Tag: teacher

  • ಫಿಡ್ಜ್ ಟ್ರೇ ಬಳಸಿ ಆನ್‍ಲೈನ್ ಕ್ಲಾಸ್- ಶಿಕ್ಷಕಿ ಐಡಿಯಾಕ್ಕೆ ನೆಟ್ಟಿಗರು ಫಿದಾ

    ಫಿಡ್ಜ್ ಟ್ರೇ ಬಳಸಿ ಆನ್‍ಲೈನ್ ಕ್ಲಾಸ್- ಶಿಕ್ಷಕಿ ಐಡಿಯಾಕ್ಕೆ ನೆಟ್ಟಿಗರು ಫಿದಾ

    ನವದೆಹಲಿ: ಕೊರೊನಾ ವೈರಸ್ ಎಂಬ ಚೀನಿ ಮಾಹಾಮಾರಿ ದೇಶಕ್ಕೆ ಕಾಲಿಟ್ಟ ಬಳಿಕ ಜನ-ಜೀವನ ಅಸ್ತವ್ಯಸ್ತವಾಗಿದೆ. ಕೊರೊನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಹೇರಲಾಗಿತ್ತು. ಇತ್ತ ಶಾಲಾ-ಕಾಲೇಜು ಹಾಗೂ ಕಚೇರಿಗಳನ್ನು ಕೂಡ ಬಂದ್ ಮಾಡಲಾಗಿದ್ದು, ಇನ್ನೂ ತೆರೆಯಲು ಅನುಮತಿ ಸಿಕ್ಕಿಲ್ಲ. ಸದ್ಯ ಆನ್‍ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ.

    ಈ ಆನ್‍ಲೈನ್ ಕ್ಲಾಸ್‍ಗೆ ಹಾಜರಾಗಲು ಅನೇಕ ಮಕ್ಕಳು ಒದ್ದಾಡುತ್ತಿದ್ದಾರೆ. ಇತ್ತ ಶಿಕ್ಷಕರು ಕೂಡ ಮಕ್ಕಳಿಗೆ ಪಾಠ ಹೇಳಿಕೊಡಲು ಹರಸಾಹಸ ಪಡುತ್ತಿದ್ದಾರೆ. ಅಂತೆಯೇ ಇಲ್ಲೊಬ್ಬ ಶಿಕ್ಷಕಿ ಆನ್‍ಲೈನ್ ಕ್ಲಾಸ್ ನಡೆಸಲು ಹೂಡಿರುವ ಐಡಿಯಾವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

    ಟ್ವಿಟ್ಟರ್ ಬಳಕೆದಾರೆ ಮೋನಿಕಾ ಯಾದವ್, ಇತ್ತೀಚೆಗೆ ರೆಫ್ರಿಜರೇಟರ್ ಟ್ರೇ ಬಳಸಿ ಶಿಕ್ಷಕಿಯೊಬ್ಬರು ಆನ್ ಲೈನ್ ತರಗತಿ ನಡೆಸುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಆನ್‍ಲೈನ್ ನಲ್ಲಿ ಪಾಠ ಮಾಡಲು ಶಿಕ್ಷಕಿ ಫ್ರಿಡ್ಜ್ ಟ್ರೇ ಬಳಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮನೆಯ ಹಂಚು ಏರಿದ ಬಿಎ ವಿದ್ಯಾರ್ಥಿನಿ

    ಫೋಟೋದಲ್ಲಿ ಶಿಕ್ಷಕಿ ಪಾರದರ್ಶಕತೆಯಿಂದ ಕೂಡಿರುವ ಫ್ರಿಡ್ಜ್ ಟ್ರೇ ಬಳಸಿಕೊಂಡಿದ್ದಾರೆ. ಎರಡು ಡಬ್ಬಗಳನ್ನು ಇಟ್ಟು ಅದರ ಮೇಲೆ ಟ್ರೇ ಇಟ್ಟಿದ್ದಾರೆ. ಟ್ರೇ ಮೇಲೆ ಮೊಬೈಲ್ ಇಟ್ಟು ಕೆಳಗಡೆ ಇರುವ ಪೇಪರ್ ಗಳನ್ನು ತೋರಿಸಿ ಪಾಠ ಹೇಳಿಕೊಡುತ್ತಿರುವುದನ್ನು ಕಾಣಬಹುದಾಗಿದೆ.

    ತನಗೆ ಕಷ್ಟ ಆದರೂ ಪರವಾಗಿಲ್ಲ, ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪಾಠ ಹೇಳಿಕೊಡಬೇಕೆಂಬ ಶಿಕ್ಷಕಿಯ ಈ ಪ್ರಯತ್ನಕ್ಕೆ ನೆಟ್ಟಿಗರು ಶಹಬ್ಬಾಸ್ ಅಂದಿದ್ದಾರೆ.

