಾಡಿದ್ದರು. ಇದರಿಂದ ಆರೋಪಿಗೆ ತರಗತಿಯಲ್ಲಿ ವಿದ್ಯಾರ್ಥಿಗಳು ಇರುವ ಸಂಗತಿ ತಿಳಿಯದಂತೆ ಮಾಡಿದ್ದರು ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಿಲಾಗಿದೆ.

    ಈ ನಡುವೆ ಪೊಲೀಸ್ ತಂಡ ಬಂದು ತರಗತಿಯ ಬಾಗಿಲು ತೆರೆಯುವಂತೆ ಬಾಗಿಲು ಬಡಿದರೂ ಶಾಂತಿ ಅವರು ಬಾಗಿಲು ತೆರೆಯಲು ನಿರಾಕರಿಸಿದ್ದರು. ಆರೋಪಿಯೇ ಪೊಲೀಸರಂತೆ ನಟಿಸುತ್ತಿರಬಹುದು ಎಂದು ಹೆದರಿ, ಬಾಗಿಲು ಒಡೆಯಿರಿ ಅಥವಾ ಕೀ ಬಳಸಿ ಒಳಗೆ ಬನ್ನಿ. ಯಾವುದೇ ಕಾರಣಕ್ಕೂ ನಾನು ಬಾಗಿಲು ತೆರೆಯುವುದಿಲ್ಲ ಎಂದು ಶಿಕ್ಷಕಿ ಹೇಳಿದ್ದರು. ನಂತರ ಪೊಲೀಸ್ ತಂಡದಲ್ಲಿದ್ದವರೊಬ್ಬರು ಕಿಟಕಿ ಮುಖಾಂತರ ವಿದ್ಯಾರ್ಥಿಗಳನ್ನ ಹೊರಗೆ ಕರೆತಂದರು ಎಂದು ವಿದ್ಯಾಥಿಯೊಬ್ಬರು ಇಲ್ಲಿನ ಪತ್ರಿಕೆಗೆ ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲಾ ವಿದ್ಯಾರ್ಥಿಗಳ ಪೋಷಕರು ಶಿಕ್ಷಕಿಯ ಧೈರ್ಯ ಹಾಗೂ ಬುದ್ಧಿವಂತಿಕೆಗೆ ಮೆಚ್ಚುಗೆ ಸೂಚಿಸಿದ್ದು, ಅವರು ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಏನಿದು ಘಟನೆ: ಫ್ಲೋರಿಡಾದ ಪಾರ್ಕ್‍ಲ್ಯಾಂಡ್ ನಲ್ಲಿರುವ ಮಜಾರ್‍ಒರಿ ಸ್ಟೋನ್‍ಮ್ಯಾನ್ ಡೌಗ್ಲಾಸ್ ಹೈಸ್ಕೂಲ್‍ನ ಶಾಲೆಯ ಮಾಜಿ ವಿದ್ಯಾರ್ಥಿ ನಿಕೊಲಾಸ್ ಕ್ರೂಸ್(19) ಶಾಲೆಯ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿ 17 ವಿದ್ಯಾರ್ಥಿಗಳ ಸಾವಿಗೆ ಕಾರಣನಾಗಿದ್ದ. ಗುಂಡಿನ ದಾಳಿ ನಡೆದ ಕೆಲವು ಗಂಟೆಗಳಲ್ಲಿ ಆರೋಪಿ ನಿಕೊಲಾಸ್ ನನ್ನು ಪೊಲೀಸರು ಬಂಧಿಸಿದ್ದರು. ಈತನನ್ನು ಅಶಿಸ್ತಿನ ಕಾರಣ ಶಾಲೆಯಿಂದ ಹೊರಹಾಕಲಾಗಿತ್ತು. ನಿಕೊಲಾಸ್ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ವರದಿಯಾಗಿದೆ.

  • ಕಾಲೇಜಿನ ಸ್ಟಾಫ್ ರೂಮಿನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಲಾಕ್ ಮಾಡಿಕೊಂಡು ಅತ್ಯಾಚಾರವೆಸಗಿದ ಶಿಕ್ಷಕ

    ಕಾಲೇಜಿನ ಸ್ಟಾಫ್ ರೂಮಿನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಲಾಕ್ ಮಾಡಿಕೊಂಡು ಅತ್ಯಾಚಾರವೆಸಗಿದ ಶಿಕ್ಷಕ

    ಶಿಮ್ಲಾ: ಕಾಲೇಜಿನ ಸ್ಟಾಫ್ ರೂಮಿನಲ್ಲಿ ಹಿರಿಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಹಮಿರ್ಪುರ್ ನಲ್ಲಿ ನಡೆದಿದೆ.

    ಹಮಿರ್ಪುರದ ಸ್ಥಳೀಯ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ಗುರುವಾರದಂದು ಈ ಬಗ್ಗೆ ಹೇಳಿಕೊಂಡ ನಂತರ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಕೆಮಿಸ್ಟ್ರಿ ಶಿಕ್ಷಕನಾಗಿದ್ದು, ಸಂತ್ರಸ್ತೆಯನ್ನು ಸ್ಟಾಫ್ ರೂಮಿಗೆ ಕರೆದು ನಂತರ ರೂಂ ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

    ಈ ಘಟನೆಯ ಬಳಿಕ ನೂರಾರು ವಿದ್ಯಾರ್ಥಿಗಳು ತಮ್ಮ ತರಗತಿಗಳನ್ನು ಬಿಟ್ಟು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದ್ದು, ನಗರದಲ್ಲಿ ಕಾನೂನು- ಸುವ್ಯವಸ್ಥೆ ಕ್ಷೀಣಿಸುತ್ತಿದೆ. ಹೆಣ್ಣುಮಕ್ಕಳಿಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

    ಆರೋಪಿ ಶಿಕ್ಷಕನನ್ನು ಈಗ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತೆ ಅಪ್ರಾಪ್ತೆಯಾಗಿರುವುದರಿಂದ ಆರೋಪಿ ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮತ್ತು ಸಂಬಂಧಿತ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ರಮಣ್ ಕುಮಾರ್ ಮೀನಾ ತಿಳಿಸಿದ್ದಾರೆ.

