Tag: teacher

  • ನೇಣು ಹಾಕಿಕೊಂಡಿದ್ದ ಮರದ ಕೊಂಬೆ ಮುರಿದಿದ್ದಕ್ಕೆ ಕೆರೆಗೆ ಜಿಗಿದು ಪ್ರಾಣಬಿಟ್ಟ ಶಿಕ್ಷಕ

    ನೇಣು ಹಾಕಿಕೊಂಡಿದ್ದ ಮರದ ಕೊಂಬೆ ಮುರಿದಿದ್ದಕ್ಕೆ ಕೆರೆಗೆ ಜಿಗಿದು ಪ್ರಾಣಬಿಟ್ಟ ಶಿಕ್ಷಕ

    ಕೊಲಾರ: ನೇಣು ಹಾಕಿಕೊಂಡಿದ್ದ ಮರದ ಕೊಂಬೆ ಮುರಿದಿದ್ದಕ್ಕೆ ಶಿಕ್ಷಕನೊಬ್ಬ ಕೆರೆಗೆ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರ ತಾಲೂಕಿನ ಕಾಳಹಸ್ತಿಪುರದಲ್ಲಿ ನಡೆದಿದೆ.

    ಭಟ್ರಹಳ್ಳಿ ಗ್ರಾಮದ ಪ್ರಭಾಕರ್ (31) ಆತ್ಮಹತ್ಯೆ ಶರಣಾದ ಶಿಕ್ಷಕ. ಪ್ರಭಾಕರ್ ಯಾದಗಿರಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಊರಹಬ್ಬಕ್ಕಾಗಿ ಪ್ರಭಾಕರ್ ಸ್ವಗ್ರಾಮಕ್ಕೆ ಬಂದಿದ್ದ. ಜೊತೆಗೆ ಮನೆತನ ನೋಡಲು ಹೆಣ್ಣಿನ ಮನೆಯವರು ಬರುತ್ತಾರೆ ಅಂತ ಪ್ರಭಾಕರ್ ಮನೆಗೆ ಬೇಕಾದ ಸಾಮಗ್ರಿಗಳನ್ನು ತಂದು ಕೊಟ್ಟಿದ್ದ. ಆದರೆ ಬುಧವಾರ ಹೆಣ್ಣಿನ ಮನೆಯವರು ಬರುವುದಕ್ಕೂ ಮುನ್ನ ತೋಟಕ್ಕೆ ಹೋಗಿ ಬರುವುದಾಗಿ ಹೇಳಿ ತನ್ನ ಮೊಬೈಲ್ ಅನ್ನು ತಮ್ಮನ ಕೈಗೆ ಕೊಟ್ಟು ಹೋಗಿದ್ದ.

    ಮನೆಗೆ ಬಂದಿದ್ದ ಹುಡುಗಿ ಮನೆಯವರು ಕಾದು ಕಾದು ಮರಳಿ ತಮ್ಮ ಊರಿಗೆ ಹೋದರು. ಆದರೆ ಪ್ರಭಾಕರ್ ಮನೆಗೆ ಬಾರದೆ ಇರುವುದರಿಂದ ಆತನಿಗಾಗಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು. ಕಾಳಹಸ್ತಿಪುರ ಗ್ರಾಮದ ಕೆರೆಯ ಬಳಿ ಗುರುವಾರ ಪ್ರಭಾಕರ್ ಬೈಕ್ ಮತ್ತು ಚಪ್ಪಲಿ ಪತ್ತೆಯಾಗಿದ್ದವು. ಈ ವಿಷಯ ತಿಳಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಸ್ಥಳ ಪರಿಶೀಲನೆ ಮಾಡಿದಾಗ ಪ್ರಭಾಕರ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿ, ಮೃತದೇಹ ಪತ್ತೆಗಾಗಿ ಕಾರ್ಯಚರಣೆ ನಡೆಸಿದರು. ಕೆರೆಯಲ್ಲಿ ಬೋಟ್ ಸಹಾಯದಿಂದ ಸುಮಾರು ಎರಡು ಗಂಟೆಗಳ ಹುಡುಕಾಟ ನಡೆಸಿದಾಗ ಪ್ರಭಾಕರ್ ಶವ ಪತ್ತೆಯಾಗಿದೆ.

    ಪ್ರಭಾಕರ್ ಕೆರೆಗೆ ಬೀಳುವ ಮುನ್ನ ಮರಕ್ಕೆ ಹಗ್ಗ ಕಟ್ಟಿ ನೇಣುಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಮರದ ಕೊಂಬೆ ತುಂಡಾಗಿದ್ದರಿಂದ ಬೇರೆ ದಾರಿ ಕಾಣದೆ ಕಾಳಹಸ್ತಿಪುರ ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಪ್ರಭಾಕರ್ ಇದಕ್ಕೂ ಮೊದಲು ಎರಡ್ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿ ಏನು ಇಲ್ಲದಿದ್ದರೂ ಅವನಿಗೆ ಸಂಬಂಧಿಕರೇ ಮಾಟ ಮಂತ್ರ ಮಾಡಿಸಿದ್ದರು. ಹಾಗಾಗಿ ಅವನ ಮನಸ್ಥಿತಿ ಕೆಟ್ಟುಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ಹಲವಾರು ಬಾರಿ ನಾವು ಅವನನ್ನ ಕಾಪಾಡಿಕೊಂಡಿದ್ದೆವು ಎಂದು ಪೋಷಕರು ದೂರಿದ್ದಾರೆ.

  • ಬಂಡೀಪುರ ಕಾಡಂಚಿನ ಶಾಲೆಗಳಲ್ಲಿ ಹೊಸ ಸಮಸ್ಯೆ -ವಿದ್ಯಾರ್ಥಿಗಳು ಬಂದ್ರೂ ಕ್ಲಾಸ್ ನಡೆಯೋದು ಮಧ್ಯಾಹ್ನವೇ

    ಬಂಡೀಪುರ ಕಾಡಂಚಿನ ಶಾಲೆಗಳಲ್ಲಿ ಹೊಸ ಸಮಸ್ಯೆ -ವಿದ್ಯಾರ್ಥಿಗಳು ಬಂದ್ರೂ ಕ್ಲಾಸ್ ನಡೆಯೋದು ಮಧ್ಯಾಹ್ನವೇ

    ಚಾಮರಾಜನಗರ: ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನಲ್ಲಿ ಇರುವ ಸರ್ಕಾರಿ ಶಾಲೆಗಳಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಬಡತನದ ನೋವು ಉಂಡವರು. ಶಾಲೆಗಾದ್ರೂ ಸೇರಿಸಿ ಮಕ್ಕಳಿಗೆ ಜೀವನದ ಪಾಠ ಕಲಿಸಬೇಕು ಎಂಬುದು ಪೋಷಕರ ಅಭಿಲಾಷೆಯಾದ್ರೆ, ಬಸ್ ಸಮಸ್ಯೆಯಿಂದ ಅದು ಈಡೇರುತ್ತಿಲ್ಲ.

    ನಗರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲ ಅಂತ ಒಂದು ಕಡೆ ಮುಚ್ಚುತ್ತಿದ್ದಾರೆ. ಆದರೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿದ್ದರೂ ಸರಿಯಾಗಿ ಶಾಲೆಗಳು ನಡೀತಾ ಇಲ್ಲ. ಶಾಲೆಗಳಿಗೆ ಶಿಕ್ಷಕರು ಇಲ್ಲ ಅಂತೇನಲ್ಲ. ಮಕ್ಕಳೂ ಇದ್ದಾರೆ ಶಿಕ್ಷಕರೂ ಇದ್ದಾರೆ. ಆದರೆ ಶಾಲೆಗೆ ಬರೋಕೆ ಸಾರಿಗೆ ವ್ಯವಸ್ಥೆನೇ ಇಲ್ಲ. ಜಕ್ಕಳ್ಳಿ, ಎಲಚ್ಚಟ್ಟಿ, ಕಣಿಯನಪುರ, ಕಣಿಯನಪುರ ಕಾಲೋನಿ, ಮಂಗಲ, ಬಂಡಿಪುರ ಮತ್ತು ಮೇಲುಕಾಮನಹಳ್ಳಿ ಸೇರಿದಂತೆ ಒಟ್ಟು 7 ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳಿಗೆ ಸುಮಾರು 20ಕ್ಕೂ ಹೆಚ್ಚು ಶಿಕ್ಷಕರು ಗುಂಡ್ಲುಪೇಟೆ ಪಟ್ಟಣದಿಂದಲೇ ಪ್ರತಿನಿತ್ಯ ಸಂಚರಿಸುತ್ತಾರೆ. ಶಾಲೆ ವೇಳೆಗೆ ಸರಿಯಾಗಿ ಬಸ್ ಬರದೇ ಮಧ್ಯಾಹ್ನದ ವೇಳೆಗೆ ಬರುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಶಾಲೆ ನಡೆಯುತ್ತಿಲ್ಲ. ಮಧ್ಯಾಹ್ನದ ನಂತರ ಶಾಲೆ ಆರಂಭವಾಗುತ್ತಿದೆ ಎಂದು ಶಿಕ್ಷಕಿ ಲಕ್ಷ್ಮಿ ಹೇಳಿದ್ದಾರೆ.

    ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಿಲೋಮೀಟರ್ ದೂರ ಕಾಡು ಪ್ರಾಣಿಗಳ ಭಯವನ್ನೂ ಲೆಕ್ಕಿಸದೇ ಶಾಲೆಗೆ ಬರುತ್ತಿದ್ದಾರೆ. ಆದರೂ ನಿಗದಿತ ಸಮಯಕ್ಕೆ ಶಾಲೆ ಆರಂಭವಾಗದೇ ಇರೋದಕ್ಕೆ ಪೋಷಕರು ಆಸಮಾಧಾನ ವ್ಯಕ್ತಪಡಿಸಿದ್ದಾರೆ. ರೆಸಾರ್ಟ್‍ಗಳಿಗೆ ಹೋಗುವ ಉದ್ಯೋಗಿಗಳಿಗಾಗಿ ಬಸ್ ವಿಳಂಬವಾಗಿ ಬರುತ್ತಿದೆ. ಗುಂಡ್ಲುಪೇಟೆ ಬಸ್ ಡಿಪೋದಿಂದ 9 ಗಂಟೆಗೆ ಬಸ್ ಬಿಟ್ಟರೇ 10 ಗಂಟೆ ವೇಳೆಗಾದ್ರೂ ಬಸ್ ಬಂದ್ರೆ ಶಾಲೆಗಳು ಹೆಚ್ಚು ಕಡಿಮೆ ಆರಂಭವಾಗುತ್ತದೆ. ಆದರೆ ರೆಸಾರ್ಟಿಗೆ ಬರೋ ಉದ್ಯೋಗಿಗಳು 11 ಗಂಟೆ ಬರುವ ಸಮಯ ಗಮನದಲ್ಲಿ ಇಟ್ಟುಕೊಂಡು ಬಸ್ ಬರುತ್ತಿದೆ. ಹೀಗಾಗಿ ಬಸ್ ನಿಗದಿತ ವೇಳೆಗೆ ಬರುವಂತೆ ಅನುಕೂಲ ಮಾಡಬೇಕು ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಒಟ್ಟಾರೆ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಈ ದುಸ್ಥಿತಿ ಇರೋದು ವಿಪರ್ಯಾಸ. ಇನ್ಮುಂದೆಯಾದ್ರೂ ಸಚಿವರು ಇತ್ತ ಗಮನ ಹರಿಸಿ ಸಕಾಲದಲ್ಲಿ ಬಸ್ ವ್ಯವಸ್ಥೆ ಮಾಡಬೇಕಾಗಿದೆ.

  • 11ನೇ ತರಗತಿ ವಿದ್ಯಾರ್ಥಿ ಮೇಲೆ ಪ್ರಾಂಶುಪಾಲ ಸೇರಿ, ಮೂವರು ಶಿಕ್ಷಕರಿಂದ ಲೈಂಗಿಕ ದೌರ್ಜನ್ಯ

    11ನೇ ತರಗತಿ ವಿದ್ಯಾರ್ಥಿ ಮೇಲೆ ಪ್ರಾಂಶುಪಾಲ ಸೇರಿ, ಮೂವರು ಶಿಕ್ಷಕರಿಂದ ಲೈಂಗಿಕ ದೌರ್ಜನ್ಯ

    – ಮೊಬೈಲ್ ಇಟ್ಟುಕೊಂಡಿದ್ದಕ್ಕೆ ಬಟ್ಟೆ ಬಿಚ್ಚಿಸಿ ಅವಮಾನ

    ಚೆನ್ನೈ: 11ನೇ ತರಗತಿ ವಿದ್ಯಾರ್ಥಿ ಮೇಲೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಮೂವರು ಶಿಕ್ಷಕರು ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ.

    ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕೇಂದ್ರೀಯ ವಿದ್ಯಾಲಯದಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಯ ಹೇಳಿಕೆ ಮೇರೆಗೆ ಪೊಲೀಸರೇ ಸ್ವಯಂ ದೂರು ದಾಖಲಿಸಿಕೊಂಡು ಮೂವರೂ ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಮೊಬೈಲ್ ಫೋನ್ ಇಟ್ಟುಕೊಂಡಿದ್ದಕ್ಕಾಗಿ ವಿದ್ಯಾರ್ಥಿಯನ್ನು ಮನಬಂದಂತೆ ಹೊಡೆದಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯನ್ನು ಕೊಯಮತ್ತೂರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ನಾನು ತರಗತಿಯಲ್ಲಿ ಕುಳಿತಾಗ ಮೊಬೈಲ್ ಇರುವುದನ್ನು ಹುಡುಕಬೇಕು ಹೊರಗೆ ಬಾ ಎಂದು ಕರೆದಿದ್ದಾರೆ. ನಂತರ ನನ್ನ ಬಟ್ಟೆ ಬಿಚ್ಚಿ ಮೊಬೈಲ್ ಹುಡುಕಿದ್ದಾರೆ. ನನ್ನ ಬಳಿ ಮೊಬೈಲ್ ಇರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ.

