Tag: teacher

  • ಪ್ರೀತಿಯ ಶಿಕ್ಷಕನಿಗಾಗಿ ಹಾಡು ರಚಿಸಿ, ಉಡುಗೊರೆ ಕೊಟ್ಟು ಬೀಳ್ಕೊಟ್ಟ ವಿದ್ಯಾರ್ಥಿಗಳು

    ಪ್ರೀತಿಯ ಶಿಕ್ಷಕನಿಗಾಗಿ ಹಾಡು ರಚಿಸಿ, ಉಡುಗೊರೆ ಕೊಟ್ಟು ಬೀಳ್ಕೊಟ್ಟ ವಿದ್ಯಾರ್ಥಿಗಳು

    ಬೀದರ್: ಶಿಕ್ಷಕ ವೃತ್ತಿಯೇ ಹಾಗೇ. ಒಂದಿಷ್ಟು ಮುಗ್ಧ ಮನಸ್ಸುಗಳ ನಿಷ್ಕಲ್ಮಶ ಪ್ರೀತಿ ಸಂಪಾದಿಸುತ್ತದೆ. ಇಂತಹ ಪ್ರೀತಿಗೆ ಬಸವಣ್ಣ ಕರ್ಮಭೂಮಿ ಸಾಕ್ಷಿಯಾಗಿದೆ.

    ಶರಣು ಎಂಬವರು ಹತ್ತರ್ಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 12 ವರ್ಷದಿಂದ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚಿಗೆ ಅವರಿಗೆ ಕಲುಬುರಗಿಗೆ ವರ್ಗಾವಣೆಯಾಗಿತ್ತು. ಹೀಗಾಗಿ ಹತ್ತರ್ಗಾ ಶಾಲೆಯ ಮಕ್ಕಳು ತಮ್ಮ ಪ್ರೀತಿಯ ಶಿಕ್ಷಕರನ್ನು ಒಲ್ಲದ ಮನಸ್ಸಿನಲ್ಲಿ ಬೀಳ್ಕೊಟ್ಟಿದ್ದಾರೆ.

    ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತ್ತೆ’ ಹಾಡಿಗೆ ತಮ್ಮದೆ ಶೈಲಿಯಲ್ಲಿ ಪದ ರಚನೆ ಮಾಡಿ ಹಾಡೊಂದನ್ನು ರಚಿಸಿದ್ದಾರೆ. ಜೊತೆಗೆ ಸನ್ಮಾನ ಮಾಡಿ ಪೆನ್ನು, ಗಡಿಯಾರ, ಸೇರಿದಂತೆ ಗುರು ಕಾಣಿಕೆ ಎಂಬಂತೆ ತಮ್ಮ ಉಡುಗೊರೆ ನೀಡಿದ್ದಾರೆ.

    ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಹತ್ತರ್ಗಾ ಶಾಲೆಯ ವಿದ್ಯಾರ್ಥಿಗಳ ಈ ರೀತಿ ಗುರು ಪ್ರೀತಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳ ಪ್ರೀತಿ ಕಂಡು ಶಿಕ್ಷಕ ಶರಣು ಭಾವುಕರಾಗಿದ್ದು, ಗುರುವಿನ ಸ್ಥಾನಕ್ಕೆ ಗೌರವ ಸಿಕ್ಕಂತ್ತಾಗಿದೆ.

  • ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ ಸರ್ಕಾರಿ ಶಾಲೆ – ಶಿಕ್ಷಕನ ಪರಿಶ್ರಮಕ್ಕೆ ಗ್ರಾಮಸ್ಥರು ಫಿದಾ

    ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ ಸರ್ಕಾರಿ ಶಾಲೆ – ಶಿಕ್ಷಕನ ಪರಿಶ್ರಮಕ್ಕೆ ಗ್ರಾಮಸ್ಥರು ಫಿದಾ

    ಚಿತ್ರದುರ್ಗ: ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯೋರೇ ಹೆಚ್ಚು. ಆದರೆ ಸರ್ಕಾರಿ ಶಾಲೆಯು ಸಹ ಖಾಸಗಿ ಶಾಲೆಗಳಿಗಿಂತ ಕಮ್ಮಿ ಏನಿಲ್ಲ ಎಂಬುದನ್ನು ಸಾಭೀತು ಮಾಡಲು ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಅಜ್ಜನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಮಂಜಪ್ಪ ಮುಂದಾಗಿದ್ದಾರೆ.

    ಚಿತ್ರಕಲೆ ಪ್ರಾವಿಣ್ಯತೆ ಹೊಂದಿರುವ ಚಳ್ಳಕೆರೆಯ ಕಲಾವಿದರನ್ನು ಕರೆಸಿ, ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸುಲಭವಾಗಿ ಪಾಠ ಪ್ರವಚನ ಅರ್ಥವಾಗುವಂತೆ ಗೋಡೆಯ ಮೇಲೆ ಬಣ್ಣ ಬಣ್ಣದ ಸುಂಧರ ಚಿತ್ತಾರಗಳನ್ನು ಅರಳಿಸಿರುವ ಕಾರ್ಯವನ್ನು ಮಾಡುತ್ತಿದ್ದಾರೆ. ಅಜ್ಜನಹಳ್ಳಿಯ ಸರ್ಕಾರಿ ಶಾಲೆಯ ನಲಿ-ಕಲಿ ಕೊಠಡಿ ಮತ್ತು ಕಲಿಕೆಯ ಪಯಣಕ್ಕೆ ಸಿದ್ಧತೆಗೊಂಡಿರುವ ಚಿಣ್ಣರ ಎಕ್ಸ್ ಪ್ರೆಸ್ ರೈಲು ಅನಾವರಣಗೊಂಡಿದೆ.