    ಸಂತ್ರಸ್ತೆಯ ಹೇಳಿಕೆಯನ್ನು ರೆಕಾರ್ಡ್ ಮಾಡಲಾಗುತ್ತದೆ ಹಾಗೂ ಒಂದು ತಿಂಗಳೊಳಗೆ ಕೋರ್ಟ್ ಗೆ ಚಾರ್ಜ್‍ಶೀಟ್ ಸಲ್ಲಿಸಲಾಗುತ್ತದೆ ಎಂದು ಮೀನಾ ಅವರು ಹೇಳಿದ್ದಾರೆ.

  • 13ರ ಬಾಲಕಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ- ಇಂದು ಕಿಸ್ ಡೇ ಎಂದು ಹೇಳಿ ಸ್ಟಾಫ್ ರೂಮ್ ಬಾಗಿಲು ಹಾಕ್ದ ಕಾಮುಕ

    13ರ ಬಾಲಕಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ- ಇಂದು ಕಿಸ್ ಡೇ ಎಂದು ಹೇಳಿ ಸ್ಟಾಫ್ ರೂಮ್ ಬಾಗಿಲು ಹಾಕ್ದ ಕಾಮುಕ

    ಗಾಂಧಿನಗರ: ಶಿಕ್ಷಕನೊಬ್ಬ ನೋಟ್ಸ್ ಚೆಕ್ ಮಾಡುವುದಾಗಿ ಹೇಳಿ ಸ್ಟಾಫ್ ರೂಮಿನಲ್ಲೇ 6ನೇ ಕ್ಲಾಸ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರೋ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಇಲ್ಲಿನ ವಲ್ಸದ್ ಜಿಲ್ಲೆಯ ಗಾಂಧಿವಾಡಿಯ ಸರಸ್ವತಿ ಹಿಂದಿ ಹೈಸ್ಕೂಲ್‍ನಲ್ಲಿ ಸೋಮವಾರದಂದು ಶಿಕ್ಷಕ ಈ ಕೃತ್ಯವೆಸಗಿದ್ದಾನೆ. ಇವತ್ತು ಕಿಸ್ ಡೇ ಎಂದು ಹೇಳಿ ಬಾಲಕಿಗೆ ಶಿಕ್ಷಕ ಚುಂಬಿಸಿದ್ದಾನೆ. ಈ ಬಗ್ಗೆ ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ ಬಳಿಕ ಶಿಕ್ಷಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಘಟನೆ ನಡೆದಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.

    ಬಾಲಕಿಯ ಪೋಷಕರು ಉಮರ್‍ಗಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 6ನೇ ಕ್ಲಾಸ್‍ನಲ್ಲಿ ಓದುತ್ತಿದ್ದ 13 ವರ್ಷದ ಬಾಲಕಿಯನ್ನ ವಿಜ್ಞಾನ ವಿಭಾಗದ ಶಿಕ್ಷಕ ಓಂ ಪ್ರಕಾಶ್ ಯಾದವ್ ಸೋಮವಾರ ಮಧ್ಯಾಹ್ನ 2.30ರ ವೇಳೆಯಲ್ಲಿ ಸ್ಟಾಫ್ ರೂಮಿಗೆ ಕರೆಸಿದ್ದ. ಕ್ಲಾಸ್ ನೋಟ್ಸ್‍ಗಳನ್ನ ಚೆಕ್ ಮಾಡ್ತೀನಿ, ಎಲ್ಲರೂ ನೋಟ್ ಪುಸ್ತಕಗಳನ್ನ ಕಳಿಸಬೇಕೆಂದು ಹೇಳುವಂತೆ ಮತ್ತೊಬ್ಬ ವಿದ್ಯಾರ್ಥಿಯನ್ನ ಕಳಿಸಿದ್ದ.

    ಬಾಲಕಿ ಎಲ್ಲರ ಪುಸ್ತಕಗಳನ್ನ ಸಂಗ್ರಹಿಸಿ ಸ್ಟಾಫ್ ರೂಮಿಗೆ ಹೋಗಿದ್ದಳು. ಈ ವೇಳೆ ಶಿಕ್ಷಕ ಓಂ ಪ್ರಕಾಶ್ ಎಲ್ಲಾ ಪುಸ್ತಕಗಳನ್ನ ನೋಡಲು ಸಾಧ್ಯವಿಲ್ಲ ಎಂದು ಹೇಳಿ ಬಾಗಿಲು ಹಾಕಿದ್ದ. ನಂತರ ಇಂದು ಕಿಸ್ ಡೇ ಎಂದು ಹೇಳಿ ಬಾಲಕಿಗೆ ಕಿಸ್ ಮಾಡಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಾಲಕಿ ಮನೆಗೆ ಬಂದ ಬಳಿಕ ಪೋಷಕರಿಗೆ ವಿಷಯ ತಿಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಹಲವಾರು ಪೋಷಕರು ಶಾಲೆಗೆ ಹೋಗಿ ಪ್ರಿನ್ಸಿಪಾಲ್‍ಗೆ ಈ ಬಗ್ಗೆ ತಿಳಿಸಿದ್ದಾರೆ. ನಂತರ ಕಾಮುಕ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿ ಸಾವು!

    ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿ ಸಾವು!

    ಚಿಕ್ಕಮಗಳೂರು: ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಚಿಕ್ಕಮಗಳೂರಿನ ಸಂಜೀವಿನಿ ಶಾಲೆಯಲ್ಲಿ ನಡೆದಿದೆ.