    ಈ ಘಟನೆ ನಂತರ ಪ್ರಾಂಶುಪಾಲರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ. ಈ ಮೂವರು ಆರೋಪಿಗಳು ನನ್ನ ತಮ್ಮನ ಮೇಲೆ ಸಹ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ. ಅಲ್ಲದೆ ಶಿಕ್ಷಕರ ವಿರುದ್ಧ ದೂರು ನೀಡಲು ತೆರಳಿದಾಗ ಪೊಲೀಸರು ದೂರು ಸ್ವೀಕರಿಸಿರಲಿಲ್ಲ ಎಂದು ಬಾಲಕನ ತಾಯಿ ಆರೋಪಿಸಿದ್ದಾರೆ.

    ಆದರೆ ಸಂತ್ರಸ್ತ ಮಾಡಿರುವ ಆರೋಪವನ್ನು ಪ್ರಾಂಶುಪಾಲರು ಅಲ್ಲಗಳೆದಿದ್ದು, ನಾವು ವಿದ್ಯಾರ್ಥಿ ಪರಿಷತ್ ಸದಸ್ಯರನ್ನು ಹೊಂದಿದ್ದೇವೆ. ಅವರು 9-12ನೇ ತರಗತಿ ವರೆಗಿನ ಎಲ್ಲ ವಿದ್ಯಾರ್ಥಿಗಳು ತರಗತಿಗಳಲ್ಲಿ ಮೊಬೈಲ್ ಬಳಸುತ್ತಿರುವುದನ್ನು ಪರಿಶೀಲಿಸುವಂತೆ ಹೇಳಿದರು. ಅಲ್ಲದೆ ಹುಡುಗಿಯರು ಈ ಕುರಿತು ದೂರು ನೀಡಿದ್ದು, ಕೆಲ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಪೆನ್ ಕ್ಯಾಮೆರಾಗಳನ್ನು ಬಳಸಿ ವಿಡಿಯೋ ಮಾಡುತ್ತಾರೆ ಎಂದು ದೂರು ನೀಡಿದ್ದರು. ಹೀಗಾಗಿ ಪರಿಷತ್ತಿನ ಸದಸ್ಯರು ಪರಿಶೀಲನೆ ಕಾರ್ಯ ನಡೆಸಿದರು. ಆಗ ವಿದ್ಯಾರ್ಥಿ ಬಳಿ ಮೊಬೈಲ್ ಇರುವುದನ್ನು ಕಂಡು ಬಂದಿದ್ದು, ಆತನನ್ನು 9 ದಿನಗಳ ಕಾಲ ಅಮಾನತುಗೊಳಿಸಿದ್ದೆವು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

    ಮೂವರು ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆಯ ಸೆಕ್ಷನ್ 7(ಲೈಂಗಿಕ ಹಲ್ಲೆ), 8(ಲೈಂಗಿಕ ಹಲ್ಲೆಯ ಶಿಕ್ಷೆ), ಅಲ್ಲದೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷೆನ್ 66ಇ ಹಾಗೂ ಐಪಿಸಿ ಸೆಕ್ಷನ್ 506(ಐ)(ಅಪರಾಧ ಬೆದರಿಕೆ) ಅಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಕ್ಕಳ ಮೇಲೆ ಶಿಕ್ಷಕಿಯ ರಾಕ್ಷಸಿ ವರ್ತನೆ ಪ್ರಕರಣಕ್ಕೆ ಟ್ವಿಸ್ಟ್

    ಮಕ್ಕಳ ಮೇಲೆ ಶಿಕ್ಷಕಿಯ ರಾಕ್ಷಸಿ ವರ್ತನೆ ಪ್ರಕರಣಕ್ಕೆ ಟ್ವಿಸ್ಟ್

    ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಗಳ ಮೇಲೆ ಬಾಸುಂಡೆ ಬರುವ ಹಾಗೆ ಹಲ್ಲೆ ಮಾಡಿ ವಿಕೃತಿ ಪ್ರದರ್ಶಿಸಿ ವರ್ಗಾವಣೆಯಾಗಿದ್ದ ಶಿಕ್ಷಕಿಯ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.

    ಶುಕ್ರವಾರ ಬೆಳಗ್ಗೆಯಿಂದ ವಿದ್ಯಾರ್ಥಿಗಳ ಮೇಲೆ ವಿಜ್ಞಾನ ಶಿಕ್ಷಕಿ ಅರ್ಚನಾ ಸಾಗರ ಬಾಸುಂಡೆ ಬರುವ ಹಾಗೆ ಕೋಲಿನಿಂದ ಥಳಿಸಿದ್ದ ಸುದ್ದಿ ಪ್ರಸಾರವಾಗಿತ್ತು. ಸುದ್ದಿ ಬಂದ ಬೆನ್ನಲ್ಲೇ ಶಾಲೆಗೆ ಚಿಕ್ಕೋಡಿ ಡಿಡಿಪಿಐ ಮೋಹನ ಹಂಚಾಟೆ ಭೇಟಿ ನೀಡಿದ ತಕ್ಷಣ ಶಿಕ್ಷಕಿ ಅರ್ಚನಾ ಸಾಗರ ಅವರನ್ನು ವರ್ಗಾವಣೆ ಮಾಡಲು ಆದೇಶ ಹೊರಡಿಸಿದ್ದರು. ಆದರೆ ಇಂದು ಶಾಲೆಯ ಕೆಲವು ವಿದ್ಯಾರ್ಥಿನಿಯರು ಶಿಕ್ಷಕಿಯನ್ನು ವರ್ಗಾವಣೆ ಮಾಡಬಾರದು ಎಂದು ಪಟ್ಟು ಹಿಡಿದು ಶಾಲಾ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

    ವೈಯಕ್ತಿಕ ಕಾರಣಗಳಿಂದ ಅವರ ಮೇಲೆ ದ್ವೇಷದಿಂದ ಶಿಕ್ಷಕಿ ಮೇಲೆ ಆರೋಪ ಮಾಡಲಾಗಿದೆ ಎಂದು ಎಸ್‍ಡಿಎಂಸಿ ಅಧ್ಯಕ್ಷ ಸುರೇಶ್ ಅವರ ಮನೆ ಮುಂದೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿನಿಯರ ಪ್ರತಿಭಟನೆಗೆ ಕೆಲ ಗ್ರಾಮಸ್ಥರು ಬೆಂಬಲ ನೀಡಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದರು. ಅಲ್ಲದೆ ಪ್ರತಿಭಟನೆ ವಾಪಸ್ಸು ಪಡೆಯುವಂತೆ ಮನವಿ ಮಾಡಿದರು.