    ಸತತ 4-5 ವರ್ಷಗಳಿಂದ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಎಸ್.ಡಿ.ಎಮ್.ಸಿ.ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ವನ ಮಹೋತ್ಸವ ಕಾರ್ಯಕ್ರಮದ ಮೂಲಕ 150*130 ಅಡಿ ವಿಸ್ತೀರ್ಣವನ್ನು ಹೊಂದಿರುವ ವಿಶಾಲವಾದ ಶಾಲಾ ಮೈದಾನದಲ್ಲಿ ಕೊಠಡಿಗಳನ್ನು ಹೊರತುಪಡಿಸಿ ಉಳಿದಿರುವ ಮೈದಾನದ ತುಂಬೆಲ್ಲಾ ವಿವಿಧ ಜಾತಿಯ ಸುಮಾರು 160 ಕ್ಕೂ ಹೆಚ್ಚು ಸಸಿಗಳನ್ನು ಸಾಲು ಸಾಲಾಗಿ ನೆಟ್ಟು ಪೋಷಿಸಿಲಾಗುತ್ತಿದೆ. ಈಗ ಶಾಲಾ ಆವರಣದಲ್ಲಿರುವ ಎಲ್ಲಾ ಸಸಿಗಳು ಬೆಳೆದು ಬೃಹತ್ ಮರಗಳಾಗಿವೆ. ಸದ್ಯ ಬರದ ನಾಡಿನಲ್ಲಿ ಈ ಶಾಲಾ ಪರಿಸರ ಒಂದು ಸುಂದರ ವನವಂತಾಗಿದೆ.

    ಶಾಲೆಯ ಅಭಿವೃದ್ಧಿ ಹಾಗೂ ಕಾರ್ಯ ಚಟುವಟಿಕೆಗಳನ್ನು ಕೆಲವೊಮ್ಮೆ ರಜಾದಿನಗಳಲ್ಲೂ ನಿಸ್ವಾರ್ಥದಿಂದ ಮಾಡುತ್ತಾ ಬಂದಿದ್ದಾರೆ. ಈ ಸಂಬಂಧ ಶಿಕ್ಷಕ ಮಂಜಪ್ಪನವರ ಕುಟುಂಬದ ಸದಸ್ಯರು ಅವರೊಂದಿಗೆ ಮುನಿಸಿಕೊಂಡಿದ್ದುಂಟು. ಆದರೂ, ಸಹ ಅವರ ವೈಯುಕ್ತಿಕ ಕೆಲಸಗಳನ್ನೂ ಬದಿಗಿಟ್ಟು ಶಾಲೆಯ ಆವರಣದಲ್ಲಿ ಸುಂದರ ಪರಿಸರ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ಮಾಡಿರುವ ಸೇವೆಗೆ ಗ್ರಾಮಸ್ಥರು ಫುಲ್ ಫಿದಾ ಆಗಿದ್ದಾರೆ.

    ಸತತ 10 ವರ್ಷಗಳಿಂದ ತಮ್ಮ ಛಲ ಬಿಡದೆ ಮಾಡಿದ ಶ್ರಮ ಶಾಲೆಯ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದೆ. ಇದು ಶಿಕ್ಷಕರಿಗೆ ತೃಪ್ತಿ ಮತ್ತು ಸಮಾಧಾನ ತಂದಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಾ ಖಾಸಗಿ ಶಾಲೆಯನ್ನೇ ಮೀರಿಸುವಂತಿರುವ ಸರ್ಕಾರಿ ಶಾಲೆಯಲ್ಲಿ ಇರುವ ಇವರೊಬ್ಬರೇ ಶಿಕ್ಷಕರು ಇಷ್ಟೆಲ್ಲಾ ಸೇವೆ ಮಾಡುತ್ತಿದ್ದಾರೆ.

    ಸಾಧನೆಯ ಗುರಿಯೆಂಬುದು ಅನಂತ ಮತ್ತು ಅಪರಿಮಿತ ಎಂಬಂತೆ ಶಿಕ್ಷಕ ಮಂಜಪ್ಪ ಅವರು, ಸದರಿ ಶಾಲೆಯ 10 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ನಿಸ್ವಾರ್ಥ, ಪ್ರಾಮಾಣಿಕ ಸೇವೆ ಮಾಡಿದ್ದಾರೆ. ಈ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವ, ಉತ್ತಮ ವಾತಾವರಣವನ್ನು ಕಲ್ಪಿಸಿರುವ ಹಾಗೂ ನಿರಂತರ ಪ್ರೋತ್ಸಾಹ, ಸಹಕಾರವನ್ನು ನೀಡುತ್ತಿರುವ ಗ್ರಾಮದ ಹಳೆಯ ವಿದ್ಯಾರ್ಥಿಗಳು, ಶಾಲಾ ಎಸ್.ಡಿ.ಎಂ.ಸಿ. ಸಮುದಾಯ ವರ್ಗದವರಿಗೆ ಹಾಗೂ ಸದಾ ಎಲ್ಲಾ ಕಾರ್ಯಗಳಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಿದ್ದಾರೆ.

  • ಇಯರ್‌ಫೋನ್ ಹಾಕಿಕೊಂಡು ಹಳಿ ದಾಟುವಾಗ ರೈಲು ಡಿಕ್ಕಿ – ಶಿಕ್ಷಕಿ ಸ್ಥಳದಲ್ಲೇ ಸಾವು

    ಇಯರ್‌ಫೋನ್ ಹಾಕಿಕೊಂಡು ಹಳಿ ದಾಟುವಾಗ ರೈಲು ಡಿಕ್ಕಿ – ಶಿಕ್ಷಕಿ ಸ್ಥಳದಲ್ಲೇ ಸಾವು

    ಚಂಡೀಗಢ: ಇಯರ್‌ಫೋನ್ ಹಾಕಿಕೊಂಡು ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಶಿಕ್ಷಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಹರಿಯಾಣದ ಯಮುನಾನಗರದಲ್ಲಿ ನಡೆದಿದೆ.