    ನವ್ಯಶ್ರೀ (28) ಸಾವನ್ನಪ್ಪಿದ್ದ ಶಿಕ್ಷಕಿ. ಮೂಲತಃ ಚಿಕ್ಕಮಗಳೂರಿನ ಹಿರೇಮಗಳೂರು ನಿವಾಸಿಯಾಗಿದ್ದಾರೆ. ಮದುವೆಯಾಗಿ 5 ವರ್ಷವಾಗಿರೋ ನವ್ಯಶ್ರೀಗೆ 10 ತಿಂಗಳ ಮಗು ಕೂಡ ಇದೆ. ಎಂದಿನಂತೆ ನವ್ಯ ಚಿಕ್ಕಮಗಳೂರು ನಗರದಲ್ಲಿರುವ ಸಾಲುಮರದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾಪಸ್ ಬಂದಿದ್ದಾರೆ. ದೇವರಿಗೆ ಪೂಜೆ ಸಲ್ಲಿಸಿದ್ದ ತೆಂಗಿನ ಕಾಯಿಯ ಚೂರನ್ನು ತಿಂದಿದ್ದಾರೆ. ನಂತರ ಅದೇನಾಯ್ತೋ ಏನೋ ಗೊತ್ತಿಲ್ಲ. ಅವರ ಅನ್ನನಾಳಕ್ಕೆ ಕಾಯಿಯ ಚೂರು ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

    ನಗರದಲ್ಲಿರೋ ಸಂಜೀವಿನಿ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿರೋ ನವ್ಯಶ್ರೀಗೆ ದೇವರು ಎಂದರೆ ಅಪಾರ ಪ್ರೀತಿ-ಗೌರವ. ಶನಿವಾರ ಬೆಳಗ್ಗೆ ಶನಿ ದೇವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಶಾಲೆಗೆ ಬಂದಿದ್ದರು. ಒಂದು ಪಿರಿಯಡ್ ಫ್ರೀ ಇದ್ದ ಕಾರಣ ಶಾಲೆಯ ಪಕ್ಕದಲ್ಲಿರೋ ಸಾಲುಮರದಮ್ಮ ದೇವಸ್ಥಾನಕ್ಕೆ ಸಹಶಿಕ್ಷಕಿಯರ ಜೊತೆ ಹೋಗಿ ಬಂದಿದ್ದಾರೆ. ದೇವಸ್ಥಾನದಿಂದ ಬಂದು ಪೂಜೆ ಮಾಡಿಸಿದ್ದ ತೆಂಗಿನಕಾಯಿ ಚೂರನ್ನ ಎಲ್ಲರಿಗೂ ಹಂಚಿ ತಾನು ಸೇವಿಸಿದ್ದಾರೆ. ಇದನ್ನೂ ಓದಿ: ಇದು ನಿಜಕ್ಕೂ ಆತಂಕ..ಅಚ್ಚರಿ ನ್ಯೂಸ್- ಸೇಬು ತಿಂದ 11 ವರ್ಷದ ಬಾಲಕ ಸಾವು

    ತೆಂಗಿನಕಾಯಿಯ ಚೂರು ತಿನ್ನುತ್ತಿದ್ದಂತೆ ಅದೇನಾಯ್ತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಎದೆನೋವೆಂದು ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲೇ ಇದ್ದ ಶಿಕ್ಷಕರು ಅವರಿಗೆ ನೀರು ಕುಡಿಸಿ, ಎದೆ ಹೊತ್ತುತ್ತಿದಂತೆ ನವ್ಯಶ್ರೀಗೆ ಅನ್ನನಾಳದಲ್ಲಿ ಸಿಲುಕಿದ್ದ ತೆಂಗಿನಕಾಯಿ ಚೂರು ಬಾಯಿಂದ ಹೊರಬಂದಿದೆ. ಆದರೆ ಉಸಿರಿನ ತೊಂದರೆಯಿಂದ ತೀವ್ರವಾಗಿ ಬಳಲುತ್ತಿದ್ದ ನವ್ಯಶ್ರೀಯನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನವ್ಯಶ್ರೀ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು

    ಒಟ್ಟಿನಲ್ಲಿ ತೆಂಗಿನಕಾಯಿ ಚೂರಿನಿಂದ ನವ್ಯಶ್ರೀ ಪ್ರಾಣ ಕಳೆದುಕೊಂಡಿರುವುದು ಮಾತ್ರ ದುರಂತ. ಇದೀಗ ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಪುಟ್ಟ ಮಗುವನ್ನ ಬಿಟ್ಟು ಅಗಲಿದ ತಾಯಿಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • 1ನೇ ಕ್ಲಾಸ್ ವಿದ್ಯಾರ್ಥಿಗೆ ಮೂತ್ರ ಮಿಕ್ಸ್ ಮಾಡಿದ ಜ್ಯೂಸ್ ಕುಡಿಯುವ ಶಿಕ್ಷೆ ನೀಡಿದ ಶಿಕ್ಷಕ

    1ನೇ ಕ್ಲಾಸ್ ವಿದ್ಯಾರ್ಥಿಗೆ ಮೂತ್ರ ಮಿಕ್ಸ್ ಮಾಡಿದ ಜ್ಯೂಸ್ ಕುಡಿಯುವ ಶಿಕ್ಷೆ ನೀಡಿದ ಶಿಕ್ಷಕ

    ಹೈದರಾಬಾದ್: ಒಂದನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಮೂತ್ರ ಮಿಶ್ರಿತ ಜ್ಯೂಸ್ ಕುಡಿಯುವಂತೆ ಅಮಾನವೀಯ ಶಿಕ್ಷೆ ನೀಡಿರುವ ಘಟನೆ ಆಂಧ್ರ ಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ವಿದ್ಯಾರ್ಥಿಗೆ ಅಮಾನವೀಯ ಶಿಕ್ಷೆ ನೀಡಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‍ಪಿಆರ್ ವಿದ್ಯಾ ಕಾನ್ಸಪ್ಟ್ ಶಾಲೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಶಾಲೆಯ ದೈಹಿಕ ಶಿಕ್ಷಕ ವಿಜಯ್ ಕುಮಾರ್ ಬಂಧಿತ ಶಿಕ್ಷಕ.