    ಹುಕ್ಕೇರಿ ಬಿಇಓ ಶಿಕ್ಷಕಿ ಅರ್ಚನಾ ಅವರ ವರ್ಗಾವಣೆಯನ್ನು ರದ್ದು ಮಾಡುತ್ತೇವೆ. ಸೋಮವಾರ ಅವರು ಇದೆ ಶಾಲೆಗೇ ಬರುತ್ತಾರೆ ಎಂದು ಭರವಸೆ ನೀಡಿದಾಗ ಮಕ್ಕಳು ಪ್ರತಿಭಟನೆ ವಾಪಸ್ಸು ಪಡೆದು ತರಗತಿಗಳಿಗೆ ತೆರಳಿದರು. ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂದು ಕೆಲವರು ಆರೋಪಿಸಿದರು. ಕೆಲ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರೆ ಕೆಲ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ದೂರ ಉಳಿದಿದ್ದರು.

  • ದೇವರು ಮೈಮೇಲೆ ಬಂದಿದೆಯೆಂದು ಮಕ್ಕಳ ಮೇಲೆ ದೌರ್ಜನ್ಯ -ಬಿಇಓ ಕಾಲಿಗೆ ಬಿದ್ದ ಶಿಕ್ಷಕ

    ದೇವರು ಮೈಮೇಲೆ ಬಂದಿದೆಯೆಂದು ಮಕ್ಕಳ ಮೇಲೆ ದೌರ್ಜನ್ಯ -ಬಿಇಓ ಕಾಲಿಗೆ ಬಿದ್ದ ಶಿಕ್ಷಕ

    -ನಿಮ್ಮ ಕಣ್ಣಿಗೆ ಭಗವಂತ ಕಾಣಲ್ಲ, ನನಗೆ ಕಾಣಿಸ್ತಾನೆ

    ಕಾರವಾರ: ದೇವರು ಮೈಮೇಲೆ ಬರುತ್ತೆಂದು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದ ಶಿಕ್ಷಕ ಇಂದು ಬಿಇಓ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ.

    ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾವಲಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಹ್ಲಾದ್ ಕ್ಷಮೆ ಕೇಳಿದ್ದಾನೆ. ತನಗೆ ದೇವರು ಮೈಮೇಲೆ ಬರುತ್ತದೆ ಎನ್ನುವ ಕಾರಣ ಮಕ್ಕಳ ಮೈ ಮೇಲೆ ನಿಂಬೆಹಣ್ಣುಗಳನ್ನು ಎಸೆಯುತ್ತಿದ್ದನು. ದೇವರು ಮೈಮೇಲೆ ಬಂದಿದೆ ಎಂದು ಶಾಲೆಯಲ್ಲಿಯೇ ವಿಚಿತ್ರವಾಗಿ ವರ್ತಿಸುತ್ತಿದ್ದರಿಂದ ಮಕ್ಕಳು ಭಯಪಟ್ಟು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದರು.

    ಶಿಕ್ಷಕನ ವರ್ತನೆಯ ಬಗ್ಗೆ ಪೋಷಕರು ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿದ್ದ ಮುಂಡಗೋಡ ಬಿಇಓ ಬಸವರಾಜ್ ಯಾವುದೇ ಮುನ್ಸೂಚನೆ ನೀಡದೇ ಶಾಲೆಗೆ ಭೇಟಿ ನೀಡಿದ್ದರು. ಈ ಶಾಲೆಯಲ್ಲಿಯೇ ಭಗವಂತನಿದ್ದಾನೆ. ಇಲ್ಲಿಯೂ ಭಗವಂತನಿದ್ದು, ನನ್ನ ಕಣ್ಣಿಗೆ ಕಾಣಿಸುತ್ತಿದ್ದಾನೆ. ಆದ್ರೆ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವಲ್ಲ. ಕೊನೆಗೆ ಶಿಕ್ಷಕ ಪ್ರಹ್ಲಾದ್ ತಪ್ಪೊಪ್ಪಿಕೊಂಡು ಬಿಇಓ ಕಾಲಿಗೆ ನಮಸ್ಕರಿಸಿ ಕ್ಷಮೆ ಕೇಳಿದ್ದಾನೆ.

  • ಮಕ್ಕಳ ಮೇಲೆ ಶಿಕ್ಷಕಿಯ ರಾಕ್ಷಸಿ ವರ್ತನೆ – ಕಟ್ಟಿಗೆಯಲ್ಲಿ ಬಿತ್ತು ಮಕ್ಕಳಿಗೆ ಗೂಸಾ

    ಮಕ್ಕಳ ಮೇಲೆ ಶಿಕ್ಷಕಿಯ ರಾಕ್ಷಸಿ ವರ್ತನೆ – ಕಟ್ಟಿಗೆಯಲ್ಲಿ ಬಿತ್ತು ಮಕ್ಕಳಿಗೆ ಗೂಸಾ

    ಬೆಳಗಾವಿ: ಮಕ್ಕಳು ತಪ್ಪು ಮಾಡಿದರೆ ಅವರಿಗೆ ತಿದ್ದಿ ಬುದ್ಧಿ ಹೇಳುವುದು ಶಿಕ್ಷಕರ ಕರ್ತವ್ಯವಾಗಿರುತ್ತೆ. ಆದರೆ ಇಲ್ಲೊಬ್ಬ ಶಿಕ್ಷಕಿ ಮಕ್ಕಳ ಮೇಲೆ ಅಮಾನವೀಯ ರೀತಿ ಹಲ್ಲೆ ಮಾಡಿದ್ದಾರೆ.

    ತರಗತಿಯಲ್ಲಿ ವಿದ್ಯಾರ್ಥಿಗಳು ಮಾತನಾಡುವುದನ್ನೇ ಗದ್ದಲ ಎಂದು ಬಿಂಬಿಸಿ ಶಿಕ್ಷಕಿ ಮಕ್ಕಳನ್ನು ಮನ ಬಂದಂತೆ ಕಟ್ಟಿಗೆಯಿಂದ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂಥಹದೊಂದು ಅಮಾನವಿಯ ಕೃತ್ಯ ನಡೆದಿದೆ. ನಮಗೆ ಈ ಶಿಕ್ಷಕಿ ಬೇಡ ಎಂದು ಮಕ್ಕಳು ಗೋಗರೆಯುತ್ತಿದ್ದಾರೆ.