    ಹರ್ಮಿಂದರ್ ಕೌರ್(26) ಮೃತಪಟ್ಟ ಶಿಕ್ಷಕಿ. ಹರ್ಮಿಂದರ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶಾಲೆ ಮುಗಿದ ನಂತರ ಹರ್ಮಿಂದರ್ ಇಯರ್‌ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಮನೆಗೆ ಹೋಗುತ್ತಿದ್ದರು.

    ಈ ವೇಳೆ ಹಳಿ ದಾಟುವಾಗ ಅಂಬಾಲಾದಿಂದ ಪ್ಯಾಸೆಂಜರ್ ರೈಲು ಬರುತ್ತಿತ್ತು. ಇಯರ್‌ಫೋನ್ ಹಾಕಿದ್ದ ಕಾರಣ ಹರ್ಮಿಂದರ್ ಗೆ ರೈಲಿನ ಶಬ್ದ ಕೇಳಲಿಲ್ಲ. ಹಾಗಾಗಿ ರೈಲು ಡಿಕ್ಕಿಯಾಗಿ ಹರ್ಮಿಂದರ್ ಕೌರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಘಟನೆ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಯಿತು.

    ಈ ಬಗ್ಗೆ ಜಿಆರ್ ಪಿ ಪೊಲೀಸ್ ಅಧಿಕಾರಿ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ, ಶಿಕ್ಷಕಿ ಇಯರ್‌ಫೋನ್ ಹಾಕಿದ ಕಾರಣ ರೈಲಿನ ಶಬ್ದ ಕೇಳಿಸಲಿಲ್ಲ. ಹಾಗಾಗಿ ರೈಲು ಡಿಕ್ಕಿಯಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.

  • ಮೂರು ತಿಂಗಳಿಂದ ಶಾಲೆಗೆ ಚಕ್ಕರ್ ಹಾಕಿದ ಶಿಕ್ಷಕರಿಗೆ ಮಕ್ಕಳಿಂದ ಕ್ಲಾಸ್

    ಮೂರು ತಿಂಗಳಿಂದ ಶಾಲೆಗೆ ಚಕ್ಕರ್ ಹಾಕಿದ ಶಿಕ್ಷಕರಿಗೆ ಮಕ್ಕಳಿಂದ ಕ್ಲಾಸ್

    ಕಾರವಾರ: ಮಕ್ಕಳು ಶಾಲೆಗೆ ಚಕ್ಕರ್ ಹೊಡೆಯುವುದು ಮಾಮೂಲಿ. ಆದರೆ ಉತ್ತರ ಕನ್ನಡ ಜಿಲ್ಲೆಯ ಮಂಡಗೋಡಿನಲ್ಲಿ ಶಿಕ್ಷಕರೇ ಶಾಲೆಗೆ ಚಕ್ಕರ್ ಹೊಡೆದು ಮಕ್ಕಳಿಂದ ಪಾಠ ಹೇಳಿಸಿಕೊಂಡಿದ್ದಾರೆ.

    ಕಳೆದ ಮೂರು ತಿಂಗಳಿಂದ ಶಾಲೆಗೆ ಶಿಕ್ಷಕರು ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯ ಎದುರು ಪ್ರತಿಭಟನೆ ನಡೆಸಿ ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಂಡಗೋಡ ತಾಲೂಕಿನ ಬದ್ರಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಶಿಕ್ಷಕರನ್ನು ಹೊಂದಿದ್ದು, 50 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

    ಕಳೆದ ಮೂರು ತಿಂಗಳಿಂದ ಮಕ್ಕಳಿಗೆ ಪಾಠ ಮಾಡದೇ ಶಿಕ್ಷಕ ಜಾವಳಗಿ, ಶಿಕ್ಷಕಿ ನಾಗಮಣಿ, ಶಾರದ ಎಂಬವರು ಗೈರಾಗುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಶಿಕ್ಷಕಿ ನಾಗಮಣಿ ಅವರಿಗೆ ಅಪಘಾತದಲ್ಲಿ ಕೈ ಮುರಿದಿದ್ದು, ಈ ಕಾರಣದಿಂದ ರಜೆ ಹಾಕಿದ್ದಾರೆ. ಇವರ ಜಾಗಕ್ಕೆ ಶಾರದ ಅವರನ್ನು ಬದಲಿ ನಿಯುಕ್ತಿ ಮಾಡಲಾಗಿದೆ. ಆದರೆ ಶಾಲೆಗೆ ಈ ಶಿಕ್ಷಕರು ಕಳೆದ ಮೂರು ತಿಂಗಳಿಂದ ಬಾರದೇ ಚಕ್ಕರ್ ಹಾಕುತ್ತಿದ್ದರು.

    ಪ್ರತಿದಿನ ಶಾಲೆಗೆ ಮಕ್ಕಳು ಬಂದು ಬೀಗ ಹಾಕಿರುವುದನ್ನು ನೋಡಿ ಮನೆಗೆ ಮರಳುತ್ತಿದ್ದರು. ಇದಲ್ಲದೇ ಈ ಕುರಿತು ಶಾಲೆಯ ಎಸ್‍ಡಿಎಂಸಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಹ ನೀಡಿದ್ದಾರೆ. ಆದರೆ ಕಾರಣವೇ ಇಲ್ಲದೇ ಗೈರಾಗಿರುವ ಈ ಶಿಕ್ಷಕರ ವಿರುದ್ಧ ಯಾವ ಕ್ರಮವೂ ಜರುಗಿರಲಿಲ್ಲ. ಈ ಕಾರಣದಿಂದ ಇಂದು ಶಾಲೆಗೆ ಬಂದ ಮಕ್ಕಳು ಬೀಗ ಹಾಕಿರುವ ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.