    ಶಾಲೆಯಲ್ಲಿ ನಡೆದಿದ್ದೇನು?: ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬ ತಮಾಷೆಗಾಗಿ ತನ್ನ ಸಹಪಾಠಿಯ ಹಣ್ಣಿನ ಜ್ಯೂಸ್‍ನಲ್ಲಿ ಮೂತ್ರವನ್ನು ಬೆರೆಸಿದ್ದಾನೆ. ತನ್ನ ಸಹಪಾಠಿ ಜ್ಯೂಸ್ ಕುಡಿಯುವಾಗ ಅದರಲ್ಲಿ ಮೂತ್ರ ಮಿಕ್ಸ್ ಆಗಿದೆ ಕುಡಿಯಬೇಡ ಅಂತಾ ಹೇಳಿದ್ದಾನೆ. ಕೂಡಲೇ ಜ್ಯೂಸ್ ತಂದಿದ್ದ ವಿದ್ಯಾರ್ಥಿನಿ ದೈಹಿಕ ಶಿಕ್ಷಕ ವಿಜಯ್ ಕುಮಾರ್‍ಗೆ ದೂರು ನೀಡಿದ್ದಾಳೆ.

    ವಿಷಯ ತಿಳಿದ ವಿಜಯ್ ಕುಮಾರ್ ಮೂತ್ರ ಮಿಕ್ಸ್ ಆಗಿದ್ದ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ್ದಾರೆ. ವಿಷಯ ತಿಳಿದು ಶಾಲೆಗೆ ಬಂದ ಪೋಷಕರ ಮುಂದೆಯೂ ವಿಜಯ್ ಕುಮಾರ್ ತಾನು ನೀಡಿರುವ ಶಿಕ್ಷೆಯನ್ನು ಸಮರ್ಥಿಸಿಕೊಂಡಿದ್ದಾನೆ. ವಿಜಯ್ ಕುಮಾರ್ ವಿರುದ್ಧ ದೂರು ದಾಖಲಾದ ಬಳಿಕ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ.

    ಶಿಕ್ಷಕನನ್ನು ವಿಚಾರಣೆ ನಡೆಸಿದ ಬಳಿಕ ಐಪಿಸಿ ಸೆಕ್ಷನ್ 270 (ಜೀವಕ್ಕೆ ಅಪಾಯವಾಗುವಂತಹ ಹಾನಿಕಾರಕ ಕ್ರಿಯೆಗೆ ಪ್ರಚೋದನೆ) ಮತ್ತು ಸೆಕ್ಷನ್ 75 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಪಿ.ಎ.ಸೂರ್ಯನಾರಾಯಣ ರೆಡ್ಡಿ ಹೇಳಿದ್ದಾರೆ.

  • ಆಂಧ್ರದ ಗಡಿಭಾಗದಲ್ಲಿ ಆಳಿವಿನಂಚಿನಲ್ಲಿದ್ದ ಶಾಲೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಶಿಕ್ಷಕ

    ಆಂಧ್ರದ ಗಡಿಭಾಗದಲ್ಲಿ ಆಳಿವಿನಂಚಿನಲ್ಲಿದ್ದ ಶಾಲೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಶಿಕ್ಷಕ

    ಚಿಕ್ಕಬಳ್ಳಾಪುರ: ನಾನಾ ಕಾರಣಗಳನ್ನು ನೀಡಿ ಸ್ವತಃ ಸರ್ಕಾರವೇ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಾ ಸಾಗುತ್ತಿದೆ. ಆದರೆ ಆಂಧ್ರದ ಗಡಿಭಾಗದಲ್ಲಿ ತೆಲುಗು ಭಾಷೆಯ ಪ್ರಭಾವದಿಂದ ಮುಚ್ಚಿಹೋಗಬೇಕಿದ್ದ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ತಲೆ ಎತ್ತಿ ನಿಂತಿದೆ.

    ಸಹೃದಯಿ ದಾನಿಗಳ ಸಹಕಾರ, ಸ್ನೇಹಿತರ ಸಾಥ್ ನಿಂದ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆಯವಂತೆ ಮಾಡಿದ್ದಾರೆ ಈ ಶಾಲೆಯ ಶಿಕ್ಷಕ. ಇಡೀ ಗ್ರಾಮದಲ್ಲಿ ಕನ್ನಡದ ಕಂಪು ಸೂಸುವ ಮೂಲಕ ಕನ್ನಡ ಭಾಷೆ ಹಾಗೂ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕಾಯಕ ಮಾಡಿದ ಅಪರೂಪದ ಶಿಕ್ಷಕ ಇವರು.

    ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಂಜಯ್ಯಗಾರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಟಿಕೆ ನಾಗೇಶ್ ಅವರು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಹಾಸನದವರಾದ ನಾಗೇಶ್ ಕಳೆದ 11 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಕರ್ನಾಟಕದಲ್ಲೇ ಈ ಗ್ರಾಮವಿದ್ದರೂ ಇಲ್ಲಿನ ಜನರ ಆಡು ಭಾಷೆ ತೆಲುಗು. ಇಲ್ಲಿನ ಜನ ತಾವು ಆಂಧ್ರದವರೇ ಎನ್ನುವಷ್ಟು ಭಾವನೆಗಳಲ್ಲಿ ಬದುಕುತ್ತಿದ್ದರು. ಅಲ್ಲದೇ ಶಾಲೆಗೆ ಮೊದಲ ಬಾರಿ ಶಿಕ್ಷಕರಾಗಿ ನಾಗೇಶ್ ಬಂದಾಗ ಇಲ್ಲಿನ ಬಹುತೇಕ ಮಕ್ಕಳಿಗೆ ಕನ್ನಡ ಮಾತನಾಡಲು ಕೂಡ ಬರುತ್ತಿರಲಿಲ್ಲ. ಅಲ್ಲದೇ ಕನಿಷ್ಠ ಇಲ್ಲಿನ ಜನ ತಮ್ಮ ಮಕ್ಕಳನ್ನ ಶಾಲೆಗೆ ಕೂಡ ಕಳುಹಿಸುತ್ತಿರಲಿಲ್ಲ.