  • ಖಾಸಗಿ ಶಾಲೆಯ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಖಾಸಗಿ ಶಾಲೆಯ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    – ಅಮ್ಮನನ್ನು ಕಳೆದುಕೊಂಡ 5ರ ಕಂದಮ್ಮ

    ಬಳ್ಳಾರಿ: ಜಿಲ್ಲೆಯ ಸಂಡೂರು ಪಟ್ಟಣದ 14ನೇ ವಾರ್ಡಿನ ಒಂದೇ ಕುಟುಂಬದಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಮನೆಯಲ್ಲಿದ್ದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಂಡೂರು ಪಟ್ಟಣದ 32 ವರ್ಷದ ಮಹಿಳೆಯಾಗಿದ್ದು, ಈಕೆ ಖಾಸಗಿ ಶಾಲೆಯ ಶಿಕ್ಷಕಿ ಎಂದು ಗುರುತಿಸಲಾಗಿದೆ. ತನ್ನ ಮನೆಯಲ್ಲಿಯೇ ಗಂಡನ ಸಹೋದರನಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರನ್ನ ಹೋಂ ಐಶೋಲೇಷನ್‍ಗೆ ಒಳಪಡಿಸಲಾಗಿದೆ. ನಂತರ ಪತಿಯ ಸಹೋದರನ ಪತ್ನಿಗೆ ಹಾಗೂ ಮೃತ ಶಿಕ್ಷಕಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

    ಮೃತ ಶಿಕ್ಷಕಿಗೆ 5 ವರ್ಷದ ಮಗುವಿದೆ. ಆ ಮಗವಿಗೂ ಕೂಡ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ರಿಪೋರ್ಟ್ ನೆಗೆಟಿವ್ ಬಂದಿದೆ. ಮೃತ ಶಿಕ್ಷಕಿಯ ಬಳಿ ಆ ಮಗುವನ್ನ ಬಿಡಲಾಗದಿರೋದಕ್ಕೆ ಮಾನಸಿಕ ಖಿನ್ನತೆ ಒಳಗಾಗಿ ಈ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸಂಡೂರು ತಹಶೀಲ್ದಾರ್ ರಶ್ಮಿ ತಿಳಿಸಿದ್ದಾರೆ.

  • ಸೆಕ್ಸ್‌ಗೆ ಒತ್ತಾಯಿಸಿದ ಎಂಜಿನಿಯರ್ ಪತಿಯನ್ನೇ ಕೊಂದ ಪತ್ನಿ

    ಸೆಕ್ಸ್‌ಗೆ ಒತ್ತಾಯಿಸಿದ ಎಂಜಿನಿಯರ್ ಪತಿಯನ್ನೇ ಕೊಂದ ಪತ್ನಿ

    – ಹಾಲಿನಲ್ಲಿ ನಿದ್ದೆ ಮಾತ್ರೆ ಹಾಕಿ ಕೊಟ್ಟ ಶಿಕ್ಷಕಿ
    – ಗಂಡನ ತಲೆಯನ್ನ ಪ್ಲಾಸ್ಟಿಕ್ ಬ್ಯಾಗ್‍ನಿಂದ ಸುತ್ತಿ ಉಸಿರುಗಟ್ಟಿಸಿದ್ಲು

    ಚೆನ್ನೈ: ಅಸ್ವಾಭಾವಿಕ ಸೆಕ್ಸ್‌ಗೆ ಒತ್ತಾಯಿಸಿದ ನಂತರ ಮಹಿಳೆಯೊಬ್ಬಳು ತನ್ನ ಸಂಬಂಧಿಕರ ಸಹಾಯದಿಂದ ಪತಿಯನ್ನೇ ಕೊಲೆ ಮಾಡಿರುವ ಘಟನೆ ತಮಿಳುನಾಡಿದ ಮದುರೈನಲ್ಲಿ ನಡೆದಿದೆ.

    ಮೃತನನ್ನು ಎಂಜಿನಿಯರ್ ಸುಂದರ್ ಅಲಿಯಾಸ್ ಸುಧೀರ್‌ (34) ಎಂದು ಗುರುತಿಸಲಾಗಿದೆ. ಸುಧೀರ್ ಸಮೀಕ್ಷಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು. ಕೊಲೆಯಾದ ದಿನ ಈತ ತನ್ನ ಪತ್ನಿಯ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

    ಏನಿದು ಪ್ರಕರಣ?
    ಮೃತ ಸುಧೀರ್ 8 ವರ್ಷಗಳ ಹಿಂದೆ ಸರ್ಕಾರಿ ಶಾಲಾ ಶಿಕ್ಷಕಿಯಾಗಿರುವ ಅರಿವುಸೆಲ್ವಂ ಜೊತೆ ಮದುವೆಯಾಗಿದ್ದನು. ಈ ದಂಪತಿಗೆ ಒಬ್ಬ ಮಗಳಿದ್ದಾಳೆ. ಶುಕ್ರವಾರ ಆರೋಪಿ ಅರಿವುಸೆಲ್ವಂ ತನ್ನ ಪತಿ ಸುಧೀರ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಹಾಸಿಗೆಯಿಂದ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾನೆ ಎಂದು ವೈದ್ಯರಿಗೆ ತಿಳಿಸಿದ್ದಳು. ವೈದ್ಯರು ಪರೀಕ್ಷಿಸಿ ಸುಧೀರ್‌ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.