    ಅರ್ಚನಾ ಸಾಗರ ಮಕ್ಕಳ ಮೇಲೆ ರಾಕ್ಷಿಸಿ ವರ್ತನೆ ಪ್ರದರ್ಶಿಸಿದ ವಿಜ್ಞಾನ ಶಿಕ್ಷಕಿ. 9ನೇ ತರಗತಿ ವಿದ್ಯಾರ್ಥಿಗಳು ತರಗತಿಯಲ್ಲಿ ಮಾತನಾಡುವದನ್ನೇ ಗದ್ದಲ ಎಂದು ಬಿಂಬಿಸಿ ಅರ್ಚನ ಮಕ್ಕಳನ್ನು ಮನ ಬಂದಂತೆ ಕಟ್ಟಿಗೆಯಿಂದ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ. ಈ ಪ್ರೌಢ ಶಾಲೆಯಲ್ಲಿ ಒಟ್ಟು 230 ವಿದ್ಯಾರ್ಥಿಗಳು ಓದುತ್ತಿದ್ದು, ಅರ್ಚನಾ ಶಾಲೆಗೆ ನೇಮಕವಾಗಿ ಬಂದಾಗಿನಿಂದ ಇದೇ ರೀತಿ ದರ್ಪ ಮೆರೆಯುತ್ತಿದ್ದಾರೆ ಎನ್ನಲಾಗಿದೆ. ಶಾಲೆಯಲ್ಲಿ ಸರಿಯಾಗಿ ಪಾಠ ಮಾಡದೆ ಮೊಬೈಲ್ ಫೋನ್‍ನಲ್ಲಿ ಕಾಲಹರಣ ಮಾಡುತ್ತಾರೆ. ಪಾಠ ಮಾಡದೆ ಉತ್ತರ ಹೇಳಿ ಎಂದು ಗದರಿಸುವುದು ಹೊಡೆಯುವುದು ಮಾಡುತ್ತಾರೆ ಎಂದು ಶಾಲಾ ಮಕ್ಕಳ ಆರೋಪಿಸಿದ್ದಾರೆ.

    ಶಾಲಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೀಗಾಗಿ ಅರ್ಚನಾ ಸಿಸಿಟಿವಿ ಇರದ ಜಾಗಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ರಾಕ್ಷಸಿಯವಾಗಿ ವರ್ತಿಸಿದ್ದಾರೆ. ಮಕ್ಕಳ ಬಾಸುಂಡೆ ನೋಡಿ ಪೋಷಕರು ಶಿಕ್ಷಕಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಶಾಲಾ ಸುಧಾರಣಾ ಸಮಿತಿಯವರು ಶಿಕ್ಷಕಿಯ ಮೇಲೆ ಕ್ರಮಕ್ಕೆ ಆಗ್ರಹಿಸಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕಿಗೆ ನೋಟೀಸ್ ನೀಡಲಾಗಿದೆ ಉತ್ತರದ ಬಳಿಕ ಕ್ರಮ ಜರುಗಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಮಕ್ಕಳ ಮೇಲೆ ಶಿಕ್ಷಕಿ ಅರ್ಚನಾ ಸಾಗರ ನಡೆಸಿರುವ ಹಲ್ಲೆಗೆ ಅರ್ಜುನವಾಡ ಗ್ರಾಮದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಪಡುತ್ತಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರಾಯಚೂರು ಶಿಕ್ಷಕಿಯ ಕಡ್ಡಾಯ ವರ್ಗಾವಣೆ ರದ್ದು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರಾಯಚೂರು ಶಿಕ್ಷಕಿಯ ಕಡ್ಡಾಯ ವರ್ಗಾವಣೆ ರದ್ದು

    – ಕೊಟ್ಟ ಮಾತು ಉಳಿಸಿಕೊಂಡ ಶಿಕ್ಷಣ ಸಚಿವರು
    – ತಪ್ಪನ್ನ ತಿದ್ದಿಕೊಂಡ ಶಿಕ್ಷಣ ಇಲಾಖೆ

    ರಾಯಚೂರು: ಬುದ್ಧಿಮಾಂದ್ಯ ಮಗಳ ಆರೈಕೆಗಾಗಿ ವರ್ಗಾವಣೆ ರದ್ದು ಕೋರಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದ ರಾಯಚೂರಿನ ಶಿಕ್ಷಕಿ ಶಾಂತಲಕ್ಷ್ಮಿ ಅವರ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಮೂಲಕ ಅವರ ಕಷ್ಟಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ.

    ನಗರದ ಜಹಿರಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಶಾಂತಲಕ್ಷ್ಮಿ ಅವರಿಗೆ ಶಿಕ್ಷಣ ಸಚಿವರ ಭರವಸೆಯಂತೆ ಕಡ್ಡಾಯ ವರ್ಗಾವಣೆ ರದ್ದಾಗಿದ್ದು, ಹಾಲಿ ಸ್ಥಳದಲ್ಲೇ ಮುಂದುವರಿಯುವ ಅವಕಾಶ ಸಿಕ್ಕಿದೆ. ಬುದ್ಧಿಮಾಂದ್ಯ ಮಗಳನ್ನು ಕರೆದುಕೊಂಡು ಅಧಿಕಾರಿಗಳ ಬಳಿ ತನ್ನ ಕಷ್ಟ ಹೇಳಿಕೊಂಡು ಸಾಕಾಗಿದ್ದ ಶಾಂತಲಕ್ಷ್ಮಿ ಕುರಿತು ಪಬ್ಲಿಕ್ ಟಿವಿ ವರದಿಯನ್ನ ಪ್ರಸಾರ ಮಾಡಿತ್ತು. ವರದಿಗೆ ಎಚ್ಚೆತ್ತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ವತಃ ಶಿಕ್ಷಕಿಯ ಜೊತೆ ದೂರವಾಣಿಯಲ್ಲಿ ಮಾತನಾಡಿ ಅವರ ಕಷ್ಟವನ್ನ ಆಲಿಸಿ, ವರ್ಗಾವಣೆ ರದ್ದುಗೊಳಿಸುವ ಬಗ್ಗೆ ಭರವಸೆಯನ್ನ ನೀಡಿದ್ದರು. ಇದನ್ನೂ ಓದಿ: ಬುದ್ಧಿಮಾಂದ್ಯ ಮಗಳ ಆರೈಕೆಗಾಗಿ ಶಿಕ್ಷಕಿ ಪರದಾಟ – ವರ್ಗಾವಣೆ ರದ್ದು ಮಾಡದೆ ಸತಾಯಿಸ್ತಿರುವ ಶಿಕ್ಷಣ ಇಲಾಖೆ

    ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ ಅಪರ ಆಯುಕ್ತ ನಳಿನ್ ಅತುಲ್ ಕೂಡಲೇ ವರ್ಗಾವಣೆ ರದ್ದುಗೊಳಿಸಿ ಹಿಂದಿನ ಸ್ಥಳದಲ್ಲೇ ಶಿಕ್ಷಕಿ ಶಾಂತಲಕ್ಷ್ಮಿ ಅವರನ್ನು ಮುಂದುವರಿಸುವಂತೆ ಆದೇಶಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು ಉಪನಿರ್ದೇಶಕರಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಈ ಮೂಲಕ ನಿಯಮಬಾಹಿರವಾಗಿ ವರ್ಗಾವಣೆಯ ಶಿಕ್ಷೆಗೆ ಗುರಿಯಾಗಿದ್ದ ಶಿಕ್ಷಕಿ ಶಾಂತಲಕ್ಷ್ಮಿ ಅವರಿಗೆ ನ್ಯಾಯ ದೊರಕಿದೆ. ಇದನ್ನೂ ಓದಿ: ಶಿಕ್ಷಕಿಗೆ ಕರೆ ಮಾಡಿ ಕಷ್ಟ ಆಲಿಸಿದ ಸುರೇಶ್

    ಬುದ್ಧಿಮಾಂದ್ಯ ಮಗಳ ಆರೈಕೆ ಹಾಗೂ ವಿಧವೆಯಾಗಿರುವ ಕಾರಣ ನಿಯಮಾನುಸಾರ ಕಡ್ಡಾಯ ವರ್ಗಾವಣೆಯಲ್ಲಿ ಶಿಕ್ಷಕಿ ಹೆಸರು ನಮೂದಿಸಬಾದರಿತ್ತು. ಶಿಕ್ಷಕಿಗೆ ಆದ ಅನಾನೂಕೂಲ ಪರಿಗಣೆನೆಗೆ ತೆಗೆದುಕೊಂಡು ಮೂಲ ಶಾಲೆಯಲ್ಲಿ ಮುಂದುವರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರು ಆದೇಶಿಸಿದ್ದಾರೆ. ತೆರವಾದ ಸ್ಥಳಕ್ಕೆ ಹಾಜರಾದ ಶಿಕ್ಷಕಿ ಶ್ರೀದೇವಿ ಅವರನ್ನ ನಿಮ್ಮ ಹಂತದಲ್ಲೇ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಿ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನಳೀನ್ ಅತುಲ್ ಸೂಚಿಸಿದ್ದಾರೆ.

    ಏನಿದು ವರ್ಗಾವಣೆ ಪ್ರಕರಣ.?
    ಶಿಕ್ಷಕಿ ಶಾಂತಾಲಕ್ಷ್ಮಿ ಅವರನ್ನ ರಾಯಚೂರಿನಿಂದ ಸುಮಾರು 25 ಕಿ.ಮೀ ದೂರದ ಮಟಮಾರಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಪತಿಯನ್ನು ಕಳೆದುಕೊಂಡ ಶಿಕ್ಷಕಿ ವೃತ್ತಿ ಮಾಡುತ್ತಲೇ ಮಾನಸಿಕ ಅಸ್ವಸ್ಥ ಮಗಳನ್ನು ಸಾಕುತ್ತಿದ್ದಾರೆ. ಈಗ ಏಕಾಏಕಿ ವರ್ಗಾವಣೆಯನ್ನ ವಿರೋಧಿಸಿ, ವರ್ಗಾವಣೆ ರದ್ದುಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.

    ಅಲ್ಲದೆ ಕಡ್ಡಾಯ ವರ್ಗಾವಣೆ ಮಾಡಬೇಕಾದರೂ ಒಂದೇ ಜಾಗದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಆದ್ರೆ ಶಾಂತಲಕ್ಷ್ಮಿ 8 ವರ್ಷಗಳಿಂದ ಸೇವೆ ಮಾಡುತ್ತಿದ್ದು, ಎರಡು ವರ್ಷ ಬಾಕಿಯಿರುವಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು.

    ನಗರ ಪ್ರದೇಶದಿಂದ ನಿಯಮ ಉಲ್ಲಂಘಿಸಿ ಗ್ರಾಮೀಣ ಭಾಗಕ್ಕೆ ವರ್ಗಾವಣೆ ಮಾಡಿದ್ದರ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದನ್ನ ಗಮನಿಸಿದ ಶಿಕ್ಷಣ ಸಚಿವ ಕೂಡಲೇ ಸ್ಪಂದಿಸಿ ವರ್ಗಾವಣೆ ರದ್ದುಗೊಳಿಸುವ ಭರವಸೆ ನೀಡಿದ್ದರು.

  • ಲೈಂಗಿಕವಾಗಿ ಸಹಕರಿಸಿ ಚಿಕನ್ ತಂದುಕೊಟ್ರೆ ಪರೀಕ್ಷೆಯಲ್ಲಿ ಸಹಾಯ ಮಾಡ್ತೇನೆ- ವಿಕೃತ ಶಿಕ್ಷಕ

    ಲೈಂಗಿಕವಾಗಿ ಸಹಕರಿಸಿ ಚಿಕನ್ ತಂದುಕೊಟ್ರೆ ಪರೀಕ್ಷೆಯಲ್ಲಿ ಸಹಾಯ ಮಾಡ್ತೇನೆ- ವಿಕೃತ ಶಿಕ್ಷಕ

    ರಾಯಪುರ: ಪರೀಕ್ಷೆಯಲ್ಲಿ ಸಹಾಯ ಮಾಡಬೇಕಿದ್ದರೆ ನನ್ನ ಜೊತೆ ಲೈಂಗಿಕವಾಗಿ ಸಹಕರಿಸಿ, ಚಿಕನ್ ಊಟ ತಂದು ಕೊಡಬೇಕು ಎಂಬ ವಿಚಿತ್ರ ಬೇಡಿಕೆಯನ್ನು ಶಿಕ್ಷಕನೊಬ್ಬ ಇಟ್ಟಿದ್ದಾನೆ.

    ಛತ್ತಿಸ್‍ಗಢದ ಜಶ್‍ಪುರದಲ್ಲಿ ಘಟನೆ ನಡೆದಿದೆ. 12ನೇ ತರಗತಿ ವಿದ್ಯಾರ್ಥಿನಿಯರು ಈ ಕುರಿತು ಆರೋಪಿಸಿದ್ದಾರೆ. ಶಿಕ್ಷಕ ರಾಜೇಶ್ ಕುಮಾರ್ ಭಾರದ್ವಾಜ್ ಈ ವಿಚಿತ್ರ ಬೇಡಿಕೆ ಇಟ್ಟಿದ್ದು, ಈಡೇರಿಸದಿದ್ದಲ್ಲಿ ಪರೀಕ್ಷೆಯಲ್ಲಿ ನಿಮ್ಮನ್ನು ಅನುತ್ತೀರ್ಣಗೊಳಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ.