    ಆದರೆ ಮನಸ್ಸಿದ್ದರೆ ಮಾರ್ಗ ಎಂಬಂತೆ ಶಿಕ್ಷಕ ನಾಗೇಶ್ ಗ್ರಾಮದಲ್ಲೇ ವಾಸ ಮಾಡುವ ಮೂಲಕ ಗ್ರಾಮದ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನ ತಿಳಿಸಿದ್ದಾರೆ. ಪೋಷಕರ ಮನವೊಲಿಸಿ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆತಂದು ಉತ್ತಮ ಶಿಕ್ಷಣ ನೀಡುವ ಕಾಯಕಕ್ಕೆ ಮುಂದಾಗಿದ್ದಾರೆ. ಪ್ರತಿ ವರ್ಷ ಶಾಲೆಯಲ್ಲಿ ಕನ್ನಡದ ನುಡಿ ಹಬ್ಬ ಆಚರಿಸುವ ಮೂಲಕ ಗ್ರಾಮಸ್ಥರಲ್ಲಿ ಕನ್ನಡದ ಕಂಪು ಸೂಸುವ ಕೆಲಸ ಮಾಡಿದ್ದಾರೆ. ತೆಲುಗು ಭಾಷೆಯ ಪ್ರಭಾವದಿಂದ ಕನ್ನಡವೇ ಬಾರದ ಮಕ್ಕಳ ಬಾಯಲ್ಲಿ ಕನ್ನಡದ ಕಿಚ್ಚು ಹಚ್ಚಿದ್ದಾರೆ. ಹತ್ತು ವರ್ಷಗಳಿಂದ ಒಂದಲ್ಲ ಒಂದು ರೀತಿ ಭಿನ್ನ ವಿಭಿನ್ನ ಪ್ರಯತ್ನಗಳಿಂದ ಇಡೀ ಶಾಲೆಯನ್ನ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.

    ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿ ಹೋಗಿದ್ದ ಶಾಲೆಗೆ ಸಹೃದಯಿ ದಾನಿಗಳು ಹಾಗೂ ಸ್ನೇಹಿತರ ಬಳಗದಿಂದ ಸಕಲ ಸೌಲಭ್ಯಗಳನ್ನ ಪಡೆದುಕೊಳ್ಳುವಲ್ಲಿ ಶಿಕ್ಷಕ ನಾಗೇಶ್ ಯಶಸ್ವಿಯಾಗಿದ್ದಾರೆ. ದಾನಿಗಳ ನೆರವಿನಿಂದ ಪಡೆದ ಪ್ರೊಜೆಕ್ಟರ್ ಮೂಲಕ ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೂಡ ನಡೆಸುತ್ತಿದ್ದಾರೆ. ಕಂಪ್ಯೂಟರ್ ಕಾಣದ ಮಕ್ಕಳ ಕೈ ಹಿಡಿದು ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದಾರೆ. ಕನಿಷ್ಠ ಕನ್ನಡವೂ ಬಾರದ ಮಕ್ಕಳ ಬಾಯಲ್ಲಿ ಇಂದು ಪಟಪಟನೆ ಇಂಗ್ಲಿಷ್ ಮಾತನಾಡುವಷ್ಟರ ಮಟ್ಟಿಗೆ ಬೆಳೆಸಿದ್ದಾರೆ.

    ಈ ಹಿಂದೆ ವಿದ್ಯಾರ್ಥಿಗಳೇ ಇಲ್ಲದ ಈ ಶಾಲೆಯಲ್ಲಿ ಇಂದು 1 ರಿಂದ 7ನೇ ತರಗತಿಯವರೆಗೂ 114 ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತೆ ಮಾಡಿದ್ದಾರೆ. ಪ್ರತಿ ವರ್ಷ ತಮ್ಮ ಫೇಸ್‍ಬುಕ್ ಗೆಳೆಯರ ಬಳಗದಿಂದ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನು ಸಹಾಯ ಪಡೆಯುವ ಮೂಲಕ ವರ್ಷ ಇಡೀ ಉಚಿತವಾಗಿ ನೀಡುತ್ತಾರೆ. ಬಿಸಿಯೂಟ ಆಡುಗೆಗೆ ಬೇಕಾದ ಗ್ರೈಂಡರ್, ತಟ್ಟೆ, ಲೋಟ, ವಾಟರ್ ಫಿಲ್ಟರ್ ಸೇರಿದಂತೆ ಶಾಲೆಗೆ ಬೇಕಾದ ಸಕಲ ಸೌಲಭ್ಯಗಳನ್ನ ದಾನ ಪಡೆದು ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ.

    ವಿಶೇಷವಾಗಿ ಶಿಕ್ಷಕರ ಕೊರತೆ ಕಾರಣ ಖಾಸಗಿ ಶಾಲೆಯ ಶಿಕ್ಷಕರಾಗಿದ್ದ ತಮ್ಮ ಪತ್ನಿಯನ್ನು ಖಾಸಗಿ ಶಾಲೆ ಬಿಡಿಸಿ, ತಮ್ಮ ಶಾಲೆಯಲ್ಲಿ ಉಚಿತವಾಗಿ ಪಾಠ ಮಾಡಿಸುತ್ತಿದ್ದಾರೆ. ಪತಿಯ ಸಮಾಜಮುಖಿ ಕಾರ್ಯಕ್ಕೆ ಪತ್ನಿ ಶೈಲಜಾ ಕೂಡ ಸಾಥ್ ಕೊಟ್ಟಿದ್ದಾರೆ.