    ಪೊಲೀಸರ ತಂಡವು ಈ ಪ್ರಕರಣದ ಬಗ್ಗೆ ತಿಳಿದು ತನಿಖೆಯನ್ನು ಪ್ರಾರಂಭಿಸಿದ್ದರು. ಈ ವೇಳೆ ಮೃತ ಸುಧೀರ್‌ನ ಖಾಸಗಿ ಭಾಗಗಳಿಗೆ ಗಾಯಗಳಾಗಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಶುಕ್ರವಾರ ಅರಿವುಸೆಲ್ವಂನನ್ನು ವಿಚಾರಣೆ ಮಾಡಿದ್ದಾರೆ. ಆಗ ತನ್ನ ಪತಿಯನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸಂಬಂಧಿಕರಾದ ಬಾಲಮಣಿ ಮತ್ತು ಸುಮಾಯಾರ್ ಇಬ್ಬರ ಸಹಾಯದಿಂದ ಪತಿಯನ್ನು ಕೊಂದಿದ್ದೇನೆ ಎಂದು ಆರೋಪಿ ಶಾಲಾ ಶಿಕ್ಷಕಿ ಪೊಲೀಸರಿಗೆ ತಿಳಿಸಿದ್ದಾಳೆ.

    ಪತಿ ಮದ್ಯದ ವ್ಯಸನಿಯಾಗಿದ್ದು, ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದನು. ಅಲ್ಲದೇ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದಾಗ ಸುಧೀರ್ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದನು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

    ಆರೋಪಿ ಗುರುವಾರ ರಾತ್ರಿ ಹಾಲಿನಲ್ಲಿ ನಿದ್ದೆ ಮಾತ್ರೆಗಳನ್ನು ಮಿಕ್ಸ್ ಮಾಡಿ ಪತಿಗೆ ಕೊಟ್ಟಿದ್ದಾಳೆ. ನಂತರ ಮಹಿಳೆ ಬಾಲಮಣಿ ಮತ್ತು ಸುಮಾಯಾರ್ ಇಬ್ಬರನ್ನು ತನ್ನ ಮನೆಗೆ ಕರೆದಿದ್ದಾಳೆ. ಬಳಿಕ ಮೂವರು ಆರೋಪಿಗಳು ಸುಧೀರ್‌ನ ತಲೆಯನ್ನು ಪ್ಲಾಸ್ಟಿಕ್ ಬ್ಯಾಗ್‍ನಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ವೇಳೆ ಸುಮಾಯರ್ ಸುಧೀರ್‌ನ ಖಾಸಗಿ ಭಾಗಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

  • ಪಾಠ ಕಲಿಸಿದ್ದ ಗುರುವಿನ ನೆರವಿಗೆ ಬಂದ ವಿದ್ಯಾರ್ಥಿಗಳು – ಟಿಫನ್ ಸೆಂಟರ್‌ಗೆ ಶೆಡ್ ನಿರ್ಮಾಣ

    ಪಾಠ ಕಲಿಸಿದ್ದ ಗುರುವಿನ ನೆರವಿಗೆ ಬಂದ ವಿದ್ಯಾರ್ಥಿಗಳು – ಟಿಫನ್ ಸೆಂಟರ್‌ಗೆ ಶೆಡ್ ನಿರ್ಮಾಣ

    – ಕೆಲಸ ಕಳೆದುಕೊಂಡಿದ್ದ ಶಿಕ್ಷಕನಿಗೆ ಸಹಾಯ

    ಹೈದರಾಬಾದ್: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ತೆಲಂಗಾಣದಲ್ಲಿ ಕೆಲಸ ಕಳೆದುಕೊಂಡಿದ್ದ ಶಿಕ್ಷಕರೊಬ್ಬರಿಗೆ ವಿದ್ಯಾರ್ಥಿಗಳೆಲ್ಲರೂ ಸೇರಿ ಸಹಾಯ ಮಾಡಿದ್ದಾರೆ.

    52 ವರ್ಷದ ಶಿಕ್ಷಕ ಹನುಮಂತುಲ ರಘು ಅವರಿಗೆ ವಿದ್ಯಾರ್ಥಿಗಳೆಲ್ಲರೂ ಸೇರಿ ಒಂದು ಟಿಫಿನ್ ಸೆಂಟರ್ ಶುರು ಮಾಡಲು ಅವರಿಗೆ ಒಂದು ಶೆಡ್ ನಿರ್ಮಾಣ ಮಾಡಿಕೊಟ್ಟಿದ್ದಾರೆ.

    ಶಿಕ್ಷಕ ಹನುಮಂತುಲ ಅವರು ಜಗ್ತಿಯಲ್ ಜಿಲ್ಲೆಯ ಕೋರುಟ್ಲಾದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಕೆಲಸ ಕಳೆದುಕೊಂಡಿದ್ದರು. ಇದರಿಂದ ಜೀವನ ನಡೆಸುವುದು ತುಂಬಾ ಕಷ್ಟವಾಗಿತ್ತು. ಅವರ ಮಗ ಬಿ.ಎಡ್ ಮುಗಿಸಿದ್ದನು. ಆದರೆ ಅವನು ಕೂಡ ನಿರೋದ್ಯೋಗಿ ಆಗಿದ್ದನು.

    ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿದ್ದ ಶಿಕ್ಷಕ ಹನುಮಂತುಲ ಬಗ್ಗೆ ತಿಳಿದ 1997-98 ಬ್ಯಾಚ್‍ನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ವಾಟ್ಸಪ್ ಮೂಲಕ ಎಲ್ಲಾ ವಿದ್ಯಾರ್ಥಿಗಳನ್ನು ಒಗ್ಗೂಡಿ ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದರು. ಅದರಂತೆಯೇ ವಿದ್ಯಾರ್ಥಿಗಳು ಜೊತೆಗೂಡಿ ಉಪಹಾರ ಕೇಂದ್ರ ತೆರೆಯುವುದಕ್ಕೆ ಶೆಡ್ ನಿರ್ಮಿಸಿ ಕೊಟ್ಟಿದ್ದಾರೆ. ಈ ಟಿಫಿನ್ ಸೆಂಟರ್‌ಗೆ ವಿದ್ಯಾರ್ಥಿಗಳೆಲ್ಲರೂ ಸೇರಿ ‘ಗುರುದಕ್ಷಿಣ’ ಎಂದು ಹೆಸರಿಟ್ಟಿದ್ದಾರೆ.

    ನಾನು ರುದ್ರಂಗಿ ಜಿಲ್ಲಾ ಪಂಚಾಯಿತಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಇಂಗ್ಲಿಷ್ ಮತ್ತು ಜೀವಶಾಸ್ತ್ರವನ್ನು ವಿದ್ಯಾರ್ಥಿಗಳಿಗೆ ಕಲಿಸಿದ್ದೆ. ಅದನ್ನು ವಿದ್ಯಾರ್ಥಿಗಳು ಮರೆಯಲಿಲ್ಲ. ಇಂದು ನನ್ನ ರಕ್ಷಣೆಗೆ ಬಂದ ನನ್ನ ವಿದ್ಯಾರ್ಥಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ ಎಂದು ರಘು ಸಂತಸದಿಂದ ಹೇಳಿದ್ದಾರೆ.

    ಈಗಾಗಲೇ ಶೆಡ್ ಸಿದ್ಧವಾಗಿದ್ದು, ಈ ಮೂಲಕ ಶಿಕ್ಷಕ ಹನುಮಂತುಲ ಅವರು ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ. ಜೊತೆಗೆ ಅವರ ವಿದ್ಯಾರ್ಥಿಗಳು ಗ್ರಾಹಕರನ್ನು ಟಿಫಿನ್ ಸೆಂಟರ್‌ಗೆ ಕರೆತರುವ ಭರವಸೆ ನೀಡಿದ್ದಾರೆ.

  • ವರದಕ್ಷಿಣೆ ತರಲಿಲ್ಲ ಅಂತ ಮೊದ್ಲ ಪತ್ನಿ ಬಿಟ್ಟ – ಹೆಣ್ಣು ಮಗುವಾಗಿದ್ದಕ್ಕೆ 2ನೇ ಹೆಂಡ್ತಿ ಬಿಟ್ಟು ಮತ್ತೆ ಮದ್ವೆ

    ವರದಕ್ಷಿಣೆ ತರಲಿಲ್ಲ ಅಂತ ಮೊದ್ಲ ಪತ್ನಿ ಬಿಟ್ಟ – ಹೆಣ್ಣು ಮಗುವಾಗಿದ್ದಕ್ಕೆ 2ನೇ ಹೆಂಡ್ತಿ ಬಿಟ್ಟು ಮತ್ತೆ ಮದ್ವೆ

    – ಮೂವರು ಯುವತಿಯರ ಜೊತೆ ಶಿಕ್ಷಕ ವಿವಾಹ

    ಹೈದರಾಬಾದ್: ಶಿಕ್ಷಕನೊಬ್ಬ ವರದಕ್ಷಿಣೆಗಾಗಿ ಮೂವರು ಯುವತಿಯರ ಜೊತೆ ಮದುವೆ ಆಗಿದ್ದು, ಇದೀಗ ಮೋಸ ಮಾಡಿ ಪರಾರಿಯಾಗಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    ಆರೋಪಿಯನ್ನು ಶೀಲಂ ಸುರೇಶ್ ಎಂದು ಗುರುತಿಸಲಾಗಿದೆ. ಈತ ಮೂವರು ಯುವತಿಯರನ್ನು ಮದುವೆಯಾಗಿದ್ದು, ವರದಕ್ಷಿಣೆಗಾಗಿ ಮೋಸ ಮಾಡಿದ್ದಾನೆ. ಇದೀಗ ಎರಡನೇ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಏನಿದು ಪ್ರಕರಣ?
    ವಿಜಯವಾಡದ ಮೂಲದ ಆರೋಪಿ ಸುರೇಶ್ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ಈತ 2011ರಲ್ಲಿ ಶಾಂತಿಪ್ರಿಯಾ ಯುವತಿಯನ್ನು ಮದುವೆಯಾಗಿದ್ದನು. ಸ್ವಲ್ಪ ದಿನದ ನಂತರ ಹೆಚ್ಚುವರಿ ವರದಕ್ಷಿಣೆ ತರಲಿಲ್ಲ ಎಂದು ಆಕೆಯನ್ನು ದೂರ ಮಾಡಿದ್ದ. ನಂತರ ಮೊದಲ ಮದುವೆಯ ಬಗ್ಗೆ ಹೇಳದೆ 2015ರಲ್ಲಿ ಶೈಲಜಾ ಜೊತೆ ಎರಡನೇ ಮದುವೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಎರಡನೇ ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ನಾಲ್ಕು ಲಕ್ಷ ಹಣ ಮತ್ತು ಹತ್ತು ತೊಲ ಚಿನ್ನವನ್ನು ತೆಗೆದುಕೊಂಡಿದ್ದನು. ಆದರೆ ಎರಡನೇ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಆಕೆಯನ್ನು ಬಿಟ್ಟು ಹೋಗಿದ್ದ. ಬಳಿಕ 2019ರಲ್ಲಿ ಮೂರನೇ ಬಾರಿಗೆ ಶಿಕ್ಷಕಿ ಅನುಷಾ ಜೊತೆ ರಹಸ್ಯವಾಗಿ ಮದುವೆಯಾಗಿದ್ದಾನೆ. ಈ ಬಗ್ಗೆ ತಿಳಿದ ಎರಡನೇ ಪತ್ನಿ ಶೈಲಜಾ ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ದಿಶಾ ಪೊಲೀಸರಿಗೆ ದೂರು ನೀಡಿದ್ದಾರೆ.