    ಪ್ರತಿಭಟನೆ ವಿಷಯ ಶಿಕ್ಷಕರ ಕಿವಿಗೂ ಬಿದ್ದಿದ್ದು ನಂತರ ಶಾಲೆಗೆ ದೌಡಾಯಿಸಿದ್ದು, ಮಕ್ಕಳ ಹಾಗೂ ಪೊಷಕರ ಮುಂದೆ ನಾಟಕವಾಡಿದ್ದಾರೆ. ಮಕ್ಕಳು ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದು ಶಾಲೆಗೆ ಪ್ರತಿದಿನ ಬರುವಂತೆ ಹಾಗೂ ಪಾಠ ಮಾಡುವಂತೆ ಆಗ್ರಹಿಸಿದರು.

  • ಇಂದೇ ವಿಶ್ವಮಾನವ ದಿನಾಚರಣೆ ಆಚರಿಸಿ ಶಿಕ್ಷಕ ಎಡವಟ್ಟು

    ಇಂದೇ ವಿಶ್ವಮಾನವ ದಿನಾಚರಣೆ ಆಚರಿಸಿ ಶಿಕ್ಷಕ ಎಡವಟ್ಟು

    ಚಿಕ್ಕೋಡಿ: ಡಿ.29 ರಂದು ಆಚರಿಸಬೇಕಾದ ವಿಶ್ವಮಾನವ ದಿನಾಚರಣೆಯನ್ನು ಇಂದೇ ಆಚರಿಸಿದ ಶಿಕ್ಷಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ವಿಶ್ವ ಮಾನವ ದಿನಾಚರಣೆ ಆಚರಣೆ ಮಾಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ ನಾಳೆ ಭಾನುವಾರ ರಜೆ ಇರುವುದರಿಂದ ಇಂದೇ ಕುವೆಂಪು ಅವರ ಫೋಟೋಗೆ ಪೂಜೆ ಸಲ್ಲಿಸಿ ವಿಶ್ವಮಾನವ ಹಕ್ಕುಗಳ ದಿನಾಚರಣೆ ಆಚರಿಸಿ ಫೋಟೋ ಕ್ಲಿಕ್ಕಿಸಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುಳವಾಡ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

    ಶಾಲೆಯಲ್ಲಿ ನಾಳೆ ಆಚರಿಸಬೇಕಿದ್ದ ವಿಶ್ವಮಾನವ ದಿನಾಚರಣೆಯನ್ನು ಶಾಲೆಯ ಬೋರ್ಡ್ ಮೇಲೆ ನಾಳೆಯ ದಿನಾಂಕವನ್ನು ನಮೂದಿಸಿ ಶಾಲಾ ಮಕ್ಕಳೊಂದಿಗೆ ಶಿಕ್ಷಕ ಕೆ.ಆರ್.ಕಂಬಾರ ಆಚರಣೆ ಮಾಡಿದ್ದು, ಸರ್ಕಾರಿ ಆದೇಶವಿದ್ದರೂ ಸಹ ಒಂದು ದಿನ ಮುನ್ನವೇ ದಿನಾಚರಣೆ ಆಚರಿಸಿದ್ದಾರೆ.

    ಡಿ.29 ರಂದು ರಾಜ್ಯದ ಎಲ್ಲಾ ಶಾಲಾ, ಕಾಲೇಜುಗಳಿಗೆ ನೀಡಲಾಗಿದ್ದ ಭಾನುವಾರದ ರಜೆಯನ್ನು ರದ್ದು ಪಡಿಸಲಾಗಿದ್ದು, ಆದರೆ ಶಾಲೆಗೆ ಬರಬೇಕು ಎಂಬ ಕಾರಣದಿಂದ ಶಿಕ್ಷಕ ಇಂದೇ ದಿನಾಚರಣೆಯನ್ನು ಆಚರಿಸಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆದ ಕಾರಣ ಶಿಕ್ಷಕರ ನಡೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

  • ಗಣಿಬಾಧಿತ ಚಾಣೆಕುಂಟೆ ಗ್ರಾಮ ದತ್ತು ಪಡೆದ ಸಹ ಪ್ರಾಧ್ಯಾಪಕ – ಬಳ್ಳಾರಿಯ ಜಗದೀಶ್ ಪಬ್ಲಿಕ್ ಹೀರೋ