    ಆಂಧ್ರದ ಗಡಿಭಾಗ, ತೆಲುಗು ಭಾಷೆಯ ಪ್ರಭಾವ, ಪೋಷಕರ ಇಂಗ್ಲಿಷ್ ವ್ಯಾಮೋಹ ಸೇರಿದಂತೆ ಹಲವು ಕಾರಣಗಳಿಂದ ನಂಜಯ್ಯಗಾರಿಹಳ್ಳಿಯ ಸುತ್ತಮುತ್ತಲ ಐದು ಸರ್ಕಾರಿ ಶಾಲೆಗಳಿಗೆ ಸರ್ಕಾರ ಈಗಾಗಲೇ ಬೀಗ ಜಡಿದಿದೆ.

    ಆದರೆ ಶಿಕ್ಷಕ ನಾಗೇಶ್ ಅವರ ಸ್ವಂತ ಪರಿಶ್ರಮದಿಂದ ನಂಜಯ್ಯಗಾರಹಳ್ಳಿಯ ಈಗ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ಇದಲ್ಲದೆ 4 ವರ್ಷದ ತಮ್ಮ ಮಗನನ್ನ ಕೂಡ ತಮ್ಮದೇ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಲು ಮುಂದಾಗಿದ್ದಾರೆ ಈ ದಂಪತಿ.

    https://www.youtube.com/watch?v=UPD9JzGXBd0

  • ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವ ಕನ್ನಡ ಶಾಲೆಯ ಮಕ್ಕಳಿಗೆ ಬೇಕಿದೆ ಡೆಸ್ಕ್

    ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವ ಕನ್ನಡ ಶಾಲೆಯ ಮಕ್ಕಳಿಗೆ ಬೇಕಿದೆ ಡೆಸ್ಕ್

    ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶ ಮತ್ತು ಕರ್ನಾಟಕ ಗಡಿ ಭಾಗದಲ್ಲಿರುವ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಂಜಯ್ಯಗಾರಹಳ್ಳಿ ಗ್ರಾಮದ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ಸ್ಥಳೀಯ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ. ಈ ಶಾಲೆಯ ಅಭಿವೃದ್ಧಿಗೆ ಕಾರಣ ಶಿಕ್ಷಕ ನಾಗೇಶ್. ಶಿಕ್ಷಕರಾದ ನಾಗೇಶ್ ಕಳೆದ 11 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಕರ್ನಾಟಕದಲ್ಲೇ ಈ ಗ್ರಾಮವಿದ್ದರೂ ಇಲ್ಲಿನ ಜನರ ಆಡು ಭಾಷೆ ತೆಲುಗು. ಇಲ್ಲಿನ ಜನ ತಾವು ಆಂಧ್ರದವರೇ ಎನ್ನುವಷ್ಟು ಭಾವನೆಗಳಲ್ಲಿ ಬದುಕುತ್ತಿದ್ರು. ಈ ಶಾಲೆಗೆ ಶಿಕ್ಷಕರಾಗಿ ನಾಗೇಶ್ ಬಂದಾಗ ಇಲ್ಲಿನ ಬಹುತೇಕ ಮಕ್ಕಳಿಗೆ ಕನ್ನಡ ಮಾತನಾಡಲು ಕೂಡ ಬರುತ್ತಿರಲಿಲ್ಲ. ಕನಿಷ್ಠ ಇಲ್ಲಿನ ಜನ ತಮ್ಮ ಮಕ್ಕಳನ್ನ ಶಾಲೆಗೆ ಕೂಡ ಕಳುಹಿಸುತ್ತಿರಲಿಲ್ಲ. ಆದ್ರೆ ಮನಸ್ಸಿದ್ದರೆ ಮಾರ್ಗ ಎಂಬಂತೆ ಶಿಕ್ಷಕ ನಾಗೇಶ್ ಗ್ರಾಮದಲ್ಲೇ ವಾಸ ಮಾಡುವ ಮೂಲಕ, ಗ್ರಾಮದ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನ ತಿಳಿಸಿದರು. ಪೋಷಕರ ಮನವೊಲಿಸಿ ಎಲ್ಲಾ ಮಕ್ಕಳನ್ನ ಶಾಲೆಗೆ ಕರೆತಂದು ಸತ್ಪ್ರಜೆಗಳನ್ನ ಮಾಡುವ ಕಾಯಕಕ್ಕೆ ಮುಂದಾದರು.

    ಪ್ರತಿ ವರ್ಷ ಶಾಲೆಯಲ್ಲಿ ಕನ್ನಡದ ನುಡಿ ಹಬ್ಬ ಆಚರಿಸುವ ಮೂಲಕ ಗ್ರಾಮಸ್ಥರಲ್ಲಿ ಕನ್ನಡದ ಕಂಪು ಸೂಸುವ ಕೆಲಸ ಮಾಡುತ್ತಿದ್ದಾರೆ. ತೆಲುಗು ಭಾಷೆಯ ಪ್ರಭಾವದಿಂದ ಕನ್ನಡವೇ ಬಾರದ ಮಕ್ಕಳ ಬಾಯಲ್ಲಿ ಕನ್ನಡದ ಕಿಚ್ಚು ಹಚ್ಚಿದ್ದಾರೆ. ಹತ್ತು ವರ್ಷಗಳಿಂದ ಒಂದಲ್ಲ ಒಂದು ರೀತಿ ಭಿನ್ನ ವಿಭಿನ್ನ ಪ್ರಯತ್ನಗಳಿಂದ ಇಡೀ ಶಾಲೆಯನ್ನ ಮಾದರಿ ಶಾಲೆಯನ್ನಾಗಿ ಮಾಡಿದ ಕೀರ್ತಿ ಶಿಕ್ಷಕ ನಾಗೇಶರದ್ದು. ಅಸಲಿಗೆ ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿ ಹೋಗಿದ್ದ ಈ ಶಾಲೆಗೆ ಸಹೃದಯಿ ದಾನಿಗಳು ಹಾಗೂ ಸ್ನೇಹಿತರ ಬಳಗದಿಂದ, ಅಳಿವಿನಂಚಿಗೆ ಸಾಗುತ್ತಿದ್ದ ಸರ್ಕಾರಿ ಶಾಲೆಗೆ ಒಂದಷ್ಟು ಸೌಲಭ್ಯಗಳನ್ನ ಪಡೆದುಕೊಳ್ಳುವಲ್ಲಿ ಶಿಕ್ಷಕ ನಾಗೇಶ್ ಸಫಲರಾಗಿದ್ದಾರೆ.