    ಸುರೇಶ್ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ಮೂರು ಮದುವೆಗಳಿಗೆ ಸಹಕರಿಸುತ್ತಿದ್ದ ಸುರೇಶ್ ಪೋಷಕರು, ಹಿರಿಯ ಸಹೋದರನ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಜಯವಾಡ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೊಬ್ಬ ಯುವತಿಗೆ ಮೋಸ ಮಾಡುವ ಮೊದಲು ಸುರೇಶ್‍ನನ್ನು ಬಂಧಿಸುವಂತೆ ಎರಡನೇ ಪತ್ನಿ ಪೊಲೀಸರ ಬಳಿ ಮನವಿ ಮಾಡಿದ್ದಾರೆ.

    ಈ ಬಗ್ಗೆ ತಿಳಿದ ಮಹಿಳಾ ಸಂಘಗಳು ಎರಡನೇ ಪತ್ನಿ ಶೈಲಜಾ ಬೆಂಬಲಕ್ಕೆ ನಿಂತಿವೆ. ಇತ್ತ ಮೊದಲ ಪತ್ನಿ ಕೂಡ ಕೂಡಲೇ ಆತನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ಆರೋಪಿಗಾಗಿ ಶೋಧಕಾರ್ಯ ಮಾಡುತ್ತಿದ್ದಾರೆ.

  • ಕರೆ ಮಾಡಿದ್ರೂ ಬಾರದ ಅಂಬುಲೆನ್ಸ್ – ರಾತ್ರಿಯೆಲ್ಲ ಆಟೋದಲ್ಲಿ ಆಸ್ಪತ್ರೆಗೆ ಅಲೆದು ಶಿಕ್ಷಕಿ ಸಾವು

    – ಕೊರೊನಾ ವಾರಿಯರ್ ಆಗಿದ್ದ ಶಿಕ್ಷಕಿ

    ಬೆಂಗಳೂರು: ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಕೊರೊನಾ ವಾರಿಯರ್ ಶಿಕ್ಷಕಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದೆ.

    ಬೆಂಗಳೂರಿನ ಡಿಜೆ ಹಳ್ಳಿಯಲ್ಲಿರುವ ಸರ್ಕಾರಿ ಉರ್ದು ಮಾದರಿ ಶಾಲೆಯಲ್ಲಿ ಕೋವಿಡ್-19 ಸರ್ವೇ ಕಾರ್ಯ ಮಾಡುತ್ತಿದ್ದ ಶಿಕ್ಷಕಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಶಿಕ್ಷಕಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರಾತ್ರಿ ಪೂರ್ತಿ ಆಕ್ಸಿಜನ್ ಸಿಲಿಂಡರ್ ಜೊತೆ ಆಟೋದಲ್ಲಿ ಆಸ್ಪತ್ರೆಗೆ ಅಲೆದು ಕೊನೆಗೆ ಸಾವನ್ನಪ್ಪಿದ್ದಾರೆ.

    ಕೊರೊನಾ ಸರ್ವೇ ಮಾಡುತ್ತಿದ್ದ ಶಿಕ್ಷಕಿಗೆ ಮೂರು ದಿನದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ನಂತರ ಅವರಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಆದರೆ ಕಳೆದ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆಗ ಅಂಬುಲೆನ್ಸ್ ಗೆ ಎಷ್ಟೇ ಕರೆ ಮಾಡಿದರೂ ಬಂದಿಲ್ಲ. ಈ ವೇಳೆ ಅವರೇ ಆಟೋದಲ್ಲಿ ಐದಾರು ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಅವರಿಗೆ ಎಲ್ಲೂ ಬೆಡ್ ಸಿಕ್ಕಿಲ್ಲ. ಕೊನೆಗೆ ಅವರನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ ಶಿಕ್ಷಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

  • ಕೊರೊನಾ ಎಫೆಕ್ಟ್: ಕುಂಚ ಹಿಡಿಯುವ ಕೈಯಲ್ಲಿ ಗಾರೆ ಕರ್ಣಿ

    ಕೊರೊನಾ ಎಫೆಕ್ಟ್: ಕುಂಚ ಹಿಡಿಯುವ ಕೈಯಲ್ಲಿ ಗಾರೆ ಕರ್ಣಿ

    – ಗಾರೆ ಕೆಲಸಗಾರನಾದ ಡ್ರಾಯಿಂಗ್ ಟೀಚರ್!