    ಗಣಿಬಾಧಿತ ಚಾಣೆಕುಂಟೆ ಗ್ರಾಮ ದತ್ತು ಪಡೆದ ಸಹ ಪ್ರಾಧ್ಯಾಪಕ – ಬಳ್ಳಾರಿಯ ಜಗದೀಶ್ ಪಬ್ಲಿಕ್ ಹೀರೋ

    ಬಳ್ಳಾರಿ: ಸಮಾಜಕ್ಕೆ ಏನನ್ನಾದರೂ ಕೊಡುಗೆ ಕೊಡಬೇಕು ಎನ್ನುವ ಮನಸ್ಸು ಇದ್ದರೆ ಸಾಲದು, ಅದನ್ನು ಮಾಡಲೇಬೇಕು ಎನ್ನುವ ಛಲ ಇರಬೇಕು. ನಾನು ನನ್ನ ಮನೆ, ನನ್ನ ಕೆಲಸ ಎನ್ನುವ ಈ ಸಮಾಜದಲ್ಲಿ ಇದಕ್ಕೆ ಅಪವಾದ ಎಂಬಂತೆ ಇಲ್ಲೊಬ್ಬರು ಸಹ ಪ್ರಾಧ್ಯಾಪಕರಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸ ತಮ್ಮ ಮನೆಯ ಕೆಲಸ ಎಂಬಂತೆ ಟೊಂಕ ಕಟ್ಟಿ ಕೆಲಸ ಮಾಡುವ ಮೂಲಕ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಬಳ್ಳಾರಿಯ ರಾವ್ ಬಹುದ್ದೂರ್ ಎಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಜಗದೀಶ್.ಜಿ.ಎಂ ಕೊಟ್ಟೂರು ಅವರ ವೇತನ ತಿಂಗಳಿಗೆ 40 ಸಾವಿರ ರೂಪಾಯಿ. ಶ್ರೀಮಂತರು, ಗಣಿ ಉದ್ಯಮಿಗಳು ಮಾಡದ ಕೆಲಸವನ್ನು ಜಗದೀಶ್ ಮಾಡಿದ್ದಾರೆ. ಗಣಿಬಾಧಿತ ಚಾಣೆಕುಂಟೆ ಎಂಬ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ. ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. ಆರಂಭಿಕ ಹಂತದಲ್ಲಿ, ಸ್ನೇಹಿತರು ಮತ್ತು ದಾನಿಗಳ ನೆರವಿನಿಂದ 4 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ, ಶೌಚಾಲಯ ಕಟ್ಟಿಸಿದ್ದಾರೆ. ಕೈಗೆ ಬರುವ ವೇತನದಲ್ಲಿ ಅರ್ಧಪಾಲನ್ನು ಇದಕ್ಕೆ ವ್ಯಯಿಸುತ್ತಿದ್ದಾರೆ.

    ಕಾಲೇಜಿನ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಪಣ ತೊಟ್ಟಿರುವ ಜಗದೀಶ್, ಸಮಯ ಸಿಕ್ಕಾಗಲೆಲ್ಲಾ ಚಾಣೆಕುಂಟೆಗೆ ತೆರಳುತ್ತಾರೆ. ಗ್ರಾಮಸ್ಥರಿಗೆ ಶಿಕ್ಷಣ, ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುತ್ತಾರೆ. ಮುಂದೆ ಶಾಲೆಗೆ ಕಾಯಕಲ್ಪ, ಶುದ್ಧ ನೀರು ಸೇರಿ ಇತರೆ ಮೂಲ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದ್ದಾರೆ. ಜಗದೀಶ್ ಸಾಮಾಜಿಕ ಕಾರ್ಯಕ್ಕೆ ಕಾಲೇಜ್ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರ ಇದೆ.

    ಒಟ್ಟಿನಲ್ಲಿ ಆಫೀಸ್ ಕೆಲಸ ಮುಗಿಸಿ ಮನೆ ಸೇರಿದರೆ ಸಾಕು ಎನ್ನುವ ಅದೆಷ್ಟೋ ಜನರಿಗೆ ಜಗದೀಶ್ ಕೆಲಸ ಮಾದರಿಯಾಗಿದೆ.

  • ಬಡತನ, ಅಂಗವೈಕಲ್ಯ ಮೆಟ್ಟಿನಿಂತು ಕೆಎಎಸ್ ಪರೀಕ್ಷೆಯಲ್ಲಿ ಪಾಸ್

    ಬಡತನ, ಅಂಗವೈಕಲ್ಯ ಮೆಟ್ಟಿನಿಂತು ಕೆಎಎಸ್ ಪರೀಕ್ಷೆಯಲ್ಲಿ ಪಾಸ್

    ಬೆಂಗಳೂರು: ಒಂದು ಬಡ ರೈತ ಕುಟುಂಬದಲ್ಲಿ ಹುಟ್ಟಿದ ಮಹಿಳೆಯೊಬ್ಬರು ಅಂಗವೈಕಲ್ಯವಿದ್ದರೂ, ಬಡತನವಿದ್ದರೂ ಪುಟ್ಟ ಗ್ರಾಮದಲ್ಲಿ ಹುಟ್ಟಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ.

    ಹುಟ್ಟುತ್ತಲೇ ಅಂಗವೈಕಲ್ಯದಿಂದ ಹುಟ್ಟುವವರು ಇದು ದೊಡ್ಡ ಶಾಪ ಅಂದುಕೊಳ್ಳುತ್ತಾರೆ. ಅದರೆ ಅದೇ ಅಂಗವೈಕಲ್ಯ ನಮ್ಮ ಶಕ್ತಿ ಎಂದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಗ್ರಾಮೀಣ ಭಾಗದ ಒಂದು ಪುಟ್ಟ ಗ್ರಾಮ ನಾಗನಾಯಕನಹಳ್ಳಿಯಲ್ಲಿ ಜನಸಿದ ಗೌರಮ್ಮ ಸಾಧನೆ ಮಾಡಿದ್ದಾರೆ. ಪದವಿ ಮುಗಿಸಿ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಓದುವ ಛಲವನ್ನು ಬಿಡದೆ ಸಾಧನೆ ಮಾಡಿದ್ದಾರೆ. ರೈತ ಕುಟುಂಬದಲ್ಲಿ ಬೆಳೆದಿದ್ದ ಗೌರಮ್ಮ ಅವರು ಈಗ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಇಡೀ ಕುಟುಂಬಕ್ಕೂ ಹಾಗೂ ತಾಲೂಕಿಗೆ ಹೆಮ್ಮೆ ತರುವಂತಹ ಸಾಧನೆ ಮಾಡಿ ತೋರಿಸಿದ್ದಾರೆ. ಇದನ್ನೂ ಓದಿ: ಕೆಎಎಸ್ ಪರೀಕ್ಷೆಯಲ್ಲಿ ಪಾಸ್ – ಕೂಲಿ ಮಾಡಿ ಓದಿಸಿದ್ದ ತಾಯಿಗೆ ಮಗನ ಗಿಫ್ಟ್