    ದಾನಿಗಳ ನೆರವಿನಿಂದ ಪಡೆದ ಪ್ರೊಜೆಕ್ಟರ್ ಮೂಲಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೂಡ ನಡೆಸುತ್ತಿದ್ದಾರೆ. ಕಂಪ್ಯೂಟರ್‍ನ್ನೇ ಕಾಣದ ಮಕ್ಕಳ ಕೈ ಹಿಡಿದು ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದಾರೆ. ಕನಿಷ್ಠ ಕನ್ನಡವೂ ಬಾರದ ಮಕ್ಕಳ ಬಾಯಲ್ಲಿ ಇಂದು ಪಟಪಟನೆ ಇಂಗ್ಲೀಷ್ ಮಾತನಾಡುವಷ್ಟರ ಮಟ್ಟಿಗೆ ಬೆಳೆಸಿದ್ದಾರೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳೇ ಇಲ್ಲದ ಈ ಶಾಲೆಯಲ್ಲಿ ಇಂದು 1 ರಿಂದ 7 ನೇ ತರಗತಿಯವರೆಗೂ 114 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

    ಪ್ರತಿ ವರ್ಷ ತಮ್ಮ ಫೇಸ್ ಬುಕ್ ಗೆಳೆಯರ ಬಳಗದಿಂದ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನ ಸಹಾಯ ಪಡೆಯುವ ಶಿಕ್ಷಕ ನಾಗೇಶ್ ವಿದ್ಯಾರ್ಥಿಗಳಿಗೆ ಇಡೀ ವರ್ಷ ಉಚಿತ ನೋಟ್ ಪುಸ್ತಕ್ ಸೇರಿದಂತೆ ಪೆನ್, ಪೆನ್ಸಿಲ್., ರಬ್ಬರ್ ಹೀಗೆ ಎಲ್ಲಾ ಕಲಿಕಾ ಸಾಮಾಗ್ರಿಗಳನ್ನ ನೀಡುತ್ತಾರೆ. ಇನ್ನೂ ಕುಡಿಯುವ ನೀರಿನಿಂದ ಹಿಡಿದು ಆಡುಗೆಗೆ ಬೇಕಾದ ಗ್ರೈಂಡರ್, ತಟ್ಟೆ, ಲೋಟ, ವಾಟರ್ ಫಿಲ್ಟರ್ ಸೇರಿದಂತೆ ಶಾಲೆಗೆ ಬೇಕಾದ ಸಕಲ ಸೌಲಭ್ಯಗಳನ್ನ ದಾನ ಪಡೆದು ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ.

    ಶಿಕ್ಷಕರ ಕೊರತೆ ಕಾರಣ ಖಾಸಗಿ ಶಾಲೆಯ ಶಿಕ್ಷಕರಾಗಿದ್ದ ತಮ್ಮ ಪತ್ನಿಯನ್ನೇ ತಮ್ಮ ಶಾಲೆಯಲ್ಲಿ ಉಚಿತವಾಗಿ ಭೋಧನೆ ಮಾಡಿಸುತ್ತಿದ್ದಾರೆ. ಪತಿಯ ಸಮಾಜಮುಖಿ ಕಾರ್ಯಕ್ಕೆ ಪತ್ನಿ ಶೈಲಜಾ ಕೂಡ ಸಾಥ್ ಕೊಟ್ಟಿದ್ದಾರೆ. ಆದ್ರೆ ಇಂತಹ ಶಾಲೆಯಲ್ಲಿ 114 ಮಕ್ಕಳಿಗೆ ತಕ್ಕಂತೆ ಡೆಸ್ಕ್ ಗಳ ಕೊರತೆ ಇದೆ. ಹೀಗಾಗಿ ಕೆಲ ಮಕ್ಕಳು ಡೆಸ್ಕ್ ಗಳ ಮೇಲೆ ಕೂತು ಪಾಠ ಕೇಳಿದ್ರೇ ಕೆಲವರು ನೆಲದಲ್ಲೇ ಕೂರಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಹೀಗಾಗಿ ಯಾರಾದ್ರೂ ಸಹೃದಯಿ ದಾನಿಗಳು ತಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ 12 ಡೆಸ್ಕ್ ಗಳನ್ನ ಕೊಡಿಸಿ ಅಂತ ಬೆಳಕು ಕಾರ್ಯಕ್ರಮದ ಮೂಲಕ ಮನವಿ ಮಾಡುತ್ತಿದ್ದಾರೆ.

    https://youtu.be/VusB20dZ_WE

  • ಬಡಮಕ್ಕಳ ಬದುಕು ರೂಪಿಸಲು ಪಣ – ಬೆಳಗಿನ ಜಾವ 4 ಗಂಟೆಗೆ ಬಂದು ಮಕ್ಕಳನ್ನ ಓದಿಸೋ ಮೇಷ್ಟ್ರು

    ಬಡಮಕ್ಕಳ ಬದುಕು ರೂಪಿಸಲು ಪಣ – ಬೆಳಗಿನ ಜಾವ 4 ಗಂಟೆಗೆ ಬಂದು ಮಕ್ಕಳನ್ನ ಓದಿಸೋ ಮೇಷ್ಟ್ರು

    ರಾಯಚೂರು: ಸರ್ಕಾರಿ ಶಾಲೆ ಆರಂಭವಾದ್ರೂ ಸರಿಯಾದ ಟೈಮ್‍ಗೆ ಮೇಷ್ಟ್ರು ಬರಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ. ಇದಕ್ಕೆ ಅಪವಾದ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಮೌನೇಶ್ ಮೇಷ್ಟ್ರು.