    ಲೈಂಗಿಕ ಸಂಬಂಧ ಬೆಳೆಸಲು ಶಿಕ್ಷಕ ಪೀಡಿಸುತ್ತಿದ್ದ. ಇದೆಲ್ಲ ಬೇಡಿಕೆಗಳು ಮಾತ್ರವಲ್ಲದೆ ಚಿಕ್ಕನ್ ತಂದು ಕೊಡುವಂತೆ ಕೇಳಿಕೊಳ್ಳುತ್ತಿದ್ದ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

    ಅವನಿಗೆ ನಾನು ಚಿಕ್ಕನ್ ತಂದು ಕೊಡಬೇಕಂತೆ. ಇಲ್ಲವಾದಲ್ಲಿ ಪರೀಕ್ಷೆಯಲ್ಲಿ ಫೇಲ್ ಮಾಡುತ್ತೇನೆ ಎಂದು ಹೆದರಿಸಿದ್ದ. ಶಾಲೆಯಲ್ಲಿ ಕಿರುಕುಳ ನೀಡಿದ್ದು ಮಾತ್ರವಲ್ಲದೆ ಮೊಬೈಲಿನಲ್ಲಿ ಸಂದೇಶ ಸಹ ಕಳುಹಿಸಲು ಪ್ರಾರಂಭಿಸಿದ್ದ. ಪದೇ ಪದೆ ಸಂದೇಶ ಕಳುಹಿಸಿ, ಯಾಕೆ ನನ್ನೊಂದಿಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದ ಎಂದು ಇನ್ನೊಬ್ಬ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಈ ರೀತಿಯ ಬೇಡಿಕೆಗಳನ್ನು ಈಡೇರಿಸಿದರೆ ಇತಿಹಾಸ ಪರೀಕ್ಷೆಯಲ್ಲಿ ಕಾಪಿ ಮಾಡಲು ಪ್ರೋತ್ಸಾಹ ನೀಡುವುದಾಗಿ ಶಿಕ್ಷಕ ತಿಳಿಸಿದ್ದ ಎಂದು ವಿದ್ಯಾರ್ಥಿನಿಯರ ಗುಂಪೊಂದು ತಿಳಿಸಿದೆ.

    ಈ ಕುರಿತು ಶಿಕ್ಷಕ ರಾಜೇಶ್ ಕುಮಾರ್ ಭಾರದ್ವಾಜ್ ಪ್ರತಿಕ್ರಿಯಿಸಿ, ನಾನು ಆ ರೀತಿಯಾಗಿ ಹೇಳಿಲ್ಲ. ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ನಾನು ಮನರಂಜನೆಗಾಗಿ ಬಳಸಿಕೊಳ್ಳುತ್ತೇನೆ ಅಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಶಿಕ್ಷಕ ಸ್ಪಷ್ಟಪಡಿಸಿದ್ದಾನೆ.

    ಈ ಕುರಿತು ಜಿಲ್ಲಾ ಶಿಕ್ಷಣ ಅಧಿಕಾರಿ(ಡಿಇಓ) ಎನ್.ಕುಜುರ್ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ವಿಷಯ ತಿಳಿದ ನಂತರ ಎಚ್ಚೆತ್ತುಕೊಳ್ಳಲಾಗಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿವುದು. ಇದು ತುಂಬಾ ಗಂಭೀರ ಪ್ರಕರಣವಾಗಿದ್ದು, ಆರೋಪಿ ಶಿಕ್ಷಕನ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

  • ಕಾಮುಕರ ಅಟ್ಟಹಾಸ- ಶಿಕ್ಷಕಿ ಮೇಲೆ ಗ್ಯಾಂಗ್ ರೇಪ್, ಲೈಂಗಿಕ ಕಿರುಕುಳಕ್ಕೆ ಯುವತಿ ಬಲಿ

    ಕಾಮುಕರ ಅಟ್ಟಹಾಸ- ಶಿಕ್ಷಕಿ ಮೇಲೆ ಗ್ಯಾಂಗ್ ರೇಪ್, ಲೈಂಗಿಕ ಕಿರುಕುಳಕ್ಕೆ ಯುವತಿ ಬಲಿ

    ಭೋಪಾಲ್: ಹೈದರಾಬಾದ್ ಪಶುವೈದ್ಯೆ ಹಾಗೂ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬಗ್ಗೆ ಇಡೀ ದೇಶವೇ ಮಮ್ಮಲ ಮರುಗಿ, ಕಾಮುಕರ ವಿರುದ್ಧ ಸಿಡಿದೆದ್ದಿದೆ. ಈ ಕಿಚ್ಚಿನ ಬಿಸಿ ಆರುವ ಮುನ್ನವೇ ಮಧ್ಯಪ್ರದೇಶದಲ್ಲಿ ಕಾಮುಕರು ಅಟ್ಟಹಾಸ ಮೆರೆದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

    ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಶಾಲಾ ಶಿಕ್ಷಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಇತ್ತ ಧಾಮೋಹ್ ಜಿಲ್ಲೆಯಲ್ಲಿ ಯುವತಿಯೊಬ್ಬಳು ಕಾಮಪಿಶಾಚಿಗಳ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ 4 ವರ್ಷದ ಬಾಲಕಿಯನ್ನು ಅತ್ಯಚಾರಗೈದು ವಿಕೃತಿ ಮೆರೆದಿದ್ದ ಕಾಮುಕರಿಗೆ ಪೊಲೀಸರ ಎದುರೇ ವಕೀಲರ ತಂಡ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇಂದೋರ್ ನ ಮ್ಹಾವ್ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: 7ರ ಬಾಲೆಯನ್ನ ಅತ್ಯಾಚಾರಗೈದ ಕಾಮುಕನಿಗೆ 10 ವರ್ಷ ಜೈಲು ಶಿಕ್ಷೆ

    ಗುರುವಾರ ಶಾಲೆ ಮುಗಿಸಿಕೊಂಡು ಶಿಕ್ಷಕಿ ಸಂಜೆ ಸುಮಾರು 5 ಗಂಟೆಗೆ ಮನೆಗೆ ತೆರಳುತ್ತಿದ್ದಾಗ ಕಾಮುಕರು ಆಕೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿರುವುದು ಬೆಳಕಿಗೆ ಬಂದಿದೆ. ಅತ್ಯಾಚಾರ ಮಾಡಿದ ನಂತರ ಶಿಕ್ಷಕಿಯ ಜ್ಞಾನತಪ್ಪಿದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಕೆಲ ಸಮಯದ ನಂತರ ಶಿಕ್ಷಕಿಗೆ ಎಚ್ಚರವಾಗಿ ಮನೆಗೆ ಹೋಗಿ ಕುಟುಂಬಸ್ಥರ ಬಳಿ ನಡೆದ ಘಟನೆಯನ್ನು ತಿಳಿಸಿದ್ದರು. ಆಗ ಕುಟುಂಬಸ್ಥರು ರಾಂಪುರ್ ನೈಕಿನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ದುರುಳರ ಕ್ರೌರ್ಯಕ್ಕೆ ಮತ್ತೊಂದು ಬಲಿ – ಬದುಕಲಿಲ್ಲ ಬೆಂಕಿಯಲ್ಲಿ ಬೆಂದ ಉನ್ನಾವ್ ಸಂತ್ರಸ್ತೆ