    ಹುಟ್ಟುತ್ತಲೇ ಅಂಗವೈಕಲ್ಯದಿಂದ ಹುಟ್ಟಿದ್ದ ಗೌರಮ್ಮ ಕುಟುಂಬದ ಸಹಕಾರದಿಂದ ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಬಿಟಿಎಲ್ ಕಾಲೇಜಿನಲ್ಲಿ ಪದವಿ ಮುಗಿಸಿದ ಬಳಿಕ ತಾವು ಓದಿದ್ದ ಆನೇಕಲ್ ತಾಲೂಕಿನ ಇಗ್ಗಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ ಐಎಎಸ್ ಹಾಗೂ ಕೆಎಎಸ್ ಪರೀಕ್ಷೆ ಬರೆದು ಸಾಧನೆ ಮಾಡಬೇಕೆಂದು ಗೌರಮ್ಮ ಅವರು ಛಲ ಹೊಂದಿದ್ದರು. ಅವರ ತಂದೆಗೂ ಸಹ ಮಗಳನ್ನು ಚೆನ್ನಾಗಿ ಓದಿಸಬೇಕೆಂದು ಕನಸು ಇತ್ತು. ಆದ್ದರಿಂದ ವ್ಯವಸಾಯ ಮಾಡುತ್ತಲೇ ಮಗಳಿಗೆ ವಿಧ್ಯಾಭ್ಯಾಸ ಮಾಡಿಸಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯ 12 ಮಂದಿ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆ

    ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಲೇ ಕೆಎಎಸ್ ಪರೀಕ್ಷೆಗೆ ತಯಾರಿ ಮಾಡಿಕೊಂಡು, ಪರೀಕ್ಷೆ ಎದುರಿಸಿದ ಗೌರಮ್ಮ ಅವರು ಮೊದಲನೇ ಹಂತದಲ್ಲಿಯೇ ತಹಶೀಲ್ದಾರ್ ಗ್ರೇಡ್ ಪರೀಕ್ಷೆ ಬರೆದು 1,500 ಅಂಕಗಳಿಗೆ 884 ಅಂಕ ಪಡೆಯುವ ಮೂಲಕ ಉತ್ತೀರ್ಣರಾಗಿದ್ದಾರೆ. ತಮ್ಮ ಸಾಧನೆಯಿಂದ ಕುಟುಂಬಕ್ಕೆ ಹಾಗೂ ತಾಲೂಕಿಗೆ ಹೆಮ್ಮೆ ತಂದು ಕೊಟ್ಟಿದ್ದಾರೆ.

    ಗೌರಮ್ಮ ತಮ್ಮ ಗುರಿ ಹಾಗೂ ತಂದೆಯ ಆಸೆಯಂತೆ ಓದುವಾಗ ಸಾಕಷ್ಟು ಅಡೆತಡೆಗಳು ಎದುರಾದರು ಯಾವುದಕ್ಕೂ ಜಗ್ಗಲಿಲ್ಲ. ತಮ್ಮ ಕಠಿಣ ಪರಿಶ್ರಮ ಹಾಗೂ ಕುಟುಂಬದ ಸಹಕಾರದಿಂದ ಸಾಧನೆ ಮಾಡಿದ್ದಾರೆ. ಗೌರಮ್ಮ ಪೋಷಕರಿಗೆ ಏಳು ಜನ ಮಕ್ಕಳಿದ್ದು, ಗೌರಮ್ಮ ಕೊನೆಯ ಮಗಳು. ಕಷ್ಟದ ಸಂದರ್ಭದಲ್ಲಿಯೂ ಎಲ್ಲಾ ಮಕ್ಕಳನ್ನು ಹೆತ್ತವರು ಒಂಬತ್ತನೇ ಹಾಗೂ ಹತ್ತನೇ ತರಗತಿ ಓದಿಸಿದ್ದು, ಕೊನೆಯ ಮಗಳಾದ ಗೌರಮ್ಮ ಚೆನ್ನಾಗಿ ಓದಬೇಕು, ಉನ್ನತ ಸ್ಥಾನಕ್ಕೆ ಹೋಗಬೇಕೆನ್ನುವುದು ಅವರ ತಂದೆಯ ಕನಸಾಗಿತ್ತು. ಕಳೆದ ಮೂರು ವರ್ಷಗಳ ಹಿಂದೆ ತಂದೆ ಪಿಲ್ಲಣ್ಣ ಮೃತ ಪಟ್ಟರು ಸಹ ತಮ್ಮ ಛಲವನ್ನು ಬಿಡದೆ ಕುಟುಂಬದ ಸಹಕಾರದಿಂದ ಓದಿ, ಇಂದು ಗೌರಮ್ಮ ತಂದೆಯ ಕನಸನ್ನು ನನಸು ಮಾಡಿದ್ದಾರೆ. ಈ ಸಾಧನೆಯಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆಂದು ಗೌರಮ್ಮ ತಾಯಿ ಕೃಷ್ಣಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಣ್ಣಂದಿರ ಆಸೆ ಈಡೇರಿಸಿದ ಸಹೋದರ

    ಅಂಗವೈಕಲ್ಯ ಹಾಗೂ ಬಡತನದ ನಡುವೆಯೂ ಒಂದು ಪುಟ್ಟ ಹಳ್ಳಿಯ ಹೆಣ್ಣುಮಗಳು ಎಲ್ಲರೂ ಮೆಚ್ಚುವಂತಹ ಸಾಧನೆ ಮಾಡಿದ್ದು ಕುಟುಂಬದವರಿಗೆ ಹಾಗೂ ತಾಲೂಕಿನ ಜನರಿಗೆ ಹೆಮ್ಮೆ ತಂದಿದೆ. ಅಂಗವೈಕಲ್ಯ ಹಾಗೂ ಬಡತನ ದೊಡ್ಡ ಶಾಪ ಅಂದುಕೊಳ್ಳುವಂತವರಿಗೆ ಗೌರಮ್ಮರ ಈ ಸಾಧನೆಯಿಂದ ನಿರಂತರ ಪರಿಶ್ರಮ ಹಾಗೂ ಶ್ರದ್ಧೆ ಇದ್ದರೆ ಯಾವುದನ್ನು ಬೇಕಾದರು ಸಾಧಿಸಿಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.

  • ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್ ಮರಕ್ಕೆ ಡಿಕ್ಕಿ – ಶಿಕ್ಷಕ ಸಾವು

    ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್ ಮರಕ್ಕೆ ಡಿಕ್ಕಿ – ಶಿಕ್ಷಕ ಸಾವು

    ಶಿವಮೊಗ್ಗ: ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಖಾಸಗಿ ಬಸ್ ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ವಾಪಸ್ ಹೋಗುತ್ತಿದ್ದಾಗ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್‍ನಲ್ಲಿದ್ದ ದೈಹಿಕ ಶಿಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕು ಅರಬಿಳಚಿ ಬಳಿ ನಡೆದಿದೆ.

    ಹರಿಕೃಷ್ಣ(45) ಮೃತ ಶಿಕ್ಷಕ. ಭದ್ರಾವತಿ ತಾಲೂಕಿ ಮಾರಶೆಟ್ಟಿಹಳ್ಳಿ ಗ್ರಾಮದ ಮಂಜುನಾಥ ಪ್ರೌಢಶಾಲೆಯ 30 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು. ಮಂಗಳವಾರ ರಾತ್ರಿ ಪ್ರವಾಸ ಮುಗಿಸಿ ವಾಪಸ್ ಬಂದಿದ್ದರು. ಮಾರಶೆಟ್ಟಿಹಳ್ಳಿಯಲ್ಲಿ ಕೆಲ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ, ಇಬ್ಬರು ವಿದ್ಯಾರ್ಥಿಗಳನ್ನು ಅರಬಿಳಚಿ ಗ್ರಾಮಕ್ಕೆ ಇಳಿಸಿ ಬಸ್ ವಾಪಸ್ ಹೋಗುತ್ತಿತ್ತು. ಆದರೆ ಬಸ್ ಅರಬಿಳಚಿ ಹಾಗೂ ಕಲ್ಲಿಹಾಳ್ ರಸ್ತೆ ಮಧ್ಯೆ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ.

    ಪರಿಣಾಮ ಬಸ್‍ನಲ್ಲಿದ್ದ ಶಾಲೆಯ ದೈಹಿಕ ಶಿಕ್ಷಕ ಹರಿಕೃಷ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬಸ್ ಅಪಘಾತವಾಗುತ್ತಿದ್ದಂತೆಯೇ ಬಸ್ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಅಂಗಾಂಗಗಳ ಸೂಟ್ ಧರಿಸಿ ಮಕ್ಕಳಿಗೆ ಶಿಕ್ಷಕಿಯಿಂದ ಪಾಠ

    ಅಂಗಾಂಗಗಳ ಸೂಟ್ ಧರಿಸಿ ಮಕ್ಕಳಿಗೆ ಶಿಕ್ಷಕಿಯಿಂದ ಪಾಠ

    ಮ್ಯಾಡ್ರಿಡ್: ಅಂಗಾಂಗಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಅರ್ಥ ಮಾಡಿಸಬೇಕು ಎಂಬ ಉದ್ದೇಶದಿಂದ ಶಿಕ್ಷಕಿಯೊಬ್ಬರು ಮಾನವನ ಅಂಗ ರಚನೆಗಳ ಚಿತ್ರವಿರುವ ಸೂಟ್ ಧರಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

    ಸ್ಪೇನ್‍ನ ಶಾಲೆಯೊಂದರ ಶಿಕ್ಷಕಿ ಈ ಪ್ರಯೋಗ ಮಾಡಿದ್ದು, ಜೀವಶಾಸ್ತ್ರ ತರಗತಿಯ ಸಂದರ್ಭದಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಮನುಷ್ಯನ ಅಂಗಾಗಳ ರಚನೆ ಇರುವ ಸೂಟ್ ಧರಿಸಿ ತಿಳಿಸಿದ್ದಾರೆ. ಶಿಕ್ಷಕಿ ವೆರೋನಿಕಾ ಡ್ಯೂಕ್ 15 ವರ್ಷಗಳ ಅನುಭವ ಹೊಂದಿದ್ದು, ಪ್ರಸ್ತುತ 3ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಇಂಗ್ಲಿಷ್, ಕಲೆ, ಸಮಾಜ ಹಾಗೂ ಸ್ಪ್ಯಾನಿಷ್ ವಿಷಯಗಳನ್ನು ಬೋಧಿಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    43 ವರ್ಷದ ಶಿಕ್ಷಕಿ ಬೋಧಿಸುತ್ತಿರುವ ಶೈಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಡ್ಯೂಕ್ ಅವರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಪಾಠ ಮಾಡಲು ಹಾಗೂ ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹಿಡಿದಿಡಲು ಮಾನವನ ದೇಹದ ಅಂಗಾಂಗಳನ್ನು ಸೂಚಿಸುವ ಸೂಟ್ ಹಾಕಿಕೊಂಡೇ ಪಾಠ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಜೀವಶಾಸ್ತ್ರವನ್ನು ಬೋಧಿಸುವುದು ಕಷ್ಟದ ಕೆಲಸವಾಗಿತ್ತು. ಹೀಗಾಗಿ ಅಂಗಾಂಗಳ ದೇಹದ ಸೂಟ್ ಧರಿಸಿ ವಿವರಿಸುವುದೇ ಸೂಕ್ತ ಎಂದು ಈ ಪ್ರಯತ್ನಕ್ಕೆ ಮುಂದಾದೆ ಎಂದು ಶಿಕ್ಷಕಿ ಡ್ಯೂಕ್ ತಿಳಿಸಿದ್ದಾರೆ.