    ಮೌನೇಶ್ ಕುಂಬಾರ್ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸರ್ಜಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನ್ನಂತೆ ಬಡ ಮಕ್ಕಳು ವಿದ್ಯಾಭ್ಯಾಸದಿಂದ ಹಿಂದುಳಿಯಬಾರದು ಅಂತ ಶಪಥತೊಟ್ಟು ಶ್ರಮಿಸ್ತಿದ್ದಾರೆ. “ಎದ್ದೇಳು ಮಂಜುನಾಥ” ಅಂತ ಯೋಜನೆ ರೂಪಿಸಿ ಮುಂಜಾನೆಯೇ ಎದ್ದು ನಾಲ್ಕೈದು ಗಂಟೆಗೆ 5 ಕಿ.ಮೀ ದೂರದ ಲಿಂಗಸುಗೂರಿನಿಂದ ಸರ್ಜಾಪೂರಕ್ಕೆ ಬರುತ್ತಾರೆ. ಒಂದು ವೇಳೆ ಶಿಕ್ಷಕರು ಬರಲಿಲ್ಲ ಅಂದ್ರೆ ವಿದ್ಯಾರ್ಥಿಗಳೇ ತಾವು ಓದ್ತಿರೋ ಬಗ್ಗೆ ಮಿಸ್ ಕಾಲ್ ಕೊಡಬೇಕು.

    ಸರ್ಜಾಪೂರದ ಈ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆಯೇನಲ್ಲ. ವಿಜ್ಞಾನ, ಗಣಿತ ಹಾಗೂ ಭಾಷಾ ಪ್ರಯೋಗಾಲಯಗಳು ಇಡೀ ಜಿಲ್ಲೆಗೆ ಮಾದರಿಯಾಗಿವೆ. ಹೆಡ್‍ಮೇಷ್ಟ್ರು ಮೌನೇಶ್ ಅವರ ಈ ಕಾರ್ಯಕ್ಕೆ ಶಾಲೆಯ 8 ಜನ ಸಹ ಶಿಕ್ಷಕರು ಸಾಥ್ ನೀಡಿದ್ದಾರೆ.

    ಸರ್ಜಾಪೂರದ ಜೊತೆಗೆ ಕುಪ್ಪಿಗುಡ್ಡ ಗ್ರಾಮ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಧ್ಯಯನ ಮಾಡ್ತಿದ್ದು, ಇಲ್ಲಿನ ಪಾಠ ಪ್ರವಚನದ ಗುಣಮಟ್ಟ ಕಂಡು ಲಿಂಗಸುಗೂರು ತಾಲೂಕು ಕೇಂದ್ರದಿಂದಲೂ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ.

  • ಅವಾಚ್ಯ ಶಬ್ಧಗಳಿಂದ ಶಿಕ್ಷಕ ನಿಂದನೆ- ತಾಯಿ ಜೊತೆ ಕಷ್ಟ ಹೇಳಿಕೊಂಡ ಬಳಿಕ ವಿದ್ಯಾರ್ಥಿನಿ ಆತ್ಮಹತ್ಯೆ

    ಅವಾಚ್ಯ ಶಬ್ಧಗಳಿಂದ ಶಿಕ್ಷಕ ನಿಂದನೆ- ತಾಯಿ ಜೊತೆ ಕಷ್ಟ ಹೇಳಿಕೊಂಡ ಬಳಿಕ ವಿದ್ಯಾರ್ಥಿನಿ ಆತ್ಮಹತ್ಯೆ

    ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದಲ್ಲಿರುವ ನವೋದಯ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಜೈಬುನ್ನೀಸ ಆತ್ಮಹತ್ಯೆಗೆ ಶರಣಾಗುವ ಮುನ್ನ ತಾಯಿಯೊಂದಿಗೆ ಮೊಬೈಲ್‍ನಲ್ಲಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜನವರಿ 24ರಂದು ಜೈಬುನ್ನೀಸ ವಸತಿ ಶಾಲೆಯ ಕೊಠಡಿಯಲ್ಲೇ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಪ್ರತಿಭಾವಂತೆ ವಿದ್ಯಾರ್ಥಿನಿಯಾಗಿದ್ದ ಜೈಬುನ್ನೀಸ ಸಾವಿಗೆ ವಸತಿ ಶಾಲೆ ಶಿಕ್ಷಕ ರವಿ ಎಂಬವನೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು.

    ಶಿಕ್ಷಕ ರವಿ ಜೈಬುನ್ನೀಸಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಬಗ್ಗೆ ಆತ್ಮಹತ್ಯೆಗೆ ಶರಣಾಗುವ ಮುಂಚೆ ತಾಯಿಗೆ ಕರೆ ಮಾಡಿದ್ದ ಜೈಬುನ್ನೀಸ, ಅಳುತ್ತಾ ತನ್ನ ಕಷ್ಟ ಹೇಳಿಕೊಂಡಿದ್ದಳು. ಈ ವೇಳೆ ಜೈಬುನ್ನೀಸ ಮನೆಯವರು ಪೊಲೀಸರಿಗೆ ದೂರು ನೀಡುವಂತೆ ಹೇಳಿದ್ದರು. ಶಾಲೆಯ ಮರ್ಯಾದೆ ಹಾಳಾಗುತ್ತೆ ಎಂದು ಸುಮ್ಮನಿದ್ದ ವಿದ್ಯಾರ್ಥಿನಿ, ನಂತರ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಬಗ್ಗೆ ವಿದ್ಯಾರ್ಥಿನಿ ಮನೆಯವರು ಕೆ.ಆರ್ ಪೇಟೆ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

    ಪೊಲೀಸರು ಶಿಕ್ಷಕ ರವಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಶಿಕ್ಷಕನ ಬಗ್ಗೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಪೋಷಕರಿಗೆ ಅಳುತ್ತಾ ತನ್ನ ಕಷ್ಟ ಹೇಳಿಕೊಂಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿಕ್ಷಕನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.