    ಚಾಮರಾಜನಗರ: ಕುಂಚ ಹಿಡಿದು ಡ್ರಾಯಿಂಗ್ ಹೇಳಿಕೊಡುತ್ತಿದ್ದ ಶಿಕ್ಷಕ ಕೊರೊನಾ ಸೋಂಕಿನಿಂದ ಗಾರೆ ಕೆಲಸ ಶುರು ಮಾಡಿರುವ ಘಟನೆ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದೆ.

    ಕೊರೊನಾ ಜನರಿಗೆ ತಂದಿರುವ ಸಂಕಷ್ಟ ಅಷ್ಟಿಷ್ಟಲ್ಲ. ಚೀನಿ ವೈರಸ್ ಮಹಾಮಾರಿ ಸೋಂಕಿನಿಂದ ಬಹುತೇಕರು ತತ್ತರಿಸಿ ಹೋಗಿದ್ದಾರೆ. ಖಾಸಗಿ ಶಾಲೆ ಶಿಕ್ಷಕರಂತೂ ವೃತ್ತಿಯನ್ನು ಬಿಟ್ಟು ಜೀವನ ನಿರ್ವಹಣೆಗೆ ಬೇರೆ ವೃತ್ತಿಗಳತ್ತ ಮುಖ ಮಾಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದ ಈ ಶಿಕ್ಷಕ ಹೊಟ್ಟೆಪಾಡಿಗಾಗಿ ಗಾರೆ ಕೆಲಸ ಮಾಡುತ್ತಿದ್ದಾರೆ.

    ಗಾರೆ ಕೆಲಸಕ್ಕೆ ಮುಂದಾಗಿರುವ ಶಿಕ್ಷಕರ ಹೆಸರು ದುಂಡಯ್ಯ. 45 ವರ್ಷದ ಇವರು ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದು, 17 ವರ್ಷಗಳ ಕಾಲ ಸಾಕಷ್ಟು ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನ ಕಲಿಸಿಕೊಟ್ಟಿದ್ದಾರೆ. ಇವರ ಕಲೆಗೆ ಮಾರುಹೋದ ಆರೋಗ್ಯ ಸಚಿವ ಶ್ರೀರಾಮುಲು ಅವರು ಇವರು ಬಿಡಿಸಿದ್ದ ಚಿತ್ರಗಳನ್ನ ಖರೀದಿಸಿ ಪ್ರೋತ್ಸಾಹ ತುಂಬಿದ್ದರು.

    ವಿವಿಧ ಖಾಸಗಿ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ದುಡಿದು ಅಪಾರ ಅನುಭವ ಹೊಂದಿರುವ ದುಂಡಯ್ಯರವರಿಗೆ ಕೊರೊನಾ ಕೊಟ್ಟ ಶಾಕ್ ಬೀದಿಗೆ ಬೀಳುವಂತೆ ಮಾಡಿದೆ. ಕಳೆದ ನಾಲ್ಕು ತಿಂಗಳಿಂದ ಕೆಲಸವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಎರಡು ಮಕ್ಕಳ ತಂದೆಯಾಗಿದ್ದು ಸಂಸಾರ ನಡೆಸಲು ಗಾರೆ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ತುಂಬು ಸಂಸಾರದ ನೊಗ ಎಳೆಯುತ್ತಿರುವ ದುಂಡಯ್ಯ ಅವರು, ಯಾರು ಏನೇ ಅಂದುಕೊಂಡರೂ ಪರವಾಗಿಲ್ಲ ಎಂದು ಗಾರೆ ಕೆಲಸಕ್ಕೆ ಕೈ ಹಾಕಿದ್ದಾರೆ. ದಾರಿ ಕಾಣದೆ ಜಗುಲಿಯೊಂದರ ಮೇಲೆ ಕುಳಿತಿದ್ದಾಗ ಗಾರೆ ಕೆಲಸಕ್ಕೆ ಆಹ್ವಾನ ಬಂದಿದೆ. ಗೌರವಕ್ಕೆ ಅಂಜದೆ ಗಾರೆ ಕೆಲಸಕ್ಕೆ ಮುಂದಾಗಿ ಹೊಟ್ಟೆ ಪಾಡು ನೋಡುತ್ತಿದ್ದಾರೆ. ಡ್ರಾಯಿಂಗ್ ಮಾಡುತ್ತಿದ್ದ ಕೈಗಳಲ್ಲೀಗ ಗಾರೆ ಕರ್ಣಿ ಬಂದಿದೆ. ಕುಂಚ ಹಿಡಿಯುತ್ತಿದ್ದ ಕೈಗಳು ಇಟ್ಟಿಗೆ ಹೊರುವಂತಾಗಿದೆ.

    ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಶಿಕ್ಷಕ ವೃತ್ತಿ ಕೈ ಹಿಡಿಯದಿದ್ರೂ ಗಾರೆ ಕೆಲಸ ಕೈ ಹಿಡಿದಿದೆ. ತನ್ನ ಈ ಸ್ಥಿತಿಗೆ ಕೊರೊನಾ ಕಾರಣವಾದರೂ ಇಡೀ ವ್ಯವಸ್ಥೆಯ ಮೇಲೆ ಬೇಸರ ತಂದಿದೆ. ಶಿಕ್ಷಕರಿಗೆ ಉದ್ಯೋಗ ಕಲ್ಪಿಸದ ಚಿತ್ರಕಲಾ ಶಾಲೆಗಳು ಯಾಕೆ ಬೇಕು? ಶಿಕ್ಷಣ ಸಚಿವರಿಗೆ ನಮ್ಮಂತಹ ಬಡ ಶಿಕ್ಷಕರ ಪರಿಸ್ಥಿತಿ ಅರ್ಥವಾಗುತ್ತಿಲ್ಲವೇ ಎಂದು ಕಣ್ಣೀರಿಟ್ಟಿದ್ದಾರೆ.

    ಕೊರೊನಾ ಮಹಾಮಾರಿ ತಂದ ಎಡವಟ್ಟು ಒಂದಲ್ಲ ಎರಡಲ್ಲ ಸಾಕಷ್ಟಿದೆ. ಖಾಸಗಿ ಶಾಲೆ ಶಿಕ್ಷಕರು ಕೆಲಸ ಮತ್ತು ಸಂಬಂಳವಿಲ್ಲದೇ ಸಾಕಷ್ಟು ನೊಂದಿದ್ದಾರೆ. ಸರ್ಕಾರ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಯನ್ನ ಅರ್ಥಮಾಡಿಕೊಂಡಿಲ್ಲ. ಶಾಲೆಯಿಂದ ಸಂಬಳ ಬರುತ್ತಿಲ್ಲ. ಸರ್ಕಾರ ತಿರುಗಿ ನೋಡುತ್ತಿಲ್ಲ. ಪರಿಣಾಮ ಸಾವಿರಾರು ಮಂದಿ ಖಾಸಗಿ ಶಾಲೆ ಶಿಕ್ಷಕರು ಬೀದಿ ಪಾಲಾಗಿದ್ದಾರೆ. ಕೂಡಲೇ ಸರ್ಕಾರ ಪರಿಹಾರ ನೀಡದಿದ್ದರೆ ಮತ್ತಷ್ಟು ಶಿಕ್ಷಕರು ಶೋಚನೀಯ ಪರಿಸ್ಥಿತಿ ತಲುಪಲಿದ್ದಾರೆ.

  • SSLC ಮೌಲ್ಯಮಾಪನಕ್ಕೆ ಹಾಜರಾಗಿದ್ದ ಶಿಕ್ಷಕ ಸಾವು

    SSLC ಮೌಲ್ಯಮಾಪನಕ್ಕೆ ಹಾಜರಾಗಿದ್ದ ಶಿಕ್ಷಕ ಸಾವು

    ಶಿವಮೊಗ್ಗ : ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕರೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಇಂದು ನಡೆದಿದೆ.

    ಮೃತಪಟ್ಟ ಶಿಕ್ಷಕ ಭದ್ರಾವತಿಯ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಕುಮಾರ್ (48) ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕ ಕುಮಾರ್ ಶಿವಮೊಗ್ಗದ ಎನ್.ಇ.ಎಸ್ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಸಮಾಜ ವಿಜ್ಞಾನ ವಿಷಯದ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದರು. ಇಂದು ಮಧ್ಯಾಹ್ನದವರೆಗೂ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದ ಮೃತ ಶಿಕ್ಷಕ ಕುಮಾರ್ ಮಧ್ಯಾಹ್ನ ಊಟಕ್ಕೆ ತೆರಳಲು ಹೊರಡುತ್ತಿದ್ದರು. ಈ ವೇಳೆ ಶಾಲಾ ಆವರದಲ್ಲಿಯೇ ಕುಸಿದು ಬಿದ್ದ ಶಿಕ್ಷಕನನ್ನು ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ಶಿಕ್ಷಕ ಕುಮಾರ್ ಮೃತಪಟ್ಟಿದ್ದಾರೆ.

    ಮೃತ ಶಿಕ್ಷಕ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೃತ ಶಿಕ್ಷಕನ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಸ್ಥಳಕ್ಕೆ ಡಿಡಿಪಿಐ ರಮೇಶ್ ಭೇಟಿ ನೀಡಿ ಮೃತ ಶಿಕ್ಷಕನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

  • ಕೇವಲ ಶಿಕ್ಷಕಿ ಮಾತ್ರವಲ್ಲ, SSLC ಮಕ್ಕಳ ತಾಯಿ – ಸುರೇಶ್ ಕುಮಾರ್ ಅಭಿನಂದನೆ

    ಕೇವಲ ಶಿಕ್ಷಕಿ ಮಾತ್ರವಲ್ಲ, SSLC ಮಕ್ಕಳ ತಾಯಿ – ಸುರೇಶ್ ಕುಮಾರ್ ಅಭಿನಂದನೆ

    ಮಡಿಕೇರಿ: ತಾಯಿ ಮೃತಪಟ್ಟಿದ್ದರೂ ಎಸ್‍ಎಸ್‍ಎಲ್‍ಸಿ ಪರಿಕ್ಷಾ ಮೌಲ್ಯ ಮಾಪನಕ್ಕೆ ಹಾಜರಾಗಿ ವೃತ್ತಿ ಬದ್ಧತೆ ಮೆರೆದಿದ್ದ ಶಿಕ್ಷಕಿ ಕವಿತಾ ಅವರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಣ ಇಲಾಖೆಯ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