    ಒಂದು ದಿನ ಶಿಕ್ಷಕಿಯ ಪತಿ ಶಾಲೆಯ ತರಗತಿ ಕೊಠಡಿಗೆ ತೆರಳಿದ್ದು, ಈ ವೇಳೆ ಕೆಲ ಫೋಟೋಗಳನ್ನು ತೆಗೆದಿದ್ದಾರೆ. ನಂತರ ಈ ಚಿತ್ರಗಳನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಫುಲ್ ವೈರಲ್ ಆಗಿದೆ. ಅಲ್ಲದೆ ಬಹುತೇಕರು ಶಿಕ್ಷಕಿಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ 66 ಸಾವಿರಕ್ಕೂ ಅಧಿಕ ಲೈಕ್‍ಗಳನ್ನು ಪಡೆದಿದ್ದು, 13 ಸಾವಿರಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

    ಪತ್ನಿಯ ಈ ಆಲೋಚನೆ ಕುರಿತು ಹೆಮ್ಮೆಯಾಗುತ್ತಿದೆ. ಇವಳನ್ನು ಪತ್ನಿಯಾಗಿ ಪಡೆದ ನಾನೇ ಅದೃಷ್ಟಶಾಲಿ. ಇಂದು ತನ್ನ ವಿದ್ಯಾರ್ಥಿಗಳಿಗೆ ಮಾನವನ ಅಂಗಾಂಗಗಳ ಕುರಿತು ವಿವರಿಸಿದ ರೀತಿ ತುಂಬಾ ಇಷ್ಟವಾಯಿತು. ಈ ಕುರಿತು ಮಕ್ಕಳು ಸಹ ತುಂಬಾ ಆಸಕ್ತಿಯಿಂದ ಕಲಿತರು ಎಂದು ತಮ್ಮ ಟ್ವೀಟ್ ನಲ್ಲಿ ಶಿಕ್ಷಕಿ ಪತಿ ಬರೆದುಕೊಂಡಿದ್ದಾರೆ.

    ಇದೊಂದೆ ಅಲ್ಲ ಡ್ಯೂಕ್ ಅವರು ಈ ಹಿಂದೆ ಹಲವು ಬಾರಿ ಇಂತಹ ಪ್ರಯೋಗಗಳ ಮೂಲಕ ಪಾಠ ಮಾಡಿದ್ದಾರೆ. ಇತಿಹಾಸ ಹಾಗೂ ಇಂಗ್ಲಿಷ್ ವ್ಯಾಕರಣ ಪಾಠ ಮಾಡುವಾಗಲೂ ಇವರು ಕಾರ್ಡ್ ಬೋರ್ಡ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಬಳಸಿ ಪರಿಣಾಮಕಾರಿಯಾಗಿ ಪಾಠ ಮಾಡಿದ್ದರು ಎಂದು ಹೇಳಲಾಗಿದೆ. ಯಾವಾಗಲೂ ಗಂಟು ಮುಖ ಹಾಕಿಕೊಂಡು, ಬೇಸರದಿಂದ ಪಾಠ ಮಾಡುವ ಶಿಕ್ಷಕ, ಶಿಕ್ಷಕಿಯರಲ್ಲಿ ಇದು ಬದಲಾವಣೆ ತರಲಿದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದು ಡ್ಯೂಕ್ ಅಭಿಪ್ರಾಯ ಪಟ್ಟಿದ್ದಾರೆ.

  • ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿದ ಮಕ್ಕಳು

    ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿದ ಮಕ್ಕಳು

    -2200 ಹಣ, ಪಾನ್, ಎಟಿಎಂ ಕಾರ್ಡ್ ಇತ್ತು

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ದಾರಿಯಲ್ಲಿ ಸಿಕ್ಕ ಪರ್ಸ್ ಅನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಿದ್ದಾರೆ.

    6ನೇ ತರಗತಿಯ ಭರತ್, ಶರತ್, 5ನೇ ತರಗತಿಯ ಚೈತ್ರಾ ಮತ್ತು 3ನೇ ತರಗತಿಯ ಭೂಮಿಕಾ ಒಂದೇ ಕುಟುಂಬದ ನಾಲ್ವರು ಮಕ್ಕಳು ಶನಿವಾರ ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಆಗ ಶಿವಪುರ ರಸ್ತೆಯ ಸೂರ್ಯ ದೇವಸ್ಥಾನದ ಬಳಿ ಪರ್ಸ್ ಸಿಕ್ಕಿತ್ತು. ಅದರಲ್ಲಿ 2200 ರೂಪಾಯಿ ಹಣ, ಪಾನ್ ಹಾಗೂ ಎಟಿಎಂ ಕಾರ್ಡ್ ಇದ್ದವು.

    ಮಕ್ಕಳು ಸಿಕ್ಕ ಪರ್ಸ್ ಅನ್ನು ಸೋಮವಾರ ಶಾಲೆಗೆ ಬಂದು ಶಿಕ್ಷಕ ಸುಖೇಶ್ ಅವರಿಗೆ ಕೊಟ್ಟಿದ್ದಾರೆ. ಶಿಕ್ಷಕರು ಸಂಬಂಧಪಟ್ಟವರಿಗೆ ಹಿಂದಿರುಗಿಸಿ ಮಕ್ಕಳ ಪ್ರಾಮಾಣಿಕತೆಯನ್ನ ಕೊಂಡಾಡಿದ್ದಾರೆ. ಮಕ್ಕಳು ಕೊಟ್ಟ ಪರ್ಸ್ ಅನ್ನು ಶಿಕ್ಷಕ ಸುಖೇಶ್, ಸಂದೀಪ್ ಅವರನ್ನು ಸಂಪರ್ಕಿಸಿ ಮಕ್ಕಳ ಕೈಯಿಂದಲೇ ಅವರಿಗೆ  ಅವರ ಪರ್ಸ್  ಹಿಂದಿರುಗಿಸಿದ್ದಾರೆ. ಮಕ್ಕಳ ಪ್ರಾಮಾಣಿಕತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.