    ಶಿಕ್ಷಕಿ ದೂರು ಕೊಟ್ಟ ತಕ್ಷಣ ಕಾರ್ಯನಿರತರಾದ ಪೊಲೀಸರು ಕೃತ್ಯವೆಸೆಗಿದ್ದ ಬಚ್ಚು ಲೋನಿಯಾ, ಬೀರು ಲೋನಿಯಾ, ನರೇಂದ್ರ ಲೋನಿಯಾ ಮತ್ತು ಶಿವ್ ಶಂಕರ್ ಲೋನಿಯಾನನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಈ ಎಲ್ಲಾ ಆರೋಪಿಗಳು ಈ ಹಿಂದೆ ಕೂಡ ಪ್ರಕರಣಗಳಲ್ಲಿ ಭಾಗಿಯಾದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಧಾಮೋಹ್‍ನಲ್ಲಿ 17 ವರ್ಷದ ಯುವತಿಗೆ ಪ್ರತಿನಿತ್ಯ ಸ್ಥಳೀಯ ಯುವಕರು ಲೈಂಗಿಕ ಕಿರುಕುಳವನ್ನು ಕೊಡುತ್ತಿದ್ದರು. ಕಾಮುಕರ ಅಟ್ಟಹಾಸಕ್ಕೆ ರೋಸಿಹೋಗಿದ್ದ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಯುವತಿ ಕುಟುಂಬಸ್ಥರು, ಸ್ಥಳೀಯರ ಹೇಳಿಕೆಗಳನ್ನು ಪೊಲೀಸರು ಪಡೆದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಟಿಕೆ ಕೊಡಿಸುವುದಾಗಿ ಹೇಳಿ 9 ತಿಂಗಳ ಕಂದಮ್ಮನ ಮೇಲೆ ರೇಪ್

    ರಾಜ್ಯದಲ್ಲಿ ನಡೆದ ಈ ಘಟನೆಗಳ ಬಗ್ಗೆ ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಅವರು ಪ್ರತಿಕ್ರಿಯಿಸಿ, ಮಧ್ಯಪ್ರದೇಶವನ್ನು ಮತ್ತೊಂದು ಉತ್ತರ ಪ್ರದೇಶವಾಗಲು ಬಿಡುವುದಿಲ್ಲ. ಈ ರೀತಿಯ ಪ್ರಕರಣ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಮಹಿಳೆಯರ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

  • ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ – ಶಿಕ್ಷಕಿಗೆ ಕರೆ ಮಾಡಿ ಕಷ್ಟ ಆಲಿಸಿದ ಸುರೇಶ್ ಕುಮಾರ್

    ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ – ಶಿಕ್ಷಕಿಗೆ ಕರೆ ಮಾಡಿ ಕಷ್ಟ ಆಲಿಸಿದ ಸುರೇಶ್ ಕುಮಾರ್

    ರಾಯಚೂರು: ಬುದ್ಧಿಮಾಂದ್ಯ ಮಗಳ ಆರೈಕೆಗಾಗಿ ವರ್ಗಾವಣೆ ರದ್ದು ಕೋರಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದ ರಾಯಚೂರಿನ ಶಿಕ್ಷಕಿಯ ಅಳಲು ಕೊನೆಗೂ ಸರ್ಕಾರದ ಕಿವಿ ಮುಟ್ಟಿದೆ.

    ಪಬ್ಲಿಕ್ ಟಿವಿ ವರದಿಯನ್ನ ಗಮನಿಸಿ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಕಿ ಶಾಂತಲಕ್ಷ್ಮಿಗೆ ಮೊಬೈಲ್ ಕರೆ ಮಾಡಿ ಕಷ್ಟ ಆಲಿಸಿದ್ದಾರೆ. ಸಮಸ್ಯೆಯ ಕುರಿತು ವಿಚಾರಿಸಿ ಸಂಪೂರ್ಣ ವಿವರವನ್ನು ಮೆಸೇಜ್ ಮೂಲಕ ಕಳುಹಿಸಲು ಹೇಳಿದ್ದು, ಕೋರಿಕೆಯಂತೆ ವರ್ಗಾವಣೆ ರದ್ದುಗೊಳಿಸುವುದಾಗಿ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ. ಸ್ವತಃ ಸಚಿವರೇ ಫೋನ್ ಮಾಡಿ ಭರವಸೆ ನೀಡಿದ್ದು ನನಗೆ ಧೈರ್ಯ ತಂದಿದೆ ಎಂದು ಶಿಕ್ಷಕಿ ಶಾಂತಾಲಕ್ಷ್ಮಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ರಾಯಚೂರು ನಗರದ ಜಹೀರಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಶಾಂತಾಲಕ್ಷ್ಮಿ ಅವರನ್ನು ರಾಯಚೂರಿನಿಂದ ಸುಮಾರು 25 ಕಿ.ಮೀ ದೂರದ ಮಟಮಾರಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಪತಿಯನ್ನು ಕಳೆದುಕೊಂಡು ಶಿಕ್ಷಕಿ ವೃತ್ತಿ ಮಾಡುತ್ತಲೇ ಮಾನಸಿಕ ಅಸ್ವಸ್ಥ ಮಗಳನ್ನು ಸಾಕುತ್ತಿರುವ ಶಿಕ್ಷಕಿ ಶಾಂತಾಲಕ್ಷ್ಮಿ ಏಕಾಏಕಿ ಮಾಡಲಾದ ವರ್ಗಾವಣೆಯನ್ನ ವಿರೋಧಿಸಿ, ವರ್ಗಾವಣೆ ರದ್ದುಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

    ಕಡ್ಡಾಯ ವರ್ಗಾವಣೆ ಮಾಡಬೇಕಾದರೂ ಒಂದೇ ಜಾಗದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಆದರೆ ಶಾಂತಲಕ್ಷ್ಮಿ 8 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಮಾಡುತ್ತಿದ್ದು, ಇನ್ನೂ ಎರಡು ವರ್ಷ ಬಾಕಿಯಿರುವಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ನಗರ ಪ್ರದೇಶದಿಂದ ನಿಯಮ ಉಲ್ಲಂಘಿಸಿ ಗ್ರಾಮೀಣ ಭಾಗಕ್ಕೆ ವರ್ಗಾವಣೆ ಮಾಡಿದ್ದರ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದನ್ನು ಗಮನಿಸಿದ ಶಿಕ್ಷಣ ಸಚಿವರು ಕೂಡಲೇ ಸ್ಪಂದಿಸಿದ್ದು ವರ್ಗಾವಣೆ ರದ್ದುಗೊಳಿಸುವ ಭರವಸೆ ನೀಡಿದ್ದಾರೆ.