    ಸುರೇಸ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿ ಶಿಕ್ಷಕಿ ಕವಿತಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. “ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವೂ ಮುಖ್ಯ ಎಂಬ ಭಾವನೆಯಿಂದ ತನ್ನ ವೈಯಕ್ತಿಕ ನೋವನ್ನು ನುಂಗಿಕೊಂಡು ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನಕ್ಕೆ ಹಾಜರಾಗಿರುವ ಮಡಿಕೇರಿ ತಾಲೂಕಿನ ಶಿಕ್ಷಕಿ ಶ್ರೀಮತಿ ಕವಿತಾ ಅವರಿಗೆ ಶಿಕ್ಷಣ ಇಲಾಖೆಯ ಪರವಾಗಿ ಧನ್ಯವಾದಗಳು. ಈಕೆ ಕೇವಲ ಶಿಕ್ಷಕಿ ಮಾತ್ರವಲ್ಲ. ಎಸ್‍ಎಸ್‍ಎಲ್‍ಸಿ ಮಕ್ಕಳ ತಾಯಿ ಸಹ ಎಂದು ತೋರಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಡಿಕೇರಿ ತಾಲೂಕಿನ ಬೆಟ್ಟಗೇರಿ ನಿವಾಸಿ ಶಿಕ್ಷಕಿ ಕವಿತಾ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರೂ ಎಸ್‍ಎಸ್‍ಎಲ್‍ಸಿ ಪರಿಕ್ಷೆಯ ಮೌಲ್ಯ ಮಾಪನಕ್ಕೆ ಹಾಜರಾಗಿದ್ದರು. ಕವಿತಾ ಅವರ ತಾಯಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಆದರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಪರಿಕ್ಷಾ ಮೌಲ್ಯ ಮಾಪನಕ್ಕೆ  ಆಗಮಿಸಿದ್ದರು. ಈ ಮೂಲಕ ಶಿಕ್ಷಕಿ ತಮ್ಮ ವೃತ್ತಿ ಬದ್ಧತೆ ತೋರಿದ್ದರು.

  • ತಾಯಿ ಮೃತಪಟ್ಟಿದ್ದರೂ ವೃತ್ತಿ ಬದ್ಧತೆ ಮೆರೆದ ಶಿಕ್ಷಕಿಗೆ ಮೆಚ್ಚುಗೆ

    ತಾಯಿ ಮೃತಪಟ್ಟಿದ್ದರೂ ವೃತ್ತಿ ಬದ್ಧತೆ ಮೆರೆದ ಶಿಕ್ಷಕಿಗೆ ಮೆಚ್ಚುಗೆ

    ಮಡಿಕೇರಿ: ತಾಯಿ ಮೃತಪಟ್ಟಿದ್ದರೂ ತನ್ನ ವೃತ್ತಿ ಬದ್ಧತೆ ಮೆರೆದ ಶಿಕ್ಷಕಿಗೆ ಜಿಲ್ಲೆಯಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಸ್‍ಎಸ್‍ಎಲ್‍ಸಿ ಪರಿಕ್ಷೆಯ ಮೌಲ್ಯ ಮಾಪನಕ್ಕೆ ಶಿಕ್ಷಕಿ ಹಾಜರಾಗಿದ್ದಾರೆ. ಈ ಮೂಲಕ ಶಿಕ್ಷಕಿ ತನ್ನ ವೃತ್ತಿ ಬದ್ಧತೆ ತೋರಿರುವ ಅಪರೂಪದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಮಡಿಕೇರಿ ತಾಲೂಕಿನ ಬೆಟ್ಟಗೇರಿ ನಿವಾಸಿ ಶಿಕ್ಷಕಿ ಕವಿತ ಎಂಬವರು ತನ್ನ ತಾಯಿಯನ್ನು ಕಳೆದುಕೊಂಡಿದ್ದರೂ ಎಸ್‍ಎಸ್‍ಎಲ್‍ಸಿ ಪರಿಕ್ಷೆಯ ಮೌಲ್ಯ ಮಾಪನಕ್ಕೆ ಹಾಜರಾಗಿದ್ದಾರೆ. ಬೆಳಗ್ಗೆ ಕವಿತ ಅವರ ತಾಯಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಆದರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಪರಿಕ್ಷಾ ಮೌಲ್ಯಕ್ಕೆ ಆಗಮಿಸಿದ್ದಾರೆ.

    ಸದ್ಯ ಶಿಕ್ಷಕಿಯ ವೃತ್ತಿ ಬದ್ಧತೆಗೆ ಸಹೋದ್ಯೋಗಿಗಳು ಮಾತ್ರವಲ್ಲದೆ ಇಡೀ ಜಿಲ್ಲೆಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.